ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್. ದಿವಾಕರ್ ಬರೆದ ಮುನ್ನುಡಿ
ನನಗೆ ಲಂಡನ್ ಮಹಾನಗರವನ್ನು ಪರೋಕ್ಷವಾಗಿ ಪರಿಚಯ ಮಾಡಿಕೊಟ್ಟವರು ಕನ್ನಡ ಸಾಹಿತ್ಯದ ಪ್ರಮುಖರಲ್ಲೊಬ್ಬರಾದ ವಿ.ಸೀ. (ವಿ.ಸೀತಾರಾಮಯ್ಯ). ಒಂದು ದಿನ ಅವರ ಜೊತೆ ಮಾತಾಡುತ್ತಿರುವಾಗ ಲಂಡನ್ನಿನ ಪ್ರಸ್ತಾಪ ಬಂತು. ಕೂಡಲೇ ಅವರು “ಆಂಥೊನಿ ಟ್ರೊಲೋಪ್ ಹೇಳಿದನಲ್ಲಪ್ಪ, ಲಂಡನ್ ಅನಿಂಟೆಲಿಜಬಲ್ ಅಂತ” ಎಂದು ಸಣ್ಣಗೆ ನಕ್ಕರು. ತಕ್ಷಣ ತಮ್ಮ ಬಳಿಯಲ್ಲಿದ್ದ ಒಂದು ಬಿಳಿ ಹಾಳೆಯನ್ನು ತೆಗೆದುಕೊಂಡು, ಅದರ ಮೇಲೆ ಹಿಂದೆ ಮುಂದೆ ಮೇಲೆ ಕೆಳಗೆ ತೋರು ಬೆರಳನ್ನು ಆಡಿಸುತ್ತ, “ಇದು ನೋಡಪ್ಪ ಲಿಂಕನ್ಸ್ ಇನ್, ಇದು ಎಸೆಕ್ಸ್ ಸ್ಟ್ರೀಟ್, ಈ ಕಡೆ ತಿರುಗಿದರೆ ರಸೆಲ್ ಸ್ಕ್ವೇರ್, ಇಲ್ಲಿಂದ ಮೇಲಕ್ಕೆ ಹೋದರೆ ಬಕಿಂಗ್ಹ್ಯಾಮ್ ಪ್ಯಾಲೆಸ್….” ಎಂದೆಲ್ಲ ಹೇಳುತ್ತ ನಕಾಶೆ ಬಿಡಿಸಿದರು; ಫ್ಲೀಟ್ ಸ್ಟ್ರೀಟ್, ಸವಾಯ್ ಹೋಟೆಲ್, ಪಿಕಡೆಲಿ ಸರ್ಕಸ್, ನಾಟಿಂಗ್ ಹಿಲ್ ಗೇಟ್, ಕ್ಯಾಕ್ಸ್ಟನ್ ಹಾಲ್, ಪ್ರಿಮ್ರೋಸ್ ಹಿಲ್, ರೀಜೆಂಟ್ಸ್ ಪಾರ್ಕ್, ಸ್ಟ್ರಾಂಡ್, ಇತ್ಯಾದಿ ಎಲ್ಲೆಲ್ಲಿವೆಯೆಂದು ತೋರಿಸಿದರು. ಲಂಡನ್ನಿನಲ್ಲಿ ವಾಸ ಮಾಡಿದ ವಿಲಿಯಂ ಬ್ಲೇಕ್, ಜೇಮ್ಸ್ ಬಾಸ್ವೆಲ್, ಲೂಯಿಸ್ ಕ್ಯಾರಲ್, ಡೇನಿಯಲ್ ಡೀಫೊ, ಹೆನ್ರಿ ಫೀಲ್ಡಿಂಗ್, ಚಾರ್ಲ್ಸ್ ಡಿಕನ್ಸ್, ಜಾನ್ ರಸ್ಕಿನ್ ಮೊದಲಾದ ಲೇಖಕರ ಗುಣಗಾನವಾಯಿತು. ಡಿಕನ್ಸನ ದೃಷ್ಟಿಯಲ್ಲಿ ಲಂಡನ್ ಒಂದು ಮಾಯಾಲಾಂದ್ರವಾಗಿತ್ತೆಂದೂ ಅವನ ಹಲವು ಕಾದಂಬರಿಗಳಿಗೆ ಲಂಡನ್ನೇ ಕ್ರಿಯಾಕ್ಷೇತ್ರವಾಗಿತ್ತೆಂದೂ ವಿವರಿಸಿದರು. ಲಂಡನ್ನಿನ ಒಂದು ಐತಿಹಾಸಿಕ ಸ್ಥಳ 1585ರಲ್ಲಿ ನಿರ್ಮಾಣಗೊಂಡ ‘ಸ್ಪ್ಯಾನಿಯಾರ್ಡ್ಸ್ ಇನ್’. ಹೆದ್ದಾರಿ ದರೋಡೆಕೋರರು ತಂಗುತ್ತಿದ್ದ ಆ ಜಾಗವನ್ನು ಡಿಕನ್ಸ್ ತನ್ನ ‘ಪಿಕ್ವಿಕ್ ಪೇಪರ್ಸ್’ನಲ್ಲೂ ಬ್ರ್ಯಾಮ್ ಸ್ಟೋಕರ್ ತನ್ನ ‘ಡ್ರಾಕುಲಾ’ದಲ್ಲೂ ಉಲ್ಲೇಖಿಸಿರುವುದಾಗಿ ಹೇಳಿದರು.

(ಡಾ. ಪ್ರೇಮಲತ ಬಿ.)
ಲಂಡನ್ನನ್ನು ಅಲ್ಲೇ ಹುಟ್ಟಿ ಬೆಳೆದ, ಆ ನಗರವನ್ನು ಚೆನ್ನಾಗಿ ಬಲ್ಲ ಒಬ್ಬ ಇಂಗ್ಲಿಷಿನವನಂತೆ ಚಿತ್ರಿಸುತ್ತಿದ್ದ ವಿ.ಸೀ. ಎಂದೂ ಆ ನಗರಕ್ಕೆ ಹೋಗಿಬಂದಿರಲಿಲ್ಲ. ಅವರಿಗೆ ಲಂಡನ್ ಅಷ್ಟೆಲ್ಲ ಹತ್ತಿರವಾಗಿದ್ದದ್ದು ಇಂಗ್ಲಿಷ್ ಸಾಹಿತ್ಯ ಕೃತಿಗಳ ಆಳವಾದ ಅಧ್ಯಯನದಿಂದ. ಇಷ್ಟಕ್ಕೂ ಲಂಡನ್ ಎನ್ನುವುದು, ಬ್ರಿಟಿಷ್ ಲೇಖಕ ವಿ.ಎಸ್. ಪ್ರಿಟ್ಚೆಟ್ ಬರೆದಿರುವಂತೆ “ಈಗ ಜಗತ್ತಿನಲ್ಲಿ ಪ್ರಬಲವಾಗಿರುವ ಒಂದು ಭಾಷೆಯ ಬಂಡವಾಳ ಮೂಲ. ಗ್ರೇಟ್ ಬ್ರಿಟನ್ ಆ ಭಾಷೆಯನ್ನು ರೂಪಿಸಿತು, ಲಂಡನ್ ಅದನ್ನು ಮುದ್ರಿಸಿ ಆಕರ್ಷಕವಾಗಿ ಕಾಣುವಂತೆ ಮಾಡಿತು.”
ಇಂಗ್ಲಿಷ್ ಜನ ಎಂಥವರು? ಅವರ ಗುಣಾವಗುಣಗಳು, ನಡಾವಳಿಗಳು ಎಂಥವು? ಪ್ರಖ್ಯಾತ ಲೇಖಕ ಇ.ಎಂ. ಫಾರ್ಸ್ಟರ್ನ ‘ನೋಟ್ಸ್ ಆನ್ ದಿ ಇಂಗ್ಲಿಷ್ ಕ್ಯಾರೆಕ್ಟರ್’ ಎಂಬ ಲೇಖನ ಇಂಗ್ಲಿಷ್ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ ಎನ್ನಬಹುದು. ಅದರ ಮುಖ್ಯಾಂಶ ಹೀಗೆ: ಸಾಮಾನ್ಯ ಇಂಗ್ಲಿಷ್ ಪ್ರಜೆ ತನ್ನ ಸುಸಂಸ್ಕೃತ ವ್ಯಕ್ತಿತ್ವಕ್ಕೆ ತಾನು ಕಲಿತ ಶಾಲೆಯೇ ಕಾರಣ ಎಂದು ನಂಬುತ್ತಾನೆ. ಆ ಶಾಲೆ ಅವನಿಗೆ ತನ್ನೊಳಗಿನ ಭಾವನೆಗಳನ್ನು ಬೇಕಾಬಿಟ್ಟಿ ವ್ಯಕ್ತಪಡಿಸಬಾರದೆಂದೂ, ಅವುಗಳನ್ನು ಒಂದು ವಿಶಿಷ್ಟ ಸಂದರ್ಭದಲ್ಲಷ್ಟೇ ಹೊರಹಾಕಬೇಕೆಂದೂ ಹೇಳಿಕೊಟ್ಟಿರುತ್ತದೆ. ಯಾಕೆಂದರೆ ಭಾವನೆಗಳನ್ನು ಆಲೂಗೆಡ್ಡೆಯ ಹಾಗೆ ತೂಕಹಾಕಲಾಗದು. ಅವನು ಯಾವಾಗ ನಗಬೇಕು, ಯಾವಾಗ ಅಳಬೇಕು ಎನ್ನುವುದೂ ಅವನ ಸಂಸ್ಕೃತಿ-ನಿರ್ಧರಿತ. ಇದಕ್ಕೆ ಒಳ್ಳೆಯ ಉದಾಹರಣೆಯೆಂದರೆ (ಹಿಂದೆ ಪ್ರಸಿದ್ಧವಾಗಿದ್ದ) ‘ಪಂಚ್’ ಪತ್ರಿಕೆ ಮತ್ತು ಅದರಲ್ಲಿರುತ್ತಿದ್ದ ವ್ಯಂಗ್ಯಚಿತ್ರಗಳು. ಒಟ್ಟಿನಲ್ಲಿ ಇಂಗ್ಲಿಷರದು ಅಪೂರ್ಣ (ಇನ್ಕಂಪ್ಲೀಟ್) ವ್ಯಕ್ತಿತ್ವ. ಇಂಥ ಹಲವು ವ್ಯಕ್ತಿತ್ವಗಳನ್ನು ಚಿತ್ರಿಸುವ ಮೂರು ಪುಸ್ತಕಗಳನ್ನು ನಾನಿಲ್ಲಿ ಉಲ್ಲೇಖಿಸಬೇಕು. ಜಾನ್ ಮೂರ್ ಬರೆದ ‘ಪೋಟ್ರ್ರೇಟ್ ಆಫ್ ಎಲ್ಮ್ಬರಿ’, ‘ಬ್ರೆನ್ಷಾಮ್ ವಿಲೇಜ್’, ‘ದಿ ಬ್ಲೂ ಫೀಲ್ಡ್’ ಎಂಬ ಮೂರು ಕೃತಿಗಳು ಎರಡು ಮಹಾಯುದ್ಧಗಳ ನಡುವಣ ಇಂಗ್ಲಿಷ್ ಗ್ರಾಮೀಣ ಜೀವನವನ್ನು ತಿಳಿಹಾಸ್ಯದ ಧಾಟಿಯಲ್ಲಿ ತುಂಬ ಸೊಗಸಾಗಿ ಚಿತ್ರಿಸುತ್ತವೆ. ಹಳ್ಳಿಯ ಮಾರುಕಟ್ಟೆ, ಪಬ್ಬು, ಕ್ರಿಕೆಟ್ ಪಂದ್ಯ, ಅಂಕುಡೊಂಕಾಗಿ ಹರಿಯುವ ನದಿ, ಐತಿಹಾಸಿಕ ಅಬೆ, ಇತ್ಯಾದಿ ಹಿನ್ನೆಲೆಯಲ್ಲಿ ವಿವಿಧ ವರ್ಗಗಳ, ಹುಚ್ಚುಚ್ಚಾಗಿ ವರ್ತಿಸುವ ತೀರ ವಿಚಿತ್ರ ಜನರೂ ಈ ಕೃತಿಗಳಲ್ಲಿದ್ದಾರೆ. (ಇವನ್ನು ಓದುತ್ತಿರುವಾಗ ನನಗೆ ನಮ್ಮ ಗೊರೂರು ರಾಮಸ್ವಾಮಿ ಅಯ್ಯಂಗಾರರ ಕೆಲವು ಕತೆಗಳು ನೆನಪಾಗುತ್ತಿದ್ದವು.)
ಪ್ರೇಮಲತ ಬಿ. ಅವರು ಕಳೆದ ಕೆಲವು ದಶಕಗಳಿಂದ ಯು.ಕೆ.ಯಲ್ಲಿ ನೆಲೆಸಿರುವವರು. ವೃತ್ತಿಯಿಂದ ದಂತವೈದ್ಯರಾಗಿರುವ ಅವರಿಗೆ ಸಹಜವಾಗಿಯೇ ಅಲ್ಲಿನ ವಿವಿಧ ವರ್ಗಗಳ, ವೃತ್ತಿಗಳ ಜನರ ಸಂಪರ್ಕವುಂಟಾಗಿದೆ. ‘ವಿದೇಶ ಪ್ರಯಾಣ, ಕೈತುಂಬ ಕಾಂಚಾಣ’ ಎಂಬ ಈ ಕೃತಿಯಲ್ಲಿ ಅವರ ಒಟ್ಟಾರೆ ಅನುಭವಗಳ ಚಿತ್ರಣವಿದೆ. ಇದನ್ನು ಅವರು ‘ಅನಿವಾಸಿಯ ನಿವಾಸಿ ಕಥನ’ ಎಂದು ಕರೆದಿರುವುದು ತೀರ ಅರ್ಥಪೂರ್ಣ.
19ನೆಯ ಶತಮಾನದಲ್ಲಿ ಲಾರ್ಡ್ ಥಾಮಸ್ ಮೆಕಾಲೆ ಬ್ರಿಟಿಷ್ ಆಡಳಿತದ ಹಿತದೃಷ್ಟಿಯಿಂದ ಭಾರತದಲ್ಲಿ ಕೆಲವು ಶೈಕ್ಷಣಿಕ ಸುಧಾರಣೆಗಳನ್ನು ಜಾರಿಗೆ ತಂದನಷ್ಟೆ. ಅವುಗಳಲ್ಲಿ ಇಂಗ್ಲಿಷ್ ಶಿಕ್ಷಣವೂ ಒಂದು. (ಇದರ ಪರಿಣಾಮವಾಗಿ ಕನ್ನಡವೂ ಸೇರಿದಂತೆ ಬಹುಮಟ್ಟಿಗೆ ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯದಲ್ಲೂ ಸೃಜನಶೀಲತೆಯ ಹೊಸಗಾಳಿ ಬೀಸಿತು. ನಮ್ಮಲ್ಲಿ ಬಿ.ಎಂ.ಶ್ರೀ. ಯವರ ‘ಇಂಗ್ಲಿಷ್ ಗೀತೆಗಳುʼ ನವೋದಯ ಕಾವ್ಯದ ಮೇಲೆ ಮಾಡಿದ ಪರಿಣಾಮ ಅಷ್ಟಿಷ್ಟಲ್ಲ.) ಜೊತೆಗೆ ಇಂಗ್ಲೆಂಡಿಗೆ ಹೋಗಿ ಕಲಿಯುವ ಭಾರತೀಯರ ಹಾಗೂ ಭಾರತದ ವಿಶ್ವವಿದ್ಯಾಲಯಗಳಲ್ಲಿ ಬೋಧಿಸುವ ಇಂಗ್ಲಿಷ್ ಪ್ರಾಧ್ಯಾಪಕರ ಸಂಖ್ಯೆಯೂ ಹೆಚ್ಚಿತು. ದೇಶದ ಆಡಳಿತದಲ್ಲಿ, ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿದವರಿಗೆ ವಿಪುಲ ಅವಕಾಶಗಳು ದೊರೆತವು. ಈಗಂತೂ ಇಂಗ್ಲಿಷ್ ಒಂದು ವಾಣಿಜ್ಯ ವ್ಯವಹಾರದ ಭಾಷೆ. ಅದನ್ನು ಕಲಿಯುವವರಲ್ಲಿ ನೂರಕ್ಕೆ ತೊಂಬತ್ತೊಂಬತ್ತು ಮಂದಿಗೆ ಶೇಕ್ಸ್ಪಿಯರನಾಗಲೀ ಇಂಗ್ಲಿಷ್ ಸಾಹಿತ್ಯದ ಬೇರೆ ಯಾವನೇ ಲೇಖಕನಾಗಲೀ ಬೇಡವೇ ಬೇಡ. ಈಗ ಕೆಲವು ನಿರ್ದಿಷ್ಟ ರಂಗಗಳಲ್ಲಿ ನೈಪುಣ್ಯವಿರುವವರು ತಾವು ಕಲಿತ ಇಂಗ್ಲಿಷ್ ಭಾಷೆಯ ನೆರವಿನಿಂದ ಯು.ಕೆ. ಅಷ್ಟೇ ಅಲ್ಲ, ಜಗತ್ತಿನ ಯಾವುದೇ ದೇಶಕ್ಕೆ ಹೋಗಿ ಕೆಲಸ ಮಾಡಬಹುದು; ಇಷ್ಟವಿದ್ದರೆ ಅಲ್ಲಿಯೇ ಖಾಯಂ ಆಗಿ ನೆಲೆಸಲೂಬಹುದು.
ಪ್ರೇಮಲತ ಅವರ ಈ ಕೃತಿಯಲ್ಲಿ ಅವರ ಸಾಹಸ ಪ್ರವೃತ್ತಿಯ ಜೊತೆಗೆ ಅವರ ವೃತ್ತಿ ಜೀವನದ ಅನುಭವ, ಯು.ಕೆ.ಯ ಕೆಲವು ಮುಖ್ಯ ಸ್ಥಳಗಳ ವರ್ಣನೆ, ಜನಜೀವನದ ಗುಣಾವಗುಣಗಳು, ಕೆಲವು ವ್ಯಕ್ತಿಗಳ ವೈಶಿಷ್ಟ್ಯಗಳು, ಕೆಲವು ಮಾನವೀಯ ಘಟನೆಗಳು, ಇವೆಲ್ಲ ಇವೆ. ಸ್ಕಾಟಿಷ್ ಜನರ ಬಗ್ಗೆ, ಬ್ರಿಟನ್ನಿನ ಆಹಾರೋದ್ಯಮದ ಬಗ್ಗೆ, ಬ್ರಿಟಿಷರ ರಾಣಿಯ ಬಗ್ಗೆ, ಪ್ರವಾಸೀ ಸ್ಥಳಗಳ ಬಗ್ಗೆ, ಬಿಗ್ಬೆನ್, ರಿಚ್ಮಂಡ್ ಪಾರ್ಕ್ ಮೊದಲಾದವುಗಳ ಬಗ್ಗೆ, ಬ್ರಿಟನ್ನಿನಲ್ಲಿರುವ ಗಾಂಧಿ ಪ್ರತಿಮೆಗಳ ಬಗ್ಗೆ, ಐಸಾಕ್ ನ್ಯೂಟನ್ ಬಗ್ಗೆ ಅವರು ಅತ್ಯಂತ ಉತ್ಸಾಹದಿಂದ ಬರೆದಿದ್ದಾರೆ. ಇವೆಲ್ಲವೂ ಅಂತರ್ಜಾಲದಲ್ಲಿ ಧಾರಾಳವಾಗಿ ದೊರೆಯುವುದರಿಂದ ನನಗೆ ಬ್ರಿಟಿಷರ ಹೆಸರುಗಳ ಬಗ್ಗೆ, ಪೋಲೀಸರು ಮತ್ತು ನಿಯಮಗಳ ಬಗ್ಗೆ, ಅವರ ಪ್ರಾಣಿಪ್ರೀತಿಯ ಬಗ್ಗೆ, ಅಲ್ಲಿನ ಋತುಗಳ ಬಗ್ಗೆ, ಜೋಸೆಫ್ ಮ್ಯಾಕ್ಮ್ಯಾನರ್ಸ್ ಎಂಬ ಅಪರೂಪದ ವೈದ್ಯನ ಬಗ್ಗೆ ಬರೆದಿರುವುದು ಹೆಚ್ಚು ಪ್ರಿಯವಾಗುತ್ತದೆ. ಯಾಕೆಂದರೆ ಇಂಥ ಲೇಖನಗಳಲ್ಲಿ ಪ್ರೇಮಲತ ಅವರ ಸೂಕ್ಷ್ಮಗ್ರಾಹಿಯಾದ ಮನಸ್ಸು, ಕಂಡದ್ದನ್ನು ಗ್ರಹಿಸಿ ಪರಿಭಾವಿಸುವ ವಿಧಾನ ಅವರ ಸಂವೇದನಾಶೀಲ ವ್ಯಕ್ತಿತ್ವದ ಒಂದು ಭಾಗವಾಗಿಯೇ ಒಡಮೂಡಿವೆ. ಅವರದು ವಿಚಾರಸ್ಪಷ್ಟತೆಯುಳ್ಳ, ಓದುಗರ ಮನವೊಲಿಸುವಂಥ ಭಾಷಾಶೈಲಿ. ಕೆಲವು ಕಡೆ ಅವರ ವರ್ಣನೆಗಳು ತಮ್ಮ ಆಲಂಕಾರಿಕ ಭಾಷೆಯಿಂದ ಎಂಥ ಕಾವ್ಯಗುಣ ಪಡೆದುಕೊಳ್ಳುತ್ತವೆ ಎಂಬುದಕ್ಕೆ ಈ ಕೆಲವು ವಾಕ್ಯಗಳೇ ಸಾಕು: “ಇದು ಚಳಿಯ ದೇಶವೆಂದೇ ಗುರುತಿಸಲ್ಪಟ್ಟರೂ ಇಲ್ಲಿಯೂ ಬೇಸಿಗೆಯಿದೆ, ಚೈತ್ರವಿದೆ, ಶರದೃತುವಿದೆ. ಈ ಪ್ರತಿಯೊಂದು ಋತುಮಾನಗಳು ತರುವ ವ್ಯತ್ಯಾಸ ಅತ್ಯಂತ ನಾಟಕೀಯವಾದದ್ದು. ಉದಾಹರಣೆಗೆ ನಾವು ಕಾರನ್ನು ಓಡಿಸುತ್ತ, ಇಲ್ಲಿ ಈ ಕಟ್ಟಡವಿತ್ತು, ಆ ಹೊಲವಿತ್ತು ಎಂದು ಲ್ಯಾಂಡ್ಮಾರ್ಕ್ಗಳನ್ನು ನೆನಪಿಟ್ಟುಕೊಂಡು ಚಳಿಗಾಲದಲ್ಲಿ ಓಡಾಡಿದೆವೆನ್ನಿ. ವಸಂತನ ಆಗಮನ ಆದ ಕೂಡಲೇ ಮತ್ತೆ ಮತ್ತೆ ಕೊಚ್ಚಿದರೂ ಮರಳಿ ಬರುವ ಪ್ರಕೃತಿ ಅದು ಹೇಗೆ ಚಿಗುರುತ್ತದೆಂದರೆ, ಬೇಲಿಯ ಹಸಿರು ಹೊಲವನ್ನು ನುಂಗುತ್ತದೆ. ಮರಗಳ ದಟ್ಟ ಹಸಿರು ರಸ್ತೆಗೆ ಕಾಣುವಂತಿದ್ದ ಕಟ್ಟಡಗಳನ್ನು ನುಂಗಿಹಾಕುತ್ತದೆ…. ಚಳಿಗಾಲದಲ್ಲಿ ರಸ್ತೆಗಳ ಇಕ್ಕೆಲದಲ್ಲಿರುವ ಮರಗಳಲ್ಲಿ ಒಂದೇ ಒಂದು ಹಸಿರೆಲೆ ಇಲ್ಲದಂತೆ ಮಾಯವಾಗುತ್ತವೆ. ಮಾರ್ಚಿನ ಶುರುವಾಯ್ತಿನ ವೇಳೆಗೆ ಎಳೆ ಹಸಿರಿನ ಚಿಗುರು ಕ್ಷೀಣವಾಗಿ ನಗುವ ಸೂರ್ಯನ ಬೆಳಕಲ್ಲಿ ಮೈಕಾಂತಿಯೊಂದಿಗೆ ಮಿನುಗತೊಡಗುತ್ತದೆ. ಸೂರ್ಯನ ಹೊಂಬಣ್ಣಕ್ಕಿಂತ ಕಡು ಹಳದಿ ಬಣ್ಣವಿರುವ, ಬಟ್ಟಲುಗಣ್ಣಿನ, ಮೃದು ಪಕಳೆಗಳ ಡ್ಯಾಫೋಡಿಲ್ಲುಗಳು ಎಲ್ಲೆಲ್ಲೂ ಹುಟ್ಟಿ ನಳನಳಿಸುತ್ತವೆ…. ಚೆರ್ರಿ ಬ್ಲಾಸಮ್ ಮರಗಳು ಬಿಳಿ, ತಿಳಿ ಗುಲಾಬಿ, ಕಡುಕುಂಕುಮ ಬಣ್ಣದ ಹೂಗಳಿಂದ ಸಿಂಗಾರಗೊಂಡು ವಸಂತನ ಹಬ್ಬಕ್ಕೆ ಸೌಂದರ್ಯವನ್ನು ಹೊದ್ದು ಸಡಗರ ತುಂಬಿಬಿಡುತ್ತವೆ. ಮ್ಯಾಗ್ನೋಲಿಯಾ ಮರಗಳು ಇಡೀ ಮರವೇ ಹೂವಾಗಿ ನಗಲು ಶುರು ಮಾಡುತ್ತವೆ. ಕಡು ಹಳದಿ ಬಣ್ಣದ, ತೋರಣಗಳಂತಹ ಹೂವಿನ ಗುಚ್ಛಗಳನ್ನು ತೂಗಿ ನಿಲ್ಲುವ ಲ್ಯಾಬರ್ನಮ್ ಮರಗಳು ಈ ಸೌಂದರ್ಯ ಸ್ಪರ್ಧೆಗೆ ಹೊಸ ಹುರುಪನ್ನು ತೋರುತ್ತವೆ. ನೆಲದ ಮಟ್ಟದಲ್ಲಿ ಹ್ಯಾಸಿಂತ್ಗಳು ಘಮ್ಮನೆ ಸುವಾಸನೆಯನ್ನು ಬೀರಿ ಗೆಜ್ಜೆಕಟ್ಟಿ ಅರಳುತ್ತವೆ….”
ಹೊಸದೊಂದು ದೇಶವನ್ನು ಮೊಟ್ಟಮೊದಲು ನೋಡುವ ಲೇಖಕರಲ್ಲಿ ಎರಡು ಬಗೆ. ಒಂದು ಬಗೆಯವರು ಮುಗ್ಧ ಮನೋಭಾವದವರು. ಅವರು ಎಲ್ಲವನ್ನೂ ನೋಡುವುದು ಕುತೂಹಲದ ಕಣ್ಣುಗಳಲ್ಲಿ. ಕುತೂಹಲವಿರುವಲ್ಲಿ ಬೆರಗೂ ಇರುತ್ತದೆ ಎಂಬುದನ್ನು ಮರೆಯಬಾರದು. ಎರಡನೆಯ ಬಗೆಯವರು ಪ್ರಬುದ್ಧರು. ಅವರದು ಕುತೂಹಲಕ್ಕಿಂತ ಮಿಗಿಲಾಗಿ ನೋಡಿದ್ದೆಲ್ಲವನ್ನೂ ಇದೇಕೆ ಹೀಗೆ ಎಂದು ಪ್ರಶ್ನಿಸುವ ಪ್ರವೃತ್ತಿ. ಪ್ರೇಮಲತ ಅವರಲ್ಲಿ ಈ ಎರಡೂ ಬಗೆಯವರೂ ಇದ್ದಾರೆ. ಈ ಪುಸ್ತಕದ ಆರಂಭದಲ್ಲೇ ಅವರು “ಭಾರತದಲ್ಲೇ ಇರುವಾಗ ಎಂದಿಗೂ ನಮ್ಮನ್ನು ಬಾಧಿಸದಿದ್ದ ವಿಷಯಗಳೆಲ್ಲ, ನಮ್ಮನ್ನು ಶತಮಾನಗಳ ಕಾಲ ಆಳಿದ ಬ್ರಿಟಿಷರ ನಾಡಿಗೆ ಹೊರಡಲು ಸನ್ನದ್ಧರಾದಾಗ ತಲೆಯಲ್ಲಿ ದಾಂಗುಡಿಯಿಟ್ಟು, ಒಂದು ಬಗೆಯ ದ್ವಂದ್ವ ಮತ್ತೊಂದು ಬಗೆಯ ಸಮಾಧಾನ ಎರಡನ್ನೂ ಅನುಭವಕ್ಕೆ ತಂದವು” ಎಂದು ಬರೆದಿದ್ದಾರೆ. ಈ ಪುಸ್ತಕದುದ್ದಕ್ಕೂ ಅವರು ಕೆಲವೊಮ್ಮೆ ನೇರವಾಗಿ, ಬಹುಮಟ್ಟಿಗೆ ಸೂಚ್ಯವಾಗಿ ಯುನೈಟೆಡ್ ಕಿಂಗ್ಡಮ್ಮಿನ ಆಡಳಿತವನ್ನು, ಅಲ್ಲಿನ ನಿಯಮಪಾಲನೆಯನ್ನು, ಆ ಜನರ ಶಿಸ್ತನ್ನು, ನಿಯಮಬಾಹಿರವಲ್ಲದ, ಭ್ರಷ್ಟಾಚಾರರಹಿತ ಸಮಾಜವನ್ನು ಭಾರತದೊಡನೆ ಹೋಲಿಸುತ್ತ ನಮ್ಮಲ್ಲಿ ಹಾಗಿಲ್ಲವಲ್ಲ ಎಂದು ಹಳಹಳಿಸುವಂತಿದೆ. ಇನ್ನೊಂದು ಕಡೆ “ನಾವು ಯಾವುದೇ ದೇಶಕ್ಕೆ ಹೋದರೂ, ವಿದೇಶೀಯರು ಎಂದ ಮೇಲೆ ನಾವು ಎರಡನೆಯ ದರ್ಜೆಯ ಪ್ರಜೆಗಳೇ ಸರಿ. ಅದು ಇಂಗ್ಲೆಂಡಿಗೂ ನಿಜ. ಆದರೆ ಭಾರತೀಯರಾಗಿದ್ದುಕೊಂಡೇ ಭಾರತದಲ್ಲಿ ದುಡ್ಡಿಲ್ಲದಿದ್ದರೆ, ವಶೀಲಿಯಿಲ್ಲದಿದ್ದರೆ ನಾವು ಮೂರನೆಯ ದರ್ಜೆಯ ಪ್ರಜೆಗಳು ತಾನೆ? ಈ ಅರಿವಿದ್ದರಂತೂ ಮಿಕ್ಕಿದ್ದೆಲ್ಲ ಗೌಣವೇ ಸರಿ” ಎಂದು ಸಮಾಧಾನಪಟ್ಟುಕೊಂಡಿದ್ದಾರೆ. ಇಂಥ ಹೋಲಿಕೆ ಯಾಕೆ? ಇಡೀ ಜಗತ್ತನ್ನು ಆಕ್ರಮಿಸಿಕೊಂಡು ಆಳಿದ, ಹಲವು ದೇಶಗಳ ಸಂಪತ್ತನ್ನು ಲೂಟಿ ಹೊಡೆದ ದೇಶವೊಂದು ಎಲ್ಲ ದೃಷ್ಟಿಯಿಂದಲೂ ನಮಗಿಂತ ಉತ್ತಮವಾಗಿರುವುದರಲ್ಲಿ ವಿಶೇಷವೇನಿದೆ?

(ಎಸ್. ದಿವಾಕರ್)
ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಪ್ರೇಮಲತ ಅವರು ಬಗೆಬಗೆಯ ಸಂಕಷ್ಟಗಳನ್ನು ಎದುರಿಸಿ, ಅತೀವ ಪರಿಶ್ರಮದಿಂದ, ಸಂಕಲ್ಪಬಲದಿಂದ ಸಾಧಿಸಬಹುದಾದ್ದನ್ನು ಸಾಧಿಸಿ ಜೀವನದಲ್ಲಿ ಒಂದು ಹಂತ ತಲಪಿರುವ ಸಾಹಸಿ. ಅವರು ಇಲ್ಲಿ ತಮ್ಮ ಹಲವು ವರ್ಷಗಳ ಬ್ರಿಟಿಷ್ ವಾಸ್ತವ್ಯವನ್ನು ಆಳವಾಗಿ ಪರಿಶೀಲಿಸುವ ಮೂಲಕ ಅಲ್ಲಿನ ಜನಜೀವನವನ್ನು ಹೇಗೋ ಹಾಗೆ ಅಲ್ಲಿನ ಜೀವನವಿಧಾನವನ್ನೂ, ಜನತೆಯ ನಡಾವಳಿಯನ್ನೂ, ನೈಸರ್ಗಿಕ ಪರಿಸರವನ್ನೂ ಸವಿವರವಾಗಿ ಚಿತ್ರಿಸಿದ್ದಾರೆ.

ಕನ್ನಡದಲ್ಲಿ ಅಮೆರಿಕವನ್ನು ಕುರಿತ ಪ್ರವಾಸ ಕೃತಿಗಳಿಗೆ ಹೋಲಿಸಿದರೆ ಬ್ರಿಟನ್ನನ್ನು ಕುರಿತ ಪ್ರವಾಸ ಕೃತಿಗಳು ಬೆರಳೆಣಿಕೆಯಷ್ಟೂ ಇರಲಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಪ್ರೇಮಲತ ಅವರ ಈ ಕೃತಿಗೆ ವಿಶೇಷ ಮಹತ್ವವಿದೆ. ಒಂದು ದೇಶವನ್ನು ಕೇವಲ ಒಬ್ಬ ಪ್ರವಾಸಿಯಾಗಿ ಕೆಲವಾರು ದಿನ ಸುತ್ತಿಬಂದು ಬರೆಯುವುದಕ್ಕೂ ಅದೇ ದೇಶದಲ್ಲಿ ಹತ್ತಾರು ವರ್ಷ ವಾಸ ಮಾಡಿ, ಅಲ್ಲಿನ ಜೀವನದಲ್ಲಿ ಸಕ್ರಿಯವಾಗಿ ಬೆರೆತು ಬರೆಯುವುದಕ್ಕೂ ಎಷ್ಟೆಲ್ಲ ವ್ಯತ್ಯಾಸವಿರುತ್ತದೆಯೆಂದು ವಿವರಿಸುವ ಅಗತ್ಯವಿಲ್ಲ. ಪ್ರೇಮಲತ ಅವರು ಸಾಕಷ್ಟು ದೀರ್ಘಾವಧಿಯಲ್ಲಿ ಯುನೈಟೆಡ್ ಕಿಂಗ್ಡಮ್ ಎಂಬ ವಿಶಿಷ್ಟ ವಿಶ್ವದ ಮೂಲೆಮೊಡಕುಗಳನ್ನು ಶೋಧಿಸಿ, ಪರಿಶೀಲಿಸಿ ಮಾನವ ಚೈತನ್ಯವೊಂದರ ರೂಪರೇಷೆಯನ್ನು ಕಡೆದು ತೋರಿಸಿದ್ದಾರೆ. ಇದರ ಪರಿಣಾಮವಾಗಿ ನಮಗಿಲ್ಲಿ ಹೊಸ ಅನುಭವದ ಅರ್ಥಪೂರ್ಣ ವಿನ್ಯಾಸವೊಂದು ದೊರೆಯುವಂತಾಗಿದೆ. ಅದಕ್ಕಾಗಿ ಅವರನ್ನು ಹೃದಯಪೂರ್ವಕ ಅಭಿನಂದಿಸುತ್ತ, ಅವರು ಇಂಥ ಇನ್ನೂ ಹಲವು ಕೃತಿಗಳನ್ನು ರಚಿಸಿ ಬ್ರಿಟನ್ನನ್ನು ಕನ್ನಡಿಗರಿಗೆ ಇನ್ನಷ್ಟು ಹತ್ತಿರ ತರಲೆಂದು ಹಾರೈಸುತ್ತೇನೆ.
(ಕೃತಿ: ವಿದೇಶ ಪ್ರಯಾಣ… ಕೈತುಂಬ ಕಾಂಚಾಣ, ಲೇಖಕರು: ಡಾ. ಪ್ರೇಮಲತ ಬಿ., ಪ್ರಕಾಶನ: ಸಾವಣ್ಣ ಪ್ರಕಾಶನ)

ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ

