ಈ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕೇಳುತ್ತಾ, ವಿಭಾಗೆ ಬಸ್ ಹೊರಟದ್ದೇ ತಿಳಿದಿರಲಿಲ್ಲ. ಅಕ್ಕ ನೀರು ಕುಡಿಯೋಕೆ ಅಂತ ಮಾತು ನಿಲ್ಲಿಸಿದಾಗ, ಕಿಟಕಿಯಾಚೆ ನೋಡಿ, “ಓಹ್! ಆಗ್ಲೆ ಇಷ್ಟು ಮುಂದೆ ಬಂದುಬಿಟ್ವಾ? ಸರಿ, ನೀನು ಮುಂದುವರೆಸು ಕಾವ್ಯಕ್ಕಾ” ಎಂದಳು. “ಹೂಂ, ನಿಮ್ ಭಾವ ಮಾತ್ರ ಅಲ್ಲ, ನಾನೂ ನೋಡಿದೀನಿ ಈ ‘ಕೀಟಗಳನ್ನ ತಿನ್ನೋ ಗಿಡಗಳನ್ನ’ ಗೊತ್ತಾ?” ಎಂದಳು ಕಾವ್ಯಾ ಕೀಟಲೆ ಮಾಡುತ್ತಾ. ಆಗ ವಿಭಾ ನಗುತ್ತಾ, “ಅಯ್ಯೋ! ನೀನೂ ಅಂದ್ರೇನು ಸುಮ್ನೇನಾ ಅಕ್ಕಾ? ನೀನೇನು ನೋಡಿದ್ದು? ಎಲ್ಲಿ ನೋಡ್ದೆ? ಹೇಳ್ಬೇಕು ತಾನೆ ಮತ್ತೆ” ಎಂದು ಅಕ್ಕನಿಗೆ ಪೂಸಿ ಹೊಡೆದಳು.
ಕ್ಷಮಾ ವಿ. ಭಾನುಪ್ರಕಾಶ್ ಮಕ್ಕಳಿಗಾಗಿ ಬರೆಯುವ ಕಥಾ ಸರಣಿ “ಎಳೆಯರಿಗೆ ಸುಲಭ ವಿಜ್ಞಾನ”ಯಲ್ಲಿ ನಾಲ್ಕನೆಯ ಕತೆ
ವಿಭಾಳ ರಜೆ ಮುಗಿಯುತ್ತಾ, ವಾಪಸ್ ಬೆಂಗಳೂರಿಗೆ ಹೊರಡುವ ದಿನ ಬಂದೇಬಿಟ್ಟಿತ್ತು. ಹಳ್ಳಿಯ ಹಕ್ಕಿಗಳ ಇಂಚರವನ್ನು, ಶುದ್ಧ ಗಾಳಿಯನ್ನು, ಅಕ್ಕನ ಜೊತೆಗಿನ ಹರಟೆಯನ್ನು ಮಿಸ್ ಮಾಡಿಕೊಳ್ಳಬೇಕಲ್ಲ ಎಂದು ಆಗಲೇ ವಿಭಾಗೆ ಬೇಜಾರು; ನಿದ್ದೆಯಿಂದ ಎದ್ದ ವಿಭಾಳನ್ನು ನೋಡಿ, ಅವಳ ಮನಸನ್ನರಿತ ಅಕ್ಕ ಕಾವ್ಯ, “ಗುಡ್ ಮಾರ್ನಿಂಗ್ ವಿಭಚ್ಚು! ಬೆಂಗಳೂರಿಗೆ ಹೋಗ್ಬೇಕಲ್ಲಾ ಅಂತ ಮೂತಿ ಸೊಟ್ಟ ಮಾಡುವ ಬದಲು, ಬಸ್ ಜರ್ನಿ ಉದ್ದಕ್ಕೂ ಮಾತಾಡ್ಬಹುದಲ್ವಾ ಅಂತ ಯೋಚ್ನೇ ಮಾಡೋ!” ಎಂದಳು ನಗುತ್ತಾ. “ಹೌದಲ್ವಾ? ನೋಡೀಗ ಹೇಗೆ ಬೇಗ-ಬೇಗ ರೆಡಿ ಆಗ್ತೀನಿ” ಅಂತ ತಯಾರಾಗೋಕೆ ಹೊರಟಳು ವಿಭಾ. ಬೆಳಗಿನ ಬಸ್ ಇಬ್ಬರಿಗೂ ಇಷ್ಟವೇ! ಹಾಗಾಗಿ, ಬೇಗ ತಯಾರಾಗಿ, ಕಾಫಿ ಕುಡಿದು ಹೊರಟರು ಅಕ್ಕ-ತಂಗಿ; ಬಸ್ ಸ್ಟಾಂಡಿಗೆ ಡ್ರಾಪ್ ಮಾಡೋಕೆ ಪ್ರಕಾಶ್ ಭಾವ ಕಾರಿನಲ್ಲಿ ರೆಡಿಯಾಗಿ ಕಾಯ್ತಾ ಇದ್ದರು; ಮೂವರೂ ಸವಾರಿ ಹೊರಟರೆ, ಮಾತಿಗೆಲ್ಲಿ ಕೊರತೆ?
ವಿಭಾಳ ನೆನಪಿನ ಶಕ್ತಿಯಂತೂ ಬಹಳ ಚುರುಕು; ಯಾವುದನ್ನೂ ಮರೆಯದ ಅವಳು, ಹಿಂದಿನ ದಿನದ ಮಾತುಕತೆಯನ್ನು ಜ್ಞಾಪಿಸುತ್ತಾ, “ಭಾವ, ನೆನ್ನೆ ಅಕ್ಕ ಹೇಳ್ತಿದ್ಲು, ಕೀಟಗಳನ್ನು ತಿನ್ನೋ ಗಿಡಗಳಿವೆ ಅಂತ! ನೀವು ನೋಡಿದೀರಾ ಯಾವುದಾದರೂ ಇಂಥಾ ಭಯಂಕರ ಗಿಡವನ್ನ?” ಎಂದಳು; ಇದಕ್ಕೆ ಪ್ರಕಾಶ್ ನಗುತ್ತಾ, “ಖಂಡಿತಾ ನೋಡಿದೀನಿ; ಆದರೆ ಭಯಂಕರ ಗಿಡವನ್ನಲ್ಲ, ಪಾಪ ಪುಟ್ಟದೊಂದು ಗಿಡ; ಅದು ‘ಡ್ರಾಸೆರಾ’ ಅನ್ನೋ ಕುಲಕ್ಕೆ ಸೇರತ್ತೆ; ಈ ಕುಲದಲ್ಲಿ ಹತ್ತಿರತ್ತಿರ ೨೦೦ ಪ್ರಭೇದಗಳಿವೆ. ಅದರಲ್ಲಿ ಒಂದು ಗಿಡವನ್ನ ನಾನು ನೋಡಿದ್ದು, ಬನ್ನೇರುಘಟ್ಟ ಕಾಡಿನ ಹತ್ತಿರ” ಎಂದು ತಮ್ಮ ಅನುಭವದ ತುಣುಕೊಂದನ್ನು ನಾದಿನಿಯ ಬಳಿ ಹಂಚಿಕೊಂಡರು. ಆಗ ವಿಭಾ “ಅಷ್ಟೊಂದು ಪ್ರಭೇದಗಳಿವೆಯಾ? ಅವುಗಳಲ್ಲಿ ನೀವು ನೋಡಿದ್ದು ಯಾವುದು? ಹೇಗಿತ್ತು ಅದು?” ಅಂತ ಹೊಸತನ್ನು ತಿಳಿದುಕೊಳ್ಳುವ ಕುತೂಹಲದಿಂದ ಕೇಳಿದಳು ವಿಭಾ.
ಆಗ ಪ್ರಕಾಶ್ “ನಿಜಾ, ಕೀಟಗಳನ್ನೇ ತಿನ್ನತ್ತೆ ಅಂದಾಗ ಭಯಂಕರ ಅನ್ಸತ್ತೇನೋ, ನೀನು ಹೇಳಿದ ಹಾಗೆ! ಆದ್ರೆ ಅದು ‘ಒಂದು ರೂಪಾಯಿ ಕಾಯಿನ್’ ಅಷ್ಟೇ ಅಗಲವಾದ ಪುಟ್ಟ ಗಿಡ; ಒಂಥರಾ ಆರೆಂಜ್ ಬಣ್ಣ ಇರತ್ತೆ. ಅದರೊಳಗಿಂದ ಮೇಲಕ್ಕೆ ಉದ್ದಕ್ಕೆ ಒಂದು ಕಡ್ಡಿ, ಆ ಕಡ್ಡಿಯ ಮೇಲೊಂದು ಪಿಂಕ್ ಹೂವು. ಈ ಕೇಸರಿ ಬಣ್ಣದ ಗಿಡ ಅಂದ್ನಲ್ಲ! ಅದಂತೂ, ಹುಲ್ಲಿನ ಮಧ್ಯೆ ನೆಲದ ಮೇಲೆ ಹರಡಿಕೊಂಡಿರತ್ತೆ, ಸುಲಭವಾಗಿ ಕಾಣೋದೇ ಇಲ್ಲ ಗೊತ್ತಾ?” ಎಂದರು; ಆಗ ವಿಭಾ, “ಹಾಗಿದ್ರೆ ಆ ಪುಟ್ಟ ಗಿಡ ಹೇಗೆ ಕೀಟಗಳನ್ನ ಹಿಡ್ಯತ್ತೆ?” ಎಂದು ಮರುಪ್ರಶ್ನೆ ಹಾಕಿದಳು; ಅಷ್ಟರಲ್ಲಿ ಬಸ್ ಸ್ಟಾಂಡ್ ತಲುಪಿದ್ದಾಯ್ತು.“ಅದಕ್ಕೆ ಉತ್ತರ ನಾನು ಕೊಡ್ತೀನಿ ಬಾ; ಬಸ್ ಬರೋ ಟೈಮ್ ಆಯ್ತು” ಎಂದು ಕಾರ್ ಇಳಿದ ಕಾವ್ಯ, ಲಗೇಜ್ ತೆಗೆದುಕೊಳ್ಳೋಕೆ ಕಾರಿನ ಡಿಕ್ಕಿ ಓಪನ್ ಮಾಡೋಕೆ ಹೇಳಿದಳು. ಪ್ರಕಾಶ್‌ಗೆ ‘ಬಾಯ್’ ಹೇಳಿ, ಅಲ್ಲಿ ಬಂದು ನಿಂತಿದ್ದ ಇವರ ಬಸ್ಸನ್ನು ಕಂಡು, ಹತ್ತಿ ಕೂತರು ಅಕ್ಕ-ತಂಗಿ. ಇನ್ನೂ ಬಸ್ ಹೊರಡಲು ಟೈಮ್ ಇತ್ತು. ಅರಾಮವಾಗಿ ಕೂರೋಣ ಎಂದು ಸೀಟಿನ ಪಕ್ಕದಲ್ಲಿದ್ದ ಲೀವರ್ ಒತ್ತಿ, ಸೀಟನ್ನು ಹಿಂದಕ್ಕೊರಗಿಸಿ, ಅರಾಮ್ ಖುರ್ಚಿ ಮಾಡಿಕೊಂಡಳು ವಿಭಾ.

ತಾನೂ ಸೀಟಿಗೊರಗಿ ಕೂತ ಕಾವ್ಯ, ವಿಭಾಳೆಡೆಗೆ ತಿರುಗಿ “ನೋಡಿದ್ಯಾ ವಿಭಾ, ಒಂದು ಬಟನ್ ಒತ್ತಿದರೆ ಅಲ್ಲಿ ಕಾರಿನ ಡಿಕ್ಕಿ ಓಪನ್ ಆಗತ್ತೆ, ಇಲ್ಲಿ ಲೀವರ್ ಹಿಂದಕ್ಕೆ ಮಾಡಿದರೆ, ಸೀಟ್ ಹಿಂದಕ್ಕೆ ಬಗ್ಗತ್ತೆ ಅಲ್ವಾ? ಅದೇ ರೀತಿ, ಕೀಟಗಳನ್ನು ತಿನ್ನೋ ಗಿಡಗಳಲ್ಲಿ ಕೂಡ, ಕೀಟವನ್ನ ಹಿಡಿಯೋಕೇ ಅಂತ್ಲೇ ರಚನೆ ಆಗಿರೋ ಭಾಗಕ್ಕೆ, ಹುಳ ಬಂದು ತಗುಲಿದ ಕೂಡಲೇ, ಆಟೋಮ್ಯಾಟಿಕ್ ಆಗಿ, ಹೂವಿನ ಪಕಳೆ ಮಡಚಿಕೊಳ್ಳತ್ತೆ ಅಥ್ವಾ ಎಲೆ ಸುರುಳಿಯಾಗತ್ತೆ; ನಮ್ಮ ಹೃದಯದಲ್ಲಿನ ಕವಾಟ ಕ್ಲೋಸ್ ಆಗೋ ಹಾಗೆ; ಜೊತೆಗೆ, ಗಿಡಗಳ ಎಲೆಗಳಲ್ಲಿ ಇರುವ ರಂಧ್ರಗಳು, ಜಾಸ್ತಿ ನೀರು ಪೋಲಾಗಬಾರದು ಅನ್ನೋ ಕಾರಣಕ್ಕೆ ಕ್ಲೋಸ್ ಆಗೋ ಹಾಗೇನೇ ಇದೂ ಕೂಡ” ಎಂದು ಅರ್ಧಕ್ಕೆ ನಿಂತಿದ್ದ ಮಾತುಕತೆಯನ್ನು ಮುಂದುವರೆಸಿದಳು.
“ಅಕ್ಕನಿಗೆ ಎಲ್ಲಾ ಕಡೇ ಉದಾಹರಣೆಗಳೇ ಸಿಗತ್ವೆ ಅಲ್ವಾ?” ಅಂತ ನಗುತ್ತಾ ವಿಭಾ, “ಹೂಂ, ಮುಂದಕ್ಕೆ ಹೇಳು” ಎನ್ನುತ್ತಾ ಆಸಕ್ತಿಯಿಂದ ಗಲ್ಲದ ಕೆಳಗೆ ಕೈಕೊಟ್ಟು ಕೂತಳು. ಆಗ ಕಾವ್ಯ ಮಾತು ಮುಂದುವರೆಸುತ್ತಾ, “ಭಾವ ಹೇಳಿದ ‘ಡ್ರಾಸೆರಾ’ ಕುಲದಲ್ಲೇ ನೂರಾರು ಪ್ರಭೇದಗಳಿವೆಯಲ್ಲಾ? ಅದರಲ್ಲಿ, ಭಾವ ನೋಡಿದ್ರಲ್ಲಾ ಅವತ್ತು- ನೆಲದ ಮೇಲೆ ಹರಡುವ ಕೇಸರಿ ಬಣ್ಣದ ಸಸ್ಯ – ಅದರ ಪೂರ್ಣ ಹೆಸರು ‘ಡ್ರಾಸೆರಾ ಬರ್ಮನ್ನಿ’; ಆ ಗಿಡದಲ್ಲಿ, ಮೊದಲು ಹಸಿರಾಗಿದ್ದು, ಆಮೇಲೆ ಕೇಸರಿ ಬಣ್ಣಕ್ಕೆ ತಿರುಗೋ ಎಲೆಗಳ ಅಗಲವಾದ ಗುಚ್ಛವಿರುತ್ತೆ; ಆ ಗುಚ್ಛದಿಂದ ಅಂಟಂಟು ದ್ರವ ಹೊರಬಂದಿರತ್ತೆ. ಈ ಎಲೆಗಳ ಗುಚ್ಛದಲ್ಲಿ ಕೂದಲಿನಂಥಾ, ದಾರದಂಥಾ ಎಳೆಗಳಿರತ್ವೆ; ಅವುಗಳ ತುದಿಗೆ ಈ ಅಂಟುದ್ರವ ಒಳ್ಳೆ ಹುಲ್ಲಿನ ಮೇಲೆ ಇಬ್ಬನಿ ಕೂತಿರತ್ತಲ್ಲಾ, ಹಾಗೆ ಕೂತಿರತ್ತೆ; ಈ ಚೆಂದದ ಕೇಸರೀ ಬಣ್ಣ, ಜೊತೆಗೆ ಹೊಳೆಯುವ ಇಬ್ಬನಿಯಂಥಾ ಹನಿ – ಇವೆಲ್ಲಾ ಕೀಟಗಳನ್ನ ಕೈಬೀಸಿ ಕರೆಯತ್ವೆ! ಇದಕ್ಕೆ ಅಟ್ರಾಕ್ಟ್ ಆದ ಕೀಟ ಹತ್ತಿರ ಬಂದಾಗ, ಅಂಟಂಟು ದ್ರವದಲ್ಲಿ ಸಿಹಿಯಂಶ ಇರುವುದು ತಿಳಿದು, ಅದಕ್ಕೆ ಆಸೆ ಪಟ್ಟು ಒಂದು ತಪ್ಪು ಹೆಜ್ಜೆ ಇಟ್ಟು, ಈ ಸಸ್ಯದ ಎಲೆಗಳ ಗುಚ್ಛದೊಳಗೆ ಕಾಲಿಡತ್ತೆ ನೋಡು! ಆ ಕ್ಷಣವೇ ಆ ಎಲೆಗಳ ಗುಚ್ಚ, ಸುರುಳಿಯಾಗಿ ಮುಚ್ಚಿಕೊಂಡುಬಿಡತ್ತೆ; ಈ ಅಂಟು ಮತ್ತು ಮುಚ್ಚಿದ ಬಾಗಿಲಿನಿಂದ ತಪ್ಪಿಸಿಕೊಳ್ಳೋಕೆ ಸಾಧ್ಯವಾಗದೇ, ಆ ಕೀಟ ಅಲ್ಲೇ ಕೊನೆಯುಸಿರೆಳೆಯತ್ತೆ.” ಎಂದಳು.
ಈ ಕುತೂಹಲಕಾರಿ ಮರ್ಡರ್ ಮಿಸ್ಟರಿ ಕೇಳುತ್ತಾ, ವಿಭಾಗೆ ಬಸ್ ಹೊರಟದ್ದೇ ತಿಳಿದಿರಲಿಲ್ಲ. ಅಕ್ಕ ನೀರು ಕುಡಿಯೋಕೆ ಅಂತ ಮಾತು ನಿಲ್ಲಿಸಿದಾಗ, ಕಿಟಕಿಯಾಚೆ ನೋಡಿ, “ಓಹ್! ಆಗ್ಲೆ ಇಷ್ಟು ಮುಂದೆ ಬಂದುಬಿಟ್ವಾ? ಸರಿ, ನೀನು ಮುಂದುವರೆಸು ಕಾವ್ಯಕ್ಕಾ” ಎಂದಳು. “ಹೂಂ, ನಿಮ್ ಭಾವ ಮಾತ್ರ ಅಲ್ಲ, ನಾನೂ ನೋಡಿದೀನಿ ಈ ‘ಕೀಟಗಳನ್ನ ತಿನ್ನೋ ಗಿಡಗಳನ್ನ’ ಗೊತ್ತಾ?” ಎಂದಳು ಕಾವ್ಯಾ ಕೀಟಲೆ ಮಾಡುತ್ತಾ. ಆಗ ವಿಭಾ ನಗುತ್ತಾ, “ಅಯ್ಯೋ! ನೀನೂ ಅಂದ್ರೇನು ಸುಮ್ನೇನಾ ಅಕ್ಕಾ? ನೀನೇನು ನೋಡಿದ್ದು? ಎಲ್ಲಿ ನೋಡ್ದೆ? ಹೇಳ್ಬೇಕು ತಾನೆ ಮತ್ತೆ” ಎಂದು ಅಕ್ಕನಿಗೆ ಪೂಸಿ ಹೊಡೆದಳು.
ತರಲೆ ತಂಗಿಯ ಕಡೆ ನಗೆ ಬೀರಿ, ಕಾವ್ಯಾ, ತನ್ನ ವಿವರಣೆ ಮುಂದುವರೆಸುತ್ತಾ – “ನಾನೊಮ್ಮೆ ಬನ್ನೇರುಘಟ್ಟದ ಕಾಡಿನ ಹೊರವಲಯದಲ್ಲಿ ಚಾರಣ ಹೋಗಿದ್ದಾಗ, ತಿಳಿನೇರಳೆ ಬಣ್ಣದ ಹೂವಿರೋ ಗಿಡವನ್ನ ನೋಡಿದ್ದೆ; ಆಗ ಭಾವ ಮತ್ತು ಅವರ ‘ನ್ಯಾಚುರಲಿಸ್ಟ್’ ಗೆಳೆಯರು ಹೇಳಿದ್ದು, ಆ ಸಸ್ಯ ಕೂಡ ಅದೇ ಕುಲದ ಮತ್ತೊಂದು ಪ್ರಭೇದ – ‘ಡ್ರಾಸೆರಾ ಇಂಡಿಕಾ’ ಅಂತ. ಇದರಲ್ಲಿ ಕೆಳಗೆ ಕೇಸರಿ ಬಣ್ಣದ ಅಗಲವಾದ ಗುಚ್ಛ ಕಾಣಬರಲಿಲ್ಲ. ಈ ಗಿಡದಲ್ಲಿ ಉದ್ದಕ್ಕೆ ಹಸಿರಾದ ಕಡ್ಡಿಗಳು ಇದ್ವು; ಅವು ಎಲ್ಲೆಲ್ಲೂ ಒಳ್ಳೇ ‘ಜೇಡ’ದ ಕಾಲುಗಳ ಥರಾ ಚಾಚ್ಕೊಂಡಿದ್ವು; ಆ ಕಡ್ಡಿಗಳ ಮೇಲೆ ಪುಟ್ಟ ಪುಟ್ಟ ಕೂದಲಿನ ರೀತಿ ಇತ್ತು; ಆ ಕೂದಲುಗಳ ತುದಿಯಲ್ಲೂ ಕೂಡ, ಈ ಮುಂಚೆ ಹೇಳಿದ್ನಲ್ಲ, ಆ ಥರಾನೇ, ಮಂಜಿನ ಹನಿಯ ಥರಾ ಒಂದೊಂದು ಅಂಟುದ್ರವದ ಹನಿ ಇತ್ತು. ಇಲ್ಲೂ ಕೂಡ ಆ ಮಿರಿಮಿರಿ ಹೊಳೆಯೋ ಹನಿಯ ಆಸೆಗೆ ಹತ್ತಿರ ಬರೋ ಕೀಟಗಳು, ಅಂಟಿಕೊಂಡುಬಿಡತ್ವೆ; ಆಗ ಅವು ಬಿಡಿಸ್ಕೊಳ್ಳೋಕೆ ಹೋಗಿ ಮತ್ತಷ್ಟು ಎಲೆಗಳಿಗೆ, ಕೂದಲಿನಂಥಾ ಎಳೆಗಳಿಗೆ ತಗಲತ್ತೆ, ಮತ್ತಷ್ಟು ಅಂಟಿಕೊಳ್ಳತ್ತೆ; ಇದೆಲ್ಲಾ ಆ ಗಿಡದ ಒಳಗಿನ ನ್ಯೂರೋ ಮೆಕಾನಿಕಲ್ ಪ್ರಕ್ರಿಯೆಗೆ ಚಾಲನೆ ಕೊಡತ್ತೆ ಮತ್ತು ಕೆಲವೇ ಕ್ಷಣಗಳಲ್ಲಿ ಎಲೆಗಳು, ಕಡ್ಡಿಗಳೂ ಸುರುಳಿ ಸುತ್ತುತ್ತಾ, ಇನ್ನೆಂದೂ ತಪ್ಪಿಸಿಕೊಳ್ಳದ ಹಾಗೇ ಆ ಕೀಟಕ್ಕೂ, ಹೊರಜಗತ್ತಿಗೂ ನಡುವೆ ಬಾಗಿಲು ಹಾಕಿಬಿಡುತ್ತೆ” ಎಂದಳು.
ಇದೆಲ್ಲಾ ಮಾತಾಡುತ್ತಿರುವಾಗ, ಬಸ್ ಒಂದು ಹೋಟೆಲಿನ ಹತ್ತಿರ ತಿಂಡಿಗಾಗಿ ನಿಲ್ಲಿಸಿತು. “ಹೊಟ್ಟೆ ಚುರುಗುಟ್’ತೈತೆ! ಇಡ್ಲಿ-ವಡೆ ತಿನ್ನೋ ಹೊತ್ತು” ಅಂತಾ ಡಾ ರಾಜ್ ಅವರ ಹಾಡನ್ನು, ಬದಲಾಯಿಸಿ ಹಾಡುತ್ತಾ, ಅಕ್ಕನ ಜೊತೆಗೆ ಬಸ್ ಇಳಿದಳು ವಿಭಾ. ಡ್ರೈವರ್ ಮಾತಿನಂತೆ ಬೇಗ ಬೇಗ ತಿಂಡಿ ತಿಂದು ಬಂದು, ಮತ್ತೆ ಬಸ್ ಹತ್ತಿ ಕೂತ ಅಕ್ಕ-ತಂಗಿ ಜೋಡಿ, ಒಂದೆರಡು ಫೋನ್ ಮುಗಿಸಿ, ಮತ್ತೆ ಕೀಟಗಳನ್ನು ತಿನ್ನುವ ಸಸ್ಯಗಳ ಬಗ್ಗೆ ಮಾತು ಮುಂದುವರೆಸಿದರು. ಆಗ ವಿಭಾ, “ಅಲ್ಲ ಕಾವ್ಯಕ್ಕಾ, ನಾವೇನೋ ಹಸಿವಾಯ್ತು ಅಂತ ತಿಂಡಿ ತಿಂದ್ವಿ, ಆ ಕೀಟಗಳೂ, ಪಾಪ, ಸಿಹಿಯಾದ ಮಕರಂದಕ್ಕೆ ಆಸೆ ಪಟ್ಟು, ಈ ಕೆ. ಡಿ ಗಿಡಗಳ ಹತ್ರ ಬಂದ್ವು, ಆದ್ರೆ ಈ ವಿಲನ್ ಗಿಡಗಳು ಯಾಕೆ ಆ ಕೀಟಗಳನ್ನ ತಿನ್ನೋದು? ಅವಕ್ಕೆ ಬೇಕಾದ ಊಟವನ್ನ ‘ಬೆಳಕಡುಗೆ’ ಮುಖಾಂತರ ಅವೇ ತಯಾರು ಮಾಡ್ಕೊಳತ್ವೆ ಅಲ್ವಾ?” ಎಂದು ಪ್ರಶ್ನಿಸಿದಳು.
ತಂಗಿಯ ಜಾಣ ಪ್ರಶ್ನೆಯನ್ನು ಮೆಚ್ಚಿಕೊಳ್ಳುತ್ತಾ, ಕಾವ್ಯ “ಹೌದು ವಿಭಾ! ನೀನು ಹೇಳಿದ್ದು ಸರಿಯೇ; ಆದ್ರೆ, ಈ ಡ್ರಾಸೆರಾ ತರಹದ ಗಿಡಗಳು ಬೆಳೆಯೋದು ಸಾಮಾನ್ಯವಾಗಿ ಅಷ್ಟೇನೂ ಫಲವತ್ತಾಗಿರದ ಮಣ್ಣಲ್ಲಿ. ಬಂಡೆಗಳಿರೋ ಭೂಪ್ರದೇಶದಲ್ಲೇ ನಾನಾಗ್ಲೀ, ನಿಮ್ ಭಾವಾ ಆಗ್ಲೀ ಈ ಗಿಡಗಳನ್ನ ನೋಡಿರೋದು. ಅಲ್ಲೆಲ್ಲಾ ಮಣ್ಣಲ್ಲಿ ಕಡಿಮೆ ಪೋಷಕಾಂಶ ಇರತ್ತೆ; ಅದ್ರಲ್ಲೂ ಮುಖ್ಯವಾಗಿ ನೈಟ್ರೊಜನ್ ಹೆಚ್ಚಾಗಿ ಇರಲ್ಲ; ಆದ್ರೆ, ಗಿಡಗಳು ಬೆಳೆಯೋಕೆ ಅದು ಬೇಕೇ ಬೇಕು. ಹಾಗಾಗಿ, ಅವು ಹೀಗೆ ಕೀಟಗಳನ್ನ ಹಿಡಿದು, ನಂತರ ಕೆಲವು ವಿಶೇಷ ಕಿಣ್ವಗಳು, ಅಂದ್ರೆ ‘enzyme’ಗಳನ್ನ ಉತ್ಪಾದನೆ ಮಾಡತ್ವೆ. ಆ ಕಿಣ್ವಗಳನ್ನ ಉಪಯೋಗಿಸಿ, ಈ ಹಿಡಿದಿರೋ ಕೀಟಗಳನ್ನ ಜೀರ್ಣಿಸಿಕೊಂಡು, ಅವುಗಳಿಂದ ತಮಗೆ ಬೇಕಾದ ಪೋಷಕಾಂಶ ಪಡೆಯತ್ವೆ. ಈ ಗಿಡಗಳೂ ಕೂಡ ‘ಫೋಟೋಸಿಂಥೆಸಿಸ್’ ಮೂಲಕ ಸಾಮಾನ್ಯವಾಗಿ ತಮಗೆ ಬೇಕಾದ ‘ಗ್ಲೂಕೋಸ್’ನ ತಯಾರಿ ಮಾಡತ್ವೆ; ಜೊತೆಗೆ ಅವಶ್ಯಕವಾಗಿರೋ ನೈಟ್ರೋಜನ್, ಜೊತೆಗೆ ಬೇರೆ ಖನಿಜಾಂಶಗಳನ್ನ ಹೀಗೂ ಪಡೆಯತ್ವೆ” ಎಂದಳು.
ಮಾತಿನ ಹುಕಿಯಲ್ಲಿದ್ದ ಕಾವ್ಯ, ಬಸ್ಸಿನ ವೇಗದ ಜೊತೆಗೆ ಮಾತಿನ ಓಘವನ್ನೂ ಹೆಚ್ಚಿಸುತ್ತಾ, “ಅಷ್ಟೆ ಅಲ್ಲ ವಿಭಾ, ಎಲ್ಲಾ ಕೀಟಗಳನ್ನ ತಿನ್ನೋ ಗಿಡಗಳೂ, ಇಂತಹ ಬಂಡೆಗಳಿರೋ ಪ್ರದೇಶದಲ್ಲೇ ಇರಲ್ಲ. ಕೆರೆಯ ನೀರಲ್ಲಿ ‘ಬ್ಲಾಡರ್ ವರ್ಟ್’ ಅನ್ನೋ ಗಿಡ ಇರತ್ತೆ; ‘ಯುಟ್ರಿಕುಲೇರಿಯಾ’ ಅನ್ನೋ ಕುಲಕ್ಕೆ ಸೇರಿರೋ ಈ ಗಿಡಗಳು, ‘ಯುರಿನರಿ ಬ್ಲಾಡರ್’ ಥರ, ನೀರು ತುಂಬಿರೋ ಚೀಲಗಳನ್ನ ಹೊಂದಿರತ್ವೆ; ಆ ಚೀಲದೊಳಗೆ, ರಪ್ ಅಂತ ಕೀಟವನ್ನ ಎಳೆದು ನುಂಗಿ, ಬಾಗಿಲು ಮುಚ್ಚಿ, ಕೂಡಿ ಹಾಕುತ್ವೆ.” ಎಂದಳು.
ವಿಭಾಳ ಆಸಕ್ತಿ ನೋಡಿ, ಮತ್ತೂ ಮುಂದುವರೆಸುತ್ತಾ, “ಇನ್ನು ‘ಪಿಚರ್ ಪ್ಲಾಂಟ್’ ಅನ್ನೋ ಗಿಡವಂತೂ ತುಂಬಾ ಫೇಮಸ್! ಗಾಳಿ ಊದೋಕೂ ಮುನ್ನ ಬಲೂನ್ ಇರತ್ತಲ್ಲ? ಅಂಥಾ ಬಲೂನ್ ಥರಾ ಕಾಣೋ ಚೀಲಗಳು, ಜೊತೆಗೊಂದು ಮುಚ್ಚಳ – ಹೀಗಿರುವ ಒಂದು ವಿಶೇಷವಾದ ಅಂಗ ಇರತ್ತೆ ಈ ಗಿಡದಲ್ಲಿ; ಇಂಗ್ಲಿಷಲ್ಲಿ ‘ಪಿಚರ್’ ಅಂದ್ರೆ, ನೀರಿನ ಜಗ್ ಅಂತ ಅರ್ಥ; ಹಾಗೇ ಕಾಣತ್ತೆ ಈ ಕೀಟವನ್ನ ಕ್ಯಾಚ್ ಮಾಡೊ ಅಂಗ. ಜೊತೆಗೆ, ಮತ್ತೊಂದು ಫೇಮಸ್ ಗಿಡ ‘ವೀನಸ್ ಫ್ಲೈ ಟ್ರ್ಯಾಪ್’ ಅಂತ! ಅದು ಕೂಡ, ಪಾಪ ತನ್ನ ಪೋಷಕಾಂಶಕ್ಕಾಗಿ, ಕೀಟಗಳನ್ನ ಹಿಡಿಯೋಕೆ ಅಂತಲೇ ವಿಶೇಷವಾದ ರಚನೆ ಹೊಂದಿರತ್ತೆ; ಅದು ಹೇಗೆ ಕಾಣತ್ತೆ ಗೊತ್ತಾ? ನಾವು ಕರಿಗಡುಬು, ಕರ್ಜಿಕಾಯಿ ಮಾಡೊಕೆ ಒಂದು ರಪ್ ಅಂತ ಮುಚ್ಚಿ-ತೆಗೆಯೋ ಪುಟಾಣಿ ಅಚ್ಚು ಉಪಯೋಗಿಸ್ತೀವಲ್ಲಾ? ಮೋಮೋಸ್ ಮಾಡೋಕೂ ಅಂಥದ್ದೇ ಬಂದಿದೆ ಈಗ. ಅದರೊಳಗೆ ಹಿಟ್ಟು ತುಂಬಿಸಿ, ಮುಚ್ಚಿ ತೆಗೆದರೆ ಕರ್ಜಿಕಾಯಿ ಅಥವಾ ಮೋಮೊಸ್ ಶೇಪಲ್ಲಿ ಹಿಟ್ಟು ಮತ್ತು ಹೂರಣ ತಯಾರಾಗಿರತ್ತೆ ನೋಡು! ಆ ಥರಾನೇ ಕಾಣ್ಸೋ ಅಂಗ ಇರತ್ತೆ ‘ವೀನಸ್ ಫ್ಲೈ ಟ್ರ್ಯಾಪ್’ ಗಿಡದಲ್ಲಿ. ಹೊಟ್ಟೆಪಾಡಿಗಾಗಿ ಪಾಪ ಏನೇನು ವೇಷ ನೋಡು ಇವುಗಳದ್ದು?” ಎನ್ನುತ್ತಾ ನಕ್ಕಳು ಕಾವ್ಯ.

ಆಗ ಇದನ್ನು ಕೇಳಿದ ವಿಭಾ “ಆ ಕೀಟಗಳೂ ಪಾಪ, ಈ ಗಿಡಗಳೂ ಪಾಪ, ಅಲ್ವಾ?” ಎಂದಳು. ಅದಕ್ಕುತ್ತರಿಸುತ್ತಾ ಕಾವ್ಯ “ಹೌದು ಕಣೋ, ಇಲ್ಲಿ ನೀನು ಆಗ್ಲೇ ಹೇಳಿದ ಹಾಗೆ, ಇವು ಭಯಂಕರ ಗಿಡಗಳೂ ಅಲ್ಲ, ಕೆ. ಡಿ ಅಂದ್ರೆ ವಿಲನ್ ಗಿಡಗಳೂ ಅಲ್ಲ. ಈ ಪರಿಸರದಲ್ಲಿ ಒಂದರ ಆಹಾರ ಮತ್ತೊಂದು ಅಷ್ಟೇ! ಈ ಬೃಹತ್ ಆಹಾರ ಜಾಲದ ಒಂದು ಸಣ್ಣ ಕೊಂಡಿ, ನಾವೂ ಕೂಡ. ಅದನ್ನ ಅರ್ಥ ಮಾಡಿಕೊಳ್ದೇ ಮನುಷ್ಯ, ಈ ಆಹಾರ ಜಾಲದ ಬ್ಯಾಲೆನ್ಸ್ ಹಾಳು ಮಾಡೋಕೆ ಹೋದಾಗಲೇ, ಎಲ್ಲಾ ಸಮಸ್ಯೆಗಳೂ ಪ್ರಾರಂಭ ನೋಡು. ಎಂದಳು. ಮಾತಾಡುತ್ತಾ ಬೆಂಗಳೂರು ತಲುಪಿದ್ದೇ ತಿಳಿಯಲಿಲ್ಲ ಇಬ್ಬರಿಗೂ. ಬಸ್ ಇಳಿದು ಮನೆ ಕಡೆ ನಡೆಯುತ್ತಾ, ವಿಭಾಗೆ ಮರುದಿನದ ಶಾಲೆಯ ನೆನಪಾದರೆ, ಕಾವ್ಯಳಿಗೆ ಮರುದಿನದ ‘ಕೆರೆಗಳ ಬಗೆಗಿನ ಸೆಮಿನಾರ್’ನ ನೆನಪಾಯಿತು. ಆಟೋ ಹತ್ತಿ ಮನೆ ಕಡೆ ಹೊರಟ ಅಕ್ಕ-ತಂಗಿಯ ಸವಾರಿಯನ್ನು ಪ್ರೀತಿಯಿಂದ ನೋಡುತ್ತಿದ್ದವು, ಇಡೀ ಬೆಂಗಳೂರನ್ನೇ ಸಿಂಗರಿಸಿದ್ದ ತೆಳುಗುಲಾಬಿ ಬಣ್ಣದ ತಬೇಬುಯಾ ಹೂವಿನ ಸುಂದರ ಮರಗಳು.
(ಹಿಂದಿನ ಕಂತು: ಕವಾಟದಾಟ)
ಕ್ಷಮಾ ಸೂಕ್ಷ್ಮಾಣುಜೀವಿ ವಿಜ್ಞಾನದಲ್ಲಿ ಎಂ.ಎಸ್.ಸಿ ಪದವೀಧರೆ. ವಿಜ್ಞಾನ ಶಿಕ್ಷಕಿ. ವಿಜ್ಞಾನ ಲೇಖನಗಳ ಲೇಖಕಿ ಮತ್ತು ಅನುವಾದಕಿ. ರಿಸರ್ಚ್ ಮ್ಯಾಟರ್ಸ್ ನಲ್ಲಿ ವಿಜ್ಞಾನ ಲೇಖನಗಳ ಕನ್ನಡ ವಿಭಾಗದಲ್ಲಿ ಸಂಪಾದಕಿಯೂ ಆಗಿರುವ ಇವರು ಗಾಯಕಿಯೂ, ಕಂಠದಾನ ಕಲಾವಿದೆಯೂ ಹೌದು.


ಇದರಲ್ಲಿನ ಬಹಳಷ್ಟು ವಿಷಯಗಳು ದೊಡ್ಡವರಿಗೂ ಗೊತ್ತಿರುವುದಿಲ್ಲಾ, ನನಗೂ! ಸರಳ ಭಾಷೆಯಲ್ಲಿ ವಿಜ್ಞಾನವನ್ನು ವಿವರಿಸಿರುವ ರೀತಿ ಅನನ್ಯ. ಹೈಸ್ಕೂಲ್ ಮಕ್ಕಳ ಪಠ್ಯದಲ್ಲಿ ಇಂತಹ ವಿಷಯಗಳ ಅಳವಡಿಕೆ ಅವಶ್ಯ.