ಅಪ್ಪನ ನಡವಳಿಕೆ ನಿಗೂಢವಾಗಿತ್ತು. ಎಲ್ಲೂ ಹೋಗ ಕೂಡದು ಎಂದು ಅವ ಕಟ್ಟಪ್ಪಣೆ ವಿಧಿಸಿದ್ದ. ದುಷ್ಟನ ಸಹವಾಸ ಬೇಡ ಎಂದು ಅಪ್ಪ ನಿರ್ಧರಿಸಿರಬಹುದೇ ಎಂದು ಯೋಚಿಸಿದೆ. ಅನುಮಾನವಾಯಿತು. ಅಪ್ಪ ನನ್ನನ್ನು ಕತ್ತಲೆ ಮನೆಯೊಳಗೆ ಕೂಡಿ ಹಾಕಿದ್ದ. ಪಾತಕಿಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದ್ದ. ಹೆಚ್ಚು ಹೇಳಲು ಅವನ ಬಗ್ಗೆ ನನ್ನ ಬಳಿ ಏನೂ ಇರದಿದ್ದರೂ ಅಪ್ಪ ಕೇಳುತ್ತಿದ್ದ ದಾಟಿಗೆ ಹೆದರಿ ಏನೇನೊ ಹೇಳಿದ್ದೆ. ತಾತನ ಹೋಟೆಲಲ್ಲಿ ಜನ ಗಿಜಿಗುಟ್ಟುತ್ತಿದ್ದ ಸದ್ದು ಕೇಳಿಸುತ್ತಿತ್ತು. ತಾತನಿಗೆ ಮೊದಲು ಈ ಸುದ್ದಿ ತಿಳಿಸಬೇಕಿತ್ತು ಎಂದುಕೊಂಡೆ. ಕೈ ಮೀರಿತ್ತು.
ಕತೆಗಾರ ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಐದನೆಯ ಕಂತು
ಪಾತಕಿ ಎಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂದು ಹೇಳಿದೆ. ಅಳುಕಾಯಿತು. ಅಪ್ಪನ ಕಣ್ಣಲ್ಲಿ ಏನೋ ಗೆಲುವಿತ್ತು. ಕಣ್ಣುಗಳ ಕೆಕ್ಕರಿಸಿಕೊಂಡು ಮನಸ್ಸನ್ನು ಯಾವುದಕ್ಕೊ ನಿರ್ಣಾಯಕವಾಗಿ ಗುರಿ ಇಟ್ಟಿದ್ದ. ಅಂತಹ ಹೊತ್ತಲ್ಲಿ ಅಪ್ಪನನ್ನು ಮಾತನಾಡಿಸುವುದಿರಲೀ; ಕತ್ತೆತ್ತಿ ನೋಡುವಂತೆಯೂ ಇರಲಿಲ್ಲ. ಹೇಳಬಾರದಿತ್ತೇನೊ. ಹೇಳಿಬಿಟ್ಟಿದ್ದೆ. ಅವನ ಬಳಿ ಹೇಳೋಣವೇ ಎನ್ನಲು ಗಂಟಲು ಒಣಗಿ ಹೋಗಿತ್ತು. ಎಂದೂ ಹಾಗೆ ನೋಡದಿದ್ದ ಅಪ್ಪ ಎರಡು ಮೂರು ಬಾರಿ ದಿಟ್ಟಿಸಿ ತಣ್ಣಗೆ ತುಟಿ ಅರಳಿಸಿ ನಗಾಡಿದ್ದ. ಏನು ಕಾದಿದೆಯೊ ಎಂದು ಕಂಪಿಸಿದೆ. ‘ನಿಮ್ಮಪ್ಪನನ್ನು ಕರೆದುಕೊಂಡು ಬರಲೇಬೇಕೂ… ನನ್ನ ತಲೆ ಮುಟ್ಟಿ ಪ್ರಮಾಣ ಮಾಡಿ ಹೇಳು’ ಎಂದು ನನ್ನ ಕೈಹಿಡಿದು ಕೇಳುವಾಗ ಅವನ ರಕ್ತವರ್ಣದ ಕಣ್ಣುಗಳು ಒದ್ದೆಯಾಗಿದ್ದವು. ಒಂದು ವೇಳೆ ಅಪ್ಪ ಬರದೇ ಹೋದರೆ ಏನು ಮಾಡಲೀ… ಕೈ ಇಟ್ಟು ಆಣೆ ಮಾಡಿರುವೆನಲ್ಲಾ… ಮಾತಿಗೆ ತಪ್ಪಿದೆಯಾ ಎಂದು ಬಂದು ಬಡಿದು ಬಿಟ್ಟರೆ ನನ್ನ ಗತಿ ಏನೂ ಎಂದು ನಿದ್ದೆಯಿಲ್ಲದೆ ಹೊರಳಾಡಿದೆ.
ಅಪ್ಪನ ನಡವಳಿಕೆ ನಿಗೂಢವಾಗಿತ್ತು. ಎಲ್ಲೂ ಹೋಗ ಕೂಡದು ಎಂದು ಅವ ಕಟ್ಟಪ್ಪಣೆ ವಿಧಿಸಿದ್ದ. ದುಷ್ಟನ ಸಹವಾಸ ಬೇಡ ಎಂದು ಅಪ್ಪ ನಿರ್ಧರಿಸಿರಬಹುದೇ ಎಂದು ಯೋಚಿಸಿದೆ. ಅನುಮಾನವಾಯಿತು. ಅಪ್ಪ ನನ್ನನ್ನು ಕತ್ತಲೆ ಮನೆಯೊಳಗೆ ಕೂಡಿ ಹಾಕಿದ್ದ. ಪಾತಕಿಯ ಬಗ್ಗೆ ಹತ್ತಾರು ಪ್ರಶ್ನೆ ಕೇಳಿದ್ದ. ಹೆಚ್ಚು ಹೇಳಲು ಅವನ ಬಗ್ಗೆ ನನ್ನ ಬಳಿ ಏನೂ ಇರದಿದ್ದರೂ ಅಪ್ಪ ಕೇಳುತ್ತಿದ್ದ ದಾಟಿಗೆ ಹೆದರಿ ಏನೇನೊ ಹೇಳಿದ್ದೆ. ತಾತನ ಹೋಟೆಲಲ್ಲಿ ಜನ ಗಿಜಿಗುಟ್ಟುತ್ತಿದ್ದ ಸದ್ದು ಕೇಳಿಸುತ್ತಿತ್ತು. ತಾತನಿಗೆ ಮೊದಲು ಈ ಸುದ್ದಿ ತಿಳಿಸಬೇಕಿತ್ತು ಎಂದುಕೊಂಡೆ. ಕೈ ಮೀರಿತ್ತು. ಅವನು ಅದೇ ತೊರೆಯ ಮರೆಯ ಮೆಳೆಯಲ್ಲಿರುತ್ತಾನೊ ಇಲ್ಲವೊ ಎಂದು ಪಾತಕಿಯ ನೆನೆದೆ. ಆತ ಬಲವಂತವಾಗಿ ಜೇಬಿಗೆ ತುರುಕಿದ್ದ ನೋಟುಗಳ ತೆಗೆದು ನೋಡಲು ಭಯವಾಯಿತು. ಅವನು ಎಲ್ಲಿಯಾದರೂ ಸಿಗಲಿ ಎಂದು ಎಲ್ಲರೂ ಕಾಯುತ್ತಿದ್ದರು. ಹೋಟೆಲಲ್ಲೇ ನೆಲಮಾಳಿಗೆ ಇದ್ದಿದ್ದು. ಕಿಂಡಿಯ ಬಳಿ ಕಿವಿ ಇಟ್ಟು ಆಲಿಸಲು ಯತ್ನಿಸಿದೆ. ಅಪ್ಪನ ಸದ್ದೇ ಇರಲಿಲ್ಲ. ಜನ ಆ ಪಾತಕಿಯ ವಿಷಯವನ್ನೇ ಮಾತನಾಡುತ್ತಿದ್ದರು. ಎಲ್ಲ ಅಸ್ಪಷ್ಟ; ಗೋಜಲು ಗುಸುಗುಸು ಮಾತು. ಅಪ್ಪ ನಗುವುದೇ ಬಹಳ ಅಪರೂಪ. ಅಂತವನು ಅವರಿವರ ಮಾತಿಗೆಲ್ಲ ಜೋರಾಗಿ ನಗುತ್ತಿದ್ದ. ಕಿವಿ ಮೇಲೆ ಬಂದಪ್ಪಳಿಸುತ್ತಿತ್ತು.
ರಾತ್ರಿಯಾಗಿತ್ತು, ಹೊರಗೆ ಬಿಟ್ಟರೆ ಸಾಕೆನಿಸಿತ್ತು. ಇದೇ ನೆಲಮಾಳಿಗೆಯಲ್ಲೇ ತಾನೆ ಅಪ್ಪ ಆ ಪಾತಕಿಯನ್ನು ಬಚ್ಚಿಡುತ್ತಿದ್ದುದೂ… ನನ್ನನ್ನೂ ಈಗ ಇಲ್ಲೇ ಯಾಕೆ ಮರೆ ಮಾಡಿದ್ದಾನೆಂದು ಬೆಳಗಾಗುವುದನ್ನೆ ಕಾಯುತ್ತಿದ್ದೆ. ಯಾರನ್ನಾದರೂ ಸಹಾಯಕ್ಕೆ ಕರೆಯುವಂತಿರಲಿಲ್ಲ. ಕೋಳಿ ಕೂಗಿದ್ದವು. ಮುಂಗೋಳಿಗೇ ಎದ್ದು ಹೋಟೆಲ ಚಾಕರಿಗೆ ತಾತ ಮುಂದಾಗಿದ್ದ. ಅಪ್ಪ ಎಲ್ಲೋ ಹೋಗಿದ್ದ. ಮಧ್ಯಾಹ್ನ ಬಂದಿದ್ದ. ಮರೆಯ ಕಿಂಡಿ ಸರಿಸಿ ಹೊರಗೆ ಬಾ ಎಂದಿದ್ದ. ಎಲ್ಲಿಯಾದರೂ ದೂರ ಕಣ್ಮರೆಯಾಗಿ ಬಿಡಲು ಪೊತರುಗುಟ್ಟಿದೆ. ಅಪ್ಪನ ಹುಳಿ ಎಂಡದ ವಾಸನೆ ಎಚ್ಚರಿಸಿತು. ನಿತ್ರಾಣನಾಗಿದ್ದೆ. ಏನೊ ತಿಂದೆ. ಗಟಗಟ ನೀರು ಕುಡಿದೆ. ಅಪ್ಪ ತಲೆ ಸವರಿದ! ನಡುಗುತ್ತ; ‘ಅಣ್ಣಾ; ವಡೀ ಬ್ಯಾಡಾ… ನಿನ್ನೆಕ್ಕಡ ಎತ್ಕಂಡು ನಿಂತಾವೆ ಬಿದ್ದಿರ್ತೀನಿ’ ಎಂದು ದೀನನಾದೆ. ನಗಾಡಿದ. ಅಪ್ಪ ನಗುತ್ತಾನೆ ಎಂದರೇ ಏನೊ ಕೇಡು ಎಂಬ ಸೂಚನೆ.
‘ನಾನು ನಿನ್ನ ಮುಗಿಸ್ವಾ ಅಂತಿದ್ದೇ… ನೀನೇ ನನ್ನಾ ಉಳಿಸ್ಬುಟ್ಟಲ್ಲಾ… ಯದುರ್ಕ ಬ್ಯಾಡಾ… ವೋಗೂ’ ಎಂದು ಅಪ್ಪ ನನ್ನನ್ನು ಪಂಜರದಿಂದ ಬಿಟ್ಟಂತೆ ಹಿತ್ತಲಕಡೆ ಕಳಿಸಿಬಿಟ್ಟ. ನಂಬಲಾಗಲಿಲ್ಲ. ಪಾತಕಿಯ ವಿಷಯ ಅಷ್ಟಕ್ಕೇ ಮುಗಿಯಿತು ಎಂದುಕೊಂಡೆ. ಹಿತ್ತಿಲ ಮರ ಏರಿ ಕುಳಿತೆ. ಪಾತಕಿಯೂ ಇದೇ ಮರ ಹತ್ತಿ ಕದ್ದು ಕೂರುತ್ತಿದ್ದನಲ್ಲಾ… ಇಳಿದು ಬಿಟ್ಟೆ ಅಪರೂಪಕ್ಕೆ ಆತ ಬಂದಾಗ ಒಮ್ಮೊಮ್ಮೆ ಹಿತ್ತಿಲ ಸೌದೆಗುಡಿಸಲಲ್ಲಿ ಉಂಡು, ದಟ್ಟವಾಗಿದ್ದ ಮರ ಏರಿ ಕೊಂಬೆಗಳ ನಡುವೆ ಕಾಲು ಬಿಟ್ಟು ಮಲಗಿಬಿಡುತ್ತಿದ್ದ. ಅವನನ್ನು ಹಿಡಿಯುವುದು ಸಾಧ್ಯವೇ ಇಲ್ಲ ಎನಿಸಿತ್ತು. ಅಪ್ಪನ ಮೇಲೆ ಜನರಿಗೆ ಗುಮಾನಿ ಇದ್ದೇ ಇತ್ತು. ಎಷ್ಟೇ ಆಗಲಿ ಪಾತಕಿಯ ಆಪ್ತನಾಗಿದ್ದವನಲ್ಲವೇ. ಅವನ ಜಾಡು ನಿನಗೇ ಗೊತ್ತಿರುತ್ತದೆ ಎಂದು ಹಲವರು ವಿಚಾರಿಸಿದ್ದರು. ಗೊತ್ತಿಲ್ಲ. ಅವನಿಗೂ ನನಗೂ ಈಗ ಸಂಬಂಧ ಇಲ್ಲ ಎಂದಿದ್ದ ಅಪ್ಪ. ‘ಮಠದಲ್ಲಿ ದೊಡ್ಡವರೆಲ್ಲ ಸೇರಿದ್ದರಂತೇ… ನಿನ್ನನ್ನು ಕರೆಯಲಿಲ್ಲವೇ… ಮಂಗಾಡಳ್ಳಿಯಲ್ಲೊಂದೇ ಮಾತಂತೇ… ಬಿಡೊಲ್ರು ಅವುನ್ನಾ’ ಎಂದಿದ್ದ ಅತಾರಿ. ಅತಾರಿ ಊರ ಗುಟ್ಟನ್ನೆಲ್ಲ ರಟ್ಟುಮಾಡುವುದರಲ್ಲಿ ನಿಸ್ಸೀಮನಿದ್ದ. ಅಪ್ಪನ ಮೇಲೆ ಏನೊ ಅನುಮಾನದ ಗಾಳಿ ಬೀಸಿದ್ದ. ಅಪ್ಪ ನಿಗೂಢವಾಗಿದ್ದ. ಅತಾರಿ ಮಾರ್ಮಿಕ ನಗೆಯಲ್ಲಿ ಹೊರಟು ಹೋಗಿದ್ದ.
ಅಪ್ಪನಿಗೆ ವಿಷಯ ಮುಟ್ಟಿಸಿದ್ದಾಯಿತಲ್ಲಾ… ನಾನು ಎಲ್ಲಿಯಾದರೂ ಹೊರಡುವುದೇ ಲೇಸೆನಿಸಿತ್ತು. ಅಕಸ್ಮಾತ್ ಪಾತಕಿ ನಮ್ಮ ಹೊಟೆಲಿಗೇ ಬಂದು ಬಿಟ್ಟರೇ… ಮಾತಿಗೆ ಮೀರಿದೆಯೇನೊ ಎಂದು ಅವನು ಹಿಡಿದುಕೊಂಡರೆ ಏನು ಮಾಡಲಿ ಎಂದು ಚಿಂತಿತನಾದೆ. ಅವನು ಕೊಟ್ಟಿದ್ದ ಮುವ್ವತ್ತು ರೂಪಾಯಿನ ಮೂರು ನೋಟುಗಳು ಜೇಬಲ್ಲೇ ಇದ್ದವು. ಬಿಸಾಕಲು ಮನಸ್ಸಿಲ್ಲ. ಮುರಿಸಲು ಧೈರ್ಯವಿಲ್ಲಾ. ಆತನ ಆ ಹಣ ನನ್ನ ತೊಡೆಯನ್ನು ಕೊರೆಯುತ್ತಲೇ ಇತ್ತು ತಡೆದುಕೊಂಡಿದ್ದೆ.
ಆ ನಡುವೆ ನನ್ನ ತಾಯಿಯ ತಾಯಿ ಊರಿಂದ ದೂರದ ಸಂಬಂಧಿ ಒಬ್ಬರು ಬಂದಿದ್ದರು. ನಾನು ಹಿತ್ತಲಲ್ಲಿದ್ದೆ. ಆ ಹೆಂಗಸು ಬುತ್ತಿಯೊಂದ ಕೈಗಿತ್ತಳು. ನನ್ನ ಅಜ್ಜಿ ರಾಗಿ ರೊಟ್ಟಿ ಕಡ್ಲೆಕಾಯಿ ಚಟ್ನಿ ಮಾಡಿ ಬೆಣ್ಣೆ ಹಾಕಿ ಆಕೆಯ ಮೂಲಕ ಕೊಟ್ಟು ಕಳುಹಿಸಿದ್ದಳು. ಸಿಹಿಯಾದ ಚಿಕ್ಕಿನುಂಡೆಗಳೂ ಇದ್ದವು. ಕತ್ತು ಮುರಿದು ಮುಗಿಸಲು ಆ ಸಂತೆಯ ಮರೆ ದಾರಿಯಲ್ಲಿ ಯತ್ನಿಸಿದ್ದ ಅಜ್ಜಿಗೆ ಈಗ ಮತ್ತೆ ನನ್ನ ಮೇಲೆ ಯಾಕೆ ಪ್ರೀತಿ ಎನಿಸಿತ್ತು. ಅಜ್ಜಿಯ ಬಗ್ಗೆ ವಿಚಾರಿಸಲಿಲ್ಲ. ಬಂದಿದ್ದವಳೂ ಏನೂ ಹೇಳಲಿಲ್ಲ. ಯಾವುದೊ ಗಡಿಬಿಡಿಯಲ್ಲಿದ್ದಳು. ಹಾಗೆ ನಮ್ಮ ಮನೆಗೆ ಅಜ್ಜಿ ಮನೆಯಿಂದ ‘ಹಳ್ಳಿಗಮಾರ್’ ತಿಂಡಿ ತಿನಿಸುಗಳ ತಂದು ಕೊಡುವುದು ಅಪ್ಪನಿಗೆ ಇಷ್ಟ ಇರಲಿಲ್ಲ. ತಿನ್ನುವ ಮನಸ್ಸಾಗಲಿಲ್ಲ. ನನ್ನ ತಾತನ ತಮ್ಮನ ಹೆಂಡತಿ ಕಾಳಮ್ಮನಿಗೆ ಕೊಟ್ಟುಬಿಟ್ಟೆ. ಅಪ್ಪನ ಸದ್ದು ಹೋಟೆಲಲ್ಲಿ ಗಹಗಹಿಸುತ್ತಿತ್ತು. ಗಿರಾಕಿಗಳು ತುಂಬಿದ್ದರು. ಎಂಡದವರು ಅಮಲಲ್ಲಿ ಬಾಡಿನ ಗಮಲು ಸಾರಿನ ರುಚಿಯಲ್ಲಿ ದೋಸೆ ತಿನ್ನುತ್ತಿದ್ದರು. ಆ ಎಂಡ ಕಟ್ಟುವವರದೇ ಒಂದು ಲೋಕ.
ಬೆಳಿಗ್ಗೆಯಿಂದ ಉಂಡವರ ಎಂಜಲೆತ್ತಿ ತೊಳೆದು ಸಾಕಾಗಿತ್ತು. ನಾನಿನ್ನೂ ಸುಧಾರಿಸಿರಲಿಲ್ಲ. ಬೆನ್ನು ಸೊಂಟ ಕಾಲು ನೋಯುತ್ತಲೇ ಇದ್ದವು. ಒಂದು ಗಳಿಗೆ ಕೂರಲೂ ಅವಕಾಶ ಇರಲಿಲ್ಲ. ಕಂಬಕ್ಕೆ ಒರಗಿ ಸುಧಾರಿಸಿಕೊಳ್ಳುತ್ತಿದ್ದೆ.
ಎಲ್ಲಿಯಾದರೂ ದೂರ ಕಣ್ಮರೆಯಾಗಿ ಬಿಡಲು ಪೊತರುಗುಟ್ಟಿದೆ. ಅಪ್ಪನ ಹುಳಿ ಎಂಡದ ವಾಸನೆ ಎಚ್ಚರಿಸಿತು. ನಿತ್ರಾಣನಾಗಿದ್ದೆ. ಏನೊ ತಿಂದೆ. ಗಟಗಟ ನೀರು ಕುಡಿದೆ. ಅಪ್ಪ ತಲೆ ಸವರಿದ! ನಡುಗುತ್ತ; ‘ಅಣ್ಣಾ; ವಡೀ ಬ್ಯಾಡಾ… ನಿನ್ನೆಕ್ಕಡ ಎತ್ಕಂಡು ನಿಂತಾವೆ ಬಿದ್ದಿರ್ತೀನಿ’ ಎಂದು ದೀನನಾದೆ. ನಗಾಡಿದ. ಅಪ್ಪ ನಗುತ್ತಾನೆ ಎಂದರೇ ಏನೊ ಕೇಡು ಎಂಬ ಸೂಚನೆ.
ಹನ್ನೆರಡು ಗಂಟೆಯ ಸಮಯ. ಏನೋ ನಿಶ್ಯಬ್ದ. ಅಮಲು ಇಳಿಯುತ್ತಿತ್ತೋ, ತೂಕಡಿಕೆ ಏರುತ್ತಿತ್ತೊ, ಅವರವರ ಪಾಡು ಕೊರಗುತಿತ್ತೋ… ಹಿತ್ತಲ ನನ್ನ ಹೊಂಗೆ ಮರದಲ್ಲಿ ಕೋಗಿಲೆಗಳು ಜೋರಾಗಿ ಕೂಗಾಡುತ್ತಿದ್ದವು. ಕೊಣಮಾವಿನ ಮರವನ್ನೆ ಮುಚ್ಚಿಕೊಂಡು ಹಬ್ಬಿದ್ದ ಮಲ್ಲಿಗೆ ಬಳ್ಳಿ ಅಲಂಕಾರದಿ ಹೂ ಬಿಟ್ಟಿತ್ತು. ರಾಶಿಯಂತೆ ಹೂ ಉದುರಿದ್ದವು. ಮುಡಿಯುವರೇ ಇರಲಿಲ್ಲ. ಮನೆಯ ಹೆಂಗಸರಿಗೆ ಅಂತಹ ಸುಖವೇ ಇರಲಿಲ್ಲ. ಅತಾರಿ ಆರ್ಭಟಿಸುವಂತೆ ಬಂದ. ಅವನ ಸದ್ದಿನ ಜೊತೆಯೇ ಯಾರ್ಯಾರೋ ಸಂದುಗೊಂದಲಿಂದ ನುಗ್ಗಾಡಿಕೊಂಡು ಕೂಗಾಡಿದರು. ಹಿಂಡು ಜನರೇ ಇದ್ದರು. ನಾನು ಹಿತ್ತಲಲ್ಲಿದ್ದೆ. ಆ ಮಂಗಾಡಳ್ಳಿ ಹುಚ್ಚ ನೆಗೆದು ಹಾರಿ ಬಂದು ಕಣ್ಮರೆಯಾದ. ನಾನವನ ಕಣ್ಣಿಗೆ ಬಿದ್ದಿದ್ದೆ, ಅಟ್ಟಿಸಿಕೊಂಡು ಬಂದಿದ್ದವರು ಹಿತ್ತಲ ಪೊದೆಗಳ ಹುಡುಕಾಡಿದರು ನಿರರ್ಥಕ ಸಾಕ್ಷಿಯಂತೆ ನಿಂತಿದ್ದೆ. ಅಪ್ಪ ‘ಬಂದೇ ಬಂದೇ’ ಎನ್ನುತ್ತಿದ್ದ. ಹಾಗೆ ಆತ ಯಾರಿಗೆ ಹೇಳುತ್ತಿದ್ದನೊ ತಿಳಿಯಲಿಲ್ಲ. ಜನ ದೌಡಾಯಿಸಿತು. ಕ್ಷಣ ಮಾತ್ರದಲ್ಲಿ ಸುದ್ದಿ ಹಬ್ಬಿತು. ಮಂಗಾಡಳ್ಳಿ ಹುಚ್ಚನನ್ನು ಕಡಿಯಲು ಆಯುಧಗಳ ಹಿಡಿದವರು ಓಡಿಕೊಂಡು ಹೋದರೆಂದು ತಿಳಿದ ಕೂಡಲೆ ಅನೇಕರು ಹಿಂಬಾಲಿಸಿದರು. ನನಗೆ ತಿಳಿಯದೆಯೇ ನನ್ನ ಕಾಲುಗಳು ಕುಂಟುತ್ತಲೇ ನುಗ್ಗಿದವು. ಅದೆಲ್ಲ ತೋಟಮಾಳದ ಕಾಲು ದಾರಿ. ಬೇಲಿಗಳ ಪಾತಕಿ ಜಿಗಿಯುತ್ತಿದ್ದ. ಬಿದ್ದು ಎದ್ದು ನೆಗೆಯುತ್ತಿದ್ದ. ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದ.
ನಾನು ಹಿಂದೆ ಬಿದ್ದಿದ್ದೆ. ‘ಹಿಡೀರೀ ಹಿಡೀರಿ ಬಿಡಬ್ಯಾಡಿ’ ಎಂದಬ್ಬರಿಸುತ್ತಿದ್ದವರ ಸದ್ದು ಕೇಳಿಸುತ್ತಲೇ ಇತ್ತು. ಅವನು ಬಹಳ ದೂರ ದಣಿದು ಪಾರಾಗಲು ಮುಂದಾಗಿದ್ದ. ಹಲಗೂರಿನ ರಸ್ತೆ. ಕೋಡಂಬಳ್ಳಿಯ ಹತ್ತಿರದ ಮುಳ್ಳಿಕೆರೆ. ಆ ಕೆರೆಯ ತುಂಬಾ ಪುಟ್ಟ ಗೊಬ್ಬಳಿ ಕಾಡು ಅದರಲ್ಲಿ ಬಚ್ಚಿಟ್ಟುಕೊಂಡರೆ ಬಚಾವಾಗುವೆ ಎಂಬುದು ಅವನ ಸಂಕಲ್ಪವಾಗಿತ್ತೇನೊ. ಎತ್ತರದ ಏರಿ. ಅದನ್ನು ಹತ್ತುವಾಗ ಜಾರಿ ಬಿದ್ದು ಬಿಟ್ಟಿದ್ದ. ಅವನ ತ್ರಾಣ ಮುಗಿದಿತ್ತು. ಬೆಂಬತ್ತಿದವರು ಹಿಡಿದಿದ್ದರು. ಕಾಲು ಕಡಿದಿದ್ದರು. ಕೆರೆ ಬಯಲಿಗೆ ಎಳೆದೊಯ್ದು ಬಿಸಾಡಿದ್ದರು. ಜನವೊ ಜನ ಅದೊಂದು ವಿಕಾರ ಸುಖ. ಕೆರೆ ಏರಿ ಮೇಲೆ ನೆರೆದಿದ್ದರು. ಪಾತಕಿ ಆರ್ತವಾಗಿ ಬೇಡುತ್ತಿದ್ದ. ನಿದನಿಧಾನವಾಗಿ ಕೊಲ್ಲುತ್ತಿದ್ದರು. ಅವನ ಪಾಲಿಗೆ ಅಲ್ಲಿದ್ದವರು ಅವನ ಪ್ರಾಣ ತೆಗೆದವರು ಮಾತ್ರ. ಹೆತ್ತ ತಾಯನ್ನು ಆದ್ರವಾಗಿ ಕೊನೆಯದಾಗಿ ಕೂಗಿಕೊಳ್ಳುತ್ತಿದ್ದ. ಯಾವ ದೇವರೂ ಕಾಪಾಡಲಾರರು ಎಂದೆನಿಸಿತ್ತೇನೊ. ಅವನಿಗೆ ಸಂಸಾರವೇ ಇರಲಿಲ್ಲ. ಆತನ ತಾಯಿ ಎಂದೊ ಸತ್ತು ಹೋಗಿದ್ದಳು. ತುಂಡು ತುಂಡು ಮಾಡಿದ್ದರು. ಯಾರ ಕ್ರೌರ್ಯ ಯಾವ ಯಾವ ಪ್ರಮಾಣದ್ದೋ… ದೇವರೇ ಹೇಳಬೇಕು. ಅವನ ತಲೆಗೆ ಅವನ ತೊಡೆಯನ್ನು ತಲೆದಿಂಬಿನಂತೆ ಇಟ್ಟು ಮುಗಿಸಿಬಿಟ್ಟಿದ್ದರು.
ಹೊತ್ತು ಮುಳುಗಿತ್ತು. ಮುಳ್ಳಿಕೆರೆ ಏರಿ ಬಳಿ ಬರುವಷ್ಟರಲ್ಲಿ ಎಲ್ಲ ಮುಗಿದಿತ್ತು. ಅದಕ್ಕೆಲ್ಲ ವಿಜೃಂಭಣೆಯಲ್ಲಿ ವರ್ಣಿಸುತ್ತಿದ್ದರು ಮನುಷ್ಯರ ಈ ಯಾವ ಕೃತ್ಯಗಳಿಗೂ ನಮಗೂ ಸಂಬಂಧ ಇಲ್ಲ ಎಂಬಂತೆ ಬೆಳ್ಳಕ್ಕಿಗಳು ಕೆರೆ ದಂಡೆಯಲ್ಲಿ ಹಾರಾಡುತ್ತ ಗೊಬ್ಬಳಿ ಮರಗಳ ಮೇಲೆ ವಿರಮಿಸಲು ಮುಂದಾಗಿದ್ದವು. ಹಾಗೆ ಅವನನ್ನು ಹಿಡಿಯಲು ಜನ ಓಡುವಾಗ ‘ಬಂದೆ ಬಂದೇ’ ಎಂದು ಅಪ್ಪ ಕೂಗಿದ್ದು ಯಾಕೊ ವಿಚಿತ್ರವಾಗಿ ಕಿವಿಗೆ ಅಪ್ಪಳಿಸಿತ್ತು. ಅಪ್ಪನ ಸುಳಿವೇ ಅಲ್ಲೆಲ್ಲು ಇರಲಿಲ್ಲ. ಕೊಂದವರು ಎರಡು ಬಂಡಿಗಳಲ್ಲಿ ಸೌದೆ ತಂದು ಹೇರಿ ಹೆಣವ ಸುಟ್ಟುಬಿಟ್ಟಿದ್ದರು. ಆ ಕಾಲವೇ ಒಂದು ಥರ. ಪಾಪಿಗಳ ಸಾವಿಗೆ ಯಾರೂ ಕರಗುತ್ತಿರಲಿಲ್ಲ. ಸಂಭ್ರಮಿಸುತ್ತಿದ್ದರು. ಯಾರ ಕಂಪ್ಲೇಂಟೂ ಇರಲಿಲ್ಲ. ಜನರ ತೀರ್ಮಾನವೇ ಅಂತಿಮವಾಗಿತ್ತು. ಅಪ್ಪ ಗುಪ್ತವಾಗಿ ಜನರಿಂದ ಬೇಷ್ ಎನಿಸಿಕೊಂಡಿದ್ದ. ಆ ಪಾತಕಿಯ ಸಹವಾಸ ಬಿಟ್ಟಿದ್ದರಿಂದ ಬಚಾವಾದ; ಇಲ್ಲದಿದ್ದರೆ ಅವನು ಹೆಣವಾಗಿ ಬಿಡುತ್ತಿದ್ದ ಎಂದು ಮಾತನಾಡಿದ್ದರು. ಅಪ್ಪನೇ ಆ ಪಾತಕಿ ಇಂತಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂದು ಸುಳಿವು ನೀಡಿ ಸಂಚಿಗೆ ಸಹಕರಿಸಿ ಅಮಾಯಕನಂತಿದ್ದ. ಛೇ ಎನಿಸಿತ್ತು ಮನಸ್ಸು. ನಿಧಾನವಾಗಿ ಮನೆಯತ್ತ ನಡೆದೆ. ಊರ ತುಂಬಾ ಅದೇ ಸುದ್ದಿ. ಕಂಡವರಿಗಿಂತಲೂ ಮಿಗಿಲಾಗಿ; ಕಾಣದಿದ್ದವರೇ ನೇರವಾಗಿ ಆ ಹತ್ಯೆಯಲ್ಲಿ ಪಾಲುಗೊಂಡಿದ್ದವರಂತೆ ಪಡಸಾಲೆಗಳಲ್ಲಿ ಕೂತು ಹರಟುತ್ತಿದ್ದರು. ಅದರಲ್ಲಿ ಎಂತಹ ಸುಖವೊ! ಅಪ್ಪ ಅಮಲಿನ ಶಿಖರದಲ್ಲಿದ್ದು ವಾಲಾಡಿ ತೂರಾಡಿ ಮಲಗಿಬಿಟ್ಟಿದ್ದ.
ಮತ್ತದೇ ಊರು ಕೇರಿ ನರಕ. ಅದರಲ್ಲೇ ಏನೊ ಸುಖ. ಉಂಡದ್ದೆಲ್ಲ ವಿಷವೇ ಆದರೂ ಎಲ್ಲವನ್ನೂ ದಕ್ಕಿಸಿಕೊಳ್ಳುವ ಜನ. ಆ ಮುಂಜಾವಿಗೂ ಅದೇ ಮಾತು. ಸಡಗರ ತಗ್ಗಿತ್ತು. ನಿದ್ದೆಯಲ್ಲಿ ಅನುಕಂಪ ಹುಟ್ಟಿತ್ತೇನೊ. ‘ಪಾಪಿ ಮುಂಡೆ ಮಗ ತನ್ನ ಕೈಯಾರೆ ಪ್ರಾಣ ಕಳೆದುಕೊಂಡ… ಯಂಗೆ ಬಾಳಿ ಬದುಕಬಹುದಿತ್ತೊ… ಅವನ ವಿಧಿ ಅಂಗಿತ್ತು. ಅಲ್ಲಿಗೇ ಹೋದ’ ಎಂದು ವಿಷಾದ ಪಡುತ್ತಿದ್ದರು. ಅಪ್ಪನಿಗೆ ಆ ಯಾವ ಮಾತುಗಳು ಇಷ್ಟ ಇರಲಿಲ್ಲಾ. ಸಾಕು ಮಾಡಿ ನಿಮ್ಮ ಗೊಣಗಾಟ ಎಂದು ಬಾಯಿ ಮುಚ್ಚಿಸಿದ್ದ. ಯಾವ ಕ್ಷಣದಲ್ಲಿ ಅವನೊಳಗೆ ಏನಾಗುತ್ತಿರುತ್ತದೊ ಯಾರಿಗೂ ತಿಳಿಯುತ್ತಿರಲಿಲ್ಲಾ. ಅದಾಗಲೇ ಮೂರು ಬಾರಿ ರೇಗಿ ಎಚ್ಚರಿಸಿದ್ದ. ಇಲ್ಲಿರುವುದು ಲೇಸಲ್ಲ ಎನಿಸುತ್ತಿತ್ತು. ಅಪ್ಪನ ತಲೆಯಲ್ಲಿ ಪಾತಕಿಯ ಹತ್ಯೆಯ ಸೂತಕ ಹೆಪ್ಪುಗಟ್ಟಿತ್ತು. ಅದೇ ನಡುಕ ನನ್ನ ತಲೆ ಮೇಲೆ ಸುತ್ತುತ್ತಿತ್ತು.
ಸುತ್ತೇಳು ಹಳ್ಳಿಗಳಿಗೂ ವಿಷಯ ಗೊತ್ತಾಗಿದ್ದರೂ ಯಾರಿಗೂ ಪೋಲೀಸರ ಭಯವೇ ಇರಲಿಲ್ಲ. ಆದರೂ ಒಬ್ಬ ಪೇದೆ ಮಫ್ತಿಯಲ್ಲಿ ಹೋಟೆಲಿಗೆ ಬಂದಿದ್ದ. ಪಾತಕಿಯ ಜೊತೆ ಹಿಂದೊಮ್ಮೆ ಅಪ್ಪ ಪೋಲೀಸರ ಆತಿಥ್ಯ ಸವಿದಿದ್ದ. ಬೆವೆತಿದ್ದ ಅಪ್ಪ. ‘ಏನಪ್ಪಾ… ನಿನ್ನ ದೋಸ್ತಿ ಹೊರಟು ಹೋದ್ನಲ್ಲಾ… ಯಾರ್ಯಾರ ಸಾವು ಎಲ್ಲೆಲ್ಲಿ ಇರ್ತಾದೊ… ಕೊನೆಗಾಲದಲ್ಲಿ ಏನಾರ ನಿನಗೆ ಕಂಡಿದ್ನಾ’ ಎಂದು ಪೇದೆ ಕೇಳಿದ ಕೂಡಲೆ ಅಪ್ಪನಿಗೆ ಭೇದಿ ಆಗಿತ್ತು. ಪೇದೆ ಸುಮ್ಮನೆ ಹಾಗೆ ಬಂದು ವಿಚಾರಿಸಿದ್ದನೊ ಏನೊ ತಿಳಿಯಲಿಲ್ಲ. ಎಲ್ಲ ಮುಚ್ಚಿ ಹೋಗಿತ್ತು. ಮಠದಲ್ಲಿ ಶಾಂತಿ ಪರಿಷೆ ಆಚರಿಸಿದ್ದರು.
ನನ್ನೊಳಗೆ ಅರ್ಥವಾಗದ ಸಂಕಟ ಕುದಿಯುತ್ತಿತ್ತು. ಆ ಪಾಪಿ ಅಡಗಿದ್ದ ತಾವನ್ನು ಅಪ್ಪನಿಗೆ ಹೇಳಬಾರದಿತ್ತೆಂದು ಮರುಗುತ್ತಿದ್ದೆ. ಅಪ್ಪ ಹುಚ್ಚನಂತಾಡುತ್ತಿದ್ದ. ಅವನ ಕೋಪವೆಲ್ಲ ಬಂದು ನನ್ನ ಮೇಲೆಯೇ ಬೀಳುತ್ತಿತ್ತು. ಕಾಳಮ್ಮ ಎಚ್ಚರಿಸಿದಳು. ಎಂಡದವರ ಪೆಂಟೆಯಲ್ಲಿ ಅಪ್ಪ ಹೆಚ್ಚು ಕಾಲ ಕಳೆಯುತ್ತಿದ್ದ. ಪೆಂಟೆ ಎಂದರೆ ಅದೊಂದು ಎಂಡ ಇಳಿಸುವ ಕಸುಬಿನವರ ಕಾಲೋನಿ. ತಮಿಳು ಮೂಲದವರೇ ಅಲ್ಲಿದ್ದವರು. ಅಲ್ಲಿನ ಹೆಂಗಸರ ಜೊತೆ ಅಪ್ಪ ಬಹಳ ಸರಸದಿಂದಿದ್ದ. ತಾತನ ಹೋಟೆಲಿನ ಮಾಂಸದ ರುಚಿ ಅವರಿಗೂ ಮೋಡಿ ಮಾಡಿತ್ತು.
ಪಾತಕಿಯ ವಿಷಯ ಒಂದು ಸುಖಾಂತ ಎಂಬಂತೆ ಮರೆತು ಹೋಗಿತ್ತು. ಈಗ ಆ ಬಗ್ಗೆ ಜನ ಮಾತಾಡುತ್ತಿರಲಿಲ್ಲ. ಕನಸಿನಲ್ಲಿ ಆತ ಜೀವ ಬಿಡುತ್ತಾ ತನ್ನ ತಾಯನ್ನು ಕೂಗಿಕೊಳ್ಳುತ್ತಿದ್ದ ಧನಿ ಎಚ್ಚರಿಸಿ ಬಿಡುತ್ತಿತ್ತು. ಅವನು ಒಳ್ಳೆಯವನೊ ಕೆಟ್ಟವನೊ; ಆ ಎರಡೂ ನನಗೆ ಆಗ ಬೇಕಿರಲಿಲ್ಲ. ಅವನನ್ನು ಬರ್ಬರವಾಗಿ ಕೊಚ್ಚಿ ಹಾಕಿದ್ದು ಮಾತ್ರ ಯಾವತ್ತೂ ಕಾಡುತ್ತಿತ್ತು. ಯಾರಲ್ಲೂ ಆ ವಯಸಲ್ಲಿ ಅಂಥ ಸಂಗತಿಯನ್ನು ಹಂಚಿಕೊಳ್ಳುವ ಸ್ಥಿತಿಯೇ ಇರಲಿಲ್ಲ. ಅಲ್ಲೊಂದು ಬಾಚಾಳಿಯಪ್ಪನ ಅರಳಿ ಮರವಿತ್ತು. ನೂರಾರು ವರ್ಷಗಳ ಹಳೆಯ ಕಾಲದ್ದು. ಅಲ್ಲೇ ಪಕ್ಕದಲ್ಲಿ ತಾತನ ಸೀಬೆ ಹಣ್ಣಿನ ತೋಟವಿತ್ತು. ಆ ಕಾಲದ ‘ಗಂಜಾಂ’ ಪೇರಲ ಹಣ್ಣಿನ ಮರಗಳ ಬೆಳೆಸಿದ್ದರು. ನಮ್ಮ ತಾತ ಹೈದರಾಲಿ ಹಾಗು ಟಿಪ್ಪು ಅಭಿಮಾನಿ. ಅಂತೆಯೇ ನಾಲ್ವಡಿ ಕೃಷ್ಣರಾಜೇಂದ್ರರ ಭಕ್ತ. ಅಂತವನಿಗೆ ಅಂತಹ ನನ್ನ ಅಪ್ಪ ಮಗನಾಗಿದ್ದರೆ; ನಾನು ಅಂತಹ ಪಾಪಿ ತಂದೆಗೆ ಮಗನಾಗಿದ್ದೆ. ಯಾವ ಯಾವ ಮರದಲ್ಲಿ ಎಂತೆಂತಹ ಹೂ ಕಾಯಿ ಹಣ್ಣು ಬೇರುಗಳೊ. ಬಾಚಾಳಪ್ಪನ ಮರಕ್ಕೆ ಹತ್ತಾರು ಗಂಟೆಗಳ ಹರಕೆ ಕಟ್ಟಿದ್ದರು. ಎತ್ತೆತ್ತಲು ತೆಂಗಿನ ತೋಟಗಳು. ಕಟ್ಟೆಕಟ್ಟಿದ್ದರು. ಯಾವುದೊ ಕಾಲದ ಸಂತನಿರಬೇಕು ಆ ಬಾಚಾಳಪ್ಪ. ಅಲ್ಲಿದ್ದ ತರಾವರಿ ಗಂಟೆಗಳ ಲಯಬದ್ದವಾಗಿ ಬಡಿಯುವುದರಲ್ಲಿ ಏನೊ ಆನಂದವಾಗುತ್ತಿತ್ತು. ಕಾಲದ ಪರಿವೆ ಇಲ್ಲದೆ ಗಂಟೆಗಳ ನಾದದಲಿ ಮೈ ಮರೆಯುತಿದ್ದೆ. ಪೆಂಟೆಗೂ ಅಲ್ಲೇ ದಾರಿ ಹತ್ತಿರ. ಬೇಸರ ಎನಿಸಿದಾಗ ಸುಮ್ಮನೆ ಅತ್ತ ಹೋಗುತ್ತಿದ್ದೆ. ಸಾಕಷ್ಟು ಜನರಿಗೆ ಗೊತ್ತಿದ್ದೆ. ಅಪ್ಪನ ಪ್ರೇಯಸಿಯರಿಗೆ ನಾನೇ ಇಡ್ಲಿ ದೋಸೆ ಬಾಡಿನ ಉದಕ ಗೊಜ್ಜು ಕೊಂಡೊಯ್ದು ಕೊಟ್ಟು ಬರುತ್ತಿದ್ದೆ. ವಿಲಾಸಿ ಅಪ್ಪನಿಗೆ ನಾನೇ ಮಧ್ಯವರ್ತಿ ಆಗಿದ್ದೆ. ಆ ಹೆಂಗಸರು ನನ್ನನ್ನು ವಾತ್ಸಲ್ಯದಿಂದ ಎದೆಗಪ್ಪಿಕೊಂಡು ಕಳಿಸಿಕೊಡುತ್ತಿದ್ದರು.
‘ಸಿಕ್ಕನ್ನಾ… ಯಿವ್ನು ನಿನ್ನ ಮಗನಾ… ಯಾಕೆ ನಮ್ಮಂಗ ಕಪ್ಪ ಇರಾದೂ ನೀನು ನೋಡಿದ್ರೆ ಕೆಂಪ ಕೆಂಪಗೆ ಇದೀಯೇ… ಇವಾನು ಯಾಕೆ ಇಂಗೇ’ ಎಂದು ಆ ದಡೂತಿ ಎಂಡದ ಹೆಂಗಸರು ಅಪ್ಪನನ್ನು ಕೇಳುವಾಗ ಆತ ರೇಗುತ್ತಿದ್ದ. ಸಿಟ್ಟಿನಿಂದ ನನ್ನತ್ತ ನೋಡಿ ತೊಲಗು ಎಂದು ಗದರುತ್ತಿದ್ದ. ಹೆಣ್ಣುಗಳ ಮುಂದೆ ನಯವಾಗಿ ನಡೆದುಕೊಳ್ಳುತ್ತಿದ್ದ.
ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.