ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು. ಹದಿನೈದು ವರ್ಷ ತುಂಬಿದ ಮೇಲೆ, ತನ್ನ ತಂದೆಯ ಸಹಾಯದಿಂದ ಜಾಕ್ ದೇಶದ ಉತ್ತರ ಭಾಗಕ್ಕೆ ಹೋಗಿ ಅಲ್ಲಿನ ಕ್ಯಾಟಲ್ ಸ್ಟೇಷನ್ ಮತ್ತು ರಾಂಚ್ ಗಳಲ್ಲಿ ಕೆಲಸ ಮಾಡುತ್ತಾರೆ. ಬಿಳಿಯನಾಗಿದ್ದರೂ ಕೂಡ ಪ್ರಾಮಾಣಿಕ ಪ್ರಯತ್ನದಿಂದ ಅಲ್ಲಿನ ಅಬರಿಜಿನಲ್ ಕೆಲಸಗಾರರೊಂದಿಗೆ ಸ್ನೇಹ ಮತ್ತು ಬಾಂಧವ್ಯ ಬೆಳೆಸಿಕೊಂಡು ಅವರಲ್ಲಿ ಒಬ್ಬರಾಗಲು ಆಶಿಸುತ್ತಾರೆ.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಹೆಸರು ಡೇವಿಡ್ ಗಲ್ಪಿಲಿಲ್ (David Gulpilil). ಈ ಮಹಾಶಯನ ಬಗ್ಗೆ ಬರೆಯಬೇಕೆಂಬ ಆಲೋಚನೆ ಹುಟ್ಟಿದ್ದು ಹೋದ ವರ್ಷ ಮೇ ತಿಂಗಳಲ್ಲಿ. ಬ್ರಿಸ್ಬನ್ ನಗರ ಮಧ್ಯೆ, ಟ್ರೆಷರಿ ಕಟ್ಟಡದ ಮುಂದಿನ ಅಂಗಳದಲ್ಲಿ ನಡೆದ ಮೀಅಂಜಿನ್ (ಬ್ರಿಸ್ಬನ್ ನಗರದ ಮೂಲ ಹೆಸರು) ಮಾರ್ಕೆಟ್ಟಿನಲ್ಲಿ ಆಗ ತಾನೆ ಬಿದ್ದಿದ್ದ ತುಂತುರು ಮಳೆಗೆ ಸಿಲುಕಿ, ಚಳಿಗೆ ಸಣ್ಣಗೆ ನಡುಗುತ್ತಾ ಕೂತಿದ್ದ ಅಬರಿಜಿನಲ್ ಹಾಡುಗಾರ, ಹಾಡುಗಳ ಬರಹಗಾರ ಮತ್ತು ಅಬರಿಜಿನಲ್ ಜನರ ಹಕ್ಕುಗಳಿಗಾಗಿ ಹೋರಾಡುವ ಹಿರಿಯ ಅಂಕಲ್ ಆರ್ಚಿ ರೋಚ್ ಹಾಡುತ್ತಿದ್ದರು. ನೋವು, ಅನ್ಯಾಯ, ಹತಾಶೆ, ವಿಭ್ರಮೆ ಮತ್ತು ಕನಸುಗಳು ತುಂಬಿದ್ದ ಹಾಡುಗಳು ಹುಟ್ಟಿದ ಕಥೆ ಮತ್ತು ಹಾಡುಗಳ ಜೊತೆ ತೆಕ್ಕೆ ಹಾಕಿಕೊಂಡಿದ್ದ ಅವರ ಜೀವನಗಾಥೆಯನ್ನ ಕಿವಿಗೊಟ್ಟು, ಕಣ್ಣಲ್ಲಿ ನೀರೂರಿಸಿಕೊಂಡು ಕೇಳಿದ್ದೆ. ಭಾರವಾದ ಎದೆಯಲ್ಲಿ ಡೇವಿಡ್ ಗಲ್ಫಿಲಿಲ್ ಅನ್ನೋ ಹೆಸರಿನ ಅಬರಿಜಿನಲ್ ಹಿರಿಯ, ನೃತ್ಯಗಾರ ಮತ್ತು ಸುಪ್ರಸಿದ್ಧ ಸಿನಿಮಾ ನಟನ ಹೆಸರು ಕಿವಿಯಲ್ಲಿ ಪಿಸುಗುಟ್ಟಿದಂತಾಗಿತ್ತು.

ನಾನು ಅವರ ಬಗ್ಗೆ ಬರೆಯುವುದಾದರೆ ಹೆಚ್ಚಿನ ವಿಷಯ ನಾನು ನೋಡಿರುವ ಅವರ ಬಹುತೇಕ ಸಿನಿಮಾಗಳಿಗೆ ಸಂಬಂಧಿಸಿರುತ್ತಿತ್ತು. ಅದನ್ನು ದಾಟಿ ಹೋಗಿ ಇನ್ನೂ ಬರೆಯಬೇಕೆಂದರೆ ನಾನು ಅಂತರ್ಜಾಲವನ್ನು ಜಾಲಾಡಿ ಬರೆಯಬೇಕಿತ್ತು. ಯಾಕೋ ಮನಸ್ಸು ಒಪ್ಪಲಿಲ್ಲ. ಈ ವರ್ಷ ಮಾರ್ಚ್ ತಿಂಗಳ ಒಂದು ದಿನ ಲೈಬ್ರರಿಯಲ್ಲಿ ಕೂತು ಬರೆಯುತ್ತಿದ್ದೆ. ಆ ಕಡೆ ಇಬ್ಬರು ಹೆಂಗಸರು ಟ್ರಾಲಿಯಲ್ಲಿ ತಂದಿದ್ದ ಪುಸ್ತಕಗಳನ್ನು ಪುಸ್ತಕ ಪ್ರದರ್ಶನ ಕಪಾಟಿನ ಭಾಗಗಳಲ್ಲಿ ಜೋಡಿಸಿಡುತ್ತಿದ್ದರು. ಅವರ ಮಾತಿನಿಂದ ಅವೆಲ್ಲ ಇತ್ತೀಚೆಗಷ್ಟೇ ಲೈಬ್ರರಿಗೆ ಬಂದು ಸೇರಿದ ಹೊಸ ಪುಸ್ತಕಗಳು ಎಂದರ್ಥವಾಯಿತು. ಎದ್ದು ಹೋಗಿ ನೋಡಿದೆ. ಮೊಟ್ಟಮೊದಲು ಕಣ್ಣಿಗೆ ಕಾಣಿಸಿದ್ದು ಆ ಮುಖ.

ಆ ಮುಖವೆಂದರೆ, ಮುಖದಲ್ಲಿ ಅರಳುವ ಮುಗುಳ್ನಗೆಯೆಂದರೆ, ಆ ಮುಗುಳ್ನಗೆ ಮುಖದ ತುಂಬಾ ಹರಡಿಕೊಂಡು ಅದು ನಗುವಾದಾಗ, ನಗುವಿನ ಅಲೆಗಳು ಎದ್ದಾಗ, ನಗುವಿನ ನಾನಾ ಬಗೆಗಳಲ್ಲಿ ಅಡಗಿರುವ ಗೂಡಾರ್ಥಗಳೆಂದರೆ… ಛೆ ಬಿಡಿ. ಅವಕ್ಕೆ ಯಾರೂ ಕೂಡ ಯಾವುದೇ ರೀತಿಯ ಬೆಲೆ ಕಟ್ಟಲಾಗುವುದಿಲ್ಲ ಎನ್ನುತ್ತಾರೆ ಪುಸ್ತಕದ ಕರ್ತೃ, ಆಸ್ಟ್ರೇಲಿಯನ್ ಪತ್ರಕರ್ತ ಡೆರೆಕ್ ರೈಲಿ (Derek Rielly). ೨೦೧೮ರಲ್ಲಿ ಸ್ನೇಹಿತರು ಆಯೋಜಿಸಿದ ತಮ್ಮ ಅಂದಾಜಿನ ಅರವತ್ತೈದನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಮಹಾನ್ ಕಲಾವಿದನ ಬಗ್ಗೆ ಯಾರೊಬ್ಬರೂ ಕೂಡ ಅವರ ಜೀವನಚರಿತ್ರೆಯನ್ನು ದಾಖಲಿಸುವ ಪುಸ್ತಕವೊಂದನ್ನು ಬರೆಯುವ ಯೋಚನೆ ಮಾಡಿರಲಿಲ್ಲ. ಡೆರೆಕ್ ಮೊಟ್ಟಮೊದಲ ಬಾರಿಗೆ ಅಂತಹ ಪ್ರಯತ್ನ ಕೈಗೊಂಡು, ಸಾಕಷ್ಟು ಶ್ರಮಪಟ್ಟು, ಆಸ್ಟ್ರೇಲಿಯಾ ಉದ್ದಗಲ ಓಡಾಡಿದ್ದಷ್ಟೇ ಅಲ್ಲ, ಅಮೆರಿಕೆಯ ಹಾಲಿವುಡ್ ಜನರನ್ನೂ ಸಂದರ್ಶಿಸಿ ಕಡೆಗೂ ೨೦೧೯ರಲ್ಲಿ ಪುಸ್ತಕವನ್ನು ಪ್ರಕಟಿಸಿದ್ದಾರೆ.

ಅವರ Gulpilil ಪುಸ್ತಕ, ಅದರ ಹೊರಕವಚದ ಮೇಲಿದ್ದ ಡೇವಿಡ್ ಮುಖ ನನ್ನನ್ನು ದಿಟ್ಟಿಸುತ್ತಿದ್ದವು. ಚಕ್ಕನೆ ಅದನ್ನು ಕೈಗೆತ್ತಿಕೊಂಡು ಲೈಬ್ರರಿ ಸಿಬ್ಬಂದಿಯನ್ನು ಒಂದಷ್ಟು ದಿನ ಎರವಲು ಪಡೆಯಬಹುದೇ, ಎಂದು ಕೇಳಿದೆ. ಈ ಪುಸ್ತಕವನ್ನು ಎರವಲು ಪಡೆಯುತ್ತಿರುವ ಮೊದಲ ವ್ಯಕ್ತಿ ನೀನೇ, ಅಂದರು. ಡೇವಿಡ್ ಗಲ್ಫಿಲಿಲ್ ಬ್ಯಾಗಲ್ಲಿ ಕೂತು, ಕಾರೇರಿ, ಮನೆಗೆ ಬಂದರು. ಪುಸ್ತಕವನ್ನ ಇಷ್ಟಿಷ್ಟೇ ಓದುತ್ತಾ ಓದಿದ ವಿಷಯಗಳ ಹೊಂದಿಕೆಯಾಗಿ ನಾನು ಇಲ್ಲಿಯವರೆಗೂ ನೋಡಿರುವ ಅವರ ಚಲನಚಿತ್ರಗಳನ್ನು ಮತ್ತು ನಟನೆಯನ್ನು ನೆನಪಿಸಿಕೊಳ್ಳುತ್ತಾ ಮತ್ತೆ ಕಳೆದುಹೋಗಲು ಪ್ರಯತ್ನಿಸಿದೆ. ಕೋವಿಡ್ ೧೯ ಎಂಬ ಮಾಯಾಭೂತ ಪದೇಪದೇ ಬಂದು ನನ್ನ ಕಳೆದುಹೋಗುವ ಕನಸನ್ನು ಛಿದ್ರಿಸಿ ಭೇದಿಸಿ ನೆಲದಮೇಲೆ ನಿಲ್ಲಿಸುತ್ತಿದ್ದರೂ ಇಗೋ, ಕಡೆಗೊಮ್ಮೆ ಡೇವಿಡ್ ಗಲ್ಫಿಲಿಲ್ ಎಂಬ ಮಹಾಶಯನ ಬಗ್ಗೆ ಬರೆಯುತ್ತಿದ್ದೀನಿ.

ಈ ವಾರದ ಲೇಖನವಾಗಿ ಇದನ್ನು ಬರೆಯುವ ತುರ್ತಿತ್ತು. ಕಾರಣ ಆಸ್ಟ್ರೇಲಿಯಾ ದೇಶದ ಚರಿತ್ರೆಯಲ್ಲಿ ಬಹುಮುಖ್ಯವಾದ National Sorry Day ಮೇ ೨೬ರಂದು ನಡೆಯಿತು. ಮೇ ೨೭ ರಿಂದ ಜೂನ್ ೩ರ ತನಕ National Reconciliation Week ಆಚರಣೆ ನಡೆಯುತ್ತಿದೆ. ಇದೆ ವಾರ ಈ ವರ್ಷದ NAIDOC ‘In This Together’ ವಿಷಯದ ಥೀಮ್ ಬಿಡುಗಡೆಯಾಗಿದೆ. ಈ ಎರಡೂ ಆಚರಣೆಗಳಲ್ಲಿರುವುದು ಆಸ್ಟ್ರೇಲಿಯನ್ ಅಬರಿಜಿನಲ್ ಆತ್ಮಕಥೆಯ ತುಂಡುಗಳು. ಡೇವಿಡ್ ಗಲ್ಪಿಲಿಲ್ ಎಂಬ ಈ ಮಹಾಶಯ ಕೂಡ ಅಂತಹ ಒಂದು ಆತ್ಮಕಥೆ. ಕಾರಣ, ಅವರು ಬಿಳಿ ಮತ್ತು ಕರಿ ಎಂಬ ಎರಡು ಪ್ರಪಂಚಗಳಲ್ಲಿ ಚದುರಿಹೋಗಿ, ಅಲೆದಾಡುತ್ತಿರುವ ಒಂದು ಪುರಾತನ ಆತ್ಮ.

ಹಾಗೆಂದು ಹೇಳಿದ್ದು Craig Ruddy ಎಂಬ ಚಿತ್ರ ಕಲಾವಿದ. Craig ೨೦೦೪ ನೇ ವರ್ಷದಲ್ಲಿ ಆಸ್ಟ್ರೇಲಿಯಾ ಮಟ್ಟಿಗೆ ಬಹು ಖ್ಯಾತಿಯುಳ್ಳ Archibald ಭಾವಚಿತ್ರ ಪ್ರದರ್ಶನದ ಕಡೆಸುತ್ತಿನಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅವರು ಕಲ್ಲಿದ್ದಲಿನಲ್ಲಿ (mixed-media interpretation; People’s Choice) ಬಿಡಿಸಿದ್ದು ಡೇವಿಡ್ ಗಲ್ಪಿಲಿಲ್ ಮುಖ. ತಾವು ಬಿಡಿಸಿದ ಡೇವಿಡ್ ಭಾವಚಿತ್ರಕ್ಕೆ ಅವರು ಕೊಟ್ಟ ಹೆಸರು Two Worlds. ತಮ್ಮ ಕ್ಯಾನ್ವಾಸ್ಸಿನಲ್ಲಿ ಆ ಭಾವಚಿತ್ರವನ್ನು ಕೂಡಿಸಲು ಬೇಕಿದ್ದ ಹಿನ್ನೆಲೆಯಾಗಿ Craig ಆರಿಸಿಕೊಂಡದ್ದು ಒಂದು ವಾಲ್ ಪೇಪರ್. ಅಂತಿಂಥ ಗೋಡೆ ಕಾಗದವಲ್ಲ ಅದು! ತದ್ರೂಪು ಅದೇ ವಿನ್ಯಾಸದ ಗೋಡೆ ಕಾಗದ ಸಿಡ್ನಿ ನಗರದಲ್ಲಿ ವಾಸಿಸುವ ಆಸ್ಟ್ರೇಲಿಯಾದ ಗವರ್ನರ್ ಜನರಲ್ ಮನೆಯ ಊಟದ ಕೋಣೆಯ ಗೋಡೆಯನ್ನು ಅಲಂಕರಿಸಿತ್ತು!! ಪುಸ್ತಕ ಕರ್ತೃ ಡೆರೆಕ್ ಕೇಳುತ್ತಾರೆ – “ನೀವು ರಚಿಸಿದ ಭಾವಚಿತ್ರದಲ್ಲಿ ಏನನ್ನು ವ್ಯಕ್ತಪಡಿಸಲು ಪ್ರಯತ್ನಿಸಿದಿರಿ?” Craig ಬಲು ಉತ್ಸಾಹದಿಂದ ಹೇಳುತ್ತಾರೆ – “ಶಕ್ತಿ, ಆತ್ಮಗೌರವ, ಸಾಮರ್ಥ್ಯ ಮತ್ತು ಆತ್ಮಾಭಿಮಾನ.”

ಅಬರಿಜಿನಲ್ ವಿಷಯವನ್ನು (ರಾಣಿಯನ್ನು ಪ್ರತಿನಿಧಿಸುವ) ಗವರ್ನರ್ ಜನರಲ್ ಮನೆಯ ಊಟದ ಮೇಜಿನ ಮೇಲಿಟ್ಟು ಆಗಿರುವ ಅನ್ಯಾಯವನ್ನು ಗಮನಿಸಿ ಬದಲಾವಣೆ ತನ್ನಿ ಎಂದು ಕೇಳುವುದಿತ್ತು. ಪ್ರಶಸ್ತಿಯ ಸಮಯದಲ್ಲಿ ನ್ಯೂ ಸೌತ್ ವೇಲ್ಸ್ ರಾಜ್ಯ ಆರ್ಟ್ ಗ್ಯಾಲರಿ ಭಾವಚಿತ್ರದ ಸಾವಿರಾರು ಪೋಸ್ಟರ್ ಮತ್ತು ಪೋಸ್ಟ್ ಕಾರ್ಡುಗಳನ್ನ ಮುದ್ರಿಸಿತ್ತು. ಅವು ದೇಶವಿದೇಶಗಳ ಮನೆಮನೆಗಳಲ್ಲಿವೆ ಎನ್ನುವುದನ್ನು ಡೆರೆಕ್ ಪುಸ್ತಕದಲ್ಲಿ ದಾಖಲಿಸಿದ್ದಾರೆ.

ನಿಜವಾಗಿಯೂ ಡೇವಿಡ್ ಎರಡು ಪ್ರಪಂಚಗಳಿಗೆ ಸೇರಿದ ಆತ್ಮವೇ? ಈ ಪ್ರಶ್ನೆಗೆ ಉತ್ತರಿಸಿದ್ದು ಮತ್ತೊಬ್ಬ ಆಸ್ಟ್ರೇಲಿಯನ್ ನಟ ಜಾಕ್ ಥಾಮ್ಸನ್. ಈತ ಬಿಳಿಯ. ಚಿಕ್ಕಂದಿನಿಂದಲೂ ತನಗೆ ಅಬರಿಜಿನಲ್ ಎಂಬ ಪದದ ಬಗ್ಗೆಯೇ ಅದೇನೋ ಸೆಳೆತವಿತ್ತು. ಹದಿನೈದು ವರ್ಷ ತುಂಬಿದ ಮೇಲೆ, ತನ್ನ ತಂದೆಯ ಸಹಾಯದಿಂದ ಜಾಕ್ ದೇಶದ ಉತ್ತರ ಭಾಗಕ್ಕೆ ಹೋಗಿ ಅಲ್ಲಿನ ಕ್ಯಾಟಲ್ ಸ್ಟೇಷನ್ ಮತ್ತು ರಾಂಚ್ ಗಳಲ್ಲಿ ಕೆಲಸ ಮಾಡುತ್ತಾರೆ. ಬಿಳಿಯನಾಗಿದ್ದರೂ ಕೂಡ ಪ್ರಾಮಾಣಿಕ ಪ್ರಯತ್ನದಿಂದ ಅಲ್ಲಿನ ಅಬರಿಜಿನಲ್ ಕೆಲಸಗಾರರೊಂದಿಗೆ ಸ್ನೇಹ ಮತ್ತು ಬಾಂಧವ್ಯ ಬೆಳೆಸಿಕೊಂಡು ಅವರಲ್ಲಿ ಒಬ್ಬರಾಗಲು ಆಶಿಸುತ್ತಾರೆ. ಮುಂದೆ ನಟನಾಗಿ ಪ್ರಸಿದ್ಧಿಯಾಗಿ ತಮ್ಮ ವೃತ್ತಿ ಜೀವನದಲ್ಲಿ ಡೇವಿಡ್ ಪರಿಚಯವಾಗಿ ಅದು ದಶಕಗಳ ಗಾಢ ಸ್ನೇಹವಾಗಿ ಉಳಿದುಕೊಂಡಿದೆ. ಆ ಸ್ನೇಹ ಮೊಳೆತದ್ದು Walkabout ಚಲನಚಿತ್ರದ ದಿನಗಳಲ್ಲಿ. ಆ ಚಿತ್ರದಲ್ಲಿನ ಎಳೆ ವಯಸ್ಸಿನ ತರುಣ ಡೇವಿಡ್ ಮುಖ, ದೇಹ, ಹಾವಭಾವ ಮತ್ತು ಆ ತರುಣನ ನಟನೆ ಬಿಳಿಯರ ಸಿನಿಮಾ ಲೋಕದಲ್ಲಿ ರೋಮಾಂಚನವುಂಟು ಮಾಡಿತ್ತು. White Supremacy ಪಾಲನೆ ತುಂಬಿತುಳುಕಾಡುತ್ತಿದ್ದ ಬಿಳಿಯರ ದೇಶ ಆಸ್ಟ್ರೇಲಿಯಾದಲ್ಲಿ ಮೊಟ್ಟಮೊದಲ ಬಾರಿ ಅದೇ ನೆಲದ ಮೂಲನಿವಾಸಿ, Yolngu ಜನಕುಲದ ಅಬರಿಜಿನಲ್ ಎಳೆತರುಣನೊಬ್ಬ ಕರಿಯರೆಂದರೆ ಅಸಹ್ಯಪಡುತ್ತಿದ್ದ ಬಿಳಿ ಗಂಡುಹೆಣ್ಣುಗಳ ಹೃದಯಕ್ಕೆ ಕಿಚ್ಚಿಟ್ಟಿದ್ದ. ಅವನ ಮನಮೋಹಕ ನಗೆ, ಗುಂಗುರು ಕೂದಲು, ಕಡೆದ ದೇಹ ಮತ್ತು ಅವನ ನಟನೆ ಅವರ ಬಾಯನ್ನು ತೆರೆಸಿದ್ದಲ್ಲದೆ ಮನಸ್ಸನ್ನೂ ಕೆಣಕಿತ್ತು.

ಎಷ್ಟೆಂದರೆ, ಡೇವಿಡ್ ಮತ್ತು ಎಲ್ಲರೂ ಕೂಡಿ ಪಬ್ಬಿಗೆ ಹೋದರೆ ಅಲ್ಲಿನ ಸಿಬ್ಬಂದಿ ಕರಿಯ ಡೇವಿಡ್ ಒಳಬರುವಂತಿಲ್ಲ ಎನ್ನುತ್ತಿದ್ದರೂ, ಬಿಳಿ ಸ್ನೇಹಿತರು ‘ಹೌದಾ, ಹಾಗಾದರೂ ನಾವೂ ಕೂಡ ಒಳಬರುವುದಿಲ್ಲ, ಅನ್ನುತ್ತಿದ್ದರಂತೆ.

ಆ ಮುಖವೆಂದರೆ, ಮುಖದಲ್ಲಿ ಅರಳುವ ಮುಗುಳ್ನಗೆಯೆಂದರೆ, ಆ ಮುಗುಳ್ನಗೆ ಮುಖದ ತುಂಬಾ ಹರಡಿಕೊಂಡು ಅದು ನಗುವಾದಾಗ, ನಗುವಿನ ಅಲೆಗಳು ಎದ್ದಾಗ, ನಗುವಿನ ನಾನಾ ಬಗೆಗಳಲ್ಲಿ ಅಡಗಿರುವ ಗೂಡಾರ್ಥಗಳೆಂದರೆ… ಛೆ ಬಿಡಿ. ಅವಕ್ಕೆ ಯಾರೂ ಕೂಡ ಯಾವುದೇ ರೀತಿಯ ಬೆಲೆ ಕಟ್ಟಲಾಗುವುದಿಲ್ಲ ಎನ್ನುತ್ತಾರೆ ಪುಸ್ತಕದ ಕರ್ತೃ..

ಜಾಕ್ ಹೇಳುತ್ತಾರೆ – ಡೇವಿಡ್ ಎರಡು ಭಿನ್ನ ಲೋಕಗಳ, ಸಂಸ್ಕೃತಿಗಳ ಚಕ್ರಸುಳಿಯಲ್ಲಿ ಸಿಲುಕಿಬಿಟ್ಟರು. ಎಳೆತಾರುಣ್ಯದಲ್ಲೇ ಅವರು ಹುಟ್ಟಿ ಬೆಳೆದ Arnhem Land ಲೋಕದಿಂದ ಮತ್ತು ಅವರ ಜನಕುಲ Yolngu ಸಂಸ್ಕೃತಿಯಿಂದ, ಅವರ ಜನರಿಂದ ದೂರವಾಗಿಬಿಟ್ಟರು. ತನ್ನದೇ ನೆಲದಲ್ಲಿ ಅಪ್ಪಅಮ್ಮಂದಿರು, ಒಡಹುಟ್ಟಿದವರೊಡನೆ ಸಂತೋಷವಾಗಿ ಬೆಳೆಯುತ್ತಾ, ಅದ್ಭುತ Yolngu ನೃತ್ಯಪಟುವಾಗಿ ಹೆಸರುಗಳಿಸಿ, ತನ್ನ ಕಿರಿವಯಸ್ಸಿನ ಸ್ನೇಹಿತರೊಂದಿಗೆ ಅಲ್ಲಲ್ಲಿ ಅವನು ನೃತ್ಯ ಪ್ರದರ್ಶನಗಳನ್ನು ಕೊಡುತ್ತಿದ್ದ. ತನ್ನ ಸಂಸ್ಕೃತಿಯನ್ನು, ಕಲೆಯನ್ನು, ಜೀವನವನ್ನು ಬಿಂಬಿಸುತ್ತಿದ್ದ ಅವನ ನೃತ್ಯವನ್ನು ನೋಡಲು ಜನರು ಹಾತೊರೆಯುತ್ತಿದ್ದರು. ಆ ಕಾಲದಲ್ಲೇ ಸಿನಿಮಾ ಲೋಕ ಅವನನ್ನು ಸೆಳೆದೊಯ್ದುಬಿಟ್ಟಿತು. ಜೀವನ ಪೂರ್ತಿ ಅವನು ತನ್ನ ಕರಿಲೋಕವನ್ನು ಬಿಳಿಯರಿಗೆ ಅರ್ಥಮಾಡಿಸಲು, ಮತ್ತು ಅವರ ಬಿಳಿ ಲೋಕವನ್ನು ತಂದು ತನ್ನ ಕರಿ ಜನರಿಗೆ ಅರ್ಥಮಾಡಿಸಲು ಹೆಣಗಿದ. ಅದೆಷ್ಟೋ ಬಾರಿ ಸಿನಿಮಾ ಲೋಕ ಅವನನ್ನು ನಾಶಮಾಡಿದರೂ, ಅವನು ಸಂಪೂರ್ಣವಾಗಿ ನಾಶವಾಗಲಿಲ್ಲ. ಅದೇ ಅವನ ಅಂತಃಶಕ್ತಿ. ಅವನ ಸತ್ವವಿರುವುದು ಆ ಒಂದು ಜೀವನಪ್ರವಾಹವೆಂಬ ನದಿಯಲ್ಲಿ. ಅವನು ಸಂಪಾದಿಸಿದ ಹಣವನ್ನೆಲ್ಲ ಅವನ ಜನರಿಗೆ ಕೊಟ್ಟುಬಿಟ್ಟಮೇಲೂ ಕೂಡ ಅವನು ಸದಾ ಈಜುತ್ತಿರುತ್ತಾನೆ. ಎಂದೂ ಮುಳುಗಿಲ್ಲ.

ಪುಸ್ತಕ ಜನಕ ಡೆರೆಕ್ ಜೊತೆ ಮಾತನಾಡುತ್ತಾ ಭಾವುಕರಾಗುವ ಜಾಕ್ ಹೇಳುತ್ತಾರೆ – “ಡೇವಿಡ್ ನನ್ನ ಸೋದರ. ಈ ಗೂಟವಿಲ್ಲದೆ ಸಡಿಲವಾಗಿ, ಒಂದಕ್ಕೊಂದು ಸಂಬಂಧವಿಲ್ಲದ ಬಿಳಿಯರ ಲೋಕದಲ್ಲಿ ಅವನು ಉತ್ಸಾಹದಿಂದ ಲೀಲಾಜಾಲವಾಗಿರುತ್ತಾನಲ್ಲ, ಆ ಜೀವನೋತ್ಸಾಹವೇ ಈ ದೇಶದ ಅರವತ್ತು ಸಾವಿರ ವರ್ಷಗಳಷ್ಟು ಪುರಾತನವಾದ ಅವರ ಲೋಕಕ್ಕೆ ಇರುವ ಬಾಗಿಲು. ಡೇವಿಡ್ ಆ ಬಾಗಿಲು ತೆರೆದು ನಮ್ಮನ್ನು ಆಹ್ವಾನಿಸುತ್ತಾನೆ. ಅವನನ್ನು, ಅವರ ಸಂಸ್ಕೃತಿಯನ್ನು, ಮೌಲ್ಯಗಳನ್ನು ಜೀವನೋತ್ಸಾಹವನ್ನು ನಾವು ಅರ್ಥಮಾಡಿಕೊಳ್ಳಬೇಕು. ನಾವು ಕಲಿಯುವುದು ಅದೆಷ್ಟೋ ಇದೆ. ಆದರೆ ನಾವು ಅವರನ್ನು ತಿರಸ್ಕರಿಸಿದ್ದೀವಿ. ಒಬ್ಬ ಸೋದರನಾಗಿ ನಾನು ಅವನನ್ನು ಬಹಳಾ ಪ್ರೀತಿಸುತ್ತೀನಿ.”

ಕರಿ-ಬಿಳಿ ದ್ವಂದ್ವಗಳ ನಡುವೆ ನೇತಾಡಿಕೊಂಡಿರುವ Gulpilil ಎಂಬ ಹಳೆಯಾತ್ಮ ಹುಟ್ಟಿದ್ದು ಸುಮಾರು ೧೯೫೩ ನೇ ಇಸವಿಯಲ್ಲಿ ಎಂಬ ಊಹೆಯಿದೆ. ಬೆಳೆದಿದ್ದು ತಮ್ಮದೇ ಆದ Yolngu ಕುಲದ Ramingining ಸಮುದಾಯದಲ್ಲಿ(Northern Territory). ೧೯೭೮ರಲ್ಲಿ ತಮ್ಮ ಏಬಿಸಿ ಸಂದರ್ಶನದಲ್ಲಿ ಹೇಳಿದಂತೆ ಅವರ ಮೊದಲ ಹೆಸರು ಜೋ. ಕುಟುಂಬಗಳಿಂದ ಬೇರ್ಪಟ್ಟ, ಮಿಷನರಿಗಳ ಕ್ಯಾಂಪುಗಳಲ್ಲಿ ಬೆಳೆದ ಬೇರೆಷ್ಟೋ ಅಬರಿಜಿನಲ್ ಮಕ್ಕಳಿಗೆ ಹೋಲಿಸಿದರೆ ಅವರು ಬಾಲ್ಯವನ್ನು ಸುಖವಾಗೇ ಕಳೆದರು. ತಮ್ಮ ಹಿರಿಯರಿಂದ ಬೇಟೆಯಾಡುವುದು, ಸಾಂಸ್ಕೃತಿಕ ನೃತ್ಯಕಲೆಗಳು, ಹಾಡುವುದು ಕಲಿತರು. ಮುಂದೆ ಶಾಲೆ ಸೇರಿದಾಗ ಮಿಷನರಿಗಳು ಹೆಸರೇನೆಂದು ಕೇಳಿದಾಗ ‘Gulpilil’ ಅಂದರಂತೆ. ಮಿಷನರಿಗಳು ‘ನಾವು ನಿನಗೆ ಕೊಡುವ ಹೆಸರು ಡೇವಿಡ್’ ಅಂದರಂತೆ! ಇಂಗ್ಲಿಷ್ ಭಾಷೆಯಲ್ಲದೆ ಆರೇಳು ಅಬರಿಜಿನಲ್ ಭಾಷೆಗಳನ್ನು ಮಾತನಾಡುತ್ತಾರೆ. ಅವರಿಗೆ ಹಲವಾರು ಸಂಗಾತಿಗಳು, ಹಲವು ಮಕ್ಕಳಿವೆ.

ಹದಿನಾರು ವರ್ಷವಾಗಿದ್ದಾಗ, ಒಮ್ಮೆ ಅವರ ನೃತ್ಯವನ್ನು ನೋಡಿದ ಚಲನಚಿತ್ರ ನಿರ್ದೇಶಕ Nicolas Roeg ಅವರನ್ನು ತಮ್ಮ Walkabout (೧೯೭೧) ಚಲನಚಿತ್ರಕ್ಕೆ ನಟನಾಗಿ ಸೇರಿಸಿಕೊಳ್ಳುತ್ತಾರೆ. ಕ್ಯಾಮೆರಾ ಲೆನ್ಸನ್ನು ಹೆದರಿಸುವ ರೀತಿ ಅವರು ಅದನ್ನು ದಿಟ್ಟಿಸುತ್ತಾ, ಹೇಳಹೆಸರಿಲ್ಲದ ಒಬ್ಬ ಅಬರಿಜಿನಲ್ ಹುಡುಗನಾಗಿ ಕ್ಯಾಮೆರಾ ಮುಂದೆ ನಟಿಸುತ್ತಾ, ನಡೆಯುತ್ತಾ ಹೋದರೆ ಸಿನೆಮಾ ತಂಡದವರು ಉಸಿರಾಡಲೇ ತಿಣುಕುತ್ತಿದ್ದರಂತೆ. ೨೦೦೪ರ ತಮ್ಮ ಏಕವ್ಯಕ್ತಿ ಪ್ರದರ್ಶನದಲ್ಲಿ ಡೇವಿಡ್ ಹೇಳುತ್ತಾರೆ – ‘ಆಕ್ಟಿಂಗ್ … piece of piss. I know how to walk across the land in front of a camera because I belong there’ (Gulpilil ಪುಸ್ತಕದಿಂದ ಆರಿಸಿದ ಮಾತು). Walkabout ಚಿತ್ರದ ಜೊತೆ ಅವರ ಹೆಸರುವಾಸಿ ಸಿನಿಮಾಗಳು Storm Boy, Crocodile Dundee, The Tracker, Ten Canoes, Charlie’s Country. ಡೆರೆಕ್ ಬರೆದಿರುವ ಪುಸ್ತಕದಲ್ಲಿ ಡೇವಿಡ್ ಬಗ್ಗೆ ಮಾತನಾಡಿರುವ ಕೆಲ ವ್ಯಕ್ತಿಗಳು Paul Hogan, Phillip Noyce, Rolf de Heer ಮುಂತಾದವರು.

ಅವರ ಚಲನಚಿತ್ರಗಳನ್ನು ನೋಡುವಾಗ ಅವರ ಪಾತ್ರಗಳಲ್ಲಿ ನಮ್ಮನ್ನೂ ಕೂಡ ಗುರುತಿಸಿಕೊಳ್ಳಬಹುದು. ಕುತ್ತಿಗೆಗೆ ತುಕ್ಕು ಹಿಡಿದ ಕಬ್ಬಿಣದ ಸರಪಳಿ ಮತ್ತು ಬೀಗವನ್ನು ತೊಡಿಸಿಕೊಂಡು tracker ಪಾತ್ರದ ಅವರ ವಿಹ್ವಲ ನಗು ಹಾಸಿಗೆಯಲ್ಲಿ ಸುಖವಾಗಿ ಮಲಗುವ ನಮ್ಮಗಳನ್ನು ಬೆಚ್ಚಿಬೀಳಿಸಿ ನಿದ್ದೆಗೆಡಿಸಿ ಬಿಡುತ್ತದೆ. ತನ್ನ ನೆಲದಲ್ಲೇ ತನಗೆ ಅಪರಿಚಿತನಾಗುವ ಚಾರ್ಲಿ ಪಾತ್ರ ನಾವೇ ಆಗುತ್ತೇವೆ.

೨೦೧೧ರಲ್ಲಿ ತಮ್ಮ ಹೆಂಡತಿ ಮಿರಿಯಂ ರ ತೋಳಿಗೆ ಆಘಾತವನ್ನುಂಟು ಮಾಡಿ ಕೈ ಮುರಿದರು ಎಂಬ ಕಾರಣದಿಂದ ಡೇವಿಡ್ ಹನ್ನೆರೆಡು ತಿಂಗಳು ಜೈಲುವಾಸಿಯಾಗಿದ್ದರು. ಆ ದಿನಗಳಲ್ಲಿ ಅವರ ದೇಹ ಸತ್ತೇಹೋಗುವಷ್ಟು ಕ್ಷೀಣಿಸಿತ್ತು (ಕೇವಲ ಮೂವತ್ತೊಂಭತ್ತು ಕಿಲೋಗ್ರಾಮ್ ತೂಕ). ಖಿನ್ನತೆಯಿಂದ ಮನಸ್ಸು ಮುರಿದಿತ್ತು. ಜೈಲಿನಲ್ಲಿದ್ದಾಗಲೇ ಆಲ್ಕೋಹಾಲ್ ಕುಡಿತವನ್ನು ತ್ಯಜಿಸಿದರು. ಆಗ ಅವರನ್ನು ಭೇಟಿಯಾದ ಹಳೆಯ ಸ್ನೇಹಿತ Rolf de Heer ಡೇವಿಡ್ ಗಾಗಿ Charlie’s Country ಚಲನಚಿತ್ರದ ಕಥೆಯನ್ನು ಬರೆದರು. ಡೇವಿಡ್ ಅದರಲ್ಲಿ ಚಾರ್ಲಿಯಾಗಿ ನಟಿಸಿದರು. ಆ ಚಿತ್ರ ಅವರನ್ನು, ಅವರ ಜನರನ್ನು ಕೈಹಿಡಿದೆತ್ತಿತು ಎಂದು ಡೇವಿಡ್ ಹೇಳಿಕೊಂಡಿದ್ದಾರೆ. ಅವರ ನಟನೆಗೆ ೨೦೧೪ರಲ್ಲಿ Cannes ಚಲನಚಿತ್ರೋತ್ಸವದ ಪರ್ಯಾಯ Un Certain Regard ಉತ್ಸವದ ಬೆಸ್ಟ್ ಆಕ್ಟರ್ ಪ್ರಶಸ್ತಿ ಸಿಕ್ಕಿತು. ಹೋದ ವರ್ಷ ಟಿವಿ ಪರದೆಯ ಮೇಲೆ ಈ ಚಿತ್ರವನ್ನು ನಾನು ನೋಡಿದಾಗ ಚಾರ್ಲಿ ಮತ್ತು ಡೇವಿಡ್ ಒಬ್ಬರಲ್ಲೊಬ್ಬರು ಐಕ್ಯವಾದ ಪುರಾತನ ಆತ್ಮ ಎನ್ನುವುದು ಖಚಿತವಾಗಿತ್ತು. ಆ ಪುರಾತನ ಆತ್ಮ ನಿಜವಾದ ಆಸ್ಟ್ರೇಲಿಯಾ ನೆಲದ ಆತ್ಮ.

ಇಂದು ನಮಗೆ ಅಗೋಚರವಾದ ಆ ಆತ್ಮ ೨೦೧೭ ನೇ ವರ್ಷದಿಂದ ತನ್ನ ಹುಟ್ಟು ನೆಲೆ, ನೆಲ, ಜನ, ಅಸ್ಮಿತೆಗಳಾದ Yolngu-Gulparil-Ramingining ಗಳಿಂದ ದೂರವಾಗಿಬಿಟ್ಟಿದೆ. ಶ್ವಾಸಕೋಶ ಕ್ಯಾನ್ಸರಿನಿಂದ ಬಳಲುತ್ತಿರುವ ಡೇವಿಡ್ ತಮ್ಮ ಕಡೆಯ ದಿನಗಳನ್ನು ಎಣಿಸಲು ಆರಿಸಿಕೊಂಡದ್ದು Arnhem ಲ್ಯಾಂಡ್ ತವರಿನಿಂದ ಸುಮಾರು ೩೫೦೦ ಕಿಮೀಗಳಾಚೆ ಇರುವ ದಕ್ಷಿಣದ ಅಡಿಲೇಡ್ ನಗರದಿಂದ ಎಪ್ಪತ್ತೇಳು ಕಿಮೀ ದೂರವಿರುವ ಕೆಂಪು ಧೂಳು ತುಂಬಿದ ಚಿಕ್ಕ ಆಸ್ಟ್ರೇಲಿಯನ್ ಪಟ್ಟಣ Murray Bridge. ಅಲ್ಲಿ, ಚಿಕ್ಕದೊಂದು ಮನೆಯಲ್ಲಿ ತಮ್ಮ ಕೇರರ್ ಮೇರಿಯೊಂದಿಗೆ ಡೇವಿಡ್ ಕೊನೆಯುಸಿರನ್ನು ಎಳೆಯುತ್ತಿದ್ದಾರೆ. ಚಿಕಿತ್ಸೆಗಾಗಿ ದೇಹವಲ್ಲಿದ್ದರೂ ಮನಸ್ಸು ತನ್ನ ತವರಿಗೆ ಮರಳಲು ತಹತಹಿಸುತ್ತಿದೆಯೆಂದು ಜನವರಿ ೨೦೨೦ರಲ್ಲಿ ಹೇಳಿದ್ದಾರೆ. ತಾನು ತಾನಾಗೇ ನಟಿಸಿದ ಚಾರ್ಲಿ ಪಾತ್ರದಂತೆ ಇಲ್ಲಿದ್ದರೂ ಕೂಡ ಅಲ್ಲಿಯೇ ಸಲ್ಲುವ, ಅಲ್ಲಿದ್ದರೂ ಸಹ ಕಳೆದುಹೋದ, ಯಾವಾಗಲೂ ಕೊರಗುವ ಆತ್ಮವಾಗಿ ಎರಡು ವಿಭ್ರಮೆ ಲೋಕಗಳಲ್ಲಿ ಹರಡಿದ್ದಾರೆ.

ಡೇವಿಡ್ ಗಲ್ಫಿಲಿಲ್ ತಮ್ಮ ಪುಟ್ಟ ಮನೆಯ ಗೋಡೆಯನ್ನು ಅಲಂಕರಿಸಿರುವ Two Worlds ಹೆಸರಿನ ತಮ್ಮದೇ ಭಾವಚಿತ್ರವನ್ನು ದಿಟ್ಟಿಸುತ್ತಾ ‘That’s Me! We won the prize,’ ಎನ್ನುತ್ತಾರೆ.