Advertisement
ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಫ್ರೆಂಚ್ ಹಸ್ತದಿಂದ ಮುಕ್ತವಾದ ಗಿಣಿ ಗಿನಿಯಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಈ ದೇಶದಲ್ಲಿ ತೀವ್ರವಾದ ಬಡತನವಿದೆ. ಯುವಜನತೆ ಹೆಚ್ಚಿರುವ ದೇಶವಾದ ಕಾರಣ ಜನಸಂಖ್ಯೆ ಈಚೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಗಿನಿಯಾ ದೇಶವು ಅರಣ್ಯ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ. ಸುಬನೆ ಬೀಚ್, ಬೆಲ್ ಏರ್ ಬೀಚ್ ಮೊದಲಾದವು ಗಿನಿಯಾದಲ್ಲಿರುವ ಆಕರ್ಷಕ ಕಡಲತೀರಗಳು.
ಡಾ. ವಿಶ್ವನಾಥ ಎನ್. ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಗಿನಿಯಾ ದೇಶದ ಕುರಿತ ಬರಹ ನಿಮ್ಮ ಓದಿಗೆ

ಗಿನಿಯಾ ದೇಶಕ್ಕೆ ಸಮೀಪದಲ್ಲಿ ಗಿನಿಯಾ ಬಿಸ್ಸಾವ್ ಮತ್ತು ಈಕ್ವಟೋರಿಯಲ್ ಗಿನಿಯಾ ಎನ್ನುವ ಎರಡು ದೇಶಗಳಿವೆ. ಇದರಿಂದಾಗಿ ಉಂಟಾಗುವ ಗೊಂದಲವನ್ನು ತಪ್ಪಿಸುವುದಕ್ಕಾಗಿ ಗಿನಿಯಾ ದೇಶವನ್ನು ಗಿನಿಯಾ ಕಾನಾಕ್ರಿ ಎಂದು ಕರೆಯಲಾಗುತ್ತದೆ. ಪೋರ್ಚುಗೀಸರು ಗಿನಿಯಾಕ್ಕೆ ಬಂದ ಮೊದಲ ಯುರೋಪಿಯನ್ನರು. ಗಿನಿಯಾ ಎಂಬ ಪದವು ಪೋರ್ಚುಗೀಸ್ ಪದ ‘ಗಿನೆ’ಯ ಇಂಗ್ಲಿಷ್ ಅನುವಾದ. ಪೋರ್ಚುಗೀಸರು ಆಕ್ರಮಿಸಿಕೊಂಡಿರುವ ಭೂಮಿಯನ್ನು ಸೂಚಿಸುವುದಕ್ಕಾಗಿ ಈ ಪದವನ್ನು ಬಳಸಲಾಯಿತು. ಈ ಪದವು ಗಿನಿಯಾ ಕೊಲ್ಲಿಯ ಉದ್ದಕ್ಕೂ ಹರಡಿಕೊಂಡಿರುವ ಬೃಹತ್ ಭೂಪ್ರದೇಶವನ್ನು ಉಲ್ಲೇಖಿಸುವ ಸಾಂಪ್ರದಾಯಿಕ ಹೆಸರಾಗಿದೆ.

ಸೆನೆಗಲ್ ನದಿಯ ಉತ್ತರ ಭಾಗದಲ್ಲಿ ನೆಲೆಸಿದ್ದವರು ಬರ್ಬರು. ದಕ್ಷಿಣ ಭಾಗದವರು ಗಿನಿಯಾ ದೇಶದವರು. ಬರ್ಬರಿಂದ ದಕ್ಷಿಣದವರನ್ನು ಪ್ರತ್ಯೇಕಿಸುವುದಕ್ಕಾಗಿ ಪೋರ್ಚುಗೀಸರು ‘ಗಿನಿಯಸ್’ ಪದವನ್ನು ಬಳಸಿದ್ದಾರೆ. ಈ ಮೂರು ಗಿನಿಯಾ ಹೆಸರಿನ ದೇಶಗಳಲ್ಲಿ ಗಿನಿಯಾ ಕಾನಾಕ್ರಿಯೇ ದೊಡ್ಡ ದೇಶ ಎನಿಸಿಕೊಂಡಿದೆ. ಎರಡು ಲಕ್ಷದ ನಲುವತ್ತೈದು ಸಾವಿರ ಚದರ ಕಿಲೋಮೀಟರ್‌ಗಳಷ್ಟು ವಿಸ್ತೀರ್ಣವಾಗಿದೆ ಈ ದೇಶ. ಒಂದು ಕೋಟಿಗಿಂತ ತುಸು ಹೆಚ್ಚಿನ ಜನರಿದ್ದಾರೆ ಇಲ್ಲಿ. ಪ್ರತೀ ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ಬದುಕುತ್ತಿರುವವರು ಕೇವಲ ನಲುವತ್ತೊಂದು ಜನರು ಮಾತ್ರ. ವಿಶ್ವದ ಅತೀ ಕಡಿಮೆ ಜನನಿಬಿಡ ದೇಶಗಳಲ್ಲಿ ಒಂದು ಎನಿಸಿಕೊಂಡಿದೆ. ಇಲ್ಲಿರುವ ಒಟ್ಟು ಜನಸಂಖ್ಯೆಯಲ್ಲಿ ಅರುವತ್ತು ಶೇಕಡಾಕ್ಕಿಂತ ಹೆಚ್ಚು ಜನರು ಯುವಜನರಾಗಿದ್ದಾರೆ. ಐವತ್ತು ಶೇಕಡಾಕ್ಕಿಂತ ಹೆಚ್ಚಿನ ಜನರು ಅನಕ್ಷರಸ್ಥರು. 1985ರ ವೇಳೆಗೆ ಗಿನಿಯಾ ದೇಶಕ್ಕೆ ಹೊರಗಿನಿಂದ ಬಂದವರ ಸಂಖ್ಯೆ ಹೆಚ್ಚಿದೆ. ಲೆಬನೀಸ್ ಮತ್ತು ಸಿರಿಯನ್ ವ್ಯಾಪಾರೀ ಸಮುದಾಯಗಳು ಇಲ್ಲಿ ನೆಲೆನಿಂತಿವೆ. ಫ್ರೆಂಚರ ಸಂಖ್ಯೆಯೂ ಹೆಚ್ಚುತ್ತಿವೆ. ಲೈಬೀರಿಯನ್ನರು, ಲಿಯೋನಿಯನ್ನರು ಮತ್ತು ಐವೊರಿಯನ್ನರು ಇಲ್ಲಿ ನಿರಾಶ್ರಿತರು ಎನಿಸಿಕೊಂಡಿದ್ದಾರೆ.

ಗಿನಿಯಾದಲ್ಲಿ ಅರಣ್ಯ ಪ್ರದೇಶ ಸಮೃದ್ಧವಾಗಿದೆ. ಪ್ರಸಿದ್ಧಿ ಪಡೆದ ಪರ್ವತಗಳಿವೆ. ಇದರಿಂದಾಗಿ ಅನೇಕ ನದಿಗಳಿಗೆ ಉಗಮಸ್ಥಾನ ಎನಿಸಿಕೊಂಡಿದೆ. ಪಶ್ಚಿಮ ಆಫ್ರಿಕಾದ ಸುಮಾರು ಇಪ್ಪತ್ತೆರಡು ನದಿಗಳು ಹುಟ್ಟುವುದು ಗಿನಿಯಾದಲ್ಲಿ. ಇವುಗಳಲ್ಲಿ ನೈಜರ್, ಗ್ಯಾಂಬಿಯಾ ಮತ್ತು ಸೆನೆಗಲ್ ನದಿಗಳು ಪ್ರಮುಖವಾದವು. ಇದು ಕೃಷಿ ಪ್ರಧಾನ ದೇಶವಾಗಿರುವ ಕಾರಣ ಹೆಚ್ಚಿನ ನದಿಗಳಿರುವುದು ವರದಾನವಾಗಿ ಪರಿಣಮಿಸಿದೆ. ಗಿನಿಯಾದ ಒಟ್ಟು ಭೂಪ್ರದೇಶದಲ್ಲಿ ಮೂವತ್ತೈದು ಪ್ರತಿಶತ ಭೂಮಿಯು ಸಂರಕ್ಷಿತ ಪ್ರದೇಶ ಎನಿಸಿಕೊಂಡಿವೆ. ಈ ಪ್ರದೇಶದಲ್ಲಿ ಮೂರು ರಾಷ್ಟ್ರೀಯ ಉದ್ಯಾನವನಗಳಿವೆ. ಮೌಂಟ್ ನಿಂಬಾ, ಬದಿಯಾರ್ ರಾಷ್ಟ್ರೀಯ ಉದ್ಯಾನವನ, ಅಪ್ಪರ್ ನೈಜರ್ ರಾಷ್ಟ್ರೀಯ ಉದ್ಯಾನವನ, ನಿಯಾಲಮಾ ಅರಣ್ಯ, ಪಿನ್ಸೆಲ್ಲಿ ಅರಣ್ಯ, ಜಿಯಾಮಾ ಮಾಸಿಫ್ ಮೊದಲಾದವು ಈ ಸಂರಕ್ಷಿತ ಪ್ರದೇಶದಲ್ಲಿವೆ.

ಈ ದೇಶದಲ್ಲಿ ತೀವ್ರವಾದ ಬಡತನವಿದೆ. ಯುವಜನತೆ ಹೆಚ್ಚಿರುವ ದೇಶವಾದ ಕಾರಣ ಜನಸಂಖ್ಯೆ ಈಚೀಚೆಗೆ ಹೆಚ್ಚಾಗುತ್ತಿದೆ. ಇಂತಹ ಸನ್ನಿವೇಶದಲ್ಲಿಯೂ ಸಹ ಗಿನಿಯಾ ದೇಶವು ಅರಣ್ಯ ಪ್ರದೇಶಗಳನ್ನು ಹಾಗೆಯೇ ಉಳಿಸಿಕೊಂಡಿದೆ. ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ. ಸುಬನೆ ಬೀಚ್, ಬೆಲ್ ಏರ್ ಬೀಚ್ ಮೊದಲಾದವು ಗಿನಿಯಾದಲ್ಲಿರುವ ಆಕರ್ಷಕ ಕಡಲತೀರಗಳು. ಲೆಸ್ ಡಿ ಲಾಸ್ ಎಂಬ ಸ್ಥಳದಲ್ಲಿಯೂ ಸಹ ಮೋಹಕವಾದ, ಚಿತ್ತಾಕರ್ಷಕವಾದ ಕಡಲತೀರಗಳಿವೆ. ಬಿದಿರಿನಿಂದ ಮಾಡಿದ ಗುಡಿಸಲುಗಳು ಇಲ್ಲಿವೆ. ಇದು ದ್ವೀಪಸಮೂಹ. ಇದರೊಳಗಡೆ ಕಾಡು ಇರುವುದರಿಂದಾಗಿ ಇದು ಮತ್ತಷ್ಟು ವಿಶಿಷ್ಟ ಎನಿಸಿಕೊಂಡಿದೆ. ನಿಂಬಾ ಪರ್ವತ ಶ್ರೇಣಿಯನ್ನು ‘ಗಿನಿಯಾದ ಬೆನ್ನೆಲುಬು’ ಎಂದು ಕರೆಯಲಾಗುತ್ತದೆ. ಇದು ಗಿನಿಯಾ, ಐವರಿಕೋಸ್ಟ್ ಮತ್ತು ಲೈಬೀರಿಯಾ ಈ ಮೂರು ದೇಶಗಳಲ್ಲಿ ಹರಡಿಕೊಂಡಿದೆ. ಮೌಂಟ್ ರಿಚರ್ಡ್ ಮೊಲಾರ್ಡ್ ಎನ್ನುವುದು ಈ ಪರ್ವತ ಶ್ರೇಣಿಯಲ್ಲಿರುವ ಅತ್ಯುನ್ನತ ಶಿಖರವಾಗಿದೆ. ಇದು 5,750 ಅಡಿಗಳಷ್ಟು ಎತ್ತರವಾಗಿದೆ. ಇಲ್ಲಿ ಕಬ್ಬಿಣ ಮತ್ತು ಕೋಬಾಲ್ಟ್ ಖನಿಜಗಳು ಹೇರಳವಾಗಿವೆ. ಐವರಿಕೋಸ್ಟ್ ಮತ್ತು ಗಿನಿಯಾ ದೇಶಗಳ ಗಡಿಭಾಗದಲ್ಲಿರುವ ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎನಿಸಿಕೊಂಡಿದೆ.

ಗಿನಿಯಾದಲ್ಲಿ ಮುಸ್ಲಿಂ ಬಾಹುಳ್ಯವಿದೆ. ಎಂಭತ್ತೈದು ಶೇಕಡಾದಷ್ಟು ಜನರು ಮುಸ್ಲಿಮರು. ಸುನ್ನಿ ಪಂಥಕ್ಕೆ ಸೇರಿದವರು. ಹತ್ತು ಶೇಕಡಾಕ್ಕಿಂತಲೂ ಕಡಿಮೆ ಪ್ರಮಾಣದ ಜನರು ಕ್ರೈಸ್ತ ಧರ್ಮೀಯರು. ಇವರಲ್ಲಿ ಬಹುತೇಕರು ರೋಮನ್ ಕ್ಯಾಥೋಲಿಕ್ ಸಂಪ್ರದಾಯದ ಅನುಯಾಯಿಗಳು. ಸ್ಥಳೀಯ ಸಾಂಪ್ರದಾಯಿಕವಾದ ಧರ್ಮವನ್ನು ಪರಿಪಾಲಿಸುವವರೂ ಇದ್ದಾರೆ. ಆದರೆ ಇವರ ಸಂಖ್ಯೆ ತೀರಾ ಕಡಿಮೆ. ಅಂದರೆ ಇವರಿಲ್ಲಿ ಅಲ್ಪಸಂಖ್ಯಾತರು. ಆಫ್ರಿಕಾದ ನಾಲ್ಕನೇ ಅತಿದೊಡ್ಡ ಮಸೀದಿ ಇರುವುದು ಗಿನಿಯಾದಲ್ಲಿ. ಇಸ್ಲಾಂ ಇಲ್ಲಿಯ ಪ್ರಧಾನ ಧರ್ಮ. ದೇಶದ ಜನರಲ್ಲಿ ಎಂಭತ್ತೈದು ಪ್ರತಿಶತ ಮಂದಿ ಮುಸ್ಲಿಂ ಧರ್ಮೀಯರು. ಗಿನಿಯಾ ಮುಸ್ಲಿಂ ರಾಷ್ಟ್ರ ಎಂದು ಸಾರಿಹೇಳುವಂತೆ ರಾಷ್ಟ್ರ ರಾಜಧಾನಿಯಾದ ಕೊನಾಕ್ರಿಯಲ್ಲಿ ನೆಲೆನಿಂತಿದೆ ಗ್ರ್ಯಾಂಡ್ ಮಸೀದಿ. ಇದು ಆಫ್ರಿಕಾದ ನಾಲ್ಕನೇ ಅತೀ ದೊಡ್ಡ ಮಸೀದಿ ಎನಿಸಿಕೊಂಡಿದೆ. ಇದು ನಿರ್ಮಾಣಗೊಂಡದ್ದು 1982ರಲ್ಲಿ. ಸ್ಥಾಪನೆಯ ನೇತೃತ್ವ ವಹಿಸಿಕೊಂಡವರು ಅಹ್ಮದ್ ಸೆಕೌ ಟೂರೆ. ಸೌದಿ ಅರೇಬಿಯಾದ ರಾಜರಾಗಿದ್ದ ಫಹದ್ ಅವರು ಹಣಕಾಸಿನ ನೆರವು ನೀಡಿದ್ದರು. ಇಲ್ಲಿ ಒಂದೇ ಬಾರಿಗೆ ಇಪ್ಪತ್ತೈದು ಸಾವಿರ ಮಂದಿ ನಮಾಜ಼್ ಮಾಡುವುದಕ್ಕೆ ಸಾಧ್ಯವಿದೆ. ಮಸೀದಿಯ ಮೇಲಿನ ಭಾಗ ಮಹಿಳೆಯರಿಗೆ ಮೀಸಲಾಗಿದೆ. ಎರಡೂವರೆ ಸಾವಿರ ಹೆಣ್ಣುಮಕ್ಕಳು ಇಲ್ಲಿರುವುದಕ್ಕೆ ಸ್ಥಳಾವಕಾಶವಿದೆ.

1891ರಲ್ಲಿ ಫ್ರಾನ್ಸ್ ದೇಶವು ಗಿನಿಯಾವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಇದನ್ನು ಫ್ರೆಂಚರು ಕರೆದದ್ದು ಫ್ರೆಂಚ್ ಪಶ್ಚಿಮ ಆಫ್ರಿಕಾ ಎಂಬ ಹೆಸರಿನಿಂದ. ಫ್ರಾನ್ಸ್ ಆಡಳಿತದಡಿಯಲ್ಲಿ ಇದ್ದ ಕಾರಣ ಫ್ರೆಂಚ್ ಗಿನಿಯಾ ಎಂಬ ಹೆಸರೂ ಇದಕ್ಕಿತ್ತು. ಹೀಗೆ ಗಿನಿಯಾವನ್ನು ವಸಾಹತಾಗಿಸಿಕೊಂಡಿದ್ದ ಫ್ರೆಂಚರು ಅಲ್ಲಿಯ ಜನರನ್ನು ಮತಾಂತರಗೊಳಿಸುವ ಮೂಲಕ ಆ ಪ್ರದೇಶವನ್ನು ಸಂಪೂರ್ಣವಾಗಿ ತಮ್ಮ ವಶದಲ್ಲಿಯೇ ಇಟ್ಟುಕೊಳ್ಳುವ ಪ್ರಯತ್ನ ನಡೆಸಿದ್ದರು. ಅವರಿಗೆ ಗಿನಿಯಾವನ್ನು ತೊರೆದುಹೋಗಲು ಮನಸ್ಸಿರಲಿಲ್ಲ. ಆದರೆ ಗಿನಿಯಾದ ಸ್ವಾತಂತ್ರ್ಯಕ್ಕಾಗಿ ಸರ್ವಪ್ರಯತ್ನ ನಡೆಸುತ್ತಿದ್ದ ಅಹ್ಮದ್ ಸೆಕೌ ಟೂರೆ ಅವರಿಗೆ ಫ್ರೆಂಚರ ಕುತಂತ್ರ ಅರಿವಾಯಿತು. ಜನಮತ ಸಂಗ್ರಹದ ಮೂಲಕವೇ ಸ್ವಾತಂತ್ರ್ಯದ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಸ್ತಾಪವನ್ನು ಆಗಿನ ಫ್ರಾನ್ಸ್ ಅಧ್ಯಕ್ಷ ಡಿ ಗುಲ್ಲೆ ಅವರ ಮುಂದಿಟ್ಟರು. ತೊಂಬತ್ತೈದು ಪ್ರತಿಶತ ಜನರು ಸ್ವಾತಂತ್ರ್ಯ ಬಯಸಿ 1958ರ ಸೆಪ್ಟೆಂಬರ್ 28ರಂದು ಮತ ಚಲಾಯಿಸಿದರು. ಟೂರೆ ಅವರ ಚಾಣಾಕ್ಷತೆಯ ಮುಂದೆ ಸೋತ ಫ್ರಾನ್ಸ್ ಗಿನಿಯಾದ ಮೇಲಿನ ಹಿಡಿತವನ್ನು ಹಿಂದೆಗೆದುಕೊಂಡಿತು. 1958ರ ಅಕ್ಟೋಬರ್ 2ರಂದು ಗಿನಿಯಾ ತನ್ನ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿತು. ಈ ಮೂಲಕ ಅರುವತ್ತೇಳು ವರ್ಷಗಳ ಫ್ರೆಂಚ್ ವಸಾಹತುಶಾಹಿತ್ವ ಕೊನೆಗಾಣುವಂತಾಯಿತು.

ಗಿನಿಯಾ ಖನಿಜ ಸಂಪನ್ಮೂಲಗಳಿಂದ ಸಮೃದ್ಧವಾಗಿರುವ ದೇಶ. ಇಡಿಯ ವಿಶ್ವವೇ ಅಚ್ಚರಿಪಡುವಷ್ಟು ಅಗಾಧ ಪ್ರಮಾಣದ ಸಂಪನ್ಮೂಲಗಳು ಇಲ್ಲಿವೆ. ಹದಿನೆಂಟು ಕೋಟಿ ಮೆಟ್ರಿಕ್ ಟನ್‌ಗಳಿಗಿಂತ ಹೆಚ್ಚು ಕಬ್ಬಿಣದ ಅದಿರುಗಳು ಇಲ್ಲಿವೆ. ಇಡೀ ವಿಶ್ವದಲ್ಲಿರುವ ಬಾಕ್ಸೈಟ್ ಅದಿರಿನಲ್ಲಿ ಗಿನಿಯಾದ ಪಾಲು ಇಪ್ಪತ್ತೈದು ಶೇಕಡಾ. ಬಾಕ್ಸೈಟ್ ಉತ್ಪಾದನೆಯಲ್ಲಿ ಗಿನಿಯಾಕ್ಕೆ ಪ್ರಪಂಚದಲ್ಲಿ ಎರಡನೇ ಸ್ಥಾನ. ವಜ್ರ ಮತ್ತು ಚಿನ್ನದ ನಿಕ್ಷೇಪಗಳೂ ಇವೆ. ಯುರೇನಿಯಂ ಅದಿರು ಎಷ್ಟಿದೆ ಎನ್ನುವುದನ್ನು ನಿರ್ಧರಿಸುವುದೂ ಕಷ್ಟ. ಇಷ್ಟೆಲ್ಲಾ ಇದ್ದರೂ ಗಿನಿಯಾ ಶ್ರೀಮಂತ ದೇಶ ಎನಿಸಿಕೊಂಡಿಲ್ಲ. ಬಹುತೇಕರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿದ್ದಾರೆ. ಹೈಸ್ಕೂಲಿನ ಮೆಟ್ಟಿಲನ್ನೇ ತುಳಿದಿಲ್ಲ. ಇದರಿಂದಾಗಿ ಇರುವ ಸಂಪನ್ಮೂಲಗಳೆಲ್ಲವೂ ರಾಜಕಾರಣಿಗಳ ಸಿರಿವಂತಿಕೆ ಹೆಚ್ಚಲು ನೆರವಾಗುತ್ತಿವೆ. ಇಂತಹ ಸಂಪನ್ಮೂಲಗಳು ವಿದೇಶಕ್ಕೆ ಹರಿದುಹೋಗುತ್ತಿದೆ. ಇದರಿಂದ ಆದಾಯ ಬರುತ್ತಿರುವುದು ಭ್ರಷ್ಟ ಆಡಳಿತಗಾರರಿಗೇ ಹೊರತು ದೇಶಕ್ಕಂತೂ ಅಲ್ಲ. ಆದರೆ ಒಂದು ವಿಚಾರದಲ್ಲಿ ಗಿನಿಯಾ ಅದೃಷ್ಟಶಾಲಿ ದೇಶ ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಬಗೆಯ ಸಂಪನ್ಮೂಲಗಳಿರುವ ಉಳಿದ ಆಫ್ರಿಕನ್ ದೇಶಗಳಲ್ಲಿ ಅಂತರ್ಯುದ್ಧಗಳಾಗಿವೆ. ಮಾನವ ಹಕ್ಕುಗಳ ಉಲ್ಲಂಘನೆ ನಡೆದಿದೆ. ಅದೆಷ್ಟೋ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಗಿನಿಯಾದಲ್ಲಿ ಇಂಥದ್ದೇನೂ ನಡೆದಿಲ್ಲ.

ಗಿನಿಯಾ ದೇಶವು ವಿಸ್ತೃತವಾದ ಕರಾವಳಿ ಪ್ರದೇಶವನ್ನು ಹೊಂದಿದೆ. ಸುಮಾರು ಮುನ್ನೂರ ಇಪ್ಪತ್ತು ಕಿಲೋಮೀಟರ್‌ಗಳಷ್ಟು ಉದ್ದದ ಕರಾವಳಿಯನ್ನು ಹೊಂದಿದ ದೇಶವಿದು. ಇದರ ರಾಜಧಾನಿ ಕೊನಾಕ್ರಿ ನೆಲೆನಿಂತಿರುವುದೇ ಕರಾವಳಿಯಲ್ಲಿ. ಎಲ್ಲರ ಕಣ್ಮನ ಸೆಳೆಯುವ ಸುಂದರವಾದ ಕಡಲತೀರಗಳನ್ನು ಹೊತ್ತುನಿಂತಿದೆ ಕರಾವಳಿ. ಸುಬನೆ ಬೀಚ್, ಬೆಲ್ ಏರ್ ಬೀಚ್ ಮೊದಲಾದವು ಗಿನಿಯಾದಲ್ಲಿರುವ ಆಕರ್ಷಕ ಕಡಲತೀರಗಳು.

ಉಳಿದ ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಇರುವಂತಹ ಪಾಕಪದ್ಧತಿಯೇ ಗಿನಿಯಾದಲ್ಲಿಯೂ ಕಂಡುಬರುತ್ತದೆ. ಅಕ್ಕಿ ಗಿನಿಯಾದ ಪ್ರಮುಖ ಆಹಾರ. ಬಹುತೇಕ ಪ್ರದೇಶಗಳಲ್ಲಿ ಇದರ ಬಳಕೆಯಿದೆ. ಅಕ್ಕಿ ಮತ್ತು ಜೋಳ ಎರಡೂ ಧಾನ್ಯಗಳನ್ನು ಬಳಸಿ ತಯಾರಿಸಲಾಗುವ ಬಾಯ್ಲೆ ಜನಪ್ರಿಯ ಖಾದ್ಯ. ಜೊಲೊಫ್ ರೈಸ್, ಟಪಲಾಪ ಬ್ರೆಡ್, ಫುಫು ಮತ್ತು ಮಾಫೆ ಅಪ್ಪಟ ಆಫ್ರಿಕನ್ ಶೈಲಿಯ ಆಹಾರಗಳಾಗಿವೆ. ಸುಟ್ಟ ಮೀನನ್ನು ಇಲ್ಲಿ ಕೊಂಕೊ ಎಂದು ಕರೆಯಲಾಗುತ್ತದೆ. ಇದು ಇಲ್ಲಿಯ ಜನಪ್ರಿಯ ಭಕ್ಷ್ಯ. ಬೇಯಿಸಿದ ಕಸಾವ ಎಲೆಯ ಸಾಸ್‌ನ್ನು ಉಳಿದ ಆಹಾರಗಳ ಜೊತೆಗೆ ನೀಡಲಾಗುತ್ತದೆ.
ಮಹಿಳೆಯರ ಜನನಾಂಗವನ್ನು ಊನಗೊಳಿಸುವ ವಿಚಿತ್ರ ಸಂಪ್ರದಾಯ ಗಿನಿಯಾದಲ್ಲಿದೆ. ಲಿಂಗಾಧಾರಿತ ಮೌಢ್ಯವಾಗಿ ಇದನ್ನು ಗುರುತಿಸಬಹುದು. ಇಲ್ಲಿಯ ತೊಂಬತ್ತೆಂಟು ಶೇಕಡಾದಷ್ಟು ಸ್ತ್ರೀಯರು ಜನನಾಂಗ ಊನಗೊಳಿಸುವಿಕೆಗೆ ಒಳಗಾಗುತ್ತಿದ್ದಾರೆ. ಇಂಥದ್ದೊಂದು ಆಚರಣೆಗೆ ಧಾರ್ಮಿಕ ಬೆಂಬಲ ಇದೆ. ಜನಾಂಗಗಳು ಅದನ್ನು ಸರಿ ಎನ್ನುತ್ತಿವೆ. ಬೇರೆ ಬೇರೆ ಜನಾಂಗದವರು ಅದನ್ನು ಒಪ್ಪಿಕೊಂಡಿದ್ದಾರೆ. ಈ ಕಾರಣದಿಂದಾಗಿ ಇಂತಹ ವಿಕಾರ ಆಚರಣೆಯೊಂದು ಇನ್ನೂ ಜೀವಂತ ಇರುವಂತಾಗಿದೆ. ಸಮಾನತೆಯ ಸಮಾಜವನ್ನು ಬಯಸುವ ಪ್ರತಿಯೊಬ್ಬರೂ ಚಿಂತಿಸಬೇಕಾದ ವಿಷಯ ಇದಾಗಿದೆ.

ಗಿನಿಯಾದಲ್ಲಿ ಅಕ್ಷರಸ್ಥರ ಸಂಖ್ಯೆ ತೀರಾ ಕಡಿಮೆಯಿದೆ. ಅತೀ ಕಡಿಮೆ ಸಾಕ್ಷರತೆ ದರ ಇರುವ ರಾಷ್ಟ್ರಗಳ ಪೈಕಿ ಒಂಭತ್ತನೇ ಸ್ಥಾನ ಗಿನಿಯಾದ್ದು. ಸಾಕ್ಷರತೆಯ ಪ್ರಮಾಣ ನಲುವತ್ತೈದು ಶೇಕಡಾ ದಾಟಿಲ್ಲ. ಪ್ರಾಥಮಿಕ ಶಿಕ್ಷಣವನ್ನು ಆರು ವರ್ಷಗಳವರೆಗೆ ಮಾತ್ರ ಕಡ್ಡಾಯಗೊಳಿಸಲಾಗಿದೆ. ಹೆಚ್ಚಿನ ಮಕ್ಕಳು ಶಾಲೆಯ ಮುಖವನ್ನೇ ಕಾಣುತ್ತಿಲ್ಲ. ಹೀಗೆ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿರುವುದಕ್ಕೆ ಬಡತನವೇ ಪ್ರಮುಖ ಕಾರಣ. ಗಿನಿಯಾದ ಜಿಡಿಪಿ 1180 ಡಾಲರ್‌ಗಳು ಮಾತ್ರ. ವಿಶ್ವದ ಅತ್ಯಂತ ಬಡದೇಶಗಳಲ್ಲಿ ಒಂದೆನಿಸಿಕೊಂಡಿದೆ ಗಿನಿಯಾ.

ಒಂದು ಕಾಲಕ್ಕೆ ಗಿನಿಯಾ ದೇಶವು ಫ್ರಾನ್ಸ್ ಆಳ್ವಿಕೆಗೆ ಒಳಪಟ್ಟಿತ್ತು. ಇದರಿಂದಾಗಿ ಫ್ರೆಂಚ್ ಭಾಷೆಯನ್ನು ಅಧಿಕೃತ ಭಾಷೆಯಾಗಿ ಸ್ವೀಕಾರ ಮಾಡಿದೆ. ಆಡಳಿತದಲ್ಲಿ ಅದಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಶಾಲಾ ಬೋಧನೆಯಲ್ಲಿಯೂ ಫ್ರೆಂಚ್ ಪ್ರಮುಖ ಪಾತ್ರ ವಹಿಸಿದೆ. ಆದರೆ ಸ್ಥಳೀಯ ಜನರು ಫ್ರೆಂಚ್ ಮಾತನಾಡುವುದರಲ್ಲಿ ಒಲವು ಬೆಳೆಸಿಕೊಂಡಿಲ್ಲ. ಜನಾಂಗೀಯವಾದ ಭಾಷೆಗಳು ಅಸ್ತಿತ್ವದಲ್ಲಿವೆ. ಪುಲಾನಿ ಮತ್ತು ಮಾಲಿಂಕೆ ಭಾಷೆಗಳು ಜನಾಂಗ ಆಧಾರಿತವಾದ ಭಾಷೆಗಳು. ಪ್ರದೇಶಗಳಿಗೆ ಅನುಸಾರವಾಗಿ ಗಿನಿಯಾದಲ್ಲಿ ಬೇರೆ ಬೇರೆ ಭಾಷೆಗಳು ಕಂಡುಬರುತ್ತವೆ. ಗಿನಿಯಾದ ತಗ್ಗು ಪ್ರದೇಶಗಳಲ್ಲಿ ಸುಸು ಭಾಷೆಯನ್ನು ಮಾತನಾಡಲಾಗುತ್ತದೆ. ಫೌಟಾ ಜಲ್ಲಾನ್ ಪ್ರದೇಶದಲ್ಲಿ ಪುಲಾರ್ ಪ್ರಮುಖ ಭಾಷೆಯಾಗಿದೆ. ಪುಲಾನ ಎನ್ನುವುದು ಇದರ ಉಪಭಾಷೆ. ಗಿನಿಯಾದ ಎತ್ತರ ಪ್ರದೇಶಗಳಲ್ಲಿ ಮಾಲಿಂಕೆ ಭಾಷೆಯನ್ನು ಮಾತನಾಡುವವರ ಸಂಖ್ಯೆ ಹೆಚ್ಚು. ಅರಣ್ಯ ಪ್ರದೇಶಗಳಲ್ಲಿ ಬದುಕುತ್ತಿರುವವರು ಗುರ್ಜೆ, ತೋಮಾ ಮೊದಲಾದ ಭಾಷೆಗಳನ್ನು ಆಡುತ್ತಾರೆ. ಹೀಗೆ ಭಾಷೆಗೆ ಅನುಸಾರವಾಗಿ ಈ ಪ್ರದೇಶಗಳನ್ನು ಕೆಪೆಲ್ಲೆ, ಲೋಮಾ, ಕಿಸಿಯ ಎಂದು ಗುರುತಿಸಲಾಗಿದೆ.

ಕೃಷಿ ಪ್ರಧಾನವಾದ ದೇಶ ಗಿನಿಯಾ. ಕಡಲೆಕಾಯಿ ಮತ್ತು ಫೋನಿಯೋ ಧಾನ್ಯಗಳನ್ನು ಬೆಳೆಯುವುದಕ್ಕಾಗಿ ಎತ್ತರದ ಪ್ರದೇಶಗಳನ್ನು ಮೀಸಲಿಡಲಾಗಿದೆ. ಅಕ್ಕಿ, ಬಾಳೆಹಣ್ಣು, ಟೊಮ್ಯಾಟೋ, ಸ್ಟ್ರಾಬೆರಿ ಮತ್ತು ಸಿಟ್ರಸ್ ಹಣ್ಣುಗಳನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಸಲಾಗುತ್ತದೆ. ಹೆಚ್ಚಿನವರು ತಮ್ಮ ಮನೆಯ ಉಪಯೋಗಕ್ಕೆ ಬೇಕಾದಷ್ಟು ತರಕಾರಿಗಳನ್ನು ತಾವೇ ಬೆಳೆಯುತ್ತಾರೆ. ಹೆಚ್ಚುವರಿಯಾಗಿ ದೊರೆತದ್ದನ್ನು ಹತ್ತಿರದ ಮಾರುಕಟ್ಟೆಗಳಿಗೆ ಮಾರುತ್ತಾರೆ. ಗಿನಿಯಾದ ತಗ್ಗು ಪ್ರದೇಶಗಳಲ್ಲಿ ಎಣ್ಣೆ, ತೆಂಗಿನಕಾಯಿ, ಅಕ್ಕಿ, ಬಾಳೆಹಣ್ಣು, ತರಕಾರಿಗಳು, ಉಪ್ಪು ಮತ್ತು ಮೀನುಗಳನ್ನು ಅತೀ ಹೆಚ್ಚಿನ ಪ್ರಮಾಣದಲ್ಲಿ ಮಾರಲಾಗುತ್ತದೆ. ಬಾಳೆಹಣ್ಣು ಮತ್ತು ಅನಾನಸ್ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಮ್ಯಾನೋಕ್ ಇಲ್ಲಿಯ ಪ್ರಮುಖ ಆಹಾರ. ತಂಬಾಕು ಮತ್ತು ಕರೈಟ್‌ಗಳನ್ನು ಇಲ್ಲಿಯ ಸ್ಥಳೀಯ ಮಾರುಕಟ್ಟೆಗಳಳ್ಲಿ ಮಾರಲಾಗುತ್ತದೆ. ಕರೈಟ್ ಎನ್ನುವುದು ಒಂದು ವಿಧದ ಬೆಣ್ಣೆಯಾಗಿದೆ. ಅರಣ್ಯ ಪ್ರದೇಶದಲ್ಲಿ ಕಸಾವ, ಕಡಲೆಕಾಯಿ ಮತ್ತು ಜೋಳಗಳು ಪ್ರಮುಖ ಆಹಾರ ಬೆಳೆಗಳು. ಕಾಫಿ ಮತ್ತು ಕೋಲಾ ಬೀಜಗಳು ವಾಣಿಜ್ಯ ಬೆಳೆಗಳು ಎನಿಸಿವೆ. ಕೋಳಿ, ಆಡುಗಳನ್ನು ಇಲ್ಲಿ ಸಾಕಲಾಗುತ್ತದೆ.

ಗಿನಿಯಾದ ಕೃಷಿ ರಂಗದಲ್ಲಿ 1970ರ ಹೊತ್ತಿಗೆ ಹೊಸದೊಂದು ಪ್ರಯೋಗ ಆರಂಭವಾಯಿತು. ಸಹಕಾರಿ ತತ್ವದ ಮೂಲಕ ಕೃಷಿಕರು ಹೆಚ್ಚು ಇಳುವರಿಯನ್ನು ಪಡೆದುಕೊಳ್ಳುವ ಪ್ರಯತ್ನ ನಡೆಸಿದರು. ಆದರೆ ಇದು ಯಶಸ್ಸನ್ನು ಕೊಟ್ಟಿಲ್ಲ. ಕೃಷಿ ಉತ್ಪನ್ನಗಳ ಬೆಲೆ ಇನ್ನಷ್ಟು ಇಳಿಕೆಯಾಯಿತು. ಇದರಿಂದಾಗಿ ಹೆಚ್ಚಿನ ಜನರು ಕೃಷಿಯನ್ನು ತಿರಸ್ಕರಿಸುವಂತಾಯಿತು. ಕಾಫಿ ಉತ್ಪಾದನೆ ಕುಂಠಿತವಾಯಿತು. ಗಿನಿಯಾದಲ್ಲಿ ಮೀನುಗಾರಿಕೆಯು ವ್ಯಾಪಕವಾಗಿದೆ. ದೇಶಕ್ಕೆ ಒಳ್ಳೆಯ ಆದಾಯವನ್ನು ತಂದುಕೊಡುತ್ತಿದೆ. ನದಿ ಮತ್ತು ಸಾಗರ ಮೀನುಗಾರಿಕೆಗಳೆರಡೂ ಇಲ್ಲಿ ಕಂಡುಬರುತ್ತದೆ. ಅಮೇರಿಕಾ, ಫ್ರಾನ್ಸ್, ಜಪಾನ್ ಮೊದಲಾದ ದೇಶಗಳೂ ಸಹ ಗಿನಿಯಾದ ಮೀನುಗಾರಿಕೆ ಉದ್ಯಮದ ಕಡೆಗೆ ದೃಷ್ಟಿ ಹರಿಸಿವೆ. ಹೂಡಿಕೆ ಮಾಡಿವೆ. ಇದರಿಂದಾಗಿ ಗಿನಿಯಾದ ಮೀನುಗಾರಿಕಾ ಕ್ಷೇತ್ರ ಬೆಳೆಯುತ್ತಲೇ ಇದೆ.

ಗಿನಿಯಾದಲ್ಲಿ ಸಂಗೀತವು ಪ್ರದೇಶ ಮತ್ತು ಜನಾಂಗಗಳಿಗೆ ಅನುಸಾರವಾಗಿ ಬೇರೆ ಬೇರೆ ಸ್ವರೂಪವನ್ನು ಪಡೆದುಕೊಂಡಿದೆ. ಹಲವು ಶೈಲಿಗಳು ಕಂಡುಬಂದರೂ ಸಹ ಇವುಗಳಲ್ಲಿ ಬಳಕೆಯಾಗುವ ವಾದ್ಯಗಳು ಒಂದೇ ಆಗಿದೆ. ಸುಸು ಎಂಬ ಭಾಷೆಯನ್ನು ಮಾತನಾಡುವ ಜನರು ಮಾಂಡಿಂಗ್ ಹೆಸರಿನ ಸಂಗೀತ ಶೈಲಿಯಲ್ಲಿ ಪರಿಣಿತರೆನಿಸಿಕೊಂಡಿದ್ದಾರೆ. ಇದರಲ್ಲಿ ಕೋರಾ ಹೆಸರಿನ ವಾದ್ಯದ ಬಳಕೆಯಿದೆ. ಇದು ಒಣಗಿದ ಮತ್ತು ಟೊಳ್ಳಾದ ಸೋರೆಕಾಯಿಯಿಂದ ಮಾಡಿದ ವೀಣೆಯಂತಹ ವಾದ್ಯ. ಗಿನಿಯಾದಲ್ಲಿ ಮೊದಲಿನಿಂದಲೂ ಅನೇಕ ಕರಕುಶಲ ಕಲೆಗಳಿದ್ದವು. ಆದರೆ ವಸಾಹತುಶಾಹಿ ಕಾಲಘಟ್ಟದಲ್ಲಿ ಇದು ತೀವ್ರವಾದ ಹಿನ್ನೆಡೆಯನ್ನು ಅನುಭವಿಸಿತು. ಸ್ವಾತಂತ್ರ್ಯದ ನಂತರ ಈ ಪರಿಸ್ಥಿತಿಯೇನೂ ಬದಲಾಗಿಲ್ಲ.

ಪ್ರವಾಸೋದ್ಯಮವನ್ನು ರೂಪಿಸುವಲ್ಲಿ ಗಿನಿಯಾ ಸೋತಿದೆ. ವ್ಯಾಪಾರೋದ್ಯಮ ನಿರೀಕ್ಷಿತ ಪ್ರಮಾಣದಲ್ಲಿ ಬೆಳೆದಿಲ್ಲ. ಇದರಿಂದಾಗಿ ಕರಕುಶಲ ವಸ್ತುಗಳ ಉತ್ಪಾದನೆ ಮತ್ತು ಆ ಕ್ಷೇತ್ರದಲ್ಲಿ ರೂಪುಗೊಳ್ಳಬೇಕಾದ ಸೃಜನಶೀಲತೆ ಕಡಿಮೆಯಾಗಿದೆ. ಕೆಲವೇ ಕೆಲವು ಜನಾಂಗಗಳು ಮಾತ್ರ ಮರದ ಕೆತ್ತನೆ, ಚರ್ಮದ ಕೆಲಸ ಮತ್ತು ಆಭರಣಗಳ ತಯಾರಿಯಲ್ಲಿ ತೊಡಗಿಸಿಕೊಂಡಿದ್ದಾರೆ.

About The Author

ಡಾ. ವಿಶ್ವನಾಥ ಎನ್ ನೇರಳಕಟ್ಟೆ

ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. "ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ" ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ.

1 Comment

  1. Pradeep H

    ಪರಿಚಯ, ಆರ್ಟಿಕಲನ ಭಾಷೆ ಚೆನ್ನಾಗಿದೆ. ಜಿ ಡಿ ಪಿ ಯನ್ನು per capita ಅಂತ ನಮೂಧಿಸಿದರೆ ಕನ್ಫ್ಯೂಷನ್ ಇರುವುದಿಲ್ಲ. ಜೊತೆ comparison ಕೊಟ್ಟರೆ ಸಾಮಾನ್ಯ ಓದುಗರಿಗೆ ಊಹೆ ಮಾಡಿಕೊಂಡು ಅರ್ಥಮಾಡಿಕೊಳ್ಳಲು ಸಹಕಾರಿ. (ಜಿಡಿಪಿ 1180 ಡಾಲರ್‌ಗಳು – per capita GDP, India Per capita 2,878, USA per capita – $86,601, china – 13,688)

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ