‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ. ದುರ್ಗುಣಗಳಿಗೆ ಈಡಾದರೆ ಸಿದ್ಧಿಯಾದ ಮಂತ್ರಾಸ್ತ್ರಗಳೂ ಪ್ರಯೋಜನಕ್ಕೆ ಬರುವುದಿಲ್ಲ ಮೊದಲಾದ ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಅರ್ಜುನನ ಚಾಪವಿದ್ಯಾ ಚಾತುರ್ಯದ ಸಮಯದಲ್ಲಿ ಕರ್ಣ ಅರ್ಜುನನ ವಿರುದ್ಧ ಹೋರಾಡಲು ನಿರ್ಧರಿಸಿದಾಗ ಜನರಿಗೆ ಅವನ ಬೆಂಬಲ ದೊರಕುತ್ತದೆ. ವ್ಯವಸ್ಥೆಯನ್ನು ಪ್ರಶ್ನಿಸಹೊರಟರೆ ಸಮಾಜದ ಸಹಕಾರ ದೊರೆಯುತ್ತದೆ ಎಂಬ ಅರಿವು ಕರ್ಣನಿಗೆ ದೊರಕುತ್ತದೆ.
ರಾಧಾಕೃಷ್ಣ ಕಲ್ಚಾರ್ ಬರೆದ “ಕವಚ” ಕಾದಂಬರಿಯ ಕುರಿತು ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರಹ

ಪ್ರಖ್ಯಾತ ತಾಳಮದ್ದಲೆ ಅರ್ಥಧಾರಿಗಳಾದ ಶ್ರೀಯುತ ರಾಧಾಕೃಷ್ಣ ಕಲ್ಚಾರ್ ಅವರಿಂದ ರಚಿತವಾಗಿರುವ ಕಾದಂಬರಿ ‘ಕವಚ’. ಕರ್ಣನ ಶೈಶವ ಹಂತದ ಚಿತ್ರಣದ ಮೂಲಕ ಆರಂಭಗೊಳ್ಳುವ ಕಾದಂಬರಿ ಕುರುಕ್ಷೇತ್ರ ಯುದ್ಧದಲ್ಲಿ ಕರ್ಣನ ಪರ್ಯಾವಸಾನದ ಚಿತ್ರಣದೊಂದಿಗೆ ಕೊನೆಗೊಳ್ಳುತ್ತದೆ. ಹುಟ್ಟು- ಬದುಕು- ಸಾವು ಈ ಬಗೆಯ ಜೀವನಾವರ್ತನಗಳನ್ನು ಆಧರಿಸಿಕೊಂಡ ಕಾದಂಬರಿ ಆತ್ಮಕಥನಾತ್ಮಕ ಮಾದರಿಯನ್ನು ಅನುಸರಿಸಿದೆ. ಬದುಕಿನ ಆದಿಬಿಂದುವಿನಿಂದ ಅಂತ್ಯಬಿಂದುವಿನ ಕಡೆಗಿನ ಸಂಚಲನೆ ಇಲ್ಲಿದೆ. ಈ ಸಂದರ್ಭದಲ್ಲಿ ಅಡಿಗಡಿಗೆ ಎದುರಾಗುವ ಅನೇಕಾನೇಕ ಸಂಗತಿಗಳು ಕರ್ಣನ ಅಂತರಂಗ ಬಹಿರಂಗಗೊಳ್ಳುವುದಕ್ಕೆ ಕಾರಣವಾಗುತ್ತವೆ. ಈ ಮೂಲಕ ಕರ್ಣನ ಒಟ್ಟು ವ್ಯಕ್ತಿತ್ವದ ಪರಿಶೀಲನೆಗೆ ಕಾದಂಬರಿ ಅವಕಾಶ ಮಾಡಿಕೊಟ್ಟಿದೆ. ಇಲ್ಲಿನ ಕರ್ಣ ಆತ್ಮವಿಮರ್ಶೆ ನಡೆಸಿಕೊಳ್ಳುತ್ತಲೇ, ತನ್ನ ಬದುಕನ್ನು ರೂಪಿಸಿದ ಸಮಾಜವನ್ನೂ ವಿಮರ್ಶೆಗೆ ಈಡುಮಾಡುತ್ತಾನೆ. ಇದರಿಂದ ಸಾಮಾಜಿಕ ವಿಮರ್ಶೆಯೂ ಸಾಕಾರಗೊಂಡಿದೆ. ಕರ್ಣನಲ್ಲಿರುವ ತುಮುಲಗಳು, ಗೊಂದಲಗಳು ಪ್ರಸ್ತುತ ಕಾಲಘಟ್ಟದ ವ್ಯಕ್ತಿಗಳಲ್ಲಿಯೂ ಇದೆ. ಇದರಿಂದಾಗಿ ಕಾದಂಬರಿಯಲ್ಲಿ ಕರ್ಣನನ್ನು ಕೇಂದ್ರವಾಗಿಟ್ಟುಕೊಂಡು ನಿರೂಪಿಸಲ್ಪಟ್ಟ ವಿಚಾರಗಳು ಕಾಲದ ನಿರ್ಬಂಧವನ್ನು ಕಳೆದುಕೊಳ್ಳುತ್ತವೆ; ವರ್ತಮಾನಕ್ಕೆ ಅನ್ವಯಿಸಲ್ಪಡುತ್ತವೆ.

(ರಾಧಾಕೃಷ್ಣ ಕಲ್ಚಾರ್)

ಕರ್ಣನಲ್ಲಿದ್ದ ಧನಾತ್ಮಕತೆ ಮತ್ತು ಋಣಾತ್ಮಕತೆ ಎರಡನ್ನೂ ಕಾದಂಬರಿ ಗುರುತಿಸಿಕೊಂಡಿದೆ. ಈ ನೆಲೆಗಟ್ಟಿನಲ್ಲಿ ಕಾದಂಬರಿಯನ್ನು ಗಮನಿಸಿಕೊಂಡಾಗ, ಮಹಾಭಾರತ ಮತ್ತು ಪಂಪಭಾರತಗಳಲ್ಲಿ ಅಭಿವ್ಯಕ್ತಿಗೊಂಡ ಕರ್ಣನ ವ್ಯಕ್ತಿತ್ವವನ್ನು ಎರಕ ಹೊಯ್ದ ರೀತಿಯಲ್ಲಿ ಈ ಕಾದಂಬರಿಯ ಕರ್ಣ ಮೂಡಿಬಂದಿದ್ದಾನೆ. ಅವನ ನಕಾರಾತ್ಮಕತೆ ಕಾದಂಬರಿಯಲ್ಲಿ ವ್ಯಕ್ತವಾದ ರೀತಿಯನ್ನು ಗಮನಿಸಿಕೊಳ್ಳಬಹುದು. ಭೀಮನನ್ನು ಕೊಲ್ಲಿಸುವ ಪ್ರಯತ್ನವನ್ನು ದುರ್ಯೋಧನ ನಡೆಸುತ್ತಿರುವುದು ಕರ್ಣನ ಗಮನಕ್ಕೆ ಬಂದಿರುತ್ತದೆ. ಆದರೂ ಹಿರಿಯರಿಗೆ ತಿಳಿಸದೆಯೇ ಸುಮ್ಮನಿರುತ್ತಾನೆ. ದ್ರುಪದನನ್ನು ಅರ್ಜುನ ಬಂಧಿಸಿದ ಸಂದರ್ಭದಲ್ಲಿ ತನ್ನ ಶತ್ರು ತನಗಿಂತ ಬಲಶಾಲಿ ಎನಿಸಿಕೊಂಡ ಎನ್ನುವ ಮಾತ್ಸರ್ಯಕ್ಕೆ ಕರ್ಣ ಒಳಗಾಗುತ್ತಾನೆ. ತನ್ನನ್ನು ತಿರಸ್ಕಾರದಿಂದ ಕಂಡವರನ್ನು ಖಂಡಿಸುವ ಬದಲು ಅವರನ್ನು ತನ್ನ ಋಣಕ್ಕೆ ಬೀಳಿಸುವ ಮನೋವಿಕೃತಿ ಕರ್ಣನಲ್ಲಿತ್ತು. ವಿಶೇಷವಾಗಿ ಬ್ರಾಹ್ಮಣರ ಮೇಲೆ ಔದಾರ್ಯದ ಹೊರೆಯನ್ನು ಹೇರುವ ಸಂದರ್ಭವನ್ನು ಅವನು ಯಾವತ್ತೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ತುಂಬಿದ ಸಭೆಯಲ್ಲಿ ಪಾಂಡವರು ಮತ್ತು ದ್ರೌಪದಿ ಅವಮಾನಕ್ಕೊಳಗಾದಾಗ ಕರ್ಣನ ಮನಸ್ಸಿನಲ್ಲಿ ಸಂತಸ ಮೂಡುತ್ತದೆ. ಪಾಂಡವರ ಜೊತೆಗೆ ದುರ್ಯೋಧನ ಸಾಮರಸ್ಯದಿಂದ ಇರಬಾರದು ಎನ್ನುವುದೇ ಕರ್ಣನ ಅಪೇಕ್ಷೆಯಾಗಿರುತ್ತದೆ. ಹಾಗೇನಾದರೂ ಸಾಮರಸ್ಯ ಸಾಧಿತವಾದರೆ ಅರ್ಜುನನ ವಿರುದ್ಧ ಸೇಡು ತೀರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವ ಸ್ವಾರ್ಥವೇ ಇದರ ಹಿನ್ನೆಲೆಯಲ್ಲಿ ಕಾರ್ಯಾಚರಿಸುತ್ತಿರುತ್ತದೆ. ಈ ಎಲ್ಲಾ ಸಂಗತಿಗಳು ಕರ್ಣನ ಕೆಡುಕಿನ ಮುಖದ ಅನಾವರಣ ಮಾಡಿವೆ. ಅರ್ಜುನನ ಕುರಿತು ದ್ವೇಷದ ಭಾವನೆ ಇದ್ದರೂ ಅದನ್ನು ಮರೆತು, ಬದುಕಿನ ಬೇರೆ ಬೇರೆ ಸಂದರ್ಭಗಳಲ್ಲಿ ಅರ್ಜುನ ನಡೆದುಕೊಂಡ ರೀತಿ ತನಗಿಂತ ಶ್ರೇಷ್ಠ ಮಟ್ಟದಲ್ಲಿದೆ ಎಂದು ಮನಸ್ಸಿನಲ್ಲಿಯೇ ಶ್ಲಾಘಿಸುವ ಮತ್ತು ಅಭಿಮನ್ಯುವಿನ ದಾರುಣ ಸಾವಿಗೆ ಮರುಗುವ ಕರ್ಣ ಋಣಾತ್ಮಕತೆಯನ್ನು ಮೀರಿನಿಂತ ಭಾವದಲ್ಲಿ ಕಾಣಿಸಿಕೊಳ್ಳುತ್ತಾನೆ.

‘ಕವಚ’ ಕಾದಂಬರಿಯು ಸಮಕಾಲೀನ ಬದುಕಿಗೆ ಅನ್ವಯವಾಗಬಲ್ಲ ಅನೇಕ ಸಂಗತಿಗಳನ್ನು ಪ್ರಸ್ತಾಪಿಸಿದೆ. ಗುರು ಪರಶುರಾಮರು ಅಸ್ತ್ರಗಳ ಪ್ರಯೋಗಕ್ಕೆ ಸಂಬಂಧಪಟ್ಟಂತೆ ಬೋಧನೆಯನ್ನು ನೀಡುವ ಸಂದರ್ಭದಲ್ಲಿ, ಆಕ್ರಮಣಗಳು ಸ್ವ-ರಕ್ಷಣೆಗಾಗಿಯೇ ಹೊರತು ಆಕ್ರಮಣಕ್ಕಲ್ಲ. ದುರ್ಗುಣಗಳಿಗೆ ಈಡಾದರೆ ಸಿದ್ಧಿಯಾದ ಮಂತ್ರಾಸ್ತ್ರಗಳೂ ಪ್ರಯೋಜನಕ್ಕೆ ಬರುವುದಿಲ್ಲ ಮೊದಲಾದ ವಿಚಾರಗಳನ್ನು ತಿಳಿಸಿಕೊಡುತ್ತಾರೆ. ಅರ್ಜುನನ ಚಾಪವಿದ್ಯಾ ಚಾತುರ್ಯದ ಸಮಯದಲ್ಲಿ ಕರ್ಣ ಅರ್ಜುನನ ವಿರುದ್ಧ ಹೋರಾಡಲು ನಿರ್ಧರಿಸಿದಾಗ ಜನರಿಗೆ ಅವನ ಬೆಂಬಲ ದೊರಕುತ್ತದೆ. ವ್ಯವಸ್ಥೆಯನ್ನು ಪ್ರಶ್ನಿಸಹೊರಟರೆ ಸಮಾಜದ ಸಹಕಾರ ದೊರೆಯುತ್ತದೆ ಎಂಬ ಅರಿವು ಕರ್ಣನಿಗೆ ದೊರಕುತ್ತದೆ. ಪಾಂಡವರು ಅರಗಿನ ಮನೆಯಲ್ಲಿ ತೀರಿಕೊಂಡರು ಎಂಬ ಸುದ್ದಿ ತಿಳಿದಾಗ ಶೂನ್ಯಭಾವ ಕರ್ಣನನ್ನು ಆವರಿಸುತ್ತದೆ. ಎದುರಾಳಿಯೇ ಇಲ್ಲದ ಮೇಲೆ ಬದುಕಿನ ಗಮ್ಯವೂ ಇಲ್ಲವಾಯಿತು ಎಂಬ ಭಾವ ಅವನನ್ನು ದುಃಖಕ್ಕೆ ಗುರಿಯಾಗಿಸುತ್ತದೆ. ಈ ಎಲ್ಲಾ ವಿಚಾರಗಳು ಪ್ರಸ್ತುತ ಕಾಲಘಟ್ಟದ ಹಲವು ಸವಾಲುಗಳಿಗೆ, ಮನುಷ್ಯ ತಲ್ಲಣಗಳಿಗೆ ಪರಿಹಾರವನ್ನು ಒದಗಿಸಿಕೊಡುವುದಕ್ಕೆ ಶಕ್ತವಾಗಿವೆ.

ಕರ್ಣನ ಮನೋಭೂಮಿಕೆಯನ್ನು ಈ ಕಾದಂಬರಿಯಲ್ಲಿ ಔಚಿತ್ಯಪೂರ್ಣವಾಗಿ ಅಭಿವ್ಯಕ್ತಿಸಲಾಗಿದೆ. ಭಾವನೆಗಳ ಏರಿಳಿತದ ಮೂಲಕ ವ್ಯಕ್ತಿತ್ವದರ್ಶನ ಮಾಡಿಸುವ ಧಾಟಿ ಇಲ್ಲಿದೆ. ಮೂಲ ಮಹಾಭಾರತ ಮತ್ತು ಪಂಪಭಾರತಗಳೆರಡರಲ್ಲೂ ಕಂಡುಬರುವ ವಿಶಿಷ್ಟ ಲಕ್ಷಣವಿದು. ಭಾವನಾಪ್ರವಾಹವನ್ನು ಸಂದರ್ಭೋಚಿತವಾಗಿ ಬಳಸಿಕೊಂಡಿರುವುದರಿಂದ ಕಾದಂಬರಿಯಲ್ಲಿನ ಕರ್ಣನ ವ್ಯಕ್ತಿತ್ವಕ್ಕೆ ಹೊಸ ಮೆರುಗು ಲಭಿಸಿದೆ. ಬಿಲ್ವಿದ್ಯೆ ಕರಗತವಾಗುವ ಮೊದಲು ಕರ್ಣನಲ್ಲಿದ್ದ ಅಮಾಯಕತೆ, ಅಸಹಾಯಕತೆ ಮತ್ತು ಅಸುರಕ್ಷತೆಯ ಭಾವ, ಬಿಲ್ವಿದ್ಯಾ ಪಾರಂಗತನಾದ ಬಳಿಕ ಅರ್ಜುನನ ಮೇಲೆ ಮೂಡುವ ಜಿದ್ದು, ಜನ್ಮರಹಸ್ಯವನ್ನು ಕೃಷ್ಣನಿಂದ ತಿಳಿದುಕೊಂಡ ಮೇಲೆ ಯುದ್ಧದ ಬಗೆಗೆ ಮೂಡುವ ನಿರಾಸಕ್ತಿ ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಲಾಗಿದೆ. ಓದಿನ ಖುಷಿಯನ್ನು ನೀಡುವುದರ ಜೊತೆಗೆ ವೈಚಾರಿಕತೆಗೆ ಒಳಗುಮಾಡುವ ನಿರೂಪಣಾ ಶೈಲಿಯನ್ನು ಕಾದಂಬರಿ ಒಳಗೊಂಡಿದೆ.

(ಕೃತಿ: ಕವಚ (ಕಾದಂಬರಿ), ಲೇಖಕರು: ರಾಧಾಕೃಷ್ಣ ಕಲ್ಚಾರ್, ಪ್ರಕಾಶಕರು: ವೀರಲೋಕ ಬುಕ್ಸ್, ಬೆಂಗಳೂರು, 7022122121, 8861212172)