ಆಗಿನ ದಿನಗಳಲ್ಲಿ ಯಾರಾದರೂ ಬಹಿರಂಗವಾಗಿ ಹೋಟೆಲ್ಲಿನಲ್ಲಿ ಕಾಣಿಸಿಕೊಂಡರೆ ಒಂದೋ ಆತನೇ ಕೆಟ್ಟಿದ್ದಾನೆಂದರ್ಥ. ಅಥವಾ ಅವನ ಹೆಂಡತಿ ಕೆಟ್ಟಿದ್ದಾಳೆಂದರ್ಥ. ಮನೆಯಲ್ಲಿ ಸರಿಯಾಗಿ ಅಡುಗೆ ಮಾಡಿದ್ದರೆ ಅವನು ಯಾಕೆ ಅಲ್ಲಿಗೆ ಹೋಗುತ್ತಿದ್ದ? ಅವನು ಹಣವನ್ನು ಪೋಲು ಮಾಡಲು ಬಿಟ್ಟು ಇವಳೇನು ಮಾಡುತ್ತಿದ್ದಾಳೆ? ಎಂಬುವಂಥ ಮಾತುಗಳು ಕೇಳಿಬರುತ್ತಿದ್ದವು. ನಮ್ಮ ಮನೆಯಲ್ಲಿ ನಾವು ಸಣ್ಣ ಹುಡುಗರು ಅಂಗಡಿ ಮನೆಯೆದುರು ನಿಂತರೇನೆ ಅಪರಾಧವಾಗಿರುತ್ತಿತ್ತು. “ಅಲ್ಲೇನು ಕೆಲಸ ನಿನಗೆ?” ಎಂದು ಬಯ್ಯುತ್ತಿದ್ದರು. ನನ್ನ ತಂದೆತಾಯಿ ಖುದ್ದು ಹೋಟೆಲ್ ನಡೆಸಲು ಶುರು ಮಾಡಿದಾಗಲೂ ಪರಿಸ್ಥಿತಿಯೇನು ಭಿನ್ನವಾಗಿರಲಿಲ್ಲ. ಅಂದರೆ ನಾವು ಯಾವ ಕಾರಣಕ್ಕೂ ಬೇರೆ ಹೊಟೆಲ್ಲಿಗೆ ಹೋಗಿ ತಿನ್ನುವಂತಿರಲಿಲ್ಲ.
ಮಧುಸೂದನ್ ವೈ ಎನ್ ಅಂಕಣ

 

ನನ್ನ ಬಾಲ್ಯ ಕಾಲದಲ್ಲಿ ಹಳ್ಳಿಯ ಯಾರಾದರೂ ಪಟ್ಟಣದ ಹೋಟೆಲ್ಲಿನಲ್ಲಿ ತಿಂದುಬಿಟ್ಟರೆ ಅದು ಅಪರಾಧವೆಂಬಷ್ಟು ತಪ್ಪಾಗಿ ಕಾಣಲಾಗುತ್ತಿತ್ತು. ತುಂಬಾ ಹಿರಿಯರು ಮನೆಯ ಯಜಮಾನರೆನಿಸಿಕೊಂಡವರೂ ಕೂಡ ಬಾಯಿ ಚಪಲ ಬಿದ್ದರೆ ಹೋಟೆಲ್ಲಿನ ತಡಿಕೆ ಹಿಂದುಗಡೆ ಕೂತು ಬೋಂಡ ಬಜ್ಜಿ ತಿಂದು ಅಲ್ಲೇ ಕೈ ವರೆಸಿಕೊಂಡು ಮನೆಗೆ ಬರುತ್ತಿದ್ದರು. ನಮ್ಮೂರಿನ ಹಿರಿಯರೊಬ್ಬರು ಶಾಲೆಗೆ ಹೋಗುತ್ತಿದ್ದ ನನ್ನ ಕಣ್ಣಿಗೆ ಪಟ್ಟಣದ ಹೋಟೆಲ್ಲಿನಲ್ಲಿ ಕಾಣಿಸಿಕೊಂಡು ಥಟ್ಟನೆ ಅದಿಕ್ಕೊಂಡಿದ್ದು ಕಣ್ಣಿಗೆ ಕಟ್ಟಿದೆ.

ಆಗಿನ ದಿನಗಳಲ್ಲಿ ಯಾರಾದರೂ ಬಹಿರಂಗವಾಗಿ ಹೋಟೆಲ್ಲಿನಲ್ಲಿ ಕಾಣಿಸಿಕೊಂಡರೆ ಒಂದೋ ಆತನೇ ಕೆಟ್ಟಿದ್ದಾನೆಂದರ್ಥ. ಅಥವಾ ಅವನ ಹೆಂಡತಿ ಕೆಟ್ಟಿದ್ದಾಳೆಂದರ್ಥ. ಮನೆಯಲ್ಲಿ ಸರಿಯಾಗಿ ಅಡುಗೆ ಮಾಡಿದ್ದರೆ ಅವನು ಯಾಕೆ ಅಲ್ಲಿಗೆ ಹೋಗುತ್ತಿದ್ದ? ಅವನು ಹಣವನ್ನು ಪೋಲು ಮಾಡಲು ಬಿಟ್ಟು ಇವಳೇನು ಮಾಡುತ್ತಿದ್ದಾಳೆ? ಎಂಬುವಂಥ ಮಾತುಗಳು ಕೇಳಿಬರುತ್ತಿದ್ದವು. ನಮ್ಮ ಮನೆಯಲ್ಲಿ ನಾವು ಸಣ್ಣ ಹುಡುಗರು ಅಂಗಡಿ ಮನೆಯೆದುರು ನಿಂತರೇನೆ ಅಪರಾಧವಾಗಿರುತ್ತಿತ್ತು. “ಅಲ್ಲೇನು ಕೆಲಸ ನಿನಗೆ?” ಎಂದು ಬಯ್ಯುತ್ತಿದ್ದರು. ನನ್ನ ತಂದೆತಾಯಿ ಖುದ್ದು ಹೋಟೆಲ್ ನಡೆಸಲು ಶುರು ಮಾಡಿದಾಗಲೂ ಪರಿಸ್ಥಿತಿಯೇನು ಭಿನ್ನವಾಗಿರಲಿಲ್ಲ. ಅಂದರೆ ನಾವು ಯಾವ ಕಾರಣಕ್ಕೂ ಬೇರೆ ಹೊಟೆಲ್ಲಿಗೆ ಹೋಗಿ ತಿನ್ನುವಂತಿರಲಿಲ್ಲ.

ಈಗ ಹಾಗಿಲ್ಲ. ಮನೆಯಲ್ಲಿ ಅಡುಗೆಯವರನ್ನು ನೇಮಿಸಿಕೊಂಡಿದ್ದರೂ ಸಹ ನನಗೆ ವಾರಕ್ಕೆ ಮೂರ್ನಾಲ್ಕು ಸಲನಾದರೂ ಹೊರಗಡೆ ತಿನ್ನಬೇಕಾದ ಪ್ರಸಂಗ ಬರುತ್ತದೆ. ಇನ್ನೂ ಹೆಚ್ಚೇ ಅನ್ನಬಹುದು. ಅಡಿಗೆಯಾಕೆ ಅದೆಂತಹ ರುಚಿಯಾದ ಅಡಿಗೆ ಮಾಡಿಕೊಟ್ಟರೂ ಹೊರಗಡೆ ತಿನ್ನಬೇಕೆಂದು ಬಾಯಿ ಚಪಲ ಎಳೆಯುತ್ತದೆ. ಅಷ್ಟರ ಮಟ್ಟಿಗೆ ಜೀವನ ಶೈಲಿ ಬದಲಾಗಿಬಿಟ್ಟಿದೆ. ನನ್ನ ಸ್ಥಿತಿಯೇ ಹೀಗಿದ್ದರೆ ಬ್ಯಾಚಲರ್ ಗಳ, ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವವರ, ಅಡಿಗೆಯವರನ್ನು ನೇಮಿಸಿಕೊಂಡಿರದವರ ಪರಿಸ್ಥಿತಿ ಊಹಿಸಿಕೊಳ್ಳಿ. ಹೆಚ್ಚೂ ಕಮ್ಮಿ ದಿನನಿತ್ಯ ಹೋಟೆಲ್ಲಿನಲ್ಲಿಯೇ ಊಟ ಸೇವಿಸುವ ಅನಿವಾರ್ಯವಿರುತ್ತದೆ ಅವರಿಗೆ.

ನನಗನ್ನಿಸಿದಂತೆ ಭವಿಷ್ಯದಲ್ಲಿ ಹೀಗಾಗಬಹುದು; ನೀವು ಬೆಳಗ್ಗೆ ಏಳುತ್ತೀರ, ಮುಖ ತೊಳೆಯುವುದೋ ಸ್ನಾನ ಮಾಡುವುದೋ ಮುಗಿಸುತ್ತೀರ, ನಂತರ ಸಕುಟುಂಬ ಸಮೇತರಾಗಿ ಸಮೀಪದಲ್ಲಿರುವ ನೀವು ಚಂದಾದಾರರಾಗಿರುವ ಸಮೂಹ-ಛತ್ರಕ್ಕೆ ಹೋಗಿ ತಿಂಡಿ ಮುಗಿಸಿ, ಊಟದ ಡಬ್ಬ ಕಟ್ಟಿಸಿಕೊಂಡು ಮಕ್ಕಳನ್ನು ಶಾಲೆಗೆ ಕಳಿಸಿ ನೀವು ಕೆಲಸಕ್ಕೆ ಹೋಗುತ್ತೀರ. ಸಂಜೆ ಮನೆಗೆ ಬಂದಾಗ ಮತ್ತದೇ; ವಿಶ್ರಾಂತಿ ಪಡೆದು ರಾತ್ರಿ ಊಟವನ್ನು ಛತ್ರದಲ್ಲಿ ಮುಗಿಸಿ ನಿಮ್ಮ ನಿಮ್ಮ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರ.

ಈ ವ್ಯವಸ್ಥೆ ಈಗಾಗಲೇ ಚೈನಾದಲ್ಲಿದೆಯೆಂದು ಕೇಳ್ಪಟ್ಟಿದ್ದೇನೆ. ಈ ಸಮೂಹ ಛತ್ರವು ಸರ್ಕಾರದ್ದಾಗಿರಬಹುದು, ಖಾಸಗಿ ಒಡೆತನದ್ದಾಗಿರಬಹುದು. ಹಾಗೆ ನೋಡಿದರೆ ಬಿಸಿನೆಸ್ ಮಾಡುವ ಹುಮ್ಮಸ್ಸಿರುವವರಿಗೆ ಇದೊಂದು ಉತ್ತಮ ಐಡಿಯಾ ಆಗಬಹುದು. ನೀವು ಮನೆಯ ದಿನಸಿಗೆಂದು ಏನು ಖರ್ಚು ಮಾಡುತ್ತೀರಲ್ಲ ಅಷ್ಟು ಮತ್ತೆ ಅಡಿಗೆ ಮಾಡುವ ಪಾತ್ರೆ ತೊಳೆಯುವ ಕೂಲಿ ಖರ್ಚನ್ನು ಸೇರಿಸಿ ಛತ್ರಕ್ಕೆ ಕೊಟ್ಟು ಚಂದಾದಾರರಾಗುವುದು. ಪ್ರತಿಯಾಗಿ ಛತ್ರದವನು ನಿತ್ಯ ಸೇವನೆಗೆ ಯೋಗ್ಯವಾಗಿರುವಂತಹ ಊಟವನ್ನು ನಿಮಗೆ ಒದಗಿಸುವುದು. ಆಗ ಆರ್ಥಿಕತೆಗನುಗುಣವಾಗಿ ಬೇರೆ ಬೇರೆ ಹಂತಗಳ ಛತ್ರಗಳಿರುತ್ತವೆ. ಸಸ್ಯಾಹಾರದ, ಮಾಂಸಹಾರದ ಛತ್ರಗಳೂ ಇರುತ್ತವೆ. ಕನಸೇನಂದರೆ ಆರ್ಥಿಕತೆ ಏನೇ ಇರಲಿ, ಸಸ್ಯಾಹಾರ, ಮಾಂಸಹಾರ, ಕಿಚನ್ನುಗಳು ಬೇರೆಯೇ ಇರಲಿ, ಆದರೆ ಉಣ್ಣುವಾಗ ಎಲ್ಲರೂ ಒಟ್ಟಿಗೆ ಕೂತು ಊಟ ಮಾಡುವಂತಿದ್ದರೆ ಸಾಕು. ಆರ್ಥಿಕತೆ ಸಸ್ಯ ಮಾಂಸ ಬೇಧಗಳಿಲ್ಲದೆ ಅಕ್ಕ ಪಕ್ಕ ಕೂತು ಊಟ ಮಾಡುವಂತಿರಬೇಕು. ಸಧ್ಯಕ್ಕೆ ನಾವಿನ್ನೂ ಆ ಹಂತ ತಲುಪಿಲ್ಲ. ಶುದ್ಧ ಸಸ್ಯಹಾರವೆಂಬ ಹೋಟೆಲ್ಲುಗಳ ಮಡಿವಂತಿಕೆಯೇ ನಮ್ಮೆದುರಿಗಿರುವ ತಾಜಾ ಉದಾಹರಣೆ. ಪ್ರಾಣಿ ಮೇಲಿನ ದಯೆಯಿಂದ ಸಸ್ಯಹಾರಕ್ಕೆ ತಿರುಗಿರುವ ಹಲವಾರು ಪಾಶ್ಚಿಮಾತ್ಯರರಿಗೆ ಶುದ್ಧ ಸಸ್ಯಹಾರದ ರೆಸ್ಟೋರಂಟ್ ಗಳೇ ಬೇಕೆಂಬ ಬೇಡಿಕೆಯೇನಿಲ್ಲ. ಹುಟ್ಟಿನಿಂದ ಮಾಂಸಹಾರಿಗಳಾಗಿ ತಮ್ಮ ಸ್ವ ವಿವೇಚನೆಯಿಂದ ಸಸ್ಯಾಹಾರಕ್ಕೆ ತಿರುಗಿರುವ ಇವರ ಮೇಲೆ ನನಗೆ ವಿಶೇಷ ಗೌರವವಿದೆ.

ಮುಂದೆ ಹೀಗಾದರೆ ಬಹಳಷ್ಟು ಪ್ರಯೋಜನಗಳಾಗುತ್ತವೆ. ಆಗ ಮನೆಯಲ್ಲಿ ಹೆಂಡತಿಯೇ ಅಡಿಗೆ ಮಾಡಬೇಕೆಂಬ ರಾಜಕಾರಣವಿರುವುದಿಲ್ಲ. ನಾವು ಏನೇ ಮಾಡಿದರೂ ದಿನನಿತ್ಯ ಬಗೆಬಗೆಯ ರುಚಿರುಚಿಯ ಅಡುಗೆಯನ್ನು ಮನೆಯಲ್ಲಿ ಮಾಡಲಾರೆವು. ಇದು ಸಮೂಹ ಛತ್ರಗಳ ಮೂಲಕ ಸಾಧ್ಯವಾಗಬಹುದು. ಅಡುಗೆ ಮನೆಯಲ್ಲಿ ಮಾಡುವುದು ಪಾತ್ರೆ ತೊಳೆಯುವುದು, ದಿನಸಿ ತರುವುದು ಇವೆಲ್ಲ ತಾಪತ್ರಯ ಇಲ್ಲವಾಗಿ ಆ ಸಮಯವನ್ನು ಬೇರೊಂದು ಕೆಲಸಕ್ಕೆ ಸದುಪಯೋಗಪಡಿಸಿಕೊಳ್ಳಬಹುದು. ವರ್ಗಬೇಧವಿಲ್ಲದೆ ಒಟ್ಟಿಗೆ ಕೂತು ಊಟ ಮಾಡುವುದರಿಂದ ಒಂದಷ್ಟು acceptance ಒಂದಷ್ಟು ಮಾತುಕತೆ ಅದರ ಮೂಲಕ ಸ್ನೇಹ ಸಂಬಂಧ ಕುದುರಬಹುದು. ಆಹಾರದ ನೀರಿನ ಪೋಲು ತಪ್ಪಿಸಬಹುದು. ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಬಹುದು. ಬಹು ಮುಖ್ಯವಾಗಿ ಪೌಷ್ಠಿಕಾಂಶ ಕಾಪಾಡಿಕೊಳ್ಳಬಹುದು.

ನಮ್ಮ ಆಹಾರ ಸಂಸ್ಕೃತಿ ಆರೋಗ್ಯಕರ ಊಟ ಉತ್ತೇಜಿಸುತ್ತದೆ ನಿಜ, ಆದರೆ ಅದು ಹೆಚ್ಚಾಗಿ ಹೊಟ್ಟೆ ತುಂಬಿಸಿಕೊಳ್ಳುವ ಮೂಲೋದ್ದೇಶದಿಂದ ಕೂಡಿದ್ದು ಪೌಷ್ಠಿಕಾಂಶಗಳ ಕೊರತೆಯಿಂದ ಬಳಲುತ್ತಿದೆ. ತುಂಬ ವಿಶ್ವಾಸದಿಂದ ಹೇಳಬಲ್ಲೆ ನಮ್ಮಲ್ಲಿ ಶ್ರೀಮಂತರೂ ಕೂಡ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಕಾರಣ ಅವರ ಜೀವನ ಶೈಲಿಯಲ್ಲ. ನಮ್ಮ ಒಟ್ಟಾರೆ ಆಹಾರ ಸಂಸ್ಕೃತಿ. ಹೀಗಿದ್ದು ನಾವು ಒಲಂಪಿಕ್ ಮೆಡಲ್ಲು ಗೆಲ್ಲಲಿಲ್ಲ ಎಂದು ಗೋಳಾಡಿದರೆ ಏನೂ ಪ್ರಯೋಜನವಿಲ್ಲ.

ಈಗಿನ ಇಂದಿರಾ ಕ್ಯಾಂಟೀನ್ ಮುಂದಿನ ಸಮೂಹ ಛತ್ರಗಳ ಒಂದು ಸಣ್ಣ ನಮೂನೆಯಂತಿದೆ. ಇದನ್ನು ಯಾರಾದರೂ ಕ್ಯಾಪಿಟಲಿಸ್ಟ್ ಗಳು ಲಾಭಾಂಶವನ್ನು ಮನಸ್ಸಿನಲ್ಲಿಟ್ಟುಕೊಂಡೇ ವಿಸ್ತರಿಸಿದರೂ ಸರಿ, ಮಹತ್ತರ ಬದಲಾವಣೆ ತರಬಹುದು. Common schooling ವ್ಯವಸ್ಥೆಯ ಪರಿಕಲ್ಪನೆಯನ್ನು ತಿನ್ನುವ ಅನ್ನಕ್ಕೂ ವಿಸ್ತರಿಸಿ ಹೇಳುತ್ತಿದ್ದೀನಷ್ಟೇ. ಮತ್ತು ಇದು ಏಕ ರೂಪ ಆಹಾರ ಸಂಸ್ಕೃತಿಯ ಉತ್ತೇಜನವಲ್ಲ. ಈ ಕನಸಿನಲ್ಲಿ ವೈವಿದ್ಯತೆಗೇ ಮೊದಲ ಆದ್ಯತೆ. ಹಾಗೆ ನೋಡಿದರೆ ನಗರದಲ್ಲಿ ಕೈಬಿಟ್ಟಿರುವ ಬಸ್ಸಾರು ಮಸ್ಸೊಪ್ಪು ಅರ್ಧಾಂಬ್ರ ಮುಂತಾದವುಗಳೆಲ್ಲ ಇಲ್ಲಿ ನಮಗೆ ಸಿಗಬಹುದು. ನಮ್ಮ ಹೋಟೆಲ್ಲಿನಲ್ಲಿ ಖಾಯಂ ಗಿರಾಕಿಗಳು ಅಂತ ಇರೋರು. ಅವರದ್ದು ದಿನನಿತ್ಯ ತಿಂಡಿ ಊಟ ನಮ್ಮಲ್ಲೇ. ಅವರು ತಿನ್ನುತ್ತಿದ್ದುದು staple food ಮಾತ್ರ. ಮುದ್ದೆ, ಅನ್ನ, ಸಾರು. ಬೇಕಿದ್ದರೆ ಜೊತೆಗೊಂದು ಮೊಟ್ಟೆ. ಇವರುಗಳಿಂದಲೇ ನಮಗೆ ನಿತ್ಯ ಕನಿಷ್ಠ ಆದಾಯ ಅಂತಿರೋದು. ಎಷ್ಟು ಅನ್ನ ಬೇಯಿಸಬೇಕು, ಎಷ್ಟು ಸಾರು ಕುದಿಸಬೇಕು ಅದೆಲ್ಲ ಇವರ ಮೇಲೆಯೇ ಅವಲಂಬಿತವಾಗಿರುತ್ತಿತ್ತು. ಇವರ ಆರೋಗ್ಯದ ಕಾಳಜಿ ಸಲುವಾಗಿಯೇ ಹೋಟೆಲ್ಲಿನಲ್ಲಿ ಪ್ರತಿದಿನವೂ ಬಗೆಬಗೆಯ, ತರಕಾರಿ ಯುಕ್ತ, ಮನೇಲಿ ಮಾಡುವಂತಹ ಸಾರನ್ನು ಬೇಯಿಸುತ್ತಿದ್ದರು.

ತುಂಬ ವಿಶ್ವಾಸದಿಂದ ಹೇಳಬಲ್ಲೆ ನಮ್ಮಲ್ಲಿ ಶ್ರೀಮಂತರೂ ಕೂಡ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ, ಕಾರಣ ಅವರ ಜೀವನ ಶೈಲಿಯಲ್ಲ. ನಮ್ಮ ಒಟ್ಟಾರೆ ಆಹಾರ ಸಂಸ್ಕೃತಿ. ಹೀಗಿದ್ದು ನಾವು ಒಲಂಪಿಕ್ ಮೆಡಲ್ಲು ಗೆಲ್ಲಲಿಲ್ಲ ಎಂದು ಗೋಳಾಡಿದರೆ ಏನೂ ಪ್ರಯೋಜನವಿಲ್ಲ.

ಮೂಟೆ ಹೊರುವ ಹಮಾಲಿಯಿಂದ ಹಿಡಿದು ತಾಲೂಕು ಪಂಚಾಯಿತಿಯ ಗುಮಾಸ್ತನವರೆಗೆ; ಬಾಳೆಹಣ್ಣು ಮಾರುವ ಸಾಬರಿಂದ ಹಿಡಿದು ಟಿಪ್ ಟಾಪ್ ಇನ್ ಶರ್ಟ್ ಮಾಡಿಕೊಂಡ ಶಿಕ್ಷಕ ವೃಂದದವರೆಗೆ; ಎಲ್ಲರಿಗೂ ಅದೇ ಊಟ, ಅದೇ ತಟ್ಟೆ ಲೋಟ ನೀರು. ಅಲ್ಲೂ ಒಂದು ಕುಟುಂಬ ಭಾವವಿರುತ್ತಿತ್ತು. ನಿತ್ಯ ಗಿರಾಕಿ ಅಂದು ಬರದೇ ಹೋದರೆ ಅವರು ನೆನಪಾಗುತ್ತಿದ್ದರು. ಮತ್ತೆ ಬಂದಾಗ ಯಾಕೆ ಬರಲಿಲ್ಲ? ಏನಾಯಿತು? ಎಂಬ ಕಷ್ಟ ಸುಖಗಳ ವಿಚಾರಣೆಯಾಗುತ್ತಿತ್ತು.
ಪದವಿ ಸಮಯದಲ್ಲಿ ನಾನು ಬನಶಂಕರಿಯ BCM ಹಾಸ್ಟೆಲಿನಲ್ಲಿದ್ದೆ. ಅಲ್ಲಿನ ಪರಿಸ್ಥಿತಿ ಹೇಳತೀರದು. ರಾತ್ರಿ ಹೊತ್ತು ಸುಮ್ಮನೆ ಮೈ ಸವರಿಕೊಂಡರೆ ಕೈತುಂಬ ತಿಗಣೆಗಳು ಸಿಗುತ್ತಿದ್ದವು. ನಮ್ಮ ಹಾಸ್ಟೆಲಿನ ಕೋಣೆಯ ಗೋಡೆಗಳೆಲ್ಲ ರಕ್ತ ಚಿತ್ತಾರದಿಂದ ಕಂಗೊಳಿಸುತ್ತಿದ್ದವು. ಆ ಚಿತ್ತಾರವನ್ನು ಸಹಿಸಲಾರದೆ ಕೆಲವು ಸಲ ಸುಡುವುದನ್ನ ಮಾಡುತ್ತಿದ್ದೆವು. ಸುಟ್ಟಾಗ ತಿಗಣೆಗಳು ಚಟ್ ಅಂತಿದ್ದವು. ಅವುಗಳಿಂದ ಹೊಮ್ಮುವಘಮಲನ್ನು ನೀವು ಸೇವಿಸಬೇಕು ಒಮ್ಮೆ. ಮತ್ತೇರುತ್ತದೆ. ಇನ್ನು ಊಟವಂತೂ, ಅನ್ನ ಮುದ್ದೆಯಾಗಿರುತ್ತಿತ್ತು, ಮುದ್ದೆ ಕಲ್ಲಾಗಿರುತ್ತಿತ್ತು. ಸಾರು ನೀರು, ತಪ್ಪಿಸಿಕೊಂಡು ಓಡೋಗುತ್ತಿತ್ತು. ಈಗಲೂ ಪರಿಸ್ಥಿತಿಯೇನೂ ಭಿನ್ನವಾಗಿರೋಲ್ಲ ಅಂದುಕೊಳ್ತೀನಿ.

ಪದವಿಯ ಮಧ್ಯಂತರದಲ್ಲಿ ನಮ್ಮಲ್ಲಿ ಮೊಬೈಲ್ ದಾಳಿಯಿಟ್ಟಿದ್ದು. ಅಲ್ಲಿವರೆಗೆ ಸ್ನೇಹಿತರೆಲ್ಲ ಚೆಲ್ಲಾಪಿಲ್ಲಿಯಾಗಿ ಯಾರು ಎಲ್ಲಿದ್ದಾರೆ ಅಂತ ಗೊತ್ತಿರಲಿಲ್ಲ, ಥ್ಯಾಂಕ್ಸ್ ಟು ಮೊಬೈಲ್ ಇದ್ದಕ್ಕಿದ್ದಂತೆ ಎಲ್ಲರೂ ಕೈಗೆಟುಕಲಾರಂಭಿಸಿದರು. ನನ್ನ ಸ್ನೇಹಿತ ಶಂಕರ್ ನಾಗ್ ಸರ್ಕಲ್ ಬಳಿಯಿರುವ ಎಸ್ಸಿ ಎಸ್ಟಿ ಹಾಸ್ಟೆಲಿನಲ್ಲಿದ್ದ. ಇರುವುದರಲ್ಲಿ ಅಲ್ಲಿ ಉತ್ತಮ ವ್ಯವಸ್ಥೆ. ವಾರ ವಾರ ಚಿಕನ್ ಕೂಡ ಕೊಡುತ್ತಿದ್ದರು. ನಾನು ಅವನಿಗೆ ಮೊದಲೇ ತಿಳಿಸಿರುತ್ತಿದ್ದೆ. ಅವನು ದೊಡ್ಡ ತಟ್ಟೆ ಇಟ್ಟುಕೊಂಡಿದ್ದ. ಅದರ ತುಂಬ ಚಿಕನ್ ಹಾಕಿಸಿಕೊಂಡು ಬಂದು ಕಾಟಿನ ಅಡಿ ಇಟ್ಟುಕೊಂಡು ನಾನು ಬರುವವರೆಗೂ ಕಾಯುತ್ತಿದ್ದ. ನಾನು ಅಲ್ಲಿಗೆ ಹೋದಾದ ಮೇಲೆ ನಾವು ಒಟ್ಟಿಗೆ ಕೂತು ತುಂಡು ಕಡಿಯುತ್ತಿದ್ದೆವು. ತಟ್ಟೆ ಒಂದೇ ಆದರೂ ತುಂಡು ಭಾಗ ಮಾಡಿಕೊಳ್ಳುವುದ ಮರೆಯುತ್ತಿರಲಿಲ್ಲ. ಯಾಕಂದರೆ ಇಬ್ಬರೂ ಬಕಾಸುರರೇ. ಕೆಲವು ಸಲ ಅನಿಸೋದು; ಇದ್ಯಾಕೆ ಬಿಸೀಎಮ್, ಎಸ್ಸಿ ಎಸ್ಟಿ ಅಂತ ಸೆಪರೇಟು ಹಾಸ್ಟಲ್ ಮಾಡಿರೋದು? ಆಯಾ ವರ್ಗದ ಜನಸಂಖ್ಯಾನುಸಾರ, ಆರ್ಥಿಕ ಸ್ಥಿತಿಗತಿಗನುಸಾರ ಸರ್ಕಾರ ಯಾಕೆ ಒಂದೇ ಹಾಸ್ಟೆಲಿಟ್ಟು, ಸಸ್ಯಹಾರಿಗಳಿಗೆ ಹತ್ತು ಪರ್ಸೆಂಟ್, ಓಬಿಸಿಯವರಿಗೆ ನಲವತ್ತು ಎಸ್ಸಿ ಎಸ್ಟಿ ಗೆ ಐವತ್ತು ಹೀಗೆ(ನಂಬರುಗಳು ಉದಾಹರಣೆಗೆ) ಸೀಟು ನಿಗದಿ ಮಾಡಿ ಒಂದೇ ಕಡೆ ವಾಸಿಸಲಿಕ್ಕೆ ವ್ಯವಸ್ಥೆ ಮಾಡಬಾರದು? ಮೇಲ್ವರ್ಗದವರಲ್ಲಿ ಬಡವರಿದ್ದಾರಲ್ಲವೇ, ಬನ್ನಿ ಸೀಟು ಖಾಲಿಯಿದೆ, ಜೊತೆಗಿರೋಣ. ಒಟ್ಟಿಗೆ ಕೂತು ಊಟ ಮಾಡೋಣ. ಒಂದೇ ಚಾಪೆ ಮೇಲೆ ಮಲಗೋಣ. ಆಗಬಹುದಲ್ಲವೇ?

ಇದು ಕಾಲ್ಪನಿಕ ವ್ಯವಸ್ಥೆಯಲ್ಲ. ಅನುಭವದಿಂದಲೇ ಹೇಳ್ತಿದೀನಿ. ನನ್ನ ಪದವಿ ಪೂರ್ವ ವಿಧ್ಯಾಭ್ಯಾಸವಾಗಿದ್ದು ನವೋದಯ ವಿದ್ಯಾಲಯದಲ್ಲಿ. ಇದು ಸರ್ಕಾರಿ ವಸತಿ ಶಾಲೆ. ಮೇಲೆ common schooling ಅಂದನಲ್ಲ, ಅದೇ ಇದು. ಮೇಲೆ ತಿಳಿಸಿದ ನನ್ನ ಸ್ನೇಹಿತನೂ ಇಲ್ಲೇ ಓದಿದ್ದು. ನಮ್ಮದು ಏಳು ವರ್ಷಗಳ ಒಟ್ಟಿಗೆ ಊಟ ಪಾಠ ಆಟ ಜಗಳ ನಿದ್ದೆ. ಇಲ್ಲಿ ನಾನು common schooling ಮತ್ತು community eating ಎರಡನ್ನೂ ಸೇರಿಸಿ ಮಾತಾಡ್ತಿದೀನಿ. ನವೋದಯ ಶಾಲೆ ಹೇಗೆಂದರೆ ಬಯಲಲ್ಲಿ ಬೆಳೆದ ತರಹೇವಾರಿ ಸಸಿಗಳನ್ನ ಹೆಕ್ಕಿ ತೆಗೆದು ಪ್ರಾಯೋಗಿಕವಾಗಿ ಸೆಪರೇಟು ನರ್ಸರಿ ವ್ಯವಸ್ಥೆಯಲ್ಲಿ ಉತ್ತಮ ಪೋಷಣೆ ಪಾಲನೆ ಒದಗಿಸಿ ಬೆಳೆಸಿದಂತೆ. ಈ ಸಸಿಗಳು ಬೆಳೆದು ದೊಡ್ಡವಾದ ಮೇಲೆ ಪುನಃ ಹೊಲದಲ್ಲಿ ತಂದು ಊಣಿದರೆ ಅಲ್ಲಿನ ಬೆಳೆ ಕಳೆ ಮುಳ್ಳುಗಳ ನಡುವೆ ಕಂಗಾಲಾಗಿಬಿಡುತ್ತವೆ. ನಮಗಾಗಿದ್ದೂ ಅದೇ. ನಾವು ಶಾಲೆಯಿಂದ ಹೊರಬಂದು ಈ ರೀತಿ ಸಮಾಜ ನಮಗೆ ನಮ್ಮ ಗುರುತು ನೆನಪಿಸದಿದ್ದಲ್ಲಿ ನಿಜಕ್ಕೂ ನಮಗೆ ಸ್ನೇಹಿತರ ಜಾತಿ ಗೊತ್ತಾಗುತ್ತಿರಲಿಲ್ಲ. ಈಗಲೂ ನಮ್ಮಲ್ಲಿರುವ ಮಾಹಿತಿ ಹೆಚ್ಚೆಂದರೆ General, 3A/3B SC/ST ರೀತಿ. ನಮ್ಮದು ನಮಗೆ ಗೊತ್ತಿರತ್ತೆ, ಕಾರಣ ಮನೆಯವರು ಹುಟ್ಟಿನಿಂದಲೂ ನೆನಪಿಸುತ್ತಿರುತ್ತಾರೆ. ಧರ್ಮವು ಗೊತ್ತಾಗುತ್ತಿತ್ತು ಯಾಕಂದರೆ ಹೆಸರುಗಳು ಹಾಗಿರುತ್ತಿದ್ದವು. ಆದರೆ ಅದು ಅಲ್ಲಿಗೇ ನಿಲ್ಲುತ್ತಿತ್ತು. ಒಟ್ಟಿನಲ್ಲಿ ಎಲ್ಲರೂ ಒಂದೇ ಆಗಿರುತ್ತಿದ್ದೆವು. ಎಷ್ಟಂದರೆ ಹೊರ ಪ್ರಪಂಚದಲ್ಲಿ ನಾವು ಯಾವ ಸಮ ಸಮಾಜ ಅಸಾಧ್ಯ ಕಾಲ್ಪನಿಕ ಅಂತೆಲ್ಲ ನೊಂದು ನುಡಿಯುತ್ತೀವೋ ಅದರ ವಾಸ್ತವಿಕ ಉದಾಹರಣೆಯನ್ನು ಅನುಭವಿಸಿ ಬಂದಿರುವೆವು, ಅದೊಂತರ ಸ್ವರ್ಗ. ನೀವು ಯಾವ ನವೋದಯ ವಿದ್ಯಾರ್ಥಿಯನ್ನಾದರೂ ಕೇಳಿ ನೋಡಿ. ಇದನ್ನೇ ಹೇಳುತ್ತಾರೆ.

ಆದರೆ ಶಾಲೆಯಿಂದ ಹೊರಗೆ ಬಂದಾಕ್ಷಣ ನಿಧಾನವಾಗಿ ಎಲ್ಲ ಬದಲಾಗಲಿಕ್ಕೆ ಬಹಿರಂಗವಾಗಲಿಕ್ಕೆ ಶುರುವಾಗ್ತದೆ. ಸಮಾಜ ನಮ್ಮನ್ನು ದುರ್ಬಲರನ್ನಾಗಿಸಲು ಆರಂಭಿಸುತ್ತದೆ. ಶಾಲೆಯ ಹೊರಬಾಗಿಲಲ್ಲೇ ವಿವಿದ ಸಂಘ ಸಂಸ್ಥೆಗಳು ಹೊಂಚು ಹಾಕಿ ಕಾಯುತ್ತಿರುತ್ತವೇನೋ ಎಂದು ಭಾಸವಾಗುತ್ತದೆ. ಮನೆಯವರೇ ನಮ್ಮನ್ನು ಸಮಾಜದ ರೀತಿನೀತಿಗಳಿಗೆ ಹೊಂದಿಸಲು ಶುರು ಮಾಡುತ್ತಾರೆ. ಇದ್ದಕ್ಕಿದ್ದಂಗೆ ಪ್ರೇಮ ಅಂತಿದ್ದವಳು ಪ್ರೇಮ ಗೌಡ ಆಗಿಬಿಡ್ತಾಳೆ, ಅರುಣ್ ಅಂತಿದ್ದವನು ಅರುಣ್ ಶರ್ಮ ಆಗಿಬಿಡ್ತಾನೆ. ಆನಂದ ಆನಂದ ಜೈನ್ ಆಗಿಬಿಡ್ತಾನೆ. ಉಚಿತವಾಗಿ ಸಿಗುವ ರಾಯಲ್ಟಿ ಯಾಕೆ ಬಿಡಬೇಕು, ಅಲ್ಲವಾ. ಇಲ್ಲಿ ಮೂಲ ನಾಮಧೇಯಗಳನ್ನು ಬದಲಾಯಿಸಿದ್ದೀನಷ್ಟೇ. ಸ್ನೇಹಿತರನ್ನೆಲ್ಲ ಜಾತಿ ಧರ್ಮಗಳಿಂದ ಗುರುತಿಸುವುದು ಅಸಹ್ಯವೆನಿಸುತ್ತದೆ.

ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿಯೊಬ್ಬರಿದ್ದಾರೆ, ಅವರಿಗೆ ರಾಜಕಾರಣ ಸೇರಿಕೊಳ್ಳುವ ಆಸೆಯಿದ್ದಿರಬಹುದು, ಇಟ್ಟುಕೊಳ್ಳಲಿ. ಆದರೆ ಅವರ ಫೇಸ್ ಬುಕ್ ಪೋಸ್ಟುಗಳನ್ನು ನೋಡಿದರೆ ನಾವು ಎಲ್ಲಿಂದ ಎಲ್ಲಿಗೆ ಬಂದುಬಿಟ್ಟಿದ್ದೇವೆ ಎಂದು ದುಃಖವಾಗುತ್ತದೆ. ಗೌರಿಯವರನ್ನ ಅವರ್ಯಾರೋ ಕೊಲ್ಲದಿದ್ದರೆ ನಾನೇ ಕೊಲ್ತಿದ್ದೆ ಎಂದು ಹಂಚಿಕೊಳ್ಳುತ್ತಾರೆ. ಅದಕ್ಕೆ ಒಂದಷ್ಟು ಲೈಕು ಕಮೆಂಟು ಸಿಗುತ್ತವೆ. ಇವರನ್ನ ಗಮನಿಸೋ, ಅನುಸರಿಸೋ ವಿದ್ಯಾರ್ಥಿಗಳ ಮನಸ್ಥಿತಿ ಎಷ್ಟು ಕಲುಷಿತಗೊಳ್ಳಬೇಡ ಎಂದು ಆತಂಕವಾಗುತ್ತದೆ. ಕೊಲ್ಲುವುದರ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತಿದ್ದರೆ ಬಹುಶಃ ಬದುಕುವ ಹಕ್ಕು ಇಲ್ಲಿ ಜೀವಿಸುವ ಯಾವ ಮನುಷ್ಯನಿಗೂ ಇಲ್ಲ ಅನಿಸುತ್ತದೆ.

ಸಮಾನ ಶಿಕ್ಷಣ ಈಗಾಗಲೇ ಮುಂದುವರೆದ ದೇಶಗಳಲ್ಲಿ ಇರುವಂತಹ ವ್ಯವಸ್ಥೆ. ಆಯಾ ಭಾಗದ ಜನ ತಮ್ಮ ಮಕ್ಕಳನ್ನು ಅಲ್ಲಿನ ಶಾಲೆಗೇ ಸೇರಿಸಬೇಕು. ಅವನು ಎಮ್ಮೆಲ್ಲೆ ಆಗಿರಲಿ ಚಪರಾಸಿ ಆಗಿರಲಿ. ನಮ್ಮಲ್ಲಿ ಇದನ್ನು ಅಳವಡಿಸುವಾಗ ಇನ್ನೂ ಸ್ವಲ್ಪ ಉತ್ತಮಗೊಳಿಸಬೇಕಾಗುತ್ತದೆ. ಜಗ್ಗಾಟಗಳಿಲ್ಲದೆ ಕಾಯ್ದೆಗಳನ್ನು ರೂಪಿಸಲು ಅಗತ್ಯವಾದಂತಹ ಮೆಜಾರಿಟಿ ಇರುವ ಈಗಿನ ಸರ್ಕಾರಕ್ಕೆ ಇದನ್ನು ಜಾರಿಗೊಳಿಸಲು ಎಲ್ಲ ಶಕ್ತಿಯಿದೆ. ಸಮೂಹ ಭೋಜನಾಲಯಗಳ ಸಂಸ್ಕೃತಿ ಕಾಯ್ದೆಯಿಂದ ತರುವಂತದ್ದಲ್ಲ. ಹೆಚ್ಚೆಂದರೆ ಇಂದಿರಾ ಕ್ಯಾಂಟೀನ್ ಅಂತವನ್ನು ದೊಡ್ಡ ಮಟ್ಟಕ್ಕೆ ವಿಸ್ತರಿಸಬಹುದು. ಮುಂದೆ ಏನೇನಾಗುತ್ತದೆ ಕಾದು ನೋಡಬೇಕು.