”ಆ ಹುಡುಗ ಲಟಾಪಟಿ ಹಂಡೆ ಚಡ್ಡಿ ಧರಿಸಿ ಕೈಯಲ್ಲಿ ಸೀರೆ ಹಿಡಿದುಕೊಂಡು ಸಂಕೋಚದಿಂದ ನನ್ನನ್ನು ನೋಡುತ್ತಿದ್ದನು. ನಾನು ಅವನನ್ನು ಸಮೀಪಿಸಿ, ಹುಡುಗೀರನ್ನು ಚುಡಾಯಿಸುವುದಕ್ಕೆ ಬರುತ್ತೆ… ಸೀರೆ ಉಡೋಕ್ಕೆ ಬರಲ್ವಾ? ಎಂದೆ. ಆ ಹುಡುಗ ತಲೆ ತಗ್ಗಿಸಿ ನಾಚಿ ನೀರಾದನು. ಸೀರೆಯ ಒಳ ಸೆರಗು, ಮೇಲ್ಸೆರಗು ಮತ್ತು ನೀಟಾಗಿ ನೆರಿಗೆಗಳನ್ನು ಹಿಡಿದು ಅವನ ಕೈಗೆ ಕೊಟ್ಟು, ತೊಗೊಂಡು ಒಳಕ್ಕೆ ತುರಿಕಿ ಎಂದಂದು ಹೊರಡಲನುವಾದೆನು. ಆ ಹುಡುಗ ನೆರಿಗೆಗಳನ್ನು ಹಿಡಿದುಕೊಂಡು ಹಾಗೇ ನಿಂತೇ ಇದ್ದನು. ಒಳಲಂಗ ಧರಿಸದಿದ್ದ ಕಾರಣ, ತನ್ನ ಚೆಡ್ಡಿಯೊಳಕ್ಕೆ ಹೇಗೆ ಸೇರಿಸಬೇಕೆಂದು ಗೊತ್ತಾಗಿಲ್ಲವೆಂದುಕೊಂಡು, ಪ್ರಾಂಶುಪಾಲರಿಗೆ, ಸಾರ್ ನಾನಿನ್ನು ಹೊರಡುತ್ತೇನೆ. ಪೆಟ್ಟಿಕೋಟ್ ಧರಿಸಿಕೊಂಡು ನೆರಿಗೆಗಳನ್ನು ಸೊಂಟಕ್ಕೆ ಸೇರಿಸಬೇಕು ಎಂದು ಹೇಳಿದಾಗ, ನನ್ನಿಂಗಿತ ಅರ್ಥವಾಗಿ ಹುಸಿನಗುತ್ತ ಆಯ್ತು ಎಂದರು”
ದೇವನೂರ ಮಹಾದೇವ ಅವರ ಮಡದಿ ಪ್ರೊ.ಕೆ.ಸುಮಿತ್ರಾ ಬಾಯಿ ಅವರ ಇದೀಗ ಪ್ರಕಟಗೊಳ್ಳಲಿರುವ ‘ಸೂಲಾಡಿ ಬಂದೋ ತಿರುತಿರುಗೀ’ ಬಾಳ ಕಥನದ ಕೆಲವು ಪುಟಗಳು.

 

ಅಧ್ಯಾಪಕಿಯಾಗಿ ಹೊಸಬಳಾದ ನಾನು ಪಾಠ ಪ್ರವಚನಗಳಿಗೆ ಹೆಚ್ಚು ತಯಾರಾಗಬೇಕಾಗಿತ್ತು. ಈ ಕಾರಣಕ್ಕೆ ನಾನು ರೈಲು ಪ್ರಯಾಣಕ್ಕೆ ಗುಡ್ ಬೈ ಹೇಳಿ ರೀಜನಲ್ ಕಾಲೇಜ್ ಹಾಸ್ಟಲ್ ಗೆ ಸೇರಿದೆ. ಕೆಲಕಾಲ ಅಲ್ಲಿದ್ದು ಆಮೇಲೆ ಮಾನಸ ಗಂಗೋತ್ರಿಯ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಸೇರಿದೆ. ನಮ್ಮ ವಿಂಗ್ ನಲ್ಲಿ ಒಂದಿಪ್ಪತ್ತು ವಿದ್ಯಾರ್ಥಿನಿಯರಿದ್ದರು. ಅವರಲ್ಲಿ ಒಂದಿಬ್ಬರು ಪಂಜಾಬಿ ಹುಡುಗಿಯರು ಮನಃಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರು. ಅವರಲ್ಲೊಬ್ಬಳು ಕಟ್ಟುಮಸ್ತಾದ ದೇಹದ ಜೊತೆಗೆ ಕೊಂಚ ಭೀರು ಸ್ವಭಾವದವಳು. ಇವಳು ಬಿಗಿಯಾದ ಚೂಡಿದಾರ್ ಧರಿಸಿಕೊಂಡು ಲವಲವಿಕೆ ಯಿಂದ ಇದ್ದಳು. ಸೀರೆ ಉಡುತ್ತಿದ್ದವರ ನಡುವೆ ಆ ಟೈಟ್ ಡ್ರೆಸ್ ಪಂಜಾಬಿ ಹುಡುಗಿ ಎಲ್ಲರ ಗಮನ ಸೆಳೆಯುತ್ತಿದ್ದಳು. ನಮ್ಮ ವಾರ್ಡನ್ ಗಾಂಧಿವಾದಿ ಉಕಾಸು ಅವರು ಆ ಪಂಜಾಬಿ ಹುಡುಗಿಯನ್ನು ಪ್ರತ್ಯೇಕವಾಗಿ ಕರೆದು- ನೋಡೀಮ್ಮಾ… ನೀವು ನಿಮ್ಮ ಉಡುಪನ್ನು ಸ್ವಲ್ಪ ಸರಿಯಾಗಿ ಹಾಕಿಕೊಳ್ಳಿ… ಹುಡುಗರ ಗಮನ ಸೆಳೆಯೊ ರೀತಿ ಹಾಕ್ಕೋಬೇಡಿ ಎಂದು ಬುದ್ಧಿವಾದ ಹೇಳಿದರಂತೆ. ಆಕೆ ಕೂಡ್ಲೆ ಅವರ ಜೊತೆ ಜೋರು ದನಿಯಲ್ಲಿ- ನಾನೇನೂ ಯಾರ ಜೊತೆಗೂ ಕೆಟ್ಟದಾಗಿ ನಡೆದುಕೊಳ್ಳುತ್ತಿಲ್ಲ, ಏನ್ ಪ್ರಾಬ್ಲಂ ಆಗಿದೆ? ಎಂದು ಅವರಿಗೇ ಸಿಢಾರನೆ ಏನೇನೋ ಗೊಣಗಿ ಹೊರಬಂದಿದ್ದಳು. ಎದುರಿಗೆ ಸಿಕ್ಕಿದ ನನಗೆ- ‘ವಾಟ್ ಇಸ್ ದಿಸ್ ಮೇಡಂ. ಆಲ್ ದ ಇಂಪಾರ್ಟೆಂಟ್ ಪಾರ್ಟ್ಸ್ ಆರ್ ಕವರ್ಡ್, ವಾಟ್ ಎಲ್ಸ್ ಟು’ (What is this madam, all the important parts are covered, what else to…) ಎಂದಳು ನಗುನಗುತ್ತಾ! ನನಗೂ ನಗು ತಡೆಯಲಾಗಲಿಲ್ಲ. ಆಮೇಲೆ ಅವಳು ಇನ್ನೂ ಏನೇನೋ ಹೇಳುತ್ತಿದ್ದಳು. ಮೈ ಪೇರೆಂಟ್ಸ್ ಆರ್ ದೇರ್ ಟು ಥಿಂಕ್ ಅಬೋಟ್ ಮೀ (My parents are there to think about me) ಮುಂತಾಗಿ. ಸಧ್ಯ ಸೊಂಟದ ಕೆಳಗಿನ ಪ್ಯಾಂಟು, ಮೋಟಾದ ದೊಗಳೆ ಟಾಪ್ ಗಳನ್ನು ಹುಡುಗಿಯರು ಧರಿಸುವ ಕಾಲದವರೆಗೆ ಆ ವಾರ್ಡನ್ ಬದುಕುಳಿಯಲಿಲ್ಲದ್ದೇ ಒಂದು ಸಮಾಧಾನ.

ನನ್ನ ಸಹ ಅಧ್ಯಾಪಕಿಯರಾದ ಚ.ಸರ್ವಮಂಗಳಾ, ಕಾವೇರಿ ಕೂಡ ಮಾನಸ ಗಂಗೋತ್ರಿಯ ಮಹಿಳಾ ವಿದ್ಯಾರ್ಥಿನಿಲಯಕ್ಕೆ ಸೇರಿದರು. ಚ.ಸರ್ವಮಂಗಳ ಪರಿಚಯವಾದ 2-3 ದಿನಗಳಲ್ಲೆ, ಸುಮಿತ್ರಾ ನಮ್ಮಿಬ್ಬರ ನಡುವೆ ಈ ಬಹುವಚನ ಯಾಕೆ ಬೇಕು? ನೀನು ತಾನು ಎಂದು ಮಾತನಾಡೋಣ ಎಂದಳು! ಸಾಮಾನ್ಯವಾಗಿ ಇವಳ ಒಡನಾಟವು ಸಾಹಿತ್ಯ, ಸಂಸ್ಕೃತಿ, ವೈಚಾರಿಕ ಕ್ಷೇತ್ರಗಳಲ್ಲಿ ಹೆಸರು ಮಾಡಿದವರೊಡನೆ ಹೆಚ್ಚಾಗಿತ್ತು. ಅವರೊಡನೆ ಸರಿಸಮಾನವಾಗಿ ಸಂವಾದಿಸುವಷ್ಟು ದಿಟ್ಟೆಯಾಗಿದ್ದಳು. ನವ್ಯಸಾಹಿತ್ಯ ಆಗ ಹೆಚ್ಚು ಚರ್ಚಿತವಾಗುತ್ತಿತ್ತು. ಪ್ರೊ.ಹೆಚ್.ಎಂ. ಚನ್ನಯ್ಯ, ಜಿ.ಎಚ್.ನಾಯಕರು ನವ್ಯಸಾಹಿತ್ಯದ ಪ್ರಖರ ಚಿಂತಕರಾಗಿದ್ದರು. ಸುಜನಾ ಅವರು ತಮ್ಮಷ್ಟಕ್ಕೆ ತಾವೇ ಸಾಟಿ ಎಂಬತ್ತಿದ್ದರು. ಮಂಗಳಾ ಜೊತೆ ಕಾಲೇಜಿನ ಕಾಫಿ ಕೇಂದ್ರಕ್ಕೆ ಹೋದಾಗಲೂ ಇವೇ ಚರ್ಚೆಗಳು. ಆಸಕ್ತಿಯಿಂದ ಆಲಿಸುತ್ತಿದ್ದೆ.

ಪ್ರೊ.ಚನ್ನಯ್ಯ ಅವರು ಜಗತ್ತಿನ ಸಮಕಾಲೀನ ಕೃತಿಗಳ ಬಗ್ಗೆ ಅದರಲ್ಲೂ ಆಲ್ಬರ್ಟ್ ಕ್ಯಾಮೂ ಬಗ್ಗೆ ಅರೆದು ಕುಡಿದವರಂತೆ ಮಾತಾಡುತ್ತಿದ್ದರು. ಜೊತೆಗೆ ಇವರು ರಂಗಭೂಮಿಯ ಕಲಾವಿದರು ಕೂಡ. “ಸಮತೆಂತೋ” (ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನ ತೋಟ) ಎಂಬ ಹವ್ಯಾಸಿ ರಂಗತಂಡ ಕಟ್ಟಿದವರಲ್ಲಿ ಪ್ರಮುಖರು. ಅನೇಕಾನೇಕ ಅಭಿರುಚಿಯನ್ನು ಬದಲಿಸಿಬಿಡುವಂತಹ ನಾಟಕಗಳನ್ನು ಸಮತೆಂತೋ ಪ್ರದರ್ಶಿಸಿದೆ. ಇಂದು ಈ ಹವ್ಯಾಸಿ ರಂಗಭೂಮಿಯ ದಿಗ್ಗಜ ಡಾ.ನಾ.ರತ್ನ ಅವರು ಗರುಡಗಂಭದಂತೆ ನಮ್ಮ ನಡುವೆ ಇದ್ದಾರೆ. ಮಂಗಳ ಕೂಡ ಅಭಿನೇತ್ರಿ. ಇವಳಲ್ಲಿರುವ ವೈಚಾರಿಕತೆ ಹಾಗೂ ಚಿಂತಿಸಿ ಹೇಳುವ ಮತ್ತು ಖಂಡಿಸುವ ಎದೆಗಾರಿಕೆಯ ಗುಣವೇ ನನ್ನನ್ನು ಆಕರ್ಷಿಸಿದ್ದು. ಎಷ್ಟೋ ವಿಚಾರಗಳಲ್ಲಿ ಇವಳ ತೀರ್ಮಾನವೇ ಅಂತಿಮವಾಗಿರುತಿತ್ತು. ಎಲ್ಲಕ್ಕಿಂತ ಮಿಗಿಲಾಗಿ, ಇವಳೊಳಗೆ ಸದಾ ಉಕ್ಕುವ ಮಾನವೀಯ ಗುಣವು, ಕಷ್ಟ ಎಂದು ಹೇಳಿದವರ ಬೆನ್ನಿಗೆ ನಿಲ್ಲುತ್ತಿತ್ತು.

ಹೀಗೆ ಒಂದು ದಿನ ಚ.ಸ.ತಾನು ಬರೆದಿದ್ದ ಕವನವನ್ನು ಕೊಟ್ಟು ಓದಲು ಹೇಳಿದಳು. ನಾನಾಗ ತರಗತಿಗೆ ಹೋಗುವ ತರಾತುರಿಯಲ್ಲಿದ್ದೆ. ಆಮೇಲೆ ಓದುತ್ತೇನೆ ಎಂದರೂ ಏನಿಲ್ಲ ಮಹರಾಯ್ತಿ ಇಷ್ಟೇ ಇಷ್ಟುದ್ದ ಇದೆ, ಈಗ್ಲೇ ಓದು, ಹುಡುಗ್ರು ಬಂದು ಕ್ಲಾಸಲ್ಲಿ ಕೂತುಕೊಳ್ಳುವಷ್ಟರಲ್ಲಿ ನೀನು ಹೋಗಬಹುದೆಂದಳು. ಸರಿ ಆಯ್ತು ಎಂದು ಆ ಪದ್ಯವನ್ನು ಓದಲು ಶುರುಮಾಡಿದೆ. ನನ್ನ ಮೆದುಳೊಳಗೆ ಬೆರಳಾಡಿಸಿದಂತಾಗಿ, ಓದಾದ ನಂತರ ವಾಪಸ್ ಕೊಡಲು ಹೋದಾಗ ಅವಳು, ಸುಮಿತ್ರಾ ನಿನಗೆ ಯಾವ ಯಾವ ಸಾಲು ಇಷ್ಟವಾಯಿತು ಹೇಳೆಂದಳು. ಕ್ಲಾಸಿಗೆ ಲೇಟಾಗ್ತಿದೆಯಲ್ಲಾ ಎಂಬ ಗಡಿಬಿಡಿಯಲ್ಲೂ ಆಗ ಅನ್ನಿಸಿದ ಕೆಲವು ಸಾಲುಗಳನ್ನು ತಿಳಿಸಿ ಕ್ಲಾಸಿಗೆ ಹೊರಟೆ. ಪಾಠ ಶುರು ಮಾಡೋಣಾಂದ್ರೆ ಮನಸ್ಸೇ ಬರ್ತಿಲ್ಲ. ಹಾಗೂ ಹೀಗೂ ಪಾಠ ಮುಗಿಸಿ ಸ್ಟ್ಯಾಫ್ ರೂಂ ಒಳಗೆ ಬಂದಕೂಡಲೇ ಚ.ಸ ಮೇಲೆ ಹರಿಹಾಯುವಂತಾಯಿತು. ಕ್ಲಾಸಿಗೆ ಖುಷಿಯಿಂದ ಹೊರಟಿದ್ದವಳ ಚಿತ್ತವನ್ನು ಇವಳ ಕವನ ಕಲಕಿತ್ತು. ಲಕ್ಷ್ಮಣನು ಶೂರ್ಪಣಖಿಯ ಮೂಗು, ಮೊಲೆಗಳನ್ನು ಕತ್ತರಿಸಿ ಬೀಳಿಸುವ ದೃಶ್ಯದಿಂದ ಪ್ರೇರಿತಳಾಗಿ ‘ರಾ… ರಾ ನಡುವೆ’ ಎಂಬ ಪದ್ಯ ರಚಿಸಿದ್ದಳು. ಆ ಕವನದಲ್ಲಿ ಒಂದು ಸಾಲು- ಬದುಕ ಚಿಲ್ಲರೆಯಾಗಿಸಿ ಎಂದು ಬರುತ್ತದೆ. ಇದು ನನ್ನನ್ನು ತಲ್ಲಣಿಸುವಂತೆ ಮಾಡಿಬಿಟ್ಟಿತ್ತು. ಈ ರೀತಿಯ ಎಕ್ಪ್ಸೋಷರ್ (Exposure) ಕೂಡ ನನ್ನನ್ನು ಬೆಳೆಸಿವೆ.

(ಕವಯಿತ್ರಿ ಚ.ಸರ್ವಮಂಗಳಾ ಜೊತೆ)

ಹಿಂದಿ ವಿಭಾಗದಲ್ಲಿದ್ದ ಗೆಳತಿ ಪ್ರೊ.ಜೆ. ಕುಸುಮಗೀತಾ ನನಗಿಂತ ಐದಾರು ವರ್ಷ ಸೀನಿಯರ್. ಆದರೂ ಇವಳ ಜೊತೆಗೂ ನೀನು ತಾನು ಗೆಳೆತನ ಬೆಳೆಯಿತು. ಕುಸುಮ ಸ್ವಭಾವ ತಾನಾಯಿತು, ತನ್ನ ಕೆಲಸವಾಯಿತು ಎಂಬಂತೆ. ಈಕೆ ತನ್ನ ಓದು ಮತ್ತು ಇತರೇ ಜವಾಬ್ದಾರಿಗಳನ್ನು ಬೆನ್ನಿನ ಮೇಲೆ ಹೊತ್ತ ಸಾಧಕಿ. ಕೇವಲ 19 ವರ್ಷಕ್ಕೇ ಅಧ್ಯಾಪಕಿಯಾಗಿ ಮಹಾರಾಜ ಕಾಲೇಜಿಗೆ ಕಾಲಿಟ್ಟು, ಗಂಗೋತ್ರಿಯಲ್ಲಿ ಪ್ರಾಧ್ಯಾಪಕಿಯಾಗಿ ನಿವೃತ್ತಿಯ ನಂತರವೂ ಓದು ಬರಹವನ್ನು ಮುಂದುವರೆಸುತ್ತಿದ್ದಾಳೆ. ಹೊರನಾಡುಗಳಲ್ಲಿ ಪ್ರೊ.ಜೆ.ಕುಸುಮಗೀತಾಳಿಗೆ ದೊಡ್ಡ ಹೆಸರಿದೆ. ಅನೇಕ ಸನ್ಮಾನಗಳು ಹಾಗೂ ಗೌರವಗಳಿಗೆ ಪಾತ್ರಳಾಗಿದ್ದಾಳೆ. ಇವಳು ಹಿಂದಿಯಿಂದ ಕನ್ನಡಕ್ಕೆ ಅನೇಕ ಕಾದಂಬರಿಗಳನ್ನು ತರ್ಜುಮೆ ಮಾಡಿದ್ದಾಳೆ. ಇವಳ ಆರೋಗ್ಯ ಕೊಂಚ ಏರುಪೇರಾದರೂ, ಏನಾಗಿಲ್ಲ ಸುಮಿತ್ರಾ, ಒಂದು ಕುರ್ಚಿ ಟೇಬಲ್ ಕೊಟ್ರೆ ಸಾಕು, ನಂಗಿನ್ನೇನೂ ಬೇಡವೆಂದು ಹೇಳುವ ಇವಳು ಓದಿಲ್ಲದೆ ಇವಳಿಲ್ಲ ಅನ್ನುವಂತಿದ್ದಾಳೆ. ‘ಅಕಾಡೆಮಿಷಿಯನ್’ಗೆ ಇನ್ನೊಂದು ಹೆಸರು ಜೆ.ಕುಸುಮ ಗೀತಾ. ಪರಸ್ಪರರ ಭಿನ್ನ ಅಭಿಪ್ರಾಯಗಳು ನಮ್ಮ ಸ್ನೇಹ ಸೇತುವೆಗೆ ಎಂದೂ ಅಡ್ಡಿ ಉಂಟುಮಾಡಿಲ್ಲ.

ಜೊತೆಗೆ ನನ್ನ ಬಾಲ್ಯ ಗೆಳತಿ ವಸಂತಮ್ಮ ಕೂಡ ನಮ್ಮ ಜೊತೆಗೂಡಿದಳು. ಹೆಚ್.ಎಂ.ವಸಂತಮ್ಮ ಮತ್ತು ನಾನು ಮಂಡ್ಯದ ಸರ್ಕಾರಿ ಪ್ರೈಮರಿ ಮೂರನೆಯ ತರಗತಿಯಿಂದ ಪಿ.ಯು.ಸಿ ವರೆಗೆ ಜೊತೆಯಾಗಿ ಓದಿದವರು. ಅವಳು ಪಿಯುಸಿಯಲ್ಲಿ ಎರಡು ವರ್ಷ ದಂಡಯಾತ್ರೆ ಹೊಡೆದ ಕಾರಣ ಹಿಂದೆ ಉಳಿದಳು. ಆಮೇಲೆ ಸ್ನಾತಕೋತ್ತರ ಸಮಾಜಶಾಸ್ತ್ರದಲ್ಲೆ ಪದವಿ ಪಡೆದು ಮಹಾರಾಜ ಕಾಲೇಜಿಗೆ ಅಧ್ಯಾಪಕಿಯಾಗಿ ಬಂದಳು. ಇವಳು ಧಾರಾಳಿ. ಸಹಾಯ ಬಯಸುವವರ ಸಮಸ್ಯೆಗಳನ್ನು ತನ್ನದೇ ಎಂಬಂತೆ ಇವಳು ಭಾವಿಸುತ್ತಿದ್ದಳು. ಇದೆಲ್ಲಾ ಗೊತ್ತಿದ್ದರಿಂದಲೇ ನಾನೊಂದು ದಿನ- ವಸಂತ ನೀನು ಎಲೆಕ್ಷನ್ ಗೆ ನಿಂತರೆ ಖಂಡಿತಾ ಗೆಲ್ಲುತ್ತೀಯಾ… ಸಮಾಜಕ್ಕೆ ಒಳ್ಳೆಯ ಅಸ್ಸೆಟ್ ಆಗ್ತೀಯಾ ಎಂದು ಹೇಳಿದೆ. ಆ ಕೂಡ್ಲೆ ಅವಳ ಪತಿ ನೀಲಂ (ಪ್ರೊ.ನೀಲಿಸಿದ್ದಯ್ಯ) ಅವರು- ಇದು ನೋಡ್ರೀ ಮನೆ ಹಾಳ್ ಮಾಡೋ ಸಲಹೆ ಎಂದು ನನ್ನನ್ನೂ ವಸಂತನನ್ನೂ ಒಟ್ಟಿಗೆ ಸ್ನಬ್ ಮಾಡಲು ಯತ್ನಿಸಿದರು. ಅವರಿಗೂ ಒಳಗೊಳಗೆ ಗಾಬರಿ ಇತ್ತೇನೊ! ಇರಲಿ, ಆದರೆ ವಸಂತಳ ನೆಟ್ವರ್ಕ್ ಮತ್ತು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳನ್ನು ಗಮನಿಸಿದಾಗಲೆಲ್ಲ ಇವಳು ರಾಜಕೀಯಕ್ಕಿಳಿದಿದ್ದರೆ ಉಜ್ವಲ ಭವಿಷ್ಯ ಇರುತ್ತಿತ್ತು ಎಂದೇ ಈಗಲೂ ಅನ್ನಿಸುತ್ತಿರುತ್ತದೆ.

ಪ್ರೊ.ಚನ್ನಯ್ಯ ಅವರು ಜಗತ್ತಿನ ಸಮಕಾಲೀನ ಕೃತಿಗಳ ಬಗ್ಗೆ ಅದರಲ್ಲೂ ಆಲ್ಬರ್ಟ್ ಕ್ಯಾಮೂ ಬಗ್ಗೆ ಅರೆದು ಕುಡಿದವರಂತೆ ಮಾತಾಡುತ್ತಿದ್ದರು. ಜೊತೆಗೆ ಇವರು ರಂಗಭೂಮಿಯ ಕಲಾವಿದರು ಕೂಡ. “ಸಮತೆಂತೋ” (ಸರಸ್ವತಿಪುರಂ ಮಧ್ಯದಲ್ಲಿರುವ ತೆಂಗಿನ ತೋಟ) ಎಂಬ ಹವ್ಯಾಸಿ ರಂಗತಂಡ ಕಟ್ಟಿದವರಲ್ಲಿ ಪ್ರಮುಖರು. ಅನೇಕಾನೇಕ ಅಭಿರುಚಿಯನ್ನು ಬದಲಿಸಿಬಿಡುವಂತಹ ನಾಟಕಗಳನ್ನು ಸಮತೆಂತೋ ಪ್ರದರ್ಶಿಸಿದೆ. ಇಂದು ಈ ಹವ್ಯಾಸಿ ರಂಗಭೂಮಿಯ ದಿಗ್ಗಜ ಡಾ.ನಾ.ರತ್ನ ಅವರು ಗರುಡಗಂಭದಂತೆ ನಮ್ಮ ನಡುವೆ ಇದ್ದಾರೆ.

(ಫೋಟೋ: ನೇತ್ರರಾಜು)

ಆಗ ಮಹಾರಾಜ ಕಾಲೇಜಿನ ರೂಂ ನಂ 38ರಲ್ಲಿ ಯಾವಾಗಲೂ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ತರಗತಿಗಳಿರುತ್ತಿದ್ದವು. ಒಂದು ದಿನ ವಿದ್ಯಾರ್ಥಿಗಳು ನನ್ನ ಪಾಠದ ಕಡೆ ಗಮನ ಕೊಡುತ್ತಿಲ್ಲದ್ದನ್ನು ಕಂಡು ಯಾಕೆ ಈ ಗಲಿಬಿಲಿ ಎಂದು ಮುಂದಿನ ಸಾಲಿನಲ್ಲಿ ಕುಳಿತಿದ್ದ ಇಬ್ಬರು ಹುಡುಗರ ಕಡೆ ನೋಡಿದೆ. ಅವರು ಅದೇಕೋ ನನ್ನ ಹೊಟ್ಟೆ ಕಡೆಗೆ ನೋಡುತ್ತಿದ್ದಾರೆಂದು ಅನ್ನಿಸಿ, ಬೈಯ್ಯೋಣಾಂದ್ರೆ ಏನಂತ? ಎಂದು ಮುಜುಗರಕ್ಕೆ ಒಳಗಾಗಿ ಪಾಠವನ್ನು ಮುಂದುವರೆಸುವುದು ಕಷ್ಟವಾಗುತ್ತಿತ್ತು. ಇನ್ನು ಕೆಲವು ವಿದ್ಯಾರ್ಥಿಗಳು ಪರಸ್ಪರ ಏನನ್ನೋ ಪಿಸಪಿಸನೆ ಮಾತಾಡ್ತಾ ಇದ್ದರು. ನನ್ನ ಕೋಪ ಹೆಚ್ಚತೊಡಗಿತು. ಸರಿಯಾಗಿ ಪಾಠ ಮಾಡಲಾಗಲಿಲ್ಲ, ಯಾರೂ ಪಾಠವನ್ನು ಕೇಳಿಸಿಕೊಳ್ಳುತ್ತಲೂ ಇರಲಿಲ್ಲ. ಗಂಟೆ ಹೊಡೆಯಿತು. ಕೆಲವು ವಿದ್ಯಾರ್ಥಿಗಳು ಅಯ್ಯೋ ಎಂದು ಲೊಚಗುಟ್ಟಿದರು. ಕಾರಣ ತಿಳಿಯದೆ ಹಾಜರಿ ಪುಸ್ತಕವನ್ನು ಎತ್ತಿಕೊಂಡು ಇಳಿಯುವಾಗ ಸೀರೆಯ ನೆರಿಗೆಗಳನ್ನು ಕೈಯಲ್ಲಿ ಎತ್ತಿ ಹಿಡಿದುಕೊಂಡು ಕೊಂಚ ಬಗ್ಗಿದಾಗ ಗಾಬರಿಯಾಗಿ ಬೆವರು ಬರಲು ಶುರುವಾಯಿತು. ಏಕೇಂದ್ರೆ ನಾ ಉಟ್ಟಿದ್ದ ನೈಲೆಕ್ಸ್ ಸೀರೆಯ ಮುಕ್ಕಾಲು ನೆರಿಗೆಗಳು ಸೊಂಟದಾಚೆ ಬಂದು ಬಿಟ್ಟಿದ್ದವು. ಅಪ್ಪಿತಪ್ಪಿ ಚಪ್ಪಲಿಗೇನಾದರೂ ಸ್ವಲ್ಪ ಸಿಕ್ಕಿಕೊಂಡಿದ್ದರೆ ಇಡೀ ಸೀರೆ ವಿದ್ಯಾರ್ಥಿಗಳ ಮುಂದೆ ಬಿದ್ದುಹೋಗುತ್ತಿತ್ತು. ಯಾಕೆ ವಿದ್ಯಾರ್ಥಿಗಳು ಮರ್ಯಾದೆ ಮೀರಿ ನೋಡುತ್ತಿದ್ದರೆಂದು ಆಗ ಅರ್ಥವಾಯಿತು. ಬಹುಶ: ಅವರ ಗಮನ ಪೂರ್ತಿ ನೆರಿಗೆಗಳು ಈಗ ಬೀಳಬಹುದು ಇನ್ನೇನು ಬೀಳಬಹುದೆಂಬ ಕಾತರ ಮತ್ತು ನಿರೀಕ್ಷೆಯಲ್ಲಿದ್ದು ಅದು ಫಲಿಸದೇ ಹೋದಕಾರಣ ಲೊಚಗುಟ್ಟುವಿಕೆಯಲ್ಲಿ ಕೊನೆಗೊಂಡಿತ್ತು. ಆಮೇಲೆ ನೆರಿಗೆಗಳಿಗೆ ಪಿನ್ನು ಹಾಕುವುದನ್ನು ರೂಢಿಸಿಕೊಂಡೆನು.

ಈ ಸಂದರ್ಭದಲ್ಲಿ ನಾನು ಎಂ.ಎ. ಓದುವಾಗ ನಮ್ಮ ಪ್ರೊ. ಪಾರ್ವತಮ್ಮನವರ ತಮಾಷೆಯ ಮಾತುಗಳು ನೆನಪಾದವು. ಏನ್ ಸುಮಿತ್ರಾ, ನೀನು ಮೇಡಂ ಆದ್ರೂ ಹೀಗೆ ಎರಡು ಜಡೆ, ಲಂಗದಾವಣಿಯಲ್ಲೇ ತರಗತಿಗಳಿಗೆ ಹೋಗಿ ಪಾಠ ಮಾಡ್ತೀಯಾ? ಎಂದು ಮೂದಲಿಸುತ್ತಿದ್ದರು. ನಂಗೆ ಸೀರೆ ಉಟ್ಕೋಳೋಕೆ ಬರಲ್ಲ ಮೇಡಂ, ಆಗ ಅಭ್ಯಾಸ ಮಾಡಿಕೊಳ್ತೀನಿ ಎಂದು ಬಿಗುಮಾನದಿಂದ ಉತ್ತರಿಸಿದ್ದೆ. ಈಗ ಸೀರೆ ಉಡುವುದು ಎಷ್ಟು ಕಷ್ಟವೆಂದು ಅರಿವಿಗೆ ಬಂದಿತ್ತು. ಆ ಘಟನೆಯಿಂದಾಗಿ ಈಗಲೂ ನೈಲಾನ್ ಸೀರೆ ಉಡುವುದಿರಲಿ, ಅದನ್ನು ನೆನಪಿಸಿಕೊಳ್ಳುವುದೂ ಇಲ್ಲ.

ಆದರೆ ಮುಂದೆ ನಾನೇ ಸೀರೆ ಉಡಿಸುವ ಕಾಲವೂ ಬಂತು. ಅದೂ ಹುಡುಗರಿಗೆ! ಮಹಾರಾಜ ಕಾಲೇಜಿನ ಕಾಲೇಜ್ ಡೇ ಎಂದರೆ ಎರಡು-ಮೂರು ದಿನಗಳ ಕಾಲ ಸಂಭ್ರಮವೋ ಸಂಭ್ರಮ. ಸಾಹಿತ್ಯ, ಸಂಗೀತ, ಕಲೆ, ನಾಟಕಗಳ ಬಗ್ಗೆ ಸ್ಪರ್ಧೆಗಳು ಒಂದು ವಾರ ಕಾಲ ನಡೆಯುತ್ತಿದ್ದವು. ಕಾಲೇಜ್ ಡೇ ಸಂಜೆಯ ಕಾರ್ಯಕ್ರಮಗಳನ್ನು ವೀಕ್ಷಿಸಲು ಅಧ್ಯಾಪಕರೆಲ್ಲರೂ ಕೊಠಡಿಯಲ್ಲಿ ಕಾಯುತ್ತಿದ್ದೆವು. ನಾನು ಬೆಳಿಗ್ಗೆ ಎರಡು ತರಗತಿಗಳ ಪಾಠ ಮಾಡಿ ಹಾಸ್ಟಲ್ ಗೆ ಹೋಗದೆ ಕಾಲೇಜಿನ ಕಾರ್ಯಕ್ರಮಗಳನ್ನೂ ಮುಗಿಸಿ ಹೊರಡುವುದೆಂದು ತೀರ್ಮಾನಿಸಿ, ಸಹ ಅಧ್ಯಾಪಕಿಯರ ಜೊತೆ ಕುಳಿತಿದ್ದೆ. ಆಗ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು, ಯಾರೋ ನನ್ನನ್ನು ಕರೆಯುತ್ತಿದ್ದಾರೆಂದನು. ವಿಷಯವೇನೆಂದು ಕೇಳಿದರೆ ಗೊತ್ತಿಲ್ಲ ಎಂದುತ್ತರಿಸಿದನು. ಆ ಹುಡುಗ ನಮ್ಮ ಸಮಾಜಶಾಸ್ತ್ರ ವಿಭಾಗದ ಮುಖಸ್ಥರ ಕೊಠಡಿಗೆ ಕರೆದೊಯ್ದನು. ಕೊಠಡಿಯ ಒಳಕ್ಕೆ ಕಾಲಿಡುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಗೌರವ ಸೂಚಿಸಿದರು. ಆಮೇಲೆ ಏನು ವಿಷಯ? ಎಂದು ಕೇಳಿದಾಗ, ಅವರು ಪರಸ್ಪರ ಮುಖಗಳನ್ನು ನೋಡುತ್ತಿದ್ದರೇ ಹೊರತು ಉತ್ತರಿಸಲಿಲ್ಲ. ಆಗ ಸೀರೆ ಉಟ್ಟು ತಲೆಗೆ ಟೋಫನ್ ಹಾಕಿ, ಸುಂದರ ಹುಡುಗಿಯನ್ನೂ ನಾಚಿಸುವಂತೆ ಮುಖ ಮೇಕಪ್ ಮಾಡಿಕೊಂಡು ಕಂಗೊಳಿಸುತ್ತಿದ್ದವ ಸಂಕೋಚದಿಂದ ವಿನಯವಾಗಿ ನಮಸ್ಕಾರ ಮೇಡಂ ಎಂದನು. ಅವನನ್ನು ನಖಶಿಖಾಂತ ಒಂದು ಸಲ ಗಮನಿಸಿ ಬಂದ ನಗುವನ್ನು ತಡೆದುಕೊಂಡು, ಯಾರು ಬರಹೇಳಿದ್ದು ಎಂದಾಗ ಅಲ್ಲಿದ್ದ ನಾಟಕದ ಮೇಷ್ಟ್ರು- ಏನಿಲ್ಲ ಮೇಡಮ್ಮೋರೆ, ನಾವೇ ಸೀರೆ ಚೆನ್ನಾಗಿ ಉಡಿಸಿದ್ದೇವೆ, ಆದರೆ ಮುಂದಕ್ಕೆ ಹೆಜ್ಜೆ ಹಾಕಲಾಗುತ್ತಿಲ್ಲ, ಈ ತೊಂದರೆಗೆ ಕಾರಣ ತಿಳಿಯುತ್ತಿಲ್ಲ, ಸ್ವಲ್ಪ ಈ ಹುಡುಗ ಉಟ್ಟಿರುವ ಸೀರೆ ಸರಿಮಾಡಿಕೊಡಿ ಎಂದರು. ನನಗೂ ತಕ್ಷಣಕ್ಕೆ ಕಾರಣ ತಿಳಯಲಿಲ್ಲ.

ಅಷ್ಟು ಚೆನ್ನಾಗಿ ಮುಂಬದಿಯಿಂದ ಸೀರೆಯ ಸೆರಗನ್ನು ನೆರಿಗೆ ಹಿಡಿದು ಭುಜದ ಮೇಲಕ್ಕೆ ತಂದು ಪಿನ್ನು ಹಾಕಿದ್ದರು. ಒಂದು ಕ್ಷಣ, ಎಷ್ಟು ಚೆನ್ನಾಗಿ ಸೀರೆ ಉಡಿಸಿದ್ದಾರೆನ್ನಿಸಿತು. ಸೀರೆ ಉಡಿಸಿರುವುದರಲ್ಲಿ ದೋಷ ಕಾಣಲಿಲ್ಲ. ಆ ಹುಡುಗನಿಗೆ ಒಂದು ರೌಂಡ್ ತಿರುಗುವಂತೆ ಮಾಡಿದೆ. ಉಹುಂ ಏನೂ ಗೊತ್ತಾಗಲಿಲ್ಲ. ಆದರೆ ಸಿಕ್ಕ ಸಿಕ್ಕ ಕಡೆ ಸೇಫ್ಟಿ ಪಿನ್ನುಗಳನ್ನು ಸಿಕ್ಕಿಸಿರುವುದು ಕಾಣಿಸಿತು. ಆಮೇಲೆ ಅವನಿಗೆ ಮುಂದೆ ಹೆಜ್ಜೆ ಹಾಕಲು ಹೇಳಿದೆ. ಆಗ ಹಿಂಬದಿಯ ಸೀರೆಯು ಮೊಣಕಾಲು ತನಕ ಎತ್ತಿಕೊಂಡಿತು. ಇನ್ನೊಂದು ಹೆಜ್ಜೆ ಹಾಕಲು ಸಾಧ್ಯವಾಗಲಿಲ್ಲ. ಯಾಕೆ ಹೀಗಾಗಿದೆ ಎಂದು ಹತ್ತಿರದಿಂದ ಗಮನಿಸಿ ಕಾರಣ ಗೋಚರಿಸಿದಾಕ್ಷಣ ನಗದೆ ಇರಲಾಗಲಿಲ್ಲ. ಅಲ್ಲಿದ್ದ ಎಲ್ಲರೂ ಪೆಚ್ಚಾಗಿ ನನ್ನನ್ನೇ ಪಿಳಪಿಳಾಂತ ನೋಡಿದರು. ಆ ಸ್ತ್ರೀ ವೇಷಧಾರಿಯ ಮುಖ ಕೆಂಪು ಕೆಂಪಾಗಿ ನಾಚಿ ನೀರಾಗಿ ಥೇಟ್ ಹೆಣ್ಣೇ ಆಗಿಬಿಟ್ಟಿತು. ಇಬ್ಬರು ಮೂವರು ಹುಡುಗರು ಸೇರಿಕೊಂಡು, ಒಬ್ಬ ನೆರಿಗೆ ಹಿಡಿದರೆ, ಮತ್ತೊಬ್ಬ ಸೆರಗನ್ನು ನೀಟಾಗಿ ಎಳೆದು ಪಿನ್ನುಗಳನ್ನು ಚುಚ್ಚಿದ್ದನು. ಸೀರೆ ಉಡಿಸುವ ಭರದಲ್ಲಿ ಒಳಸೆರಗಿನ ತುದಿಯನ್ನು ಮುಂದೆ ಸೊಂಟಕ್ಕೆ ಸಿಕ್ಕಿಸಿದ ನಂತರ, ಸೀರೆಯನ್ನು ಹಿಂಬದಿಯಿಂದ ಸುತ್ತಿಕೊಂಡು ಮತ್ತೆ ಮುಂದಕ್ಕೆ ತರುವಾಗ ಎರಡು ಮೂರು ನುಲಿಗೆಯಾಗಿ ಸುತ್ತಿಕೊಂಡು ಬಿಟ್ಟಿತ್ತು. ಇದನ್ನು ಲೆಕ್ಕಿಸದೆ, ಆ ಮೇಷ್ಟ್ರು ನೆರಿಗೆ ಹಿಡಿದು ಸೀರೆಯ ಸೆರಗನ್ನು ಚಂದವಾಗಿ ಹಿಡಿದು ಪಿನ್ನುಗಳನ್ನು ಹಾಕಿದ್ದನು. ಆದ ಕಾರಣ, ನಡೆದಾಡಿದರೆ ಹಿಂದುಗಡೆಯ ಸೀರೆ ಮೇಲುಮೇಲಕ್ಕೇರುತ್ತಿತ್ತು. ಆಗ ಅದು ಬ್ರಾಹ್ಮಣ ಸ್ತ್ರೀಯರು ಹಾಕುತ್ತಿದ್ದ ಒಳಗಚ್ಚೆಯಂತೆ ಕಾಣುತ್ತಿತ್ತು. ಇದನ್ನು ತಡೆಯಲು, ಸೀರೆಗೆ ಎಳೆದೆಳೆದು ನುಲಿಗೆಯನ್ನು ಸೇರಿಸಿ ಸಾಲಾಗಿ ಪಿನ್ನುಗಳನ್ನು ಜಡಿದಿದ್ದರು. ಅದು ರೇಷ್ಮೆಸೀರೆಯಾದ್ದರಿಂದ ಭದ್ರವಾಗಿ ಪಿನ್ನುಗಳನ್ನು ಚುಚ್ಚಿದ್ದ ಕಡೆಗಳಲೆಲ್ಲ್ಲ ಪಸೆದು ಹೋಗಿತ್ತು. ಆ ಸೀರೆಗಾದ ಗತಿಯನ್ನು ಕಂಡು, ಯಾರ ಸೀರೆ ಇದು? ಎಂದೆ. ಕಾವೇರಮ್ಮ ಮೇಡಂದು ಎಂದರು. ಇದನ್ನು ಅವರು ಮತ್ತೆ ಉಡದಂತೆ ಮಾಡಿದ್ದೀರಿ ಎಂದು ರೇಗಿ, ಸೀರೆಯನ್ನು ಪೂರ್ತಿ ಬಿಚ್ಚಬೇಕೆಂದು ಸೂಚಿಸಿದೆ. ಅಯ್ಯಯ್ಯೋ ಅದೊಂದನ್ನು ಸರಿಮಾಡಿಕೊಡಿ ಸಾಕು, ಉಳಿದದ್ದು ಚೆನ್ನಾಗೇ ಇದೆ ಎಂದು ಸೀರೆ ಉಡಿಸಿದ ಮಹಾನುಭಾವ ಅಂದನು. ನುಲಿದುಕೊಂಡು ಗಂಟಾಗಿರುವ ಜಾಗದಲ್ಲಿ ಸೀರೆಯನ್ನು ಕತ್ತರಿಸಬೇಕು ಅಷ್ಟೇ ಎಂದಾಗ ಅವರ ತಲೆಯೊಳಕ್ಕೆ ನನ್ನ ಮಾತುಗಳು ನಾಟಿ ಆಮೇಲೆ ಸೀರೆ ರಿಪೇರಿ ಮಾಡಿಕೊಟ್ಟಿದ್ದಾಯ್ತು.

ಈ ಸೀರೆ ಉಡಿಸುವ (ಸ್ತ್ರೀ ಪಾತ್ರದಾರಿಗೆ) ಕಾಯಕ ನನ್ನ ಬೆನ್ನು ಹತ್ತಿದ್ದು, ಸಂಜೆ ಕಾಲೇಜಿಗೆ ವರ್ಗವಾದಗಲೂ ಬಿಡಲಿಲ್ಲ. ಮೈ ವಿ.ವಿ ಸಂಜೆ ಕಾಲೇಜಿನ ವಾರ್ಷಿಕ ಸಮಾರಂಭದ ದಿನ, ಸಭಿಕರ ಸಾಲಿನಲ್ಲಿ ಕುಳಿತುಕೊಂಡಿರುವಾಗ ವಿದ್ಯಾರ್ಥಿಯೊಬ್ಬ ಮೆಲ್ಲನೆ ನನ್ನ ಬಳಿ ಬಂದು ಮೇಡಂ ಪ್ರಿನ್ಸಿಪಾಲ್ ಕರೀತಿದ್ದಾರೆ ಎಂದನು. ಅವನ ಜೊತೆ ಗ್ರೀನ್ ರೂಂಗೆ ಹೋದೆನು. ಬಹುಶಃ ಹುಡುಗನಿಗೆ ತುರುಬು ಕಟ್ಟಬೇಕಾಗಿರಬಹುದೆಂದು ಯೋಚಿಸಿದೆ. ಅಲ್ಲಿ ಪ್ರೊ. ಪುಟ್ಟಮಾದಪ್ಪನವರು ಕುರ್ಚಿಯಲ್ಲಿ ಕುಳಿತಿದ್ದರು. ನಮಸ್ಕಾರ ಹೇಳಿದೆ. ಆಗ ಅವರು, ಈ ಹುಡುಗನಿಗೆ ಸೀರೆ ಉಡಿಸಿಕೊಡಿ, ಇವರ್ಯಾರಿಗೂ ಬರ್ತಾಯಿಲ್ಲ ಎಂದರು. ಅಲ್ಲಾ ಅಷ್ಟು ಜನ ಮೇಡಂಗಳಿದ್ದಾರೆ ನನ್ನನ್ನೇ ಏಕೆ ಕರೆದರೆಂದು ಊಹಿಸದಾದೆ. ಯಾರಿಗೆ ಉಡಿಸಬೇಕು ಸಾರ್? ಎಂದುದಕ್ಕೆ ಅದೋ ಅಲ್ಲಿ ನಿಂತಿದ್ದಾನಲ್ಲ ಅವನಿಗೆ ಎಂದರು. ಆ ಹುಡುಗ ಲಟಾಪಟಿ ಹಂಡೆ ಚಡ್ಡಿ ಧರಿಸಿ ಕೈಯಲ್ಲಿ ಸೀರೆ ಹಿಡಿದುಕೊಂಡು ಸಂಕೋಚದಿಂದ ನನ್ನನ್ನು ನೋಡುತ್ತಿದ್ದನು. ನಾನು ಅವನನ್ನು ಸಮೀಪಿಸಿ, ಹುಡುಗೀರನ್ನು ಚುಡಾಯಿಸುವುದಕ್ಕೆ ಬರುತ್ತೆ… ಸೀರೆ ಉಡೋಕ್ಕೆ ಬರಲ್ವಾ? ಎಂದೆ. ಆ ಹುಡುಗ ತಲೆ ತಗ್ಗಿಸಿ ನಾಚಿ ನೀರಾದನು. ಸೀರೆಯ ಒಳ ಸೆರಗು, ಮೇಲ್ ಸೆರಗು ಮತ್ತು ನೀಟಾಗಿ ನೆರಿಗೆಗಳನ್ನು ಹಿಡಿದು ಅವನ ಕೈಗೆ ಕೊಟ್ಟು, ತೊಗೊಂಡು ಒಳಕ್ಕೆ ತುರಿಕಿ ಎಂದಂದು ಹೊರಡಲನುವಾದೆನು. ಆ ಹುಡುಗ ನೆರಿಗೆಗಳನ್ನು ಹಿಡಿದುಕೊಂಡು ಹಾಗೇ ನಿಂತೇ ಇದ್ದನು. ಒಳಲಂಗ ಧರಿಸದಿದ್ದ ಕಾರಣ, ತನ್ನ ಚೆಡ್ಡಿಯೊಳಕ್ಕೆ ಹೇಗೆ ಸೇರಿಸಬೇಕೆಂದು ಗೊತ್ತಾಗಿಲ್ಲವೆಂದುಕೊಂಡು, ಪ್ರಾಂಶುಪಾಲರಿಗೆ, ಸಾರ್ ನಾನಿನ್ನು ಹೊರಡುತ್ತೇನೆ. ಪೆಟ್ಟಿಕೋಟ್ ಧರಿಸಿಕೊಂಡು ನೆರಿಗೆಗಳನ್ನು ಸೊಂಟಕ್ಕೆ ಸೇರಿಸಬೇಕು ಎಂದು ಹೇಳಿದಾಗ, ನನ್ನಿಂಗಿತ ಅರ್ಥವಾಗಿ ಹುಸಿನಗುತ್ತ ಆಯ್ತು ಎಂದರು.

ಮಹಾರಾಜ ಕಾಲೇಜಿನಲ್ಲಿ ದಿನಾ ಸಂಜೆ ಒಂದಲ್ಲ ಒಂದು ಕಾರ್ಯಕ್ರಮ ಇದ್ದೇ ಇರುತ್ತಿತ್ತು. ಸಂಸ್ಕೃತ ಪ್ರಾಧ್ಯಾಪಕ ಪ್ರೊ.ಸಿ.ಜಿ. ಪುರುಷೋತ್ತಮ್ ರವರು ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾಗಿದ್ದರು. ಶ್ರೇಷ್ಠ ವಿದ್ವಾಂಸರಿಂದ, ವಿಷಯ ಪರಿಣಿತರಿಂದ ಸಾಹಿತ್ಯ ಸಂಸ್ಕೃತಿಯ ಬಗ್ಗೆ ಅದ್ಬುತವಾದ ಭಾಷಣ ಚರ್ಚೆ ಏರ್ಪಡಿಸುತ್ತಿದ್ದರು. ಈ ಕಾರ್ಯಕ್ರಮಗಳು ಸಾಮಾನ್ಯವಾಗಿ ಸಂಜೆ 5ರಿಂದ ರಾತ್ರಿ 8 ಗಂಟೆಯತನಕವಿರುತ್ತಿತ್ತು. ಆಗ ನಾವಿದ್ದ ಹಾಸ್ಟೆಲ್ ಗೂ ಕಾಲೇಜಿಗೂ ಸುಮಾರು ಮೈಲಿ ದೂರವಾಗುತ್ತಿತ್ತು. ಬಸ್ಸುಗಳ ಸೌಕರ್ಯ ಈಗಿನಂತಿರಲಿಲ್ಲವಾದ್ದರಿಂದ, ನಾನು ಮತ್ತು ಗೆಳೆತಿ ಮಂಗಳಾ ಹಾಸ್ಟೆಲ್ ಗೆ ನಡೆದೇ ಹೋಗಬೇಕಾಗುತ್ತಿತ್ತು. ಆಗ ನಮ್ಮ ಶಿಷ್ಯರು ನಮ್ಮನ್ನು ಹಾಸ್ಟೆಲ್ ತಲುಪಿಸುವ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದರು. ಆಗ ಈ ರಾಧಕೃಷ್ಣನ್ ಮಾರ್ಗ ಕಾಡಿನ ನಡುವೆ ಇದ್ದಂತಿತ್ತು. ರಾತ್ರಿಹೊತ್ತು ಜನ ಸಂಚಾರವಿರುತ್ತಿರಲಿಲ್ಲ. ಈ ದೂರವನ್ನು ನೆನೆದು, ಇನ್ನು ಮುಂದೆ ಯಾವ ಕಾರ್ಯಕ್ರಮಕ್ಕೂ ಬರಬಾರದೆಂದು ತೀರ್ಮಾನಿಸುತ್ತಿದ್ದರೂ ಅದು ದಾಸಯ್ಯಗಳು ರಾತ್ರಿಯಾದ ಕೂಡಲೆ ನಾಳೆ ಗ್ಯಾರಂಟಿ ಮನೆಕಟ್ಟಿಕೊಳ್ಳಲೇಬೇಕೆಂದು ತೀರ್ಮಾನಿಸಿ ಬೆಳಿಗ್ಗೆ ಆ ತೀರ್ಮಾನ ನೆನಪಲ್ಲಿ ಉಳಿಯದೆ ಕಾಲ ಕಳೆಯುವ ಕಥೆಯಂತೆ ಆಗುತ್ತಿತ್ತು.

(ಚದುರಂಗರ ಜೊತೆಗೆ ಮಹಾರಾಜಾ ಕಾಲೇಜಿನಲ್ಲಿ)

ಕೊಠಡಿಯ ಒಳಕ್ಕೆ ಕಾಲಿಡುತ್ತಿದ್ದಂತೆ ಎಲ್ಲ ವಿದ್ಯಾರ್ಥಿಗಳು ಎದ್ದು ನಿಂತು ಗೌರವ ಸೂಚಿಸಿದರು. ಆಮೇಲೆ ಏನು ವಿಷಯ? ಎಂದು ಕೇಳಿದಾಗ, ಅವರು ಪರಸ್ಪರ ಮುಖಗಳನ್ನು ನೋಡುತ್ತಿದ್ದರೇ ಹೊರತು ಉತ್ತರಿಸಲಿಲ್ಲ. ಆಗ ಸೀರೆ ಉಟ್ಟು ತಲೆಗೆ ಟೋಫನ್ ಹಾಕಿ, ಸುಂದರ ಹುಡುಗಿಯನ್ನೂ ನಾಚಿಸುವಂತೆ ಮುಖ ಮೇಕಪ್ ಮಾಡಿಕೊಂಡು ಕಂಗೊಳಿಸುತ್ತಿದ್ದವ ಸಂಕೋಚದಿಂದ ವಿನಯವಾಗಿ ನಮಸ್ಕಾರ ಮೇಡಂ ಎಂದನು. ಅವನನ್ನು ನಖಶಿಖಾಂತ ಒಂದು ಸಲ ಗಮನಿಸಿ ಬಂದ ನಗುವನ್ನು ತಡೆದುಕೊಂಡು, ಯಾರು ಬರಹೇಳಿದ್ದು ಎಂದಾಗ ಅಲ್ಲಿದ್ದ ನಾಟಕದ ಮೇಷ್ಟ್ರು- ಏನಿಲ್ಲ ಮೇಡಮ್ಮೋರೆ, ನಾವೇ ಸೀರೆ ಚೆನ್ನಾಗಿ ಉಡಿಸಿದ್ದೇವೆ, ಆದರೆ ಮುಂದಕ್ಕೆ ಹೆಜ್ಜೆ ಹಾಕಲಾಗುತ್ತಿಲ್ಲ, ಈ ತೊಂದರೆಗೆ ಕಾರಣ ತಿಳಿಯುತ್ತಿಲ್ಲ, ಸ್ವಲ್ಪ ಈ ಹುಡುಗ ಉಟ್ಟಿರುವ ಸೀರೆ ಸರಿಮಾಡಿಕೊಡಿ ಎಂದರು.

ಅದ್ಭುತವಾಗಿರುತ್ತಿದ್ದ ಉಪನ್ಯಾಸಗಳ ಮುಂದೆ ಯಾವ ಕಷ್ಟವೂ ನೆನಪಾಗುತ್ತಿರಲಿಲ್ಲ. ಕೆಲವೊಮ್ಮೆ ಮಧ್ಯದಲ್ಲೇ 7 ಗಂಟೆಗೆ ಎದ್ದು ಹೋದರಾಯಿತೆಂದುಕೊಂಡಿದ್ದೂ ಕೂಡ ಮರೆತು ಹೋಗುತ್ತಿತ್ತು. ಪ್ರೊ.ಪುರುಷೋತ್ತಮ್ ರವರು ನಮಗಿಂತ ತುಂಬಾ ಸೀನಿಯರ್ ಟೀಚರ್ ಆಗಿದ್ದರೂ ನಮ್ಮೊಟ್ಟಿಗೆ ಸಮಾನವಾಗಿರುತ್ತಿದ್ದರು. ಕೆಲವು ಸಲ ನಮ್ಮನ್ನು ಹಾಸ್ಟೆಲ್ಗೆ ತಲುಪಿಸಲು ತಮ್ಮ ಸೈಕಲ್ ತಳ್ಳಿಕೊಂಡು ನಡೆದು ಬರುತ್ತಿದ್ದರು. ಆ ದಿನಗಳಲ್ಲಿ ಹೆಣ್ಣು ಮಕ್ಕಳ ಜವಾಬ್ದಾರಿಯನ್ನು ಪ್ರಾಧ್ಯಾಪಕರು, ವಿದ್ಯಾರ್ಥಿಗಳು ತಮ್ಮ ಕರ್ತವ್ಯವೆಂದು ಭಾವಿಸಿದ್ದರು.

ಜೊತೆಗೆ ನನಗೆ ಹೊಸತೆನ್ನಿಸುವ ಅನೇಕ ವಿದ್ಯಮಾನಗಳೂ ಇದ್ದವು. ಒಂದು ದಿನ ಕನ್ನಡದ ಅಧ್ಯಾಪಕರಾದ ಪ್ರೊ.ಎನ್. ಬೋರಲಿಂಗಯ್ಯನವರು, ನಾನೊಬ್ಬಳೇ ಕುಳಿತು ಓದುತ್ತಿರುವಾಗ ಹತ್ತಿರ ಬಂದು- ಏನ್ ಮೇಡಂ ಮತ್ತೆ ಕ್ಲಾಸಿದೆಯಾ ಎಂದರು. ಓದುತ್ತಿದ್ದವಳು ಕತ್ತೆತ್ತಿ ಅವರ ಮುಖ ನೋಡಿದೆ. ಈ ಮುಂಚೆ ಇವರನ್ನು ನೋಡಿರಲಿಲ್ಲ. ಹೂಂ ಸರ್ ಇದೆ ಎಂದೆನು. ಆಗ ಅವರು ಬನ್ನಿ ಕ್ಯಾಂಟಿನ್ ಗೆ ಹೋಗಿ ಕಾಫಿ ಕುಡಿದು ಬರೋಣ ಎಂದರು! ಮತ್ತೆ ಅವರನ್ನು ದಿಟ್ಟಿಸಿ ನೋಡಿದೆ. ಅಲ್ಲಿ ಯಾವ ಕಲ್ಮಷವೂ ಗೋಚರಿಸಲಿಲ್ಲವಾದರೂ, ಇಲ್ಲ… ಸಾರ್ ಪಾಠಕ್ಕೆ ರೆಡಿಯಾಗಬೇಕಿದೆ ಎಂದು ಖಡಕ್ ಆಗಿ ಹೇಳಿ ಮಿಸುಕಾಡದೆ ಕುಳಿತೆ. ಮನುಷ್ಯ ಜಗ್ಗಲಿಲ್ಲ. ಏನು? ನೀವು ಸೋಷಿಯಾಲಜಿ ಮೇಡಂ ಆಗಿ ಅನ್ ಸೋಷಿಯಲ್ ಆಗಿದ್ದೀರಿ! ಎಂದರು. ಅಯ್ಯಯ್ಯಪ್ಪಾ ಇವರು ನನ್ನ ಮೂಲ ಸ್ವಭಾವವನ್ನು ಪ್ರಶ್ನಿಸುತ್ತಿದ್ದಾರೆ ಎಂದು ಅರೆಕ್ಷಣ ಅವಾಕ್ಕಾದೆನು. ನಿರ್ವಾಹವಿಲ್ಲದೆ ಪುಸ್ತಕ ಮುಚ್ಚಿಟ್ಟು ಅವರ ಜೊತೆ ನಿಧಾನಕ್ಕೆ ಹೊರಟೆ. ಆನಂತರ ಒಂದಿಬ್ಬರು ಹೊಸ ಅಧ್ಯಾಪಕರೂ ನಮ್ಮ ಜೊತೆ ಸೇರಿಕೊಂಡರು. ಕ್ಯಾಂಟೀನ್ ಕಡೆ ಎಲ್ಲರೂ ಹೆಜ್ಜೆ ಇಡುತ್ತಿರುವಾಗ ವಿದ್ಯಾರ್ಥಿಗಳು ಕುತೂಹಲದಿಂದ ನಮ್ಮನ್ನೇ ನೋಡುತ್ತಿದ್ದರು. ಅದೇ ಪ್ರಥಮವಾಗಿ ಆ ಕಾಫಿ ಕೇಂದ್ರದೊಳಗಡೆ ನಾನು ಕಾಲಿಟ್ಟಿದ್ದು. ಕ್ಯಾಂಟೀನ್ ಒಂಥರಾ ಆರ್ಟಿಸ್ಟಿಕ್ ಆಗಿದೆ ಎಂದು ಅನ್ನಿಸಿತು. ಆದ್ರೆ ಸ್ವಚ್ಛತೆ ಮಾತ್ರ ನೂರು ಮೈಲಿ ದೂರ! ನೊಣಗಳದ್ದೇ ಕಾರುಬಾರು. ಥೂ… ಇಲ್ಲಿ ಅದ್ಹೇಗೆ ಕೂತು ತಿಂಡಿ ತಿಂತಾರೊ ಎಂದು ಒಳಗೊಳಗೆ ಗೊಣಗಿಕೊಂಡೆ. ಮಾಣಿ ಬಂದು ಏನು ಬೇಕೆಂದು ವಿಚಾರಿಸಿದನು. ಅನ್ ಸೋಷಿಯಲ್ ಎಂದು ಹೇಳಿದ್ದ ಮೇಷ್ಟ್ರು, ಮೇಡಂ ನೀವೇನ್ ತಿಂತೀರಿ? ಎಂದರು. ನನಗೆ ಏನೂ ಬೇಡಿ, ಬರೇ ಕಾಫಿ ಸಾಕು ಸಾರ್ ಎಂದೆ. ಸರಿ ಹೀಗೆ ಇವರೊಟ್ಟಿಗೆ ಕಾಫಿಕುಡಿಯಲು ಹೋಗುವುದು ಶುರುವಾಯಿತು. ಪುರುಷಾಂಕಾರದ ಬಗ್ಗೆ ಒಳಗೊಳಗೇ ದ್ವೇಷಿಸುತ್ತಿದ್ದ ನನ್ನ ಗುಣ ತಿದ್ದುಪಡಿಯಾಗಲು ಪ್ರೊ.ಎನ್. ಬೋರಲಿಂಗಯ್ಯನವರ ಸ್ವಭಾವಗಳೂ ಕಾರಣ ಎನ್ನಬಹುದು. ಆದರೆ ಮುಕ್ಕಾಲು ಮೂರುವೀಸೆ ಪೂರ್ಣವಾಗಿ ಪುರುಷರನ್ನು ದ್ವೇಷಿಸುವ ಸ್ವಭಾವದಿಂದ ನಾನು ಆಚೆ ಬಂದಿದ್ದು ದೇಮಾನನ್ನು ವಿವಾಹವಾದ ಮೇಲೆಯೇ ಎಂಬುದು ನಿಜ, ದೇಮನ ಬಗ್ಗೆ ಅದೆಷ್ಟೋ ಆಕ್ಷೇಪಣೆಗಳು ಇದ್ದಾಗ್ಯೂ ಕೂಡ. ಈ ಒಡನಾಟದಲ್ಲಿ ನಾನೂ ಕೂಡ ವೈಚಾರಿಕ ಪ್ರಕ್ರಿಯೆಗೆ ಸಿಲುಕಿದೆನು.

(ಫೋಟೋಗಳು: ನೇತ್ರರಾಜು ಮತ್ತು ಸುಮಿತ್ರಾ ಬಾಯಿಯವರ ಸಂಗ್ರಹದಿಂದ)

 

(ಸುಮಿತ್ರಾ ಬಾಯಿ ಅವರ ಬಾಳ ಕಥನ ‘ಸೂಲಾಡಿ ಬಂದೋ ತಿರುತಿರುಗೀ’ ಅಚ್ಚಿನಲ್ಲಿದೆ. ಪ್ರಕಾಶಕರು: ಅಭಿರುಚಿ ಪ್ರಕಾಶನ, ಮೈಸೂರು)