ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ. ಕುವೆಂಪು ಅವರ ಕನಸಿನ ಸರ್ವ ಜನಾಂಗಗಳ ಶಾಂತಿಯ ತೋಟ ಅದು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 85ನೇ ಕಂತು ನಿಮ್ಮ ಓದಿಗೆ

ಶತಾಯುಷಿ ಸಿದ್ಧಗಂಗಾ ಶ್ರೀಗಳ 102ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುವ ಸುಸಂದರ್ಭ ಬಂದೊದಗಿತ್ತು. ಸಿದ್ಧಗಂಗೆಯ ನಯನ ಮನೋಹರ ಪರಿಸರದಲ್ಲಿ ಹೃದಯಂಗಮವಾದ ಸಮಾರಂಭ ನಡೆದಿತ್ತು. ಅನೇಕ ರಾಜಕೀಯ ಧುರೀಣರು, ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಮುಂತಾದ ಪ್ರತಿಷ್ಠಿತ ವ್ಯಕ್ತಿಗಳು ವೇದಿಕೆಯ ಮೇಲಿದ್ದರು. ಸಹಸ್ರ ಸಹಸ್ರ ಜನ ಸಭಿಕರು ಉತ್ಸಾಹದಿಂದ ಅತಿಥಿಗಳ ಮಾತುಗಳನ್ನು ಕೇಳುತ್ತಿದ್ದರು. ಆದರೆ ನಡು ನಡುವೆ ಸ್ವಾಮೀಜಿಯವರು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ವೇದಿಕೆಯಿಂದ ಕೆಳಗಿಳಿದು ಹೋಗುತ್ತಿದ್ದರು. ಹೀಗೆ ಅವರು ತಮ್ಮ ಬಗ್ಗೆಯೆ ಇರುವ ಸಮಾರಂಭ ಮುಗಿಯುವುದರೊಳಗೆ ಅನೇಕ ಬಾರಿ ಹೋಗಿ ಬರುವುದನ್ನು ಮಾಡಿದರು. ನನಗೋ ಆಶ್ಚರ್ಯವೆನಿಸಿತು. ವಯೋಸಹಜ ಪ್ರಕೃತಿ ಬಾಧೆಯಾಗುತ್ತಿದೆಯಾ ಎಂಬ ಅನುಮಾನ ಬಂದಿತು. ಸಂಘಟಕರೊಬ್ಬರನ್ನು ಕರೆದು ಪಿಸುಮಾತಿನಲ್ಲಿ ಕೇಳಿಯೆ ಬಿಟ್ಟೆ. ಅವರು ಕೊಟ್ಟ ಉತ್ತರದಿಂದ ದಂಗಾಗಿ ಹೋದೆ.

“ಪೂಜ್ಯರು ತಮ್ಮ ಭೇಟಿಗಾಗಿ ಕಾಯುತ್ತಿರುವ ಭಕ್ತರಿಗೆ ದರ್ಶನ ಕೊಟ್ಟು ಬರುತ್ತಿದ್ದಾರೆ. ಅವರು ಎಂದಿಗೂ ಭಕ್ತರನ್ನು ಕಾಯಿಸುವವರಲ್ಲ. ಕಾರ್ಯಕ್ರಮ ತನ್ನ ಪಾಡಿಗೆ ನಡೆದೇ ಇರುತ್ತದೆ. ವಿವಿಧ ಕಡೆಗಳಿಂದ ಬರುವ ಭಕ್ತರ ಗುಂಪುಗಳಿಗೆ ಹೋಗಿ ಹೋಗಿ ಅವರು ದರ್ಶನ ಕೊಡುತ್ತಲೇ ಇರುತ್ತಾರೆ” ಎಂದು ಅವರು ತಿಳಿಸಿದರು. ಇಂಥ ಭಕ್ತವತ್ಸಲ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರನ್ನು ನಾನು ಮಹಾತ್ಮರ ಸ್ಥಾನದಲ್ಲಿಟ್ಟು ಒಳಗಿಂದಲೇ ಶರಣು ಶರಣಾರ್ಥಿ ಹೇಳಿದೆ.

ನನ್ನ ಮತ್ತು ಅವರ ಆತ್ಮಸಂಬಂಧ ಎಷ್ಟೊಂದು ಗಾಢವಾಗಿತ್ತೆಂದರೆ ‘ಎತ್ತಣಿಂದೆತ್ತ ಸಂಬಂಧವಿದು’ ಎಂದು ನನಗೇ ಅನೇಕ ಬಾರಿ ಅನಿಸಿದೆ.


ಸಿದ್ಧಗಂಗಾ ಮಠದಿಂದ ಹಿರಿಯರೊಬ್ಬರು ಒಂದು ಸಲ ದೂರವಾಣಿ ಮೂಲಕ ಸಿದ್ಧಗಂಗಾ ಪತ್ರಿಕೆಗೆ ಲೇಖನವೊಂದನ್ನು ಕೇಳಿದರು. ‘ಸ್ವಾಮೀಜಿಯವರು ತಮ್ಮ ಕಡೆಯಿಂದ ಬರೆಸಲು ತಿಳಿಸಿದ್ದಾರೆ’ ಎಂದರು. ‘ಅವರ ಕಡೆಯಿಂದ ಪತ್ರಿಕೆಗೆ ಸದಾ ಬರೆಸುತ್ತಿರಬೇಕು ಎಂದು ಸ್ವಾಮೀಜಿಯವರ ಅಪ್ಪಣೆಯಾಗಿದೆ. ತಾವು ಬರೆಯಬೇಕು’ ಎಂದು ಅವರು ಹೇಳಿದ್ದು ನನ್ನ ಮನದಲ್ಲಿ ಮನೆ ಮಾಡಿದೆ.

ಸ್ವಾಮೀಜಿಯವರು ನನಗೆ ಅನೇಕ ಬಾರಿ ಮಠದ ಕಾರ್ಯಕ್ರಮಗಳಿಗೆ ಕರೆಸಿದ್ದರು. ಅನೇಕ ಸಲ ಬಸವ ಜಯಂತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಅವರು ತದೇಕಚಿತ್ತದಿಂದ ಮಾತುಗಳನ್ನು ಆಲಿಸುವುದನ್ನು ಮರೆಯಲು ಸಾಧ್ಯವಿಲ್ಲ.

ಒಂದು ಸಲ ನಾನು ಪತ್ನೀ ಸಮೇತ ಹೋಗಿದ್ದೆ. ಅಂದು ನಾವಿಬ್ಬರೂ ಅವರ ಪಾದಸ್ಪರ್ಶ ಮಾಡಿದೆವು. ಬಾಗಿದ ಶಿರ ಮತ್ತು ಮುಗಿದ ಕೈಯೊಂದಿಗೆ ಶರಣು ಶರಣಾರ್ಥಿ ಹೇಳುವುದನ್ನು ಬಸವಣ್ಣನವರು ನಮಗೆ ಕಲಿಸಿದ್ದಾರೆ. ನಾನು ಎಲ್ಲ ಸ್ವಾಮೀಜಿಗಳಿಗೆ ಅದೇ ರೀತಿ ನಮಸ್ಕರಿಸುವುದನ್ನು ಕಲಿತಿದ್ದೇನೆ. ಆದರೆ ಸಿದ್ಧಗಂಗಾ ಸ್ವಾಮೀಜಿಯವರ ಪಾದಕ್ಕೆ ಎರಗುವುದರಲ್ಲಿ ಅಮಿತ ಆನಂದವನ್ನು ಅನುಭವಿಸಿದ್ದೇನೆ. ಕೊನೆಯ ಸಲದ ಭೇಟಿಯಲ್ಲೂ ಪಾದಸ್ಪರ್ಶಾನಂದವನ್ನು ಪಡೆದೆ. ಅವರು ನನ್ನ ಹೃದಯಾಂತರಾಳದಲ್ಲಿ ಇಳಿದಿದ್ದಾರೆ. ಅವರ ನೆನೆಪೇ ಒಂದು ಅನುಭಾವದ ಆನಂದ.
ಅವರು ಬಸವಣ್ಣನವರ ಕುರಿತ ನಾಟಕವನ್ನು ನೂರಾರು ಸಲ ನೋಡಿರಬಹುದು. ಅದೇ ತಂಡದ ಅದೇ ನಾಟಕ ಎಷ್ಟು ನೋಡಿದರೂ ಅವರಿಗೆ ಮತ್ತೆ ಮತ್ತೆ ನೋಡುವ ಬಯಕೆ. ಬಸವಣ್ಣನವರೆಂದರೆ ಅವರಿಗೆ ಪಂಚಪ್ರಾಣ. ಅವರು ನನ್ನ ಕಣ್ಣ ಮುಂದಿನ ಬಸವಣ್ಣನವರು ಎಂದು ಪ್ರತಿಸಲ ಭೇಟಿಯಾದಾಗ ಅನಿಸಿದ್ದುಂಟು.

ಬಹಳ ವರ್ಷಗಳ ಹಿಂದೆ ಮೊದಲ ಬಾರಿ ಪರಿಚಿತರ ಜೊತೆ ಅವರ ಭೇಟಿಗೆ ಹೋದಾಗ ಅವರು ಚೆಕ್ ಮೇಲೆ ಸಹಿ ಮಾಡುತ್ತಿದ್ದ ನೆನಪು. ಪಕ್ಕದಲ್ಲಿ ನನ್ನ ‘ಬಸವ ಪ್ರಜ್ಞೆ’ ಪುಸ್ತಕ ಇದ್ದದ್ದನ್ನು ನೋಡಿ ಚಕಿತಗೊಂಡೆ. ಪರಿಚಿತರು ನನ್ನ ಪರಿಚಯ ಮಾಡಿಸಿದರು. ಅವರು ನನ್ನ ಆ ಪುಸ್ತಕ ತೋರಿಸುತ್ತ “ಬಹಳ ಚೆನ್ನಾಗಿದೆ” ಎಂದರು. ಈ ಅನಿರೀಕ್ಷಿತ ಘಟನೆ ಸದಾ ನೆನಪು ಉಳಿಯುವಂಥದ್ದಾಗಿದೆ. ಅವರು ಕನ್ನಡಕ ಇಲ್ಲದೆ ಚಿಕ್ಕ ಕಣ್ಣುಗಳಿಂದ ಓದುವುದನ್ನು ನೋಡುವುದೇ ಒಂದು ವಿಸ್ಮಯ. ನಂತರ ಅವರಿಗೆ ಶೈಲಾ ನಾಗರಾಜ ಅವರ ಮೂಲಕ ಕೆಲ ಪುಸ್ತಕಗಳನ್ನು ಕಳುಹಿಸಿದ ನೆನಪು.

ಶೈಲಾ ಯಾವ ಮಠಮಾನ್ಯಗಳಿಗೆ ಹೋಗದ ಹೆಣ್ಣುಮಗಳು. ನನ್ನ ಒತ್ತಾಯದಿಂದ ಅಲ್ಲಿಗೆ ಹೋದವಳು ಇಂದಿಗೂ ಹೋಗುತ್ತಲೇ ಇದ್ದಾಳೆ. ಇದುವೆ ಸಿದ್ಧಗಂಗಾ ಶ್ರೀಗಳ ಅನುಪಮ ವ್ಯಕ್ತಿತ್ವ.

ನಾನು ಬೆಂಗಳೂರಿನ ಸಮಾರಂಭವೊಂದರಲ್ಲಿ ಶ್ರೀಗಳೊಂದಿಗೆ ಭಾಗವಹಿಸಿದಾಗ, ಉಪನ್ಯಾಸ ನೀಡುವ ಸಂದರ್ಭದಲ್ಲಿ ‘ಸಿದ್ಧಗಂಗಾ ಸ್ವಾಮೀಜಿಯವರ ಕಾಲದಲ್ಲಿ ನಾವು ಬದುಕಿದ್ದೇವೆ ಎಂಬುದೇ ಬಹುದೊಡ್ಡ ಹೆಮ್ಮೆಯ ವಿಚಾರ’ ಎಂದು ತಿಳಿಸಿದ್ದೆ.’ ಅದು ಬಹುಶಃ ನಾಗೇಂದ್ರ ಅವರು ಏರ್ಪಡಿಸಿದ್ದ ಸಮಾರಂಭವಿತ್ತು ಎಂಬ ನೆನಪು. ಅಂದು ಸ್ವಾಮೀಜಿಯವರು ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರೆ ಇಂದಿನ ರಾಜಕಾರಣಿಗಳಿಗೆ ಕೇಳಿಸಬಹುದಿತ್ತು.

ಸಿದ್ಧಗಂಗಾ ಶ್ರೀಗಳು ಎಂದೇ ಪ್ರಖ್ಯಾತರಾದ ಶಿವಕುಮಾರ ಸ್ವಾಮೀಜಿಯವರು (1.4.1907-21.1.2019) 111 ವರ್ಷ ಬದುಕಿ ಲಕ್ಷಾಂತರ ಮಕ್ಕಳಿಗೆ ಅನ್ನ, ವಸತಿ ಮತ್ತು ಜ್ಞಾನ ದಾಸೋಹ ಮಾಡಿದರು. ಭಕ್ತರು ಅವರಿಗೆ ಪ್ರೀತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಎಂದು ಮುಂತಾಗಿ ಕರೆಯುತ್ತಿದ್ದರು. ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದೆ. ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಅವರ ಜನ್ಮದಿನವಾದ ಏಪ್ರಿಲ್ ಒಂದನ್ನು ದಾಸೋಹ ದಿನವಾಗಿ ಆಚರಿಸಲಾಗುತ್ತಿದೆ.

ಇಂದಿನ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಸೋಲೂರು ಹೋಬಳಿ, ವೀರಾಪುರ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ಗಂಗಮ್ಮನವರ ಪುತ್ರರಾಗಿ ಜನಿಸಿದ ಅವರು ವಿದ್ಯಾರ್ಥಿಯಾಗಿದ್ದಾಗ ಸಿದ್ಧಗಂಗಾ ಮಠದ ಉದ್ಧಾನ ಶಿವಯೋಗಿಗಳ ಆಶ್ರಯದಲ್ಲಿ ಬೆಳೆದರು. 1930ನೇ ಮಾರ್ಚ್ 3ರಂದು ಉದ್ಧಾನ ಶ್ರೀಗಳು ಅವರನ್ನು ಸಿದ್ಧಗಂಗಾ ಮಠದ ಕಿರಿಯ ಸ್ವಾಮಿಗಳಾಗಿ ಸ್ವೀಕರಿಸಿದರು. ಅವರು ಲಿಂಗ್ಯಕ್ಯವಾದ ನಂತರ ಶಿವಕುಮಾರ ಸ್ವಾಮೀಜಿಯವರು 1941ರಲ್ಲಿ ಸಿದ್ಧಗಂಗಾ ಮಠದ ಪೀಠಕ್ಕೆ ಬಂದರು.

ಪದವೀಧರರಾದ ಅವರ ಚಿಂತನೆ ವೈಜ್ಞಾನಿಕ ಮನೋಭಾವನೆಯಿಂದ ಕೂಡಿತ್ತು. ಆದರೆ ಅದು ಶುಷ್ಕವಾದುದಲ್ಲ. ಅವರಿಗೆ ಅವರದೇ ಆತ ತರ್ಕವಿತ್ತು. ಭಕ್ತರ ಮೇಲಿನ ಅಪಾರ ಕಾಳಜಿಯಿಂದ ತಾಯತಕ್ಕಾಗಿ ಅವರು ತಾಮ್ರದ ಹಾಳೆಯಲ್ಲಿ ರಕ್ಷಾಮಂತ್ರ ಬರೆದು ಕೊಡುವುದನ್ನು ಗಮನಿಸಿದೆ. ಅವರು ಅದರಲ್ಲಿ ಬರೆದದ್ದಾದರೂ ಏನು? ಬಸವ ಗುರುವಿನ ಹೆಸರು ಮತ್ತು ಷಟ್‌ಸ್ಥಲದ ಚಿಹ್ನೆ! ವೈಜ್ಞಾನಿಕ ಮನೋಭಾವದ ಬಸವಣ್ಣನವರ ಹೆಸರನ್ನು ಅವರೇಕೆ ಬರೆದರು? ಎಂಬ ಪ್ರಶ್ನೆ ವಿಚಾರವಾದಿಗಳ ಮನದಲ್ಲಿ ಏಳುವುದು ಸಹಜ. ಅವರು ಹಾಗೆ ಬರೆಯದೆ ಹೋಗಿದ್ದರೆ ಜನರು ಮಂತ್ರವಾದಿಗಳ, ಭವಿಷ್ಯ ಹೇಳುವವರ ಮತ್ತು ಪಂಚಾಂಗ ಓದುವವರ ಕಡೆ ಹೋಗುತ್ತಿದ್ದರು. ಅಷ್ಟೇ ಅಲ್ಲದೆ ಮೂಢನಂಬಿಕೆಯ ಕ್ರೂರ ವ್ಯವಸ್ಥೆಯಲ್ಲಿ ಸಿಕ್ಕಿ ನರಳುತ್ತಿದ್ದರು. ಧನಕನಕಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಸಿದ್ಧಗಂಗಾ ಶ್ರೀಗಳು ಅವರಿಗೆ ಫೇಥ್ ಹೀಲಿಂಗ್ (ನಂಬಿಕೆಯ ಚಿಕಿತ್ಸೆ) ನೀಡುವುದರ ಮೂಲಕ, ತಮ್ಮ ಭಕ್ತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಹಾಳಾಗದಂತೆ ಕಾಳಜಿ ವಹಿಸುವುದನ್ನು ಕಂಡುಕೊಂಡೆ.

ನಮ್ಮ ಅನೇಕ ರಾಜಕಾರಣಿಗಳು ಅಧಿಕಾರದ ಆಸೆಗಾಗಿ ಎಂಥ ಮೂರ್ಖ ಭವಿಷ್ಯಗಾರರ ಕಾಲನ್ನೂ ಹಿಡಿಯಬಲ್ಲರು. ರಾಹು ಕಾಲ ಗುಳಿಕ ಕಾಲ ಎನ್ನುತ್ತಲೇ ದೈನಂದಿನ ಭವಿಷ್ಯ ಹೇಳುವವರು ಬದುಕನ್ನು ರೂಪಿಸಿಕೊಳ್ಳುತ್ತಾರೆ. ಬೆಳಗಾದ ಕೂಡಲೆ ಟಿ.ವಿ.ಗಳಲ್ಲಿ ಮೂಢನಂಬಿಕೆಗಳನ್ನು ಹರಡುವವರದೇ ಹಾವಳಿ. ಇಂಥ ವಿಚಿತ್ರ ಸ್ಥಿತಿಯಲ್ಲಿ ಜನಸಾಮಾನ್ಯರು ಮೂಢನಂಬಿಕೆಗಳಿಗೆ ಬಲಿಯಾಗುವುದು ಸಾಮಾನ್ಯವಾಗಿದೆ. ಈ ಕ್ರೂರ ವಾಸ್ತವದ ಹಿನ್ನೆಲೆಯಲ್ಲಿ ಶ್ರೀಗಳು ತಮ್ಮ ಭಕ್ತರ ರಕ್ಷಣೆ ಮಾಡುವ ಕ್ರಮಗಳಲ್ಲಿ ಇದೂ ಒಂದು ಎಂದು ಭಾವಿಸಿರುವೆ.

ಅವರಿಗೆ ಜನಸಾಮಾನ್ಯರ ಬಗ್ಗೆ ಇರುವ ಕಾಳಜಿಯ ಕುರಿತು ಪ್ರಜಾವಣಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರ ಗಂಗಾಧರ ಮೊದಲಿಯಾರ ಅವರು ಹೇಳಿದ ಘಟನೆಯೊಂದು ನೆನಪಿಗೆ ಬರುತ್ತಿದೆ. ಮೊದಲಿಯಾರ 80ರ ದಶಕದಲ್ಲಿ ತುಮಕೂರಿನಲ್ಲಿ ಪ್ರಜಾವಾಣಿ ಬಾತ್ಮೀದಾರರಾಗಿದ್ದರು. ಆಗ ದೇಶಾದ್ಯಂತ ನಡೆದ ಪ್ರಖರ ಲಾರಿ ಮುಷ್ಕರದಿಂದಾಗಿ ಜನರಿಗೆ ಯಾವುದೇ ಜೀವನಾವಶ್ಯಕ ವಸ್ತುಗಳು ಸಿಗುತ್ತಿರಲಿಲ್ಲ. ಇಂಧನ ಕೂಡ ಸಿಗದಂಥ ಸ್ಥಿತಿ ನಿರ್ಮಾಣವಾಗಿತ್ತು. ಆಗ ಶ್ರೀಗಳು ವಿವಿಧ ಕ್ಷೇತ್ರಗಳ ಜನರನ್ನು ಮತ್ತು ತಜ್ಞರನ್ನು ಕರೆದು ಚರ್ಚೆ ನಡೆಸುವ ಮೂಲಕ ಪರಿಸ್ಥಿತಿಯ ಕಾರಣ ಮತ್ತು ಅದು ಜನಜೀವನದ ಮೇಲೆ ಆಗುವ ಪರಿಣಾಮದ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದರು. ಹೀಗೆ ಅವರು ಬದುಕಿನ ಬಗ್ಗೆ ಅಪಾರವಾದ ಗೌರವವುಳ್ಳವರಾಗಿದ್ದು ಜನಪರ ಕಾಳಜಿಯನ್ನು ಹೊಂದಿದ್ದರು.

ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ. ಕುವೆಂಪು ಅವರ ಕನಸಿನ ಸರ್ವ ಜನಾಂಗಗಳ ಶಾಂತಿಯ ತೋಟ ಅದು.

ಪ್ರತಿ ವರ್ಷವೂ ಇರುವ ಹತ್ತು ಸಾವಿರ ವಿದ್ಯಾರ್ಥಿಗಳ ದೈನಂದಿನ ವೆಚ್ಚಕ್ಕಾಗಿ ಅವರು ಎಂಥ ಶ್ರೀಮಂತ ಭಕ್ತರಿಂದ ಕೂಡ ಪಡೆಯುವುದಕ್ಕೆ ಹಿಂದೆ ಮುಂದೆ ನೋಡಲಿಲ್ಲ. ‘ಯಾರು ಏನೇ ಇರಲಿ, ಯಾರು ಏನೇ ಕೊಡಲಿ. ಅದೆಲ್ಲ ವಿದ್ಯಾರ್ಥಿಗಳಿಗಾಗಿ’ ಎಂಬ ಭಾವ ಅವರದು. ಇಲ್ಲಿ ಇದ್ದು ಕಲಿತ ಅನೇಕ ಬಡ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದು ಮಠಕ್ಕೆ ಗೌರವ ತಂದದ್ದನ್ನು ನಾನು ವಿವಿಧ ದೇಶಗಳಲ್ಲಿ ನೋಡಿದ್ದೇನೆ. ‘ನಾನು ಸಿದ್ಧಗಂಗಾ ಮಠದ ವಿದ್ಯಾರ್ಥಿ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ.

ಇಂಥ ಯುಗಪುರುಷ ಸಿದ್ಧಗಂಗಾ ಶ್ರೀಗಳ ಕಾಲದಲ್ಲಿ ಬದುಕಿದ ನಾವೇ ಧನ್ಯರು. ಅವರು ಲಿಂಗೈಕ್ಯರಾಗಿದ್ದಾರೆ. ಆದರೆ ಅವರ ಆದರ್ಶಗಳು ಅಮರವಾಗಿವೆ. ಅವರ ಆದರ್ಶಗಳ ಮಾರ್ಗದಲ್ಲಿ ಮುನ್ನಡೆಯೋಣ.