ಇದನ್ನೆಲ್ಲಾ ಕೇಳುತ್ತಿದ್ದ ವಿದ್ಯಾರ್ಥಿಗಳಿಗಂತೂ, ತಮ್ಮ ತಮ್ಮ ಊರನ್ನು ಉಳಿಸಿಕೊಳ್ಳಲು, ತಮ್ಮ ಊರಿನ ಪರಿಸರ, ಕೆರೆ-ಕಟ್ಟೆಗಳನ್ನು ಕಾಪಾಡಲು ಪಣತೊಡಲೇಬೇಕು, ಕೈಲಾದದ್ದು ಮಾಡಲೇಬೇಕೆಂಬ ಉತ್ಕಟ ಉಮೇದು ಹುಟ್ಟಿತು. ವಿಚಾರ ಸಂಕಿರಣದ ಮುಖ್ಯ ಭಾಗವಾಗಿ ವಿದ್ಯಾರ್ಥಿಗಳಿಂದ ವಿಚಾರ ವಿನಿಮಯ, ತಮ್ಮ ಯೋಜನೆಗಳ ವಿವರಣೆ, ಸಾಕ್ಷ್ಯಚಿತ್ರ ಪ್ರದರ್ಶನ ಬಾಕಿಯಿತ್ತು. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮನಸ್ಪೂರ್ತಿಯಾಗಿ ಸಂಜೆಯವರೆಗೂ ಭಾಗವಹಿಸಿದ ಕಾವ್ಯ, ತನ್ನ ಮುಂದಿನ ಲೇಖನದಲ್ಲಿ ಕೆರೆಗಳ ಬಗ್ಗೆ ಏನು ಬರೆಯಬೇಕೆಂದು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಂಡಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ಐದನೆಯ ಕತೆ
ಬೆಂಗಳೂರಿನ ಗಡಿಬಿಡಿಯ ಸದ್ದಿಗೆ ವಿಭಾಗೆ ಎಚ್ಚರವಾದಾಗ, ಕಾವ್ಯಕ್ಕ ಓದುತ್ತಾ ಕುಳಿತಿರುವುದು ಕಾಣಿಸಿತು. ಅಮ್ಮ ಅಡುಗೆ ಮಾಡುತ್ತಾ, ಅಪ್ಪ ಕೈತೋಟದ ಉಸ್ತುವಾರಿ ನೋಡುತ್ತಾ ಇರುವುದು ಗಮನಕ್ಕೆ ಬಂತು. ಎದ್ದು ಸೀದಾ ಅಕ್ಕನ ಬಳಿ ಹೋದ ವಿಭಾ, “ ಕಾವ್ಯಕ್ಕಾ, ಏನು ಓದ್ತಾ ಇದೀಯಾ?” ಎಂದಳು. ಆಗ ಕಾವ್ಯ, “ಬೆಂಗಳೂರಿನ ಕೆರೆಗಳ ಬಗ್ಗೆ ಒಂದೊಳ್ಳೆ ಲೇಖನ ಬಂದಿದೆ ಇವತ್ತಿನ ಪೇಪರ್ ನಲ್ಲಿ; ಅದೇ ಓದ್ತಿದ್ದೆ. ಬೇಸಿಗೆ ಬರೋಕೂ ಮುನ್ನವೇ ಜನ ಮತ್ತು ಸರಕಾರ ಎಚ್ಚೆತ್ತುಕೊಳ್ಳಬೇಕಲ್ಲ ಮತ್ತೆ? ಇರೋ ನೀರನ್ನಾದ್ರೂ ಉಳಿಸಿಕೊಳ್ಳೋಕೆ. ಅದಕ್ಕೇ ಇಂತಹ ಲೇಖನಗಳು ಬೇಕು ನೋಡು” ಎಂದಳು ವಿಭಾಳತ್ತ ತಿರುಗಿ. ಆಗ ವಿಭಾ, “ನಿಜಾ ಅಕ್ಕ; ಅಪ್ಪ ಹೇಳ್ತಿದ್ರು, ಸಾವಿರಾರು ಕೆರೆಗಳಿದ್ದವಂತೆ ಬೆಂಗಳೂರಲ್ಲಿ! ೧೬ನೆ ಶತಮಾನದಲ್ಲಿ! ಈಗ ನೋಡಿದ್ರೆ, ಇರೋ ಕೆರೆಗಳನ್ನೆಲ್ಲಾ ನುಂಗಿ ನೀರು ಕುಡಿಯೋದೇ ಆಯ್ತು ಅಂತಿದ್ರು” ಎಂದು ವಿವರಿಸಿದಳು.
ಆಗ ಕಾವ್ಯ, “ನಿಜಾ ಕಣೋ; ಬ್ರಿಟಿಷ್ ಆಫೀಸರ್ ಒಬ್ಬ ಬೆಂಗಳೂರನ್ನ ‘ದಿ ಲ್ಯಾಂಡ್ ಆಫ್ ಥೌಝೆಂಡ್ ಲೇಕ್ಸ್’ ಅಂತ ಕರೆದಿದ್ನಂತೆ, ೧೮ನೆ ಶತಮಾನದಲ್ಲಿ. ಬಿ.ಬಿ.ಎಂ.ಪಿಯವರು ೨೦೧೯-೨೦ರಲ್ಲಿ ಈ ವಿಚಾರವಾಗಿ ಸಮೀಕ್ಷೆ ನಡೆಸಿದ್ರು. ಅದರ ಪ್ರಕಾರ, ಬೆಂಗಳೂರಲ್ಲಿ ಈಗ ಬದುಕಿರುವ ಕೆರೆಗಳು ೨೦೦; ಆದ್ರೆ ನಿಜಕ್ಕೂ ಅವುಗಳ ಸ್ಥಿತಿಗತಿ ನೋಡಿದ್ರೆ, ಅದೂ ಕೂಡ ಡೌಟೇ ಅನ್ಸತ್ತೆ. ಇಂತಹ ವಿಷಯಗಳ ಬಗ್ಗೇನೇ ಇವತ್ತಿನ ಸೆಮಿನಾರ್ ಇರೋದು. ಬೇಗ ರೆಡಿ ಆಗು; ನಿನ್ನ ಶಾಲೆಗೆ ಡ್ರಾಪ್ ಮಾಡಿ, ನಾನು ಹೊರಡ್ತೀನಿ” ಎಂದು ತಂಗಿಯನ್ನು ಸ್ನಾನಕ್ಕೆ ಕಳಿಸಿದಳು ಕಾವ್ಯ. ತಾನೂ ತಯಾರಾಗಿ, ತನ್ನ ಚಿಕ್ಕಮ್ಮ ಮಾಡಿದ ರುಚಿಯಾದ ಮಸಾಲೆ ದೋಸೆ ತಿಂದ ಕಾವ್ಯ, ತಂಗಿ ವಿಭಾಳನ್ನು ಶಾಲೆಗೆ ಡ್ರಾಪ್ ಮಾಡಿ, ಮೆಟ್ರೋ ಹತ್ತಿ ಹಲಸೂರಿನ ಕಡೆಗೆ ಹೊರಟಳು.
ಹಲಸೂರು ಕೆರೆಯ ಸುತ್ತಲೂ ಇರುವ ಮರಗಳ ಅಡಿಯಲ್ಲಿ ಈ ವಿಚಾರ ಸಂಕಿರಣ ಆಯೋಜನೆಗೊಂಡಿತ್ತು; ಹಲವಾರು ಸಂಶೋಧಕರು, ಪರಿಸರವಾದಿಗಳು, ಜನಸಾಮಾನ್ಯರು, ವಿದ್ಯಾರ್ಥಿಗಳು ನೆರೆದಿದ್ದರು. ಬಗೆಬಗೆಯ ಹಿನ್ನೆಲೆಯಿಂದ ಬಂದ ಇವರೆಲ್ಲರ ನಡುವೆ ಇದ್ದ ಒಂದೇ ಕೊಂಡಿಯೆಂದರೆ ಅದು ಪರಿಸರದೆಡೆಗಿನ ಕಾಳಜಿ, ಪ್ರೀತಿ. ಅಲ್ಲಿ ಸಿಕ್ಕ ಹಳೆಯ ಕಾಲೇಜಿನ ಸ್ನೇಹಿತರು, ಪರಿಚಯವಿದ್ದ ಪರಿಸರವಾದಿಗಳ ಜೊತೆ ಕಾವ್ಯ ಮಾತನಾಡುತ್ತಿರುವಾಗ, ವಿಚಾರ ಸಂಕಿರಣ ಪ್ರಾರಂಭವಾಯಿತು. ಅಲ್ಲಿ ಅತಿಥಿಯಾಗಿ ಆಗಮಿಸಿದ್ದ ಹಿರಿಯರೊಬ್ಬರು ಹಳೆಯ ಬೆಂಗಳೂರನ್ನು ನೆನೆಯುತ್ತಾ, ಅವರ ಚಿಕ್ಕಂದಿನಲ್ಲಿ ಕೇಳಿದ್ದ ಕಥೆಯನ್ನು ಎಲ್ಲರೊಂದಿಗೆ ಹಂಚಿಕೊಂಡರು. “ಇಮ್ಮಡಿ ಕೆಂಪೇಗೌಡ ಕಟ್ಟಿದ್ದಂತೆ ಈ ಅಲ್ಸೂರ್ ಕೆರೆ. ಇದೇ ಥರಾ ಸಾವಿರಾರು ಚಿಕ್ಕ-ದೊಡ್ಡ ಕೆರೆಗಳಿದ್ವಂತೆ ನಮ್ ಬೆಂಗಳೂರಲ್ಲಿ, ನಮ್ ಮುತ್ತಜ್ಜನ ಕಾಲ್ದಲ್ಲಿ! ನಮ್ ತಾತ ಹೇಳ್ತಿದ್ರು, ‘ಈ ಕೆರೆಗಳು ನಮಗೋಸ್ಕರ ಮಾತ್ರ ಅಲ್ಲ ಮಗಾ, ಇದು ನಮ್ ಜೊತೆ ಜೀವ್ಸೋ ಪ್ರಾಣಿ, ಪಕ್ಷಿ, ಕೀಟ, ಮರ ಗಿಡ – ಹಿಂಗೆ ಎಲ್ಲ ಜೀವಿಗಳಿಗೂ ಸೇರಿದ್ದು. ಮನುಷ್ಯ ಈ ಕೆರೆತಾಯಿಗೆ ಮೋಸ ಮಾಡಿದ್ರೆ, ಒಳ್ಳೇದಾಗಕ್ಕಿಲ್ಲಾ ಮಗಾ’ ಅಂತಿದ್ರು. ಅಂಥಾ ಹಿರಿಯರ ಮಾತು ಕೇಳ್ಲಿಲ್ಲ ನಾವು. ಈಗ ನೋಡಿ, ಅಂಥಾ ಕೆರೆತಾಯಿಗೆ ನಾವೆಲ್ಲಾ ಸೇರಿ ಏನ್ ಮಾಡಿಟ್ಟೀವಿ. ಫ್ಯಾಕ್ಟರೀ ಇಂದ ‘ಕೆಮಿಕಲ್’ನ ನೇರ ಕೆರೆಗೇ ಬಿಡ್ತೀವಿ, ಪ್ಲಾಸ್ಟಿಕ್ ಬಾಟ್ಲಿ ತಗೊಂಡು ನೀರು ಕುಡ್ದು, ಕೆರೆಗೇ ಚೆಲ್ತೀವಿ. ಅಲ್ಲ ಕಣ್ರಪ್ಪಾ! ಪುರಂದರ ದಾಸ್ರು ಹೇಳಿದ್ದು ‘ಕೆರೆಯ ನೀರನು ಕೆರೆಗೆ ಚೆಲ್ಲೀ’ ಅಂತ! ನಾವು ನೋಡಿದ್ರೆ, ಕೆರೆ ನೀರು ಕುಡಿಯಕ್ಕಾಗದ ಹಾಗೆ ಮಾಡಿಟ್ಟು, ಕೆರೆಗೆ ಕಸ ಚೆಲ್ಲೋ ಜನ ಆಗಿಬಿಟ್ವಿ” ಅಂತ ನಿಟ್ಟುಸಿರಿಟ್ರು.
ವಿಚಾರ ಸಂಕಿರಣಕ್ಕಾಗಿ ಬಂದಿದ್ದ ಎಲ್ಲರಿಗೂ ಈ ಮಾತುಗಳನ್ನು ಕೇಳಿ ಮನಸ್ಸು ಕಲಕಿದ ಹಾಗಾಯ್ತು. ಇಲ್ಲಿ ಆ ಹಿರಿಯರು ಹೇಳಿದ್ದು ಹೊಸ ವಿಷಯವೇನೂ ಆಗಿರಲಿಲ್ಲ. ಆದರೆ, ಅವರ ಸಂಕಟದಲ್ಲಿ- ಕೆರೆಯ ಬಗ್ಗೆ, ಎಲ್ಲರಿಗೂ ಸೇರಿದ್ದ ಸಂಪತ್ತಿನ ಬಗ್ಗೆ ಇದ್ದ ಕಾಳಜಿ, ಈಗಿನ ಪರಿಸ್ಥಿತಿಯನ್ನು ಅರಗಿಸಿಕೊಳ್ಳಲಾರದ ಸ್ಥಿತಿ ಮನಕಲಕುವಂತಿತ್ತು. ತಮ್ಮ ಮಾತು ಮುಂದುವರೆಸಿದ ಆ ಹಿರಿಯರು, “ಹಾಗಂತ, ಸುಮ್ನೇ ಇರಕ್ಕಾಗತ್ತಾ? ಸುಮ್ನೇ ಇರಂಗಿದ್ದಿದ್ರೆ ಇಲ್ಯಾಕೆ ಬರ್ತಿದ್ವಿ ನಾವೆಲ್ಲಾ, ಅಲ್ವಾ? ಅಣ್ಣಾವ್ರ ಹಾಡು ಕೇಳಿಲ್ಲೇನು? ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ…ಮನಸೊಂದಿದ್ದರೆ ಮಾರ್ಗವು ಉಂಟು, ಕೆಚ್ಚೆದೆ ಇರಬೇಕೆಂದು…ಕೆಚ್ಚೆದೆ ಇರಬೇಕೆಂದೆಂದು…” ಎನ್ನುತ್ತಾ ಬಿಳಿ ಪಂಚೆಯನ್ನು ಎತ್ತಿಕಟ್ಟಿ, ಹಾಡೇ ಬಿಟ್ಟರು. ಇದನ್ನು ಕಂಡ ಎಲ್ಲರಲ್ಲೂ ಮಂದಹಾಸ, ಹುರುಪು ಕಂಡುಬಂತು.
ಜನರ ಹುಮ್ಮಸ್ಸು ನೋಡಿ ತಮ್ಮ ಮಾತನ್ನು ಮುಂದುವರೆಸಿದ ಹಿರಿಯರು “ ನೋಡೀ, ನಮ್ ಅಜ್ಜಿ ಹೇಳ್ತಿದ್ರು, ಬೇಸಿಗೆ ಕಾಲ ಬಂತೂ ಅಂದ್ರೆ ಸಾಕು, ಊರಿನ ಹಿರಿಯರೆಲ್ಲಾ ಸೇರಿ ಕೆರೆಯ ಹೂಳು ತೆಗೆಸ್ತಿದ್ರು; ಹಾಗೆ ಸಿಕ್ಕ ಜೇಡಿಮಣ್ಣಿಂದಾನೇ ಆ ವರ್ಷ ಗೌರಿ-ಗಣೇಶನ ಹಬ್ಬಕ್ಕೆ ಮೂರ್ತಿಗಳು ತಯಾರಾಗ್ತಿದ್ವು; ಹೂಳು ತೆಗೆದಿದ್ದ ಕೆರೆ, ಮಳೆಗಾಲದಲ್ಲಿ ತುಂಬಿ ಕೋಡಿ ಹರಿಯೋದು, ಎಲ್ಲರೂ ಬಂದು ಕೆರೆತಾಯಿಗೆ ಹಣ್ಣು-ಕಾಯಿ ಮಾಡ್ಸ್ಕೊಂಡು ಹೋಗೋವ್ರು, ಗಣೇಶನ ಹಬ್ಬ ಮುಗಿದ್ ಮೇಲೆ, ಅವೇ ಮಣ್ಣಿನ ಮೂರ್ತಿಗಳು ಮತ್ತೆ ಕೆರೆಗೇ ಹೋಗಿ ಸೇರ್ತಿದ್ವು. ಹಿಂಗೆ ಒಂದಕ್ಕೊಂದು ಸಂಬಂಧ ಇರ್ತಿತ್ತು. ಹಸು ಎಮ್ಮೆಗಳಿಗೆ ಸ್ನಾನ ಮಾಡ್ಸಕ್ಕೆ, ಬಟ್ಟೆ ಒಗ್ಯಕ್ಕೆ, ಪಾತ್ರೆ ತೊಳ್ಯಕ್ಕೆ, ಮಕ್ಳು ಈಜು ಕಲ್ಯಕ್ಕೆ – ಎಲ್ಲಕ್ಕೂ ಇವೇ ಕೆರೆ-ಕುಂಟೆಗಳೇ ಆಧಾರವಾಗಿದ್ವು. ಆದ್ರೆ ಈಗ ಕೆರೆಗಳು ಇದ್ದಿದ್ದ ಜಾಗ್ದಲ್ಲಿ ಅಪಾರ್ಟ್ಮೆಮೆಂಟ್ ಬಂದ್ಬಿಟ್ಟದೆ. ಏನ್ ಮಾಡೀರಾ? ಹೋಗೋದ್ ಹೋಯ್ತು ಅತ್ಲಾಗೆ. ಇರೋ ಕೆರೆಗೆಳನ್ನ ನಾವೆಲ್ಲಾ ಸೇರಿ ಹೂಳ್ ಎತ್ಸಣಾ, ಮಳೆಗಾಲ್ದಲ್ಲಿ ನೀರು ತುಂಬೋ ಹಂಗೆ ಮಾಡಣ. ಏನ್ ಅಂತೀರಾ?” ಎಂದು ಪ್ರಶ್ನೆ ಎಸೆದರು. ನೆರೆದ ಎಲ್ಲರೂ “ ಹೌದೂ, ಮಾಡೋಣ” ಎಂದು ಹೂಂಗುಟ್ಟಿದರು, ತಲೆಆಡಿಸಿ ಒಮ್ಮತ ಸೂಚಿಸಿದರು.
ಮುಂದಿನ ಅತಿಥಿ ಇತಿಹಾಸತಜ್ಞ ನೇಸರ, ಹಲವಾರು ವಾಸ್ತವಾಂಶಗಳನ್ನು ಅಂಕಿ ಅಂಶಗಳ ಸಮೇತ ಸಭಿಕರ ಮನಮುಟ್ಟುವಂತೆ ವಿವರಿಸಿದರು; ಅವರು ತಮ್ಮ ಊರು, ರಾಮಸಂದ್ರದ ಹೆಸರು ಮೊದಲು ರಾಮಸಮುದ್ರವಾಗಿತ್ತು ಎಂದೂ, ಈಗಿನ ದೇವಸಂದ್ರ, ಅಲ್ಲಾಳಸಂದ್ರ ಎಂಬಂತಹ ಹೆಸರಿನ ಏರಿಯಾಗಳಲ್ಲಿನ ‘ಸಂದ್ರ’ ಅನ್ನೋ ಪದ, ‘ಸಮುದ್ರ’ ಅನ್ನೋ ಪದದಿಂದ ಬಂದಂಥವೇ ಎಂದು ಆಸಕ್ತಿಕರವಾಗಿ ಮಾತನ್ನು ಆರಂಭಿಸಿದರು. ಬೆಂಗಳೂರಿನ ಕೆರೆಗಳು ಹೇಗೆ ಒಂದಕ್ಕೊಂದು ಸೇರಿ, ಕೋಡಿ ಹರಿಯುತ್ತಾ ಮುಂದಿನ ಕೆರೆಗೆ ನೀರನ್ನು ಉಣಬಡಿಸುತ್ತಾ ನದಿಯಾಗಿ ಹರಿಯಿತು ಎಂಬುದನ್ನು ವಿವರಿಸಿದರು. ಸಮುದ್ರಮಟ್ಟದಿಂದ ೩೦೦೦ ಅಡಿ ಎತ್ತರದಲ್ಲಿರುವ ಬೆಂಗಳೂರು ಮತ್ತು ಅದರ ಕೆರೆಗಳ ಕಥೆಗಳನ್ನು ಪ್ರೊಫೆಸರ್ ನೇಸರ ಅವರ ಬಾಯಲ್ಲಿ ಕೇಳೋಕೆ, ಕಾವ್ಯಳಿಗೆ ಎಲ್ಲಿಲ್ಲದ ಉತ್ಸಾಹ. ಈ ಮುಂಚೆಯೂ ಪ್ರಕಾಶ್ ನ ಜೊತೆಗೆ ಇಂತಹದ್ದೇ ಕಾರ್ಯಕ್ರಮದಲ್ಲಿ ಇವರ ಮಾತನ್ನು ಕೇಳಿದ್ದ ಕಾವ್ಯ, ಇಂದೂ ಸಹ ಕುತೂಹಲದಿಂದ ಭಾಷಣ ಕೇಳುತ್ತಾ ಕೂತಳು.

ತಮ್ಮ ಮಾತನ್ನು ಮುಂದುವರೆಸುತ್ತಾ ಪ್ರೊಫೆಸರ್ ನೇಸರ, “ಬೆಂಗಳೂರನ್ನು ಕಟ್ಟಿದವರು, ಜೊತೆಗೆ ಹಳೆಯ ಆಡಳಿತಗಾರರು, ಬೆಂಗಳೂರಿನ ಈ ಎತ್ತರವನ್ನ ಮತ್ತು ಬೆಂಗಳೂರಿನ ಮುಖ್ಯ ಕಣಿವೆಗಳನ್ನ ಬಳಸಿಕೊಂಡು, ಒಂದು ಕೆರೆ ಮತ್ತೊಂದಕ್ಕೆ ಸೇರುತ್ತಾ, ನದಿಯಾಗಿ ಹರಿಯುವಂತೆ, ಮತ್ತು ಇಡೀ ಊರಿಗೆ ನೀರಿನ ಅಭಾವ ಇರದ ಹಾಗೆ ನೋಡಿಕೊಂಡ್ರು. ಗ್ರ್ಯಾವಿಟಿ ಅಂದ್ರೆ ಗುರುತ್ವಾಕರ್ಷಣೆಯಿಂದ ಮತ್ತು ಹಿರಿಯರ ಮುಂದಾಲೋಚನೆಯಿಂದ ಇದೆಲ್ಲಾ ಸಾಧ್ಯವಾಯ್ತು ನೋಡಿ. ಹೆಬ್ಬಾಳ ಕಣಿವೆ, ವೃಷಭಾವತಿ ಕಣಿವೆ, ಕೋರಮಂಗಲ-ಚೆಲ್ಲಘಟ್ಟ ಕಣಿವೆಯ ಕಡೆಗೆ ಹರಿವ ಕೆರೆಗಳ ನೀರನ್ನ, ಯಾವುದೇ ಅಡ್ಡಿಯಾಗದಂತೆ ರಾಜಾಕಾಲುವೆಗಳಿಂದ ಕೂಡಿಸುತ್ತಾ, ಜೊತೆಗೆ ಆ ಕೆರೆಗಳು ಹೂಳು ತುಂಬ್ದೇ ಇರೋ ಹಾಗೆ ನೋಡಿಕೊಳ್ತಾ ಎಚ್ಚರವಹಿಸಿದ್ರು. ಇಲ್ಲದಿದ್ರೆ, ಬಂಡೆಗಳಿಂದ ತುಂಬಿ ಬೆಂಗಾಡಾಗಿದ್ದ ಬೆಂಗಳೂರು, ಹೀಗೆ ತಂಪಾಗಿ ನಳನಳಿಸೋಕೆ ಸಾಧ್ಯವಿತ್ತಾ? ನಿಜ, ಈಗ ಅನೇಕ ರಾಜಕಾಲುವೆಗಳೇ ಅಪಾರ್ಟ್ಮೆಂಟುಗಳ ಬೇಸ್ಮೆಂಟ್ ಆಗಿವೆ, ಅನೇಕ ಕಾಲುವೆಗಳು ದೊಡ್ಡ ಮೋರಿಗಳಾಗಿವೆ; ವೃಷಭಾವತಿ ನದಿಯಲ್ಲ, ಕೊಳಚೆ ಎಂಬಂತಾಗಿದೆ. ನೀರು ಹರಿಯಬೇಕಿದ್ದ ಜಾಗದಲ್ಲಿ ಮನೆ ಕಟ್ಟಿ, ಮಳೆ ಬಂದಾಗ ‘ಮನೆಯೊಳಗೆ ನೀರು ನುಗ್ಗುತ್ತೆ’ ಅಂತ ಅತ್ತರೆ ಏನು ಮಾಡೋದು ಹೇಳಿ? ನಿಜ, ಸಾವಿರಾರು ಕೆರೆಗಳಿಂದ ಇನ್ನೂರು ಕೆರೆಗೆ ತಲುಪಿದೀವಿ. ಆದರೆ ಆ ಇನ್ನೂರು ಕೆರೆಗಳ ಪರಿಸ್ಥಿತಿ ಹೇಗಿದೆ? ಅದರ ಬಗ್ಗೆ ಬಿ.ಬಿ.ಎಂ.ಪಿ ಗಮನ ಹರಿಸುತ್ತಿದೆಯಾ ಅನ್ನೋದನ್ನ ನಾವು ನಾಗರೀಕರು ಗಮನಿಸಬೇಕು, ಇಲ್ಲದಿದ್ರೆ, ಅವರನ್ನ ಪ್ರಶ್ನಿಸಿ, ಕೆರೆಯ ಆರೋಗ್ಯ ಕಾಪಾಡಬೇಕು; ಅನೇಕ ಸ್ವಯಂಸೇವಾ ಸಂಸ್ಥೆಗಳು ತಾವೇ ಮುಂದೆ ನಿಂತು ಕೆರೆಗಳ ಹೂಳೆತ್ತುತ್ತಿವೆ; ಅಲ್ಲಿ ಜನಸಾಮಾನ್ಯರು ಕಸ ಹಾಕದಂತೆ ಅನೇಕ ಸ್ವಯಂಸೇವಕರು ತಡೀತಾ ಇದಾರೆ. ಸರಕಾರವೇ ಕೆರೆಗಳನ್ನ ‘ಗುಳುಂ’ ಮಾಡಿ ‘ರಿಯಲ್ ಎಸ್ಟೇಟ್’ ವ್ಯವಹಾರ ಕುದುರಿಸಿದ್ದನ್ನ ಪ್ರಶ್ನಿಸಿ ಅನೇಕ ಪರಿಸರವಾದಿಗಳು ಕೋರ್ಟ್ ಮೆಟ್ಟಿಲೇರಿದ್ದಾರೆ. ಅಂತಹ ಅನೇಕರು ಇಲ್ಲೇ ನಮ್ಮೊಂದಿಗಿದ್ದೀರ. ನೀವೆಲ್ಲಾ ನಮ್ಮ ಹೆಮ್ಮೆ.“ ಎಂದು ಸಭಿಕರ ನಡುವೆಯೇ ಸರಳವಾಗಿ ಕುಳಿತ ಮಹತ್ತರ ಸಾಧನೆ ಮಾಡಿದ ನಿಜವಾದ ಹೀರೋಗಳನ್ನು ತೋರಿಸಿ ಚಪ್ಪಾಳೆ ತಟ್ಟಿದರು. ಸಭಿಕರೂ ಚಪ್ಪಾಳೆಗೆ ಕೈಜೋಡಿಸಿದರು.
ಪ್ರೊಫೆಸರ್ ನೇಸರ ತಮ್ಮ ಮಾತನ್ನು ಮುಂದುವರೆಸುತ್ತಾ, “ಕೆರೆಗಳ ಬಗ್ಗೆ, ಪರಿಸರದ ಬಗ್ಗೆ ಕಹಿ ಸತ್ಯಗಳನ್ನ ಗಮನಿಸಿಯೂ ಗಮನಿಸದಂತೆ ಹೇಗಿರಲು ಸಾಧ್ಯ ಹೇಳಿ? ಕೆರೆಗಳಂದ್ರೆ, ನಾವು ವಾಕಿಂಗ್ ಹೋದಾಗ ಚೆಂದ ಕಾಣೋಕೆ ಇರೋ ನೀರಿರೋ ಜಾಗ ಮಾತ್ರಾನಾ? ಬೋಟಿಂಗ್ ಹೋಗಿ ಸೆಲ್ಫಿ ತೆಕ್ಕೊಳಕ್ಕೆ ಇರೋ ಜಾಗ ಮಾತ್ರಾನಾ? ಕೆರೆಗಳು ತನ್ನಲ್ಲೇ ಅದೆಷ್ಟು ಜೀವವೈವಿಧ್ಯವನ್ನ ಅಡಗಿಸಿಕೊಂಡಿರತ್ತೆ ಗೊತ್ತಾ? ಆ ನೀರಿನೊಳಗೆ ಅಡಗಿರುವ ವಿಶಿಷ್ಟ ಸೂಕ್ಷ್ಮಾಣುಜೀವಿಗಳಿಂದಾ ಮೊದಲ್ಗೊಂಡು, ನೀರಲ್ಲೇ ಬೆಳೆಯೋ ಸಸ್ಯಗಳು, ನೀರಲ್ಲೇ ಮೊಟ್ಟೆ ಇಟ್ಟು ಮರಿ ಮಾಡೋ ನೂರಾರು ಬಗೆಯ ಕೀಟಗಳು, ಅವುಗಳನ್ನೇ ಆಹಾರವಾಗಿ ಸೇವಿಸೋ ಅನೇಕ ಪ್ರಭೇದಗಳ ಮೀನುಗಳು, ಕೆರೆಯ ಬದುವಿನಲ್ಲಿ ಬೆಳೆಯುವ ಗಿಡಗಂಟೆಗಳು, ನೀರಲ್ಲೇ ಸಂಸಾರ ಮಾಡೋ ಹಾವುಗಳು, ಕೆರೆಗಳ ಮೇಲೇ ಅವಲಂಬಿತವಾಗಿರುವ ಅನೇಕ ಬಗೆಯ ಹಕ್ಕಿಗಳು – ಹೀಗೆ ಸಾವಿರಾರು ಪ್ರಭೇದಗಳಿರುವ ಜೀವಜಾಲದ ಜೀವನಾಡಿ – ಈ ಕೆರೆಗಳು. ದೂರದ ಊರುಗಳಿಂದ ಮಾತ್ರವಲ್ಲ, ಸೈಬೀರಿಯಾದಂತಹ ದೂರದ ದೇಶಗಳಿಂದಲೂ ವಲಸೆ ಬರುವ ಹಕ್ಕಿಗಳಿಗೆ ಈ ಕೆರೆಗಳೇ ತಂಗುದಾಣ! ಅಷ್ಟೆ ಅಲ್ಲದೇ, ನೈಸರ್ಗಿಕ ಇಂಗುಗುಂಡಿಗಳಂತೆ ಕೆಲ್ಸ ಮಾಡಿ, ಭೂಮಿಯೊಳಗಿನ ಶುದ್ಧನೀರಿನ ಮಟ್ಟವನ್ನ ಕಾಪಾಡೋಕೆ ಕೂಡ ಕೆರೆಗಳು ಬಹಳಾ ಸಹಾಯ ಮಾಡತ್ವೆ” ಎಂದು ಒಂದೇ ಉಸಿರಿನಲ್ಲಿ ವಿವರಿಸಿದರು.
ಅಪ್ಪಟ ನೀರವತೆಯೊಂದಿಗೆ ಗಮನವಿಟ್ಟು ಕೇಳುತ್ತಿದ್ದ ಸಭಿಕರನ್ನು ನೋಡಿ, ತಮ್ಮ ಮಾತನ್ನು ಮುಂದುವರೆಸುತ್ತಾ, “ಇಂತಹ ಕೆರೆಗಳಲ್ಲಿ ಈಗ, ಜೀವ ಸಂಕುಲದ ಸಂಖ್ಯೆಯಲ್ಲಿ ಇಳಿಮುಖವಾಗ್ತಾ ಇದೆ. ಮೊನ್ನೆ ಹೊಸಕೋಟೆ ಕೆರೆಗೆ ಪಕ್ಷಿವೀಕ್ಷಣೆಗೆ ಹೋಗಿದ್ದೆ. ಪ್ರತೀ ವರ್ಷವೂ ಅಲ್ಲಿ ಕಾಣಸಿಗುವ ಸ್ಥಳೀಯ ಮತ್ತು ವಲಸಿಗ ಹಕ್ಕಿಗಳ ಲೆಕ್ಕ ಇಡುವ ಗೆಳೆಯರೊಬ್ಬರು, ನನ್ನ ಜೊತೆಗೆ ಬಂದಿದ್ರು. ಅವರು ತಮ್ಮ ಅನುಭವ ಮತ್ತು ಸಮೀಕ್ಷೆಗಳ ಆಧಾರದ ಮೇಲೆ ಹೇಳಿದ್ದೇನಂದ್ರೆ, ಅಲ್ಲಿ ಕಾಣಸಿಗುವ ಹಕ್ಕಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಅಪಾರವಾಗಿ ಇಳಿಮುಖವಾಗ್ತಾ ಇದೆಯಂತೆ. ಹಾಗೆ ನೋಡಿದ್ರೆ, ಹೊಸಕೋಟೆ ಕೆರೆಯನ್ನ ‘ಐ.ಬಿ.ಎ’ ಅಂತಾರೆ. ಅಂದ್ರೆ ‘ಇಂಪಾರ್ಟೆಂಟ್ ಬರ್ಡ್ ಏರಿಯಾ’. ಅಂತಹ ಕೆರೆಯದ್ದೇ ಈ ಪರಿಸ್ಥಿತಿಯಾದ್ರೆ, ಇನ್ನು ಸಣ್ಣ ಪುಟ್ಟ ಕೆರೆಗಳ ಪಾಡೇನು ಅಲ್ವಾ? ಇಂತಹ ಜೀವಸಂಕುಲದ ಬ್ಯಾಲೆನ್ಸ್ ಹಾಳಾಗ್ತಾ ಇದೆ ಅಂದ್ರೆ, ಅದಕ್ಕೆ ಕಾರಣ ಒಂದೇ ಪ್ರಾಣಿ – ಅದು ಮನುಷ್ಯನೇ! ಆದರೆ, ವಿಚಿತ್ರ ನೋಡಿ! ಈ ಸಮಸ್ಯೆಯನ್ನ ಸರಿಮಾಡಲು ಕೂಡ ಶಕ್ತಿಯಿರುವುದೂ ಅದೇ ಪ್ರಾಣಿಗೆ – ಅಂದರೆ ನಮಗೇ! ಹಾಗಿರುವಾಗ, ನಾವು ಈ ಜೀವಜಗತ್ತಿನ ಜೀವಸೆಲೆಯಾದ ಕೆರೆಗಳನ್ನ, ಪರಿಸರವನ್ನ ಉಳಿಸೋಕೆ, ಅದರ ಬಗ್ಗೆ ಅರಿವು ಮೂಡಿಸೋಕೆ ಏನೇನು ಮಾಡ್ಬಹುದು, ಯೋಚಿಸೋಣ, ಇಂದಿನ ವಿಚಾರ ವಿನಿಮಯದಲ್ಲಿ ಒಂದು ಪರಿಹಾರ ಕಂಡುಕೊಳ್ಳೋಣ” ಎನ್ನುತ್ತಾ ಭರವಸೆಯ ಬತ್ತಿಗೆ ಎಣ್ಣೆ ಎರೆದರು.
ಇದನ್ನೆಲ್ಲಾ ಕೇಳುತ್ತಿದ್ದ ವಿದ್ಯಾರ್ಥಿಗಳಿಗಂತೂ, ತಮ್ಮ ತಮ್ಮ ಊರನ್ನು ಉಳಿಸಿಕೊಳ್ಳಲು, ತಮ್ಮ ಊರಿನ ಪರಿಸರ, ಕೆರೆ-ಕಟ್ಟೆಗಳನ್ನು ಕಾಪಾಡಲು ಪಣತೊಡಲೇಬೇಕು, ಕೈಲಾದದ್ದು ಮಾಡಲೇಬೇಕೆಂಬ ಉತ್ಕಟ ಉಮೇದು ಹುಟ್ಟಿತು. ವಿಚಾರ ಸಂಕಿರಣದ ಮುಖ್ಯ ಭಾಗವಾಗಿ ವಿದ್ಯಾರ್ಥಿಗಳಿಂದ ವಿಚಾರ ವಿನಿಮಯ, ತಮ್ಮ ಯೋಜನೆಗಳ ವಿವರಣೆ, ಸಾಕ್ಷ್ಯಚಿತ್ರ ಪ್ರದರ್ಶನ ಬಾಕಿಯಿತ್ತು. ಇಂತಹ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಮನಸ್ಪೂರ್ತಿಯಾಗಿ ಸಂಜೆಯವರೆಗೂ ಭಾಗವಹಿಸಿದ ಕಾವ್ಯ, ತನ್ನ ಮುಂದಿನ ಲೇಖನದಲ್ಲಿ ಕೆರೆಗಳ ಬಗ್ಗೆ ಏನು ಬರೆಯಬೇಕೆಂದು ತನ್ನ ನೋಟ್ ಬುಕ್ಕಿನಲ್ಲಿ ಗುರುತುಹಾಕಿಕೊಂಡಳು. ಹಲಸೂರು ಕೆರೆಯು ಸೂರ್ಯಾಸ್ತಕ್ಕೆ ಸಾಕ್ಷಿಯಾಗುತ್ತಾ, ಚಿನ್ನದ ಬಣ್ಣಕ್ಕೆ ತಿರುಗುತ್ತಿತ್ತು. ಅದನ್ನು ಕಂಡ ಕಾವ್ಯಳಿಗೆ ಒಂದು ಕ್ಷಣ ಹಳೆಯ ಬೆಂಗಳೂರಿನ ಸುವರ್ಣಯುಗವೇ ಮರುಕಳಿಸಿತೇನೋ ಎಂದೆನಿಸಿತು. ಮುಂದಿನ ತಲೆಮಾರಿನ ಮಕ್ಕಳು ಪಣತೊಟ್ಟರೆ, ಹಾಳಾಗುತ್ತಿರುವ ಪರಿಸರ ಹಸನಾಗಲು ಖಂಡಿತವಾಗಿ ಸಾಧ್ಯ ಎಂದೆನಿಸಿ ಮನಸ್ಸು ಹಗುರಾಯಿತು. ಸಾರ್ಥಕವಾಗಿ ದಿನಕಳೆದ ಕಾವ್ಯ, ತನ್ನ ತಂಗಿ ವಿಭಾಳೊಂದಿಗೆ ಇಂದಿನ ಕಾರ್ಯಕ್ರಮದ ಯಾವ ಯಾವ ವಿವರಗಳನ್ನು ಚರ್ಚಿಸಬಹುದು ಎಂದು ಯೋಚಿಸುತ್ತಾ ಮೆಟ್ರೋನಿಲ್ದಾಣದ ಕಡೆಗೆ ನಡೆದಳು.
(ಹಿಂದಿನ ಕಂತು: ಬೇಟೆಗಾರ ಕೀಟವೇ ಬೇಟೆಯಾದಾಗ!)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.

