ಹಾಗೆ ನೋಡಿದ್ರೆ ಅಜ್ಜಿಯ ದೃಷ್ಟಿಯಲ್ಲಿ ಕೃಷಿ ಕೆಲಸ ಈಗ ತುಂಬ ಸುಲಭ. `ಈಗೇನ್ ಕಣವ್ವಾ… ಬೇಕಾದಸ್ಟು ಯಂತ್ರಗಳು ಬಂದಿವೆ, ಸರ್ಕಾರದೋರು ಎಂತೆಂತದೋ ಕೊಡ್ತವ್ರೆ, ಆಗೆಲ್ಲ ಈಂಗೆಲ್ಲ ಇರ್ನಿಲ್ಲ. ಯಾತದಲ್ಲಿ ನೀರೆತ್ತಬೇಕಾಗಿತ್ತು. ಗುದ್ದಲಿಯಿಂದ ಅಗೀಬೇಕಾಗಿತ್ತು. ಎಲ್ಲ ನಾವೇ ಬೆಳೀತಾ ಇದ್ವು. ಆವಾಗ ಭಾಳಾ ತೊಂದರೆ. ಒಂದ್ ಕಿತಾ ಏಕಾಏಕಿ ಬರ ಬಂದು ಬಿಡ್ತು. ನೀರು ಸಮಸ್ಯೆ, ಎಷ್ಟೊಂದು ಜನ ಎಲ್ಲ ಸತ್ತೋದ್ರು. ಭೂಮಿ ಒಣಗಿ ಹೋಯ್ತಾಇತ್ತು. ಕಷ್ಟಪಟ್ಟು ತರಕಾರಿ ಸೊಪ್ಪುಗಳನ್ನೆಲ್ಲ ಇಲ್ಲೇ ಹುಣಸೆ ಮರದ ಹತ್ರ ಹೋಗಿ ಮಾರಾಟಮಾಡಿ ಬತ್ತಿದ್ದೆ…’ ಇದು ಅಜ್ಜಿ ಮಾತಾಡ್ತಿದ್ದದ್ದು 1980-85 ದಶಕದ ವಿಷ್ಯ.
ಭಾರತಿ ಹೆಗಡೆ ಬರೆದ ‘ಮಣ್ಣಿನ ಗೆಳತಿ’ ಪುಸ್ತಕದಿಂದ ಒಂದು ಲೇಖನ

 

ಕೃಷಿಕಾಯಕಕ್ಕೆ ಯಾವ ವಯಸ್ಸಾದರೇನು, ಮುಖ್ಯ ಕೆಲಸ ಮಾಡುವ ಹುಮ್ಮಸ್ಸು, ಛಲ ಬೇಕಷ್ಟೇ. ಹಣ, ಅಂತಸ್ತು ಏನೂ ಇಲ್ಲದೇ ಜಮೀನು ಖರೀದಿಸಿ, ತೋಟ ಎಬ್ಬಿಸಿದ ಲಕ್ಷ್ಮಮ್ಮಜ್ಜಿಗೀಗ ವಯಸ್ಸು ಎಂಬತ್ತು ಮೀರಿರಬಹುದು. ಈಗಲೂ ಬೆಳಗಿನಿಂದ ಸಂಜೆತನಕ ಕೃಷಿಕಾಯಕದಲ್ಲೇ ತೊಡಗಿರುವ ಅವರ ಅನುಭವದ ಕತೆಗಳು ಇಲ್ಲಿವೆ.

ಲಕ್ಷ್ಮಮ್ಮಜ್ಜಿಯತೋಟ

ಮಾಗಡಿಯ ಹೊಂಬಾಳಮ್ಮನ ಪೇಟೆಯಿಂದ ಹೊರ ಬಂದರೆ ಎದುರಿಗೆ ದೊಡ್ಡದಾದ ತೋಟ. ಅಲ್ಲಿ ಅಡಕೆ, ತೆಂಗು, ಬಾಳೆ, ಪೇರಳೆ ಎಲ್ಲ ಸಮೃದ್ಧವಾಗಿ ಬೆಳೆದಿರುವಂತ ತೋಟವಿದೆ. ಅದರೊಳಕ್ಕೆ ಹೊಕ್ಕರೆ ಸುಮಾರು 80-85 ವರ್ಷದ ಅಜ್ಜಿಯೊಬ್ಬರು ತಲೆ ಬಗ್ಗಿಸಿಕೊಂಡು ತೋಟದ ಸುತ್ತ ಇರುವ ಕಳೆ ಕೀಳುತ್ತ ಕೂತಿದ್ದಾರೆ. ಬೆಳಗ್ಗೆ ತಂದ ತಿಂಡಿ ಬುಟ್ಟಿ ಹಾಗೆಯೇ ಇದೆ. ತೋಟವನ್ನು ಸ್ವಚ್ಛಗೊಳಿಸುವ ಕಾಯಕದಲ್ಲಿ ನಿರತರಾಗಿರುತ್ತಾರೆ ಈ ಅಜ್ಜಿ.

ಸ್ವತಃ ಅಜ್ಜಿಯೇ ಎಬ್ಬಿಸಿದ ತೋಟವಿದು. `ಏನಜ್ಜೀ… ಕಳೆ ತೆಗೆದದ್ದಾಯ್ತ…’ ಎಂದು ಮಾತನಾಡಿಸಿದರೆ, ಎಲೆಅಡಿಕೆ ಅಗಿದು ಕೆಂಪಾಗಿರುವ, ಒಂದೂ ಹಲ್ಲುಗಳಿಲ್ಲದ ಬೊಚ್ಚು ಬಾಯನ್ನು ತೆಗೆದು ಜೋರಾಗಿ ನಕ್ಕು, ಪಕ್ಕದಲ್ಲೇ ಇದ್ದ ಮಗ ಸೊಸೆಯನ್ನಷ್ಟು ಬೈದು, `ಈ ತೋಟ ನಂದು, ನಾ ಮಾಡದಿದ್ದರೆ ಇನ್ಯಾರು ಗೇದಾರು…’ ಎಂದು ಕೇಳುತ್ತಾಳೆ. `ತರಕಾರಿ ಮಂಕ್ರಿ ಹೊತ್ತು ಚಪ್ಪಲಿ ಇಲ್ಲದ ಕಾಲಿನಲ್ಲಿ ಇಡೀ ಮಾಗಡಿ ಸುತ್ತಿ, ತರಕಾರಿ, ಸೊಪ್ಪು ಮಾರಾಟ ಮಾಡಿದ್ದೇನೆ. ಬೆಂಗಳೂರಿನತಂಕ ಹೋಗೀನಿ. ನಾನೂ ನನ್ನ ಓರಗಿತ್ತಿನೂ ಸೇರ್ಕಂಡು, ಅಲ್ಲಿ ಹೋಗಿ ಅವರೆಲ್ಲ ಮಸಾಲೆ ದೋಸೆ, ಇನ್ನೂ ಏನೇನೋ ತಿಂದ್ರೂ ನಾ ಮಾತ್ರ ಎರಡು ಇಡ್ಲಿಗೇ ಸಾಕು ಮಾಡ್ತಿದ್ದೆ. ದುಡ್ಡು ಖರ್ಚಾದರೆ ಮನೆ ನಡೆಸಲು ಕಷ್ಟ ಆಯ್ತದೆಂದು. ಹೀಂಗೇ ಕಣವ್ವಾ… ಹೊಟ್ಟೆಬಟ್ಟೆ ಕಟ್ಟಿ ಮಕ್ಕಳನ್ನು ಸಾಕಿದೆ. ಈ ಜಮೀನು ತಗಂಡು ತೋಟ ಬೆಳೆದೆ. ಇಲ್ಲಿನ ಒಂದೊಂದು ಅಡಕೆ ಮರ, ತೆಂಗಿನ ಸಸಿಗಳೆಲ್ಲಾನೂವೆ ನಾನೇ ಹಾಕಿರೋದು. ಯಜಮಾನ ಅನಿಸ್ಕಂಡವನಿಗೆ ಕುಡ್ಯಾಕೇ ಟೇಮೆಲ್ಲ ಓಯ್ತಿತ್ತು. ಇನ್ನೆಲ್ಲಿ ತೋಟ ಮಾಡ್ಯಾನು? ಹಂಗಾಗಿ ನಾನೇ ನಿಂತು ಮಾಡಿದೆ. ಈಗ ಮಗನಿಗೂ ತ್ವಾಟ ಬ್ಯಾಡ. ಒಂದಿನ ಕಳೆ ತೆಗ್ದಿಲ್ಲ, ಸಸಿ ಹೂಣಿಲ್ಲ…’ ಎಂದು ಕಣ್ಣೀರಿಟ್ಟ ಅಜ್ಜಿ ಬದುಕೆಲ್ಲ ಕಳೆದದ್ದು ವ್ಯವಸಾಯದಲ್ಲೇ.

(ಭಾರತಿ ಹೆಗಡೆ)

ಅಜ್ಜಿಯ ತಾಯಿಮನೆ ಮಾಗಡಿ ಸಮೀಪ ವ್ಯಾಸರಾಯನ ಪಾಳ್ಯ. ಮದುವೆ ಆಗಿ ಮಾಗಡಿಗೆ ಬಂದರು. ಗಂಡ ದೊಡ್ಡ ನರಸಿಂಹಯ್ಯ. ಕೂಲಿನಾಲಿ ಮಾಡಿಕೊಂಡು ಹೇಗೋ ಜೀವನ ಸಾಗಿಸುತ್ತಿದ್ದರು. ಇದೆಲ್ಲ ಸಾಲದು, ಒಂದಷ್ಟು ಜಾಗ ತಗಂಡು ಕೃಷಿ ಮಾಡುವಾ ಎಂದು ಪಟ್ಟು ಹಿಡಿದರು ಲಕ್ಷ್ಮಮ್ಮ. ಗಂಡ ಎಲ್ಲಿ ಕೇಳಿಯಾನು? ಓಗ್ ಮೊದ್ಲು ಎಂದು ಟವಲು ಕೊಡವಿ ಹೊರಟುಬಿಟ್ಟ. ಲಕ್ಷ್ಮಮ್ಮ ಹಿಡಿದ ಪಟ್ಟು ಬಿಡಲೇಇಲ್ಲ. ಇಪತ್ತು ಗುಂಟೆ ಜಾಗವನ್ನು 1976ರಲ್ಲೇ ಕೊಂಡರು. ಗಂಡ ಬೇಗ ತೀರಿ ಹೋದರು. ನಂತರ ಇಬ್ಬರು ಮಕ್ಕಳನ್ನೂ ನೋಡಿಕೊಂಡು, ತೋಟವನ್ನೂ ಏಕಾಂಗಿಯಾಗಿ ಬೆಳೆಸಿದ ಗಟ್ಟಿಗಿತ್ತಿ ಅಜ್ಜಿ ಇವರು.

ಹಾಗೆ ನೋಡಿದ್ರೆ ಅಜ್ಜಿಯ ದೃಷ್ಟಿಯಲ್ಲಿ ಕೃಷಿ ಕೆಲಸ ಈಗ ತುಂಬ ಸುಲಭ. `ಈಗೇನ್ ಕಣವ್ವಾ… ಬೇಕಾದಸ್ಟು ಯಂತ್ರಗಳು ಬಂದಿವೆ, ಸರ್ಕಾರದೋರು ಎಂತೆಂತದೋ ಕೊಡ್ತವ್ರೆ, ಆಗೆಲ್ಲ ಈಂಗೆಲ್ಲ ಇರ್ನಿಲ್ಲ. ಯಾತದಲ್ಲಿ ನೀರೆತ್ತಬೇಕಾಗಿತ್ತು. ಗುದ್ದಲಿಯಿಂದ ಅಗೀಬೇಕಾಗಿತ್ತು. ಎಲ್ಲ ನಾವೇ ಬೆಳೀತಾ ಇದ್ವು. ಆವಾಗ ಭಾಳಾ ತೊಂದರೆ. ಒಂದ್ ಕಿತಾ ಏಕಾಏಕಿ ಬರ ಬಂದು ಬಿಡ್ತು. ನೀರು ಸಮಸ್ಯೆ, ಎಷ್ಟೊಂದು ಜನ ಎಲ್ಲ ಸತ್ತೋದ್ರು. ಭೂಮಿ ಒಣಗಿ ಹೋಯ್ತಾಇತ್ತು. ಕಷ್ಟಪಟ್ಟು ತರಕಾರಿ ಸೊಪ್ಪುಗಳನ್ನೆಲ್ಲ ಇಲ್ಲೇ ಹುಣಸೆ ಮರದ ಹತ್ರ ಹೋಗಿ ಮಾರಾಟಮಾಡಿ ಬತ್ತಿದ್ದೆ…’ ಇದು ಅಜ್ಜಿ ಮಾತಾಡ್ತಿದ್ದದ್ದು 1980-85 ದಶಕದ ವಿಷ್ಯ. ಆಗ ಮಾಗಡಿ ಸೇರಿದಂತೆ ಅನೇಕ ಹಳ್ಳಿಗಳಲ್ಲಿ ವಿಪರೀತ ಬರ ಬಂದಿತ್ತು. ಹಾಗಾಗಿ ಅಜ್ಜಿಯಂಥ ಅನೇಕ ಪುಡಿ ರೈತರೆಲ್ಲ ಹೈರಾಣಾಗಿ ಹೋಗಿದ್ದರು. ಅಂಥ ಸಮಯದಲ್ಲೂ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸಿದ ಗಟ್ಟಿಗಿತ್ತಿ ಈ ಅಜ್ಜಿ.

`ಆ ಕಾಲಕ್ಕೆ ನನ್ನ ಎರಡು ಚಿನ್ನದ ಓಲೆ, ಬೆಳ್ಳಿಯ ಡಾಬು, ಕಾಲ್ಗಡಗ ಎಲ್ಲಕೊಟ್ಟು ನನ್ನ ಮಾವನೋರು ತನ್ನ ಮಗಂಗೆ ನನ್ನ ತಂದು ಮದುವೆ ಮಾಡ್ಕಂಡು ಬಂದಿರಾದು… ಇದೇ ಬೆಳ್ಳಿ ಕಾಲ್ಗಡಗ 100 ರೂ. ಗೆ ಮಾರಿ, ಆಗ ಈ ಜಾಗನ ರಿಜಿಸ್ಟ್ರೇಸನ್ ಮಾಡಿಸ್ಕಂಡೆ. ಈಗಾದ್ರೆ ಆತಿತ್ತಾ… 20 ಗುಂಟೆಜಾಗ ಇದು. ಏನೆಂದ್ರೆ ಏನೂ ಇರ್ಲಿಲ್ಲ… ಈಗ ನೋಡು…’ ಎಂದು ಹೆಮ್ಮೆಯಿಂದ ಸುತ್ತ ಬೆಳೆದ ತೋಟವನ್ನೊಮ್ಮೆ ಕಣ್ಣು ಹಾಯಿಸಿ ಕೇಳಿದಳು.

ಬೀಜ ವಿನಿಮಯ

`ಮನೆಯ ಸುತ್ತಾಗಂಟ ತರಕಾರಿ, ಸೊಪ್ಪುಗಳನ್ನು ಬೆಳೀತಿದ್ದೆ. ನಂತರ ತೋಟ ಹಾಕಿದ್ಮೇಲೆ ಇಲ್ಲಿ ವೀಳ್ಯದೆಲೆ ಹಾಕಿ ಮಾರಾಟ ಮಾಡ್ತಿದ್ದೆ. ನಮ್ ತೋಟದ ವೀಳ್ಯದೆಲೆಗೆ ಭಾಳಾ ಡಿಮಾಂಡು… ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಅಜ್ಜಿಗೆ… “ಅಜ್ಜಿ, ಬೀಜಗಳನ್ನೆಲ್ಲ ಎಲ್ಲಿಂದ ತರ್ತಿದ್ರಿ… ಕೊಂಡ್ಕೋತಿದ್ರಾ… ಗೊಬ್ಬರ ಯಾವುದು ಹಾಕ್ತಾ ಇದ್ರಿ, ಹುಳಗಳ ಹತೋಟಿಗೇನು ಮಾಡ್ತಾಇದ್ರಿ…’ ಎಂದೆಲ್ಲ ಕೇಳಿದ್ರೆ.. “ಅಯ್ಯ, ತಕಣಿ.. ನಾವ್ಯಾವುದನ್ನೂ ಕೊಳ್ಳಾಕ ಹೋಗ್ತಿರ್ಲಿಲ್ಲ ತಾಯೀ. ಅದ್ನೆಲ್ಲ ಕೊಳ್ಳಾಕೆ ದುಡ್ಡೆಲ್ಲೈತೆ ನಮ್ ತಾವ… ಏನೋ ನನ್ಹತ್ರ ಇದ್ದ ಬೀಜ ನನ್ನ ನೆಂಟರಿಗೆ ಕೊಡೋದು, ನೆಂಟ್ರತಾವ ಇರೋದು ನಾ ಇಸ್ಕೊಳ್ಳೋದು ಮಾಡ್ತಾಇದ್ವಿ. ನೆಂಟರ ಮನೆಗೆ, ಹಬ್ಬಗಳಿಗೆಲ್ಲ ಓಗೋವಾಗಲೂ ಬರಿಗೈಲಿ ಯಾರೂ ಓಗ್ತಾನೇ ಇರ್ಲಿಲ್ಲ. ನಮ್ಮಲ್ಲಿದ್ದ ಬೀಜಗಳನ್ನು ಸೆರಗಲ್ಲಿ ಕಟ್ಟಿಕೊಂಡೇ ಓಗ್ತಾ ಇದ್ವಿ’ ಎಂದು ನೆನಪುಗಳ ಗಂಟನ್ನು ಬಿಚ್ಚಿಟ್ಟಳು ಅಜ್ಜಿ.

(ಲಕ್ಷ್ಮಮ್ಮಜ್ಜಿ)

ಇನ್ನು ಈ ಸರ್ಕಾರಿ ಗೊಬ್ಬರ, ಅಂಗಡಿ ಗೊಬ್ಬರಗಳನ್ನೆಲ್ಲ ಕೇಳ್ದೋರೇ ಅಲ್ಲ ನಾವು. ಹಸು, ಕುರಿ, ಸೊಪ್ಪಿನ ಗೊಬ್ಬರ ಹಾಕೇ ಬೆಳದದ್ದು ನಾವು. ನಮ್ಗೀ ಗೊಬ್ಬರ ಇಚಾರನೇ ಕೇಳಿಲ್ಲ ಬಿಡ್ರಿ. ಬೂದಿ ಹೊಡೆದ್ರೆ, ಗಂಜಳದ ನೀರು ಚೆಲ್ಲಿದ್ರೆ ಯಾವ ಹುಳದ ಕಾಟಾನೂ ಇರಂಗಿಲ್ಲ. ನಾ ಬೆಳೆದ ತರಕಾರಿ ತುಂಬ ರುಚಿ ಜಾಸ್ತಿ ಎಂದು ಈ ಊರಿನ ಗೌಡ್ರುಗಳೇ ಅಂದು ಏಳಿ ತಕಓಗ್ತಿದ್ರು…’ ಎಂದಳು.

ಗಂಡ ಅಥವಾ ಅಪ್ಪ ಬೇರೆ ಬೆಳೆ ಹಾಕೋವಾಗ ನೀ ನಿಂಗೆ ಬೇಕಾದ ಬೀಜಗಳನ್ನು ಹಾಕ್ಕೊತಿದ್ಯಾ ಅಜ್ಜಿ ಎಂದು ಕೇಳಿದ್ರೆ, ಅವರೆಲ್ಲ `ಏನ್ ಆಗ್ತಾ ಇದ್ರು, ಏನಿಲ್ಲ, ಎಲ್ಲ ನಾ ಹಾಕಿ ಬೆಳೆದೆ, ಮಾರಿದೆ. ಜಾಗ ತಗಂಡೆ, ಕೆಲ್ಸ ಮಾಡ್ದೆ ಅಟೇಯ. ಇಷ್ಟಿಷ್ಟು ದಪ್ಪ ಮಂಕ್ರಿ ಒತ್ಕೊಂಡು ಊರೂರು ತಿರುಗೀನಿ…’ ಎಂದು ಮುಖದ ಹತ್ರಕೈ ತಂದು ತಿರುಗಿಸಿ ತಿರುಗಿಸಿ ಹೇಳಿದಳು. ಈ ಮಳೆ ಹೀಗೆಲ್ಲ ಕೈ ಕೊಡುತ್ತಲ್ಲ, ಇದ್ರಿಂದ ನಿಂಗೆ ಸಮಸ್ಯೆ ಆಗ್ಲಿಲ್ಲವಾ ಎಂದು ಕೇಳಿದ್ರೆ, ‘ತರಕಾರಿ ಸೊಪ್ಪು ಮಾಡೋವಾಗ ಆಗ ಈಟೊಂದು ಮಳೆಯೇ ಇರ್ನಿಲ್ಲಿಲ್ಲ ಬುಡಿ. ತೋಟ ಬೆಳೆದ ಮೇಲೆ ನಂಗಿವೆಲ್ಲ ಏನೂ ಕಾಟ ಆಗಿಲ್ಲ. ದುಡೀಬೇಕು. ಇದ್ರ ಜತೆಯೇ ಇರ್ಬೇಕು. ಅಂದ್ರ ಮಾತ್ರ ಭೂಮ್ತಾಯಿ ಕೈ ಬಿಡಂಗಿಲ್ಲ’ ಎಂದು ಕೃಷಿ ವೇದಾಂತ ಹೇಳಿದ ಅಜ್ಜಿ, ಬೆಳಗ್ಗೆ ಒಂದು ಲೋಟ ಕಾಫಿಯನ್ನಷ್ಟೇ ಕುಡಿದು ತೋಟದ ಕೆಲ್ಸಕ್ಕೆ ಬಂದಿದ್ದಳು.

ಇನ್ನು ಇಲ್ಲಿಂದ ಕದಲೋದು ರಾತ್ರಿಯೇ… ಎಂದು ಮಗ ಗಂಗನರಸಿಂಹಯ್ಯನವರು ವಿವರಿಸಿದರು. ಹೀಗೆ ತಾನೇ ನೆಟ್ಟು ಬೆಳೆಸಿದ ತೋಟವಿಂದು ಚೆನ್ನಾಗಿ ಆಗಿರುವುದನ್ನು ಹೆಮ್ಮೆಯಿಂದ ನೋಡುವ ಅಜ್ಜಿಗೆ ಅಂದಿನಿಂದ ಇಂದಿನವರೆಗೂ ರಾಸಾಯನಿಕಗೊಬ್ಬರ, ಕೀಟ ನಾಶಕಗಳನ್ನೆಲ್ಲ ಕೇಳಿ ಗೊತ್ತಿಲ್ಲ. ಅವಳ ಬದುಕೆಷ್ಟು ಸರಳವೋ ಅಷ್ಟೇ ಸಹಜ ಮತ್ತು ಸರಳ ಅವಳ ತೋಟಗಾರಿಕೆ ಕೂಡ.

 

(ಪುಸ್ತಕ: ಮಣ್ಣಿನ ಗೆಳತಿ (ಕೃಷಿ ಮಹಿಳೆಯರ ಅನುಭವ ಕಥನ), ಲೇಖಕರು: ಭಾರತಿ ಹೆಗಡೆ, ಪ್ರಕಾಶನ: ವಿಕಾಸ ಪ್ರಕಾಶನ, ಬೆಲೆ: 180/-)