Advertisement
ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್ ಕಾವ್ಯ ಪರಿಚಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

ಗ್ಯೋರ್ಗಿ ಗೊಸ್ಪೊಡಿನೊವ್ ಅನೇಕ ವಿಧಗಳಲ್ಲಿ ಒಬ್ಬ ವಿಶಿಷ್ಟ ಬರಹಗಾರ. ನಾನು ಅವರ ಬರಹಗಳನ್ನು ಮೊದಲಿನಿಂದಲೂ ಓದುತ್ತಿದ್ದೇನೆ ಹಾಗೂ ಕುತೂಹಲಕಾರಿ ಪರಿಕಲ್ಪನೆ, ಅದ್ಭುತ ಕಲ್ಪನೆ ಮತ್ತು ನಿಖರವಾದ ಬರವಣಿಗೆಯ ತಂತ್ರವನ್ನು ಅವರ ಹಾಗೆ ಬೇರೆ ಯಾರಿಂದಲೂ ಸಂಯೋಜಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವಲೋಕ ಕಾವ್ಯ ವಿಹಾರಸರಣಿಯಲ್ಲಿ ಬಲ್ಗೇರಿಯಾ ದೇಶದ ಕವಿ ಗ್ಯೋರ್ಗಿ ಗೊಸ್ಪೊಡಿನೊವ್-ರವರ (Georgi Gospodinov) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಇಂದಿನ ಯುರೋಪಿನ ಅಗ್ರಗಣ್ಯ ಬರಹಗಾರರಲ್ಲಿ ಒಬ್ಬರೆಂದು ಪರಿಗಣಿಸಲಾದ ಗ್ಯೋರ್ಗಿ ಗೊಸ್ಪೊಡಿನೊವ್, ಅತಿ ಹೆಚ್ಚು ಅನುವಾದಿಸಲಾದ ಸಮಕಾಲೀನ ಬಲ್ಗೇರಿಯನ್ ಬರಹಗಾರರಲ್ಲಿ ಒಬ್ಬರು. ಈಗ ವಿಶ್ವದಾದ್ಯಂತ ಒಬ್ಬ ಖ್ಯಾತ, ಅಂತರರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗಳನ್ನು ಗೆದ್ದ ಕಾದಂಬರಿಕಾರರೆಂದು ಹೆಸರು ಗಳಿಸಿರುವ ಗೊಸ್ಪೊಡಿನೊವ್, ತಮ್ಮ ಸಾಹಿತ್ಯ ಪಯಣವನ್ನು ಕಾವ್ಯದಿಂದ ಪ್ರಾರಂಭಿಸಿದರು, ಹಾಗೂ ಈಗಲೂ ಸಹ ಅವರು ಕಾವ್ಯವನ್ನು ಗದ್ಯದೊಂದಿಗೆ ಪರ್ಯಾಯವಾಗಿ ಬರೆಯುತ್ತಾರೆ. ಅವರ ಮೊದಲ ಕವನ ಸಂಕಲನದಲ್ಲೇ ಅವರು ನಂತರ ಗದ್ಯದಲ್ಲಿ ಏನನ್ನು ಬಹಿರಂಗಪಡಿಸುತ್ತಾರೆ ಎಂಬುದನ್ನು ನೀವು ನೋಡಬಹುದು: ವಿವರಗಳ ಪ್ರಾಮುಖ್ಯತೆ, ದೈನಂದಿನ ಜಗತ್ತಿಗೆ ಗಮನ ಮತ್ತು ದೊಡ್ಡ ಮತ್ತು ಸಣ್ಣ ಕಥೆಗಳ ಸಮಾನ ಸ್ಥಾನಮಾನ. ಅವರ ಮೊದಲ ಕವನ ಸಂಕಲನ Lapidarium, National Debut Prize ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ಅವರ ಮುಂದಿನ ಸಂಕಲನ, The Cherry Tree of One People, ಬಲ್ಗೇರಿಯನ್ ಬರಹಗಾರರ ಸಂಘದಿಂದ ವರ್ಷದ ಅತ್ಯುತ್ತಮ ಪುಸ್ತಕ ಪ್ರಶಸ್ತಿಯನ್ನು ಗೆದ್ದುಕೊಂಡಿತು. Letters to Gaustin ಮತ್ತು ಸಂಗ್ರಹಿತ ಕೃತಿ Ballads and Maladies ಇವರ ನಂತರದ ಸಂಗ್ರಹಗಳು.

The Cherry Tree of One People ಎಂಬ ಸಂಗ್ರಹವು ಬಲ್ಗೇರಿಯನ್ ಸ್ವ-ವ್ಯಕ್ತಿತ್ವತೆಗೆ ಸಂಬಂಧಿಸಿದ ಎರಡು ಸಂಕೇತಗಳ ಸುತ್ತಲೂ ನಿರ್ಮಿಸಲಾಗಿದೆ. ಮೊದಲನೆಯದು, ಒಟೊಮನ್ ಆಳ್ವಿಕೆಯ ವಿರುದ್ಧ ಬಲ್ಗೇರಿಯನ್ ದಂಗೆಯ ಸೋಲಿನ ಕಥೆಯಾಗಿದೆ, ಏಕೆಂದರೆ ಶಿರ್ಷಿಕೆಯಲ್ಲಿ ಹೆಸರಿಸಿದ ಚೆರಿ ಮರದಿಂದ ಬಲ್ಗೇರಿಯನ್ನರು ಒಟೊಮನ್ನರ ವಿರುದ್ಧ ಹೋರಾಡಲು ಫಿರಂಗಿಯನ್ನು ನಿರ್ಮಿಸಬೇಕಾಗಿತ್ತು. ಆದಾಗ್ಯೂ, ಫಿರಂಗಿಯ ಪಕ್ಕದಲ್ಲಿ, ಗೊಸ್ಪೊಡಿನೊವ್ ಎರಡನೇ ಸಂಕೇತವನ್ನು ಇಡುತ್ತಾರೆ ಚೆರ್ರಿ ಕಾಂಪೋಟ್’ ಎಂಬ ಒಂದು ಹಣ್ಣು ಸಕ್ಕರೆ ಮಿಶ್ರಿತ ಸಿಹಿ ತಿಂಡಿ, ಇದು ಬಲ್ಗೇರಿಯನ್ ಅನೈತಿಹಾಸಕತೆಯನ್ನು ಸಂಕೇತಿಸುತ್ತದೆ, ದೈನಂದಿನ ಮತ್ತು ಸಾಮಾನ್ಯ ವ್ಯವಹಾರಗಳ ಜಗತ್ತು; ಲೇಖಕರ ಪ್ರಕಾರ, ಇದು ಬಲ್ಗೇರಿಯನ್ನರಿಗೆ ಅತ್ಯಂತ ಸಾಂಕೇತಿಕವಾಗಿದೆ.

ಭಾಷೆಯ ಕಾರ್ಯವಿಧಾನಗಳ ಬಗ್ಗೆ ಅರಿವಿದ್ದ ಒಬ್ಬ ಅತ್ಯುತ್ತಮ ಕವಿಯಾಗಿ ಮಾತ್ರವಲ್ಲದೆ, ಬಲ್ಗೇರಿಯನ್ ಸಾಹಿತ್ಯದಲ್ಲಿ ಡಾಕ್ಟರೇಟ್ ಪಡೆದ ಒಬ್ಬ ಸಂಶೋಧಕನ ಜ್ಞಾನ ಮತ್ತು ಅನುಭವದ ಹಿನ್ನೆಲೆಯಲ್ಲಿ ಗೊಸ್ಪೊಡಿನೊವ್ ಗದ್ಯ ಜಗತ್ತನ್ನು ಪ್ರವೇಶಿಸಿದರು. 1990-ರ ದಶಕದಲ್ಲಿ, ಸಹ ಕವಿಗಳು ಮತ್ತು ಸಾಹಿತ್ಯ ವಿದ್ವಾಂಸರನ್ನು ಸೇರಿಸಿಕೊಂಡು, ಅವರು ಆಧುನಿಕೋತ್ತರತೆಯೊಂದಿಗೆ ಗುರುತಿಸಿಕೊಳ್ಳುವ ಕ್ರಿಯಾತ್ಮಕ ಕೂಟವೊಂದನ್ನು ರಚಿಸಿದರು. ‘ಉಕ್ಕಿನ ಪರದೆ’ಯ ಹಿಂದೆ ಕಳೆದ ಉಸಿರುಕಟ್ಟುವ ದಶಕಗಳ ನಂತರ, ಪಶ್ಚಿಮದಿಂದ ಆಮದು ಮಾಡಿಕೊಂಡ ಈ ಪ್ರವೃತ್ತಿಯು ಆ ಕಾಲದ ಬಲ್ಗೇರಿಯನ್ ಮಾನವಿಕತೆ ಮತ್ತು ಸಾಹಿತ್ಯಕ್ಕೆ ಸ್ವಾತಂತ್ರ್ಯದ ಉಸಿರಾಗಿತ್ತು.

ಅವರ ಮೊದಲ ಗದ್ಯ ಪುಸ್ತಕ, Natural Novel ಎಂಬ ಕಾದಂಬರಿ, ಅವರಿಗೆ ಅಂತರರಾಷ್ಟ್ರೀಯ ಮೆಚ್ಚುಗೆಯನ್ನು ತಂದುಕೊಟ್ಟಿತು. 1999-ರಲ್ಲಿ ಪ್ರಕಟವಾದ ಮತ್ತು ನಂತರ 2005-ರಲ್ಲಿ ಇಂಗ್ಲಿಷ್‌ ಅನುವಾದದಲ್ಲಿ ಪ್ರಕಟವಾದ ಈ ಕಾದಂಬರಿಯು 23 ಭಾಷೆಗಳಲ್ಲಿ ಅನುವಾದಗೊಂಡಿದೆ. And Other Stories ಸೇರಿದಂತೆ ಅನೇಕ ಕಥಾ ಸಂಕಲನಗಳನ್ನು ಸಹ ಪ್ರಕಟಿಸಿದ್ದಾರೆ. ಗೊಸ್ಪೊಡಿನೊವ್ ಕಿರುಚಿತ್ರಗಳಿಗೆ ಚಿತ್ರಕಥೆಗಳನ್ನು ಬರೆದಿದ್ದಾರೆ, ಬಲ್ಗೇರಿಯಾದ ದಿನಪತ್ರಿಕೆಗಳಲ್ಲಿ ಒಂದಕ್ಕೆ ಅಂಕಣಕಾರರಾಗಿದ್ದಾರೆ, ಹಲವಾರು ನಾಟಕಗಳನ್ನು ಬರೆದಿದ್ದಾರೆ, ಹಾಗೂ ಅವುಗಳಲ್ಲಿ, And The Apocalypse Comes at 6 pm ಅತ್ಯುತ್ತಮ ನಾಟಕಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದಿದೆ. ಅವರು The Invisible Crises ಎಂಬ ಪ್ರಬಂಧ ಸಂಗ್ರಹವನ್ನು ಬರೆದಿದ್ದಾರೆ ಹಾಗೂ I’ve Lived Socialism: 171 Personal Stories ಸಂಗ್ರಹದ ಸಂಪಾದಕರಾಗಿದ್ದಾರೆ.

ಇಂಗ್ಲಿಷ್ ಮಾತನಾಡುವ ಜಗತ್ತಿನಲ್ಲಿ ಅವರ ಸ್ವಂತ ಸಾಹಿತ್ಯ ಸಾಧನೆಗಳ ಈ ಪ್ರಭಾವಶಾಲಿ ಪಟ್ಟಿಯ ಹೊರತಾಗಿಯೂ, ಗೊಸ್ಪೊಡಿನೊವ್ ಬಹುಶಃ ಅವರ ಎರಡು ಇತ್ತೀಚಿನ ಕಾದಂಬರಿಗಳಿಗಾಗಿ ಹೆಚ್ಚು ಹೆಸರುವಾಸಿಯಾಗಿದ್ದಾರೆ: Bulgarian novel of the year ಪ್ರಶಸ್ತಿ, 2012-ರ ಸೋಫಿಯಾ ಸಾಹಿತ್ಯ ಪ್ರಶಸ್ತಿ, ಹಾಗೂ ಇಟಲಿಯ ಸ್ಟ್ರೆಗಾ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾದ The Physics of Sorrow ಎಂಬ ಹೆಸರಿನ ಕಾದಂಬರಿ. ಬರ್ಲಿನ್‌-ನಲ್ಲಿ ಅಸಾಧಾರಣ ಮತ್ತು ಪ್ರಕ್ಷುಬ್ಧ ಎಂದು ಕರೆಯಲಾದ ಈ ಕಾದಂಬರಿ Central European Angelus Award ಮತ್ತು Jan Michalski Prizeಗಳನ್ನು ಗೆದ್ದುಕೊಂಡಿತು. ಈ ಕಾದಂಬರಿಯನ್ನು 2015-ರಲ್ಲಿ Angela Rodel ಇಂಗ್ಲಿಷಿಗೆ ಅನುವಾದಿಸಿದರು. ನ್ಯೂ ಯಾರ್ಕರ್‌ ಪತ್ರಿಕೆಯಲ್ಲಿ ಬರೆಯುತ್ತಾ ಗಾರ್ತ್ ಗ್ರೀನ್‌ವೆಲ್ ಎಂಬ ವಿಮರ್ಶಕ ಹೀಗೆ ಹೇಳಿದರು, “The Physics of Sorrow-ದಲ್ಲಿ ನಿಜವಾದ ಅನ್ವೇಷಣೆ ಎಂದರೆ ದುಃಖದ ಜತೆ ಬದುಕಲು ಒಂದು ಮಾರ್ಗವನ್ನು ಕಂಡುಕೊಳ್ಳುವುದು, ಅದು ಸಹಾನುಭೂತಿ ಮತ್ತು ಆರೋಗ್ಯಕರ ಹಿಂಜರಿಕೆಯ ಮೂಲವಾಗಲು ಅವಕಾಶ ಮಾಡಿಕೊಡುವುದು,”ಬಲ್ಗೇರಿಯಾದಲ್ಲಿ ದೈನಂದಿನ ಜೀವನವನ್ನು ಕಾಲಾನುಕ್ರಮಗೊಳಿಸುವುದು ಎಂದರೆ ಬಲ್ಗೇರಿಯನ್ದುಃಖ’ವನ್ನು ಸಂವಹನ ಮಾಡಲು ಪ್ರಯತ್ನಿಸುವುದು, ಇದು ಭಾಷಾಶಾಸ್ತ್ರದ ನೆಲೆಯಲ್ಲೂ ಹಾಗೂ ಆಧ್ಯಾತ್ಮಿಕದ ನೆಲೆಯಲ್ಲೂ ಸಂದಿಗ್ಧತೆಯನ್ನು ಉಂಟುಮಾಡುತ್ತದೆ.”

Time Shelter ಎಂಬ ಕಾದಂಬರಿ 2023-ರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು, ಇದನ್ನು ಗೊಸ್ಪೊಡಿನೊವ್ ಅನುವಾದಕಿ ಏಂಜೆಲಾ ರೋಡೆಲ್ ಅವರೊಂದಿಗೆ ಹಂಚಿಕೊಂಡರು. ಈ ಕಾದಂಬರಿಯು Strega European Prize ಮತ್ತು New Yorker Best Book of the Year ಪ್ರಶಸ್ತಿಯನ್ನು ಸಹ ಗೆದ್ದಿತು. Publishers Weekly ಪತ್ರಿಕೆ Time Shelter ಅನ್ನು ಚಿಂತನೆಗೆ ಹಚ್ಚುವ ಮತ್ತು ಪ್ರಬಲ ವಿಡಂಬನೆಯಿಂದ ಕೂಡಿದ ಕಾದಂಬರಿ ಎಂದು ಕರೆಯುತ್ತಾ, ಕಾಫ್ಕಾ ಅವರ ಪಕ್ಕದಲ್ಲಿ ಸ್ಥಾನ ಪಡೆಯಲು ಅರ್ಹವಾಗಿದೆ ಎಂದು ಹೇಳುತ್ತದೆ. ನೊಬೆಲ್ ಪ್ರಶಸ್ತಿ ವಿಜೇತ ಕಾದಂಬರಿಗಾರ್ತಿ ಓಲ್ಗಾ ಟೋಕಾರ್ಕ್ಜುಕ್ ಹೇಳುತ್ತಾರೆ, “ಗ್ಯೋರ್ಗಿ ಗೊಸ್ಪೊಡಿನೊವ್ ಅನೇಕ ವಿಧಗಳಲ್ಲಿ ಒಬ್ಬ ವಿಶಿಷ್ಟ ಬರಹಗಾರ. ನಾನು ಅವರ ಬರಹಗಳನ್ನು ಮೊದಲಿನಿಂದಲೂ ಓದುತ್ತಿದ್ದೇನೆ ಹಾಗೂ ಕುತೂಹಲಕಾರಿ ಪರಿಕಲ್ಪನೆ, ಅದ್ಭುತ ಕಲ್ಪನೆ ಮತ್ತು ನಿಖರವಾದ ಬರವಣಿಗೆಯ ತಂತ್ರವನ್ನು ಅವರ ಹಾಗೆ ಬೇರೆ ಯಾರಿಂದಲೂ ಸಂಯೋಜಿಸಲು ಸಾಧ್ಯವಿಲ್ಲ ಎಂದು ನನಗೆ ತಿಳಿದಿದೆ. ಮತ್ತು ಯೂರಿ ಹೆರೆರಾ ಹೇಳುತ್ತಾರೆ, “ಗೊಸ್ಪೊಡಿನೊವ್ ಆತ್ಮದ ಸಸ್ಯಶಾಸ್ತ್ರಜ್ಞನಂತೆ ಬರೆಯುತ್ತಾರೆ: ಸುಂದರವಾದ ಅಣಬೆಗಳು ಮತ್ತು ನಮ್ಮೊಳಗಿನ ಅಡಗಿರುವ ಗಿಡಮೂಲಿಕೆಗಳು ದೂರದಿಂದ ಹೇಗೆ ಕಾಣುತ್ತವೆ ಎಂಬುದರ ಹೊರತಾಗಿಯೂ ಅವುಗಳ ಪರಿಣಾಮಗಳನ್ನು ಅವನು ತಿಳಿದಿದ್ದಾರೆ. ಅವರು ಅಧ್ಯಯನ ಮಾಡುವ ಜೀವಿಗಳು ನಮ್ಮ ಹಿಂದಿನ ಆವೃತ್ತಿಗಳು, ಮರಳಿ ಪಡೆಯಲಾಗದವು, ಮರುಸೃಷ್ಟಿಸಲ್ಪಟ್ಟವು, ನಮ್ಮ ಭೂತಕಾಲದ ಭವಿಷ್ಯದ ಆವೃತ್ತಿಗಳು ಮತ್ತು ಹೇಗೆ ನಾವು ಅವುಗಳನ್ನು ಮೌನವಾಗಿ ಬೆಳೆಸುವ ಕಲ್ಪನೆಗಳು ಮತ್ತು ವಿಷಗಳಿಂದ ತುಂಬಿಸುತ್ತೇವೆ ಎಂದು ಅವರ ಬರವಣಿಗೆಯಲ್ಲಿ ವ್ಯಕ್ತವಾಗುತ್ತದೆ.”

“1970-ರ ದಶಕದಲ್ಲಿ “ನಾನು ಕವಿತೆ ಬರೆಯಲು ಪ್ರಾರಂಭಿಸಿದೆ. ನನ್ನ ತಾಯಿ ನನ್ನ ಕವಿತೆಗಳನ್ನು ಪತ್ತೆ ಮಾಡಿ ನಮ್ಮ ಊರಿನಲ್ಲಿದ್ದ ಒಬ್ಬನೇ ಒಬ್ಬ ಕವಿಗೆ ತೋರಿಸಿದರು. ಅವರು ಕವನಗಳನ್ನು ಮೆಚ್ಚಿದರು ಮತ್ತು ಬರೆಯಲು ನನ್ನನ್ನು ಪ್ರೋತ್ಸಾಹಿಸಿದರು. ತಣ್ಣಗಾಗುವುದರ ಬಗ್ಗೆ, ಸಾವಿನ ಬಗ್ಗೆ ಬರೆದಿದ್ದೇನೆ – ಮಕ್ಕಳಿಗೆ ಅಸಾಮಾನ್ಯವೆಂದು ಪರಿಗಣಿಸಲಾದ ವಿಷಯಗಳು ಇವು. ಆದರೆ ಮಕ್ಕಳು ಸಾವಿನ ಬಗ್ಗೆಯೂ ಯೋಚಿಸುತ್ತಾರೆ. ನನ್ನನ್ನು ಯಾವಾಗಲೂ ಕಾದಂಬರಿಗಳನ್ನು ಬರೆಯುವ ಕವಿ ಎಂದು ಪರಿಗಣಿಸಲಾಗುತ್ತಿತ್ತು. ಮತ್ತು ನಾನು ಇಂದಿಗೂ ಕವಿತೆಗಳನ್ನು ಬರೆಯುತ್ತಲಿರುವೆ. ಒಬ್ಬ ಕವಿಯಾಗಿ ಗದ್ಯ ಬರೆಯುವಾಗ, ಗದ್ಯಕ್ಕೆ ನೀವು ಯಾವ ಪ್ರಭಾವಗಳನ್ನು ತರುತ್ತೀರಿ? ಭಾಷೆ ಎರಡರಲ್ಲೂ ನಿರ್ಣಾಯಕವಾದದ್ದು. ಜನರು ಸಾಮಾನ್ಯವಾಗಿ ಗದ್ಯದಲ್ಲಿ ಯೋಚಿಸುತ್ತಾರೆ, ವಿಷಯಗಳನ್ನು ನಿರೂಪಿಸಲು ಭಾಷೆಯನ್ನು ಬಳಸುತ್ತಾರೆ. ನಾನು ನನ್ನ ಕಾದಂಬರಿಗಳನ್ನು ಕಾವ್ಯದಂತೆ ಬರೆಯುತ್ತೇನೆ. ನನಗೆ, ಪ್ರತಿಯೊಂದು ವಾಕ್ಯವೂ ಮಹತ್ವದ್ದಾಗಿದೆ. ಅದಕ್ಕಾಗಿಯೇ ನನ್ನ ಕಾದಂಬರಿಗಳನ್ನು ಅನುವಾದಿಸುವುದು ಬಹಳ ಸುಲಭವೇನಲ್ಲ. ನನ್ನ ಗದ್ಯದ ಲಯವು ನಾನು ಮೊದಲು ಬರೆದ ಕಾವ್ಯವನ್ನು ಹೋಲುತ್ತದೆ. ಸಾಹಿತ್ಯ ಪ್ರಕಾರಗಳ ನಡುವೆ ನನಗೆ ದೊಡ್ಡ ವ್ಯತ್ಯಾಸ ಕಾಣುವುದಿಲ್ಲ.” ಎಂದು ಸಂದರ್ಶನವೊಂದರಲ್ಲಿ ಗ್ಯೋರ್ಗಿ ಗೊಸ್ಪೊಡಿನೊವ್ ಹೇಳುತ್ತಾರೆ.

೧.

ಮುಂಜಾನೆಯ ಒಂದು ಅಲ್ಪ ಅಪರಾಧ
ಮೂಲ: A Petty Morning Crime
Trans. from the Bulgarian into English by Maria Vassileva

ಹೊರಗೆ ಮಳೆ ಸುರಿದಿತ್ತು
ನೀನು ಹೊರಗೆ ಕಾಲಿಡುವೆ ನಿದ್ದೆಯ ಜಡದಲ್ಲಿ
(ಪಾಯಿಖಾನೆಗೆ ಹೋಗುವಾಗ)
ಪಚಕ್‌ಕ್‌ಕ್
ನಿನ್ನ ಕಾಲಡಿಯಲ್ಲಿ ಒಂದು ಬಸವನಹುಳು

ಇದೊಂದು ಎರಡನೆಯ ದರ್ಜೆಯ ಕೊಲೆ
ಆದರೆ ಈ ಅರಿವು ಪಾಪಪ್ರಜ್ಞೆಯನ್ನು ತಗ್ಗಿಸದು
ನೀನು ಸುತ್ತ ನೋಡುವೆ
ಮುಂಜಾನೆಗೆ ಯಾರೂ ಸಾಕ್ಷಿಯಿಲ್ಲ
ಬದಿಯಲ್ಲಿ ಮಂಜುತೊಯ್ದ ಹುಲ್ಲಿನೊಳಗೆ
ತಳ್ಳುವೆ ನೀನು ದೇಹವನ್ನು
ಆದರೂ ಪಾಪಪ್ರಜ್ಞೆಯಿಂದ ಮುಕ್ತಿಯಿಲ್ಲ
ಎಷ್ಟು ಸಣ್ಣ ಕೊಲೆ ಇದು
ಇದನ್ನು ಮರೆಯುವುದಕ್ಕೆ
ಇಡೀ ದಿನ ಬೇಕಾಗುತ್ತೆ.

ಸಮಯವೆಂಬುದು ಒಂದು ನ್ಯೂಟ್ರಾನ್ ಬಾಂಬು
ಮೂಲ: Time Is a Neutron Bomb
Trans. from the Bulgarian into English by Bilyana Kourtasheva

ಯಾವುದೂ ನಾಶವಾಗಲ್ಲ
ಮನೆಗಳು ಹಾಗೇ ಇರುತ್ತವೆ
ಬೀದಿಗಳು ಹಾಗೇ ಇರುತ್ತವೆ
ಅಂಗಳದಲ್ಲಿರುವ ಚೆರಿ ಮರ ಹಾಗೇ ಇರುತ್ತದೆ
ನಾವು ಮಾತ್ರ ಇರಲ್ಲ
ನ್ಯೂಟ್ರಾನ್‌ ಬಾಂಬಿನ ಬಗ್ಗೆ ಕಲಿತ ಪಾಠವನ್ನು
ನಾನು ನೆನಪಿನಲ್ಲಿಟ್ಟುಕೊಂಡಿದ್ದು ಹೀಗೆ

ಅಂದಿನಿಂದ ನನಗೆ ಅರಿವಾಗಿದ್ದೇನೆಂದರೆ
ಸಾವೆಂಬುದು ನಾನಿಲ್ಲದೆ ಮಾಗುತ್ತಿರುವ
ಒಂದು ಚೆರಿ ಮರ

ಕೇಳಬೇಡ
ಮೂಲ: Ask Not
Trans. from the Bulgarian into English by Bilyana Kourtasheva

ಕೇಳಬೇಡ
ಆಗ ಇಲ್ಲವೆನ್ನಲ್ಲ

ತುಂಬಾ ಸರಳವಿದು
ನೀನು ಬಾಗಿಲನ್ನು ತಟ್ಟದಿದ್ದರೆ
ಒಳಗಿನಿಂದ ‘ಇಲ್ಲ’ ಕೇಳಿಸಲ್ಲ
(ಅದು ನಿನಗಾಗಿ ತೆರೆಯುವುದೂ ಇಲ್ಲ)

ನಾನು ಏನನ್ನೂ ಕೇಳಲ್ಲ
ಅದಕ್ಕೆ
ಯಾರೂ ನನಗೆ ಕೊಟ್ಟಿಲ್ಲ
ಯಾರೂ ನನಗೆ ಇಲ್ಲವೆಂದಿಲ್ಲ

ಓಡಿಯನ್
ಮೂಲ: Odeon
Trans. from the Bulgarian into English by Bilyana Kourtasheva

ಒಂದಾನೊಂದು ದಿನ ನಾವೂ ತಣ್ಣಗಾಗುವೆವು
ಮನೆಯ ಹಿಂದಿನ ವರಾಂಡಾದಲ್ಲಿ ಮರೆತ
ಕಪ್ಪಿನಲ್ಲಿ ಚಹಾ ತಣ್ಣಗಾಗುತ್ತಿರುವ ಹಾಗೆ.
ಮಣ್ಣಿನಲ್ಲಿ ಉದುರಿಬಿದ್ದ ಲಿಲಿ ಹೂಗಳ ಹಾಗೆ,
ಹಳೆಯ ವಾಲ್-ಪೇಪರಿನ ಆರ್ಕಿಡ್ ಹೂಗಳ ಹಾಗೆ
ಒಂದಾನೊಂದು ದಿನ ನಾವೂ ಕಂದಿಹೋಗುವೆವು,
ಆದರೆ ಇಷ್ಟೊಂದು ನವಿರಾಗಿ ಅಲ್ಲ,
ಮತ್ತೆ, ಮತ್ಯಾವುದೋ ಚಲನಚಿತ್ರಗಳಲ್ಲಿ.

ಓಡಿಯನ್: ಗ್ರೀಕ್ ಮೂಲದ ‘ಓಡಿಯನ್’ ಪದದ ಮೂಲ ಅರ್ಥ ‘ಹಾಡುವ ಭವನ.’ ಪ್ರಾಚೀನ ಗ್ರೀಸ್ ಹಾಗೂ ರೋಮ್-ನಲ್ಲಿ ಗಾಯನ, ಸಂಗೀತವಾದನ, ಕಾವ್ಯವಾಚನದಂತಹ ಹಲವು ತರಹದ ಸಂಗೀತ ಕಾರ್ಯಕ್ರಮಗಳಿಗಾಗಿ ನಿರ್ಮಿಸಿದ ಭವನಗಳಿಗೆ ‘ಓಡಿಯನ್’ ಅಂತ ಹೆಸರಿತ್ತು. ಗ್ರೀಕ್ ಹಾಗೂ ರೋಮನ್ ರಂಗಭವನಗಳಿಗಿಂತ ಸಣ್ಣ ಕಟ್ಟಡಗಳಾಗಿದ್ದವು. ಇಪ್ಪತ್ತನೆಯ ಶತಮಾನದ ಆದಿಯಲ್ಲಿ ಫ್ರಾನ್ಸ್ ಹಾಗೂ ಇಟಲಿಯಲ್ಲಿ ಚಲನಚಿತ್ರ ಮಂದಿರಗಳಿಗೆ ‘ಓಡಿಯನ್’ ಅಂತ ಕರೆಯುತ್ತಿದ್ದರು.


ಅರ್ಥವಿವರಣೆಯತ್ತ ಹನ್ನೊಂದು ಪ್ರಯತ್ನಗಳು

ಮೂಲ: Eleven Attempts at a Definition
Trans. from the Bulgarian into W.N. Herbert, Andy Croft, Mark Robinson, Linda France


ಅದು
ಎಲ್ಲೋ ಶುರುವಾಯಿತು
(ಎಲ್ಲಿಯೆಂದು ಅದಕ್ಕೆ ನೆನಪಿಲ್ಲ)
ಅದು ಅಲ್ಲಿಗೆ ಹೋಗಬೇಕು
(ಎಲ್ಲಿಗೆಂದು ಮರೆತುಬಿಟ್ಟಿದೆ)
ಇದೀಗ ಚಲುಸುತ್ತಿದೆ ಅದು


ಅದು
ನೀನು ಯೋಚಿಸುತ್ತಿರುವ ‘ಅದು’ ಅಲ್ಲ
ಅದು
ನಿನ್ನನ್ನು ಹಠಾತ್ತನೆ ತಿರುಗುವಂತೆ ಮಾಡುವ
ಆ ಕೋಣೆಯಲ್ಲಿರುವ ಶೂನ್ಯ


ಅದು
ಎಷ್ಟು ಸಣ್ಣದು, ತನ್ನ ಸಣ್ಣ ‘ಅ’ ಅಕ್ಷರದೊಂದಿಗೆ
ಕೋಮಲವಾದ ಕಿವಿಗಳು ಹಾಗೂ ಬೆಚ್ಚಗಿನ ಪಂಜಗಳೊಂದಿಗೆ
ಇಲ್ಲಿಯವರೆಗೂ ಯಾರೂ ಅದನ್ನು ಕಂಡಿಲ್ಲ
ಇದರಿಂದ ಸಾಬೀತಾಗುತ್ತದೆ
ಅದು ಇದೆಯೆಂದು

ಅದು
ಎಲೆಯನ್ನು ಮರದಿಂದ
ನೀರಿನ ಬಕೇಟಿನೊಳಗೆ
ಬೀಳಿಸುವಂತೆ ಮಾಡಿ
ಆಕಾಶವನ್ನು ಮಸಕಾಗಿಸುವ
ಒಂದು ಹರಿವು


ಅದು
ಹರಡುವ ನಿಶ್ಚಲತೆಯೂ ಹೌದು
ಹಾಗೂ ಎರಡು ಎಲೆಗಳ ನಡುವೆ
ತಿಳಿಯಾಗುತ್ತಿರುವ ಆಕಾಶವೂ


ಆ ದುಂಬಿ ಮತ್ತು ಆ ಗುಲಾಬಿ ಹೂವಿನ
ನಡುವೆ ಏನೋ ಸಂಬಂಧವಿದೆ
ಇದೇ
ಅದು


ಅದು
ಇರುವುದು ‘ಅ’ ಅಕ್ಷರದ ಸುರುಳಿಯಲ್ಲಿ
ಅಥವಾ ‘ಅ’ ಮತ್ತು ‘ದು’ ಅಕ್ಷರಗಳ ನಡುವೆ
ಅಥವಾ ಯಾವ ದೆವ್ವಕ್ಕೆ ಗೊತ್ತು ಅದು ಎಲ್ಲಿದೆಯಂತ
ಆದರೆ ದೆವ್ವಕ್ಕೂ ಗೊತ್ತಿಲ್ಲ


ನೀನು ಅದನ್ನು god ಎಂದು ಅಂದುಕೊಂಡಿರಬಹುದು
ಆದರೆ God ಪದಕ್ಕೆ
capital ಅಕ್ಷರವಿದೆ


ಅದು ಮೃತ್ಯುವೆಂದು ನೀನು ಹೇಳಬಹುದು
ಆದರೆ ಒಮ್ಮೆ ಅದನ್ನು ಆಲಿಸಿ ನೋಡು
ಮೃತ್ಯುವೆ?
ನಾನೊಮ್ಮೆ ಅದರ ರುಚಿ ಕಂಡಿದ್ದೆ
ಹುಳಿಹುಳಿಯಾಗಿತ್ತು ಒರಟಾಗಿತ್ತು
ರಾತ್ರಿಯೆಲ್ಲಾ ವಾಂತಿ ಮಾಡುತ್ತಿದ್ದೆ

೧೦
ಅದು
ನಾಜೂಕು, ಕೈಗೆ ಸಿಗುವಂತಹದ್ದಲ್ಲ
ಅದಕ್ಕೆ ಹೆಸರಿಟ್ಟರೆ ಅದು ಸಾಯುತ್ತೆ
ಅದನ್ನು ಹಿಡಿದರೆ ಅದು ಮಾಯವಾಗುತ್ತೆ
ಶೂನ್ಯದೊಳಗೆ ಕರಗಿಹೋಗುತ್ತೆ

೧೧
(ಮತ್ತೆ ಇದು ಅತಿ ಯಶಸ್ವಿಯಾದ ಪ್ರಯತ್ನ)

ಪ್ರೇಮ
ಮೂಲ: Love
Trans. from the Bulgarian into W.N. Herbert, Andy Croft, Mark Robinson, Linda France

ಪ್ರತಿ ರಾತ್ರಿ
ನಿನ್ನ ಬಳಿ ಮಲಗಿರುವವಳ ಬಗ್ಗೆ
ಕನಸು ಕಾಣುವುದು

ಇಂದೋ ನಾಳೆಯೋ ಯಾ ಈ ಬರುವ ದಿನಗಳಲ್ಲಿ ಒಂದು ದಿನ
ಮೂಲ: Today Tomorrow One Of These Days
Trans. from the Bulgarian into English by Teodora Gandeva

ಥಂಡಿ ಕೋಣೆಯಲ್ಲಿ ನೀನು ಕುಳಿತಿರುವೆ
ಅಕ್ಟೋಬರ್ ಮಾಸದ ಒಂದು
ತಡ ಮಧ್ಯಾಹ್ನ
ನೀನು ಮಾಡಬೇಕೆಂದು ಕನಸುಕಂಡ
ಆಗಲೇ ಬೇರೆ ಯಾರೋ ಮಾಡಿದ
ಚಲನಚಿತ್ರಗಳನ್ನ ನೀನು ನೋಡುವೆ
ನೀನು ಬರೆಯಬೇಕೆಂದು ಯೋಚಿಸಿದ
ಆಗಲೇ ಬರೆದಾದ ಪುಸ್ತಕದ
ಪ್ರತಿಯೊಂದು ಪದವನ್ನು ಬಿಡದೆ ಓದುವೆ
ನೀನು ಬಯಸಿದ ಎಲ್ಲಾ ಹೆಂಗಸರ
ಗಂಡಂದಿರ ಜತೆ ಗೆಳೆತನ ಬೆಳೆಸುವೆ
ತಡ ಅಕ್ಟೋಬರಿನ
ಮಧ್ಯಾಹ್ನದ ಚಳಿಯ
ಒಂದು ದಿನ
ನೀನು ಪಡೆಯದೇ ಇದ್ದ
ಪೋಸ್ಟ್-ಕಾರ್ಡುಗಳನ್ನು
ಕ್ರಮವಾಗಿ ಜೋಡಿಸುತ್ತಿರುವಾಗ
ಸಂಭವಿಸುತ್ತೆ
ಅದು

§ § §
ಮೂಲ: § § §
Trans. from the Bulgarian into English by Miglena Nikolchina

ಪರಮಾತ್ಮನ ಬಣ್ಣ ಕೆಂಪು
ಕಳಿತ ಕುಂದಿಲ್ಲದ ಕೆಂಪು
ಪರಮಾತ್ಮನೊಬ್ಬ ಟೊಮೇಟೋ
ಇದು ಪರಮಾತ್ಮನಿಗಾಗಲಿ
ಟೊಮೇಟೋಗಾಗಲಿ
ಅಗೌರವವೇನಲ್ಲ

About The Author

ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.  ಎಸ್ಟೋನಿಯಾ, ಲ್ಯಾಟ್ವಿಯಾ ಹಾಗೂಲಿಥುವೇನಿಯಾ ದೇಶದ ಕವಿತೆಗಳ ಸಂಕಲನ 'ಬಾಲ್ಟಿಕ್ ಕಡಲ ಗಾಳಿ' ಇತ್ತೀಚೆಗೆ ಪ್ರಕಟವಾಗಿದೆ.

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ