Advertisement
ಬಾವಿಯೊಳಗೆ `ಪುಣ್ಯಕೋಟಿ’: ನಟರಾಜ್‌ ಅರಳಸುರಳಿ ಕೃತಿಯ ಬರಹ

ಬಾವಿಯೊಳಗೆ `ಪುಣ್ಯಕೋಟಿ’: ನಟರಾಜ್‌ ಅರಳಸುರಳಿ ಕೃತಿಯ ಬರಹ

ತಂಡೋಪತಂಡವಾಗಿ ಜನ ನಮ್ಮ ಮನೆಕಡೆ ಬರುತ್ತಿರುವುದು ಕಾಣಿಸಿತು. ಹಲವಾರು ಬ್ಯಾಟರಿ ಬೆಳಕುಗಳೂ ಒಂದೆರಡು ಪೆಟ್ರೋಮ್ಯಾಕ್ಸ್‌ಗಳೂ ಆ ಗುಂಪಿನಲ್ಲಿದ್ದವು. ಎಲ್ಲರೂ ಮನೆಯಂಗಳಕ್ಕೆ ಬಂದವರೇ ನೇರವಾಗಿ ಬಾವಿಯಕಡೆ ನಡೆದರು. ನೋಡನೋಡುತ್ತಿದ್ದಂತೆ ಮೂರ್ನಾಲ್ಕು ಜನ ಬಾವಿ ಇಳಿದರು. ಕೆಲವರು ಮೇಲಿನಿಂದ ನೇಣು ಇಳಿಬಿಟ್ಟರು. ದನಗಳ ಹೊಟ್ಟೆ ಕೆಳಗೆ ನೇಣು ತೂರಿಸಿ ಬಾವಿಯ ಇನ್ನೊಂದು ಭಾಗದಲ್ಲಿದ್ದವರಿಗೆ ತಲುಪಿಸಿದರು. ನೋಡ ನೋಡುತ್ತಿದ್ದಂತೆಯೇ ಒಂದೊಂದೇ ದನಗಳನ್ನು ಬಾವಿಯಿಂದ ಮೇಲೆತ್ತಿದರು.
ನಟರಾಜ್‌ ಅರಳಸುರಳಿ ಬರೆದ ತಮ್ಮ ತಂದೆಯವರ ಕುರಿತ ಬರಹಗಳ ಸಂಕಲನ “ಆಕಾಶಬುಟ್ಟಿ” ಕೃತಿಯ ಒಂದು ಬರಹ ನಿಮ್ಮ ಓದಿಗೆ.

ಬಾಲ್ಯದಲ್ಲಿ ನೂರಾರು ಬಾರಿ `ಪುಣ್ಯಕೋಟಿ’ಯ ಹಾಡು-ಕತೆ ಕೇಳಿದ್ದೆವು. ಪ್ರತಿಬಾರಿ ಕೇಳಿದಾಗಲೂ ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು ಮುಮ್ಮಲ ಮರುಗುತ್ತಿದ್ದೆವು. ಜಗತ್ತಿನ ದನಗಳೆಲ್ಲವೂ ಪುಣ್ಯಕೋಟಿಯಂತೆಯೇ ತುಂಬಾ ಸಾಧು ಮತ್ತು ನಿರುಪದ್ರವಿಗಳೆಂದೇ ನಂಬಿದ್ದೆವು. ಕೊಟ್ಟಿಗೆಯಲ್ಲಿರುವ ಎಳೆಗರುಗಳ ಮೇಲುಸ್ತುವಾರಿಯನ್ನು ವಹಿಸಿಕೊಂಡು ನಮ್ಮ ನಮ್ಮ ನಿರ್ವಹಣೆಗೆ ಒಳಪಡುವ ಕರುಗಳನ್ನು ವಿಶೇಷ ಕಾಳಜಿ ಮತ್ತು ಮಮಕಾರದಿಂದ ಸಾಕುತ್ತಿದ್ದೆವು. ನಾನು ಸಾಕುತ್ತಿರುವ ಕರು ಪುಣ್ಯಕೋಟಿಯದೇ ಎಂದು ಭ್ರಮಿಸಿಕೊಂಡಿದ್ದೆವು.

ಬಾಲ್ಯದ ಆ ಎಂಟು ಹತ್ತು ವರ್ಷಗಳಷ್ಟೇ ದನಗಳ ಬಗೆಗಿನ ಪ್ರೀತಿ ವಾತ್ಸಲ್ಯ ಉಳಿದಿದ್ದು. ನಂತರದ ದಿನಗಳಲ್ಲಿ ದನಗಳ ನಿರಂತರ ದಾಳಿಯಿಂದ ನಮ್ಮ ತೋಟಗಳನ್ನು ರಕ್ಷಿಸಿಕೊಳ್ಳುವ ಗುರುತರವಾದ ಹೊಣೆಗಾರಿಕೆ ನಮ್ಮ ಹೆಗಲಮೇಲೆ ಬಿದ್ದ ನಂತರ ದನಗಳ ಕುರಿತಾದ ನಮ್ಮ ಅಭಿಪ್ರಾಯ ಬದಲಾಯಿತು. ನಮ್ಮ ಬಾಲ್ಯದಲ್ಲಿ ಅಷ್ಟಿಷ್ಟು ಕಹಿ ನೆನಪುಗಳಿದ್ದರೆ ಆ ಕಹಿನೆನಪುಗಳಿಗೆಲ್ಲಾ ದನಗಳೇ ನೇರಹೊಣೆ. ನಮ್ಮ ಸುಂದರ ಬಾಲ್ಯವನ್ನು ಘಾಸಿಗೊಳಿಸಿದ ದನಗಳ ಬಗ್ಗೆ ನನಗೆ ಅಸಮಾನ್ಯ ಸಿಟ್ಟಿದೆ.

(ನಟರಾಜ್‌ ಅರಳಸುರಳಿ)

ಆ ದಿನಗಳಲ್ಲಿ ಅಪ್ಪ ದೂರದ ಮಲ್ಲೇಸರದ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಬೆಳಗ್ಗೆ 9 ಗಂಟೆಗೆಲ್ಲಾ ಮನೆಬಿಟ್ಟರೆ ಹಿಂದಿರುಗುವುದು ರಾತ್ರಿಯಾಗುತ್ತಿತ್ತು. ನಾನು ಮತ್ತು ನಮ್ಮಕ್ಕ ಇಬ್ಬರೂ ಆಗ ಮನೆಯ ಅತ್ಯಂತ ಸಮೀಪದ ಶಾಲೆಯ ಕಲಿಗಳು. ಹೀಗಾಗಿ ನಮ್ಮ ಹೊಸತೋಟದ ರಕ್ಷಣೆಯ ಹೊಣೆಗಾರಿಕೆ ನಮ್ಮಿಬ್ಬರ ಹೆಗಲಮೇಲಿತ್ತು. ಬೆಳಗ್ಗೆ ಶಾಲೆ ಆರಂಭವಾಗುವ ಅರ್ಧಗಂಟೆ ಮೊದಲು ಮನೆಬಿಟ್ಟು ತೋಟದೆಲ್ಲೆಡೆ ಕಣ್ಣುಹಾಯಿಸಿ ದನಗಳೇನಾದರೂ ಕಂಡಲ್ಲಿ ತೋಟದಿಂದ ಹೊರಗೋಡಿಸಿ ನಂತರ ಶಾಲೆಗೆ ಹೋಗಬೇಕಿತ್ತು. ಮಧ್ಯಾಹ್ನದ ಬಿಡುವಿನಲ್ಲೂ ತೋಟವನ್ನೆಲ್ಲಾ ಒಮ್ಮೆ ಸುತ್ತಾಡಿ ಯಾವುದೇ ದನವಿಲ್ಲ ಎಂಬುದನ್ನು ಖಾತ್ರಿಮಾಡಿಕೊಂಡು ಬರಬೇಕಿತ್ತು. ಇನ್ನೊಂದು ಬೀಟ್ ಸಂಜೆ ಶಾಲೆ ಮುಗಿದಮೇಲೆ. ದುರಾದೃಷ್ಟವೆಂದರೆ ಮೂರು ಬೀಟ್‌ಗಳಲ್ಲಿ ಒಮ್ಮೆಯಾದರೂ ತೋಟದಲ್ಲಿ ದನಗಳು ಕಾಣಿಸಿಕೊಳ್ಳುತ್ತಿದ್ದವು. ಅದಿನ್ನೂ ಅಡಿಕೆ ಸಸಿನೆಟ್ಟು ನಾಲ್ಕಾರು ವರ್ಷಗಳಷ್ಟೇ ಕಳೆದಿದ್ದ ಹೊಸ ತೋಟ ನಮ್ಮದು. ತೋಟದಲ್ಲಿ ಎಲ್ಲೇ ಕಾಲು ಹಾಕಿದರೂ ರಾಶಿ ರಾಶಿ ನಾಚಿಕೆಮುಳ್ಳಿನ ಗಿಡಗಳು. ಕೆಂಜಿಗೆ ಎಂಬ ಕೊಕ್ಕೆ ಮುಳ್ಳಿನ ಉಡಿಗಳು. ಬರಿಗಾಲಿನಲ್ಲಿ ಆ ನಾಚಿಕೆ ಮುಳ್ಳುಗಳ ಮೇಲೆ ಓಡುತ್ತಾ ದನಗಳನ್ನು ಬೆರೆಸಾಡಿದ ದಿನಗಳನ್ನು ನೆನಪಿಸಿಕೊಂಡರೆ ಈಗಲೂ ಕಣ್ಣಲ್ಲಿ ನೀರು ತುಂಬುತ್ತದೆ. ಕೆಂಜಿಗೆ ಉಡಿಯಲ್ಲಿ ಎಲೆಗಿಂತಲೂ ಮುಳ್ಳುಗಳೇ ಹೆಚ್ಚಿರುತ್ತವೆ. ಬೆಕ್ಕಿನ ಚೋಟಿನಂತೆ ಬಾಗಿರುವ ಮುಳ್ಳುಗಳು ಸಣ್ಣಗೆ ಸೋಕಿದರೂ ಸಾಕು ಚರ್ಮವನ್ನೇ ಹರಿದುಬಿಡುತ್ತದೆ. ನಾಚಿಕೆಮುಳ್ಳಿನ ಮೇಲೆ ಅಂಗಾಲಿಟ್ಟು ಓಡುವಾಗ ಕೆಂಜಿಗೆ ಮುಳ್ಳಿನಿಂದ ಮೈ ಕೈ ಎಲ್ಲಾ ಹರಿದು ರಕ್ತ ಜಿನುಗುವಾಗ ಅ ದನಗಳ ಕುರಿತಾಗಿ ಅಸಾಧ್ಯವಾದ ಕೋಪ ಮತ್ತು ಅಸಹನೆಗಳಷ್ಟೇ ಹುಟ್ಟುತ್ತಿದ್ದುದು. ಆ ದನಗಳೋ ಯಾವ ಸೈನಿಕರಿಗೂ ಕಡಿಮೆ ಇಲ್ಲದಂತೆ ಗೆರಿಲ್ಲಾ ಯುದ್ಧದಲ್ಲಿ ಪರಿಣಿತಿ ಪಡೆದವರಂತಿದ್ದವು. ಎಂಟು ಹತ್ತು ದನಗಳು ಒಮ್ಮೆಗೇ ತೋಟ ನುಗ್ಗಿದರೆ ಕ್ಷಣಾರ್ಧದಲ್ಲಿಯೇ ತೋಟವನ್ನು ಬೋಳಿಸಿಬಿಡುತ್ತಿದ್ದವು.

ನಾವು ಉದ್ದದ ಕೋಲು ಹಿಡಿದು ಬೆನ್ನಟ್ಟಿದರೆ ಒಂದೊಂದು ದನವೂ ಒಂದೊಂದು ದಿಕ್ಕಿನಲ್ಲಿ ಓಡಿ ನಮ್ಮನ್ನು ದಾರಿ ತಪ್ಪಿಸುತ್ತಿದ್ದವು. ದನಗಳನ್ನು ಮುಗ್ಧ ಪ್ರಾಣಿಗಳೆಂದು ನಂಬಿರುವರ‍್ಯಾರಾದರೂ ಇದ್ದರೆ ಅಂಥವರನ್ನು ತೋಟ, ಗದ್ದೆಗೆ ನುಗ್ಗಿದ ದನಗಳನ್ನು ಓಡಿಸಲು ಬಿಡಬೇಕು. ಕಾವಲುಗಾರರನ್ನು ಕಂಗಾಲು ಮಾಡುವುದರಲ್ಲಿ ದನಗಳು ನಿಸ್ಸೀಮ ಪ್ರಾಣಿಗಳು. ಹತ್ತು ದನಗಳು ತೋಟ ನುಗ್ಗಿದರೆ ಹತ್ತೂ ದನಗಳನ್ನೂ ಪ್ರತ್ಯೇಕವಾಗಿ ಅಟ್ಟಾಡಿಸಿಯೇ ಹೊರದೂಡಬೇಕು. ಯಾವುದೋ ಬಾಳೆಹಿಂಡಲಿನ ನಡುವೆ ಸದ್ದಾಗದಂತೆ ಅಡಗಿಕೊಂಡಿದ್ದು ಕಾವಲುಗಾರ ಕಣ್ಮರೆಯಾಗುವುದನ್ನೇ ಕಾದಿದ್ದು ಮತ್ತೊಮ್ಮೆ ತೋಟಕ್ಕೆ ದಾಳಿ ಇಡುವ ವಿಶೇಷ ಕಾರ್ಯತಂತ್ರಗಳನ್ನು ರೂಢಿಸಿಕೊಂಡಿರುತ್ತವೆ. ದಿನಕ್ಕೊಂದು ಕಡೆ ಬೇಲಿ ಮುರಿಯುವುದನ್ನು ಹರಕೆಯಂತೆ ನಡೆಸಿಕೊಂಡು ಬರುತ್ತವೆ. ಯಾವುದೇ ದನ ತೋಟದಿಂದ ಹೊರಹೋಗುವಾಗ ತಾನು ತೋಟದೊಳಗೆ ನುಸುಳಿದ ಕಳ್ಳಗಿಂಡಿಯಲ್ಲಿ ಮರಳುವುದೇ ಇಲ್ಲ. ಕಳ್ಳಗಿಂಡಿಯ ರಹಸ್ಯವನ್ನು ಬಹಳ ಜತನದಿಂದ ಕಾಯ್ದುಕೊಳ್ಳುತ್ತವೆ.

ಬಾಲ್ಯದಿಂದಲೇ ಆರಂಭವಾದ ದನಗಳೊಂದಿಗಿನ ತಿಕ್ಕಾಟ ಇತ್ತೀಚಿನ ವರ್ಷಗಳವರೆಗೂ ಮುಂದುವರಿದಿತ್ತು. ಈಚಿನ ವರ್ಷಗಳಲ್ಲಿ ತೋಟಗಳ ರಕ್ಷಣೆಗೆ ಆಧುನಿಕ ಬೇಲಿಗಳು ಚಾಲ್ತಿಗೆ ಬಂದಮೇಲೆ ಮತ್ತು ಹಳ್ಳಿಯ ಗೋಮಾಳಗಳೆಲ್ಲಾ ಸಾಮಾಜಿಕ ಅರಣ್ಯಗಳಾಗಿ ಪರಿವರ್ತನೆಗೊಂಡಮೇಲೆ ದನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಯಿತು. ಹಸುಗಳನ್ನು ಮನೆಯಲ್ಲಿಯೇ ಕಟ್ಟಿ ಸಾಕಬೇಕಾದ ಅನಿವಾರ್ಯತೆ ಉಂಟಾದದ್ದರಿಂದ ಕೃಷಿಕರು ಮತ್ತು ದನಗಳ ನಡುವಿನ ಸಂಘರ್ಷ ಕಡಿಮೆಯಾಯಿತು.

ಮಳೆಗಾಲದಲ್ಲಿ ಇವುಗಳ ಕಾಟ ಸ್ವಲ್ಪ ಕಡಿಮೆ ಇರುತ್ತಿತ್ತು. ಗದ್ದೆ ಸಾಗುವಳಿ ಪ್ರಾರಂಭವಾಗುತ್ತಿದ್ದಂತೆ ಎಲ್ಲರೂ ತಂತಮ್ಮ ಮನೆಯ ದನಗಳನ್ನು ದನಗಾವಲಿನ ಗುಂಪಿಗೆ ಸೇರಿಸುತ್ತಿದ್ದರು. ಗದ್ದೆಕೊಯ್ಲು ಮುಗಿಯುತ್ತಿದ್ದಂತೆಯೇ ದನಗಾವಲು ಕೊನೆಯಾಗುತ್ತಿದ್ದುದರಿಂದ ನಂತರದ ದಿನಗಳಲ್ಲಿ ದನಗಳು ತೋಟಕ್ಕೆ ಲಗ್ಗೆ ಇಡುತ್ತಿದ್ದವು. ಬೇಸಿಗೆಯ ದಿನಗಳಲ್ಲಿ ಬೆಳದಿಂಗಳಿದ್ದರಂತೂ ಹಗಲೂ ರಾತ್ರಿ ಎಲ್ಲಾ ಕಾಲದಲ್ಲಿಯೂ ದನ ಕಾಯುವುದೇ ಕೆಲಸ. ಸಂಜೆ ಆರುಗಂಟೆಯ ಹೊತ್ತಿಗೆ ತೋಟ ನುಗ್ಗಿ ರಾತ್ರಿ ಇಡೀ ತೋಟ ಮೆಂದು ಬೆಳಗಿನ ಜಾವಕ್ಕೆ ನಮ್ಮ ಮನೆ ಅಂಗಳದಲ್ಲಿ ಚಪ್ಪರದಡಿಯಲ್ಲಿ ತಂಗಿದ್ದು ಅಂಗಳದ ತುಂಬಾ ಸಗಣಿ ಹಾಕಿ ಮೂತ್ರ ಹೊಯ್ದು ಗಬ್ಬೆಬ್ಬಿಸಿ ಹೋಗುತ್ತಿದ್ದವು. ಬೆಳಗಾಗುವವರೆಗೂ ಅಂಗಳದಲ್ಲಿ ಮಲಗಿರದೆ ಬೆಳಕು ಹರಿಯುತ್ತಿದ್ದಂತೆಯೇ ಇನ್ನೊಂದು ರೌಂಡ್ ಮೇಯಲು ತೋಟಕ್ಕೆ ಹೋಗಿರುತ್ತಿದ್ದವು. 1992ನೇ ಇಸವಿಯ ಮೆ ತಿಂಗಳಿನಲ್ಲಿ ನಮ್ಮ ತಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾದರು. ಆಗಲೂ ನಮ್ಮ ತೋಟ ಗದ್ದೆಗೆ ದನಗಳ ಕಾಟದಿಂದ ಮುಕ್ತಿ ದೊರಕಿರಲಿಲ್ಲ. ಈ ದನಗಳಿಂದಾಗಿಯೇ ನಮ್ಮೂರಿನ ಅನೇಕ ಕುಟುಂಬಗಳೊಂದಿಗೆ ಮನಸ್ತಾಪವಾಗಿತ್ತು. ನಮ್ಮ ಮನೆಯ ದನಗಳು ಬೇರೆಯವರ ತೋಟಕ್ಕೆ ಲಗ್ಗೆ ಇಟ್ಟು ದಾಂದಲೆ ಮಾಡುತ್ತಿದ್ದವು. `ಯಾರಾದರೂ ದುಡ್ಡು ತಗೊಂಡು ಒಂದು ಸೇರು ಹಾಲುಕೊಡುವಂತಿದ್ದರೆ ಇಷ್ಟೂ ದನಗಳನ್ನು ಮಾರಿಬಿಡಬಹುದಿತ್ತು.’ ಅಂತ ಆಗಾಗ್ಗೆ ಅಮ್ಮ ಗೊಣಗುವುದಿತ್ತು. ಅಪ್ಪ ತಮ್ಮ ಸೇವಾವಧಿಯ ಅಷ್ಟೂ ವರ್ಷಗಳಲ್ಲಿ ಕನಿಷ್ಟ ನಲ್ವತ್ತು ಐವತ್ತು ಬಾರಿಯಾದರೂ ವಿದ್ಯಾರ್ಥಿಗಳಿಗೆ `ಧರಣಿ ಮಂಡಲ ಮಧ್ಯದೊಳಗೆ’ ಕಥೆ ಹೇಳಿದ್ದಿರಬಹುದು. ಶಾಲಾ ಕಾರ್ಯಕ್ರಮದಲ್ಲಿ ಎರಡೋ ಮೂರೋ ಬಾರಿ `ಪುಣ್ಯಕೋಟಿ’ಯ ಗೀತರೂಪಕವನ್ನು ವಿದ್ಯಾರ್ಥಿಗಳಿಗೆ ಅಭ್ಯಾಸ ಮಾಡಿಸಿ ಪ್ರದರ್ಶಿಸಿದ್ದರು. ಹೀಗಿದ್ದರೂ ನಿರಂತರವಾಗಿ ತೋಟಕ್ಕೆ ದಾಳಿ ಇಡುವ ದನಗಳ ವಿಚಾರದಲ್ಲಿ ಒಂದೇ ಒಂದು ಬಾರಿಯೂ ಮೃದು ಧೋರಣೆ ತಳೆದದ್ದಿಲ್ಲ. ತೋಟಕ್ಕೆ ಬರುವ ದನಗಳನ್ನು ನಮ್ಮ ಮನೆ ಕೊಟ್ಟಿಗೆಯಲ್ಲಿ ಕೂಡಿಹಾಕಿ `ದನ ಬಡಿದ ಹಾಗೆ’ ಬಡಿಯುತ್ತಿದ್ದರು. ಎಷ್ಟೋ ಬಾರಿ ನಮ್ಮಮ್ಮ ಕಣ್ಣೀರು ಸುರಿಸುತ್ತ ಅಪ್ಪನ ಮುಂದೆ `ದನಗಳನ್ನು ಹೊಡೆಯಬೇಡಿರೆಂದು’ ಅಂಗಲಾಚುತ್ತಿದ್ದುದುಂಟು. ಅಪ್ಪ `ತಥ್, ಈ ದನಗಳು ನನ್ನ ನಿವೃತ್ತಿ ಜೀವನವನ್ನೇ ಹಾಳುಮಾಡಿಬಿಟ್ಟವು’ ಎಂದು ಆಗಾಗ ಶಾಪಹಾಕುತ್ತಿದ್ದರು.

1993ನೇ ಇಸವಿಯ ಬೇಸಿಗೆಯ ಒಂದು ದಿನ. ಆ ದಿನ ತೀರ್ಥಹಳ್ಳಿಯ ವಾರದ ಸಂತೆ ಎಂದು ನೆನಪು. ಕಾಲೇಜು ಮುಗಿಸಿ ಮನೆಕಡೆ ಹೊರಟರೆ ಯಾವ ಬಸ್ಸಿನಲ್ಲೂ ಜಾಗವೇ ಇರಲಿಲ್ಲ. ಬಸ್ಸಿನೊಳಗೆ ಒಂದು ಕಾಲಿಟ್ಟು ಜೋತಾಡಲೂ ಸಾಧ್ಯವಾಗದಂತೆ ಪ್ರಯಾಣಿಕರಿಂದ ತುಂಬಿ ಹೋಗಿದ್ದವು. ಅಂತೂ ಹೇಗೋ ಕೊನೆಯ ಬಸ್‌ನಲ್ಲಿ ಅರಳಸುರಳಿಗೆ ಬಂದಿಳಿದು ಎರಡು ಕಿ.ಮಿ. ನಡೆದು ಮನೆ ಸೇರಿಕೊಂಡೆ. ಬೆವರಿನಿಂದ ಒದ್ದೆಮುದ್ದೆಯಾಗಿದ್ದೆ. ತಣ್ಣೀರಿನಲ್ಲಿ ಸ್ನಾನ ಮಾಡಿದರೆ ರಿಫ್ರೆಶ್ ಆಗಬಹುದು ಎಂದು ಬಚ್ಚಲುಮನೆ ಸೇರಿಕೊಂಡೆ.

ಮನೆಯಂಗಳಕ್ಕೆ ತಾಕಿಕೊಂಡಂತೆಯೇ ಇದ್ದ ವಿಶಾಲವಾದ ಗದ್ದೆಯಲ್ಲಿ ತರಕಾರಿ ಬೆಳೆಸಿದ್ದೆವು. ಆ ದಿನಗಳಲ್ಲಿ ಅರಳಸುರಳಿಯ ಅಂಗಡಿಗಳಲ್ಲಿ ತರಕಾರಿ ಸಿಗುತ್ತಿರಲಿಲ್ಲ. ಅಂಗಡಿಯಿಂದ ತರಕಾರಿ ತರುವ ಪದ್ಧತಿಯೇ ಇರಲಿಲ್ಲ. ನಮ್ಮ ನಮ್ಮ ಮನೆಯ ಅಗತ್ಯಕ್ಕೆ ಬೇಕಾಗುವಷ್ಟು ತರಕಾರಿಗಳನ್ನು ನಾವೇ ಬೆಳೆದುಕೊಳ್ಳುತ್ತಿದ್ದ ಕಾಲವದು. ನಮ್ಮ ಅಮ್ಮ ತರಕಾರಿ ಬೆಳೆಯುವುದರಲ್ಲಿ ಸಿದ್ಧಹಸ್ತಳು. ಮನೆ ಮುಂದಿನ ಹಿತ್ತಲಲ್ಲಿ ಸಮೃದ್ಧ ತರಕಾರಿ ಬೆಳೆದಿತ್ತು. ನಾನು ಬಚ್ಚಲು ಮನೆ ಸೇರಿದ ಮರುಕ್ಷಣದಲ್ಲಿಯೇ ಅಮ್ಮ ಅಂಗಳಕ್ಕೆ ಬಂದಿದ್ದಾಳೆ. ಹಿತ್ತಲಿನಲ್ಲಿ ಅದೇನೋ ಸಟಸಟ ಸದ್ದಾಯಿತೆಂದು ಹಿತ್ತಲಿಗೆ ಹೋಗಿ ನೋಡಿದ್ದಾಳೆ. ಹಾಲು ಚೆಲ್ಲಿದಂತೆ ಹರಡಿದ್ದ ಬೆಳದಿಂಗಳಿನಲ್ಲಿ ನಾಲ್ಕಾರು ದನಗಳು ಹಿತ್ತಲು ಮೇಯುತ್ತಿರುವುದು ಕಂಡಿದೆ. ಇನ್ನೊಂದು ಕ್ಷಣ ತಡವಾದರೂ ಸೊಂಪಾಗಿ ಬೆಳೆದ ತರಕಾರಿಗಳೆಲ್ಲವೂ ಯಾರದೋ ದನಗಳ ಹೊಟ್ಟೆ ಸೇರುತ್ತದೆ. ಗಾಬರಿಗೊಂಡ ಅಮ್ಮ ಹಿತ್ತಲಿನ ಉಣಗೋಲಿನ ಒಂದು ಬಡಿಗೆಯನ್ನೆ ಎಳೆದುಕೊಂಡು ದನಗಳ ಕಡೆಗೆ ನುಗ್ಗಿದ್ದಾಳೆ. ಯಾವುದೋ ಒಂದು ದನದ ಬೆನ್ನಿನ ಮೇಲೆ ಬಲವಾದ ಒಂದು ಹೊಡೆತವನ್ನೂ ಹೇರಿದ್ದಾಳೆ. `ನಿಮ್ ಹೊಟ್ಟೆ ಒಡೆದುಹೋಗ, ಮೂರುತಿಂಗಳಿಂದ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ತರಕಾರಿ ಪೂರ್ತಿ ತಿಂದು ಹಾಕಿದ್ವಲ್ಲ, ಸಾಯದೇ ಹೋಗಾ’ ಮುಂತಾದ ಬೈಗುಳಗಳಿಂದ ದನಗಳನ್ನು ಅಟ್ಟಾಡಿಸಿದ್ದಾಳೆ. ಸೊಂಪಾಗಿ ಬೆಳೆದು ನಿಂತ ತರಕಾರಿ ಗಿಡಗಳ ಭೂರಿ ಭೋಜನದಲ್ಲಿ ತನ್ಮಯಿಗಳಾದ ದನಗಳಿಗೆ ಅಮ್ಮನ ಆಕ್ರಮಣ ಅನಿರೀಕ್ಷಿತವಾಗಿತ್ತು. ಸೂರ್ಯ ಮುಳುಗುವ ಮೊದಲೇ ತೋಟದಲ್ಲೆಲ್ಲಾ ಲೂಟಿ ಮಾಡಿ ರಾತ್ರಿ ನಮ್ಮ ಮನೆ ಅಂಗಳದಲ್ಲಿ ಠಿಕಾಣಿ ಹೂಡುವ ಯೋಚನೆಯಲ್ಲಿದ್ದ ದನಗಳಿಗೆ ಅಮ್ಮನ ಆರ್ಭಟ ಗಾಬರಿ ಮೂಡಿಸಿದ್ದಿರಬೇಕು. ಬಾಲ ಎತ್ತಿಕೊಂಡು ಮನೆಯ ಹಿಂಭಾಗದ ಕಾಡಿನ ಕಡೆ ಓಡಿದವು.

ಹಿಂದಿನ ವರ್ಷವಷ್ಟೇ ಮನೆಯ ಹಿಂಭಾಗದಲ್ಲಿ ಬಾವಿಯೊಂದನ್ನು ತೋಡಿಸಿದ್ದೆವು. ಸುಮಾರು ಹದಿನಾರು ಅಡಿ ಅಗಲದ ಹತ್ತು ಹನ್ನೆರಡು ಅಡಿ ಆಳದ ಬಾವಿ ತುಂಬಾ ಮೇಲಕ್ಕೇ ನೀರು ದೊರೆತದ್ದರಿಂದ ಹೆಚ್ಚು ಆಳ ತೋಡಿಸುವ ಪ್ರಮೇಯ ಬರಲಿಲ್ಲ. ಅದೂ ಅಲ್ಲದೆ ಹತ್ತು ಹನ್ನೆರಡು ಅಡಿ ಆಳಕ್ಕೆ ಹಾಸುಬಂಡೆಯೊಂದು ಸಿಕ್ಕಿದ್ದರಿಂದ ಅಷ್ಟೇ ಆಳಕ್ಕೆ ಬಾವಿಗೆ ಕಲ್ಲು ಕಟ್ಟಿಸಲಾಗಿತ್ತು. ನೆಲ ಮಟ್ಟದಲ್ಲಿಯೇ ಇದ್ದ ಬಾವಿಗೆ ತಡೆ ಕಟ್ಟೆ ನಿರ್ಮಾಣವಾಗಿರಲಿಲ್ಲ. ಹೋಗಲಿ, ಒಂದು ತಡೆ ಬೇಲಿಯನ್ನೂ ಕಟ್ಟಿರಲಿಲ್ಲ.

ಅಮ್ಮನ ಆರ್ಭಟಕ್ಕೆ ಬೆಚ್ಚಿದ ದನಗಳು ಕಾಡು ಸೇರಿಕೊಳ್ಳುವ ದಾವಂತದಲ್ಲಿ ಬಾವಿಕಡೆ ಓಡಿಬಂದು ದುಡುಂ ದುಡುಂ ಎಂದು ಒಂದರ ಹಿಂದೊಂದು ಬಾವಿಗೆ ಹಾರಿಕೊಂಡವು. ಅಮ್ಮನ ಜಂಗಾಬಲವೇ ಕುಸಿದುಹೋಯ್ತು. ಏನು ಮಾಡಬೇಕೆಂದು ತಿಳಿಯದೆ ನಾನು ಸ್ನಾನ ಮಾಡುತ್ತಿದ್ದ ಬಚ್ಚಲುಮನೆಯ ಹೊರಗೆ ನಿಂತು `ಬಾವಿಗೆ ದನಗಳು ಬಿದ್ದಿವೆ ಬೇಗ ಬಾ’ ಎಂದು ಕಿರುಚಿದ್ದಾಳೆ. ನಾನಾದರೂ ಬಚ್ಚಲು ಹಂಡೆಗೆ ನೀರು ಬಿಟ್ಟಿಕೊಂಡು ಸ್ನಾನ ಮಾಡುತ್ತಿದ್ದದ್ದರಿಂದ ಅಮ್ಮ ಏನು ಹೇಳಿದಳೆಂದು ಸ್ಪಷ್ಟವಾಗಿ ತಿಳಿಯಲಿಲ್ಲ. ಬಾವಿಗೆ ಬಿಂದಿಗೆಯೋ, ಬಕೆಟ್ಟೋ ಏನೋ ಬಿದ್ದಿರಬೇಕೆಂದು ಭಾವಿಸಿದ ನಾನು `ಸ್ವಲ್ಪ ಇರು, ಸ್ನಾನ ಮುಗಿಸಿಕೊಂಡು ಬಂದು ನೋಡುತ್ತೇನೆ’ ಎಂದೆ. ತಡಮಾಡಿದರೆ ದನಗಳೆಲ್ಲವೂ ಉಸಿರುಗಟ್ಟಿ ಸಾಯುತ್ತವೆ ಎಂದು ತೀರ್ಮಾನಿಸಿದ ಅಮ್ಮ ಆ ರಾತ್ರಿ ಒಂದೇ ಉಸುರಿನಲ್ಲಿ ಅರಳಸುರಳಿಯ ಕಡೆ ಓಡಿದಳು.

ಆ ದಿನಗಳಲ್ಲಿ ಅಪ್ಪ ಸಂಜೆ ಹೊತ್ತು ಮನೆಯಲ್ಲಿ ಇರುತ್ತಿರಲಿಲ್ಲ. ಮಧ್ಯಾಹ್ನ ಊಟವಾದ ಮೇಲೆ ಕೆಲಸದವರೆಲ್ಲಾ ಹಿಂದಿರುಗಿದ ಮೇಲೆ ಗಡದ್ದಾಗಿ ಒಂದು ನಿದ್ದೆ ಮಾಡಿ ನಂತರ ಐದು ಗಂಟೆ ಹೊತ್ತಿಗೆ ಎದ್ದು ಮುಖ ತೊಳೆದು ಕಾಫಿಕುಡಿದು ಅರಳಸುರಳಿಕಡೆ ಹೊರಟರೆಂದರೆ ಮತ್ತೆ ಮನೆ ಸೇರುವುದು ರಾತ್ರಿ ಒಂಭತ್ತು ಗಂಟೆಗೆ. ಅರಳಸುರಳಿಯ ಅಂಗಡಿ ಹೋಟೆಲ್, ಕಲ್ಲುಬೆಂಚು ಬಾವಿಕಟ್ಟೆ ಮುಂತಾದ ಕಡೆಗಳೆಲ್ಲಾ ಗುಂಪುಗೂಡಿರುವ ಹರಟೆಪ್ರಿಯರ ನಡುವೆ ಒಂದಷ್ಟು ಹರಟೆ ಹೊಡೆದು ಬರುವ ವಾಡಿಕೆ ಇರಿಸಿಕೊಂಡಿದ್ದರು. ಹೀಗಾಗಿ ಬಾವಿಗೆ ದನಗಳು ಬಿದ್ದಾಗ ಅಪ್ಪ ಮನೆಯಲ್ಲಿರಲಿಲ್ಲ. ಒಂದು ವೇಳೆ ಅಪ್ಪ ಮನೆಯಲ್ಲಿದ್ದರೂ ಅಷ್ಟೇನೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ.

ಅಮ್ಮ ಹತ್ತೇ ನಿಮಿಷದಲ್ಲಿ ಅರಳಸುರಳಿ ತಲುಪಿ ಎದುರಿಗೆ ಸಿಕ್ಕ ನಾಲ್ಕಾರು ಮಂದಿಗೆ `ನಮ್ಮ ಮನೆ ಬಾವಿಗೆ ದನಗಳು ಬಿದ್ದಿರುವ ವಿಷಯ ತಿಳಿಸಿ ಹೋದಷ್ಟೇ ವೇಗವಾಗಿ ವಾಪಾಸು ಬಂದಿದ್ದಾಳೆ.

ನಾನು ಸ್ನಾನ ಮುಗಿಸಿ ಮೈ ಒರೆಸಿಕೊಂಡು ಬಚ್ಚಲು ಮನೆಯಿಂದ ಹೊರಬಂದಾಗ ಅಮ್ಮ ಕಾಣಿಸಲಿಲ್ಲ. ಅಸಲಿಗೆ ಮನೆಯಲ್ಲಿ ಏನಾಗಿದೆ ಎಂದೂ ನನಗೆ ತಿಳಿಯಲಿಲ್ಲ. ಯಾರನ್ನಾದರೂ ವಿಚಾರಿಸೋಣವೆಂದರೆ ಅಮ್ಮ ಅಪ್ಪ ಇಬ್ಬರೂ ಮನೆಯಲ್ಲಿ ಕಾಣಿಸುತ್ತಿಲ್ಲ. ನಾನು ಸ್ನಾನ ಮಾಡುವಾಗ ಅಮ್ಮ `ಅದೇನೋ ಬಾವಿಗೆ ಬಿತ್ತು’ ಎಂದು ಹೇಳಿದ ಮಾಹಿತಿಯನ್ನೇ ಆಧರಿಸಿ ಒಂದು ಕುರುಡು ಬ್ಯಾಟರಿ ಹಿಡಿದುಕೊಂಡು ಬಾವಿಯ ಸಮೀಪ ಬಂದೆ. ಬಾವಿಯನ್ನು ಸಮೀಸಿಸುತ್ತಿದ್ದಾಗಲೇ ಬಾವಿಯೊಳಗಿಂದ `ಜೊಳ ಜೊಳ ಶಬ್ಧ ಕೇಳಿಸಿತು. ಮಂದಬೆಳಕು ಹೊಮ್ಮಿಸುತ್ತಿದ್ದ ಬ್ಯಾಟರಿಯ ಬೆಳಕಿನಲ್ಲಿ ನಾಲ್ಕಾರು ದನಗಳು ಈಜು ಹೊಡೆಯುತ್ತಿರುವುದು ಕಾಣಿಸಿತು. ಅವೆಲ್ಲವೂ ಒಂದು ಇನ್ನೊಂದರ ಬೆನ್ನಮೇಲೆ ಮೂತಿ ಇರಿಸಿಕೊಂಡು ನನ್ನ ಬ್ಯಾಟರಿಯ ಮಂದ ಬೆಳಕಿನ ಕಡೆ ದೀನವಾಗಿ ನೋಡುತ್ತಿದ್ದವು. ಕ್ಷಣಾರ್ಧದಲ್ಲಿ ಇಡೀ ಘಟನೆ ನನಗೆ ಮನವರಿಕೆಯಾಗಿತ್ತು. ಅಷ್ಟರಲ್ಲಿ ಅಮ್ಮನೂ ಅರಳಸುರಳಿಯಿಂದ ಹಿಂದಿರುಗಿದಳು. ಕೊನೆಗಾರ ಉಪಯೋಗಿಸಿ ಬಿಟ್ಟಿದ್ದ ಕತ್ತದ ನೇಣನ್ನು ಪತ್ತೆ ಮಾಡುವಂತೆ ನನಗೆ ಹೇಳಿದಳು. ಸೊಪ್ಪಿನ ಹಗ್ಗಗಳನ್ನೆಲ್ಲಾ ಸಂಗ್ರಹಿಸಿ ಒಂದಕ್ಕೊಂದು ಸೇರಿಸಿ ಗಂಟು ಹಾಕಿದಳು. ಉದ್ದದ ದೊಂದಿಯೊಂದನ್ನು ತಯಾರಿಸುವಂತೆ ನನಗೆ ಆದೇಶಿಸಿ ತಾನು ಮನೆಯಲ್ಲಿದ್ದ ಫಾಲಿಡಾಲ್, ಮೆಟಾಸಿಡ್ ಬಾಟಲಿಗಳಿಗೆಲ್ಲಾ ಸೀಮೆಎಣ್ಣೆ ತುಂಬಿಸಿ ಬಟ್ಟೆಯ ಬಿರುಟೆ ಮಾಡಿ ದೀಪ ಹೊತ್ತಿಸಲು ಸಿದ್ಧವಾಗಿರಿಸಿದ್ದಳು. ನಾನು ಚಪ್ಪರದ ಒಂದೆರಡು ದಬ್ಬೆ ಎಳೆದು ಸೀಳಿ ದೊಂದಿ ಮಾಡಿದೆ. ಅಮ್ಮನಿಗೆ ನನ್ನ ಮತ್ತು ಅಪ್ಪನ ಮೇಲೆ ಅಗಾಧವಾದ ಸಿಟ್ಟು ಬಂದಿತ್ತು. ನಾನು ಕೇಳಿದ ಒಂದು ಪ್ರಶ್ನೆಗೂ ಅವಳು ಉತ್ತರಿಸುತ್ತಿರಲಿಲ್ಲ. ನನ್ನನ್ನೂ, ಅಪ್ಪನನ್ನೂ, ಅರ್ಧಂಬರ್ಧ ಕೆಲಸಮಾಡಿ ನಾಪತ್ತೆಯಾದ ಬಾವಿ ಗುತ್ತಿಗೆದಾರನನ್ನೂ ಶಪಿಸುತ್ತಿದ್ದಳು. ಸ್ವಗತದಂತೆ ಪಾಳಿಯ ಮೇಲೆ ಒಬ್ಬರಾದ ಮೇಲೆ ಒಬ್ಬರನ್ನು ಬೈದುಕೊಳ್ಳುತ್ತಿದ್ದಳು.

ಅಷ್ಟರಲ್ಲೇ ತಂಡೋಪತಂಡವಾಗಿ ಜನ ನಮ್ಮ ಮನೆಕಡೆ ಬರುತ್ತಿರುವುದು ಕಾಣಿಸಿತು. ಹಲವಾರು ಬ್ಯಾಟರಿ ಬೆಳಕುಗಳೂ ಒಂದೆರಡು ಪೆಟ್ರೋಮ್ಯಾಕ್ಸ್‌ಗಳೂ ಆ ಗುಂಪಿನಲ್ಲಿದ್ದವು. ಎಲ್ಲರೂ ಮನೆಯಂಗಳಕ್ಕೆ ಬಂದವರೇ ನೇರವಾಗಿ ಬಾವಿಯಕಡೆ ನಡೆದರು. ನೋಡನೋಡುತ್ತಿದ್ದಂತೆ ಮೂರ್ನಾಲ್ಕು ಜನ ಬಾವಿ ಇಳಿದರು. ಕೆಲವರು ಮೇಲಿನಿಂದ ನೇಣು ಇಳಿಬಿಟ್ಟರು. ದನಗಳ ಹೊಟ್ಟೆ ಕೆಳಗೆ ನೇಣು ತೂರಿಸಿ ಬಾವಿಯ ಇನ್ನೊಂದು ಭಾಗದಲ್ಲಿದ್ದವರಿಗೆ ತಲುಪಿಸಿದರು. ನೋಡ ನೋಡುತ್ತಿದ್ದಂತೆಯೇ ಒಂದೊಂದೇ ದನಗಳನ್ನು ಬಾವಿಯಿಂದ ಮೇಲೆತ್ತಿದರು.

ನನ್ನ ಹಿರಿಯ ಸಹೋದ್ಯೋಗಿ ಮಿತ್ರರಾದ ಕಲ್ಹಾಳ ಗಂಗಾಧರ್ ಕೆಲವು ದಿನಗಳ ಹಿಂದೆ ನನ್ನನ್ನು ತಮ್ಮ ತೋಟಕ್ಕೆ ಕರೆದೊಯ್ದಿದ್ದರು. ಅವರ ತೋಟದಲ್ಲಿ ಪಣಿಯೂರು ತಳಿಯ ಮೆಣಸಿನಬಳ್ಳಿ ವಿಫುಲವಾಗಿ ಬೆಳೆದಿದ್ದವು. ಒಂದೊಂದು ಬಳ್ಳಿಯಲ್ಲೂ ಎರಡು ಮೂರು ಚೀಲಗಳಾಗುವಷ್ಟು ಕರೆ ತೂಗಾಡುತ್ತಿತ್ತು. ನನ್ನ ಆಸಕ್ತಿ ನೋಡಿದ ಗಂಗಾಧರ್ ತಮ್ಮ ಆಳುಗಳನ್ನು ಕರೆದು ಫಣಿಯೂರು ಕಾಳುಮೆಣಸಿನ ರನ್ನರ್ಸನ ನಾಲ್ಕಾರು ಪಿಂಡಿ ಕಳಿಸಿಕೊಟ್ಟಿದ್ದರು. ಸುಮಾರು ಮುನ್ನೂರು ನಾನೂರು ಪ್ಲಾಸ್ಟಿಕ್ ಕವರ್‌ಗಳಿಗೆ ಮಣ್ಣು ಗೊಬ್ಬರ ತುಂಬಿಸಿ ಪಣಿಯೂರು ಮೆಣಸಿನ ಕಟಿಂಗ್ಸ್ ಊರಿದ್ದೆ. ನೀರುಣಿಸಲು ಅನುಕೂಲವಾಗಲಿ ಎಂದು ಮೆಣಸಿನ ಬಳ್ಳಿನೆಟ್ಟ ಕವರ್‌ಗಳನ್ನು ಬಾವಿಯ ಪಕ್ಕದಲ್ಲಿಯೇ ಪಾತಿ ಮಾಡಿ ಜೋಡಿಸಿಟ್ಟಿದ್ದೆ. ಪ್ರತಿಯೊಂದು ಕವರ್‌ನಲ್ಲೂ ಎರಡೆರಡು ಬಳ್ಳಿಗಳು ಚಿಗುರೊಡೆದಿದ್ದವು. ನಾಟಿ ಮಾಡಿದ ಒಂದೇ ತಿಂಗಳಿನಲ್ಲಿ ಒಂದೊಂದು ಗೇಣು ಉದ್ದ ಬೆಳೆದು ನಾಲ್ಕಾರು ಎಲೆ ಚಿಗುರಿಸಿಕೊಂಡು ಸೊಂಪಾಗಿ ಬೆಳೆದಿದ್ದವು. ದನಗಳ ರಕ್ಷಣಾ ಕಾರ್ಯಾಚರಣೆಗೆ ಸೇರಿದ್ದ ಜನಸ್ತೋಮ ಎಲ್ಲಿ ನನ್ನ ಮೆಣಸಿನ ಬಳ್ಳಿಗಳನ್ನು ತುಳಿದು ಹಾಳುಗೆಡವುತ್ತಾರೋ ಎಂಬ ಆತಂಕ ನನ್ನನ್ನು ಆವರಿಸಿತ್ತು. ಆದರೆ ಅಲ್ಲಿರುವ ಯಾರೊಬ್ಬರೂ ನನ್ನ ಮಾತನ್ನು ಕೇಳಿಸಿಕೊಳ್ಳುವ ಪರಿಸ್ಥಿತಿಯಲ್ಲಿರಲಿಲ್ಲ. ಯಾರೋ ಒಬ್ಬರು ನನ್ನನ್ನು ಗದರಿಯೂ ಬಿಟ್ಟರು. `ಅಲ್ಲಾ ಮಾರಾಯ್ರೆ, ನಿಮಗೆ ಈ ದನಗಳ ಜೀವಕ್ಕಿಂತ ಮೆಣಸಿನ ಬಳ್ಳಿಯೇ ಹೆಚ್ಚಾಗಿ ಹೋಯ್ತಾ? ಅಂತ. ನಾನು ಮರು ಮಾತಾಡಲಿಲ್ಲ. ಸುಮ್ಮನಾಗಿಬಿಟ್ಟೆ. ಅಷ್ಟರಲ್ಲಾಗಲೇ ಒಂದು ದನವನ್ನು ಬಾವಿಯಿಂದ ಮೇಲಕ್ಕೆತ್ತಿದರು. ಬಾವಿಯ ನೀರಿನಲ್ಲಿ ತುಂಬಾ ಹೊತ್ತು ಮುಳುಗಿದ್ದರಿಂದಲೂ ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಈಜು ಹೊಡೆದಿದ್ದರಿಂದಲೋ ಹಸುವಿನ ಕಾಲುಗಳು ಕೊಕ್ಕೆಯಂತಾಗಿದ್ದವು. ಕಾಲುಗಳನ್ನು ನೆಲಕ್ಕೂರಲೂ ಸಾಧ್ಯವಾಗದೆ ಎತ್ತಿಬಿಟ್ಟ ಜಾಗದಲ್ಲೇ ಕಾಲುಗಳನ್ನು ನಿಟ್ಟೈಸಿಕೊಂಡು ಮಲಗಿತು. ಇಡೀ ದೇಹ ತರಗೆಲೆಯಂತೆ ಕಂಪಿಸುತ್ತಿತ್ತು.

ಮರುಕ್ಷಣವೇ ಇನ್ನೊಂದು ದನವನ್ನು ಮೇಲೆತ್ತುವ ಕೆಲಸ. ಐದೇ ನಿಮಿಷದಲ್ಲಿ ಎರಡನೇ ದನವೂ ಬಾವಿಯಿಂದ ಹೊರಗೆ. ನೋಡನೋಡುತ್ತಿದ್ದಂತೆಯೇ ಆರೇಳು ದನಗಳನ್ನು ಬಾವಿಯಿಂದ ಮೇಲೆತ್ತಿ ಬಾವಿಯ ಸುತ್ತಲೂ ಮಲಗಿಸಿದ್ದಾಯ್ತು. ಬಾವಿಯ ಸುತ್ತ ಕಾಲು ಕೊಕ್ಕೆ ಮಾಡಿಕೊಂಡು ಉದ್ದ ಕತ್ತುಚಾಚಿಕೊಂಡು ಕಪ್ಪು, ಬಿಳಿ, ಕಂದು ಬಣ್ಣದ ಹಸುಗಳು ಅಡ್ಡಡ್ಡ ಮಲಗಿದ್ದವು. ನೋಡೋಕೆ ಆಸ್ಪತ್ರೆಯ ಜನರಲ್ ವಾರ್ಡ್ ತರಹ ಕಾಣಿಸುತ್ತಿತ್ತು. ಅಮ್ಮ ಕೈ ಮುಗಿದುಕೊಂಡು ಹುಲಿಸರದ ದುರ್ಗಾಂಬೆಗೆ ಕೃತಜ್ಞತೆ ಸಲ್ಲಿಸುತ್ತಿದ್ದಳು. ಎಲ್ಲರೂ ಸಮಾಧಾನದ ನಿಟ್ಟುಸಿರು ಬಿಟ್ಟರು. ಒಂದೇ ಒಂದು ದನವೂ ಸತ್ತಿಲ್ಲವೆಂಬುದೇ ಎಲ್ಲರಿಗೂ ಸಮಾಧಾನ. ಹುಲಿಸರದ ದುರ್ಗಾಂಭೆಯೇ ಎಲ್ಲಾ ದನಗಳನ್ನೂ ಕಾಪಾಡಿದಳೆಂದು ಅಮ್ಮ ಮತ್ತೆ ಮತ್ತೆ ಹೇಳುತ್ತಿದ್ದಳು.

ಬಂದವರೆಲ್ಲಾ ಈ ದನಗಳ ಅಂದಿನ ಮತ್ತು ಮುಂದಿನ ಭವಿಷ್ಯದ ಕುರಿತು ಸಮಾಲೋಚನೆ ನಡೆಸಿದರು. ಬಾವಿಯ ಸುತ್ತ ಮಲಗಿದ್ದ ಒಂದೊಂದೇ ಹಸುಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದವು. ಅವೆಲ್ಲವನ್ನೂ ನಮ್ಮ ಮನೆಯ ಕೊಟ್ಟಿಗೆಯಲ್ಲಿಯೇ ಕಟ್ಟಿಹಾಕಿ ಬೆಳಗ್ಗೆ ದನಗಳ ವಾರಸುದಾರರನ್ನು ಕರೆಸಿ ಛೀಮಾರಿ ಹಾಕಬೇಕೆಂದು ತೀರ್ಮಾನಿಸಲಾಯಿತು.

ದನಗಳ ಕತ್ತಿಗೆ ಹಗ್ಗ ಹಾಕಿ ಒಂದಾದ ನಂತರ ಮತ್ತೊಂದರಂತೆ ಕೊಟ್ಟಿಗೆಯ ಕಡೆ ಸಾಗಿಸತೊಡಗಿದೆವು. ಮೊಂಡು ದನಗಳು. ಬಾವಿಯಿಂದ ಕೊಟ್ಟಿಗೆವರೆಗೆ ಬರಲೂ ತಕರಾರು ಮಾಡಿದವು. ಸಾಕಷ್ಟು ಜನ ಇದ್ದಿದ್ದರಿಂದ ತಕರಾರು ಮಾಡಿದ ದನಗಳನ್ನು ಅನಾಮತ್ತಾಗಿ ಎತ್ತಿಕೊಂಡು ತಂದು ಕೊಟ್ಟಿಗೆ ಸೇರಿಸಿದರು. ಎರಡು ದನಗಳ ಹೊರತಾಗಿ ಉಳಿದವೆಲ್ಲವನ್ನೂ ಕೊಟ್ಟಿಗೆ ಸೇರಿಸಿಯಾಯಿತು. ಮೊಟ್ಟಮೊದಲು ಬಾವಿಯಿಂದ ಮೇಲೆತ್ತಿದ್ದ ಒಂದು ಮುದಿ ದನ ಮತ್ತು ಒಂದು ಮಣಕ ಎರಡು ಮಾತ್ರ ಬಾಕಿ ಇದ್ದದ್ದು. ಮುದಿ ದನದ ಕುತ್ತಿಗೆಗೆ ಹಗ್ಗ ಹಾಕುವಾಗ ಪೆಟ್ರೋಮ್ಯಾಕ್ಸ್ ಬೆಳಕಿನಲ್ಲಿ ಕಂಡ ದೃಶ್ಯ ನನ್ನನ್ನು ಕಂಗಾಲು ಮಾಡಿಸಿಬಿಟ್ಟಿತ್ತು. ಬಾವಿಯಿಂದ ಮೇಲೆತ್ತಿದಾಗ ನಿಲ್ಲಲೂ ತ್ರಾಣವಿಲ್ಲದೆ ಬಾವಿಯ ದಡದಲ್ಲಿ ಕಾಲು ಮುದುರಿ, ಉದ್ದ ಕತ್ತು ನೀಡಿಕೊಂಡು ಅಡ್ಡಡ್ಡ ಮಲಗಿದ್ದ ದನ ಮತ್ತು ಇನ್ನೊಂದು ಮಣಕ ಎದ್ದು ನಿಂತು ನಾಲ್ಕಾರು ಹೆಜ್ಜೆ ಮುಂದೆ ಹೋಗಿ ನನ್ನ ಕಾಳುಮೆಣಸಿನ ಬಳ್ಳಿಗಳ ಬೆಡ್‌ನ ಅಷ್ಟೂ ಗಿಡಗಳನ್ನು ತಿಂದು ಹಾಕಿದ್ದವು. ಮಣ್ಣು ತುಂಬಿಸಿದ ಕವರ್ ಮೇಲೇ ಹೆಜ್ಜೆಗಳನ್ನಿಟ್ಟು ಎಲ್ಲವನ್ನೂ ಒಡೆದು ಚಿಂದಿ ಮಾಡಿದ್ದವು. ಆ ಕ್ಷಣದಲ್ಲಿ ಅದೆಷ್ಟು ಸಿಟ್ಟು ಬಂದಿತೆಂದರೆ `ಆ ಎರಡೂ ದನಗಳನ್ನು ವಾಪಾಸು ಬಾವಿಗೇ ತಳ್ಳಿಬಿಡಬೇಕು’ ಎನಿಸಿದ್ದು ಸುಳ್ಳಲ್ಲ. ಆದರೆ ಅಮ್ಮನ ಅಂತಃಕರಣ ಹೇಗಿತ್ತೆಂದರೆ ಬಾವಿಯಿಂದ ಮೇಲೆತ್ತಿದ ಅಷ್ಟೂ ದನಗಳಿಗೂ ನುಚ್ಚು ಬೆರೆಸಿದ ಮುರ ಕುದಿಸಿ ಬಿಸಿಬಿಸಿಯಾದ ಮುರ ನೀಡಿ ಸತ್ಕರಿಸಿದಳು. ತನಗೆ ಗೋ ಹತ್ಯಾ ದೋಷ ತಟ್ಟಲಿಲ್ಲವೆಂದು ತುಂಬಾ ಸಮಾಧಾನದಲ್ಲಿದ್ದಳು.

ಗೋ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದವರಿಗೆ ಬಿಸಿಬಿಸಿ ಚಹಾ ನೀಡಿ ಸತ್ಕರಿಸಲಾಯಿತು. ಎಲೆ ಅಡಿಕೆ ಅಭ್ಯಾಸವಿದ್ದವರಿಗೆ ತಾಂಬೂಲ ಸತ್ಕಾರ ನಡೆಯಿತು. ನಾನು ಅಮ್ಮ ಅವರಿಗೆಲ್ಲಾ ಕೃತಜ್ಞತೆ ಹೇಳಿದೆವು. ಇವು ಯಾರ ಮನೆಯ ದನಗಳು ಎಂದು ತೀರ್ಮಾನಿಸಲಾಗಲಿಲ್ಲ. ಈ ಕಾರ್ಯಾಚರಣೆಯಲ್ಲಿ ಮುಖ್ಯ ಪಾತ್ರ ನಿರ್ವಹಿಸಬೇಕಾಗಿದ್ದ ಅಪ್ಪ ಎಲ್ಲೋ ನಾಪತ್ತೆಯಾಗಿದ್ದರು. ಅಪ್ಪನ ವಿಚಾರವಾಗಿ ಅದೂ ಇದೂ ಮಾತಾಡುತ್ತಿದ್ದರು. ಯಾರೋ `ಕಾವೇರಿ ಹೋಟೆಲಲ್ಲಿ ಕಾಪಿ ಕುಡೀತಿದ್ರು’ ಅಂದರು. ಮತ್ಯಾರೋ `ಕಲ್ಲೋಣಿ ಕಡೆ ಹೋಗ್ತಿದ್ದ ಹಾಗ್ತಿತ್ತು’ ಎಂದರು. ಜನರೆಲ್ಲಾ ಚಹಾ ಕುಡಿದು, ಎಲೆ ಅಡಿಕೆ ಹಾಕಿ ಹೊರಡುವ ಸಿದ್ಧತೆಯಲ್ಲಿದ್ದಾಗಲೇ ಅಪ್ಪ ಮನೆಗೆ ಬಿಜಂಗೈಸಿದರು. ಪಂಚೆಯನ್ನು ಮೊಣಕಾಲು ಗಂಟಿನಿಂದ ಮೇಲೆ ಎತ್ತಿಕಟ್ಟಿ, ತಲೆಮೇಲೆ ಮ್ಯಾಮ್‌ಕೋಸ್ ಸುಣ್ಣದ ಖಾಲಿ ಚೀಲದಲ್ಲಿ ದಿನಸಿ ಸಾಮಾನುಗಳ ಪುಟ್ಟ ಗಂಟನ್ನು ಹೊತ್ತು ಅಂಗಳದಲ್ಲಿ ಪ್ರತ್ಯಕ್ಷರಾದರು. ಅಂಗಳದಲ್ಲಿ ಸೇರಿದ್ದ ಜನಸಮೂಹ ನೋಡಿ ಗಾಬರಿಯಾದಂತೆ ಕಂಡರು. ಒಬ್ಬೊಬ್ಬರು ಒಂದೊಂದು ಬಗೆಯಲ್ಲಿ ಅಪ್ಪನನ್ನು ಅಪಹಾಸ್ಯ ಮಾಡಿದರು. ದನಗಳು ಬಾವಿಗೆ ಬಿದ್ದ ಮತ್ತು ಜನರೆಲ್ಲಾ ಸೇರಿ ರಕ್ಷಿಸಿದ ವಿಷಯ ತಿಳಿಸಿದಾಗ ಅಪ್ಪನ ಮೊಟ್ಟ ಮೊದಲ ಪ್ರತಿಕ್ರಿಯೆ ಕೇಳಿ ಎಲ್ಲರೂ ಕಕ್ಕಾಬಿಕ್ಕಿಯಾದರು. `ದನಗಳನ್ನು ಬಾವಿಯಿಂದ ಮೇಲೆತ್ತಿದ್ಯಾಕೆ? ಎಂದು ಕೇಳಿದರು. `ಇದೇನ್ ಹಿಂಗಂತಿರಿ ಮೇಷ್ಟ್ರೇ’? ದನಗಳು ಉಸಿರುಗಟ್ಟಿ ಸತ್ತು ಹೋಗ್ತಿದ್ವು ಅಷ್ಟೆ’ ಎಂದರು. `ಸತ್ತು ಹೋದರೆ ಹೋಗ್ತಿದ್ವು. ನಾವೇನು ಬಾವಿಗೆ ದೂಡಿದ್ವಾ. ದನಗಳನ್ನು ರಕ್ಷಣೆ ಮಾಡಿಕೊಳ್ಳಬೇಕಾದವರು ಆ ದನಗಳ ವಾರಸುದಾರರು. ನಾವ್ಯಾಕೆ ಇಷ್ಟೆಲ್ಲಾ ರಿಸ್ಕ್ ತಗೊಬೇಕಾಗಿತ್ತು. ದಿನ ಬೆಳಗಾದರೆ ತೋಟಕ್ಕೆ ನುಗ್ಗುವ ಈ ದನಗಳ ಕಾಟ ಅನುಭವಿಸಿ ಸಾಕಾಗಿಹೋಗಿದೆ’ ಎಂದರು. ಅಪ್ಪನ ಈ ನೀರಸ ಪ್ರತಿಕ್ರಿಯೆ ನೋಡಿ ಅಮ್ಮ ಜನರ ಪರವಾಗಿ ಮಾತಾಡಿದಳು. `ನಿಮಗೇನು ಬಿಡಿ, ದನ ಸತ್ತರೆ ಗೋಹತ್ಯಾ ದೋಷ ತಟ್ಟುತ್ತಿದ್ದು ನನಗೇ ಹೊರತು ನಿಮಗಲ್ಲ. ನೀವ್ಯಾರೂ ಇವರ ಮಾತಿಗೆ ಬೇಜಾರು ಮಾಡಿಕೊಳ್ಳಬೇಡಿ’ ಎಂದಳು. ಅಪ್ಪ ಈ ಘಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. `ಈ ಅಪರಾತ್ರಿಯಲ್ಲಿ ಅರಳಸುರಳಿಗೆ ಓಡಿ ಬಂದು ಜನರನ್ನು ಸೇರಿಸುವ ದರ್ದು ಏನಿತ್ತು ನಿನಗೆ’ ಎಂದು ಅಮ್ಮನನ್ನೇ ಗದರಿದರು. `ದನಗಳು ಮುಳುಗುವಷ್ಟು ನೀರು ನಮ್ಮ ಬಾವಿಯಲ್ಲಿರಲಿಲ್ಲ. ಬೆಳಿಗ್ಗೆ ಸಂಬಂಧಪಟ್ಟವರಿಗೆ ಹೇಳಿ ಕಳಿಸಿದ್ದರೆ ಜನ ಕರ‍್ಕೊಂಡು ಬಂದು ಎತ್ತಿಸಿಕೊಂಡು ಹೋಗ್ತಿದ್ರಪ್ಪ’. ಅಪ್ಪನ ಮಾತಿನ ಗತಿ ಮತ್ತು ಚಿಂತನಾ ಕ್ರಮದ ಸ್ಪಷ್ಟ ಪರಿಚಯವಿದ್ದ ಅಮ್ಮ ಅಪ್ಪನ ಮಾತಿನಿಂದ ವಿಚಲಿತಳಾಗಲಿಲ್ಲ.

ಇವು ಯಾರಮನೆಯ ದನಗಳಿರಬಹುದು ಎಂಬ ಜಿಜ್ಞಾಸೆ ಮುಂದುವರಿಯಿತು. ಮಾರನೆ ದಿನ ನಾನು ಕಾಲೇಜಿಗೆ ಹೊರಡುವ ಮೊದಲು ಸಂಬಂಧಪಟ್ಟವರಿಗೆ ವಿಷಯ ತಿಳಿಸಿ ಅವರ ಜಾನುವಾರುಗಳನ್ನು ಹೊಡೆದುಕೊಂಡು ಹೋಗುವಂತೆ ತಿಳಸಬೇಕಿತ್ತು. ನಮ್ಮ ಮನೆಯ ಸುತ್ತಮುತ್ತಲಿನ ಹತ್ತಾರು ಮನೆಗಳ ದನಗಳು ನಮ್ಮ ತೋಟಕ್ಕೆ ಲೂಟಿ ಕೊಡುತ್ತಿದ್ದವಾದ್ದರಿಂದ ನಿನ್ನೆ ರಾತ್ರಿ ಬಾವಿಗೆ ಬಿದ್ದ ದನಗಳು ಯಾರ ಮನೆಯವು ಎಂದು ನಿರ್ಧರಿಸುವುದು ಅಷ್ಟು ಸುಲಭವಾಗಿರಲಿಲ್ಲ. ನನ್ನ ಕಾಳುಮೆಣಸಿನ ಬಳ್ಳಿಗಳನ್ನು ದನಗಳು ತಿಂದುಹಾಕಿದವು ಎಂದು ನಾನು ಅವಲತ್ತುಕೊಂಡೆ. ಅದೇನೂ ದೊಡ್ಡ ಸಂಗತಿಯಲ್ಲ ಎಂದು ಅಮ್ಮ ಉಪೇಕ್ಷೆ ಮಾಡಿದಳು. ಇನ್ನೊಂದು ಸಲ ಬಳ್ಳಿ ತಂದು ಹೊಸಗಿಡಗಳನ್ನು ಬೆಳೆಸಿದರಾಯಿತು, ಯಾವುದಾದರೂ ದನ ಉಸಿರುಗಟ್ಟಿ ಸತ್ತಿದ್ದರೆ ಏನು ಮಾಡಬೇಕಿತ್ತು? ಎಂದಳು. ದನಗಳ ರಕ್ಷಣೆಗಾಗಿ ಜನ ಕರೆತರಲು ಅರಳಸುರಳಿಗೆ ಹೋಗುವಾಗ ಮನದಲ್ಲೇ ಹುಲಿಸರದ ದುರ್ಗಾಂಬೆಗೆ ಹರಕೆ ಹೊತ್ತಳಂತೆ. `ಎಲ್ಲಾ ದನಗಳೂ ಸುರಕ್ಷಿತವಾಗಿದ್ದು ಬದುಕಿ ಉಳಿದರೆ ನಿನಗೆ ಒಂದು ಸೀರೆ ಒಪ್ಪಿಸುತ್ತೇನೆ’ ಅಂತ. ಹುಲಿಸರದ ದುರ್ಗಾಂಬೆಗೆ ಹೊಸ ಸೀರೆ ಒಪ್ಪಿಸಬೇಕು ಅಂತ ತಾನೇ ನಿನ್ನ ಡಿಮಾಂಡು, ಸರಿಬಿಡು. ಒಂದು ಸೀರೆ ತಂದರಾಯಿತು ಅಂತ ಅಪ್ಪ ತಮಾಷೆ ಮಾಡಿದರು.

ದನಗಳ ವಾರಸುದಾರರಿಂದ ಮುನ್ನೂರು ಕಾಳುಮೆಣಸಿನ ಬಳ್ಳಿಗಳ ನಷ್ಟ ಭರ್ತಿ ಮಾಡಿಕೊಡುವಂತೆ ಕಟ್ಟಪ್ಪಣೆ ಮಾಡಬೇಕೆಂದೂ, ನಷ್ಟದ ಹಣ ಕೊಟ್ಟ ಮೇಲಷ್ಟೇ ಹಸುಗಳನ್ನು ಕಣ್ಣಿ ಕಳಚಿ ಕಳಿಸಿಕೊಡಬೇಕೆಂದೂ ತೀರ್ಮಾನವಾಯಿತು. ಆ ದಿನ ರಾತ್ರಿ ಅನ್ನ ಮಾಡಿ ನಾವೆಲ್ಲ ಊಟಮಾಡಿ ಮಲಗುವಾಗ ನಡುರಾತ್ರಿ ಕಳೆದಿತ್ತು. ಬೆಳಗ್ಗೆ ಸ್ವಲ್ಪ ಬೇಗನೇ ಎದ್ದು ಮುಖ ತೊಳೆದು ಕಾಫಿ ಕುಡಿದು ಹಿಂದಿನ ರಾತ್ರಿಯ ಸಾಹಸಗಳ ಮೆಲಕು ಹಾಕುತ್ತಾ ಬಾವಿಯ ಸುತ್ತ ಓಡಾಡಿ ವೀಕ್ಷಣೆ ಮಾಡಿದೆ. ರಾತ್ರಿ ಬಗ್ಗಡವಾಗಿದ್ದ ಬಾವಿಯ ನೀರು ಇನ್ನೂ ತಿಳಿಗೊಂಡಿರಲಿಲ್ಲ. ಯಾರದೋ ಒಂದು ಜೊತೆ ಹವಾಯಿ ಚಪ್ಪಲಿಗಳಿದ್ದವು. ಸಮೀಪದ ಪೇರಲೆ ಮರದಲ್ಲಿ ಒಂದು ಮಾಸಲು ಬಣ್ಣದ ಟವೆಲ್ ನೇತಾಡುತ್ತಿತ್ತು. ಬಾವಿಯ ಆಚೀಚೆ ಒಂದೆರಡು ಖಾಲಿ ಸಾರಾಯಿ ಕೊಟ್ಟೆಗಳೂ ಬಿದ್ದಿದ್ದವು. ಬಾವಿ ಪಕ್ಕದ ಒಂದು ಏಲಕ್ಕಿ ಮಟ್ಟಿಯಂತೂ ಕಾಲ್ತುಳಿತಕ್ಕೆ ಸಿಕ್ಕಿ ಚಿಂದಿಚಿಂದಿಯಾಗಿತ್ತು. ಮೆಣಸಿನ ಬಳ್ಳಿ ಪಾತಿ ನೋಡಿ ಸಂಕಟವಾಯ್ತು. ಮುನ್ನೂರಕ್ಕೂ ಹೆಚ್ಚು ಕವರ್‌ಗಳನ್ನು ಮಣ್ಣು ಗೊಬ್ಬರ ತುಂಬಿಸಿ ಸಿದ್ಧಗೊಳಿಸಲು ತುಂಬಾ ಪ್ರಯಾಸ ಪಟ್ಟಿದ್ದೆ. ಸಂಜೆ ಕಾಲೇಜಿನಿಂದ ಮನೆಗೆ ಹಿಂದಿರುಗಿದ ಮೇಲೆ ಕತ್ತಲಾಗುವವರೆಗೂ ಕವರ್‌ಗೆ ಮಣ್ಣು ತುಂಬಿಸುವ ಕೆಲಸ ಮಾಡಿದ್ದೆ. ಕಡಿಮೆ ಎಂದರೂ ಎಂಟು ಹತ್ತು ದಿನಗಳ ಕೆಲಸವಾಗಿತ್ತು. ಹಾನಿಯಾಗದೇ ಇರುವ ಒಂದೇ ಒಂದು ಕವರ್ ಕೂಡ ಇರಲಿಲ್ಲ. ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕವರ್‌ಗಳನ್ನು ನೋಡಿ ಸಂಕಟವಾಯ್ತು. ಎಲೆಗಳನ್ನೆಲ್ಲಾ ತಿಂದರೂ ಕೆಲವು ಮೆಣಸಿನ ದಂಟುಗಳು ಅಲ್ಲಲ್ಲಿ ಬಿದ್ದಿದ್ದವು. ಅವನ್ನೆಲ್ಲಾ ಇನ್ನೊಮ್ಮೆ ನೆಡೋಣವೆಂದು ಸಂಗ್ರಹಿಸುತ್ತಿದ್ದೆ. ಹಿಂದೆ ನಿಂತು ಯಾರೋ ಕೆಮ್ಮಿದಂತೆನ್ನಿಸಿತು. ತಿರುಗಿ ನೋಡಿದೆ. ನಮ್ಮ ದೊಡ್ಡಪ್ಪ ನಿಂತಿದ್ದರು. `ನಮ್ಮ ಮನೆ ದನಗಳೇನಾದರೂ ನಿನ್ನೆ ನಿಮ್ಮ ತೋಟಕ್ಕೆ ಬಂದಿದ್ವಾ? ಅಂದರು. ಹಾಲು ಕರೆಸುವ ಎರಡು ದನಗಳೂ ಸೇರಿದಂತೆ ಅವರ ದನಗಳೊಂದೂ ಹಿಂದಿನ ರಾತ್ರಿ ಕೊಟ್ಟಿಗೆಗೆ ಹಿಂದಿರುಗಿರಲಿಲ್ಲ. ದನಗಳು ಕೊಟ್ಟಿಗೆಗೆ ಬಾರದಿದ್ದರೆ ಮಾರನೆಯ ದಿನ ಕಾಫಿ ಕ್ಯಾನ್ಸಲ್, ಮಜ್ಜಿಗೆಗೆ ನೀರು ಸುರೀಬೇಕು. ಅದೆಲ್ಲಕ್ಕಿಂತ ಹಾಲು ಕುಡಿಯುವ ಎಳೆಗರುಗಳ ಆಕ್ರಂದನ ಕೇಳಲಸಾಧ್ಯ. ಹೀಗಾಗಿ ಆ ದಿನ ಬೆಳಗ್ಗೆ ಎದ್ದವರೇ ದನ ಹುಡುಕಿಕೊಂಡು ಹೊರಟಿದ್ದರು. ನಿನ್ನೆ ರಾತ್ರಿ ಅವರ ದನಗಳು ಬಾವಿಗೆ ಬಿದ್ದಲ್ಲಿಂದ ಈ ವರೆಗಿನ ಪೂರ್ತಿ ಘಟನೆಗಳ ವಿಸ್ತೃತ ವರದಿಯನ್ನು ದೊಡ್ಡಪ್ಪನಿಗೆ ಒಪ್ಪಿಸಿದೆ.

ಹಿಂದಿನ ರಾತ್ರಿಯ ರಾದ್ಧಾಂತಗಳಿಗೆಲ್ಲಾ ದೊಡ್ಡಪ್ಪನ ಮನೆಯ ದನಗಳೇ ಕಾರಣ ಅಂತ ತಿಳಿದು ನನಗೆ ಕಸಿವಿಸಿಯಾಯಿತು. ದನಗಳ ವಾರಸುದಾರರಿಗೆ ಸರಿಯಾಗಿ ಲೆಫ್ಟು ರೈಟು ತೆಗೆದುಕೊಳ್ಳಬೇಕೆಂದೂ, ಮೆಣಸಿನ ಪಾತೆ ಹಾಳುಗೆಡವಿದ್ದಕ್ಕೆ ಡ್ಯಾಮೇಜು ಕ್ಲೈಮ್ ಮಾಡಬೇಕೆಂದೂ ದನಗಳನ್ನು ಸರಿಯಾಗಿ ನೋಡಿಕೊಳ್ಳಲಾಗದ ಮಾಲೀಕರ ಬೇಜವಾಬ್ದಾರಿತನಕ್ಕೆ ಸರಿಯಾಗಿ ಬೆವರಿಳಿಸಬೇಕೆಂದೂ ನಿರ್ದರಿಸಿದ್ದವನಿಗೆ ಈಗ ನಿರಾಸೆಯಾಯ್ತು.
ಅಪರಾಧಿ ಸ್ಥಾನದಲ್ಲಿ ನಿಂತಿರುವ ದೊಡ್ಡಪ್ಪನನ್ನು ಬೈಯ್ಯುವುದಾದರೂ ಹೇಗೆ ಅಂತ ಯೋಚಿಸುತ್ತಿದ್ದೆ. ಅಮ್ಮ ದೊಡ್ಡಪ್ಪನನ್ನು ನೋಡಿದಳು. ಅವಳಾಗಲೇ ನನ್ನ ಮತ್ತು ದೊಡ್ಡಪ್ಪನ ನಡುವಿನ ಸಂಭಾಷಣೆಯನ್ನು ಕೇಳಿಸಿಕೊಂಡಿದ್ದಳು. ಕೊಟ್ಟಿಗೆಯ ದನಗಳಿಗೆ ಬೆಳಗಿನ ಗಂಜಿ ಮುರ ನೀಡುತ್ತಿದ್ದಳು. ಹಿಂದಿನ ರಾತ್ರಿಯ ಘಟನಾವಳಿಗಳೆಲ್ಲಾ ನೆನಪಿಗೆ ಬಂದು ದೊಡ್ಡ ಧ್ವನಿಯಲ್ಲಿ ದೊಡ್ಡಪ್ಪನಿಗೆ ಹಿಗ್ಗಾ ಮುಗ್ಗಾ ಜಾಡಿಸಿದಳು. ದೊಡ್ಡಪ್ಪನ ಸಂದಿಗ್ಧ ಪರಿಸ್ಥಿತಿ ಕಂಡು ನನಗೆ ಬೇಸರವಾದದ್ದು ನಿಜ. ಅಮ್ಮನಿಗೆ ಸುಮ್ಮನಿರು ಎಂದು ಹೇಳಲೂ ಆಗದೆ ದೊಡ್ಡಪ್ಪನನ್ನು ಸಮಾಧಾನ ಮಾಡಲೂ ಆಗದೆ ಬೆಪ್ಪಾಗಿ ನಿಂತುಬಿಟ್ಟೆ. ಅಮ್ಮನ ಮಾತಿನ ಪ್ರಹಾರಕ್ಕೆ ದೊಡ್ಡಪ್ಪ ಕಂಗಾಲಾಗಿ ಹೋಗಿದ್ದರು. ಒಂದು ಮಾತನ್ನೂ ತಿರುಗಿ ಹೇಳಲಿಲ್ಲ. ಅಮ್ಮ ಹೇಳುವುದನ್ನೆಲ್ಲಾ ಹೇಳುತ್ತಲೇ ಇದ್ದಳು.

`ತನ್ನ ಇಡೀ ಬದುಕು ಲಾಗದಮನೆ ಊರಿನ ದನಕಾಯುವುದರಲ್ಲೇ ಕಳೆದು ಹೋಯಿತು. ಒಂದೇ ಒಂದು ದಿನವೂ ನೆಮ್ಮದಿಯಿಂದ ಒಂದು ತುತ್ತು ಅನ್ನ ತಿನ್ನಲೂ ಈ ದನಗಳು ಬಿಟ್ಟಿಲ್ಲ. ಇಷ್ಟೂ ದಿನ ರಾತ್ರಿ ಹೊತ್ತಲ್ಲಾದರೂ ಒಂದರೆಕ್ಷಣ ನೆಮ್ಮದಿಯಿಂದ ನಿದ್ರೆ ಮಾಡ್ತಿದ್ದೆ. ಇನ್ನು ಮುಂದೆ ಅದಕ್ಕೂ ಕಲ್ಲುಬಿತ್ತು.’-ಸುಮಾರು ಹತ್ತು ನಿಮಿಷಗಳ ಕಾಲ ಓತಪ್ರೋತವಾಗಿ ಅಮ್ಮನ ಆರೋಪಗಳು ಹರಿದಿತ್ತು. ಕೊಟ್ಟಿಗೆ ಕೆಲಸ ಮುಗಿಸಿ ಬಚ್ಚಲು ಮನೆಯಕಡೆ ಹೆಜ್ಜೆ ಹಾಕಿದ ಮೇಲಷ್ಟೆ ಅವಳು ಬಾಯಿ ಮುಚ್ಚಿದ್ದು.

ಅಮ್ಮ ಒಳನಡೆದದ್ದನ್ನು ಖಾತ್ರಿಪಡಿಸಿಕೊಂಡು ದೊಡ್ಡಪ್ಪನನ್ನು ಕರೆದುಕೊಂಡು ಕೊಟ್ಟಿಗೆಗೆ ಹೋದೆ. ಅವರ ದನಗಳ ಕಣ್ಣಿ ಕಳಚಿಬಿಟ್ಟರೆ ಮನೆಗೆ ಹೊಡೆದುಕೊಂಡು ಹೋಗುತ್ತಾರೆ ಅಂತ. ಕೊಟ್ಟಿಗೆಯಲ್ಲಿ ಕಟ್ಟಿದ್ದ ದನಗಳನ್ನೊಮ್ಮೆ ದೊಡ್ಡಪ್ಪ ಸಮೀಪ ವೀಕ್ಷಣೆ ಮಾಡಿದರು. ದನಗಳ ಕಣ್ಣಿ ಬಿಚ್ಚದಂತೆ ತಡೆದು `ಹ್ವಾಯ್ ನಟ್ರಾಜ, ಇದ್ಯಾವುದೂ ನಮ್ಮ ಮನೆ ದನಗಳಲ್ಲ’ ಎಂದು ಬಿಟ್ಟರು. ನನಗೆ ಮುಖದ ಮೇಲೆ ರಪ್ ಅಂತ ಬಿಸಿನೀರು ಚೆಲ್ಲಿದ ಅನುಭವವಾಯ್ತು.

`ಯಾಕೆ ದೊಡ್ಡಪ್ಪ?’ ಎಂದೆ.

`ಇವು ಯಾವುವೂ ನಮ್ಮ ಮನೆ ದನಗಳಲ್ಲ. ಬೇರೆ ಯಾರದೋ ಮನೆಯ ದನಗಳು’ ಎಂದುಬಿಟ್ಟರು.

ಯಾರದೋ ಮನೆಯ ದನಗಳು ಮಾಡಿದ ರಾದ್ಧಾಂತಕ್ಕೆ ದೊಡ್ಡಪ್ಪ ಅಮ್ಮನಿಂದ ವಾಚಾಮಗೋಚರ ಬೈಸಿಕೊಂಡಿದ್ದರು. ಕೊಟ್ಟಿಗೆಯಲ್ಲಿ ನಮ್ಮಿಬ್ಬರ ನಡುವೆ ನಡೆಯುತ್ತಿದ್ದ ಸಂಭಾಷಣೆ ಅಡುಗೆಮನೆಯಲ್ಲಿದ್ದ ಅಮ್ಮನಿಗೆ ಕೇಳಿಸಿತ್ತು. ಸುಖಾಸುಮ್ಮನೆ ದೊಡ್ಡಪ್ಪನಿಗೆ ಬೈದದಕ್ಕೆ ಅಮ್ಮನಿಗೂ ಬೇಸರವಾಯ್ತಂತೆ. ಆದರೆ ದೊಡ್ಡಪ್ಪನಿಗೆ ಅಮ್ಮನಿಂದ ವಿನಾಕಾರಣ ಬೈಸಿಕೊಂಡಿದ್ದಕ್ಕಿಂತ `ತಮ್ಮ ದನಗಳನ್ನು ಇನ್ನೆಲ್ಲಿ ಹುಡುಕುವುದು’ ಎಂಬ ಚಿಂತೆಯೇ ಹೆಚ್ಚಾಗಿದ್ದಂತೆ ಕಂಡಿತು.

ನಾನು ತಡಮಾಡದೆ ಕಾಲೇಜಿಗೆ ಹೊರಡಬೇಕಿತ್ತು. ಬೇಗ ಸ್ನಾನ-ತಿಂಡಿ ಮುಗಿಸಿ ಅರಳಸುರಳಿಯವರೆಗೆ ನಡೆದು ಬಸ್ ಹಿಡಿಯಬೇಕಿತ್ತು. ನಾನು ಮನೆ ಬಿಡುವಾಗ ಆ ದನಗಳು ಯಾರವು ಎಂಬುದು ಸ್ಪಷ್ಟವಾಗಿರಲಿಲ್ಲ. ಸುಖಾಸುಮ್ಮನೆ ದೊಡ್ಡಪ್ಪನಿಗೆ ಬೈದದ್ದಕ್ಕಾಗಿ ಅಮ್ಮ ಅಪರಾಧಿ ಪ್ರಜ್ಞೆಯಿಂದ ಕುಗ್ಗಿ ಹೋಗಿದ್ದಳು. ದೊಡ್ಡಪ್ಪನಿಗೆ ಅಮ್ಮ ಬೈದ ವಿಚಾರವೇನಾದರೂ ತನ್ನ ಗಂಡನಿಗೆ ತಿಳಿದರೆ ಏನು ಸಮಜಾಯಿಸಿ ನೀಡುವುದೆಂದು ಅವಳಿಗೆ ಚಿಂತೆಯಾಗಿತ್ತು. ತನ್ನ ಅಣ್ಣನನ್ನು ಬೈದದ್ದಕ್ಕಾಗಿ ಅಪ್ಪ ಗರಂ ಆಗ್ತಾರೆ ಅಂತ ಅವಳಂದುಕೊಂಡಿದ್ದಳು.

ಆ ದಿನ ಹತ್ತು ಗಂಟೆಯ ಹೊತ್ತಿಗೆ ಉಡುಪರ ಮನೆಯ ನಾಲ್ಕು ಆಳುಗಳು ಬಂದರಂತೆ. ಅವರು ಉಡುಪರ ಮನೆಗೆ ಕೆಲಸಕ್ಕೆ ಬರುವಾಗಲೇ ದಾರಿಯಲ್ಲಿ ಅದ್ಯಾರೋ `ನಿನ್ನೆ ರಾತ್ರಿ ಕೃಷ್ಣಮೇಸ್ಟ್ರ ಮನೆ ಬಾವಿಗೆ ಹತ್ತಿಪ್ಪತ್ತು ದನಗಳು ಬಿದ್ದಿದ್ದವಂತೆ ಅಂತ ತಿಳಿಸಿದ್ದರು. ಹೀಗಾಗಿ ಉಡುಪರ ಮನೆಗೆ ಕೆಲಸಕ್ಕೆ ಬಂದವರು ಈ ಸುದ್ದಿಯನ್ನು ಉಡುಪರಿಗೆ ತಿಳಿಸಿದರು. ಉಡುಪರ ಮನೆಯ ಕೊಟ್ಟಿಗೆಯಲ್ಲಿ 30-40ದನಗಳಿದ್ದವು. ರಾತ್ರಿ ಈ ಏಳೆಂಟು ಹಸುಗಳು ಕೊಟ್ಟಿಗೆಗೆ ಬಾರದಿರುವ ವಿಚಾರ ಉಡುಪರಾಗಲೀ ಅವರ ಪತ್ನಿಯಾಗಲೀ ಗಮನಿಸಿರಲಿಲ್ಲ. ಬೆಳಗ್ಗೆ ಕೆಲಸಕ್ಕೆ ಬಂದ ಆಳುಗಳು ಕೊಟ್ಟಿಗೆಯನ್ನೆಲ್ಲಾ ವೀಕ್ಷಿಸಿ ಏಳೆಂಟು ದನಗಳು ಕೊಟ್ಟಿಗೆಗೆ ಬಂದಿಲ್ಲ ಎಂದು ವರದಿ ಮಾಡಿದ್ದಾರೆ.

ಉಡುಪರು `ಹೋಗಿ ಕೃಷ್ಣಮೇಷ್ಟರ ಮನೆಯಿಂದ ದನಗಳನ್ನು ಹೊಡೆದುಕೊಂಡು ಬನ್ನಿ’ ಎಂದು ಆದೇಶಿಸಿದ್ದಾರೆ. ಉಡುಪರ ಮನೆಯ ಆಳುಗಳು ದನ ಹೊಡೆದುಕೊಂಡು ಹೋಗಲು ಬಂದಾಗ ಅಪ್ಪ ತಿಂಡಿ ತಿನ್ನುತ್ತಿದ್ದರು. ಅಮ್ಮ ಒಂದೊಂದಾಗಿ ಬಿಸಿಬಿಸಿ ರೊಟ್ಟಿ ಕಾಯಿಸಿ ಬಡಿಸುತ್ತಿದ್ದಳು. ಉಡುಪರ ಮನೆಯ ಆಳುಗಳು ದನ ಹೊಡೆದುಕೊಂಡು ಹೋಗಲು ಬಂದಿದ್ದಾರೆ ಎಂಬ ವಿಷಯ ಅಪ್ಪನಿಗೆ ತಿಳಿಯಿತು. `ಕಾಯುತ್ತಿರಲಿ ಸ್ವಲ್ಪ ಹೊತ್ತು, ತಿಂಡಿ ಮುಗಿಸಿದ ನಂತರ ವಿಚಾರಿಸಿದರಾಯಿತು’ ಎಂದು ಅಂದುಕೊಂಡರಂತೆ.

ಆದರೆ ಉಡುಪರ ಆಳುಗಳು ಮನೆಯವರ‍್ಯಾರನ್ನೂ ಒಂದು ಮಾತೂ ವಿಚಾರಿಸುವ ಗೋಜಿಗೆ ಹೋಗಲೇ ಇಲ್ಲ. ನೇರವಾಗಿ ಕೊಟ್ಟಿಗೆಗೆ ನುಗ್ಗಿ ರಾತ್ರಿ ಕಟ್ಟಿ ಹಾಕಿದ್ದ ಅಷ್ಟೂ ದನಗಳನ್ನೂ ಕಣ್ಣಿ ಕಳಚಿ ಕೊಟ್ಟಿಗೆಯಿಂದ ಹೊರಗೆ ದಾಟಿಸಿ ಉಡುಪರ ಮನೆ ಕಡೆ ಹೊಡೆದುಕೊಂಡು ಹೋದರು.

ಅಪ್ಪ ತಿಂಡಿ ಮುಗಿಸಿ ಕೈ ತೊಳೆದು ಅಂಗಳಕ್ಕೆ ಬರುವಷ್ಟರಲ್ಲಿ ದನಗಳಾಗಲೇ ನಮ್ಮ ತೋಟ ದಾಟಿ ಎದುರಿನ ಗದ್ದೆಬಯಲಲ್ಲಿ ಓಡುತ್ತಿದ್ದವು. ಕಂಬಳದ ಕೋಣಗಳನ್ನು ಓಡಿಸುವಂತೆ ಆಳುಮಕ್ಕಳು ಅವುಗಳನ್ನು ಓಡಿಸಿಕೊಂಡು ಹೋಗುತ್ತಿದ್ದರು.

ಅಪ್ಪ ಅಮ್ಮ ಅಂಗಳದಲ್ಲಿ ನಿಂತು ಆ ದನಗಳು ಕಣ್ಮರೆಯಾಗುವವರೆಗೂ ನೋಡಿ ಮನೆಯೊಳಗೆ ನಡೆದರು.

(ಕೃತಿ: ಆಕಾಶಬುಟ್ಟಿ (ಅಪ್ಪನ ನೆನಪಿನ ಕನವರಿಕೆ), ಲೇಖಕರು: ನಟರಾಜ್‌ ಅರಳಸುರಳಿ, ಪ್ರಕಾಶಕರು: ವೀರಲೋಕ ಪುಸ್ತಕ, ಬೆಲೆ: 175/-)

About The Author

ಕೆಂಡಸಂಪಿಗೆ

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ