ಇಪ್ಪತ್ತರ ದಶಕದಲ್ಲಿ ಈ ಮಳಿಗೆ ಎಂತಹ ಖ್ಯಾತಿಯನ್ನು ಪಡೆದಿತ್ತೆಂದರೆ ಇಲ್ಲಿ ಜೇಮ್ಸ್ ಜಾಯ್ಸ್, ಎಜ್ರಾ ಪೌಂಡ್, ಹೆಮಿಂಗ್ವೆ, ಫೋರ್ಡ್ ಮ್ಯಾಡಾಕ್ಸ್ ಫೋರ್ಡ್, ಎಫ್. ಸ್ಕಾಟ್ ಫಿಟ್ಜೆರಾಲ್ಡ್ ಮೊದಲಾದ ಲೇಖಕರು ಒಂದೆಡೆ ಕೂತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದೃಶ್ಯ ಮಾಮೂಲಾಗಿತ್ತು. ಜೇಮ್ಸ್ ಜಾಯ್ಸ್ ಈ ಮಳಿಗೆಯಲ್ಲಿ ತನ್ನ ಆಫೀಸನ್ನೆ ಸ್ಥಾಪಿಸಿಕೊಂಡುಬಿಟ್ಟಿದ್ದ. ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾನ್ ಆದ ಪುಸ್ತಕಗಳು ಇಲ್ಲಿ ಆರಾಮವಾಗಿ ದೊರಕಿಬಿಡುತ್ತಿದ್ದವು. ಹೆಮಿಂಗ್ವೆ ತನ್ನ ‘ಎ ಮೂವಬಲ್ ಫೀಸ್ಟ್’ನಲ್ಲಿ ಈ ಸ್ಥಳದ ಕುರಿತಾಗಿ ಉಲ್ಲೇಖಿಸಿದ್ದಾನೆ.
ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತೆ ಟೀನಾ ಶಶಿಕಾಂತ್ ಅವರ “ಕಣ್ಣ ಕೋಣೆಯ ಕಿಟಕಿ” ಪುಸ್ತಕದ ಒಂದು ಲೇಖನ ನಿಮ್ಮ ಓದಿಗೆ
Where is human nature so weak as in the bookstore? – Henry Ward Beecher
ಯಾವುದೇ ಪುಸ್ತಕದ ಮಳಿಗೆಯೊಳಗೆ ಇಲ್ಲವೇ ಪುಸ್ತಕ ಸಂತೆಗೆ ನುಗ್ಗಿ, ಅಲ್ಲಿ ನಿಮಗೆ ಕಾಣ ಸಿಗುವ ಹೆಚ್ಚಿನವರು ಒಂದೇ ಸಂತತಿಯವರು.. ಅಲ್ಲಿರುವ ಪುಸ್ತಕಗಳೆಲ್ಲವೂ ತಮ್ಮದಾಗುವ ಹಾಗಿದ್ದರೆ ಎಂಬಂತಹ ಬಯಕೆ ಇವರದ್ದಾಗಿರುತ್ತದೆ. ಒಂದೇ ಪುಸ್ತಕವನ್ನು ಕೊಳ್ಳಲು ಹೋದವರು ನಾಲ್ಕು ಕೊಳ್ಳುತ್ತಾರೆ.. ಹೆಚ್ಚು ಕೊಳ್ಳಲಾಗಲಿಲ್ಲವಲ್ಲ ಎಂದು ಹಪಹಪಿಸುತ್ತ ವಾಪಸಾಗುತ್ತಾರೆ.. ಗೆಳೆಯರ ಹತ್ತಿರ ತಮ್ಮಲ್ಲಿಲ್ಲದ ಪುಸ್ತಕ ಕಂಡಿತೆಂದರೆ ಖಿನ್ನರಾಗುತ್ತಾರೆ. ಎರವಲು ಪಡೆದ ಪುಸ್ತಕಗಳನ್ನು ಮರಳಿಸಲು ಇವರಿಗೆ ಬಲು ಖೇದವಾಗುತ್ತದೆ. ಕೆಲವರಂತೂ ಅಮೂಲ್ಯ ಪುಸ್ತಕಗಳು ಕಂಡರೆ ಕದಿಯಲು ಸಹ ಹಿಂಜರಿಯರು.
ಲೈಬ್ರರಿಗಳಿಂದ ಪುಸ್ತಕ ಮಂಗಮಾಯ ಮಾಡುವುದರಲ್ಲಿ, ತಮಗೆ ಬೇಕಾದ ಪುಸ್ತಕಗಳು ತಮಗೆ ಮಾತ್ರ ತಿಳಿದಿರುವ ಜಾಗಗಳಲ್ಲಿ ಸಿಗುವಹಾಗೆ ಅದಲಾಬದಲಿ ಮಾಡುವದರಲ್ಲಿ ಇವರು ನಿಪುಣರು. ತಮ್ಮ ಮೆಚ್ಚಿನ ಪುಸ್ತಕ/ಲೇಖಕ/ಲೇಖಕಿಯ ಬಗ್ಗೆ ಇವರು ಗಂಟೆಗಟ್ಟಲೆ ಚರ್ಚಿಸಬಲ್ಲರು, ಸಮಯಬಂದರೆ ವಾಗ್ವಾದಕ್ಕೂ ತಯಾರಾಗುವರು! ಇವರ ಪ್ರಪಂಚದಲ್ಲಿ ಪುಸ್ತಕಗಳಿಗೆ ಸಾಟಿಯಾದುದು ಇನ್ನೇನೂ ಇಲ್ಲ. “ನನ್ನ ಹತ್ತಿರ ಸ್ವಲ್ಪ ಹಣವಿದ್ದಾಗ, ನಾನು ಪುಸ್ತಕಗಳನ್ನು ಕೊಂಡುಕೊಳ್ಳುತ್ತೇನೆ; ಆಮೇಲೆ ಏನಾದರೂ ಹಣ ಉಳಿಯಿತೆಂದರೆ ಆಹಾರ, ಬಟ್ಟೆಗಳ ಮೇಲೆ ಖರ್ಚುಮಾಡುತ್ತೇನೆ” ಎಂದು ಹದಿನಾರನೇ ಶತಮಾನದ ಡಚ್ ನವೋದಯಕಾಲದ ಮಾನವತಾವಾದಿ ಪಂಡಿತ ಎರಾಸ್ಮಸ್ ಹೇಳಿಕೊಂಡಿದ್ದಾನೆ.
ಇವತ್ತು ವಿಶ್ವ ಪುಸ್ತಕ ದಿನ. 1995ರಲ್ಲಿ UNESCO ಈ ದಿನವನ್ನು ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನವೆಂದು ಆಚರಿಸುವುದಾಗಿ ಘೋಷಿಸಿತು. ವಿಶ್ವದಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನದಂದು ಪುಸ್ತಕಗಳಿಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತೀ ವರ್ಷವೂ ವಿಶ್ವದ ಒಂದು ನಗರವನ್ನು ‘ವರ್ಲ್ಡ್ ಬುಕ್ ಕ್ಯಾಪಿಟಲ್’ ಆಗಿ ಆಯ್ಕೆಮಾಡಲಾಗುವುದಲ್ಲದೆ ವರ್ಷವಿಡೀ ಆ ಸ್ಥಳದಲ್ಲಿ ಪುಸ್ತಕದಿನದ ಸಂಭ್ರಮಾಚರಣೆಗಳು, ಪುಸ್ತಕಗಳನ್ನು ಜನಪ್ರಿಯಗೊಳಿಸುವ ಯೋಜನೆಗಳು ಜಾರಿಯಲ್ಲಿರುತ್ತವೆ. 2003ರಲ್ಲಿ ನಮ್ಮ ನವದೆಹಲಿ ವರ್ಲ್ಡ್ ಬುಕ್ ಕ್ಯಾಪಿಟಲ್ ಆಗಿತ್ತು. ಈ ಬಾರಿಯ ಸರದಿ ಬ್ಯಾಂಕಾಕ್ ನಗರದ್ದು. ಈ ದಿನ ಪ್ರಖ್ಯಾತ ಲೇಖಕ ದಿಗ್ಗಜರಾದ ಸರ್ವಾಂಟೆಸ್, ಶೇಕ್ಸ್ ಪಿಯರ್, ವ್ಲಾದಿಮಿರ್ ನಬಾಕೊವ್ ಮೊದಲಾದವರು ಮರಣ ಹೊಂದಿದ ದಿನವಾಗಿರುವುದೂ ಇನ್ನೊಂದು ವಿಶೇಷ.
ಈ ಹೊತ್ತಿನಲ್ಲಿ ಪ್ರಪಂಚದ ಅತ್ಯಂತ ಪ್ರಸಿದ್ಧ ಪುಸ್ತಕಮನೆಯ ಬಗ್ಗೆ ಹೇಳದೆ ಇರಲಾರೆ. ಸಿಲ್ವಿಯಾ ಬೀಚ್ ಎಂಬಾಕೆ ‘ಶೇಕ್ಸ್ ಪಿಯರ್ ಎಂಡ್ ಕಂಪನಿ’ ಎಂಬ ಪುಸ್ತಕಮಳಿಗೆಯನ್ನು 1919ರಲ್ಲಿ ಪ್ಯಾರಿಸಿನಲ್ಲಿ ಆರಂಭಿಸಿದಳು. ಇಪ್ಪತ್ತರ ದಶಕದಲ್ಲಿ ಈ ಮಳಿಗೆ ಎಂತಹ ಖ್ಯಾತಿಯನ್ನು ಪಡೆದಿತ್ತೆಂದರೆ ಇಲ್ಲಿ ಜೇಮ್ಸ್ ಜಾಯ್ಸ್, ಎಜ್ರಾ ಪೌಂಡ್, ಹೆಮಿಂಗ್ವೆ, ಫೋರ್ಡ್ ಮ್ಯಾಡಾಕ್ಸ್ ಫೋರ್ಡ್, ಎಫ್. ಸ್ಕಾಟ್ ಫಿಟ್ಜೆರಾಲ್ಡ್ ಮೊದಲಾದ ಲೇಖಕರು ಒಂದೆಡೆ ಕೂತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದೃಶ್ಯ ಮಾಮೂಲಾಗಿತ್ತು. ಜೇಮ್ಸ್ ಜಾಯ್ಸ್ ಈ ಮಳಿಗೆಯಲ್ಲಿ ತನ್ನ ಆಫೀಸನ್ನೆ ಸ್ಥಾಪಿಸಿಕೊಂಡುಬಿಟ್ಟಿದ್ದ. ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾನ್ ಆದ ಪುಸ್ತಕಗಳು ಇಲ್ಲಿ ಆರಾಮವಾಗಿ ದೊರಕಿಬಿಡುತ್ತಿದ್ದವು. ಹೆಮಿಂಗ್ವೆ ತನ್ನ ‘ಎ ಮೂವಬಲ್ ಫೀಸ್ಟ್’ನಲ್ಲಿ ಈ ಸ್ಥಳದ ಕುರಿತಾಗಿ ಉಲ್ಲೇಖಿಸಿದ್ದಾನೆ. ಇಷ್ಟೇ ಅಲ್ಲ, ಜಾಯ್ಸನ ಬಹುಚರ್ಚಿತ ಕೃತಿ ‘ಯೂಲಿಸಿಸ್’ನ ಮೊದಲ ಆವೃತ್ತಿಯ ಪ್ರಕಾಶನದ ಜವಾಬ್ದಾರಿಯನ್ನು ಕೂಡ ಸಿಲ್ವಿಯಾ ಬೀಚ್ ಹೊತ್ತಳು.
ಇವರ ಪ್ರಪಂಚದಲ್ಲಿ ಪುಸ್ತಕಗಳಿಗೆ ಸಾಟಿಯಾದುದು ಇನ್ನೇನೂ ಇಲ್ಲ. “ನನ್ನ ಹತ್ತಿರ ಸ್ವಲ್ಪ ಹಣವಿದ್ದಾಗ, ನಾನು ಪುಸ್ತಕಗಳನ್ನು ಕೊಂಡುಕೊಳ್ಳುತ್ತೇನೆ; ಆಮೇಲೆ ಏನಾದರೂ ಹಣ ಉಳಿಯಿತೆಂದರೆ ಆಹಾರ, ಬಟ್ಟೆಗಳ ಮೇಲೆ ಖರ್ಚುಮಾಡುತ್ತೇನೆ” ಎಂದು ಹದಿನಾರನೇ ಶತಮಾನದ ಡಚ್ ನವೋದಯಕಾಲದ ಮಾನವತಾವಾದಿ ಪಂಡಿತ ಎರಾಸ್ಮಸ್ ಹೇಳಿಕೊಂಡಿದ್ದಾನೆ.
ಇಂಥ ಅದ್ಬುತ ಇತಿಹಾಸವುಳ್ಳ ಅಂಗಡಿಯನ್ನು 1940ರಲ್ಲಿ ಜರ್ಮನರು ಫ್ರಾನ್ಸ್ ಅನ್ನು ಆಕ್ರಮಿಸಿಕೊಂಡಾಗ ಸಿಲ್ವಿಯಾ ಮುಚ್ಚಬೇಕಾಗಿ ಬಂತು. ಮುಂದೆಂದೂ ಆಕೆ ಇದನ್ನು ತೆರೆಯಲು ಸಾಧ್ಯವಾಗಲೇ ಇಲ್ಲ.
1951ರಲ್ಲಿ ಜಾರ್ಜ್ ವಿಟ್ಮನ್ ಎಂಬಾತ ಪುರಾತನ ಆಶ್ರಮವೊಂದಿದ್ದ ಕಟ್ಟಡದಲ್ಲಿ ‘ಲೆ ಮಿಸ್ತ್ರಾಲ್’ ಎಂಬ ಹೆಸರಿನ ಪುಸ್ತಕಮಳಿಗೆಯೊಂದನ್ನು ಆರಂಭಿಸಿದವನು 1962ರಲ್ಲಿ ಸಿಲ್ವಿಯಾ ಬೀಚಳ ಮರಣದ ನಂತರ ಆಕೆಯ ಇಚ್ಛೆಯಂತೆಯೇ ತನ್ನ ಪುಸ್ತಕಮನೆಯ ಹೆಸರು ಬದಲಾಯಿಸಿ ‘ಶೇಕ್ಸ್ ಪಿಯರ್ ಎಂಡ್ ಕಂಪನಿ’ ಎಂದಿಟ್ಟ. ಅಷ್ಟೇ ಅಲ್ಲ, ತನ್ನ ಮಗಳಿಗೆ ಸಿಲ್ವಿಯಾ ಬೀಚ್ ಎಂದೇ ಹೆಸರಿಟ್ಟ!! ಈ ಪುಸ್ತಕಮನೆಯೂ ಹಳೆಯದರಷ್ಟೇ ಪ್ರಖ್ಯಾತಿ ಪಡೆಯಿತು. ಈ ಮಳಿಗೆಯಲ್ಲಿ ಯುವಲೇಖಕರು, ಪ್ರವಾಸಿಗರು ಉಳಿದುಕೊಳ್ಳಲು 13 ಹಾಸಿಗೆಗಳ ವ್ಯವಸ್ಥೆಯೂ ಇದೆ. ಇಂದು ಈ ಅಂಗಡಿ ಪ್ಯಾರಿಸಿನ ಪ್ರಮುಖ ಟೂರಿಸ್ಟ್ ಆಕರ್ಷಣೆಗಳಲ್ಲೊಂದು. ಇಲ್ಲಿ ಚಹಾಕೂಟಗಳು, ಕವಿಗೋಷ್ಠಿಗಳು, ಲೇಖಕರ ಭೇಟಿಗಳು ನಡೆಯುತ್ತವೆ. ಹಗಲುಹೊತ್ತಿನಲ್ಲಿ ಪುಸ್ತಕದಂಗಡಿಯಾಗಿರುವ ಈ ಸ್ಥಳ ರಾತ್ರಿಯ ಹೊತ್ತು ಜಾರ್ಜನೇ ಹೆಸರಿಟ್ಟಹಾಗೆ ‘ಹೊಟೆಲ್ ಟಂಬಲ್ ವೀಡ್’ ಆಗಿ ಬದಲಾವಣೆ ಹೊಂದುತ್ತದೆ. ಅಲ್ಲಿ ಉಳಿದುಕೊಳ್ಳುವವರು ಲೇಖಕರೋ, ಕಲಾಕಾರರೋ ಆಗಿರಬೇಕಾದ್ದು, ಅವರು ತಮ್ಮ ಕೃತಿಯ ಮ್ಯಾನುಸ್ಕಿಪ್ಟ್ ತೋರಿಸಬೇಕಾದ್ದು ಕಡ್ಡಾಯ. ಫ್ರೀಯಾಗಿ ಉಳಿದುಕೊಳ್ಳುವವರು ಅಂಗಡಿಯ ಕೆಲಸದಲ್ಲಿ ನೆರವಾಗಬೇಕು.
ಜಾರ್ಜ್ 2011ರ ಡಿಸೆಂಬರಿನಲ್ಲಿ ತನ್ನ 98ನೇ ವಯಸ್ಸಿನಲ್ಲಿ ತೀರಿಕೊಂಡರು. ಅಂಗಡಿಯಿದ್ದ ಕಟ್ಟಡವನ್ನು ಕೆಲವು ಬಿಲ್ಡರುಗಳು ವಶಪಡಿಸಿಕೊಳ್ಳುವ ಯತ್ನ ನಡೆಸಿದರಾದರೂ ಜಾರ್ಜರ ಮಗಳು ಸಿಲ್ವಿಯಾ ಹಾಗಾಗಲು ಬಿಡಲಿಲ್ಲ. ಈವತ್ತು ಇಡೀ ಕಟ್ಟಡವೇ ಆಕೆಯ ಹೆಸರಿನಲ್ಲಿದ್ದು ತಂದೆಯಿದ್ದಾಗ ಹೇಗೆ ನಡೆಯುತ್ತಿತ್ತೋ ಎಲ್ಲವೂ ಹಾಗೆಯೇ ನಡೆಯುತ್ತಿದೆ.
ನನಗೆ ನಮ್ಮಲ್ಲಿ ಮುಚ್ಚಿಹೋದ ಹಲವಾರು ಪ್ರಸಿದ್ಧ ಪುಸ್ತಕಮನೆಗಳು ನೆನಪಾಗುತ್ತಿವೆ. ಪ್ರೀಮಿಯರ್, ಗಂಗಾರಾಮ್ಸ್, ಅತ್ರೀ… ಪ್ರತಿಯೊಂದು ಪುಸ್ತಕಮನೆ ಮುಚ್ಚುವಾಗಲೂ – ಕಾರಣವೇನೇ ಇದ್ದಿರಲಿ – ಪುಸ್ತಕಪ್ರೇಮಿಗಳಿಗೆ ಅಪಾರ ನೋವುಂಟಾಯಿತು. ಆ ಹೊತ್ತಿಗೆ ಜನರಲ್ಲಿ ಪುಸ್ತಕಗಳ ಬಗ್ಗೆ ಅವಜ್ಞೆ ಹೆಚ್ಚಾಗುತ್ತಿದೆಯೆ ಎಂಬ ಪ್ರಶ್ನೆ ಎದ್ದಿದ್ದರಲ್ಲಿ ಅಚ್ಚರಿಯೇನೂ ಇಲ್ಲ.
ಕಳೆದ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕದ ಪ್ರದರ್ಶನಕ್ಕೆ ಹೋಗಿದ್ದೆ. ಪ್ರೇಕ್ಷಕರು ಕಿಕ್ಕಿರಿದು ಕೂರಲೂ ಜಾಗವಿರಲಿಲ್ಲ. ಅಲ್ಲಿಗೆ ನಾಟಕ ನೋಡಲು ಬಂದಿದ್ದ ಅನೇಕರು ತಮ್ಮ ಮನೆಯ ಮಕ್ಕಳನ್ನೂ ಜತೆಗೆ ಕರೆದುಕೊಂಡು ಬಂದಿದ್ದರು, ನಾಟಕದಲ್ಲಿ ಅವರಿಗೆ ಅರ್ಥವಾಗದ್ದನ್ನು ವಿವರಿಸುತ್ತಿದ್ದರು. ಅಲ್ಲಿನ ಹೆಚ್ಚಿನವರು ಕಾದಂಬರಿಯನ್ನು ಓದಿದವರೆಂದು ಚರ್ಚೆಗಳಿಂದ, ಕಮೆಂಟುಗಳಿಂದ ಸ್ಪಷ್ಟವಾಗುತ್ತ ಇತ್ತು. ನೆಟ್ಟಗೆ ಅರ್ಧಘಂಟೆಯ ಒಂದು ಸೀರಿಯಲ್ಲನ್ನೂ ನೋಡುವ ಸಮಯವಿಲ್ಲದ ಧಾವಂತದ ನಗರಿಯಿಂದ ಹೆಚ್ಚೂಕಮ್ಮಿ ಒಂದುಸಾವಿರಕ್ಕೂ ಮಿಕ್ಕಿದ ಸಂಖ್ಯೆಯ ಜನ ಒಂಭತ್ತು ಘಂಟೆಗಳ ಕಾಲ ಕಾದಂಬರಿಯೊಂದನ್ನು ಆಧರಿಸಿದ ನಾಟಕವನ್ನು ಹುಮ್ಮಸ್ಸಿನಿಂದ ನೋಡಿ ಆನಂದಿಸಿದರು.
ಪುಸ್ತಕಗಳು ಎಂದಿಗೂ ಸಾಯುವುದಿಲ್ಲ. ಅವು ತಮ್ಮಷ್ಟಕ್ಕೆ ತಾವೇ ವಿಕಾಸ ಹೊಂದುತ್ತಿರುತ್ತವೆ. ಫ್ರೆಂಚ್ ಕವಿ ಸ್ತೆಫಾನ್ ಮಲಾರ್ಮ್ ಹೇಳುವ ಹಾಗೆ “ಜಗತ್ತಿನಲ್ಲಿ ಎಲ್ಲವೂ ಅಸ್ತಿತ್ವದಲ್ಲಿರುವುದೇ ಪುಸ್ತಕರೂಪ ಪಡೆದುಕೊಳ್ಳುವ ಸಲುವಾಗಿ.”
(ಪುಸ್ತಕ: “ಕಣ್ಣ ಕೋಣೆಯ ಕಿಟಕಿ”, ಲೇಖಕರು: ಟೀನಾ ಶಶಿಕಾಂತ್, ಪ್ರಕಾಶನ: ಸಂಕಥನ ಪುಸ್ತಕದ ಬೆಲೆ: 200/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ