“ರವಿವಾರದ ರಜಾದಿನಗಳಲ್ಲಿ ಕದ್ರಿ ಗುಡ್ಡೆಗೆ ಅಣ್ಣನೊಡನೆ ನನ್ನ ಸವಾರಿ ಹೊರಡುತ್ತಿತ್ತು. ಅಲ್ಲಿನ ಸ್ನಾನದ ಏಳುಕೆರೆಗಳನ್ನು ಬರಿದೆ ದಿಟ್ಟಿಸಿ, ಗೋಮುಖ ತೀರ್ಥದಲ್ಲಿ ಅಂಗೈಯೊಡ್ಡಿ ನೀರು ಕುಡಿದು, ಗುಡ್ಡವೇರಿ ಪಾಂಡವರ ಗುಹೆ, ಸೀತೆಯ ಬಾವಿಯನ್ನು ಕೌತುಕವೇ ಕಣ್ಣಾಗಿ ದಿಟ್ಟಿಸಿ, ಪಾಂಡವರ ಗುಹೆಯ ಹೊರಗೆ ನಿಂತು, ಒಳಗಣ ಒಂದಡಿ ಅಗಲದ ಆ ಬಾಗಿಲಿನಿಂದ ಒಳಗೆ ಹೋಗಿ ನೋಡೋಣವೇ ಎಂಬ ಕುತೂಹಲಕ್ಕೆ, ಇಲ್ಲ, ಹೋದವರು ಹಿಂದೆ ಬಂದಿಲ್ಲವೆಂಬ ಮತ್ತೂ ಕುತೂಹಲ ಕೆರಳಿಸುವ ಉತ್ತರ!”
ಲೇಖಕಿ ಶ್ಯಾಮಲಾ ಮಾಧವ ಬರೆದ ಮಂಗಳೂರಿನ ಅನನ್ಯ ನೆನಪುಗಳು.
ಭೋರೆಂದು ಜಡಿಮಳೆ ಸುರಿದು ಹೋದ ಮರುದಿನ ಮರಗಳಡಿಯಲ್ಲಿ ಕುಳಿತು ಓದುವುದು, ಅದರಲ್ಲೂ ಹುಣಸೆ ಮರದಡಿ ನನಗೆ ತುಂಬ ಪ್ರಿಯವಾಗಿದ್ದ ಬಾಲ್ಯದ ದಿನಗಳವು. ಮಳೆಯ ನಿರಂತರ ಪ್ರವಾಹದೊಡನೆ ಹರಿದು ಬಂದ ಹುಣಸೆ ಮರದ ಎಲೆಗಳು, ಹೊಯ್ಗೆ, ನೊರಜುಗಲ್ಲಿನೊಡನೆ ಸೇರಿಕೊಂಡು ಹರಿದು ಮರದಡಿಯಲ್ಲಿ ಹಾವು ಹರಿದಂತೆ ಕಾಣುವ ಕೌತುಕ ನನ್ನನ್ನು ಹಿಡಿದಿಡುತ್ತಿತ್ತು. ಪಾರಿಜಾತದ ಮರವನ್ನಲುಗಿಸಿ ಆ ಸುಮರಾಶಿಯ ಕಂಪಿನ ಮಳೆಯಲ್ಲಿ ನೆನೆಯುವುದು, ಮುತ್ತು ಚೆಲ್ಲಿದಂತೆ ಚೆಲ್ಲಿ ಹರಡಿದ ರೆಂಜೆ ಹೂಗಳ ಕಂಪನ್ನು ಆಘ್ರಾಣಿಸುತ್ತಾ ಹೆಕ್ಕಿಕೊಳ್ಳುವುದು, ತೋಡಿನಂಚಿನ ಮಧುಮಾಲತಿ ಹೂ, ಮೊಗ್ಗುಗಳನ್ನು ಹಿಡಿಸುವಷ್ಟೂ ಕೊಯ್ದು ತರುವುದು – ಮನವನ್ನರಳಿಸಿದ ಹೂಗಳೂ, ಪುಸ್ತಕಗಳೂ ನನಗಂಟಿದ ಬಾಲ್ಯದ ನಂಟು.
ಪುಸ್ತಕದಂತೆಯೇ ಸುತ್ತ ನಡೆವ ಎಲ್ಲ ವಿದ್ಯಮಾನಗಳಿಗೂ ನನ್ನ ಕಣ್ಮನಗಳು ಸದಾ ತೆರೆದಿರುತ್ತಿದ್ದುವು. ಶಾಲಾ ಹಿತ್ತಿಲೊಳಗೇ ನಮ್ಮ ಮನೆ. ರವಿವಾರದ ರಜಾದಿನ, ವಿಚಿತ್ರ ವ್ಯಕ್ತಿಯೊಬ್ಬ ಸಣ್ಣ ಗೇಟ್‌ನಿಂದ ಒಳಹೊಕ್ಕು, ಶಾಲೆಯ ಮೆಟ್ಟಿಲೇರಿ, ಬಗಲಲ್ಲಿದ್ದ ಉದ್ದ ಚೀಲದಿಂದ ಪುಸ್ತಕ ಒಂದನ್ನು ಹೊರತೆಗೆದು, ಬಿಡಿಸಿ ಹಿಡಿದು, ಜಗಲಿಯ ಉದ್ದಕ್ಕೂ ನಡೆದಾಡುತ್ತಾ ಪುಸ್ತಕದಿಂದ ಗಟ್ಟಿಯಾಗಿ ಓದುತ್ತಿದ್ದ. ಎತ್ತರವಾಗಿದ್ದ ಈತ ಕಂದು ಬಣ್ಣದ ಜೀರ್ಣವಾದ ದೊಗಲೆ ಪ್ಯಾಂಟ್, ಉದ್ದ ಕೈಯ ಜುಬ್ಬಾ ಧರಿಸಿ, ಉದ್ದ ಕೂದಲು, ಗಡ್ಡಧಾರಿಯಾಗಿ ನನ್ನ ಕಣ್ಣಿಗೆ ಬಿಜೈ ಚರ್ಚ್‌ನಲ್ಲಿ ಶಿಶುಕ್ರಿಸ್ತನನ್ನು ಎತ್ತಿಕೊಂಡು ನಿಂತ ದೇವಪಿತ ಜೋಸೆಫ್‌ನಂತೆ ಕಾಣಿಸುತ್ತಿದ್ದ. ಬಾಯಿಪಾಠ ಮಾಡುತ್ತಿರುವಂತೆ ಆತ ಓದುವುದನ್ನು ಕೇಳಿಸಿಕೊಳ್ಳಲೆತ್ನಿಸುತ್ತಾ ನಾವು ಅಲ್ಲೇ ಶಾಲಾ ಜಗಲಿಯಲ್ಲಿ ಆತನೆದುರೇ ಇದ್ದರೂ, ಆತನ ಜೊತೆಗೇ ಅತ್ತಿತ್ತ ನಡೆದಾಡುತ್ತಿದ್ದರೂ, ಆತನ ಕಣ್ಗಳು ನಮ್ಮನ್ನು ಕಾಣುತ್ತಿರಲಿಲ್ಲ. ಪುಸ್ತಕದಿಂದ ತಲೆ ಎತ್ತದೆ ಸುಮಾರು ಅರ್ಧಗಂಟೆ ಕಾಲ ಓದಿದ ಬಳಿಕ, ಪುಸ್ತಕ ಮಡಚಿ ಚೀಲಕ್ಕೆ ತುರುಕಿ, ಬಂದಂತೇ ಆತ ಹೊರಟು ಹೋಗುತ್ತಿದ್ದ. ಆತ ಓದುತ್ತಿದ್ದುದು ಇಂಗ್ಲಿಷ್ ಇರಬಹುದೆಂದು ನಮಗನಿಸುತ್ತಿತ್ತು. ಎಂದೂ ಯಾರಿಗೂ ಏನೂ ಕೇಡುಂಟು ಮಾಡದ ಆತ ಹುಚ್ಚನೆಂಬ ಅನಿಸಿಕೆ ಇದ್ದರೂ, ಆ ಓದುವ ಹುಚ್ಚನ ಬಗ್ಗೆ ಇನಿತೂ ಭಯವೆನಿಸುತ್ತಿರಲಿಲ್ಲ.
ಮಳೆಯ ನಿರಂತರ ಪ್ರವಾಹದೊಡನೆ ಹರಿದು ಬಂದ ಹುಣಸೆ ಮರದ ಎಲೆಗಳು, ಹೊಯ್ಗೆ, ನೊರಜುಗಲ್ಲಿನೊಡನೆ ಸೇರಿಕೊಂಡು ಹರಿದು ಮರದಡಿಯಲ್ಲಿ ಹಾವು ಹರಿದಂತೆ ಕಾಣುವ ಕೌತುಕ ನನ್ನನ್ನು ಹಿಡಿದಿಡುತ್ತಿತ್ತು. ಪಾರಿಜಾತದ ಮರವನ್ನಲುಗಿಸಿ ಆ ಸುಮರಾಶಿಯ ಕಂಪಿನ ಮಳೆಯಲ್ಲಿ ನೆನೆಯುವುದು, ಮುತ್ತು ಚೆಲ್ಲಿದಂತೆ ಚೆಲ್ಲಿ ಹರಡಿದ ರೆಂಜೆ ಹೂಗಳ ಕಂಪನ್ನು ಆಘ್ರಾಣಿಸುತ್ತಾ ಹೆಕ್ಕಿಕೊಳ್ಳುವುದು…
ಮಾತೃವಾತ್ಸಲ್ಯದ ಮಾರ್ದವದ ಚಿತ್ರ, ಹುಚ್ಚಿ ಪದ್ಮಾವತಿ ಮತ್ತವಳ ತಾಯಿ. ಸದಾ ಜೊತೆಯಾಗಿದ್ದು, ಆ ತಾಯಿಯು ಮಗಳ ಯೋಗಕ್ಷೇಮ ನೋಡುವಂತಿದ್ದಳು. ಪ್ರತೀ ರವಿವಾರ, ಮಧ್ಯಾಹ್ನ ನಮ್ಮ ನೆರೆಯ ಪೊರ್ಬುವಿನ ಮನೆಯ ಹಿತ್ತಿಲು ಹೊಕ್ಕು, ಮರದ ಕೆಳಗೆ ಕುಳಿತ ಅವರಿಗೆ, ಪೊರ್ಬುವಿನ ಕೆಲಸದಾಳು ಊಟ ತಂದು ಬಡಿಸುತ್ತಿದ್ದ. ಸುಮಾರು ಇಪ್ಪತ್ತೈದರ ಹರೆಯದ ಮಗಳಿಗೆ ಬಾಯಿಗೆ ತುತ್ತಿಟ್ಟು ಉಣಿಸಿ, ಮುಖ ತೊಳೆಸಿ, ಬಟ್ಟೆಯಿಂದ ಒರೆಸಿ, ಉಳಿದುದನ್ನು ತಾನುಂಡು, ಅಲ್ಲೇ ಮಗಳ ಪಕ್ಕ ಮರಕ್ಕೊರಗಿ ಸುಮಾರು ಗಂಟೆಕಾಲ ಕುಳಿತಿರುತ್ತಿದ್ದರು, ಆ ತಾಯಿ. ಪುಟ್ಟ ಬಟ್ಟೆಯ ಗಂಟು ಅವರ ಜೊತೆಯಿರುತ್ತಿತ್ತು. ಯಾರಿಗೂ ಏನೂ ಹಾನಿ ಮಾಡದ ಹುಚ್ಚಿ ಪದ್ಮಾವತಿ, ಮತ್ತವಳನ್ನು ಮಗುವಿನಂತೆ ಜೋಪಾನ ಮಾಡುತ್ತಿದ್ದ ಅವಳ ತಾಯಿ ಒಂದು ಚಿತ್ರವಾದರೆ, ಎಲ್ಲರೂ ಅಸಹ್ಯಿಸುತ್ತಿದ್ದ ಹುಚ್ಚಿ ಬೊಡ್ಡಿಕಮಲಳ ಚಿತ್ರವೇ ಬೇರೆ.
ಬಟ್ಟೆಯ ಗಂಟಿನೊಡನೆ ಶಾಲಾ ಗೇಟ್‌ನ ಪಕ್ಕ, ರಸ್ತೆಯಂಚಿನಲ್ಲೆಲ್ಲ ಕುಳಿತಿರುತ್ತಿದ್ದ ಅವಳು, ಕಲ್ಲು ತಿನ್ನುತ್ತಾಳೆಂದು ಮಕ್ಕಳಾದ ನಾವೆಲ್ಲ ಅಂದುಕೊಂಡಿದ್ದೆವು. ಹುಡುಗರು, “ಬೊಡ್ಡಿ ಕಮಲ”, ಎಂದು ಅವಳನ್ನು ಕೀಟಲೆ ಮಾಡಿದರೆ, ಅವಳು ಕಲ್ಲು, ಮಣ್ಣು ಎತ್ತಿ ಅವರತ್ತ ಬೀಸಿ ಒಗೆಯುತ್ತಿದ್ದಳು. ಈ ಹುಚ್ಚಿಯರ ಮತ್ತು ಆ ಓದುವ ಹುಚ್ಚನ ಬಾಳಿನ ಹಿಂದಿನ ಕಥೆ ಏನಿರಬಹುದೆಂಬ ಪ್ರಶ್ನೆ ನಾನು ಬೆಳೆದಂತೆ ನನ್ನನ್ನು ಕಾಡುತ್ತಿತ್ತು. ಈ ಹುಚ್ಚ ವಿದ್ಯಾಭ್ಯಾಸ ಕಾಲದಲ್ಲಿ ಓದಿ ಓದಿ ಮರುಳಾದನೇ, ಇಲ್ಲಾ, ಎಲ್ಲೋ ಉಪನ್ಯಾಸಕನಾಗಿದ್ದು ಮತ್ತೆ ಈ ಸ್ಥಿತಿಗೆ ಬಂದನೇ ಎಂಬ ಚಿಂತೆಯ ಹಿನ್ನೆಲೆಯಲ್ಲಿ ಎಂಟನೇ ಕ್ಲಾಸ್‌ನಲ್ಲಿದ್ದಾಗ ನಾನೊಂದು ಕಥೆ ಬರೆಯ ಹೊರಟೆ. ನನ್ನ ಪ್ರಥಮ ಸ್ವತಂತ್ರ ರಚನೆಯಾದ ಈ ಕಥೆಯನ್ನು ಕೊನೆಗೊಳಿಸುವ ದಾರಿ ಮಾತ್ರ ನನಗೆ ಕಾಣಲಿಲ್ಲ. ಸ್ವಲ್ಪ ನಾಟಕೀಯವೆನಿಸಿ ಅದನ್ನಲ್ಲೇ ಬಿಟ್ಟು ಬಿಟ್ಟೆ.
ಸುಮಾರು ಇಪ್ಪತ್ತೈದರ ಹರೆಯದ ಮಗಳಿಗೆ ಬಾಯಿಗೆ ತುತ್ತಿಟ್ಟು ಉಣಿಸಿ, ಮುಖ ತೊಳೆಸಿ, ಬಟ್ಟೆಯಿಂದ ಒರೆಸಿ, ಉಳಿದುದನ್ನು ತಾನುಂಡು, ಅಲ್ಲೇ ಮಗಳ ಪಕ್ಕ ಮರಕ್ಕೊರಗಿ ಸುಮಾರು ಗಂಟೆಕಾಲ ಕುಳಿತಿರುತ್ತಿದ್ದರು, ಆ ತಾಯಿ. ಪುಟ್ಟ ಬಟ್ಟೆಯ ಗಂಟು ಅವರ ಜೊತೆಯಿರುತ್ತಿತ್ತು.
ಆ ದಿನಗಳಲ್ಲೇ ಯಾರೋ ಹುಚ್ಚನೊಬ್ಬ ಕೊಡಿಯಾಲಬೈಲ್ ಇಗರ್ಜಿಯ ಗೋಪುರಕ್ಕೇರಿ ಶಿಲುಬೆಯನ್ನು ಕಿತ್ತು ಕೆಳಕ್ಕೆಸೆದ ಪ್ರಸಂಗ ನಗರದಲ್ಲಿ ತಲ್ಲಣ ಮೂಡಿಸಿತ್ತು. ಇಂದಿಗೂ ಕೊಡಿಯಾಲಬೈಲ್ ಚರ್ಚ್ ಕಂಡರೆ, ಆ ಚಿತ್ರ ಮನದಲ್ಲಿ ಮೂಡದಿರುವುದಿಲ್ಲ.
ಉರ್ವಾ ಮಾರಿಗುಡಿ ಬಳಿಯ ಬಾಡಿಗೆ ಮನೆಗೆ ನಾವು ವಾಸ ಬದಲಿಸಿದ ಬಳಿಕ ಮತ್ತೆ ಈ ವಿಶಿಷ್ಟ ಜೀವಗಳ ಸಂಪರ್ಕ ನಮಗಾಗಲಿಲ್ಲ. ಈ ಹೊಸ ನಿವಾಸದಲ್ಲಿ ವಾರಕ್ಕೊಮ್ಮೆ ಒಬ್ಬ ಕ್ಷೀಣಕಾಯದ ಬೇಡುವಾತನ ದರ್ಶನ ತಪ್ಪದೆ ಪ್ರತಿ ರವಿವಾರ ನಮಗಾಗುತ್ತಿತ್ತು. ದೇಹಕ್ಕಂಟಿದ ಬಿಳಿಯ ಉದ್ದ ಚಡ್ಡಿ, ಬನಿಯನ್ ತೊಟ್ಟು ಬರುತ್ತಿದ್ದ ಆತನ ಎದೆಯ ಮೇಲೆ ಶಿಲುಬೆ ತೂಗುತ್ತಿತ್ತು. ಬೆಳ್ಳಗಿದ್ದ, ನೆಟ್ಟನೆ ಸಪೂರ ದೇಹದ ಆತನ ತಲೆಯ ಮೇಲೆ ಪೊರ್ಬುವಿನಂತೆ ಸಣ್ಣದಾಗಿ ಕತ್ತರಿಸಿದ ಕ್ರಾಪ್ ಇರುತ್ತಿತ್ತು. ಹುಡುಗರು ಯಾರಾದರೂ ಹೀಗೆ ಚಿಕ್ಕದಾಗಿ ಕ್ರಾಪ್ ಕತ್ತರಿಸಿಕೊಂಡಿದ್ದರೆ, ಏನಿದು, ಪೊರ್ಬುವಾ, ಎನ್ನುವ ಆಡು ಮಾತು ನಮ್ಮೂರಲ್ಲಿ ಸಾಮಾನ್ಯವಾಗಿತ್ತು. ಮನೆಯ ಮೆಟ್ಟಿಲೆದುರು ಬಂದು ನಿಂತು, “ದಯಮಾಡಿ ಒಂದು ಪೈಸೆ ಕೊಡಿರಮ್ಮಾ”, ಎಂದು ತಗ್ಗಿದ ದನಿಯಲ್ಲಿ ಯಾಚಿಸುತ್ತಿದ್ದ ಆತ ಆ ಒಂದು ಪೈಸೆ ತೆಗೆದುಕೊಂಡು ಬಂದಂತೆಯೇ ಹೊರಟುಹೋಗುತ್ತಿದ್ದ. ಎಂದಾದರೂ ನಾವು ಒಂದು ಪೈಸೆಯ ಬದಲಿಗೆ ಎರಡು ಪೈಸೆ ನಾಣ್ಯ ಕೈಗಿತ್ತರೆ ಅದನ್ನಲ್ಲೇ ನಮ್ಮ ಹೊಸ್ತಿಲಲ್ಲಿಟ್ಟು ಮೌನವಾಗೇ ಹೊರಟು ಹೋಗುತ್ತಿದ್ದ!
ಏ ಪೊರ್ಬು, ಎಂದು ಕರೆಯುವುದು, ಕೊಂಕಣಿ ಮಂಡೆ ಎನ್ನುವುದು, ಭಟ್ಟ ಭಟ್ಟ… ಎಂದು ಪರಿಹಾಸ ಮಾಡುವುದು, ಕುಡ್ಲದ ಬ್ಯಾರಿ ಎನ್ನುವುದು ಇವೆಲ್ಲ ಅಂದಿನ ದಿನಗಳಲ್ಲಿ ನಮ್ಮ ಮಕ್ಕಳ ರಾಜ್ಯದಲ್ಲಿ ಸಾಮಾನ್ಯ ತಮಾಷೆಯ ಆಡುಮಾತುಗಳಾಗಿದ್ದವು. ಅಷ್ಟೇ ಹೊರತು, ಯಾವುದೇ ಜಾತಿವೈಷಮ್ಯದ ಭಾವನೆ ಅಲ್ಲಿ ಸುಳಿಯುತ್ತಿರಲಿಲ್ಲ. ಆಧುನಿಕತೆ ಇನ್ನೂ ದೂರವಿದ್ದ ಆ ದಿನಗಳಲ್ಲಿ ಯಾರಾದರೂ ಹುಡುಗಿಯರು ಸ್ವಲ್ಪ ಸ್ಟೈಲಿಶ್ ಆಗಿ ಉಡುಪು ಧರಿಸಿ ಹೋಗುತ್ತಿದ್ದರೆ, ತುಂಟ ಹುಡುಗರು,” ಹಂಪನಕಟ್ಟೆ ಜಂಪರ್ ಲೇಡಿ ಬಸ್ಸ್‌ಡ್ ಪೋನಾಗ, ಪೂತಾ ಬ್ಯಾರಿ ಆಲೆನ್ ತೂದ್ ಮಸ್ಕಿರಿ ಮಲ್ತೆಗೆ” ಎಂದು ಕೆಳದನಿಯಲ್ಲಿ ಹಾಡಿ ಖುಶಿಪಡುತ್ತಿದ್ದರು. ದಸರಾ ವೇಷಗಳಲ್ಲಿ ರಂಜಿಸುತ್ತಿದ್ದ ಕೊರಗರ ವೇಷ, ಸಿದ್ಧಿ ವೇಷಗಳೋ! ಶಾಲಾ ದಸರಾ ಹಬ್ಬದ ಛದ್ಮವೇಷ ಸ್ಪರ್ಧೆಯಲ್ಲಿ ನಾನೂ ಕೊರಗಳಾಗಿ ಕುಣಿದು ಬಹುಮಾನ ಪಡೆದಿದ್ದೆ. ಸಿಗಡಿ ಉರಿಸುವ ಕಲ್ಲಿದ್ದಲ ಹುಡಿಯನ್ನು ನೀರಲ್ಲಿ ಕಲಸಿ ಶಾರದತ್ತೆ ನನ್ನ ಮೈಗೆಲ್ಲ ಬಳಿದು, ಮಾವಿನೆಲೆಗಳಿಂದ ಸಿಂಗರಿಸಿದ್ದರು. ಸಿದ್ಧಿವೇಷ – ದೇಹಕ್ಕೆ ಅಸಾಧ್ಯ ಮುಂಭಾರ, ಹಿಂಭಾರಗಳನ್ನು ಕಟ್ಟಿಕೊಂಡು ಪರಸ್ಪರ ತಾಡಿಸುತ್ತಾ, ಸಿದ್ಧಿ ಹವರ್ ಸಿದ್ಧಿ, ಮಕ್ಕ ಮದೀನಾ, ಬೊಂಬೈ ಕೊ ಜಾನಾ, ಕಾಪಿ ರೊಟ್ಟಿ ಪೀನಾ, ಎಂದು ಕುಣಿವ ಸಿದ್ಧಿ ವೇಷ! ಜಾತಿ ಸೂಚಕ ವೇಷಗಳು ಸಲ್ಲದೆಂದು ಇಂದು ಅವೆಲ್ಲ ನಿಷೇಧಿತವಾಗಿವೆ. ಜಾತಿ, ಧರ್ಮ ವೈಷಮ್ಯದ ಕಹಿಗಾಳಿ ಆಗಾಗ ಬೀಸಿ, ನನ್ನೂರ ಹೆಸರನ್ನು ಕೆಡಿಸಿದೆ. ಹೃದಯ ನೋವಿನಿಂದ ಭಾರವಾಗಿದೆ.
ಆಧುನಿಕತೆ ಇನ್ನೂ ದೂರವಿದ್ದ ಆ ದಿನಗಳಲ್ಲಿ ಯಾರಾದರೂ ಹುಡುಗಿಯರು ಸ್ವಲ್ಪ ಸ್ಟೈಲಿಶ್ ಆಗಿ ಉಡುಪು ಧರಿಸಿ ಹೋಗುತ್ತಿದ್ದರೆ, ತುಂಟ ಹುಡುಗರು,” ಹಂಪನಕಟ್ಟೆ ಜಂಪರ್ ಲೇಡಿ ಬಸ್ಸ್‌ಡ್ ಪೋನಾಗ, ಪೂತಾ ಬ್ಯಾರಿ ಆಲೆನ್ ತೂದ್ ಮಸ್ಕಿರಿ ಮಲ್ತೆಗೆ” ಎಂದು ಕೆಳದನಿಯಲ್ಲಿ ಹಾಡಿ ಖುಶಿಪಡುತ್ತಿದ್ದರು. ದಸರಾ ವೇಷಗಳಲ್ಲಿ ರಂಜಿಸುತ್ತಿದ್ದ ಕೊರಗರ ವೇಷ, ಸಿದ್ಧಿ ವೇಷಗಳೋ! ಶಾಲಾ ದಸರಾ ಹಬ್ಬದ ಛದ್ಮವೇಷ ಸ್ಪರ್ಧೆಯಲ್ಲಿ ನಾನೂ ಕೊರಗಳಾಗಿ ಕುಣಿದು ಬಹುಮಾನ ಪಡೆದಿದ್ದೆ.
ಬಾವುಟ ಗುಡ್ಡೆಗೆ ಹೋಗುವ ಕೋರ್ಟ್ ಗುಡ್ಡೆಯ ಕೆಳಗೆ ಎರಡು ಗುಡ್ಡಗಳ ನಡುವಿನ ಸಪೂರ ಓಣಿಯಲ್ಲಿ ಬೇಡಲು ಕುಳಿತಿರುತ್ತಿದ್ದ ಹಲವು ಭಿಕ್ಷುಕರಲ್ಲಿ ಹೆಚ್ಚಿನವರು ಕುಷ್ಠರೋಗಿಗಳೂ, ಇನ್ನುಳಿದವರು ಆನೆಕಾಲು ರೋಗಿಗಳೂ ಆಗಿದ್ದರು. ಲೆಪರ್ಸರ್ ಲೇನ್ ಎಂದೇ ಕರೆಯಲ್ಪಡುತ್ತಿದ್ದ ಈ ಓಣಿ ಕದ್ದು ಸೇರುವ ಪ್ರೇಮಿಗಳ ಅಡಗುತಾಣವೂ ಆಗಿದ್ದು, ಲವರ್ಸ್ ಲೇನ್ ಎಂಬ ಅಡ್ಡ ಹೆಸರೂ ಇತ್ತು.
ಮುಸ್ಸಂಜೆಯಲ್ಲಿ ಮುತ್ತುವ ಅಸಂಖ್ಯ ಸೊಳ್ಳೆಗಳ ಊರಾಗಿದ್ದ ನಮ್ಮ ಮಂಗಳೂರಲ್ಲಿ ಆನೆಕಾಲು ರೋಗಿಗಳು ಎಲ್ಲೆಂದರಲ್ಲಿ ಕಾಣಬರುತ್ತಿದ್ದರು. ಫೈಲೇರಿಯಾ ಹಾಗೂ ಮತ್ತೂ ಭೀಭತ್ಸವಾದ ಎಲಿಫೆಂಟೈಸಿಸ್ ನಗರದ ಸ್ಥಿರಚಿತ್ರದಂತಿತ್ತು. ಜೊತೆಗೆ ಕುಷ್ಠ ರೋಗಿಗಳು. ಜರ್ಮನಿಯಿಂದ ಬಂದ ಫಾದರ್ ಮುಲ್ಲರ್, ನಗರದಲ್ಲಿ ಕುಷ್ಠರೋಗಿಗಳ ಸೇವಾಕೇಂದ್ರ ತೆರೆದು ರೋಗ ನಿರ್ಮೂಲನಕ್ಕಾಗಿ ಶ್ರಮಿಸಿದ್ದರು. ಮುಂದೆ ಆ ಸೇವಾ ಕೇಂದ್ರ ಪ್ರಸಿಧ್ಧ ಫಾ.ಮುಲ್ಲರರ್ಸ್ ಹಾಸ್ಪಿಟಲ್ ಆಗಿ ಬೆಳೆಯಿತು.
ನಮ್ಮ ಕಾಲೇಜ್ ದಿನಗಳಲ್ಲಿ ಕುಷ್ಠರೋಗವೆಂದು ಮನೆಯಿಂದ ಪರಿತ್ಯಕ್ತಳಾದ ಹೆಂಗಸೊಬ್ಬಳು ಕಾಲೇಜ್ ಎದುರಿನ ಬಸ್‌ಸ್ಟಾಪಿನಲ್ಲಿ ಭಿಕ್ಷುಕಿಯಂತೆ ಕುಳಿತಿರುತ್ತಿದ್ದಳು. ತಾನಾಗಿ ಎಂದೂ ಯಾಚಿಸದಿದ್ದರೂ, ಸೌಮ್ಯ ನಗುಮುಖದಿಂದ ಕುಳಿತಿರುತ್ತಿದ್ದ ಅವಳ ಮಡಿಲಲ್ಲಿ ನಾಣ್ಯಗಳು ಬಂದು ಬೀಳುತ್ತಿದ್ದುವು.
ಮುಸ್ಸಂಜೆಯಲ್ಲಿ ಮುತ್ತುವ ಅಸಂಖ್ಯ ಸೊಳ್ಳೆಗಳ ಊರಾಗಿದ್ದ ನಮ್ಮ ಮಂಗಳೂರಲ್ಲಿ ಆನೆಕಾಲು ರೋಗಿಗಳು ಎಲ್ಲೆಂದರಲ್ಲಿ ಕಾಣಬರುತ್ತಿದ್ದರು. ಫೈಲೇರಿಯಾ ಹಾಗೂ ಮತ್ತೂ ಭೀಭತ್ಸವಾದ ಎಲಿಫೆಂಟೈಸಿಸ್ ನಗರದ ಸ್ಥಿರಚಿತ್ರದಂತಿತ್ತು.
ರೈಲು ನಿಲ್ದಾಣದಿಂದ ಹಿಂದಿರುಗುವಾಗ, ನಮ್ಮ ಭಾಮಾಂಟಿಯೊಡನೆ ಸಿನೆಮಾಗಳಿಗೆ, ಸರ್ಕಸ್‌ಗಳಿಗೆ ಹೋಗಿ ಹಿಂದಿರುಗುವಾಗ ಈ ಲೆಪರ್ಸರ್ ಲೇನ್ ದಾಟಿ ಬರಬೇಕಿತ್ತು. ಮುಸ್ಸಂಜೆ ಹೊತ್ತಿಗೆ ಅಲ್ಯೂಮೀನಿಯಮ್ ಬಟ್ಟಲುಗಳಿಗೆ ಎಣ್ಣೆ ಬಳಿದು ಬೀಸುತ್ತಾ ಸೊಳ್ಳೆಗಳನ್ನು ಹಿಡಿಯುವುದು ನಿತ್ಯ ಕಾಯಕವಾಗಿತ್ತು. ಬಟ್ಟಲು ತುಂಬ ಸೊಳ್ಳೆಗಳು ಅಂಟಿಕೊಳ್ಳುತ್ತಿದ್ದುವು. ಯಾರ ಬಟ್ಟಲಲ್ಲಿ ಹೆಚ್ಚು ಸೊಳ್ಳೆಗಳೆಂಬ ಪೈಪೋಟಿ ಬೇರೆ! ರಾತ್ರಿ ಮಲಗುವಾಗ ಸೊಳ್ಳೆ ಪರದೆ ಅನಿವಾರ್ಯವಾಗಿತ್ತು. ಪರದೆಯೆತ್ತಿ ಜಾಗ್ರತೆಯಾಗಿ ಒಳಹೊಗುವಾಗ ಬಂದೇ ಸಿದ್ಧವೆಂದು ಅದು ಹೇಗೋ ಒಳನುಸುಳುತ್ತಿದ್ದ ಒಂದೆರಡಾದರೂ ರಕ್ತಪಿಪಾಸುಗಳು! ಹಿತ್ತಾಳೆ ಕ್ಯಾನ್ ತುಂಬಿದ ಡಿ.ಡಿ.ಟಿ. ದ್ರಾವಣವನ್ನು ಸೊಳ್ಳೆ ಸಂತತಿಯ ಚರಂಡಿ, ಬಚ್ಚಲ ನೀರಿನಾಶ್ರಯದ ಮೇಲೆಲ್ಲ ಸಿಂಪಡಿಸ ಬರುವ ಮುನಿಸಿಪಾಲಿಟಿ ನೌಕರರು ಹೋದ ಮೇಲೂ ಅಲ್ಲಿ ಉಳಿಯುವ ಆ ಗಾಢ ವಾಸನೆ!
ಸಿಡುಬಿನ ಕಲೆಯ ಮುಖಗಳು ಅಂದಿನ ದಿನಗಳಲ್ಲಿ ಅಲ್ಲಲ್ಲಿ ಕಾಣ ಬರುತ್ತಿದ್ದುವು. ವರ್ಷವರ್ಷವೂ ಶಾಲೆಯಲ್ಲಿ ಹಾಕಿಸಿಕೊಳ್ಳುವ ಸಿಡುಬಿನ ದಾಕು- ವಾಕ್ಸಿನೇಶನ್ – ಹಾಗೂ ಆಗೀಗ ಟೈಫಾಯಿಡ್ ಇನಾಕ್ಯುಲೇಶನ್‌ಗಳು ಮಕ್ಕಳ ಮುಖಗಳಲ್ಲಿ ಮೂಡಿಸುತ್ತಿದ್ದ ಆತಂಕ ಅಪಾರ! ಉರ್ವಾ ಪ್ರದೇಶಕ್ಕೆ ನಮ್ಮ ವಾಸ ಬದಲಾದಾಗ, ನಾವು ನಿತ್ಯ ನಡೆವ ಹಾದಿಯಲ್ಲೇ ಅನತಿ ದೂರದಲ್ಲಿ ಸಿಡುಬು ರೋಗದ ಶೆಡ್ ಇತ್ತು. ಅಲ್ಲಿ ರೋಗಿಗಳ ಚಿಕಿತ್ಸಾ ಕಾರ್ಯನಿರತ ಇಂಟರ್ನಿ ಯುವ ಡಾಕ್ಟರೊಬ್ಬರು ರೋಗ ಸಂಸರ್ಗದಿಂದ ತೀರಿಕೊಂಡಾಗ, ದಾರಿನಡೆದ ನಮ್ಮ ಹೆಜ್ಜೆಗಳೂ ನಡುಗಿ ಸ್ವರಗಳಡಗಿದ್ದುವು.
ನಗರದ ಅಂದಿನ ದಿನಗಳ ಶವಯಾತ್ರೆಯ ಚಿತ್ರಗಳ ನೆನಪೂ ಮಾಸುವಂತಹುದಲ್ಲ. ಹಿಂದೂಗಳ ಶವಯಾತ್ರೆಯಲ್ಲಿ ಶವದ ಗಾಡಿಯ ಜೊತೆಗೆ ತಾಳ, ಭಜನೆಯ ರವ; ಕ್ರೈಸ್ತರ ಶವಯಾತ್ರೆಯಲ್ಲಿ ಹೃದಯವನ್ನೇ ತಾಡಿಸುವಂತಹ ಢೋಲಿನ ಸದ್ದಿನೊಡನೆ ಶವವಾಹಕದಲ್ಲಿ ಗಂಭೀರ ಪ್ರಾರ್ಥನೆಯ ಜೊತೆಗೆ ಸಾಗುವ ಮೆರವಣಿಗೆ; ಆ ಮರಣವನ್ನು ನಗರಕ್ಕೆ ಸಾರುವಂತೆ ಚಾಪಲ್‌ನಿಂದ ಅನುರಣಿಸುವ ಘಂಟಾನಾದ! ಅಡಿಗಡಿಗೆ ಸಾಗಿ ಹೋಗುವ ಇಂತಹ ಚಿತ್ರಗಳ ಜೊತೆಗೆ ಬಹಳ ಅಪರೂಪವಾಗಿ ಕಫನಿನ ಮೇಲೆ ಹಸಿರು ಚಾದರ ಹೊದಿಸಿದ ಮುಸ್ಲಿಮರ ಶವಯಾತ್ರೆಯ ಚಿತ್ರ!
ಬಾಲ್ಯದಲ್ಲಿ ಸಿನೆಮಾ ನೋಡಲು ಕರೆದೊಯ್ಯಲು ಭಾಮಾಂಟಿ ಬಂದರೆ ಹೊರಡುವ ಸಂಭ್ರಮದಲ್ಲಿ ಊಟ ನಮ್ಮ ಗಂಟಲಲ್ಲಿ ಅಕ್ಷರಶಃ ಇಳಿಯುತ್ತಿರಲಿಲ್ಲ. ಅಮ್ಮನ ಗದರಿಕೆಯೊಡನೆ ಅನ್ನವನ್ನು ಗಂಟಲೊಳಗೆ ತುರುಕುವ ಸಂಕಟವೋ! ಸಿನೆಮಾದಿಂದ ಹಿಂದಿರುಗುವಾಗ ಆಂಟಿ ತಪ್ಪದೆ ನಮ್ಮನ್ನು ರಾಯನ್ಸ್‌ಗೆ ಕರೆದೊಯ್ದು ಆಲ್ಮಂಡ್ ಐಸ್‌ಕ್ರೀಮ್ ಕೊಡಿಸುತ್ತಿದ್ದರು. ಹಂಪನಕಟ್ಟೆಯಲ್ಲಿ ಸುಜೀರ್‌ಕಾರ್‌ಗೆದುರಾಗಿ ಇದ್ದ ರಾಯನ್ಸ್ ಐಸ್‌ಕ್ರೀಮ್ ಪಾರ್ಲರ್ ಮಾಯವಾಗಿ ದಶಕಗಳೇ ಕಳೆದುವು. ಆ ರಾಯನ್ಸ್ ಐಸ್‌ಕ್ರೀಮ್‌ನ ರುಚಿಗೆ ಸರಿಗಟ್ಟುವ ಐಸ್‌ಕ್ರೀಮ್ ಮತ್ತೆಂದೂ ಎಲ್ಲೂ ಬರಲೂ ಇಲ್ಲ.
ನಗರದ ಅಂದಿನ ದಿನಗಳ ಶವಯಾತ್ರೆಯ ಚಿತ್ರಗಳ ನೆನಪೂ ಮಾಸುವಂತಹುದಲ್ಲ. ಹಿಂದೂಗಳ ಶವಯಾತ್ರೆಯಲ್ಲಿ ಶವದ ಗಾಡಿಯ ಜೊತೆಗೆ ತಾಳ, ಭಜನೆಯ ರವ; ಕ್ರೈಸ್ತರ ಶವಯಾತ್ರೆಯಲ್ಲಿ ಹೃದಯವನ್ನೇ ತಾಡಿಸುವಂತಹ ಢೋಲಿನ ಸದ್ದಿನೊಡನೆ ಶವವಾಹಕದಲ್ಲಿ ಗಂಭೀರ ಪ್ರಾರ್ಥನೆಯ ಜೊತೆಗೆ ಸಾಗುವ ಮೆರವಣಿಗೆ.
ಆಂಟಿ, ತಾವು ನೋಡುತ್ತಿದ್ದ ಇತರ ಚಿತ್ರಗಳನ್ನು ಮನೆಗೆ ಬಂದು ನಮ್ಮಮ್ಮನಿಗೆ ಅಕ್ಷರಶಃ ಚಿತ್ರವತ್ತಾಗಿ ವರ್ಣಿಸುತ್ತಿದ್ದರು. ಅವು ನಾನು ಓದುವ ರೋಚಕ ಕಾದಂಬರಿಗಳಿಗಿಂತ ಯಾವ ವಿಧದಲ್ಲೂ ಕಡಿಮೆಯಿರುತ್ತಿರಲಿಲ್ಲ. ಅಮ್ಮ, ತನ್ನ ತೊಳೆಯುವ, ತಿಕ್ಕುವ, ಕಡೆಯುವ, ಅಟ್ಟುವ ಮನೆಗೆಲಸ ಮಾಡುತ್ತಾ, ಹೂಂಗುಟ್ಟುತ್ತಾ ಆಲಿಸುತ್ತಿದ್ದರು; ನಡುನಡುವೆ ಪ್ರತಿಕ್ರಿಯಿಸುತ್ತಿದ್ದರು. ವರ್ಣಿಸುವ ಆಂಟಿಯ ಸ್ವರದ ಭಾವತೀವ್ರತೆ ನನ್ನನ್ನೂ ಕಟ್ಟಿ ಹಾಕುತ್ತಿತ್ತು. ಹಿಂದೀ, ತಮಿಳು ಎಲ್ಲ ಸಿನೆಮಾ ಕಥೆಗಳೂ, ಅವುಗಳ ಸಂಭಾಷಣೆಗಳೂ ಆಂಟಿಯ ಕನ್ನಡ ನುಡಿಯಲ್ಲಿ ಅಷ್ಟೊಂದು ಚೆನ್ನಾಗಿ ರೂಪುಗೊಳ್ಳುತ್ತಿದ್ದುವು. ಹೀಗೆ ಆಂಟಿ ಬಣ್ಣಿಸಿದ ’ಇದಯ ಕಮಲಂ’, ’ಗೂಂಜ್ ಉಠೀ ಶಹನೈ’, ‘ನೆಂಜಿಲ್ ಒರು ಆಲಯಂ’, ಹಿಂದಿಯಲ್ಲಿ ‘ದಿಲ್ ಏಕ್ ಮಂದಿರ್’ ಮುಂತಾದ ಚಿತ್ರಕಥೆಗಳನ್ನು ನಾನು ಮಂತ್ರಮುಗ್ಧಳಾಗಿ ಆಲಿಸುತ್ತಿದ್ದೆ. ಆ ದಿನಗಳಲ್ಲಿ ಬರುತ್ತಿದ್ದ ಪಿಕ್ಚರ್‌ಪೋಸ್ಟ್ ಸಿನೆಮಾ ಪುಸ್ತಕಗಳು, ಆಂಟಿಯ ಈ ವಿವರಣೆಯೊಡನೆ ನಾವು ನೋಡದ ಸಿನೆಮಾಗಳನ್ನೂ ನಮ್ಮೆದುರು ಚಿತ್ರವತ್ತಾಗಿ ತೆರೆದಿಡುತ್ತಿದ್ದುವು.
ಎಂದಾದರೂ ರವಿವಾರದ ರಜಾದಿನಗಳಲ್ಲಿ ಕದ್ರಿ ಗುಡ್ಡೆಗೆ ಅಣ್ಣನೊಡನೆ ನನ್ನ ಸವಾರಿ ಹೊರಡುತ್ತಿತ್ತು. ಅಲ್ಲಿನ ಸ್ನಾನದ ಏಳುಕೆರೆಗಳನ್ನು ಬರಿದೆ ದಿಟ್ಟಿಸಿ, ಗೋಮುಖ ತೀರ್ಥದಲ್ಲಿ ಅಂಗೈಯೊಡ್ಡಿ ನೀರು ಕುಡಿದು, ಗುಡ್ಡವೇರಿ ಪಾಂಡವರ ಗುಹೆ, ಸೀತೆಯ ಬಾವಿಯನ್ನು ಕೌತುಕವೇ ಕಣ್ಣಾಗಿ ದಿಟ್ಟಿಸಿ, ಜೋಗಿ ಮಠದವರೆಗೆ ಹೋಗಿ ಮತ್ತೆ ಓಡುತ್ತಾ ಗುಡ್ಡವಿಳಿದು ಹಿಂದಿರುಗುವುದು. ಪಾಂಡವರ ಗುಹೆಯ ಹೊರಗೆ ನಿಂತು, ಒಳಗಣ ಒಂದಡಿ ಅಗಲದ ಆ ಬಾಗಿಲಿನಿಂದ ಒಳಗೆ ಹೋಗಿ ನೋಡೋಣವೇ ಎಂಬ ಕುತೂಹಲಕ್ಕೆ, ಇಲ್ಲ, ಹೋದವರು ಹಿಂದೆ ಬಂದಿಲ್ಲವೆಂಬ ಮತ್ತೂ ಕುತೂಹಲ ಕೆರಳಿಸುವ ಉತ್ತರ! ಎಷ್ಟೋ ವರ್ಷಗಳ ಬಳಿಕ ಈಗ್ಗೆ ಕೆಲ ವರ್ಷಗಳ ಹಿಂದೆ ನನ್ನೀ ಸುತ್ತಾಟದ ಪ್ರಿಯ ತಾಣವನ್ನು ಕಂಡು ಬರಹೋದರೆ, ಗುಡ್ಡವೇರಲು ಮೆಟ್ಟಲುಗಳಾಗಿ, ಈ ಮೆಟ್ಟಲುಗಳನ್ನೇರುವುದು ಸಾಕಷ್ಟು ತ್ರಾಸದಾಯಕವೇ ಆಗಿ ಏದುಸಿರು ಬರಲಾರಂಭಿಸಿತು. ಏರಿ ಮೇಲೆ ಹೋದರೆ ಜೋಗಿಮಠ ಸುಸ್ಥಿತಿಯಲ್ಲಿತ್ತು. ಪಾಂಡವರ ಗುಹೆಯೇನೋ ರಕ್ಷಿತ ತಾಣವಾಗಿದ್ದರೆ, ಸೀತಾ ಬಾವಿ ಮಾತ್ರ ಮಾಯವಾದಂತಿತ್ತು. ಕಾಣದಂತೆ ಅಲಕ್ಷಿತವಾಗಿ ಹುಲ್ಲು ಮುಚ್ಚಿಕೊಂಡಿತ್ತು.
ಎಲ್ಲಿದೆಯೆಂದು ಕೇಳಿ ಅರಸಿ ಕಂಡು ಹಿಡಿಯಬೇಕಾಯ್ತು. ಎಂದೋ ಮೇಯಲು ಬಂದ ದನವೊಂದು ಸಿಕ್ಕಿಕೊಂಡಿತೆಂಬ ಕಾರಣಕ್ಕೆ ಬೆಳೆದ ಹುಲ್ಲಿನ ನಡುವೆ ಅಡ್ಡಲಾಗಿ ಕಲ್ಲೊಂದನ್ನು ಹೇರಿಕೊಂಡಿತ್ತು. ಪಾಂಡವರ ಗುಹೆಗೊದಗಿದ ಮಾನ ಸಮ್ಮಾನ ಬಡ ಸೀತಾ ಬಾವಿಯ ಪಾಲಿಗೆ ಇಲ್ಲವಾಗಿತ್ತು! ಇದೇನು ಹೀಗೆಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ಬದಲಿಗೆ ಈ ನಿರ್ಜನ ತಾಣಕ್ಕೆ ಹೀಗೆ ಒಬ್ಬರೇ ಬರಬೇಡಿ, ಎಂಬ ಹಿತೋಪದೇಶವೂ ಬಂತು!
ನಗರವಿಂದು ಬೆಳೆದಿದೆ. ಕದ್ರಿಗುಡ್ಡದ ಆ ನಿತಾಂತ, ಸುವಿಶಾಲ ಹಚ್ಚಹಸುರಿನ ವೃಕ್ಷರಾಜಿಯ ನಡುವೆ ಅಲ್ಲಲ್ಲಿ ಅಸಂಖ್ಯ ಮನೆಗಳೂ, ಗಗನಚುಂಬಿಗಳೂ ಎದ್ದಿವೆ. ನಮ್ಮ ಅಂದಿನ ದಿನಗಳ ಭಿಕ್ಷುಕರು, ಹುಚ್ಚರು, ರೋಗಿಗಳೆಲ್ಲ ಇಂದು ಬರಿಯ ನೆನಪಷ್ಟೆ! ಕೃಷಿಭೂಮಿ ಎಂದೋ ಅಳಿದಿದೆ. ದಾರಿದ್ರ್ಯ ಇಲ್ಲವಾಗಿ ನಗರ ಸಿರಿಯನ್ನೇ ಹಾಸಿ ಹೊಚ್ಚಿದಂತಿದೆ. ಡಬ್ಬಲ್ ಗುಡ್ಡದಂತಹ ಸುಂದರ ಗುಡ್ಡಗಳು, ವೃಕ್ಷ ಸಂಪತ್ತು ಮಾಯವಾಗಿ, ಹಳೆಯ ಸುಂದರ ಮನೆಗಳು, ಭವನಗಳೆಲ್ಲ ಅಳಿದು, ಎಲ್ಲೆಲ್ಲೂ ಬಹುಮಹಡಿ ಕಟ್ಟಡಗಳೆದ್ದಿವೆ. ಸುರಮ್ಯ ಪಶ್ಚಿಮಾಂಬುಧಿಯಲ್ಲಿ ಸೂರ್ಯಾಸ್ತದ ಸುಮನೋಹರ ದೃಶ್ಯವನ್ನು ಸವಿಯುವಂತಿದ್ದ ಪಾರಂಪರಿಕ ಮಹತ್ವದ ತಾಣ ಬಾವುಟಗುಡ್ಡೆ, ಈ ಪ್ರಾಕೃತಿಕ ಮಹತ್ತಿಗೆದುರಾಗಿ ದೈತ್ಯಾಕಾರದ ಬಹುಮಹಡಿ ಕಟ್ಟಡವೊಂದನ್ನು ಹೇರಿಕೊಂಡು ನಗರೀಕರಣದ ಕರಾಳ ಮುಖಕ್ಕೆ, ಜನರ ನಶಿಸಿದ ನಾಗರಿಕ ಪ್ರಜ್ಞೆಗೆ, ಪ್ರಕೃತಿಯ ಅವಗಣನೆಗೆ ಸಾಕ್ಷಿಯಾಗಿದೆ. ಮಂಗಳೂರು ನಗರ ಇಂದು ಬೆಳೆಯುತ್ತಿರುವ ಪರಿಗೆ, ಮುಂದೊಂದು ದಿನ, ಈ ಬಾವುಟಗುಡ್ಡೆ, ಕದ್ರಿಗುಡ್ಡೆಗಳೇ ಅಳಿದು ಹೋದರೂ ಆಶ್ಚರ್ಯವಿಲ್ಲ!
ಶ್ಯಾಮಲಾ ಕಥೆಗಾರ್ತಿ ಮತ್ತು ಅನುವಾದಕಿ. ಹುಟ್ಟಿದ್ದು ಮಂಗಳೂರು. ಈಗ ಮುಂಬೈ ವಾಸಿ. ರಫಿಯಾ ಮಂಜೂರುಲ್ ಅಮೀನ್ ಬರೆದ ಉರ್ದು ಕಾದಂಬರಿ, ‘ಆಲಂಪನಾ’ದ ಕನ್ನಡ ಅನುವಾದ ಇವರ ಮಹತ್ವದ ಕೃತಿ. ಗಾನ್ ವಿತ್ ದ ವಿಂಡ್, ವದರಿಂಗ್ ಹೈಟ್ಸ್, ಫ್ರ್ಯಾಂಕಿನ್ ಸ್ಟೈನ್, ಬಾಲ್ಯಕಾಲ ಮಾಯಾಜಾಲಾ ಇವರ ಇನ್ನಿತರೆ ಪ್ರಕಟಿತ ಕೃತಿಗಳು.. “ನಾಳೆ ಇನ್ನೂ ಕಾದಿದೆ” ಇವರ ಆತ್ಮಕಥನ
ತುಂಬಾಆಪ್ತವಾದ ಬರೆಹ ಶ್ಯಾಮಲಾ. ಖುಷಿಯಿಂದ ನಮ್ಮ ನೆನಪುಗಳನ್ನೂ ನಮಗೇ ಗೊತ್ತಿಲ್ಲದ ಹಾಗೆ ಸೇರಿಸಿಕೊಂಡು ಓದಿಸುತ್ತದೆ.
ಪಾರ್ವತಿ ಐತಾಳರ ಮಾತು ಅಕ್ಷರಶಃ ನಿಜ ಶ್ಯಾಮಲ