ಭಾನುವಾರ ಅಂದರೆ ಸಾಕು ಈ ಹಳೆಯ ಪುಸ್ತಕದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳಿಗ್ಗೆ ಏಳರ ಸುಮಾರಿಗೆ ಸುಮಾರು ಖಾಯಂ ಅಂಗಡಿಗಳ ಮುಂಭಾಗದಲ್ಲಿ ಈ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಮೊದಮೊದಲು ಜಟಕಾ ಗಾಡಿಗಳಲ್ಲಿ ಪುಸ್ತಕದ ಹೊರೆ ಬರುತ್ತಿತ್ತು. ಪುಸ್ತಕವನ್ನು ಅದರ ಆಕಾರಕ್ಕೆ ಅನುಗುಣವಾಗಿ ಜೋಡಿಸಿ ಹಗ್ಗದಲ್ಲಿ ಕಟ್ಟಿರುತ್ತಿದ್ದರು. ನಂತರ ಇದು ಕಾರ್ಟನ್ ಡಬ್ಬದಲ್ಲಿ ಬರುತ್ತಿದ್ದವು. ಜಟಕಾದಿಂದ ಆಟೋಗೆ, ಆಟೋದಿಂದ ಟೆಂಪೋಗಳಿಗೆ ಈ ಸಾಗಾಟದ ರೂಪು ಬದಲಾಯಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೈದನೆಯ ಕಂತು ನಿಮ್ಮ ಓದಿಗೆ
ಹದಿಮೂರನೇ ಸಂಚಿಕೆಗೆ ಸಂಬಂಧ ಪಟ್ಟಂತೆ ನನ್ನ ಮಿತ್ರ ಶ್ರೀ ಆನಂದ ರಾಮರಾವ್ ಹೀಗೆ ತಮ್ಮ ನೆನಪನ್ನು ನೆನೆದಿದ್ದಾರೆ…..: ಕಂಟೋನ್ಮೆಂಟ್‌ನ ಸಿನಿಮಾ ಥಿಯೇಟರ್‌ಗಳ ಬಗ್ಗೆ ತಾವು ಬರೆದಿರುವ ನೆನಪುಗಳು ನನ್ನಲ್ಲಿಯೂ ಸಹ ಹಲವು ಹಳೆಯ ನೆಪುಗಳು ಮರುಕಳಿಸಲು ಪ್ರೇರಕವಾಯಿತು. ೫೦-೬೦ರ ದಶಕದಲ್ಲಿ ಸಂಪಂಗಿ ಟ್ಯಾಂಕ್ (ಇಂದಿನ ಸ್ಟೇಡಿಯಂ) ನ ಆಚೆಗೆ ಹೋಗುವುದೆಂದರೆ ಯಾವುದೋ ಲೋಕಕ್ಕೆ ಹೋದಂತೆ. ಅಬ್ಬಬ್ಬಾ ಎಂದರೆ ಮ್ಯೂಸಿಯಂವರೆಗೆ ಮಾತ್ರ ಹೋಗುತ್ತಿದ್ದೆವು. ಇನ್ನು ಅಲ್ಲಿನ ಥಿಯೇಟರ್‌ಗಳಿಗೆ ಹೋಗುವುದೆಂದರೆ ನಮಗೆಲ್ಲ ಗಗನ ಕುಸುಮವೇ ಆಗಿತ್ತು. ಕಂಟೋನ್ಮೆಂಟ್‌ನಲ್ಲಿ ನಾನು ನೋಡಿದ ಮೊದಲ ಸಿನಿಮಾ ಎಂದರೆ Ten Commandments ಪ್ಲಾಜಾ ಟಾಕೀಸ್‌ನಲ್ಲಿ. ಶೇಷಾದ್ರಿ ಎಂಬ ನನ್ನ ಗೆಳೆಯರೊಬ್ಬರಿದ್ದರು. ನಾನೂ ಮತ್ತು ಅವರು ಆ ಟಾಕೀಸ್‌ನಲ್ಲಿ ಆ ಸಿನಿಮಾ ನೋಡಿದ್ದೆವು. ಮಾರನೇ ದಿನ ಅದನ್ನು ಹೆಮ್ಮೆಯಿಂದ ಇತರೇ ಗೆಳೆಯರೊಂದಿಗೆ ಹೇಳಿಕೊಂಡಿದ್ದೆವು.
ಮಹಾತ್ಮಾ ಗಾಂಧಿ ರಸ್ತೆಯ ಆರಂಭದಲ್ಲಿಯೇ ಹಳೆಯ ಟಾಕೀಸ್ ಒಂದಿತ್ತು. ಬಹುಶಃ ಅದು ಎಲ್ಜಿನ್ ಇರಬಹುದು. ಅದಾದ ನಂತರ ಇದ್ದಿದ್ದು ಲಿಬರ್ಟಿ ಟಾಕೀಸ್. ಬಾಗಿಲ ಬಳಿಯೇ ಮಹಿಳೆಯೊಬ್ಬರು ಕುಳಿತಿರುತ್ತಿದ್ದರು. ಬಂದು ಹೋಗುವವರನ್ನು ಗಮನಿಸುತ್ತಿದ್ದರು. ಆಕೆಯೇ ಆ ಟಾಕೀಸ್‌ನ ಮಾಲೀಕರು. ಹೆಸರು ಅಖ್ತ ಬೇಗಂ ಎಂದು.
ನಿಮಗೆ ಆಶ್ಚರ್ಯ ಎನಿಸಬಹುದು – ಕನ್ನಡ ಚಳುವಳಿ ಆರಂಭಗೊಂಡ ನಂತರ ನಡೆಸಿದ ಪ್ರಪ್ರಥಮ ಕನ್ನಡ ರಾಜ್ಯೋತ್ಸವದ ಅದ್ಧೂರಿ ಮೆರವಣಿಗೆಯಲ್ಲಿ ಅ.ನ.ಕೃ ಮತ್ತು ಅಂದಾನಪ್ಪ ದೊಡ್ಡಮೇಟಿಯವರೊಂದಿಗೆ ತೆರೆದ ಕಾರ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ಆಕೆಯೂ ಸಹ ಮುಂದೆ ಕುಳಿತಿದ್ದರು. ಕಾರಣ-ಮೆರವಣಿಗೆಗೆ ಕಾರನ್ನು ನೀಡಿದವರು ಆಕೆಯೇ.
ಕಂಟೋನ್ಮೆಂಟ್‌ನ ಮತ್ತೊಂದು ಟಾಕೀಸ್ ನನಗೆ ಚೆನ್ನಾಗಿ ನೆನಪಿನಲ್ಲಿ ಇರುವುದೆಂದರೆ ಬ್ರಿಗೇಡ್ ರಸ್ತೆಯಲ್ಲಿರುವ ರೆಕ್ಸ್ ಟಾಕೀಸ್. ಈ ಥಿಯೇಟರ್ ನೆನಪಿನಲ್ಲಿ ಇರಲು ಕಾರಣವೆಂದರೆ ಅರವತ್ತರ ದಶಕದಲ್ಲಿ ನಮ್ಮ ಕನ್ನಡ ಸಾಹಿತ್ಯ ಕೂಟವು ಪ್ರತಿ ವರ್ಷವೂ ಸಹ ಒಂದು ಬೆನಿಫಿಟ್ ಷೋವನ್ನು ಏರ್ಪಡಿಸುತ್ತಿತ್ತು. BEL ಕನ್ನಡ ಸಾಹಿತ್ಯ ಕೂಟದಲ್ಲಿ ಸಿ.ಆರ್. ಶ್ಯಾಮರಾವ್ ಎಂಬ ಹಿರಿಯ ಸದಸ್ಯರೊಬ್ಬರಿದ್ದರು. ಅವರು ಬಹಳ ಆಸಕ್ತಿ ವಹಿಸಿ ಥೀಯೇಟರ್‌ಗಳನ್ನು ಹುಡುಕಿ ಕೊನೆಗೆ ರೆಕ್ಸ್ ಥಿಯೇಟರನ್ನು ಗೊತ್ತು ಮಾಡುತ್ತಿದ್ದರು. ಅಲ್ಲಿನ ನಮ್ಮ ಬೆನಿಫಿಟ್ ಶೋಗಳಿಗೆ ನಾವು ಟಿಕೆಟ್ ಮಾರುತ್ತಿದ್ದೆವು. ಥಿಯೇಟರ್ ಹೌಸ್ ಫುಲ್ ಆಗುತ್ತಿತ್ತು.
ಇನ್ನು ಮುಂದೆ…
ಬೆಂಗಳೂರಿನ ಪುಸ್ತಕದ ಅಂಗಡಿಗಳ ಪ್ರಸ್ತಾಪ ಇಲ್ಲದೆ ನಮ್ಮ ಜಮಾನಾದ ಯಾವ ಯಾರ ನೆನಪೂ ಸಹ ಪೂರ್ಣ ಅನಿಸದು ಎಂದು ನನ್ನ ಅಭಿಪ್ರಾಯ. ಇದೇ ಅಭಿಪ್ರಾಯವನ್ನು ಹಲವಾರು ವಿದ್ವಾಂಸರು ವ್ಯಕ್ತ ಪಡಿಸಿದ್ದಾರೆ. ನನಗೆ ಒಂದು ರೀತಿ ಹೆಮ್ಮೆ ಮತ್ತು ಕೋಡು ಬಂದಹಾಗೆ ಹಲವು ಬಾರಿ ಅನಿಸಿದೆ, ವಿದ್ವಾಂಸರ ಹಾಗೆ ಯೋಚಿಸಿದೆ ಅಂತ! ಸುಮಾರು ನನ್ನ ಗೆಳೆಯರೂ ಸಹ ಹೀಗೇ ಯೋಚಿಸುತ್ತಾರೆ. ಆಗ ನನ್ನ ಕೋಡು ಇನ್ನಷ್ಟು ಉದ್ದ ಆಗುತ್ತೆ. ಎಷ್ಟೊಂದು ಜನ ವಿದ್ವಾಂಸರು ನನ್ನ ಆಪ್ತರು ಅಂತ. ಕೆಲವು ಸಲ ಸಮಾನ ಸ್ನೇಹಿತರು ಕೂತು ಮಾತುಕತೆ ನಡೆಸಬೇಕಾದರೆ ಪುಸ್ತಕದ ಅಂಗಡಿ ವಿಷಯ ಬಂದೇ ಬರಬೇಕು. ನಮ್ಮ ಕಾಲದ ಪುಸ್ತಕದ ಅಂಗಡಿಗಳಿಗೆ ನಿಮ್ಮನ್ನು ಕೊಂಡು ಒಯ್ಯುತ್ತೇನೆ. ಮೊದಲಿಗೆ ಹೊಸ ಪುಸ್ತಕ ಮಾರುವ ಅಂಗಡಿ ಕಡೆ ನೋಡುವ.
ಅರವತ್ತು ಎಪ್ಪತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಪ್ರತಿ ಬಡಾವಣೆಯಲ್ಲಿ ಎರಡು ಮೂರು ಪುಸ್ತಕದ ಅಂಗಡಿಗಳು ಇದ್ದವು. ಅವುಗಳಲ್ಲಿ ನಿಮಗೆ ಸ್ಟೇಷನರಿ ವಸ್ತುಗಳು, ಸ್ಕೂಲು ಕಾಲೇಜು ಪುಸ್ತಕಗಳೇ ಅಲ್ಲದೆ ಕತೆ ಕಾದಂಬರಿಗಳು ಸಹ ಮಾರಾಟಕ್ಕೆ ಸಿಗುತ್ತಿದ್ದವು. ಅಪರೂಪಕ್ಕೆ ಯಾವುದಾದರೂ ವಿಶೇಷ ಪುಸ್ತಕ ಬೇಕಿದ್ದರೆ ಅಂಗಡಿಯವರು ತರಿಸಿ ಕೊಡುತ್ತಿದ್ದರು. ಹೀಗಾಗಿ ಪುಸ್ತಕದ ಅಂಗಡಿ ಎಂದರೆ ಕಾಲೇಜು ಮತ್ತು ಹೈಸ್ಕೂಲ್ ವಿದ್ಯಾರ್ಥಿಗಳ ಹಾಗೂ ಹೆಂಗಸರ ಒಂದು ಅಚ್ಚುಮೆಚ್ಚಿನ ತಾಣ ಆಗಿತ್ತು. ಇದಕ್ಕೂ ಮೀರಿ ವಿಶೇಷ ಅಧ್ಯಯನಕ್ಕೆ ಬೇಕಿದ್ದ ಪುಸ್ತಕಗಳು ಲೈಬ್ರರಿ ಅಥವಾ ಅವೆನ್ಯೂ ರಸ್ತೆಯ ಅಥವಾ ಕಂಟೋನ್ಮೆಂಟ್ ಅಂಗಡಿಗಳಲ್ಲಿ ಲಭ್ಯ ಇರುತ್ತಿತ್ತು. ಸುಮಾರು ವಿದ್ಯಾರ್ಥಿಗಳು ನಗರದ ಕಾಲೇಜಿನಲ್ಲಿ ಓದುತ್ತಿದ್ದವರು. ನೂರಕ್ಕೆ ಹತ್ತು ಜನ ಕಂಟೋನ್ಮೆಂಟ್‌ನ ಶಾಲೆ ಕಾಲೇಜಿನವು. ಇನ್ನೂ ಸಿಟಿ ಮತ್ತು ಕಂಟೋನ್ಮೆಂಟ್ ಅಂತರ ಕಾಪಾಡಿಕೊಂಡು ಬಂದಿದ್ದೆವು. ಸಿಟಿ ಹುಡುಗರು ಕಾಂಟ್ರಾಮೆಂಟ್ ಅಂದರೆ ಇನ್ನೂ ಚಳಿ ಅಂಟಿಸಿಕೊಂಡು ಇದ್ದ ಕಾಲ ಅದು. ಇದು ಸುಮಾರು ಎಂಬತ್ತು ತೊಂಬತ್ತರ ದಶಕದವರೆಗಿನ ಸಂಪ್ರದಾಯ. ಒಂದೊಂದಾಗಿ ಬಡಾವಣೆಯ ಶಾಲೆಗಳು ಪುಸ್ತಕಗಳನ್ನು ಅವರವರ ವಿದ್ಯಾರ್ಥಿಗಳಿಗೆ ಅವರೇ ಪೂರೈಸಲು ಆರಂಭಿಸಿದರು. ಶಾಲೆಗಳಲ್ಲಿ ಏನು ಕಲಿಸಬೇಕು ಎನ್ನುವ ಸರ್ಕಾರದ ನಿಯಂತ್ರಣ ಸಂಪೂರ್ಣ ತಪ್ಪಿತು. CBSE ಸಿಲಬಸ್ ಎಂದು ಕಾನೂನಿನ ಕಣ್ಣು ತಪ್ಪಿಸಲಾಯಿತು. ನಮ್ಮ ಕಾನೂನು ಮಾಡುವ ಪ್ರತಿನಿಧಿಗಳು ಕಣ್ಣು ಮುಚ್ಚಿ ಕೂತರು, ಮೇಯಲು ವಿಪುಲ ಅವಕಾಶ ಕಲ್ಪಿಸಿದರು.. ಮತ್ತೆ ಕೆಲವರು ಅವರದ್ದೇ ಆದ ಶಾಲೆ ಕಾಲೇಜು ನಡೆಸಿ ಮತ್ತಷ್ಟು ಕೊಳ್ಳೆಗೆ ದಾರಿ ಹುಡುಕಿಕೊಂಡು ಕಿಸೆ ಖಜಾನೆ ತುಂಬಿಕೊಂಡರು.
ಒಬ್ಬ ಎಂ ಎಲ್ ಎ ಬೆಂಗಳೂರಿನ ಪ್ರತಿಷ್ಠಿತ ಸ್ಥಳಗಳಲ್ಲಿ ಆರು ಖಾಸಗಿ ಶಾಲೆ ಹೊಂದಿದ್ದಾನೆ ಎಂದರೆ ಇದರ ಭ್ರಷ್ಟತೆಯ ಅಗಲ ಹಾಗೂ ಆಳ ಎಷ್ಟು ಎಂಬ ಅರಿವು ಮೂಡುತ್ತದೆ. ಖಾಸಗಿ ಶಾಲೆಗಳು ಅವರ ಪಠ್ಯಗಳು ಮತ್ತು ರೆಫರೆನ್ಸ್ ಪುಸ್ತಕಗಳನ್ನು ಅವರೇ ನಿರ್ಧರಿಸಿದರು. ದೆಹಲಿಯ ಸಾವಿರಾರು ಪ್ರಿಂಟಿಂಗ್ ಅಂಗಡಿಗಳು ಇವರಿಗೆ ಬೇಕಿದ್ದ ಬೇಡಿರದ ಪುಸ್ತಕ ಪೂರೈಸಲು ಸಿದ್ಧರಾದರು. ಈ ಅವಕಾಶವನ್ನು ಖಾಸಗಿ ಶಾಲೆಗಳು ತೆರೆದ ಬಾಹುಗಳಿಂದ ಬಾಚಿದವು. ಹತ್ತು ರೂಪಾಯಿ ಬೆಲೆ ಬಾಳುವ ಪುಸ್ತಕ ನೂರು ರೂಪಾಯಿ ದರ ಹೊತ್ತು ಶಾಲೆ ಪ್ರವೇಶ ಪಡೆದವು. ಶಾಲೆಗಳ ಒಡೆಯರಿಗೆ ಇದೊಂದು ಲಾಭದಾಯಕ ದಂಧೆ ಎನಿಸಿತು. ಅತಿ ಲಾಭ ಕೊಡುವ ದಂಧೆಯನ್ನು ಅಪ್ಪಿಕೊಂಡರು ಮತ್ತು ಹಾಲು ತುಪ್ಪ ಸುರಿದು ಪೋಷಿಸಿದರು. ಖಾಸಗಿ ಶಾಲೆಗೆ ಮಕ್ಕಳನ್ನು ಸೇರಿಸಿದ್ದ ಬಡ ಪೋಷಕರು ಸದ್ದಿಲ್ಲದೆ ಶಾಲೆ ಕೇಳಿದಷ್ಟು ಹಣ ಚೆಲ್ಲಿದರು. ದಂಧೆ ನೋಟ್ ಬುಕ್ಕು ಮತ್ತು ಇತರ ಪರಿಕರಗಳು ಅಂದರೆ ಪೆನ್ಸಿಲ್, ರಬ್ಬರ್, ಜಾಮಿಟ್ರಿ ಬಾಕ್ಸು… ಮುಂತಾದ ವಿದ್ಯಾರ್ಥಿಗಳ ಅವಶ್ಯಕ ವಸ್ತುಗಳಿಗೂ ಹಬ್ಬಿ ಸ್ಥಳೀಯ ಅಂಗಡಿಗಳು ಹೇಳ ಹೆಸರಿಲ್ಲದಂತೆ ಕೊಚ್ಚಿಕೊಂಡು ಹೋದವು. ಸ್ಥಳೀಯರಿಗೆ ಕೂಗುವ ಮತ್ತು ಆರ್ಭಟಿಸುವ ಶಕ್ತಿ ಇರಲೇ ಇಲ್ಲ. ದೆಹಲಿ ಪ್ರಕಾಶಕರು ಇಲ್ಲಿ ತಮ್ಮ ನೆಲೆ ಕಂಡುಕೊಂಡರು ಮತ್ತು ಕೊಳ್ಳೆ, ಸೂರೆ ಮುಂದುವರೆಯಿತು. ಈಗಲೂ ಸಹ ಅದೇ ಪರಿಸ್ಥಿತಿ ಮುಂದುವರೆದಿದೆ.
lkg ಮಗುವಿಗೆ ಹನ್ನೊಂದು ಸಾವಿರ ಬೆಲೆಯ ಪುಸ್ತಕ ಮಾರಿರುವ ಶಾಲೆಯೂ ಇದೆ. ಇದಕ್ಕಿಂತ ಹೆಚ್ಚು ಬೆಲೆ ಕೊಟ್ಟವರು ಸಹ ಇದ್ದಾರೆ. ಪೋಷಕರು ತಮ್ಮ ಮಕ್ಕಳು ಹೆಸರು ಮಾಡಿರುವ ಶಾಲೆಯಲ್ಲಿ ಓದಲಿ ಎನ್ನುವ ವೀಕ್ ನೆಸ್ ಇವರ ಲೂಟಿಗೆ ಬೆಂಬಲವಾಗಿ ನಿಂತಿತು. ಒಬ್ಬನೇ ಒಬ್ಬ ಪೋಷಕ ಖಾಸಗಿ ಶಾಲೆಗಳ ಈ ಹಗಲು ದರೋಡೆಯನ್ನು ಖಂಡಿಸಿಲ್ಲ. ತಮಾಷೆ ಎಂದರೆ ಸರ್ಕಾರದ ಎಲ್ಲ ಪುಕ್ಕಟೆ ಸೌಲಭ್ಯ ಪಡೆಯುವ ಜನರೂ ಸರ್ಕಾರಿ ಶಾಲೆ ಅಂದರೆ ನೂರು ಗಾವುದ ದೂರ ಓಡುವುದು…! ಪುಕ್ಕಟೆ ಸೌಲಭ್ಯ ಪಡೆಯುವವರು ತಮ್ಮ ಮಕ್ಕಳನ್ನ ಕಂಪಲ್ಸರಿ ಸರ್ಕಾರಿ ಶಾಲೆಗೇ ಕಳಿಸಬೇಕು ಅಂತ ರೂಲು ಮಾಡಬೇಕು…! ಆಗಲಾದರೂ ಸರ್ಕಾರಿ ಶಾಲೆಗಳಿಗೆ ಒಂದು ಮರ್ಯಾದೆ, ಒಂದು ಗೌರವದ ಸ್ಥಾನ ಸಿಕ್ಕಬಹುದು. ಈಗಿನ ವ್ಯವಸ್ಥೆಯಲ್ಲಿ ಇನ್ನೂ ಹಲವು ಶತಮಾನ ಕಳೆದರೂ ಅಂತ ಸ್ಥಿತಿ ಕಾಣಬಹುದು ಎನ್ನುವ ಸಣ್ಣ ಆಸೆಯೂ ನನಗಿಲ್ಲ ಮತ್ತು ಹೀಗೆ ಯೋಚಿಸುವವರು ಸಹ ಇಲ್ಲ.
ಇವಿಷ್ಟು ಶಾಲಾ ಕಾಲೇಜು ಪುಸ್ತಕದ ಅಂಗಡಿಗಳ ಕತೆ ಆದರೆ ಅಲ್ಲೇ ಕತೆ ಕಾದಂಬರಿ ಇಟ್ಟು ಮಾರಾಟ ಮಾಡುತ್ತಿದ್ದ ಅಂಗಡಿಯವರು ತಮ್ಮ ವ್ಯವಹಾರವನ್ನು ನಿಲ್ಲಿಸಿದಾಗ ಇದನ್ನು ಕೇಳುವವರು ಯಾರು? ಕತೆ ಕಾದಂಬರಿ ಓದಬೇಕು ಅನಿಸಿದರೆ ಅದು ಸಿಕ್ಕುವ ಜಾಗ ಹುಡುಕಿ ಅಲ್ಲಿಗೆ ಹೋಗಿ ಅದನ್ನು ಕೊಂಡು ತರಬೇಕು.. ಇಷ್ಟು ಮಾಡುವವರು ಯಾರು? ಸುಮಾರು ಖಾಸಗಿ ವಾಚನಾಲಯಗಳವರು ಓದುಗರ ಅಗತ್ಯತೆ ಪೂರೈಸುತ್ತಿದ್ದರು. ಓದುಗ ಪ್ರಭುಗಳ ಜನಸಂಖ್ಯೆ ಕ್ಷೀಣಿಸಿದ ಹಾಗೆ ಅವೂ ಮುಚ್ಚಿದವು. ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಖಾಸಗಿ ವಾಚನಾಲಯ ಕಾಣಿಸುತ್ತೆ. ನನ್ನ ಗೆಳೆಯ ಚಂದ್ರು (ಸಿ ಎಸ್ ಚಂದ್ರ ಶೇಖರ್)ಇಂತಹ ಒಂದು ವಾಚನಾಲಯವನ್ನು ಕಳೆದ ನಾಲ್ಕೂವರೆ ದಶಕದಿಂದ ಜಯನಗರದ ರಾಗಿಗುಡ್ಡ ಬಳಿ ನಡೆಸಿಕೊಂಡು ಬಂದಿದ್ದಾರೆ. ಇದು, ಬಹಳ ಅಪರೂಪದ ಸಂಗತಿ!
ಆಗ ಇದ್ದ ಹಲವಾರು ಖಾಸಗಿ ವಾಚನಾಲಯಗಳು ಸಹ ಮುಚ್ಚಿದವು ಮತ್ತು ಸರ್ಕಾರದ ವಾಚನಾಲಯಗಳು ಮಿಕ್ಕ ಸರ್ಕಾರಿ ಸಂಸ್ಥೆಗಳ ಹಾಗೆ ಅನಾಸಕ್ತರಿಂದ ತುಂಬಿ ತನ್ನ ಅಸ್ತಿತ್ವವನ್ನೇ ಮರೆತಿದೆ. ಅಕಾಡೆಮಿ, ವಿಶ್ವವಿದ್ಯಾಲಯ ಮತ್ತು ಇತರ ಪ್ರತಿಷ್ಠಿತ ಸಂಸ್ಥೆಗಳು ತಮ್ಮದೇ ಅಂಗಡಿ ಹೊಂದಿದ್ದರೂ ಸಹ ಇತರ ಪುಸ್ತಕ ಮಾರಾಟ ಅವರು ಮಾಡುವುದಿಲ್ಲ. ಅಕಾಡೆಮಿ ಪುಸ್ತಕ ಅದೆಷ್ಟು ಜನ ಓದುತ್ತಾರೋ ತಿಳಿಯದು ಮತ್ತು ವಿ ವಿ ಪ್ರಕಟಣೆ ಜನಸಾಮಾನ್ಯರಿಗೆ ಅಲ್ಲದ್ದು. ಪುಸ್ತಕ ಪ್ರಾಧಿಕಾರ ಮೊದಲಾದ ಸರ್ಕಾರಿ ಸಂಸ್ಥೆಗಳು ಇತರೆ ಪುಸ್ತಕ ಮಾರದಿರುವುದು ಮತ್ತು ಪೂರ್ತಿ ಅನಾಸಕ್ತರಿಂದ ತುಂಬಿರುವುದು ಅಲ್ಲಿಗೆ ತಲೆ ಇಡಲೆ ಬೇಸರ ಹುಟ್ಟಿಸುತ್ತೆ. ಪುಸ್ತಕಗಳು ನಮ್ಮಿಂದ ಅಂದರೆ ಜನ ಸಾಮಾನ್ಯರಿಂದ ದೂರ ಬಹುದೂರ ಆಗಲು ಟಿವಿ ವಾಹಿನಿಗಳ ಜತೆಗೆ ಇದೂ ಸಹ ಒಂದು ಬಹು ಮುಖ್ಯ ಕಾರಣ. ಈಗ ಒಂದು ಹತ್ತು ಹದಿನೈದು ವರ್ಷಗಳಲ್ಲಿ ನಗರದಲ್ಲಿ ಪುಸ್ತಕದ ಅಂಗಡಿಗಳು ಮಾಯವಾಗಿವೆ. ಅವುಗಳು ಇದ್ದ ಸ್ಥಳದಲ್ಲಿ ಬಟ್ಟೆ ಅಂಗಡಿ, ಬೂಟು ಅಂಗಡಿ ಮತ್ತು ಪುಟ್ಟ ಹೋಟೆಲ್‌ಗಳು ಬಂದಿವೆ. ಹೀಗೆ ಒಂದು ಉದ್ಯಮ ನಾಶವಾಗಿದ್ದು ಯಾರ ಗಮನಕ್ಕೂ, ನಾಶ ಹೊಂದಿದವರ ಗಮನಕ್ಕೂ ಸಹ ಬಂದಿಲ್ಲ…! ಇದು ನನ್ನಂತಹವರಿಗೆ ಶಾಶ್ವತ ನೋವು ಕೊಡುವ ಸಂಗತಿಗಳು.
ಗೀತಾ ಟಾಕೀಸ್‌ಗೆ ಅಂಟಿಕೊಂಡ ಹಾಗೆ ನವಕರ್ನಾಟಕ ಪ್ರಕಾಶನದ ಮಳಿಗೆ ಮೊದಲು ಶುರು ಆದಾಗ ಇದ್ದ ಜಾಗ. ಮುಖ್ಯವಾಗಿ ಎಡ ಪಂಥೀಯ ಪುಸ್ತಕಗಳು ಹಾಗೂ ರಷಿಯಾದ ಪುಸ್ತಕಗಳು ಅದರ ಇಂಗ್ಲಿಷ್ ಅವತರಣಿಕೆಗಳಿಗೆ ಈ ಮಳಿಗೆ ಆಗ ಮೀಸಲು. ಅಪರೂಪಕ್ಕೆ ಬೇರೆ ಪುಸ್ತಕಗಳು ಲಭ್ಯ. ಸುಮಾರು ಪುಸ್ತಕಗಳು ತುಂಬಾ ಅಂದರೆ ತುಂಬಾ ಕಡಿಮೆ ಬೆಲೆಗೆ ಸಿಗುತ್ತಿದ್ದವು. ಕಾರ್ಲ್ ಮಾರ್ಕ್ಸ್‌ನ ದಸ್ ಕ್ಯಾಪಿಟಲ್‌ನ ತಲಾ ಐನೂರು ಆರುನೂರು ಪುಟಗಳ ಮೂರು ಸಂಪುಟಗಳು ಹತ್ತು ರೂಪಾಯಿ, ಅಸಂಖ್ಯಾತ ಚಿತ್ರಗಳಿದ್ದ ಹ್ಯೂಮನ್ ಅನಾಟಮಿ ಎರಡು ವಾಲ್ಯೂಮ್ ಹದಿನೈದು ರೂಪಾಯಿ, ಎ ಜೇ ಕ್ರೋನಿನ್‌ನ ಸಿಟಾಡೆಲ್ ಒಂದೂವರೆ ರೂಪಾಯಿ… ಹೀಗೆ ಅಸಂಖ್ಯಾತ ಪುಸ್ತಕಗಳು (ಎಲ್ಲವೂ ರಶಿಯಾದಲ್ಲಿ ಪ್ರಕಟ ಆದವು)ತುಂಬಾ ಕಡಿಮೆ ಬೆಲೆಗೆ ಇಲ್ಲಿ ಸಿಗುತ್ತಿತ್ತು ಮತ್ತು ವಾರಕ್ಕೊ ಹದಿನೈದು ದಿವಸಕ್ಕೋ ಅತ್ತ ಹಾಗೇ ನಡೆದು ಪುಸ್ತಕ ಕೊಂಡು ಬ್ಯಾಗಿನಲ್ಲಿ ಹಾಕಿ, ಬ್ಯಾಗು ಕೈನಲ್ಲಿ ಹಿಡಿದು ಆಚೆ ಬಂದರೆ ಅದೇನು ಖುಷಿ ಆಗ್ತಾ ಇತ್ತು ಅಂತೀರಿ.. ನವಕರ್ನಾಟಕ ದೊಡ್ಡದಾಗಿ ಬೆಳೆಯಿತು. ಬೇರೆಡೆ ತಮ್ಮ ವಹಿವಾಟು ಮುಂದುವರೆಸಿತು. ಕನ್ನಡ ಭಾಷೆ ಪುಸ್ತಕಗಳ ಪ್ರಕಾಶನದ ವ್ಯವಹಾರವನ್ನು ಸಹ ಅತ್ಯಂತ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿದೆ. ಜತೆ ಜತೆಗೆ ನಾಡಿನ ಎಲ್ಲ ಕಡೆಯೂ ಪುಸ್ತಕ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ ಮಾಡಿ ಜನರಲ್ಲಿನ ಓದುವ ಅಭಿರುಚಿಯನ್ನು ಜೀವಂತವಾಗಿ ಇರಿಸಿತು. ಕನ್ನಡದಲ್ಲಿನ ವೈಜ್ಞಾನಿಕ, ವೈಚಾರಿಕ ಪುಸ್ತಕಗಳನ್ನು ಸಹ ಅಪಾರ ಪ್ರಮಾಣದಲ್ಲಿ ಪ್ರಕಟಿಸಿತು. ಹೀಗೆ ತನ್ನ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದೆ.
ಮೆಜೆಸ್ಟಿಕ್ ಕೆಳಗೆ ನಡೆದರೆ ಬಲ ಪಕ್ಕದ ಒಂದು ಗಲ್ಲಿ ಜಂಗಮ ಮೇಸ್ತ್ರಿ ಗಲ್ಲಿ ಅಂತ ಅದರ ಹೆಸರು. ಅಲ್ಲಿ ಸಾಹಿತ್ಯ ಭಂಡಾರ ಪುಸ್ತಕ ಮಳಿಗೆ. ಅವರು ಎಸ್ ಎಲ್ ಭೈರಪ್ಪ ಅವರ ಪ್ರಕಾಶಕರು ಹಾಗೂ ಮಾರಾಟಗಾರರು. ಬೇರೆ ಪುಸ್ತಕ ಸಹ ಇರುತ್ತಿತ್ತು. ಭೈರಪ್ಪ ಅವರ ಯಾವುದೇ ಹೊಸ ಪುಸ್ತಕ ಬರಲಿ, ಅಥವಾ ಹಳೇದು ಯಾವುದಾದರೂ ಬೇಕಿದ್ದರೆ ಇವರ ಅಂಗಡಿಗೆ ನುಗ್ಗುತ್ತಾ ಇದ್ದೆವು. ಡಿಸ್ಕೌಂಟ್ ಇರದು. ನಾನು ಡಿಸ್ಕೌಂಟ್ ಸಿಗಲಿಲ್ಲ ಎನ್ನುವ ಸಂಕಟ ನುಂಗಿ ಮಖದಲ್ಲಿ ಹಲ್ಲು ತೋರಿಸಿ ಪುಸ್ತಕ ಕೊಳ್ಳುತ್ತಿದ್ದೆ! ಹಾಗೇ ಮುಂದೆ ಬಂದರೆ ಬಳೇ ಪೇಟೆ ಸರ್ಕಲ್ ಮೂಲೆ ಮಹಡಿ ಮೇಲೆ ಗೀತಾ ಬುಕ್ ಹೌಸ್. ಯಾವ ಪುಸ್ತಕ ಬೇಕಿದ್ದರೂ ಅಲ್ಲಿ ಹೋಗಿ ಕೇಳಿದರೆ ಸಾಕು ಅಟ್ಟ ಹತ್ತಿ ಹುಡುಕಿ ಕೊಡ್ತಾ ಇದ್ದರು. ಬೇಂದ್ರೆ ಅಜ್ಜನ ನಾಕು ತಂತಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ ಅದರ ಪ್ರತಿ ಐದಾರು ಕಡೆ ಹುಡುಕಿದರೂ ಸಿಗಲಿಲ್ಲ. ಗೀತಾಗೆ ಬಂದೆ. ನಾಕು ತಂತಿ ಅಂದೆ. ಅಲ್ಲಿದ್ದ ಯಜಮಾನರು ತಲೆ ಎತ್ತಿ ನನ್ನನ್ನು ನೋಡಿದರು. ಇರಿ ಅಂದರು. ಕೂಡಿ ಅಂತ ಸ್ಟೂಲ್ ತೋರಿಸಿದರು. ಕೂತೆ. ಆಗಲೇ ಅವರಿಗೆ ಆಗಲೇ ವಯಸ್ಸಾಗಿತ್ತು… ಏಣಿ ಹಾಕಿಕೊಂಡು ಅಟ್ಟ ಹತ್ತಿದರು. ಅರ್ಧ ಗಂಟೆ ಹುಡುಕಿ ಒಂದು ಕಾರ್ಡ್ ಬೋರ್ಡ್ ಬಾಕ್ಸ್ ಇಳಿಸಿದರು. ಅದರ ಧೂಳು ಹೊಡೆದು ಬಾಕ್ಸ್ ತೆರೆದರೆ ಅದರಲ್ಲಿ ಐವತ್ತೋ ನೂರೋ ನಾಕುತಂತಿ ಬೆಚ್ಚಗೆ ಮಲಗಿತ್ತು. ಎರಡು ಪ್ರತಿ ಕೊಡಿ ಅಂದೆ. ಇನ್ನೊಂದು ಯಾರಿಗೆ ಅಂದರು. ನನ್ನ ಗೆಳೆಯ ಕೂಡ ಇದನ್ನೇ ಹುಡುಕ್ತಾ ಇದಾನೆ, ಅವನಿಗೆ ಒಂದು ನನಗೆ ಇನ್ನೊಂದು ಅಂದೆ. ನಕ್ಕು ಎರಡು ಪ್ರತಿ ಕೊಟ್ಟರು, ಯಾವುದೇ ಪುಸ್ತಕ ಬೇಕಾದರೂ ಬನ್ನಿ ಅಂದರು. ಒಂದೂ ಕಾಲು ರೂಪಾಯಿ ಒಂದು ಪ್ರತಿಗೆ, ಎರಡೂವರೆ ಕೊಟ್ಟೆ. ಡಿಸ್ಕೌಂಟ್ ಇಲ್ಲ ಸ್ವಾಮಿ ಅಂದರಾ… ನಕ್ಕು ಪುಸ್ತಕ ತಗೊಂಡು ಮೆಟ್ಟಿಲು ಇಳಿದೆ.
ಈಗಲೂ ಅದು ನನ್ನ ಬಳಿ ಉಂಟು! ಸುಮಾರು ಸಲ ಇವರ ಅಂಗಡಿಗೆ ಹೋಗಿದ್ದೀನಿ. ಮೈಸೂರಿಗೆ ಹೋಗಿದ್ದಾಗ ಅಲ್ಲೂ ಇವರ ಅಂಗಡಿಗೆ ಹೋಗಿದ್ದೆ. ಇವರ ಸಹೋದರ ಅಲ್ಲಿನ ಅಂಗಡಿ ನೋಡಿಕೊಳ್ಳುತ್ತಿದ್ದರು. ಹೇಮಂತ ಪ್ರಕಾಶನ ಅಲ್ಲೇ ಹತ್ತಿರದಲ್ಲಿ ಅಂದರೆ ಕಾಟನ್ ಪೇಟೆ. ಅಲ್ಲೂ ಸಹ ಸುಮಾರು ಜನಪ್ರಿಯ ಪುಸ್ತಕಗಳು ಸಿಗುತ್ತಿತ್ತು ಮತ್ತು ಈಗ ಅದು ಮತ್ತಷ್ಟು ಬಲವಾಗಿ ಬೆಳೆದಿದೆ. ಹಾಸ್ಯಬ್ರಹ್ಮ ಟ್ರಸ್ಟ್‌ಗಾಗಿ ನಾನು ಸಂಪಾದಿಸಿದ ಮುಕ್ತ ಪ್ರಬಂಧಗಳು ಹೆಸರಿನ ಸುಮಾರು ದೊಡ್ಡದು ಎನ್ನಬಹುದಾದ ಪುಸ್ತಕ ಏಳೆಂಟು ವರ್ಷಗಳ ಹಿಂದೆ ಇವರೇ ಪ್ರಕಟಿಸಿದ್ದು. ಅದೇ ರಸ್ತೆಯಲ್ಲಿ ಸುರಂಗ ಅಂದರೆ ಸು. ರಂಗಸ್ವಾಮಿ, SBM ನಲ್ಲಿ ಉದ್ಯೋಗದಲ್ಲಿದ್ದ ಪ್ರಭಾಕರ್ ಮುಂತಾದವರು ಪುಸ್ತಕ ಪ್ರಕಾಶನ ಮತ್ತು ಮಾರಾಟ ನಡೆಸುತ್ತಿದ್ದರು. ರಂಗಸ್ವಾಮಿ ನನ್ನ ಪುಸ್ತಕ (ಪ್ರಜಾವಾಣಿ ಮಿಡಲ್‌ಗಳ ಸಂಕಲನ ಪ್ರಿಯ ವೀಕ್ಷಕರೆ….) ಒಂದು ಪ್ರಕಟಿಸಿದ್ದರು.
ಗಾಂಧಿ ಬಜಾರ್‌ನ ಅಂಕಿತ ಪುಸ್ತಕ, ಜಯನಗರದ ಟೋಟಲ್ ಕನ್ನಡ ನಂತರದ ಸೇರ್ಪಡೆ. ಚಾಮರಾಜಪೇಟೆ, ಬಸವನಗುಡಿಯಲ್ಲಿ ರಾಮಕೃಷ್ಣ ಆಶ್ರಮದ ಪ್ರಕಟಣೆಗಳು ಹಾಗೂ ಆಧ್ಯಾತ್ಮ ಪುಸ್ತಕಗಳ ಅಂಗಡಿ ಹೆಸರುವಾಸಿ. ನೃಪತುಂಗ ರಸ್ತೆಯ ರಿಸರ್ವ್ ಬ್ಯಾಂಕ್ ಎದುರು ರಾಷ್ಟ್ರೋತ್ಥಾನದ ಒಂದು ಮಳಿಗೆ ನಂತರ ಬಂದಿತು. ಚಾಮರಾಜಪೇಟೆಯಲ್ಲಿಯೂ ಕೆಲವು ಪುಸ್ತಕ ಮಾರಾಟ ಕೇಂದ್ರಗಳು ಇದ್ದವು.
ಎಂ ಎಲ್ ಎ ಬೆಂಗಳೂರಿನ ಪ್ರತಿಷ್ಠಿತ ಸ್ಥಳಗಳಲ್ಲಿ ಆರು ಖಾಸಗಿ ಶಾಲೆ ಹೊಂದಿದ್ದಾನೆ ಎಂದರೆ ಇದರ ಭ್ರಷ್ಟತೆಯ ಅಗಲ ಹಾಗೂ ಆಳ ಎಷ್ಟು ಎಂಬ ಅರಿವು ಮೂಡುತ್ತದೆ. ಖಾಸಗಿ ಶಾಲೆಗಳು ಅವರ ಪಠ್ಯಗಳು ಮತ್ತು ರೆಫರೆನ್ಸ್ ಪುಸ್ತಕಗಳನ್ನು ಅವರೇ ನಿರ್ಧರಿಸಿದರು. ದೆಹಲಿಯ ಸಾವಿರಾರು ಪ್ರಿಂಟಿಂಗ್ ಅಂಗಡಿಗಳು ಇವರಿಗೆ ಬೇಕಿದ್ದ ಬೇಡಿರದ ಪುಸ್ತಕ ಪೂರೈಸಲು ಸಿದ್ಧರಾದರು. ಈ ಅವಕಾಶವನ್ನು ಖಾಸಗಿ ಶಾಲೆಗಳು ತೆರೆದ ಬಾಹುಗಳಿಂದ ಬಾಚಿದವು. ಹತ್ತು ರೂಪಾಯಿ ಬೆಲೆ ಬಾಳುವ ಪುಸ್ತಕ ನೂರು ರೂಪಾಯಿ ದರ ಹೊತ್ತು ಶಾಲೆ ಪ್ರವೇಶ ಪಡೆದವು.
ಇನ್ನು ಅವೆನ್ಯೂ ರಸ್ತೆಯಲ್ಲಿ ಸುಮಾರು ಅಂಗಡಿಗಳು ಕಾಲೇಜು ಪುಸ್ತಕ ಇಟ್ಟಿದ್ದವು. ಸುಭಾಷ್ ಸ್ಟೋರ್ಸ್ ಫೇಮಸ್ ಆಗ. ಅದರ ಎದುರು ಒಂದು ಅಂಗಡಿಯಲ್ಲಿ ಮೊದಲ ಬಾರಿಗೆ ಐದು ಪರ್ಸೆಂಟ್ ಡಿಸ್ಕೌಂಟ್ ಕೊಟ್ಟರು ಎಂದು ಅಲ್ಲಿಗೇ ಹೋಗ್ತಾ ಇದ್ದೆ. ಅದರ ಹೆಸರು ನಂದಿ ಸ್ಟೋರ್ಸ್ ಇರಬೇಕು.
ಸುಬೇದಾರ್ ರಸ್ತೆಯ ಬೆಂಗಳೂರು ಬುಕ್ ಬ್ಯುರೋ ನನ್ನ all time ಅಚ್ಚುಮೆಚ್ಚಿನ ಅಂಗಡಿ. ಬೇಕಾದ ಎಲ್ಲಾ ಕನ್ನಡ, ಇಂಗ್ಲಿಷ್ ಪುಸ್ತಕ ಇಲ್ಲಿ ಹುಡುಕಿಕೊಳ್ಳುತ್ತಿದ್ದೆ. ಗೆಳೆಯ ಶ್ರೀನಿವಾಸಮೂರ್ತಿ (ಕಳೆದ ವರ್ಷ ಇವರು ದೇವರ ಪಾದ ಸೇರಿದರು) ಅಲ್ಲೇ ನಿಂತು ಇಡೀ ಪುಸ್ತಕ ಓದೀ ಬಿಡೋರು. ಇಂಗ್ಲಿಷ್ ಲಾಂಗ್ವೇಜ್ ಬುಕ್ ಸೊಸೈಟಿ(ELBS) ಅವರು ತುಂಬಾ ಕಡಿಮೆ ಬೆಲೆಗೆ ಪುಸ್ತಕ ಪ್ರಕಟಿಸುತ್ತಾ ಇದ್ದರು. ಕನ್ನಡ ಪುಸ್ತಕಗಳ ಜತೆ ಜತೆಗೆ ಟೀಚ್ ಯುವರ್ ಸೆಲ್ಫ್ ಸರಣಿಯಲ್ಲಿ ಆಲ್ಜೀಬ್ರಾ, ಟ್ರಿಗ್ನೋಮೆಟ್ರಿ, ಮೆಕಾನಿಕ್, ಸ್ಲೈಡ್ ರೂಲ್… ಹೀಗೆ ಹಲವಾರು ಪುಸ್ತಕ ಎರಡು ಮೂರು ರೂಪಾಯಿಗೆ ಇಲ್ಲಿ ಕೊಂಡಿದ್ದು ಇನ್ನೂ ಹಸಿರು ಹಸಿರು. ಜಾರ್ಜ್ ಆರ್ವೆಲ್‌ನ ಅನಿಮಲ್ ಫಾರ್ಮ್ ಒಂದೂವರೆ, ಅದೇ ಆರ್ವೆಲ್ ನ 1984 ಎರಡೂವರೆ ಕೊಟ್ಟು ಕೊಂಡಿದ್ದೆ. ಗಲಿವರ್ಸ್ ಟ್ರಾವೆಲ್‌ಗೆ ಎರಡೂವರೆ ರೂಪಾಯಿ.. ಹೀಗೆ. ಇನ್ನೂ ಗಾಢವಾದ ನೆನಪು ಅಂದರೆ ರಾಂಡಮ್ ಹೌಸ್‌ನವರು ಸುಮಾರು 1600 ಪುಟಗಳ ಒಂದು ಇಂಗ್ಲಿಷ್ ಡಿಕ್ಷನರಿ ಕಾಲೇಜ್ ಎಡಿಷನ್ ತಂದರು. ಹನ್ನೊಂದು ರೂಪಾಯಿ ಅದಕ್ಕೆ. ಹಲವು ಪ್ರತಿ ಕೊಂಡು ಗೋಣಿ ಚೀಲದಲ್ಲಿ ತುಂಬಿಕೊಂಡು ಗೆಳೆಯರಿಗೆ ನಂಟರಿಗೆ ಕೊಟ್ಟಿದ್ದೆ. ಈ ಡಿಕ್ಷನರಿ ಇನ್ನೂ ಕೆಲವರ ಮನೇಲಿ ಇದೆ! ದುರ್ಘಟನೆಯಲ್ಲಿ ಈ ಕಟ್ಟಡ ಬಿದ್ದು ಹೋಗುವತನಕ ವಾರಕ್ಕೆ ಎರಡು ವಾರಕ್ಕೆ ಇಲ್ಲಿ ಭೇಟಿ ನಿಶ್ಚಿತವಾಗಿತ್ತು.
ಜನತಾ ಬಜಾರ್ ಎದುರು ಕಾಮತ್ ಹೊಟೇಲಿನ ಕೆಳಭಾಗದ ಮೂಲೆಯಲ್ಲಿ ಸಪ್ನಾ ಮೊದಲು ಶುರು ಆಗಿದ್ದು. ಅಲ್ಲಿಂದ ಅದರ ನಂಟು ನಮಗೆ. ಇಲ್ಲೂ ಸುಮಾರು ಪುಸ್ತಕ ಕೊಂಡಿದ್ದೇನೆ. ರಾಜ್ಯೋತ್ಸವ ಪ್ರಯುಕ್ತ ಶೇಖಡಾ ಹತ್ತರ ರಿಬೇಟಿಗಾಗಿ ಕಾದಿದ್ದು ಸಹ ಉಂಟು. ಐ ಬೀ ಎಚ್ ಪ್ರಕಾಶನ ಸಹ ಗಾಂಧಿನಗರದಲ್ಲಿ ಇತ್ತು. ಅವರ ಕವಿಕಾವ್ಯ ಮಾಲೆಯ ಎಲ್ಲಾ ಪುಸ್ತಕ ಕೊಂಡಿದ್ದೆ ಮತ್ತು ಓದಿದ್ದೆ. ಸಪ್ನಾ ನಂತರ ವಿಸ್ತಾರವಾದ ಸ್ಥಳಕ್ಕೆ ಸ್ಥಳಾಂತರ ಆಯಿತು, ಈಗಲೂ ಅದರ ಒಳಗೆ ಆಗಾಗ ನುಸುಳುತ್ತೇನೆ. ಐ ಬೀ ಎಚ್ ಪ್ರಕಾಶನದ ಸುದ್ದಿ ಕೇಳಿ ತುಂಬಾ ವರ್ಷವಾಯಿತು.
ಸುಬೇದಾರ್ ರಸ್ತೆಯ ಒಂದು ಮೂಲೆಯಲ್ಲಿ ಬಾಲಾಜಿ ಬುಕ್ ಸ್ಟೋರ್ಸ್ ಲಾ ಪುಸ್ತಕದ ಅಂಗಡಿ. ಲಾ ವ್ಯಾಸಂಗಕ್ಕೆ ಬೇಕಿದ್ದ ಎಲ್ಲಾ ಪುಸ್ತಕ ಈ ಅಂಗಡಿಯಲ್ಲಿ ಕೊಂಡಿದ್ದೆ. ಪರೀಕ್ಷೆ ಹತ್ತಿರ ಬಂದಹಾಗೆ ನಟ್ಷೆಲ್ ಸೀರೀಸ್ ಹೆಸರಿನ ಪುಟ್ಟ ಹೊತ್ತಿಗೆಗಳು ಬರುತ್ತಿದ್ದವು. ದೊಡ್ಡ ದಪ್ಪನೆಯ ಲಾ ಪುಸ್ತಕಗಳ ಎಂಟು ಹತ್ತು ಪುಟಗಳ ಸಂಕ್ಷಿಪ್ತ ರೂಪ ಇವು. ಐವತ್ತು ಪೈಸೆಗೆ ಒಂದು ನಟ್ ಶೆಲ್ ಪುಸ್ತಕ! ಪರೀಕ್ಷೆಗೆ ಕೆಲವು ಗಂಟೆಗಳ ಮೊದಲು ಇದನ್ನು ನೋಡಿದರೆ ಹಿಂದೆ ಓದಿದ್ದವು, ರಿಫ್ರೆಶ್ ಆಗೋವು. ಈಗ nut shell ಸೀರೀಸ್ ಬರುತ್ತಿರುವ ಮಟ್ಟಿಗೆ ಕಾಣೆ. ಅದರ ಹತ್ತಿರವೇ ವಾಸನ್ ಸ್ಟೋರ್ಸ್. ಅಲ್ಲೂ ಸಹ ನಮಗೆ ಬೇಕಿದ್ದ ವ್ಯಾಸಂಗದ ಪುಸ್ತಕಗಳು. ವಾಸನ್ ಮಾಲೀಕರ ಮಗ ಚೆಲ್ಲಪ್ಪನ್ (ಹೆಸರು ತಪ್ಪಿರಬಹುದು)ನಮ್ಮ ಜತೆ ಓದುತ್ತಿದ್ದ.
ಇನ್ನು ನೀವು ಮಲ್ಲೇಶ್ವರ ಬಂದರೆ ಅಲ್ಲಿ ಆತ್ಮಾ ಸ್ಟೋರ್ಸ್ ಗೊತ್ತಿಲ್ಲದ ಯಾವ ವಿದ್ಯಾರ್ಥಿಯೂ ಆಗ ಇರಲಿಲ್ಲ. ಯಾವುದೇ ಪುಸ್ತಕ, ಗೈಡು ಬೇಕಿದ್ದರೂ ಆತ್ಮ ಸ್ಟೋರ್ಸ್‌ಗೆ ದೌಡು! ಅಲ್ಲೂ ಆರೇಳು ಅಂಗಡಿ ಇದ್ದವು ಮತ್ತು ಮುಚ್ಚಿದವು. ಆತ್ಮಾ ಸ್ಟೋರ್ಸ್ ಆಗಾಗ ಬಣ್ಣ ಬಳಿದುಕೊಂಡು ಹೊಸ ಕಳೆ ಬರಿಸಿಕೊಳ್ಳುತ್ತಿತ್ತು. ಕಳೆದ ತಿಂಗಳು ಆತ್ಮಾ ಸ್ಟೋರ್ಸ್ ಎದುರು ಬಂದೆ. ಅದರ ಎದುರೇ ಒಂದು ಸೇತುವೆ ಮತ್ತು ಅಂಡರ್ ಪಾಸ್ ಬಂದು ಮಲ್ಲೇಶ್ವರಂ ಸರ್ಕಲ್ ಸಂಪೂರ್ಣ ಬದಲು ಆಗಿದೆ. ರಸ್ತೆಯ ಈ ಪಕ್ಕ ನಿಂತು ಒಂದು ಫೋಟೋ ಕ್ಲಿಕ್ಕಿಸಿದೆ! ಹಳೇ ನೆನಪಿಗೆ ಈ ಫೋಟೋ ಇರಲಿ ಅಂತ ಇಟ್ಟೆ!
ಎಂ ಜಿ ರಸ್ತೆ ಅಂದರೆ ಮಹಾತ್ಮಾ ಗಾಂಧಿ ರಸ್ತೆಗೆ ಬಂದರೆ ಸಾಕು ಅಲ್ಲಿ ನಿಮಗೆ ಹಿಗ್ಗಿನ್ ಬೋತಮ್ಸ್ ಅಂಗಡಿ. ಯಾವ ಇಂಗ್ಲಿಷ್ ಪುಸ್ತಕ ಕೇಳಿ ಹುಡುಕಿ, ತರಿಸಿ ಕೊಡುತ್ತಿದ್ದರು. ಬೆಂಗಳೂರು ಬುಕ್ ಬ್ಯುರೋ ಒಂದು ಶಾಖೆ ಅಲ್ಲಿತ್ತು. ಸೆಲೆಕ್ಟ್ ಬುಕ್ ಅಂಗಡಿಯಲ್ಲಿ ಹಳೇ ಪುಸ್ತಕಗಳು ಸಿಗುತ್ತಿತ್ತು. ಮತ್ತೂ ಕೆಲವು ಇದ್ದವು, ಮರೆತಿದ್ದೇನೆ.
ಹಳೇ ಪುಸ್ತಕ ಅಂದರೆ ಅಂದಿನ ಬೆಂಗಳೂರಿಗರಿಗೆ ಒಂದು ರೀತಿ ಸುಗ್ಗಿ. ಕಾಲೇಜು ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡದೊಡ್ಡ ಸಾಹಿತಿಗಳು ಹಾಗೂ ಪ್ರೊಫೆಸರ್‌ಗಳನ್ನು ಈ ಹಳೇ ಪುಸ್ತಕದ ಅಂಗಡಿಗಳಲ್ಲಿ ಕಾಣಬಹುದಿತ್ತು. ಶ್ರೀ ಜಿ ಪಿ ರಾಜರತ್ನಂ ಅವರು ಪುಸ್ತಕದ ಅಂಗಡಿಯಲ್ಲಿ ಒಟ್ಟಿಗೆ ಐದಾರು ಪೆರಿ ಮೆಸನ್ ಕಾದಂಬರಿ ಕೊಂಡಿದ್ದು ಹಲವು ಬಾರಿ ಕಂಡಿದ್ದೇನೆ. ಹಾ ಮಾ ನಾ ಕೆಲವು ಸಲ ಈ ಅಂಗಡಿಯಲ್ಲಿ ಕಾಣಿಸಿದ್ದರು. ಕೃಷ್ಣಯ್ಯ ಸಹ ಈ ಗೀಳಿನವರು.
ಭಾನುವಾರ ಅಂದರೆ ಸಾಕು ಈ ಹಳೆಯ ಪುಸ್ತಕದ ಅಂಗಡಿಗಳ ಸಂಖ್ಯೆ ಹೆಚ್ಚುತ್ತಿತ್ತು. ಬೆಳಿಗ್ಗೆ ಏಳರ ಸುಮಾರಿಗೆ ಸುಮಾರು ಖಾಯಂ ಅಂಗಡಿಗಳ ಮುಂಭಾಗದಲ್ಲಿ ಈ ಅಂಗಡಿಗಳು ತೆರೆದುಕೊಳ್ಳುತ್ತಿದ್ದವು. ಮೊದಮೊದಲು ಜಟಕಾ ಗಾಡಿಗಳಲ್ಲಿ ಪುಸ್ತಕದ ಹೊರೆ ಬರುತ್ತಿತ್ತು. ಪುಸ್ತಕವನ್ನು ಅದರ ಆಕಾರಕ್ಕೆ ಅನುಗುಣವಾಗಿ ಜೋಡಿಸಿ ಹಗ್ಗದಲ್ಲಿ ಕಟ್ಟಿರುತ್ತಿದ್ದರು. ನಂತರ ಇದು ಕಾರ್ಟನ್ ಡಬ್ಬದಲ್ಲಿ ಬರುತ್ತಿದ್ದವು. ಜಟಕಾದಿಂದ ಆಟೋಗೆ, ಆಟೋದಿಂದ ಟೆಂಪೋಗಳಿಗೆ ಈ ಸಾಗಾಟದ ರೂಪು ಬದಲಾಯಿತು.
ಕೆಲವು ಅಂಗಡಿಗಳು ಭಾನುವಾರ ಮಾತ್ರ ತೆರೆದರೆ ಮಿಕ್ಕ ಹಲವು ಅಂಗಡಿಗಳು ವಾರದ ಎಲ್ಲಾ ದಿವಸಗಳು ತೆರೆದಿರುತ್ತಿತ್ತು. ಬೆಳಿಗ್ಗೆ ಹತ್ತಕ್ಕೆ ಹೊರಟರೆ ಅದು ಭಾನುವಾರ ಆದರೆ ಮೊದಲು ಸಂಗಂ ಥಿಯೇಟರ್ ರಸ್ತೆಯ ಮುಂದೆಬನ್ನಿ. ಉಪ್ಪಾರಪೇಟೆ ಪೊಲೀಸ್ ಸ್ಟೇಶನ್ ತಿರುವಿನ ಮೊದಲು ಎಡಭಾಗದಲ್ಲಿ ಸುಮಾರು ಪುಸ್ತಕ ಹರಡಿಕೊಂಡಿರುವ ಅಂಗಡಿಯವರು. ಅಲ್ಲಿ ನಿಮಗೆ ಸಾವಿರಾರು ಕನ್ನಡ, ಇಂಗ್ಲಿಷ್ ಪುಸ್ತಕಗಳು. ಕೆಲವು ಪಠ್ಯಗಳು, ಕೆಲವು ಫಿಕ್ಷನ್‌ಗಳು, ಇಂಜಿನೀರಿಂಗ್ ಮೆಡಿಕಲ್ ಪುಸ್ತಕಗಳು. ನಂತರ ಈ ಗುಂಪಿಗೆ ತರ್ಮೊಡಿನಮಿಕ್ಸ್, ಕ್ವಾಂಟಮ್ ಥಿಯರಿ, ಅಟಾಮಿಕ್ ಎನರ್ಜಿ ಮೊದಲಾದ ಪುಸ್ತಕ ಸೇರಿದವು. ಇಲ್ಲಿ ಇಂಗ್ಲಿಷ್ ಕತೆ ಕಾದಂಬರಿ ನನ್ನ ಆಯ್ಕೆ. ಒಂದೆರೆಡು ಸಲ ನನ್ನ ಅಭಿಲಾಷೆ ಅರಿತ ಅಂಗಡಿಯವರು ಸಾರ್ ಇದು ನೋಡಿ ಅಂತ ಒಂದು ರಾಶಿಯ ಕಡೆ ಗಮನ ಸೆಳೆಯುತ್ತಿದ್ದರು. ಆಯ್ಕೆ ಸರಾಗ ಆಗೋದು. ಅಲ್ಲಿಂದ ಎಡಕ್ಕೆ ತಿರುಗಿ ಮುಂದೆ ಬಂದರೆ ಉಪ್ಪಾರಪೇಟೆ ಪೋಲೀಸ್ ಸ್ಟೇಶನ್ ಎದುರು ರಸ್ತೆ ಮತ್ತು ಉದ್ದ ನಡೆದು ಬಲಕ್ಕೆ ತಿರುಗಿದರೆ ಇವೆರೆಡೂ ರಸ್ತೆ ಮುಂದಕ್ಕೆ ಚಿಕ್ಕಪೇಟೆ ರಸ್ತೆ ಆಗುತ್ತೆ. ಇಂತಹ ಒಂದು ಅಂಗಡೀಲಿ ೯೨ ರಲ್ಲಿ ಅಂತ ಕಾಣುತ್ತೆ. ನನ್ನ ಮೊದಲ ಕಥಾ ಸಂಕಲನ (ವೈಶಾಖ) ಬಿದ್ದಿತ್ತು. ಇದು ೧೯೯೦ ರಲ್ಲಿ ಪ್ರಕಟ ಆಗಿತ್ತು. ಅದರ ಬೆನ್ನ ಭಾಗದಲ್ಲಿ ನನ್ನ ಫೋಟೋ, ಅದರಡಿಯಲ್ಲಿ ಶ್ರೀ ಈಶ್ವರಚಂದ್ರ ಅವರ ಬ್ಲರ್ಬ್ ಬೇರೆ. ಅಂಗಡಿಯವನ ಹತ್ತಿರ ಇದೂ ಸೇರಿದಂತೆ ಮೂರು ಪುಸ್ತಕ ವ್ಯಾಪಾರ ಮಾಡಿ ಆದಷ್ಟೂ ಅವನು ನನ್ನ ಫೋಟೋ ನೋಡದೇ ಇರೋ ಹಾಗೇ ಜಾಣತನ ಉಪಯೋಗಿಸಿ ಅದನ್ನು ಕೊಂಡೆ. ಯಾವುದೋ ಪತ್ರಿಕೆಗೆ ವಿಮರ್ಶೆಯ ಕೃಪೆಗಾಗಿ ಅಂತ ಬರೆದಿದ್ದ ನನ್ನ ಬರಹ ನನಗೇ ಕಣ್ಣು ಮಿಟುಕಿಸಿತು..!
ಉಪ್ಪಾರ ಪೇಟೆ ಪೊಲೀಸ್ ಸ್ಟೇಶನ್ ಪಕ್ಕ ಒಂದು ಅಂಗಡಿ, ಅದರ ಎದುರು ಮೆಜೆಸ್ಟಿಕ್ ಟಾಕೀಸ್ ಪಕ್ಕ ಮತ್ತೊಂದು. ಮುಂದೆ ಬಂದರೆ ನರಸಿಂಹ ದೇವರ ಗುಡಿ ಮುಂದಿನ ಅರಳಿ ಕಟ್ಟೆ ಮೇಲೆ ಒಂದು ಅಂಗಡಿ. ದೇವಸ್ಥಾನದ ಪಕ್ಕ ನಡೆಯಿರಿ ಅಲ್ಲೊಂದು ಅಂಗಡಿ. ಅದೇ ಗಲ್ಲಿ ಹಾದು ಮುಂದೆ ಬಂದರೆ ಭಾರತಿ ಹೋಟೆಲ್ ಅಂತ ಇತ್ತು. ಅದರ ಹಿಂಭಾಗ ನನ್ನ ಗೆಳೆಯ ನಾಗರಾಜನ ಮನೆ. ಭಾರತಿ ಹೋಟೆಲ್ ಮುಂದಕ್ಕೆ ಬಂದರೆ ಅಲ್ಲೂ ಒಂದು ಅಂಗಡಿ. ಅದು ದಾಟಿ ಬನ್ನಿ. ಮೂಲೆಯಲ್ಲಿ ಮುಚ್ಚಿರುವ ಬಟ್ಟೆ ಅಂಗಡಿ ಮುಂದೆ ಮತ್ತೊಂದು ಅಂಗಡಿ. ಶ್ರೀರಾಮ ಬುಕ್ ಹೌಸ್‌ನವರದ್ದು ಅಲ್ಲಿನ ಸಂಡೇ ಅಂಗಡಿ ಎಂದು ಕೇಳಿದ್ದೆ. ಇಲ್ಲಿ ನಿಮಗೆ ಸೆಲೆಕ್ಟೆಡ್ ಇಂಗ್ಲಿಷ್ ಲೇಖಕರ ಪುಸ್ತಕಗಳು. ಒಂದೇ ಏರಿಯಾದಲ್ಲಿ ನಿಮಗೆ ಅಷ್ಟೊಂದು ಅಂಗಡಿ. ಅಲ್ಲಿನ ನನ್ನ ಅನುಭವಗಳೂ ಸಹ ವಿಪುಲವಾದದ್ದು ಮತ್ತು ಈಗಲೂ ಸಹ ಖುಷಿ ಕೊಡುತ್ತೆ. ಶಿವರಾಮ ಕಾರಂತರ ಬಾಲ ವಿಜ್ಞಾನದ ಹಾರ್ಡ್ ಬೌಂಡ್ ಮೂರನೇ ವಾಲ್ಯೂಮ್ ಒಂದು ರೂಪಾಯಿಗೆ ಕೊಂಡಿದ್ದೆ. ಸುಮಾರು ವೋಡ್ ಹೌಸ್ ಪುಸ್ತಕಗಳನ್ನು ಎರಡು ಮೂರು ರೂಪಾಯಿಗೆ, ಷರ್ಲಾಕ್ ಹೋಮ್ಸ್ ಮೂರು ರೂಪಾಯಿಗೆ, ರೀಡರ್ಸ್ ಡೈಜೆಸ್ಟ್ ಹಲವಾರು ವಾರ್ಷಿಕ ವಿಶೇಷ ಪುಸ್ತಕ ಎರಡು ರೂಪಾಯಿಗೆ ಕೊಂಡ ನೆನಪು ಇದೆ. ಗಂಗವ್ವ ಗಂಗಾಮಾಯಿ, ಅನ್ನ, ನಿಸರ್ಗ, ಸಂಧ್ಯಾರಾಗ, ಕಾರಂತರ ಪುಸ್ತಕ.. ಹೀಗೆ ಮುಂತಾದ ಹಲವಾರು ಪುಸ್ತಕಗಳು ಹೀಗೇ ಕೊಂಡದ್ದು. ಒಂದು ಸಲ ಬೆಳಿಗ್ಗೆ ಮೆಜೆಸ್ಟಿಕ್ ಥಿಯೇಟರ್ ಮುಂದೆ ಇಟ್ಟಿದ್ದ ಅಂಗಡಿಗೆ ಬಂದೆ. ಒಂದೊಂದೂ ಎರಡು ಮೂರು ಸಾವಿರ ಪುಟಗಳ ಹಲವಾರು ಕಾನೂನು ಪುಸ್ತಕಗಳು, Constitution law commentary, Hindu law, Jurisprudence, Limitation Act, Crpc, IPC, Evidence Act, AIR reporter… ಹೀಗೆ ಹಲವಾರು ದೊಡ್ಡ ದೊಡ್ಡ ಪೈಲ್ವಾನ್ ಪುಸ್ತಕ ಜೋಡಿಸಿ ಇಟ್ಟಿದ್ದಾನೆ. ಸುಮಾರು ಉಪಯೋಗ ಆಗಿರೋವು ಕೆಲವು, ಕೆಲವು ಸುಮಾರು ಹೊಸದು. ಒಂದು ಪುಸ್ತಕ ಕೈಗೆ ತಗೊಂಡೆ. ಮೊದಲ ಪುಟ ತೆಗೆದೆ. ಯಾರೋ ನಂಜಪ್ಪ ಅನ್ನುವವರ ಹೆಸರು, ಹೈ ಕೋರ್ಟ್ ಅಡ್ವೋಕೇಟ್ ಅಂತ ಸೀಲ್ ಇತ್ತು. ಬಹುಶಃ ಅವರು ತೀರಿರಬೇಕು, ಮನೇಲಿ ಯಾರೂ ಅವರ ಕಸುಬು ಮುಂದುವರೆಸುವವರು ಇಲ್ಲಾಂತ ಕಾಣುತ್ತೆ. ಅದಕ್ಕೆ ಇಂತಹ ಒಳ್ಳೇ ಪುಸ್ತಕ ಅನಾಥವಾಗಿ ಫುಟ್‌ಪಾತ್ ಮೇಲೆ ಬಿದ್ದಿದೆ ಅನಿಸಿತು. ಬೇಕಾ ಸಾರ್.. ಅಂದ ಅಂಗಡಿಯವನು. ಹೂಂ ಬೇಕು. ಅಷ್ಟೊಂದು ದುಡ್ಡು ತಂದಿಲ್ಲ ಅಂದೆ.
ಒಂದೊಂದು ಪುಸ್ತಕ ಒಂದು ರೂಪಾಯಿ, ಎಷ್ಟು ಬೇಕೋ ತಗೊಳ್ಳಿ. ಮುಂದಿನ ವಾರ ಬಂದಾಗ ಇನ್ನೂ ಇದ್ದರೆ ತಗೋಬಹುದು… ಅಂದ. ಹತ್ತು ರೂಪಾಯಿ ಕೊಟ್ಟು ಸುಮಾರು ಇಪ್ಪತ್ತು ಕೇಜಿ ಭಾರದ ಪುಸ್ತಕ ತಂದು ಅಟ್ಟದ ಮೇಲಿಟ್ಟೆ. ಮುಂದೆ ಯಾವಾಗಲಾದರೂ ವಕೀಲಿ ವೃತ್ತಿ ಹಿಡಿದರೆ ಉಪಯೋಗ ಆಗುತ್ತೆ ಅಂತ. ವಕೀಲಿ ವೃತ್ತಿ ಹಿಡಿಯಲೇ ಇಲ್ಲ.. ನನ್ನ ಅಪೂರ್ಣ ಆಸೆಗಳಲ್ಲಿ ಇದೂ ಸಹ ಒಂದು. ಸುಮಾರು ಕನ್ನಡ ಇಂಗ್ಲಿಷ್ ಪುಸ್ತಕಗಳನ್ನು ಇಂತಹ ಅಂಗಡಿಯಿಂದ ಕೊಂಡಿದ್ದು ಮತ್ತು ಅವುಗಳಲ್ಲಿ ಹಲವು ಈಗಲೂ ನನ್ನ ಅಟ್ಟದ ಮೇಲಿವೆ. ಇದರಿಂದ ಮನೆಯಲ್ಲಿ ಸರಾಸರಿ ವಾರಕ್ಕೆ ಒಂದು ಜಗಳ ಇದ್ದೇ ಇರುತ್ತೆ, ಮನೆ ತುಂಬಾ ಕಸ ಸೇರಿ ಹೋಗಿದೆ, ವಿಲೇವಾರಿ ಮಾಡಬಾರದೇ ಅಂತ ಶುರು ಆಗುವ ಜಗಳ ಎಲ್ಲೆಲ್ಲಿಗೋ ಸುತ್ತಿ ನನ್ನ ಹಿಂದಿನ ಹಲವು ಜನ್ಮಗಳು ಜಾಲಾಡಿ ಸುತ್ತಿ ಸುಳಿದಾಡುತ್ತದೆ!
ವಿಜಯಲಕ್ಷ್ಮಿ ಥಿಯೇಟರ್ ಕಡೆ ಹೊರಳದೆ ಮುಂದಕ್ಕೆ ನಡೆದರೆ ಅದೇ ಭಾನುವಾರದ ಸಂಡೇ ಬಜಾರ್. ಅದರ ಬಗ್ಗೆ ವಿವರವಾಗಿ ಮತ್ತೊಮ್ಮೆ ಹೇಳುತ್ತೇನೆ. ಅವೆನ್ಯೂ ರೋಡಿನ ಆರಂಭದಿಂದ ಅಂದರೆ ಮೈಸೂರು ಬ್ಯಾಂಕ್ ಸರ್ಕಲ್‌ನಿಂದ ಮಾರ್ಕೆಟ್‌ವರೆಗೆ ಸುಮಾರು ಇಪ್ಪತ್ತಕ್ಕೂ ಮೀರಿ ಹಳೇ ಪುಸ್ತಕದ ಅಂಗಡಿಗಳು. ಇಲ್ಲಿ ವಿಶೇಷ ಅಂದರೆ ಕಾಲೇಜು ಪುಸ್ತಕಗಳು ರಾಶಿ ರಾಶಿ ಹರಡಿರುತ್ತಿದ್ದರು. ವಿದ್ಯಾರ್ಥಿಗಳು ಒಂದು ರೀತಿ ದುಗುಡದ ಮುಖ ಹೊತ್ತು ಪುಸ್ತಕ ಹುಡುಕುವುದನ್ನು ನೋಡಿದರೆ ಯಾರಿಗಾದರೂ ಮನಸು ಹಿಂಡಲೆಬೇಕು!
ಅವೆನ್ಯೂ ರಸ್ತೆಯಲ್ಲೇ ಒಂದು ಸೀತಾ ಫೋನ್ ಸ್ಟೋರ್ಸ್ ಎಂದೋ ಏನೋ ಒಂದು ಅಂಗಡಿ. ಅದರ ಮುಂದೆ 78RPM ನ ಗ್ರಾಮಫೋನ್ ತಟ್ಟೆಗಳು ಮಾರಾಟಕ್ಕೆ ಇರುತ್ತಿತ್ತು. ಒಂದು ತಟ್ಟೆಗೆ ಒಂದೂವರೆ ರೂಪಾಯಿ. ಇಲ್ಲೇ ನನಗೆ ಕಾಳಿಂಗ ರಾವ್, ಬೀ ಎಸ್ ರಾಜ ಐಯ್ಯಂಗಾರ್ (ಜಗದೋದ್ಧಾರನ) ಪಟ್ಟಮ್ಮಾಳ್, ಎಂ ಎಸ್ ಸುಬ್ಬುಲಕ್ಷ್ಮಿ ಇವರ ಸುಮಾರು ರೆಕಾರ್ಡ್ ಕೊಂಡಿದ್ದೆ. ನಮ್ಮ ಮನೇಲಿ hmv ಅವರ ಆಗ ತಾನೇ ಹೊಸದಾಗಿ ಬಂದಿದ್ದ ರೆಕಾರ್ಡ್ ಪ್ಲೇಯರ್ ನಮ್ಮ ಅಣ್ಣ ತಂದಿದ್ದ. ಈ ರೆಕಾರ್ಡ್ ಹಾಕಿ ಸುತ್ತಲೂ ಕೂತು ಮನೆಯವರು ಕೇಳುತ್ತಿದ್ದೆವು. ಪೀರ್ ಸಾಹೇಬರ “ಚಂದ್ರನು ಮೂಡುವನಿದೋ…” ಹಾಡು ಹೀಗೆ ನಾವು ಕೇಳಿದ್ದು. “ಹಾ ಪ್ರಿಯಾ ಹಾನಿ ಹೊಂದೀದೆಯಾ…” ಅಂತ ಒಂದು ಹಾಡು. ಇದರ ಮಧ್ಯೆ ಒಂದು ಗಂಡಸಿನ ದನಿಯ ಹಾಡು. ಒಂದೋ ಎರಡೋ ಚರಣದ ನಂತರ ಗಂಡು ದನಿ “ಪ್ರಿಯೇ ಸ್ವಲ್ಪ ತಾಳು ಹೋಗಬೇಡ…..” ಅನ್ನುತ್ತದೆ. ಒಮ್ಮೆ ನಮ್ಮ ಮನೆಗೆ ಬಂದಿದ್ದ ಗೆಳೆಯರೊಬ್ಬರು(ಡಾ. ವೆಂಕಟ ಗಿರಿಯಪ್ಪ, ಶಿವಮೊಗ್ಗ ಅವರು) ಸ್ವಲ್ಪ ತಾಳು ಹೋಗಬೇಡ ಅಂದ ಕೂಡಲೇ ಇರು ಪೂರ್ತಿ ಹಾಡು ಕೇಳಿಕೊಂಡು ಹೋಗು ಅಂದರು! ಅಂದಿನಿಂದ ಪ್ರಿಯೇ ಸ್ವಲ್ಪ ತಾಳು ಅಂತ ಬರುತ್ತಿದ್ದ ಹಾಗೇ ನಾವುಗಳು ಇರು ಪೂರ್ತಿ ಹಾಡು ಕೇಳಿಕೊಂಡು ಹೋಗು ಅನ್ನುತ್ತಿದ್ದೆವು! ಈ ತಟ್ಟೆಗಳು, ಗ್ರಾಮಫೋನ್ ಎಲ್ಲಾ ಹೇಗೆ ಕಳೆದುಹೋಯಿತು ಅನ್ನೋದು ಇನ್ನೊಂದು ಕತೆ.
ಎಂ ಜಿ ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಸಹ ಹಳೇ ಪುಸ್ತಕದ ಅಂಗಡಿಗಳು ಇದ್ದವು. ಬಹುತೇಕ ಅಲ್ಲಿ ಇಂಗ್ಲಿಷ್ ಪುಸ್ತಕಗಳು! ನನ್ನ ಸಹೋದ್ಯೋಗಿ ಒಬ್ಬರು ಮಣಿ ಅಂತ. ಊರೆಲ್ಲಾ ಸುತ್ತುವುದು, ಎಲ್ಲಿ ಏನು ಕಡಿಮೆ ಬೆಲೆಗೆ ಸಿಗುತ್ತೆ, ಗೆಳೆಯರಲ್ಲಿ ಯಾರಿಗೆ ಏನು ಉಪಯೋಗ ಆಗುತ್ತೆ ಅಂತ ಯೋಚಿಸಿಕೊಂಡು ತರೋರು. ಶೂ ರಿಸೋಲಿಗೆ ಅಂಗಡಿಯವರು ಇನ್ನೂರು ರೂಪಾಯಿ ತಗೊಬೇಕಾದರೆ ಹತ್ತು ರೂಪಾಯಿಗೆ ರಿಸೋಲ್ ಅಟ್ಟೆ ಸಿಗುತ್ತೆ ಅಂತ ಅದನ್ನ ತಂದು ಎಲ್ಲರಿಗೂ ಕೊಟ್ಟವನು ಇವನು. ಅದಕ್ಕೆ ರಬ್ಬರ್ ಅಂಟು ಅಂಟಿಸಿ ನಾವೇ ರಿಸೋಲ್ ಮಾಡ್ಕೋತಾ ಇದ್ದೆವು. ಅಂತಹ ಮಣಿ ಒಂದು ದಿವಸ ಕೈಯಲ್ಲಿ ಒಂದು ಬಿಳಿಯ ಬ್ಯಾಗು ಅದರಲ್ಲಿ ತೂಕದ್ದು ಏನೋ ತಂದ. ಅದೇನು ಅಂತ ವಿಚಾರಿಸೋ ಅಷ್ಟರಲ್ಲಿ ಯಾರೋ ಬಂದರು, ಅವರ ಜತೆ ಹೋದೆ. ಇವನ ಬ್ಯಾಗಿನಲ್ಲಿ ರೋಜೆಟ್‌ನ ಥೆಸಾರಸ್ ಇತ್ತು ಮತ್ತು ಅದನ್ನು ಮಣಿ ಐವತ್ತು ಪೈಸೆಗೆ ಕೊಂಡಿದ್ದ! ಅದನ್ನು ಮಣಿವಣ್ಣನ್ ಕೊಂಡರು ಅಂತ ಗೊತ್ತಾಯ್ತು. ಮಣಿವಣ್ಣನ್ ನಮ್ಮ AITUC ಲೀಡರ್ ಮತ್ತು ಅವನಿಗೂ ಪುಸ್ತಕ ಶೇಖರಿಸುವ, ಓದುವ ಅಭ್ಯಾಸ. ನನಗೆ ಸಿಕ್ಕಬೇಕಿದ್ದು ಅವನಿಗೆ ಹೊಯ್ತೇ ಅನ್ನೋ ಸಂಕಟ ಆಯ್ತು. ಅದನ್ನ ಹೇಳೂ ಬಿಟ್ಟೆ..
(ಮುಂದುವರೆಯುವುದು…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
Gopalakrishna avare,
Thank you for these precious memories. I can relate to many of these book stores on Avenue Road, in Majestic, Gandhinagar, on MG Road… Last time when I went, Murthy sir’s son was running Select Bookhouse. Subhash Book store is still there on Avenue road. Please keep writing these old Bangalore stories, loving them!
Vinathe Sharma
ಮೇಡಂ,ಧನ್ಯವಾದಗಳು.
ಹಳೆಯ ನೆನುಪುಗಳು ಮರುಕಳಿಸಿ ಮನಸ್ಸಿಗೆ ಉಲ್ಲಾಸವಾಯಿತು. ತುಂಬಾ ವಂದನೆಗಳು.
ಪ್ರಸನ್ನ ,ಧನ್ಯವಾದಗಳು. ನಿಮ್ಮ ಜತೆ ಬೆಂಗಳೂರಿನ ಉದ್ದಗಲಕ್ಕೂ ಸುತ್ತಿದ್ದು ಇನ್ನೂ ಹಸಿರು ಹಸಿರು….