ಗಜಲ್
ಪ್ರೀತಿಗೆ ಹಾತೊರೆದು ನೋವುಗಳ ಕೊಂಡುಕೊಂಡೆ
ಹಗಲ ಬೆಳಕಲಿ ಇರುಳ ಕತ್ತಲೆಗಳ ಕೊಂಡುಕೊಂಡೆ
ಆ ಮೋಹಕ ನಗುವಿಗೆ ಸೆರೆಯಾದುದು ಮಾತ್ರ ನಿಜ
ಒಲವಿನಾಳ ತಿಳಿಯುತ ಗಾಯಗಳ ಕೊಂಡುಕೊಂಡೆ
ಯಾವ ಸಿರಿಯಿದೆ ನೆಮ್ಮದಿಯಿಲ್ಲದ ಈ ಬದುಕಿನಲಿ
ಕ್ಷಣಕ್ಷಣವು ಸಾಯುವ ಯಾತನೆಗಳ ಕೊಂಡುಕೊಂಡೆ
ಏಕಾಂತವೊಂದೆ ನನಗೀಗ ಆಪ್ತವಾದ ಸಂಗಾತಿ ಸಾಕಿ
ಸುಮ್ಮನಿರದ ಮನಸು ತಳಮಳಗಳ ಕೊಂಡುಕೊಂಡೆ
ಹೃದಯವು ಒಡೆದಿದೆ ಒಲವಿನ ಹಾಲಾಹಲದಲಿ ‘ಗಿರಿ’
ವಿಷವೆಂದು ಅರಿತರೂ ವೇದನೆಗಳ ಕೊಂಡುಕೊಂಡೆ
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ
ತುಂಬ ಚೆನ್ನಾಗಿ ಬರೆದಿದ್ದೀರಿ. ಅನುಭವಿ ಕವಿಯಂತೇನೇ. ದನ್ಯವಾದಗಳು ಹಾಗು ಅಭಿನಂದನೆಗಳು..ನಮಸ್ಕಾರ. ಸುನೀಲ್ ದೇಶಪಾಂಡೆ, ಮುಂಬಯಿ.