ಆರಂಭದಿಂದ ತಮ್ಮ ಬದುಕಿನ ಚಿತ್ರಣಗಳನ್ನು ಭಾವಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುವ ಬಿಳಿಮಲೆಯವರು ನಂತರದ ಕೆಲವು ಪುಟಗಳಲ್ಲಿ ಮೌಢ್ಯ ಮತ್ತು ಅಜ್ಞಾನದ ವಿರುದ್ಧ ತಮ್ಮ ಪ್ರತಿರೋಧದ ದನಿಯ ಪರಿಚಯ ಮಾಡಿರುವುದೂ ಸಹ ಇಂದಿನ ಅಧ್ಯಯನಶೀಲ ವಿದ್ಯಾರ್ಥಿ-ಅಧ್ಯಾಪಕ ವೃಂದಕ್ಕೆ ಮಾರ್ಗದರ್ಶಿಯಾಗಬೇಕು. ಬೌದ್ಧಿಕವಾಗಿ ಯಶಸ್ಸಿನ ಶಿಖರವೇರುತ್ತಲೇ ಹೋಗುವ ಬಿಳಿಮಲೆಯವರು ದೈಹಿಕವಾಗಿ ಎದುರಿಸಿದ ಅನಾರೋಗ್ಯದ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಹೋದಂತೆ ಬಿಟ್ಟಕಣ್ಣು ಬಿಟ್ಟಂತೆ, ಸೋಜಿಗ, ಅಚ್ಚರಿ ಮತ್ತು ಆತಂಕದಿಂದ ಓದುವಂತಾಗುತ್ತದೆ. ಹಾಗೆಯೇ ತೆರೆದ ಕಣ್ಣುಗಳು ತೇವವಾದರೂ ಅಚ್ಚರಿಯೇನಿಲ್ಲ.
ಪುರುಷೋತ್ತಮ ಬಿಳಿಮಲೆ ಬರೆದ ಆತ್ಮಕಥನ “ಕಾಗೆ ಮುಟ್ಟಿದ ನೀರು” ಕುರಿತು ನಾ ದಿವಾಕರ್ ಬರೆದ ಲೇಖನ
ವಾಟೆಕಜೆಯ ಕಾಮನಬಿಲ್ಲು ದೆಹಲಿಯಲಿ ಕಂಡಾಗ
ಕಾಮನಬಿಲ್ಲು ಎಲ್ಲ ಓರಿಗೆಯವವರನ್ನೂ ಸೆಳೆಯುವ ಒಂದು ವಿಸ್ಮಯಕಾರಿ ವಿದ್ಯಮಾನ. ಎಳೆಯ ವಯಸ್ಸಿನಲ್ಲಿದ್ದಾಗ, ಆಕಾಶದಲ್ಲಿ ಹಠಾತ್ತನೆ ಮೂಡುವ ಈ ರಂಗುರಂಗಿನ ಚಿತ್ತಾರ, ಆದರ ಬಿಲ್ಲಿನ ಆಕಾರ ಮತ್ತು ಗಗನದಲ್ಲಿ ಆ ತುದಿಯಿಂದ ಈ ತುದಿಯವರೆಗೂ ಹರಡಿದಂತೆ ಕಾಣುವ ಕಾಮನಬಿಲ್ಲನ್ನು ಪೂರ್ತಿಯಾಗಿ ನೋಡಲು ಮಹಡಿಯ ಮೇಲೆ ಹೋಗುತ್ತಿದ್ದುದುಂಟು. ಇದನ್ನು ಇಂದ್ರನ ಧನಸ್ಸು ಎಂಬ ನಂಬಿಕೆ ಅಂದಿಗೂ ಇತ್ತು ಇಂದಿಗೂ ಇದೆ. ಅದೇನೇ ಇರಲಿ, ಈ ವಿಸ್ಮಯ ಈಗ ನೆನಪಾದ ಕಾರಣ ಪುರುಷೋತ್ತಮ ಬಿಳಿಮಲೆಯವರ ಆತ್ಮಕಥನ “ಕಾಗೆ ಮುಟ್ಟಿದ ನೀರು” ಕೃತಿಯ ಎರಡನೆಯ ಓದು. ಮೊದಲ ಓದಿನ ನಂತರವೇ ಬರೆಯಬೇಕಿದ್ದ ಅಕ್ಷರಗಳು ಕಾರಣಾಂತರಗಳಿಂದ ನನ್ನೊಳಗಿನ ವಿಸ್ಮೃತಿಗೆ ಬಲಿಯಾಗಿದ್ದವು.
ಬಿಳಿಮಲೆಯವರ ಆತ್ಮದ ತುಣುಕುಗಳು ಚದುರಿ ಬಿದ್ದಿವೆ, ಆಯ್ದುಕೊಳ್ಳಲು ಸಾಧ್ಯವೇ ಎಂದು ಯೋಚಿಸಿ ಮುನ್ನಡೆದರೆ ನಮ್ಮ ಸೊಂಟ ಬಿದ್ದುಹೋಗಿರುತ್ತದೆ. ಕರ್ನಾಟಕದ ಮಲೆನಾಡಿನ ಮಡಿಲಲ್ಲಿರುವ ವಾಟೆಕಜೆ ಎಂಬ ಸಣ್ಣ ಗ್ರಾಮದ ಹುಡುಗ, ರೋಯ್ತಾ, ಪಶ್ಚಿಮ ಘಟ್ಟಗಳ ಗನನಚುಂಬಿ ವೃಕ್ಷಗಳಂತೆ ಬೆಳೆಯುತ್ತಲೇ ಹೋಗಿ, ಬೌದ್ಧಿಕವಾಗಿ ವಿಸ್ತರಣೆ ಹೊಂದುತ್ತಾ ವಿಶ್ವ ಪರ್ಯಟನೆಯ ಹೊಸ ಅನುಭವವನ್ನು ಓದುಗರ ಮುಂದಿಡುವ ಈ ಕೃತಿ ನಮ್ಮನ್ನು ಎಷ್ಟು ಆಳಕ್ಕೆ ಕರೆದೊಯ್ಯುತ್ತದೆ ಎಂದರೆ, ಮಲೆನಾಡಿನ ಏರಿಳಿತಗಳಲ್ಲಿ ನಡೆದುಹೋದಂತಹ ಅನುಭವವಾಗುತ್ತದೆ. ಬದುಕಿನ ಪಯಣದಲ್ಲಿ ಗುರಿ ಮುಟ್ಟುವುದು ಎಂದರೆ ಕೇವಲ ಸಾಧನೆ, ಪ್ರಶಸ್ತಿ ಫಲಕ, ಸನ್ಮಾನ, ಅಭಿನಂದನೆ ಮಾತ್ರವೇ ಅಲ್ಲ, ಅಲ್ಲಿ ಪರಿಶ್ರಮ, ಬದ್ಧತೆ, ಕಾರ್ಯಕ್ಷಮತೆ ಮತ್ತು ಧ್ಯೇಯಸಾಧನೆಯ ಛಲ ಇವೆಲ್ಲವೂ ಮುಖ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಪಯಣ ಬಿಳಿಮಲೆಯವರದು.
ಬದುಕು ಅನುಭವ ಮತ್ತು ಅನುಭಾವದ ಗುಚ್ಚ. ಹೂಗುಚ್ಚವೇ ಆಗಬೇಕಿಲ್ಲ. ಅಲ್ಲೊಂದು ಇಲ್ಲೊಂದು ಮುಳ್ಳು ಅಥವಾ ಹುಲ್ಲು ಕಡ್ಡಿಗಳೂ ಇರಲು ಸಾಧ್ಯ. ಈ ಅನುಭವಗಳು ನಮ್ಮ ಜೀವನವನ್ನು ರೂಪಿಸುತ್ತಾ ಹೋದಂತೆ ಪಯಣದ ಹಾದಿಯಲ್ಲಿ ನಾವೇ ಹೆಕ್ಕಿಕೊಳ್ಳುವ ಅಥವಾ ಸಿಲುಕಿಕೊಳ್ಳುವ ಸಾಂದರ್ಭಿಕ ತುಣುಕುಗಳು ನಮ್ಮ ಅನುಭಾವದ ನೆಲೆಯನ್ನು ವಿಸ್ತರಿಸುತ್ತಾ, ಬದುಕಿನ ಒಂದು ಸ್ಪಷ್ಟ ನೆಲೆಗೆ ತಂದು ನಿಲ್ಲಿಸಿಬಿಡುತ್ತವೆ. ಬಿಳಿಮಲೆಯವರ ಈ ಶೋಧ ಮತ್ತು ಪರಿಶೋಧದ ಪಯಣ ಅವರ ವಿಶಿಷ್ಟ ಬದುಕಿನ ಅನುಭಾವದಂತೆ ಕಾಣುತ್ತದೆ. ಬದುಕಿನುದ್ದಕ್ಕೂ ಸವಾಲುಗಳನ್ನು, ಸಂಘರ್ಷಗಳನ್ನು ಎದುರಿಸುತ್ತಲೇ ಗುರಿಯತ್ತ ಸಾಗುವಾಗ ಒಬ್ಬ ವ್ಯಕ್ತಿ ಏನೆಲ್ಲಾ ಸಂದರ್ಭಗಳನ್ನು ಎದುರುಗೊಳ್ಳಬಹುದು ಎನ್ನುವುದಕ್ಕೆ “ಕಾಗೆ ಮುಟ್ಟಿದ ನೀರು” ಪ್ರಾತ್ಯಕ್ಷಿಕೆಯಂತೆ ಕಾಣುತ್ತದೆ.
ಈ ಪ್ರಾತ್ಯಕ್ಷಿಕೆಯನ್ನು ಕೃತಿಕಾರ ಬಿಳಿಮಲೆಯವರು ಯಾವುದೇ ನೋವಿನ ಛಾಯೆ ಇಲ್ಲದೆ, ಆತ್ಮರತಿಯಿಲ್ಲದೆ, ನಿಸ್ಪೃಹತೆಯಿಂದ ಓದುಗರ ಮುಂದೆ ಅನಾವರಣಗೊಳಿಸುತ್ತಾ ಹೋಗುತ್ತಾರೆ. ಮಲೆನಾಡಿನ ಬೆಟ್ಟಗಳ ತಪ್ಪಲಲ್ಲಿ, ಘಟ್ಟಗಳ ನಡುವೆ ಬಿಳಿಮಲೆಯವರ ಬಾಲ್ಯದ ನಡಿಗೆಯನ್ನು ಗಮನಿಸುತ್ತಾ ಹೋದರೆ, ಈ ಪ್ರಾಕೃತಿಕ ಸಿರಿಯ ನಡುವೆಯೂ ಬಡತನ, ಸಂಕಷ್ಟಗಳು ಹೇಗಿರುತ್ತದೆ ಎನ್ನುವುದರ ದರ್ಶನವಾಗುತ್ತದೆ.
ಕುಟ್ಟಬ್ಯಾರಿ ಎಂಬ ಅಲೆಮಾರಿ ವ್ಯಾಪಾರಿಯ ಬವಣೆ ಮತ್ತು ಆತನಿಗೆ ಕೊನೆಗೂ ದೊರೆಯದ ಐದು ಸೆಂಟ್ ಭೂಮಿ ಓದುಗರ ಮನದಲ್ಲಿ ನಾಟುವಂತಿದೆ. ಅವಕಾಶವಂಚಿತರ ಬಗ್ಗೆ ಸಹಾನುಭೂತಿ ಮೂಡಿ ಜೀವನಪರ್ಯಂತ ಉಳಿದುಕೊಳ್ಳುವಲ್ಲಿ ಬದುಕಿನ ಇಂತಹ ಘಟನೆಗಳು ಪ್ರಮುಖ ಪಾತ್ರ ವಹಿಸುವುದನ್ನು ಬಿಳಿಮಲೆಯವರ ಬದುಕಿನಲ್ಲೂ ಕಾಣಬಹುದು.
25 ಪೈಸೆ ಕಳೆದುಕೊಂಡ ಬಾಲಕನೊಬ್ಬನ ವೇದನೆ ಮತ್ತು ನೋವು ಇಂದು ಸಾವಿರಗಟ್ಟಲೆ ಕಳೆದುಕೊಳ್ಳುವ ಮಕ್ಕಳಿಗೆ ಅರ್ಥವಾಗುವುದೋ ಇಲ್ಲವೋ. ಆದರೆ ಬಿಳಿಮಲೆಯವರ ಅನುಭವದ ನೆಲೆಯಲ್ಲಿ ನಿಂತು ನೋಡುವ ತುರ್ತು ಇಂದಿನ ಪೀಳಿಗೆಗೆ ಇದೆ. ಇದು ನಮ್ಮೆಲ್ಲರ ಅನುಭವವೂ ಹೌದು. ಹಣದ ಮೌಲ್ಯಕ್ಕಿಂತಲೂ ಅದರ ಭಾವನಾತ್ಮಕ ಮೌಲ್ಯ ಹೆಚ್ಚು ಎನ್ನುವ ಸಂದೇಶವನ್ನು ಈ ಘಟನೆ ನೀಡುತ್ತದೆ. ಸೃಜನಶೀಲ ವ್ಯಕ್ತಿಯೊಬ್ಬರ ಆತ್ಮಕಥನದಲ್ಲಿ ಕಾಣುವ ಇಂತಹ ಸೂಕ್ಷ್ಮಗಳು ಬದುಕು ಕಟ್ಟಿಕೊಳ್ಳುವವರಿಗೆ ಚೈತನ್ಯ ಒದಗಿಸುವುದು ಸಹಜ. ಸಹೋದರಿಯೊಡಗಿನ ತುಂಟಾಟ, ದುಷ್ಟ ಪಟ್ಟ ಮತ್ತು ರಂಪಾಟಗಳ ನಡುವೆಯೇ ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಬಿಳಿಮಲೆಯವರು ಇಂದಿಗೂ ತಮ್ಮ ವಿಶಿಷ್ಟ ಸಾಹಿತ್ಯ ಪರಂಪರೆಯನ್ನು ಕಾಪಾಡಿಕೊಂಡು ಬರುವುದರಲ್ಲಿ ಅವರ ತಾಯಿಯವರ ಮತ್ತು ಬಾಲ್ಯದ ಗುರುಗಳ ಪಾತ್ರ ಇರುವುದನ್ನು ಇಂದಿನ ಪ್ರತಿಯೊಬ್ಬ ಪೋಷಕರೂ ಗಮನಿಸಬೇಕು.
ಸಾಧಕರ ಆತ್ಮಕಥನ ಇಲ್ಲಿಯೇ ಮುಖ್ಯವಾಗುವುದು. ತಮ್ಮ ಬದುಕಿನ ಏರಿಳಿತಗಳನ್ನು ಹೇಳುತ್ತಲೇ ಭವಿಷ್ಯದ ಪೀಳಿಗೆಗೆ ಒಂದು ಸಂವೇದನಾಶೀಲ ಸಂದೇಶವನ್ನು ನೀಡುತ್ತಾ ಹೋಗುವ ಪರಿ ಇಡೀ ಕೃತಿಯಲ್ಲಿ ಎದ್ದುಕಾಣುತ್ತದೆ. ಹಾಗೆಯೇ ಪ್ರತಿಯೊಂದು ಸಾಧನೆಯ ಹಿಂದೆಯೂ ಒಂದು ಸ್ಫೂರ್ತಿದಾಯಕ, ಚೈತನ್ಯಯುತ ಹೃದಯ ಇರುತ್ತದೆ ಎನ್ನುವುದನ್ನೂ ಬಿಳಿಮಲೆಯವರ ಬದುಕಿನ ಒಡನಾಟದಲ್ಲಿ ಕಾಣಬಹುದು. ವಿವೇಕ ರೈ ಅವರಿಂದ ಹಿಡಿದು ಅಮೃತ ಸೋಮೇಶ್ವರರವರೆಗೆ ತಮ್ಮ ಗುರುಪರಂಪರೆಯನ್ನು ಬಹಳ ಭಾವುಕತೆಯಿಂದ, ದೈವೀಕ ಭಾವದಲ್ಲಿ ಸ್ಮರಿಸುವ ಬಿಳಿಮಲೆಯವರು ತಮ್ಮ ಸಾಧನೆಯ ಪ್ರತಿಯೊಂದು ಹೆಜ್ಜೆಯನ್ನೂ ಈ ಚೇತನಗಳಿಗೆ ಅರ್ಪಿಸುವ ಪರಿ ನಿಜಕ್ಕೂ ಉಲ್ಲೇಖನಾರ್ಹ.
ಬದುಕಿನ ಪಯಣದಲ್ಲಿ ಗುರಿ ಮುಟ್ಟುವುದು ಎಂದರೆ ಕೇವಲ ಸಾಧನೆ, ಪ್ರಶಸ್ತಿ ಫಲಕ, ಸನ್ಮಾನ, ಅಭಿನಂದನೆ ಮಾತ್ರವೇ ಅಲ್ಲ, ಅಲ್ಲಿ ಪರಿಶ್ರಮ, ಬದ್ಧತೆ, ಕಾರ್ಯಕ್ಷಮತೆ ಮತ್ತು ಧ್ಯೇಯಸಾಧನೆಯ ಛಲ ಇವೆಲ್ಲವೂ ಮುಖ್ಯ ಎನ್ನುವುದಕ್ಕೆ ಸಾಕ್ಷಿಯಾಗಿ ನಿಲ್ಲುವ ಪಯಣ ಬಿಳಿಮಲೆಯವರದು.
ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ಸಂಸ್ಥೆಯಲ್ಲಿನ ಹದಿನಾರು ವರ್ಷಗಳ ಸೇವಾವಧಿಯಲ್ಲಿ ಸೃಜನಶೀಲ ಸಂಶೋಧಕರಾಗಿ ಬಿಳಿಮಲೆಯವರು ತಮ್ಮೊಳಗಿನ ಪ್ರತಿಭೆ, ವಿದ್ವತ್ತು ಮತ್ತು ದಕ್ಷತೆಯನ್ನು ಸಾಹಿತ್ಯ ಕೃಷಿಗೆ ಬಳಸಿರುವುದು ಕನ್ನಡ ಸಾಹಿತ್ಯ ಲೋಕವನ್ನು ಮತ್ತಷ್ಟು ಸಮೃದ್ಧಿಗೊಳಿಸಿದೆ. ಎಲ್ಲೇ ಇರು ಹೇಗೇ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿವಾಣಿಯನ್ನು ಸಾಕ್ಷಾತ್ಕರಿಸಲು ಬಿಳಿಮಲೆಯವರು ಹೊರನಾಡಿನ ಸಂಸ್ಥೆಗಳನ್ನು ಭೂಮಿಕೆಯಾಗಿ ಬಳಸಿರುವುದು ನಿಜಕ್ಕೂ ಅನುಕರಣೀಯ. ಸಾಹಿತ್ಯ, ಸಂಗೀತ, ಯಕ್ಷಗಾನ, ನಾಟಕ, ಕಾವ್ಯ, ಅಂಕಣಬರಹ ಹೀಗೆ ಅಕ್ಷರ ಲೋಕದ ಎಲ್ಲ ಆಯಾಮಗಳಲ್ಲೂ ತಮ್ಮ ವಿದ್ವತ್ ಪ್ರದರ್ಶನ ಮಾಡುವ ಮೂಲಕ ಬಿಳಿಮಲೆಯವರು ದೆಹಲಿಯ ಕರ್ನಾಟಕ ಸಂಘದ ಪುನರುಜ್ಜೀವನಕ್ಕಾಗಿ ವಹಿಸಿದ ಶ್ರಮ ಇಂದಿನ ಯುವ ವಿದ್ವತ್ ವಲಯ ಗಮನಿಸಲೇಬೇಕು. ಇಂತಹ ಸಾಧಕರ ಶ್ರಮದಿಂದಲೇ ಕನ್ನಡ ಸಾಹಿತ್ಯ ತನ್ನ ಜೀವಂತಿಕೆಯನ್ನು ಉಳಿಸಿ, ಬೆಳೆಸಿ, ವ್ಯಾಪಿಸಲು ಸಾಧ್ಯವಾಗುತ್ತಿದೆ ಎನ್ನುವುದನ್ನೂ ಹೆಮ್ಮೆಯಿಂದ ಹೇಳಬಹುದು.
‘ಕಾಗೆ ಮುಟ್ಟಿದ ನೀರು’ ಕೃತಿಯಲ್ಲಿ ಮುಖ್ಯವಾಗಿ ಗಮನಿಸಬೇಕಾದುದು ಬಿಳಿಮಲೆಯವರ ವಿದೇಶ ಪ್ರವಾಸಗಳು. ಆತ್ಮಕಥನದಲ್ಲೊಂದು ಪ್ರವಾಸ ಕಥನ ಎನ್ನುವಂತೆ ತಾವು ಭೇಟಿ ನೀಡಿದ ಎಲ್ಲ ದೇಶಗಳ ಸ್ಮಾರಕಗಳನ್ನು, ಇತಿಹಾಸ ಪ್ರಸಿದ್ಧ ಸ್ಥಳಗಳನ್ನು ವಿವರಿಸುತ್ತಾ ಹೋಗುವ ಬಿಳಿಮಲೆಯವರು ನಮ್ಮನ್ನೂ ಸಹ ಅಲ್ಲಿಗೇ ಕರೆದೊಯ್ಯುತ್ತಿದ್ದಾರೇನೋ ಎನಿಸುತ್ತದೆ. ಅರಬ್ ರಾಷ್ಟ್ರಗಳು, ಇಸ್ರೇಲ್, ಬೆಲ್ಜಿಯಂ, ಹೊನಲುಲು, ಅಮೆರಿಕ, ಟೋಕಿಯೋ ಹೀಗೆ ಕಲೆ ಮತ್ತು ಸಾಹಿತ್ಯದ ಪರಿವ್ರಾಜಕರಂತೆ ಪರ್ಯಟನೆ ಮಾಡಿರುವ ಬಿಳಿಮಲೆಯವರ ಅಲ್ಲಿನ ಅನುಭವಗಳು ಕೇವಲ ಪ್ರವಾಸ ಕಥನವಾಗಿರದೆ, ಆಯಾ ದೇಶಗಳ ಜನಸಂಸ್ಕೃತಿ, ಆಹಾರ ಪದ್ಧತಿ, ಸಾಮಾಜಿಕ ಒಳನೋಟಗಳನ್ನು ಪರಿಚಯಿಸುವ ಒಂದು ಸುದೀರ್ಘ ಪಯಣದಂತೆ ಕಾಣುತ್ತದೆ.
ಆರಂಭದಿಂದ ತಮ್ಮ ಬದುಕಿನ ಚಿತ್ರಣಗಳನ್ನು ಭಾವಚಿತ್ರಗಳ ಮೂಲಕ ಕಣ್ತುಂಬಿಕೊಳ್ಳುವಂತೆ ಮಾಡುವ ಬಿಳಿಮಲೆಯವರು ನಂತರದ ಕೆಲವು ಪುಟಗಳಲ್ಲಿ ಮೌಢ್ಯ ಮತ್ತು ಅಜ್ಞಾನದ ವಿರುದ್ಧ ತಮ್ಮ ಪ್ರತಿರೋಧದ ದನಿಯ ಪರಿಚಯ ಮಾಡಿರುವುದೂ ಸಹ ಇಂದಿನ ಅಧ್ಯಯನಶೀಲ ವಿದ್ಯಾರ್ಥಿ-ಅಧ್ಯಾಪಕ ವೃಂದಕ್ಕೆ ಮಾರ್ಗದರ್ಶಿಯಾಗಬೇಕು. ಬೌದ್ಧಿಕವಾಗಿ ಯಶಸ್ಸಿನ ಶಿಖರವೇರುತ್ತಲೇ ಹೋಗುವ ಬಿಳಿಮಲೆಯವರು ದೈಹಿಕವಾಗಿ ಎದುರಿಸಿದ ಅನಾರೋಗ್ಯದ ಸಮಸ್ಯೆಗಳನ್ನು ಬಿಚ್ಚಿಡುತ್ತಾ ಹೋದಂತೆ ಬಿಟ್ಟಕಣ್ಣು ಬಿಟ್ಟಂತೆ, ಸೋಜಿಗ, ಅಚ್ಚರಿ ಮತ್ತು ಆತಂಕದಿಂದ ಓದುವಂತಾಗುತ್ತದೆ. ಹಾಗೆಯೇ ತೆರೆದ ಕಣ್ಣುಗಳು ತೇವವಾದರೂ ಅಚ್ಚರಿಯೇನಿಲ್ಲ. ಮೂವತ್ತು ದಾಟಿದ ನಂತರ ಕಾಡಲಾರಂಭಿಸುವ ಮೂವರು ಪತಿಗಳು, ಈ ಪತಿಗಳ ಜನಕ ಮಧುಮೇಹ, ಮೂತ್ರಪಿಂಡ ಕಸಿ ಮಾಡುವ ಹಂತದವರೆಗೂ ವ್ಯಾಪಿಸಿ ಹೃದಯದಲ್ಲಿ ಸ್ಟೆಂಟ್ ಹಾಕುವಲ್ಲಿಗೆ ಕರೆದೊಯ್ಯುವುದನ್ನು ಓದುತ್ತಿರುವಾಗ ನಿಜಕ್ಕೂ ಬಿಳಿಮಲೆ ಒಬ್ಬ ಸ್ಟಂಟ್ ಮ್ಯಾನ್ ಆಗಿಯೇ ಕಾಣುತ್ತಾರೆ.
ಬಾಲ್ಯದಿಂದಲೂ ಒಂದಲ್ಲಾ ಒಂದು ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಲೇ ದೇಶ ವಿದೇಶಗಳನ್ನು ಸುತ್ತಿ ತಮ್ಮೊಳಗಿನ ಸಾಹಿತ್ಯಕ, ಕಲಾತ್ಮಕ ಮತ್ತು ಸಂಶೋಧಕ ಅಭಿವ್ಯಕ್ತಿಗೆ ಒಂದು ಆಯಾಮವನ್ನು ಕಲ್ಪಿಸಿಕೊಳ್ಳುವಲ್ಲಿ ಬಿಳಿಮಲೆಯವರು ತಮ್ಮೊಳಗಿನ ಬೌದ್ಧಿಕ ಸಾಮರ್ಥ್ಯ ಮತ್ತು ಮನೋಬಲವನ್ನು ಬಿಂಬಿಸುತ್ತಾರೆ. ಆರಂಭದಿಂದ ಕೊನೆಯ ಅಧ್ಯಾಯದವರೆಗೂ ಓದಿದ ನಂತರ ಈ ಕಹಿ ಅನುಭವಗಳನ್ನು ಓದುತ್ತಾ ಹೋದಂತೆಲ್ಲಾ, “ಇಷ್ಟೆಲ್ಲಾ ಸಮಸ್ಯೆಗಳಿರುವ ವ್ಯಕ್ತಿಯಿಂದ ಈ ರೀತಿಯ ಸಾಧನೆ ಸಾಧ್ಯವೇ” ಎನಿಸಿದರೆ ಅಚ್ಚರಿಯೇನಿಲ್ಲ. ಇಚ್ಚಾಶಕ್ತಿಯೊಂದಿದ್ದರೆ, ಸಂಕಷ್ಟಗಳನ್ನು ಎದುರಿಸುವ ಮನೋಬಲ ಇದ್ದರೆ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ಪುರುಷೋತ್ತಮ ಬಿಳಿಮಲೆಯವರು ತಮ್ಮ ಬದುಕಿನ ಪ್ರತಿಯೊಂದು ಘಟ್ಟದಲ್ಲೂ ನಿರೂಪಿಸಿರುವುದು ಸ್ತುತ್ಯಾರ್ಹ.
ಹಾಗೆಯೇ ಕಂಬಾರರೊಡನೆ ಸಂಘರ್ಷ ಮತ್ತು ಸಾಹಿತ್ಯ ಲೋಕದೊಳಗಿನ ಕೆಲವು ಅಪಭ್ರಂಶಗಳೂ ಸಹ ಈ ಕೃತಿಯಲ್ಲಿ ನುಸುಳಿದ್ದು ಇದು ಕಳೆದ ಮೂರು ನಾಲ್ಕು ದಶಕಗಳ ಬೆಳವಣಿಗೆಯ ಛಾಯೆಯಂತೆ ಕಾಣುತ್ತದೆ. ತಾವು ಎದುರಿಸಿದ ಸಂಕಷ್ಟದ ಸಂದರ್ಭಗಳು ಮತ್ತು ಅಸಹಾಯಕ ಸನ್ನಿವೇಶಗಳಿಗೆ ಕಾರಣರಾದವರನ್ನು ಕುರಿತು ನೇರಾನೇರ ಪ್ರಸ್ತಾಪಿಸುವ ಬಿಳಿಮಲೆಯವರು ಎಲ್ಲಿಯೂ ತಮ್ಮ ಅಸಹನೆಯನ್ನಾಗಲೀ, ದ್ವೇಷದ ಮನೋಭಾವವನ್ನಾಗಲೀ ಪ್ರದರ್ಶಿಸುವುದಿಲ್ಲ. ಆತ್ಮಕಥನದ ನೆಲೆಯಲ್ಲಿ ತಮ್ಮ ಮನದಾಳದ ನೋವುಗಳನ್ನು ಬಿಚ್ಚಿಡುತ್ತಲೇ ತಮ್ಮೊಳಗಿನ ನಿಸ್ಪೃಹತೆ ಮತ್ತು ನಿಸ್ವಾರ್ಥತೆಯನ್ನೂ ಅನಾವರಣಗೊಳಿಸುವ ಬಿಳಿಮಲೆಯವರ ‘ಕಾಗೆ ಮುಟ್ಟಿದ ನೀರು’ ಸದಾ ಸ್ಮರಣೀಯ ಎನಿಸುವ ಅದ್ಭುತ ಕಥನ. ಶಿಕ್ಷಣ, ಸಂಶೋಧನೆ, ಬೋಧನೆ, ಪ್ರವಾಸ, ಕಲೆ ಮತ್ತು ಸಾಹಿತ್ಯ, ಯಕ್ಷಗಾನ ಮತ್ತು ಸಂಘಟನೆ ಹೀಗೆ ಹಲವು ಪಯಣಗಳ ಒಂದು ಗುಚ್ಚ “ಕಾಗೆ ಮುಟ್ಟಿದ ನೀರು”.
ಚದುರಿ ಬಿದ್ದ ಬಿಳಿಮಲೆಯವರ ಆತ್ಮದ ತುಣುಕುಗಳನ್ನು ಆಯ್ದುಕೊಳ್ಳುತ್ತಾ ಹೋಗುವುದು ಎಷ್ಟು ಕಷ್ಟ ಎಂದು ಭಾವಿಸುತ್ತಾ ಓದು ಮುಂದುವರೆಸಿದರೆ, ಕೊನೆಯ ಅಧ್ಯಾಯದಲ್ಲಿನ ಅವರ ಅನಾರೋಗ್ಯದ ಕಥನ, ಓದುಗರ ಎಲ್ಲ ಕಷ್ಟಗಳನ್ನೂ ಮರೆಮಾಡಿಬಿಡುತ್ತದೆ. ಹಾಗೆಯೇ ಕಾಮನಬಿಲ್ಲಿನ ಆದಿ ಮತ್ತು ಅಂತ್ಯವನ್ನು ಅರಸುವುದು ಕಷ್ಟ ಎಂದೂ ಅರ್ಥವಾಗುತ್ತದೆ. ನಮ್ಮ ನಡುವಿನ ಚಿಂತಕರಲ್ಲಿ, ಬೌದ್ಧಿಕ ಚೇತನಗಳಲ್ಲಿ ಒಬ್ಬರಾಗಿ ಬಿಳಿಮಲೆಯವರು ತಮ್ಮ ಈ ಕಥನಗಳ ಸರಮಾಲೆಯ ಮೂಲಕ ಭವಿಷ್ಯದ ಪೀಳಿಗೆಗೆ ಒಂದು ಮಾರ್ಗದರ್ಶಿ ಕೃತಿಯನ್ನು ಅರ್ಪಿಸಿದ್ದಾರೆ.
“ಸಾಧನೆ ಎನ್ನುವುದು ವ್ಯಕ್ತಿಗತವಾದರೂ ಸಾಧಕರ ಬದುಕು ಸಾರ್ವತ್ರಿಕತೆ ಪಡೆಯುವುದು ಇಂತಹ ಅದ್ಭುತ ವ್ಯಕ್ತಿಗಳಲ್ಲಿಯೇ ಎನಿಸುತ್ತದೆ”- ‘ಕಾಗೆ ಮುಟ್ಟಿದ ನೀರು’ ಸ್ಪರ್ಶಿಸಿದ ನಂತರ ಮನದಾಳದಲ್ಲಿ ಮೂಡಿದ ಮಾತುಗಳಿವು.
ನಾ ದಿವಾಕರ, ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ 2019ರ ಜನವರಿಯಲ್ಲಿ ಸ್ವಯಂ ನಿವೃತ್ತಿ. ಲೇಖನ ಬರಹ, ಅನುವಾದ ಮತ್ತು ಕವಿತೆ ರಚನೆ ಹವ್ಯಾಸ. ಇವರು ಬರೆದ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ.