ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವಂತೆ ಇಂತಹ ಎಷ್ಟು ಸಾಹಿತ್ಯ ರಚನೆಯಾದರೂ ಹೆಣ್ಣಿನ ಕುರಿತಾದ ಸಮಾಜದ ಮನಸ್ಥಿತಿ ಬದಲಾಯಿಸಲು ಆಗುತ್ತಿಲ್ಲ. ಎಷ್ಟೋ ಹೆಣ್ಣೆತ್ತ ತಂದೆ – ತಾಯಿಯರಿಗೆ ಹೆಣ್ಣನ್ನು ಹೆತ್ತಿದ್ದೇವೆ ಎನ್ನುವ ನೋವಿಗಿಂತಲೂ ಹೆಣ್ಣೆತ್ತವರನ್ನು ಸಮಾಧಾನ ಮಾಡುವ ಸೋಗಿನಲ್ಲಿ ಆಡುವ ಮಾತುಗಳ ನೋವೇ ಹೆಚ್ಚೆಂಬುದನ್ನು ದೇಸಾಯಿಯವರು ಬಹಳ ವಿಶೇಷವಾಗಿ ಹಾಸ್ಯ ಮಿಶ್ರಿತಗೊಳಿಸಿ ಹೇಳಿದ್ದಾರೆ.
ಗುಂಡುರಾವ್ ದೇಸಾಯಿ ಲಲಿತ ಪ್ರಬಂಧಗಳ ಕೃತಿ “ಪೆಣ್ಣೆತ್ತ ಖುಷಿಗೆ.. ಕುರಿತು ಡಾ. ತಿಮ್ಮಯ್ಯ ಶೆಟ್ಟಿ ಇಲ್ಲೂರು ಬರಹ

ಜೀವನದಲ್ಲಿ ನಗುವು ಎಲ್ಲಾ ಆಭರಣಕ್ಕಿಂತ ಮಿಗಿಲಾಗಿದದ್ದು. ನಮ್ಮ ಮುಖದ ಮೇಲಿನ ಒಂದು ಮುಗುಳ್ನಗೆ ನೂರಾರು ಜನರ ಜೀವನಕ್ಕೆ ಪ್ರೇರಣೆಯಾಗುತ್ತದೆ. ಜೀವನದಲ್ಲಿ ಏನೆಲ್ಲ ದುಃಖ ದುಮ್ಮಾನಗಳಿದ್ದರೂ ಅವೆಲ್ಲವನ್ನು ನೇಪಥ್ಯಕ್ಕೆ ಸರಿಸಿ ತಾವು ನಗುತ ಇನ್ನೊಬ್ಬರ ನೋವನ್ನು ಮರೆಸಿ ಎಲ್ಲರೊಂದಿಗೆ ನಗುತ ಬಾಳುವುದು ವಿಶೇಷವಾದುದು. ಹೀಗೆ ಜೀವನದಲ್ಲಿ ನಗುವ, ನಗಿಸುವ ವರವನ್ನು ದೇವರಲ್ಲಿ ಕೇಳಿಕೊಳ್ಳಬೇಕು ಎನ್ನುವಂತೆ ಹೆಣ್ಣೆಂದರೆ ಮಾರು ದೂರ ಹಾರುವ ಮನಸ್ಥಿತಿಯಿರುವ ಸಮಾಜದಲ್ಲಿ ಹೆಣ್ಣೆತ್ತವರನ್ನು ಸಮಾಧಾನಪಡಿಸಲೆಂದು ಎಲ್ಲರೂ ಆಡುವ ಮಾತುಗಳು ಎದೆಯೊಳಗೆ ಈಟಿ ಚುಚ್ಚಿದಂತೆ ನೋವುಗಳನ್ನೇ ಕೊಡುತ್ತವೆ. ಅಂತಹ ವಾತಾವರಣದ ಪ್ರಸಂಗವನ್ನು ಹಾಸ್ಯವಾಗಿ ಬಳಸಿಕೊಂಡು ‘ಪೆಣ್ಣೆತ್ತ ಖುಷಿಗೆ’ ಎಂಬ ಲಲಿತ ಪ್ರಬಂಧಗಳ ಸಂಕಲನ ಹೊರತಂದಿರುವ ಹಿರಿಯರಾದ ಗುಂಡುರಾವ್ ದೇಸಾಯಿಯವರ ಕೃತಿಯನ್ನು ಓದಿದ ಮೇಲೆ ನಾನೂ ಪೆಣ್ಣೆತ್ತ ಖುಷಿಯಲ್ಲಿ ನಾಲ್ಕು ಮಾತುಗಳನ್ನು ಬರೆಯುವ ಆಸೆಯಾಯ್ತು.

(ಗುಂಡುರಾವ್ ದೇಸಾಯಿ)

ನಮ್ಮ ಭಾಗದ ಹಿರಿಯರು, ಮಕ್ಕಳ ಸಾಹಿತ್ಯದಲ್ಲಿ ಗಂಭೀರವಾಗಿ ತೊಡಗಿಸಿಕೊಂಡು ಮಕ್ಕಳ ಕಾವ್ಯ, ಕಥೆ ಮತ್ತು ಕಾದಂಬರಿಗಳನ್ನು ಪ್ರಕಟಿಸಿದ ಗುಂಡುರಾವ್ ದೇಸಾಯಿಯವರು ಲಲಿತ ಪ್ರಬಂಧಗಳನ್ನು ಬರೆಯುವಲ್ಲಿ ನಿಷ್ಣಾತರು. ‘ಮಕ್ಕಳೇನು ಸಣ್ಣವರಲ್ಲ’ ಎಂಬ ಕಥಾ ಸಂಕಲನದಲ್ಲಿ ತಾವೇ ಹೇಳಿಕೊಂಡಿರುವ ಹಾಗೇ ದಿನ ನಿತ್ಯದ ಜೀವನದ ಅನುಭವಗಳಲ್ಲಿ ಹಾಸ್ಯ ಮಿಶ್ರಿತಗೊಳಿಸಿ ಉತ್ತಮವಾಗಿ ಲಲಿತ ಪ್ರಬಂಧಗಳನ್ನು ಬರೆಯುವಂತೆ ಮಕ್ಕಳಿಗೆ ಏಕೆ ಬರೆಯಬಾರದು ಎಂದು ಹಿರಿಯರೊಬ್ಬರು ಕೇಳಿದ ಮಾತಿನಿಂದ ಮಕ್ಕಳ ಸಾಹಿತ್ಯದೆಡೆಗೆ ಆಸಕ್ತಿ ಬೆಳೆಸಿಕೊಂಡವರು. ಆದರೆ ಅವರ ಸಾಹಿತ್ಯ ಕೃಷಿಯ ಮೂಲ ಲಲಿತ ಪ್ರಬಂಧಗಳೇ ಆಗಿವೆ. ಇವರ ಪ್ರಬಂಧಗಳನ್ನು ಓದುತ್ತಿರಬೇಕಾದರೆ ಮನಸ್ಸು ನಮಗರಿಯದೆ ನಕ್ಕು ಉಲ್ಲಾಸಗೊಳ್ಳುತ್ತಾ ಓದಲು ಪ್ರೇರಣೆ ನೀಡುತ್ತದೆ. ನಾನೊಬ್ಬ ಪೆಣ್ಣೆತ್ತ ತಂದೆಯಾಗಿ ಬಹಳ ಕುತೂಹಲದಿಂದ ಈ ಕೃತಿಯನ್ನ ಓದಿದೆ. ಓದಿ ಅನುಭವಿಸಿದ ಖುಷಿಯನ್ನಷ್ಟೇ ಇಲ್ಲಿ ಹಂಚಿಕೊಳ್ಳಬಲ್ಲೆ.

ಮುನ್ನುಡಿಯಲ್ಲಿ ಪ್ರಕಾಶ ಅಡೂರವರು ಹೇಳಿದ ಹಾಗೆ ಚಾತುರ್ಮಾಸ ದಾನದ ಪ್ರಹಸನದಿಂದ ಆರಂಭವಾಗುವ ಈ ಕೃತಿಯಲ್ಲಿ ಡ್ರೆಸ್ ಮತ್ತು ಹೇರ್ ಡ್ರೆಸ್ ಎಂಬ ಪ್ರಹಸನದವರೆಗೆ ಹದಿನಾಲ್ಕು ಪ್ರಬಂಧಗಳನ್ನು ತನ್ನ ಮಡಿಲಲ್ಲಿ ಇರಿಸಿಕೊಂಡಿದೆ. ಚಾತುರ್ಮಾಸ ದಾನದ ಪ್ರಹಸನದಲ್ಲಿ ಮನೆಯಲ್ಲಿನ ಗಂಡಸರು ವೈಚಾರಿಕತೆಯಿಂದ ಸಂಪ್ರದಾಯಗಳನ್ನು ಮುರಿಯಲು ಹೋದರೆ ಮನೆಯಲ್ಲಿನ ಹಿರಿಯರು ಮತ್ತು ಹೆಂಡತಿಯಾದವಳು ಇದ್ದಕ್ಕಿದ್ದಂತೆ ಪರಕಾಯ ಪ್ರವೇಶ ಮಾಡಿದವರಂತೆ ಮಾತಿನ ಬಾಣಗಳಿಂದ ನಮ್ಮ ಮೇಲೆ ದಾಳಿ ಮಾಡುತ್ತಾರೆ. ಹಾಗಾಗಿ ದೇಸಾಯಿಯವರು ಎರಡು ವರ್ಷಗಳಿಂದ ಚಾತುರ್ಮಾಸ ದಾನ ಮಾಡುವುದನ್ನು ನಿಲ್ಲಿಸಿದ್ದೇವಲ್ಲ? ಎಂದಾಗ ಹೆಂಡತಿ ಡೆಲಿವರಿಯಾಗಿತ್ತು, ಮಗ ಇನ್ನು ಸಣ್ಣವನಿದ್ದ. ಅದಕ್ಕೆ ಎರಡು ವರ್ಷ ಮಾಡಿಲ್ಲ, ಈ ವರ್ಷ ಮಾಡೋಣವೆಂದಾಗ ಗಂಡ ಮಗ ಇನ್ನು ಈಗ್ಲೂ ಸಣ್ಣವನಿದ್ದಾನೆ, ಅವನೇನು ದುಡಿಯುವ ವಯಸ್ಸಿಗೆ ಬಂದಾನೆಯೇ? ಎಂದು ಹಾಸ್ಯವಾಗಿ ಹೇಳುತ್ತಲೇ ನಾಡೆಲ್ಲ ನೋಡಿರೆಂದು ಪೂಜಿಸುವ ಫಲ ಯಾರಿಗೆ? ಎಂಬ ಶರಣರ ಪ್ರಶ್ನೆಯಂತೆ ಮನೆಯಲ್ಲಿ ಪೂಜಾ ಮತ್ತು ಗ್ರಹಣದ ವೇಳೆಯಲ್ಲಿನ ಮಡಿಯ ಬಗ್ಗೆ “ಅವ್ವ ದೇವರಿಗೆ ಯಾವತ್ತು ಗ್ರಹಣ ಹಿಡಿಯುವುದಿಲ್ಲ ಮನುಷ್ಯರಿಗೆ ಹಿಡಿಯೋದು” ಎನ್ನುವ ಮಾತು ನಮ್ಮನ್ನು ಚಿಂತನೆಗೆ ಹಚ್ಚುತ್ತದೆ. ಮಡಿ ಮಡಿ ಮಡಿಯೆಂದು ಅಡಿಗಡಿಗೆ ಹಾರುವೆ ಮಡಿ ಮಾಡುವ ಬಗೆ ಬೇರುಂಟೆ ಎಂಬ ಪುರಂದರದಾಸರ ಮಾತಿನಂತೆ ಆ ಮೂರು ದಿನಗಳು ಪ್ರಹಸನದಲ್ಲಿ ಹೆಣ್ಣಿನ ಋತು ಚಕ್ರದ ಸಮಯದಲ್ಲಿ ಅವಳನ್ನು ನಡೆಸಿಕೊಳ್ಳುವ, ಲೋಕದ ಹೆಣ್ಮಕ್ಕಳ ಶೋಷಣೆಯನ್ನು ತೆರೆದಿಟ್ಟಿದ್ದಾರೆ. ಎಲ್ಲರ ಮನೆಯಲ್ಲಿ ಹೀಗೆ ಇಲ್ಲದಿರಬಹುದು, ಆದರೆ ಇಲ್ಲಿ ಲೇಖಕರು ಸಾಮಾನ್ಯವಾಗಿ ಹೇಳಿದ್ದಾರೆ. ವಿದ್ಯಾವಂತರು ಮತ್ತು ಪ್ರಜ್ಞಾವಂತರು ತಮ್ಮ ಮನೆಯಲ್ಲಿ ಇದನ್ನು ಧಿಕ್ಕರಿಸಿದರೂ ಮನೆಯಲ್ಲಿನ ಹಿರಿಯರು ಮತ್ತು ಸ್ವತಃ ಹೆಣ್ಣು ತಾನೂ ಕೂಡ ವೈಚಾರಿಕತೆಯನ್ನು ಒಪ್ಪದೆ ಮೌಢ್ಯತೆಯನ್ನು ಆಚರಿಸುತ್ತಾಳೆ ಎನ್ನುವುದನ್ನು ಆ ಮೂರು ದಿನಗಳಲ್ಲಿ ಗಂಡಸರು ಪಡುವ ಪಾಡಿನೊಂದಿಗೆ ಹಾಸ್ಯವಾಗಿ ಹೇಳಿದ್ದಾರೆ. ಕಡ್ಡಿಯನ್ನು ಗುಡ್ಡವನ್ನಾಗಿ ಮಾಡಿ ಜನರಿಂದ ಹಣವನ್ನು ಕಿತ್ತುಕೊಳ್ಳುವ ಉಪಾಯದೊಂದಿಗೆ ವ್ಯಾಪಾರ ಕೇಂದ್ರವಾಗಿ ಬೆಳೆದು ನಿಂತಿರುವ ಆಸ್ಪತ್ರೆಗಳ ಕುರಿತು ಆಹಾ..! ಹೈಟೆಕ್ ಆಸ್ಪತ್ರೆ ಪ್ರಹಸನದಲ್ಲಿ ಬರೆದಿದ್ದಾರೆ.

ಈ ಸಂಕಲನದ ಪ್ರಮುಖ ಪ್ರಹಸನ ಪೆಣ್ಣೆತ್ತ ಖುಷಿಗೆ. ನಿಜವಾಗಲೂ ಹೆಣ್ಣೆತ್ತವರ ಮನಸ್ಸು ಎಷ್ಟೇ ನಿಶ್ಚಲವಾಗಿದ್ದರೂ ಸಮಾಜ ಅದನ್ನು ಚಂಚಲಗೊಳಿಸುತ್ತದೆ. ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ ಸ್ತ್ರೀ ಎಂದರೆ ಅಷ್ಟೇ ಸಾಕೆ ಎನ್ನುವಂತೆ ಇಂತಹ ಎಷ್ಟು ಸಾಹಿತ್ಯ ರಚನೆಯಾದರೂ ಹೆಣ್ಣಿನ ಕುರಿತಾದ ಸಮಾಜದ ಮನಸ್ಥಿತಿ ಬದಲಾಯಿಸಲು ಆಗುತ್ತಿಲ್ಲ. ಎಷ್ಟೋ ಹೆಣ್ಣೆತ್ತ ತಂದೆ – ತಾಯಿಯರಿಗೆ ಹೆಣ್ಣನ್ನು ಹೆತ್ತಿದ್ದೇವೆ ಎನ್ನುವ ನೋವಿಗಿಂತಲೂ ಹೆಣ್ಣೆತ್ತವರನ್ನು ಸಮಾಧಾನ ಮಾಡುವ ಸೋಗಿನಲ್ಲಿ ಆಡುವ ಮಾತುಗಳ ನೋವೇ ಹೆಚ್ಚೆಂಬುದನ್ನು ದೇಸಾಯಿಯವರು ಬಹಳ ವಿಶೇಷವಾಗಿ ಹಾಸ್ಯ ಮಿಶ್ರಿತಗೊಳಿಸಿ ಹೇಳಿದ್ದಾರೆ. ಇತ್ತೀಚಿನ ಜನಗಣತಿಯ ಲಿಂಗಾನುಪಾತದ ಅಂಕಿ ಅಂಶಗಳನ್ನು ಗಮನಿಸಿದಾಗ ಹೆಣ್ಣಿನ ಸಂಖ್ಯೆ ಕಡಿಮೆ ಇರುವುದನ್ನು ಗೊತ್ತಿರುವಾಗಲೂ ಹೆಣ್ಣಿನ ಬಗೆಗಿನ ಸಮಾಜದ ಮನಸ್ಥಿತಿ ಬದಲಾಗದಿರುವುದು ವಿಪರ್ಯಾಸವೇ ಸರಿ. ಒಂದು ಕಾಲದ ಮದುವೆಯಲ್ಲಿ ಹೆಚ್.ಎಮ್.ಟಿ. ವಾಚ್ ಕೊಟ್ಟಿಲ್ಲಂದ್ರೆ ತಾಳಿನೇ ಕಟ್ಟಂಗಿಲ್ಲ ಎನ್ನುವಷ್ಟರ ಮಟ್ಟಿಗೆ ಬೇಡಿಕೆಯಿದ್ದಂತಹ ಹೆಚ್.ಎಮ್.ಟಿ. ವಾಚ್ ಮಾತ್ರವಲ್ಲದೆ ಅದರೊಂದಿಗೆ ಹತ್ತು ಹಲವು ವಸ್ತುಗಳ ಮೇಲೆ ದಾಳಿ ಮಾಡಿ ಅವೆಲ್ಲವುಗಳನ್ನು ಅವಸಾನಗೊಳಿಸಿ ಮನುಷ್ಯನ ಮನಸ್ಸಿನ ಮೇಲೆಯೂ ದಾಳಿ ಮಾಡಿ ಮನುಷ್ಯನನ್ನು ತನ್ನ ದಾಸನನ್ನಾಗಿ ಮಾಡಿಕೊಂಡಿದೆ ಮೊಬೈಲ್. ಹಾಗಂತ ನಾವು ಅದರ ದಾಸರಾಗಬೇಕೆಂದೇನಿಲ್ಲ. ಅದನ್ನು ಒಳ್ಳೆಯ ರೀತಿಯಲ್ಲಿ ಉಪಯೋಗ ಮಾಡಿಕೊಂಡರೆ ಸಮಾಜ ಉಪಯೋಗಿಯಾಗುವುದೆಂದು ಮೊಬೈಲೆಂಬ ಮರ್ಕಟ ಎಂಬ ಲೇಖನದಲ್ಲಿ ಬರೆದಿದ್ದಾರೆ.

ಹೆಣ್ಣನ್ನು ಚಂಚಲೆ ಎನ್ನುತ್ತಾರೆ, ತಮ್ಮಲ್ಲಿ ಬೆಟ್ಟದಷ್ಟು ಆಸ್ತಿ, ಕುಬೇರನಂತಹ ಶ್ರೀಮಂತಿಕೆಯಿದ್ದರೂ ಇನ್ನೊಂದು ಹೆಣ್ಣು ಹಾಕಿರುವ ಆಭರಣಗಳನ್ನು ನೋಡಿ ಅಂತಹದ್ದೆ ಆಭರಣ ತೆಗೆದುಕೊಳ್ಳುವ ಬಯಕೆ. ಇನ್ನು ಮಧ್ಯಮ ವರ್ಗದ ಹೆಣ್ಣಂತು ಪಕ್ಕದ ಮನೆಯವರು ಅದು ತಂದ್ರು, ಹಿಂದಿನ ಮನೆಯವರು ಇದು ತಂದ್ರು ಮತ್ತು ಮುಂದಿನ ಮನೆಯವಳ ಕೊರಳ ನೆಕ್ಲೇಸ್ ಹೀಗೆ ಎಂಬ ನೂರಾರು ವಿಚಾರ ಮಾಡುವ ಹೆಣ್ಣಿನ ಮನಸ್ಸಿನ ಅಂತರಂಗವನ್ನು ಬನ್ನಿ…. ಅರಿಷಿಣ….. ಕುಂಕುಮಕ ಎನ್ನುವ ಪ್ರಹಸನದಲ್ಲಿ ವಿಶೇಷವಾಗಿ ನಿರೂಪಿಸಿದ್ದಾರೆ. ಹೀಗೆ ಎಲ್ಲ ಪ್ರಹಸನಗಳು ಒಂದೊಕ್ಕೊಂದು ಭಿನ್ನವಾಗಿದ್ದು ವಿಶೇಷತೆಯಿಂದ ಕೂಡಿವೆ. ಓದುಗರ ಮನಸ್ಸನ್ನು ಉಲ್ಲಾಸಗೊಳಿಸುತ್ತವೆ. ತುಂಬಾ ಕೌತುಕ ಮತ್ತು ಆನಂದದಿಂದ ಈ ಕೃತಿಯನ್ನು ಓದಿದ ಖುಷಿಯಲ್ಲಿ ಸ್ವಲ್ಪ ಮಾತ್ರ ತಮ್ಮೊಂದಿಗೆ ಹಂಚಿಕೊಂಡು ನೀವು ನಕ್ಕು ಖುಷಿಪಡುವದನ್ನು ನಿಮ್ಮ ಓದಿನ ಹಸಿವಿಗೆ ಬಿಟ್ಟಿದ್ದೇನೆ.

(ಕೃತಿ: ಪೆಣ್ಣೆತ್ತ ಖುಷಿಗೆ… (ಲಲಿತ ಪ್ರಬಂಧಗಳ ಸಂಕಲನ 2023), ಲೇಖಕರು: ಗುಂಡುರಾವ್ ದೇಸಾಯಿ, ಪ್ರಕಾಶಕರು : ಶ್ರೀ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ ಕಲಬುರಗಿ, ಪುಟಗಳು: 88, ಬೆಲೆ: ₹ 85/-)