ಕಳೆದ ಮೂರ್ನಾಲ್ಕು ವಾರಗಳಿಂದ ಇಲ್ಲಿನ ಎಲ್ಲ ಸುದ್ದಿ ವಾಹಿನಿಗಳ ಮೂಲಕ ಆಡಳಿತದ ಅತ್ಯಂತ ಜವಾಬ್ದಾರಿಯುತ ಕುರ್ಚಿಯಲ್ಲಿ ಕೂರುವವರು ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರರು ನಿತ್ಯವೂ ಎಚ್ಚರಿಕೆಯ ಮುಂಜಾಗರೂಕತಾ ಕ್ರಮಗಳ ಬಗೆಗೆ ನೀಡುತ್ತಿದ್ದ ಸಂದೇಶ ಹಾಗು ಹದಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ, ನಿರುದ್ಯೋಗ ಪೀಡಿತರಿಗೆ ತಾತ್ಕಾಲಿಕ ಬೆಂಬಲ ಯೋಜನೆಗಳ ಬಗ್ಗೆ ಹಣಕಾಸು ಮಂತ್ರಾಲಯ ತೆಗೆದುಕೊಂಡ ಹೆಜ್ಜೆಗಳೇ ಪ್ರಧಾನಿಗಳ ಪತ್ರದಲ್ಲಿ ಪುನರುಚ್ಛರಿಸಲ್ಪಟ್ಟ ವಿಷಯಗಳು. ಇಷ್ಟು ವಿಚಾರಗಳನ್ನು ಹೀಗೊಂದು ಪತ್ರ ಬರೆದು ದೇಶದ ಮೂರು ಕೋಟಿ ಮನೆಗಳಿಗೆ ಮುಟ್ಟಿಸುವುದರ ಬಗೆಗೆ ವಿರೋಧ ವ್ಯಂಗ್ಯಗಳೂ ಸಹಜವಾಗಿಯೇ ಇದ್ದವು, ಪ್ರಶ್ನೆ ಪ್ರತಿಭಟನೆಗಳನ್ನು ಸ್ವೀಕರಿಸುವ ಈ ದೇಶದ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿ.
ಯೋಗೀಂದ್ರ ಮರವಂತೆ ಬರೆಯುವ ಇಂಗ್ಲೆಂಡ್ ಲೆಟರ್
ವಿಷಯ ಎಲ್ಲರಿಗೂ ಗೊತ್ತಿರುವಂತಹದ್ದೇ, ಮತ್ತೆ ಗೊತ್ತಿಲ್ಲದವರೂ ಈ ಕಾಲದಲ್ಲಿ ಮಾತನಾಡುತ್ತಿರುವಂತಹದ್ದೇ. ಈ ವಿಷಯದ ಬಗ್ಗೆ ಏನು ಬರೆದರೂ ಅದು ಹೊಸತೇನೋ ಆಗಲಿಕ್ಕಿಲ್ಲ. ಪತ್ರಿಕೆ, ಮಾಧ್ಯಮ, ವಾಟ್ಸಾಪ್, ಮನೆ, ಕಚೇರಿ, ಊಟದ ಹೊತ್ತು ಟಿವಿಯ ಸುತ್ತು ಬೆಳಿಗ್ಗೆ ಎದ್ದಕೂಡಲೇ ರಾತ್ರಿ ಬಿದ್ದುಕೊಳ್ಳುವ ಮೊದಲು ಹೀಗೆ ಎಲ್ಲೆಲ್ಲೂ ಎಷ್ಟೊತ್ತಿಗೂ ವಿಚಾರವಂತೂ ಇದೇ. ಹುಟ್ಟು ಸಾವುಗಳಷ್ಟೇ, ಪ್ರೇಮ ಕಾಮ ಸರಸ ವಿರಸಗಳಂತೆಯೇ, ಸ್ವಾರ್ಥ ಕಪಟ ಬೂಟಾಟಿಕೆಗಳ ಹಾಗೆಯೇ ಸಹಜ ಸರ್ವ್ಯವ್ಯಾಪಿ ಇದೀಗ ಈ ವೈರಾಣು. ಹೀಗೊಂದು ಸರ್ವಶಕ್ತ ಕ್ರಿಮಿ ಜಗತ್ತಿನ ಆಗುಹೋಗುಗಳನ್ನು ಹೌದು-ಅಲ್ಲಗಳನ್ನು ನಿರ್ಧರಿಸುತ್ತಿರುವಾಗ ಬದಲಾಯಿಸುತ್ತಿರುವಾಗ “ಯುನೈಟೆಡ್ ಕಿಂಗ್ಡಮ್” ಎಂದು ಪರಿಚಿತವಾಗಿರುವ ದೇಶದ ಈ ಎರಡು ಪತ್ರಗಳ ಬಗ್ಗೆ ಹೇಳಲೇಬೇಕು.
ಹಾಳೆಯಲ್ಲಿ ಯಾರು ಬರೆದರೂ ಏನು ಹೇಗೆ ಯಾರಿಗೆ ಬರೆದರೂ ಅದನ್ನು ಪತ್ರವೇ ಅನ್ನಬಹುದುದೇನೋ. ಈ ಪತ್ರ ಎನ್ನುವ ಪದ ಎಂದು ನನಗೆ ಎಂದು ಪರಿಚಯವಾಯ್ತೋ ಗೊತ್ತಿಲ್ಲ. ಮರವಂತೆಯ ಬಾಲ್ಯಲೋಕದಲ್ಲಿ ಅಂಚೆಯವರು ಬಂದು “ಕಾಗದ ಬಂದಿದೆ” ಎಂದು ಕೊಟ್ಟು ಹೋಗುವುದಿತ್ತು; ಕಾಗದದಲ್ಲಿ ಬರೆದು ಕಳುಹಿಸುವುದೇ “ಕಾಗದ ಬರೆಯುವುದೂ” ಆಗಿತ್ತು. ಬಿಡಿ, ಈ ಕಾಲದಲ್ಲಿ ಪತ್ರಗಳನ್ನು ಹಾಳೆಯಲ್ಲೇ ಬರೆಯಬೇಕಾಗಿಲ್ಲ. ವೈಯಕ್ತಿಕವಾಗಿ ಯಾರನ್ನೋ ತಲುಪಿ ಅವರಿಗೆ ಮಾತ್ರ ಸೇರಬೇಕಾದ ಕೆಲವು ಕಾಗದ ಆಧಾರಿತ ಪತ್ರಗಳು ಲಕೋಟೆಯೊಳಗೆ ಬಂಧಿಯಾಗಿ ಕೈಸೇರಬಹುದು ಅಥವಾ ಪಾಸ್ ವರ್ಡುಗಳ ಕೋಟೆಕೊತ್ತಲ ಭೇದಿಸಿ ಓದುವ ಈ-ಮೈಲು ಮೂಲಕವೂ ಗುಟ್ಟಾಗಿ ತಲುಪಬಹುದು. ಪತ್ರದಂತಹ ಸಂದೇಶಗಳು ಮೊಬೈಲ್ ಫೋನ್ ಮುಖೇನವೂ ಆಚೀಚಾಗಬಹುದು. ಇನ್ನು ಎಲ್ಲರಿಗೂ ಗೊತ್ತಾಗುವಂತೆ ಖುಲ್ಲಂಖುಲ್ಲಾ ಕಾಗದ ಬರೆಯುವ ಅನಿವಾರ್ಯತೆಯೂ ಕೆಲವೊಮ್ಮೆ ಇರುತ್ತದೆ.
ಯಾವುದೊ ಸಾರ್ವಜನಿಕ ಸಮಸ್ಯೆಯ ಸಂಗತಿಯ ಬಗ್ಗೆ ಎಲ್ಲರ ಗಮನ ಸೆಳೆಯಬೇಕಾದಾಗ ಆಡಳಿತಕ್ಕೋ ಅಧಿಕಾರಿಗಳಿಗೋ ಒಂದು “ತೆರೆದ ಪತ್ರ” ಅಂತ ಪತ್ರಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಬರೆಯುವ ಕ್ರಮವೂ ಇದೆಯಲ್ಲ. ಹೀಗೆ ಪತ್ರಗಳ ಘನಸಂತತಿಯಲ್ಲಿ ಒಂದು ಬಗೆಯದು, ಈ ವೈರಾಣು ನಮ್ಮ ಮೈಮನಸ್ಸುಗಳನ್ನು ಹಿಂಸಿಸಿ ಪೀಡಿಸಿ ಕಾಡಿಸುವ ಕಾಲಕ್ಕೆ, ಕಳೆದ ವಾರ ಮುಚ್ಚಿದ ಲಕೋಟೆಯಲ್ಲಿ ಈ ದೇಶದ ಮನೆಮನೆಗಳಿಗೆ ಬಂದು ಬಿತ್ತು. ಇಲ್ಲಿರುವ ಮನೆಗಳೆಷ್ಟು ಎಂದು ಕುತೂಹಲ ಕೆದಕುವ ಮುನ್ನ ತಿಳಿಸಿಬಿಡುತ್ತೇನೆ, ಆರುಮುಕ್ಕಾಲು ಕೋಟಿ ಜನರಿರುವ ಯು.ಕೆ ಎಂಬೋ ಈ ತುಂಡು ಭೂಮಿಯಲ್ಲಿ ಸುಮಾರು ಮೂರು ಕೋಟಿ ಮನೆಗಳಿವೆ. ಮತ್ತೆ ಪ್ರತಿ ಮನೆಗೂ ಅಂಚೆಯ ಮೂಲಕ ಶುದ್ಧ ಇಂಗ್ಲಿಷ್ ಸಂಪ್ರದಾಯಸ್ಥ ಶೈಲಿಯ ಒಂದೊಂದು ಪತ್ರ; ಉಲ್ಲೇಖಿಸಿದ ಎರಡು ಪತ್ರಗಳಲ್ಲಿ ಇದು ಮೊದಲ ಪತ್ರ, ಪ್ರಧಾನಿಗಳ ಬಿಡದಿಯಿಂದ ನಮ್ಮಗಳ ಮನೆಗೆ ಹೊರಟದ್ದು. ದೇಶದ ಎಲ್ಲ ಮನೆಗಳನ್ನೂ ಹೊಕ್ಕಿ ಆಪ್ತವಾಗಿ ಮಾತಾಡಬೇಕು ಎಂದುಕೊಂಡಾಗ ಅಥವಾ ಯಾವುದೊ ವಿಷಯವನ್ನು ಪತ್ರಮುಖೇನವೂ ಪುನರುಚ್ಛರಿಸಬೇಕು ಎಂದಾದಾಗ ಹೀಗೆ ಅಂಚೆಯಲ್ಲಿ ಪ್ರಜೆಗಳ ಮನೆಗೆ ಪತ್ರ ರವಾನಿಸಿದ ಉದಾಹರಣೆ ಹಿಂದೆಯೂ ಇತ್ತು.
ಪ್ರಧಾನಿಗಳ ಈ ಮುಚ್ಚಿದ ಲಕೋಟೆಯ ಪತ್ರ ನಮ್ಮ ಮನೆ ಸೇರಿದ ಸಮಯಕ್ಕಿಂತ ಮೂರ್ನಾಲ್ಕು ವಾರ ಮೊದಲು, ಮಾರ್ಚ್ ತಿಂಗಳಿನಲ್ಲಿ ಇಲ್ಲಿನ ವೈದ್ಯರೊಬ್ಬರು ಒಂದು ಪತ್ರವನ್ನು ಬಟ್ಟಂಬಯಲಿನಂತಹ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದರು, ಇದು ಎರಡನೆಯ ಪತ್ರ. ಹಾಳೆಯ ಮೇಲೆ ಪ್ರಧಾನಿಯ ಪತ್ರ ಯು.ಕೆ. ಯ ಪ್ರತಿ ಮನೆಯ ಸದಸ್ಯರನ್ನು ಉದ್ದೇಶವಾಗಿಟ್ಟುಕೊಂಡು ರಚಿಸಿದ್ದು; ಮತ್ತೆ ವೈದ್ಯರು ಫೇಸ್ ಬುಕ್ ತಾಣದಲ್ಲಿ ಬರೆದ ಪತ್ರ ಪ್ರಧಾನಿಗಳನ್ನೇ ಗುರಿಯಾಗಿಸಿ ಒಕ್ಕಣಿಸಿದ್ದು. ಮನುಷ್ಯರಿಗೆ ಅತಿ ಪ್ರಿಯವಾದ ಜಾತಿ ಮತ ಪಂಗಡ ನಂಬುಗೆಗಳ ಆಧಾರದಲ್ಲಿ ಇವೆರಡೂ ಕೂಡ ಬೇರೆಬೇರೆ ಬಗೆಯ ಪತ್ರಗಳು ಎಂದು ಕೆಲವರು ವಾದಿಸಬಹುದು. ಬಗೆ ಯಾವುದೇ ಇದ್ದರೂ ಯಾರು ಹೇಗೇ ತಿಳಿದರೂ ಇವೆರಡೂ ಕೂಡ ಹೇಳಿಕೇಳಿ ಪತ್ರಗಳೇ. ಒಂದು ಪತ್ರ ಭೌತಿಕವಾಗಿ ಚಲಿಸುತ್ತ ತಲುಪಿದ್ದು, ಇನ್ನೊಂದು ಆಧುನಿಕ ಯುಗದ ರಿವಾಜಿನಂತೆ ಬರೆದು “ಪೋಸ್ಟ್” ಎನ್ನುವ ಬಟನ್ ಒತ್ತಿದ ಕ್ಷಣ ಪ್ರಧಾನಿ ನಿವಾಸವೂ ಸೇರಿದಂತೆ ಯಾರಿಗೂ ಎಲ್ಲರಿಗೂ ಕಾಣುವಂತೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗಿದ್ದು.
ಅಂತೂ ಇದೀಗ ಎರಡೂ ಪತ್ರಗಳೊಳಗಿನ ವಿಷಯಗಳೂ ಎಲ್ಲೆಲ್ಲಿ ತಲುಪಬೇಕೋ ಅಲ್ಲಲ್ಲಿಗೆ ತಲುಪಿದ್ದೂ ಆಗಿಹೋಗಿದೆ. ಬಹುಶ ಪತ್ರ ಬರೆದ ಸಮಯದಲ್ಲೇ ಕೊರೊನ ಬಾಧೆಯಿಂದ ಆಸ್ಪತ್ರೆಯ ಒಳಹೋದ ಪ್ರಧಾನಿಗಳು ಮನೆಮನೆಗೆ ಅವರ ಕಾಗದ ಮುಟ್ಟಿದ ಕೆಲ ದಿನಗಳಲ್ಲಿ ಸುಧಾರಿಸಿಕೊಂಡು ತನ್ನನ್ನು ಬದುಕಿಸಿದ ಈ ದೇಶದ ಆರೋಗ್ಯ ವ್ಯವಸ್ಥೆ ಮತ್ತು ಅದರ ಸಿಬ್ಬಂದಿಗಳನ್ನು ಸ್ಮರಿಸುತ್ತ ನೆನೆಯುತ್ತ ಗುಣಮುಖರಾಗಿ ಹೊರಬಂದರು. ಮತ್ತೆ ಪ್ರಧಾನಿಗೆ ಫೇಸ್ ಬುಕ್ ಮುಖಾಂತರ ಪತ್ರ ಬರೆದಿದ್ದ ವೈದ್ಯರು ಅಂತಹದೇ ವೈರಾಣುವಿನ ದಾಳಿಯಲ್ಲಿ ವಾರದ ಹಿಂದೆ ಮೃತರಾದರು.
ಬಿಳಿ ಕವರಿನ ಹೊರಗೆ “ಯು.ಕೆ. ಸರಕಾರದ್ದು” ಹಾಗು “ಕೊರೊನವೈರಾಣುವಿನ ಬಗ್ಗೆ ಇದರಲ್ಲಿ ಅತಿ ಮುಖ್ಯ ವಿಷಯವಿದೆ” ಎಂದು ದಪ್ಪ ಕಪ್ಪು ಅಕ್ಷರಗಳಲ್ಲಿ ಅಚ್ಚುಹಾಕಿಸಿಕೊಂಡು ಒಳಗೆ ಭದ್ರವಾಗಿ ಕುಳಿತು ಮನೆಮನೆ ತಲುಪಿದ ಪ್ರಧಾನಿಯ ಪತ್ರದೊಳಗಿನ ವಿಷಯ ಯಾರೂ ಊಹಿಸುವಂತಹದ್ದೇ. ಕಳೆದ ಮೂರ್ನಾಲ್ಕು ವಾರಗಳಿಂದ ಇಲ್ಲಿನ ಎಲ್ಲ ಸುದ್ದಿ ವಾಹಿನಿಗಳ ಮೂಲಕ ಆಡಳಿತದ ಅತ್ಯಂತ ಜವಾಬ್ದಾರಿಯುತ ಕುರ್ಚಿಯಲ್ಲಿ ಕೂರುವವರು ಆರೋಗ್ಯ ಇಲಾಖೆಯ ಹಿರಿಯ ಸಲಹೆಗಾರರು ನಿತ್ಯವೂ ಎಚ್ಚರಿಕೆಯ ಮುಂಜಾಗರೂಕತಾ ಕ್ರಮಗಳ ಬಗೆಗೆ ನೀಡುತ್ತಿದ್ದ ಸಂದೇಶ ಹಾಗು ಹದಗೆಟ್ಟ ಅರ್ಥವ್ಯವಸ್ಥೆಗೆ ಚೇತರಿಕೆ, ನಿರುದ್ಯೋಗ ಪೀಡಿತರಿಗೆ ತಾತ್ಕಾಲಿಕ ಬೆಂಬಲ ಯೋಜನೆಗಳ ಬಗ್ಗೆ ಹಣಕಾಸು ಮಂತ್ರಾಲಯ ತೆಗೆದುಕೊಂಡ ಹೆಜ್ಜೆಗಳೇ ಪ್ರಧಾನಿಗಳ ಪತ್ರದಲ್ಲಿ ಪುನರುಚ್ಛರಿಸಲ್ಪಟ್ಟ ವಿಷಯಗಳು.
ಇಷ್ಟು ವಿಚಾರಗಳನ್ನು ಹೀಗೊಂದು ಪತ್ರ ಬರೆದು ದೇಶದ ಮೂರು ಕೋಟಿ ಮನೆಗಳಿಗೆ ಮುಟ್ಟಿಸುವುದರ ಬಗೆಗೆ ವಿರೋಧ ವ್ಯಂಗ್ಯಗಳೂ ಸಹಜವಾಗಿಯೇ ಇದ್ದವು, ಪ್ರಶ್ನೆ ಪ್ರತಿಭಟನೆಗಳನ್ನು ಸ್ವೀಕರಿಸುವ ಈ ದೇಶದ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿ. ದೇಶ ಜನರ ಆರ್ಥಿಕ ಮುಗ್ಗಟ್ಟಿನ ಈ ಕಾಲದಲ್ಲಿ ಹೊಸತಲ್ಲದ ಮತ್ತು ಯಾವ ದೊಡ್ಡ ಪರಿಣಾಮವನ್ನೂ ಬೀರದ ಇಂತಹ ಪತ್ರಪ್ರಯತ್ನದಲ್ಲಿ ಸುಮಾರು ಆರು ಮಿಲಿಯನ್ ಪೌಂಡ್ ಗಳು ಖರ್ಚಾಗುತ್ತಿದೆಯಲ್ಲ ಎಂದು ಆಡಳಿತ ಪಕ್ಷದ ನಡೆಯನ್ನು ಟೀಕಿಸುವವರು ಕೇಳಿದರು ಜರೆದರು. ಕೊರೊನವೈರಾಣು ಚೈನಾದಿಂದ ದಿಕ್ಕುದೆಸೆಗಳಿಗೆ ಹೇಗೆ ಹೊರಟಿದೆ ಯಾಕೆ ಹರಡುತ್ತಿದೆ ಅಂತ ಗೊತ್ತಾದ ಮೇಲೆ ಮನೆಯಲ್ಲೇ ಇರಬೇಕಾದ ಅಗತ್ಯತೆ, ಒಂದು ವೇಳೆ ಹೊರಗೆ ಬರಲೇಬೇಕಿದ್ದರೆ ಸೂಕ್ತ ಸಾಮಾಜಿಕ ಅಂತರ ಇಡಬೇಕಾದ ಎಚ್ಚರಿಕೆ, ಹೊರಗಡೆ ತಿರುಗಿದರೆ ಸೋಂಕು ತಗಲುವ ಸಾಧ್ಯತೆ, ಅಪಾರ ಸಂಖ್ಯೆಯಲ್ಲಿ ಜನರು ಪೀಡಿತರಾದರೆ ಅವರನ್ನೆಲ್ಲ ಏಕಕಾಲಕ್ಕೆ ಶುಶ್ರೂಷೆ ಮಾಡಲು ಇಲ್ಲಿನ ಆಸ್ಪತ್ರೆ ವೈದ್ಯರು ಸಿಬ್ಬಂದಿಗಳು ಕಷ್ಟ ಪಡಬೇಕಾಗುವುದು ಇತ್ಯಾದಿ ಇತ್ಯಾದಿಗಳು ಮತ್ತೆಮತ್ತೆ ಅಧೀಕೃತ ಸುದ್ದಿ ಮಾರ್ಗಗಳ ಮೂಲಕ ಜನರನ್ನು ಮುಟ್ಟುತ್ತಲೇ ಇರುವಾಗ ಇಂತಹ ದುಬಾರಿ ಪತ್ರವ್ಯವಹಾರದ ಅಗತ್ಯ ಇತ್ತೇ ಎನ್ನುವುದು ಟೀಕಿಸುವವರ ನಿಲುವು.
ದೇಶದ ಎಲ್ಲ ಮನೆಗಳನ್ನೂ ಹೊಕ್ಕಿ ಆಪ್ತವಾಗಿ ಮಾತಾಡಬೇಕು ಎಂದುಕೊಂಡಾಗ ಅಥವಾ ಯಾವುದೊ ವಿಷಯವನ್ನು ಪತ್ರಮುಖೇನವೂ ಪುನರುಚ್ಛರಿಸಬೇಕು ಎಂದಾದಾಗ ಹೀಗೆ ಅಂಚೆಯಲ್ಲಿ ಪ್ರಜೆಗಳ ಮನೆಗೆ ಪತ್ರ ರವಾನಿಸಿದ ಉದಾಹರಣೆ ಹಿಂದೆಯೂ ಇತ್ತು.
ಸುದ್ದಿ ಮಾಧ್ಯಮಗಳಲ್ಲಿ ಎಷ್ಟು ಹೇಳಿದರೂ ಒಂದಷ್ಟು ಜನರು ಈ ವೈರಾಣುವಿಗೂ ತಮಗೂ ನೆರೆಹೊರೆಗೂ ಸಾಮಾಜಿಕ ಸ್ವಾಸ್ಥ್ಯಕ್ಕೂ ಯಾವುದೇ ನಂಟಿಲ್ಲ ಎಂದು ಒಳ್ಳೆಯ ಬಿಸಿಲು ಬಂದ ದಿನ ಸಮುದ್ರ ಬದಿಗೋ ಪಾರ್ಕಿಗೋ ಹೋಗಿದ್ದು ಹೋಗುವುದು ನಡೆಯುತ್ತಲೇ ಇರುವಾಗ ಎಚ್ಚರಿಕೆಯ ಪುನರುಚ್ಚರಿಕೆ ಮನೆಮನೆಗಳನ್ನು ಆಪ್ತವಾಗಿ ತಲುಪಿದರೆ ಅಪೇಕ್ಷಿತ ಪರಿಣಾಮ ಆಗಬಹುದೇನೋ ವಿರೋಧಕ್ಕೆ ವಿರೋಧದ ಅಭಿಪ್ರಾಯ. ಪ್ರಧಾನಿಗಳ ಪತ್ರದ ಬಗೆಗಿನ ವಾದವಿವಾದಗಳೇನಿದ್ದರೂ ಇಲ್ಲಿನ ಬಹುತೇಕ ಜನರು ಮನೆಯೊಳಗಿರುವ ಮತ್ತೆ ದೈನಂದಿನ ವ್ಯಾಯಾಮಕ್ಕೋ ಅತಿಅಗತ್ಯದ ದಿನಸೀ ಖರೀದಿಗೂ ಹೊರಹೋಗುವುದಾದರೆ ನಿರ್ದೇಶಿತ ಸೂಕ್ತ ಅಂತರವನ್ನು ಕಾಪಾಡುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಜಗತ್ತನ್ನು ಕಾಡುತ್ತಿರುವ ಕೋವಿಡ್ ತಮಗೇನೂ ಮಾಡಲಿಕ್ಕಿಲ್ಲ ಎನ್ನುವ ಅಜ್ಞಾನದಲ್ಲೋ ಭಂಡ ಧೈರ್ಯದಲ್ಲೋ ಕೆಲವರು ವಾರಾಂತ್ಯಕ್ಕೆ ಬೆಚ್ಚಗಿನ ಬಿಸಿಲಲ್ಲಿ ಹೊರಗೆ ನಿರ್ಭೀತಿಯಿಂದ ತಿರುಗಾಡುತ್ತಲೂ ಇದ್ದಾರೆ, ಸುತ್ತಲಿನ ಸಮುದಾಯವನ್ನು ಅಪಾಯಕ್ಕೂ ಒಡ್ಡುತ್ತಿದ್ದಾರೆ.
ದೇಶದ ಜನರನ್ನು ಜಾಗೃತಗೊಳಿಸಲು ಇಲ್ಲಿನ ಆಡಳಿತವು ತಿಳಿಹೇಳುವಿಕೆಯ ಪ್ರತಿ ಮಾರ್ಗವನ್ನೂ ಬಳಸುತ್ತಿರುವಾಗಾಲೇ ಅದೇ ಆಡಳಿತ ವರ್ಗದವರು ಅಧಿಕಾರಗಳು ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಮೂಲಭೂತ ಮಹತ್ವದ ವಿಷಯಗಳ ಕುರಿತಾಗಿ ಎಚ್ಚರಿಸಲು ವೈದ್ಯರಾದ ಡಾ. ಅಬ್ದುಲ್ ಚೌಧರಿ ಫೇಸ್ಬುಕ್ ನಲ್ಲಿ ತಿಂಗಳ ಹಿಂದೆ ಬರೆದದ್ದು. ಪ್ರಧಾನಿ ಬೋರಿಸ್ ಜಾನ್ಸನ್ ರನ್ನು ಉದ್ದೇಶಿಸಿ ಬರೆದ ಆ ಪತ್ರ, ದೊಡ್ಡ ಪ್ರಮಾಣದ ಸಾಂಕ್ರಾಮಿಕ ಕಾಯಿಲೆಯನ್ನು ಮುನ್ನೆಲೆಯಲ್ಲಿ ನಿಂತು ಎದುರಿಸಬೇಕಾದ ಯು.ಕೆ. ಯ ಬಹುತೇಕ ವೈದ್ಯರ ಬಳಿ ಸೂಕ್ತ ಸುರಕ್ಷಾ ಉಡುಪುಗಳು ಸಲಕರಣೆಗಳು ಇರದಿರುವುದು ಮತ್ತೆ ತುರ್ತಾಗಿ ಪಿ.ಪಿ.ಇ ಗಳು (Personal Protection Equipment) ದೊರೆಯದಿದ್ದರೆ ಕೋವಿಡ್ ಪೀಡಿತರನ್ನು ಪರೀಕ್ಷಿಸುವ ಕಾರಣದಿಂದಲೋ ಅಥವಾ ಅಂತಹ ಪೀಡಿತರು ಇನ್ಯಾವುದೋ ಕಾರಣಕ್ಕೊ ಆಸ್ಪತ್ರೆಗೆ ಬಂದದ್ದರಿಂದಲೋ ಸಂಪರ್ಕಿಸುವ ಆರೋಗ್ಯ ವ್ಯವಸ್ಥೆಯ ಸಿಬ್ಬಂದಿಗಳೇ ಸೋಂಕಿಗೆ ಬಲಿಯಬೇಕಾಗುವುದು, ಎಲ್ಲರಂತೆಯೇ ಸುರಕ್ಷತೆ ತಮ್ಮ ಹಕ್ಕು ಕೂಡ ಎಂದು ಎಚ್ಚರಿಸುವ ಯತ್ನವಾಗಿತ್ತು ಅದು. ಫೇಸ್ಬುಕ್ ಪತ್ರದಲ್ಲಿ ತಾವೇ ವ್ಯಕ್ತಪಡಿಸಿದಂತೆ ಪಿ.ಪಿ.ಇ ಗಳ ಕೊರತೆಯಿಂದಾಗಿಯೇ ಮುಂದೆ ಡಾ. ಅಬ್ದುಲ್ ಚೌಧರಿ ಸೋಂಕಿತರಾಗಿದ್ದು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದೂ ಮೃತರಾಗಿದ್ದು ಯು.ಕೆ.ಯ ಕೊರೊನ ಕಾಲದ ಸಹಸ್ರಾರು ದುರಂತ ಅವಸಾನಗಳಲ್ಲಿ ಒಂದು. ಭಾರತ ಶ್ರೀಲಂಕಾ ಬಾಂಗ್ಲಾ ಸುಡಾನ್ ಇತರ ದೇಶಗಳಿಂದ ವಲಸೆ ಬಂದು ವೈದ್ಯಕೀಯ ಸೇವೆ ಸಲ್ಲಿಸುತ್ತಾ ಕೋವಿಡ್ ಪೀಡಿತರಾಗಿ ಮರಣಹೊಂದಿದವರ ಪಟ್ಟಿಯಲ್ಲಿ ಡಾ. ಚೌಧರಿ ಕೂಡ ಇದೀಗ ಸೇರಿಕೊಂಡಿದ್ದಾರೆ.
ಪಿ.ಪಿ.ಇ ಗಳ ಕೊರತೆಯ ಬಗ್ಗೆ ಆರೋಗ್ಯ ವ್ಯವಸ್ಥೆಯ ಹಲವು ಸಿಬ್ಬಂದಿಗಳು ಬೇರೆಬೇರೆ ವೇದಿಕೆಗಳಲ್ಲಿ ಎಚ್ಚರಿಸುತ್ತಲೇ ಬಂದಿದ್ದರೂ ಡಾ. ಅಬ್ದುಲ್ ಚೌಧರಿಯವರು ಪ್ರಧಾನಿಗೆ ಬರೆದ ಪತ್ರ ವೈದ್ಯಕೀಯ ವ್ಯವಸ್ಥೆಯ ಕಳಕಳಿ ತಳಮಳ ಅಸಹಾಯಕತೆಗಳ ಅಭಿವ್ಯಕ್ತಿಯ ಸಂಕೇತ ಮತ್ತು ಪ್ರತಿನಿಧಿಯಾಗಿತ್ತು. ಪ್ರಧಾನಿಗಳ ಕಾಗದ ಆಡಳಿತ ಮತ್ತು ಪ್ರಜೆಗಳ ನಡುವೆ ನೂತನ ಸಂವಹನವನ್ನೋ ಯಾವುದೇ ಹೊಸ ಪರಿಣಾಮವನ್ನೋ ಉಂಟುಮಾಡುವಲ್ಲಿ ಸೋತಂತೆ, ವೈದ್ಯರ ಪತ್ರವೂ ಗಂಭೀರ ಸೂಚನೆ ಕೋರಿಕೆಗಳನ್ನು ಮಾಡಿಯೂ ಇಲ್ಲಿನ ಅಧಿಕಾರ ಹಾಗು ಆಡಳಿತದ ಸಮರ್ಪಕ ಸ್ಪಂದನ ಕ್ರೀಯಾಶೀಲತೆ ಸಿಗದೇ ಸೋತಿದೆ, ಪರಿಣಾಮವಾಗಿ ದೇಶದ ಆರೋಗ್ಯ ವ್ಯವಸ್ಥೆ ಜನಸಾಮಾನ್ಯರು ನಿತ್ಯವೂ ಅಪಾಯದಲ್ಲಿದ್ದಾರೆ.
ಇರುವ ಅಲ್ಪ ಸಮಯದಲ್ಲಿ ಕೋವಿಡ್ ಜೊತೆಗೆ ಸೆಣಸಲು ಬೇಕಾದ ಅತ್ಯಾವಶ್ಯಕ ವಸ್ತುಗಳಾದ ಪರೀಕ್ಷಾ ಕಿಟ್ ಗಳು, ಸುರಕ್ಷಾ ಸಲಕರಣೆಗಳು ಲಭ್ಯವಾಗದೇ ಹಲವು ವೈದ್ಯರು ನರ್ಸ್ ಸಿಬ್ಬಂದಿಗಳು ಸೋಂಕಿತರಾಗುತ್ತಿರುವುದು ಮತ್ತೆ ಕೆಲವರು ಮೃತರಾಗುತ್ತಿರುವುದು ಮತ್ತೆ ಮತ್ತೆ ಸುದ್ದಿಯಾಗುತ್ತಲೇ ಇವೆ.
ಆಸ್ಪತ್ರೆಯಲ್ಲಿ ದಿನವೂ ನೂರುಗಟ್ಟಲೆ ಜನರು ಅಸುನೀಗುವುದೂ ಅಂದಿನ ಮೃತರ ಸಂಖ್ಯೆಯನ್ನು ಸಂಬಂಧಪಟ್ಟ ಮಂತ್ರಿಗಳು ದೂರದರ್ಶನದಲ್ಲಿ ನಿನ್ನೆಯಂತೆ ಇಂದೂ ಅಷ್ಟೇ ವಿಷಾದದಲ್ಲಿ ಓದಿ ಹೇಳುವುದೂ, ಅಗತ್ಯವಾದ ಟೆಸ್ಟ್ ಕಿಟ್ ಗಳು ಸುರಕ್ಷಾ ಸಲಕರಣೆಗಳು ಎಲ್ಲಿ ತಲುಪಬೇಕೋ ಅಲ್ಲಿ ಇನ್ನೇನು ಬಹುತೇಕ ಮುಟ್ಟಿವೆ, ಸದ್ಯದಲ್ಲಿಯೇ ತಲುಪಲಿವೆ ಎನ್ನುವ ವಚನಗಳು ಈಗ ಸಾಮಾನ್ಯವಾಗಿವೆ.
ಇನ್ನು ಇಲ್ಲಿನ ಆಸ್ಪತ್ರೆಗಳ ಹೊರಗೆ, ಮನೆಗಳಲ್ಲಿ ವೃದ್ಧಾಶ್ರಮಗಳಲ್ಲಿ ಸೋಂಕಿನಿಂದ ಮಡಿದವರ ಲೆಕ್ಕ ಖುಲಾಸೆಯೇ ಆಗಿಲ್ಲ. ಹೀಗೆ ಎರಡು ಪತ್ರಗಳ ಉದ್ದೇಶ ಫಲಿತಾಂಶಗಳನ್ನು ಎಷ್ಟು ಚರ್ಚಿಸಿದರೂ ಆ ಚರ್ಚೆಯ ಅಂತ್ಯ, ಲೆಕ್ಕ ಮೀರಿದ ಲೆಕ್ಕಕ್ಕೆ ಸಿಗದ ಅಂಕೆ ಸಂಖ್ಯೆಗಳಲ್ಲಿಯೇ ಆಗುತ್ತದೆ.
ಇಷ್ಟಕ್ಕೆಲ್ಲ ಪಿಡುಗಿನ ಗಾತ್ರ ಮತ್ತು ವೇಗವನ್ನು ಅಂದಾಜಿಸುವಲ್ಲಿನ ತಪ್ಪುಗ್ರಹಿಕೆ ಅಥವಾ ಇಂತಹ ಯೋಚನೆ ಸಿದ್ಧತೆಗಳನ್ನು ಕಾರ್ಯರೂಪಕ್ಕೆ ತರುವಲ್ಲಿ ಬೇಕಾದ ಇಚ್ಚಾಶಕ್ತಿ ಕ್ರಿಯಾಶಕ್ತಿ ಆರ್ಥಿಕ ಸಂಪನ್ಮೂಲಗಳ ಕೊರತೆ ಅಲ್ಲ, ಗಂಭೀರ ಸಂದಿಗ್ಧತೆಗೆ ತಕ್ಷಣ ಪ್ರತಿಕ್ರಿಯಿಸುವಲ್ಲಿ ತೊಡರುಂಟುಮಾಡುವ ಬ್ರಿಟನ್ನಿನ ಪಾರಂಪರಿಕ ಜಡಆಡಳಿತಶಾಹಿ ವ್ಯವಸ್ಥೆಗಳು ಅಥವಾ ಇನ್ನೇನೋ ಕಾರಣ ಎಂದು ಇವೆಲ್ಲ ಮುಗಿದಮೇಲೆ ಮುಂದೊಂದು ದಿನ ತನಿಖೆಯೊಂದು ನಡೆದರೆ ಬಯಲಾಗಬಹುದು ಅಥವಾ ಸರಕಾರದ ಉತ್ತರದಾಯಿತ್ವದ ಜವಾಬನ್ನು ಸಂಸತ್ತಿನಲ್ಲೋ ಚುನಾವಣೆಯಲ್ಲೋ ಜನರು ಪಡೆಯಬಹುದು.
ಎಲ್ಲೋ ಬೆಚ್ಚಗೆ ಕುಳಿತು ಆಡಳಿತ ಯಂತ್ರದ ಬಗ್ಗೆ ವಿಮರ್ಶೆ ವ್ಯಂಗ್ಯ ಮಾಡುವುದು ಸುಲಭವಾದರೂ ದೂರದ ಚೈನಾ ದಕ್ಷಿಣ ಕೊರಿಯಾಗಳು ಹತ್ತಿರದ ಸ್ಪೇನ್ ಇಟಲಿ ಜರ್ಮನಿ ಫ್ರಾನ್ಸ್ ಗಳು ಕ್ರಮಿಸಿದ ಸೂಕ್ತ ಹೆಜ್ಜೆಗಳು ತಪ್ಪು ದಾರಿಗಳು ಪಾಠ ಕಲಿಕೆ ಯಾವುದೂ ಸಹಾಯಕ್ಕೆ ಬರದೇ ಅಪಾರ ಜೀವಹಾನಿಯಾಗುತ್ತಿರುವುದು ವಾಸ್ತವ ಹಾಗೂ ಅಕ್ಷಮ್ಯ. ಇಲ್ಲಿ ಕೋವಿಡ್ ಎಲ್ಲೆಲ್ಲಿ ಪ್ರವೇಶವಾಗಿದೆಯೋ ಅಲ್ಲೆಲ್ಲ ಆರೋಗ್ಯ ಜೀವ ಜೀವನಗಳಿಗೆ ಮಾರಕ ಪರಿಣಾಮಗಳಾಗಿವೆ. ಬೆರಳೆಣಿಕೆಯ ದೇಶಗಳನ್ನು ಹೊರತು ಪಡಿಸಿದರೆ ಉಳಿದ ದೇಶಗಳೆಲ್ಲವೂ ಅಲ್ಲಲ್ಲಿನ ಅವರವರ ತಪ್ಪು ಅಂದಾಜು ಪೂರ್ವ ತಯಾರಿಯ ಕೊರತೆಗಳಿಂದಾಗಿ ಕೊರೊನವನ್ನು ಸಮರ್ಥವಾಗಿ ಎದುರಿಸಲು ವಿಫಲವಾಗಿವೆ. ಅಂತಹ ಒಂದು ವೈಫಲ್ಯದ ಕತೆ ಇದೀಗ ಬ್ರಿಟನ್ನಿನದೂ…
ಹೇಳಬೇಕಿಂದಿದ್ದ ಎರಡು ಪತ್ರಗಳ ವಿಚಾರ ಈಗ ಹೇಳಿಯಾಗಿದೆ. ಪತ್ರಗಳಿಂದ ಸಕಾಲದಲ್ಲಿ ಎಚ್ಚರಗೊಳ್ಳಬೇಕಾದವರು ಕಾರ್ಯೋನ್ಮುಖರಾಗಬೇಕಾದವರು ಆಗಿದ್ದರೆ ಪತ್ರಗಳ ಕತೆಯ ಮುಕ್ತಾಯ ಸ್ವಲ್ಪ ಬೇರೆಯಾಗಿರುತ್ತಿತ್ತು ಎನ್ನುವುದು ಇಲ್ಲೀಗ ಊರೆಲ್ಲ ತುಂಬಿರುವ ಹಬ್ಬಿರುವ ಸಂಕಟಗಳಲ್ಲಿ ಒಂದು.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.
ಈ ತಲ್ಲಣ ಈಗ ಮನೆ ಮನೆಯ, ಮನ ಮನದ ಕತೆಯಾಗಿದೆ.. ಅಭಿವ್ಯಕ್ತಿಸಿದ ರೀತಿ ಮನಮುಟ್ಟುವಂತೆ ಇದೆ…