ಸೇಂಟ್ ಮೇರೀಸಿನ ಅಂಗಳದಲಿ

ನನ್ನ ಹಳೆಯ ಗೆಳತಿಯರ
ನೆನಪುಗಳು ಅಷ್ಟು ಸುಲಭಕ್ಕೆ
ಮಾಸದು
ನನ್ನ ಬೈಕಿನ ಇಕ್ಕೆಲಗಳಲ್ಲಿ
ಗೀಚಿಕೊಂಡ ಅವರೆಸರುಗಳೆಲ್ಲಾ
ಇಂದಿಗೂ ಜೀವಂತ

ನನ್ನ ಒಬ್ಬಳು ಗೆಳತಿ
ಆಗಾಗ್ಗ ಹೇಳುತ್ತಿದ್ದ ಹುಸಿ ಸುಳ್ಳು
ಇಂದಿಗೂ ನೆನಪಿದೆ
ಮುಖಕ್ಕೆ ಮೀಸೆ ಚಂದ ಎಂದು
ತೆಗೆದಿದ್ದೇನೆ ಈಗ ಏನು ಅಲರ್ಜಿ
ಮುಖದ ಮೇಲೆ ಕೂದಲಿದ್ದರೆ ಎಂದು

ಆ ಗೆಳತಿಯರೇ ಹಾಗೆ
ಹುಚ್ಚೆಬ್ಬಿಸಿ ಮೆತ್ತನೆ ಮಾಯವಾದವರು
ಚಿಕ್ಕಪೇಟೆಯ ಕಾಟನ್ ಬಜಾರಿನಲಿ
ಮಗನಿಗೆ ಡೈಪರ್ ಹುಡುಕಾಡುವಾಗಲೆ
ಹಣೆ ಬಿಂದಿ ಹುಡುಕುತ್ತಾ ಎದುರಾಗುವರು

ಒಬ್ಬಳು ದುಂಡಗೆ ಒಬ್ಬಳು ಬೆಳ್ಳಗೆ
ಒಬ್ಬಳದು ದೊಡ್ಡ ಹಣೆ ಬಿಂದಿ
ಒಬ್ಬಳದು ದಾವಣಿ ಲಂಗ
ಎಲ್ಲವೂ ನೆನಪಿದೆ
ಮೀಸೆ ಕೂದಲು ಕಪ್ಪಾಗುವಾಗ
ಮರೆಯಲಾದೀತೆ ಹೇಳಿ?

ನನ್ನ ಬೈಕ್ ಸೀಟಿನಲಿ ಅವಳ ಜಾಗದಲಿ
ಈಗ ಮಗಳು ಕುಳಿತಿದ್ದಾಳೆ
ಬಾಯಿ ಬಿಡುವಂತಿಲ್ಲ ಅದು
ನನ್ನ ಹಳೆ ಗೆಳತಿಯ
ಮೀಸಲು ಸ್ಥಾನವೆಂದು

ಆ ಕಾಲದ ಗೆಳತಿಯರು
ವಿಸ್ಕಿ ಮುಟ್ಟುವುದಿಲ್ಲ
ಆಗೊಮ್ಮೆ ಈಗೊಮ್ಮೆ
ದೇವರ ಆಲಯದಲಿ ಕೈ ಮುಗಿದೊಂದು
ಪ್ರಾರ್ಥನೆ
ಪ್ರೇಮ ಫಲಿಸಲಿ ಎಂದು

ಎಂದೋ ಒಮ್ಮೆ
ಸೆಂಟ್ ಮೇರೀಸಿನ ಅಂಗಳದಲಿ
ಎಲ್ಲರೂ ಸೇರಿದಾಗ
ಅವಳಿಗೆ ತಿಳಿಯದ ಹಾಗೆ ಇವಳು
ಇವಳಿಗೆ ತಿಳಿಯದಂತೆ ಮತ್ತೊಬ್ಬಳು
ನಡುವೆ ನಾನು
ಕಿಕ್ಕರಿನ ಸದ್ದಿಗೆ ಕಿವಿ ಕೇಳದ ಹೆಳವ
ನಗುತ್ತಾಳೆ ಮೇರಿ ಮಾತೆ
ಪ್ರೇಮವೆಂದರೆ ಇಷ್ಟೇ ಏನು?