Advertisement
ಪ್ರವೀಣ್‌ ಕುಮಾರ್‌ ಜಿ. ಬರೆದ ಈ ಭಾನುವಾರದ ಕತೆ

ಪ್ರವೀಣ್‌ ಕುಮಾರ್‌ ಜಿ. ಬರೆದ ಈ ಭಾನುವಾರದ ಕತೆ

ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ.
ಪ್ರವೀಣ್‌ ಕುಮಾರ್‌ ಜಿ. ಕಥಾಸಂಕಲನ “ಬಯಲು” ಕೃತಿಯ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

-1-

“ಮಾಮೂಲಿ ಟಾಕೀಸಿಗೆ ಬಂದ್ಬುಡು… ಒಂಬತ್ತುವರೆ ಶೋ.” ಎಂದು ಫೋನ್ ಕಟ್ ಮಾಡಿ ಸೇಬು ಹಣ್ಣುಗಳಿಗೆ ಕೈ ಹಾಕಿ “ಹೆಂಗಿವು?” ಅಂದ ಬಿಳಿ ಅಂಗಿ-ನೀಲಿ ಲುಂಗಿ ತೊಟ್ಟ ಮೂವತ್ತೈದು ವರ್ಷ ವಯಸ್ಸಿನ ರಾಜಣ್ಣ. ಬಂಡಿಯವನಿಂದ ಹಣ್ಣುಗಳನ್ನು ಇಸಿದುಕೊಂಡು ‘ಮನಮೋಹಿನಿ ಕ್ಲಾಥ್ ಸೆಂಟರ್, ಬೆಂಗಳೂರ್ ರೋಡ್, ಬಳ್ಳಾರಿ.’ ಎಂದು ಬರೆಸಿಕೊಂಡ ಪ್ಲ್ಯಾಸ್ಟಿಕ್ ಕವರ್ರಿನೊಳಗೆ ಹಾಕಿಕೊಂಡು ಹೊಸಾ ಬಸ್‌ಸ್ಟ್ಯಾಂಡ್ ಸರ್ಕಲ್ಲಿನ ಕಡೆಗೆ ನಡೆದ. ನೇರಳೆ ಬಣ್ಣದ ಸೀರೆ, ಕನಕಾಂಬರ ಹೂವಿನ ಪಾಕೆಟ್ಟುಗಳು ತುಂಬಿದ ಕವರ‍್ರಿನಿಂದ ಹೊರಗೆ ಇಣುಕುತ್ತಿದ್ದವು. ಸಮಯ ರಾತ್ರಿ ಒಂಬತ್ತಾಗಿತ್ತು. ವಾಚು ನೋಡಿಕೊಂಡ ರಾಜಣ್ಣ ಟಾಕೀಸಿನ ದಾರಿ ಹಿಡಿದ.

ಇದೇ ಹೊತ್ತಿಗೆ ಇನ್ನೊಂದೆಡೆ, ಬೆಡ್‌ರೂಮಿನ ಬಲ್ಬು ಆರಿಸಿ ಮಂಚದ ಮೇಲೆ ಮಲಗಿದ್ದ ಅಜ್ಜಿಯೆಡೆಗೆ ಒಮ್ಮೆ ತಿರುಗಿ ನೋಡಿ ಹೊರಬಂದು ಸದ್ದಾಗದಂತೆ ಬಾಗಿಲನ್ನು ಮುಂದೆ ಮಾಡಿಕೊಂಡಳು, ಮೂವತ್ತರ ವಯಸ್ಸಿನ ಸುಂದರಿ ಕವಿತಾ. ಕೈಯಲ್ಲಿದ್ದ ಮೊಬೈಲಿನಲ್ಲಿ ಟೈಮನ್ನು ನೋಡಿ ‘ಒಂಬತ್ತು ಇಲ್ಲೇ ಆಗ್ಬುಡ್ತು!’ ಎಂದುಕೊಳ್ಳುತ್ತಾ ಬಡಬಡ ಚಪ್ಪಲಿಯನ್ನು ಮೆಟ್ಟಿಕೊಂಡು ಮುಂಬಾಗಿಲಿಗೆ ಬೀಗ ಹಾಕಿದಳು. ಕೀಲಿ ಕೈಯನ್ನು ಮೊಬೈಲಿನ ಜೊತೆ ಸಣ್ಣ ಪರ್ಸಿಗೆ ಹಾಕಿ ಅದನ್ನು ಜಾಕೀಟಿನೊಳಗೆ ಇಟ್ಟುಕೊಂಡು ಸಣ್ಣ ಸಣ್ಣ ಓಣಿಗಳನ್ನು ದಾಟುತ್ತಾ ಮೇನ್ ರೋಡಿನ ಕಡೆಗೆ ಹೆಜ್ಜೆಹಾಕಿದಳು.

-2-

(ಪ್ರವೀಣ್‌ ಕುಮಾರ್‌ ಜಿ.)

ಓಪನ್ ಟಾಪಿನ ದುಬಾರಿ ಜಾಗ್ವಾರ್ ಕಾರಿಗೆ ಅಂಟಿಕೊಂಡು, ಸೂಟು ಬೂಟಿನಲ್ಲಿ ಕಣ್ಣಿಗೆ ಕನ್ನಡಕ ಹಾಕಿಕೊಂಡು, ಗತ್ತಿನಲ್ಲಿ ಪೋಸು ಕೊಡುತ್ತಾ ನಿಂತಿದ್ದ ತೆಲುಗು ಸಿನಿಮಾ ಪೋಸ್ಟರಲ್ಲಿನ ಹೀರೋ. ಯಾವನೋ ಅದನ್ನೇ ನೋಡಿ ಪಕ್ಕದಲ್ಲಿರುವವನಿಗೆ “ಪಿಚ್ರ‍್ರು ಅಂಗಿ ಹರ್ಕಣಂಗ ಐತಂತಲೇ, ಬ್ಯಾಡ ಬಾ ಹಿಂದುಕ್ಕ ಹೋಗಾನ.” ಎಂದು ಹೇಳಿ ಅವನನ್ನು ವಾಪಸ್ ಕರೆದುಕೊಂಡು ಹೋದ. ಕೇಳಿಸಿಕೊಂಡು ಅಲ್ಲೇ ಇದ್ದ ರಾಜಣ್ಣ ಈಗ ಮೊದಲಿಗಿಂತಲೂ ದೊಡ್ಡದಾದ ಕಟ್ಟಿಗೆಯ ಹಿಡಿಕೆಯಿರುವ ಚೀಲವನ್ನು ಹಿಡಿದುಕೊಂಡಿದ್ದ. ಸೋಮವಾರದ ದಿನ ಟಿಕೇಟ್ ಕೌಂಟರಿನ ಎದುರು ಜನ ಕಮ್ಮಿ ಇದ್ದಿದ್ದರಿಂದ ರಾಜಣ್ಣನಿಗೆ ಸಮಾಧಾನವಾಗುತ್ತಿತ್ತು. ವಾಚು ನೋಡಿಕೊಂಡ ಒಂಬತ್ತು ಹದಿನೈದಾಗಿತ್ತು.

ಟಾಕೀಸಿಗೆ ಬರಲು ಆಟೋದವನು ಒಂದಕ್ಕೆರಡು ರೇಟು ಹೇಳಿದ್ದ. ಕವಿತಾ ಚೌಕಾಸಿ ಮಾಡದೇ ಹತ್ತಿ ಕುಳಿತು ಇಪ್ಪತ್ತನೇ ನಿಮಿಷದಲ್ಲಿ ಟಾಕೀಸಿನ ಮುಂದೆ ಇಳಿದಳು. ನಗುತ್ತಾ ಅವಳೆಡೆಗೆ ಬಂದ ರಾಜಣ್ಣ ಜೇಬಿನಿಂದ ತೆಗೆದ ನೂರರ ನೋಟೊಂದನ್ನು ಆಟೋದವನ ಕೈಗಿಟ್ಟು ಕಳುಹಿಸಿದ.

“ಯಾಕ ಲೇಟು?” ಎಂದು ಹುಸಿ ಮುನಿಸಿನಿಂದ ರಾಜಣ್ಣ ಮುಷ್ಟಿ ಬಿಗಿ ಮಾಡಿದಾಗ ಅವನ ಕೈಯಲ್ಲಿನ ಚೀಲ ಸದ್ದು ಮಾಡಿತು. ಚೀಲವನ್ನು ಕಂಡು ಖುಷಿಯಾದಳು ಕವಿತಾ. “ಬಾ” ಎನ್ನುತ್ತಾ ಗೇಟಿನೊಳಗೆ ಅವಳೊಂದಿಗೆ ಕಾಲಿಟ್ಟ ರಾಜಣ್ಣ. ಅಷ್ಟರಲ್ಲಿ ಹಿಂದಿನಿಂದ ಟಿವಿಎಸ್ ವಿಕ್ಟರ್ ಗಾಡಿಯೊಂದು ಬಂದು ಸರಕ್ಕನೆ ರಾಜಣ್ಣನ ಮುಂದೆ ನಿಂತಿತು. ಗಾಡಿಯವನು ಮುನ್ಸಿಪಲ್ ಕಾಲೇಜ್ ಎದುರಿಗಿನ ಗಿಫ್ಟ್ ಅಂಗಡಿಯ ಸೋಮರಾಜ. ಗಾಡಿಯ ಮೇಲೆ ಕುಳಿತೇ ಮುಂದೆ ಬಾಗಿ “ಏನ್ ಲೇ ಈ ಸಿನಿಮಾದು ಎಷ್ಟನೇ ಸೆಕೆಂಡ್ ಶೋ ಇದು?” ಎಂದು ಪಿಸುಗುಟ್ಟಿದ. ಅರ್ಥಮಾಡಿಕೊಂಡ ರಾಜಣ್ಣ ಮತ್ತು ಕವಿತಾ ನಕ್ಕಿದ್ದನ್ನು ಕಂಡು ಸೋಮ ‘ಆಗ್ಲಿ ಆಗ್ಲಿ’ ಎಂಬಂತೆ ಹುಬ್ಬಾರಿಸಿ ನಕ್ಕು ಪಾರ್ಕಿಂಗ್ ಕಡೆ ಹೋದ. ಅದೂ ಇದೂ ಆಗಿ ಕೌಂಟರಿನಲ್ಲಿ ಇವರ ಸರದಿ ಬಂದಾಗ ಟಿಕೆಟ್ಟು ಹರಿದುಕೊಟ್ಟ ಕೌಂಟರಿನವನು ರಾಜಣ್ಣನನ್ನು ನೋಡಿ ನಕ್ಕು ಮುಂದೆ ಸರಿದು ‘ಇವಳು ಇರುವಳು ಇಲ್ಲವೋ’ ಎಂಬಂತೆ ಕವಿತಾಳ ಕಡೆ ಇಣುಕಿದ.

ಟಾಕೀಸಿನಲ್ಲಿ ಹೆಚ್ಚೆಂದರೆ ಮೂವತ್ತು ಜನರಿರಬಹುದು. ಅವರಲ್ಲಿ ಐದಾರು ಹೆಂಗಸರು. ಮನಸ್ಸು ರಾಜಣ್ಣನ ಕೈಲಿದ್ದ ಚೀಲದ ಮೇಲಿದ್ದರೂ “ತಲೀನವ್ವು ಕಮ್ಮೀ ಆಯ್ತಾ? ಏನಂದ್ರು ಡಾಕ್ಟ್ರು?” ಎಂದಳು ಕವಿತಾ. “ಸೊಲ್ಪ ಕಮ್ಮಿ ಆಗೆತೆ. ಒಂದೆಲ್ಡು ಗುಳ್ಗೀ ಕೊಟ್ಟಾರ.” ಎಂದ ರಾಜಣ್ಣ.

ಟಾಕೀಸಿನ ಮುಂಬಾಗಿಲ ಬಳಿ ನಿಂತು ಇಬ್ಬರೂ ಟೈಮ್ ನೋಡಿಕೊಂಡರು ಒಂಬತ್ತೂವರೆಯಾಗಿತ್ತು. ಒಳಗಿನಿಂದ ಬೆಲ್ ರಿಂಗಾದ ಸದ್ದಾಯಿತು. ಟ್ಯೂಬ್‌ಲೈಟುಗಳು ಆರಿದ್ದರಿಂದ ಹೊರಬರುತ್ತಿದ್ದ ಬೆಳಕೂ ಇಲ್ಲವಾಯಿತು. ಇಬ್ಬರೂ ಥಿಯೇಟರಿನೊಳಕ್ಕೆ ಹೆಜ್ಜೆ ಹಾಕಿದರು.

 

-3-

ಸೆಕೆಂಡ್ ಕ್ಲಾಸಿನಲ್ಲಿ ಜನ ಟಾಕೀಸಿನ ತುಂಬಾ ಅಲ್ಲಲ್ಲಿ ಹರಡಿಕೊಂಡಿತ್ತು. ಮೂಲೆಗಳ ಸೀಟುಗಳು ಜೋಡಿಗಳ ಪಾಲಾಗಿದ್ದವು. ಅಂತಹುದೇ ಸೀಟನ್ನು ತಮ್ಮಿಬ್ಬರಿಗೆ ಹುಡುಕಿದ ರಾಜಣ್ಣ ಕವಿತಾಳನ್ನು ಪಕ್ಕ ಕೂರಿಸಿಕೊಂಡ. ಇನ್ಶೂರೆನ್ಸ್, ರೈತ ಸಾಲ, ಸ್ವಚ್ಛ ಭಾರತ, ಸಡಕ್ ಯೋಜನೆ, ಜನನ-ಮರಣ ನೋಂದಣಿ, ಇನ್‌ವರ್ಟರ್, ಸೋಪು, ಬಚ್ಚಲ ಸಾಮಾನು ಹೀಗೆ ನೂರೆಂಟು ಜಾಹೀರಾತುಗಳಾದ ಮೇಲೆ ಕೊನೆಗೆ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟು ಬಂತು.

ಸಿನಿಮಾದ ಹೆಸರುಗಳು ಮುಗಿಯುತ್ತಿದ್ದಂತೆ ಹೀರೋ ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದು ಗೂಂಡಾಗಳ ಮುಂದೆ ನಿಂತ. “ನನೀಗೆ ಮೂಡ್ ಕೆಟ್ರೆ ಮೂವತ್ತ್ ಅಲ್ಲ ಮುನ್ನೂರು ಜನ ಬಂದ್ರೂ ಬಿಡಲ್ಲ.” ಎಂದು ಡೈಲಾಗ್ ಹೊಡೆದ. ಥಿಯೇಟರಲ್ಲಿ ಒಂದು ಜೋರು ವಿಶಲ್ ಬಿತ್ತು. ಹೀರೋವನ್ನು ಮೂವತ್ತಕ್ಕೂ ಹೆಚ್ಚು ದಾಂಡಿಗರು ಒಮ್ಮೆಲೆ ಮುಕ್ಕರಿಕೊಂಡರು, ಹೀರೋ ಕಾಣದಾದ. ಹಿಂದಿನ ಸೀಟಿನಲ್ಲಿ ಕೂತವನೊಬ್ಬ ನಿಂತು “ಅಣಾ ಹೊರಾಗ ಬಾರಣ್ಣ ವದೀ ನನ್ ಮಕ್ಳಿಗೆ.” ಎಂದು ತೂರಾಡಿದ. ಹಿಂದಿದ್ದವರು “ಅನಾ ಕುಚೋ (ಅಣಾ ಕೂತ್ಕೋ)” ಎಂದು ಅವನನ್ನು ತೆಲುಗಿನಲ್ಲಿ ಕೂರಿಸಿದರು. ಅಷ್ಟರಲ್ಲಿ ಹೀರೋ “ಯಾಯ್…” ಎಂದು ಘರ್ಜಿಸಿದ. ಮೂವತ್ತು ಜನ ಮೂವತ್ತು ದಿಕ್ಕಿಗೆ ಗಾಳಿಯಲ್ಲಿ ನಿಧಾನಕ್ಕೆ ಹಾರಿ ಜೋರು ಚೀರುತ್ತಾ ಹೋದರು. ಮೂಲೆಯಲ್ಲಿದ್ದವನೊಬ್ಬ ತೂರಾಡಿದವನನ್ನು ಗುರಿಯಾಗಿಸಿ ಎದ್ದು ಕೂಗುತ್ತಾ “ಏನ್ ಮಬ್ ನನ್ಮಕ್ಳು ಅನ್ಕಂಡೀಯಾ ನಮ್ಮುನ್ನ? ಮುವತ್ತು ಜನ ಹಂಗ ಹರ‍್ಕೆಂಡು ಹೋದ್ರೆ ನಿನ್ ಮುಕ್ಳಿ ಹರೀತತೆ ಲೇ.” ಎಂದು ಅಮಲಿನಲ್ಲಿ ಜೋರಾಗಿ ತೂರಾಡಿದ. ಮೊದಲಿನವನು ಎದ್ದು ನಿಂತು “ಏಯ್” ಎಂದು ಅವನಿಗೆ ಗದರಿದ. ಸೋಮರಾಜನ ಜೊತೆಗೆ ಸುತ್ತಲಿವರು ಒಟ್ಟಿಗೆ ಜೋರಾಗಿ ಇಬ್ಬರಿಗೂ “ಏಯ್” ಎಂದಿದ್ದು ಕಿವಿಗೆ ಬೀಳುತ್ತಿದ್ದಂತೆ ಇಬ್ಬರೂ ಕುಂತು ಎಲ್ಲರಂತೆ ತಮ್ಮ ಸೀಟುಗಳಲ್ಲಿ ಜಾರಿಕೊಂಡರು. ಫೈಟು ಜೋರಾಗಿತ್ತು. ರಾಜಣ್ಣ ಎದ್ದು ಸೋಮರಾಜನ ಬಳಿ ಹೋಗಿ ಕಿವಿಯಲ್ಲೇನೋ ಪಿಸುಗುಟ್ಟಿದ. ಸೋಮನ ಕೈ ಜೇಬಿನಿಂದ ಗಾಡಿಯ ಬೀಗ ತೆಗೆದುಕೊಟ್ಟಿತು. ಟಾಕೀಸಿನಿಂದ ಹೊರಬಂದ ರಾಜಣ್ಣ ಗಾಡಿ ಸ್ಟಾರ್ಟ್‌ಮಾಡಿ ಆಕ್ಸಿಲರೇಟರ್ ತಿರುವಿದ. ‘ರುಂಯ್ ರುಂಯ್’ ಸದ್ದು ಮಾಡಿದ ಗಾಡಿ ಗೇಟಿನ ಬಳಿ ಬಂದಾಗ ಕವಿತಾ ಬಂದು ಹಿಂದಿನ ಸೀಟಿನಲ್ಲಿ ಕೂತಳು.

-4-

ಗಾಡಿ ಸಿಟಿ ಬಿಟ್ಟು ಬೆಳಗಲ್ಲು ಕ್ರಾಸು ಕಂಡು ಮೈನ್ಸ್ ಲಾರಿಗಳಿಗೆಂದೇ ಮಾಡಿದ ಬೈಪಾಸ್ ರಸ್ತೆಗೆ ಬಂದು ಸೇರಿಕೊಂಡಿತು. ಗಟ್ಟಿಯಾಗಿ ರಾಜಣ್ಣನನ್ನು ತಬ್ಬಿ ಹಿಡಿದ ಕವಿತಾ ಕೂದಲನ್ನು ಹರಡಿ ಗಾಳಿಗೆ ಹಾರಲು ಬಿಟ್ಟು ಉಲ್ಲಾಸದಿಂದಿದ್ದಳು. ರಾಜಣ್ಣ ಏನನ್ನೋ ಗುನುಗುತ್ತಿದ್ದ. ಜೀವನ್ ಡಾಬಾವನ್ನು ಕಂಡವನು ಎಡಕ್ಕೆ ಗಾಡಿಯನ್ನು ತಿರುಗಿಸಿದ. ಅಷ್ಟರಲ್ಲಿ ತಡೆದ ಕವಿತಾ “ಇನ್ನಾ ಮುಂದುಕ್ಕೋಗಾನಾ?” ಎಂದು ಅವನ ಹೆಗಲ ಮೇಲೆ ತನ್ನ ತಲೆಯನ್ನು ಆನಿಸಿದಳು. ನಿಧಾನವಾಗಿದ್ದ ಗಾಡಿ ಮತ್ತೆ ಬಿರುಸು ಪಡೆಯಿತು.

ಚೀಲವನ್ನು ತನ್ನ ಕೈಗೆ ಕೊಡದೆ ಜೋಪಾನವಾಗಿ ಗಾಡಿಯ ಮುಂದೆ ಇಟ್ಟಿಕೊಂಡಿರುವುದನ್ನೇ ನೋಡಿ ಹುಬ್ಬು ಹಾರಿಸುತ್ತಾ “ಚೀಲ್ದಾಗ ಏನೈತೆ?” ಎಂದಳು. ಸರಸಕ್ಕೆ ಬೇಕಾದ ಎಲ್ಲವನ್ನು ತಂದಿದ್ದಾನೆ ಎಂಬುದು ನೆನೆದು ನಾಚಿಕೆಯಾದರೂ ತೋರಗೊಡದೇ ರೇಗಿಸುವ ದನಿಯಲ್ಲಿ ಹುಬ್ಬು ಹಾರಿಸಿ ಕೇಳಿದ್ದಳು ಕವಿತಾ. ಎದುರು ಗಾಳಿಯಲ್ಲಿ ರಾಜಣ್ಣನಿಗೆ ಅದು ಕೇಳಿಸದೇ ಅವನು “ಆ?” ಎಂದ. ಅದಕ್ಕವಳು “ಚೀಲ ಚೀಲಽಽಽ” ಜೋರಾಗಿ ಕೂಗಿದಳು. ರಾಜಣ್ಣ “ಹೇಳ್ತೀನಿ ಬಾ.” ಎಂದ. ಗಾಡಿ ಮೂರು ಕಿಲೋಮೀಟರ್ ಸಾಗಿ ಬಂದು ಹುಸೇನ್ ದರ್ಗಾದ ಕಾಂಪೌಂಡಿನ ಟ್ಯೂಬ್‌ಲೈಟ್ ಮಂದವಾಗಿ ಕಾಣಿಸುವಷ್ಟು ದೂರದ ಬಯಲಿನಲ್ಲಿ ಸಮತಟ್ಟಾದ ಮಣ್ಣಿನ ಮೇಲೆ ನಿಂತಿತು.

ಅಲ್ಲೊಂದು ಇಲ್ಲೊಂದು ಬೇವಿನ ಮರ ಸಣ್ಣಪುಟ್ಟ ಜಾಲೀಗಿಡಗಳನ್ನು ಬಿಟ್ಟರೆ ಏನೂ ಇಲ್ಲದ ಇರುಳಿನ ಆ ಜಾಗ ಬಟಾ ಬಯಲು, ಬೈಪಾಸು ರೋಡು ಈಗ ಬಹಳ ದೂರವಾಗಿತ್ತು. ಕವಿತಾ ಇಳಿದು ಸುತ್ತಲೂ ಕಣ್ಣಾಡಿಸಿ ರಾಜಣ್ಣನ ಬಳಿ ಬಂದು ನಿಂತಳು. ಅವಳಿಂದ ದೂರಕ್ಕೆ ನಾಲ್ಕು ಹೆಜ್ಜೆ ಮುಂದಿಟ್ಟ ರಾಜಣ್ಣ, ಕೈಚೀಲದೊಳಗಿನಿಂದ ಒಂದು ದೊಡ್ಡ ಟವಲ್ಲಿನಂತಹ ಬಟ್ಟೆಯನ್ನು ತೆಗೆದು, ಹಾಸಿ ‘ಬಾ’ ಎಂದು ಸನ್ನೆ ಮಾಡಿ ಕುಳಿತ. ಕವಿತಾ ಚಕ್ಕಳಂಬಕ್ಕಳ ಹಾಕಿ ಅವನೆದುರು ನಗುತ್ತಾ ಕೂತಳು.

ರಾಜಣ್ಣ ಮೊಬೈಲಿನ ಟಾರ್ಚನ್ನು ಆನ್ ಮಾಡಿ ಸಣ್ಣ ಬೆಳಕನ್ನು ಹರಿಸಿ “ಕಣ್ಮುಚಿಗ್ಯಾ” ಎಂದ. ಅವಳು ಕಣ್ಣು ಮುಚ್ಚಿದಳು. ಚೀಲದೊಳಗಿನ ಕ್ಲಾಥ್ ಸೆಂಟರಿನ ಕವರ‍್ರಿನಿಂದ ಸೀರೆ ಮತ್ತು ಕನಕಾಂಬರವನ್ನು ತೆಗೆದು ಅವಳ ಕೈಗಿಟ್ಟ, ಅವಳು ಕಣ್ಬಿಟ್ಟಳು. ಸೀರೆಯನ್ನು ಕಂಡ ಅವಳ ಕಂಗಳು ಅಗಲವಾದವು. ಹೆಗಲ ಮೇಲೆ ಸೀರೆ ಹಾಕಿಕೊಂಡು, ಸರಿಯಾಗಿ ಕನಕಾಂಬರ ಮುಡಿದು ‘ಸೌಂದರ್ಯವೆಂದರೆ ಇದೇ!’ ಎಂಬಂತಹ ನಗೆಯೊಂದನ್ನು ಅವನೆಡೆಗೆ ಚೆಲ್ಲಿದಳು. ಇದನ್ನು ಕಂಡವನ ಮುಖ ಮಿನುಗಿ ಮನಸ್ಸು ಹುಚ್ಚಾಗಿ “ಇದೇ ನಗು ನನ್ನಂತ ಗಂಡ್ಸುನ್ನ ಕೆಡ್ವಿದ್ದು.” ಎಂದುಕೊಂಡಿತು. ರಾಜಣ್ಣ “ಇವತ್ತು ಭಾಳ ಖುಷಿಯಾಗೈದೀನಿ ತಗ.” ಎಂಬಂತೆ ನೋಡಿದ. ಕವಿತಾಳೂ ತಿರುಗಿ “ನೀನ್ ಚನ್ನಾಗಿದ್ರೆ ಸಾಕು.” ಎಂಬಂತೆ ನೋಡಿದಳು. ರಾಜಣ್ಣ ಮತ್ತೆ ಕವರ‍್ರಿಗೆ ಕೈ ಹಾಕಿ ಸೇಬಣ್ಣು ಮತ್ತು ಚಾಕುವನ್ನು ತೆಗೆದು ಕೊಯ್ಯಲತ್ತಿದ. ಹಣ್ಣನ್ನು ಕತ್ತರಿಸಿ ಎರಡು ತುಂಡು ಅವಳಿಗೆ ಕೊಟ್ಟು ಎರಡನ್ನು ತನ್ನ ಬಾಯಿಗಿಟ್ಟುಕೊಂಡ. ಬೆಳದಿಂಗಳ ಗಾಳಿ ಸ್ವಲ್ಪ ಬಿಸಿಯಿದ್ದರೂ ಜೀವಕ್ಕೆ ತಂಪು ನೀಡುತ್ತಿತ್ತು. ಇಬ್ಬರ ನಗುವಿನಲ್ಲಿಯೇ ಎರಡೂ ಸೇಬು ಖಾಲಿಯಾದವು. ಅನಂತರ ರಾಜಣ್ಣನ ಕೈ ಚೀಲದೊಳಗೆ ಪದೇ ಪದೇ ಹೋಗಿ ಒಂದು ದೊಡ್ಡ ವಿಸ್ಕಿ ಬಾಟಲಿ, ಎರಡು ಬಿಯರ‍್ರು ಬಾಟಲಿಗಳು, ಒಂದು ಸ್ಪ್ರೈಟ್ ಬಾಟಲಿ, ಪೇಪರ್ ತಟ್ಟೆಗಳು, ಎರಡು ಪ್ಲ್ಯಾಸ್ಟಿಕ್ ಗ್ಲಾಸುಗಳನ್ನು ತಂದಿಟ್ಟಿತು. ಹಿಂದೆಯೇ ಚೀಲಕ್ಕೆ ಕೈ ಹಾಕಿದ ಕವಿತಾ ಚಿಪ್ಸ್, ಖಾರ, ಶೇಂಗಾ, ಕಬಾಬು ಎಲ್ಲವನ್ನೂ ಹಾಸಿಗೆಯ ಮೇಲೆ ಸಜ್ಜು ಮಾಡಿದಳು.

ರತ್ನಳ ಗ್ಲಾಸು-ಬಿಯರ‍್ರನ್ನೂ ರಾಜಣ್ಣನ ಗ್ಲಾಸು ವಿಸ್ಕಿ-ಸ್ಪ್ರೈಟನ್ನೂ ತುಂಬಿಕೊಂಡು ಸಂಬಂಧಪಟ್ಟವರ ಕೈ ಸೇರಿಕೊಂಡು ಹೊಟ್ಟೆಗೆ ಸುರುವಲು ತಯಾರಾದವು. “ಯಾಕ ಇಷ್ಟಾಕೊಂದು ಖುಷಿ ಅಂತ ಹೇಳು?” ಎಂದಳು ಕವಿತಾ. “ಜೀವನ್ದಾಗ ಆಗ್ತಾವ ಅನ್ಕಂಡೇ ಇರ್ಲಿಲ್ಲ, ಅಂತಾವೆಲ್ಲಾ ಆಗಾಕತ್ತಾವ ಅದಿಕ್ಕೆ.” ಎಂದ ರಾಜಣ್ಣ. ಅದಕ್ಕೆ ಕವಿತಾ “ಮನಿಯವ್ರು ನೊಡಿದ ಹುಡ್ಗೀಗೆ ‘ಹ್ಞೂಂ-ಗೀ’ ಅಂದ್ಬಂದ್ಯಾ ಹೆಂಗ?” ಎಂದು ನಕ್ಕು ಗ್ಲಾಸಿನಲ್ಲಿ ಇದ್ದಿದ್ದನ್ನೆಲ್ಲಾ ಒಂದೇ ಏಟಿಗೆ ಖಾಲಿ ಮಾಡಿ ಗ್ಲಾಸನ್ನು ರಾಜಣ್ಣನ ಮುಂದಿಡಿದಳು. ಅಷ್ಟರಲ್ಲಿ ರಾಜಣ್ಣ ನಿಂಬೆಹಣ್ಣನ್ನು ಕತ್ತರಿಸಿ ಪೇಪರ್ ತಟ್ಟೆಗೆ ಹಾಕಿದ್ದ. ನಾಲಿಗೆಗೆ ನಿಂಬೆ ರಸ ಹಿಂಡಿಕೊಂಡು ಚಪ್ಪರಿಸಿದ ಕವಿತಾ ಕಬಾಬಿಗೆ ಕೈ ಹಾಕಿದಳು. ನಿಧಾನಕ್ಕೆ ರಾಜಣ್ಣ “ನೀನೈದಿಯಲ್ಲ ಇನ್ಯಾಕ ಬೇಕು ಬ್ಯಾರೆ ಹುಡ್ಗಿ?” ಎಂದ. ಕವಿತಾ “ಮತ್ತೆ ಮತ್ತೆ ಅದುನ್ನೇ ಹೇಳ್‌ಬ್ಯಾಡ.” ಎಂದಳು. “ಅದ್ ಅದನ್ನೇ ಕೇಳಿದ್ರೆ ಹೋಸಾದೇನ್ ಹೇಳಾದು?” ಎಂದ ರಾಜಣ್ಣನ ಮಾತು ಕವಿತಾಳ ಬಾಯಿಯನ್ನು ಮುಚ್ಚಿಸಿತು. ಸಂದರ್ಭವನ್ನು ತಿಳಿಗೊಳಿಸಲು “ನನೀಗೆ ಮೂಡ್ ಕೆಟ್ರೆ ಮೂವತ್ತ್ ಅಲ್ಲ ಮುನ್ನೂರು ಜನ ಬಂದ್ರೂ ಬಿಡಲ್ಲ.” ಎಂದು ಹೀರೋನಂತೆ ಗೋಣು ಅಲ್ಲಾಡಿಸಿ ವಾರೆಮಾಡಿ ಹೇಳಿದಳು ಕವಿತಾ. ಆದರೆ ರಾಜಣ್ಣ ಗಂಭೀರವಾಗಿ “ಬರೀ ಮದ್ವಿ ಅಲ್ಲ ಸತ್ರೂ ನಿಂಜೊತೀನೆ.” ಎಂದ. “ನೀನ್ ಸಾಯೋ ಮಾತು ಬಿಡ್ಬೇಕು ಅಂದ್ರೆ ಏನ್ಮಾಡ್ಬೇಕು ಹೇಳು?” ಎಂದು ರಾಜಣ್ಣ ಹಿಡಿದಿದ್ದ ಗ್ಲಾಸನ್ನೂ ಖಾಲಿ ಮಾಡಿ ಮುಖ ಹಿಂಡಿಕೊಂಡು ಕಣ್ಣು ಹೊಡೆದು ಸರಸಕ್ಕೆ ಕರೆಯುವವಳಂತೆ ಅವನನ್ನೇ ನೋಡಿದಳು ಕವಿತಾ.

ಚಿಪ್ಸಿಗೆ ಕೈ ಹಾಕಿದ್ದ ರಾಜಣ್ಣ “ಬ್ಯಾರೇವ್ರ ಚಾಳಿ ಬಿಡ್ಬೇಕು.” ಎಂದು ಕವಿತಾಳನ್ನು ದಿಟ್ಟಿಸಿದ. ಕವಿತಾಳ ಮೆದುಳಿಗೆ ಮುಳ್ಳು ನೆಟ್ಟಂತಾಗಿ “ಏನಾಯ್ತ್ ಇವಾಗ?” ಎಂದು ಗಂಭೀರವಾದಳು. ರಾಜಣ್ಣ “ಇಷ್ಟು ಖುಷಿ ಆಗಾ ಅಂತದ್ದು.” ಎಂದು ಎದುರಿಗಿನ ಸೀರೆ, ವಿಸ್ಕಿ ಮುಂತಾದವುಗಳೆಡೆಗೆ ಕೈ ಹರಿಸಿ ತೋರಿಸಿದಾಗ ಕವಿತಾಳಿಗೆ ಶೂನ್ಯ ಕಾಡಿತು. “ನನ್ ಸಾವಾಸಕ್ಕ ಬಂದ್ ಮ್ಯಾಲೆ ನೀನು ನೆಟ್ಟುಗೈದೀ ಅಂತ ಆ ಸೋಮುನತ್ರ ಹೇಳಿದ್ದೆ. ಆದ್ರೆ ಅವ್ನು ಚಾಲೆಂಜ್ ಮಾಡಿ ಇವತ್ತ್ ಬೆಳಿಗ್ಗೆ ನಿಮ್ಮನಿ ರೋಡಿಗೆ ಕರ್ಕಂಬಂದು ಯಾವನೋ ನಿನ್ ಮನೀ ಹೊಕ್ಕಿದ್ದುನ್ನ ತೋರ‍್ಸಿದ.” ಎಂದು ನಿಲ್ಲಿಸಿದ. ಕವಿತಾಳಿಗೆ ಗರ ಬಡಿಯಿತು. ರಾಜಣ್ಣ ಮುಂದುವರೆದು “ಚಾಲೆಂಜ್ ಸೋತಿದ್ದುಕ್ಕ ಮೂರ್ ಸಾವ್ರ ಕೊಟ್ಟೆ. ಅವ್ನು ಅದುನ್ನೆಲ್ಲಾ ತಿರುಗ್ಸಿ ನನೀಗೇ ಪಾರ್ಟಿ ಕೊಟ್ಟ. ಆ ಪಾರ್ಟಿಗೇ ಈ ಪಾರ್ಟಿ, ಈ ಸಂತೋಷ, ಈ ಖುಷಿ, ಈ ಸೀರಿ.” ಎಂದು ವ್ಯಂಗ್ಯವಾಡಿ ಸುಮ್ಮನಾದ. ಕವಿತಾ ನಿಟ್ಟುಸಿರು ಬಿಟ್ಟು ತಾನೇ ಗ್ಲಾಸು ತುಂಬಿಸಿಕೊಂಡು ಕುಡಿದಿಟ್ಟು “ನಮ್ಮಜ್ಜಿನ್ನ ನೋಡಾಕ ಬಂದಿದ್ದ.” ಎಂದಳು. ರಾಜಣ್ಣ ದೃಢವಾಗಿ, “ಬಂದಾತ ಸೋಮುನ್ ಕಡಿಯಾತ, ಆತ ಯಾವ್ ನೆಂಟ ನಿಮೀಗೆ?” ಎಂದಾದಾಗ ಕವಿತಾ, “ನಮ್ ಮನೀಗೆ ಬರೋರೆಲ್ಲಾ ನನ್ ಜೊತಿಗೆ ಮಕ್ಕನಕೇ ಬರ್ತಾರಾ? ಹೋಗಿ ಅವ್ನುನ್ನೇ ಕೇಳು ಹೋಗು.” ಎಂದು ನಿಲ್ಲಿಸದೇ “ಮನೀಮಟ ಜನಾನ ಕಳುಸ್ತಾನ ನನ್ನುನ್ನ ಇಷ್ಟಾಪಡಾ ದೊಡ್ಡು ಗಂಡ್ಸು, ಪರೀಕ್ಷೆ ಮಾಡಾಕ?” ಎಂದು ಮಾತಿಗೆ ಸಜ್ಜಾದಳು. ಅವನು ಅವಳನ್ನೇ ದಿಟ್ಟಿಸುತ್ತಿದ್ದ.

“ನನ್ನಿಂದೆ ಬರ್ಬ್ಯಾಡ ಅಂತ ಹೇಳಿದ್ನೋ ಇಲ್ಲೋ? ಬ್ಯಾಡಂದ್ರೂ ಬರಾದು ಅನ್ಮಾನ ಪಡಾದು. ಸಂಸಾರ ಮಾಡ್ತಾನಂತೆ ಗಂಡ್ಸು ನನ್ ಜೊತೀಗೆ.” ಎಂದು ಜೋರು ಕುಟುಕಿದಳು. “ಹೌದು ಹೇಳಿದ್ದೆ. ನಾವಿಬ್ರೂ ಕೂಡ್ಕೆಂಡ ಮ್ಯಾಲೆ. “ಹಳೇದೆಲ್ಲಾ ಹಳೇದು, ಜೀವ್ನ ಮತ್ತೆ ಮೊದ್ಲಿಂದ ಶುರು ಮಾಡಾನ.” ಅಂತ ನೀನು ಅಂದಿದ್ದುನ್ನ ನಾನೇ ನೆನುಪುಸ್ಬೇಕಾ?” ಎಂದ ರಾಜಣ್ಣನಿಗೆ ಕವಿತಾ ಉತ್ತರಿಸಲಿಲ್ಲ. ಮುಂದಕ್ಕೆ ಸರಿದು ಬಂದ ರಾಜಣ್ಣ ಕವಿತಾಳ ಕಪಾಳಕ್ಕೆ ಜೋರು ಬಿಗಿದ. ರಾಜಣ್ಣನ ಗ್ಲಾಸು ಉರುಳಿ ಬಿತ್ತು. ತತ್ತರಿಸಿದ ಕವಿತಾ “ಯವ್ವಾ” ಎಂದು ಚೀರಿ ಕಂಗಳು ತುಂಬಿಕೊಂಡು “ಯಾಕ್ ಹೊಡಿತಿಯಲೋ ಭಾಡ್ಕೋ? ನನ್ನುನ್ನೇನೂ ಕಟ್ಗೆಂಡಿಲ್ಲ ನೀನು.” ಎಂದು ಜೋರಾದಳು. ಜಗಳದಲ್ಲಿ ಹಾಸಿಗೆಯ ಮೇಲಿನ ಸಾಮಾನುಗಳೆಲ್ಲಾ ಚೆಲ್ಲಾಪಿಲ್ಲಿಯಾದವು. “ಮನಿಯರ‍್ನೆಲ್ಲಾ ಎದುರಾಕ್ಕೆಂಡು ಕಟ್ಗೆಂತೀನಿ ಅಂದಿದ್ನೋ ಇಲ್ಲೋ? ಯಾಕ್ ಬ್ಯಾಡ ಅಂದೆ?” ಎಂದವನು ಮತ್ತೆ ಬಾರಿಸಿದ. ಕವಿತಾ “ಗಂಡ್ ಸತ್ತ್ ಮುಂಡೇನ ಕಂಡೋರೆಲ್ಲಾ ಗಂಡ ಆಗ್ತೀನಿ ಬಾ ಅಂತೀರಲ್ಲಲೇ ಭಾಡ್ಕೋಗುಳಾ? ಎಷ್ಟ್ ಜನುನ್ನ ಕಟ್ಗೆಂಬೇಕು?” ಎಂದು ಕೂಗಿದಳು. ಮೈ ಮೇಲಿನ ಸೀರೆ ಅಸ್ತವ್ಯಸ್ತವಾಗಿದ್ದು ಅರಿವಿಲ್ಲದೆ “ಒಂಟೀ ಹೆಂಗುಸ್ರುನ್ನ ಕಂಡ್ರೆ ಎಲ್ಲಾವಂದೂ ಎದ್ದ್ ನಿಂದ್ರುತಾವ.” ಎಂದು ಗೊಣಗಿ ಮೇಲೆದ್ದಳು. ಬಲವಾಗಿ ಅವಳ ಕೈ ಹಿಡಿದೆಳೆದು ಕೂರಿಸಿದ ರಾಜಣ್ಣ “ಕವಿತಾ, ನಾನಂತೋನ್ ಅಲ್ಲಾ ಅಂತ ನಿನೀಗೊತ್ತು!” ಎಂದು ಕೆಕ್ಕರಿಸಿದ. “ಮುಂಡೇಗೆ ಬಾಳ್ಕೊಟ್ರೆ ಜನ ಜೈ ಅಂತಾರ ಅನ್ನಾದುಕ್ಕ ಆಗ್ತೀನಿ ಅಂತೀ. ದೊಡ್ಡ ಸಮಾಜ ಸುಧಾರಕ ನೀನು. ಮದ್ವಿ ಆಗಾದು ಬಿಡಾದು ನನ್ನಿಷ್ಟ.” ಎಂದು ಕೊಸರಾಡಿದಳು. “ಕಟ್ಗೆಣಾಕ ಇಷ್ಟ ಇಲ್ದಾಕಿ ಯಾಕ್ ಮಕ್ಕಂಡೆ ಜತೀಗೆ?” ಎಂದ ರಾಜಣ್ಣ ಅವಳ ಎಡಗೈ ತಿರುವಿದ. ನೋವಿನಿಂದ ಚೀರಿ “ಹಿಂಗೇ ಅಲ್ಲೀಗಿಲ್ಲಿಗೆ ಕರ್ಕೊಂಡೋಗಿ ಕುಡ್ಸಿ ನನ್ ಜೊತೀಗೆ ನೀನ್ ಮೈ ಮರುತ್ರೆ? ಮೈಯ್ಯಿಗೆ ಎಲ್ಲಿರ‍್ತತೆ ಮನ್ಸು, ಮಾತ್ ಕೇಳಾಕ. ಮದ್ವಿ ಆಗಾಮಟ ಈರ್ಬೇಕಾಗಿತ್ತು ಗಟ್ಟೀಗೆ ಹಿಡ್ಕಂಡು.” ಎಂದು ಅವನನ್ನು ದಿಟ್ಟಿಸಿ “ಗಂಡ ಸತ್ತಾಕಿ ಒಬ್ಬನತ್ರ ಮಕ್ಕಂಡರ‍್ತಾಳ, ಮೈಯಾಗ ಕಾವು ಜೋರು ಇರ್ತೇತೆ. ಸುಲ್ಬುಕ್ಕ ಸಿಗ್ತಾಳ ಅಂತಾ ನನ್ನತ್ರ ಬಂದಿದ್ಯೇನೋ ಅಲಾ?” ಎಂದು ವ್ಯಂಗ್ಯವಾಡಿದಳು. ಸಿಟ್ಟು ನೆತ್ತಿಗೇರಿ ಇನ್ನೇನು ರಾಜಣ್ಣ ಮತ್ತೊಂದು ಬಿಗಿಯಲು ಕೈಯೆತ್ತುವಷ್ಟರಲ್ಲಿ ಬಲಗೈಯಲ್ಲಿ ಎತ್ತಿ ಖಾರ ತುಂಬಿದ್ದ ಪೇಪರ್ ತಟ್ಟೆಯನ್ನು ಅವನ ಮುಖಕ್ಕೆಸೆದು ಎದ್ದು ನಿಂತಳು ಕವಿತಾ.

“ಸತ್ತ್ ಗಂಡುನ್ ಹೆಸ್ರು ಹೇಳಿ ಮತ್ತೆ ಮತ್ತೆ ಮನೀಗೆ ಬರ್ತೀರಿ. ಬ್ಯಾಡ ಅಂದ್ರೂ ಜೀವ್ನುಕ್ಕ ಅದುಕ್ಕ ಇದುಕ್ಕ ಇರ್ಲಿ ಅಂತ ಜಗ್ಗು ರೊಕ್ಕಾ ಕೊಡ್ತೀರಿ. ಅಷ್ಟುನ್ನ ವಾಪಸ್ ಕೊಡಾಕಾಗಲ್ಲ ನಮೀಗೆ. ಆವಾಗ, ಮಂಚುಕ್ಕ ಬರ್ಲಿಲ್ಲಾಂದ್ರೆ ನನ್ ರೊಕ್ಕಾ ವಾಪಸ್ ಕೊಡು ಅನ್ನಂಗ ನೋಡ್ತೀರಿ. ಎದಿಯಾಗ ಮತ್ತೆ ತಲಿಯಾಗ ಮಂಚಾ ತುಂಬ್ಕೆಂಡು, ಮೈಯಿಗೆ ಆಸೀ ಹತ್ತಿಸ್ಗೆಂಡು, ನಾಯಿಯಂಗ ಹಿಂಬಾಲತ್ತಿ ಜೀವಾ ತಿಂತೀರಿ. ಥೂ?” ಎಂದು ಈ ಸಂಬಂಧಕ್ಕೆ ಇದು ಕೊನೇ ಮಾತು ಎಂಬಂತೆ ಧೃಢವಾಗಿ ಸೆರಗು ಸರಿಮಾಡಿಕೊಂಡು ಹೊರಡಲನುವಾದಳು.

ಒಮ್ಮೆಲೆ ಸೇಬು ಕತ್ತರಿಸಿದ ಚಾಕುವಿನ ಸಮೇತ ಎದ್ದುನಿಂತ ರಾಜಣ್ಣ, ಮುನ್ನುಗ್ಗಿ ಕವಿತಾಳ ತಲೆ ಹಿಡಿದುಕೊಂಡು “ಅದೇ ಮೈಯ್ಯಿಗೆ ಏಡ್ಸ್ ಹತ್ಯಾತೆ ಅಂತ ಇವತ್ತು ಗೊತ್ತಾಗೆತೆ. ಅದ್ರಿಂದ ನಾನ್ ಸಾಯಾಕತ್ತೀನಿ, ನೀನೂ ಸಾಯಿ.” ಎಂದು ಹಲ್ಲು ಕಡಿದು ಅವಳ ಕುತ್ತಿಗೆಗೆ ಹಿಡಿದಿದ್ದ ಚಾಕುವನ್ನು ಸರಕ್ಕನೆ ಎಳೆದ, ಚೀರುತ್ತಿದ್ದ ಅವಳ ಕೊರಳಿನಿಂದ ಚಿಲ್ಲನೇ ನೆತ್ತರು ಚಿಮ್ಮಿತು.

ರಾಜಣ್ಣನ ಕೊನೆಯ ಮಾತುಗಳನ್ನು ಕೇಳಿಸಿಕೊಂಡು ಕವಿತಾಳ ಕಣ್ಣುಗಳು ಗಾಬರಿಯಲ್ಲಿ ಅಗಲವಾದವಾ? ಅವನಿಗದು ಗೊತ್ತಾಗಲಿಲ್ಲವಾದರೂ ಉಸಿರು ಎಳೆಯುತ್ತಿದ್ದ ಕವಿತಾ “ನೀನಾದ್ಮ್ಯಾಲೆ ನನ್ನ ಯಾರೂ ಮುಟ್ಟಿಲ್ಲ.” ಎಂದು ಗೊಗ್ಗರು ದನಿಯಲ್ಲಿ ಹೇಳಿದ ಮಾತಿಗೆ ಬೇಕಾದ ಉಸಿರು ಪೂರ್ತಿ ಗಂಟಲಿನಿಂದಲೇ ಹೊರಗೆ ಹೋಗುತ್ತಿತ್ತು. “ನೀನಾದ್ಮ್ಯಾಲೆ ನನ್ನ…” ಎಂಬ ಶಬ್ದವೊಂದೇ ಅವನಿಗೆ ಅರ್ಧಂಬರ್ಧ ಕೇಳಿಸಿದ್ದು, ಅದೂ ಬರೀ ಗೊರಗೊರ. ಅವಳನ್ನೇ ದಿಟ್ಟಿಸುತ್ತಿದ್ದ ರಾಜಣ್ಣ ಕೆಲವೇ ಕ್ಷಣಗಳಲ್ಲಿ ಅವಳ ಉಸಿರು ನಿಂತಿದ್ದನ್ನು ಗೊತ್ತುಮಾಡಿಕೊಂಡು ತನ್ನ ಕುತ್ತಿಗೆಗೂ ಚಾಕು ಹಾಕಿಕೊಂಡ. ಬಯಲಲ್ಲಿದ್ದ ಬೆಳದಿಂಗಳು ಮತ್ತು ಅರೆ ಬಿಸಿ ತಂಗಾಳಿಯ ಜೊತೆಗೆ ಈಗ ನಿಶ್ಶಬ್ದ ಜೊತೆಯಾಯಿತು.

-5-

ಮರುದಿನ ನಗರದ ಸಂಜೆ ಪತ್ರಿಕೆಯಲ್ಲಿ ‘ಮೂರು ಹೆಂಗಸರನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ನಗರದ ಸಮಾಜ ಸೇವಕ ರಘುರಾಜ್ (ರಾಜಣ್ಣ)’ ಎಂಬ ಶೀರ್ಷಿಕೆಯಡಿಯಲ್ಲಿ ‘ಬೈಪಾಸು ರೋಡಿನ ಬಯಲಿನಲ್ಲಿ ನಗರದ ಸಮಾಜ ಸೇವಕ ರಘುರಾಜ್ ಮತ್ತು ಅವರೊಂದಿಗೆ ಸಂಬಂಧವಿತ್ತು ಎನ್ನಲಾಗುತ್ತಿರುವ ಮಹಿಳೆಯೊಬ್ಬಳ ಶವ ಕತ್ತು ಕೊಯ್ದಿರುವ ಸ್ಥಿತಿಯಲ್ಲಿ ಪತ್ತೆಯಾಗಿವೆ. ಇದಲ್ಲದೇ ಅವರು ನಿನ್ನೆ ಸಂಜೆ ಭೇಟಿ ಕೊಟ್ಟಿದ್ದ ನಗರದ ಕಂಟೋನ್ಮೆಂಟ್ ಮತ್ತು ಪಟೇಲ್‌ನಗರ ಪ್ರದೇಶಗಳ ತಲಾ ಒಂದೊಂದು ಮನೆಗಳಲ್ಲಿ ಇದೇ ರೀತಿ ಕತ್ತು ಕೊಯ್ದ ಸ್ಥಿತಿಯಲ್ಲಿ ಒಂಟಿ ಹೆಂಗಸರ ಶವ ಪತ್ತೆಯಾಗಿವೆ. ತನಿಖೆ ಶುರುವಾಗಿದ್ದು ಆದಷ್ಟು ಬೇಗ ಕೂಲಂಕುಷ ವಿವರಗಳು ಸಿಗಲಿವೆ.’ ಎಂಬ ಸುದ್ದಿ ಪ್ರಕಟವಾಗಿತ್ತು.

(ಕೃತಿ: ಬಯಲು (ಕಥಾಸಂಕಲನ), ಲೇಖಕರು: ಪ್ರವೀಣ್‌ ಕುಮಾರ್‌ ಜಿ., ಪ್ರಕಾಶಕರು: ಒಲವು ಬರೆಹ, ಬೆಲೆ: 150/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ