”ಹೆಂಗಸರ ಜೀವನಗಳು ನದಿಗಳಿದ್ದಂತೆ. ಅವುಗಳು ಹುಟ್ಟಿದ್ದು, ಬೆಳೆದಿದ್ದು, ಹರಿದಿದ್ದು, ಇನ್ನೂ ಹರಿಯುತ್ತಿರುವುದು ಅನೇಕ ಸ್ಥಳಗಳಲ್ಲಿ, ಭಿನ್ನತೆಗಳೊಂದಿಗೆ, ದೇಶಗಳನ್ನು ವ್ಯಾಪಿಸಿ. ತೀರಾ ಸಾಮಾನ್ಯವೆನಿಸುವ ಘಟನೆಗಳು, ನುಂಗಿದ್ದ ಅವಮಾನ, ಹೆತ್ತವರ ಕಷ್ಟಗಳನ್ನು ಪುಟ್ಟಕಣ್ಣುಗಳಿಂದ ನೋಡಿದ್ದು, ಅವನ್ನೇ ಈಗ ಪಳಗಿದ ದೃಷ್ಟಿಯಿಂದ ಹೇಳುವುದು ಆಗಾಗ ನಮ್ಮದೂ ಹೌದು ಎನ್ನಿಸಿಬಿಡುತ್ತದೆ. ‘ಮುಂದುವರೆದ’ ಸಮಾಜದಲ್ಲೂ ಹೀಗಿತ್ತೇ ಎಂಬ ಅಚ್ಚರಿಯೊಡನೆ, ಹಾ, ಅವರೂ ಕೂಡ ನಮ್ಮಂತೆಯೆ, ಹೆಚ್ಚೇನಿಲ್ಲ ಎಂಬ ಏನೋ ಒಂದು ತರಹದ ಸಮಾಧಾನವೂ ಒಳಗಿಳಿಯುತ್ತದೆ”
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.
ಕೈಗಳನ್ನು ಚಾಚಿ ಬೆರಳತುದಿಗಳನ್ನು ಮಾತ್ರ ತಾಕಿಸಿ, ಜತನದಿಂದ ಧ್ಯಾನಿಸಿ ನಿಧಾನವಾಗಿ ಒಂದೊಂದೇ ಮೊಗ್ಗನ್ನು ಹೆಕ್ಕಿ, ನೆಲದ ಮೇಲೆ ಕೂತು, ಹಾಡೊಂದನ್ನು ಗುನುಗುತ್ತಾ, ಆಸ್ಥೆಯಿಂದ ಪೋಣಿಸುವ ಮಲ್ಲಿಗೆಮೊಗ್ಗಿನ ಹಾರ. ಪ್ರತಿಯೊಂದು ಮಲ್ಲಿಗೆಮೊಗ್ಗಿನ ಪರಿಮಳವನ್ನು, ಅದರ ಸೌಂದರ್ಯವನ್ನು, ಕೋಮಲತೆಯನ್ನು ಗಮನಿಸುತ್ತಾ, ಮೆಚ್ಚುತ್ತಾ ಹಾರ ಹೆಣೆಯುವ ಕೆಲ ನಿಮಿಷಗಳು ಕೊಡುತ್ತಿದ್ದ ಸಮಾಧಾನ ಮನಸ್ಸನ್ನು ಅರಳಿಸಿಬಿಡುತ್ತಿತ್ತು. ಮೊಗ್ಗು ಪೋಣಿಸುವ ಬೆರಳುಗಳಲ್ಲಿ, ಕೈಯಲ್ಲಿ ಇರುವ ಮಡಿಕೆಗಳು, ಗೆರೆಗಳು, ಕೈಹಿಂಬದಿಯಲ್ಲಿ ಉಬ್ಬಿರುವ ನರಗಳು, ರಕ್ತನಾಳಗಳು, ಕಪ್ಪಿಟ್ಟಿರುವ ಚರ್ಮ – ನಿಧಾನವಾಗಿ ಮುನ್ನೆಲೆಗೆ ಬಂದು ಇದೋ ನಮ್ಮನ್ನೂ ನೋಡು ಎನ್ನುತ್ತವೆ. ಅವು ಸೂಚಿಸುವುದು ಏನನ್ನು ಅಂದೆನಿಸುತ್ತದೆ. ಹೆಚ್ಚುತ್ತಿರುವ ದೈಹಿಕ ವಯಸ್ಸನ್ನೋ, ಮಾಗುತ್ತಿರುವ ಮನಸ್ಸನ್ನೋ, ಇನ್ನೂ ಕಲೆಹಾಕುತ್ತಿರುವ ಅನುಭವಗಳನ್ನೋ. ಎಲ್ಲವನ್ನೂ ಮನಸ್ಸಿಗೆ ಇಳಿಸಿದಾಗ ಇದೇ ಅಲ್ಲವೇ ಜೀವನದ ವೈವಿಧ್ಯತೆಯನ್ನ ತೋರುವ ದೃಷ್ಟಾಂತ ಅನ್ನಿಸುತ್ತದೆ. ನಮ್ಮ ಬದುಕಿನ ಕಥೆಗಳೂ ಹಾಗೇ. ಬದಲಾಗುವ ರಂಗುಗಳು, ಮಾಸಗಳು, ಮೈಮನಸ್ಸುಗಳು. ನಮ್ಮ ದನಿ ಅವೆಲ್ಲವನ್ನೂ ಮಾರ್ದನಿಸಿದಾಗ ಕಥೆಗಳು ಹುಟ್ಟಿಬಿಡುತ್ತವೆ.
ಸ್ವೀಟ್ ಸಿಸ್ಟರ್ಸ್ ಅಂಡ್ ಅದರ್ ಸೀಕ್ರೆಟ್ಸ್ (Sweet Sisters & Other Secrets) ಪುಸ್ತಕದಲ್ಲಿರುವ ಮಾರ್ದನಿಗಳು ಹೆಂಗಳೆಯರ ಅಂತರಂಗಗಳು. ಒಂದೊಂದೆ ಮೊಗ್ಗನ್ನು ಕೈಗೆತ್ತಿಕೊಂಡಾಗ ನಮಗೆ ಕಾಣುವುದು ಆ ಹೆಂಗಸರು ಹೇಳಿಕೊಳ್ಳುವ ನಲಿದಾಟ, ಹಾಸ್ಯ, ನೋವು, ತಲ್ಲಣ, ಅದೇನೋ ಗೋಪ್ಯತೆ. ಅವರು ವರ್ಷಾನುಗಟ್ಟಲೆ ತಮ್ಮ ಒಡಲಾಳದ ಕಣಜದಲ್ಲಿ ಶೇಖರಿಸಿದ್ದ ನೆನಪುಗಳು, ಅನುಭವಗಳು ಕಳೆದುಹೋಗಿದ್ದ, ಮರೆತಿದ್ದ, ಒಂದು ಕಾಲದಲ್ಲಿ ನಮ್ಮವೇ ಆಗಿದ್ದ ಸಿರಿಧಾನ್ಯಗಳಂತೆ ಗೋಚರವಾಗುತ್ತದೆ. ಅವು ನಮ್ಮ ಆರೋಗ್ಯ ಮತ್ತು ಕುಶಲವನ್ನು ಹೆಚ್ಚಿಸುವ ಟಾನಿಕ್ ಎಂಬಂತೆ ಭಾಸವಾಗುತ್ತದೆ. ಇವು ಒಂದು, ಎರಡು, ಅಬ್ಬಾಬ್ಬಾ ಎಂದರೆ ನಾಲ್ಕೈದು ಪುಟಗಳ ದಾಖಲೆಗಳು.
ಅವರ ಜೀವನದ ಆಗಿಹೋದ ಸನ್ನಿವೇಶಗಳನ್ನು, ಘಟನೆಗಳನ್ನು ಓದುತ್ತಾ ಹೋದಂತೆ ನಮಗೆ ದಕ್ಕುವುದು ಪಕ್ವವಾದ ನಲವತ್ತಮೂರು ಕಥಾನಕಗಳು. ಅವನ್ನು ೨೦೦೦ ನೇ ಇಸವಿಯಲ್ಲಿ ಹೇಳುವಾಗ ಅವರುಗಳ ವಯಸ್ಸು ಐವತ್ತರಿಂದ ತೊಂಭತ್ತರವರಗೆ ಹರಡಿರುವುದು ವಿಶಿಷ್ಟ. ನೆನಪುಗಳ ನದಿ ಹುಟ್ಟುವ ಕಾಲಘಟ್ಟ ೧೯೦೦ ನೇ ಇಸವಿಯ ಆಚೆಈಚೆ. ಆ ನದಿಮೂಲವನ್ನು ನಾವು ಗುರ್ತುಹಾಕುವುದು ಒಂದುಕಡೆ ಮಾತ್ರ ಅಲ್ಲ. ಹೆಂಗಸರ ಜೀವನಗಳು ನದಿಗಳಿದ್ದಂತೆ. ಅವುಗಳು ಹುಟ್ಟಿದ್ದು, ಬೆಳೆದಿದ್ದು, ಹರಿದಿದ್ದು, ಇನ್ನೂ ಹರಿಯುತ್ತಿರುವುದು ಅನೇಕ ಸ್ಥಳಗಳಲ್ಲಿ, ಭಿನ್ನತೆಗಳೊಂದಿಗೆ, ದೇಶಗಳನ್ನು ವ್ಯಾಪಿಸಿ, ರಾಜ್ಯಗಳನ್ನು ಆವರಿಸಿಕೊಂಡು, ನಗರ-ಗ್ರಾಮೀಣ ಪ್ರದೇಶಗಳನ್ನು ಅಪ್ಪಿಕೊಂಡು. ಅವರ ಕಥೆಗಳು ಹಾದಿಬದಿಯ ವಿಶೇಷ ಜ್ಯೋತಿಗಳಾಗುತ್ತವೆ. ತೀರಾ ಸಾಮಾನ್ಯವೆನಿಸುವ ಘಟನೆಗಳು, ನುಂಗಿದ್ದ ಅವಮಾನ, ಹೆತ್ತವರ ಕಷ್ಟಗಳನ್ನು ಪುಟ್ಟಕಣ್ಣುಗಳಿಂದ ನೋಡಿದ್ದು, ಅವನ್ನೇ ಈಗ ಪಳಗಿದ ದೃಷ್ಟಿಯಿಂದ ಹೇಳುವುದು. ಯಾವುದೋ ದೂರದೇಶದಲ್ಲಿ, ಭಿನ್ನಸಂಸ್ಕೃತಿಯಲ್ಲಿ ಅರಳಿಕೊಂಡ ಈ ಕಣ್ಣುಗಳು ಆಗಾಗ ನಮ್ಮದೂ ಹೌದು ಎನ್ನಿಸಿಬಿಡುತ್ತದೆ. ಒಮ್ಮೊಮ್ಮೆ ಅಲ್ಲೆಲ್ಲೋ, ನಾವೆಲ್ಲ ಅಂದುಕೊಂಡಿದ್ದ ‘ಮುಂದುವರೆದ’ ಸಮಾಜದಲ್ಲೂ ಹೀಗಿತ್ತೇ ಎಂಬ ಅಚ್ಚರಿಯೊಡನೆ, ಹಾ, ಅವರೂ ಕೂಡ ನಮ್ಮಂತೆಯೆ, ಹೆಚ್ಚೇನಿಲ್ಲ ಎಂಬ ಏನೋ ಒಂದು ತರಹದ ಸಮಾಧಾನವೂ ಒಳಗಿಳಿಯುತ್ತದೆ.
ಕೈಗಳನ್ನು ಚಾಚಿ ಬೆರಳತುದಿಗಳನ್ನು ಮಾತ್ರ ತಾಕಿಸಿ, ಜತನದಿಂದ ಧ್ಯಾನಿಸಿ ನಿಧಾನವಾಗಿ ಒಂದೊಂದೇ ಮೊಗ್ಗನ್ನು ಹೆಕ್ಕಿ, ನೆಲದ ಮೇಲೆ ಕೂತು, ಹಾಡೊಂದನ್ನು ಗುನುಗುತ್ತಾ, ಆಸ್ಥೆಯಿಂದ ಪೋಣಿಸುವ ಮಲ್ಲಿಗೆಮೊಗ್ಗಿನ ಹಾರ. ಪ್ರತಿಯೊಂದು ಮಲ್ಲಿಗೆಮೊಗ್ಗಿನ ಪರಿಮಳವನ್ನು, ಅದರ ಸೌಂದರ್ಯವನ್ನು, ಕೋಮಲತೆಯನ್ನು ಗಮನಿಸುತ್ತಾ, ಮೆಚ್ಚುತ್ತಾ ಹಾರ ಹೆಣೆಯುವ ಕೆಲ ನಿಮಿಷಗಳು ಕೊಡುತ್ತಿದ್ದ ಸಮಾಧಾನ ಮನಸ್ಸನ್ನು ಅರಳಿಸಿಬಿಡುತ್ತಿತ್ತು. ಮೊಗ್ಗು ಪೋಣಿಸುವ ಬೆರಳುಗಳಲ್ಲಿ, ಕೈಯಲ್ಲಿ ಇರುವ ಮಡಿಕೆಗಳು, ಗೆರೆಗಳು, ಕೈಹಿಂಬದಿಯಲ್ಲಿ ಉಬ್ಬಿರುವ ನರಗಳು, ರಕ್ತನಾಳಗಳು, ಕಪ್ಪಿಟ್ಟಿರುವ ಚರ್ಮ – ನಿಧಾನವಾಗಿ ಮುನ್ನೆಲೆಗೆ ಬಂದು ಇದೋ ನಮ್ಮನ್ನೂ ನೋಡು ಎನ್ನುತ್ತವೆ.
ಈ ಪುಸ್ತಕವನ್ನು ಪ್ರಕಟಿಸಿರುವುದು ಜೋಂಟಾ ಕ್ಲಬ್ ಆಫ್ ಬ್ಲಾಕಾಲ್ ರೇಂಜ್, ಕ್ವೀನ್ಸ್ ಲ್ಯಾಂಡ್ (Zonta Club of Blackall Range, Queensland.) ಸಂಪಾದನೆ ಮಾಡಿದ್ದು ಜಿಲ್ ಮೊರ್ರಿಸ್ ಮತ್ತು ಎಲಿಝ ಬರ್ಫೀನ್ (Edited by Jill Morris & Eliza Burfein). ಈ ಜೋಂಟಾ ಕ್ಲಬ್ ಎನ್ನುವುದು ಜೋಂಟಾ ಇಂಟರ್ ನ್ಯಾಷನಲ್ (Zonta International) ಅನ್ನುವ ಒಂದು ಸಂಸ್ಥೆಯ ಭಾಗ. ಅಮೇರಿಕಾದಲ್ಲಿ ಹುಟ್ಟಿದ ಮಾತೃಸಂಸ್ಥೆ ಮತ್ತು ಅನೇಕ ದೇಶಗಳಲ್ಲಿ ಪುಟ್ಟಪುಟ್ಟದಾಗಿ ಹುಟ್ಟಿಕೊಂಡು ತಮ್ಮ ಸೀಮಿತ ಪ್ರದೇಶಗಳಲ್ಲಿ ಅದರ ಮರಿಗಳು ಕೆಲಸ ಮಾಡುತ್ತಿವೆ. ಒಂದೇ ವಿಷಯಕ್ಕೆ ಅವರ ಬದ್ಧತೆ. ಹೆಂಗಸರು ಮತ್ತು ಹೆಣ್ಣುಮಕ್ಕಳ ಜೀವನದಲ್ಲಿ ಅವರಿಗೆ ಅಗತ್ಯವಾದ ಮಾರ್ಪಾಡುಗಳನ್ನು ತರುವುದು. ಅದು ಆರೋಗ್ಯವೇ ಆಗಿರಬಹುದು, ಶಿಕ್ಷಣಕ್ಕೆ ಸಂಬಂಧಿಸಿರಬಹುದು ಅಥವಾ ಹಕ್ಕುಗಳು, ಶೋಷಣೆಗಳ ಕುರಿತೂ ಇರಬಹುದು.
ಅಂತಹ ಒಂದು ಭಾಗ ಜೋಂಟಾ ಕ್ಲಬ್ ಆಫ್ ಬ್ಲಾಕಾಲ್ ರೇಂಜ್. ಆ ಸಂಸ್ಥೆಯ ಯೋಜನೆ ‘ಶೇರಿಂಗ್ ಅವರ್ ಸ್ಟೋರೀಸ್’ ಮೂಲಕ ಕ್ವೀನ್ಸ್ ಲ್ಯಾಂಡ್ ರಾಜ್ಯದ ವಿವಿಧೆಡೆ ನಡೆಸಿದ ಬರವಣಿಗೆ ಶಿಬಿರಗಳಲ್ಲಿ ಹೊರಹೊಮ್ಮಿದ ನೂರಕ್ಕೂ ಹೆಚ್ಚು ಉಪಾಖ್ಯಾನಗಳಲ್ಲಿ ಕೆಲವನ್ನು ಆರಿಸಿ ‘ಸ್ವೀಟ್ ಸಿಸ್ಟರ್ಸ್ ಅಂಡ್ ಅದರ್ ಸೀಕ್ರೆಟ್ಸ್’ ಪುಸ್ತಕವನ್ನಾಗಿ ತಂದಿದ್ದಾರೆ. ವಸ್ತ್ರ ವರ್ಣಚಿತ್ರ ಕಲೆಯಲ್ಲಿ ನಿಪುಣರಾದ ರಾಜ್ಯದ ಹೆಸರಾಂತ ಕಲೆಗಾರ್ತಿ ಎಲಿಜಬೆತ್ ಹೆಬರ್ ರೇಷ್ಮೆಯ ಮೇಲೆ ಬಿಡಿಸಿರುವ ಎಲೆ-ಹೂಗಳ ಚಿತ್ತಮನೋಹರ ವರ್ಣಕಲೆ ಪುಸ್ತಕದ ಮೇಲ್ಮೈ ಹೊದಿಕೆಯನ್ನು ಅಲಂಕರಿಸಿದೆ.
ಈ ಕಥಾನಕಗಳನ್ನು ನಾನು ಓದಿದ್ದು ಎರಡು ವಿಭಿನ್ನ ಮಜಲುಗಳಲ್ಲಿ. ಎರಡೂ ಕಡೆಯ ಕುಟುಂಬದವರ ಆಸರೆಯಿಲ್ಲದೆ, ಸಹಾಯಹಸ್ತವಿಲ್ಲದೆ ಮಕ್ಕಳನ್ನು ಬೆಳೆಸುವಾಗ ಒಮ್ಮೊಮ್ಮೆ ಸಾಕುಸಾಕೆನಿಸುತ್ತಿತ್ತು. ಆ ವರ್ಷಗಳಲ್ಲಿ ಈ ಪುಸ್ತಕವನ್ನು ಮೇಲ್ನೋಟಕ್ಕೆ ಎಂಬಂತೆ ಓದಿದ್ದೆ. ಸುಸ್ತು, ದುಃಖ ಮತ್ತಷ್ಟು ಹೆಚ್ಚಾಗಿತ್ತು! ಅಯ್ಯೋ, ನಿತ್ಯಜೀವನದ ಬವಣೆಯಲ್ಲಿ ಮುಳುಗಿ ನನ್ನ ಆಲೋಚನಾಕ್ರಮವೇ ಬದಲಾಗಿಬಿಟ್ಟಿದೆಯಲ್ಲ ಎಂದು ಕಸಿವಿಸಿಯಾಗಿತ್ತು. ನಗರದಲ್ಲೆ ಇದ್ದರೂ ನನಗಾಗಿ ಎಂದು ಬರವಣಿಗೆ ಶಿಬಿರಕ್ಕೆ ಹೋಗುವುದಾಗಲಿ, ಒಳ್ಳೆಯ ನಾಟಕವನ್ನು ನೋಡುವುದಾಗಲೀ, ಉಹುಂ, ಎಲ್ಲಕ್ಕೂ ಕೊಕ್. ಪುಸ್ತಕದಲ್ಲಿ ಅದೇ ಹೆಣ್ಣುಪಾತ್ರಗಳು, ಗೋಳು, ಅದೇ ಹಳೆರಾಗ ಎಂದು ಕನಲಿದ್ದೆ. ಕಥಾನಕಗಳನ್ನು ಮತ್ತೊಮ್ಮೆ ಓದಿದ್ದು ಇತ್ತೀಚೆಗೆ – ಆರಾಮಾಗಿ, ಮನಸ್ಸು ಹಗುರವಾಗಿದ್ದು, ಒಂದು ಕ್ಯಾಂಪಿಂಗ್ ರಜಾಸಮಯದಲ್ಲಿ. ಒಮ್ಮೊಮ್ಮೆ ತೀರಾ ಪರಿಚಯದ ನಮ್ಮ ಖಾಸಗಿ ಪ್ರಪಂಚದಿಂದ ನಮ್ಮನ್ನು ಹೊರಗೆಳೆದುಕೊಂಡರೆ ಅಪರಿಚಿತ ಘಳಿಗೆಗಳು ನಮ್ಮೆಡೆಗೆ ತೇಲಿಬರುತ್ತವೆ. ಆಗ ಪ್ರಪಂಚವನ್ನು ನೋಡಬಯಸುವ ನಮ್ಮ ದುರ್ಬೀನು ಬದಲಾಗುತ್ತದೆ!
ಹೆಂಗಸರ ಜೀವನಗಳು ನದಿಗಳಿದ್ದಂತೆ. ಅವುಗಳು ಹುಟ್ಟಿದ್ದು, ಬೆಳೆದಿದ್ದು, ಹರಿದಿದ್ದು, ಇನ್ನೂ ಹರಿಯುತ್ತಿರುವುದು ಅನೇಕ ಸ್ಥಳಗಳಲ್ಲಿ, ಭಿನ್ನತೆಗಳೊಂದಿಗೆ, ದೇಶಗಳನ್ನು ವ್ಯಾಪಿಸಿ, ರಾಜ್ಯಗಳನ್ನು ಆವರಿಸಿಕೊಂಡು, ನಗರ-ಗ್ರಾಮೀಣ ಪ್ರದೇಶಗಳನ್ನು ಅಪ್ಪಿಕೊಂಡು. ಅವರ ಕಥೆಗಳು ಹಾದಿಬದಿಯ ವಿಶೇಷ ಜ್ಯೋತಿಗಳಾಗುತ್ತವೆ. ತೀರಾ ಸಾಮಾನ್ಯವೆನಿಸುವ ಘಟನೆಗಳು, ನುಂಗಿದ್ದ ಅವಮಾನ, ಹೆತ್ತವರ ಕಷ್ಟಗಳನ್ನು ಪುಟ್ಟಕಣ್ಣುಗಳಿಂದ ನೋಡಿದ್ದು, ಅವನ್ನೇ ಈಗ ಪಳಗಿದ ದೃಷ್ಟಿಯಿಂದ ಹೇಳುವುದು. ಯಾವುದೋ ದೂರದೇಶದಲ್ಲಿ, ಭಿನ್ನಸಂಸ್ಕೃತಿಯಲ್ಲಿ ಅರಳಿಕೊಂಡ ಈ ಕಣ್ಣುಗಳು ಆಗಾಗ ನಮ್ಮದೂ ಹೌದು ಎನ್ನಿಸಿಬಿಡುತ್ತದೆ. ಒಮ್ಮೊಮ್ಮೆ ಅಲ್ಲೆಲ್ಲೋ, ನಾವೆಲ್ಲ ಅಂದುಕೊಂಡಿದ್ದ ‘ಮುಂದುವರೆದ’ ಸಮಾಜದಲ್ಲೂ ಹೀಗಿತ್ತೇ ಎಂಬ ಅಚ್ಚರಿಯೊಡನೆ, ಹಾ, ಅವರೂ ಕೂಡ ನಮ್ಮಂತೆಯೆ, ಹೆಚ್ಚೇನಿಲ್ಲ ಎಂಬ ಏನೋ ಒಂದು ತರಹದ ಸಮಾಧಾನವೂ ಒಳಗಿಳಿಯುತ್ತದೆ.
ಎರಡನೇ ಬಾರಿ ಕೂಲಂಕುಶವಾಗಿ ಓದುತ್ತಾ ಉಪಾಖ್ಯಾನಗಳಲ್ಲಿನ ಕೆಲವಿಷಯಗಳನ್ನು ಜೀಬೀಗೆ ಹೇಳಿದರೆ ಅವರು, ‘ಹೌದುಹೌದು, ಪ್ರತಿಬಾರಿ ಬ್ರಿಟನ್ ನಿಂದ ನಾನು ಆಸ್ಟ್ರೇಲಿಯಾಗೆ ಬಂದಾಗಲೆಲ್ಲಾ ಇಲ್ಲಿನ ಪರಿಸ್ಥಿತಿ ಎಷ್ಟು ಹಿಂದುಳಿದಿದೆ ಎನ್ನಿಸುತ್ತಿತ್ತು,’ ಎಂದುಬಿಟ್ಟರು!! ಕೇಳಿ ಹುಬ್ಬೇರಿಸಿದೆ! ಮೂರು ದೇಶ/ಖಂಡಗಳ ದೂರ-ಸಮೀಪ ವಿಶ್ಲೇಷಣೆ ನಮ್ಮ ಸಂಭಾಷಣೆಯಲ್ಲಿತ್ತು! ೧೯೬೫ ನೇ ಇಸವಿಯ ಆಸ್ಟ್ರೇಲಿಯಾದಲ್ಲಿ ಕಾಮನ್ ವೆಲ್ತ್ ಸಾರ್ವಜನಿಕ ಖಾಯಂಸೇವೆಯಲ್ಲಿದ್ದ (ಕೇಂದ್ರ ಸರಕಾರ) ಹೆಂಗಸರು ಮದುವೆಯಾದರೆ ಕೆಲಸ ಬಿಡಬೇಕಿತ್ತು. ಬ್ರಿಸ್ಬನ್ ನಗರದ (ಸಿಡ್ನಿಗೆ ಹೋಲಿಸಿದರೆ ಆಗ ಬಹು ಹಿಂದುಳಿದಿದ್ದ ಪಟ್ಟಣವಂತೆ) ಪಬ್ ಗಳಿಗೆ ಹೆಂಗಸರ ಪ್ರವೇಶವಿರಲಿಲ್ಲ. ತಮ್ಮ ಗಂಡಸರು ಬಿಯರ್ ಕುಡಿದು ಹೊರಬರುವತನಕ ಎಷ್ಟೋ ಹೆಂಡಂದಿರು ಕಾರಿನಲ್ಲಿ ಮಲಗಿದ್ದ ತಮ್ಮ ಮಕ್ಕಳೊಡನೆ ಕಾಯಬೇಕಿತ್ತು. ಈ ಎರಡೂ ವಿಷಯಗಳ ಬಗ್ಗೆ ಬರೆಯುತ್ತಾ Merle Thornton ತಾನು ಮತ್ತು ಇತರ ಹೆಂಗಸರು ಆ ಕಾನೂನಿನ ವಿರುದ್ಧ ಹೇಗೆ ಹೋರಾಡಿದೆವು, ಅವನ್ನು ಯಾವ ರೀತಿಯಲ್ಲಿ ಬದಲಿಸಿದೆವು ಎನ್ನುವ ಅನುಭವನ್ನು ಹಂಚಿಕೊಳ್ಳುತ್ತಾರೆ. ಅವರು ಹುಟ್ಟುಹಾಕಿದ್ದು ಈಕ್ವಲ್ ಆಪರ್ಚುನಿಟೀಸ್ ಫಾರ್ ವುಮನ್ ಅಂಡ್ ಅಸೋಸಿಯೇಷನ್ (Equal Opportunities for Women Association.) ಪರಿಣಾಮ- ಹೆಂಗಸರು ಪಬ್ ಗಳಿಗೆ ಹೋಗುವಂತಾಯಿತು. ಮದುವೆಯಾದ ಮೇಲೂ ಕೆಲಸದಲ್ಲಿರಲು ಸಾಧ್ಯವಾಯಿತು. ಮಕ್ಕಳಾದ ಮೇಲೆ ಮೆಟೆರ್ನಿಟಿ ರಜೆ ಸಿಕ್ಕಿತು.
ಎಲಿಜಬೆತ್ ಹೀಬರ್ (Elizabeth Heber) ಹೇಳುವುದು ತಮ್ಮ ಹುಟ್ಟಿನ ಜೊತೆ ಬಳುವಳಿಯಾಗಿ ಕ್ಲೆಫ್ಟ್ ಪ್ಯಾಲೆಟ್ (cleft palate, ಸೀಳು ಅಂಗುಳಿನ = ಮೂಗಿನ ಕೆಳಗೆ ಮತ್ತು ಮೇಲ್ದುಟಿಯ ಮೇಲಿನ ಜಾಗದಲ್ಲಿ ದೊಡ್ಡ ರಂಧ್ರವಿರುವುದು) ಇದ್ದರೂ, ಅನೇಕ ಬಾರಿ ಸತ್ತುಸತ್ತು ಬದುಕುತ್ತಾ ಹೋರಾಡಿದ ನೋವು-ನಲಿವಿನ ಕಥೆಯನ್ನು. ತನ್ನ ಏಳನೆಯ ವಯಸ್ಸಿನಲ್ಲಿ ಆ ದುರ್ಭರ ದೈಹಿಕ ನ್ಯೂನತೆಯನ್ನು ರಿಪೇರಿಗೊಳಿಸಿದರೂ ಅವರು ಮಾತನಾಡುವುದು ಇತರರಿಗೆ ಕಷ್ಟವಾಗಿತ್ತಂತೆ! ಶಾಲೆಯನ್ನು ತಡವಾಗಿ ಆರಂಭಿಸಿದ್ದು, ಓದುಬರಹವನ್ನು ಅರ್ಥಮಾಡಿಕೊಳ್ಳಲು ಪಟ್ಟ ಕಷ್ಟ, ಇತರ ಮಕ್ಕಳು ಕೊಟ್ಟ ತೊಂದರೆ ಯಾವುದೂ ಅವರನ್ನು ಮುಂದುವರೆಯದಂತೆ ನಿಲ್ಲಿಸಲಾಗಲಿಲ್ಲ. ಬೇರೆಯವರು ‘ನಿನಗೆ ಇದು ಸಾಧ್ಯವಿಲ್ಲ’ ಎಂದರೂ ಅವರ ನಡೆ ಮುಂದಿನ ಹಾದಿಗಳನ್ನು ಹುಡುಕುತ್ತಲೇ ಇತ್ತು. ಎಲಿಝಬೆತ್ ಯೂನಿವರ್ಸಿಟಿಯ ಓದಿನಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಒಳ್ಳೆಯ ಹಾಡುಗಾರರಾದರು. ಹೈಸ್ಕೂಲಿನ ಉಪ-ಪ್ರಾಂಶುಪಾಲರಾದರು. ಶಾಲಾ ಓದಿನಲ್ಲಿ ಹಿಂದಿದ್ದ ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ ನೀಡಿದರು. ಅವರು ವರ್ಣಚಿತ್ರ ಕಲೆಯನ್ನು ಅತ್ಯಂತ ಪ್ರೀತಿಸುತ್ತಿದ್ದರು. ಮುಂದೆ ರೇಷ್ಮೆವಸ್ತ್ರದ ಮೇಲೆ ಮಾಡುವ ವರ್ಣಚಿತ್ರ ಕಲೆಯಿಂದ ಪ್ರಸಿದ್ಧಿಯಾದರು. ಕಥಾನಕದ ಕಟ್ಟಕಡೆಯಲ್ಲಿ ಅವರ ಮಾತು ಹೀಗಿದೆ: “ನನ್ನ ಹದಿನೈದನೆಯ ವರುಷದಲ್ಲಿ ನನ್ನ ಶಾಲಾ ದೊಡ್ಡಪರೀಕ್ಷೆಯ ಫಲಿತಾಂಶ ಹೊರಬಿದ್ದಿತು. ತಾಯಿ ಅಳುತ್ತಿದ್ದಳು. ಯಾಕೆಂದು ಕೇಳಿದೆ. ಅವಳು ಹೇಳಿದಳು, ‘ ನೀನು ಏನನ್ನಾದರೂ ಸಾಧಿಸಬೇಕು ಎಂದು ನಾವು ನಿರೀಕ್ಷಿಸಿಯೇ ಇರಲಿಲ್ಲ.’ ಆಗ ನನಗೆ ಬಹು ಆಶ್ಚರ್ಯವಾಯಿತು. ಅಂತಹುದೊಂದು ಆಲೋಚನೆ ನನಗೆಂದೂ ಬಂದಿರಲಿಲ್ಲ! ಸಮಾಜದ ನಿರೀಕ್ಷೆಗಳನ್ನು ಮೀರಿ ನಾವು ನಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದು ಎನ್ನುವುದಕ್ಕೆ ಎಲಿಝಬೆತ್ ರವರ ಕಥೆ ಸಾಕ್ಷಿ.
ಈ ಕಥಾನಕಗಳಲ್ಲಿ ನಾನು ಕೆಲ ಸಾಮ್ಯತೆಗಳನ್ನು ಕಂಡೆ. ಉದಾಹರಣೆಗೆ, ೧೯೬೦ರ ದಶಕದಲ್ಲಿ ಸಿಡ್ನಿ ನಗರದ ಒಳಚರಂಡಿ ಮತ್ತು ಹೊಲಸನ್ನು ಸಾಗಿಸುವ ವ್ಯವಸ್ಥೆ ಇನ್ನೂ ಬೆಳವಣಿಗೆಯ ಹಂತದಲ್ಲಿತ್ತಂತೆ. ಎಲ್ಲಾ ಹೊಲಸನ್ನೂ ನೇರ ಸಮುದ್ರಕ್ಕೆ ಬಿಟ್ಟುಬಿಡುತ್ತಿದ್ದರಂತೆ. ಸಮುದ್ರತೀರಕ್ಕೆ ಹೋದರೆ ಅಲ್ಲಿ ನರಕದರ್ಶನ!! ಮನೆಗಳಿಂದ ಹೊಲಸನ್ನು ಸಂಗ್ರಹಿಸುವ ಕೆಲಸವನ್ನು ಕಾಂಟ್ರಾಕ್ಟ್ ಪಡೆದು ಜನ ಮಾಡುತ್ತಿದ್ದರಂತೆ. ಎಲ್ಲಾ ನಗರಗಳಲ್ಲಿ ೧೯೭೦-೮೦ರ ದಶಕದಲ್ಲೂ ಅನೇಕರ ಮನೆಯಿಂದ ಹೊರಗೆ ಹಿತ್ತಲಲ್ಲಿ ಕಕ್ಕಸುಮನೆ ಔಟ್ ಹೌಸ್ (out house) ಇತ್ತಂತೆ. ಇದರ ಬಗ್ಗೆ ಶೆರಲ್ ವಿಕ್ಸ್ (Cheryl Wickes) ಪ್ರಸ್ತಾಪಿಸಿದನ್ನು ಓದಿದಾಗ ಅರೆ, ನಮ್ಮನೆಯಲ್ಲೂ ಅಂಥದ್ದೇ ಔಟ್ ಹೌಸ್ ಅದೇ ಕಾಲಮಾನದಲ್ಲಿ ಇತ್ತಲ್ಲಾ, ಎನ್ನಿಸಿತು! ಅಂದರೆ ೧೯೮೦ರ ದಶಕದಿಂದಾಚೆ ಆಸ್ಟ್ರೇಲಿಯಾದಲ್ಲಿ ಅನೇಕ ಮಾರ್ಪಾಡುಗಳಾಗಿವೆ. ಅದು ಮುಂದುವರೆದ ದೇಶ ಎಂದು ಕರೆಸಿಕೊಳ್ಳಲು ಆಗಿನಿಂದ ಅಧಿಕಾರಕ್ಕೆ ಬಂದ ಸರಕಾರಗಳ ಕೊಡುಗೆ ಬಹಳಷ್ಟು ಇದೆ. ಸೇವೆಸೌಲಭ್ಯಗಳ ಅಭಿವೃದ್ಧಿ ಅಲೆ ನಗರಗಳಿಗೆ ತಲುಪುವಷ್ಟು ಗ್ರಾಮೀಣ ಪ್ರಪಂಚಕ್ಕೆ ದಕ್ಕುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ.
ತನ್ನ ಏಳನೆಯ ವಯಸ್ಸಿನಲ್ಲಿ ಆ ದುರ್ಭರ ದೈಹಿಕ ನ್ಯೂನತೆಯನ್ನು ರಿಪೇರಿಗೊಳಿಸಿದರೂ ಅವರು ಮಾತನಾಡುವುದು ಇತರರಿಗೆ ಕಷ್ಟವಾಗಿತ್ತಂತೆ! ಶಾಲೆಯನ್ನು ತಡವಾಗಿ ಆರಂಭಿಸಿದ್ದು, ಓದುಬರಹವನ್ನು ಅರ್ಥಮಾಡಿಕೊಳ್ಳಲು ಪಟ್ಟ ಕಷ್ಟ, ಇತರ ಮಕ್ಕಳು ಕೊಟ್ಟ ತೊಂದರೆ ಯಾವುದೂ ಅವರನ್ನು ಮುಂದುವರೆಯದಂತೆ ನಿಲ್ಲಿಸಲಾಗಲಿಲ್ಲ. ಬೇರೆಯವರು ‘ನಿನಗೆ ಇದು ಸಾಧ್ಯವಿಲ್ಲ’ ಎಂದರೂ ಅವರ ನಡೆ ಮುಂದಿನ ಹಾದಿಗಳನ್ನು ಹುಡುಕುತ್ತಲೇ ಇತ್ತು. ಎಲಿಝಬೆತ್ ಯೂನಿವರ್ಸಿಟಿಯ ಓದಿನಲ್ಲಿ, ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರು. ಒಳ್ಳೆಯ ಹಾಡುಗಾರರಾದರು. ಹೈಸ್ಕೂಲಿನ ಉಪ-ಪ್ರಾಂಶುಪಾಲರಾದರು. ಶಾಲಾ ಓದಿನಲ್ಲಿ ಹಿಂದಿದ್ದ ಪ್ರತಿಭಾವಂತ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.
ನಾನಿನ್ನೂ ನೋಡುತ್ತಿರುವ ಹಾಗೆಯೇ ಆಸ್ಟ್ರೇಲಿಯಾದ ಸಮಾಜದಲ್ಲಿ ಅನೇಕ ಒಳಮಾರ್ಪಾಟುಗಳು ಬರುತ್ತಿವೆ. ಅಷ್ಟರಮಟ್ಟಿಗೆ ಹೇಳುವುದಾದರೆ ಇದು ಇನ್ನೂ ಬೆಳೆಯುತ್ತಿರುವ, ಅಭಿವೃದ್ಧಿಯಾಗುತ್ತಿರುವ ದೇಶ ಎಂದೆನಿಸುತ್ತದೆ.
ನಾನು ಅಲ್ಲಿಗೆ ಹೋದ ಹೊಸತರಲ್ಲಿ ಯೂನಿವರ್ಸಿಟಿಯ ನನ್ನ ಸ್ನೇಹಿತೆ ನಾವು ಆಸ್ಟ್ರೇಲಿಯನ್ ಹೆಂಗಸರು ಅಡುಗೆ ಕೆಲಸದಲ್ಲಿ ಅಷ್ಟಾಗಿ ತೊಡಗಿಸಿಕೊಳ್ಳುವುದಿಲ್ಲ ಎಂದಿದ್ದರು. ಈ ಪುಸ್ತಕದ ಅನೇಕ ಕಥೆಗಾರ್ತಿಯರು ತಮ್ಮ ತಾಯಂದಿರು, ಅಜ್ಜಿಯಂದಿರು ಎಲ್ಲಾ ತರಹದ ಖಾಸಗಿ ಪ್ರಪಂಚದ ಕೆಲಸಗಳನ್ನು ಮಾಡುವುದನ್ನು (ಅಡುಗೆ, ಉಪಚಾರ, ಮನೆಶುದ್ಧಿ, ಹಲವಾರು ಮಕ್ಕಳನ್ನು ಹೆರುವುದು, ಅವರ ವಿದ್ಯಾಭಾಸ, ಮನೆನಿರ್ವಹಣೆ, ಗಂಡಂದಿರ ಅಗತ್ಯಗಳನ್ನು ನೋಡುವುದು) ಕುರಿತು ಹೇಳುತ್ತಲೇ ಆ ಹೆಂಗಸರು ಮಾಡಿದ್ದ ಬೇರೆ ಪಾತ್ರಗಳನ್ನೂ ಎತ್ತಿ ಹಿಡಿಯುತ್ತಾರೆ. ಎರಡು ಜಾಗತಿಕ ಮಹಾಯುದ್ಧಗಳು, ಆರ್ಥಿಕ ಕುಸಿತ, ನಗರಗಳನ್ನು ಬಿಟ್ಟರೆ ಬೇರೆಲ್ಲೂ ಉದ್ಯೋಗಗಳಿಲ್ಲದಿರುವುದು, ಕಡು ಬಡತನದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಊಟಬಟ್ಟೆ ಒದಗಿಸಲು ಹೆಂಗಸರು ಕೈಗೊಂಡ ವ್ಯವಸಾಯ, ಕೋಳಿ, ಕುರಿ, ಹಸು, ಪಶುಗಳ ಸಂಗ್ರಹಣೆ, ಸಾಕಾಣಿಕೆ, ಕೈದೋಟಗಳ ಬೇಸಾಯ, ಕುಡಿತ-ಹೊಡೆತಗಳ ಹವ್ಯಾಸಕ್ಕೆ ತೆರೆದುಕೊಂಡ ಗಂಡಂದಿರನ್ನು ಹಿಂದೆಬಿಟ್ಟು, ತಮ್ಮ ಮಕ್ಕಳನ್ನು ಕಾಪಾಡುತ್ತಾ, ಪೋಷಿಸುತ್ತಾ ಮುಂದೆ ನಡೆದ ಹೆಂಡತಿಯರು. ಕೆಲವರು ಇನ್ನಷ್ಟು, ಮತ್ತಷ್ಟು ಹೆಣಗುತ್ತಾರೆ, ಹೋರಾಡುತ್ತಾರೆ, ಒಮ್ಮೆ ಸೋಲುತ್ತಾರೆ, ಆದರೆ ಹಲವಾರು ಬಾರಿ ಗೆಲ್ಲುತ್ತಾರೆ. ಅಕ್ಕತಂಗಿಯರ ಜೊತೆ ಇರುವ ಅನನ್ಯ ಗೆಳೆತನವನ್ನು ಸಂಭ್ರಮಿಸುತ್ತಾರೆ (ಸ್ವೀಟ್ ಸಿಸ್ಟರ್ಸ್, ಜೆನ್ನಿ ಆಲ್ಲೆನ್). ಈ ಕಥೆಗಳನ್ನು ಓದುತ್ತಿರುವಾಗ ಆಸ್ಟ್ರೇಲಿಯಾದ ದೂರ, ಯಾರೋ ಹಾಕಿದ ಗಡಿ, ಸೀಮೆ, ಎಲ್ಲೆಗಳು ಮಸುಕಾಗುತ್ತವೆ. ನಮ್ಮ ಭಾರತವೂ ಹಿಂದೆ ಸರಿಯುತ್ತದೆ. ಕಣ್ಣಮುಂದೆ ನಿಲ್ಲುವುದು ನಾವು ಮನುಷ್ಯರು ಸೃಷ್ಟಿಸಿಕೊಂಡ ನಮ್ಮ ಪ್ರಪಂಚಗಳು, ಜೀವನಗಳು. ಎಲ್ಲಿ ಹೋದರೂ ನಮ್ಮೆಲ್ಲರ ಕಥೆಗಳಲ್ಲೂ ಒಂದಷ್ಟು ಸಾಮ್ಯತೆಯಿದೆ, ಕಿಂಚಿತ್ತು ಭಿನ್ನತೆಯಿದೆ.
ಅಮ್ಮಅಪ್ಪಂದಿರು ಮಾಡಿದ ತ್ಯಾಗಗಳು, ಛಲ ಬಿಡದೆ ಕಷ್ಟಪಟ್ಟು ಕಟ್ಟಿದ ತಮ್ಮ ಕುಟುಂಬಗಳನ್ನು ಕುರಿತು ಹೇಳುವಾಗ ಜೀನ್ ವಿಲ್ಲಿಯಮ್ಸ್, ಪೀಟರ್ ಸ್ಪಿಲ್ (Jean Williams, Peter Spill) ಎರಡನೇ ಮಹಾಯುದ್ಧದ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ. ಮಾರ್ಗಿ ಓ ಕಾನಲ್ (Margi O’Connell) ತಮ್ಮ ದೋಣಿಯಲ್ಲಿ ಸಾಗಿದ ಸಾಹಸ, ಹೇಝಲ್ ಎಡ್ವರ್ಡ್ಸ್ (Hazel Edwards) ಐವತ್ತು ವರ್ಷ ವಯಸ್ಸಾದ ಮೇಲೆ ನೇಪಾಳದ ಹಿಮಾಲಯ ಪರ್ವತವೊಂದರಲ್ಲಿ ಕೈಗೊಂಡ ಚಾರಣವನ್ನು ಹೇಳುತ್ತಾರೆ. ಶೆರ್ಲಿ ಜಾರ್ಗನ್ ಸೆನ್, ಮೇರಿ-ಆನ್ ಮೆಕ್ ಲಾಫ್ಲಿನ್, ಎಲ್ಸಿ ಬ್ರೈಂಬಲ್ ಕೊಂಬ್, ಬೆಟ್ಟಿ ಬರ್ಸ್ ಕೀಸ್ ( Cheryl Jorgensen, Mary-Anne McLaughlin, Elsie Brimblecombe, Josie Santomauro, Betty Birskys) ಅವರು ಬರಹಗಾರರಾದ ಪ್ರಕ್ರಿಯೆಗಳನ್ನು ಹೇಳಿಕೊಳ್ಳುತ್ತಾರೆ. ಅಮ್ಮನ ಮದುವೆಯ ನಿಶ್ಚಿತಾರ್ಥದ ವಜ್ರದುಂಗುರವನ್ನು ತಾನೇ ಏನೋ ಕಳೆದುಹಾಕಿದ್ದು ಎಂಬ ಆತಂಕದಲ್ಲಿ ಎಳೆಹರೆಯದ ಹುಡುಗಿ ತನ್ನಕ್ಕ ಹುಡುಗಾಟವನ್ನೇ ತ್ಯಜಿಸಿ ಸುಮ್ಮನಾಗುವುದನ್ನು ಜಿಲ್ ಮೊರ್ರಿಸ್ ಕಥೆಯನ್ನಾಗಿಸಿದ್ದಾರೆ. ತಾವು ಖಾಯಂ ಕಳೆದುಕೊಂಡ ಅಥವಾ ದೂರವಾದ ಅಪ್ಪಂದಿರ ಕುರಿತು ಹೇಳುವಾಗ ಇನ್ನೂ ಮಾಸದಿರುವ ಪ್ರೀತಿಯ ಸುಳಿವಿದ್ದರೂ ಅಮ್ಮಂದಿರ ನೋವಿನ ಬಗ್ಗೆ ವಿಷಾದವಿದೆ. ಕೆಲವರು ಕೌಟುಂಬಿಕ ಕಾರಣಗಳಿಂದಲೇ ತಮ್ಮ ಪ್ರಿಯವಾದ ಅಭಿವ್ಯಕ್ತಿಗಳನ್ನು ಬಿಟ್ಟುಬಿಡುತ್ತಾರೆ. ಮುಂದಿನ ಒಂದು ವಿಭಿನ್ನ ಕಾಲಘಟ್ಟದಲ್ಲಿ ಮತ್ತೆ ಅದನ್ನು ಕೈಗೆತ್ತಿಕೊಳ್ಳುತ್ತಾರೆ. ಇನ್ನಿತರರು ಬದುಕಿನ ಎಲ್ಲಾ ಕ್ರಿಯೆಗಳ ಮಧ್ಯೆ ತಮ್ಮ ಆಸಕ್ತಿ ನಂದಿಹೋಗದಂತೆ ರಾತ್ರೋರಾತ್ರಿ ನಿದ್ದೆಗೆಟ್ಟು ಬರೆಯುತ್ತಾರೆ.
ಇಲ್ಲಿನ ಕೆಲವು ಉಪಾಖ್ಯಾನಗಳು ವಿಶೇಷವಾದ್ದವು. ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಬಾಲ್ಯದ ಬಗ್ಗೆ ಇವೆ. ಈ ಹೆಂಗಸರು ಅವರುಗಳು ಸ್ವಚ್ಚಂದವಾಗಿ ಮರಗಳನ್ನು ಹತ್ತುತ್ತಾ, ನದಿಗಳಲ್ಲಿ ಈಜುತ್ತಾ, ಗಾಯಗಳನ್ನು ಮಾಡಿಕೊಳ್ಳುತ್ತಾ, ಪ್ರಕೃತಿಯ ಒಡನಾಟದಲ್ಲಿ ಬೆಳೆಯುವುದನ್ನು ಹಂಚಿಕೊಳ್ಳುತ್ತಾರೆ. ಅಪ್ಪಂದಿರ ಜೊತೆ ಮೊಲವನ್ನೋ ಇಲ್ಲಾ ಕಾಂಗರೂವನ್ನೋ ಗುರಿಯಿಟ್ಟು ಹೊಡೆದದ್ದನ್ನ, ಕುದುರೆಸವಾರರಾಗಿದ್ದನ್ನ, ಅಣ್ಣ, ತಮ್ಮ, ತಂಗಿಯರ ಜೊತೆ ಸೇರಿ ಮಾಡಿದ ಸಾಹಸಗಳು, ವಿನೋದಗಳು, ಕುತಂತ್ರಗಳು, ಶಾಲೆಯಲ್ಲಿನ ಗುದ್ದಾಟ, ಕಿರುಕುಳ, ಸೇಡು, ಅಮ್ಮಂದಿರ ಜೊತೆ ಬೇಸಾಯ, ಪ್ರಾಣಿಗಳ ಸಾಕಾಣಿಕೆಯನ್ನು ಕಲಿತು, ಕೃಷಿಕ್ಷೇತ್ರದಲ್ಲೇ ಮುಂದುವರೆದಿದ್ದನ್ನ ಹೇಳುತ್ತಾರೆ.
ಅವರೆಲ್ಲರಲ್ಲೂ ನಾನು ಕಾಣುತ್ತೀನೇನೋ ಎನ್ನುವ ಭಾವನೆ ನನ್ನಲ್ಲಿ ದಟ್ಟವಾಗಿದೆ. ಎಲ್ಲಾ ಕತೆಗಳೂ ನನ್ನ ಸಂಗಾತಿಗಳಾಗಿಬಿಟ್ಟಿವೆ!!
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.