ಕನಸೊಂದು ಕೈ ಜಾರದಂತೆ….

ಚುಕ್ಕಿ ತಾರೆ ನಗುವ
ಬೆಳದಿಂಗಳ ಅಂಗಳದಲ್ಲಿ
ಕುಳಿತವಳ ಕಂಗಳು
ಕೈ ಜಾರಿದ ಕನಸೊಂದನು
ಆಗಸದಲಿ‌ ಹುಡುಕುತಿವೆ

ತಾರೆಯಂತೆ ಮಿನುಗುವ
ಹಂಬಲದ ಹೃದಯದಲಿ
ಮಡುಗಟ್ಟಿದ ನೋವು
ಅಂಬರದ ಮೌನದಲಿ
ಕರಗುತ ಮರೆಯಾಗುತಿದೆ

ಪ್ರತಿ ಇರುಳಿನ ಶೂನ್ಯತೆ
ರಮ್ಯ ಕನಸುಗಳನೆ
ಎದೆಯೊಳಗೆ ಬಿತ್ತುವಂತೆ
ಅವಳು ಎಚ್ಚೆತ್ತಿರುತ್ತಾಳೆ
ಬಾಡದಂತೆ ಕನಸ ಚಿಗುರಿಗೆ
ಕಣ್ಣಹನಿಯ ಚಿಮುಕಿಸುತ

ಪ್ರತಿ ಮುಂಜಾನೆ ಅಂಗಳದಿ
ಮೂಡುವ ರಂಗವಲ್ಲಿಯ ಚಿತ್ತಾರ
ಬಿರಿವ ಮಲ್ಲಿಗೆಯ ಕಂಪಿನಿಂದ
ಅವಳು ತನ್ನ ಕನಸಿಗೆ ಒಂದಿಷ್ಟು
ರಂಗು ತಂದು ಜೋಪಾನ
ಮಾಡುತ್ತಾಳೆ ಮಾಸದಂತೆ
ಕೈ ಜಾರದಂತೆ ಬಚ್ಚಿಡುತ್ತಾಳೆ
ಪುಟ್ಟ ಹೃದಯದಲ್ಲಿ….

ಹಕ್ಕಿ ದನಿಯ ಇಂಚರದಲ್ಲಿ
ಮೊಗ್ಗರಳುವ ಸಂಭ್ರಮದಲ್ಲಿ
ಅರುಣ ಕಿರಣದ ಹೊಳಪಿನಲ್ಲಿ
ಕವಿತೆ ಗೀಚುತ್ತಾ ಕಾಯುತ್ತಾಳೆ
ಭರವಸೆಯ ಕದ ತೆರೆಯುವ
ಹೊಸದೊಂದು ಬೆಳಗಿಗಾಗಿ

ಭವ್ಯ ಟಿ.ಎಸ್. ಕನ್ನಡ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ ಕಾನುಗೋಡು
ಹೊಸನಗರ, ಶಿವಮೊಗ್ಗ