ಮೊದಮೊದಲು ಇದನ್ನು ಶೈತಾನನ ಪೇಯವೆಂದು ನಿರ್ಬಂಧಿಸಿದ್ದ ಒಟ್ಟೋಮನ್ ಸುಲ್ತಾನ ನಂತರದ ದಿನಗಳಲ್ಲಿ ಇದು ಮದ್ಯ ಅಥವಾ ಮದಿರೆಯಂತಲ್ಲ ಎಂದು ಮನಗಂಡು ಸ್ವತಃ ತಾನೇ ಅದನ್ನು ಕುಡಿದು ಪರೀಕ್ಷಿಸಿ ಆ ನಿರ್ಬಂಧವನ್ನು ಸಡಿಲಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲಕಾಲಕ್ಕೂ ಇದು ಸಿಗುವಂತಿರಲಿಲ್ಲ. ಸೂಫಿಗಳು, ಸೈನಿಕರು, ಸಮಾಜದ ಗಣ್ಯರು, ಆಸ್ಥಾನ ವಿದ್ವಾಂಸರು, ಅಧಿಕಾರಿಗಳಿಗೆ ಮತ್ತು ಸಮರಕ್ಕೆ ಹೊರಟವರಿಗೆ ಮಾತ್ರ ಇದು ಸೀಮಿತವಾಗಿತ್ತು ಎಂದರೆ ಇವತ್ತಿಗೆ ನಂಬಲು ಕಷ್ಟವಾಗಬಹುದೇನೋ! ಇದರ ಕಾರಣವೇ ಇಂದು ನಾವು “ಟರ್ಕಿಶ್ ಕಾಫಿಯ” ಬಗ್ಗೆ ಆಗಾಗ ಕೇಳುತ್ತಿರುತ್ತೇವೆ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ಹದಿಮೂರನೆಯ ಕಂತು
ಕಳೆದ ಬಾರಿ ಕಾಫಿ ಹೇಗೆ ಇಥಿಯೋಪಿಯಾದ ‘ಕಫಾʼ ಪ್ರಾಂತ್ಯದಿಂದ ಯೆಮೆನ್‌ಗೆ ತೆರಳಿ ಅಲ್ಲಿಂದ ಅರೇಬಿಯಾ, ಪರ್ಷಿಯಾ, ಒಟ್ಟೊಮನ್ ಟರ್ಕಿಗಳಿಗೆ ತಲುಪಿತು ಎನ್ನುವುದರ ಬಗ್ಗೆ ಬರೆದಿದ್ದೆ. ಒಟ್ಟೋಮನ್ ಸಾಮ್ರಾಜ್ಯ ಕೇವಲ ಟರ್ಕಿಗೆ ಸೀಮಿತವಾಗಿರದೆ ಒಂದು ನಾಕುನೂರು- ಐದುನೂರು ವರ್ಷಗಳ ಕಾಲ ಇಡೀ ಅರೇಬಿಯಾವನ್ನ, ಪರ್ಷಿಯಾದ ಒಂದಷ್ಟು ಭಾಗವನ್ನ ಮತ್ತು ಮಧ್ಯ ಏಷಿಯಾದ ಉಜ್ಬೇಕಿಸ್ತಾನ್, ಅಜರ್ಭೈಜನ್ ಮುಂತಾದ ಸಿಲ್ಕ್ ರೂಟ್‌ನ ದೇಶಗಳಿಗೂ ವ್ಯಾಪಿಸಿತ್ತು. ಆಗ ಇಲ್ಲೆಲ್ಲಾ ಕಾಫಿಯ ಬೀಜಗಳು ಓಡಾಡಿವೆ! ಇದಕ್ಕೆ ಸೂಫಿಗಳು ಬಹು ಮುಖ್ಯ ಕಾರಣಕರ್ತರು ಎಂದರೆ ಅತಿಶಯೋಕ್ತಿಯಲ್ಲ.
ಇದರ ಜೊತೆಗೇ ದೇಶದ ಗಡಿಗಳನ್ನು ನಿದ್ದೆ ಬಿಟ್ಟು ಕಾಯುವ ಯೋಧರ ನಿದ್ರೆ ತಪ್ಪಿಸಲೋಸುಗ ‘ಖಾವ’ ಕುಡಿಯುತ್ತಿದ್ದುದು ತಿಳಿದು ಬರುತ್ತದೆ.
ಮೊದಮೊದಲು ಇದನ್ನು ಶೈತಾನನ ಪೇಯವೆಂದು ನಿರ್ಬಂಧಿಸಿದ್ದ ಒಟ್ಟೋಮನ್ ಸುಲ್ತಾನ ನಂತರದ ದಿನಗಳಲ್ಲಿ ಇದು ಮದ್ಯ ಅಥವಾ ಮದಿರೆಯಂತಲ್ಲ ಎಂದು ಮನಗಂಡು ಸ್ವತಃ ತಾನೇ ಅದನ್ನು ಕುಡಿದು ಪರೀಕ್ಷಿಸಿ ಆ ನಿರ್ಬಂಧವನ್ನು ಸಡಿಲಿಸುತ್ತಾನೆ. ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಎಲ್ಲಕಾಲಕ್ಕೂ ಇದು ಸಿಗುವಂತಿರಲಿಲ್ಲ. ಸೂಫಿಗಳು, ಸೈನಿಕರು, ಸಮಾಜದ ಗಣ್ಯರು, ಆಸ್ಥಾನ ವಿದ್ವಾಂಸರು, ಅಧಿಕಾರಿಗಳಿಗೆ ಮತ್ತು ಸಮರಕ್ಕೆ ಹೊರಟವರಿಗೆ ಮಾತ್ರ ಇದು ಸೀಮಿತವಾಗಿತ್ತು ಎಂದರೆ ಇವತ್ತಿಗೆ ನಂಬಲು ಕಷ್ಟವಾಗಬಹುದೇನೋ! ಇದರ ಕಾರಣವೇ ಇಂದು ನಾವು “ಟರ್ಕಿಶ್ ಕಾಫಿಯ” ಬಗ್ಗೆ ಆಗಾಗ ಕೇಳುತ್ತಿರುತ್ತೇವೆ.
ಅರೇಬಿಯಾದಿಂದ ಯೂರೋಪಿಗೆ ಕಾಫಿ ಹೇಗೆ ಹೋಗಿರಬಹುದು ಎಂದು ನೋಡುವಾಗ ಮತ್ತೊಂದು ಕುತೂಹಲವಾದ ವಿಷಯ ತಿಳಿಯುತ್ತದೆ.
ಅದೆಂದರೆ ಈ ಪೇಯದ ಬಗ್ಗೆ ಕೇಳಿ- ನೋಡಿ ತಿಳಿದಿದ್ದ ಡಚ್ ಅಧಿಕಾರಿಯೊಬ್ಬ (ಧೂತ) ಒಟ್ಟೋಮನ್‌ನ ಇಸ್ತಾಂಬುಲ್ನಿಂದ ಅಲ್ಲಿನ ಅಧಿಕಾರಿಯೊಬ್ಬನ ಹೆಂಡತಿಯನ್ನು ವರಿಸಿ ಕಾಫಿ ಗಿಡವೊಂದನ್ನು ಕದಿಯುವುದು, ಮತ್ತದನ್ನು ತನ್ನ ಹಡಗಿನ ಪ್ರಯಾಣದಲ್ಲಿ ತನಗೆ ಮೀಸಲಿದ್ದ ಸಿಹಿ ನೀರಿನಿಂದ ಪೋಷಿಸುವುದು, ನಂತರ ಅದನ್ನು ಆಮ್ಸ್ಟರ್‌ಡ್ಯಾಮ್‌ನಲ್ಲಿ ಅವರ ರಾಜನಿಗೆ ಒಪ್ಪಿಸುವುದು ನಡೆಯುತ್ತದೆ.
ಇದನ್ನು ಮೊದಲು ಆಮ್ಸ್ಟರ್‌ಡ್ಯಾಮ್‌ನ ತೋಟದಲ್ಲಿ ನೆಡುತ್ತಾರೆ. ಆನಂತರ, ಡಚ್ ಮತ್ತು ಫ್ರೆಂಚರ ಸೌಹಾರ್ದತೆಯ ಸಲುವಾಗಿ ಕೆಲವು ಬೀಜಗಳನ್ನು ಮತ್ತು ಸಸಿಯೊಂದನ್ನು ಡಚ್ ರಾಜ ಫ್ರೆಂಚಿನ ರಾಜ ಮನೆತನಕ್ಕೆ ಉಡುಗೊರೆಯಾಗಿ ಕೊಡುತ್ತಾನೆ.
ಹಾಗೆ ನೋಡಿದರೆ ಡಚ್ಚರು ಈ ಕಾಫಿಯನ್ನ ತಮ್ಮೆಲ್ಲಾ ವಸಾಹತುಗಳಿಗೆ ಕೊಂಡೊಯ್ಯುತ್ತಾರೆ. ಅವುಗಳಲ್ಲಿ ಶ್ರೀಲಂಕಾ, ಇಂಡೋನೇಷ್ಯಾ (ಆಗಿನ ಜಾವಾ, ಸುಮಾತ್ರಾ), ಫಿಲಿಫೈನ್ಸ್ ಮುಖ್ಯವಾದವು. ಫ್ರೆಂಚರು ತಡವಾಗಿ ಶುರುಮಾಡಿದರೂ, ಇದನ್ನ ತಮ್ಮ ವಸಾಹತುಗಳಾದ ಐವರಿ ಕೋಸ್ಟ್, ಹೈಟಿ (ಹೈಟಿ ಮಾರಣಹೋಮಕ್ಕೆ ಇದು ನಂತರ ಕಾರಣವಾಗುತ್ತದೆ), ಕ್ಯಾಮರೂನ್ ಕಡೆಗೆ ಕೊಂಡೊಯ್ದರೆ, ಬ್ರಿಟಿಷರಿಗೆ ಇದು ಟರ್ಕಿಯ ಜೊತೆಗಿನ ಉತ್ತಮ ಸಂಬಂಧದಿಂದ ಪರಿಶಿಯನ್ ಕೋರ್ಟ್‌ಲ್ಲಿ ಲೂಯಿ ಎಂಬ ಬ್ರಿಟಿಷ್ ರಾಜನಿಗೆ ಪರಿಚಯಿಸಲ್ಪಟ್ಟು, ಅವರು ಅದನ್ನು ತಮ್ಮ ವಸಾಹತುಗಳಾದ ವೆಸ್ಟ್ ಇಂಡೀಸ್ (ಗಯಾನ, ಸೈನ್ಟ್ ಕೀಟ್ಸ್ , ಟ್ರಿನಿಡಾಡ್ – ಟೊಬಾಗೋ, ಜಮೈಕಾ) ಮುಂತಾದ ಕಡೆಗೆ ಕೊಂಡೊಯ್ಯುತ್ತಾರೆ.
ಅಲ್ಲಿಂದ ಅದು ಲಾಟಿನ್ ಅಮೆರಿಕಾದ ದೇಶಗಳಾದ ಬ್ರೆಜಿಲ್, ಪೆರು, ಕೊಲಂಬಿಯಾ ಮುಂತಾದ ಅಮೆಜಾನ್ ಕಾಡು ದೇಶಗಳ ಕಡೆಗೆ ದಾಂಗುಡಿ ಇಡುತ್ತದೆ.
ಬಹುಶಃ ಅದು ಹೀಗೆಯೇ, ಬ್ರಿಟಿಷರಿಂದ ಭಾರತಕ್ಕೆ ಬಂದಿರಬೇಕು ಎಂದುಕೊಂಡಿದ್ದ ನನಗೆ ತಿಳಿದ ಮತ್ತೊಂದು ಆಶ್ಚರ್ಯದ ಸಂಗತಿ ಎಂದರೆ ಇದನ್ನ ಭಾರತಕ್ಕೆ ಅದರಲ್ಲೂ ಮೊದಲು ಕರ್ನಾಟಕಕ್ಕೆ ಪರಿಚಯಿಸಿದ್ದು “ಹಜ್ರತ್ ಶಾ ಜಮೀರ್ ಅಲ್ಲಹ ಮಜರಬಿ” ಎಂಬ ಸೂಫಿ ಸಂತ. ಆತನನ್ನ ನಾವು “ಬಾಬಾ ಬುಡನ್ ಸಾಬ್” ಎಂದು ಕೂಡ ಕರೆಯುತ್ತೇವೆ. ಆತನಿದ್ದ, ಓಡಾಡಿದ ಪರ್ವತಕ್ಕೆ ಬಾಬಾ ಬುಡನ್ ಗಿರಿ ಎಂದೂ, ದತ್ತಾತ್ರೇಯ ಪೀಠವೆಂದೂ ನಾಮಕರಿಸಿದ್ದೇವೆ.
ಅರಬ್ಬರ ಕಾಫಿಯ ಸಾರ್ವಭೌಮತ್ವವನ್ನ ಮುರಿದ ಹೆಗ್ಗಳಿಕೆ ಈತನಿಗೇ ಸಲ್ಲಬೇಕು. ಇದ್ದಕ್ಕೆ ಕಾರಣ ಹಸಿರು ಕಾಫಿ ಬೀಜದ ಕಳವಿಗೆ ಓಟೋಮನ್ ಸುಲ್ತಾನ ವಿಧಿಸುತ್ತಿದ್ದ ಶಿಕ್ಷೆ ಮರಣ ದಂಡನೆ (ಹುರಿದ ಬೀಜಗಳನ್ನ ಅದೂ ಮಿತವಾಗಿ ಮಾತ್ರ ರಫ್ತು ಮಾಡಬೇಕೆಂಬ ಫರ್ಮಾನ್ ನೂರಾರು ವರ್ಷಗಳ ಕಾಲ ಇತ್ತು). ಹೀಗಿರುವಾಗಲೂ 1690 ರ ಆಸುಪಾಸಿನಲ್ಲಿ ಸಮುದ್ರ ಮುಖೇನ ಮೆಕ್ಕಾಗೆ ತೆರಳಿದ್ದ ಬಾಬಾ ಬುಡನ್ ಸಾಬ್, ಯೆಮೆನ್ ಮಾರ್ಗವಾಗಿ ಹಿಂದಿರುಗಿ ಬರುವಾಗ ಅಲ್ಲಿನ ಮೋಕಾ ಬಂದರಿನಲ್ಲಿ (ಕೆಫೆ ಮೋಕಾ ನೆನಪಿದೆಯಲ್ಲ?) ಹಲವು ಸೂಫಿಗಳೊಟ್ಟಿಗೆ ಇದ್ದಾಗ ‘ಖಾವಾ’ ಕುಡಿಯುತ್ತಾರೆ. ತದನಂತರ ಅದರ ಮೇಲಿನ ಮೋಹಾಸಕ್ತಿಯಿಂದ ಅದನ್ನು ತಯಾರಿಸುವ ಪ್ರಕ್ರಿಯೆಯ ಬಗ್ಗೆ ಎಷ್ಟಾದರಷ್ಟನ್ನ ತಿಳಿಯುತ್ತಾರೆ. ಅದರ ರುಚಿಯ ಗುಂಗಿನ ಪ್ರಭಾವ ಎಷ್ಟಿತ್ತು ಎಂದರೆ ಆಗಲೇ ಹೊರಡುವಾಗ ಹಲವು ಹುರಿಯದ ಹಸಿರು ಬೀಜಗಳನ್ನ ತಮ್ಮ ಗಡ್ಡ, ಊರುಗೋಲು ಇತರೆಡೆಗಳಲ್ಲಿ ಬಚ್ಚಿಟ್ಟುಕೊಂಡು ಬಂದು,
ಮೊದಲಿಗೆ ಮೈಸೂರಿನ ವಿಂಧ್ಯಗಿರಿಯಲ್ಲಿ ಬೆಳೆಸುತ್ತಾರೆ. ಹಾಗೆ ಬೆಳೆಸುವ ವೇಳೆಗೆ ಅವರಲ್ಲಿದ್ದದ್ದು, ಏಳೆ ಏಳು ಬೀಜಗಳು ಎಂಬ ದಂತಕಥೆ ಇದೆ. ಅದಕ್ಕೆ ಭಾರತದಲ್ಲಿನ ಕೆಲವು ಕಾಫಿ ಶಾಪ್‌ಗಳ ಹೆಸರು “ಸೆವೆನ್ ಸೀಡ್ಸ್” ಅಂತ ಇರುವುದನ್ನು ಗಮನಿಸಬೇಕು.

ಕಾಲಾಂತರದಲ್ಲಿ ಇದು ಚಿಕ್ಕಮಗಳೂರಿನ ಬೆಟ್ಟಗಳಿಗೆ ವಿಸ್ತರಿಸುತ್ತದೆ. ಇವತ್ತು ದೇಶದ 70 ಪರ್ಸೆಂಟ್ ಕಾಫಿ ಕರ್ನಾಟಕದ ಕೊಡಗು, ಹಾಸನ, ಚಿಕ್ಕಮಗಳೂರಿನಿಂದ ರಫ್ತಾಗುತ್ತಿದ್ದರೆ ಅದಕ್ಕೆ ರೂವಾರಿ ಬಾಬಾ ಬುಡನ್ ಸಾಬ್ ಎಂಬ ಸಾವಿಗೆ ಹೆದರದ ಖಾವಾಗೆ ಮನಸೋತ ಸೂಫಿ ಸಂತ! ಬಹುಷಃ ಅದಕ್ಕೆ ನಮ್ಮ ಬಹುಪಾಲು ಕಾಫಿ ಅರೇಬಿಕಾ ಮಾದರಿಯದ್ದು, ಮತ್ತಿದು ಎತ್ತರದ ಅಂದರೆ 1800 ಮೀಟರ್‌ನ ಪರ್ವತಗಳಲ್ಲಿ ಬೆಳೆಯುತ್ತದೆ. ಬಹುಷಃ ಬ್ರಿಟಿಷರಿಂದ ನಮ್ಮಲ್ಲಿಗೆ ಬಂದದ್ದು ಚೀನಾದ ಟೀ ಎನ್ನಬಹುದು. ಟೀ ಪಸರಿಸಲು ಸಮುದ್ರ ಮಾರ್ಗವನ್ನ ಆಶ್ರಯಿಸಿದರೆ ಕಾಫಿ ಭೂಮಾರ್ಗವನ್ನ ಭಾಗಶಃ ಆಶ್ರಯಿಸಿತು, ಆದರೆ ಭಾರತಕ್ಕೆ ಮಾತ್ರ ಅದು ಬಾಬಾ ಬುಡನ್ ಸಾಬರ ಪ್ರಯತ್ನದಿಂದ ಸಮುದ್ರಮಾರ್ಗವನ್ನ ಹಿಡಿಯಿತು.
ಇಂತಹಾ ಕಾಫಿ ಅರೇಬಿಯಾದಲ್ಲಿ ಮಾತ್ರವಲ್ಲದೇ ಯುರೋಪಿನಲ್ಲಿ ಹೇಗೆ ಸಂಚಲನ ಮೂಡಿಸಿತು ಎನ್ನುವುದನ್ನು ಮುಂದೆ ಬರೆಯುತ್ತೇನೆ.

ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ (ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ನಾನೊಬ್ಬ ನಾವಿಕ “ (ಕವನ ಸಂಕಲನಗಳು), “ಅಪ್ಪನ ರಾಲೀಸ್ ಸೈಕಲ್” (ಪ್ರಬಂಧಗಳು). ಇವರ ಬರಹಗಳು ಹಲವು ವೆಬ್ ಹಾಗೂ ಕನ್ನಡ ದೈನಿಕಗಳಲ್ಲಿ ಪ್ರಕಟವಾಗಿವೆ. ದೇಶ ಸುತ್ತುವುದು, ಚರಿತ್ರೆ ಮತ್ತು ಅರ್ಥಶಾಸ್ತ್ರ ಸಂಬಂಧಿ ವಿಷಯಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

