ಆ ಕಾಲದ ಓದುವ ವರ್ಣನೆ ಚನ್ನಾಗಿ ಮೂಡಿಬಂದಿದೆ. ಶಾಲೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಲೇ ಶರಾವತಿ ದಾಟುವ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡರೂ ಸಂಗೀತವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಕಲಿತದ್ದು ನೋಡಿದರೆ ಸಂಗೀತದ ಮೇಲೆ ಇವರಿಗಿದ್ದ ಆಸಕ್ತಿಯ ಅರಿವಾಗುತ್ತದೆ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಖ್ಯಾತ ಕವಿ ವೀಸಿ, ತಮ್ಮ ಶಿಕ್ಷಕರುಗಳು, ಆ ಕಾಲದ ಕಾಲೇಜಿನ ಬದುಕು ಎಲ್ಲವೂ ಒಂದು ನೆನಪಿನ ಸುರುಳಿಯಂತೆ ಪ್ರಬಂಧದೋಪಾದಿಯಲ್ಲಿ ಹರಿದು ಬಂದಿದೆ. ಅದರಲ್ಲಿಯೂ ಇವರ ಮದುವೆಯ ಸ್ವಾರಸ್ಯ ತಪ್ಪದೇ ಓದಬೇಕು.
ಜಿ. ಎಸ್. ಹೆಗಡೆ ಜೀವನಾಧಾರಿತ “ಜೀವನ ಪಥ ನೆನಪಿನ ರಥ” ಪುಸ್ತಕದ ಕುರಿತು ನಾರಾಯಣ ಯಾಜಿ, ಸಾಲೇಬೈಲು ಬರಹ
ಸಪ್ತಕದ ಶ್ರೀ ಜಿ. ಎಸ್. ಹೆಗಡೆಯವರು ಹಿಂದುಸ್ತಾನಿ ಸಂಗೀತ ಕ್ಷೇತ್ರದ ಮತ್ತು ಸಾಂಸ್ಕೃತಿಕ ಸಂಘಟಕರಾಗಿ ರಾಜ್ಯದಾದ್ಯಂತ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಬ್ಯಾಂಕಿನ ಉದ್ಯೋಗಿಯಾಗಿ ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇವರು ತಮ್ಮ ಆಸಕ್ತಿಯಾದ ಸಂಗೀತಕ್ಕಾಗಿ ಪದೋನ್ನತಿಯನ್ನು ಬಯಸದೇ ಶಾಸ್ತ್ರೀಯ ಸಂಗೀತ ಮತ್ತು ಯಕ್ಷಗಾನದಲ್ಲಿ ತೊಡಗಿಕೊಂಡವರು. ಅವರ ಪತ್ನಿ ಶ್ರೀಮತಿ ಗೀತಾ ಹೆಗಡೆ ಹಿಂದುಸ್ಥಾನಿ ಸಂಗೀತದ ವಿದುಷಿ. ಅನೇಕ ಶಿಷ್ಯರನ್ನು ತಯಾರು ಮಾಡಿ ಅವರೆಲ್ಲರೂ ಇಂದು ಹಿಂದುಸ್ಥಾನಿ ಸಂಗೀತ ಕ್ಷೇತ್ರದಲ್ಲಿ ತಮ್ಮ ಪ್ರತಿಭಾನ್ವಿತ ಗಾಯಕರಾಗಿ ಗುರುತಿಸಿಕೊಂಡಿದ್ದಾರೆ. ಅವರ ಮಗ ಧನಂಜಯ ಹೆಗಡೆ ಸಹ ಹಿಂದುಸ್ಥಾನಿ ಸಂಗೀತದಲ್ಲಿ ದೊಡ್ಡ ಹೆಸರು ಮಾಡುತ್ತಿದ್ದಾರೆ. Outlook Magazine ಇವರನ್ನು ಭಾರತದ ಯುವಸಂಗೀತಗಾರ ಎಂದು ಗುರುತಿಸಿದೆ. ಹೆಗಡೆಯವರು ತಮ್ಮ ಉದ್ಯೋಗದ ನಿಮಿತ್ತ ಅನೇಕ ಭಾಗದಲ್ಲಿ ಓಡಾಡುತ್ತಾ ಕೊನೆಗೆ ಬೆಂಗಳೂರಿನಲ್ಲಿ ತಮ್ಮ ನೆಲೆ ಕಂಡುಕೊಂಡರೂ ಅವರು ತಾವು ಹೋದ ಪ್ರದೇಶದ ನೆನಪನ್ನು ಮರೆಯಲಿಲ್ಲ. ವರ್ಗವಾಗಿ ಹೋದಲ್ಲೆಲ್ಲಾ ಸಂಗೀತವನ್ನು ಸಂಘಟಿಸುತ್ತಾ ಹೋದರು. ಹೊನ್ನಾವರ ತಾಲೂಕಿನ ಕಾಸರಕೋಡು ಎನ್ನುವಲ್ಲಿಯ ಅಣ್ಣುಹಿತ್ತಲು ಎನ್ನುವ ಪುಟ್ಟ ಮಜರೆಯಿಂದ ಬೆಂಗಳೂರಿನವರೆಗಿನ ಇವರ ಬದುಕಿನ ಯಾತ್ರೆಯಲ್ಲಿ ಸಂಗೀತ ಇವರ ಸಂಗಾತಿಯಾಗಿದೆ. ಈ ಹುಚ್ಚು ಇವರಿಗೆ ಬಾಳಸಂಗಾತಿಯನ್ನೂ ದೊರಕಿಸಿಕೊಟ್ಟಿದೆ.
ನಿರಂತರವಾಗಿ ಕರ್ನಾಟಕ ಮತ್ತು ಹೊರರಾಜ್ಯಗಳಲ್ಲಿ ಶಾಸ್ತ್ರೀಯ ಸಂಗೀತವನ್ನು ಸಂಘಟಿಸುತ್ತಾ ತಿರುಗಾಡುತ್ತಿರುವವರಿಗೆ ಕೋವಿಡ್ ಕಾರಣದಿಂದ ಒಂದುವರೆ ವರ್ಷ ಮನೆಯಲ್ಲಿಯೇ ಇರಬೇಕಾಯಿತು. ಈ ಹೊತ್ತಿನಲ್ಲಿ ತಾವು ಹೋದಕಡೆಯಲ್ಲಾ ನಡೆಸಿದ ಸಂಗೀತದ ಯಕ್ಷಗಾನದ ನೆನಪನ್ನು ಚಿತ್ರಗಳಲ್ಲಿ ನೋಡುವಾಗ ಪ್ರತೀ ಭಾವಚಿತ್ರದೊಂದಿಗಿನ ತಮ್ಮ ಬದುಕಿನ ಭಾವಾನುಸಂಧಾನದ ನೆನಪಾಯಿತು. ಅದರೊಟ್ಟಿಗೆ ತಾವು ಬೆಳೆದುಬಂದ ತಮ್ಮೂರಿನ ಪರಿಸರ ಜನ ತಮ್ಮ ಕುಟುಂಬ ಇವೆಲ್ಲವೂ ಸೇರಿ ಅವೆಲ್ಲವೂ ಬರಹರೂಪದಲ್ಲಿ ಹೊರಬಂದಿದೆ. ಅದು ಇದೀಗ “ಜೀವನ ಪಥ ನೆನಪಿನ ರಥ” ಎನ್ನುವ ಪುಸ್ತಕವಾಗಿ “ಸುಶ್ರಾವ್ಯ” ಪ್ರಕಾಶನದಿಂದ ಪ್ರಕಟವಾಗಿದೆ. ಇದು ಹೆಗಡೆಯವರ ಆತ್ಮಚರಿತ್ರೆಯೋ ಎಂದು ಕೇಳಿದರೆ ಹೌದು ಮತ್ತು ಅಲ್ಲ ಎನ್ನಬಹುದು. ಆತ್ಮಚರಿತ್ರೆಯಲ್ಲಿ ಸುಮಾರು ಆರು ವಿಧಗಳನ್ನು ವಿಮರ್ಶಕರು ಗುರುತಿಸುತ್ತಾರೆ. ಅವುಗಳಲ್ಲಿ Memoir ಮತ್ತು Personal Essay ಎನ್ನುವ ಪ್ರಕಾರಗಳಿಗೆ ಇವರ “ಜೀವನ ಪಥ.. ವನ್ನು” ಹೋಲಿಸಬಹುದು.
ಪಥದಲ್ಲಿ ಸಾಗುವ ಪ್ರಯಾಣಿಕ ಸಾಗುವ ಹಾದಿಯಲ್ಲಿನ ಕಂಡ ದೃಶ್ಯಗಳನ್ನೆಲ್ಲ ಬಣ್ಣಿಸುವಾಗ ಅಲ್ಲೊಂದು ಹೊಸಬಗೆಯ ಸಮಾಜ ನಮಗೆ ಕಾಣಿಸುತ್ತದೆ. ನಾವು ನೋಡದ ಮತ್ತು ನೋಡಿದ ಅನೇಕ ಅನುಭವಗಳು ನವೀನವಾಗಿ ನಮ್ಮೆದುರು ನಿಲ್ಲುತ್ತದೆ. ಈ “ಜೀವನ ಪಥ ನೆನಪಿನ ರಥ” ಕೃತಿ ಈ ಬಗೆಯದ್ದು. ಇಲ್ಲಿ ಕಷ್ಟ ಹೋರಾಟ, ಕೆಚ್ಚು, ಪರಿಶ್ರಮ ಸಂತಸ, ಸಹಾಯ, ನೆರವು ಹೀಗೆ ಅನೇಕ ರಾಗಗಳಿವೆ. ಮಾರ್ಗದಲ್ಲಿ ಸಾಗುವಾಗ ಈ ಬದುಕನ್ನು ಎಳೆದವರ ಮಧುರ ನೆನಪುಗಳಿವೆ. ಅದರೊಟ್ಟಿಗೆ ಜೀವನದ ಹೋರಾಟದಲ್ಲಿ ನೊಂದ ಆ ಕಾಲದಲ್ಲಿ ಸುಖವಾದ ಬಡತನವನ್ನು ಅನುಭವಿಸಿದ ತನ್ನ ಕುಟುಂಬ, ಬಂಧುಗಳ ವಿವರಗಳು ಪ್ರಬಂಧಗಳಾಗಿವೆ. ಹಾಗಾಗಿ ಈ ಕೃತಿಯನ್ನು ನೆನಪುಗಳು ಮತ್ತು ಅನುಭವದ ಪ್ರಬಂಧಗಳ ಸಾಲಿನಲ್ಲಿ ಸೇರಿಸಬಹುದು.
ಈ ಪುಸ್ತಕದ ವಿಶೇಷತೆಯಂದರೆ ಇದು ಕೇವಲ ಓದುವ ಕೃತಿಯಲ್ಲ. ಇಲ್ಲಿರುವ ಪ್ರತೀ ಲೇಖನದ ಪಕ್ಕದಲ್ಲಿರುವ QR Code ನ್ನು Scan ಮಾಡಿದರೆ ಅನೇಕ ಅಪರೂಪದ ಯಕ್ಷಗಾನ ಶಾಸ್ತ್ರೀಯ ಸಂಗೀತದ ಗಾಯನಗಳನ್ನು ಸವಿಯಬಹುದು. ದಕ್ಷಿಣ ಕನ್ನಡದಲ್ಲಿ ಉತ್ತರಾದಿ ಸಂಗೀತವನ್ನು ಪಸರಿಸಿದ ಸಾರಸ್ವತ ಬ್ರಾಹ್ಮಣರ ಎಪ್ಪತ್ತು ವರ್ಷಗಳ ಹಿಂದಿನ ಅಪರೂಪದ ಪಟಗಳನ್ನು ನೋಡಬಹುದು. ಕೆರಮನೆ ಮಹಾಬಲ ಹೆಗಡೆಯವರು ಇಡಗುಂಜಿಯ ದೇವಸ್ಥಾನದಲ್ಲಿ ವಿದ್ವಾಂಸರಾದ ಶಂಭು ಶರ್ಮಾ ನಾಜಗಾರ ಅವರ ರಚನೆ “ನಂಬಿದೇ ಹೇರಂಭ ನಿನ್ನನು.. ಎನ್ನುವ ಪದ್ಯಗಳನ್ನು ಕೇಳಬಹುದು. ಕಿನ್ನೀರು ನಾರಾಯಣ ಹೆಗಡೆ, ಮಹಾಬಲ ಹೆಗಡೆ ನೆಬ್ಬೂರು ನಾರಾಯಣ ಭಾಗವತರುಗಳ ಹಾಗೂ ಅಪರೂಪದ ಶಾಸ್ತ್ರೀಯ ಸಂಗೀತವನ್ನು ಕೇಳಬಹುದಾಗಿದೆ. ಕನ್ನಡದ ಮಟ್ಟಿಗೆ ಈ ರೀತಿಯಾದ ಓದುವ ಮತ್ತು ಕೇಳುವ ಹಾಗೂ ನೋಡುವ ಪುಸ್ತಕಗಳು ಬಂದಿರುವದು ನನ್ನ ಗಮನಕ್ಕಂತೂ ಬಂದಿಲ್ಲ. ಕೆಲವೊಂದು ದಿನ ಪತ್ರಿಕೆಗಳು ಕ್ಯೂ ಆರ್. ಕೋಡ್ ಮೂಲಕವಾಗಿ ಪತ್ರಿಕೆಗಳ ಪುರವಣಿಗಳನ್ನು ಹೊರತರುತ್ತಿವೆ.
ಹೆಗಡೆಯವರ ಮನೆಯಲ್ಲಿ ಆ ಕಾಲದ ಖ್ಯಾತ ಯಕ್ಷಗಾನ ಕಲಾವಿದರಾದ ಅಣ್ಣುಹಿತ್ತಲು ಸದಾನಂದ ಹೆಗಡೆಯವರ ಕುಟುಂಬಕ್ಕೆ ಸೇರಿದವರು. ಅವರನ್ನು ಉತ್ತರ ಕನ್ನಡದ ಯಕ್ಷಗಾನದ ವೇಷಧಾರಿಗಳಲ್ಲಿ ಮನ್ವಂತರವನ್ನು ತಂದವರು ಎಂದು ಗುರುತಿಸಬಹುದು. ಅವರ ಕುರಿತು ದಾಖಲೆಗಳಿಲ್ಲ. ಅವರು ಕೆರಮನೆ ಶಿವರಾಮ ಹೆಗಡೆಯವರ ಗುರುಗಳೂ ಹೌದು. ಅವರು ಮಹಾನ್ ಕಲಾವಿದರಾಗಿದ್ದರೆಂದು ಬಾಯಿಮಾತಿನ ಪ್ರಚಾರ ಇದೆಯೇ ಹೊರತೂ ಯಾವ ಯಾವ ವೇಷದಲ್ಲಿ, ಹೇಗೆ ಎನ್ನುವ ವಿವರಣೆ ಇಲ್ಲ. ಅವರ ಕುರಿತಾಗಿ ಅಪರೂಪದ ವಿವರಗಳು ಇಲ್ಲಿವೆ. ಅದೇರೀತಿ ಪೂರ್ವೋತ್ತರ ಎನ್ನುವ ಲೇಖನದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ಹೊನ್ನಾವರದಿಂದ ಭಟ್ಕಳಕ್ಕೆ ರಸ್ತೆಮಾಡುವ ಹೊತ್ತಿಗೆ ಕೆಲಸಗಾರರಾದ ಲೂಯಿಸ್ ಮತ್ತು ಪೇದ್ರು ಎನ್ನುವವರಿಗೆ ಹೊನ್ನ ನಿಧಿ ಸಿಕ್ಕ ಘಟನೆಯಿದೆ.
ಸಿಕ್ಕ ನಿಧಿಯನ್ನು ಪಾಲು ಮಾಡಿಕೊಳ್ಳಲು ಅವರು ಆಶ್ರಯಿಸಿದ ವ್ಯಕ್ತಿ ಹೆಗಡೆಯವರ ಅಜ್ಜ ಆ ಕಾಲದ ಮಹಾನ್ ಚಾಣಾಕ್ಷ ರಾಮಪ್ಪ ಹೆಗಡೆಯವರು. ಆ ನಿಧಿಯ ಬಿಂದಿಗೆಯನ್ನು ರಾತ್ರಿ ಸುಮ್ಮನೆ ಹೊತ್ತು ಹೆಗಡೆಯವರ ಮನೆಗೆ ತರುತ್ತಾರೆ. ಆ ಬಂಗಾರದ ನಿಧಿಯನ್ನು ಪಾಲುಮಾಡಲು ಬಳಸಿರುವದು ತೆಂಗಿನ ಕರಟದಲ್ಲಿ! ಆಮೇಲೆ ಅದನ್ನು ಅಡಗಿಸಿಕೊಂಡು ಹೋದದ್ದು ಕೌಪೀನದಲ್ಲಿ!! ಹೆಗಡೆಯವರಿಗೂ ಒಂದು ಪಾಲು ಅದರಲ್ಲಿ!! ನಂತರ ಅ ಕೆಲಸಗಾರರು ಕುಡಿದು ತಮ್ಮಲ್ಲೇ ಗಲಾಟೆ ಮಾಡಿ ಅದು ಪೋಲಿಸರಿಗೆ ತಿಳಿದು ಅವರು ಅದನ್ನೆಲ್ಲಾ ಕಳೆದುಕೊಂಡರೆ ಇವರ ಅಜ್ಜ ಮಾತ್ರ ಕೊನೆಗೂ ಪೋಲಿಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ ಸಿಗದ ಕಥೆ ಓದುಗರಿಗೆ ರಸಗವಳ. ತನ್ನ ಪಾಲಿನ ಬಂಗಾರವನ್ನು ಮಾರನೆಯ ದಿನವೇ ಹಾವೇರಿಯ ಅಕ್ಕಿಆಲೂರಿಗೆ ಹೋಗಿ ಎಮ್ಮೆಯನ್ನು ಖರೀದಿಸಿ ಮತ್ತೊಂದು ತಾಮ್ರದ ಹಂಡೆಯನ್ನು ತಂದ ಘಟನೆಯನ್ನು ಮೊಮ್ಮಗ ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ ಆ ಹಂಡೆ ಅವರ ಮೂಲ ಮನೆಯಲ್ಲಿ ಸಾಕ್ಷಿಯಾಗಿ ಇಂದಿಗೂ ಇದೆಯಂತೆ. ಆ ಹೊತ್ತಿಗೆ ರಾಮಪ್ಪ ಹೆಗಡೆಯವರನ್ನು ಹಿಡಿಯಲು ಅಲೆದಾಡಿ ಸಾಧ್ಯವಾಗದೇ ಸುಸ್ತಾದ ಪೊಲೀಸ್ ಪೇದೆ ಇವರು ಕರ್ನಾಟಕ ಬ್ಯಾಂಕಿನಲ್ಲಿ ಉದ್ಯೋಗಿಯಾಗಿ 1974ರಲ್ಲಿ ಕಾರವಾರಕ್ಕೆ ಹೋದಾಗ ಅಲ್ಲೊಂದು ಅಂಗಡಿ ಹಾಕಿಕೊಂಡಿದ್ದ. ಆತ ಇವರ ಪೂರ್ವಾಪರವನ್ನು ಕೇಳಿ ಇವರ ಊರಿನ ಹೆಸರನ್ನು ಕೇಳಿದವನೇ ಅದೇ ಸಂಗತಿಯನ್ನು ಇವರಿಗೇ ಹೇಳಿದ ಘಟನೆ ಯಾವ ಪತ್ತೇದಾರಿಕೆಯ ಪುಸ್ತಕಗಳಿಗೂ ಕಡಿಮೆಯಿಲ್ಲ.
ಇಲ್ಲಿ ಕಷ್ಟ ಹೋರಾಟ, ಕೆಚ್ಚು, ಪರಿಶ್ರಮ ಸಂತಸ, ಸಹಾಯ, ನೆರವು ಹೀಗೆ ಅನೇಕ ರಾಗಗಳಿವೆ. ಮಾರ್ಗದಲ್ಲಿ ಸಾಗುವಾಗ ಈ ಬದುಕನ್ನು ಎಳೆದವರ ಮಧುರ ನೆನಪುಗಳಿವೆ. ಅದರೊಟ್ಟಿಗೆ ಜೀವನದ ಹೋರಾಟದಲ್ಲಿ ನೊಂದ ಆ ಕಾಲದಲ್ಲಿ ಸುಖವಾದ ಬಡತನವನ್ನು ಅನುಭವಿಸಿದ ತನ್ನ ಕುಟುಂಬ, ಬಂಧುಗಳ ವಿವರಗಳು ಪ್ರಬಂಧಗಳಾಗಿವೆ.
ಆ ಕಾಲದ ಓದುವ ವರ್ಣನೆ ಚನ್ನಾಗಿ ಮೂಡಿಬಂದಿದೆ. ಶಾಲೆ ಕಾಲೇಜಿಗೆ ನಡೆದುಕೊಂಡು ಹೋಗುತ್ತಲೇ ಶರಾವತಿ ದಾಟುವ ಕಾಲೇಜಿನಲ್ಲಿ ವಿಜ್ಞಾನವನ್ನು ತೆಗೆದುಕೊಂಡರೂ ಸಂಗೀತವನ್ನು ಒಂದು ವಿಷಯವನ್ನಾಗಿ ತೆಗೆದುಕೊಂಡು ಕಲಿತದ್ದು ನೋಡಿದರೆ ಸಂಗೀತದ ಮೇಲೆ ಇವರಿಗಿದ್ದ ಆಸಕ್ತಿಯ ಅರಿವಾಗುತ್ತದೆ. ಕಾಲೇಜಿನ ಪ್ರಿನ್ಸಿಪಾಲರಾಗಿದ್ದವರು ಖ್ಯಾತ ಕವಿ ವೀಸಿ, ತಮ್ಮ ಶಿಕ್ಷಕರುಗಳು, ಆ ಕಾಲದ ಕಾಲೇಜಿನ ಬದುಕು ಎಲ್ಲವೂ ಒಂದು ನೆನಪಿನ ಸುರುಳಿಯಂತೆ ಪ್ರಬಂಧದೋಪಾದಿಯಲ್ಲಿ ಹರಿದು ಬಂದಿದೆ. ಅದರಲ್ಲಿಯೂ ಇವರ ಮದುವೆಯ ಸ್ವಾರಸ್ಯ ತಪ್ಪದೇ ಓದಬೇಕು.
ಅದಾಗಲೇ ಬ್ಯಾಂಕ್ ಉದ್ಯೋಗಿ, ಒಳ್ಳೆಯ ಸಂಬಳ, ಹುಡುಗ ಸ್ಪುರದ್ರೂಪಿ ಬೇರೆ. ಹೆಣ್ಣುಗಳನ್ನು ಕೊಡಲು ತಾ ಮುಂದೆ ತಾ ಮುಂದೆ ಎಂದು ಎಲ್ಲರೂ ಕಾಯುತ್ತಿದ್ದರು. ಇವರಿಗೆ ಸಂಗೀತದಲ್ಲಿ ಆಸಕ್ತಿಯುಳ್ಳ ಬಡವರ ಮನೆಯ ಹುಡುಗಿಯಾದರೂ ಅಡ್ಡಿಯಿಲ್ಲವೆನ್ನುವ ಭಾವನೆ. ತನ್ನ ಅಂತರಂಗವನ್ನು ತನ್ನ ಅಕ್ಕ ಶಾರದಾ ರಾಮ ಯಾಜಿಯವರಲ್ಲಿ ಹಂಚಿಕೊಳ್ಳುತ್ತಾರೆ. ಅದೇ ಹೊತ್ತಿಗೆ ಇವರ ಸಂಬಂಧಿಯಾದ ಅದೇ ಗೀತಾಳನ್ನು ಒಂದು ಒಳ್ಳೆಯ ಜಾಗದ ಹುಡುಗಿಯನ್ನು ನೋಡಿ ಬಾ ಎಂದು ಇವರ ಅಕ್ಕ ಶಾರದಾ ಹೇಳಿ ಕಳುಹಿಸುತ್ತಾರೆ. ಗಣಪತಿಯಣ್ಣನಿಗೆ ಈ ಹುಡುಗಿ ಆಗಬಹುದು ಎಂದು ಮಾರನೇದಿನವೇ ಗೀತಾ ಬಂದು ವರದಿ ಒಪ್ಪಿಸುತ್ತಾಳೆ. ಇದರ ಮಧ್ಯೆ ಆ ಕೂಸಿನ ಜಾತಕ ಹೊಂದಾಣಿಕೆಯಾಗದೇ ಮನೆಯ ಹತ್ತಿರದ ಕೂಸಾದ ನಾಜಗಾರಿನ ಈ ಗೀತಾಳೇ ತಮ್ಮನ ಆಸಕ್ತಿಗೆ ಒದಗಿಯಾಳು ಎನ್ನುವ ಆಲೋಚನೆ ಅಕ್ಕನಿಗೆ ಬರುತ್ತದೆ. ಅವರ ಮನೆಯವರಿಗೋ ತಮ್ಮಂತವರ ಮನೆಯ ನೆಂಟಸ್ತನ ಹೇಗೋ ಎನ್ನುವ ಅಳುಕು. ವರೋಪಚಾರಗಳಿಲ್ಲದೆಯೇ ಅದೇ ಗೀತಾಳನ್ನೇ ಲಗ್ನವಾಗಿ ಇದೀಗ ವಿದುಷಿ ಗೀತಾ ಹೆಗಡೆಯವರಾದ ಸಂಗತಿ “ಅರಸಿ ಆರಿಸಿ ವರಿಸಿದ ಅರಸಿಗೆ” ಎನ್ನುವ ಭಾಗದಲ್ಲಿ ಕಚಗುಳಿ ಇಟ್ಟಂತೆ ಬಂದಿದೆ.
ಇವರ ಸಂಗೀತದ ಬದುಕಿನಲ್ಲಿ ಪ್ರಮುಖ ಪಾತ್ರ ವಹಿಸಿರುವದು ಗೋಕರ್ಣ. ಪುಣ್ಯಕ್ಷೇತ್ರವಾದ ಗೋಕರ್ಣದಲ್ಲಿ ಸಂಗೀತದ ನೆಲೆಯನ್ನಾಗಿ ಮಾಡುವಲ್ಲಿ ಹೆಗಡೆಯವರು ಬಿತ್ತಿದ ಬೀಜ ಬಲು ಮುಖ್ಯವಾದುದು. ಪಂ. ಕಮಲಾಕರ ಭಟ್ಟರನ್ನು ಕರೆಸಿ ಸಂಗೀತ ಶಾಲೆ ಸ್ಥಾಪಿಸಿರುವ ವಿಷಯ ಅದಕ್ಕೆ ಇವರಿಗೆ ಸಹಕಾರಿಯಾದ ಅನೇಕ ಮಹನೀಯರು ನಂತರ ಹಾವೇರಿಯಲ್ಲಿ ಇವರ ಮಗ ಧನಂಜಯನ ಪ್ರತಿಭೆ ಹುಕ್ಕೇರಿ ಮಠದ ಸಂಗೀತದ ಪರಿಸರದಲ್ಲಿ ಅರಳಿದ್ದು, ಹಾವೇರಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎಡಬಿಡದೇ ಸಂಗೀತ ಎಂದು ಓಡಾಡಿದ್ದು ಇವೆಲ್ಲವೂ ಇಲ್ಲಿದೆ. ಇವರ ಈ ನೆನಪಿನ ರಥವನ್ನು ಓದುತ್ತಿದ್ದರೆ ಈಗ ಒಂದು ಐವತ್ತು ವರ್ಷಗಳ ಹಿಂದಿನ ಸಂಗೀತದ ಖಯಾಲಿಯ ಬದುಕೂ ಮತ್ತು ಆ ಬದುಕು ಜನಸಾಮಾನ್ಯರನ್ನು ಹೇಗೆ ಮುದಗೊಳಿಸುತ್ತಿತ್ತು ಎನ್ನುವದರ ಒಂದು ದಾಖಲಾತಿಯೂ ಹೌದು.
ಇಲ್ಲಿ ಬರುವ ಜಟಾರ್ ಡಾಕ್ಟರ್, ಶೈಲಾ ಮಾಸುರಕರ್, ಆರ್. ಎನ್. ಭಟ್ ದಂಪತಿಗಳು, ಹಾವೇರಿಯ ಡಾ. ಪಂಡಿತ್, ಹುಕ್ಕೇರಿ ಮಠದ ಗುರುಗಳು, ಕನವಳ್ಳಿಯ ಗಜಾನನ ಸೇವಾ ಸಂಗೀತ ಸಮಿತಿಯ ಕಲಾಸೇವೆ ಇವೆಲ್ಲ ಬೇರೆ ಎಲ್ಲೂ ದಾಖಲಾಗಿಲ್ಲ. ಇದರ ವಿವರಗಳಿಗಾಗಿ ಹೆಗಡೆಯವರು ಮತ್ತೆ ಮತ್ತೆ ಆ ಊರನ್ನೆಲ್ಲಾ ತಿರುಗಿದ್ದಾರೆ. ನಂತರ ಧಾರವಾಡದ ಬದುಕು, ಅಲ್ಲಿಂದ ಬೆಂಗಳೂರಿಗೆ ಹೋಗಿ ಅಲ್ಲಿ ಪ್ರಸಿದ್ಧ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಪಂ. ವಿನಾಯಕ ತೊರವಿಯವರಲ್ಲಿ ಧನಂಜಯನ ಶಿಷ್ಯತ್ವ ಇವೆಲ್ಲವೂ ಇದೆ. ಕೆರಮನೆ ಶಿವರಾಮ ಹೆಗಡೆಯವರು ಇವರ ಸಮೀಪದ ಬಂಧುವೂ ಹೌದು. ಶಂಭು ಹೆಗಡೆಯವರು ಯಕ್ಷಗಾನ ಮೇಳವನ್ನು ಸ್ಥಾಪಿಸಿದ ವರುಷದಲ್ಲಿ ಇವರಿಗೆ ಬ್ಯಾಂಕಿನ ಉದ್ಯೋಗ ಸಿಗದೇ ಹೋಗಿದ್ದರೆ ಇವರು ಆ ಮೇಳದ ಕಲಾವಿದರಾಗಿ ಹೋಗುವದು ನಿಶ್ಚಯವಾಗಿತ್ತು.
ಇಡೀ ಕೃತಿಯಲ್ಲಿ ಮುಖ್ಯವಾಗಿ ಕಾಣಿಸುವದು ಸಂಗೀತ ಮತ್ತು ಯಕ್ಷಗಾನದ ಮೇಲಿನ ಇವರ ಅಪರಿಮಿತ ಆಸಕ್ತಿ. ತನ್ನೊಂದಿಗೆ ಆ ಹೊತ್ತಿನಲ್ಲಿ ನೆರವಾದ ಎಲ್ಲರನ್ನು ನೆನೆಯುವ ದೊಡ್ಡ ಗುಣ. ಈ ನೆನೆಯುವಿಕೆಯಲ್ಲಿಯೂ ಅವರಲ್ಲಿನ ಕಲಾವಿದ ಅರಳಿದ್ದಾನೆ. ಅದು ಆ ಕಾಲದ ಇವರ ಊರಿನ ನಾಪಿತ ನಾರಾಯಣ ಕೊಡಿಯಾ ಇರಬಹುದು ಆತನ ಕೋಳಿ ಅಂಕದ ಜ್ಯೋತಿಷ್ಯದ ವಿಷಯವಿರಬಹುದು; ಇಲ್ಲೆಲ್ಲಾ ಹೆಗಡೆಯವರ ಒಳಗಿದ್ದ ಕಲಾವಿದ ಅನುಭವದ ಮೂಸೆಯಿಂದ ಎದ್ದು ಬಂದಿದ್ದಾನೆ. ಹಾಗಂತ ಉದ್ಯೋಗ ನೀಡಿದ ಬ್ಯಾಂಕಿನಲ್ಲಿ ನಿಸ್ಪ್ರಹನಾಗಿ ಸೇವೆಸಲ್ಲಿಸುವಲ್ಲಿ ಎಂದಿಗೂ ಹಿಂದೆಬಿದ್ದವರಲ್ಲ. ತನಗೆ ಅನ್ನ ಕೊಟ್ಟ ಸಂಸ್ಥೆಯನ್ನು ಆ ಸಂಸ್ಥೆಯ ಮುಖ್ಯರಸ್ಥರನ್ನು ತಪ್ಪದೇ ನೆನಪಿಸಿಕೊಳ್ಳುತ್ತಾರೆ.
ಬದುಕಿನ ಪಥದಲ್ಲಿ ತನ್ನ ತಂದೆ ಸಣ್ಣಾ ರಾಮಪ್ಪ ಹೆಗಡೆ ತಾಯಿ ಸಾವಿತ್ರಿ ಅಕ್ಕ ಶಾರದಾ ಅಣ್ಣ ಎಸ್. ಎಸ್. ಹೆಗಡೆ, ಹೀಗೆ ಇವರೆಲ್ಲರೂ ತನ್ನ ಬದುಕನ್ನು ಹೇಗೆ ಕಟ್ಟಿ ಬೆಳೆಸಿದರು ಎನ್ನುವದರ ಕುರಿತು ಎದೆಯ ಮೊಗ್ಗರಳಿದ ಭಾವನೆಯಿದೆ. ಆತ್ಮಚರಿತ್ರೆಯೆಂದರೆ ಶುಷ್ಕವಾದ ಅನುಭವಗಳನ್ನು ತೋಡಿಕೊಳ್ಳುವಿಕೆಯೋ ಅಥವಾ ತಪ್ಪೊಪ್ಪಿಗೆಯೋ ಇಲ್ಲವೇ ತನ್ನ ತನದ ವಿಜೃಂಭಣೆಯ ಆತ್ಮರತಿಯೋ ಆಗಿಹೋಗುತ್ತಿರುವ ಅನೇಕ ಕೃತಿಗಳ ನಡುವೆ ಇವರ ಜೀವನ ಪಥದ ನೆನಪಿನ ರಥವನ್ನು ಎಳೆದವರನ್ನು ಜೊತೆಯಲ್ಲಿ ಸಾಗಿ ಬಂದವರನ್ನು ವಿನಯದಿಂದ ಸ್ಮರಿಸಿಕೊಳ್ಳುತ್ತಾರೆ. ವಿವರಗಳನ್ನು ಬರೆಯುವಾಗ ಆತ್ಮಶ್ಲಾಘನೆ ಆಗದಂತೆ ಎಚ್ಚರ ವಹಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅಪರೂಪದ ದಾಖಲೆಗಳನ್ನು ಕ್ಯೂ. ಆರ್. ಕೋಡಿನಲ್ಲಿಟ್ಟು ಸುಮಾರು ಒಂದುನೂರು ವರ್ಷಗಳ ಸಾಂಸ್ಕೃತಿಕ ಲೋಕದ ಅಪರೂಪದ ದಾಖಲೆಯನ್ನು ಇಲ್ಲಿ ಕಲಾವಂತಿಕೆಯ ಮೆರುಗಿನಲ್ಲಿ ನಿರೂಪಿಸಿದ್ದಾರೆ.
(ಕೃತಿ: ಜೀವನ ಪಥ ನೆನಪಿನ ರಥ, ಪ್ರಕಾಶಕರು: ಸುಶ್ರಾವ್ಯ ಬೆಂಗಳೂರು, ಪುಟ: 264, ಬೆಲೆ : ರೂ. 100/-)
ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ.