ಫಸ್ಟ್ ಬರುವ ನಿರೀಕ್ಷೆಯಲ್ಲಿ ಶಾಲೆ-ಕಾಲೇಜುಗಳೇ ಮುಗಿದವು. ಏಳು, ಎಂಟಕ್ಕೆ ಏಳೇಳುತ್ತ ಹಗಲುಗಳೇ ಸವೆದವು. ಕೊನೆಯ ಬೆಂಚಿನ ಹುಡುಗಿಯ ಬದುಕಿನಲ್ಲಿ ಹೊಸ ವರ್ಷ, ಗಂಡ, ಮಕ್ಕಳೂ ಬಂದಿದ್ದಾಯಿತು. ಬೈಸಿಕೊಳ್ಳುತ್ತಲೇ ಅಮ್ಮ ಎದ್ದು ಹೋದಳು. ಕೆಲಸ ಮಾಡಿಸಿಕೊಳ್ಳದೆಯೇ ಅಪ್ಪ ಹೊರಟು ಹೋದ. ಬಂಕ್ ಮಾಡುತ್ತಿರುವಾಗಲೇ ಕಾಲೇಜಿನ ಕೊನೆಯ ದಿನ ತಲುಪಿದೆವು. ಹೊಸ ಕ್ಯಾಲೆಂಡರಿನ ಮೊದಲ ಪುಟ ತಿರುವುವ ಮೊದಲೇ ಗಂಡ/ಹೆಂಡತಿಯ ಜೊತೆ ಆಗಲೇ ಮೂರು ಬಾರಿ ಜಗಳವಾಡಿಯಾಗಿದೆ. ಅದೇ ಸೋಮಾರಿತನ, ಅದೇ ಅಶ್ರದ್ಧೆ, ಅದೇ ಸುಮ್ಮನೆ ವ್ಯಯವಾಗುವ ಮುನ್ನೂರರವತೈದು ದಿನಗಳ ಮತ್ತೊಂದು ಆವರಣಕ್ಕೆ ‘ಹೊಸ ವರ್ಷ’ ಎನ್ನುವ ಹೆಸರು ಕೊಟ್ಟು ಕುಣಿಯುತ್ತ, ಕುಡಿಯುತ್ತ, ಕೇಕೆ ಹಾಕುತ್ತ ಪ್ರವೇಶಿಸಿದೆವು!
ವಿನಾಯಕ ಅರಳಸುರಳಿ ಬರೆಯುವ ಅಂಕಣ “ಆಕಾಶ ಕಿಟಕಿ”ಯ ಬರಹ ನಿಮ್ಮ ಓದಿಗೆ
ಒಂದಷ್ಟು ಹೊರಟು ನಿಂತ ಸಂಬಂಧಗಳು, ಇನ್ನೊಂದಷ್ಟು ಬಾಗಿಲಿನಲ್ಲಿ ನಿಂತ ಸ್ನೇಹಗಳು, ಬಿಟ್ಟೇ ಬಿಟ್ಟೆನೆಂದುಕೊಂಡ ಚಾಳಿಗಳು, ಸರಿ-ತಪ್ಪುಗಳೆರೆಡರಲ್ಲೂ ಕಾಣಿಸಿಕೊಂಡ ಸ್ವಭಾವಗಳು.. 2025 ಶುರುವಾಗಿದ್ದು ಹೀಗೆ. ಈಗ ಅದು ಮುಗಿಯುತ್ತಿರುವ ಹೊತ್ತಿನಲ್ಲಿ ಒಂದಷ್ಟಕ್ಕೆ ಸ್ಪಷ್ಟಣೆಗಳು ಸಿಕ್ಕಿವೆ. ಇನ್ನೊಂದಷ್ಟು ಹಾಗೇ ಉಳಿದುಕೊಂಡಿವೆ. ಮತ್ತೊಂದಷ್ಟು ಪ್ರಶ್ನೆಗಳ ಹೊಚ್ಚ ಹೊಸ ಪತ್ರಿಕೆ ಈಗಷ್ಟೇ ಅಚ್ಚಾಗಿ ಬಂದಿದೆ. ಒಟ್ಟಾರೆ 2025 ಎನ್ನುವ ಗೊಂದಲದ ವರ್ಷ ಎಂದಿನಂತೆ, ಅತ್ಯಂತ ವೇಗವಾಗಿ ಮುಗಿದಿದೆ.
2025 ಕೊಟ್ಟ ಕ್ಲಾರಿಟಿಗಳು ಕೆಲವು. ಉಳಿಸಿದ ಪ್ರಶ್ನೆಗಳು ಹಲವು. ಎಂದಿನಂತೆ ಒಳ್ಳೆಯ ಅಭ್ಯಾಸಗಳನ್ನು ನಾಳೆ ನಾಳೆ ಎಂದು ಮುಂದೂಡುತ್ತಲೇ ಈ ವರ್ಷ ಕಳೆಯಿತು. ಈ ಹನ್ನೆರಡು ತಿಂಗಳ ಅತ್ಯಮೂಲ್ಯ ಬಿಡುವುಗಳನ್ನು ನುಂಗಿಕೊಂಡಿದ್ದು ಎಂದಿನ ಮೊಬೈಲು. ಅದರಲ್ಲಿ ಬರುವ ರೀಲ್ಸುಗಳಿಗೆ ಕೆರಳುತ್ತ, ರಾಜಕೀಯಕ್ಕೆ ಬೈಯುತ್ತ, ತಮಾಷೆಗಳಿಗೆ ನಗುತ್ತ, ಫ್ಯಾನ್ ವಾರಿನಲ್ಲಿ ನಮಗೆ ಸಂಬಂಧವೇ ಇಲ್ಲದ ಯಾರದೋ ಪರ ಕತ್ತಿ ಬೀಸುತ್ತ, ಒಟ್ಟಾರೆ ಆ ಪ್ರಪಂಚದ ಮೂಲೆಯ ಯಾವುದೋ ಒಂದು ಹುಲ್ಲಿನ ಕಡ್ಡಿಯಾಗಿಯೇ ವೇಳೆ ಸರಿಯಿತು. ಹಗಲಾಯಿತು. ರಾತ್ರಿಯಾಯಿತು. ತಡ ರಾತ್ರಿ ಮೊಬೈಲು ನೋಡುತ್ತ ನಿದ್ರೆಗೆ ಜಾರಿದ್ದೇ ಗೊತ್ತಾಗಲಿಲ್ಲ. ಕಣ್ತೆರೆದು ನೋಡಿದರೆ ಆಗಲೇ ಹೊಸ ವರ್ಷ!

ಶಾಲೆಗೆ ಹೋಗುತ್ತಿದ್ದ ಮೊದ ಮೊದಲ ದಿನಗಳಲ್ಲಿ ನಮ್ಮ ಕೇರಿಯ ಕಚ್ಚಾ ರಸ್ತೆ ಹಾಗೂ ಊರಿನ ಮುಖ್ಯ ರಸ್ತೆಗಳು ಸೇರುವ ಸರ್ಕಲ್‌ನಲ್ಲಿ ಹೊಸ ವರ್ಷದ ಮೊದಲ ದಿನ ‘ಹೊಸ ವರ್ಷದ ಶುಭಾಶಯಗಳು 1998’ ಎಂದು ಬರೆದ ದಪ್ಪನೆಯ ಬರಹ ಕಂಡಿತ್ತು. ಜನವರಿಯ ಚಳಿಯಲ್ಲಿ, ಇಬ್ಬನಿಯ ಮಳೆಯಲ್ಲಿ ತೋಯುತ್ತ ನಿಂತಿದ್ದ ಆ ಚಾಕ್ ಪೀಸ್ ಅಕ್ಷರಗಳನ್ನು ನೋಡಿದಾಗ ಏನೋ ಸಂಭ್ರಮವೆನಿಸಿತ್ತು. ಅದೇನು ಎಂದು ಕೇಳಿದ್ದಕ್ಕೆ ಜೊತೆಯಲ್ಲಿದ್ದ ಗೆಳೆಯ ಇವತ್ತಿನಿಂದ ಎಲ್ಲವೂ ಬದಲಾಗುತ್ತದೆ ಎಂದಿದ್ದ. ಅಂಥಾದ್ದೇನು ಬದಲಾಗುತ್ತದೆಂದು ನಾನು ಅರ್ಧ ಕುತೂಹಲ ಹಾಗೂ ಇನ್ನರ್ಧ ಭಯದಿಂದ ಕಾದಿದ್ದೆ. ಶಾಲೆಗೆ ಹೊಸ ಮೇಷ್ಟರು ಬರಬಹುದೇ? ಬಂದವರು ಹೊಡೆಯುವವರಾಗಿರಬಹುದೇ? ಹೊಸ ಹೊಸ ಪ್ರಶ್ನೆಗಳ ಹೊಸ ಪಠ್ಯ ಪುಸ್ತಕ ಬರಬಹುದೇ? ಊರಿನ ಸರ್ಕಾರಿ ಆಸ್ಪತ್ರೆಗೆ ಹೊಸ ಡಾಕ್ಟರು ಬಂದು ನಮಗೆಲ್ಲ ಮತ್ತೆ ಹೊಸದಾಗಿ ಇಂಜಕ್ಷನ್ ಕೊಡುತ್ತಾರಂತೆ ಎಂಬ ಸುದ್ದಿ ಹಬ್ಬಿ ಕುಳಿತಲ್ಲೇ ಗಡಗಡ ನಡುಗಿದ್ದೆವು. ನನ್ನ ಭಯಸ್ಥ ಗುಣದ ಪರಿಚಯವಿದ್ದ ಅಕ್ಕ ಸಮುದ್ರ ಊರಿಗೆ ಬರುತ್ತೆ ಅಂತೇನೇನೋ ಹೆದರಿಸಿದ್ದಳು. ಅದು ತೀರ್ಥಹಳ್ಳಿ ರೋಡಿಂದ ಬರುತ್ತ ಅಥವಾ ಹೊಸನಗರ ದಾರಿಯಿಂದ ಬರುತ್ತ ಎಂದು ಎರಡೂ ದಿಕ್ಕಿಗೆ ಭೀತನಾಗಿ ಇಣುಕಿದ್ದೆ. ಅಪ್ಪ ಉಪೇಂದ್ರಣ್ಣನ ಅಂಗಡಿಗೆ ಹೊಸ ಕಂಬರ್ಕಟ್ಟು ಬರುತ್ತೆ ಎಂದಿದ್ದ. ಅದರ ದಾರಿಯನ್ನೂ ಕಾದಿದ್ದಾಯಿತು.
ಯಾವುದೂ ಬರಲೇ ಇಲ್ಲ.
ಅದೇ ಮೇಷ್ಟರು ಬಂದು ಅಣ್ಣನು ಮಾಡಿದ ಗಾಳಿಪಟ ಎಂದು ಪದ್ಯ ಹಾಡಿಸಿದರು. ಅದೇ ಕಂಬಾರ್ಕಟ್ಟು ರುಪಾಯಿಗೆ ನಾಲ್ಕರಂತೆ ಬಿಕರಿಯಾಯಿತು. ತೀರ್ಥಹಳ್ಳಿ-ಹೊಸನಗರದ ರಸ್ತೆಯಲ್ಲಿ ನವ ಮಾಸದ ಬಸುರಿಯಂಥಾ ಗುರು ಶಕ್ತಿ ಬಸ್ಸು ಬಂತೇ ಹೊರತು ಸಮುದ್ರ ಬರಲಿಲ್ಲ. ಬಸ್ಸು-ಲಾರಿಗಳು ಓಡಾಡೀ ಓಡಾಡೀ, ನಾವೆಲ್ಲ ನಡೆದೂ ನಡೆದೂ ‘ಹೊಸ ವರ್ಷದ ಶುಭಾಶಯಗಳು’ ಬರಹ ಅಳಿಸಿ ಹೋಯಿತೇ ಹೊರತು ಮತ್ತೇನೂ ಬದಲಾಗಲೇ ಇಲ್ಲ.
‘ಹೊಸ ವರ್ಷ’ ಅಂದರೇನು ಎಂಬುದು ಅರ್ಥವಾದ ದಿನದಿಂದ ಇವತ್ತಿನ ತನಕ ನಾವೆಲ್ಲ ಮಾಡಿಕೊಂಡ ರೆಸ಼ೆಲ್ಯೂಷನ್ ಗಳನ್ನೆಲ್ಲ ಸುಮ್ಮನೆ ಹರಡಿಕೊಂಡು ಕೂರಬೇಕು ಒಮ್ಮೆ. ನಾಳೆಯಿಂದ ಬೆಳಗ್ಗೆ ಬೇಗ ಎದ್ದು ಓದುತ್ತೇನೆ, ಇನ್ಮುಂದೆ ಕೊನೆಯ ಬೆಂಚಿನ ಹುಡುಗಿಗೆ ಲೈನ್ ಹೊಡೆಯುವುದಿಲ್ಲ, ಕ್ಲಾಸಿಗೆ ಫಸ್ಟ್ ಬರುತ್ತೇನೆ, ಅಮ್ಮನಿಗೆ ಬೈಯುವುದಿಲ್ಲ, ಅಪ್ಪನಿಗೆ ಕೆಲಸ ಮಾಡಿಕೊಡುತ್ತೇನೆ, ಕಾಲೇಜಿಗೆ ಬಂಕ್ ಹಾಕುವುದಿಲ್ಲ, ಶ್ರದ್ಧೆಯಿಂದ ದುಡಿದು ಪ್ರಮೋಷನ್ ಗಿಟ್ಟಿಸಿಯೇ ಗಿಟ್ಟಿಸುತ್ತೇನೆ, ಹೆಂಡತಿಯ ಜೊತೆ ತಾಳ್ಮೆಯಿಂದ ವರ್ತಿಸುತ್ತೇನೆ, ಗಂಡನನ್ನು ಯಾವುದಕ್ಕೂ ಪೀಡಿಸುವುದಿಲ್ಲ, ಉಳಿತಾಯ ಮಾಡುತ್ತೇವೆ, ಕುಡಿಯುವುದಿಲ್ಲ…
ಹಳೆಯ ವರ್ಷವೊಂದು ಮುಗಿದು ಹೋಗಿ ಮುನ್ನೂರ ಅರವತೈದು ದಿನಗಳ ಹೊಚ್ಚ ಹೊಸ ಕ್ಯಾಲೆಂಡರ್ ಗೋಡೆಯೇರಿದ ಹೊತ್ತಿನಲ್ಲಿ ನಮಗೆ ನಾವೇ ಕೊಟ್ಟುಕೊಂಡ ಆಶ್ವಾಸನೆಗಳು ಇವು. ಫಸ್ಟ್ ಬರುವ ನಿರೀಕ್ಷೆಯಲ್ಲಿ ಶಾಲೆ-ಕಾಲೇಜುಗಳೇ ಮುಗಿದವು. ಏಳು, ಎಂಟಕ್ಕೆ ಏಳೇಳುತ್ತ ಹಗಲುಗಳೇ ಸವೆದವು. ಕೊನೆಯ ಬೆಂಚಿನ ಹುಡುಗಿಯ ಬದುಕಿನಲ್ಲಿ ಹೊಸ ವರ್ಷ, ಗಂಡ, ಮಕ್ಕಳೂ ಬಂದಿದ್ದಾಯಿತು. ಬೈಸಿಕೊಳ್ಳುತ್ತಲೇ ಅಮ್ಮ ಎದ್ದು ಹೋದಳು. ಕೆಲಸ ಮಾಡಿಸಿಕೊಳ್ಳದೆಯೇ ಅಪ್ಪ ಹೊರಟು ಹೋದ. ಬಂಕ್ ಮಾಡುತ್ತಿರುವಾಗಲೇ ಕಾಲೇಜಿನ ಕೊನೆಯ ದಿನ ತಲುಪಿದೆವು. ಹೊಸ ಕ್ಯಾಲೆಂಡರಿನ ಮೊದಲ ಪುಟ ತಿರುವುವ ಮೊದಲೇ ಗಂಡ/ಹೆಂಡತಿಯ ಜೊತೆ ಆಗಲೇ ಮೂರು ಬಾರಿ ಜಗಳವಾಡಿಯಾಗಿದೆ. ಅದೇ ಸೋಮಾರಿತನ, ಅದೇ ಅಶ್ರದ್ಧೆ, ಅದೇ ಸುಮ್ಮನೆ ವ್ಯಯವಾಗುವ ಮುನ್ನೂರರವತೈದು ದಿನಗಳ ಮತ್ತೊಂದು ಆವರಣಕ್ಕೆ ‘ಹೊಸ ವರ್ಷ’ ಎನ್ನುವ ಹೆಸರು ಕೊಟ್ಟು ಕುಣಿಯುತ್ತ, ಕುಡಿಯುತ್ತ, ಕೇಕೆ ಹಾಕುತ್ತ ಪ್ರವೇಶಿಸಿದೆವು!
ಮನಸ್ಸಿನ ಗೋಡೆಯಲ್ಲಿ ಹಳೆಯ ಕ್ಯಾಲೆಂಡರನ್ನು ಕಿತ್ತೆಸೆಯದ ಹೊರತು ಬದುಕಿಗೆ ಯಾವ ಹೊಸ ವರ್ಷವೂ ಬರುವುದಿಲ್ಲ. 2025ರಲ್ಲಿ ಸಹೋದ್ಯೋಗಿಯ ಏಳಿಗೆಗೆ ಕರುಬುತ್ತಿದ್ದವನು, 2020ರಲ್ಲಿ ಇಷ್ಟವಿಲ್ಲದವರು ಮಾಡಿದ ಎಲ್ಲ ಕೆಲಸವನ್ನೂ ಮೊದಲ ನೋಟದಲ್ಲೇ ವಿರೋಧಿಸುತ್ತಿದ್ದವನು, 2018ರಲ್ಲಿ ರಸ್ತೆಯ ಮೇಲೆ ಉಗುಳಿ ನಡೆಯುತ್ತಿದ್ದವನು, 2015ರಲ್ಲಿ ಒನ್ ವೇಯಲ್ಲಿ ಗಾಡಿ ನುಗ್ಗಿಸುತ್ತಿದ್ದವನು, 2013ರಲ್ಲಿ ಎಲ್ಲರಿಗೂ ಹಿಂದಿನಿಂದ ಬೈದು ಎದುರಿಗೆ ಆತ್ಮೀಯತೆ ನಟಿಸುತ್ತಿದ್ದವನು ಇಂದು, ಈಗ, 2026ರಲ್ಲೂ ಹಾಗೇ ಮಾಡುತ್ತೇನೆಂದರೆ, ಕಂಗ್ರಾಜ್ಯುಲೇಷನ್ಸ್! ನನ್ನ ಪಾಲಿಗೆ ಮುಂದಕ್ಕೆ ಸರಿದಿದ್ದು ಕಾಲ ಮಾತ್ರ. ಬದುಕಲ್ಲ!

ನಿಜ… ಬದುಕನ್ನು ಟೈಮ್ ಟೇಬಲ್ ಹಾಕಿಕೊಂಡು, ಸೂತ್ರ ಅನ್ವಯಿಸಿಕೊಂಡು, ಆದರ್ಶಗಳನ್ನು ಹೇರಿಕೊಂಡು ಬದುಕಲಾಗುವುದಲ್ಲ. ಆದರೆ ಸೃಷ್ಟಿ ಮತ್ತದೇ ಜನವರಿ, ಜುಲೈ, ಡಿಸೆಂಬರ್‌ಗಳನ್ನು ತಂದೆಸೆಯುವುದು ಅಂದಿನ ‘ನಾನು’ವನ್ನು ಇಂದಿನ ‘ನಾನು’ವಿನ ಜೊತೆ ಹೋಲಿಸಿ ನೋಡಲೆಂದು. ಕಳೆದ ಒಂದೊಂದು ದಿನವೂ ಕಾಲವೆಂಬ ಮಾಷ್ಟ್ರು ತೆಗೆದುಕೊಂಡ ತರಗತಿಯೇ. 2025 ಎಂಬ ಹೆಡ್ ಮಾಸ್ತರ ಮುನ್ನೂರ ಅರವತೈದು ದಿನಗಳ ತನ್ನ ತರಗತಿಯಲ್ಲಿ ದ್ವೇಷ, ಯುದ್ಧ, ಕಳ್ಳತನ, ಶಿಸ್ತು, ಸಂಸ್ಕಾರ, ಪರಿಶ್ರಮ, ಸಮಚಿತ್ತತೆ, ಪ್ರೀತಿ, ಸೋಲು, ಗೆಲುವು ಎಂಬ ಎಷ್ಟೆಲ್ಲ ಪಾಠ ಮಾಡಿ ಹೋಗಿದ್ದಾನೆ! ಒಂದನೇ ತರಗತಿಯಲ್ಲಿ ಕಲಿತ ಅಆಇಈ ಯ ಅನುಭವದಿಂದ ಎರಡನೇ ತರಗತಿಯಲ್ಲಿ ಪದಗಳನ್ನು ಜೋಡಿಸಿದಂತೆ, ಪಿಯುಸಿಯಲ್ಲಿ ಕಲಿತ ಫಾರ್ಮುಲಾವನ್ನು ಅನ್ವಯಿಸಿ ಇಂಜಿನಿಯರಿಂಗ್ ನಲ್ಲಿ ಲೆಕ್ಕಗಳನ್ನು ಬಿಡಿಸಿದಂತೆ, ಬಿಕಾಂನಲ್ಲಿ ಕಲಿತ ಬ್ಯಾಲೆನ್ಸ್ ಶೀಟನ್ನು ಈಗ ಉದ್ಯೋಗ ಮಾಡುವಾಗ ಕಂಪನಿಯ ಅಕೌಂಟ್ಸಿಗೆ ಬಳಸಿದಂತೆ 2025 ಕಲಿಸಿದ ಅಆಇಈ, ಫಾರ್ಮುಲ, ಬ್ಯಾಲೆನ್ಸ್ ಶೀಟುಗಳ ಆಧಾರದ ಮೇಲೆ 2026ನ್ನು ಬಿಡಿಸುತ್ತ, ಜೋಡಿಸುತ್ತ, ಕಟ್ಟುತ್ತ ಹೋದರಷ್ಟೇ ನಿಜದಲ್ಲೂ ತೇರ್ಗಡೆಯಾದಂತೆ.
ಇಲ್ಲವಾದರೆ ಮಡಚಿ ಡಸ್ಟ್ ಬಿನ್ನಿಗೆಸೆದ ಕ್ಯಾಲೆಂಡರಿಗೂ, ಮುಗಿದ 2025ಕ್ಕೂ ಏನು ವ್ಯತ್ಯಾಸವುಳಿದೀತು?

ವಿನಾಯಕ ಅರಳಸುರಳಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೋಕಿನ ಅರಳಸುರಳಿ ಗ್ರಾಮದವರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಬಿಕಾಂ ಪದವಿ ಪಡೆದಿದ್ದು ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟ್ಸ್ ಹುದ್ದೆ ನಿರ್ವಹಿಸುತ್ತಿದ್ದಾರೆ. ಸಣ್ಣ ಕಥೆ, ಲಲಿತ ಪ್ರಬಂಧ ಹಾಗೂ ಕವಿತೆಗಳನ್ನು ಬರೆದಿದ್ದು ‘ನವಿಲುಗರಿ ಮರಿ ಹಾಕಿದೆ’ ಹೆಸರಿನ ಲಲಿತ ಪ್ರಬಂಧ ಸಂಕಲನ ಹಾಗೂ ‘ಮರ ಹತ್ತದ ಮೀನು’ ಕಥಾ ಸಂಕಲನಗಳು ಪ್ರಕಟವಾಗಿವೆ.
