ಅವನ ಮಾತು ಅಲ್ಲಿದ್ದವರಲ್ಲಿ ಒಂದು ಥರ ಜಡವಾದ ಆಸಕ್ತಿ ಹುಟ್ಟಿಸಿತ್ತು. ಕೌಂಟರಿನಲ್ಲಿದ್ದ ಹುಡುಗರ ಮುಖದ ಮೇಲೆ ಗೇಲಿಯ ನಗು ಬಂದಿತ್ತು. ಅಂಗಡಿಯ ಯಜಮಾನತಮಾಷೆ ಮನುಷ್ಯ ಕಥೆ ಕೇಳುವುದಕ್ಕೆಂದೇ ಮೇಲಿನ ರೂಮಿನಿಂದ ಇಳಿದು ಬಂದು, ಸ್ವಲ್ಪ ದೂರದಲ್ಲಿ ಕೂತು, ಆಗಾಗ ಸೋಮಾರಿತನದ ದೊಡ್ಡ ದೊಡ್ಡ ಆಕಳಿಕೆ ತೆಗೆಯುತ್ತಿದ್ದ. ಅಲ್ಲಿದ್ದವರಿಗೆಲ್ಲ ಮಾರ್ಮೆಲಡೋವ್ ದೀರ್ಘ ಕಾಲದ ಪರಿಚಿತ ಅನ್ನುವುದು ಗೊತ್ತಾಗುತ್ತಿತ್ತು. ಹೆಂಡದಂಗಡಿಯಲ್ಲಿ ಬಗೆಬಗೆಯ ಅಪರಿಚಿತರ ಜೊತೆ ಮಾತಾಡಿ ಅವನು ಇಂಥ ಆಲಂಕಾರಿಕವಾದ ಮಾತಿನ ಶೈಲಿ ರೂಪಿಸಿಕೊಂಡಿದ್ದಿರಬಹುದು.
ಪ್ರೊ. .ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ʼಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಅಧ್ಯಾಯ

 

ರಾಸ್ಕೋಲ್ನಿಕೋವ್‍ ಗೆ ಜನದ ಗುಂಪಿನಲ್ಲಿದ್ದು ಅಭ್ಯಾಸ ಇರಲಿಲ್ಲ. ಆಗಲೇ ಹೇಳಿದ ಹಾಗೆ ಇತ್ತೀಚೆಗಂತೂ ಅವನಿಗೆ ಜನರ ಸಹವಾಸವೇ ಬೇಡವಾಗಿತ್ತು. ಈಗ ಇದ್ದಕ್ಕಿದ್ದ ಹಾಗೆ ಜನ ಯಾಕೋ ಅವನನ್ನು ಸೆಳೆಯುತಿದ್ದರು. ಅವನೊಳಗೆ ಹೊಸತೇನೋ ಅನಿಸುತಿತ್ತು, ಆಗುತಿತ್ತು… ಜನರ ಸಹವಾಸ ಬೇಕೆನ್ನುವ ದಾಹ ಹುಟ್ಟಿತ್ತು. ತೈಲಧಾರೆಯ ಹಾಗೆ ಒಂದೇ ಸಮ ನೋವು ತಿನ್ನುತ್ತ ತನ್ನ ಕಲ್ಪನೆಗೆ ತನ್ನ ವಿಚಾರಕ್ಕೆ ತಾನೇ ಉದ್ರೇಕಪಡುತ್ತ ತಿಂಗಳಿಡೀ ದಣಿದಿದ್ದ. ಒಂದೇ ಒಂದು ಕ್ಷಣದ ಮಟ್ಟಿಗಾದರೂ ಇನ್ನೊಂದು ಲೋಕದ ಗಾಳಿಯನ್ನು ಉಸಿರಾಡಬೇಕು, ಆ ಗಾಳಿ ಹೇಗೇ ಇದ್ದರೂ ಪರವಾಗಿಲ್ಲ ಅನ್ನಿಸಿತ್ತು. ಹಾಗಾಗಿ ಅವನು ಆ ಅಸಹ್ಯವಾದ ಹೆಂಡದಂಗಡಿಯಲ್ಲೂ ಸಂತೋಷವಾಗಿ ಕೂತಿದ್ದ.

ಅಂಗಡಿಯ ಯಜಮಾನ ಎಲ್ಲೋ ಇನ್ನೊಂದು ಕೋಣೆಯಲ್ಲಿದ್ದ. ಇಲ್ಲಿಗೆ ಬರುವಾಗಲೆಲ್ಲ ಮೆಟ್ಟಿಲಿಳಿದು ಬರಬೇಕಾಗಿದ್ದರಿಂದ ಅವನಿಗಿಂತ ಮೊದಲು ಅವನ ಕಪ್ಪು ಬೂಟು, ಅದಕ್ಕೆ ಮೊಣಕಾಲು ಮುಚ್ಚುವ ಹಾಗಿದ್ದ ಕೆಂಪು ಮುಚ್ಚಿಗೆ ಕಾಣುತ್ತಿದ್ದವು. ಜಿಡ್ಡುಗಟ್ಟಿದ್ದ ಕಪ್ಪು ಸ್ಯಾಟಿನ್ ವೇಸ್ಟ್ ಕೋಟು ತೊಟ್ಟಿದ್ದ. ಟೈ ಕಟ್ಟಿರಲಿಲ್ಲ. ಅವನ ಇಡೀ ಮುಖ ಎಣ್ಣೆ ಬಳಿದ ಕಬ್ಬಿಣದ ಬೀಗದ ಹಾಗೆ ಕಾಣುತಿತ್ತು. ಬಾರ್ ಟೇಬಲ್ಲಿನ ಹಿಂದೆ ಹದಿನಾಲ್ಕು ವರ್ಷದ ಹುಡುಗ ಇದ್ದ. ಇನ್ನೊಬ್ಬ ಚಿಕ್ಕ ಹುಡುಗ ಗಿರಾಕಿಗಳು ಕೇಳಿದ್ದನ್ನೆಲ್ಲ ಸಪ್ಲೈ ಮಾಡುತ್ತಿದ್ದ. ಒಣಗಿಹೋದ ಉಪ್ಪಿನ ಕಾಯಿ, ಬತ್ತಿದ ಸೌತೆಕಾಯಿ ತುಂಡು, ಒಣಗಿದ ಬ್ರೆಡ್ಡು, ಸಣ್ಣದಾಗಿ ಕತ್ತರಿಸಿದ ಮೀನಿನ ರಾಶಿ ಇದ್ದವು. ಎಲ್ಲವೂ ಕೆಟ್ಟ ವಾಸನೆ ಹೊಡೆಯುತ್ತಿದ್ದವು. ಗಾಳಿಯೂ ಇಲ್ಲದೆ ಧಗೆ ತುಂಬಿದ್ದ ಆ ಜಾಗದಲ್ಲಿ ಕೂರುವುದೂ ಕಷ್ಟವಾಗಿತ್ತು. ಗಾಳಿಯ ತುಂಬ ಹೆಂಡ, ಬಿಯರು, ರಮ್ಮುಗಳ ವಾಸನೆ ಇಡಿಕಿರಿದು ಐದು ನಿಮಿಷ ಅಲ್ಲಿ ಸುಮ್ಮನೆ ಉಸಿರಾಡಿದ್ದರೂ ಅಮಲು ತಲೆಗೇರುವ ಹಾಗಿತ್ತು.

ಒಂದೊಂದು ಸಾರಿ ಒಂದಿಷ್ಟೂ ಪರಿಚಯವಿಲ್ಲದ ಜನರ ಭೇಟಿಯಾದಾಗ ಅವರ ಜೊತೆ ಒಂದೇ ಒಂದು ಮಾತೂ ಆಡುವ ಮೊದಲೇ ನೋಡಿದ ತಕ್ಷಣ ತಟ್ಟನೆ ಆಸಕ್ತಿ ಹುಟ್ಟಿಬಿಡುತ್ತದೆ.
ಎಲ್ಲರಿಗಿಂತ ಬೇರೆಯಾಗಿ ಕೂತಿದ್ದು, ರಿಟೈರಾದ ಕಾರಕೂನನ ಹಾಗೆ ಕಾಣುತ್ತಿದ್ದ ಮನುಷ್ಯನನ್ನು ನೋಡಿದಾಗ ರಾಸ್ಕೋಲ್ನಿಕೋವ್‍ ಗೆ ಹೀಗೇ ಆಯಿತು. ಯುವಕ ಮುಂದೆ ಆ ಕ್ಷಣವನ್ನು ಮನಸಿಗೆ ತಂದುಕೊಂಡು ಆ ಅಪರಿಚಿತನನ್ನು ಮೊದಲು ನೋಡಿದಾಗ ಅನಿಸಿದ್ದು ಮುಂದಾಗುವುದರ ಶಕುನದ ಹಾಗಿತ್ತು ಅಂದುಕೊಳ್ಳುತ್ತಿದ್ದ. ರಾಸ್ಕೋಲ್ನಿಕೋವ್ ಆಗಾಗ ಕಾರಕೂನನತ್ತ ನೋಡುತ್ತಿದ್ದರೆ ಆ ಮನುಷ್ಯ ಮಾತ್ರ ಇವನನ್ನೇ ದಿಟ್ಟಿಸುತ್ತಿದ್ದ. ಅವನಿಗೆ ಮಾತಾಡುವ ಆಸೆ ಇದೆ ಅನ್ನುವುದು ಗೊತ್ತಾಗುತ್ತಿತ್ತು. ಆ ಕಾರಕೂನನ ನೋಟದಲ್ಲಿ ಹೆಂಡದಂಗಡಿಯ ಯಜಮಾನನೂ ಅಲ್ಲಿದ್ದ ಮಿಕ್ಕ ಯಾರೂ ಅಂತಸ್ತಿನಲ್ಲಿ, ಶಿಕ್ಷಣದಲ್ಲಿ ನನ್ನ ಸಮಾನರಲ್ಲ, ಅಂಥವರ ಜೊತೆಯಲ್ಲಿ ಮಾತಾಡಿ ಏನು ಉಪಯೋಗ ಅನ್ನುವಂಥ ದಿವ್ಯ ತಿರಸ್ಕಾರದ ಛಾಯೆ, ದೀರ್ಘ ಪರಿಚಯದಿಂದ ಹುಟ್ಟುವ ಉದಾಸೀನ ಇವೆಲ್ಲ ಇದ್ದವು.

ಅವನ ವಯಸ್ಸು ಐವತ್ತು ದಾಟಿತ್ತು. ಮಾಮೂಲಿ ಎತ್ತರ, ತೋರ ಮೈ. ಕೂದಲು ಅಲ್ಲಲ್ಲಿ ನೆರೆತಿತ್ತು, ತಲೆ ಒಂದಿಷ್ಟು ಬೋಳಾಗಿತ್ತು. ಒಂದೇ ಸಮ ಕುಡಿದು ಕುಡಿದು ಮುಖ ಉಬ್ಬರಿಸಿ ಸ್ವಲ್ಪ ಹಸಿರು ಛಾಯೆ ಬಂದಿತ್ತು. ಸೀಳುಗಂಡಿಯಲ್ಲಿ ಕಂಡ ಹಾಗೆ ರೆಪ್ಪೆಯ ಹಿಂದೆ ಕಣ್ಣು ಊದಿಕೊಂಡು ಕೆಂಪಗೆ ಕಾಣುತಿತ್ತು. ಆದರೂ ಅವನಲ್ಲಿ ಏನೋ ವಿಶೇಷವಿತ್ತು. ಪರವಶವಾದವರ ಕಣ್ಣಲ್ಲಿ ಇರುವಂಥ ಬೆಳಕು ಅವನ ಕಣ್ಣಿನಲ್ಲಿತ್ತು. ವಿವೇಕ, ವಿಚಾರಗಳೂ ಸುಳಿಯುತ್ತಿದ್ದವು. ಜೊತೆಗೇ ಹುಚ್ಚಿನ ಕಿಡಿಯೂ ಇದ್ದ ಹಾಗಿತ್ತು. ಅವನು ಜೂಲು ಜೂಲಾಗಿದ್ದ ಕಪ್ಪು ಕೋಟು ತೊಟ್ಟಿದ್ದ. ಒಂದು ಗುಂಡಿ ಮಾತ್ರ ಹೇಗೋ ನೇತಾಡಿಕೊಂಡಿತ್ತು, ಉಳಿದವೆಲ್ಲ ಉದುರಿ ಹೋಗಿದ್ದವು. ಮರ್ಯಾದೆಯ ಕೊನೆಯ ಸುಳಿವು ಅನ್ನುವ ಹಾಗೆ ಅದೊಂದು ಗುಂಡಿ ಹಾಕಿಕೊಂಡಿದ್ದ. ಮುದುರಿ, ಕೊಳೆಯಾಗಿ, ಕಲೆ ಮೆತ್ತಿಕೊಂಡ ಅವನ ಅಂಗಿ ಒರಟು ಅರಳೆಯ ವೇಸ್ಟ್ ಕೋಟಿನಿಂದಾಚೆಗೆ ಇಣುಕುತ್ತಿತ್ತು. ಕ್ಷೌರ ಮಾಡಿಕೊಂಡು ಹಲವು ದಿನ ಕಳೆದಿದ್ದರಿಂದ ಗಡ್ಡದ ಕೂಳೆ ಕಾಣುತ್ತಿತ್ತು. ನೋಡಿದರೆ ಮರ್ಯಾದಸ್ಥ ಸರ್ಕಾರಿ ನೌಕರನ ಗತ್ತು ಕಾಣುತ್ತಿತ್ತು. ಆದರೂ ಚಡಪಡಿಸುತ್ತಿದ್ದ. ಆಗಾಗ ತಲೆಕೂದಲು ಕೆದರಿ ಮತ್ತೆ ಸರಿಮಾಡಿಕೊಳ್ಳುತಿದ್ದ. ಹೆಂಡ ಚೆಲ್ಲಿ ಜಿಡ್ಡಾಗಿದ್ದ ಟೇಬಲ್ಲಿನ ಮೇಲೆ ಮೊಳಕೈ ಊರಿ, ಅಂಗೈಯಲ್ಲಿ ತಲೆ ಇಟ್ಟು ಬೇಸರದಲ್ಲಿ ಒಂದಷ್ಟು ಹೊತ್ತು ಕೂರುತ್ತಿದ್ದ. ಕೊನೆಗೆ ರಾಸ್ಕೋಲ್ನಿಕೋವ್‍ ನನ್ನು ನೇರವಾಗಿ ಗಟ್ಟಿದನಿಯಲ್ಲಿ ಕೇಳಿದ:

‘ಸನ್ಮಾನ್ಯರೇ, ನಿಮ್ಮೊಡನೆ ಎರಡು ಮಾತನಾಡುವ ಅವಕಾಶವನ್ನು ನೀಡುತ್ತೀರಾ? ನಿಮ್ಮ ವೇಷಭೂಷಣಾದಿಗಳಲ್ಲಿ ವಿಶೇಷವೇನೂ ಇರದಿದ್ದರೂ ಅನುಭವದಿಂದ ಹೇಳುತ್ತೇನೆ, ನೀವು ವಿದ್ಯಾವಂತರು, ಮದ್ಯಪಾನದ ಅಭ್ಯಾಸ ಇಲ್ಲದವರು. ಎಜುಕೇಶನ್‍ ಗೆ ತುಂಬಾ ಬೆಲೆ ಕೊಡುತ್ತೇನೆ ನಾನು. ಎಜುಕೇಶನ್ ಜೊತೆಗೆ ಒಳ್ಳೆಯ ಭಾವನೆ ಕೂಡ ಇರಬೇಕು. ಲೋಯರ್ ಡಿವಿಶನ್ ಕ್ಲಾರ್ಕು. ನಾನು, ಮಾರ್ಮೆಲಡೋವ್ ಅಂತ ನನ್ನ ಹೆಸರು. ನೀವು ಯಾವ ಡಿಪಾರ್ಟ್‍ಮೆಂಟಿನಲ್ಲಿದ್ದೀರಿ ಅಂತ ಕೇಳಬಹುದಾ?’

‘ಇಲ್ಲ. ಸ್ಟಡಿ ಮಾಡತಾ ಇದೇನೆ,’ ಅಂದ ಯುವಕ. ತನ್ನನ್ನು ಮಾತಾಡಿಸಿದವನು ಬಳಸಿದ ಪುಸ್ತಕದ ಶೈಲಿ, ನೇರವಾಗಿ ತನ್ನನ್ನು ಮಾತಾಡಿಸಿದ ರೀತಿ ಇವನ್ನು ಕಂಡು ರಾಸ್ಕೋಲ್ನಿಕೋವ್‍ ಗೆ ಆಶ್ಚರ್ಯವಾಗಿತ್ತು. ಯಾರಾದರೂ ಜನ ಜೊತೆಗೆ ಸಿಕ್ಕರೆ ಸಾಕು ಎಂದು ಸ್ವಲ್ಪ ಹೊತ್ತಿಗೆ ಮೊದಲು ಅಂದುಕೊಂಡಿದ್ದ. ಆ ಮನುಷ್ಯ ಹೀಗೆ ನೇರವಾಗಿ ಮಾತಾಡಿಸಿದ ತಕ್ಷಣವೇ ಸಲಿಗೆ ತೋರುವ, ಸಲಿಗೆ ಬಯಸುವ ಅಪರಿಚಿತರ ಬಗ್ಗೆ ರಾಸ್ಕೋಲ್ನಿಕೋವ್‍ ಗೆ ಎಂದಿನಿಂದ ಇದ್ದ ಸಿಡುಕಿನ, ಅಸಹ್ಯದ ಭಾವನೆಗಳು ಮತ್ತೆ ತಲೆ ಎತ್ತಿದವು.

‘ಸ್ಟೂಡೆಂಟು, ಅಥವಾ ಮಾಜೀ ಸ್ಟೂಡೆಂಟು! ಅಂದುಕೊಂಡೆ, ಅಂದುಕೊಂಡೆ! ಅನುಭವ ಸ್ವಾಮೀ, ಅನುಭವ!’ ಅನ್ನುತ್ತ, ತನ್ನ ತಾನೇ ಮೆಚ್ಚಿಕೊಳ್ಳುವ ಹಾಗೆ ಹಣೆಯ ಮೇಲೆ ಬೆರಳಿಟ್ಟುಕೊಂಡ. ‘ನೀವು ಸ್ಟೂಡೆಂಟು ಆಗಿದ್ದೀರಿ ಅಥವಾ ಓದು ಬರಹದ ಕೆಲಸ ಮಾಡತಾ ಇದ್ದೀರಿ!… ಇಲ್ಲಿ ಕೇಳಿ…’ ಅನ್ನುತ್ತಾ ತನ್ನ ಮುಂದಿದ್ದ ಬಿಯರ್ ಜಗ್ಗು, ಗ್ಲಾಸು ಎತ್ತಿಕೊಂಡು ತಟ್ಟಾಡುತ್ತ ಬಂದು ರಾಸ್ಕೋಲ್ನಿಕೋವ್ ಎದುರಿಗೆ, ಸ್ವಲ್ಪ ಪಕ್ಕಕ್ಕೆ ತಿರುಗಿಕೊಂಡ ಹಾಗೆ ಕೂತ. ಕುಡಿದಿದ್ದ, ಆದರೂ ಸರಾಗವಾಗಿ, ಧೈರ್ಯವಾಗಿ ಮಾತಾಡುತ್ತಿದ್ದ. ಆಗೀಗ ಸ್ವಲ್ಪ ಗೊಂದಲವಾಗಿ ಮಾತು ತಡವರಿಸಿದ ಹಾಗೆ ಆಗುತ್ತಿತ್ತು. ಒಂದು ತಿಂಗಳಿಂದ ಮತ್ತೊಂದು ಜೀವದ ಜೊತೆ ಮಾತನಾಡಿಯೇ ಇಲ್ಲ ಅನ್ನುವ ಹಾಗೆ ರಾಸ್ಕೋಲ್ನಿಕೋವ್‍ ನ ಮೇಲೆ ಮಾತಿನಲ್ಲೇ ಎರಗಿ ಬಿದ್ದ.

‘ಸಾರ್, ಬಡತನ ಕೆಟ್ಟದಲ್ಲ. ಸತ್ಯ, ಈ ಮಾತು. ನನಗೆ ಗೊತ್ತು. ಕುಡಿತ ಒಳ್ಳೆಯದಲ್ಲ, ಅದು ಇನ್ನೂ ಸತ್ಯ, ಅದೂ ನನಗೆ ಗೊತ್ತಿದೆ. ಭಿಕ್ಷೆ, ಭಿಕ್ಷೆ ಬೇಡುವುದು ಇದೆಯಲ್ಲಾ ಸಾರ್ ಅದು ಬಹಳ ಕೆಟ್ಟದ್ದು. ಬಡವರಾದರೂ ಘನತೆಯನ್ನು ಕಾಪಾಡಿಕೊಳ್ಳಬಹುದು. ಭಿಕ್ಷೆ ಬೇಡುವವರು ಗೌರವ ಘನತೆ ಉಳಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಭಿಕ್ಷುಕರನ್ನು ಕಂಡರೆ ಜನ ಕೋಲು ಹಿಡಿದು ದೂರ ನೂಕುವುದಿಲ್ಲ, ಪರಕೆ ತೆಗೆದುಕೊಂಡು ಗುಡಿಸಿ ಹಾಕುತ್ತಾರೆ. ಭಿಕ್ಷೆ ಅನ್ನುವುದು ಅವಮಾನ. ಭಿಕ್ಷೆ ಬೇಡತಾ ನನಗೆ ನಾನೇ ಅವಮಾನ ಮಾಡಿಕೊಳ್ಳುತೇನೆ. ಅದಕ್ಕೇ ಹೀಗೆ ಕುಡೀತಾ… ಕಳೆದ ತಿಂಗಳು ಲೆಬೆಸ್ಯಾತ್ನಿಕೋವ್ ನನ್ನ ಹೆಂಡತಿಗೆ ಹೊಡೆದರು. ನನ್ನ ಹೆಂಡತಿ ನನ್ನ ಹಾಗಲ್ಲ! ಗೊತ್ತಾಯಿತಾ? ನಿಮ್ಮನ್ನ ಇನ್ನೊಂದು ಪ್ರಶ್ನೆ ಕೇಳುತ್ತೇನೆ, ಸುಮ್ಮನೆ ಕುತೂಹಲಕ್ಕೆ… ನೀವು ಯಾವತ್ತಾದರೂ ನೇವಾ ನದಿ ಮೇಲೆ ಹುಲ್ಲಿನ ದೋಣಿಯಲ್ಲಿ ರಾತ್ರಿ ಕಳೆದಿದ್ದೀರಾ?’

‘ಉಹ್ಞುಂ. ಇಲ್ಲ. ಯಾಕೆ?’ ಅಂದ ರಾಸ್ಕೋಲ್ನಿಕೋವ್.

‘ಭಿಕ್ಷುಕರು, ಅಬ್ಬೇಪಾರಿಗಳು ಮಲಗಿಕೊಳ್ಳುವ ಅಂಥ ಒಂದು ದೋಣಿಯಿಂದ ಇಳಿದು ಬರುತಾ ಇದೇನೆ, ಐದು ದಿನ ಆಯಿತು ಸಾರ್, ಅಲ್ಲಿ ಮಲಗುವುದಕ್ಕೆ ಶುರುಮಾಡಿ…’

ಬಿಯರ್ ಬಗ್ಗಿಸಿಕೊಂಡ. ಕುಡಿದ. ಯೋಚನೆಯಲ್ಲಿ ಮುಳುಗಿದ. ನೋಡಿದರೆ ಅವನ ಬಟ್ಟೆಯ ಮೇಲೆ, ತಲೆಯಲ್ಲಿ ಅಲ್ಲಲ್ಲಿ ಒಣಗಿದ ಹುಲ್ಲಿನ ಎಸಳು ಕಾಣುತ್ತಿದ್ದವು. ಐದು ದಿನದಿಂದ ಅವನು ಬಟ್ಟೆ ಬದಲಾಯಿಸಿಲ್ಲ, ಸ್ನಾನ ಮಾಡಿಲ್ಲ ಅನ್ನಿಸುತ್ತಿತ್ತು. ಅವನ ಕೈಗೆ ಜಿಡ್ಡು ಮೆತ್ತಿತ್ತು, ಕೆಂಪಗಿತ್ತು, ಉಗುರ ಕೆಳಗೆ ಕಪ್ಪಗೆ ಕೊಳೆ ಕೂತಿತ್ತು.

ಅವನ ಮಾತು ಅಲ್ಲಿದ್ದವರಲ್ಲಿ ಒಂದು ಥರ ಜಡವಾದ ಆಸಕ್ತಿ ಹುಟ್ಟಿಸಿತ್ತು. ಕೌಂಟರಿನಲ್ಲಿದ್ದ ಹುಡುಗರ ಮುಖದ ಮೇಲೆ ಗೇಲಿಯ ನಗು ಬಂದಿತ್ತು. ಅಂಗಡಿಯ ಯಜಮಾನ ‘ತಮಾಷೆ ಮನುಷ್ಯ’ನ ಕಥೆ ಕೇಳುವುದಕ್ಕೆಂದೇ ಮೇಲಿನ ರೂಮಿನಿಂದ ಇಳಿದು ಬಂದು, ಸ್ವಲ್ಪ ದೂರದಲ್ಲಿ ಕೂತು, ಆಗಾಗ ಸೋಮಾರಿತನದ ದೊಡ್ಡ ದೊಡ್ಡ ಆಕಳಿಕೆ ತೆಗೆಯುತ್ತಿದ್ದ. ಅಲ್ಲಿದ್ದವರಿಗೆಲ್ಲ ಮಾರ್ಮೆಲಡೋವ್ ದೀರ್ಘ ಕಾಲದ ಪರಿಚಿತ ಅನ್ನುವುದು ಗೊತ್ತಾಗುತ್ತಿತ್ತು. ಹೆಂಡದಂಗಡಿಯಲ್ಲಿ ಬಗೆಬಗೆಯ ಅಪರಿಚಿತರ ಜೊತೆ ಮಾತಾಡಿ ಅವನು ಇಂಥ ಆಲಂಕಾರಿಕವಾದ ಮಾತಿನ ಶೈಲಿ ರೂಪಿಸಿಕೊಂಡಿದ್ದಿರಬಹುದು. ಮನೆಯಲ್ಲಿ ಎಲ್ಲರ ದಬಾವಣೆಗೆ, ಅವಮಾನಕ್ಕೆ ಗುರಿಯಾಗುವ ಕುಡುಕರಿಗೆ ಇಂಥ ಮಾತಿನ ರೀತಿ ಅಗತ್ಯವಾಗುತ್ತದೆ. ಬೇರೆಯ ಕುಡುಕರ ಸಹವಾಸ ದೊರೆತಾಗ ಹೀಗೆ ಮಾತಾಡಿ ತಮ್ಮನ್ನೇ ಸಮರ್ಥಿಸಿಕೊಳ್ಳುವುದಕ್ಕೂ ಸಾಧ್ಯವಾದರೆ ಅವರ ಗೌರವ ಗಿಟ್ಟಿಸಿಕೊಳ್ಳುವುದಕ್ಕೂ ಹಾತೊರೆಯುತ್ತಾರೆ.

‘ಅಯ್ಯಾ ನಕಲೀ ಮಹಾರಾಜ, ನೀನು ಕೆಲಸ ಯಾಕೆ ಮಾಡಲ್ಲ? ನೌಕರಿದಾರನಾದರೆ ಡ್ಯೂಟಿಗೆ ಯಾಕೆ ಹೋಗಲ್ಲ?’ ಹೆಂಡದಂಗಡಿಯ ಯಜಮಾನ ಕೇಳಿದ.

‘ಡ್ಯೂಟಿಗೆ ಯಾಕೆ ಹೋಗಲ್ಲ, ಅನ್ನುತ್ತೀರಾ ಸಾರ್?’ ಪ್ರಶ್ನೆ ಕೇಳಿದವನು ರಾಸ್ಕೋಲ್ನಿಕೋವ್ ಅನ್ನುವ ಹಾಗೆ ಅವನನ್ನೇ ನೋಡುತ್ತಾ ನೋಡುತ್ತಾ ಮರ್ಮಲಡೋವ್ ಹೇಳಿದ. ‘ನಾನು ಕೆಲಸಕ್ಕೆ ಬಾರದ ಕ್ರಿಮಿ, ಡ್ಯೂಟಿಗೆ ಹೋಗಲ್ಲ ಅಂತ ನನ್ನ ಮನಸ್ಸು ನೋಯಲ್ಲ ಅಂದುಕೊಂಡಿದ್ದೀರಾ? ಒಂದು ತಿಂಗಳ ಹಿಂದೆ ಲೆಬೆಸ್ಯಾತ್ನಿಕೋವ್ ನನ್ನ ಹೆಂಡತಿಯನ್ನು ಹೊಡೆದ, ತನ್ನ ಸ್ವಹಸ್ತದಿಂದ ಹೊಡೆದ. ಆವಾಗ ನಾನು ಕುಡಿದು ಎಚ್ಚರತಪ್ಪಿ ಬಿದ್ದಿದ್ದೆನಲ್ಲಾ ಅಂತ ನಾನು ಒದ್ದಾಡಿಕೊಂಡಿಲ್ಲವಾ? ಕ್ಷಮಿಸಿ ಸ್ವಾಮೀ, ನೀವು ಯಾವತ್ತಾದರೂ… ಹ್ಞ…ಹ್ಞ… ದೀನವಾಗಿ ಗೋಗರೆದು ಸಾಲ ಕೇಳುವ ಪರಿಸ್ಥಿತಿ ಬಂದಿದೆಯಾ?’

‘ಸಾಲ ಕೇಳಿದ್ದೇನೆ… ದೀನವಾಗಿ ಗೋಗರೆಯುವುದು ಅಂದರೇನು?’

‘ಅಂದರೆ, ಪೂರಾ ಕಂಗಾಲಾಗಿ, ಎಷ್ಟು ಬೇಡಿಕೊಂಡರೂ ದುಡ್ಡು ಹುಟ್ಟಲ್ಲ ಅನ್ನುವುದು ಗೊತ್ತಿದ್ದರೂ ದಮ್ಮಯ್ಯಾ ಅಂತ ಬೇಡುವುದು ಅಂತ ಅರ್ಥ ಸಾರ್. ನಿದರ್ಶನಾರ್ಥವಾಗಿ, ಈ ಮನುಷ್ಯ, ಸದ್ಭಾವ ತುಂಬಿರುವ ಅತ್ಯಂತ ಗೌರವಾನ್ವಿತ ನಾಗರಿಕ, ದುಡ್ಡು ಕೊಡುವುದೇ ಇಲ್ಲ ಅನ್ನುವುದು ಗೊತ್ತಿರುತ್ತದೆ. ಅಲ್ಲಾ, ಅವನು ಯಾಕೆ ಕೊಡಬೇಕು, ಹೇಳಿ? ಈ ನಾನು ದುಡ್ಡು ವಾಪಸ್ಸು ಕೊಡಲ್ಲ ಅನ್ನುವುದು ಅವನಿಗೆ ಗೊತ್ತು. ಕರುಣೆ ಇಟ್ಟು ಮರುಕ ತೋರಿಸಿ ದುಡ್ಡು ಕೊಡಬೇಕಾ? ಆಧುನಿಕ ವಿಚಾರಗಳೆಲ್ಲ ಗೊತ್ತಿರುವ ಲೆಬೆಸ್ಯಾತ್ನಿಕೋವ್, ‘ಇನ್ನು ಮುಂದೆ ಕರುಣೆಗೆ ಅವಕಾಶವಿಲ್ಲ,’ ಅಂತ ಮೊನ್ನೆ ಹೇಳುತ್ತಾ ಇದ್ದ. ವಿಜ್ಞಾನ ಕರುಣೆಗೆ ನಿಷೇಧ ಹೇರಿದೆಯಂತೆ. ಇಂಗ್ಲೆಂಡಿನಲ್ಲೂ ಈಗ ಹಾಗೇ ಅಂತೆ. ಅವನು ನನಗೆ ಒಂದು ಕಾಸೂ ಕೊಡುವವನಲ್ಲ ಅನ್ನುವುದು ಮೊದಲೇ ಗೊತ್ತಿದ್ದರೂ ಹೋಗಿ…’

‘ಗೊತ್ತಿದ್ದರೂ ಯಾಕೆ ಹೋಗಬೇಕು?’ ರಾಸ್ಕೋಲ್ನಿಕೋವ್ ಕೇಳಿದ.

‘ಬೇಡುವುದಕ್ಕೆ ಬೇರೆ ಯಾರೂ ಇಲ್ಲದೆ ಇದ್ದರೆ, ಹೋಗುವುದಕ್ಕೆ ಬೇರೆ ಜಾಗ ಇಲ್ಲದೇ ಇದ್ದರೆ ಏನು ಗತಿ! ಮನುಷ್ಯನಾದ ಪ್ರತಿಯೊಬ್ಬನಿಗೂ ಹೋಗುವುದಕ್ಕೆ ಒಂದು ಜಾಗ ಅಂತ ಇರಬೇಕು. ಎಲ್ಲಿಗಾದರೂ ಹೋಗಬೇಕು ಅನ್ನಿಸುವಂತ ಕಾಲ ಆಗಾಗ ಬರಬಹುದು. ನನ್ನ ಹೊಟ್ಟೆಯಲ್ಲಿ ಹುಟ್ಟಿದ ಸ್ವಂತ ಮಗಳು ಸೂಳೆಯರಿಗೆ ಕೊಡುವ ಹಳದಿ ಪಾಸು ಪಡೆದುಕೊಂಡು ಬೀದಿಗೆ ಬಿದ್ದ ಮೇಲೆ ನಾನೂ ಹೋದೆ…’ ಅಂದು, ಸ್ವಲ್ಪ ತಡೆದು, ‘ನನ್ನ ಮಗಳು ಹಳದಿ ಪಾಸು ಇಟ್ಟುಕೊಂಡು ಜೀವನ ಸಾಗಿಸತಾ ಇದ್ದಾಳೆ,’ ರಾಸ್ಕೋಲ್ನಿಕೋವ್ ನನ್ನು ನೋಡುತ್ತಾ ಕಸಿವಿಸಿಪಡುತ್ತಾ ಹೇಳಿದ. ಕೌಂಟರಿನಲ್ಲಿದ್ದ ಹುಡುಗರು ಕಿಸಕ್ಕನೆ ನಕ್ಕರು, ಹೆಂಡದಂಗಡಿ ಯಜಮಾನನ ಮುಖದಲ್ಲೂ ಸೊಟ್ಟ ನಗು ಕಾಣಿಸಿತು. ‘ಪರವಾಗಿಲ್ಲ, ಪರವಾಗಿಲ್ಲ ಬಿಡಿ ಸಾರ್. ಯಾರು ತಲೆ ಅಲ್ಲಾಡಿಸಿದರೂ ನಕ್ಕರೂ ನನಗೇನೂ ಚಿಂತೆ ಇಲ್ಲ. ಎಲ್ಲಾ ವಿಚಾರ ಎಲ್ಲಾರಿಗೂ ಗೊತ್ತಿದೆ. ಬಚ್ಚಿಟ್ಟದ್ದು ಗೊತ್ತಾಗತ್ತೆ, ಗೊತ್ತಾಗದ ಹಾಗೆ ಏನನ್ನೂ ಬಚ್ಚಿಡುವುದಕ್ಕೆ ಆಗಲ್ಲ. ಬೈಬಲ್ಲೇ ಹೇಳತ್ತೆ—‘ಪ್ರಕಟಿಸಲ್ಪಡದಂತೆ ಯಾವದೂ ಮುಚ್ಚಲ್ಪಡುವುದಿಲ್ಲ; ತಿಳಿಯಲ್ಪಡದಂತೆ ಯಾವದೂ ಮರೆಯಾಗುವುದಿಲ್ಲ; [ಮ್ಯಾಥ್ಯೂ 10.26] ಅಸಹ್ಯದಿಂದ ಅಲ್ಲ, ತಿರಸ್ಕಾರದಿಂದ ಅಲ್ಲ, ವಿನಯದಿಂದ ಪರಿಸ್ಥಿತಿ ಒಪ್ಪಿಕೊಂಡಿದ್ದೇನೆ. ಇರಲಿ ಬಿಡಿ! ಇರಲಿ ಬಿಡಿ! ಈ ಮನುಷ್ಯನನ್ನು ನೋಡಿ [ಯೊಹಾನ, 19.7] ದಯವಿಟ್ಟು ಕ್ಷಮಿಸಿ. ನೀವು,.. ಅಲ್ಲಾ… ಉಹ್ಞೂಂ… ಇನ್ನೂ ಗಟ್ಟಿಸಿ ಹೇಳಬೇಕು ಅಂದರೆ ನಿಮ್ಮ ಕೈಯಲ್ಲಿ ಆಗತ್ತಾ… ಈ ಕ್ಷಣದಲ್ಲಿ ನನ್ನನ್ನ ಗಮನವಿಟ್ಟು ನೋಡಿ ‘ಇವನು ಹಂದಿಯಲ್ಲ,’ ಎಂದು ದೃಢೀಕರಣ ಮಾಡುತ್ತೀರಾ?’

ಯುವಕ ಒಂದು ಮಾತೂ ಆಡಲಿಲ್ಲ.

ರೂಮಿನಲ್ಲಿ ಮತ್ತೆ ಹುಟ್ಟಿದ ನಗು ತಗ್ಗುವವರೆಗೆ ಮಾತುಗಾರ ಶಾಂತವಾಗಿ, ಮೊದಲಿಗಿಂತ ಗಂಭೀರವಾದ ಮುಖ ಮಾಡಿಕೊಂಡು ಕಾದಿದ್ದ. ಆಮೇಲೆ ‘ಸರಿ ಸ್ವಾಮೀ, ನಾನು ಹಂದಿ, ಅವಳು ಸನ್ಮಾನ್ಯ ಮಹಿಳೆ! ನಾನು ಮೃಗ, ಅವಳು, ಅದೇ ನನ್ನ ಹೆಂಡತಿ, ಕ್ಯಾತರೀನ ಇವಾನೋವ್ನಾ ಆಫೀಸರನ ಮಗಳು, ಸುಶಿಕ್ಷಿತ ಸುಸಂಸ್ಕೃತ ಮಹಿಳೆ. ಒಪ್ಪಿದೆ! ನಾನು ಲುಚ್ಛಾ, ಫಟಿಂಗ. ನನ್ನ ಹೆಂಡತಿ ಸೂಕ್ಷ್ಮ ಮನಸ್ಸಿನ ಉದಾತ್ತ ಹೃದಯದ ಶ್ರೀಮತಿ, ಒಪ್ಪಿದೆ! ಆದರೂ ನನ್ನ ಬಗ್ಗೆ ಅವಳು ಒಂದಿಷ್ಟು ‘ಅಯ್ಯೋ ಪಾಪ,’ ಅಂದಿದ್ದರೆ! ಮನುಷ್ಯ ಎಂಥಾವನೇ ಆಗಲಿ, ಅವನನ್ನ ನೋಡಿ ಅಯ್ಯೋ ಪಾಪ ಅನ್ನುವವರು ಒಬ್ಬರಾದರೂ ಇರಬೇಕು. ಅನ್ನಾ ಕ್ಯಾತರೀನ ಇವಾನೋವ್ನಾ ದೊಡ್ಡಸ್ತಿಕೆಯವಳು, ಇನ್ನೂ ನ್ಯಾಯವಾಗಿರಬೇಕಾಗಿತ್ತು. ನನಗೇ ಗೊತ್ತಾಗತ್ತೆ, ಅವಳು ನನ್ನ ಕೂದಲು ಹಿಡಿದು ಎಳೆದಾಡಿದಾಗ ಅವಳ ಮನಸ್ಸಿನಲ್ಲಿ ಕರುಣೆ ಇರತ್ತೆ ಅನ್ನುವುದು ಗೊತ್ತಾಗತ್ತೆ.’

ನಗು ಇನ್ನೊಂದಿಷ್ಟು ಕೇಳಿಸಿದ್ದರಿಂದ ಅವನು ಮತ್ತೂ ಗಂಭೀರವಾದ ಧ್ವನಿಯಲ್ಲಿ ಹೇಳಿದ: ‘ನನಗೇನೂ ಸಂಕೋಚ ಇಲ್ಲ, ಇನ್ನೂ ಒಂದು ಸಾರಿ ಬೇಕಾದರೆ ಹೇಳತೇನೆ, ಅವಳು ನನ್ನ ತಲೆ ಕೂದಲು ಹಿಡಿದು ಎಳೆದಾಡತಾಳೆ… ಆದರೂ, ಅಯ್ಯೋ ದೇವರೇ, ಒಂದೇ ಒಂದು ಸಲವಾದರೂ ಅವಳು… ಇಲ್ಲ, ಇಲ್ಲ, ಮಾತಾಡಿ ಉಪಯೋಗ ಇಲ್ಲ, ಎಲ್ಲಾ ವೇಸ್ಟು, ಮಾತಾಡಿ ಉಪಯೋಗ ಇಲ್ಲ!… ಅವಳು ಎಷ್ಟೋ ಸಾರಿ ಕರುಣೆ ತೋರಿಸಿದಾಳೆ, ನಾನು ಮಾತ್ರ ಮೃಗದ ಹಾಗೆ ಇದೀನಿ. ಹುಟ್ಟಾ ಮೃಗ ನಾನು!’

‘ಮತ್ತಿನ್ನೇನು!’ ಅನ್ನುತ್ತಾ ಅಂಗಡಿ ಯಜಮಾನ ಆಕಳಿಸಿದ.

ಮಾರ್ಮೆಲಡೋವ್ ಟೇಬಲ್ಲನ್ನು ಜೋರಾಗಿ ಗುದ್ದಿದ.

‘ನನ್ನ ಬುದ್ಧೀನೇ ಅಷ್ಟು! ಗೊತ್ತಾ ಸಾರ್, ನಿಮಗೆ ಗೊತ್ತಾ, ನಾನು ಅವಳ ಸ್ಟಾಕಿಂಗ್ ಕೂಡ ಮಾರಿ ಕುಡಿದುಬಿಟ್ಟೆ. ಉಹ್ಞೂ, ಅವಳ ಶೂ ಅಲ್ಲ. ಶೂ ಮಾರಿದ್ದರೆ ಏನೋ ಹೋಗಲಿ ಅನ್ನಬಹುದಾಗಿತ್ತು, ಅವಳ ಸ್ಟಾಕಿಂಗು ಮಾರಿ ಕುಡಿದೆ. ಅವಳ ಅಂಗೋರ ಶಾಲು ಕೂಡ ಮಾರಿದೆ. ಅವಳದೇ, ಯಾರೋ ಗಿಫ್ಟು ಕೊಟ್ಟಿದ್ದು. ನನ್ನದಲ್ಲ, ನಾನು ಕೊಡಿಸಿದ್ದೂ ಅಲ್ಲ. ಚಳಿಗಾಲದಲ್ಲಿ ಶೀತ ಆಯಿತು ಅವಳಿಗೆ, ಕೆಮ್ಮಿದಳು, ರಕ್ತ ಬರತ್ತೆ ಈಗ. ನಮ್ಮವು ಮೂರು ಪುಟ್ಟ ಮಕ್ಕಳಿವೆ. ನನ್ನ ಹೆಂಡತಿ ಹಗಲೂ ರಾತ್ರಿ ದುಡೀತಾಳೆ, ಮನೆಯೆಲ್ಲ ತಿಕ್ಕೀ ತೊಳೆದೂ ಮಕ್ಕಳಿಗೆ ಸ್ನಾನ ಮಾಡಿಸಿ… ಚಿಕ್ಕಂದಿನಿಂದಲೂ ಕ್ಲೀನಾಗಿದ್ದು ಅಭ್ಯಾಸ ಅವಳಿಗೆ. ಅವಳ ಹಾರ್ಟು ವೀಕು, ಕ್ಷಯ ಬಂದರೂ ಬರಬಹುದು. ನನ್ನ ಮನಸ್ಸು ನೋವಾಗಲ್ಲವಾ, ನನಗೆ ಫೀಲ್ ಆಗಲ್ಲವಾ? ಕುಡಿದದ್ದು ಜಾಸ್ತಿ ಆದ ಹಾಗೆಲ್ಲ ಮನಸ್ಸು ಜಾಸ್ತಿ ನೋಯತ್ತೆ… ನೋಯಬೇಕು, ನರಳಬೇಕು ಅಂತಲೇ ಕುಡೀತೇನೆ.’

ಎದೆಗುಂದಿದವನ ಹಾಗೆ ಟೇಬಲ್ಲಿನ ಮೇಲೆ ತಲೆ ಇಟ್ಟ.

‘ಹುಡುಗಾ, ನೀನು ಒಳಕ್ಕೆ ಬಂದಾಗಲೇ ನೋಡಿದೆ. ನಿನ್ನ ಮುಖದಲ್ಲಿ ಏನೋ ದುಃಖ ಇತ್ತು.’ ಅವನು ಮತ್ತೆ ನೆಟ್ಟಗೆ ಕೂತು ಹೇಳಿದ. ‘ಅದಕ್ಕೇ ನಾನೇ ನಿನ್ನ ಮೊದಲು ಮಾತಾಡಿಸಿದೆ. ನಿನಗೆ ನನ್ನ ಕಥೆ ಹೇಳುತ್ತಾ ‘ಯೋಗ್ಯತೆ ಇಲ್ಲದವನು’ ಅಂತ ಸೋಮಾರಿಗಳ ಹತ್ತಿರ ಅನ್ನಿಸಿಕೊಳ್ಳುವುದಕ್ಕೆ ಇಷ್ಟವಿಲ್ಲ. ಹೇಗೂ ಇವರಿಗೆ ಎಲ್ಲಾ ಗೊತ್ತಿದೆ. ಸೂಕ್ಷ್ಮವಾದ ಮನಸ್ಸಿನ ಎಜುಕೇಟೆಡ್ ಮನುಷ್ಯನ್ನ ಹುಡುಕುತ್ತಾ ಇದ್ದೆ. ಸರಿ, ಕೇಳು. ನನ್ನ ಹೆಂಡತಿ ಓದಿದವಳು. ಬೋರ್ಡಿಂಗ್ ಸ್ಕೂಲಿನಲ್ಲಿ ಓದು ಮುಗಿಸಿದಾಗ ಗೌರ್ನರ್ ಎದುರಿಗೆ, ಊರಿನ ದೊಡ್ಡ ದೊಡ್ಡವರ ಎದುರಿಗೆ ಶಾಲು ಹೊದ್ದು ಡ್ಯಾನ್ಸು ಮಾಡುವ ಗೌರವ ಸಿಕ್ಕಿತ್ತು ಅವಳಿಗೆ. ಚಿನ್ನದ ಮೆಡಲು, ಸರ್ಟಿಫಿಕೇಟು ಪಡೆದುಕೊಂಡಿದ್ದಳು. ಆ ಮೆಡಲು… ಸರಿ, ಯಾವತ್ತೋ ಮಾರಿಬಿಟ್ಟೆವು, ಹ್ಞೂಂ. ಸರ್ಟಿಫಿಕೇಟು ಇನ್ನೂ ಅವಳ ಪೆಟ್ಟಿಗೆಯಲ್ಲಿದೆ. ಮೊನ್ನೆ ತಾನೇ ಅದನ್ನ ನಮ್ಮ ಮನೆ ಓನರಮ್ಮನಿಗೆ ತೋರಿಸುತ್ತಾ ಇದ್ದಳು. ನನ್ನ ಹೆಂಡತಿ ಮನೆ ಓನರಮ್ಮನ ಜೊತೆ ಯಾವಾಗಲೂ ಜಗಳ ಆಡುತ್ತಾ ಇರುತ್ತಾಳೆ. ಆದರೂ ನಾವು ಒಂದು ಕಾಲದಲ್ಲಿ ಚೆನ್ನಾಗಿ ಬದುಕಿದೆವು ಅಂತ ಬೇರೆಯವರ ಎದುರಿಗೆ ತೋರಿಸಿಕೊಳ್ಳುವುದಕ್ಕೆ ಅವಳಿಗೆ ಇಷ್ಟ. ಅವಳನ್ನ ನಾನು ಬೈಯಲ್ಲ. ಅವಳ ಬದುಕಿನಲ್ಲಿ ಕೊನೇಗೆ ಉಳಿದಿರುವ ಸುಖದ ನೆನಪು ಅದು ಒಂದೇ. ಮಿಕ್ಕವೆಲ್ಲ ಉರಿದು ಬೂದಿ ಆಗಿವೆ. ಗಟ್ಟಿಗಿತ್ತಿ, ಅಭಿಮಾನ ಜಾಸ್ತಿ, ಸಿಟ್ಟು ಹೆಚ್ಚು. ಅವಳೇ ನೆಲ ಒರೆಸಿದರೂ, ಮೂರು ಹೊತ್ತು ದುಃಖಾನೇ ಉಂಡರೂ ಅವಮಾನವಾದರೆ ಮಾತ್ರ ಸಹಿಸಿಕೊಳ್ಳಲ್ಲ. ಅದಕ್ಕೇ ಲೆಬೆಸ್ಯಾತ್ನಿಕೋವ್ ಅವಳಿಗೆ ಅವಮಾನ ಮಾಡಿದಾಗ ಸಹಿಸಲಿಲ್ಲ. ಎದುರುತ್ತರ ಕೊಟ್ಟಳು, ಅವನು ಮರ್ಯಾದೆ ಮೀರಿ ಹೊಡೆದ. ಅವಳು ಮಂಚದ ಮೇಲೆ ಬಿದ್ದುಕೊಂಡು ಅತ್ತಳು. ಏಟಿನ ನೋವಿಗಲ್ಲ, ಅವಮಾನವಾಯಿತು ಅಂತ.

ನಾನು ಅವಳನ್ನ ಮದುವೆಯಾದಾಗ ಅವಳಿಗೆ ಮೂರು ಮಕ್ಕಳಿದ್ದವು. ಎಲ್ಲಾ ಸಣ್ಣವು. ಅವಳ ಮೊದಲನೆಯ ಗಂಡ ಸೈನ್ಯದಲ್ಲಿ ಆಫೀಸರು. ಅವನನ್ನ ಪ್ರೀತಿ ಮಾಡಿ ಮದುವೆ ಆಗಿದ್ದಳು. ಅಪ್ಪನ ಮನೆ ಬಿಟ್ಟು ಅವನ ಜೊತೆ ಓಡಿ ಹೋಗಿದ್ದಳು. ಗಂಡನ ಮೇಲೆ ತುಂಬಾ ಪ್ರೀತಿ ಇತ್ತು. ಅವನು ಇಸ್ಪೀಟಿನ ಚಟಕ್ಕೆ ಬಿದ್ದಿದ್ದ. ಕೋರ್ಟಿನಲ್ಲಿ ಕೇಸು ಆಯಿತು. ಆಮೇಲೆ ಸತ್ತು ಹೋದ. ಕೊನೆ ಕೊನೆಗೆ ಅವಳನ್ನ ಹೊಡೆಯುತ್ತಿದ್ದ. ಇವಳೂ ಸರಿಯಾಗಿ ತಿರುಗಿಸಿ ಕೊಡುತ್ತಾ ಇದ್ದಳು. ನನ್ನ ಹತ್ತಿರ ಪಕ್ಕಾ ಸಾಕ್ಷಿ ಇದೆ. ಇವತ್ತಿಗೂ ಅವನನ್ನು ನೆನೆದುಕೊಂಡು ಕಣ್ಣಲ್ಲಿ ನೀರು ತಂದುಕೊಳ್ಳುತ್ತಾಳೆ. ಅವನಿಗೆ ಹೋಲಿಕೆ ಮಾಡಿ ಹೋಲಿಕೆ ಮಾಡಿ ನನ್ನ ಬೈಯುತ್ತಾಳೆ. ಸುಖವಾಗಿದ್ದೆ ಅಂದುಕೊಂಡಿದ್ದ ದಿನಗಳನ್ನ ಮನಸ್ಸಿಗೆ ತಂದುಕೊಂಡು ಸಂತೋಷಪಡುತ್ತಾಳಲ್ಲಾ ಅದೇ ನನಗೆ ಖುಷಿ…

ಗಂಡ ತೀರಿಕೊಂಡ ಮೇಲೆ ಮೂರು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಆ ದೂರದ ದರಿದ್ರ ಊರಿನಲ್ಲಿದ್ದಳು. ನಾನೂ ಆಗ ಅಲ್ಲಿದ್ದೆ. ನನ್ನ ಹಾಗೇ ಅವಳೂ ಕಂಗಾಲಾಗಿದ್ದಳು. ನಾನು ಅನುಭವಿಸಿದ್ದೇನೂ ಕಡಿಮೆ ಅಲ್ಲ, ಆದರೂ ಅವಳ ಪಾಡನ್ನ ವರ್ಣನೆ ಮಾಡಕ್ಕೆ ಆಗಲ್ಲ ನನಗೆ. ಅವಳ ನಂಟರೆಲ್ಲ ಕೈ ಬಿಟ್ಟು ದೂರ ತಳ್ಳಿದ್ದರು. ಇವಳಿಗೂ ಅಭಿಮಾನ ಜಾಸ್ತಿ. ಆಗ, ಸ್ವಾಮೀ, ನಾನು, ಹೆಂಡತಿಯನ್ನ ಕಳೆದುಕೊಂಡಿದ್ದವನು, ಹದಿನಾಲ್ಕು ವರ್ಷದ ಮಗಳ ತಂದೆ, ಇವಳ ಪಾಡು ನೋಡಲಾರದೆ ‘ನನ್ನ ಮದುವೆಯಾಗುತ್ತೀಯಾ,’ ಅಂತ ಕೇಳಿದೆ. ಓದಿದವಳು, ಒಳ್ಳೆಯ ಮನೆತನದವಳು, ಸೈನ್ಯದಲ್ಲಿದ್ದವನ ಹೆಂಡತಿ, ನನ್ನ ಮದುವೆ ಆಗುವುದಕ್ಕೆ ಒಪ್ಪಿದಳು ಅಂದರೆ ಅವಳ ಪಾಡು ಹೇಗೆ ಇತ್ತೋ ನೀವೇ ಊಹೆ ಮಾಡಿಕೊಳ್ಳಿ. ಒಪ್ಪಿದಳು. ಅಳತಾ, ಬಿಕ್ಕುತ್ತಾ, ಕೈ ಹಿಸುಕಿಕೊಳ್ಳುತ್ತ ನನ್ನ ಮದುವೆಯಾದಳು!

ಅವಳಿಗೆ ನೆಲೆ ಅಂತ ಇರಲಿಲ್ಲ. ಅರ್ಥ ಆಗತ್ತಾ ಹುಡುಗಾ ನಿನಗೆ? ಇರುವುದಕ್ಕೆ ನೆಲೆ ಇಲ್ಲ ಅಂದರೆ ಹೇಗೆ ಇರತ್ತೆ ಗೊತ್ತಾ? ಇಲ್ಲ, ಅದು ನಿನಗಿನ್ನೂ ಅರ್ಥ ಆಗಲ್ಲ… ಒಂದು ವರ್ಷ ನನ್ನ ಸಂಸಾರಸ್ಥನ ಕರ್ತವ್ಯನ್ನು ನಿಷ್ಠೆಯಿಂದ ಮಾಡಿದೆ. ಇದನ್ನ ಮುಟ್ಟಲೇ ಇಲ್ಲ,’ ಅನ್ನುತ್ತ ಬಾಟಲಿ ತೋರಿಸಿದ. ‘ನನಗೂ ಮನಸ್ಸಿದೆ, ಭಾವನೆಗಳು ಇದ್ದಾವೆ. ಆದರೂ ಅವಳನ್ನ ಸಂತೋಷವಾಗಿಟ್ಟುಕೊಳ್ಳುವುದಕ್ಕೆ ಆಗಲಿಲ್ಲ. ನನ್ನ ಕೆಲಸ ಹೋಯಿತು. ನನ್ನ ತಪ್ಪೇನೂ ಇರಲಿಲ್ಲ, ಡಿಪಾರ್ಟ್‍ಮೆಂಟಿನಲ್ಲಿ ಬದಲಾವಣೆ ಆಗಿತ್ತು. ಆಗ ಬಾಟಲಿ ಹಿಡಿದೆ. ಎಲ್ಲೆಲ್ಲೋ ಸುತ್ತಾಡಿ, ಏನೇನೋ ಅನುಭವಿಸಿ, ಅದ್ಭುತವಾದ ಸ್ಮಾರಕಗಳು ಇರುವ ಈ ರಾಜಧಾನಿಗೆ ಬಂದು ಒಂದೂವರೆ ವರ್ಷ ಆಗಿದೆ. ಇಲ್ಲಿ ನನಗೆ ಕೆಲಸ ಸಿಕ್ಕಿತು. ಸಿಕ್ಕಿತ್ತು, ಹೋಯಿತು. ಗೊತ್ತಾ ಸಾರ್, ಈ ಸಾರಿ ಕೆಲಸ ಹೋಗಿದ್ದು ನನ್ನ ತಪ್ಪಿನಿಂದ, ನನ್ನ ಚಟದಿಂದ… ಈಗ ನಾವು ಅಮಾಲಿಯ ಇವಾನೋವ್ನ ಲಿಪೆವೆಕ್ಸಲ್ ಮನೆಯ ಒಂದು ಮೂಲೆಯಲ್ಲಿ ಇದ್ದೇವೆ. ಹೇಗೆ ಬದುಕುತ್ತೇವೋ ಹೇಗೆ ಬಾಡಿಗೆ ಕೊಡುತ್ತೇವೋ ನನಗೇ ಗೊತ್ತಿಲ್ಲ. ನಮ್ಮ ಜೊತೆ ಅದೇ ಬಿಲ್ಡಿಂಗಿನಲ್ಲಿ ಇನ್ನೂ ಬೇರೆ ಜನ ಇದ್ದಾರೆ. ಪಾಪಿಗಳು, ಲುಚ್ಚಾಗಳು, ಲಫಂಗರು ಇರುವ ಕರಡೀ ಬನದಂಥ ಜಾಗ, ಪಾಪಿಗಳ ಊರು ಸೊಡೋಮ್ ನಗರದಂಥ ಜಾಗ. ಹ್ಞೂಂ… ಈ ನಡುವೆ ನನ್ನ ಮೊದಲನೆಯ ಹೆಂಡತಿಯ ಮಗಳು ದೊಡ್ಡವಳಾದಳು. ಬೆಳೆಯುತ್ತಾ ಚಿಕ್ಕಮ್ಮನ ಕೈಯಲ್ಲಿ ಏನು ಪಾಡು ಪಟ್ಟಳೋ ಅದನ್ನೆಲ್ಲ ಹೇಳಲ್ಲ. ಕ್ಯಾತರೀನಾ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಇದ್ದರೂ ಅವಳಿಗೆ ಇದ್ದಕ್ಕಿದ್ದ ಹಾಗೆ ಕೋಪ ಬರತ್ತೆ. ಮಾತಿನಲ್ಲೇ ತಿವೀತಾಳೆ. ಅದನ್ನೆಲ್ಲ ಹೇಳಿ ಉಪಯೋಗ ಇಲ್ಲ.

ಸೋನ್ಯಾಗೆ ಓದು ಬರಹ ಇರಲಿಲ್ಲ. ನಾಲ್ಕು ವರ್ಷದ ಹಿಂದೆ ಅವಳಿಗೆ ಸ್ವಲ್ಪ ಭೂಗೋಳ, ಜಗತ್ತಿನ ಚರಿತ್ರೆ ಹೇಳಿಕೊಡುವುದಕ್ಕೆ ನೋಡಿದೆ. ನನಗೇ ಅಂಥಾ ಚೆನ್ನಾಗಿ ಗೊತ್ತಿಲ್ಲ. ಅಲ್ಲದೆ ಸರಿಯಾದ ಪಾಠದ ಪುಸ್ತಕವೂ ಇರಲಿಲ್ಲ. ನಮ್ಮ ಮನೆಯಲ್ಲಿದ್ದ ಪುಸ್ತಕ ಎಲ್ಲಾ… ಹ್ಞೂಂ… ಪುಸ್ತಕ ಯಾವುದೂ ಉಳಿದಿಲ್ಲ, ಅವಳ ಓದು ಅಲ್ಲಿಗೇ ಮುಗಿಯಿತು. ನಮ್ಮ ಪಾಠ ಪರ್ಷಿಯಾದ ಚಕ್ರವರ್ತಿ ಸೈರಸ್ ಗೇ ನಿಂತು ಹೋಯಿತು. ಆಮೇಲೆ ವಯಸ್ಸಿಗೆ ಬಂದಾಗ ಕಾದಂಬರಿ ಓದುತ್ತಾ ಇದ್ದಳು. ಇತ್ತೀಚೆಗೆ ಲೆಬಿಸ್ಯಾತ್ನಿಕೋವ್ ಕೊಟ್ಟ ಪುಸ್ತಕ, ಲೀವೆ ಬರೆದಿರುವ ‘ದೇಹಶಾಸ್ತ್ರ’ ಓದುತ್ತಾ ಇದ್ದಳು. ನಿಮಗೆ ಅದು ಗೊತ್ತಿರಬೇಕಲ್ಲ? ತುಂಬಾ ಮನಸ್ಸಿಟ್ಟು ಓದಿದಳು, ಅದರ ಕೆಲವು ಭಾಗ ನಮಗೂ ಕೇಳಿಸುವ ಹಾಗೆ ಜೋರಾಗಿ ಓದಿದಳು. ಅವಳಿಗೆ ಸಿಕ್ಕ ವಿದ್ಯೆ ಅಷ್ಟೇ. ಈಗ ನನ್ನದೇ ಒಂದು ಖಾಸಗೀ ಪ್ರಶ್ನೆ ಕೇಳಲಾ ಸಾರ್? ಒಬ್ಬ ಬಡ ಹುಡುಗಿ ಪ್ರಾಮಾಣಿಕವಾಗಿ ದುಡಿಮೆ ಮಾಡಿದರೆ ಎಷ್ಟು ಸಂಪಾದನೆ ಮಾಡಬಹುದು? ದಿನಕ್ಕೆ ಹದಿನೈದು ಕೊಪೆಕ್ ಕೂಡ ಹುಟ್ಟಲ್ಲ ಸಾರ್. ಅದೂ ಅವಳು ಪ್ರಾಮಾಣಿಕವಾಗಿದ್ದು, ಕೈಗೆ ಒಂದು ನಿಮಿಷಾನೂ ಪುರಸೊತ್ತು ಕೊಡದೆ ದುಡಿದರೆ ಮಾತ್ರ. ಕೌನ್ಸಿಲರ್ ಕ್ಲೋಪ್ ಸ್ಟಾಕ್ ಇದಾರಲ್ಲ, ಅವರ ಹೆಸರು ಕೇಳಿದ್ದರೂ ಕೇಳಿರಬಹುದು ನೀವು… ಅವರು ಅಂಗಿ ಹೊಲಿಸಿಕೊಂಡು, ಇವತ್ತಿನವರೆಗೂ ಕಾಸು ಕೊಟ್ಟಿಲ್ಲ. ಅವಳನ್ನ ಕೆಟ್ಟ ಮಾತು ಬೈದು ಓಡಿಸಿಬಿಟ್ಟರು. ಅಂಗಿಯ ಕಾಲರು ಅವರು ಹೇಳಿದ ಹಾಗೆ ಇರಲಿಲ್ಲವಂತೆ, ಚೂಪಾಗಿತ್ತಂತೆ… ಆ ಕಡೆ ಮಕ್ಕಳೆಲ್ಲ ಹಸಿವೂ ಅಂತ ಅಳುತ್ತಿದ್ದವು, ಈ ಕಡೆ ನನ್ನ ಹೆಂಡತಿ ಕೈ ಕೈ ಹಿಸುಕಿಕೊಳ್ಳುತ್ತ ಅತ್ತ ಇತ್ತ ಓಡಾಡುತ್ತ ಮುಖ ಕೆಂಪು ಮಾಡಿಕೊಂಡಿದ್ದಳು. ಅವಳಿಗೆ ಕಾಯಿಲೆ ಜಾಸ್ತಿಯಾದಾಗ ಮುಖ ಕೆಂಪಾಗತ್ತೆ. ‘ಕೆಲಸಕ್ಕೆ ಬಾರದವಳೆ, ನಮ್ಮ ಮನೇಲಿ ಸೇರಿಕೊಂಡಿದೀಯ, ತಿನ್ನತೀಯ, ಉಣ್ಣತೀಯ, ಬೆಚ್ಚಗೆ ಮಲಕ್ಕೋತಿಯ,’ ಅಂತ ಬೈದಳು. ತಿನ್ನುವುದಕ್ಕೆ ಏನಿತ್ತು? ಮಕ್ಕಳು ಕೂಡ ಮೂರು ದಿನದಿಂದ ಬ್ರೆಡ್ಡಿನ ತುಂಡು ಕೂಡ ನೋಡಿರಲಿಲ್ಲ.

ನಾನು ಅಲ್ಲೇ ಇದ್ದೆ… ಸುಳ್ಳು ಯಾಕೆ ಹೇಳಲಿ ಇವರೇ? ಕುಡಿದು ಬಿದ್ದಿದ್ದೆ. ಸೋನ್ಯಾ ಯಾವತ್ತೂ ದೂರು ಮಾಡುವವಳಲ್ಲ, ಅವಳ ದನಿ ಸಣ್ಣದು, ತುಂಬ ಸೌಮ್ಯ. ನೋಡಕ್ಕೆ ಚೆನ್ನಾಗಿದಾಳೆ, ಹೊಟ್ಟೆಗಿಲ್ಲದೆ ಮುಖ ಮಾತ್ರ ಬಿಳಿಚಿಕೊಂಡಿದೆ. ‘ಏನು ಚಿಕ್ಕಮ್ಮಾ, ನಾನು ನಿಜವಾಗಲೂ ಅಂಥಾ ಕೆಲಸ ಮಾಡಬೇಕಾ,’ ಅಂತ ಕೇಳಿದಳು. ದರ್ಯಾ ಫ್ರಾನ್ಸೋವ್ನಾ, ತಲೆಹಿಡುಕಿ, ಪೋಲೀಸಿನವರಿಗೆ ಚೆನ್ನಾಗಿ ಗುರುತಿದ್ದವಳು, ಆಗಲೇ ಎರಡು ಮೂರು ಸಾರಿ ಮನೆಯ ಓನರಮ್ಮನ ಮೂಲಕ ವಿಚಾರಿಸಿದ್ದಳು. ‘ಏನಾಗತ್ತೆ ಮಾಡಿದರೆ? ಕಾಪಾಡಿಕೊಳ್ಳಕ್ಕೆ ಅದೇನು ಚಿನ್ನಾನಾ ಬೆಳ್ಳೀನಾ?’ ಅಂದಳು ನನ್ನ ಹೆಂಡತಿ, ಲೇವಡಿ ಮಾಡಿದಳು. ಅವಳನ್ನ ಬೈಯಬೇಡಿ ಸಾರ್, ಬೈಯಬೇಡಿ, ಅವಳನ್ನ ಬೈಯಬೇಡಿ. ಅವಳು ಹಾಗಂದಾಗ ಅವಳ ಮನಸ್ಸು ಸರಿ ಇರಲಿಲ್ಲ, ಕಾಯಿಲೆ ಇತ್ತು, ಕೆರಳಿದ್ದಳು, ಮಕ್ಕಳು ಹಸಿವೂ ಅಂತ ಅಳುತ್ತಿದ್ದವು. ಅಲ್ಲದೆ ನನ್ನ ಮಗಳಿಗೆ ಅವಮಾನ ಆಗಲಿ, ಮನಸ್ಸು ಚುಚ್ಚಲಿ ಅಂತ ಹಾಗಂದಳು. ನನ್ನ ಹೆಂಡತಿ ಕ್ಯಾತರೀನ ಸ್ವಭಾವಾನೇ ಅಷ್ಟು. ಮಕ್ಕಳು ಹಸಿವಿಗೆ ಅತ್ತರೂ ಹಿಡಿದು ಚಚ್ಚುತ್ತಾಳೆ. ಸರಿ, ಸಾಯಂಕಾಲ ಐದು ಗಂಟೆ ಹೊತ್ತಿಗೆ ಸೋನ್ಯಾ ಎದ್ದಳು, ತಲೆಗೆ ಸ್ಕಾರ್ಫು ಕಟ್ಟಿಕೊಂಡಳು, ಭುಜದ ಮೇಲೆ ಶಾಲು ಹಾಕಿಕೊಂಡಳು. ಹೋದಳು. ರಾತ್ರಿ ಎಂಟು ಗಂಟೆ ಹೊತ್ತಿಗೆ ಬಂದಳು. ಬಂದವಳೇ ಸೀದ ನನ್ನ ಹೆಂಡತಿ ಕ್ಯಾತರೀನ ಹತ್ತಿರ ಹೋದಳು. ಏನೂ ಮಾತಾಡದೆ ಮೂವತ್ತು ರೂಬಲ್ ತೆಗೆದು ಟೇಬಲ್ ಮೇಲೆ ಇಟ್ಟಳು. ಚಿಕ್ಕಮ್ಮನ ಕಡೆ ನೋಡಲೂ ಇಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಆಗುವಂಥ ದೊಡ್ಡ ಶಾಲು ಇದೆ, ಅದನ್ನ ತಗೊಂಡು ತಲೆ ಮುಖ ಎಲ್ಲ ಮುಚ್ಚುವ ಹಾಗೆ ಹೊದ್ದುಕೊಂಡು ಗೋಡೆ ಕಡೆ ತಿರುಗಿ ಮಲಗಿದಳು. ಅವಳ ಪುಟ್ಟ ಭುಜ, ಇಡೀ ಮೈ ನಡುಗುತ್ತಿತ್ತು… ನಾನು ದಿನಾ ಇರುವ ಹಾಗೆ ಕುಡಿದು ಬಿದ್ದಿದ್ದೆ… ಆಮೇಲೆ ನೋಡಿದರೆ ನನ್ನ ಹೆಂಡತಿ ಕ್ಯಾತರೀನ ಸೋನ್ಯಾ ಹಾಸಿಗೆ ಹತ್ತಿರ ಹೋದಳು. ಒಂದೂ ಮಾತಾಡದೆ ಮೊಳಕಾಲೂರಿ ಕೂತು ಅವಳ ಪಾದಕ್ಕೆ ಮುತ್ತಿಟ್ಟಳು. ಇಬ್ಬರೂ… ಹಾಗೇ ಮಲಗಿದರು. ತಬ್ಬಿಕೊಂಡು ನಿದ್ರೆ ಹೋದರು…. ಮತ್ತೆ ನಾನು… ಹಾಗೇ ಕುಡಿದು ಬಿದ್ದಿದ್ದೆ, ಸ್ವಾಮಿ.’

ದನಿ ಇಲ್ಲದವನ ಹಾಗೆ ಮಾರ್ಮೆಲಡೋವ್ ಸುಮ್ಮನಾದ. ತಟ್ಟನೆ ಬಿಯರ್ ಬಗ್ಗಿಸಿಕೊಂಡು ಗಟಗಟ ಕುಡಿದು ಕೆಮ್ಮಿ ಗಂಟಲು ಸರಿಮಾಡಿಕೊಂಡ.

ಸ್ವಲ್ಪ ಹೊತ್ತು ಮೌನವಾಗಿದ್ದ. ಆಮೇಲೆ ಮುಂದುವರೆಸಿದ: ‘ಆವಾಗಿನಿಂದ, ಸಾರ್, ಏನೇನೋ ನಡೆಯಿತು, ಕೆಟ್ಟ ಜನ ಏನೇನೋ ಮಾತಾಡಿದರು, ಅವಕ್ಕೆಲ್ಲ ತಲೆಹಿಡುಕಿ ದರ್ಯಾ ಫ್ರಾನ್ಸೋವ್ನಾ ಕುಮ್ಮಕ್ಕು ಇತ್ತು. ಅವಳಿಗೆ ಕೊಡಬೇಕಾದ ಗೌರವ ಕೊಡಲಿಲ್ಲ ಅನ್ನುವ ನೆಪ ಹೇಳತಿದ್ದಳು. ಆವಾಗಿನಿಂದ ನನ್ನ ಮಗಳು ಸೋನ್ಯಾ ಸೂಳೆಯರಿಗೆ ಕೊಡುವ ಹಳದಿ ಪಾಸ್ ಇಟ್ಟುಕೊಂಡು ಬದುಕಬೇಕಾಗಿದೆ. ಹಾಗಾಗಿ ನಮ್ಮ ಜೊತೆ ಇರುವುದಕ್ಕೆ ಅವಕಾಶ ಇಲ್ಲ. ಓನರಮ್ಮ ಅಮಾಲಿಯ ಅದಕ್ಕೆ ಅವಕಾಶ ಕೊಡಲ್ಲ. ದರ್ಯಾ ಫ್ರಾನ್ಸೋವಾಗೂ ಲೆಬಿಸ್ಯಾತ್ನಿಕೋವ್‍ ಗೂ ಕುಮ್ಮಕ್ಕು ಕೊಟ್ಟಿದ್ದವಳೂ ಅವಳೇ. ಸೋನ್ಯಾ ಕಾರಣಕ್ಕೇನೇ ಲೆಬಿಸ್ಯಾತ್ನಿಕೋವ್‍ ಗೂ ನನ್ನ ಹೆಂಡತಿ ಕ್ಯಾತರೀನಾಗೂ ಮಾತು ನಡೆಯಿತು. ಮೊದಲು ಅವನು ಸೋನ್ಯಾ ಬೆನ್ನು ಬಿದ್ದಿದ್ದ. ಆಮೇಲೆ ಇದ್ದಕಿದ್ದ ಘನತೆಯ ಕುದುರೆ ಏರಿ—’ಏನು, ನನ್ನಂಥ ವಿದ್ಯಾವಂತ, ಮರ್ಯಾದಸ್ಥ, ಇಂಥಾ ಹೆಂಗಸು ಇರುವ ಮನೆಯಲ್ಲಿ ಇರುವುದಕ್ಕೆ ಸಾಧ್ಯವಾ?’ ಅನ್ನುವುದಕ್ಕೆ ಶುರು ಮಾಡಿದ. ಆ ಮಾತು ಕೇಳಿ ನನ್ನ ಹೆಂಡತಿ ಸುಮ್ಮನೆ ಇರಲಿಲ್ಲ. ಆಗ ಅವನು ಹೊಡೆದ… ಈಗ ಸೋನ್ಯಾ ಸಾಯಂಕಾಲ ಕತ್ತಲಿಳಿದ ಮೇಲೆ ನಮ್ಮ ಮನೆಗೆ ಬರುತ್ತಾಳೆ, ನನ್ನ ಹೆಂಡತಿಗೆ ಸಹಾಯ ಮಾಡತಾಳೆ, ದಿನಸಿ ತಂದು ಹಾಕತಾಳೆ. ಇರುವುದು ಮಾತ್ರ ದರ್ಜಿ ಕಾಪೆರ್ನುಮೋವ್ ಮನೆಯಲ್ಲಿ. ಅವನು ಬಾಯಿ ಸತ್ತವನು. ಅವನ ಹೆಂಡತಿಯೂ ಹಾಗೇ. ಅವನ ಮನೆಯವರೆಲ್ಲರೂ ಅಷ್ಟೇ… ಅವರು ಒಂದು ಕೋಣೆಯಲ್ಲಿದ್ದುಕೊಂಡು ಮಧ್ಯ ಪರದೆ ಕಟ್ಟಿ ಒಂದಷ್ಟು ಜಾಗ ಸೋನ್ಯಾಗೆ ಬಿಟ್ಟುಕೊಟ್ಟಿದಾರೆ. ಬಡವರೇ ಹಾಗೆ, ಎಲ್ಲಾರೂ ಬಾಯಿ ಸತ್ತವರೇ..

ಒಳಕ್ಕೆ ಕಾಲಿಟ್ಟ ತಕ್ಷಣ ಹತ್ತಡಿ ಉದ್ದ, ಹತ್ತಡಿ ಅಗಲದ ಆ ಕೋಣೆಯನ್ನು ಇಡಿಯಾಗಿ ಕಣ್ಣು ತುಂಬಿಕೊಳ್ಳಬಹುದಾಗಿತ್ತು. ಕೋಣೆ ಅಸ್ತವ್ಯಸ್ತವಾಗಿತ್ತು. ಮಕ್ಕಳ ಚಿಂದಿ ಬಟ್ಟೆ ಎಲ್ಲೆಲ್ಲೂ ಹರಡಿದ್ದವು. ಒಂದು ಮೂಲೆಯಲ್ಲಿ ಹರಿದ ಬೆಡ್ ಶೀಟು ನೇತಾಡುತ್ತಿತ್ತು.

ಬೆಳಗ್ಗೆ ಎದ್ದವನೇ ನನ್ನ ಚಿಂದಿ ಬಟ್ಟೆ ತೊಟ್ಟೆ, ದೇವರಿಗೆ ಪ್ರಾರ್ಥನೆ ಮಾಡಿದೆ, ಹಿಸ್ ಎಕ್ಸಲೆನ್ಸಿ ಇವಾನ್ ಅಫಾನಸ್ಯೆವಿಚ್ ಅವರನ್ನ ನೋಡೋದಕ್ಕೆ ಹೋದೆ. ನಿಮಗೆ ಅವರು ಗೊತ್ತಾ? ಇಲ್ಲವಾ? ಹಾಗಾದರೆ ನೀವು ದೇವರಂಥ ಮನಷ್ಯನ್ನ ನೋಡಿಯೇ ಇಲ್ಲ ಬಿಡಿ.. ದೇವರ ಮುಂದೆ ಮೇಣದ ಬತ್ತಿ ಕರಗುತ್ತಲ್ಲ ಹಾಗೆ ಅವನ ಮನಸ್ಸೂ ಕರಗತ್ತೆ. ನನ್ನ ಕಥೆ ಕೇಳಿ ಅವನ ಕಣ್ಣಲ್ಲಿ ನೀರು ಕೂಡ ಬಂತು. ‘ಸರಿ ಮಾರ್ಮೆಲಡೋವ್, ನೀನು ಆಗಲೇ ಒಂದು ಸಾರಿ ಕೈ ಕೊಟ್ಟಿದೀಯ, ಇನ್ನೂ ಒಂದು ಸಾರಿ ನನ್ನ ಸ್ವಂತ ಜವಾಬ್ದಾರಿ ಮೇಲೆ ಕೆಲಸಕ್ಕೆ ತಗೊಳ್ಳತೇನೆ,’ ಅಂದರು. ‘ಜ್ಞಾಪಕ ಇರಲಿ, ನನ್ನ ಜವಾಬ್ದಾರಿ ಮೇಲೆ,’ ಅಂತ ಎಚ್ಚರಿಕೆ ಹೇಳಿ ಕಳಿಸಿದರು. ನನ್ನ ಮನಸಿನಲ್ಲೇ ಅವರ ಪಾದಕ್ಕೆ ಮುತ್ತಿಟ್ಟೆ. ನಿಜವಾಗಿ ಕಾಲಿಗೆ ಬೀಳುವುದಕ್ಕೆ ಬಿಡುತ್ತಾ ಇರಲಿಲ್ಲ ಅವರು. ಈಗಿನ ಕಾಲದ ರಾಜಕಾರಣಿ, ಓದಿದವರು, ಯೋಚನೆ ಮಾಡುವ ಜನ. ಮನೆಗೆ ವಾಪಸ್ಸು ಹೋದೆ. ನನ್ನ ಮತ್ತೆ ಡ್ಯೂಟಿಗೆ ತಗೊಂಡರು, ಸಂಬಳ ಬರುತ್ತದೆ ಅಂತ ಹೇಳಿದಾಗ, ಅಯ್ಯೋ ದೇವರೇ! ಎಂಥಾ ಸಡಗರ…’

ಮಾರ್ಮೆಲಡೋವ್ ಕ್ಷೋಭೆಗೆ ಒಳಗಾಗಿದ್ದ. ಮಾತು ನಿಲ್ಲಿಸಿದ. ಆ ಹೊತ್ತಿಗೆ ಒಂದಷ್ಟು ಜನ ಕುಡುಕರು ಬಂದರು. ಆಗಲೇ ಕುಡಿದಿದ್ದರು. ಬಾಗಿಲ ಹತ್ತಿರ ಬ್ಯಾರಲ್ ಆರ್ಗನ್ ಜೊತೆಗೆ ಏಳು ವರ್ಷದ ಮಗುವಿನ ದನಿಯಲ್ಲಿ ಲಿಟಲ್ ಫಾರಮ್ ಹಾಡು ಕೇಳುತ್ತಿತ್ತು. ಹೆಂಡದಂಗಡಿಯ ತುಂಬ ಗಲಾಟೆ ತುಂಬಿತ್ತು. ಅಂಗಡಿಯ ಯಜಮಾನನ ಜೊತೆಗೆ ಹುಡುಗರು ಕೂಡ ಹೊಸ ಗಿರಾಕಿಗಳ ಸೇವೆಯಲ್ಲಿ ಮುಳುಗಿದ್ದರು. ಮಾರ್ಮೆಲಡೋವ್ ಮಾತ್ರ ಬಂದವರನ್ನು ಲೆಕ್ಕಕ್ಕೇ ಇಟ್ಟುಕೊಳ್ಳದೆ ಕಥೆ ಮುಂದುವರೆಸಿದ. ದಣಿದ ಹಾಗೆ ಕಾಣುತ್ತಿದ್ದ. ಆದರೂ ಕುಡಿದ ಹಾಗೆಲ್ಲ ಅವನ ಮಾತೂ ಜಾಸ್ತಿಯಾಗುತ್ತಿತ್ತು. ಇತ್ತೀಚೆಗೆ ಮತ್ತೆ ಡ್ಯೂಟಿಗೆ ಸೇರಿದೆ ಅನ್ನುವ ನೆನಪೇ ಹೆಮ್ಮೆ ಮೂಡಿಸಿ ಅವನ ಮುಖಕ್ಕೆ ಹೊಳಪು ತಂದಿತ್ತು. ರಾಸ್ಕೋಲ್ನಿಕೋವ್ ಗಮನವಿಟ್ಟು ಅವನ ಕಥೆ ಕೇಳಿಸಿಕೊಂಡ.

‘ಇದಾಗಿದ್ದು ಐದು ವಾರದ ಹಿಂದೆ ಸಾರ್. ಅವರಿಬ್ಬರೂ, ಅಂದರೆ ನನ್ನ ಹೆಂಡತಿ ಕ್ಯಾತರೀನ ಮತ್ತೆ ಮಗಳು ಸೋನ್ಯಾಗೆ ವಿಷಯ ಗೊತ್ತಾಯಿತು. ನಾನು ದೇವರ ರಾಜ್ಯದಲ್ಲಿ ಇದ್ದೇನೆ ಅನ್ನಿಸುತ್ತಿತ್ತು. ಮೊದಲೆಲ್ಲ ಹಂದಿ ಥರ ಬಿದ್ದುಕೊ, ಬರೀ ಅವರ ಬೈಗುಳ ಕೇಳು… ಅಷ್ಟೇ. ಈಗ ಅವರು ತುದಿಗಾಲಲ್ಲಿ ಓಡಾಡುತ್ತಿದ್ದರು, -ಮಕ್ಕಳೇ, ಅಪ್ಪ ಕೆಲಸ ಮಾಡಿ ಸುಸ್ತಾಗಿ ಬಂದಿದಾರೆ, ಗಲಾಟೆ ಮಾಡಬೇಡಿ ಅನ್ನುತ್ತಿದ್ದರು. ಡ್ಯೂಟಿಗೆ ಹೋಗುವುದಕ್ಕೆ ಮೊದಲು ಗಟ್ಟಿ ಹಾಲು ಹಾಕಿದ ಕಾಫಿ ತಂದುಕೊಡುತ್ತಿದ್ದರು. ಅದು ಹೇಗೆ ದುಡ್ಡು ಹೊಂಚಿದರೋ ಗೊತ್ತಿಲ್ಲ, ಹನ್ನೊಂದು ರೂಬೆಲ್, ಐವತ್ತು ಕೊಪೆಕ್ ಖರ್ಚು ಮಾಡಿ ನನಗೆ ಬೂಟು, ಕಾಟನ್ ಅಂಗಿ, ಯೂನಿಫಾರಮ್ಮು ಎಲ್ಲಾ ತಂದುಕೊಟ್ಟರು. ಮೊದಲನೆಯ ದಿನ ಕೆಲಸ ಮುಗಿಸಿ ಬಂದಾಗ ನನ್ನ ಹೆಂಡತಿ ಕ್ಯಾತರೀನ ಸೂಪ್ ಮಾಡಿದ್ದಳು, ಹಾರ್ಸ್ ರಾಡಿಶ್ ಹಾಕಿ ಬೀಫ್ ಮಾಡಿದ್ದಳು. ಅಂಥದ್ದು ಅದುವರೆಗೆ ಕನಸಲ್ಲೂ ಕಂಡಿರಲಿಲ್ಲ. ನನ್ನ ಹೆಂಡತಿ ಹತ್ತಿರ ಒಳ್ಳೆಯ ಡ್ರೆಸ್ ಅಲ್ಲ, ಡ್ರೆಸ್ಸೇ ಇರಲಿಲ್ಲ. ಈಗ ಯಾವುದೋ ಕಾಲರು, ಕಫ್ ಹೊಂದಿಸಿಕೊಂಡು, ತುರುಬು ಕಟ್ಟಿಕೊಂಡು ಪಾರ್ಟಿಗೆ ಹೊರಟ ಹಾಗೆ ಡ್ರೆಸ್ಸು ಮಾಡಿಕೊಂಡಿದ್ದಳು. ನೋಡುವುದಕ್ಕೆ ಪ್ರಾಯದವಳ ಹಾಗೆ, ಚೆನ್ನಾಗಿ ಕಾಣುತ್ತಿದ್ದಳು. ನನ್ನ ಮುದ್ದು ಸೋನ್ಯಾ ದುಡ್ಡು ಕೊಟ್ಟಳು. ‘ನಾನು ಮಾತ್ರ ಇಲ್ಲಿಗೆ ಮತ್ತೆ ಮತ್ತೆ ಬರಲ್ಲ, ಬಂದರೂ ಕತ್ತಲಾದಮೇಲೆ. ಯಾರಿಗೂ ಕಾಣಲ್ಲ,’ ಅಂದಳು ಸೋನ್ಯಾ.

ನಾನು ಮಧ್ಯಾಹ್ನದ ಊಟ ಮುಗಿಸಿ ಮಲಗಿದ್ದೆ. ನನ್ನ ಹೆಂಡತಿ ಕ್ಯಾತರೀನ, ಇನ್ನೂ ಹೋದವಾರ ತಾನೇ ಓನರಮ್ಮ ಅಮಾಲಿಯಾ ಜೊತೆ ಸಿಕ್ಕಾಪಟ್ಟೆ ಜಗಳ ಆಡಿದ್ದರೂ ಈಗ ಅವಳನ್ನ ಕಾಫಿಗೆ ಕರೆದಿದ್ದಳು. ಇಬ್ಬರೂ ಕೂತು ಒಂದು ಗಂಟೆ ಹೊತ್ತು ಹರಟೆ ಹೊಡೆದರು. ‘ನಿಮಗೆ ಗೊತ್ತಾ ನಮ್ಮನೆಯವರಿಗೆ ಮತ್ತೆ ಕೆಲಸ ಸಿಕ್ಕಿದೆ, ಸಂಬಳ ಬರತ್ತೆ, ಇವತ್ತು ಹಿಸ್ ಎಕ್ಸಲೆನ್ಸಿಯವರನ್ನ ನೋಡುವುದಕ್ಕೆ ಹೋಗಿದ್ದರು. ದೊಡ್ಡವರೇ ಸ್ವತಃ ಬಂದು ಮಾತಾಡಿಸಿದರು, ಗೊತ್ತಾ. ಎಲ್ಲಾರನ್ನು ಕಾಯುವುದಕ್ಕೆ ಹೇಳಿ ನಮ್ಮವರನ್ನು ಆಫೀಸಿನ ಒಳಕ್ಕೆ ಕರಕೊಂಡು ಹೋದರು—ಮಾರ್ಮೆಲಡೋವ್, ನೀವು ಒಳ್ಳೆಯವರು, ನಿಮ್ಮನ್ನ ಮರೆತಿಲ್ಲ, ಏನೋ ನಿಮಗೆ ಒಂದೆರಡು ಸಣ್ಣ ಪುಟ್ಟ ವೀಕ್‍ನೆಸ್ ಇದೆ. ನೀವೂ ಈಗ ಮಾತುಕೊಟ್ಟಿದ್ದೀರಲ್ಲ, ಅಷ್ಟು ಸಾಕು, ನೀವು ಹೋದಮೇಲೆ ನಮ್ಮ ಆಫೀಸು ನಡೆಸುವುದೇ ಕಷ್ಟವಾಗಿತ್ತು ಅಂದರು, ಗೊತ್ತಾ!’ ಹೀಗನ್ನುತ್ತಾ ಇದ್ದಳು ನನ್ನ ಹೆಂಡತಿ ಕ್ಯಾತರೀನ. ಎಲ್ಲಾ ಅವಳ ಕಲ್ಪನೆ. ಸುಮ್ಮನೆ ಜಂಬ ಕೊಚ್ಚಿಕೊಳ್ಳುವುದಕ್ಕಲ್ಲ, ನಿಜವಾಗಲೂ ಹೀಗೇ ನಡೆಯಿತು ಅಂತ ಕಲ್ಪನೆಯನ್ನೇ ನಂಬಿಕೊಂಡಿದ್ದಳು. ಅವಳನ್ನ ಬೈಯಲ್ಲ, ಬೈಯಲ್ಲ ನಾನು. ಆರು ದಿನದ ಹಿಂದೆ, ನನ್ನ ಮೊದಲ ಸಂಬಳ ಇಪ್ಪತಮೂರು ರೂಬೆಲ್ ನಲವತ್ತು ಕೊಪೆಕ್, ಪೂರಾ ಸಂಬಳ ತಂದು ಅವಳ ಕೈಯಲ್ಲಿಟ್ಟೆ. ನನ್ನ ಮುದ್ದೂ, ನನ್ನ ಚಿನ್ನಾ ಅಂತ ನನ್ನ ಮುದ್ದು ಮಾಡಿದಳು. ಮನೆಯಲ್ಲಿ ಯಾರೂ ಇರಲಿಲ್ಲ. ನನ್ನಲ್ಲಿ ಯಾವ ಚೆಲುವು ಇದೆ, ಯಾವ ಮುದ್ದು ಇದೆ, ಹೇಳಿ! ಆದರೂ ಮೆಲ್ಲಗೆ ನನ್ನ ಕೆನ್ನೆ ಚಿವುಟಿ ನನ್ನ ಮುದ್ದೂ ಅಂದಳು.

ಮಾರ್ಮೆಲಡೋವ್ ಮಾತು ನಿಲ್ಲಿಸಿದ. ನಗುವುದಕ್ಕೆ ಪ್ರಯತ್ನಪಟ್ಟ. ಕೆನ್ನೆ ಅದುರಿದವು. ಅಳು ತಡೆದುಕೊಂಡ. ಹೆಂಡದಂಗಡಿ, ಆ ಮನುಷ್ಯನ ಮುಖದ ಮೇಲಿದ್ದ ದೀನ, ಹೀನ ನೋಟ, ಐದು ರಾತ್ರಿ ಹುಲ್ಲಿನ ದೋಣಿಯಲ್ಲಿ ಕಳೆದು ಬಂದು ಈಗ ಅರ್ಧ ಬಾಟಲಿ ಹೆಂಡ ಕುಡಿದು, ಹೆಂಡತಿ ಮಕ್ಕಳ ಬಗ್ಗೆ ಜಡ್ಡಿನಂಥ ಪ್ರೀತಿ ತೋರುತ್ತಿರುವ ರೀತಿ ಇವೆಲ್ಲ ಸೇರಿ ಗಮನವಿಟ್ಟು ಕೇಳುತ್ತಿದ್ದ ರಾಸ್ಕೋಲ್ನಿಕೋವ್ ತಬ್ಬಿಬ್ಬಾಗಿದ್ದ. ಈ ಜಾಗಕ್ಕೆ ಯಾಕಾದರೂ ಬಂದೆನೋ ಅಂದುಕೊಂಡ.

‘ಸ್ವಾಮೀ, ಸ್ವಾಮೀ, ನಿಮಗೆಲ್ಲ ಇದು ನಗುವ ವಿಚಾರ ಇರಬಹುದು. ನಮ್ಮ ಮನೆಯ ಕೆಲಸಕ್ಕೆ ಬಾರದ ಸಣ್ಣಪುಟ್ಟ ವಿಚಾರ ಹೇಳಿ ಕೊರೆಯುತ್ತಾ ಇದೇನೆ ಅನ್ನಿಸಬಹುದು. ಇದು ನಗುವ ವಿಚಾರ ಅಲ್ಲ. ಜ್ಞಾಪಿಸಿಕೊಂಡರೆ ಈಗಲೂ ಫೀಲ್ ಆಗತ್ತೆ. ನನ್ನ ಇಡೀ ಜೀವನದಲ್ಲಿ ಅವತ್ತು ಮಧ್ಯಾಹ್ನ ಮಾತ್ರ ಕನಸಿನ ಸ್ವರ್ಗದಲ್ಲಿದ್ದೆ. ಎಲ್ಲಾ ವ್ಯವಸ್ಥೆ ಮಾಡತೇನೆ, ಮಕ್ಕಳಿಗೆ ಒಳ್ಳೆ ಬಟ್ಟೆ ತರತೇನೆ, ನನ್ನ ಒಬ್ಬಳೇ ಮಗಳನ್ನ ವಾಪಸ್ಸು ಕರೆದುಕೊಂಡು ಬಂದು ಚೆನ್ನಾಗಿ ನೋಡಿಕೊಳ್ಳತೇನೆ… ಎಂತೆಂಥಾ ಕನಸು.. ಕನಸು ಕಾಣುವುದರಲ್ಲಿ ಏನು ತಪ್ಪಿದೆ ಸಾರ್?’ ಮಾರ್ಮೆಲಡೋವ್ ಇದ್ದಕಿದ್ದ ಹಾಗೆ ಬೆಚ್ಚಿದ. ತಲೆ ಎತ್ತಿ ಶ್ರೋತೃವಿನ ಮುಖ ದಿಟ್ಟಿಸಿ ನೋಡಿದ. ‘ಆಮೇಲೆ, ‘ಸಾರ್, ಆ ಕನಸೆಲ್ಲ ಕಂಡ ಮಾರನೆಯ ದಿನ, ಅಂದರೆ ಸರಿಯಾಗಿ ಐದು ದಿನದ ಹಿಂದೆ, ರಾತ್ರಿ, ನನ್ನ ಹೆಂಡತಿ ಕ್ಯಾತರೀನ ಪೆಟ್ಟಿಗೆಯ ಬೀಗದ ಕೈಯನ್ನ ಕಳ್ಳನ ಹಾಗೆ ಕದ್ದೆ. ಅವಳು ಉಳಿಸಿಟ್ಟಿದ್ದ ನನ್ನ ಸಂಬಳದ ದುಡ್ಡೆಲ್ಲ ಎತ್ತಿಕೊಂಡೆ. ಎಷ್ಟಿತ್ತೋ ಮರೆತುಹೋಗಿದೆ. ಈಗ ನನ್ನ ನೋಡಿ ಸಾರ್, ಎಲ್ಲಾರೂ ನೋಡಿ! ಮನೆ ಬಿಟ್ಟು ಐದು ದಿನ ಆಯಿತು. ಅವರು ನನ್ನ ಅಲ್ಲೆಲ್ಲ ಹುಡುಕುತಾ ಇದಾರೆ. ನನ್ನ ಕೆಲಸ ಹೋಯಿತು. ನನ್ನ ಯೂನಿಫಾರಮ್ಮು ಈಜಿಪ್ಟ್ ಬ್ರಿಜ್ ಹತ್ತಿರ ಇರುವ ಹೆಂಡದಂಗಡಿಯಲ್ಲಿ ಬಿದ್ದಿದೆ. ಅದನ್ನ ಕೊಟ್ಟು ಈ ಬಟ್ಟೆ ತಗೊಂಡೆ. ಎಲ್ಲಾ ಮುಗಿಯಿತು!’

ಮಾರ್ಮೆಲಡೋವ್ ತಲೆ ಚಚ್ಚಿಕೊಂಡ. ಹಲ್ಲು ಕಡಿದ. ಕಣ್ಣು ಮುಚ್ಚಿದ. ಟೇಬಲ್ಲಿನ ಮೇಲೆ ಮೊಳಕೈ ಬಲವಾಗಿ ಊರಿದ. ಒಂದು ಕ್ಷಣದಲ್ಲಿ ಅವನ ಮುಖ ಬದಲಾಯಿತು. ಇಲ್ಲದ ನಾಚಿಕೆ, ಇಲ್ಲದ ಧೈರ್ಯ ನಟಿಸುತ್ತಾ ನಕ್ಕ.

‘ಇವತ್ತು ಸೋನ್ಯಾನ ನೋಡೋದಕ್ಕೆ ಹೋದೆ. ನಾಯಿ ಥರ ಜೊಲ್ಲು ಸುರಿಸಿಕೊಂಡು ಕುಡಿಯುವುದಕ್ಕೆ ಕಾಸು ಕೊಡು ಅಂದೆ! ಹ್ಹಹ್ಹಹ್ಹಾ…!’

‘ಕೊಡಲಿಲ್ಲ, ಅಲ್ಲವಾ?’ ಪಕ್ಕದ ಟೇಬಲ್ಲಿನಲ್ಲಿ ಕೂತಿದ್ದ ಹೊಸಬನೊಬ್ಬ ಗಟ್ಟಿಯಾಗಿ ಕೇಳಿ ಪಕ ಪಕ ನಕ್ಕುಬಿಟ್ಟ.

‘ಈ ಹೆಂಡ ಅದೇ ದುಡ್ಡಲ್ಲಿ ಖರೀದಿ ಮಾಡಿದ್ದು, ಸಾರ್.’ ಇನ್ನೂ ರಾಸ್ಕೋಲ್ನಿಕೋವ್‍ ಗೆ ಮಾತ್ರ ಕತೆ ಹೇಳುತ್ತಿದ್ದ. ‘ಅವಳು ಹೀಗೇ ಮೂವತ್ತು ಕೊಪೆಕ್ ಎತ್ತಿಕೊಟ್ಟಳು. ನಾನೇ ಸ್ವತಃ ನೋಡಿದೆ. ಅಷ್ಟೇ ಅವಳ ಹತ್ತಿರ ಇದ್ದಿದ್ದು. ಏನೂ ಅನ್ನಲಿಲ್ಲ. ಸುಮ್ಮನೆ ನನ್ನ ನೋಡಿದಳು. ಈ ಭೂಮಿ ಮೇಲೆ ಯಾರೂ ಹೀಗೆ ಮಾಡಲ್ಲ ಸಾರ್, ಅಲ್ಲಿ ದೇವರ ರಾಜ್ಯದಲ್ಲಿ ಇದ್ದರೂ ಇರಬಹುದು, ಅಲ್ಲಿ ಜನರ ತಪ್ಪು ಕಂಡು ದುಃಖಪಡುತ್ತಾರೆ, ಅಳುತ್ತಾರೆ, ಬೈಯಲ್ಲ. ಅದೇನೇ ಜಾಸ್ತಿ ನೋವು ಕೊಡತ್ತೆ ಸಾರ್, ಬೈಯದೆ ಇದ್ದರೇನೇ ಜಾಸ್ತಿ ನೋವಾಗತ್ತೆ! ಮೂವತ್ತು ಕೊಪೆಕ್, ಸಾರ್. ಅವಳಿಗೂ ಈಗ ದುಡ್ಡು ಬೇಕಲ್ಲವಾ, ಏನನ್ನುತ್ತೀರಿ? ಈಗ ಅವಳು ವಿಶೇಷವಾಗಿ ಕ್ಲೀನಾಗಿರಬೇಕು. ಅದಕ್ಕೆ ದುಡ್ಡು ಬೇಕು. ತಲೆಗೆ ಗಮಗುಡುವ ಎಣ್ಣೆ, ಬಟ್ಟೆಗೆ ಗಂಜಿ, ಹೊಸ ಫ್ಯಾಶನ್ನಿನ ಚಪ್ಪಲಿ, ಪೌಡರು, ಇವೆಲ್ಲ ಇದ್ದು ಕ್ಲೀನಾಗಿರಬೇಕು. ನಾನು, ಅವಳಿಗೆ ಜನ್ಮ ಕೊಟ್ಟ ಅಪ್ಪ, ಹೆಂಡ ಕುಡಿಯುವುದಕ್ಕೆ ಅವಳ ಹತ್ತಿರ ಇದ್ದ ಮೂವತ್ತು ಕೊಪೆಕ್ ತಗೊಂಡುಬಂದೆ. ಕುಡಿದು ಮುಗಿಸಿದೆ ಸಾರ್… ನನ್ನಂಥವರನ್ನ ಕಂಡರೆ ಯಾರು ಅಯ್ಯೋ ಅನ್ನತಾರೆ? ನಿಮಗೆ ಅಯ್ಯೋ ಅನ್ನಿಸುತ್ತಾ? ಅನ್ನಿಸುತ್ತಾ ಇಲ್ಲವಾ? ಹೇಳಿ!’

ಹೆಂಡ ಬಗ್ಗಿಸಿಕೊಳ್ಳಲು ಹೋದ. ಬಾಟಲಿ ಖಾಲಿಯಾಗಿತ್ತು.

ಅಷ್ಟು ಹೊತ್ತಿಗೆ ಅವರ ಹತ್ತಿರ ಬಂದಿದ್ದ ಅಂಗಡಿ ಯಜಮಾನ ‘ನಿನಗೆ ಯಾಕೆ ಅಯ್ಯೋ ಅನ್ನಬೇಕು?’ ಅಂತ ಜೋರಾಗಿ ಕೇಳಿದ.

ನಗು, ಬೈಗುಳ ಕೇಳಿಸಿದವು. ಕತೆ ಕೇಳುತ್ತಿದ್ದವರು, ಕೇಳಿಸಿಕೊಳ್ಳದೆ ಸುಮ್ಮನೆ ಈ ಡಿಸ್ಮಿಸ್ ಆದ ಗುಮಾಸ್ತನನ್ನ ನೋಡುತ್ತಾ ಇದ್ದವರೂ ಎಲ್ಲರೂ ಅದರಲ್ಲಿ ಸೇರಿದ್ದರು.

‘ಯಾಕೆ! ಯಾಕೆ ಅಯ್ಯೋಪಾಪ ಅನ್ನಬೇಕಾ?’ ಮಾರ್ಮೆಲಡೋವ್ ಇದ್ದಕಿದ್ದ ಹಾಗೆ ಚೀರಿದ. ಆ ಪ್ರಶ್ನೆಗೇ ಕಾಯುತ್ತಿದ್ದವನ ಹಾಗೆ ಎದ್ದು ನಿಂತು ಕೈ ಅಗಲವಾಗಿ ಹಿಗ್ಗಲಿಸಿ ಕೇಳಿದ. ‘ನನಗೆ ಯಾಕೆ ಅಯ್ಯೋ ಪಾಪ ಅನ್ನಬೇಕಾ? ಯಾಕೆ? ನಿಜ. ನಾನು ಕರುಣೆಗೆ ತಕ್ಕವನಲ್ಲ. ಕರುಣೆ ತೋರಿಸಬಾರದು, ನನ್ನ ಶಿಲುಬೆಗೆ ಏರಿಸಬೇಕು! ನ್ಯಾಯಾಧೀಶರೆ, ನನ್ನ ಶಿಲುಬೆಗೇರಿಸಿ, ಆಮೇಲೆ ಕರುಣೆ ತೋರಿಸಿ! ನನಗೆ ಸಂತೋಷ ಬೇಡ, ದುಃಖ ಬೇಕು, ಕಣ್ಣೀರು ಬೇಕು. ಅಯ್ಯಾ ಹೆಂಡದಂಗಡಿ ಓನರೂ, ಈ ನಿನ್ನ ಬಾಟಲಿ ಎತ್ತಿ ಸುಖ ಕಂಡೆ ಅಂದುಕೊಂಡಿದೀಯಾ? ದುಃಖ, ದುಃಖ ಹುಡುಕಿಕೊಂಡು ಬಂದೆ, ಕಣ್ಣೀರಿನಲ್ಲಿ ಮುಳಗಬೇಕು ಅಂತ ಬಂದೆ. ಎಲ್ಲಾರಿಗೂ ಕರುಣೆ ತೋರಿಸುವ ದೇವರು ನನಗೂ ಕರುಣೆ ತೋರಿಸುತ್ತಾನೆ. ಎಲ್ಲ ಗಂಡಸರ ಮನಸ್ಸು, ಹೆಂಗಸರ ಮನಸ್ಸು ಅವನಿಗೆ ಅರ್ಥ ಆಗತ್ತೆ. ಅವನು, ಅವನು ಮಾತ್ರ ನಿಜವಾದ ನ್ಯಾಯಾಧೀಶ. ನನ್ನ ಕೇಳತಾನೆ—ಕಾಯಿಲೆಯ ದುಷ್ಟ ಚಿಕ್ಕಮ್ಮನಿಗೆ, ಯಾರೋ ಗೊತ್ತಿಲ್ಲದವನಿಗೆ ಹುಟ್ಟಿದ ಮಕ್ಕಳಿಗೆ ಅಂತ ಜೀವ ಸವೆಸಿದ ಮಗಳೆಲ್ಲಿ? ಕೆಟ್ಟ ಕುಡುಕನನ್ನ, ಮೃಗದಂಥ ಅಪ್ಪನನ್ನ ಕರುಣೆಯಿಂದ ನೋಡಿಕೊಂಡ ಮಗಳೆಲ್ಲಿ? ಬಾ, ಆಗಲೇ ನಿನ್ನ ಒಂದು ಸಾರಿ ಕ್ಷಮಿಸಿದ್ದೇನೆ, ಈಗ ನಿನ್ನ ಪಾಪಗಳನ್ನೆಲ್ಲ ಕ್ಷಮಿಸಿದ್ದೇನೆ, ‘ಬಹಳವಾಗಿರುವ ಅವಳ ಪಾಪಗಳು ಕ್ಷಮಿಸಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿದಳು,’ ಅನ್ನುತ್ತಾನೆ. ನನ್ನ ಸೋನ್ಯಾನ ಕ್ಷಮಿಸತಾನೆ, ನನಗೆ ಖಂಡಿತ ಗೊತ್ತು… ಇವತ್ತು, ಅವಳನ್ನ ನೋಡಿದಾಗ ನನ್ನ ಮನಸ್ಸಿಗೆ ಅದು ಗ್ಯಾರಂಟಿ ಆಯಿತು. ಒಳ್ಳೆಯವರನ್ನ, ಕೆಟ್ಟವರನ್ನ, ಜಾಣರನ್ನ, ಪೆದ್ದರನ್ನ, ಎಲ್ಲಾರನ್ನೂ ಕ್ಷಮಿಸತಾನೆ… ಎಲ್ಲಾರ ತೀರ್ಮಾನ ಮುಗಿಸಿ ನಮ್ಮನ್ನ ನೋಡತಾ—ಏಯ್, ಏಯ್, ನೀವು ಬನ್ನಿ, ನಾಚಿಕೆ ಇಲ್ಲದ ಕುಡುಕ ಮಕ್ಕಳೇ ಬನ್ನಿ ಅನ್ನತಾನೆ. ಮೃಗದ ಮುದ್ರೆ ಒತ್ತಿಸಿಕೊಂಡವರು. ನೀವೂ ಬನ್ನಿ—ಅನ್ನತಾನೆ. ‘ಪ್ರಭುವೇ ಈ ಜನರನ್ನು ಯಾಕೆ ಸ್ವಾಗತಿಸುತ್ತಿದ್ದೀರಿ?’ ಅನ್ನುತ್ತಾರೆ ವಿವೇಕಿಗಳಾದವರು. ಆಗ ದೇವರು ‘ವಿವೇಕಿಗಳೆ, ಇವರಲ್ಲಿ ಯಾವನೊಬ್ಬನೂ ನನ್ನ ಕ್ಷಮೆಗೆ ಅರ್ಹ ಎಂದು ತಿಳಿದಿರಲಿಲ್ಲ, ಅದಕ್ಕೇ.’ ಅನ್ನುತ್ತಾ ನಮ್ಮನ್ನು ಆಲಂಗಿಸಿಕೊಳ್ಳಲು ಬರುತ್ತಾನೆ. ನಾವು ಅವನ ಕಾಲಿಗೆ ಬಿದ್ದು ಅಳುತ್ತೇವೆ. ನಮಗೆ ಎಲ್ಲಾ ತಿಳಿಯತ್ತೆ. ಆಗ ನಮಗೆ ಎಲ್ಲಾ ತಿಳಿಯತ್ತೆ. ಎಲ್ಲಾರಿಗೂ ತಿಳಿಯತ್ತೆ. ಕ್ಯಾತರೀನಾಗೂ ತಿಳಿಯತ್ತೆ. ದೇವರೇ ನಿನ್ನ ರಾಜ್ಯವು ಆಗಮಿಸಲಿ!’

ಬೆಂಚಿನ ಮೇಲೆ ಕುಸಿದು ಕೂತ. ದಣಿದು ಹೋಗಿದ್ದ. ಯಾರ ಕಡೆಯೂ ನೋಡದೆ, ಎಲ್ಲಿದ್ದೇನೆ ಅನ್ನುವ ಎಚ್ಚರವೂ ಇಲ್ಲದೆ ಯೋಚನೆಯಲ್ಲಿ ಮುಳುಗಿಬಿಟ್ಟ. ಅವನ ಮಾತು ವಿಚಿತ್ರವಾದ ಪರಿಣಾಮ ಬೀರಿತ್ತು, ಒಂದು ಕ್ಷಣ ಮೌನ ನೆಲೆಸಿತ್ತು. ಮತ್ತೆ ಇದ್ದಕ್ಕಿದ್ದ ಹಾಗೆ ನಗು, ಕೂಗಾಟ ಎಲ್ಲ ಶುರುವಾದವು.

‘ಚೆನ್ನಾಗಿದೆ ಇವನ ವಾದ!’

‘ಪೆಕರ ಬಡ್ಡೀಮಗ!’

‘ಸರ್ಕಾರೀ ಗುಮಾಸ್ತನ ಬುದ್ಧಿ!’
ಹೀಗೇ ಏನೇನೋ ಅಂದರು.

ಮಾರ್ಮೆಲಡೋವ್ ತಟ್ಟನೆ ತಲೆ ಎತ್ತಿ, ರಾಸ್ಕೋಲ್ನಿಕೋವ್‍ ನನ್ನು ನೋಡುತ್ತ, ‘ಸಾರ್, ಹೋಗಣ… ನನ್ನನ್ನ ಕೋಝೆಲ್ ಮನೆಗೆ ಕರಕೊಂಡು ಹೋಗಿ, ದೊಡ್ಡ ಅಂಗಳ ಇದೆಯಲ್ಲ ಆ ಮನೆ, ಹಿತ್ತಿಲ ಬಾಗಿಲು… ಹೊತ್ತಾಯಿತು. ನನ್ನ ಹೆಂಡತಿ ಕ್ಯಾತರೀನಾನ ನೋಡಬೇಕು…’ ಅಂದ.

ಬಹಳ ಹೊತ್ತಿನಿಂದ ಹೋಗಬೇಕು ಅಂದುಕೊಳ್ಳುತ್ತಿದ್ದ ರಾಸ್ಕೋಲ್ನಿಕೊವ್. ಮಾರ್ಮೆಲಡೋವ್‍ ಗೆ ಸಹಾಯ ಮಾಡುವ ನಿರ್ಧಾರಕ್ಕೂ ಬಂದಿದ್ದ. ಮಾರ್ಮೆಲಡೋವ್ ಮಾತಿನಲ್ಲಿ ಇದ್ದ ಬಲ ಕಾಲಿನಲ್ಲಿ ಇರಲಿಲ್ಲ. ಪೂರಾ ಭಾರ ರಾಸ್ಕೋಲ್ನಿಕೋವ್ ಮೇಲೆ ಹೊರಿಸಿ ಹೆಜ್ಜೆ ಹಾಕಿದ. ಅವನ ಮನೆಗೆ ಮುಟ್ಟುವುದಕ್ಕೆ ಇನ್ನೂರು, ಮುನ್ನೂರು ಹೆಜ್ಜೆ ನಡೆಯಬೇಕಾಗಿತ್ತು. ಮನೆ ಹತ್ತಿರವಾದ ಹಾಗೆ ಕುಡಕನ ಮನಸ್ಸಿನಲ್ಲಿ ಗೊಂದಲ, ಭಯ ಎರಡೂ ಹೆಚ್ಚಾದವು.

ಹೋಗುತ್ತಾ ಹೋಗುತ್ತಾ ಗೊಣಗಿದ. ‘ಕ್ಯಾತರೀನ ಕಂಡರೆ ಭಯ ಇಲ್ಲ. ಅವಳು ನನ್ನ ಕೂದಲು ಹಿಡಿದು ದರದರ ಎಳೆದಾಡತಾಳೆ ಅನ್ನೋ ಭಯವೂ ಇಲ್ಲ… ಹೋದರೆ ನಾಲ್ಕು ಕೂದಲು ಅಷ್ಟೇ! ಅವಳ ಕಣ್ಣು ನೋಡಿದರೆ ಭಯ ಆಗತ್ತೆ. ಕೆಂಪು ತಿರುಗಿದ ಕೆನ್ನೆ… ಮತ್ತೆ ಅವಳ ಉಸಿರು… ಕ್ಷಯ ಬಂದವರ ಮನಸ್ಸು ಕೆರಳಿದರೆ ಹೇಗೆ ಉಸಿರಾಡತಾರೆ ಗೊತ್ತಲ್ಲ… ಅದನ್ನ ಕಂಡರೆ ಭಯ. ಮಕ್ಕಳ ಅಳು ಕೇಳಕ್ಕೆ ಭಯ. ಸೋನ್ಯಾ ಮನೆಗೆ ಏನೂ ತಂದುಕೊಟ್ಟಿಲ್ಲದಿದ್ದರೆ ಏನು ಗತಿಯೋ… ನಾನು ಏನು ಮಾಡಲಿ ಗೊತ್ತಾಗಲ್ಲ… ಏಟು ತಿನ್ನುತೇನೆ ಅಂತ ಭಯ ಇಲ್ಲ, ಸಾರ್. ಏಟು ತಿಂದರೆ ನೋವಾಗಲ್ಲ, ಒಂದು ಥರ ಸಂತೋಷ ಆಗತ್ತೆ. ಏಟು ತಿನ್ನದೆ ಬದುಕುವುದಕ್ಕೆ ಆಗಲ್ಲ. ಅವಳ ಮನಸ್ಸಿಗೆ ಸಮಾಧಾನ ಸಿಗುವ ಹಾಗಿದ್ದರೆ ಹೊಡೆಯಲಿ. ಅದೇ ಒಳ್ಳೆಯದು… ಇದೇ ಮನೆ. ಕೋಝೆಲ್ ಮನೆ. ಬೀಗ ರಿಪೇರಿ ಕೆಲಸ ಮಾಡತಾನೆ, ಜರ್ಮನ್ ಮನುಷ್ಯ, ಸಾಹುಕಾರ… ಒಳಕ್ಕೆ ಕರಕೊಂಡು ಹೋಗಿ!’

ಅಂಗಳ ದಾಟಿ ನಾಲ್ಕನೆಯ ಮಹಡಿಗೆ ಹೊರಟರು. ಆಗಲೇ ರಾತ್ರಿ ಹನ್ನೊಂದು ಗಂಟೆಯಾಗಿತ್ತು. ವರ್ಷದ ಆ ಕಾಲದಲ್ಲಿ ಪೀಟರ್ಸ್‍ಬರ್ಗಿನಲ್ಲಿ ನಿಜವಾಗಿ ರಾತ್ರಿಯಾಗುವುದೇ ಇಲ್ಲವಾದರೂ ಕಟ್ಟಡದೊಳಗೆ ಮೆಟ್ಟಿಲು ಏರಿ ಹೋದ ಹಾಗೆ ಕತ್ತಲು ಹೆಚ್ಚುತ್ತ ಮೇಲಿನ ಅಂತಸ್ತಿನಲ್ಲಿ ತೀರ ಕತ್ತಲಿತ್ತು. ಮೆಟ್ಟಿಲ ಮೇಲೆ, ತೀರ ಚಾವಣಿಗೆ ಹತ್ತಿರದಲ್ಲಿ ಮಸಿ ಹಿಡಿದ ಬಾಗಿಲು ತೆರೆದುಕೊಂಡಿತ್ತು. ಕಂಗಾಲು ಕೋಣೆಯೊಳಗೆ ಚಿಕ್ಕದೊಂದು ಮೇಣದ ಬತ್ತಿ ಬೆಳಕು ಬೀರುತ್ತಿತ್ತು. ಒಳಕ್ಕೆ ಕಾಲಿಟ್ಟ ತಕ್ಷಣ ಹತ್ತಡಿ ಉದ್ದ, ಹತ್ತಡಿ ಅಗಲದ ಆ ಕೋಣೆಯನ್ನು ಇಡಿಯಾಗಿ ಕಣ್ಣು ತುಂಬಿಕೊಳ್ಳಬಹುದಾಗಿತ್ತು. ಕೋಣೆ ಅಸ್ತವ್ಯಸ್ತವಾಗಿತ್ತು. ಮಕ್ಕಳ ಚಿಂದಿ ಬಟ್ಟೆ ಎಲ್ಲೆಲ್ಲೂ ಹರಡಿದ್ದವು. ಒಂದು ಮೂಲೆಯಲ್ಲಿ ಹರಿದ ಬೆಡ್ ಶೀಟು ನೇತಾಡುತ್ತಿತ್ತು. ಅದರ ಹಿಂದೆ ಮಂಚವಿದ್ದಿರಬಹುದು. ಇಡೀ ರೂಮಿನಲ್ಲಿ ಇದ್ದಿದ್ದು ಎರಡು ಕುರ್ಚಿ, ತೂತು ಬಿದ್ದ ಕಮಟು ಬಟ್ಟೆ ಹೊದ್ದ ಮುರುಕಲು ಸೋಫಾ, ಅಡುಗೆಯ ಮನೆಯಲ್ಲಿ ಬಳಸುವ ಬಣ್ಣ ಕಂಡಿರದ ಪೈನ್ ಮರದ ಹಳೆಯ ಮೇಜು, ಅಷ್ಟೇ. ಟೇಬಲ್ಲಿನ ಅಂಚಿನಲ್ಲಿ ಮೇಣದ ಬತ್ತಿ ಸಿಕ್ಕಿಸುವ ಕಬ್ಬಿಣದ ಸ್ಟ್ಯಾಂಡು ಇತ್ತು. ಅದರಲ್ಲೊಂದು ತುಂಡು ಮೇಣದ ಬತ್ತಿ ಉರಿಯುತ್ತಾ ಇತ್ತು. ಮಾರ್ಮೆಲಡೋವ್ ಇದ್ದದ್ದು ದೊಡ್ಡ ಮನೆಯ ಮೂಲೆಯಲ್ಲಲ್ಲ, ಪ್ರತ್ಯೇಕ ಕೋಣೆಯಲ್ಲಿ ಅನ್ನಿಸುತ್ತಿತ್ತು. ಆ ಕೋಣೆಯ ಆಚೆಗೆ ಗೂಡುಗಳಲ್ಲಿದ್ದ ಬಾಡಿಗೆದಾರರು ಮಾರ್ಮೆಲಡೋವನ ಮನೆ ಎಂಬ ಪ್ಯಾಸೇಜಿನ ಮೂಲಕವೇ ಹಾದು ಹೋಗಬೇಕಾಗಿತ್ತು. ಆ ಮನೆಗಳಿಗೆ ಹೋಗುವ ಬಾಗಿಲು ಅರ್ಧ ತೆರೆದುಕೊಂಡಿತ್ತು. ಅದರಾಚೆಗೆ ಇದ್ದ ಜನರ ಗಲಾಟೆ, ನಗು ಕೇಳುತ್ತಿದ್ದವು. ಇಸ್ಪೀಟು ಆಡುತ್ತಿದ್ದರು, ಟೀ ಕುಡಿಯುತ್ತಿದ್ದರು ಅನ್ನಿಸುತ್ತಿತ್ತು. ಆಗಾಗ ತೀರ ಅವಾಚ್ಯವಾದ ಮಾತು ಕೇಳಿಸುತ್ತಿದ್ದವು.

ಕ್ಯಾತರೀನಳನ್ನು ರಾಸ್ಕೋಲ್ನಿಕೋವ್ ತಕ್ಷಣವೇ ಗುರುತು ಹಿಡಿದ. ಅವಳು ತೀರ ನೆವೆದು ಹೋಗಿದ್ದ, ಎತ್ತರವಾದ ಹೆಂಗಸು, ಚೆಲುವಾದ ಕಡು ಕಂದು ಬಣ್ಣದ ಕೂದಲಿದ್ದವು. ಕೆನ್ನೆಯ ಮೇಲೆ ಅಲ್ಲಲ್ಲಿ ಕಾಯಿಲೆಯ ಕಂದು ಮಚ್ಚೆ ಕಾಣುತ್ತಿದ್ದವು. ಎದೆಯ ಮೇಲೆ ಕೈ ಕಟ್ಟಿಕೊಂಡು, ಒಣಕಲು ತುಟಿ ಬಿಗಿದುಕೊಂಡು, ಏದುಸಿರು ಬಿಡುತ್ತ ಸಣ್ಣ ಕೋಣೆಯಲ್ಲಿ ಅತ್ತ ಇತ್ತ ಹೆಜ್ಜೆ ಹಾಕುತ್ತಿದ್ದಳು. ಅವಳ ಕಣ್ಣಲ್ಲಿ ಜ್ವರದ ತಾಪ ಕಾಣುತ್ತಿತ್ತು. ನೋಟ ನಿಶ್ಚಲವಾಗಿತ್ತು. ಇನ್ನೇನು ಆರುವುದಕ್ಕೆ ಬಂದಿದ್ದ ಮೇಣದ ಬತ್ತಿಯ ಬೆಳಕಿನಲ್ಲಿ ಅವಳ ಕ್ಷಯ ಪೀಡಿತ ಮೈಯ ತಳಮಳಿಸುವ ಜೀವವನ್ನು ಕಂಡವರ ಮನಸ್ಸು ನೋಯುತ್ತಿತ್ತು. ರಾಸ್ಕೋಲ್ನಿಕೋವ್ ಕಣ್ಣಿಗೆ ಅವಳು ಮೂವತ್ತು ವರ್ಷದವಳ ಹಾಗೆ ಕಂಡಳು. ಮಾರ್ಮೆಲಡೋವ್ ಅವಳಿಗೆ ತಕ್ಕವನಲ್ಲ ಅನ್ನಿಸಿತು… ಅವರು ಬಂದಿದ್ದನ್ನು ಅವಳು ನೋಡಲಿಲ್ಲ, ಗಮನಿಸಲೂ ಇಲ್ಲ. ಏನೂ ಕೇಳದೆ, ಕಾಣದೆ ಮೈಮೇಲೆ ಎಚ್ಚರವಿಲ್ಲದವಳ ಹಾಗೆ ಇದ್ದಳು. ರೂಮಿನಲ್ಲಿ ಸೆಖೆ ಇತ್ತು. ಆದರೂ ಅವಳು ಕಿಟಕಿ ತೆಗೆದಿರಲಿಲ್ಲ. ಮಹಡಿ ಮೆಟ್ಟಿಲ ಕಡೆಯಿಂದ ಕೆಟ್ಟ ವಾಸನೆ ಬರುತ್ತಿತ್ತು. ಆದರೂ ಅವಳು ಬಾಗಿಲು ಮುಚ್ಚಿರಲಿಲ್ಲ. ಒಳಗಿದ್ದ ಕೋಣೆಗಳಿಂದ ಸಿಗರೇಟಿನ ಹೊಗೆ ಬರುತ್ತಿತ್ತು, ಅವಳು ಕೆಮ್ಮುತ್ತಿದ್ದಳು, ಆದರೂ ಅವಳು ಪ್ಯಾಸೇಜಿನ ಬಾಗಿಲು ಮುಚ್ಚಿರಲಿಲ್ಲ. ಆರು ವರ್ಷದ ಪುಟ್ಟ ಹುಡುಗಿ ನೆಲದ ಮೇಲೆ ಕೂತು ಸೋಫಾದ ಮೇಲೆ ತಲೆ ಇಟ್ಟುಕೊಂಡು ನಿದ್ದೆ ಹೋಗಿದ್ದಳು. ಅವಳಿಗಿಂತ ಒಂದು ವರ್ಷ ದೊಡ್ಡವನಾಗಿದ್ದ ಹುಡುಗ ಆಗ ತಾನೇ ಪೆಟ್ಟು ತಿಂದ ಮಗುವಿನ ಹಾಗೆ ಮೂಲೆಯಲ್ಲಿ ನಿಂತು, ನಡುಗುತ್ತ ಅಳುತ್ತಿದ್ದ.

ಒಂಬತ್ತು ವರ್ಷದ ದೊಡ್ಡ ಹುಡುಗಿ, ಬೆಂಕಿ ಕಡ್ಡಿಯ ಹಾಗಿದ್ದವಳು, ಹಳೆಯ ಹರಕಲು ಅಂಗಿ ತೊಟ್ಟು, ಲಂಗ ಹಾಕಿಕೊಂಡಿದ್ದಳು. ಅದು ಎರಡು ವರ್ಷದ ಹಿಂದೆ ಹೊಲಿದದ್ದು ಇರಬಹುದು. ಈಗ ಮೊಳಕಾಲವರೆಗೆ ಬರುತ್ತಿತ್ತು ಅಷ್ಟೆ. ಅವಳು ತಮ್ಮನ ಪಕ್ಕದಲ್ಲಿ ನಿಂತು, ಬೆಂಕಿಕಡ್ಡಿಯಂಥ ಕೈಯಿಂದ ಅವನ ಕೊರಳು ತಬ್ಬಿಕೊಂಡು ಕಿವಿಯಲ್ಲಿ ಏನೋ ಹೇಳುತ್ತ ಸಮಾಧಾನ ಮಾಡುತ್ತಿದ್ದಳು. ಅವನು ಮತ್ತೆ ಅಳಬಾರದೆಂದು ಏನೇನೋ ಮಾಡುತ್ತಿರುವಾಗಲೇ ಭಯ ತುಂಬಿದ ಅವಳ ದೊಡ್ಡ ಕಣ್ಣು ಅಮ್ಮನನ್ನೇ ಹಿಂಬಾಲಿಸುತ್ತಾ ಇತ್ತು. ಬೆದರಿದ ಅವಳ ಪುಟ್ಟ ಮುಖದಲ್ಲಿ ಕಣ್ಣು ಇರುವುದಕ್ಕಿಂತ ದೊಡ್ಡವಾಗಿ ಕಾಣುತ್ತಿದ್ದವು. ಮಾರ್ಮೆಲೆಡೋವ್ ಒಳಕ್ಕೆ ಬಾರದೆ ಬಾಗಿಲಲ್ಲೇ ಕೂತು ರಾಸ್ಕೋಲ್ನಿಕೋವ್‍ ನನ್ನು ಒಳಕ್ಕೆ ದಬ್ಬಿದ. ಅಪರಿಚಿತನನ್ನು ಕಂಡ ಹೆಂಗಸು ತಟ್ಟನೆ ಸುಮ್ಮನೆ ನಿಂತಳು. ಒಂದೇ ಕ್ಷಣದಲ್ಲಿ ಸುಧಾರಿಸಿಕೊಂಡು ಅವನು ಯಾರು, ಯಾಕೆ ಬಂದ ಅಂತ ಕೇಳಿದಳು. ಅವನು ಒಳಗಿನ ಇನ್ನು ಯಾರದೋ ಮನೆಗೆ ಬಂದಿರಬೇಕು ನಮ್ಮ ಪ್ಯಾಸೇಜು ಮನೆ ದಾಟಿ ಹೋಗುತ್ತಿದ್ದಾನೆ ಅಂದುಕೊಂಡಳು. ಹಾಗೆ ತೀರ್ಮಾನ ಮಾಡಿಕೊಂಡು ಅವನನ್ನು ಮತ್ತೆ ನೋಡಲು ಹೋಗದೆ ಹೊರ ಬಾಗಿಲು ಮುಚ್ಚಲು ಹೋದಳು. ಬಾಗಿಲ ಹತ್ತಿರ ಮೊಳಕಾಲೂರಿ ಕೂತಿರುವ ಗಂಡನನ್ನು ಕಂಡು ಜೋರಾಗಿ ಚೀರಿದಳು.

‘ಆಹಾ ಬಂದುಬಿಟ್ಟ. ದಗಲ್ಬಾಜಿ ಜೈಲುದೆವ್ವ. ರಾಕ್ಷಸ… ಎಲ್ಲಿ ದುಡ್ಡು! ಎಲ್ಲಿ, ಜೇಬು ತೋರಿಸು, ತೋರಿಸು! ಅಯ್ಯೋ ಯಾವುದೋ ಬೇರೆ ಬಟ್ಟೆ ಹಾಕಿದ್ದೀಯಲ್ಲಾ! ಎಲ್ಲಿ ನಿನ್ನ ಯೂನಿಫಾರಮ್? ಎಲ್ಲಿ ದುಡ್ಡು? ಹೇಳು…’ ಅನ್ನುತ್ತ ಕೂಗಾಡಿದಳು.

ಅವನ ಮೈ ತಡಕಿನೋಡಿದಳು. ಜೇಬು ಹುಡುಕುವ ಕೆಲಸ ಅವಳಿಗೆ ಸುಲಭವಾಗಲೆಂದು ಮಾರ್ಮೆಲಡೋವ್ ತಕ್ಷಣವೇ ವಿಧೇಯನಾಗಿ, ವಿನೀತನಾಗಿ ಕೈ ಅಗಲಿಸಿ ನಿಂತ. ಒಂದೇ ಒಂದು ಕೊಪೆಕ್ ಕೂಡ ಇರಲಿಲ್ಲ.

‘ಎಲ್ಲಿ ದುಡ್ಡು? ಅಯ್ಯೋ ದೇವರೇ, ನಿಜವಾಗಲೂ ಎಲ್ಲ ಕುಡಿದು ಹಾಕಿದೆಯಾ? ಪೆಟ್ಟಿಗೆಯಲ್ಲಿ ಹನ್ನೆರಡು ರೂಬಲ್ ಇದ್ದವು!…’ ಇದ್ದಕ್ಕಿದ್ದ ಹಾಗೆ ರೋಷವುಕ್ಕಿ ಅವನ ಕೂದಲು ಹಿಡಿದು ದಡಕ್ಕನೆ ರೂಮಿನ ಒಳಕ್ಕೆ ಎಳೆದುಕೊಂಡಳು. ಅವಳಿಗೆ ಸುಲಭವಾಗಲೆಂದು ಮಾರ್ಮೆಲಡೋವ್ ಜುಟ್ಟು ಅವಳ ಕೈಗೆ ಒಪ್ಪಿಸಿ ಅಂಬೆಗಾಲಿಕ್ಕುತ್ತ ಒಳಕ್ಕೆ ತೆವಳಿದ.

‘ನನಗೆ ನೋವಾಗತಾ ಇಲ್ಲ! ಖುಷಿಯಾಗತಾ ಇದೆ, ಖುಷಿಯಾಗತಾ ಇದೆ ಸಾರ್,’ ಅಂತ ಮತ್ತೆ ಮತ್ತೆ ಹೇಳುತ್ತಿದ್ದ. ಅವಳು ಅವನ ಕೂದಲು ಹಿಡಿದು ಎಳೆದುಕೊಂಡು ಹೋಗಿ ನೆಲಕ್ಕೆ ಅವನ ತಲೆ ಜಪ್ಪುತ್ತಿದ್ದಳು. ಸೋಫಾ ಮೇಲೆ ತಲೆ ಇಟ್ಟು ನೆಲದ ಮೇಲೆ ಮಲಗಿದ್ದ ಮಗು ಎದ್ದು ಅಳುವುದಕ್ಕೆ ಶುರು ಮಾಡಿದಳು. ಮೂಲೆಯಲ್ಲಿದ್ದ ಹುಡುಗ ಗಡಗಡ ನಡುಗುತ್ತ, ಜೋರಾಗಿ ಚೀರಿ, ಅಕ್ಕನನ್ನು ತಬ್ಬಿಕೊಂಡ. ನಡುಕ ನಿಲ್ಲಲಿಲ್ಲ. ಅರ್ಧ ಎಚ್ಚರವಾಗಿದ್ದ ಹುಡುಗಿ ಮರದ ಎಲೆಯ ಹಾಗೆ ಥರಗುಟ್ಟುತಿದ್ದಳು.

ದಿಕ್ಕು ತೋಚದವಳಾಗಿ ‘ಎಲ್ಲಾ ಕುಡಿದೆಯಾ! ಎಲ್ಲಾನೂ? ಮಕ್ಕಳಿಗೆ ಮೈ ಮುಚ್ಚುವುದಕ್ಕೆ ಬಟ್ಟೆ ಇಲ್ಲ, ಹೊಟ್ಟೆಗೆ ಅನ್ನ ಇಲ್ಲ! ಎಂಥಾ ದರಿದ್ರ ಬದುಕು. ನಾಚಿಕೆ ಇಲ್ಲವಾ ನಿನಗೆ?’ ಎಂದೆಲ್ಲಾ ಕೂಗಾಡಿದಳು. ತಟ್ಟನೆ ರಾಸ್ಕೋಲ್ನಿಕೋವ್‍ ನ ಮೇಲೆ ರೇಗಿದಳು. ‘ನೀನೂ ಹೆಂಡದಂಗಡಿಯಿಂದ ಬರತಾ ಇದ್ದೀಯ! ಅವನ ಜೊತೆ ಕುಡೀತಾ ಇದ್ದೆಯಾ? ತೊಲಗು ಇಲ್ಲಿಂದ!’ ಅಂದಳು.

ಒಂದೂ ಮಾತಾಡದೆ ಹೊರಡಲು ಆತುರಪಟ್ಟ ರಾಸ್ಕೋಲ್ನಿಕೋವ್. ಅಲ್ಲದೆ, ಒಳಗಿನ ಬೇರೆ ಮನೆಗಳ ಬಾಗಿಲು ದೊಡ್ಡದಾಗಿ ತೆರೆದುಕೊಂಡಿದ್ದವು. ಕುತೂಹಲ ತುಂಬಿದ ಮುಖ ಇಣುಕುತ್ತಿದ್ದವು. ಸೊಕ್ಕು ತೋರುವ, ತಿರಸ್ಕಾರ ಬೀರುವ, ಅವಮಾನವಾಗುವ ಹಾಗೆ ನಗುವ, ಬಾಯಲ್ಲಿ ಸಿಗರೇಟನ್ನೋ ಪೈಪನ್ನೋ ಕಚ್ಚಿಕೊಂಡ, ಕ್ಯಾಪು ತೊಟ್ಟ ಮುಖಗಳು ಕತ್ತು ಉದ್ದ ಮಾಡಿ ನೋಡುತ್ತಿದ್ದವು. ಕೆಲವು ಆಕೃತಿಗಳ ಡ್ರೆಸಿಂಗ್ ಗೌನು ತೆರೆದುಕೊಂಡಿದ್ದವು. ಇನ್ನು ಕೆಲವು ಆಕೃತಿಗಳ ಉಡುಪು ಅಸಭ್ಯವೆನಿಸುಷ್ಟು ಕಿರಿದಾಗಿದ್ದವು. ಕೆಲವರ ಕೈಯಲ್ಲಿ ಇಸ್ಪೀಟು ಎಲೆಗಳಿದ್ದವು. ಹೆಂಡತಿಯು ಜುಟ್ಟು ಹಿಡಿದು ಎಳೆದುಕೊಂಡು ಹೋಗುವಾಗ ತನಗೆ ನೋವಾಗುತ್ತಿಲ್ಲ, ಸಂತೋಷವಾಗುತ್ತಿದೆ ಎಂದು ಮಾರ್ಮೆಲಡೋವ್ ಕೂಗಿದ್ದು ಕೇಳಿ ಜೋರಾಗಿ ನಕ್ಕಿದ್ದರು. ನಿಧಾನವಾಗಿ ರೂಮಿನೊಳಕ್ಕೆ ಸರಿಯುತ್ತಿದ್ದರು. ಕೊನೆಗೆ ಭಯಂಕರವಾದ ಕೂಗು ಕೇಳಿಸಿತು. ದಾರಿ ಮಾಡಿಕೊಂಡು ನುಗ್ಗಿ ಬರುತ್ತಿದ್ದ ಅಮಾಲಿಯ ಲಿಪೆವೆಕ್ಸಲ್ ದನಿ ಅದು.. ಸುವ್ಯವಸ್ಥೆಯನ್ನು ಮತ್ತೆ ಸ್ಥಾಪಿಸುವ ಸಲುವಾಗಿ ಬಡಪಾಯಿ ಹೆಂಗಸನ್ನು ಬೈದು, ನಾಳೆ ಬೆಳಿಗ್ಗೆಯೇ ಮನೆ ಖಾಲಿ ಮಾಡಬೇಕು, ಹುಷಾರ್ ಎಂದು ನೂರನೆಯ ಸಾರಿ ಎಚ್ಚರಿಕೆ ಹೇಳಿದಳು. ಹೊರಡುವ ಮೊದಲು ಜೇಬಿಗೆ ಕೈ ಹಾಕಿ ತಡಕಿದ ರಾಸ್ಕೋಲ್ನಿಕೋವ್ ಹೆಂಡದಂಗಡಿಯವನು ಕೊಟ್ಟಿದ್ದ ಚಿಲ್ಲರೆ ತೆಗೆದು ಯಾರಿಗೂ ಕಾಣದ ಹಾಗೆ ಕಿಟಕಿಯ ಅಂಚಿನಲ್ಲಿ ಇಟ್ಟ. ಮೆಟ್ಟಿಲಿಳಿದು ಹೋಗುತ್ತಿರುವಾಗ ಮತ್ತೆ ವಾಪಸ್ಸು ಹೋಗಿ ದುಡ್ಡು ತೆಗೆದುಕೊಳ್ಳಬೇಕು ಅನ್ನಿಸಿತ್ತು.

‘ಎಂಥ ಪೆದ್ದು ಕೆಲಸ ಮಾಡಿದೆ. ಅವರ ಪಾಲಿಗೆ ಸೋನ್ಯಾ ಇದಾಳೆ. ದುಡ್ಡು ನನಗೇ ಬೇಕಾಗಿತ್ತಲ್ಲಾ,’ ಅಂದುಕೊಂಡ. ಈಗ ಮತ್ತೆ ದುಡ್ಡು ತೆಗೆದುಕೊಳ್ಳಲು ಆಗಲ್ಲ ಅನ್ನುವುದು ಮನಸ್ಸಿಗೆ ಬಂದು ಹೋಗಲಿ ಅನ್ನುವ ಹಾಗೆ ಭುಜ ಕೊಡವಿದ. ತನ್ನ ರೂಮಿಗೆ ಹೊರಟ. ರಸ್ತೆಯ ಮೇಲೆ ಹೆಜ್ಜೆ ಹಾಕುತ್ತಾ ‘ಸೋನ್ಯಾಗೂ ಗಮ್ ಅನ್ನುವ ಎಣ್ಣೆ ಬೇಕು,’ ಅಂದುಕೊಳ್ಳುತ್ತ ಕಹಿಯಾಗಿ ನಕ್ಕ. ‘ಕ್ಲೀನಾಗಿರಬೇಕು ಅಂದರೆ ದುಡ್ಡು ಇರಬೇಕು… ಹ್ಞೂಂ… ಇವತ್ತು ಸೋನ್ಯಾ ಪಾಪರ್ ಆಗಿರಬೇಕು. ದೊಡ್ಡ ಬೇಟೆಗೆ ಹೊಂಚು ಹಾಕುವಾಗ ಕ್ಲೀನಾಗಿಲ್ಲದೆ ಇದ್ದರೆ ರಿಸ್ಕು… ಅವಳಿಗೆ ಇವತ್ತು ಯಾರೂ ಸಿಗದೆ ಇದ್ದರೆ ಅವರೆಲ್ಲ ನಾಳೆ ಹುಲ್ಲು ತಿನ್ನಬೇಕಾಗುತ್ತಿತ್ತು, ನಾನು ದುಡ್ಡು ಬಿಟ್ಟು ಬರದೇ ಇದ್ದರೆ… ಭಲೇ ಸೋನ್ಯಾ! ಎಂಥಾ ಚಿನ್ನದ ಗಣಿ ಸಿಕ್ಕಿದೆ ಅವರಿಗೆ! ಮೊದಲು ಸ್ವಲ್ಪ ಅತ್ತರೂ ಈಗ ಆಬ್ಯಾಸ ಆಗಿಬಿಟ್ಟಿದೆ ಅವರಿಗೆ. ಮನುಷ್ಯ ನೀಚ, ಎಂಥ ಪರಿಸ್ಥಿತಿಗೂ ಹೊಂದಿಕೊಳ್ಳತಾನೆ!’

ರಾಸ್ಕೋಲ್ನಿಕೋವ್ ಯೋಚನೆ ಮಾಡುತ್ತಿದ್ದ.

‘ನಾನಂದುಕೊಂಡದ್ದು ತಪ್ಪಾಗಿದ್ದರೇ… ಮನುಷ್ಯ, ಅಂದರೆ ಇಡೀ ಮನುಷ್ಯ ಕುಲ, ನೀಚ ಅಲ್ಲದೇ ಇದ್ದರೇ? ಹಾಗಂದುಕೊಳ್ಳುವುದು ನನ್ನ ಮನಸಿನಲ್ಲಿ ಕೂತಿರುವ ಕಲ್ಪನೆ. ನಮ್ಮಲ್ಲಿ ಭಯ ತುಂಬಿಸಿಟ್ಟಿದ್ದಾರೆ, ಅಷ್ಟೇ. ಮನುಷ್ಯನಿಗೆ ಯಾವ ಅಡ್ಡಿಯೂ ಇಲ್ಲ, ಅಡಚಣೆಯೂ ಇಲ್ಲ. ನಿಜವಾಗಿ ಮನುಷ್ಯ ಇರಬೇಕಾದದ್ದೇ ಹಾಗೆ!…’

 

(ಸಾರಾಂಶ: ಹೆಂಡದಂಗಡಿಯಲ್ಲಿ ಮಾರ್ಮೆಲಡೋವ್‍ನ ಭೇಟಿ)

ಮಾರ್ಮೆಲಡೋವ್ ಎಂಬ ಸರ್ಕಾರಿ ಗುಮಾಸ್ತನ ಭೇಟಿಯಾಗುತ್ತದೆ. ಅವನು ರಾಸ್ಕೋಲ್ನಿಕೋವ್‍ಗೆ ತನ್ನ ಕಥೆ ಹೇಳುತ್ತಾನೆ. ಅವನ ಹೆಂಡತಿ ಕ್ಯಾತರೀನ. ಅವಳ ಮೊದಲ ಗಂಡ ತೀರಿಕೊಂಡಮೇಲೆ ಮಾರ್ಮೆಲಡೋವ್ ಅವಳನ್ನ ಮದುವೆಯಾಗಿ, ಅವಳನ್ನೂ ಅವಳ ಮೂರು ಮಕ್ಕಳನ್ನೂ ನೋಡಿಕೊಳ್ಳುತ್ತಾನೆ. ಸೋನ್ಯಾ ಎಂಬ ಹೆಣ್ಣು ಮಗು ಅವನ ಮೊದಲ ಹೆಂಡತಿಯ ಮಗಳು. ಬೇಜವಾಬ್ದಾರಿಯ ಕುಡುಕ, ಮಾರ್ಮೆಲಡೋವ್‍ ಕೆಲಸ ಕಳಕೊಳ್ಳುತ್ತಾನೆ. ಅವನ ಮಗಳು ಸೋನ್ಯಾ ವೇಶ್ಯೆಯಾಗುತ್ತಾಳೆ. ಕುಡುಕನನ್ನು ಮನೆಗೆ ತಲುಪಿಸುವ ರಾಸ್ಕೋಲ್ನಿಕೋವ್ ಮೂವತ್ತು ವರ್ಷವಷ್ಟೇ ಆಗಿದ್ದರೂ ಮುದುಕಿಯ ಹಾಗೆ ಕಾಣುವ ಕ್ಷಯರೋಗ ಪೀಡಿತೆಯಾದ ಕ್ಯಾತರೀನ ಮತ್ತವಳ ಮಕ್ಕಳನ್ನ ನೋಡುತ್ತಾನೆ.