ದಟ್ಟವಾಗಿ ಹಬ್ಬಿರುವ ಕಾಡಿನ ಹಸಿರ ನಡುವೆ ಸಂಚರಿಸುತ್ತಿರುವಾಗ ಏನೋ ಶಬ್ದ ಕೇಳಿ ಬೆಚ್ಚಿದಳು. ಅಲ್ವೇ…ಇಲ್ಲಿ ಕಾಡುಪ್ರಾಣಿಗಳಿರೋದಿಲ್ವ?? ಆಶ್ಚರ್ಯದಿಂದ ಕೇಳಿದಳು. ಇವೆ. ಆದರೆ ಅಷ್ಟೊಂದೇನೂ ಇಲ್ಲ ಅಂದೆ. ಆದರೂ ಅವಳಿಗೆ ಭಯ. ಅದು ಹೇಗೆ ನೀವೆಲ್ಲಾ ಈ ಒಂಟಿಮನೆಗಳಲ್ಲಿ ನಿರ್ಭೀತಿಯಿಂದ ಇರುತ್ತೀರಿ. ನಮ್ಮ ಕಡೆ ಮನೆಗಳೆಲ್ಲಾ ಒತ್ತೊತ್ತಾಗಿರುತ್ತವೆ. ಸುತ್ತಮುತ್ತ ಜನರಿರುತ್ತಾರೆ. ನಿಮ್ಮ ಕಡೆ ಜನ ತುಂಬಾ ಧೈರ್ಯವಂತರು.. ಅಂತ ಮೆಚ್ಚುಗೆ ವ್ಯಕ್ತಪಡಿಸಿದಳು. ನಾನು ಏನಾದರೂ ಇಲ್ಲಿ ಇದ್ದಿದ್ದರೆ ಎಲ್ಲಿ ಹುಲಿ ಬಂತೋ, ಕರಡಿ ಬಂತೋ ಎಂದು ಹೆದರಿ ಹೆದರಿ ಸಾಯುತ್ತಿದ್ದೆ… ಅಂದಳು. ಇಬ್ಬರೂ ನಗುತ್ತಾ ಸಾಗಿದೆವು.
ಭವ್ಯ ಟಿ.ಎಸ್. ಹೊಸ ಸರಣಿ “ಮಲೆನಾಡಿನ ಹಾಡು-ಪಾಡು” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ, ನಿಮ್ಮ ಕೆಂಡಸಂಪಿಗೆಯಲ್ಲಿ
ಹಸಿರುಟ್ಟು ನಕ್ಕಂತೆ ಲಲನೆ ಕಂಗೊಳಿಸುತ್ತಿದೆ ನೋಡು ಮಲೆನಾಡ ಮನೆ
ನಾನು ಶಿವಮೊಗ್ಗದಲ್ಲಿ ಬಿ.ಇಡಿ. ಶಿಕ್ಷಣ ಪಡೆಯುವಾಗ ಗೆಳತಿಯಾದ ಅಪ್ಪಟ ಉತ್ತರ ಕರ್ನಾಟಕದ ಹುಡುಗಿ ತನುಜಾ ಮಲೆನಾಡಿನ ನಮ್ಮ ಮನೆ ನೋಡಲೆಂದು ಬಂದಿದ್ದಳು. ಕಾಡು ಬೆಟ್ಟಗಳ ನಡುವೆ ತೋಟ ಗದ್ದೆಗಳಾವರಿಸಿದ ಹಸಿರ ಸಿರಿಯ ನಡುವೆ ಕಂಗೊಳಿಸುವ ಮಲೆನಾಡಿನ ಮನೆಗಳು ಸೌಂದರ್ಯದ ಸೂಜಿಗಲ್ಲಿನಂತೆ ಸೆಳೆಯುವುದು ಸಹಜ. ನಾವು ಎಲ್ಲಿಗೆ ಹೋದರೂ ಬಂದರೂ ಕೊನೆಗೆ ಈ ಮನೆಯೇ ನೆಮ್ಮದಿಯ ತಂಪು ತಾಣ. ನಿರ್ಜನ, ನೀರವ ಪರಿಸರ. ಶುದ್ಧ ತಂಗಾಳಿ. ಕಣ್ಮನ ತಣಿಸುವ ಹಸಿರು. ತನುಜಾ ಈ ಆಹ್ಲಾದಕರ ವಾತಾವರಣದ ಸೊಬಗ ಸವಿಯುತ್ತಿದ್ದಳು. ವಿವೇಕಾನಂದರ ತತ್ತ್ವಗಳಿಂದ ಪ್ರಭಾವಿತಳಾದ ಅವಳಿಗೆ ಪ್ರತಿನಿತ್ಯ ಮುಂಜಾನೆ ಮತ್ತು ಸಂಜೆ ಧ್ಯಾನ ಮಾಡುವ ಅಭ್ಯಾಸ. ನಮ್ಮ ಮನೆಯ ಪರಿಸರ ಧ್ಯಾನದ ಆನಂದವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿತ್ತು.
ಒಂದು ಸಂಜೆ ವಾಯುವಿಹಾರ ಮಾಡುತ್ತಿದ್ದೆವು. ನಿತ್ಯಹರಿದ್ವರ್ಣದ ಕಾಡುಗಳ ಬಗ್ಗೆ ಭೂಗೋಳದಲ್ಲಿ ಓದಿದ್ದೆ. ಆದರೆ ಇಲ್ಲಿಗೆ ಬಂದು ಕಣ್ಣಾರೆ ಕಂಡಂತಾಯಿತು ಎಂದು ಸಂತಸಪಟ್ಟಳು. ಹಾಗೆ ದಟ್ಟವಾಗಿ ಹಬ್ಬಿರುವ ಕಾಡಿನ ಹಸಿರ ನಡುವೆ ಸಂಚರಿಸುತ್ತಿರುವಾಗ ಏನೋ ಶಬ್ದ ಕೇಳಿ ಬೆಚ್ಚಿದಳು. ಅಲ್ವೇ…ಇಲ್ಲಿ ಕಾಡುಪ್ರಾಣಿಗಳಿರೋದಿಲ್ವ?? ಆಶ್ಚರ್ಯದಿಂದ ಕೇಳಿದಳು. ಇವೆ. ಆದರೆ ಅಷ್ಟೊಂದೇನೂ ಇಲ್ಲ ಅಂದೆ. ಆದರೂ ಅವಳಿಗೆ ಭಯ. ಅದು ಹೇಗೆ ನೀವೆಲ್ಲಾ ಈ ಒಂಟಿಮನೆಗಳಲ್ಲಿ ನಿರ್ಭೀತಿಯಿಂದ ಇರುತ್ತೀರಿ. ನಮ್ಮ ಕಡೆ ಮನೆಗಳೆಲ್ಲಾ ಒತ್ತೊತ್ತಾಗಿರುತ್ತವೆ. ಸುತ್ತಮುತ್ತ ಜನರಿರುತ್ತಾರೆ. ನಿಮ್ಮ ಕಡೆ ಜನ ತುಂಬಾ ಧೈರ್ಯವಂತರು.. ಅಂತ ಮೆಚ್ಚುಗೆ ವ್ಯಕ್ತಪಡಿಸಿದಳು. ನಾನು ಏನಾದರೂ ಇಲ್ಲಿ ಇದ್ದಿದ್ದರೆ ಎಲ್ಲಿ ಹುಲಿ ಬಂತೋ, ಕರಡಿ ಬಂತೋ ಎಂದು ಹೆದರಿ ಹೆದರಿ ಸಾಯುತ್ತಿದ್ದೆ… ಅಂದಳು. ಇಬ್ಬರೂ ನಗುತ್ತಾ ಸಾಗಿದೆವು.
ನಿಜ ಮಲೆನಾಡಿನ ಮನೆಗಳೇ ಹಾಗೆ ಕಾನನದ ತಪ್ಪಲಿನಲ್ಲಿ ಕಂಗೊಳಿಸುವ ಒಂಟಿ ಮನೆಗಳು. ಸದಾ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವ ರೈತರಿಗೆ ಮನೆಯ ಹತ್ತಿರವೇ ತೋಟ, ಗದ್ದೆಗಳು. ಮಲೆನಾಡಿನ ಅತಿಯಾದ ಮಳೆಗೆ ಹೊಂದುವಂತಿರುವ ಹೆಂಚಿನ ಮನೆಗಳಿವು. ವಿಶಾಲವಾದ ಜಗುಲಿ. ಸುಂದರ ಕುಸುರಿ ಕೆತ್ತನೆಯ ನುಣುಪಾದ ಮರದ ಕಂಬಗಳು. ದ್ವಾರ ಬಾಗಿಲು ದಾಟಿದರೆ ಒಳಗೆ ಚೌಕಿ ಮನೆ. ಸುತ್ತಲೂ ಕೋಣೆಗಳು. ಮಧ್ಯದಲ್ಲಿ ಅಂಗಳ. ಅಲ್ಲೊಂದು ತುಳಸಿಕಟ್ಟೆ. ಮನೆಯ ಹಿಂಭಾಗದಲ್ಲಿ ರಾಟೆಯಿಂದ ನೀರು ಸೇದುವ ಬಾವಿ. ಹೊರಗಿನ ಅಂಗಳದಲ್ಲಿ ದಾಸವಾಳ, ಮಲ್ಲಿಗೆ, ಕನಕಾಂಬರ, ನಿತ್ಯಪುಷ್ಪ ಹೂಗಿಡಗಳು. ತೋಟದಿಂದ ದಣಿದು ಬಂದವರು, ಮನೆಗೆ ಬಂದ ಅತಿಥಿಗಳು, ಮನೆಗೆಲಸದಿಂದ ವಿರಮಿಸುವ ಹೆಂಗಸರಿಗೆ ಜಗುಲಿ ಚಂದದ ತಾಣ. ಮಲಗಿ ವಿಶ್ರಾಂತಿ ಪಡೆಯಬಹುದು. ಹರಟೆ ಹೊಡೆಯಬಹುದು. ಕತೆ ಹೇಳಿ, ಕೇಳಿ ಮನರಂಜನೆ ಪಡೆಯಬಹುದು. ಜೊತೆಗೆ ಒಂದು ಎಲೆ ಅಡಿಕೆ ತಟ್ಟೆ ಇದ್ದೇ ಇರುತ್ತದೆ.
ತೋಟ, ಗದ್ದೆಯ ಕೆಲಸಕ್ಕೆ ಬರುವ ಆಳುಗಳಿಗೆ, ಬಂದು ಹೋಗುವ ಅತಿಥಿಗಳಿಗೆ ಜಗುಲಿಯಲ್ಲಿ ಕೂರಿಸಿ ಕಾಫಿ ಕೊಟ್ಟು ಉಪಚರಿಸುವುದು ಸಾಮಾನ್ಯ. ಈ ಮನೆಗಳ ಇನ್ನೊಂದು ವಿಶೇಷತೆ ಮುಚ್ಚಿಗೆಗಳು. ಮನೆಯ ಒಳಗಿನ ಕೋಣೆಗಳ ಮಾಳಿಗೆಗಳು ಮರದ ಮುಚ್ಚಿಗೆಗಳನ್ನು ಹೊಂದಿರುತ್ತವೆ. ಇದೊಂದುತರ ನೈಸರ್ಗಿಕ ಏರ್ ಕಂಡೀಶನರ್ ಎನ್ನಬಹುದು. ಬೇಸಿಗೆಯಲ್ಲಿ ಮನೆಯೊಳಗೆ ತಂಪು. ಮಳೆಗಾಲದಲ್ಲಿ ಬೆಚ್ಚಗಿನ ಅನುಭವ ನೀಡುತ್ತವೆ. ಪ್ರತಿ ಮನೆಯೂ ಉಪ್ಪರಿಗೆ ಹೊಂದಿರುತ್ತದೆ. ಉಪ್ಪರಿಗೆಗೆ ಮರದ ಅಥವಾ ಸಿಮೆಂಟ್‌ನ ಮೆಟ್ಟಿಲುಗಳಿರುತ್ತವೆ. ಮೇಲೆ ಕೋಣೆಗಳಿದ್ದು, ಅಲ್ಲಿ ಎಲ್ಲಾ ಹಳೆಯ ಫೋಟೋಗಳನ್ನು ಗ್ಯಾಲರಿಯಂತೆ ಪ್ರದರ್ಶನಕ್ಕಿಡುವುದು ನೋಡಲು ಸುಂದರ. ಇಲ್ಲಿ ಫೋಟೊ ನೋಡುತ್ತಾ ಗತಕಾಲಕ್ಕೆ ಹೋಗಿ ಬಂದ ಅನುಭವ ಪಡೆಯಬಹುದು. ಮನೆಗಳ ನೆಲ ನುಣುಪಾದ ಕೆಂಪುಬಣ್ಣದ್ದಾಗಿರುತ್ತವೆ.

ಮಳೆ ಸುರಿಯುವಾಗ ಮನೆಯ ಹೆಂಚುಗಳ ಮೇಲೆ ಬಿದ್ದ ನೀರು ಹೋಗಲು ಪೈಪ್ ಅಳವಡಿಸಿರುತ್ತಾರೆ. ಇದಕ್ಕೆ ಸೂರು ಬಾಯಿ ನೀರು ಎನ್ನುತ್ತಾರೆ. ಜಲಪಾತದಂತೆ ಬೀಳುವ ಈ ನೀರಿನಲ್ಲಿ ಆಡುವುದೇ ಖುಷಿ. ಮನೆಯ ಜಗುಲಿಯಲ್ಲಿ ಅಥವಾ ಉಪ್ಪರಿಗೆಯ ಕಿಟಕಿ ಬಳಿ ಕುಳಿತು ಸುರಿವ ಮಳೆ ಹನಿಗಳ ಸವಿಯನ್ನು ಮನದುಂಬಿಕೊಳ್ಳಬಹುದು. ಇನ್ನೂ ಅಡಿಕೆ ತೋಟದ ಕೊಯ್ಲು ಬಂದರೆ ಮನೆ ಅಂಗಳದ ತುಂಬಾ ಅಡಿಕೆ ಕೊನೆ ಸುಲಿಯುವವರ ಕಲರವ. ಅಂಗಳದಲ್ಲಿ ಸುಲಿದ ಅಡಿಕೆ ಬೇಯಿಸುವ ಒಲೆ, ಬೇಯಿಸಿದ ಅಡಿಕೆಯನ್ನು ಬೆತ್ತದ ತಟ್ಟಿಯ ಮೇಲೆ ಒಣಗಿಸುವುದು. ಹಿಂದೆ ಅಡಿಕೆ ಚಪ್ಪರ ಅಂತ ಮನೆ ಎದುರು ಬಿದಿರನ ಚಪ್ಪರ ಹಾಕುತ್ತಿದ್ದರು. ಅದನ್ನು ಹತ್ತಲು ಏಣಿ ಇರುತ್ತಿತ್ತು. ಬೇಯಿಸಿದ ಅಡಿಕೆಯನ್ನು ಬುಟ್ಟಿಯಲ್ಲಿ ಹೊತ್ತು ಚಪ್ಪರದ ಮೇಲೆ ಒಣಗಿಸುತ್ತಿದ್ದರು. ಹತ್ತುವುದು, ಇಳಿಯುವುದು ಕಷ್ಟ. ಜೊತೆಗೆ ಮಕ್ಕಳ ಸುರಕ್ಷತೆ ಮೊದಲಾದ ಕಾರಣಗಳಿಂದ ಈಗೀಗ ಈ ಅಡಿಕೆ ಚಪ್ಪರ ಕಣ್ಮರೆಯಾಗಿದೆ. ಬದಲಾಗಿ ಅಂಗಳದಲ್ಲೇ ಅಡಿಕೆಯನ್ನು ಟ್ರೇಗಳಲ್ಲಿ ಒಣಗಿಸಲಾಗುತ್ತಿದೆ. ಗದ್ದೆ ಕೊಯ್ಲು ಬಂತೆಂದರೆ ಮತ್ತೆ ಅಂಗಳದಲ್ಲಿ ಒಕ್ಕಲಾಟದ ಸಂಭ್ರಮ. ಕೊಯ್ದ ಪೈರನ್ನು ಒಕ್ಕಿ ತೆನೆಯಿಂದ ಕಾಳು ಬೇರ್ಪಡಿಸುವುದು, ತೂರುವುದು. ಒಂದು ಕಡೆ ಭತ್ತದ ರಾಶಿ, ಒಂದು ಕಡೆ ಹುಲ್ಲಿನ ಗೊಣಬೆ. ಮನೆಯೊಳಗೆ ಕಣಜ ಮಾಡಿ ಭತ್ತವನ್ನು ಅದರೊಳಗೆ ತುಂಬಿಡಲಾಗುತ್ತದೆ.
ಮಲೆನಾಡಿನ ಮನೆಗಳ ಅವಿಭಾಜ್ಯ ಅಂಗವೆಂದರೆ ದನದ ಕೊಟ್ಟಿಗೆ. ಮನೆಯ ಪಕ್ಕದಲ್ಲಿ ಸುವ್ಯವಸ್ಥಿತವಾದ ಕೊಟ್ಟಿಗೆ ಇರುತ್ತದೆ. ಕೃಷಿಕರ ಬದುಕಿಗೆ ಹಸುಗಳ ಗೊಬ್ಬರ ಜೀವಾಳ. ಕೊಟ್ಟಿಗೆಗೆ ದಿನವೂ ಕಾಡಿನಿಂದ ಸೊಪ್ಪನ್ನು ಹೊರೆಗಟ್ಟಲೆ ತಂದು ಹಾಕುತ್ತಾರೆ. ದನದ ಸಗಣಿ ಈ ಸೊಪ್ಪಿನ ಜೊತೆಗೆ ಬೆರೆತು ಫಲವತ್ತಾದ ಗೊಬ್ಬರ ಉಂಟಾಗುತ್ತದೆ. ಇದನ್ನು ಕೊಟ್ಟಿಗೆ ಪಕ್ಕದ ಗೊಬ್ಬರ ಗುಂಡಿಯಲ್ಲಿ ಸಂಗ್ರಹಿಸಿ. ತೋಟ ಗದ್ದೆಗಳ ಬೇಸಾಯದಲ್ಲಿ ಉಪಯೋಗಿಸಲಾಗುತ್ತದೆ.
ಇನ್ನೂ ಅಡುಗೆ ಮನೆಯಲ್ಲಿ ಕಟ್ಟಿಗೆ ಒಲೆ ಸಾಮಾನ್ಯ. ಬೆಳಿಗ್ಗೆ ಎದ್ದೊಡನೆ ಕಟ್ಟಿಗೆ, ಅಡಿಕೆಯ ಒಣಗಿದ ಸಿಪ್ಪೆಗಳಿಂದ ಒಲೆ ಹೊತ್ತಿಸಿದರೆ ದಿನಚರಿ ಪ್ರಾರಂಭ. ಈ ಒಲೆಯಲ್ಲಿ ಬೇಯಿಸಿದ ಅಡುಗೆಗೆ ವಿಶೇಷವಾದ ರುಚಿ. ಕಡೆಯುವ ಕಲ್ಲು, ಬೀಸುವ ಕಲ್ಲು, ಮಜ್ಜಿಗೆ ಕಡೆಯುವ ಕಡೆಗೋಲು ಇರಲೇಬೇಕು. ಮೊಸರಿನಿಂದ ಬಂದ ಬೆಣ್ಣೆ ಸಂಗ್ರಹಿಸಿಡಲು ಮಡಿಕೆಗಳನ್ನು ಮೇಲೆ ಸಿಕ್ಕದಿಂದ ತೂಗು ಹಾಕಿರುತ್ತಾರೆ.
ಬಚ್ಚಲುಮನೆಯ ವಿಶೇಷತೆಯೆಂದರೆ ಕಟ್ಟಿಗೆ ಒಲೆಯ ಮೇಲೆ ಅಳವಡಿಸಿರುವ ಬೃಹದಾಕಾರದ ಹಂಡೆಗಳು. ಒಲೆಯಲ್ಲಿ ಸದಾ ಬೆಂಕಿಯಾಡುತ್ತಿದ್ದು ಸದಾ ಕಾಲ ಬಿಸಿ ಬಿಸಿ ನೀರು ಲಭ್ಯವಿರುತ್ತದೆ. ಈ ಹಂಡೆ ನೀರಿನಲ್ಲಿ ಮೊಗೆಮೊಗೆದು ಸ್ನಾನ ಮಾಡುವುದೇ ಆನಂದ. ಈ ಸ್ನಾನದ ಸವಿ ಉಂಡವರಿಗೆ ಆಧುನಿಕ ಗೀಸರ್‌ನಿಂದ ಬರುವ ನಲ್ಲಿ ನೀರಿನ ಸ್ನಾನ, ಸ್ನಾನವೆಂದು ಅನಿಸುವುದೇ ಇಲ್ಲ.
ಮನೆಯ ಒಂದು ಕೋಣೆಯಲ್ಲಿ ಕೃಷಿಗೆ ಬೇಕಾಗುವ ಕತ್ತಿ, ಕೊಡಲಿ, ಹಾರೆ, ಗುದ್ದಲಿ, ಅಡಿಕೆ ಸುಲಿಯುವ ಮಣೆಯಿರುವ ಕತ್ತಿ, ನೇಗಿಲು, ನೊಗ, ತಟ್ಟಿ, ಬುಟ್ಟಿ, ತಲೆಗೆ ಹಾಕುವ ಮಂಡೆಹಾಳೆ ಎಂಬ ಅಡಿಕೆ ಮರದ ಹಾಳೆಯಿಂದ ಮಾಡಿದ ಟೊಪ್ಪಿ, ಮಳೆಗಾಲದಲ್ಲಿ ಉಪಯೋಗಿಸುವ ಕಂಬಳಿಕೊಪ್ಪೆಗಳನ್ನು ಸಂಗ್ರಹಿಸಿ ಇಟ್ಟಿರುತ್ತಾರೆ. ಮನೆಯಂಗಳದಲ್ಲಿ ಕಾಳುಮೆಣಸು, ಕಾಫಿ ಬೀಜ, ಜೀರಿಗೆ ಮೆಣಸು, ವಾಟೆ ಹುಳಿ ಹೀಗೆ ಹಲವು ಪದಾರ್ಥಗಳನ್ನು ಬಿಸಿಲಿಗೆ ಒಣಗಿಸಿರುವ ದೃಶ್ಯಗಳು ಸಾಮಾನ್ಯ.
ಮನೆಗಳ ಅಕ್ಕಪಕ್ಕದಲ್ಲಿ ಬನಗಳಿದ್ದು ಅಲ್ಲಿ ಆಯಾ ಮನೆಗಳು ಪೂಜಿಸುವ ದೈವಗಳ ಆವಾಸಸ್ಥಾನವಿರುತ್ತದೆ. ಭೂತದ ಬನ, ನಾಗರ ಬನ ಎಂದು ಇವುಗಳನ್ನು ಕರೆಯುತ್ತಾರೆ. ಹಬ್ಬ-ಹರಿದಿನಗಳಲ್ಲಿ ಈ ದೈವಗಳಿಗೆ ಹರಕೆ ಒಪ್ಪಿಸುವ ಪದ್ಧತಿ ಇದೆ.

ಈಗಲೂ ಹಲವು ಮಲೆನಾಡಿನ ಮನೆಗಳಲ್ಲಿ ಕಂಡುಬರುವ ಚಿತ್ರಣವಿದು. ಆಧುನಿಕತೆ ಕಾಲಿಟ್ಟಂತೆ ಬದಲಾವಣೆಗಳಾಗುತ್ತಿರುವುದು ಸಹಜ. ಆದರೆ ಅಪ್ಪಟ ಮಲೆನಾಡಿನ ಮನೆಗಳು ನೀಡುವ ಹಿತ ಮನಸ್ಸಿಗೆ ಬಹಳ ಆಪ್ತ. ಮಲೆನಾಡಿನ ಸಂಸ್ಕೃತಿಯನ್ನು ಕುಂದದಂತೆ ಕಾಯ್ದುಕೊಂಡು ಬರುತ್ತಿರುವ ಇಂತಹ ಮನೆಗಳು ತಮ್ಮ ಮೂಲಸ್ವರೂಪವನ್ನು ಕಳೆದುಕೊಳ್ಳದಿರಲಿ ಎಂಬುದೊಂದೇ ಹಾರೈಕೆ.

