ಆಂಟಿ ಬೆವ್ ಬನ್ಯಾ ಹಬ್ಬದ ಬಗ್ಗೆ ಹಲವಾರು ಕಥೆಗಳನ್ನು ಹೇಳಿದರು. ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ. ಆ ನಂಬುಗೆಯ ಪ್ರಕಾರ ಬನ್ಯಾ ಕಾಯಿ ಫಸಲು ಯಥೇಚ್ಛವಾಗಿದ್ದ ವರ್ಷಗಳಲ್ಲಿ ಬನ್ಯಾ ಹಬ್ಬ ಜೋರಾಗಿ ನಡೆಯುತ್ತಿತ್ತಂತೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’ ನಿಮ್ಮ ಓದಿಗೆ
ಆಸ್ಟ್ರೇಲಿಯಾದ ಅಬೊರಿಜಿನಲ್ ಜನರ ‘ಡ್ರೀಮಿಂಗ್’ ಎನ್ನುವ ಪರಿಕಲ್ಪನೆ ಹೊರಗಿನವರಿಗೆ ಅರ್ಥವಾಗುವುದು ಸುಲಭಸಾಧ್ಯವಲ್ಲ. ಸೃಷ್ಟಿಯ ಬಗ್ಗೆ, ಜೀವ-ಜಾಲಗಳ ಹುಟ್ಟಿನ ಬಗ್ಗೆ, ಅನಂತ ವಿಶ್ವದ ಅಲೌಕಿಕ ಚೇತನಗಳು ಭೂಮಿಗೆ ಹರಿದು ಮರುಹುಟ್ಟು ಪಡೆಯುತ್ತಾ ಬಹುವಿಧಗಳ ಪ್ರಾಕೃತಿಕ ಶಕ್ತಿಗಳಾಗಿ ಮಾರ್ಪಟ್ಟದ್ದರ ಬಗ್ಗೆ ಅಬೊರಿಜಿನಲ್ ಸಂಸ್ಕೃತಿಗಳಲ್ಲಿ ಅನೇಕ ನಂಬಿಕೆಗಳಿವೆ. ಆ ನಂಬಿಕೆಗಳು ಸಾವಿರಾರು ವರ್ಷಗಳಿಂದ ಬಾಯಿಂದ ಬಾಯಿಗೆ, ಕಿವಿಯಿಂದ ಕಿವಿಗೆ ಹರಿಯುತ್ತಾ ತಲೆತಲಾಂತರಗಳಿಂದ ‘ಡ್ರೀಮಿಂಗ್’ ಪರಿಕಲ್ಪನೆ ಕಥೆಗಳಾಗಿ, ಹಾಡುಗಳಾಗಿ, ನೃತ್ಯಗಳಾಗಿ ಉಳಿದಿವೆ. ಅವುಗಳಲ್ಲಿ ಸ್ಪಿರಿಟ್ ಶಕ್ತಿಗಳು, ಮಾನವರು, ಪ್ರಾಣಿ-ಪಕ್ಷಿ-ಗಿಡಮರಗಳು ಎಲ್ಲವೂ ಸೇರಿವೆ. ಇವು ಅಬೊರಿಜಿನಲ್ ಜನರ ಪ್ರಾದೇಶಿಕ ಬಹುತ್ವಗಳನ್ನು, ಅವರ ಅನೇಕ ಭಾಷೆಗಳನ್ನು, ಆಚಾರ-ವಿಚಾರಗಳನ್ನು ಬಿಂಬಿಸುವ ಮೌಖಿಕ ಇತಿಹಾಸವಾಗಿಯೂ, ಕಲೆಗಳಾಗಿಯೂ, ಬಂಡೆಚಿತ್ರವಾಗಿಯೂ ಹೊರಹೊಮ್ಮಿವೆ. ಒಂದರ್ಥದಲ್ಲಿ ಹೇಳುವುದಾದರೆ ಅಬೊರಿಜಿನಲ್ ಜನರ ಅಸ್ಮಿತೆಯೆಂದರೆ ಅವರ ‘ಡ್ರೀಮಿಂಗ್’ ಪರಿಕಲ್ಪನೆ ಮತ್ತು ಅದರಲ್ಲಿ ಹಾಸುಹೊಕ್ಕಾಗಿರುವ ‘ಕನೆಕ್ಷನ್ ಟು ಕಂಟ್ರಿ’ ಸಂಬಂಧ.
ಕಳೆದ ಶನಿವಾರ ಫೆಬ್ರವರಿ 25ರಂದು ಕಬಿ ಕಬಿ ಅಬೊರಿಜಿನಲ್ ಜನಕುಲದ ಹಿರಿಯರಾದ ಆಂಟಿ ಬೆವರ್ಲಿ ಹ್ಯಾಂಡ್ ‘ಬನ್ಯಾ ಡ್ರೀಮಿಂಗ್’ ಹಬ್ಬವನ್ನು ಆಯೋಜಿಸಿ ನಡೆಸಿದರು. ಹೋದ ಮೂರು ವರ್ಷಗಳಲ್ಲಿ ಕೋವಿಡ್-19 ಕಾರಣದಿಂದ ರದ್ದಾಗಿದ್ದ ಬನ್ಯಾ ಮರ ಹಬ್ಬವನ್ನು ಮತ್ತೆ ನಡೆಸುವುದೋ ಬೇಡವೋ, ಆಗುತ್ತದೆಯೋ ಇಲ್ಲವೋ ಎಂಬ ತಳಮಳದಲ್ಲಿದ್ದ ಆಂಟಿ ಬೆವ್ ಜನವರಿ ತಿಂಗಳಲ್ಲಿ ‘ಕಡೆಗೂ ನಮ್ಮ ಬನ್ಯಾ ಡ್ರೀಮಿಂಗ್ ಸ್ಪಿರಿಟ್ ಗಳು ಮತ್ತು ಕುಲಹಿರಿಯರು ಸೂಚಿಸಿದ್ದಾರೆ. ಹಬ್ಬವನ್ನು ನಡೆಸುತ್ತೀನಿ’ ಎಂದಾಗ ಅನೇಕರು ಹರ್ಷಿಸಿದ್ದರು. ಬನ್ಯಾ ಡ್ರೀಮಿಂಗ್ ಕಥೆಗಳನ್ನು ಕೇಳಲು ನಾನೂ ಉತ್ಸಾಹದಿಂದಿದ್ದೆ. ಆಯೋಜಕರು ಹಬ್ಬ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್ ಪಾರ್ಕ್ ಜಾಗದ ಅಭಾವವಿದೆ, ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕಾರ್ ನಿಲ್ಲಿಸಿ ಅಲ್ಲಿಂದ ಶಟಲ್ ಬಸ್ ಹಿಡಿದು ಬನ್ನಿ ಎಂದು ಮೊದಲೇ ಹೇಳಿದ್ದಂತೆ ಶಟಲ್ ಬಸ್ಸಿನಲ್ಲಿ ಕೂತಾಗ ಬಸ್ ಚಾಲಕ ಬನ್ಯಾ ಮರಕ್ಕೂ, ಡೈನಾಸೋರ್ ಕಾಲಕ್ಕೂ ಇರುವ ಕೊಂಡಿಯ ಕಥೆ ಹೇಳಿದ.
ಕೊನಿಫೆರಸ್ ವಂಶಕ್ಕೆ ಸೇರಿದ ಬನ್ಯಾ ಮರಗಳು ಡೈನಾಸೋರ್ ಕಾಲದಿಂದಲೂ ಇವೆ. ಹಾಗಾಗಿ ಅವು ‘ಜೀವಂತ ಫಾಸಿಲ್’ ಎಂದು ಕರೆಸಿಕೊಳ್ಳುತ್ತವೆ. ಡೈನಾಸೋರ್ಗಳು ಭೂಮಿಯೆಲ್ಲೆಡೆ ನಡೆದಾಡಿದ್ದಂತೆ ಈ ಮರಗಳ ಜಾತಿಗಳು ಎಲ್ಲೆಲ್ಲೂ ಹರಡಿದ್ದವಂತೆ. ಡೈನಾಸೋರ್ಗಳು ಅಳಿದಂತೆ ಮರಗಳೂ ಅಳಿದು ಕೆಲ ಜಾತಿಗಳು ಖಂಡಾಂತರ ಪ್ರದೇಶಗಳಲ್ಲಿ ಇವೆಯಾದರೂ ಆಸ್ಟ್ರೇಲಿಯಾದ ಕ್ವೀನ್ಸ್ಲ್ಯಾಂಡ್ ರಾಜ್ಯದಲ್ಲಿ ಇರುವ ಬನ್ಯಾ ಬೆಟ್ಟಗಳ ಪ್ರಾಂತ್ಯದಲ್ಲಿ ಮಾತ್ರ ಬೆಳೆದು ಬದುಕುಳಿದಿರುವ ಮರಗಳು ಬಹಳ ವಿಶೇಷವಾದವು.
ನಮ್ಮ ರಾಣಿರಾಜ್ಯದಲ್ಲಿ (ಕ್ವೀನ್ಸ್ಲ್ಯಾಂಡ್) ಬನ್ಯಾ ಮರ ಬೆಳೆಯುವ ಪ್ರಾಂತ್ಯ ಸುಮಾರು ಮೂವತ್ತು ಮಿಲಿಯನ್ ವರ್ಷಗಳಷ್ಟು ಹಳೆಯದಾದ ಒಂದು ಜ್ವಾಲಾಮುಖಿ ಪ್ರದೇಶ. ಹಾಗಾಗಿ ಅವು ಇಲ್ಲಿನ ವಿಶೇಷ ವಾತಾವರಣಕ್ಕೆ ಹೊಂದಿಕೊಂಡುಬಿಟ್ಟಿವೆ. ಸುಮಾರು ಮೂವತ್ತರಿಂದ ಐವತ್ತು ಮೀಟರ್ ಉದ್ದಕ್ಕೆ ಬೆಳೆಯುವ ಮರಗಳು ಉತ್ಪಾದಿಸುವ ಪೈನ್ ಕೋನ್ ಕೂಡ ಅಷ್ಟೇ ಚಮತ್ಕಾರಿ. ಏನಿಲ್ಲವೆಂದರೂ ಐದರಿಂದ ಹತ್ತು ಕಿಲೋಗ್ರಾಮ್ಗಳ ತೂಕ! ಪೈನ್ ಕೋನ್ ಹೊರಮೈ ಅನಾನಸ್ ಹಣ್ಣಿನಂತೆ ಕಾಣಿಸುತ್ತದೆ. ಹೊರ ಚರ್ಮದ ಚಕ್ಕೆಗಳನ್ನು ಶ್ರಮಪಟ್ಟು ಸುಲಿದರೆ ಒಳಗಡೆ ಹಲಸಿನಹಣ್ಣು ತೊಳೆಗಳಂತೆ ಅಥವಾ ಸೀತಾಫಲದಂತೆ ಕೋಶಗಳು ಸಾಂದ್ರವಾಗಿ ಆ ಚಕ್ಕೆಗಳಿಗೆ ಅಂಟಿಕೊಂಡಿರುತ್ತವೆ. ಹಲಸಿನ ಹಣ್ಣಾದರೋ ಅಥವಾ ಸೀತಾಫಲವಾದರೋ ಆದರೆ ಹಣ್ಣಿನ ತೊಳೆಗಳನ್ನು ಬಿಡಿಸಿ ತಕ್ಷಣಕ್ಕೆ ಸವಿಯಬಹುದು. ಈ ಪೈನ್ ಕೋನ್ ವಿಷಯ ಹಾಗಲ್ಲ. ಇದರಲ್ಲಿ ಹಣ್ಣೂ ಇಲ್ಲ. ಇರುವುದು ಕೋಶದೊಳಗಿನ ಗಟ್ಟಿ ಚಿಪ್ಪಿನಲ್ಲಿ ಅಡಗಿರುವ ಕಾಯಿ ಮಾತ್ರ; ಈ ಕಾಯನ್ನು ನಾವು ನೇರವಾಗಿ ತಿನ್ನಲು ಬರುವುದಿಲ್ಲ. ಅದನ್ನು ಬೇಯಿಸಿ ಬೇರೆಬೇರೆ ರೀತಿಯ ಆಹಾರವನ್ನಾಗಿಸಬೇಕು.
ಒಂದಾನೊಂದು ಕಾಲದಲ್ಲಿ ವಸಾಹತುಶಾಹಿಗಳು ನೆಲೆಯೂರುವ ಮುನ್ನ ಅಂದರೆ ಹದಿನೆಂಟನೇ ಶತಮಾನದಲ್ಲಿ ಕೂಡ ಬನ್ಯಾ ಬೆಟ್ಟಗಳ ಪ್ರದೇಶದಲ್ಲಿ ಬನ್ಯಾ ಮರಗಳು ಯಥೇಚ್ಛವಾಗಿದ್ದವಂತೆ. ಒಂದೊಂದು ಮರವೂ ನೀಡುತ್ತಿದ್ದ ಬನ್ಯಾ ಕೋನ್ (cone) ಕಾಯಿಗಳನ್ನು (nut) ಸ್ಥಳೀಯ ಅಬೊರಿಜಿನಲ್ ಜನರು ದಿನನಿತ್ಯದ ಆಹಾರದಲ್ಲಿ ಬಳಸುತ್ತಿದ್ದರಂತೆ. ಕಾಯಿಗಳ ಒಳಗಡೆ ಇರುವ ತಿರುಳನ್ನು ತೆಗೆದು ಬೇಯಿಸಿ ಒಣಗಿಸಿ, ಹುಡಿ ಮಾಡಿ ಹಿಟ್ಟು ತಯಾರಿಸಿ, ಸಂಗ್ರಹಿಸಿಟ್ಟುಕೊಂಡು ಅದರಿಂದ ಈಗಿನ ಕಾಲದ ಬ್ರೆಡ್, ರೋಟಿ ರೂಪಗಳಲ್ಲಿ ತಿನ್ನುತ್ತಿದ್ದರಂತೆ. ಇಲ್ಲವೇ ಬೇಯಿಸಿದ ತಿರುಳನ್ನು ತಿನ್ನುವುದು.
ಬನ್ಯಾ ಡ್ರೀಮಿಂಗ್ ಕಥೆಗಳನ್ನು ಕೇಳಲು ನಾನೂ ಉತ್ಸಾಹದಿಂದಿದ್ದೆ. ಆಯೋಜಕರು ಹಬ್ಬ ನಡೆಯುತ್ತಿದ್ದ ಸ್ಥಳದಲ್ಲಿ ಕಾರ್ ಪಾರ್ಕ್ ಜಾಗದ ಅಭಾವವಿದೆ, ಸ್ಥಳೀಯ ರೈಲ್ವೆ ನಿಲ್ದಾಣದಲ್ಲಿ ಕಾರ್ ನಿಲ್ಲಿಸಿ ಅಲ್ಲಿಂದ ಶಟಲ್ ಬಸ್ ಹಿಡಿದು ಬನ್ನಿ ಎಂದು ಮೊದಲೇ ಹೇಳಿದ್ದಂತೆ ಶಟಲ್ ಬಸ್ಸಿನಲ್ಲಿ ಕೂತಾಗ ಬಸ್ ಚಾಲಕ ಬನ್ಯಾ ಮರಕ್ಕೂ, ಡೈನಾಸೋರ್ ಕಾಲಕ್ಕೂ ಇರುವ ಕೊಂಡಿಯ ಕಥೆ ಹೇಳಿದ.
ಆಂಟಿ ಬೆವ್ ಬನ್ಯಾ ಹಬ್ಬದ ಬಗ್ಗೆ ಹಲವಾರು ಕಥೆಗಳನ್ನು ಹೇಳಿದರು. ಅಬೊರಿಜಿನಲ್ ಜನರ ಜೀವನದಲ್ಲಿ ಡ್ರೀಮಿಂಗ್ ಸ್ಟೋರೀಸ್ ಎನ್ನುವುದು ಅವಿಭಾಜ್ಯ ಅಂಗವಾಗಿದೆ. ಭಾರತೀಯ ಹಿಂದೂ ಧರ್ಮದಲ್ಲಿ ದೇವರುಗಳು ಮತ್ತು ಅನೇಕಾನೇಕ ಪುರಾಣಗಳು ಹಾಸುಹೊಕ್ಕಾಗಿರುವಂತೆ. ಅಬೊರಿಜಿನಲ್ ಜೀವನದಲ್ಲಿ ಪ್ರತಿಯೊಂದನ್ನೂ ಸ್ಪಿರಿಟ್ಗಳು, ಅವುಗಳು ಎಲ್ಲ ಬಗೆಯ ಜೀವಜಾಲದೊಂದಿಗೆ ಹೊಂದಿರುವ ಸಂಬಂಧವು ಎಲ್ಲರ ಜೀವನದ ಆಗುಹೋಗುಗಳನ್ನು ನಿರ್ದೇಶಿಸುತ್ತವೆ. ಆ ನಂಬುಗೆಯ ಪ್ರಕಾರ ಬನ್ಯಾ ಕಾಯಿ ಫಸಲು ಯಥೇಚ್ಛವಾಗಿದ್ದ ವರ್ಷಗಳಲ್ಲಿ ಬನ್ಯಾ ಹಬ್ಬ ಜೋರಾಗಿ ನಡೆಯುತ್ತಿತ್ತಂತೆ. ಈ ವರ್ಷ ಫಸಲು ಕಡಿಮೆ, ಮುಂದಿನ ವರ್ಷ ಜಾಸ್ತಿ ಎಂದೆನಿಸಿದಾಗ ದೇಶಪೂರ್ತಿ ಇದ್ದ ಬೇರೆಬೇರೆ ಅಬೊರಿಜಿನಲ್ ಜನಕುಲಗಳಿಗೆ ಆಹ್ವಾನ ಹೋಗುತ್ತಿತ್ತು – ಬನ್ನಿ, ಮುಂದಿನ ವರ್ಷದ ಬನ್ಯಾ ಇಳುವರಿಯನ್ನು ಹಂಚಿಕೊಳ್ಳೋಣ, ಹಬ್ಬ ಮಾಡೋಣ, ಎಂದು. ದೇಶದ ಎಲ್ಲೆಡೆಯಿಂದ ಅವರುಗಳು ಕಾಲ್ನಡಿಗೆಯಲ್ಲಿ ಪ್ರಯಾಣ ಮಾಡಿ ಬೇಸಿಗೆಯಲ್ಲಿ ಬನ್ಯಾ ಬೆಟ್ಟಗಳನ್ನು ತಲುಪಿ ಸ್ಥಳೀಯ ಕಬಿ ಕಬಿ ಜನಕುಲದವರೊಂದಿಗೆ ಕೆಲ ವಾರಗಳು, ತಿಂಗಳುಗಳನ್ನು ಕಳೆಯುತ್ತಿದ್ದರಂತೆ. ಬನ್ಯಾ ಕಾಯಿಗಳನ್ನು ಬಿಡಿಸಿ, ತಿರುಳನ್ನು ಬೇಯಿಸಿ ಹಿಟ್ಟು ಮಾಡಲು ನೂರಾರು ಕೈಗಳು ಜೊತೆಗೂಡುತ್ತಿದ್ದವಂತೆ. ಆಗ ಪರಸ್ಪರರ ಭಿನ್ನಾಭಿಪ್ರಾಯಗಳನ್ನು ಮರೆತು ಅದು ಹಬ್ಬವೇ ಆಗುತ್ತಿತ್ತು. ಅಲ್ಲಿ ಬಹುತ್ವಗಳ, ಭಾಷೆಗಳ, ಕುಲಸಂಸ್ಕೃತಿಗಳ, ಅಬೊರಿಜಿನಲ್ ಸ್ಪಿರಿಟ್ಗಳ, ನೃತ್ಯ, ಹಾಡು, ಕಲೆಗಳ ಸಂಗಮವೇ ಮೇಳೈಸುತ್ತಿತ್ತು. ಸ್ಥಳೀಯ ಆಹಾರಗಳನ್ನು ಸವಿದು, ಸಂಬಂಧಗಳನ್ನು ಗಟ್ಟಿ ಮಾಡಿಕೊಂಡು, ಶೇಖರಿಸಿದ ಬನ್ಯಾ ತಿರುಳಿನ ಹಿಟ್ಟನ್ನು ಹೊತ್ತು ಆಹ್ವಾನಿತರು ಮನೆಗಳಿಗೆ ಮರಳುತ್ತಿದ್ದರು. ಸ್ಥಳೀಯ ಕಬಿ ಕಬಿ ಜನರು ಮುಂದಿನ ವರ್ಷಕ್ಕೆಂದು ಉಳಿಸಿಕೊಂಡ ಬನ್ಯಾ ಕೋನ್ಗಳು ಕೆಡದಂತೆ ಅವನ್ನು ನೆಲದಲ್ಲಿ ಗುಳಿ ತೋಡಿ ಅದರೊಳಗಡೆ ಅವನ್ನು ಹೂಳುತ್ತಿದ್ದರಂತೆ.
ಬನ್ಯಾ ಹಬ್ಬದ ದಿನದಂದು ಇದೆಲ್ಲಾ ವಿಷಯಗಳನ್ನು ಕೇಳುತ್ತಿದ್ದಾಗ, ಅವರು ಕೊಡುತ್ತಿದ್ದ ಪ್ರಾತ್ಯಕ್ಷಿಕೆಯಲ್ಲಿ ನಾನು ಪಾಲ್ಗೊಂಡಾಗ ಅದೊಂದು ವಿಶೇಷ ಅನುಭವವಾಗಿತ್ತು. ಕಾಯನ್ನು ಹೂಳುವುದು ನೋಡಿದಾಗ ನಮ್ಮ ಕರ್ನಾಟಕದ ಹಳ್ಳಿಗಳಲ್ಲಿ ಇಂತಹುದೇ ಪದ್ಧತಿ ಇರುವುದು, ಮತ್ತು ಕಣಜದ ನೆನಪೂ ಬಂತು. ಆಂಟಿ ಬೆವ್ ಹೇಳಿದಂತೆ ಈ ಬಾರಿಯ ಹಬ್ಬಕ್ಕೆ ಕೆಲವರು ಮೆಲ್ಬೋರ್ನ್ ಮತ್ತು ಡಾರ್ವಿನ್ ನಗರಗಳಿಂದ ಬಂದಿದ್ದರಂತೆ.
ಈಗಿನ ಬನ್ಯಾ ಮತ್ತು Blackall Range ಬೆಟ್ಟಗಳಲ್ಲಿ ಯಥೇಚ್ಛವಾಗಿದ್ದ ಬನ್ಯಾ ಮರಗಳು ಹೇಗೆ ವಿನಾಶದಂಚಿಗೆ ಬಂದವು? ವಸಾಹತುಶಾಹಿಗಳಿಗೆ ಈ ಮರಗಳು ಉಪಯೋಗಕ್ಕೆ ಬಂದಿದ್ದು ಟಿಂಬರ್ ರೂಪದಲ್ಲಿ, ಆಹಾರವಾಗಿಯಲ್ಲ. ಮರಗಳನ್ನು ಬೀಳಿಸಿ ಅವನ್ನು ಕಟ್ಟಡಗಳಲ್ಲಿ ಬಳಸಿದರು. ದೊಡ್ಡ ಗಾತ್ರದ ಬನ್ಯಾ ಕೋನ್ ತಲೆಮೇಲೆ ಬಿದ್ದರೆ ಜನ ಸಾಯುತ್ತಾರೆ, ಅದು ಅಪಾಯಕಾರಿ ಎಂದು ಅದರ ಉಪಯೋಗವನ್ನು ನಿಷೇಧಿಸಿ ಅಬೊರಿಜಿನಲ್ ಜನರ ಆಹಾರ ಬಳಕೆಗೆ ಧಕ್ಕೆ ತಂದರು. ಬನ್ಯಾ ಹಬ್ಬವನ್ನು ನಿಷೇಧಿಸಿದರು. ಎಲ್ಲೆಲ್ಲಿ ಪೂರ್ಣ ಗಾತ್ರದ ಮರಗಳಿದ್ದವೋ ಅವನ್ನೆಲ್ಲಾ ನೆಲಸಮ ಮಾಡಲಾಯ್ತು. ಇಪ್ಪತ್ತನೇ ಶತಮಾನದ ಆದಿಯಲ್ಲಿ ನಡೆದ ಪೂರ್ಣಪ್ರಮಾಣದ ಬನ್ಯಾ ಹಬ್ಬವೇ ಕೊನೆಯದಾಗಿತ್ತು. ಬನ್ಯಾ ಡ್ರೀಮಿಂಗ್ ನಿಂತುಹೋಯಿತು.
ಮುಂದಿನ ದಶಕಗಳಲ್ಲಿ ಅಲ್ಲಲ್ಲಿ ಪುಟಾಣಿ ಮರಗಳು ಬೆಳೆದು ಕೆಲವು ಪೂರ್ಣಪ್ರಮಾಣದ ಮರಗಳು ಉಳಿದವು. ಕಳೆದೆರಡು ದಶಕಗಳಿಂದ ಬನ್ಯಾ ಮರದ ಸಾಂಸ್ಕೃತಿಕ ಅಸ್ಮಿತೆಯನ್ನು ಅರಿತು, ಅದರ ಆಹಾರ ರೂಪದ ಕೊಡುಗೆಯನ್ನು ಗೌರವಿಸಿ ಅವನ್ನು ಬೆಳೆಯುವ ಪ್ರಯತ್ನಗಳು ನಡೆದಿವೆ. ಆದರೆ ಭಾರಿ ಗಾತ್ರದ ಅವು ಬೆಳೆಯುವುದಕ್ಕೆ ದೊಡ್ಡ ಜಾಗ ಬೇಕು. ಸಾಮಾನ್ಯ ಮನೆಯಂಗಳದ ತೋಟದಲ್ಲಿ ಬೆಳೆಯಾಗುವುದಿಲ್ಲ. ಹೀಗಾಗಿ ನಿಗದಿತ ಅರಣ್ಯ ಪ್ರದೇಶಗಳಲ್ಲಿ ಪ್ರಯತ್ನಗಳು ಸಾಗಿವೆ. ಇಂದಿಗೂ ಬನ್ಯಾ ಮರ ನೋಡುವುದು, ಪೈನ್ ಮರವೆಂದು ಕರೆಸಿಕೊಳ್ಳುವ ಅದರ ಕೋನ್ ಸಿಗುವುದು, ಅದರೊಳಗಿನ ಕಾಯನ್ನು ಸುಲಿದು, ತಿರುಳನ್ನು ಬೇಯಿಸಿ ತಿನ್ನುವುದು ಅಪರೂಪವಾಗಿದೆ. ಹಬ್ಬದ ದಿನದಂದು ನಾನೂ ಕೂಡ ಬನ್ಯಾ ಪೈನ್ ಕೋನ್ ಸುಲಿಯುವ, ಕೋಶದಿಂದ ಗಟ್ಟಿ ಚಿಪ್ಪಿನ ಕಾಯನ್ನು ಬೇರ್ಪಡಿಸುವ ಪ್ರಾತ್ಯಕ್ಷಿಕೆಯಲ್ಲಿ ಪಾಲ್ಗೊಂಡೆ. ಬೇಯಿಸಿದ ಬನ್ಯಾ ಕಾಯಿ ತಿರುಳನ್ನು ತಿನ್ನಲು ಸಾಲುಗಟ್ಟಿ ನಿಂತಿದ್ದ ಬೇರೆಲ್ಲರಂತೆ ನಾನೂ ನಿಂತು, ಬಿಸಿಲಿನ ಝಳವನ್ನು ಬೈದುಕೊಂಡು ಬೆಂದ ಬದನೆಕಾಯಂತೆ ಸೋತಿದ್ದರೂ ಕಡೆಗೂ ಬೆಂದ ಬನ್ಯಾ ತಿರುಳನ್ನು ತಿಂದು ಧನ್ಯಳಾದೆ. ಹೆಚ್ಚುಕಡಿಮೆ ಕಡಲೇಕಾಯಿ ರುಚಿಯೇ.
ಆ ದಿನದಂದು ಸಂಗ್ರಹಿಸಿ ಮನೆಗೆ ತಂದ ಕಾಯಿಗಳನ್ನು ಬೇಯಿಸಬೇಕೆಂದು ಹೊರಟಾಗ ನಿಧಾನವಾಗಿ ಈ ಬನ್ಯಾ ಮರ ಮತ್ತು ಕಾಯಿಯ ಮಹತ್ವ ಅರಿವಿಗೆ ಬಂತು. ಇದು ಏಳು ಸುತ್ತಿನ ಕೋಟೆಯ ರಹಸ್ಯದಂತೆ ನನಗೆನ್ನಿಸಿತು. 50ರಿಂದ ನೂರಾರು ಅಡಿಗಳ ಎತ್ತರದಿಂದ ಕೋನ್ ದಢಿಲ್ಲೆಂದು ಧರೆಗೆ ಬಿದ್ದಾಗ ಅದು ಚಿಪ್ಪು ಚೂರಾಗುವ ಸಂಭವವುಂಟು. ಹಾಗಾಗಿ, ನಿಸರ್ಗದ ನಿಯಮದಂತೆ ಚಿಪ್ಪಿನೊಳಗಿನ ಮುತ್ತನ್ನು ರಕ್ಷಿಸಿ ವಂಶಾಭಿವೃದ್ಧಿ ಮಾಡಲು ಚಿಪ್ಪು ಚೂರಾದರೂ ಸರಿ ಕಾಯಿಯನ್ನು ರಕ್ಷಿಸಲು ಹೊರಗಿನ ಕೋಶದ ನಿರ್ಮಾಣವಾಗಿದೆ. ಇದು ಚಿಪ್ಪಿಗೇ ಸೇರಿದ ಮತ್ತೊಂದು ಪದರದ ತೆಳ್ಳನೆ ಚರ್ಮದ ಹೊದಿಕೆಯಷ್ಟೇ. ಈ ಹೊದಿಕೆಯನ್ನು ಸುಲಭವಾಗಿ ಎಳೆದು ಕೋಶದಿಂದ ಕಾಯನ್ನು ಬೇರ್ಪಡಿಸಿದರೆ ನಾವು ಕೋಟೆಯ ಅಂತಿಮ ಸುತ್ತಿನ ಬಾಗಿಲನ್ನು ತಲುಪಿದ್ದೀವಿ. ಈ ಬನ್ಯಾ ಕಾಯಿಯ ಮೈ ಬಲು ಕಠಿಣ. ನಿಜವಾಗಿಯೂ ಕಬ್ಬಿಣದ ಕಡಲೆ! ಅದನ್ನು ಒಡೆಯಲು ನಾನು ತೋಟಗಾರಿಕೆಯಲ್ಲಿ ಬಳಸುವ clippers ಸಾಧನವನ್ನು ಉಪಯೋಗಿಸಿದೆ. clippers ಬ್ಲೇಡುಗಳ ಮಧ್ಯೆ ಕಾಯನ್ನು ಇಟ್ಟು ಒತ್ತಿದಾಗ ಅದು ಇಬ್ಭಾಗವಾಗಿ ಒಳಗಿನ ತಿರುಳು ಕಾಣಿಸಿತು. ಇನ್ನುಳಿದಿದ್ದು ಅದನ್ನು ಬೇಯಿಸುವುದು. ಇದು ನಮ್ಮ ಕಡಲೇಕಾಯಿ ಬೇಯಿಸುವಂತೆ. ಬನ್ಯಾ ತಿರುಳನ್ನು ತೊಳೆದು, ಉಪ್ಪು ನೀರಿನಲ್ಲಿ ಸುಮಾರು ಅರ್ಧ ಗಂಟೆ ಬೇಯಿಸಿ ಮೃದುವಾಗಿಸಿ ಸವಿದೆವು.
ಸಾವಿರಾರು ವರ್ಷಗಳ ಹಿಂದೆಯೇ ಬನ್ಯಾ ಮರವನ್ನು ಗೌರವಿಸಿ ಹಬ್ಬವನ್ನಾಗಿಸಿ, ಚಿಪ್ಪಿನೊಳಗೆ ಅಡಗಿದ ಕಾಯಿಯ ತೊಳೆಯನ್ನು ಕಂಡುಹಿಡಿದು ಅದನ್ನು ಬಗೆಬಗೆಯ ಆಹಾರವನ್ನಾಗಿಸಿದ ಕಬಿ ಕಬಿ ಅಬೊರಿಜಿನಲ್ ಜನರ ಅಗಾಧ ಜ್ಞಾನಕ್ಕೆ ಶರಣು.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.
ಬನ್ಯಾ ಕಾಯಿಯಲ್ಲಿ ಆರೋಗ್ಯಕರ ಅಂಶಗಳಿರುವ ಮಾಹಿತಿಯನ್ನು ಮುಂದಿನ ಭಾಗದಲ್ಲಿ ನಿರೀಕ್ಷಿಸಬಹುದೇ ?
ನಮಸ್ತೆ ಅನುರಾಧ.
ಲೇಖನವನ್ನು ಓದಿ ಪ್ರತಿಕ್ರಿಯಿಸಿದ್ದಕ್ಕೆ ನಿಮಗೆ ಕೃತಜ್ಞತೆಗಳು.
ಬನ್ಯಾಕಾಯಿಯ ಬಗ್ಗೆ ನಾನು ಕೇಳಿದ ಆಹಾರ ಸಂಬಂಧಿತ ಮಾಹಿತಿ ಹೀಗಿದೆ – ಅದರಲ್ಲಿ starch, carbohydrates ಮತ್ತು ಪ್ರೋಟೀನ್ ಅಂಶಗಳು ಅಧಿಕವಾಗಿವೆ. ಕೊಬ್ಬಿನಂಶ ಅಷ್ಟೊಂದಿಲ್ಲ ಮತ್ತು ಅದು gluten-free. ಅದನ್ನು ಬ್ರೆಝಿಲ್ ನುಟ್ ಮತ್ತು chestnut ಗಳಿಗೆ ಹೋಲಿಸುತ್ತಾರೆ. ಈಗಿನ ಕಾಲದಲ್ಲಿ ಬುನ್ಯಾಕಾಯಿಯನ್ನು ವಿವಿಧ ಬಗೆಗಳಲ್ಲಿ ಬಳಸುತ್ತಾರೆ – bread, pesto, pie, pizza ಇತ್ಯಾದಿ. ನಾನು ಅದನ್ನು ಉಪ್ಪು ನೀರಿನಲ್ಲಿ ಬೇಯಿಸಿ, ಖಾರದ ಒಗ್ಗರಣೆ ಹಾಕಿ ಸವಿದೆ. Healthfood ಅಂಗಡಿಗಳಲ್ಲಿ ಬನ್ಯಾಕಾಯಿಯ ಹಿಟ್ಟು ಸಿಗುತ್ತದೆ ಆದರೆ, ಬಲು ದುಬಾರಿ.
ವಿನತೆ
ವಿನತೆ,
ಮಾಹಿತಿಗಾಗಿ ಧನ್ಯವಾದಗಳು. ಮೆಲ್ಬರ್ನ್, ಸಿಡ್ನಿಯ ಅಂಗಡಿಗಳಲ್ಲಿ ನೋಡಿದ ನೆನಪಿಲ್ಲ. ಬ್ರಿಸ್ಬೈನ್ ಕಡೆ ಬಂದಾಗ ನೋಡುತ್ತೇನೆ.