Advertisement
ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ

ಫ್ಲಾಪ್ ಆದ ಬಲೂನಿನ ಐಡಿಯಾ: ಬಸವನಗೌಡ ಹೆಬ್ಬಳಗೆರೆ ಸರಣಿ

ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ನಲವತ್ತಾರನೆಯ ಕಂತು ನಿಮ್ಮ ಓದಿಗೆ

ನನಗೆ ಚಿಕ್ಕಂದಿನಿಂದಲೂ ಬಲೂನಿನ ಬಗ್ಗೆ ಏನೋ ಒಂಥರಾ ವಿಪರೀತ ವ್ಯಾಮೋಹ. ಜಾತ್ರೆಯಲ್ಲಿ ಅವಕ್ಕೆ ಗಾಳಿಯನ್ನು ತುಂಬಿ, ತುದಿಗೆ ರಬ್ಬರ್ ಕಟ್ಟಿ ಕಡ್ಡಿಗೆ ಸಿಕ್ಕಿಸಿಕೊಂಡು ಮಾರುವ ಬಲೂನಿನವನು ನನಗೆ ಆಕರ್ಷಿತನಾಗಿ ಕಾಣುತ್ತಿದ್ದ. ಜಾತ್ರೆಯಲ್ಲಿ ಬಣ್ಣ ಬಣ್ಣದ ಬಲೂನುಗಳು ಬೀಸಿದ ಗಾಳಿಗೆ ಹಾರುವಂತೆ ಕಾಣುವುದು ಬಹುತೇಕ ಸಣ್ಣ ಮಕ್ಕಳನ್ನು ಇಂದಿಗೂ ತಮ್ಮೆಡೆಗೆ ಸೆಳೆಯುತ್ತವೆ. ಅದನ್ನು ಖರೀದಿಸಿ ರಬ್ಬರ್‌ಗೆ ಬೆರಳು ಕಟ್ಟಿಕೊಂಡು ಹಸ್ತದಿಂದ ಬಡಿದಂತೆ ಅವು ವಾಪಸ್ ಬರುವುದು, ಮತ್ತೆ ಮತ್ತೆ ಜೋರಾಗಿ ಬಡಿದಂತೆ ಮತ್ತೆ ಮತ್ತೆ ಅದೇ ರಭಸದಲ್ಲಿ ವಾಪಾಸ್ ಬರುವುದು ನ್ಯೂಟನ್ ಚಲನೆಯ ಮೂರನೇ ನಿಯಮವನ್ನು ತಿಳಿಸುವಲ್ಲಿ ಸಫಲವಾಗುತ್ತದೆ. ಜಾಸ್ತಿ ಗಾಳಿ ಊದಿದಾಗ ಒಡೆದು ಹೋಗುವುದು ‘ಅತೀ ಯಾವತ್ತೂ ಒಳಿತಲ್ಲ’ ಎಂಬುದನ್ನು ತಿಳಿಸುತ್ತದೆ. ಸಂಸ್ಕೃತದಲ್ಲಿ ‘ಅತೀ’ ಬಗ್ಗೆ
“ಅತಿರೂಪೇಣ ವೈ ಸೀತ ಅತಿಗರ್ವೇಣ ರಾವಣ|
ಅತೀದಾನಾತ್ ಬಲಿರ್ಬದ್ಧೋ ಅತೀ ಸರ್ವತ್ರ ವರ್ಜಯೇತ್||” ಎಂಬ ಶ್ಲೋಕವಿದೆ. ಇದರ ಅರ್ಥ ಹೀಗಿದೆ:-

ಅತಿಯಾದ ರೂಪದಿಂದ ಸೀತೆ ಸಂಕಟಕ್ಕೆ ಸಿಲುಕಿದಳು. ಅತಿಯಾದ ದರ್ಪದಿಂದ ರಾವಣ ಹತನಾದ, ಅತಿಯಾದ ದಾನದಿಂದ ಬಲಿ ಚಕ್ರವರ್ತಿ ಇಕ್ಕಟ್ಟಿಗೆ ಸಿಲುಕಿದ. ಹಾಗಾಗಿ ನಾವು ಯಾವಾಗಲೂ ಅತಿಯನ್ನು ತ್ಯಜಿಸಬೇಕು ಇಂಗ್ಲೀಷಿನಲ್ಲೂ ‘Too much is too bad’ ಎಂಬ ಮಾತಿದೆ. ‘ಅತಿಯಾದರೆ ಅಮೃತವೂ ವಿಷ’, ‘ಅತೀ ಸ್ನೇಹ ಮತಿ ಕೆಡಿಸಿತು’ ಎಂಬ ವಾಕ್ಯಗಳೂ ಅತೀ ಯಿಂದಾಗುವ ಅವನತಿಯ ಬಗ್ಗೆ ತಿಳಿಸುತ್ತವೆ. ಇಂತಹ ಕೆಲ ವ್ಯಕ್ತಿತ್ವ ವಿಕಸನದ ವಿಚಾರಗಳನ್ನು ಕ್ಷಣಾರ್ಧದಲ್ಲಿ ಪ್ರಯೋಗಾತ್ಮಕವಾಗಿ ತಿಳಿಸಲು ಬಲೂನನ್ನು ಸೂಕ್ತವಾಗಿ ಬಳಸಬಹುದು. ಅಲ್ಲದೇ ಮಕ್ಕಳಿಗೆ ಸಹಕಾರ ಗುಣದ ಬಗ್ಗೆ ತಿಳಿಸಲು ಶಿಕ್ಷಕರು ಬಲೂನನ್ನೂ ಬಳಸಬಹುದು.

ಹೇಗೆಂದರೆ ಒಮ್ಮೆ ಶಿಕ್ಷಕರೊಬ್ಬರು ಮಕ್ಕಳಿಗೆ ಬಲೂನಿನ ಮೇಲೆ ತಮ್ಮ ಹೆಸರು ಬರೆದು ಒಂದು ಕೊಠಡಿಯಲ್ಲಿ ಹಾಕಿಸಿದರು. ನಂತರ ಹೆಸರು ಬರೆದ ತಮ್ಮ ತಮ್ಮ ಬಲೂನನ್ನು ಬೇಗನೇ ತೆಗೆದುಕೊಂಡು ಬರಲು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ತಮ್ಮ ಹೆಸರು ಮಾತ್ರ ಹುಡುಕಲು ತೊಡಗಿ ಒಬ್ಬರ ಮೇಲೊಬ್ಬರು ಬಿದ್ದು ಕೆಲ ಬಲೂನುಗಳು ಒಡೆದು ಹೋದವು. ಇನ್ನೂ ಕೆಲವರಿಗೆ ತಮ್ಮ ಬಲೂನುಗಳನ್ನು ಹುಡುಕಲು ತಡವೂ ಆಯಿತು. ನಂತರ ಶಿಕ್ಷಕರು ‘ನಿಮಗೆ ಕೈಗೆ ಸಿಕ್ಕ ಬಲೂನು ತನ್ನಿ, ನಂತರ ಅವರವರ ಹೆಸರು ಇರುವವರಿಗೆ ಕೊಡಿ’ ಎಂದಾಗ ಅವರ ಹೆಸರಿನ ಬಲೂನು ಅವರ ಕೈಗೆ ಸಿಗುವುದು ತಡವಾಗಲಿಲ್ಲ. ಆಗ ಶಿಕ್ಷಕರು ಮಕ್ಕಳಿಗೆ ‘ಸ್ವಾರ್ಥದ ಬದಲು ಸಹಕಾರದ ಗುಣ ಇದ್ದರೆ ನಾವು ಚೆನ್ನಾಗಿ ಬದುಕಬಹುದು’ ಎಂದು ಹೇಳಿದರು.

ಒಮ್ಮೆ ಬಲೂನ್ ಹಾರಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಗುವೊಂದು ತನಗೆ ಕೆಂಪು ಬಣ್ಣದ ಬಲೂನೇ ಬೇಕೆಂದು ರಚ್ಚೆ ಹಿಡಿಯಿತು. ಆಗ ಆ ಪೋಷಕರು ‘ಅದೇ ಬಣ್ಣದ ಬಲೂನೇ ಏಕೆ ಬೇಕು?’ ಎಂದು ಕೇಳಿದಾಗ ಆ ಮಗುವು ‘ಅದು ತುಂಬಾ ಎತ್ತರ ಹಾರುತ್ತಿದೆ’ ಎಂದಾಗ ಆ ಪೋಷಕರು ಬಲೂನ್ ಹಾರಿಸಿದವನ ಬಳಿ ಹೋಗಿ ಕೆಂಪು ಬಲೂನಿನ ಬಗ್ಗೆ ಕೇಳಿದಾಗ ಅವನು “ಕೆಂಪು ಬಣ್ಣದ ಬಲೂನು ಆ ಎತ್ತರಕ್ಕೆ ಹಾರಲು ಅದರ ಬಣ್ಣ ಕಾರಣವಲ್ಲ. ಆದರೆ ಅದರ ಒಳಗೆ ತುಂಬಿದ ಹೀಲಿಯಂ ಅನಿಲ” ಎಂದನು. ಅವನು ತನ್ನ ಮಾತನ್ನು ಮುಂದುವರೆಸಿ “ಸ್ವಾಮಿ, ಜೀವನದಲ್ಲಿ ನಾವೂ ಎತ್ತರದ ಸ್ಥಾನಕ್ಕೇರಲು ನಮ್ಮ ಒಳಗಿರುವ ಮೌಲ್ಯ, ಗುಣಗಳೇ ಕಾರಣವಾಗುತ್ತವೆಯೇ ಹೊರತು ಬಾಹ್ಯ ಸ್ಥಿತಿಯಲ್ಲ” ಎಂದು ಹೇಳಿದನು. ಈ ರೀತಿಯಾಗಿ ಬಲೂನು ವಿವಿಧ ಸನ್ನಿವೇಶಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಉದಾಹರಣೆಯಾಗಿದೆ.

ಇನ್ನೊಂದು ಸನ್ನಿವೇಶದಲ್ಲಿ ಒಬ್ಬ ವ್ಯಕ್ತಿತ್ವ ವಿಕಸನದ ತರಬೇತುದಾರರು ತರಬೇತಿಗೆ ಬಂದಿದ್ದ 5 ಜನರನ್ನು ಕರೆದು ಅವರ ಕೈಲಿ ಗಾಳಿ ತುಂಬಿದ ಒಂದೊಂದು ಬಲೂನನ್ನು ಕೊಟ್ಟನು. ಅದನ್ನು ಬಲಗೈಲಿ ಇಟ್ಟುಕೊಳ್ಳಲು ತಿಳಿಸಿ, ಒಂದು ಸೂಜಿಯನ್ನು ಕೊಟ್ಟು ಇನ್ನೊಂದು ಕೈಲಿ ಹಿಡಿದುಕೊಳ್ಳಲು ತಿಳಿಸಿದರು. ನಂತರ ಸ್ಪರ್ಧೆಯ ನಿಯಮವನ್ನು ತಿಳಿಸುತ್ತಾ “5 ನಿಮಿಷದ ಸಮಯ ಮುಗಿದ ನಂತರ ಯಾರ ಕೈಲಿ ಬಲೂನು ಉಳಿಯುತ್ತದೆಯೋ, ಅವರೇ ಆಟದಲ್ಲಿ ಗೆದ್ದಂತೆ” ಎಂದರು. ಆಗ ಸ್ಪರ್ಧಿಗಳು ತಾವೇ ಗೆಲ್ಲಬೇಕೆಂದು ಹಠ ಬಿದ್ದು ಮತ್ತೊಬ್ಬರ ಕೈಯಲ್ಲಿರುವ ಬಲೂನುಗಳನ್ನು ಒಡೆಯಲು ಮುಂದಾದರು. ಆದರೆ ವಿಪರ್ಯಾಸವೆಂದರೆ ಸಮಯ ಮುಗಿದ ನಂತರ ಎಲ್ಲರ ಕೈಯಲ್ಲಿರುವ ಬಲೂನುಗಳೆಲ್ಲವೂ ಒಡೆದು ಹೋಗಿದ್ದವು. ಯಾರೂ ಗೆಲ್ಲಲು ಸಾಧ್ಯವಾಗಲಿಲ್ಲ!! ಆಗ ತರಬೇತುದಾರ “ನೀವು ಎಲ್ಲರೂ ನಿಮ್ಮ ನಿಮ್ಮ ಕೈಯಲ್ಲಿರುವ ಬಲೂನುಗಳನ್ನು ಹಾಗೇ ಇಟ್ಟುಕೊಂಡು ನಿಂತಿದ್ದರೆ ಎಲ್ಲರೂ ಗೆಲ್ಲಬಹುದಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ಸ್ವಾರ್ಥ ಪರತೆಯಿಂದ ನಾನೇ ಗೆಲ್ಲಬೇಕು ಎಂಬ ಮನೋಸ್ಥಿತಿಯಿಂದ ಗೆಲ್ಲಲು ಹೋಗಿ ಎಲ್ಲರೂ ಸೋತಿರಿ” ಎಂದಾಗ ಸ್ಪರ್ಧಿಗಳು ಅಯ್ಯೋ ‘ಹೌದಲ್ವಾ ಹಾಗೇ ಮಾಡಬಹುದಿತ್ತು’ ಎಂದು ಅಂದುಕೊಂಡರು.

ಎಷ್ಟೇ ಜೋರಾಗಿ ಆಟವಾಡಿದರೂ ಒಡೆಯದ ಬಲೂನು ಸಣ್ಣ ಸೂಜಿಯ, ಮುಳ್ಳಿನ ಸಂಪರ್ಕಕ್ಕೆ ಬಂದಾಗ ಒಡೆದು ಹೋಗುವುದು ಸಜ್ಜನನ ವ್ಯಕ್ತಿತ್ವವೂ ದುರ್ಜನನೊಡನೆ ಸೇರಿ ಹಾಳಾಗಿ ಹೋಗುವುದೆಂಬ ನೀತಿಯನ್ನು ತಿಳಿಸುವಲ್ಲಿ ಸಫಲವಾಗಿದೆ. ಈ ರೀತಿಯಾಗಿ ಕೇವಲ ವ್ಯಕ್ತಿತ್ವ ವಿಕಸನಕ್ಕಷ್ಟೇ ಅಲ್ಲದೇ ಬೋಧನೆಗೂ ಈ ಬಲೂನು ಸಹಕಾರಿಯಾಗುತ್ತದೆ. ಮೇಷ್ಟ್ರುಗಳು ಚಿಕ್ಕ ಮಕ್ಕಳಿಗೆ ‘ಗಾಳಿಗೆ ತೂಕವಿದೆ’ ಎಂದು ತೋರಿಸಲು ಸಹಾಯ ಮಾಡುವುದೇ ಈ ಬಲೂನು. ತೆಂಗಿನ‌ಕಡ್ಡಿಯ ಎರಡೂ ಬದಿಯಲ್ಲೂ ಒಂದು ತುದಿಗೆ ಗಾಳಿ ತುಂಬಿದ ಬಲೂನು, ಮತ್ತೊಂದು ತುದಿಗೆ ಖಾಲಿ ಬಲೂನು ಕಟ್ಟಿದರೆ ಮಕ್ಕಳಿಗೆ ಮನಮುಟ್ಟುವಂತೆ ಅರ್ಥೈಸಲು ಈ ಬಲೂನು ಸಹಕಾರಿ.

ಇಂತಹ ಬಲೂನು ನನ್ನ ಜೀವನದಲ್ಲೂ ಒಮ್ಮೆ ನಮ್ಮ ಪ್ರಾಂಶುಪಾಲರ ಕೈಯಿಂದ ಬೈಸಿಕೊಳ್ಳುವಂತೆ ಮಾಡಿದ ಘಟನೆಯಿದೆ. ಅದನ್ನು ತಿಳಿಯೋಣ. ನಾವು ಓದುತ್ತಿದ್ದ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ ವಿಷಯಕ್ಕೊಂದರಂತೆ ಸಂಘಗಳು ಇದ್ದವು. ಪ್ರಶಿಕ್ಷಣಾರ್ಥಿಗಳು ತಮಗೆ ಇಷ್ಟದ ವಿಷಯದ ಸಂಘಕ್ಕೆ ಸೇರಬಹುದಿತ್ತು. ನನಗೆ ಗಣಿತ ವಿಷಯದಲ್ಲಿ ಆಸಕ್ತಿ ಇದ್ದ ಕಾರಣ ಗಣಿತ ಸಂಘಕ್ಕೆ ಸೇರಿ ಅದರ ಕಾರ್ಯದರ್ಶಿಯೂ ಆಗಿದ್ದೆ. ಪ್ರತೀ ಸಂಘದ ಉದ್ಘಾಟನೆಗಳು ಸಾಮಾನ್ಯವಾಗಿ ನಡೆದಿದ್ದವು. ನಾನು ಮಾತ್ರ ನಮ್ಮ ಸಂಘದ ಉದ್ಘಾಟನೆಯನ್ನು ವಿಭಿನ್ನವಾಗಿ, ವಿನೂತನವಾಗಿ, ಆಕರ್ಷಕವಾಗಿ ಮಾಡಿ ನಮ್ಮ ಜ್ಯೂನಿಯರ್ ಹುಡುಗಿಯರ ಪಾಲಿಗೆ ಹೀರೋ ಆಗಬೇಕೆಂದುಕೊಂಡೆ!

ನಮ್ಮ ಸಂಘದ ಉದ್ಘಾಟನೆಯ ದಿನವು ಬಂದೇ ಬಿಟ್ಟಿತು. ನಮ್ಮ ಗಣಿತ ಮೇಡಂ ಬಳಿ “ಮೇಡಂ ನಮ್ಮ ಸಂಘವನ್ನು ಸಕತ್ತಾಗಿ ಯಾರೂ ಮಾಡಿರದ ರೀತಿಯಲ್ಲಿ ಉದ್ಘಾಟನೆ ಮಾಡುತ್ತೇನೆ ನೋಡ್ತಾ ಇರಿ” ಎಂದು ಬಡಾಯಿ ಕೊಚ್ಚಿಕೊಂಡೆ. ಅವರಿಗೆ ಯಾವ ರೀತಿ ಆಚರಣೆ ಎಂಬ ರಹಸ್ಯವನ್ನು ಮಾತ್ರ ಹೇಳಲಿಲ್ಲ. ಅವರೂ ಕೇಳಲಿಲ್ಲ.

ಉದ್ಘಾಟನೆ ಮಾಡಬೇಕೆಂದ ಹಿಂದಿನ ದಿನ ಸಂಜೆ 6 ಘಂಟೆಯವರೆಗೂ ಸಭಾಂಗಣವನ್ನು ಇತರೆ ಸದಸ್ಯರ ಜೊತೆ ಸ್ವಚ್ಛಗೊಳಿಸಿ ವೇದಿಕೆಯನ್ನು ಮಾತ್ರ ಅಲಂಕಾರ ಮಾಡದೇ ಮಾರನೇ ದಿನ ಮಾಡಿದರಾಯ್ತು ಎಂದು ಹಾಗೆ ಬಂದೆವು. ವೇದಿಕೆಯ ಅಲಂಕಾರದ ಸೀಕ್ರೆಟ್ ನಮ್ಮ ಸಂಘದವರಿಗೂ ಗೊತ್ತಾಗದೇ, ಸಸ್ಪೆನ್ಸ್ ಆಗಿರಬೇಕೆಂದು ನನ್ನ ನಿಲುವಾಗಿತ್ತು. ಸಂಜೆ ನನ್ನ ಗೆಳೆಯರಾದ ತಿಪ್ಪೇಸ್ವಾಮಿ, ಸುಣಗಾರ್ ರಾಘವೇಂದ್ರ ಜೊತೆ ವೇದಿಕೆಯ ಅಲಂಕಾರಕ್ಕೆ ಬೇಕಾದ ಬಲೂನ್‌ಗಳು, ಬಟ್ಟೆ, ದಾರ, ಪ್ಲಾಸ್ಟಿಕ್ ಮಿಂಚು ಪ್ಯಾಕೆಟ್‌ಗಳನ್ನು ಖರೀದಿಸಿ ಊಟ ಮುಗಿಸಿ ರೂಮಿಗೆ ಬರುವಷ್ಟರಲ್ಲಿ ಸುಮಾರು 9 ಘಂಟೆಯಾಗಿತ್ತು. ಆಮೇಲೆ ನನ್ನ ಐಡಿಯಾವನ್ನು ನನ್ನ ಜೊತೆಗಿದ್ದ ಗೆಳೆಯರಿಗೆ ಮಾತ್ರ ಹೇಳಿದೆ. ನನ್ನ ಐಡಿಯಾ ಹೀಗಿತ್ತು: ತಂದ ಬಟ್ಟೆ ತುಂಡನ್ನು ಚೌಕಾಕಾರವಾಗಿ 5 ಸಮ ಭಾಗಗಳಾಗಿ ಕತ್ತರಿಸಿ, ಪ್ರತಿಯೊಂದರ ಮೇಲೂ ಗ, ಣಿ, ತ, ಸಂ, ಘ ಎಂದು ಬರೆಯಬೇಕು. ಹೀಗೆ ಬರೆದ ಬಟ್ಟೆ ತುಂಡನ್ನು ಬಲೂನಿನೊಳಗೆ ಸೇರಿಸಿ, ಪ್ಲಾಸ್ಟಿಕ್ ಮಿಂಚನ್ನೂ ಅದರಲ್ಲಿ ಹಾಕಿ ಅವನ್ನು ವೇದಿಕೆಯ ಮೇಲೆ ದಾರಕ್ಕೆ ತೂಗು ಹಾಕಿ ಕಟ್ಟಬೇಕು. ಆಗಮಿಸಿದ ಅತಿಥಿಗಳಿಂದ ಪ್ರತಿ ಬಲೂನನ್ನು ಊದುಬತ್ತಿಯಿಂದ ಮುಟ್ಟಿಸಿ ಹೊಡೆಸಬೇಕು. ಆಗ ಪ್ರತೀ ಬಲೂನುಗಳ ಒಳಗಿರುವ ಬಟ್ಟೆಯ ಮೇಲಿರುವ ಅಕ್ಷರಗಳು ಕಾಣುತ್ತವೆ. ಹೀಗೆ ಎಲ್ಲಾ ಬಲೂನ್‌ಗಳನ್ನು ಒಡೆದಾಗ ಗಣಿತ ಸಂಘ ಎಂದು ಕಾಣುತ್ತದೆ! ನನ್ನ ಐಡಿಯಾವನ್ನು ನನ್ನ ಗೆಳೆಯರು ಒಪ್ಪಿದರು. ಐಡಿಯಾವನ್ನು ಕಾರ್ಯಗತಗೊಳಿಸಲು ಅಣಿಯಾದೆವು. ಆದರೆ ನಾವೆಷ್ಟೇ ಪ್ರಯತ್ನಿಸಿದರೂ ಬಟ್ಟೆಯನ್ನು ಬಲೂನಿನೊಳಗೆ ತೂರಿಸಲು ಆಗಲಿಲ್ಲ! ಏನೇನೋ ಪ್ರಯತ್ನ ಪಟ್ಟು ಬಟ್ಟೆಯನ್ನು ಬಲೂನಿನೊಳಗೆ ಸೇರಿಸಿದೆವು. ಆದರೆ ಬಲೂನ್ ಒಡೆದ ಕೂಡಲೆ ಬಟ್ಟೆ ಮಡಿಚಿದ ಸ್ಥಿತಿಯಲ್ಲಿರುತ್ತಿತ್ತು! ಅಂದುಕೊಂಡಂತೆ ಅಕ್ಷರ ಕಾಣುತ್ತಲೇ ಇರಲಿಲ್ಲ! ಇದನ್ನು ಸರಿ ಮಾಡಲು ಬಹಳ ಪ್ರಯತ್ನಿಸುತ್ತಾ ಸಮಯ ಕಳೆದು ಹೋದದ್ದು ತಿಳಿಯಲೇ ಇಲ್ಲ. ಅದಾಗಲೇ ಬೆಳಗಿನ ಜಾವ ಮೂರಾಗಿತ್ತು!! ನಿದ್ದೆ ಮಂಪರು ಬೇರೆ, ನನ್ನ ಯೋಜನೆ ಕೈಗೊಡದಿದ್ದುದು ಬೇರೆ. ಯಾಕಾದ್ರೂ ಕಾರ್ಯದರ್ಶಿ ಆದೆನಪ್ಪಾ ಅನಿಸ್ತು. ಆಗ ‘ತಿಪ್ಪು’ ಒಂದು ಐಡಿಯಾ ಕೊಟ್ಟ. ಅಕ್ಷರಗಳಿರುವ ಬಟ್ಟೆಯನ್ನು ಗೋಡೆಗೆ ಅಂಟಿಸಿ, ಅದರ ಮೇಲೆ ಬಲೂನು ಕಟ್ಟುವುದು! ನಾವು ಇದನ್ನೇ ಅಖೈರುಗೊಳಿಸಿ ಮಲಗಿದೆವು.

ಮಾರನೇ ದಿನ ಮಾರ್ನಿಂಗ್ ಕ್ಲಾಸ್ ಬೇರೆ. ಬೆಳಿಗ್ಗೆ 7 ಕ್ಕೆ ಕಾಲೇಜಿಗೆ ಹೋಗಿ ಇದರ ವ್ಯವಸ್ಥೆ ಮಾಡಿದೆವು. ಕಾರ್ಯಕ್ರಮ ಶುರು ಆಯಿತು. ವೇದಿಕೆಯ ಮೇಲಿದ್ದ ನಮ್ಮ ಪ್ರಾಂಶುಪಾಲರ ಕೈಲಿ ಊದು ಬತ್ತಿ ಕೊಟ್ಟು ಬಲೂನು ಹೊಡೆಯಲು ನಿರೂಪಕನಾಗಿ ನಾನು ತಿಳಿಸಿದೆನು. ಅವರು ಆ ರೀತಿ ಬಲೂನ್ ಹೊಡೆದದ್ದೇ ತಡ, ಅದರಲ್ಲಿರುವ ಮಿಂಚೆಲ್ಲಾ ಅವರ ಮೇಲೆ ಬಿದ್ದಿತು. ಹೀಗೆ ನಮ್ಮ ಗಣಿತ ಮೇಡಂ ಮಾಡಿದಾಗಲೂ ಆಯಿತು. ಎಷ್ಟೇ ಉಜ್ಜಿದರೂ ಅಳಿಸಲಾಗದ ಮಿಂಚು ಬಿದ್ದ ಕೋಪ ಬೇರೆ, ಬಲೂನ್ ಒಡೆದು ನಾವು ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ ಎಂಬ ನಮ್ಮ ಪ್ರಿನ್ಸಿಪಾಲ್ ಮನದ ಭಾವ ಬೇರೆ! ತಕ್ಷಣ ಅವರು ಕೋಪೋದ್ರಿಕ್ತರಾಗಿ ‘ಸಾಕು ನಿಲ್ಲಿಸಿ ನಿಮ್ಮ ಹುಚ್ಚಾಟ’ ಎಂದು ಕೂಗಿದರು. ದೂರ್ವಾಸ ಮುನಿಯಂತಿದ್ದ ಅವರ ಕೋಪಕ್ಕೆ ಹೆದರಿ, ಅವರ ಆಜ್ಞೆಯಂತೆ ಬಲೂನುಗಳನ್ನು ಹೊಡೆಯದೇ ಹಾಗೆ ಇಳಿಸಿದೆವು. ಬಯಸಿದ್ದೊಂದು, ಆಗಿದ್ದೇ ಮತ್ತೊಂದು.’ ಇಂಗು ತಿಂದ ಮಂಗನಂತಾದ ಪರಿಸ್ಥಿತಿ, ನನ್ನದಾಯಿತು. ಎಲ್ಲರ ಎದುರಿಗೆ ಸೃಜನಶೀಲವಾಗಿ ಉದ್ಘಾಟಿಸಿ ಹೀರೋ ಆಗಬೇಕೆಂದುಕೊಂಡಿದ್ದ ನಾನು ಜೀರೋ ಆಗಿದ್ದು ಮಾತ್ರ ನನಗೆ ವಿಪರೀತ ನೋವು ತಂದಿತು. ಈ ಘಟನೆಯು ನನಗೆ ಬಲೂನು ನೋಡಿದಾಗಲೆಲ್ಲ ನೆನಪಾಗುತ್ತದೆ. ಬಲೂನ್ ಜೊತೆ ನಿಮಗೂ ಕೆಲವೊಂದು ಭಾವನಾತ್ಮಕ ಘಟನೆಗಳಿರಬಹುದು. ನಿಮ್ಮನಿಸಿಕೆಯ ಮೂಲಕ ಹಂಚಿಕೊಳ್ಳಬಹುದಲ್ವಾ?!

About The Author

ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ