ಪವಿತ್ರ ಹಿಮಾಲಯದ ತಪ್ಪಲಿನ ನೇಪಾಳದಲ್ಲಿ ಈಗ ಕಾಮ್ರೇಡುಗಳದೇ ರಾಜ್ಯಬಾರ. ಕಾಮ್ರೇಡುಗಳ ಸಾಂಸ್ಕೃತಿಕ ಕ್ರಾಂತಿಯ ಕಣ್ಣು ಅಲ್ಲಿನ ಪಶುಪತಿನಾಥ ದೇಗುಲದ ಅರ್ಚಕರ ಮೇಲೂ ಬಿದ್ದಿದೆ. ಕನ್ನಡನಾಡಿನ ಕರಾವಳಿ ತೀರದ ಸೌಕೂರು, ಬಸ್ರೂರು ಹಾಗೂ ಗೋಕರ್ಣದಂತಹ ಊರುಗಳಿಂದ ತೆರಳಿ ಪಶುಪತಿನಾಥನ ಅರ್ಚನೆಗೆಂದು ನೇಪಾಳದಲ್ಲಿ ಶತಮಾನಗಳಿಂದ ನೆಲೆಸಿದ್ದ ಈ ಅರ್ಚಕ ವೃಂದಕ್ಕೆ ಈಗ ಕಡುಕಷ್ಟಗಳ ಕಾಲ. ಒಂದು ಕಡೆ ನೇಪಾಳದ ರಾಜರುಗಳ ಪಾಪಗಳನ್ನು ಹೊರಬೇಕಾಗಿದ್ದ ಕಷ್ಟ, ಇನ್ನೊಂದೆಡೆ ಸಾಂಸ್ಕೃತಿಕ ಕ್ರಾಂತಿಯ ಕಡುಗಾಲ. ಪಶುಪತಿನಾಥನ ಸೇವೆಯಲ್ಲಿ ತನ್ನ ಜೀವಮಾನವನ್ನು ತೇದ ನಿವೃತ್ತ ಅರ್ಚಕ ಅನಂತ ಐತಾಳರು ಕನ್ನಡದ ಅನನ್ಯ ಲೇಖಕಿ ವೈದೇಹಿಯವರಲ್ಲಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಇದುವರೆಗೆ ಯಾರೂ ಕೇಳಿರದ ಈ ಕಥೆ ಇನ್ನು ಕೆಲವು ವಾರಗಳ ಕಾಲ ಕೆಂಡಸಂಪಿಗೆಯಲ್ಲಿ ಮೂಡಿಬರಲಿದೆ.
ಮಹಾಭಾರತ ಯದ್ಧವೆಲ್ಲ ಮುಗಿದಿದೆ. ‘ವಿಜಯದ ನಂತರ ಏನೋ ಆದದ್ದಾಯಿತು. ಆದರೆ ಸ್ವಕುಲವನ್ನೇ ನಾಶ ಮಾಡಿದ ಪಾತಕ ನಿನ್ನನ್ನು ಸುತ್ತಿಕೊಂಡಿದೆ’ ಅಂತ ಅರ್ಜುನನನ್ನು ಶ್ರೀ ಕೃಷ್ಣ ತೆಗಳಿದನಂತೆ. ‘ಗೀತೆಯಲ್ಲಿ ಎಲ್ಲವನ್ನೂ ಮಾಡಿಸುವವ ನಾನೇ. ನೀನು ನಿಮಿತ್ತ ಮಾತ್ರ’ ಅಂತ ಹೇಳಿದ ಅದೇ ಕೃಷ್ಣ ಯುದ್ಧ ಮುಗಿದ ಮೇಲೆ ಪಾತಕ ಇದೆಯಲ್ಲ ಮಾರಾಯ ಎನ್ನುತ್ತಾನೆ!. ‘ಶಿವನ ಪೂಜೆ ಮಾಡಿಯೇ ನೀವು ವಿಜಯಿಗಳಾಗಿರುವುದು. ಪಾಶುಪತಾಸ್ತ್ರವನ್ನು ನಿನಗೆ ನೀಡಿ ಜಯಕ್ಕೆ ನಾಂದಿ ಹಾಕಿದವ ಶಿವ. ಅವನನ್ನು ಯುದ್ಧ ಮುಗಿದ ಮೇಲೆ ನೀನು ಮರೆತೇ ಬಿಟ್ಟೆಯ! ನಿನ್ನಿಂದಲೇ ಎಲ್ಲ ಆಯಿತು ದೇವ ಅಂತ ಅವನಿಗೊಂದು ಪೂಜೆ ಸಲ್ಲಿಸಬೇಕಲ್ಲ ನೀನು?’ ಅಂತಂದ. ಸರಿ ಎಂದು ಅರ್ಜುನ ಪೂಜೆ ಸಲ್ಲಿಸಿದರೆ ಈಶ್ವರ ಅದನ್ನು ಸ್ವೀಕರಿಸಲೊಲ್ಲ.
ಅರ್ಜುನ- ‘ಆಗ ನಿನ್ನ ಕಣ್ಣೆದುರಿಗೇ ಮಾಡಿದ ಪೂಜೆಯನ್ನು ಸ್ವೀಕರಿಸಿದವ, ಈಗ ನೋಡು, ಹೀಗೆ ಮಾಡುತ್ತಿದ್ದಾನೆ.’
ಕೃಷ್ಣ -‘ಈಗ ನೀನು ಆತತಾಯಿ(ಅಪರಾಧಿ). ನಿನ್ನಲ್ಲಿ ಬಂಧು ಸಂಹಾರದ ದೋಷವಿದೆ.’
‘ನೀನೇ ಹೇಳಿದೆಯಲ್ಲ, ಅಂದು, ಅದು ಪಾಪವಲ್ಲ, ನೀನು ಕರ್ತೃವಲ್ಲ ಅಂತ ?’
‘ಅದು ಹಾಗಲ್ಲ. ಕರ್ಮ ಮಾಡದೇ ಇರುವುದು ತಪ್ಪು. ಮಾಡಿದ ಮೇಲೆ ಅದರ ಫಲವೂ. ಅದು ಜೊತೆಗೆ ಬಂದೇ ಬರುತ್ತದೆ. ಅನಿವಾರ್ಯವಾಗಿ ಅದನ್ನೂ ಭೋಗಿಸಲೇ ಬೇಕು.’
‘ಪರಿಹಾರದ ದಾರಿ ತೋರಯ್ಯ.’
‘ಸೀದ ಹಿಮಾಲಯಕ್ಕೆ ಹೋಗು. ಅಲ್ಲಿ ನೀನು ಈಶ್ವರನನ್ನು ನೋಡುತ್ತಿ. ನೋಡಿದವನೆ ಅವನನ್ನು ಮುಟ್ಟಿ ಬಿಡು. ತಕ್ಷಣವೆ ನಿನ್ನ ದೋಷವೆಲ್ಲ ಪರಿಹಾರ.’
ಶ್ರೀ ಕೃಷ್ಣನ ಮಾತಿನಂತೆ ಅರ್ಜುನ ಹಿಮಾಲಯಕ್ಕೆ ಬಂದು ಶಿವನನ್ನು ಕಂಡ. ತಕ್ಷಣವೇ ಅವನನ್ನು ಮುಟ್ಟಲು ಹೋದ. ಆದರೆ ಆತ ಸ್ಪರ್ಶಕ್ಕೆ ಸಿಗುತ್ತಿಲ್ಲ. ಅಂದು ತಾನಾಗಿ ಪೂಜೆ ಸ್ವೀಕರಿಸಿದ ಶಿವ ಈಗ ತಪ್ಪಿಸಿಕೊಳ್ಳುತಿದ್ದಾನೆ.
‘ಆತ ಸಿಗುತ್ತಿಲ್ಲ. ನಾನವನನ್ನು ಹೇಗೆ ಮುಟ್ಟಲಿ?’
‘ಅಲ್ಲಿ ಮೇಯುವ ನಂದಿಗಳ ಹಿಂಡಿನಲ್ಲಿ ಒಂದು ನಂದಿಯೊಳಗೆ ಆತ ಸೇರಿಕೊಂಡಿದ್ದಾನೆ. ನೀನು ಒಂದನ್ನೂ ಬಿಡದೆ ಎಲ್ಲಾ ನಂದಿಗಳನ್ನೂ ಮುಟ್ಟುತ್ತಾ ಹೋಗು. ನಿಜವಾದ ಈಶ್ವರ ಯಾವ ನಂದಿಯಲ್ಲಿ ಇರುವನೋ ಅವನು ಮುಟ್ಟಲು ಹತ್ತಿರ ಹೋದೊಡನೆ ಓಡಲು ತೊಡಗುವ. ನೀನೂ ಅಷ್ಟೇ ವೇಗದಲ್ಲಿ ಓಡಿ ಅವನನ್ನು ಹಿಡಿದು ಮುಟ್ಟಿಬಿಟ್ಟರೆ ನಿನ್ನ ಪಾಪ ಪರಿಹಾರ.’
ಸರಿ, ಅರ್ಜುನ ಹಿಮಾಲಯದಲ್ಲಿ ಮೇಯುತ್ತಿದ್ದ ನಂದಿಗಳನ್ನು ಒಂದೂ ಬಿಡದೆ ಮುಟ್ಟುತ್ತ ನಡೆದೇ ನಡೆದ. ಅಂತೂ ಕೊನೆಗೆ ಒಂದು ನಂದಿಯನ್ನು ಮುಟ್ಟಿದ್ದೇ ಅದು ಓಡತೊಡಗಿತು. ಅರ್ಜುನನೂ ಹಿಮಾಲಯದ ಹಾಸಿನುದ್ದಕ್ಕೂ ಕೇದಾರದಿಂದ ನೇಪಾಳದವರೆಗೂ ಅದನ್ನು ಹಿಂಬಾಲಿಸಿ ಓಡಿದ. ನೇಪಾಳದಲ್ಲಿ ಅಂತೂ ಇಂತೂ ಓಡುವ ನಂದಿಯ ಬಾಲ ಮುಟ್ಟಿಯೇ ಬಿಟ್ಟ. ಈಶ್ವರ ಪ್ರಸನ್ನನಾಗಿ ಅರ್ಜುನನಿಗೆ ತನ್ನ ನಿಜ ರೂಪವನ್ನು ತೋರಿಸಿ ಆಶೀರ್ವಾದ ಮಾಡಿದ- ಅಂತ ಕತೆ.
ಕೇದಾರ ಈಶ್ವರನ ಬುಡ. ಅಲ್ಲಿ ಇರುವುದು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಲಿಂಗ. ಕೇದಾರನಾಥನ ತಲೆಯ ಭಾಗ ನೇಪಾಳದ ಪಶುಪತಿನಾಥ. ಇದೂ ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದು. ಅರ್ಜುನನು ಅವನನ್ನು ಅಲ್ಲಿ ಮುಟ್ಟಿದ್ದರಿಂದ ಪಶುಪತಿಯಾಗಿ ಉದ್ಭವವಾಗಿದ್ದಾನೆ ಅಂತ ಪ್ರತೀತಿ. ಪಶುವಿನ ರೂಪದಲ್ಲಿ ಇದ್ದದ್ದರಿಂದ ಆತನಿಗೆ ಪಶುಪತಿ ಎಂಬ ಹೆಸರು ಬಂತು. ಲೋಕದಲ್ಲಿ ಜನ್ಮ ತಳೆವ ಸಕಲ ಪಶುಗಳಿಗೂ ಆತನೇ ನಾಥ ಎಂಬರ್ಥದಲ್ಲಿಯೂ ಆತ ಪಶುಪತಿನಾಥ. ಆಗೆಲ್ಲ ಈ ಲಿಂಗಕ್ಕೆ ಬೌದ್ಧ ಧರ್ಮದ ವಿಧಾನದಲ್ಲಿಯೇ ಪೂಜೆ ನಡೆಯುತಿತ್ತು.
ಶಂಕರಾಚಾರ್ಯರು ದಿಗ್ವಿಜಯ ನಿಮಿತ್ತ ಕಾಲ್ನಡೆಯಲ್ಲಿಯೇ ಕಾಶ್ಮೀರ, ಕೇದಾರಕ್ಕೆಲ್ಲ ಹೋದವರು. ಕೇದಾರಕ್ಕೆ ಬಂದು ಅಲ್ಲಿ ಪೂಜಾ ವಿಧಾನವನ್ನು ಇಡಿಸಿದವರು ಇಲ್ಲಿ ನೇಪಾಳದಲ್ಲಿ ಏನಿದೆ, ಉದ್ಭವ ಲಿಂಗವನ್ನು ನೋಡಬೇಕಲ್ಲ ಅಂತ ಬಂದರು. ಅಲ್ಲೊಬ್ಬ ಪ್ರಧಾನ ಅರ್ಚಕ, ಬೌದ್ಧ ಧರ್ಮೀಯ, ಮಂಡಲೇಶ್ವರ ಅಂತ. ಬಲು ದೊಡ್ಡ ವಿದ್ವಾಂಸ ಆತ. ಜಗದ್ಗುರು ಶಂಕರಾಚಾರ್ಯರ ಮತ್ತು ಮಂಡಲೇಶ್ವರರ ನಡುವೆ ವಾಗ್ವಾದ ನಡೆಯಿತು. ವಾಗ್ವಾದದಲ್ಲಿ ಒಂದು ಶರತ್ತು: “ನಮ್ಮಿಬ್ಬರಲ್ಲಿ ಸೋತವರು ಗೆದ್ದವರ ಶಿಷ್ಯನಾಗಬೇಕು. ನಾನು ನಿಮ್ಮ ವಾದದೆದರು ಸೋತರೆ ಕೂಡಲೇ ನಿಮ್ಮ ಶಿಷ್ಯನಾಗುತ್ತೇನೆ, ನಿಮ್ಮ ಧರ್ಮವನ್ನು ಅನುಸರಿಸುತ್ತೇನೆ, ನಾನು ಗೆದ್ದರೆ ನೀವು ನಮ್ಮ ಧರ್ಮವನ್ನು ಅನುಸರಿಸಬೇಕು” ಎಂದರು ಶಂಕರಾಚಾರ್ಯರು. ವಾಗ್ವಾದ ನಡೆಯಿತು. ಆದರೆ ಶಂಕರಾಚಾರ್ಯರ ವಾದದೆದುರು ಮಂಡಲೇಶ್ವರರು ನಿರುತ್ತರರಾದರು. ‘ಸರಿ, ನೀವೇ ಸರಿ’ ಅಂತ ಶಂಕರಚಾರ್ಯರ ಕಾಲಿಗೆ ಪ್ರಣಾಮ ಮಾಡಿದರು. ಜನಸಾಮಾನ್ಯರೂ ಮಂಡಲೇಶ್ವರರು ಸೋಲಬೇಕಾದರೆ ಬಂದಿರುವವರು ದೇವರೇ ಆಗಿರಬೇಕು ಅಂತಂದುಕೊಂಡರು. ‘ಇನ್ನು ನೀವು ಏನು ಅಪ್ಪಣೆ ಮಾಡುತ್ತೀರಿ, ಅದೇ ಪ್ರಕಾರ ನನ್ನ ಇಡೀ ಸಮಾಜ ನಡೆದುಕೊಳ್ಳುತ್ತದೆ’ ಎಂದ ಮಂಡಲೇಶ್ವರ.
ಅದುವರೆಗೆ ಪೂಜೆ ಬೌದ್ಧ ಸಂಪ್ರದಾಯದ ವಿಧಾನದಲ್ಲಿ ಲಿಂಗದ ಸುತ್ತಲೂ ಪೂಜಾವಸ್ತುಗಳ ಕಸಕಡ್ಡಿಗಳ ರಾಶಿ ಸೇರಿಕೊಂಡಿತ್ತು. ಆಚಾರ್ಯರು ಅವನ್ನೆಲ್ಲ ಬಗೆದು ನೋಡುತ್ತಾರೆ, ಬುಡದಲ್ಲಿ ಪ್ರಕಾಶಮಾನವಾಗಿ ಜ್ಯೋತಿರ್ಲಿಂಗ! ಉರಿಯುತ್ತಾ ಇದೆ. ಅರ್ಜುನ ಮುಟ್ಟಿದ ಎತ್ತು ಶಕ್ತಿಯನ್ನು ಅಲ್ಲಿ ಉಳಿಸಿ ಮಾಯವಾಗಿತ್ತು. ಇಲ್ಲಿರುವ ತಲೆಯ ಭಾಗ ಮತ್ತು ಕೇದಾರದ ಬುಡದ ಭಾಗ ಈ ಎರಡೂ ಸೇರಿ ಒಂದು ಜ್ಯೋತಿರ್ಲಿಂಗದ ದರ್ಶನ ಅಂತ ಲೆಕ್ಕ. ಕೇದಾರಕ್ಕೆ ಹೋದ ಯಾತ್ರಾರ್ಥಿಗಳು ಇಲ್ಲಿಗೂ ಬಂದು ಹೋಗುವ ಉದ್ದೇಶ ಇದುವೇ.
ಪಶುಪತಿನಾಥದಲ್ಲಿರುವುದು ಪವಿತ್ರ ಸಾಲಿಗ್ರಾಮ ಶಿಲೆ. ಉದ್ಭವ ಲಿಂಗ. ಲಿಂಗದಲ್ಲಿ ಕೆತ್ತಿದಂತೆ ಕಾಣುವ ತತ್ಪುರುಷ, ಸದ್ಯೋಜಾತ, ವಾಮದೇವ, ಈಶಾನ, ಅಘೋರ ಎಂಬ ಪಂಚಮುಖಗಳು. ಒಂದು ಸ್ಟೂಲು ಹತ್ತಿ ನಿಂತು ಪ್ರಧಾನ ಅರ್ಚಕರು ಅದರ ಮೇಲೆ ಶ್ರೀ ಮಂತ್ರ ಬರೆಯಬೇಕು, ಅಷ್ಟೆತ್ತರ ಲಿಂಗ ಅದು. ಎದುರು ನಿಂತರೆ ಎಂಥವರೂ ಭಾವುಕರಾಗಬೇಕು. ಶಂಕರಾಚಾರ್ಯರು ಇಲ್ಲಿಯೂ ಪೂಜಾ ವಿಧಿವಿಧಾನಗಳನ್ನು ಇಡಿಸಿ, ತಾಮ್ರ ಪತ್ರದಲ್ಲಿ ನಿಯಮಾವಳಿಗಳನ್ನು ಬರೆದರು. ಇಲ್ಲಿನ ರಾಜವಂಶ ಈ ತಾಮ್ರಪತ್ರವನ್ನು ಎಂದಿಗೂ ಮೀರದು. ಈ ತಾಮ್ರ ಪತ್ರದಲ್ಲಿ ಶಂಕರಾಚಾರ್ಯರು ನರ್ಮದಾ ನದಿಯ ದಕ್ಷಿಣದಲ್ಲಿ ಜನಿಸಿದ ದ್ರಾವಿಡ ಬ್ರಾಹ್ಮಣರು ಇಲ್ಲಿನ ಅರ್ಚಕರಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ನೇಪಾಳದ ರಾಜವಂಶ ಇದನ್ನು ಅಂದಿನಿಂದಲೂ ಪಾಲಿಸಿಕೊಂಡು ಬಂದಿದೆ.
ಹೀಗೆ, ಪಶುಪತಿನಾಥನ ಕತೆಯ ಮೂಲ ಮಹಾಭಾರತದ ಕಾಲದಿಂದ ಇಲ್ಲಿವರೆಗೂ ಮುಂದುವರೆದುಕೊಂಡು ಬಂದಿದೆ. ಭರತಖಂಡದ ಕತೆಗಳೇ ಹಾಗೆ ತಾನೆ? ಅನಾದಿ, ಅನಂತ.
೨- ಪಶುಪತಿಯ ಅರ್ಚಕರು ಆಗುವುದು ಹೇಗೆ?
ತಾಮ್ರ ಪತ್ರದಲ್ಲಿ ಶಂಕರಾಚಾರ್ಯರು ನರ್ಮದಾ ನದಿಯ ದಕ್ಷಿಣದಲ್ಲಿ ಜನಿಸಿದ ಪಂಚ ದ್ರಾವಿಡ ಬ್ರಾಹ್ಮಣರಿಂದ ಪಶುಪತಿನಾಥನಿಗೆ ಪೂಜೆಯಾಗಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ, ನೇಪಾಳದ ರಾಜವಂಶ ಇದನ್ನು ಅಂದಿನಿಂದಲೂ ಪಾಲಿಸಿಕೊಂಡು ಬಂದಿದೆ ಎಂದೆನಷ್ಟೆ?
ಪಶುಪತಿನಾಥನ ಅರ್ಚಕರು ನರ್ಮದಾ ನದಿಯ ದಕ್ಷಿಣದಲ್ಲಿ ಜನಿಸಿದ ಬ್ರಾಹ್ಮಣರಾಗಬೇಕು ಎಂಬುದು ಇಲ್ಲಿನ ಮುಖ್ಯಾಂಶ. ಇಲ್ಲಿ ಜನಿಸಿದ ನಂತರ ನೇಪಾಳದಲ್ಲಿ ವಿದ್ಯಾಭ್ಯಾಸ ಮಾಡಿದರೆ ಅಡ್ಡಿಲ್ಲ. ಪ್ರವೇಶ ಪರೀಕ್ಷೆಯಲ್ಲಿ – ಕೇಳುತ್ತಾರೆ. ಜನನ ಸ್ಥಳ ಯಾವುದು?. ಅದೆಲ್ಲಾದರೂ ಕಾಶೀಗೀಶಿಯಾದರೆ ನಾವು ಪೂಜೆಗೆ ಅನರ್ಹರೆಂದಾಯಿತು. ಹಿಂದೆ ತಮಿಳುನಾಡಿನ ಬ್ರಾಹ್ಮಣರೂ ಅರ್ಚನೆಗೆ ಇದ್ದರಂತೆ. ಆದರೆ ಏನೋ, ಆ ಬ್ರಾಹ್ಮಣರ ಪರಂಪರೆ ಮುಂದರಿಯಲಿಲ್ಲ. ತೆಲುಗು ಭಟ್ಟರೂ ಇದ್ದರಂತೆ – ತೆಲಂಗೀ ಭಟ್ಟರು ಅಂತ. ನಾವು ನೋಡಿಲ್ಲ. ನರ್ಮದಾ ನದಿಯ ದಕ್ಷಿಣಕ್ಕೆ ರತ್ನಗಿರಿ ಇದೆ. ಮೊದಲು ಅರ್ಚಕರಾಗಿ ಆಯ್ಕೆಯಾಗಿದ್ದು ಅಲ್ಲಿನ ವಿದ್ವಾಂಸರಂತೆ; ಮರಾಠಾ ಪಂಡಿತರು.
ವಿದ್ವಾಂಸರೆಂದ ಕೂಡಲೆ ಆಯ್ಕೆಯಾಗುವುದಿಲ್ಲ. ಪ್ರಥಮತ: ಅವರು ಶಾಸ್ತ್ರೀ ಪರೀಕ್ಷೆ ಪಾಸಾಗಿರಬೇಕು. ಎರಡನೆಯದಾಗಿ, ಕಾಶಿಯಲ್ಲಿ ಬ್ರಾಹ್ಮಣ ಪರಿಷತ್ತು ಅಂತ ಇತ್ತು ಆಗ. (ಈಗಲೂ ಇದೆ. ಆದರೆ ದುರ್ಬಲವಾಗಿದೆ) ಈ ಬ್ರಾಹ್ಮಣ ಪರಿಷತ್ತು ಇದಕ್ಕಾಗಿ ನಡೆಸುವ ವಿಶೇಷ ಪರೀಕ್ಷೆಯಲ್ಲಿ ಪಾಸಾಗಬೇಕು. ಒಂದು ವೇಳೆ ಒಬ್ಬ ಅರ್ಚಕರು ತುಂಬ ಯೋಗ್ಯ ಅಂತ ಕಂಡರೆ ಅವರನ್ನು ಪರೀಕ್ಷೆಯಲ್ಲಿ ಪಾಸು ಮಾಡಿಸುವುದೂ ಇದೆ. ಪರೀಕ್ಷೆ ನಡೆಸುವ ಮೊದಲೇ ಹೇಳುತ್ತಾರೆ: ಒಂದು ವೇಳೆ ಉತ್ತೀರ್ಣರಾಗದಿದ್ದಲ್ಲಿ ದಾರಿಯ ವಾಪಾಸು ಹೋಗಲು ದಾರಿಯ ಖರ್ಚು ಕೊಡುತ್ತೇವೆ. ಅಂತ. ಹಾಗೆ ದಾರಿಯ ಖರ್ಚು ಪಡೆದು ಹಿಂದೆ ಬಂದವರೂ ಇದ್ದಾರೆ.
ಅಲ್ಲಿಗೆ ಅರ್ಚಕರು ಬೇಕೆಂದು ಹೇಗೆ ಗೊತ್ತಾಗತ್ತೆ?
ದೈವಾನುಗ್ರಹದಿಂದ. ಸಂಪರ್ಕ ಇಲ್ಲದೇ ಹೋದಲ್ಲಿ ತಿಳಿಯುವುದೇ ಇಲ್ಲ. ಸೌಕೂರು ನರಸಿಂಹ ಅಡಿಗರು ಅಲ್ಲಿಗೆ ಹೋಗಿದ್ದು ಸುಮಾರು ೧೮೮೦ರಲ್ಲಿ. ಅದಕ್ಕೂ ಮುಂಚೆ ಮೂರು ತಲೆ ಪ್ರಧಾನ ಅರ್ಚಕರು ಆಗಿಹೋಗಿದ್ದರು. ಎಲ್ಲರೂ ರತ್ನಗಿರಿಯಿಂದಲೇ. ವಿಷ್ಣುಶಾಸ್ತ್ರಿ, ನಾರಾಯಣಶಾಸ್ತ್ರಿ, ವಿಠಲಶಾಸ್ತ್ರಿ ಇವರೆಲ್ಲರ ಹೆಸರು ನಾನು ಹೋದಾಗಲೂ ಉಳಕೊಂಡಿತ್ತು. ಮರಾಠಿ ಭಾಷೆ ಅವರದು.
೧೮೮೦ರಲ್ಲಿ ಆ ದೇವಸ್ಥಾನದಲ್ಲಿ ಮರಾಠೀ ಅರ್ಚಕರೊಬ್ಬರ ಸ್ಥಾನ ಖಾಲಿಬಿತ್ತು. ಖಾಲಿಯಾಗುತ್ತಲೂ ರಾಜಗುರುಗಳು ವಿಚಾರವನ್ನು ಕಟ್ಟಲೆಯಂತೆ ಕಾಶಿಯ ಈ ಬ್ರಾಹ್ಮಣ ಪರಿಷತ್ತಿಗೆ ತಿಳಿಸಬೇಕು, ತಿಳಿಸಿದರು. ಆಗ ಕಾಶಿಯಲ್ಲಿ ಸೌಕೂರು ಬೈಲುಮನೆ ನರಸಿಂಹ ಅಡಿಗರಿದ್ದರು. ದೊಡ್ಡ ವಿದ್ವಾಂಸರು. ಕಾಶಿಯಲ್ಲಿಯೇ ಇದ್ದು ಶಾಸ್ತ್ರಿ ಪದವಿ ವ್ಯಾಸಂಗವನ್ನು ಮಾಡಿದವರು. ಅವರು ಬ್ರಾಹ್ಮಣ ಪರಿಷತ್ತಿನಲ್ಲಿಯೂ ಇದ್ದರು. ಅವರು ಅರ್ಚಕ ಪರೀಕ್ಷೆಗೆ ಕುಳಿತರು, ಪಾಸಾದರು. ಪಶುಪತಿಯ ಅರ್ಚಕರಾಗಿ ನಮ್ಮ ಕಡೆಯಿಂದ ನೇಮಿಸಲ್ಪಟ್ಟ ಪ್ರಪ್ರಥಮ ವಿದ್ವಾಂಸರು ಈ ನರಸಿಂಹ ಅಡಿಗರು. ಅವರು ಅಲ್ಲಿಗೆ ತೆರಳಿದ ಕಾಲದಲ್ಲಿಯೂ ಉಳಿದ ನಾಲ್ಕು ಮಂದಿ ಅರ್ಚಕರು ರತ್ನಗಿರಿಯ ಮರಾಠಿಗರೇ ಆಗಿದ್ದರು. ಐದನೆಯವರಾಗಿ ನಮ್ಮೂರಿನಿಂದ ಒಬ್ಬರು ಅಲ್ಲಿಗೆ ಹೋಗಿ ಸೇರಿದರಂತಾಯಿತು. ಅಲ್ಲಿಗೆ ಹೋದ ಮೇಲೆ ನರಸಿಂಹ ಅಡಿಗರ ನಾಮಾಂಕಿತ ಕೃಷ್ಣ ಶಾಸ್ತ್ರಿಗಳು ಎಂದಾಯಿತು. ಕಾರಣ ನನಗೆ ಗೊತ್ತಿಲ್ಲ.
ಮರಾಠೀ ಭಟ್ಟರ ಹೆಂಡಂದಿರೆಲ್ಲ ಕಚ್ಚೆ ಹಾಕಿ ಸೀರೆ ಉಡುವವರು. ಅವರೊಟ್ಟಿಗೆ ಚೆನ್ನಾಗಿ ಹೊಂದಿಕೊಂಡರು ಅಡಿಗರ ಹೆಂಡತಿ. ತಾನೂ ಕಚ್ಚೆ ಹಾಕಿ ಸೀರೆ ಉಡುವುದನ್ನು ಅಭ್ಯಾಸ ಮಾಡಿಕೊಂಡರು. ಯಾವ ಒತ್ತಾಯದಿಂದಲ್ಲ, ಪರಸ್ಪರ ಪ್ರೀತಿಯಿಂದ. ಚಂದ ಅದು. ಬೇರೆ ನಿಲ್ಲದೆ ಹಾಗೆ ಬೆರೆತು ಹೋಗುವುದು. ಕಡೇವರೆಗೂ ಅವರು ಆ ಪದ್ಧತಿಯನ್ನು ಬಿಡಲಿಲ್ಲ. ಬರೀ ಬಟ್ಟೆ ಉಡುವುದು ಮಾತ್ರವಲ್ಲ, ಮರಾಠೀ ಮಾತನ್ನೂ ಕಲಿತರು. ನಮಗೆಲ್ಲ ಹಿಂದಿ ನೇಪಾಲೀ ಭಾಷೆ ಮಾತ್ರ ಬಂದರೆ ಅವರಿಗೆ ಮರಾಠಿಯೂ ಬರುತಿತ್ತು. ಅವರೆಲ್ಲ ಒಂದೇ ಕುಟುಂಬದವರಂತೆ ಇದ್ದರಂತೆ. ಅಷ್ಟು ಪ್ರೀತಿ ವಿಶ್ವಾಸ ನಂಬಿಗೆಯಿಂದ.
ಕೃಷ್ಣ ಶಾಸ್ತ್ರಿಗಳು ರಜೆ ಮೇಲೆ ಊರಿಗೆ ಬಂದಾಗ ಎಲ್ಲೋ ಹಿಮಾಲಯದ ಬುಡದಲ್ಲಿ ಇರುವ ದೇವಸ್ಥಾನದಲ್ಲಿ ಇವರು ಪೂಜೆ ಮಾಡುವುದಂತೆ, ಅದು ಬಹಳ ದೂರವಂತೆ ಅಂತೆಲ್ಲ ಇಲ್ಲಿನವರಿಗೆ ಭಯ ಭಕ್ತಿ ಗೌರವ. ಆಗೆಲ್ಲ ನಡೆದೇ ಹೋಗುವುದರಿಂದ ಕಾಶಿ ಕೂಡ ದೂರವೇ ಸೈಯಷ್ಟೆ? ಇದು ನೋಡಿದರೆ ಅದಕ್ಕೂ ದೂರ, ನೇಪಾಳ! ಏನೇ ಇರಲಿ, ನಮ್ಮವರೊಬ್ಬರು ಅಲ್ಲಿಗೆ ಹೋಗಿ ಸೇರಿದ್ದರಿಂದ ಹಿಂದೆಯೇ ನಾವೆಲ್ಲ ಹೋಗುವಂತಾಯಿತು. ಹೀಗೆ ಅಲ್ಲಿಗೆ ಹೋಗಿ ನೆಲೆಸಿದ ಅರ್ಚಕರಿಗೆ ನಮ್ಮ ಸೌಕೂರು ನರಸಿಂಹ ಅಡಿಗರೇ ಅಲಿಯಾಸ್ ಕೃಷ್ಣ ಶಾಸ್ತ್ರಿಗಳೇ ಮೂಲ ಪುರುಷರು. ಒಮ್ಮೆ ಅವರು ಊರಿಗೆ ಬಂದಾಗ ಅರ್ಚಕರ ಜಾಗ ಒಂದು ಖಾಲಿಯಾಗಿದೆಯೆಂದು ನಮ್ಮ ಬಸರೂರಿನ ಸುಬ್ರಹ್ಮಣ್ಯ ಅಡಿಗರನ್ನು ಕರೆದುಕೊಂಡು ಹೋದರು. ಸುಬ್ರಹ್ಮಣ್ಯ ಅಡಿಗರೂ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪಶುಪತಿ ದೇವಸ್ಥಾನದ ಪೂಜೆಗೆ ಸೇರಿಕೊಂಡರು. ನಿಧಾನವಾಗಿ ಮರಾಠೀ ಅರ್ಚಕರು ಒಬ್ಬೊಬ್ಬರ ಸ್ಥಾನ ಖಾಲಿಯಾಗುತ್ತ ಬಂತು. ನರಸಿಂಹ ಅಡಿಗರು ಪ್ರಧಾನ ಅರ್ಚಕರಾದರು. ಅಲ್ಲಿಂದ ಖಾಲಿಯಾದ ಜಾಗದಲ್ಲಿ ನಮ್ಮೂರ ಅರ್ಚಕರನ್ನೇ ಸೇರಿಸಿಕೊಳ್ಳಲು ಅನುಕೂಲವಾಯಿತು.
೩: ಬ್ರಾಹ್ಮಣ ಅರ್ಚಕರು ಬರುವ ಮೊದಲು
ಇದಕ್ಕೂ ಮುಂಚೆ ಒಂದು ವಿಚಾರ.
ಶಂಕರಾಚಾರ್ಯರು ಸನ್ಯಾಸಿಯೇ ಪೂಜೆ ಮಾಡಬೇಕು ಅಂತೇನು ಬರೆದಿರದಿದ್ದರೂ ಅಷ್ಟು ದೂರದ ನೇಪಾಳಕ್ಕೆ ದೇವರ ಪೂಜೆಗಾಗಿ ಹೆಂಡತಿಮಕ್ಕಳು ಇದ್ದವರು ಹೋಗುವುದು ಕಷ್ಟವಲ್ಲವೆ? ಆಗೆಲ್ಲ ಹೇಗೂ ವಿದ್ವಾಂಸ ಸನ್ಯಾಸಿಗಳು ಸುಲಭವಾಗಿ ಸಿಕ್ಕೋರು, ಅವರೇ ಅಲ್ಲಿ ಪೂಜೆಗೆ ನಿಲ್ಲುತ್ತಿದ್ದರು. ಹೆಚ್ಚಿನವರು ಆದಿಶಂಕರಾಚಾರ್ಯರ ಶಿಷ್ಯರೇ. ಎಂತಲೇ ಶಂಕರಾಚಾರ್ಯರ ಕಾಲದಿಂದ ಪಶುಪತಿನಾಥನಿಗೆ ಸನ್ಯಾಸಿಗಳದೇ ಪೂಜೆ. ಆದರೆ ಕ್ರಮೇಣ ಸನ್ಯಾಸಿಗಳನ್ನು ಹುಡುಕೋದೂ ಕಷ್ಟವಾಯಿತು. ಒಮ್ಮೆಯಂತೂ ಎಷ್ಟು ಹುಡುಕಿದರೂ ಸಿಗಲಿಲ್ಲ.
ಅದು ಯಾವಾಗ ಅಂದರೆ-
ಭಾರತದಲ್ಲಿ ಇಂಗ್ಲೀಷರ ಪ್ರಭಾವ ಹೆಚ್ಚಾಗಿ, ಹೆಚ್ಚಿನ ತುಂಡರಸರೆಲ್ಲ ರಾಜ್ಯ ಕಳಕೊಂಡರಷ್ಟೆ? ರಾಜಾಸ್ಥಾನದಲ್ಲಿ ಒಬ್ಬ ತುಂಡರಸ ಇದ್ದ. ಪೃಥ್ವೀನಾರಾಯಣ ಶಾಹ ಅಂತ, ರಜಪೂತ ದೊರೆ – ಎಲ್ಲರಂತೆ ಈತನೂ ಇಂಗ್ಲೀಷರಿಗೆ ತನ್ನ ರಾಜ್ಯವನ್ನೇನೋ ಕಳಕೊಂಡ, ಆದರೆ ಸೆರೆ ಸಿಕ್ಕಲಿಲ್ಲ. ರಾಜ್ಯಭ್ರಷ್ಟನಾಗಿ ಊರಿಂದ ಊರಿಗೆ ಓಡುತ್ತ ಓಡುತ್ತ ನೇಪಾಳದ ಗಡಿಯಾದ ಗೋರಖಪುರದವರೆಗೂ ಬಂದು ತಲುಪಿದ. ಭಾರತ ಮತ್ತು ನೇಪಾಳದ ಗಡಿ ಗೋರಖಪುರ. ಅಲ್ಲಿಗೆ ಬಂದು ತಲುಪಿದ ರಾಜ ಗೋರಖನಾಥ ದೇವಸ್ಥಾನದಲ್ಲಿ ಗೋರಖನಾಥನ ವಿಗ್ರಹದೆದುರು ಉದ್ದಂಡ ಪ್ರಣಾಮ ಮಾಡಿ ‘ನನ್ನ ರಾಜ್ಯವೈಭವವೆಲ್ಲ ಹೋಯಿತು. ನನಗಿನ್ನು ರಾಜ್ಯ ಇಲ್ಲವೆ ಶಿವನೆ?’ ಅಂತ ಕಣ್ಣೀರಿಟ್ಟು ಅಳುತ್ತ ಆರ್ತನಾಗಿ ಪ್ರಾರ್ಥನೆ ಸಲ್ಲಿಸಿದನಂತೆ, ಆಗ ಗೋರಖನಾಥ ಒಬ್ಬ ಸಾಧುವಿನ ರೂಪದಲಿ, ದೇವಸ್ಥಾನದ ಸುತ್ತಮುತ್ತ ಸನ್ಯಾಸಿಗಳಿರುತ್ತಾರಲ್ಲ ಹಾಗೆ, ಅವನೆದುರು ಬಂದನಂತೆ. ಎದುರುಬಂದು, ‘ನಾನೊಂದು ಪ್ರಸಾದ ಕೊಡುವೆ, ಹಿಡಿ ಇದನ್ನು, ಸೇವಿಸು’ ಎಂದನಂತೆ. ಆಯಿತು, ಶಹಾ, ಬೊಗಸೆ ಹಿಡಿದ. ಹಿಡಿದ ಬೊಗಸೆಗೆ ಸನ್ಯಾಸಿ, ಥೂ ಅಂತ ಕಫ ತುಂಬಿದ ಎಂಜಲು ಉಗಿದನಂತೆ. ‘ಇದನ್ನು ಸೇವಿಸು ನೀನು.’ ಆದರೆ ಅದನ್ನು ಸೇವಿಸಲು ಯಾರಿಗೇ ಆಗಲಿ ಮನ ಬರುವುದೇ? – ಚೆಲ್ಲಿದರೆ, ಸನ್ಯಾಸಿಗಳು ಶಾಪ ಕೊಟ್ಟಾರು ಎಂಬ ಭಯ. ಮೊದಲೇ ರಾಜ್ಯ ಕಳೆದುಕೊಂಡು ಕಂಗಾಲಾದ ರಾಜ. ಹೆದರಿ ನುಂಗಿದಂತೆ ಮಾಡಿ ಮೆಲ್ಲ ಹಾಗೆಯೇ ಕೆಳಗೆ ಬೀಳಿಸಿದನಂತೆ. ಆದರೆ ಅದು ಪೂರ್ತಿ ಅವನ ಪಾದದ ಮೇಲೆಯೇ ಇಳಿಯಿತು. ಸನ್ಯಾಸಿಗಿದು ತಿಳಿದು, ‘ಅಯ್ಯೋ, ನೀನು ಒಮ್ಮನಸ್ಸಿನಿಂದ ಅದನ್ನು ನುಂಗಿ ಬಿಟ್ಟಿದ್ದರೆ, ಎದುರು ಕಾಣುವ ದಿಕ್ಕಿಗೆ ಮುಖ ಮಾಡಿ ನಿಂತು ನೀನು ಬಾಯಾರೆ ಏನು ಕೇಳಿದ್ದರೂ ಅದೆಲ್ಲವೂ ನಿನ್ನದಾಗುತ್ತಿತ್ತು. ಹ್ಞೂ, ಪಾದದ ಮೇಲೆ ಉಗಿದುಕೊಂಡೆಯಲ್ಲ. – ಇರಲಿ. ಈಗ ಸಾಧ್ಯವಾದಷ್ಟೂ ನಡೆ. ಪಾದ ಸವೆಸು. ಒಂದು ತಿಂಗಳೊಳಗೆ ಎಷ್ಟು ಜಾಗವನ್ನು ಹೀಗೆ ಕಾಲ್ನಡಿಗೆಯ ಮೂಲಕ ಕ್ರಮಿಸುತ್ತೀಯೋ ಆ ಅಷ್ಟೂ ರಾಜ್ಯ ನಿನ್ನದಾಗುವುದು’ ಎಂದು ನುಡಿದು ಮಾಯವಾದನಂತೆ…
ಆವಾಗ ನೇಪಾಳದಲ್ಲಿಯೂ ಹದಿನಾಲ್ಕು ಮಂದಿ ತುಂಡರಸರು ಇದ್ದರು, ಶುದ್ಧ ನೇಪಾಲಿಗಳು. ಪಹಾಡಿಗಳು. (ನಾವು ಮದೇಶೀಗಳು; ನೇಪಾಲೀ ಭಾಷೆಯಲ್ಲಿ. ಭಾರತದಿಂದ ಅಲ್ಲಿಗೆ ದುಡ್ಡು ದುಡಿಯಲು ಬಂದವರು, ನಾವೆಂದರೆ ಅವರಿಗೆ ಸುಪ್ತವಾದ ತಾತ್ಸಾರವೂ ಇದೆ.) – ಆ ಹದಿನಾಲ್ಕು ಮಂದಿ ತುಂಡರಸರೂ ಪೃಥ್ವೀನಾರಾಯಣ ಶಹಾನಿಗೆ ಶರಣಾದರು. ಅಲ್ಲಿ ಭಗವತೀಸ್ಥಾನದಲ್ಲಿ ಒಬ್ಬ ತುಂಡರಸು ಇದ್ದ. ಒಂದು ಪರದೆಯ ಹಿಂದೆ ನಿಂತು ಆತ ದೇವಿಯ ಹತ್ತಿರ ನೇರ ಮಾತಾಡುತ್ತಿದ್ದನಂತೆ. ಆತನಿಗೆ ದೇವಿ, ‘ನಿನ್ನದೆಲ್ಲ ಮುಗಿಯಿತು. ಆಸೆ ಬಿಟ್ಟುಬಿಡು. ಪೃಥ್ವೀನಾರಾಯಣ ಶಹಾನಿಗೆ ಶರಣಾಗು. ಅವನಿಗೆ ವರ ನೀಡಿದ್ದು ಸಾಕ್ಷಾತ್ ಶಿವ. ಅಂದ ಮೇಲೆ ನನ್ನದೇನೂ ನಡೆಯದು’ ಅಂತ ಹೇಳಿದಳಂತೆ. ಅದಕ್ಕಾತ, ‘ನಿನ್ನ ಕೈಯಲ್ಲಿನ ಖಡ್ಗವನ್ನು ಕೊಡು ದೇವೀ. ಒಂದು ಪ್ರಯತ್ನವನ್ನಾದರೂ ಮಾಡುತ್ತೇನೆ ನಾನು’ ಎಂದನಂತೆ. ದೇವಿ ತನ್ನ ಖಡ್ಗ ಕೊಟ್ಟಳು. ಆ ಖಡ್ಗ ಹಿಡಿದು ಆತ ಶಹಾನೆದುರು ಯುದ್ಧಕ್ಕೆಂದು ಹೊರಟ; ಆದರೆ ಶಹಾನನ್ನು ಕಂಡದ್ದೇ ಏನಾಯಿತೋ, ಪೂರ್ತಿ ಶರಣಾಗಿ ಆ ಖಡ್ಗವನ್ನು ಅವನಿಗೇ ಕೊಟ್ಟು ಅಡ್ಡಬಿದ್ದನಂತೆ. ತುಂಡರಸರನ್ನೆಲ್ಲ ಗೆದ್ದ ಪೃಥ್ವೀನಾರಾಯಣ ಶಹಾ ಅವರ ನಾಯಕನಾಗಿ ಪಟ್ಟವೇರಿದ.
ಅಲ್ಲಿ ಗೋರಖನಾಥ ಸನ್ಯಾಸಿರೂಪದಲ್ಲಿ ವರ ಕೊಟ್ಟಿದ್ದಾನೆ. ಇಲ್ಲಿ ಪಶುಪತಿನಾಥನಾಗಿ ಸ್ವತಃ ಅವನೇ ನೆಲೆಸಿದ್ದಾನೆ. ತನ್ನನ್ನು ಗೆಲ್ಲಿಸಿದ ದೇವರು ಪಶುಪತಿನಾಥ. ಅವನ ದೇವಸ್ಥಾನದ ಪೂಜೆಯನ್ನು ಅನೂಚಾನವಾಗಿ ಆಚಾರ್ಯರು ಬರೆದಿಟ್ಟ ವಿಧಾನದಲ್ಲಿಯೇ ನಡೆಸುವೆನೆಂದು ನಿರ್ಧರಿಸಿದ. ರಾಜಪೀಳಿಗೆಯ ಹತ್ತು ತಲೆಗಳ ಹಿಂದೆ ಇದ್ದ ಲಾಲ್ ಮೊಹರನ್ನು -ತಾಮ್ರಪತ್ರವನ್ನು -ಕಂಡು ಹುಡುಕಿದ. ಅಲ್ಲಿ ಸನ್ಯಾಸಿಗಳು ಪೂಜೆ ಮಾಡುವುದರಿಂದ ನಮಗೆ ವಿಜಯವಾಗಿದೆ. ನಾನು ನಿನಗೆ ಹೀಗೆಯೇ ನಡೆದುಕೊಳ್ಳುತ್ತೇನೆ ಪಶುಪತೀ – ಅಂತ ಹೇಳಿಕೊಳ್ಳುವಾಗ ಕನಸಿನಲ್ಲಿ ಪಶುಪತಿ ಕಾಣಿಸಿಕೊಂಡನಂತೆ. ಶಹಾ ಪಟ್ಟವೇರಿದ ಸಮಯದಲ್ಲೇ ಒಬ್ಬ ಅರ್ಚಕ ಸನ್ಯಾಸಿಯ ಪಟ್ಟ ಖಾಲಿಯಾಗಿತ್ತು. ಆ ಜಾಗಕ್ಕೆ ಸನ್ಯಾಸಿಯನ್ನು ತರಬೇಕಾಯಿತು. ಆದರೆ ಈಗ ಮಾತ್ರ ಮುಂಚಿನಷ್ಟು ಸುಲಭವಿರಲಿಲ್ಲ. ಸಮಸ್ಯೆ ಎದುರಾಯಿತು. ಆವಾಗ ಪೃಥ್ವೀನಾರಾಯಣ ಶಹಾ ತಾಮ್ರಪತ್ರವನ್ನು ಪುನರ್ವಿಮರ್ಶೆ ಮಾಡಲು ಬಯಸಿದ. ಪುನಃ ಅದನ್ನು ವಿವರವಾಗಿ ವಿದ್ವಾಂಸರಿಂದ ಓದಿಸಿದ. ಅದರಲ್ಲಿ ಭಾರತದ ನರ್ಮದಾನದಿಯ ದಕ್ಷಿಣದಲ್ಲಿ ಜನ್ಮವೆತ್ತಿದ ಋಗ್ವೇದೀಯ ಪಂಚ ದ್ರಾವಿಡ ವಿದ್ವಾಂಸ ಬ್ರಾಹ್ಮಣರು ಈ ವಿಧಾನದಲ್ಲಿ ಪೂಜೆ ಮಾಡಬೇಕು ಅಂತ ಇದೆಯೇ ಹೊರತು ಬ್ರಾಹ್ಮಣ ಸನ್ಯಾಸಿಯೇ ಪೂಜೆ ಮಾಡಬೇಕು ಅಂದೇನಿಲ್ಲ ಎಂಬುದು ಕಂಡು ಬಂತು. ನಿಶ್ಚಿಂತನಾದ.
ಅಲ್ಲಿಂದ ತೊಡಗಿದ್ದು ನರ್ಮದಾ ನದಿಯ ದಕ್ಷಿಣದಲ್ಲಿ ಜನಿಸಿರುವ ಸಂಸಾರಸ್ಥ ಬ್ರಾಹ್ಮಣ ಅರ್ಚಕರ ಪರಂಪರೆ.
೪: ಅರ್ಚಕರು ನಾವು ಪಂಜರದ ಗಿಳಿಗಳು
ನಾವು ರಾಜ ಅರ್ಚಕರು. ಎಲ್ಲ ನಿಯಮಾವಳಿಗಳನ್ನು ನಾವು ಒಪ್ಪಬೇಕು. ಪಂಜರದ ಗಿಳಿಯ ಹಾಗೆ ಇರಬೇಕು. ನಮ್ಮ ಆಚಾರ ವಿಚಾರಗಳೆಲ್ಲ ಮೇಲ್ದರ್ಜೆ ಬ್ರಾಹ್ಮಣರಿಗೆ ತಕ್ಕನಾಗಿ ಇರಬೇಕು.
ಬಹಳ ದೊಡ್ಡ ರಾಜಮರ್ಯಾದೆ ನಮಗೆ. ಜನ ನಮ್ಮನ್ನು ಹುಜೂರ್ ಅಂತವೇ ಕರೆಯುವುದು. ಸಾಮಾನ್ಯ ಜನ ನಮಗೆ ನಮಸ್ಕಾರ ಎಂದರೆ ನಾವು ಪ್ರತಿನಮಸ್ಕಾರ ಹೇಳಕೂಡದು. ಅದೊಂದು ನಿಯಮ. ಯಾಕೆಂದರೆ ನಾವಿರುವುದು ದೇವರ ಸಾನ್ನಿಧ್ಯದಲ್ಲಿ. ಪ್ರಧಾನಮಂತ್ರಿಯಿಂದ ಹಿಡಿದು ಯಾರೇ ಬರಲಿ, ನಮ್ಮಿಂದ ಸಿಗುವುದು ಆಶೀರ್ವಾದ ಮಾತ್ರ. ಪ್ರಧಾನ ನ್ಯಾಯಾಧೀಶರು ಬರುತ್ತಾರೆ. ದೊಡ್ಡ ದೊಡ್ಡ ಅಧಿಕಾರಿಗಳು ಬರುತ್ತಾರೆ. ನಮ್ಮನ್ನು ನೋಡಿ ನಮಸ್ಕಾರ ಎನ್ನುತ್ತಾರೆ. ನಾವು ಅಂಗೈಯೆರಡರ ಅಂಚನ್ನು ಜೋಡಿಸಿ ಬೊಗಸೆ ಅಗಲ ಮಾಡಿ ನಿಲ್ಲಬೇಕು. ಪಶುಪತಿನಾಥನ ಆಶೀರ್ವಾದ ನಿಮಗಿರಲಿ ಅಂತ ಹೇಳಿದ ಹಾಗೆ ಅದು. ‘ಜಯಪಶುಪತೇ’ ಅಂತ. ನಮ್ಮ ಗುರುಗಳು ಅದರ ಬದಲು ‘ಮಹಾದೇವಾ ಮಹಾದೇವಾ’ ಎನ್ನುತ್ತಿದ್ದರು. ಒಟ್ಟಿನಲ್ಲಿ ನಮ್ಮ ಬಾಯಿಗೆ ಅನುಕೂಲವಾದ ಯಾವುದೇ ದೇವರನಾಮವಾದರೂ ಸರಿ. ಇಂಥದೇ ಅಂತಿಲ್ಲ. ಹೇಳಿಬಿಟ್ಟರೆ ಅವರಿಗೆ ಒಳ್ಳೆಯದಾಗಲಿ ಅಂತ ಅರ್ಥ. ದೊರೆಯೆಂದರೆ ರಾಜಾ ಪ್ರತ್ಯಕ್ಷ ದೇವತಾ ಅಲ್ಲವೇ? ದೊರೆ ಬರುತ್ತಾರೆ. ಮೊದಲು ದೇವರನ್ನು ನೋಡುತ್ತಾರೆ. ಮತ್ತೆ ನಮ್ಮತ್ತ ತಿರುಗುತ್ತಾರೆ. ಆಗ ಸ್ವಲ್ಪ ಬಾಗಿ ಅಂಗೈಯೆರಡನ್ನು ಜೋಡಿಸಿ, ಅಗಲ ಹರಡಿ ಜಯಹೋ ಸರ್ಕಾರ್ ಅಂತಲೋ, ಜೈ ಸರ್ಕಾರ್ ಅಂತಲೋ ಹೇಳಬೇಕು. ರಾಜನನ್ನು ಸಂಭೋದಿಸುವುದೇ ಹೀಗೆ ಸರ್ಕಾರ್ ಅಂತ. ರಾಜರಿಗೆ ಮಾತ್ರ ಈ ರೀತಿಯ ವಿಶೇಷ. ದೇವರ ಪೂಜೆಗೆ ಸಂಕಲ್ಪ ಮಾಡುವಾಗ ಸುರುವಿಗೆ ಪಶುಪತಿನಾಥ ಮಹಾಭಟ್ಟಾರಕ ದೇವತಾಭ್ಯೋನಮಃ ಅಂತ ಹೇಳಿಕೊಳ್ಳಬೇಕು. ಪಶುಪತಿನಾಥ ಮಹಾಭಟ್ಟಾರಕ ದೇವತಾ ಎಂಬುದು ಪಶುಪತಿನಾಥ ದೇವರ ಹೆಸರು. ಇದೇ ನಿಯಮದಲ್ಲಿ ನಮ್ಮನ್ನು ಪಳಗಿಸುತ್ತಾರೆ.
ಪೂಜೆಗೆ ಒಟ್ಟು ಐದು ಜನ ಅರ್ಚಕರು. ಅವರನ್ನು ಕರೆಯುವುದು ಶಾಸ್ತ್ರೀಜಿ, ಭಟ್‌ಜೀ ಮಹಾರಾಜ್ ಅಂತ. ಈ ಐದು ಅರ್ಚಕರ ಮನೆಗಳಲ್ಲಷ್ಟೇ ಅರ್ಚಕರ ಓಡಾಟ, ಊಟ ಪಾಠ. ಆರನೇ ಮನೆಗೆ ಅವರು ಹೋಗುವಂತಿಲ್ಲ. ಅವರಿಗೆ ಸಮಯವೂ ಇರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ರಾಜರಿಗೆ ಸಂಬಂಧಪಟ್ಟವರ ಮನೆಗೆ ಹೋದರೂ ಅಲ್ಲಿ ನೀರು ಸಹಿತ ಮುಟ್ಟಬಾರದು. ಹಣ್ಣು ತಂದು ಎದುರಿಗಿಡ್ತಾರೆ. ಮರಳುವಾಗ ಆ ಹಣ್ಣಿನ ಬುಟ್ಟಿಯನ್ನು ಅರ್ಚಕರ ಕಾರಿಗೆ ಹಾಕುತ್ತಾರೆ.
ಹಿಂದೆ ಪ್ರಧಾನ ಅರ್ಚಕರಿಗೆ ಓಡಾಡಲು ಪಲ್ಲಕ್ಕಿ ಇತ್ತು. ಪಲ್ಲಕ್ಕಿಯ ಹಿಂದೆ ಮುಂದೆ ಹದಿನೈದು ಇಪ್ಪತ್ತು ಆಳುಗಳು. ಅವರು ರಾಜದರ್ಬಾರಿಗೆ ಪ್ರಸಾದ ಕೊಡಲು ಹೋಗುವಾಗ ಹೀಗೆ ಪಲ್ಲಕ್ಕಿಯಲ್ಲಿ ಹಿಂದೆ ಮುಂದೆ ಆಳುಗಳೊಂದಿಗೆ, ಪರಿಚಾರಕರೊಂದಿಗೆ ರಾಜಮರ್ಯಾದೆಯಲ್ಲಿ ಹೋಗುತ್ತಿದ್ದರು. ನಾವು ಸಹಾಯಕ ಅರ್ಚಕರಲ್ಲವೆ? ನಮಗೆ ಪ್ರತಿಯೊಬ್ಬರಿಗೆ ಒಬ್ಬ ಆಳು, ಪರಿಚಾರಕ ಅಂತ. ಎಲ್ಲ ಅರ್ಚಕರಿಗೂ ದೊಡ್ಡ ದೊಡ್ಡ ವಿಶಾಲವಾದ ಮನೆಗಳು. ಮೂರನೇ ಅಂತಸ್ತಿನಲ್ಲಿ ನಾವು ವಾಸವಾದರೆ ಕೆಳ ಅಂತಸ್ತಿನಲ್ಲಿ ಗೋವುಗಳು. ನಮ್ಮ ಮನೆಯ ಕರಾವಿನ ಹಾಲನ್ನೇ ನಾವು ಉಪಯೋಗಿಸಬೇಕು. ನಾವೆಲ್ಲಾದರೂ ಹಾಲು ಮಾರಿಕೊಂಡೆವೆಂದರೆ ಅದು ದೊಡ್ಡ ಅಪರಾಧ.
ನನ್ನ ಹೆಂಡತಿ ಮದುವೆಯಾಗಿ ಬಂದ ಸುರುವಿನಲ್ಲಿ ಕೆಲಸದವನ ಹತ್ತಿರ ಟೊಮೆಟೋ ತಂದುಕೊಡು ಎಂದಳು. ಆತ ತಂದುಕೊಟ್ಟ. ಆಕೆ ಅಡುಗೆ ಮಾಡಿದಳು. ಆದರೆ ಹಾಗೆ ತಂದುಕೊಟ್ಟವ ಸುಮ್ಮನಿರದೆ ಎಲ್ಲರಿಗೂ ಸೂತಾವಾಚ ಕೊಟ್ಟ. ತಕ್ಷಣ ನನಗೆ ರಾಜಗುರುವಿನಿಂದ ಬುಲಾವ್ ಬಂತು- ಏನು ದಾರಿ ತಪ್ಪಲು ಸುರುಮಾಡಿದೆಯಾ? ತನಿಖೆ ಸುರುಮಾಡಿಯಾಯಿತು. ರಾಜಗುರು ನಮ್ಮನ್ನು ಏಕವಚನದಲ್ಲಿಯೇ ಕರೆಯುವುದು.
ಯಾವುದೇ ಕಾರಣಕ್ಕೆ ಒಮ್ಮೆ ಪೂಜೆ ಬಿಟ್ಟು ಹೊರಟುಹೋದೆವೆಂದರೆ ಮತ್ತೆ ಬಂದು ಸೇರುವಂತಿಲ್ಲ. ನಾನು ಪೂಜೆ ಬಿಟ್ಟುಬಂದ ಮೇಲೆ ಪುನಃ ಒಮ್ಮೆ ಅಲ್ಲಿಗೆ ಹೋಗಿದ್ದೆ, ಆದರೆ ಮುಂಚೆ ಪೂಜೆ ಮಾಡಿದವ ಅಂತೆಣಿಸಿ ನಾನು ಪೂಜಾಸ್ಥಲದ ಒಳಗೆ ಹೋಗಲಿಲ್ಲ, ಹಾಗೆ ಹೋಗುವಂತೆಯೇ ಇಲ್ಲ. – ಇಲ್ಲಿ ಊರಲ್ಲಿಯಾದರೆ ಮೊದಲು ಪೂಜೆ ಮಾಡುತ್ತಿದ್ದ ಭಟ್ಟರು, ದೊಡ್ಡ ಭಟ್ಟರು ಅಂತ ಯಾವತ್ತಿಗೂ ಸ್ಥಾನಮಾನ ಇದೆ. ಆದರೆ ಅಲ್ಲಿ ಒಮ್ಮೆ ಬಿಟ್ಟ ಮೇಲೆ ಮುಗೀತು. ಗುರುತು ಇದ್ದವರು ಸಿಕ್ಕಿದರೆ ಒಂದು ನಮಸ್ಕಾರ ಹೊಡೆದಾರು ಅಷ್ಟೆ.
ಅನಾರೋಗ್ಯ ಕಾಡಿದರೆ ಅಥವಾ ಏನಾದರೊಂದು ಕಾಯಿಲೆ, ಕೆಟ್ಟ ರೋಗದ ಕಲೆ, ಗಾಯಗೀಯ ತೋರಿತು ಅಂತಾದರೆ ಸರಿ, ನಾವು ಪೂಜೆಯಿಂದ ಮುಕ್ತ – ಅದು ನಿಯಮ. ಶರೀರದಲ್ಲಿ ಯಾವುದೇ ಕಲೆ ಇರಬಾರದು, ಕಾಯಿಲೆ ಇರಬಾರದು. ಇದೆಲ್ಲ ಇದ್ದವ, ಇಲ್ಲ, ನಾನು ಪೂಜೆ ಮಾಡುತ್ತೇನೆ ಅಂದರೂ ಕಡ್ಡಾಯವಾಗಿ ರಾಜೀನಾಮೆ ಕೊಡಿ, ನಿಮ್ಮಿಂದ ಆಗಲ್ಲ, ನಿಯಮ ಉಲ್ಲಂಘನೆ ಆಗುತ್ತದೆ. ಅಂತಂದು ರಾಜಿನಾಮೆ ಪಡೆಯುತ್ತಾರೆ. ಎಲ್ಲ ರಾಜಮರ್ಯಾದೆ ಮಾಡಿ ಹಿಂದೆ ಕಳಿಸುತ್ತಾರೆ.
ಪಶುಪತಿಸರಣಿ ೫: ಅರ್ಪಿತದ್ರವ್ಯಕ್ಕೆ ದೊಡ್ಡಕಣ್ಣಿನ ಜರಡಿ
ದಾನ ದಕ್ಷಿಣೆ ಹಿಡಿಯಬಾರದು ನಾವು. ಆದರೆ ದೇವರ ಸನ್ನಿಧಿಯ ಮುಂದೆ ಭಕ್ತರು ಏನೇನು ಅರ್ಪಿಸುವರೋ ಅದೆಲ್ಲವೂ ನಮಗೆ. ಹಾಗೆ ಬಿದ್ದದ್ದನ್ನೆಲ್ಲ ನಾವು ಗುಡಿಸಿ ಗೋಚಿ ಬುಟ್ಟಿಗೆ ತುಂಬಿ ಮನೆಗೆ ಒಯ್ಯುವುದು ರೂಢಿ. ಬೀಳುವುದು ಕೇವಲ ದುಡ್ಡಲ್ಲ. ಹೂವು, ಬಿಲ್ವಪತ್ರೆಯಿಂದ ಹಿಡಿದು, ಇಲ್ಲಿ ಪಚ್ಚೆಕದಿರು ಅಂತ ಕರೆಯುತ್ತೇವಲ್ಲ, ಅಂಥದೇ ಒಂದು ಸಸ್ಯ ಅಲ್ಲಿಯೂ ಸಿಗುತ್ತದೆ – ನಾರಾಯಣ ಕದಿರು ಅಂತ, ಅದು ಮತ್ತು ಅನೇಕ ಎಲೆ ಹೂವು ಜೊತೆಗೆ ನೋಟು ಎಲ್ಲವೂ. ಕಣ್ಣಿಗೆ ಬಿದ್ದ ನೋಟನ್ನು ಮಾತ್ರ ಎತ್ತಿಟ್ಟುಕೊಳ್ಳುತ್ತಿದ್ದೆವು. ನನ್ನ ಭಾಗದ್ದು ನನಗೆ. ಅವರವರ ಪೂಜಾಭಾಗದ್ದು ಅವರವರಿಗೆ. ಅವರವರ ಭಾಗದಲ್ಲಿ ಉಳಿದದ್ದನ್ನೆಲ್ಲ ಬಾಚಿ ಬುಟ್ಟಿಗೆ ತುಂಬಿ ಆ ಬುಟ್ಟಿಗೆ ಬಿಗಿಯಾಗಿ ಬಟ್ಟೆ ಕಟ್ಡುತಿದ್ದೆವು. ಅವರವರ ಮನೆಯ ಆಳು ಅದನ್ನು ಹೊತ್ತುಕೊಂಡು ಹೋಗಿ ಅವರವರ ಮನೆಯಲ್ಲಿಡುತಿದ್ದ. ಮನೆಯಲ್ಲಿ ಬುಟ್ಟಿಯ ಬಾಯಿ ಬಿಚ್ಚಿ ಜರಡಿ ಹಿಡಿಯುತಿದ್ದೆವು. ಅದಕ್ಕಾಗಿಯೇ ಐದು ಪೈಸೆಯಷ್ಟು ದೊಡ್ಡ ಕಣ್ಣುಳ್ಳ ದೊಡ್ಡ ವಿಶೇಷ ಜರಡಿಗಳನ್ನು ಅರ್ಚಕರು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ಹಾಗೆ ಅರ್ಪಿತದ್ರವ್ಯದಲ್ಲಿ ನಾಣ್ಯವನ್ನು ಪ್ರತ್ಯೇಕಿಸುವ ಕೆಲಸ ಹೆಚ್ಚಾಗಿ ಮನೆಯ ಹೆಂಗಸರದು. ಮನೆಗೊಬ್ಬ ಪರಿಚಾರಕನನ್ನು ಕೊಡುತ್ತಾರೆಂದೆನಷ್ಟೆ? ಅವನೂ, ಒಮ್ಮೊಮ್ಮೆ, ನಾವೂ ಸೇರಿಕೊಳ್ಳುವುದೂ ಇದೆ. ಒಂದೊಂದು ದಿನ ಮಧ್ಯಾಹ್ನ ಮೂರು ಗಂಟೆಗೆ ಕೂತು ಸಾರಣಿಗೆಯಲ್ಲಿ ಎಲ್ಲ ಜರಡಿ ಹಿಡಿಯುತ್ತೇವೆ. ಮೆಕ್ಕೆಜೋಳ, ಅಕ್ಷತೆ ಮುಂತಾದ್ದೆಲ್ಲ, ಕೆಳಗೆ ಬೀಳಬೇಕು. ನಾಣ್ಯ ಮತ್ರ ಮೇಲೆ ಉಳಿಯಬೇಕು, ಹಾಗೆ. ಜರಡಿಹಿಡಿಯುವಾಗ ಮೇಲೆ ಉಳಿಯುವ ದೊಡ್ಡ ಕಸಗಳನ್ನು ಬಾಚಿ ಬಿಸಾಡಿ ದುಡ್ಡನ್ನು ಪ್ರತ್ಯೇಕವಾಗಿ ತೆಗೆದಿಡುತ್ತೇವೆ. ಬಿಸಾಡಿದ ಕಸದಲ್ಲಿ ಒಮ್ಮೊಮ್ಮೆ ದುಡ್ಡು ಉಳಿದು ಬಿಡುವುದಿದೆ. ಅದನ್ನು ಆಳು ಹೆಕ್ಕಿಕೊಳ್ಳುವ. ಮೊದಲೆಲ್ಲ ಚಿನ್ನದ ನಾಣ್ಯ, ಬೆಳ್ಳಿ ನಾಣ್ಯ, ಬಡವರಾದರೆ ತಾಮ್ರದ ನಾಣ್ಯಗಳನ್ನು ಹಾಕುತ್ತಿದ್ದರು. ನಮ್ಮ ಕಾಲದಲ್ಲಿ ನೋಟು ಬರಲಿಕ್ಕೆ ಸುರುವಾಯ್ತು. ನಾನು ಪೂಜೆ ಬಿಡುವ ಕಾಲಕ್ಕೆ ನೋಟಿನ ಚಾಲ್ತಿ ಜಾಸ್ತಿಯಾಯ್ತು. ನೋಟು ಒದ್ದೆಯಾಗಿದ್ದರೆ ಮನೆಗೆ ತಂದು ಬಿಸಿಮಾಡಿ ಒಣಗಿಸುತ್ತಿದ್ದೆವು. ಒಟ್ಟಿನಲ್ಲಿ ದೇವಸ್ಥಾನದ ಪೂಜೆ ನಿಮಿತ್ತ ಸಿಗುವ ಸಂಪತ್ತಿಗೆ ಒಂದು ಲೆಕ್ಕವಿಲ್ಲ. ಅದು ದೇಶೀಜನರ ಕಣ್ಣಿಗೆ ಬೀಳದೆ ಇರುವುದೆ? ಈ ಹಣ ಪರದೇಶೀಯರಾದ ಇವರಿಗೆ ಯಾಕೆ ಎಂದು ಕಾಣದೆ ಇರುವುದೆ? ಅಲ್ಲಿ ಆ ಪಾಟಿ ಸಂಪತ್ತು ಇರುವಾಗ ಬಿಟ್ಟು ಬರುವುದೆಂದರೆ ನಮಗೂ ಅಷ್ಟು ಸುಲಭವೆ?
ಪಶುಪತಿ ಸರಣಿ ೬: ಒಂದು ಕಳುವಿನ ಪ್ರಸಂಗ
ತ್ರಿಭುವನ ದೊರೆಯ ಅವಧಿಯಲ್ಲಿ, ನಮ್ಮ ಸೌಕೂರು ನರಸಿಂಹ ಅಡಿಗರ(ಕೃಷ್ಣ ಶಾಸ್ತ್ರಿಗಳು) ಕಾಲದಲ್ಲಿ, ಅರ್ಚಕರ ಇನ್ನೊಂದು ಸ್ಥಾನ ಖಾಲಿಯಾಯ್ತು. ತಾಮ್ರಪತ್ರದಲ್ಲಿ ಬರೆದ ಪ್ರಕಾರ ಅರ್ಚಕರನ್ನು ನೇಮಿಸುವ ಕರ್ತವ್ಯ ದೊರೆಗಳದಷ್ಟೆ? ಕಾಲಕ್ರಮೇಣ ದೊರೆಗಳು ಆ ಕರ್ತವ್ಯವನ್ನು ರಾಜಗುರುವಿಗೆ ಒಪ್ಪಿಸಿದರು. ಕಾಶಿಯ ಬ್ರಾಹ್ಮಣ ಪರಿಷತ್ತು ಆಗ ದುರ್ಬಲವಾಗಿತ್ತು. ಇದರಿಂದ ರಾಜಗುರುವಿಗೆ ಆ ಕೆಲಸ ಕಷ್ಟವಾಗಿ, ದಕ್ಷಿಣದವರು ಯಾರಾಗಬಹುದು ಅಂತ ಹುಡುಕಲಿಕ್ಕೂ ದಕ್ಷಿಣದವರೇ ಆದರೆ ಅನುಕೂಲ ಅಂತ ಕಂಡು ಅವರದನ್ನು ಪ್ರಧಾನ ಅರ್ಚಕರಿಗೆ ಒಪ್ಪಿಸಿದರು. ಆ ಜವಾಬ್ದಾರಿ ಪ್ರಧಾನ ಅರ್ಚಕರಾದ ಸೌಕೂರು ನರಸಿಂಹ ಅಡಿಗಳಿಗೇ ಇರಲಿ – ಅಂತ ತೀರ್ಮಾನವಾಯ್ತು. ನಮ್ಮೂರಿನ ಅರ್ಚಕರೇ ಅಲ್ಲಿನ ಪೂಜೆಗೆ ನೇಮಕಗೊಳ್ಳುವ ಪರಿಪಾಟ ಆರಂಭವಾಗಿದ್ದು ಹೀಗೆ, ಆರಿಸುವ ಹಕ್ಕು, ಪ್ರಧಾನ ಅರ್ಚಕರ ಕೈಗೆ ಬಂದು. ಅವರೇ ಒಬ್ಬ ಅರ್ಚಕರನ್ನು ಆರಿಸುವುದು, ದೊರೆಯ ಪರಾಮರ್ಶಮನಕ್ಕೆ ತೋರಿಸುವುದು – ಎಲ್ಲ ಮಾಡತೊಡಗಿದರು. ನಿಧಾನವಾಗಿ ಏನಾಯ್ತು, ಅರ್ಚಕರನ್ನು ಇಡೋದು, ತೆಗೆಯೋದು ಎಲ್ಲ ಪ್ರಧಾನ ಅರ್ಚಕರ ಜವಾಬ್ದಾರಿ ಎಂದು ಅಲಿಖಿತ ನಿಯಮವಾಯ್ತು. ನಿಧಾನವಾಗಿ ಜವಾಬ್ದಾರಿಯೆಂಬುದು ಅಧಿಕಾರದ ರೂಪ ತಳೆಯಿತು. ಪ್ರಧಾನ ಅರ್ಚಕರಾಗಿ ಬಸ್ರೂರು ಸುಬ್ಬಣ್ಣ ಅಡಿಗರು ಇರುವವರೆಗೂ ಅದೆಲ್ಲ ಎಲ್ಲಿಯೂ ಹೆಜ್ಜೆ ತಪ್ಪದೆ ಸರಿಯಾಗಿಯೇ ನಡೆಯಿತು.
ಸುಬ್ಬಣ್ಣ ಅಡಿಗರ ನಂತರ ಬಂದ ಪ್ರಧಾನ ಅರ್ಚಕರು, ಗೋಕರ್ಣದಲ್ಲಿ ವಿದ್ಯಾಭ್ಯಾಸ ಮಾಡಿದವರು – ಇವರ ತಂದೆಯೂ ಸುಬ್ಬಣ್ಣ ಭಟ್ಟರೂ ಸಹಪಾಠಿಗಳಾಗಿದ್ದವರು. ಒಮ್ಮೆ ಒಬ್ಬ ಮರಾಠೀ ಅರ್ಚಕರನ್ನು ಕೆಲಸದಿಂದ ತೆಗೆದುಹಾಕಿದ್ದರಿಂದ ಪ್ರಧಾನ ಅರ್ಚಕರಾಗಿದ್ದ ಸುಬ್ಬಣ್ಣ ಭಟ್ಟರು ಖಾಲಿಯಾದ ಆ ಜಾಗಕ್ಕೆ ತನ್ನ ಈ ಸಹಪಾಠಿಯನ್ನು ಕರೆಸಿಕೊಳ್ಳಲು ಬಯಸಿದರು. ಅವರೂ ದೊಡ್ಡ ವಿದ್ವಾಂಸರು. ಆದರೂ ಅವರಿಗೆ ಅವಕಾಶ ಸಿಗಲಿಲ್ಲ. ಕಾರಣ ಇಷ್ಟೆ..
ಮರಾಠೀ ಅರ್ಚಕರನ್ನು ತೆಗೆದುಹಾಕಿದ್ದು ಕಳ್ಳತನದ ಆರೋಪದ ಮೇಲೆ. ಅವರೇ ಕಳ್ಳತನ ಮಾಡಿದ್ದು ಎಂದು ತೀರ್ಮಾನ ನೀಡಿದ್ದೂ ಪ್ರಧಾನ ಅರ್ಚಕರೇ. ಅವರೇ ಸ್ವತಃ ಕದಿಯದಿದ್ದರೂ ಹಾಗೆ ತೀರ್ಮಾನ ಮಾಡದೆ ವಿಧಿಯಿರಲಿಲ್ಲ. ಅವರ ಪೂಜಾಸಮಯದಲ್ಲಿ ಆ ವಸ್ತು ಕಳವಾದ್ದರಿಂದ ಅದರ ಹೊಣೆ ಅವರದು. ಬೇರೆ ಯಾರೂ ಹೊಣೆಯಾಗಲಾರರು. ಅಂತಹ ಸಂದರ್ಭಗಳಲ್ಲಿ ಸಂಬಂಧಪಟ್ಟ ಅರ್ಚಕರು ಒಂದೋ ಆ ಸೊತ್ತನ್ನು ಹೇಗಾದರೂ ಹಿಂದೆ ಪಡೆಯಬೇಕು. ಇಲ್ಲವೇ ಕಳ್ಳತನದ ಆರೋಪ ಹೊರಬೇಕು. ಹೀಗಾಗಿ ಪ್ರಧಾನ ಅರ್ಚಕರ ತೀರ್ಮಾನವೇನೋ ಸಮವೇ; ಅನ್ಯಾಯವಲ್ಲ. ಸಜ್ಜನರಾದ ಆ ಮರಾಠೀ ಅರ್ಚಕರು ಅಪರಾಧಿಗಳಾಗಬೇಕಾಗಿ ಬಂದದ್ದು ಗ್ರಹಚಾರ ಎಂಬುದಕ್ಕೆ ಒಂದು ಉದಾಹರಣೆ ಎನ್ನಬೇಕು.
ಈ ಕತೆಯನ್ನು ನನಗೆ ಪೂರ್ತಿಯಾಗಿ ಹೇಳಿದ್ದು ನನ್ನ ಅಮ್ಮಮ್ಮ. ಅವಳಿಗದು ಕೊನೆವರೆಗೂ ನೆನಪೇ ಹೋಗಿರಲಿಲ್ಲ. ಯಾಕೆಂದರೆ ಆ ಅರ್ಚಕರ ಮನೆಯವರೂ ನನ್ನ ಅಮ್ಮಮ್ಮನ (ಅಜ್ಜನ) ಮನೆಯವರೂ ಅತ್ಯಂತ ವಿಶ್ವಾಸದಿಂದ ಇದ್ದರಂತೆ. ಅವರ ಕುರಿತ ಈ ಸುದ್ದಿ ಕೇಳಿ ಮನೆಯಲ್ಲಿ ಅಮ್ಮಮ್ಮ ಮತ್ತುಳಿದವರೆಲ್ಲ ಬಹಳ ನೊಂದುಕೊಂಡರಂತೆ. ನಮ್ಮ ಅಮ್ಮಮ್ಮ ಆ ಅರ್ಚಕರ ಹೆಂಡತಿ, ಅರ್ಚಕರ ಆ ಐದು ಮನೆಯೊಳಗಿನ ಇತರ ಹೆಂಗಸರು ಅವರವರೊಳಗೇ ಮಾತಾಡಿಕೊಂಡು ಅತ್ತತ್ತು ಇಟ್ಟರಂತೆ. ಕದ್ದೇ ಇಲ್ಲವಾದರೂ ಒಬ್ಬ ಒಳ್ಳೆಯ ಮನುಷ್ಯ ಕಳ್ಳನಾಗಬೇಕಾಯಿತಲ್ಲ ಎಂಬ ದುಃಖ ಎಲ್ಲರಿಗೂ. ಆ ಅರ್ಚಕರಿಗಾದರೂ ಬೇಸರವಾಗಿದ್ದು ತಮಗೆ ಪಶುಪತಿನಾಥನ ಪೂಜೆ ತಪ್ಪಿ ಹೋಯಿತು ಅಂತಲ್ಲ. ನಿರಪರಾಧಿ ತಾನು, ಕಳ್ಳ ಅನಿಸಿಕೊಂಡೆನಲ್ಲ- ಅಂತಲೇ.
ಅತ್ತ ಖಾಲಿಯಾದ ಅರ್ಚಕರ ಜಾಗಕ್ಕೆ ನೇಮಕವಾಗುವ ಪ್ರವೇಶ ಪರೀಕ್ಷೆಗೆಂದು ನಮ್ಮೂರಿನಿಂದ ಮಂಜುನಾಥ ಅಡಿಗರು ಎಂಬವರು, ಇವರು ಸುಬ್ಬಣ್ಣ ಅಡಿಗರ ಸಹಪಾಠಿ, ಸುಬ್ಬಣ್ಣ ಅಡಿಗರ ಕರೆಯ ಮೇರೆಗೆ ಕಾಶೀವರೆಗೂ ಹೊರಟು ಬಂದಾಗಿದೆ. ಇತ್ತ, ಒಂದು ದಿನ ದೊರೆ ತ್ರಿಭುವನ ವೀರವಿಕ್ರಮ ಶಹದೇವ, ದೇವಸ್ಥಾನಕ್ಕೆ ವಿಶೇಷವಾಗಿ ಆಗಮಿಸಿದ್ದಾರೆ. ಏಕೆಂದರೆ-
ಇಂಥಿಂಥ ಕಾರಣಕ್ಕೆ ಹೊಸ ಅರ್ಚಕರು ಬರಲಿದ್ದಾರೆ ಅಂತ ಪ್ರಧಾನ ಅರ್ಚಕರು ರಾಜಗುರುಗಳಿಗೆ ತಿಳಿಸಬೇಕು, ತಿಳಿಸಿದ್ದಾರೆ. ರಾಜಗುರುಗಳು ಅದನ್ನು ರಾಜನಿಗೆ ತಿಳಿಸಬೇಕು, ತಿಳಿಸಿದ್ದಾರೆ. ಎಲ್ಲ ವಿಚಾರ ರಾಜನಿಗೆ ಗೊತ್ತಾಗಿದೆ. ಇನ್ನೊಂದು ಸ್ವಲ್ಪ ದಿನಕ್ಕೆ ಹೊಸ ಅರ್ಚಕರು ಬರಲಿದ್ದಾರೆ ಎನ್ನುವಾಗ ದೊರೆಗಳು ದೇವಸ್ಥಾನಕ್ಕೆ ಬಂದರು. ಈ ಸಾತ್ವಿಕ ಭಟ್ಟರು ದೇವರ ವಸ್ತು ಕದ್ದದ್ದು ಹೌದೋ? ಅಷ್ಟು ಸಮೃದ್ಧಿಯಲ್ಲಿರುವವರು?- ಅಂತ ತ್ರಿಭುವನ ದೊರೆಗಳು ಯೋಚಿಸುತ್ತ ಮಾಡುತ್ತ, ಅದಕ್ಕಾಗಿಯೇ ದೇವಸ್ಥಾನಕ್ಕೆ ಬಂದರಂತೆ. ಹಿಂದೆಲ್ಲ ಅರ್ಚಕರೆಲ್ಲರು, ಇಂದು ಕೂಡ, ತಮ್ಮ ಸಂಕಷ್ಟಗಳನ್ನು ದೊರೆಗಳ ಬಳಿ ಹೇಳಿಕೊಳ್ಳಬಹುದು. ದೊರೆ ಅದನ್ನು ಕೇಳಿ ಕೂಲಂಕಶ ವಿಚಾರ ವಿಮರ್ಶೆ ಮಾಡುತ್ತಿದ್ದರು. ಈ ಬಾರಿ ದೊರೆಗಳು ಬಂದಾಗ ಮರಾಠಿ ಶಾಸ್ತ್ರಿಗಳು ದೇವಸ್ಥಾನದ ಹೊರಗಿದ್ದಾರೆ. ದೇವಸ್ಥಾನದ ಪೋಷಾಕನ್ನೆಲ್ಲ ತ್ಯಾಗ ಮಾಡಿ ಆಗಿದೆ ಅವರು. ಎಂದಿನಂತಾದರೆ ದೊರೆ ಬರುವ ಸಮಯದಲ್ಲಿ ಪ್ರಜೆಗಳಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ. ಆದರೆ ಶಾಸ್ತ್ರಿಗಳು ಹೊರಗಿಂದ ಸೀದಾ ನಿರ್ಭಯವಾಗಿ ದೊರೆಯ ಬಳಿಗೆ ಹೋದರು. ಯಾರೂ ಅವರನ್ನು ತಡೆಯಲಿಲ್ಲ. ಕಾರಣ, ಹಿಂದೆ ಇದೇ ದೇವಸ್ಥಾನದ ಅರ್ಚಕರಾಗಿದ್ದವರಲ್ಲವೆ? ಭಯಭಕ್ತಿ ಇದ್ದೇ ಇದೆ. ದೊರೆಗಳು ಪಶುಪತಿನಾಥನ ಎದುರು ನಿಂತಿದ್ದಾರೆ. ಕ್ರಮದಂತೆ ಸ್ವಸ್ತಿವಾಚನ ಮುಗಿದಿದೆ. ಪ್ರಧಾನ ಅರ್ಚಕರು ‘ಜೈ ಹೋ ಸರ್ಕಾರ್’ ಅಂತ ಪ್ರಸಾದ ಕೊಡುತ್ತಿದ್ದಾರೆ.
ಅಪರಾಧ ಹೊರಬೇಕಾಗಿ ಬಂದ ಶಾಸ್ತ್ರಿಗಳು ದೊರೆಗಳನ್ನು ಸಮೀಪಿಸಿದರು. ‘ಸರ್ಕಾರ್, ಮ ನಿರಪರಾಧೀ’ ಎಂದು ಸ್ವಸ್ತಿರೀತಿಯಲ್ಲಿಯೇ ಕೈನೀಡಿ ಎರಡೂ ಅಂಗೈಯ ಅಂಚುಗಳನ್ನು ಜೋಡಿಸಿ ನಿಂತರು. ರಾಜರು ಪ್ರಸಾದ ತೆಗೆದುಕೊಳ್ಳುತಿದ್ದಾರೆ, ಬದಿಯಿಂದ ಮ ನಿರಪರಾಧೀ ಕೇಳುತ್ತಿದೆ! ಒಬ್ಬ ಬ್ರಾಹ್ಮಣ ಅರ್ಚಕನನ್ನು ತೆಗೆದು ಹಾಕುವುದೇನು, ರಾಜರಿಗೂ ಸುಲಭ ಆಲ್ಲ. ಅಪರಾಧ ಸತ್ಯ ಆಗಿದ್ದರೆ ಸರಿ, ಇಲ್ಲವಾದರೆ ಆ ದೋಷ ರಾಜರಿಗೇ ಮರಳಿ ಹೋಗುತ್ತದೆ. ತ್ರಿಭುವನ ವೀರವಿಕ್ರಮ ಶಹದೇವ ದೊರೆಗಳಿಗೆ ಯಾವಾಗ ಅರ್ಚಕರ ನಿರಪರಾಧಿ ಎಂಬ ಶಬ್ದ ಕಿವಿಗೆ ಬಿತ್ತೋ- ಆಗ ಅವರು ಪಧಾನ ಅರ್ಚಕರ ಮುಖ ನೋಡಿದರಂತೆ. ‘ನ್ಯಾಯ ಕೊಡಬೇಕಲ್ಲ ತಾನು, ಕರೆಸಿ, ತನಿಖೆ ಮಾಡಿ? ಆತ ಅಪರಾಧಿಯಾಗಿದ್ದರೆ ಎದುರು ಬರುತ್ತಿದ್ದರೇ?’
ಅದಕ್ಕೆ ಪ್ರಧಾನ ಅರ್ಚಕರು ‘ಕದ್ದ ಸೊತ್ತು ಸಿಗಲಿಲ್ಲವಾದ್ದರಿಂದ ಅವರೇ ಅದಕ್ಕೆ ಹೊಣೆಯಾಗುತ್ತಾರೆ ಸರ್ಕಾರ್’ ಎಂದರಂತೆ. ‘ಪ್ರಮಾಣ ದೊರಕಿದೆಯೇ?’ ರಾಜ ಕೇಳಿದ. ರಾಜನ ಜೊತೆಗೆ ಪ್ರಧಾನ ಸಲಹೆಗಾರರು, ಭಂಡಾರಿಗಳು ಎಲ್ಲ ಇದ್ದಾರೆ. ಸಲಹೆಗಾರರತ್ತ ತಿರುಗಿದರಂತೆ. ಧರ್ಮದ ಪೀಠಕ್ಕೆ ಹೋಗುವಾಗ, ಧಾರ್ಮಿಕ ಸಲಹೆಗಳಿಗಾಗಿ ಒಬ್ಬರನ್ನು ನೇಮಿಸಿಕೊಳ್ಳುತ್ತಾರೆ. ನಮ್ಮ ಇಂದಿರಾಗಾಂಧಿಯವರು ನೇಪಾಲಕ್ಕೆ ಬರುವಾಗ ಅವರೊಡನೆ ಧಾರ್ಮಿಕ ಸಲಹೆಗಾರರಾಗಿ ಭಾರತದ ವನಮಾಲೀ ಪಂಡಿತರು ಇರುತ್ತಿದ್ದರು.
ದೊರೆ ಅವರತ್ತ ತಿರುಗಿ ಏನಿದು ಅಂತ ಕೇಳಿದರು. ಕೇಳಿದಾಗ ರಾಜನ ಪರವಾಗಿ ಶಾಸ್ತ್ರಿಗಳಿಗೆ ಎರಡು ಪ್ರಶ್ನೆಯನ್ನು ಅಧಿಕಾರಿಗಳು ಹಾಕಿದರಂತೆ. ಎರಡಕ್ಕೂ ಅವರು ಸರಿಯಾಗಿಯೇ ಉತ್ತರ ಕೊಟ್ಟರು. – ಇವರನ್ನು ನೋಡುವಾಗ ಅಪರಾಧಿ ಅಲ್ಲವೆಂದೇ ತೋರುತ್ತದೆ ಅಂತ ರಾಜನ ಸಂಗಡ ಬಂದ ಅಧಿಕಾರಿಯೊಬ್ಬರು ಹೇಳಿದರಂತೆ. ಅಪರಾಧ ಮಾಡಿದ್ದರೆ ರಾಜನ ಎದುರು ನಿಂತು ನಿರಪರಾಧಿ ಎನ್ನಲು ಆಗುತ್ತದೆಯೆ? ಸಂದರ್ಭ ಹಾಗೆ ಇತ್ತೇ ವಿನಃ ಇವರೇ ಪ್ರತ್ಯಕ್ಷ ತಪ್ಪು ಮಾಡಿದಂತೆ ತೋರುವುದಿಲ್ಲ. ಹಾಗಾದರೆ ಇನ್ನೇನು ಮಾಡುವುದು? ದೊರೆ ಮತ್ತು ಅಧಿಕಾರಿಗಳು ಒಟ್ಟಿಗೇ ಯೋಚಿಸಿ ದೇವರಲ್ಲಿ ಚೀಟಿ ಹಾಕಿ ನೋಡುವುದು ಅಂತ ನಿರ್ಧರಿಸಿದರು. ಸರಿ. ದೊರೆ ಅಪ್ಪಣೆ ಕೊಟ್ಟು ಎರಡು ಚೀಟಿ ಒಂದು – ಅಪರಾಧಿ ಹೋ ಎರಡು -ನ ಹೋ ಅಪರಾದಿ ಅಂತ ಎರಡು ಚೀಟಿಯನ್ನು ಬರೆದು ಮಡಚಿ ಪ್ರಧಾನ ಅರ್ಚಕರ ಹತ್ತಿರ ಕೊಟ್ಟರು. ಪ್ರಧಾನ ಅರ್ಚಕರು ದೇವರ ಪಾದದ ಬಳಿ ಇಟ್ಟರು. ದೊರೆ ‘ಒಂದನ್ನು ಹೆಕ್ಕಿಕೊಡಿ ಭಟ್ಟರೇ’ ಅಂದರಂತೆ. ಅರ್ಚಕರು ಹೆಕ್ಕಿ ತಂದುಕೊಟ್ಟರು. ಓದಿ ನೋಡಿದರೆ ‘ನ ಹೋ ಅಪರಾಧಿ….’ ನಿರಪರಾಧಿ! ಹೀಗೆ ಬಂತಲ್ಲ. ಬಂದ ಕೂಡಲೇ ರಾಜ – ಪಶುಪತಿನಾಥನ ಅಪ್ಪಣೆಯಾಗಿದೆ. ಮುಂದೆ ಇದೇ ಅರ್ಚಕರು ಮುಂದುವರಿಯಲಿ – ಎಂದರಂತೆ. ಮರಾಠೀ ಅರ್ಚಕರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರ ಮನೆಯಲ್ಲೇ ಉಳಿದ ಭಟ್ಟರ ಮನೆಯವರೆಲ್ಲ ಸೇರಿ ಸಂಭ್ರಮ ಆಚರಿಸಿದರಂತೆ. ಅಮ್ಮಮ್ಮ ಹೇಳಿದ ಕತೆಯಿದು.
ಈಚೆ ದಕ್ಷಿಣಕನ್ನಡ ಜಿಲ್ಲೆಯಿಂದ ಕಾಶೀವರೆಗೆ ಬಂದ ಅರ್ಚಕ ಮಂಜುನಾಥ ಅಡಿಗರನ್ನು ಏನು ಮಾಡುವುದು? ಅವಕಾಶ ಸಿಗದಿದ್ದರೆ ದಾರಿಖರ್ಚು ಕೊಟ್ಟು ವಾಪಾಸು ಕಳಿಸುತ್ತೇವೆ ಅಂತ ಮೊದಲೇ ಹೇಳಿರುತ್ತಾರಲ್ಲ. ಹಾಗೆ ಅವರನ್ನು ಎಲ್ಲ ಖರ್ಚು ಕೊಟ್ಟು ಹಿಂದೆ ಕಳಿಸಿದರು. ಯಾರ ತಪ್ಪೂ ಇಲ್ಲದೆ ಘಟಿಸಿ ಹೋದ ಘಟನೆಯಿದು. ಆದರೂ ಅವರು ಊರಿಂದ ಕಾಶೀವರೆಗೂ ಬಂದು ಹಿಂದಿರುಗಬೇಕಾಯ್ತು, ತಾನು ಸಹಪಾಠಿಯನ್ನು ಸುಮ್ಮನೆ ಕರೆಸಿ ವಾಪಾಸು ಕಳುಹಿಸಿದ ಹಾಗಾಯಿತು ಎಂದು ಸುಬಣ್ಣ ಭಟ್ಟರಿಗೆ ಸಹಜವಾಗಿ ತೀವ್ರ ಬೇಸರವಾಯ್ತು. ಹಾಗಾಗಿ ಅವರೇ ಮುಂದೊಂದು ಸಲ ಮತ್ತೊಬ್ಬ ಅರ್ಚಕರ ಸ್ಥಾನ ಖಾಲಿಯಾಗುತ್ತಲೂ ಆ ಸಹಪಾಠಿಯ ಪುತ್ರನನ್ನೇ ಕರೆದು. ಪ್ರವೇಶ ಪರೀಕ್ಷೆಗೆ ಕೂಡಿಸಿ, ನೇಮಕ ಮಾಡಿಕೊಂಡರು. ಅವರ ಪುತ್ರ ಗೋಕರ್ಣದಲ್ಲಿ ಒಬ್ಬ ಭಟ್ಟರ ಮನೆಯಲ್ಲಿ ವಾಸಮಾಡಿ ವೇದಾಧ್ಯಯನ ಮಾಡಿದವರು. ಗೋಕರ್ಣದಲ್ಲಿ ಪಂಡಾಗಿರಿ ಇದೆ, ಕಾಶಿಯಲ್ಲಿಯೂ ಇದೆ. ಆದರೆ ಹಿಂದೆಲ್ಲ ಗೋಕರ್ಣದಿಂದಲೇ ಬಂದ ರಾಮಕೃಷ್ಣ ಭಟ್ಟರು. ಸುಬ್ರಹ್ಮಣ್ಯ ಭಟ್ಟರು ಎಂಬವರೆಲ್ಲ ಇದ್ದರೂ, ಪಂಡಾಗಿರಿ ತೋರದೆ ಶಿಸ್ತಿನಿಂದ ಇದ್ದರು. ಈಗ ಮಾತ್ರ ಅದು ನಿಧಾನವಾಗಿ ಮಾಯವಾಗತೊಡಗಿತು.
ಪಶುಪತಿಸರಣಿ ೭: ಅರ್ಚಕರ ಹೆಸರು ಪೇಪರಲಿ ಬರತೊಡಗಿತು
ಅರ್ಚಕರಲ್ಲಿ ಯಾವುದೇ ದೋಷ ಕಂಡು ಬಂದರೆ ರಾಜಪುರೋಹಿತರು ರಾಜೀನಾಮೆ ಕೇಳುತ್ತಾರೆ ಎಂದೆನಷ್ಟೆ? ಆದರೆ ನೇಮನಿಷ್ಠೆ ಆರೋಗ್ಯದಿಂದ ಇದ್ದವರು ಬೇಕಾದರೆ ಪಶುಪತಿಯ ಪೂಜೆಯನ್ನು ಆಜೀವನ ಮಾಡಬಹುದು. ಪ್ರಧಾನ ಅರ್ಚಕರಾಗಿದ್ದ ಸುಬ್ಬಣ್ಣ ಅಡಿಗಳು ತಮಗೆ ಎಪ್ಪತ್ತು ವರ್ಷ ವಯಸ್ಸು ಆಗಿತ್ತಲೂ ಅರ್ಚಕತನ ಸಾಕೆನಿಸಿ ‘ಸರ್ಕಾರ್, ನಾನು ರಾಜೀನಾಮೆ ಕೊಡ್ತೇನೆ’ ಅಂದರು. ‘ಇಲ್ಲ ನಿಮಗೆ ಆರೋಗ್ಯ ಸರಿ ಇದೆಯಲ್ಲ? ಸಾಧ್ಯವಾದಷ್ಟು ದಿನ ನೀವೇ ಪೂಜೆ ಮಾಡಿ ಭಟ್ಟರೆ ’ ಎಂದರು ದೊರೆ ಮಹೇಂದ್ರರು. ಇದನ್ನು ನಾನೇ ಕಿವಿಯಾರೆ ಕೇಳಿದ ಮಾತು. ರಾಜರ ಹುಕುಂ ಆದ ಮೇಲೆ ಯಾರೊಬ್ಬರೂ ಅಡ್ಡ ಮಾತಾಡುವಂತಿಲ್ಲ.
ಆದರೆ ಅವರಿಗೆ ಇನ್ನಷ್ಟು ವಯಸ್ಸಾಗುತ್ತಲೂ, ಅವರ ನಂತರದ ಗ್ರೇಡಿನ ಭಟ್ಟರು, ಅವರೇ ಕರೆದು ನೇಮಿಸಿಕೊಂಡವರು, ತಾನು ಪ್ರಧಾನ ಅರ್ಚಕ ಆಗಬೇಕಂಬ ಆಸೆಯಲ್ಲಿ ಆ ಪದವಿಯನ್ನು ಅವರು ಬಿಟ್ಟುಕೊಡಲಿ ಅಂತ, ಮೆಲ್ಲ ಬೇಕೆಂದೇ ಅವರಲ್ಲಿ ದೋಷ ಹುಡುಕಿ ದೊರೆಗೆ ತಲುಪಿಸಲಾರಂಭಿಸಿದರು. ಗುರುವನ್ನೇ ದೋಷಿಯನ್ನಾಗಿ ಮಾಡಿದರು. ದೋಷ ಎಂದರೆ ಏನು? – ಪೂಜೆ ಮಾಡುವಾಗ ನಡುವೆ ಒಂದಕ್ಕೆ ಹೋಗಿ ಬರುತ್ತಾರೆ ಅಂತ. ಅದು ನಿಜವೇ, ಗುರುಗಳು ಮುದುಕರಾದರಲ್ಲ, ಅವರಿಗೆ ಆಗಾಗ ಮೂತ್ರವಿಸರ್ಜನೆಗೆ ಹೋಗಬೇಕಾಗಿ ಬರುತ್ತಿತ್ತು. ಆದರೂ ಹಾಗೆ ಹೋದಷ್ಟು ಸಲವೂ ಮತ್ತೆ ಸ್ನಾನ ಮಾಡಿ ಬರುತ್ತಿದ್ದರು. ಬಹಳ ನಿಷ್ಠೆಯವರು ಅವರು. ( ಅರ್ಚಕರು ಮೂತ್ರವಿಸರ್ಜನೆಗಾಗಲೀ ಶೌಚಕ್ಕಾಗಲೀ ಹೋದಷ್ಟು ಸಲವೂ ಸ್ನಾನ ಮಾಡಲೇ ಬೇಕು) ವಾಸ್ತವ ಅಂದರೆ ನಾವು, ಒಂದು ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಗರ್ಭಗುಡಿಯಲ್ಲಿ ನಿಂತೆವೆಂದರೆ ಮಧ್ಯಾಹ್ನ ಮೂರು ಗಂಟೆಯಾದರೂ ಹೊರಬರುವಂತಿಲ್ಲ. ನಮ್ಮ ಮಡಿಯುಡುಗೆ ಬದಲಾಯಿಸುವಂತಿಲ್ಲ. ಶಿವರಾತ್ರಿಯಲ್ಲಂತೂ, ಎಷ್ಟು ಹೊತ್ತು ಹಾಗೆ ನಿಲ್ಲುತಿದ್ದೆವೊ! ಸ್ವತಃ ನಾನೇ ಒಂದು ಶಿವರಾತ್ರಿಯಲ್ಲಿ ಬೆಳಿಗ್ಗೆ ಒಂಭತ್ತು ಗಂಟೆಗೆ ಹೋಗಿ ನಿಂತಿದ್ದೇನೆ. ಕೆಲಸ ಮುಗಿಸಿ ಮನೆಗೆ ಬರುವಾಗ ರಾತ್ರಿ ಗಂಟೆ ಹತ್ತು. ಗರ್ಭಗುಡಿಯೊಳಗೆ ಇದ್ದೇವೆಂದರೆ – ಕುಡಿಯಲು ಬೇಕೆನಿಸುವುದಿಲ್ಲ, ಹಸಿವು ಆಗಲ್ಲ, ಸಮಯದ ಅರಿವೂ ಆಗುವುದಿಲ್ಲ. ಬರುವ ಆ ಪಾಟಿ ಜನರಿಗೆ ವ್ಯವಸ್ಥೆ ಮಾಡುವುದರೊಳಗೆ ಯಾವುದರ ನೆನಪೂ ಆಗಲ್ಲ. ಇಲ್ಲಿನ ಹಾಗೆ ಅಲ್ಲಿ ಕೈಕೆಳಗೆ ಐದಾರು ಜನ ಸಹಾಯಕರನ್ನು ಹಾಕಿಕೊಳ್ಳುವಂತಿಲ್ಲ. ಇಲ್ಲಾದರೆ, ಮೊನ್ನೆ ಇಲ್ಲಿ ಬಸ್ರೂರು ಮಾಲಿಂಗೇಶ್ವರ ದೇವಸ್ಥಾನದ ಹಬ್ಬ ಆಯ್ತು. ನಾನು ಕೈಕೆಳಗೆ ಐದಾರು ಎಂಟು ಭಟ್ಟರನ್ನು ಸಹಾಯಕ್ಕೆ ಹಾಕಿಕೊಂಡಿದ್ದೆ. ಅಲ್ಲಿ ನಾವು ನಾವೇ ನಿಭಾಯಿಸಬೇಕು. ಅದೇನೇ ಇರಲಿ, ಅಂತೂ ಅವರು ಸುಬ್ಬಣ್ಣ ಅಡಿಗರ ಜಾಗವನ್ನು ಪಡೆಯುವಲ್ಲಿ ಯಶಸ್ವಿಯಾದರು. ಅಲ್ಲಿಂದ ಬೇರೆಯೇ ಒಂದು ಪರ್ವ ಸುರುವಾಯಿತು.
ಯಾರಿಗೂ ತೋರದ ಹಾಗೆ ತಪ್ಪು ಮಾಡಬಹುದಲ್ಲವೆ? ನಿಧಾನವಾಗಿ ಹೊಸಪ್ರಧಾನ ಅರ್ಚಕರು, ದೇವಸ್ಥಾನದ ಆಡಳಿತದಲ್ಲಿ ದರ್ಪ ತೋರಿದರು. ದೊರೆಗೆ ಹತ್ತಿರವಾದವರನ್ನೆಲ್ಲ ಹುಜೂರ್ ಅಂತ ಓಲೈಸಿ ಕೈಯೊಳಗಿಟ್ಟುಕೊಂಡರು. ರಾಜದರ್ಬಾರಿನ ಕಸಗುಡಿಸುವವನನ್ನು ನೋಡಿದರೂ ಹುಜೂರ್!. ಅವರೆಲ್ಲ ಯಾವುದೋ ಉಪಯೋಗಕ್ಕೆ ಬರುವವರು ಅಂತ. ಅರ್ಚಕ ಸಮುದಾಯ ಹಾಗೆ ಹುಜೂರ್ ಎನ್ನುತಿದ್ದ, ದೊರೆಗಲ್ಲದೆ ಪರರಿಗೆ ತಲೆಬಾಗಿದ ಉದಾಹರಣೆಯೇ ಹಿಂದೆ ಇರಲಿಲ್ಲ. ತಮ್ಮ ಘನಸ್ತಿಕೆ ಮರೆತು ಹೋಯಿತು. ಅನುಕೂಲಸಿಂಧು ವರ್ತನೆ ತಲೆದೋರಿತು. ಅದುವರೆಗೆ ಇಲ್ಲದ ಪಂಡಾಗಿರಿಯೂ ಸುರುವಾಯಿತು.
ಅದುವರೆಗೆ ಅರ್ಚಕರ ಹೆಸರು ಎಂದೂ ಪೇಪರಿನಲ್ಲಿ ಬರುತ್ತಿರಲಿಲ್ಲ. ಅದು ಬರತೊಡಗಿದ್ದು, ಅರ್ಚಕರಿಗೆ ಪ್ರಚಾರದ ಆಸೆ ಹುಟ್ಟಿದ್ದು ಎಲ್ಲ ಬಸರೂರು ಅಡಿಗರ ಕಾಲಾನಂತರವೇ. ಆದರೆ ಒಂದು ಗೂರ್ಖಾ ಪತ್ರಿಕೆಯಲ್ಲಿ- ಭಾರತದ ದೇವಾಲಯಗಳಲ್ಲಿ ಪೂಜಾಸಾನ್ನಿಧ್ಯದ ಏನೇನು ಅಪರಾಧಗಳಿವೆಯೋ ಅವನ್ನೆಲ್ಲ ಈ ಭಟ್ಟರೂ ಮಾಡುತ್ತಾರೆ, ಮನೋಮಾನಿ; – ಸ್ವಚ್ಛಂದ ಪ್ರವೃತ್ತಿಯವರು ಅಂತೆಲ್ಲ ಬಂದಿತ್ತು. ರಾಜರೆದುರಿಗೆ ತಾವು ಅಂಥವರಲ್ಲ ಅಂತ ಗೋಗರೆದರು! ಹಿಂದೆ ಇಂತಹ ಗೋಗರೆತಗಳೇ ಇರಲಿಲ್ಲ. ರಾಜರು ನಮ್ಮನ್ನು ಮರ್ಯಾದೆಯಿಂದ ನಡೆಸಿಕೊಂಡದ್ದರಿಂದ ಜನ ನಾವು ಸಂಪತ್ತು ಗಳಿಸುವುದು ನೋಡಿಯೂ, ಬೇಸರವಾಗಿಯೂ, ಸುಮ್ಮನಿದ್ದರು.
ಪಶುಪತಿ ಸರಣಿ ೮ :ಹೊಟ್ಟೆಪಾಡಿನ ಮುಂದೆ ಏನು ದೂರ?
ಅರ್ಚಕರಿಗೆ ಪ್ರತೀ ಎರಡು ವರ್ಷಕ್ಕೊಂದು ಸಲ ರಜೆ ಸಿಗುತ್ತದೆ. ಆಗಲೇ ಅವರು ಊರಿಗೆ ಬರುವುದು. ಊರಿಗೆ ಬಂದು ಹೋಗುವುದೇನು ಸುಲಭ ಇತ್ತೆ? ನನ್ನ ಅಜ್ಜಯ್ಯನೇ ಊರಿಗೆ ಬರಬೇಕಾದರೆ ಬೊಂಬಾಯಿವರೆಗೆ ಬಂದು ಅಲ್ಲಿಂದ ಹಡಗು ಹತ್ತಿ, ನಮ್ಮ ಕರಾವಳಿಯಲ್ಲಿ ಇಳಿದು ದೋಣಿ ಮೇಲೆ ಇಲ್ಲಿಗೆ ಬಂದು ಸೇರಿದರಂತೆ. ರೈಲು ಪ್ರಯಾಣ ಸಾಮಾನ್ಯ ಆಗಿದ್ದೆಲ್ಲ ಬಹಳ ಕಾಲದ ಮೇಲೆ. ನನ್ನಮ್ಮ, ಚಿಕ್ಕವಳಿದ್ದಾಗ ಹೀಗೆ ತಾನು ನೋಡಿದ್ದನ್ನು ನೆನಪು ಮಾಡಿಕೊಂಡು ಹೇಳುತ್ತ ಇದ್ದಳು. ಇದೆಲ್ಲ ಒಂದು ಕಾಲದ ಮಾತು.
ಅಲ್ಲಿಯ ವಾಸವನ್ನೇ ಮೆಚ್ಚಿ ಅಲ್ಲಿಯೇ ನೆಲೆಸಿಬಿಟ್ಟ ಭಟ್ಟರುಗಳೂ ಇದ್ದಾರೆ. ಸಾಯುವವರೆಗೂ ಅಲ್ಲಿಯೇ ಇದ್ದವರು. ಅವರ ಮಕ್ಕಳು ಎಲ್ಲ ಅಲ್ಲಿನವರೇ ಆಗಿಹೋಗಿದ್ದಾರೆ. ಮರಾಠೀ ಭಟ್ಟರು ಒಬ್ಬರೂ ಹಿಂದಿರುಗಿ ಊರಿಗೆ ಹೋಗಿದ್ದಿಲ್ಲ. ಮರಾಠಿಗರಾದ ವಿಠಲ ಭಟ್ಟರೂ ಹಾಗೆ, ಹಿಂದಿರುಗಿ ಹೋಗಲೇ ಇಲ್ಲ. ನನ್ನ ಚಿಕ್ಕಮ್ಮ ಮದುವೆಯಾಗಿರುವುದು ವಿಠಲ ಭಟ್ಟರ ಮಗನನ್ನು. ಪೂಜೆಬಿಟ್ಟ ಕೂಡಲೇ ಅರ್ಚಕ ಕುಟುಂಬವನ್ನು ಸರಕಾರ ಕೊಟ್ಟ ಮನೆಯಿಂದ ನಯವಾಗಿ ಏಳಿಸುತ್ತಾರೆ. ಹೊಸ ಭಟ್ಟರು ಬರುತ್ತಾರೆ, ಅವರಿಗೆ ಬಿಟ್ಟುಕೊಡಬೇಕು ಅಂತ. ಬಿಡುವವರು ಕಂಗಾಲಿಗಳಾದರೆ, ಎಂದರೆ ತೀರಾ ಬಡವರಾದರೆ, ಅವರು ಮಹಾರಾಜರನ್ನು ಕೋರಿಕೊಂಡರೆ ಬೇರೆ ವ್ಯವಸ್ಥೆಯನ್ನೂ ಮಾಡಿಕೊಡುತ್ತಾರೆ. ಒಬ್ಬ ಭಟ್ಟರು ತೀರಿ ಹೋಗಿ ಹೊಸ ಭಟ್ಟರು ಬಂದ ಮೇಲೆ ತೀರಿಹೋದ ಭಟ್ಟರ ಮಗ ಹಾಗೆ ಕೋರಿಕೊಂಡದ್ದೂ ಉಂಟು. ‘ನಮ್ಮ ತಂದೆ ತೀರಿಹೋದರು. ನಾವು ಅನಾಥರಾದೆವು. ಎಲ್ಲಿಗೆ ಹೋಗುವುದು ಸರ್ಕಾರ್, ನಮಗೆ ಬೇರೆ ವ್ಯವಸ್ಥೆಯಿಲ್ಲ.’ ಅಂತ; ಆಗ ದೊರೆಗಳು ಅವರನ್ನು ಬಿಟ್ಟುಹಾಕದೆ ಅಲ್ಲೇ ಒಂದು ಸಣ್ಣ ದೇವಸ್ಥಾನಕ್ಕೆ ಅರ್ಚಕರನ್ನಾಗಿ ನೇಮಿಸಿದರು. ಅವರು ನೇಪಾಲೀ ಹೆಣ್ಣನ್ನೇ ಮದುವೆಯಗಿ ನೇಪಾಲಿಯೇ ಆಗಿ ಬಿಟ್ಟಿದ್ದರು. ನೇಪಾಲೀ ಅರ್ಚಕರು ಪೂಜೆ ಮಾಡುವ ದೇವಸ್ಥಾನವದು. ಹಾಗಾಗಿ ಮಾಮೂಲು ಕಟ್ಟುಕಟ್ಟಳೆಗಳಿರಲಿಲ್ಲ.
ಮದುವೆ?
ಹಿಂದೆಲ್ಲ ಬ್ರಾಹ್ಮಣರು ಹೊಟ್ಟೆಪಾಡಿಗಾಗಿ ಊರಿಂದ ಭಾರೀ ದೂರವೇನು ಹೋಗುತ್ತಿರಲಿಲ್ಲವಲ್ಲ. ಹೋಗುತ್ತಲೇ ಇರಲಿಲ್ಲ ಎನ್ನುವುದಕ್ಕಿಂತ, ಹೋಗುವುದು ಅಪರೂಪ. ಹಾಗೆ ಹೋದರೆ ಮತ್ತೇನಿಲ್ಲ. ಅವರಿಗೆ ಮದುವೆಗೆ ಹುಡುಗಿ ಸಿಗುವುದು ಕಷ್ಟ. ಹುಡುಗ ಕಣ್ಣುಕಾಣದ ಊರಿನಲ್ಲಿದ್ದಾನೆ. ಹೇಗಪ್ಪ ಮಗಳನ್ನು ಕೊಡುವುದು? ಎಂದು ಚಿಂತಿಸುತ್ತಿದ್ದವರೇ ಹೆಚ್ಚು. ವರನ ಹಿಂದೆ ಮುಂದೆ ನೋಡಿಕೊಳ್ಳುತ್ತಾರೆ. ವರನ ವರಮಾನ ಹೇಗುಂಟು? ಸಾಕಷ್ಟಿದೆಯೆ? ಇದೆ. ಹಾಗೆಂದಮೇಲೆ ದೂರವಾದರೇನು, ಸುಖವಾಗಿರುತಾಳೆ ಅಂತ ಯೋಚಿಸಿ ಕೊಡುವವರೂ ಇದ್ದರು. ಹಟ್ಟಿಕುದುರಿನ ಭಟ್ಟರು ಹಾಗೆ ತನ್ನ ಮಗಳನ್ನು ನನ್ನ ಅಜ್ಜನಿಗೆ ಮದುವೆ ಮಾಡಿಕೊಟ್ಟರು. ಅಮ್ಮಮ್ಮ (ಅಜ್ಜಿ) ಸಾಯುವ ವರೆಗೂ ನೇಪಾಳದಲ್ಲಿಯೆ ಇದ್ದಳು. ಅಲ್ಲಿಗೇ ಸೇರಿ ಹೋದಳು. ಅವಳ ಒಂದು ಮಗಳನ್ನು ಮಾತ್ರ ಊರಿಗೆ ಮದುವೆಮಾಡಿ ಕೊಟ್ಟರು. ನಾವು ಕೆಲವರು ಆ ಮಗಳ ಮಕ್ಕಳು. ಇಲ್ಲಿಯೇ ಹುಟ್ಟಿ ಬೆಳೆದೆವು.
ಇದೆಲ್ಲ ಒಂದು ಕಾಲದ ಮಾತು. ಈಗ ಬಿಡಿ, ಯಾವ ಊರೂ ದೇಶವೂ ದೂರವಿಲ್ಲ, ದುಡ್ಡೊಂದು ಇದ್ದರೆ ಎಲ್ಲವೂ ನೆರೆಮನೆ. ನೇಪಾಲದಲ್ಲಿ ಇದ್ದಾರೆ ಅಂದಕೂಡಲೆ ಖುಷಿಯಿಂದ ಹೆಣ್ಣು ಕೊಡುವವರು ಎಷ್ಟು ಮಂದಿ ಬೇಕು ಈಗ!
ನೇಪಾಲವೆಂಬ ಅಜ್ಜಿ ಮನೆಗೆ
ದೂರ ನೆಲೆಸಿದ ಗಂಡುಗಳಿಗೆ ಹೆಣ್ಣು ಸಿಗುವುದು ಕಷ್ಟ ಇತ್ತು ಅಷ್ಟೆ ಅಲ್ಲ, ದೂರದಲ್ಲಿದ್ದ ಹೆಣ್ಣು ಮಕ್ಕಳನ್ನು ಊರಿನವರಿಗೆ ಮದುವೆ ಮಾಡಿ ಕೊಡುವುದೂ ಅಷ್ಟೇ ಕಷ್ಟವಿತ್ತು. ಊರಿಂದ ಎಲ್ಲೋ ದೂರ ಇದ್ದುಕೊಂಡು ಊರಿನ ವರನನ್ನು ಹುಡುಕುವುದು ಹೇಗೆ? ಕಾಣುವಷ್ಟು ಸುಲಭವಲ್ಲ ಅದು.
ನನ್ನ ಅಜ್ಜಯ್ಯ ಅಯ್ಯೊ ಇನ್ನೇನು ನಾಳೆ ಬೆಳಗಾದರೆ ಹದಿನಾಲ್ಕು ವರ್ಷ ಆಗಿಬಿಡುತ್ತದೆ ನನ್ನ ಮಗಳಿಗೆ, ಆದಷ್ಟು ಬೇಗ ಮದುವೆ ಮಾಡಬೇಕು. ತಡಮಾಡುವಂತಿಲ್ಲ. ಅಂತ ನನ್ನ ಅಮ್ಮನನ್ನು ಅವಳ ಹನ್ನೆರಡನೇ ವರ್ಷಕ್ಕೆ ಊರಿಗೆ ಕರೆತಂದರಂತೆ. ಕರೆತಂದು ತನ್ನ ಹೆಣ್ಣುಕೊಟ್ಟ ಮಾವನ ಮನೆಯಲ್ಲಿ ಬಿಟ್ಟು ಯೋಗ್ಯ ವರ ಸಿಕ್ಕಿದಲ್ಲಿ, ಒಂದು ವೇಳೆ ನಾನು ಬರುವುದು ತಡವಾದರೆ ಕಾಯುವ ಅಗತ್ಯವಿಲ್ಲ, ನೀನೇ ಎಲ್ಲ ಮುಂದರಿಸಿ ಮದುವೆ ಮಾಡಿಬಿಡು ಅಂತ ತನ್ನ ಭಾವನೆಂಟನಿಗೆ, ಅಂದರೆ ನನ್ನ ಸೋದರಮಾವನಿಗೆ, ಹೇಳಿ ನೇಪಾಲಕ್ಕೆ ಮರಳಿದರಂತೆ.
ಹದಿಮೂರು ವರ್ಷ ಮೀರುವ ಮುಂಚೆ, ಬಾಲವಿವಾಹದ ವಿರುದ್ಧ ಸರಕಾರದ ಕಾನೂನು ಬರುವುದರೊಳಗೆ, ಮದುವೆ ಮಾಡಿಬಿಡಬೇಕು ಎಂಬ ತುರಾತುರಿ ಆಗ. ಹಾಗೆ ತರಾತುರಿಯಲ್ಲಿ ಅಮ್ಮನ ಮದುವೆ ಮಾಡಿದರು. ನೇಪಾಲದಿಂದ ಅಜ್ಜಯ್ಯ ಪಾಪ ಕಷ್ಟಪಟ್ಟು ಮಗಳ ಮದುವೆಗೆ ಬಂದುಹೋದರಂತೆ.
ಅಮ್ಮನ ಮದುವೆ ಊರಿನಲ್ಲಿಯೇ ಆಗಿ, ಅವಳು ಇಲ್ಲಿಯೇ ಇದ್ದದ್ದರಿಂದ, ನಾನು ಇಲ್ಲಿಯೇ ಹುಟ್ಟಿದೆ. ನನ್ನಮ್ಮ ಆಗಾಗ ನೇಪಾಲದ ವರ್ಣನೆ ಮಾಡುತಿರುತಿದ್ದಳು. ಅಜ್ಜಯ್ಯ ತೀರಿಹೋಗಿ ಅಮ್ಮಮ್ಮನೂ ಅಲ್ಲಿಯೇ ಇದ್ದುದ್ದರಿಂದ ನನ್ನ ಅಮ್ಮ ಅಲ್ಲಿದ್ದಾಳೆ, ನನ್ನ ತಂಗಿ ಅಲ್ಲಿದ್ದಾಳೆ ಅಂತ ಅಮ್ಮ ಅವರನ್ನು ನೆನೆದು ಕಣ್ತುಂಬುತ್ತಿದ್ದಳು. ಅಮ್ಮಮ್ಮನ ಬಗ್ಗೆ ಹೇಳಿಹೇಳಿ ನನ್ನಲ್ಲಿ ನೇಪಾಲಕ್ಕೆ ಹೋಗಬೇಕೆಂಬ ಪ್ರೇರಣೆ ಹುಟ್ಟಿಸಿದ್ದೂ ಅಮ್ಮನೇ. ಅವಳು ಹೇಳುವುದನ್ನೆಲ್ಲ ಕೇಳುತ್ತ ಬೆಳೆದ ನನಗೆ ಅಲ್ಲಿಗೆ ಹೋದರೆ (ಪೂಜೆಗಿಂತ) ಅಮ್ಮಮ್ಮನನ್ನು (ಅಮ್ಮನ ಅಮ್ಮನನ್ನು, ಅಜ್ಜಿಯನ್ನು) ನೋಡಬಹುದಲ್ಲ ಎಂಬ ಆಸೆ, ಅವಳೊಡನೆ ಇರಬೇಕೆಂಬ ಆಸೆ, ಅವಳು ಅಲ್ಲಿದ್ದಾಳೆ ಎಂದ ಮೇಲೆ ನಾನೂ ಅಲ್ಲಿಗೆ ಹೋಗಲೇಬೇಕು ಎಂಬ ಹಂಬಲ ಉಂಟಾಯಿತು. ಅದಕ್ಕಾಗಿ ಅವಕಾಶ ಕಾಯುತ್ತಾ ಇದ್ದೆ.
ಬ್ರಿಟಿಷ್ ಕಾಲದಲ್ಲಿ ಒಬ್ಬನೇ ಒಬ್ಬ ಪ್ರಜೆ ಭಾರತ-ನೇಪಾಲ ಗಡಿ ದಾಟಿ ಆಚೆ ಹೋಗುವುದು ಕೂಡ ಸುಲಭವಿದ್ದಿಲ್ಲ. ಈಚಿಂದ ಯಾರಾದರೂ ಹೋಗುವವರಿದ್ದರೆ ಏಳುದಿನವಿಡೀ ಗಡಿಯಲ್ಲಿ ಕಾಯಬೇಕು. ನಮ್ಮ ಸಂಬಂಧಿಕರೋ, ಪರಿಚಿತರೋ ಇಂಥವರು ಅಲ್ಲಿದ್ದಾರೆ, ಅಂತ ವಿವರ ಕೊಡಬೇಕು. ಆ ವಿವರ ಹಿಡಕೊಂಡು ಅಲ್ಲಿನ ಆ ಜನರ ಮನೆಗೆ ಹೋಗಿ, ಈ ಮನುಷ್ಯ ಯಾರು? ಈ ಅಕ್ಷರ ದಸ್ಕತು ಅವನದೆಯೋ? ಅಂತೆಲ್ಲ ವಿಚಾರಿಸಿ, ಸರಿ ಅನಿಸಿದರೆ ಹಾಗಾದರೆ, ಬರಲಿ.
ನನ್ನ ಅಪ್ಪಯ್ಯ ನೇಪಾಲಕ್ಕೆ ಹೋಗಬೇಕಾದರೆ ‘ನನ್ನ ಹೆಂಡತಿ ನೇಪಾಲದಲ್ಲಿ ಅರ್ಚಕರಾಗಿರುವ ನಾರಾಯಣ ಶಾಸ್ತ್ರಿಗಳ ಮಗಳು ಶಾಂತಾ. ಆದ್ದರಿಂದ ಅಲ್ಲಿಗೆ ಹೋಗಬೇಕಾಗಿದೆ. ನನಗೆ ವೀಸಾ ಕೊಡಿ – ಅಂತ ಗಡಿಗೆ ಹೋದ ಮೇಲೆ ಅರ್ಜಿ ಬರೆದು ಹಾಕಿ, ಅಲ್ಲಿ ನೇಪಾಲದಲ್ಲಿ ಅಧಿಕಾರಿಗಳು ನನ್ನಜ್ಜ ನಾರಾಯಣ ಶಾಸ್ತ್ರಿಗಳನ್ನು ಈ ಅಕ್ಷರ, ದಸ್ಕತು ಯಾರದ್ದು? ಅಂತ ವಿಚಾರಿಸಿಯೇ ಅಪ್ಪಯ್ಯನನ್ನು ಒಳಬಿಟ್ಟದ್ದಂತೆ. ಬ್ರಿಟಿಷ್ ಸರಕಾರ ಇರುವಲ್ಲಿವರೆಗೂ ಹೀಗೆ. ಬ್ರಿಟಿಷರು ನೇಪಾಲಕ್ಕೆ ಶುದ್ಧ ವಿರೋಧಿಗಳಾಗಿದ್ದರು. ಏಕೆಂದರೆ ಓಡಿ ಕೈತಪ್ಪಿದ ಪೃಥ್ವೀನಾರಾಯಣ ಸಿಂಹನ ನೇಪಾಲವಲ್ಲವೇ ಅದು? ಹಾಗಾಗಿ ನೇಪಾಲಕ್ಕೊಂದು ಪ್ರವೇಶ ಮಾಡದಂತೆ ಬಿಗಿಮಾಡುತ್ತಿದ್ದರು.
ನಾನು ಹೋಗುವ ಕಾಲಕ್ಕೆ ಅಷ್ಟೆಲ್ಲ ಬಿಗಿ ಇರಲಿಲ್ಲ. ಮುಖ್ಯವಾಗಿ ಅವಕಾಶ ಸಿಕ್ಕಬೇಕು, ಅವಕಾಶ ಸಿಕ್ಕಿದರೆ ಹೋಗುವುದೇ. ನನಗೆ ಆ ಅವಕಾಶ ಸಿಕ್ಕಿ, ಅಲ್ಲಿಗೆ ಹೋಗಿ, ಹೋಗಿದ್ದೂ ಅಲ್ಲದೆ ಪ್ರೀತಿಯ ಅಮ್ಮಮ್ಮನ ಅಂತ್ಯಕಾಲದಲ್ಲಿ ನಾನು ಅವಳ ಬಳಿಯೇ ಇದ್ದೆನಲ್ಲ! ನನ್ನ ಪುಣ್ಯವಲ್ಲವೆ?
ಪಶುಪತಿ ಸರಣಿ ೯: ದೇವರ ಹನ್ನೆರಡು ಬಾಗಿಲುಗಳು
ನೇಪಾಲಕ್ಕೆ ಹೋಗುವ ಅವಕಾಶ ನನಗೆ ಹೇಗೆ ಒದಗಿತು ಎಂಬುದು ಪ್ರಶ್ನೆ. ಮುಂಚಿನಿಂದಲೂ ನಾನು ಯೋಗ್ಯರ ಬಳಿ ನಂಬಿಗಸ್ಥ ಹುಡುಗ ಎಂಬ ಪ್ರಶಂಸೆ ಪಡೆದವನು. ನಮ್ಮೂರಿನ ಪಟೇಲರಿಗೆ ಕರೆದ ಕೂಡಲೆ ಸಿಗುವ, ಹೇಳಿದ ಕೆಲಸವನ್ನು ಜವಾಬ್ದಾರಿಯಿಂದ ಮಾಡುವ ವಿಧೇಯ ಹುಡುಗನಾಗಿದ್ದೆ. ಅವರ ಮನೆಯ ಎಲ್ಲ ಆಗುಹೋಗುಗಳಿಗೆ ಒದಗುತ್ತಿದ್ದವನು ನಾನೇ. ಒಮ್ಮೆ ಪಟೇಲರು ‘ನೇಪಾಲದಿಂದ ನನ್ನ ಭಾವ ಬಸರೂರು ಸುಬ್ರಹ್ಮಣ್ಯ ಅಡಿಗರು ಊರಿಗೆ ಬರುತ್ತಿದ್ದಾರೆ. ಅವರು ಇಲ್ಲಿದ್ದಷ್ಟು ದಿನವೂ, ಅವರಿಗೆ ಬೇಕಾದ ವ್ಯವಸ್ಥೆಯನ್ನೆಲ್ಲ ಯಾವ ಊನ ಬರದಂತೆ ನೀನು ನೋಡಿಕೊಳ್ಳುತ್ತೀಯ?’ ಅಂತ ಕೇಳಿದರು. ‘ಹೋ, ಖಂಡಿತ’ ಎಂದೆ.
ಸುಬ್ರಹ್ಮಣ್ಯ ಅಡಿಗರು ಬರುತ್ತಲೂ ಅವರಿಗೆ ಏನೇನು ಬೇಕೋ- ಬೆಲ್ಲದ ಡಬ್ಬಿಯಿಂದ ಹಿಡಿದು, ಹಾಲುಕೊಡುವ ದನದಿಂದ ಹಿಡಿದು, (ಮನೆಯಲ್ಲೇ ಕರೆದ ಹಾಲನ್ನು ಮಾತ್ರ ಬಳಸುತಿದ್ದರು ಅವರು) – ಸಕಲವನ್ನೂ ವ್ಯವಸ್ಥೆ ಮಾಡಿದೆ. ಸುಬ್ಬಣ್ಣ ಮಾವಯ್ಯನ ಹತ್ತಿರ ತನ್ನ ಮಾಣಿ ಇದ್ದಾನೆ ಅಂತ ಅಮ್ಮನಿಗಂತೂ ಬಹಳ ಸಂತೋಷವಾಯ್ತು. ಗುರು ಬಸರೂರು ಸುಬ್ರಹ್ಮಣ್ಯ ಅಡಿಗಳಿಗೆ ನಾನು ಕೆಲಸ ಮಾಡುವ ಕ್ರಮ, ನನ್ನ ಶ್ರದ್ಧೆ ಎಲ್ಲ ಇಷ್ಟವಾಯಿತು. ನೇಪಾಲದ ದೇವಸ್ಥಾನದ ಪೂಜೆಗೆ ಪ್ರವೇಶ ಪರೀಕ್ಷೆಯಲ್ಲಿ ಕುಳಿತುಕೊಳ್ಳಲು ಹೇಳಿದರು. ಗುರುಗಳ ಮನಸ್ಸಿಗೆ ಬಂದರೆ ಉತ್ತೀರ್ಣ ಮಾಡಿಸುತ್ತಾರೆ ಎಂದೆನಲ್ಲವೆ ಹಿಂದೆಯೆ? ಹಾಗೆ ನನ್ನನ್ನು ಅವರು ಉತ್ತೀರ್ಣ ಮಾಡಿಸಿದರು. ಎಂಥಾ ಗುರುಗಳು ಗೊತ್ತೆ ಅವರು? ಹೇಳಿದಷ್ಟೂ ಕಡಿಮೆ. ಕಣ್ಣಲ್ಲಿ ನೋಡಬೇಕು, ಜೊತೆಗಿರಬೇಕು, ಆಗಲೇ ತಿಳಿಯುವುದು. ಶಾಂತ ಅಂದರೆ ಶಾಂತ ಪ್ರವೃತ್ತಿ ಅವರದು. ಕಿಂಚಿತ್ತೂ ಸಿಟ್ಟೆಂಬುದಿಲ್ಲ. ಆಳುಕಾಳು ಎಲ್ಲರೊಡನೆಯೂ ದರ್ಪ ತೋರದ ವರ್ತನೆ. ಅವರ ದೊಡ್ಡ ಬೈಗಳ ಅಂದರೆ – ಖಬರ್‌ದಾರ್. ಅದಕ್ಕಿಂತ ದೊಡ್ಡ ಬೈಗಳ ಇಲ್ಲ! ಇವತ್ತಿಗೂ ಅವರನ್ನು ಕೊಂಡಾಡುವವರು ಅಲ್ಲಿದ್ದಾರೆ. ಅವರ ನಂತರ ಅಂತಹ ಪ್ರಧಾನ ಅರ್ಚಕರನ್ನು ಕಂಡೇ ಇಲ್ಲ ಅನ್ನುತ್ತಾರೆ.
ಆದರೆ ಅವರನ್ನು ದೂಡಿಕೊಂಡು ತಾನು ಪ್ರಧಾನ ಅರ್ಚಕನಾಗಬೇಕೆಂಬ ಆಸೆ ಇದ್ದ ಇನ್ನೊಬ್ಬ ಅರ್ಚಕರು ನನ್ನ ಯೋಗ್ಯತೆಯನ್ನು ತಳ್ಳಿಹಾಕುತ್ತಾ ಬಂದರು. ಅವರು ಮುಂದಿಟ್ಟ ಆಪಾದನೆ ಎಂದರೆ- ಒಂದು, ನಾನು ದಕ್ಷಿಣ ಭಾರತದಲ್ಲಿ ಹುಟ್ಟಿದರೇನಾಯಿತು? ನನ್ನ ಅಮ್ಮ ನೇಪಾಲದಲ್ಲಿ ಹುಟ್ಟಿದವಳು. ಎರಡು: ನಾನು ವಿದ್ವಾಂಸನಲ್ಲ. ಅದು ಸರಿಯೆ. ನಾನು ವಿದ್ವಾಂಸನಲ್ಲ. ಅಲ್ಲಿಗೆ ಬೇಕಾದ ಶಾಸ್ತ್ರೀಯ ಪರೀಕ್ಷೆಯನ್ನು ಪಾಸು ಮಾಡಿದವನಲ್ಲ. ನನ್ನನ್ನು ಪಾಸು ಮಾಡಿಸಿದ್ದು. ಆದರೆ ಕೊನೆಗೂ ನನ್ನ ಗುರುಗಳ ಮಾತೇ ನಡೆಯಿತು. ನಾನು ಪಶುಪತಿಯ ಅರ್ಚಕರಲ್ಲೊಬ್ಬನಾಗಿ ನೇಪಾಲಕ್ಕೆ ಹೋಗಿಯೇ ಬಿಟ್ಟೆ.
ಪಶುಪತಿನಾಥನ ಐದು ಮುಖಗಳು ಯಾಯಾವುವೆಂದು ಆಗಲೇ ಹೇಳಿದೆನಷ್ಟೆ? ಐದನೆಯದು ಈಶಾನ- ಈತನನ್ನು ಮಹಾವಿಷ್ಣು ಅಂತಲೂ ಹೇಳುತ್ತಾರೆ. ಹರಿಹರರಲ್ಲಿ ಭೇದವಿಲ್ಲ. ವಾಸುಕೀ ಎನ್ನುವುದು ಈಶ್ವರನಿಗೆ ಕಂಠಭೂಷಣ ಆಗಿರುವಂಥ ಆದಿಶೇಷ. ಆದಿಶೇಷನ ಜೊತೆಯಲ್ಲಿ ಇರುವವ ನಾರಾಯಣ. ಹಾಗೆ, ಪಶುಪತಿನಾಥ ದೇವಸ್ಥಾನದ ನೇರ ಈಶಾನ್ಯಕ್ಕೆ ವಾಸುಕೀ ನಾರಾಯಣ ದೇವರು. ಈ ವಾಸುಕೀ ನಾರಾಯಣ ದೇವರಲ್ಲಿ ಮೊದಲು ಹೋಗಿ, ಪ್ರಾರ್ಥನೆ ಮಾಡಿ, ಪಶುಪತಿನಾಥನಲ್ಲಿ ಏನು ಪೂಜೆ ಮಾಡುತ್ತೇವೋ, ಅದನ್ನು ಮೊದಲು ಇಲ್ಲಿ ಮಾಡಿ, ತೀರ್ಥಪ್ರಸಾದ ತೆಗೆದುಕೊಂಡು, ಗಣಪತಿ ಸಮೇತ ಪರಿವಾರದೇವತೆಗಳನ್ನೆಲ್ಲ ನೋಡಿಕೊಂಡು, ಕೊನೆಗೆ ಪಶುಪತಿನಾಥ ವಿಗ್ರಹದ ಎದುರಿನ ನಾಲ್ಕು ಮುಖಗಳ ದರ್ಶನ ಮಾಡಿದರೆ, ಪಶುಪತಿನಾಥನ ದರ್ಶನ ಪೂರ್ತಿ ಆಯಿತು ಅಂತ.
ಪಶುಪತಿನಾಥ ವಿಗ್ರಹಕ್ಕೆ ಐದು ಮುಖವಾದರೆ, ಅವನ ದೇಗುಲದ ದ್ವಾರಗಳೇ ಬಲು ವಿಶೇಷ. ಒಟ್ಟು ಹೊರಗಿಂದ ಒಟ್ಟು ಹನ್ನೆರಡು ದ್ವಾರಗಳು. ದಾಟಿ ಒಳ ಹೋದರೆ ನಾಲ್ಕು ಬಾಗಿಲ ಎದುರು ತೀರ್ಥಮಂಟಪ. ತಿಂಗಳಿಗೊಮ್ಮೆ ಹುಣ್ಣಿಮೆಗೆ ಮಧ್ಯಾಹ್ನ ಮೂರು ಗಂಟೆಯಿಂದ ರಾತ್ರಿ ಒಂಭತ್ತು ಗಂಟೆಯ ವರೆಗೆ ಈ ಬಾಗಿಲುಗಳನ್ನು ಪೂರ್ತಿ ತೆರೆಯುತ್ತಾರೆ ಒಂದೊಂದು ದ್ವಾರ ಅಂದರೆ ಸುಮಾರು ಹತ್ತು ಅಡಿ ಉದ್ದ, ಆರಡಿ ಅಗಲ, ಒಬ್ಬ ಮನುಷ್ಯ ನಿಂತಿದ್ದರೆ, ಅವನ ಮೇಲೆ ಇನ್ನೊಬ್ಬ ನಿಲ್ಲಬಹುದು – ಅಷ್ಟೆತ್ತರ. ಅದರಲ್ಲಿ ಪಶ್ಚಿಮದ ಬಾಗಿಲು ಅರ್ಚಕರ ಮತ್ತು ಭಂಡಾರಿಗಳ ಪ್ರವೇಶಕ್ಕೆ ಮಾತ್ರ. ಗರ್ಭಗುಡಿಯೊಳಗೆ ಹೋಗಬೇಕಾದರೆ ಅಡ್ಡಕೆ ಅರ್ಧ ಬಾಗಿಲನ್ನು ಸರಪಳಿ ಹಿಡಿದು ಹಾರಿ ಒಳ ಹೋಗಬೇಕು. ಸಾವಿರ ವರ್ಷ ಬಾಳುವಷ್ಟು ಗಟ್ಟಿಮುಟ್ಟಾದ, ಬಾಗಿಲುಗಳು ಅವು. ಪೃಥ್ವೀನಾರಾಯಣ ಶಹನ ಕಾಲದಲ್ಲಿ ಆ ದೇಗುಲ ವಿಸ್ತಾರವಾಗಿ ಸಮುಚ್ಚಯರೂಪ ಪಡೆದುಕೊಂಡಿತಂತೆ. ನಮ್ಮಲ್ಲೆಲ್ಲ ದೇವರ ಎರಡೂ ಬದಿ ದೀಪ ಹಚ್ಚುತ್ತೇವಲ್ಲ. ಅಲ್ಲಿ ಹೀಗೆ ದೇವರ ಪಾಣಿಪೀಠದ ಹತ್ತಿರ ಎಲ್ಲಿಯೂ ದೀಪ ಇಡಲೇಬಾರದು. ಬದಲು ಗರ್ಭಗುಡಿಯ ನಾಲ್ಕು ಮೂಲೆಯಲ್ಲಿ ನಾಲ್ಕು ದೀಪಗಳು. ಗರ್ಭಗುಡಿಯ ಒಳಗಿನ ಬೆಳಕೆಂದರೆ ಈ ದೀಪಗಳ ಬೆಳಕು ಮಾತ್ರ. ಹಿಂದೆಲ್ಲ ದೇವಸ್ಥಾನದೊಳಗಿನ ಬೆಳಕು ಎಂದರೆ ಹೊರಗಿಂದ ನಾಲ್ಕು ಬಾಗಿಲುಗಳ ಮೂಲಕ ಒಳಗೆ ಎಷ್ಟು ಬೆಳಕು ಬರುತ್ತದೋ ಅಷ್ಟೆ. ರಾತ್ರಿ ಹೊತ್ತಿನಲ್ಲಿ ಹೊರಗೆ ದೊಂದಿದೀಪ ಹಚ್ಚಿಡುತಿದ್ದರು. ಈಗ ಹಾಗಿಲ್ಲ. ವಿದ್ಯುದ್ದೀಪ ಹಾಕಿದ್ದಾರೆ. ಇವತ್ತಿಗೂ, ಕಾರ್ತಿಕಮಾಸ ಬಂತೆಂದರೆ ದೇವಸ್ಥಾನದ ಸುತ್ತಲೂ ಹಿತ್ತಾಳೆದೀಪಗಳನ್ನು ಉರಿಸುತ್ತಾರೆ. ಅದಕ್ಕೇನೇ ದಿನಾ ಒಂದು ಡಬ್ಬಿ ಎಣ್ಣೆ ಬೇಕು.ಅಷ್ಟಷ್ಟು ದೊಡ್ಡ ದೊಡ್ಡ ಹಿತ್ತಾಳೆ ದೀಪಗಳು ಅವು.
ಪಶುಪತಿ ಸರಣಿ ೧೦: ‘ಹೇಗಿದ್ದೀರಿ ಭಟ್ಟರೇ ’ಎಂದ ದೊರೆ
ನಾನಲ್ಲಿಗೆ ಹೋದ ಮೂರು ತಿಂಗಳು ಸುಮ್ಮನೆ ಎಲ್ಲವನ್ನೂ ನೋಡುತ್ತ ಗ್ರಹಿಸುತ್ತ ಹೋದೆ. ಆ ಮೇಲೆ ನನ್ನ ಗುರು ಸುಬ್ಬಣ್ಣ ಅಡಿಗರು ‘ನೀನು ಎಲ್ಲಿ ಪೂಜೆ ಮಾಡಲು ಇಷ್ಟ ಪಡುತ್ತಿ ಅಲ್ಲಿಗೆ ಹೋಗಬಹುದು’ ಎಂದರು. ಹಾಗೆ ನಾನು ನನ್ನ ಪೂಜಾಸನ್ನಿಧಿಗಾಗಿ ವಾಸುಕೀನಾರಾಯಣ ದೇವಾಲಯವನ್ನು ಆಯ್ದುಕೊಂಡೆ. ಮುಖ್ಯ ದೇವಸ್ಥಾನದ ಪ್ರಾಕಾರದೊಳಗೇ ಇರುವ ಬಹಳ ಪ್ರಶಾಂತ ಪರಿಸರದ ದೇಗುಲವದು. ಇಲ್ಲಿ ನಾನು ಭಕ್ತಾದಿಗಳಿಂದ ಬಂದ ಒಂದು ಅತ್ಯಂತ ಚಂದದ ನಂದಾದೀಪ ಇಡುತ್ತಿದ್ದೆ. ಎಷ್ಟು ಚಂದ ಅಂದರೆ ಅಷ್ಟು ಚಂದದ ದೀಪ ಅದು. ರಾತ್ರಿ ಹತ್ತು ಗಂಟೆಗೆ ಪಶುಪತಿನಾಥ ದೇವಾಲಯದ ಬಾಗಿಲು ಹಾಕಿ ನಾಲ್ಕೂ ಬಾಗಿಲಲ್ಲಿ ಎಂಟು ಮಂದಿ ಮಿಲಿಟರಿಯವರು ಗನ್ನು ಹಿಡಿದು ನಿಂತು ಬಿಡುತ್ತಾರೆ. ಬಾಗಿಲು ಹಾಕುವುದರೊಳಗೆ ಯಾರೂ ದೇವಸ್ಥಾನಕ್ಕೆ ಬರಬಹುದು. ಆಮೇಲೆ ಇಲ್ಲ. ನಾನೋ, ಪೂಜೆ ಮುಗಿಸಿ ಮನೆಗೆ ಬಂದು ನನ್ನ ವಸ್ತ್ರ ಬದಲಿಸಿದವ, ಅಷ್ಟರೊಳಗೆ ಮತ್ತೆ ಹೋಗಿ ಒಮ್ಮೆ ಒಳಗೆ ಇಣುಕಿ ಬರುತಿದ್ದೆ. ಮನೆ ಅಲ್ಲೇ, ಸ್ವಲ್ಪ ದೂರದಲ್ಲೆ ಇರುವುದರಿಂದ ಹೋಗಿ ಬರುವುದೇನು ಕಷ್ಟವಲ್ಲ. ಮೆಲ್ಲಗೆ ಶಾಂತವಾಗಿ ಉರಿಯುವ ದೀಪದಲ್ಲಿ ದೇವರನ್ನು ಮತ್ತೆ ಮತ್ತೆ ನೋಡುವುದೆಂದರೆ ಸೈ ನನಗೆ.
ವಾಸುಕೀನಾರಾಯಣ ದೇವಸ್ಥಾನದ ಪೂಜೆಗೆ ಪಶುಪತಿನಾಥನ ಪೂಜೆಗೆ ಬೇಕಾಗುವಷ್ಟು ಸಮಯ ಬೇಡ. ಆದರೆ ನನಗೆ ಸಮಯ ಬೇಕಾಗುತಿತ್ತು. ಏಕೆಂದರೆ ಅಲಂಕಾರ ಮಾಡುವುದಕ್ಕೇ ನನಗೆ ತುಂಬ ಸಮಯ ಹಿಡಿಯುತಿತ್ತು. ದಪ್ಪ ಭಾರದ ಹೂವನ್ನು ಅಡಿಯಲ್ಲಿ ಜೋಡಿಸಿ ಹಗುರ ಹೂಗಳನ್ನು ಅವುಗಳ ಮೇಲೆ ಕ್ರಮವಾಗಿ ಜೋಡಿಸಿ ಬಿಡಿ ಹೂಗಳನ್ನು ಅವುಗಳ ಮಧ್ಯಮಧ್ಯೆ ಇಟ್ಟು ದೇವರನ್ನು ಅಲಂಕರಿಸುತಿದ್ದೆ. ನನಗೆ ಹೊತ್ತು ಹೋಗುವುದೇ ಹಾಗೆ. ನಾನು ಅಲಂಕರಿಸುತ್ತಿರುವಾಗ ಯಾವ ಭಕ್ತರೂ ನನ್ನನ್ನು ಮಾತಾಡಿಸುವುದಿಲ್ಲ. ನನ್ನ ಏಕಾಗ್ರತೆ ಗೊತ್ತು ಅವರಿಗೆ.
ಹೋದವನಿಗೆ ನನಗೆ ನೇಪಾಲಿ ಭಾಷೆ ಬರುತ್ತದೆಯೆ? ದೊರೆ ಮಹೇಂದ್ರರು ಒಮ್ಮೆ ಬಂದು – ‘ಹೇಗಿದ್ದೀರಿ ಭಟ್ಟರೇ?’ ಅಂತ ನೇಪಾಲಿಯಲ್ಲಿ ಕೇಳಿದರು. ನಾನು ತಿಳಿಯದೆ ‘ಅಂ? ಅಂ?’ ಅಂದೆ. ಅವರು ‘ಹ್ಞಂಹ್ಞಂ’ ಅಂತ ಹೋಗಿಬಿಟ್ಟರು. ಎರಡನೆಯ ಬಾರಿ ಬಂದಾಗಲೂ ಅದನ್ನೇ ಕೇಳಿದರು. ನಾನು ಈ ಸಲವೂ ತಡಬಡಿಸಿದೆ. ಆರೆಂಟು ತಿಂಗಳು ಕಳೆದ ಮೇಲೆಮ್ಮೆ ಬಂದವರು ‘ಈಗ ನೇಪಾಲಿ ಬರುತ್ತದೆಯೆ?’ ಅಂತ ಕೇಳಿದರು. ‘ಹ್ಞಾ ಹೌದು ಸರ್ಕಾರ್, ಬರುತ್ತದೆ’ ಅಂದೆ, ನೇಪಾಲಿಯಲ್ಲಿಯೇ. ‘ಹ್ಞಾಂ!’ ಅಂತ ಹೊರಟುಹೋದರು.
ಎಷ್ಟು ಚಂದದ ದೇವರು!
ಪಶುಪತಿನಾಥ ದೇವಾಲಯದಲ್ಲಿ ಅರ್ಚಕರಿಗೆ ತುಂಬಾ ವರಮಾನ ಬರೋದು. ಹೆಚ್ಚಿನ ಯಾತ್ರಾರ್ಥಿಗಳಿಗೆ ದರ್ಶನದ ಕಟ್ಟುಕಟ್ಟಲೆ ಗೊತ್ತಿರಲ್ಲ. ಸೀದಾ ಪಶುಪತಿನಾಥ ದೇವಸ್ಥಾನಕ್ಕೇ ಹೋಗುತ್ತಿದ್ದರು. ಕಟ್ಟುಕಟ್ಟಲೆ ಗೊತ್ತಿದ್ದವರು ಮಾತ್ರ ವಾಸುಕೀ ನಾರಾಯಣ ದೇವಾಲಯಕ್ಕೆ ಮೊದಲು ಬಂದು, ಪರಿವಾರ ದೇವತೆಗಳಿಗೆಲ್ಲ ನಮಿಸಿ, ನಂತರ ಪಶುಪತಿನಾಥನ ದರ್ಶನಕ್ಕೆ ಹೋಗುವರು ಹಾಗಾಗಿ ವಾಸುಕೀನಾರಾಯಣ ದೇವಸ್ಥಾನದ ಪೂಜಾರಿಯಾದ ನನಗೆ, ಉಳಿದ ನಾಲ್ಕು ಅರ್ಚಕರಿಗೆ ಹೋಲಿಸಿದರೆ, ವರಮಾನ ಬಹಳ ಕಡಿಮೆ.- ಆದರೆ ರಾಜಪರಿವಾರದವರೆಲ್ಲ ಕಟ್ಟಲೆ ಪ್ರಕಾರವೇ ಚಾಚೂ ತಪ್ಪದೆ ನಡೆದುಕೊಳ್ಳುತಿದ್ದರು. ರಾಜಕೀಯ ನಾಯಕರು ಉದಾಹರಣೆಗೆ ಬಿ ಡಿ. ಜತ್ತಿ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾಗಾಂಧಿ ಬಂದಾಗಲೂ ಹೀಗೆ ಕ್ರಮಪ್ರಕಾರವೇ ದರ್ಶನ ಮಾಡೋದು. ಜತ್ತಿ ಬಂದಾಗ ಅವರ ಹೆಂಡತಿ ಮಕ್ಕಳು ಎಲ್ಲ ಬಂದಿದ್ದರು. ದೇವರನ್ನು ನೋಡಿ ಜತ್ತಿಯವರು ಕನ್ನಡದಲ್ಲಿ ‘ಎಷ್ಟು ಚಂದದ ದೇವರು!’ ಅಂತ ಉದ್ಗರಿಸಿದರು. ಆಗ ನಾನೂ ಕನ್ನಡದಲ್ಲಿ ಏನೋ ಮಾತಾಡಿದೆ. ಯೇ! ದೇವರ ಹತ್ತಿರ ಕನ್ನಡ ಮಾತಾಡುವ ಭಟ್ಟರು ಇದ್ದಾರೆ! ಅಂತ ಆಶ್ಚರ್ಯ ಅವರಿಗೆಲ್ಲ. ಆಗ ಎಲ್ಲರೂ ನನ್ನ ಹತ್ತಿರ ಅಲ್ಲಿನ ಅನೇಕ ವಿಷಯ ಕೇಳುವವರೇ. ಧಾರ್ಮಿಕ ವಿಚಾರವಾಗಿ ನಾವು ಯಾರ ಬಳಿಯೂ ಎಷ್ಟೂ ಮಾತಾಡಬಹುದು. ಅದೇ ನಾನು, ಭಾರತದವನೇ ಆದರೂ. ಭಾರತದಲ್ಲಿ ಎಲ್ಲ ಹೇಗಿದೆ? ಅಂತ ಕೇಳಿಬಿಟ್ಟೆನೋ- ಅಪರಾಧವಾಗಿ ಬಿಡುತ್ತದೆ. ನಾವು ಮಾಡಬಾರದ ತಪ್ಪುಗಳಲ್ಲಿ ಇದೂ ಒಂದು. ಇಂತಹ ತಪ್ಪುಗಳಾದಾಗ ಮೊದಲು ಸೂಚನೆ ಎಚ್ಚರಿಕೆ ಬರುತ್ತದೆ. ಮತ್ತೂ ಅದು ಮುಂದುವರಿದರೆ ಕೆಲಸದಿಂದ ತೆಗೆದೇ ಹಾಕುತ್ತಾರೆ. ಉದ್ದೇಶವೇನೆಂದರೆ -ಅರ್ಚಕರು ರಾಜಕೀಯ ಮಾಡಕೂಡದು. ಮಾತಾಡಕೂಡದು.
ಆದರೆ ಮೊರಾರ್ಜಿ ದೇಸಾಯಿಯವರು ಬಂದಾಗ ನಾವೆಲ್ಲ ಅನಿವಾಸಿ ಭಾರತೀಯರು, ಮಕ್ಕಳನ್ನು ಅವರೆದುರು ಕರೆದುಕೊಂಡು ಹೋಗಿ, ‘ಇವರೆಲ್ಲ ನಿಮಗೆ ಬೇಕೋ ಬೇಡವೋ’ ಅಂತ ಪ್ರಶ್ನೆ ಹಾಕಿದೆವು. ಅವರು ಒಂದು ಮಗುವನ್ನೆತ್ತಿ, ‘ನಮ್ಮ ಮಗು ನಮಗೆ ಬೇಕು’ ಅಂದರು. ‘ನಮ್ಮ ಮಕ್ಕಳೆಲ್ಲ ನೇಪಾಲಿ ಶಾಲೆಗೆ ಹೋಗುವವರು. ನಮಗೆ ನಮ್ಮದೇ ಆದೊಂದು ಶಾಲೆ ಬೇಕಲ್ಲ.’ ಎಂದು ಕೋರಿಕೆ ಮುಂದಿಟ್ಟೆವು. ಕೂಡಲೇ ಒಂದು ಶಾಲೆ ಕೊಟ್ಟುಬಿಟ್ಟರಲ್ಲ ಮೊರಾರ್ಜಿ! ಒಬ್ಬ ಭಾರತೀಯ ವ್ಯಾಪಾರಿ ತಮ್ಮದೇ ಒಂದು ಜಾಗವನ್ನು ಶಾಲೆಗೆಂದು ಬಿಟ್ಟುಕೊಟ್ಟರು. ಹಿಂದಿ ಇಂಗ್ಲಿಷ್ ಎಲ್ಲ ಕಲಿಸುವ ಮಾಡರ್ನ್ ಇಂಗ್ಲಿಷ್ ಸ್ಕೂಲ್ ಆರಂಭವಾಗಿದ್ದು ಹೀಗೆ.
ಪಶುಪತಿ ಸರಣಿ ೧೧: ದೊರೆಗಳ ಮನೆಯ ತೇಪೆಗಳು
ಮಹಾರಾಜರು – ‘ಶ್ರೀ ಪಾಂಚ್’. ಅಂದರೆ ಐದು ಶ್ರೀ. ಐದು ಶ್ರೀ ಶ್ರೀ ಶ್ರೀ ಶ್ರೀ ಶ್ರೀ ಸಹಿತವೇ ಅವರನ್ನು ಸಂಬೋಧಿಸಬೇಕು. ಬರೆಯುವಾಗಲೂ, ಮೊದಲು ಶುರುಮಾಡುವುದು ಶ್ರೀ ಪಾಂಚ್ ಮಹಾರಾಜಾಧಿರಾಜ ಸರ್ಕಾರ್‌ಕೇ ಜುನಾಫ್‌ಮೇ; ಅಂದರೆ ಸನ್ನಿಧಾನಕ್ಕೆ- ಚತುರ್ವೇದೇಶ ಆಶೀರ್ವಾದ ಅಂತ.
ರಾಜಗುರುಗಳೆಂದರೆ ‘ಶ್ರೀ ಛೆ’. ಆರು ಶ್ರೀಯವರು. ರಾಜರಿಗಿಂತ ಒಂದು ಶ್ರೀ ಹೆಚ್ಚು ಅವರಿಗೆ. ಅವರ ಕೆಲಸವೆಂದರೆ ರಾಜರನ್ನು ಸಿಂಹಾಸನದಲ್ಲಿ ಕೂಡಿಸುವುದು, ಪಟ್ಟಾಭಿಷೇಕ ಮಾಡಿಸುವುದು. ರಾಜಕುಮಾರನಿಗೆ ಉಪನಯನ ಮಾಡಿಸುವುದು. ಮದುವೆ ಮಾಡಿಸುವುದು, ಮಗು ಹುಟ್ಟಿದರೆ ನಾಮಕರಣ ಇತ್ಯಾದಿ. ರಾಜಪುರೋಹಿತರಿಗೆ ‘ಶ್ರೀತೀನ್’. ರಾಜರು ತೀರಿಕೊಂಡಾಗ ಅವರ ಅಪರ ಕಾರ್ಯಗಳನ್ನು ನಡೆಸಿಕೊಡುವ ಜವಾಬ್ದಾರಿ ರಾಜಪುರೋಹಿತರದು.
ದೊರೆ ಮಹೇಂದ್ರರು ನನ್ನ ಬಳಿ ತುಂಬ ಮಾತಾಡುತ್ತಿದ್ದರು. ನಾನೆಂದರೆ ವಿಶೇಷ ಪ್ರೀತಿ ಇತ್ತು ಅವರಿಗೆ. ದೊರೆಗಳ ಬಳಿ ಮಾತೆಂದರೆ, ಧಾರ್ಮಿಕ ವಿಚಾರಗಳ ಕುರಿತು ಮಾತು, ಅಷ್ಟೇ. ದೊರೆ ಮಹೇಂದ್ರರ ಸ್ವರ್ಗಾರೋಹಣದ ನಂತರ ವೀರೇಂದ್ರ ದೊರೆಯಾದರಲ್ಲ. ಮೂರು ವರ್ಷ ನನ್ನೊಡನೆ ಒಂದೇ ಒಂದು ಮಾತಾಡಲಿಲ್ಲ. ನಾವಾಗಿ ಯಾರೊಡನೆಯೂ ಮಾತಾಡಬಾರದು. ಜತ್ತಿಯವರು ಹಾಗೆ ಹೇಳಿದ್ದರಿಂದ ಮಾತ್ರ ನನಗೆ ಮಾತಿಗವಕಾಶ ಸಿಕ್ಕಿತು. ದೊರೆಯ ಬಳಿಯಂತೂ ಆಶೀರ್ವಚನ ಬಿಟ್ಟರೆ ಬೇರೆ ಅನವಶ್ಯಕ ಮಾತಾಡುವಂತಿಲ್ಲ. ಹುಶಾರಿದ್ದೀರ? – ಕೇಳಲಿಕ್ಕುಂಟೆ!
ವೀರೇಂದ್ರ ಚಕ್ರವರ್ತಿಯಾಗಿದ್ದರೂ ಇಬ್ಬರು ತಮ್ಮಂದಿರನ್ನೂ ತನ್ನ ಜೊತೆಯಲ್ಲಿಯೇ ಇರಿಸಿಕೊಂಡಿದ್ದರು. ದೇವಸ್ಥಾನಕ್ಕೆ ಒಟ್ಟಿಗೇ ಬರುತ್ತಿದ್ದರು ಹೋಗುತ್ತಿದ್ದರು. ಧೀರೇಂದ್ರರ ಮಗ ದೀಪೇಂದ್ರ ಮತ್ತು ಜ್ಞಾನೇಂದ್ರರ ಮಗ ಪಾರಸ್ ಇಬ್ಬರೂ ಅಜ್ಜ ದೊರೆ ಮಹೇಂದ್ರರ ಎದುರೇ ಒಂದೇ ತೊಟ್ಟಿಲಲ್ಲಿ ಬೆಳೆದವರು. ಅವರೇ ದೊಡ್ಡವರಾದಾಗ -ದೀಪೇಂದ್ರ, ರಾಜಕುಮಾರ, ಬಂದನೆಂದರೆ ‘ಶ್ರೀ ಪಾಂಚ್ ಸರಕಾರ್‌ಕೋ ಜಯ ಹೋ’ ಅನ್ನಬೇಕು. ಪಾರಸ್ ಬಂದರೆ ಶ್ರೀ ಇಲ್ಲ. ‘ಸರಕಾರ್‌ಕೋ ಜಯ ಹೋ’ ಅಷ್ಟೆ.. ಅವನಿಗೆ ಸಿಗುವ ಮರ್ಯಾದೆ, ಇವನಿಗೆ ಇಲ್ಲ. ಮಗು ಬೆಳೆಯುವಾಗಲೂ ಹಾಗೆಯೇ. ಈ ಭೇದ, ಮಕ್ಕಳಲ್ಲಿ ದ್ವೇಷ ಉಂಟುಮಾಡಲು ಇಷ್ಟು ಸಾಕಲ್ಲ? ಯಾವುದೇ ದೊರೆಯ ಹಿರಿಯಮಗನಿಗೆ ಅಧಿಕಾರ. ಉಳಿದ ಮಕ್ಕಳಿಗೆ ಬೇಕಷ್ಟು ಸಂಪತ್ತು ಹೊರತು ಪಟ್ಟ ಇಲ್ಲ.
ಒಮ್ಮೆ ದೀಪೇಂದ್ರ ಆಡುತ್ತ ಆಡುತ್ತ ಅಂಗರಕ್ಷಕನೊಡನೆ ವಿಮಾನನಿಲ್ದಾಣಕ್ಕೆ ಹೋಗುವ ಅಂದನಂತೆ. ಐದು ವರ್ಷದ ಮಗು ಅದು; ವಿಮಾನ ನಿಲ್ದಾಣಕ್ಕೆ ಹೋದರೆ ರಾಜಮನೆತನದ ಮಗು ಅಂತ ವಿಶೇಷ ಮರ್ಯಾದೆ ಸಿಗುತ್ತದೆ. ಅಲ್ಲಿ ಹೋದ ಕೂಡಲೇ, ವಿಮಾನ ಹತ್ತುವ ಎಂದನಂತೆ. ಸರ್ಕಾರ್ ಅಂತ ಅಂಗರಕ್ಷಕ ಮೆಲ್ಲನೆ ಬುದ್ಧಿ ಹೇಳಲು ಪ್ರಯತ್ನಿಸಿದ. ಮಗು ಕೇಳಲಿಲ್ಲ. ಸರಿ ನಿರ್ವಾಹವಿಲ್ಲದೆ ಆತ ವಿಮಾನದಲ್ಲಿ ಕೂಡಿಸಿದ. ಅವನದೇ ಜವಾಬ್ದಾರಿ. ಫೋನಿನಲ್ಲಿ ಕೇಳಿರಬಹುದು ಮಗು ಹೀಗನ್ನುತ್ತಾನೆ, ಏನು ಮಾಡಲಿ? ಅಂತ. ನಮಗೆ ಅದೆಲ್ಲ ಗೊತ್ತಾಗುವುದಿಲ್ಲ. ನಾನು ಅವತ್ತು ಮೂರು ಗಂಟೆಗೆ ಮನೆಗೆ ಹೋದಾಗ, ನಿತ್ಯದ ವಿಮಾನಗಳಲ್ಲದೆ ಈ ವಿಮಾನ ಕಠ್ಮಂಡು ಒಳಗೇ ಆಕಾಶದಲ್ಲಿ ಮೂರು ನಾಲ್ಕು ಸುತ್ತು ಹಾಕುತ್ತಿದೆ. ಇದೇನಪ್ಪಾ ಅಂತ ಎಲ್ಲರಿಗೂ ಗಾಬರಿ. ಮರುದಿನ ಗೂರ್ಖಾಪತ್ರ ಪತ್ರಿಕೆಯಲ್ಲಿ ಈ ವಿಚಾರ ಬಂತು. ಶ್ರೀ ಪಾಂಚ್ ಮಹಾರಾಜಾಧಿರಾಜ ಯುವರಾಜ ದೀಪೇಂದ್ರ ಸರ್ಕಾರರು ನಿನ್ನೆ ಹೀಗೆಹೀಗೆಲ್ಲ ಮಾಡಿದರು ಅಂತ. ಮರುದಿನ ಪಾರಸ್ ಹಠಮಾಡಿದನಂತೆ ತನಗೂ ವಿಮಾನದಲ್ಲಿ ಹಾರಬೇಕು ಅಂತ. ಯಾರೂ ಕೇಳಲಿಲ್ಲ! ದೀಪೇಂದ್ರ ರಾಜನ ಮಗ! ಪಾರಸ್, ರಾಜನ ತಮ್ಮನ ಮಗ! – ಈ ತಾರತಮ್ಯ ನಡೀತಾನೇ ಇರುತ್ತದೆ. ಸಿಟ್ಟು ಕೆರಳುತಿರುತ್ತದೆ. ಸಿಟ್ಟಿದ್ದರೂ ಸಹ ಒಟ್ಟಿಗೇ ಇರುತ್ತಾರೆ. ಕ್ರಮೇಣ ಈ ಸಿಟ್ಟೇ ಬೆಂಕಿಯಾಗುತ್ತದೆ. ಒಳಗೇ ಗೆಮೆಯುತ್ತಾ ಬೆಳೆಯುತ್ತಾ ಜ್ವಲಿಸುತ್ತಾ ಇರುತ್ತದೆ. ಕೋವಿ, ಪಿಸ್ತೂಲು, ಗುಂಡು ಎಲ್ಲವೂ ಉತ್ಪತ್ತಿಯಾಗೋದು ಈ ಬೆಂಕಿಯಿಂದ, ಈ ಕಾವಿನಿಂದಲೇ. ಇತಿಹಾಸ ಇಡೀ ಒಮ್ಮೆ ತಿರುಗಾಡಿ ಬಂದರೆ ಸಿಗುವುದು ಎಲ್ಲಕ್ಕಿಂತ ಹೆಚ್ಚು ಇಂತಹ ಉದಾಹರಣೆಗಳು.
ಒಳ್ಳೆಯ ಹುಡುಗನಾಗಿದ್ದ ದೀಪೇಂದ್ರ, ಆದರೆ, ಮೃತ್ಯು ಚಿಕ್ಕಂದಿನಿಂದಲೂ ಅವನ ಜೊತೆಗೇ ಇತ್ತು, ಕೊಂಡೊಯ್ದಿತು.
ರಾಜಮಹಾರಾಜರನ್ನು ಕಂಡ ಕಣ್ಣು ಇದು. ತೀರಿಕೊಂಡರಲ್ಲ ದೊರೆ ವೀರೇಂದ್ರ, ಅವರ ಉಪನಯನದಲ್ಲಿ ನಾನು ಅಲ್ಲಿಯೇ ಇದ್ದೆ. ಅವರ ಮದುವೆಯಾಗುವಾಗಲೂ ಅಲ್ಲಿಯೇ ಇದ್ದೆ. ಅವರ ಪತ್ನಿ ರಾಣೀ ಐಶ್ವರ್ಯ ಸಾಮಾನ್ಯ ಮನೆತನದವಳು. ಇಬ್ಬರೂ ಡಾರ್ಜಿಲಿಂಗ್ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಯಾಯಿತು. ತಾನು ಅವಳನ್ನು ಮದುವೆ ಆಗ್ತೇನೆ ಅಂದರು ವೀರೇಂದ್ರರು. ವೀರೇಂದ್ರರ ಅಜ್ಜ ಗ್ವಾಲಿಯರ್ ರಾಜಮನೆತನದ ಹುಡುಗಿಯನ್ನು ಮದುವೆಯಾದವರು. ಮುವಾ ಬಡೇ ಮಹಾರಾಣಿ ಅಂತ ಕರೆಸಿಕೊಂಡ ಅವರು ದೊರೆ ಮಹೇಂದ್ರರ ಅಮ್ಮ. ಈ ಹಿನ್ನೆಲೆಯ ದೊರೆ ಮಹೇಂದ್ರರು, ಮಗನಿಗೆ ಬುದ್ಧಿ ಹೇಳಿದರು ರಾಜಮನೆತನದ ಹುಡುಗಿಯನ್ನೇ ಮಾಡಿಕೊ ಅಂತ. ಆದರೆ ಆತ ಪ್ರೀತಿ ಮಾಡಿಯಾಗಿದೆ. ಹಿಂದೆ ಬರುವಂತಿಲ್ಲ. ಈಚೆ ದೊರೆಗಳಿಗೆ, ಮಗ ನಾಳೆ ಯುವರಾಜನಾಗುವವನು; ಅವನ ಮಾತನ್ನು ತಂದೆಯಾದ ತಾನೇ ಕೇಳದಿದ್ದರೆ ನಾಳೆ ಪ್ರಜೆಗಳು ಹೇಗೆ ಕೇಳಿಯಾರು? ಎಂಬ ತರ್ಕ ಬಂತು. ಹೆಚ್ಚು ಜಗ್ಗದೆ ಮದುವೆ ಮಾಡಿಬಿಟ್ಟರು. ವೀರೇಂದ್ರರನ್ನು ವಿವಾಹವಾದ ಮೇಲೆ ಅವರ ಪತ್ನಿ, ಐಶ್ವರ್ಯ ಎಂದು ನಾಮಾಂಕಿತಳಾದಳು.
ಆ ಇಡೀ ಕುಟುಂಬ ದುರಂತಕ್ಕೀಡಾದ ಸುದ್ದಿ ಓದಿ ನನಗಾದ ತಳಮಳ ಏನನ್ನಲಿ.
ಪಶುಪತಿ ಸರಣಿ ೧೨: ದ್ರವ್ಯಕ್ಕಾಗಿ ಪ್ರೇತವಾದವರ ಕಥೆ
ದೊರೆ ಮಹೇಂದ್ರರು ತೀರಿಕೊಂಡರು.- ತಪ್ಪು, ತೀರಿಕೊಂಡರು ಎನ್ನಬಾರದು, ಸ್ವರ್ಗಾರೋಹಣ ಮಾಡಿದರು, ರಾಜಕುಲದವರು ಸ್ವರ್ಗಾರೋಹಣ ಮಾಡಿದರೆ ಅವರನ್ನು ಬರೀ ಶ್ರೀಗಂಧದ ಸೌದೆಯಿಂದ ಸುಡಬೇಕು. ರಾಜಸಂಗ್ರಹದಲ್ಲಿ ಒಂದಿಷ್ಟು ಶ್ರೀಗಂಧದ ಸೌದೆ ಸಿದ್ಧ ಇರಲೇಬೇಕು. ಹತ್ತನೇ ದಿನ ಶಾಸ್ತ್ರಕ್ಕೆ ಪ್ರೇತಬ್ರಾಹ್ಮಣ ಬೇಕು. ಆತನೂ ದಕ್ಷಿಣಭಾರತದಲ್ಲಿ ಜನಿಸಿದವನೇ ಆಗಬೇಕು. ಹನ್ನೊಂದನೆಯ ದಿನ ಎಂದರೆ ಸಪಿಂಡೀಕರಣದ ದಿನ. ಎಂದರೆ ಸತ್ತವರ ಪಿಂಡ ಒಡೆದು ವಂಶಸ್ಥರ ಪಿಂಡದೊಂದಿಗೆ ಜೋಡಿಸಿ ಅವರನ್ನು ಕಳಿಸಿಕೊಡುವ ದಿನ. ಬೊಜ್ಜದ ದಿನ. ಅಂದು ತೀರಿಕೊಂಡವರ ಪ್ರೇತವನ್ನು ಒಬ್ಬ ಬ್ರಾಹ್ಮಣನ ಮೇಲೆ ಆವಾಹಿಸಿ ಅದನ್ನು ಕಣ್ಮರೆ ಲೋಕಕ್ಕೆ ಕಳಿಸಿಕೊಡುತ್ತಾರೆಂಬುದರ ಸಂಕೇತ. ಪ್ರೇತ ಬ್ರಾಹ್ಮಣರಾಗಲು ಎಲ್ಲರೂ ಸಿದ್ಧರಿರುವುದಿಲ್ಲ. ರಾಜಪ್ರೇತವನ್ನು ಆವಾಹಿಸಿಕೊಳ್ಳುವ ಬ್ರಾಹ್ಮಣನಿಗೆ ರಾಜಪೋಷಾಕುಗಳನ್ನು, ಜೊತೆಗೆ ರಾಜ ಬಳಸಿದ ಹಳೆಯ ಪೋಷಾಕುಗಳನ್ನೂ ನೀಡುತ್ತಾರೆ. ದೊರೆ ತೊಡುವ ಕಿರೀಟದ್ದೇ ನಮೂನೆಯ ನಕಲಿ ಕಿರೀಟವನ್ನು ತೊಡಿಸುತ್ತಾರೆ. ನಕಲೀ ಎಂದರೆ, ಅದು ಕೂಡ ಕೆಲ ಲಕ್ಷ ಬೆಲೆಬಾಳುವುದೇ. ರಾಜನ ಪಲ್ಲಂಗ, ಕಾರು, ರಾಜನಿಗೆ ಸಂಬಂಧಿಸಿದ ಈ ರೀತಿಯ ಲೌಕಿಕ ವಸ್ತುಗಳನ್ನು, ಏನೆಲ್ಲ ಕೊಡಬೇಕು ಅನಿಸುತ್ತದೋ ಎಲ್ಲವನ್ನೂ ಕೊಡುತ್ತಾರೆ. ಒಟ್ಟಾರೆ ಪ್ರೇತಬ್ರಾಹ್ಮಣನಿಗೆ ಅದರಿಂದ ತೃಪ್ತಿಯಾಗಬೇಕು. ಹನ್ನೊಂದನೇ ದಿನ ಅವನಿಗೆ ರಾಜಭೋಜನ. (ಬ್ರಾಹ್ಮಣನಾದ್ದರಿಂದ ಮಾಂಸದ ಅಡುಗೆ ಮಾತ್ರ ಇಲ್ಲ) ಮೃತ ಅರಸನಿಗೆ ಇಷ್ಟವಾದ್ದನ್ನೇ ಮಾಡಿ ಬಡಿಸುತ್ತಾರೆ. ಆನೆ, ಕುದುರೆ ಎಲ್ಲವನ್ನೂ ಕೊಟ್ಟು, ಉಡುಗೊರೆ ಊಟ ಎಲ್ಲವೂ ಮುಗಿದ ಮೇಲೆ ಇನ್ನೇನಾದರೂ ಬೇಕೆ ನಿಮಗೆ? ಎಂದು ಕೇಳುತ್ತಾರೆ. ಉಡುಗೊರೆಗಳನ್ನೆಲ್ಲ ಸರಿಯಾಗಿ ಬಳಸಿಕೊಂಡರೆ ಭವಿಷ್ಯದಲ್ಲಿ ಆತನ ಆರ್ಥಿಕ ಭದ್ರತೆಯ ಮಟ್ಟಿಗೆ ಸಂದೇಹವಿಲ್ಲ.
ನಾನು ಕಂಡ ಇಂತಹ ಒಬ್ಬ ಪ್ರೇತಬ್ರಾಹ್ಮಣನಿಗೆ ಸುಮಾರು ನಲ್ವತ್ತು ಲಕ್ಷದಷ್ಟು ದ್ರವ್ಯ ಸಿಕ್ಕಿತ್ತು. ಆದರೆ ಆತ ಒಂದು ವರ್ಷದೊಳಗೆ ಅದನ್ನು ಖಾಲಿಮಾಡಿ ಮತ್ತೆ ಮುಂಚಿನ ಬದುಕಿಗೇ ಹಿಂದಿರುಗಿದ್ದ. ನಾನು ನೋಡಿದ ಇನ್ನೂ ಒಂದು ಸಂಗತಿ ಹೇಳುತ್ತೇನೆ. ಅಲ್ಲಿಯೇ ಹುಟ್ಟಿ ಬೆಳೆದ ಅರ್ಚಕರ ಮಗನೊಬ್ಬ ಬರೀ ಉಂಡಾಡಿಯಾಗಿ ತಿರುಗಾಡಿಕೊಂಡಿದ್ದ. ಅವ, ದೊರೆ ಮಹೇಂದ್ರರ ಪ್ರೇತ ಬ್ರಾಹ್ಮಣನಾಗಲು ದೊರಕಿದ. ಶಾಸ್ತ್ರ, ಉಡುಗೊರೆ, ಊಟ, ದಾನ ಎಲ್ಲ ಮುಗಿಯುತ್ತಲೂ ತಂದೆಯ ಪ್ರೇತವನ್ನು, ದೊರೆ ವೀರೇಂದ್ರರ ಪರವಾಗಿ, ಜ್ಞಾನೇಂದ್ರ ಕೇಳಿದ. ‘ಇನ್ನೇನಾದರೂ ಬೇಕೆ?’ ಆಗ ಅವನು ಕೊಟ್ಟ ಉತ್ತರ ಗೊತ್ತೆ? ‘ಹೂಂ, ಚಿರೋಟ್ ಬೇಕು’- ಅಂದರೆ ಸಿಗರೇಟು ಬೇಕು! ಅಂತ! ಅದು ಮರುದಿನ ಅಲ್ಲಿನ ಪೇಪರಿನಲ್ಲೆಲ್ಲ ಬಂದಿತ್ತು. ಆತ ಬಂಗಲೆ, ಆಸ್ತಿ ಏನೂ ಕೇಳಬಹುದಿತ್ತು. ಎಲ್ಲ ಬಿಟ್ಟು ಸಿಗರೇಟು ಕೇಳಿದ ಅಂತ. ಒಂದು ರಾಶಿ ಸಿಗರೇಟನ್ನು ಕೊಟ್ಟರು ಅವನಿಗೆ. ಇರಲಿ.
ಹೀಗೆ ಎಲ್ಲ ಪಡೆದು ಆ ಪ್ರೇತಬ್ರಾಹ್ಮಣ ನೇಪಾಳದ ಗಡಿ ದಾಟಬೇಕು. ಎಲ್ಲ ಸಂಪತ್ತು ಕೊಟ್ಟು ವೇಷಭೂಷಣ ಕಿರೀಟ ತೊಡಿಸಿ, ಸಂಪತ್ತನ್ನೆಲ್ಲ ಹಲವು ಲಾರಿಗಳಲ್ಲಿ ತುಂಬಿಸಿ, ಮಿಲಿಟರಿ ಕಾವಲಿನಲ್ಲಿ ರಾಜಧಾನಿ ಕಠ್ಮಂಡುವಿನಲ್ಲಿ ಹರಿಯುವ ವಾಗ್ಮತೀ ನದಿಯ ದಕ್ಷಿಣಮುಖದ ನೇಪಾಲಗಡಿಯಾಚೆಗಿನ ಹಳ್ಳಿಗೆ ಬಿಟ್ಟುಬಿಡುತ್ತಾರೆ. (ಮುಂಚೆಲ್ಲ ಹಾಗೆ ಗಡಿದಾಟಿ ಹೋದ ಪ್ರೇತ ಮತ್ತೆ ಹಿಂತಿರುಗಿ ಬರಬಾರದು ಅಂತ ಇತ್ತು. ಈಗ ಸುಧಾರಣೆಯಾಗಿದೆ. ವರ್ಷಾಂತಿಕದ ಬಳಿಕ ಹಿಂದಿರುಗಿ ಬರಬಹುದು ಅಂತಾಗಿದೆ. ಅದುವರೆಗೆ ಮಾತ್ರ ಕಾಲಿಡಕೂಡದು. ವರ್ಷಾಂತಿಕದ ಬಳಿಕ ಬಂದ ಆ ಬ್ರಾಹ್ಮಣನಿಗೆ ಕಠ್ಮಂಡುವಿನಲ್ಲಿ ದೊರೆಗಳಿಗೆ ಸೇರಿದ ಒಂದು ಬಂಗಲೆಯನ್ನು ನೀಡುತ್ತಾರೆ.)
ಈ ವಾಗ್ಮತೀ ನದಿ ಒಣಗಿದರೆ ನೇಪಾಲದ ರಾಜ ಉಳಿಯುವುದಿಲ್ಲ ಎಂದು ಪ್ರತೀತಿ. ನದಿಯಾಚೆ ಬಿಡಲು ಆತನನ್ನು ಕರೆದೊಯ್ಯುವಾಗ ಆ ಪ್ರೇತಬ್ರಾಹ್ಮಣ ಮತ್ತೆ ನಗರ ಪ್ರವೇಶ ಮಾಡದಂತೆ ಜನ ಕಲ್ಲು ಹೊಡೆಯುತ್ತಾರೆ. ಕಲ್ಲು ಪ್ರೇತಬ್ರಾಹ್ಮಣನಿಗೆ ತಾಕದಂತೆ ಮಿಲಿಟರಿಯವರು ರಕ್ಷಣೆ ನೀಡುತ್ತಾರೆ ಕೂಡ. ಅಂತೂ ಆಚೆ ದಡ ಸೇರಿದೊಡನೆ ಮಿಲಿಟರಿಯವರು ಒಂದು ಡೇರೆ ನಿರ್ಮಿಸಿ, ಅದರಲ್ಲಿ ಸಂಪತ್ತನ್ನೆಲ್ಲ ರಾಶಿ ಹಾಕಿ ಕಾವಲು ನಿಲ್ಲುತ್ತಾರೆ. ಆ ಸೊತ್ತುಗಳನ್ನು ನಾವು ಅರ್ಚಕರು ಕೊಳ್ಳಲೇಬಾರದು. ದಾನ ಕೊಟ್ಟ ಸೊತ್ತಲ್ಲವೇ ಅದು?
ಅಲ್ಲಿಗೆ ನೇವಾರೀ (ನೇಪಾಲದ ಹೋರಿ ಭಕ್ಷಕ ಸಮುದಾಯ) ಮೂಲಮಂದಿ ಸಾಹುಕಾರರೆಲ್ಲ ಬಂದು ಬ್ರಾಹ್ಮಣನನ್ನು ಮಹಾರಾಜರ ಪ್ರೇತಸ್ವರೂಪನೆಂದು ಗೌರವದಿಂದ ಹುಜೂರ್ ಹುಜೂರ್ ಅಂತ ಕರೆಯುತ್ತ, ಅವನ ಸಂಪತ್ತನ್ನು ಅಗ್ಗಾಸುಗ್ಗಿಗೆ ಕೊಂಡುಕೊಳ್ಳುತ್ತಾರೆ. ಅವರಲ್ಲಿ ದೊಡ್ಡ ದೊಡ್ಡ ಚಿನ್ನದ ವ್ಯಾಪಾರಿಗಳಿಂದ ಹಿಡಿದು, ನಾನಾ ವಸ್ತುಗಳ ಆಯಾತ ನಿರ್ಯಾತಗಳ ವ್ಯಾಪಾರಿಗಳವರೆಗೂ ಇದ್ದಾರೆ. ಮಾರವಾಡಿಗಳಿಗೆ ಮೊದಮೊದಲಿಗೆ ನೇಪಾಲದಲ್ಲಿ ವ್ಯಾಪಾರ ಮಾಡಲು ಲೈಸೆನ್ಸ್ ಸಿಗುವುದಿಲ್ಲ. ಹಾಗಾಗಿ ಕೆಲ ಮಾರವಾಡಿಗಳು ಈ ನೇವಾರಿಗಳನ್ನು ಪಾಲುದಾರರನ್ನಾಗಿಸಿಕೊಂಡು ಲೈಸೆನ್ಸ್ ಪಡೆದು ವ್ಯಾಪಾರ ಸುರುಮಾಡುತ್ತಾರೆ. ಅವರಿಗೇ ಅನುಮತಿ ಸಿಗಲು ಕೆಲ ವರ್ಷ ಕಾಯಬೇಕು. ಅಂತೂ ಸಂಪತ್ತು ಪೂರ್ತಿ ಖರೀದಿಸಿ ಮುಗಿಯುವವರೆಗೂ ಮೇಲಿಂದ ಮೇಲೆ ಹುಜೂರ್ ಹುಜೂರ್. ಆಮೇಲೆ ಹುಜೂರ್ ಸಂಬೋಧನೆ ಮಾಯವಾಗುತ್ತದೆ. ಅಷ್ಟರಲ್ಲಿ ಆ ಬ್ರಾಹ್ಮಣನಿಗೂ ಅಷ್ಟೆಲ್ಲ ಸೊತ್ತು ಸಂಪತ್ತು ಮಾರಾಟವಾದರೆ ಸಾಕು ಅನಿಸಿರುತ್ತದೆ. ಮಾರಾಟ ಮಾಡಿದ ದುಡ್ಡಿನಲ್ಲೇ ಆತ ಮುಂದೆ ವೈಭವೋಪೇತ ಜೀವನ ನಡೆಸಬಹುದು. ಆದರೆ ನೇಪಾಲ ಗಡಿ ದಾಟಿ ಭಾರತಕ್ಕೆ ಬಂದು ದುಂದುವೆಚ್ಚ ಮಾಡಿ ಎಲ್ಲ ಕಳೆದುಕೊಂಡವರೇ ಹೆಚ್ಚು.
ವೀರೇಂದ್ರ ಮಹಾರಾಜರ ಇಡೀ ಪರಿವಾರಕ್ಕೇ ಈ ಶಾಸ್ತ್ರವನ್ನು ಕೇವಲ ಶಾಸ್ತ್ರಕ್ಕಾಗಿ ಮಾತ್ರ ಮಾಡಿ ಮುಗಿಸಿದರಂತೆ. ಅದು ವೈಭವದ ಸ್ವರ್ಗಾರೋಹಣ ಅಲ್ಲವಲ್ಲ. ದುರಂತ. ಅವರು ನಿಸ್ಸಂತಾನನಾದರು, ಹಾಗಾಗಿ.
ಪಶುಪತಿ ಸರಣಿ ೧೩: ದುಡ್ಡಿಗಾಗಿ ಇಷ್ಟೆಲ್ಲ ಚನ್ನೆಯಾಟ ಬೇಕೆ?
ಅರವತ್ತನಾಲ್ಕನೇ ಇಸವಿಗೆ ನೇಪಾಲಕ್ಕೆ ಹೋದವ ನಾನು. ಆಗ ನನಗೆ ಇಪ್ಪತ್ತನಾಲ್ಕು ವರ್ಷ. ಹೋಗಿ ಹದಿನಾರು ವರ್ಷದ ಮೇಲೆ, ನಲವತ್ತನೇ ವರ್ಷಕ್ಕೆ, ಅಲ್ಲಿಂದ ಹಿಂದೆ ಬಂದೆ. ಹೋದ ಎರಡೇ ವರ್ಷಕ್ಕೆ ಐದಾರು ಸಾವಿರ (ಆಗಿನ) ರುಪಾಯಿ ಗಳಿಸಿದ್ದೆ. ಇಷ್ಟು ದುಡ್ಡು ತೆಗೆದುಕೊಂಡು ಹೋದರೆ ಊರಲ್ಲಿ ಇದರಿಂದ ಎಷ್ಟೂ ದುಡಿಯಬಹುದು ಅಂತ ನನಗೆ ಅನಿಸಿತು. ಆಗ ಇಪ್ಪತ್ತೇಳು ವರ್ಷ ನನಗೆ. ಐದು ಸಾವಿರ, ಆಗ ಅದು ಸಾಕಷ್ಟು ದೊಡ್ಡ ಮೊತ್ತ, ದುಡಿದದ್ದೇ ಸಾಕೆನಿಸಿತು ಇನ್ನು ಇಲ್ಲಿ ಯಾಕೆ ನಾನಿರಬೇಕು?…ಊರಿನ ಹಂಬಲ, ಅಮ್ಮ ಅಪ್ಪಯ್ಯನನ್ನು ಬಿಟ್ಟು ಬಂದ ಬೇಸರ. ಅವರೊಡನೆ ಇರಬೇಕು ಸೇವೆ ಮಾಡಬೇಕು ಎಂಬ ಆಸೆ.
‘ಗುರುಗಳೇ ನೀವು ಅನುಮತಿ ಕೊಟ್ಟರೆ ನಾನು ಹೊರಡುತ್ತೇನೆ’ – ಎಂದೆ. ಹೆಚ್ಚು ಮಾತಾಡುವವರಲ್ಲ. ನನ್ನ ಗುರುಗಳು. ಸಿಟ್ಟಿಂದ ಕಣ್ಣು ಬಿಟ್ಟರು.
‘ಕುಳಿತುಕೋ, ಎಷ್ಟು ವರ್ಷ ಆಯ್ತು ಬಂದು?’
‘ಎರಡು ವರ್ಷ ಆಯ್ತು’
‘ಈಗ ಬಿಡುತ್ತೀಯ? ನಾನಿಲ್ಲಿ ಅರವತ್ತು ವರ್ಷ ಪೂಜೆ ಮಾಡಿದವನು. ಗೊತ್ತೆ? ನೀನು ಎರಡೇ ವರ್ಷಕ್ಕೆ ಬಿಡುತ್ತೀಯ? ಬಿಟ್ಟು ಹೋಗಲು ನಿನ್ನನ್ನಿಲ್ಲಿ ಕರೆಸಿದ್ದೆ? ನನ್ನಷ್ಟೇ ವರ್ಷ ಇಲ್ಲಿದ್ದು ಪೂಜೆ ಮಾಡಿ ಹೋಗಬೇಕು. ಕೊನೇ ಪಕ್ಷ ಒಂದು ಯುಗವಾದರೂ ಪೂಜೆ ಮಾಡಿಬಿಡಬೇಕು’ ಎಂದರು. ಎದುರು ಕೂಡಿಸಿದ್ದರು. ಅವರು ಕೂಡಿಸಿಕೊಂಡರೆ ಮಾತ್ರ ಕೂತುಕೋಬೇಕು. ಇಲ್ಲವಾದರೆ ಇಲ್ಲ.
‘ಯುಗ ಅಂದರೆ ಎಷ್ಟು?’ ಅಂತ ಕೇಳುವ ಆಸೆ. ಕೇಳಲಿಕ್ಕೆ ಹೆದರಿಕೆ.
‘ಯುಗ ಅಂದರೆ ಎಷ್ಟು?’ ಅವರೇ ಕೇಳಿದರು. ನನಗೆ ಗೊತ್ತಿದೆಯೆ?… ‘ಒಂದು ಯುಗ ಅಂದರೆ ಹನ್ನೆರಡು ವರ್ಷ. ಏನನ್ನೇ ಆಗಲಿ ಹನ್ನೆರಡು ವರ್ಷ ಸಾಧಿಸಿದರೆ ಸಿದ್ಧಿ ಆಗುತ್ತದೆ. ಅಂದರೆ ಹಿಡಿದ ಸಾಧನೆಯನ್ನು ಹನ್ನೆರಡು ವರ್ಷ ಬಿಡಲಿಲ್ಲವೆಂದರೆ ಮತ್ತೆ ನಾವು ಅದನ್ನು ಬಿಟ್ಟರೂ ಅದು ನಮ್ಮನ್ನು ಬಿಡುವುದಿಲ್ಲ’.
ಸುಮ್ಮನಾದೆ ನಾನು. ಮತ್ತೆ ಹತ್ತು ವರ್ಷ ಕಾಯುತ್ತಾ ಬಂದೆ. ಅಷ್ಟರಲ್ಲಿ ಮದುವೆಯಾಗಿ ಮಕ್ಕಳಾಗಿ ಸಂಸಾರ ಬೆಳೆಯಿತು. ಮತ್ತೆ ನಾಲ್ಕು ವರ್ಷ ಕೆಲಸ ಮಾಡಿದೆ.
ಹಾಗೆ ನೋಡಿದರೆ, ಇಲ್ಲಿಂದ ಪೂಜೆ ನಿಮಿತ್ತ ಅಲ್ಲಿಗೆ ಹೋದ ಒಬ್ಬ ಅರ್ಚಕರು ಬರೀ ಆರೇ ತಿಂಗಳಿಗೆ ವಾಪಾಸು ಬಂದ ಉದಾಹರಣೆಯೂ ಉಂಟು. ಕೇವಲ ಎರಡು ವರ್ಷಗಳ ಹಿಂದೆ ನಡೆದ ಪ್ರಸಂಗವಿದು. ಬೇರೆಕಡೆಯವರಲ್ಲ, ಉಡುಪಿ ಜಿಲ್ಲೆಯ ನಮ್ಮೂರಿನ ಭಟ್ಟರೇ, ಇಲ್ಲಿ ಪೌರೋಹಿತ್ಯ ಮಾಡಿಕೊಂಡು ಇದ್ದವರು, ವಿದ್ವಾಂಸರು. ಪೂಜೆಗೆಂದು ಆಯ್ಕೆಯಾಗಿ ಅಲ್ಲಿಗೆ ಹೋದರು. ಹೋದವರು ದೇವಸ್ಥಾನದಲ್ಲಿನ ಪರಿಸ್ಥಿತಿ ನೋಡಿ ಹಿಂದೆ ಬಂದು ಬಿಟ್ಟರು. ಕಾರಣ ಈ ದೊಂಬಿಗಿಂಬಿ ಭೀತಿಯಲ್ಲ. ಅವರ ಭಾವುಕ ಭಾವನೆ. ಅಲ್ಲಿನ ದುಡ್ಡಿನ ಪೈಪೋಟಿ ಕಂಡು ಅಸಹ್ಯ ಆಯಿತು ಅವರಿಗೆ. ಹಿಂದಿನ ಅರ್ಚಕರೆಲ್ಲ ಯೋಗ್ಯರೇ ಇದ್ದರು. ಆದರೆ ಇವರು ಹೋಗುವಾಗ ವಾತಾವರಣ ಬದಲಾಗಿದೆ. ‘ದೇವರ ಸಾನ್ನಿಧ್ಯದಲ್ಲಿ ಯಾಕೆ ಈ ಪಾಟಿ ದುಡ್ಡಿನ ಚನ್ನೆಯಾಟ ಆಡಬೇಕು?. ಪಶುಪತಿಯ ಸಾನ್ನಿಧ್ಯ ಅಂದರೆ ಅಷ್ಟು ದಿವ್ಯ. ಅಲ್ಲಿ ಅಪಾರ ದ್ರವ್ಯ ಸಿಗುತ್ತದೆ ಸರಿಯೆ. ಆದರೆ ಅರ್ಚಕರಾದ ನಮ್ಮ ಗಮನ ಪೂರ್ತಾ ಅದರ ಕಡೆಗೇ ಇದ್ದರೆ ಹೇಗೆ?’ ಎಂಬುದು ಅವರ ವಾದ. ತನ್ನಿಂದ ಇದು ಸಾಧ್ಯವಿಲ್ಲ ಅಂತನಿಸಿ ಹಿರಿಯ ಭಟ್ಟರ ಬಳಿ ತನ್ನ ದ್ವಂದ್ವ ತೋಡಿಕೊಂಡರು. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಪಶುಪತಿಯನ್ನು ಪೂಜಿಸುವುದೇ ದೊಡ್ಡ ಭಾಗ್ಯವಲ್ಲವೆ? ದುಡ್ಡಿಗಾಗಿ ತಾನು ಇಷ್ಟೆಲ್ಲ ಚನ್ನೆಯಾಟ ಆಡಬೇಕೆ? ಮರ್ಯಾದೆಯಿಂದ ಬದುಕುವಷ್ಟು ಸಿಕ್ಕರೆ ಸಾಲದೆ? ಅಂತೆಲ್ಲ. ಅದಕ್ಕೆ ಅವರು ಅಷ್ಟಕ್ಕೋಸ್ಕರ ನಾವು ಇಲ್ಲೀವರೆಗೆ ಯಾಕೆ ಬರಬೇಕು? ನಮ್ಮ ಗೋಕರ್ಣದ ಶಿವಲಿಂಗವೂ ಜ್ಯೋತಿರ್ಲಿಂಗವಲ್ಲವೆ? ಅಲ್ಲಿಯೆ ಪೂಜೆ ಮಾಡಿಕೊಂಡು ಇರಬಹುದಲ್ಲ? ಹಾಗೆ ಅಲ್ಲಿಯೂ ಸಂಪಾದನೆ ಆಗುತ್ತದೆ ಎಂದರಂತೆ. ಈ ಭಟ್ಟರೋ, ಹೋಗಿ ಆರೇ ತಿಂಗಳಾಗಿದೆಯಷ್ಟೆ. ಇನ್ನೂ ದುಡ್ಡಿನ ರುಚಿ ಹತ್ತಿಲ್ಲ, ಆಳೆತ್ತರದ ಆ ಭವ್ಯಲಿಂಗದಲ್ಲಿನ ಪಶುಪತಿಯೇ ಮುಖ್ಯನಾಗಿ ಕಾಣುತಿದ್ದಾನೆ, ಭಾವನೆಯೇ ಮೇಲುಗೈ ಪಡೆದಿದೆ. ಅಲ್ಲದೆ ಇನ್ನೂ ಒಂದಿದೆ. ಅದು, ಅಲ್ಲಿನ ನಿಯಮಾಳಿಗಳು. ನೇಮಕಗೊಂಡ ಐದು ಮಂದಿ ಅರ್ಚಕರ ಮನೆಗಳನ್ನು ಬಿಟ್ಟರೆ ಬೇರೆಲ್ಲಿಯೂ ನಾವು ಹೋಗುವಂತಿಲ್ಲ. ಜನಸಾಮಾನ್ಯರ ಮನೆಗೆ ಕಾಲಿಡುವಂತಿಲ್ಲ. ಇವರೋ ಊರಲ್ಲಿ ಪೌರೋಹಿತ್ಯಕ್ಕೆಂದು ಸ್ವತಂತ್ರವಾಗಿ ಓಡಾಡಿಕೊಂಡು ಇದ್ದವರು. ಅಲ್ಲಿ ಒಳ್ಳೆ ಕಟ್ಟಿ ಹಾಕಿದಂತಾಯಿತು. ಹಾಗಾಗಿ ಹೆಚ್ಚುಕಾಲ ಅಲ್ಲಿರಲು ಇಷ್ಟ ಪಡದೆ ಹಿಂದೆ ಬಂದು ಬಿಟ್ಟರು.
ಪಶುಪತಿ ಸರಣಿ ೧೪ :ನಾ ಧನಮತ್ತ ದುಂಬಿಯಲ್ಲ ಬಂದು ಬಿಟ್ಟೆ!
ನಾನು ನೇಪಾಲ ಬಿಟ್ಟು ಬಂದ ಒಂದು ಕಾರಣ ಹಳೆಯ ಅಪ್ಪಯ್ಯ ಅಮ್ಮನ ಸೇವೆ ಮಾಡಬೇಕೆಂಬ ಆಸೆ. ಅಪ್ಪಯ್ಯನಿಗಿಂತ ಅಮ್ಮನ ಮೇಲೆ ನನಗೆ ಪ್ರೀತಿ ಜಾಸ್ತಿ. ಅಮ್ಮನ ಸೇವೆ ಮಾಡಬೇಕು ಅಂತ ಬಹಳ ಇತ್ತು, ಇದು ಒಂದು ಕಾರಣ ಅಷ್ಟೆ..
ಎರಡನೆಯ ಕಾರಣ: ಆಗಲೇ ಅಲ್ಲಿ ಗುಸುಗುಸು ಮುನಿಸು ಗಲಾಟೆ ಶುರುವಾಗಿತ್ತು. ಅದೇನು ಮೊತ್ತ ಮೊದಲ ಪ್ರಸಂಗವಲ್ಲ. ಉದ್ದಕ್ಕೂ ಆಗಾಗ ಈ ಗೊಂದಲ ಕಾಣಿಸಿಕೊಳ್ಳುತ್ತಲೇ ಇತ್ತು. ಉದಾಹರಣೆಗೆ: ಹಿಂದೊಮ್ಮೆ ನೇಪಾಲವನ್ನು ಆಳುತ್ತಿದ್ದ ಒಬ್ಬ ಬೌದ್ಧದೊರೆ ಪಶುಪತಿಲಿಂಗವನ್ನೂ ಆ ದೇಗುಲದ ವ್ಯವಸ್ಥೆಯನ್ನೂ ಪುನಃ ಬುದ್ಧಮಯ ಮಾಡಬೇಕೆಂದು ಅಪೇಕ್ಷಿಸಿದನಂತೆ. ಆತ ದೇವಸ್ಥಾನಕ್ಕೆ ಬಂದಿದ್ದಾನೆ. ತಲೆಬಾಗಿ ನಿಂತಿದ್ದಾನೆ, ನೆಲದ ಹೊಳಪಲ್ಲಿ ನಿತ್ಯವೂ ಎದುರಿರುವ ಲಿಂಗದಛಾಯೆ ಕಾಣುತಿದ್ದರೆ ಅಂದು ಆತನಿಗೆ ಕಂಡದ್ದು ಬುದ್ಧ ಮೂರ್ತಿ! ಫಕ್ಕನೆ ತಲೆ ಎತ್ತಿ ನೋಡಿದರೆ ಆಶ್ಚರ್ಯ, ಅಲ್ಲಿರುವುದು ಪಶುಪತಿಲಿಂಗವೇ! ಅಚ್ಚರಿಗೊಂಡ ಆತನಿಗೆ ಪಶುಪತಿ ನನ್ನ ಮತ್ತು ಬುದ್ಧನ ನಡುವೆ ಭೇದ ಕಂಡಿತೆ ನಿನಗೆ? ನಾವಿಬ್ಬರೂ ಒಂದೇ. ನನ್ನನ್ನು ಕದಲಿಸಿದರೆ ನಿನಗೇನು ಪ್ರಯೋಜನ? ಅಂತ ಕೇಳಿದ ಹಾಗಾಯಿತಂತೆ. ಪಶುಪತಿಯನ್ನು ಕದಲಿಸುವ ತನ್ನ ಯೋಚನೆಯನ್ನು ರಾಜ ಅಲ್ಲಿಗೇ ಬಿಟ್ಟನಂತೆ. ಆ ಲಾಗಾಯ್ತಿನಿಂದ ಪ್ರತೀ ಬುದ್ಧ ಪೂರ್ಣಿಮೆಯಂದು ಪಶುಪತಿಗೆ ಬುದ್ಧನ ಅಲಂಕಾರ ಮಾಡುತ್ತಾರೆ. ಪಶುಪತಿ ದೇವಸ್ಥಾನದ ಅನತಿ ದೂರದಲ್ಲೇ ಒಂದು ಬೌದ್ಧ ವಿಹಾರವೂ ಇದೆ.
ಸತ್ಯಕ್ಕೂ ನೋಡಿದರೆ ನಾವು ಐದು ಜನ ಅರ್ಚಕರನ್ನು ಬಿಟ್ಟರೆ ದೇವಸ್ಥಾನದಲ್ಲಿ ರುದ್ರ ಹೇಳುವುದು ನೇಪಾಲಿ ಬ್ರಾಹ್ಮಣರೇ. ನಮಗೆ ಪೂಜೆಗೆ ನೀರು ತಂದು ಕೊಡುವುದೂ ನೇಪಾಲಿಗಳೇ. ಹಾಗಾಗಿ ಪೂಜೆಯನ್ನೂ ನಾವೇ ಯಾಕೆ ಮಾಡಬಾರದು? ಅಂತ ಅವರಿಗೆ ಆಗಲೇ ಅನಿಸಲು ತೊಡಗಿತ್ತು. ಸಹಜವೇ. ಇನ್ನೂ ಒಂದು, ನೇಪಾಲದಲ್ಲಿ ದೇವರ ಮುಂದೆ ಕಾಣಿಕೆಡಬ್ಬ ಇಟ್ಟಿರುವುದಿಲ್ಲ. ಭಕ್ತರು ದೇವರ ಮುಂದೆ ಹಾಕಿದ್ದೆಲ್ಲ ನಮಗೆ ಎಂದೆನಷ್ಟೆ? ನಮ್ಮ ನರಸಿಂಹ ಅಡಿಗರಿಗೆ ಸಂಬಳ ಏನೂ ಹೆಚ್ಚಿರಲಿಲ್ಲ. ಆದರೆ ಉಂಬಳಿ ಬಿಟ್ಟಿದ್ದರು. ಮನೆ ಕೊಟ್ಟಿದ್ದರು. ನಾವಿರುವಷ್ಟು ದಿನ ನಾವಿದ್ದ ಮನೆ ನಮಗೆ. ಯಾರಾದರೂ ಯಾತ್ರಿಕರು ಬಂದರೆ ಶಿವರಾತ್ರಿ ಸಮಯದಲ್ಲಿ ನಾವು ಸಾಧ್ಯವಾದಷ್ಟು ಮಲಗಲು ಬಿಡುತ್ತಿದ್ದೆವು. ಅಷ್ಟು ದೊಡ್ಡ ಮನೆ ನಮ್ಮದು. ಯಾತ್ರಿಕರಿಗೆ ಬಾಡಿಗೆಗೆ ಮನೆ ಕೊಡುತ್ತೇವಲ್ಲ? ಅದರಿಂದ ಊರಿನ ಜನರ ಕಣ್ಣಿಗೂ ಬಿದ್ದೆವು. ಆದರೆ ಅರ್ಚಕರದು ಕೇವಲ ಒಂದು ಪರಂಪರೆಯಲ್ಲ. ನಾವು ನಾವಾಗಿ ಬಂದವರಲ್ಲ. ಅದಕ್ಕೆ ಆಧಾರವಾಗಿ ವಿವರವಾದ ತಾಮ್ರಪತ್ರ ಇದೆ. ಪಶುಪತಿ ದೇವರ ಪೂಜೆಹಕ್ಕಿನ ಒಂದು ದೊಡ್ಡ ಬ್ರಹ್ಮಾಸ್ತ್ರ ಈ ತಾಮ್ರ ಪತ್ರ. ನಾವಲ್ಲಿ ಹೋಗುವುದು, ಪೂಜೆ ಮಾಡುವುದು, ನಮ್ಮ ಮಕ್ಕಳು ಅಲ್ಲಿ ಸೇರಿ ಹೋಗುವುದು ನಾವು ಅದರಂತೆ ನಡೆದುಕೊಳ್ಳುವ ಕ್ರಮ ಎಲ್ಲದಕ್ಕೂ ಆಧಾರ ಈ ತಾಮ್ರ ಪತ್ರವೇ.
ಆದರೆ ಸಣ್ಣಪುಟ್ಟ ದಂಗೆಗಳು ಏಳುತ್ತಲೇ ಇದ್ದವು. ಶ್ರೀಪಾಂಚ್ ಸರ್ಕಾರ್ ಮುರ್ದಾಬಾದ್ ಜನತಾಸರ್ಕಾರ್ ಜಿಂದಾಬಾದ್ ಅಂತ. ಸುಮಾರು ಎಂಭತ್ತನೇ ಇಸವಿಯಲ್ಲಿಯೇ. ಹತ್ತು ಸಾವಿರ ಮಂದಿ ಮಿಲಿಟರಿ ಪೊಲೀಸರು ಗಲಾಟೆಯನ್ನು ನಿಯಂತ್ರಣಕ್ಕೆ ತರಲು ಹೋರಾಡುತ್ತಿದ್ದರು. ಗಲಾಟೆ ಮಾಡಿದವರನ್ನು ರಾಜರು ಕಣ್ಮರೆ ಮಾಡುತ್ತಿದ್ದರು. ನಮ್ಮ ಮನೆಯ ಹತ್ತಿರವೇ ಒಂದು ಘಾಟ್ ಇತ್ತು. ಲಾಠಿಯ ಸಂದರ್ಭದಲ್ಲಿ ಆ ಘಾಟ್‌ನಲ್ಲಿ ಹಗಲು ರಾತ್ರಿ ಮಾರಣಹೋಮ; ಬಿಡುವಿಲ್ಲದಂತೆ. ಗಲಾಟೆ ಇಪ್ಪತ್ತೆಂಟು ವರ್ಷ ಸುಮ್ಮನಿತ್ತು, ಯಾಕೆಂದರೆ ಅದುವರೆಗೂ ಅಲ್ಲಿನ ಆಡಳಿತ ಇದ್ದದ್ದು ರಾಜರ ಕೈಯಲ್ಲಿ.
ರಾಜ ಪರಿವಾರದವರಿಗೆ, ರಾಜರಿಗೆ ಸಂಬಂಧಪಟ್ಟ ಎಲ್ಲರಿಗೂ, ಸಂಪೂರ್ಣ ಭದ್ರತೆ ಇತ್ತು, ಸರಿ. ಆದರೆ ನಮಗೆ ಮಾತ್ರ ಕಿಂಚಿತ್ತೂ ಭದ್ರತೆ ಇಲ್ಲ. ಒಂದು ವೇಳೆ ದಂಗೆಕೋರರು ನಮ್ಮ ಮನೆ ಒಳಗೆ ನುಗ್ಗಿ ಏನಾದರೂ ಮಾಡಿದರೆಂದರೆ ನಮ್ಮನ್ನು ಕೇಳುವವರಿಲ್ಲ.
ಹೊತ್ತು ಕಂತುವ ಮುಂಚೆಯೇ ಊರು ಸೇರಿಕೋ
ಆಗಲೂ ಮಾವೋವಾದಿಗಳೆಂದು ಇದ್ದರು. ಆದರೆ ರಾಜರ ಪ್ರಧಾನವೈರಿ ನೇಪಾಲ ಕಾಂಗ್ರೆಸ್ಸಿನ ಎಂ ಬಿ ಕೊಯಿರಾಲ. ಅವರನ್ನು ಗೃಹಬಂಧನದಲ್ಲೇ ಇಟ್ಟಿದ್ದರು. ವಿಶ್ವದ ಎಲ್ಲೆಡೆಯಿಂದ ಒತ್ತಡ ಬಂದು ಕೊನೆಗೆ ಅವರನ್ನು ಬಿಟ್ಟರು. ಆವಾಗ ನಾನು ಅಲ್ಲಿಯೇ ಇದ್ದೆ. ಹಾಗಂತ ನಾನವರನ್ನು ಕಣ್ಣಲ್ಲೂ ನೋಡಿದವನಲ್ಲ. ಗುರು ಸುಬ್ಬಣ್ಣ ಅಡಿಗರ ಶಿಷ್ಯರಾಗಿ ನಾನು ಮತ್ತು ರಾಮಚಂದ್ರ ಶಾಸ್ತ್ರಿ ಅಂತ ಇಬ್ಬರಿದ್ದೆವು. ನನ್ನ ಗುರುಗಳ ನಂತರ ಅವರ ಸಹಪಾಠಿಯ ಮಗ ಪ್ರಧಾನ ಅರ್ಚಕರಾಗಿದ್ದರಷ್ಟೆ. ಯಾಕೋ ನನ್ನನ್ನು ಕಂಡರೆ ಅವರಿಗೆ ಅಷ್ಟಕಷ್ಟೆ. ನನ್ನ ಬಳಿ ರಾಜರು ಚೆನ್ನಾಗಿ ಮಾತುಗೀತು ಆಡುತ್ತಾರೆ! ಕೇಳಿ ಉಳಿದ ಅರ್ಚಕರಿಗೂ ಪ್ರಧಾನ ಅರ್ಚಕರಿಗೂ ನನ್ನ ಮೇಲೆ ಒಂದು ಸಿಟ್ಟು. ವಿರೋಧಪಕ್ಷದಿಂದ ಇವನಿಗೆ ಏನೋ ಲಾಭವಿದೆ, ತರ್ಕಿಸಿ ಚಾಡಿಗೆ ಸುರುಮಾಡಿದರು. ನನ್ನ ಮೇಲೆ ವ್ಯರ್ಥ ಆರೋಪಗಳಾದವು. ವಿದ್ರೋಹಿಯೊಂದಿಗೆ ಸಂಬಂಧ ಕಲ್ಪಿಸಿದರು. ಹೌದೋ ಅಲ್ಲವೋ ಅಂತ ನೋಡಲು ಗುಪ್ತಚರ ವಿಭಾಗಕ್ಕೆ ಸೂಚನೆ ಹೋಯಿತು. ಗುಪ್ತಚರ ವಿಭಾಗ ನನ್ನನ್ನು ಒಂದು ವರ್ಷದವರೆಗೆ ಗುಟ್ಟಿನಲ್ಲಿ ಪರೀಕ್ಷೆ ಮಾಡಿತು. ಒಬ್ಬರು ಸಚಿವರು, ಕಪಿಲಪ್ರಸಾದ ಅಂತ, ದೇವಸ್ಥಾನಕ್ಕೆ ಬರುತ್ತಿದ್ದರು; ಬರುತಿದ್ದರೆ, ಅವರ ಜೊತೆಗೇ ಐದಾರು ಮಂದಿ. ದಿನಾ ಬರೋದು, ನಾನು ನನ್ನಷ್ಟಕ್ಕೆ ಪೂಜೆ ಮಾಡುತ್ತಿರುವಾಗ ದೇವರಿಗೆ ಕಾಣಿಕೆ ಸಮರ್ಪಣೆ ಮಾಡುವುದು, ಒಮ್ಮೊಮ್ಮೆ ಕಾಣಿಕೆ ಹಾಕದೆ ಹಾಗೆಯೇ ಬಂದು ಹೋಗುವುದು ಮಾಡುತ್ತಿದ್ದರು. ಕಾಣಿಕೆ ಸಮರ್ಪಣೆಯಲ್ಲಿ ನೋಟು ಬಿದ್ದರೆ ನನಗೊಂದು ವಿಶೇಷ ಭಾವ ತೋರುವುದು. ಎಷ್ಟೆಂದರೂ ನಾನು ದೇವರೊಡನೆ ಬೇಡುವ ಕೆಲಸ ಮಾಡುವವನು. ಆದರೆ ಅದು ಸ್ವಾರ್ಥರಹಿತವಾದ ಪಾರಮಾರ್ಥ ಅಲ್ಲವಲ್ಲ. ಅಲ್ಲಿ ಸ್ವಾರ್ಥ ಇದ್ದೇ ಇರುತ್ತದೆ. ನೋಟು ಹಾಕಿದವರನ್ನು ನೋಡಿ ಸ್ವಲ್ಪ ನಿಗಾ ಇಟ್ಟುಕೊಂಡು ಅವರು ಬಂದಾಗ ತೀರ್ಥಪ್ರಸಾದ ಕೊಡುವುದು ಇತ್ಯಾದಿ ಮಾಡುತ್ತಿದ್ದೆ. ಹಾಗೆ ವರ್ಷವಿಡೀ ಬಂದ ಕಪಿಲ ಪ್ರಸಾದರು, ನನ್ನೊಡನೆ ಅದೂ ಇದೂ ಮಾತಾಡುತ್ತ ಇದ್ದವರು, ಕೊನೆ ಕೊನೆಗೆ ಸಂಜೆ ನಾನು ಹೊರಟೊಡನೆ ನನ್ನ ಜೊತೆ ಮನೆಗೂ ಬರತೊಡಗಿದರು. ಜೊತೆಗೆ ವಿಷ್ಣುಪ್ರಸಾದ ಅಂತ ಒಬ್ಬ ಬರವಣಿಗೆಗಾರ. ಸಾಯಂಕಾಲ ನನ್ನ ಜೊತೆ ಬರುವುದು – ಹಾಲು ಕುಡಿಯುವುದು. ಬೇಕಾದಷ್ಟು ಮಾತಾಡೋದು, ಸಂಪರ್ಕ ಯಾರ್‍ಯಾರದ್ದಿದೆ ಅಂತ ಗೊತ್ತು ಮಾಡಿಕೊಳ್ಳಲು ಲೋಕಾಭಿರಾಮದ ಪ್ರಶ್ನೆಗಳನ್ನು ಕೇಳೋದು, ಕೊಯಿರಾಲನ ಸಂಪರ್ಕ ಇದೆಯೇ ಅಂತ ಪರೀಕ್ಷೆ ಮಾಡೋದು. ನಾನಿನ್ನೂ ಅವನನ್ನು ನೋಡಿದ್ದೇ ಇಲ್ಲ ಎಂದೆನಲ್ಲ. ಅವನಿಗೆ ಸಂಬಂಧಪಟ್ಟವರು ದೇವಸ್ಥಾನಕ್ಕೆ ಬಂದದ್ದಾಗಲೀ ನನಗೆ ಗೊತ್ತಿಲ್ಲ. ಒಂದು ಸಲ ರಾಜಗುರು ನನ್ನನ್ನು ಕರೆಸಿ ಪರೀಕ್ಷೆ ಮಾಡಿದರು. ಈ ಪೂಜೆಯಿಂದ ನಿಮಗೆ ಎಷ್ಟು ಬರತ್ತೆ ಏನು ಅಂತ. ತನಿಖೆ. ಪ್ರಧಾನ ಅರ್ಚಕರ ದೂರಿನ ಮೇರೆಗೆ ಏನು ತನಿಖೆ ಮಾಡಿದರೂ ಅವರಿಗೆ ಬೇಕಾದ ವಿಚಾರ ಅಲ್ಲಿಲ್ಲ. ಈತನಲ್ಲಿ ಏನೂ ಅಪರಾಧವಿಲ್ಲ ತಿಳಿಯಿತು.
ಆದರೆ ಇಂತಹ ಪರಿಸ್ಥಿತಿ ಒಂದು ಕಡೆ, ಊರಿನ ಸೆಳೆತ ಅಮ್ಮ ಅಪ್ಪನೊಡನೆ ಇರುವ ಆಸೆ ಇನ್ನೊಂದೆಡೆ. ಒಟ್ಟಾರೆ ನನಗೆ ಊರು ತಲುಪಿದರೆ ಸಾಕಪ್ಪ ಅಂತ ಆಗಿತ್ತು. ಊರಿಗೆ ಹೊರಡುವುದೆಂದು ಯೋಚಿಸಿದೆ. ‘ಯಾಕೆ?’ ಕೇಳಿದರು ರಾಜಗುರುಗಳು. ‘ವರಮಾನ ಸಾಕಾಗುವುದಿಲ್ಲ’ ಎಂದೆ. ನಾನು ಹಾಗೆ ಹೇಳಲಿಕ್ಕೂ ರಾಜಗುರುಗಳು ಒಂದಿಷ್ಟು ದುಡ್ಡು ಕೊಟ್ಟು ಭರ್ತಿಮಾಡಿದರು. ಮತ್ತೆ ಚಿಂತಿಸಿದೆ.
ವೈಭವ, ಮಾನ್ಯತೆ, ಸೌಕರ್ಯ, ಖರ್ಚಿಗೆ ಬೇಕಾದಷ್ಟು ದುಡ್ಡು, ನನ್ನ ಹೆಂಡತಿ ಗರ್ಭಿಣಿಯಾದಾಗ ಅಲ್ಲಿನ ಹೆಂಗಸರೆಲ್ಲ ಹಣ್ಣು ತಂದು ತಂದು ಕೊಟ್ಟಿದ್ದಾರೆ ಸ್ವಲ್ಪವಲ್ಲ. ಹೀಗೆಲ್ಲ ಇರುವಾಗ ಬಿಟ್ಟುಬರಲು ಸುಲಭದಲ್ಲಿ ಮನಸ್ಸಾಗುವುದಿಲ್ಲ. ಕೊನೆಗೂ ಯೋಚಿಸಿದಷ್ಟೂ ‘ಹಾ ಹಂತಹಂತ ನಳಿನೀಂ ಗಜ ಉಜ್ಜಹಾರ’ ಎಂಬ ಸಂಸ್ಕೃತ ಶ್ಲೋಕದಂತೆ, ಎಂಬಂತೆ ಆದೀತು ನನ್ನ ಕತೆ ಅಂತ ಕಂಡಿತು. ಗಟ್ಟಿ ನಿರ್ಧಾರದಿಂದ ಕೊನೆಗೊಮ್ಮೆ ಹೊರಟು ಬಂದುಬಿಟ್ಟೆ.
ಆ ಪೂರ್ತಿಶ್ಲೋಕದ ವಿಸ್ತಾರ ಅರ್ಥ ಗೊತ್ತಷ್ಟೆ?
ಸೂರ್ಯೋದಯವಾಯಿತು. ತಾವರೆ ತೆರೆಯಿತು. ದುಂಬಿಯೊಂದು ಹಾರಿ ಬಂದು ಆ ತಾವರೆಯಲ್ಲಿ ಕುಳಿತು ಜೇನು ಹೀರತೊಡಗಿತು. ತುಸುಸಮಯದಲ್ಲಿಯೇ ಅದರ ಹೊಟ್ಟೆ ತುಂಬಿತು. ಆದರೂ ಊಟ ಬಿಟ್ಟು ಹೊರಗೆ ಬರಲು ಇಷ್ಟವಿಲ್ಲ ಅದಕ್ಕೆ. ಇನ್ನೂ ಕುಡಿಯಿತು, ಇನ್ನೂ ಕುಡಿಯಿತು. ಕುಡಿಯುತ್ತ ಕುಡಿಯುತ್ತ ಹೊತ್ತು ಹೋಗುವುದೇ ತಿಳಿದಿಲ್ಲ. ಸಂಜೆಯಾಯಿತು. ಸೂರ್ಯ ಅಸ್ತಂಗತನಾದ. ಹೊತ್ತು ಕತ್ತಲೆ ಹೊದೆಯಿತು. ಆಗ ತಾವರೆ ಮುದುಡಿತು. ಮಧುಮತ್ತ ದುಂಬಿ ಅದರೊಳಗೆ ಬಂಧಿಯಾಯಿತು. ಆಗ ಅದು ಮತ್ತೆ ಬೆಳಗಾಗುತ್ತದೆ. ಮತ್ತೆ ತಾವರೆ ಅರಳುತ್ತದೆ. ನಾನು ಇಲ್ಲಿಂದ ಹಾರಿ ಮತ್ತೆ ಹೊರಗೆ ಹೋಗುತ್ತೇನೆ ಅಂತೆಲ್ಲ ತನ್ನನ್ನು ಸಂತೈಸಿಕೊಂಡು ಬೆಳಗಾಗುವುದನ್ನು ಕಾಯುತ್ತ ತಾವರೆಯೊಳಗೇ ಕುಳಿತಿತು. ಆದರೆ- (ಆ ಶ್ಲೋಕದ ಕೊನೆಯ ಸಾಲು) ಹಾ! ಹಂತ ಹಂತ! ಅಷ್ಟರಲ್ಲಿ ಆನೆಯೊಂದು ತಾವರೆಯನ್ನು ಕಿತ್ತು ಎಳೆದೊಯ್ದಿತೂ ಅಂತ! ಅದ್ಭುತ ಶ್ಲೋಕ ಅದು. ಬಹಳ ಪ್ರಸಿದ್ಧ. ಮತ್ತದುಂಬಿಯ ಜೀವನ ಹೀಗೆ ಮುಗಿಯಿತು. ನನ್ನ ಬದುಕೂ ಧನಮತ್ತತೆಯಿಂದ ಹಾಗಾಗ ಬಾರದು. ಇನ್ನೂ ಇಲ್ಲಿಯೇ ಇದ್ದರೆ ಮಕ್ಕಳೂ ಅಲ್ಲಿಗೇ ಸೇರಿಬಿಡುತ್ತಾರೆ. ದೊಡ್ಡವರಾದ ಮೇಲೆ ಅವರು ನಮ್ಮ ಜೊತೆ ಊರಿನಲ್ಲಿ ನೆಲೆಸಲು ಬರಲಾರರು. ಅಂತೆಲ್ಲ ಯೋಚಿಸಿ ಹೊರಟು ಬಂದದ್ದಾಯಿತು. ಗುರುತಿನವರೆಲ್ಲ ಬಿಟ್ಟು ಬರುವಾಗ ಕಣ್ಣೀರು ಹಾಕಿದರು. ಆದರೆ ನನ್ನ ಹೆಂಡತಿಯನ್ನು ನೋಡಿದರೆ ಮೌನ. ನಾನು ಅವಳಿಗೆ ಗುಮ್ಮಣ್ಣ ಎನ್ನುವುದು. ಎಂದಿನಿಂದಲೂ ಅಷ್ಟೆ. ನಾನು ಏನೇ ಮಾಡಲಿ, ಅವಳು ತನಗನಿಸುವುದನ್ನು ಹೇಳುವುದಿಲ್ಲ, ಬಾಯಿಬಿಟ್ಟು ತಿಳಿಸುವುದಿಲ್ಲ; ಸುಮ್ಮನಿರುವುದು. ನೇಪಾಲ ಬಿಟ್ಟು ಬರಲು ಮನಸಿರಲಿಲ್ಲ ಅವಳಿಗೆ, ಆದರೆ ಬೇಡ ಅಂತ ತಡೆಯಲೂ ಇಲ್ಲ. ಹಾಗೆ ತಡೆಯುವುದು ಅವಳ ಜಾಯಮಾನವೂ ಅಲ್ಲ.
ಬಂದಮೇಲೆ ಸ್ವರ್ಗದ ಭೋಗ ಮುಗಿದ ಮೇಲೆ ಜೀವಾತ್ಮ ಭೂಮಿಗೆ ಬೀಳುತ್ತದೆ ಅಂತ ಇದೆಯಲ್ಲ ಹಾಗಾಗಿತ್ತು ನನ್ನ ಪರಿಸ್ಥಿತಿ. ಊರಿಗೆ ಬಂದದ್ದು ನೇಪಾಲದಲ್ಲಿ ದುಡಿದದ್ದನ್ನು ಖರ್ಚು ಮಾಡಲಿಕ್ಕೆ ವಿನಾ ಇಲ್ಲಿ ಒಂದೇ ಒಂದು ಪೈಸೆ ಸಂಪಾದನೆ ಸಾಧ್ಯವಿಲ್ಲ ಎಂಬಂತಾಯಿತು. ಗಳಿಸಿದ್ದರಲ್ಲಿ ಸುಮಾರು ಕಳಕೊಂಡು ಕೈ ಖಾಲಿ ಮಾಡಿಕೊಂಡು ಕುಳಿತಾಗ ಮಾತ್ರ ನನ್ನ ಹೆಂಡತಿ ಅಂಥಾ ಸ್ವರ್ಗ ಬಿಟ್ಟು ಬಂದೆವಲ್ಲ ಅಂತನ್ನುತಿದ್ದಳು.
ಆದರೆ ದೇವರಿದ್ದಾನೆ, ಕೈ ಬಿಡುವುದಿಲ್ಲ. ಈಗ ನಿವೃತ್ತ ಜೀವನ ನಡೆಸುತ್ತಿದ್ದೇನೆ. ನನಗೆ ನನ್ನ ಗುರುಗಳ ಉಪದೇಶ ಇದೆ. ನನ್ನಂಥವರಿಗೆ ಸೋಲು ಎಲ್ಲಿಂದ ಎಂಬ ಅಚಲ ವಿಶ್ವಾಸವಿದೆ. ಅದು ಕಾಯುತ್ತದೆ.
ಕನ್ನಡದ ಅನನ್ಯ ಕಥೆಗಾರ್ತಿ, ಕವಯಿತ್ರಿ. ಹುಟ್ಟಿದ್ದು ಕುಂದಾಪುರ. ಇರುವುದು ಮಣಿಪಾಲ.