ಶಾರವ್ವನಿಗೆ ಶಿವರುದ್ರಯ್ಯನ ಇಂಥ ನಡವಳಿಕೆ ವಿಚಿತ್ರವೆನಿಸಿತು. ದೇವರ ಹೊಲ ತನ್ನ ಗಂಡನಿಗೆ ಕೊಡಿಸ್ತೀನಿ ಅಂತಾ ಪೂಜಾರಪ್ಪ ಹೇಳಿದ್ದು ತನಗೆ ಗೊತ್ತಿತ್ತು. ಸಿಗಬೇಕು ಎಂಬ ವಿಚಾರದಲ್ಲಿ ಒಂದು ಒಪ್ಪಂದವಾಗಿತ್ತು ಎನ್ನುವುದು ಪೂಜಾರಪ್ಪ ಮತ್ತು ತನಗೆ ಮಾತ್ರ ಗೊತ್ತಿದ್ದ ವಿಷಯವಾಗಿತ್ತು. ಆದರೆ ಶಿವರುದ್ರಯ್ಯ ಗುಡಿ ಪೂಜಾರಿ ಕ್ರಿಷ್ಣಪ್ಪನ ಮುಖಾಂತರ ಹೇಳಿಸಿ ತನ್ನ ಉದ್ದೇಶ ಸಾಧನೆಗೆ ಮುಂದಾಗಿದ್ದ. ಕ್ರಿಷ್ಣಪ್ಪ ಉದ್ದೇಶದ ಮೂಲವನ್ನು ಪೂರ್ತಿಯಾಗಿ ಹೇಳದೆ ಪರವಾಗಿ ಎನ್ನುವಂತೆ ಹೇಳಿ ಶಾರವ್ವನನ್ನು ಒಪ್ಪಿಸಿದ್ದ. ನಿಗೂಢವಾದ ಗುಟ್ಟನ್ನರಿಯದ ಶಾರವ್ವ ದೇವರ ಹೊಲ ಸಿಕ್ಕರೆ ಸಾಕು ಎಂದು ಒಪ್ಪಿಕೊಂಡಿದ್ದಳು.
ಮಂಜಯ್ಯ ದೇವರಮನಿ, ಸಂಗಾಪುರ ಬರೆದ ಕತೆ “ದೇವರ ಹೊಲ” ನಿಮ್ಮ ಈ ಭಾನುವಾರದ ಓದಿಗೆ
ಕಟ್ಟೆಯ ಮೇಲೆ ಕುಳಿತ ಸಂಗಪ್ಪ ಹಗ್ಗವನ್ನು ಹುರಿಮಾಡಿ ಬಿಗಿಯಾಗಿ ಹೊಸೆದು ಬಾರುಕೋಲಿನ ಗುಣಿಕಿಗೆ ಕಟ್ಟಿ ತಾನೇ ಹೆಣೆದಿದ್ದ ಬಣ್ಣ ಬಣ್ಣದ ಎರಡು ಚೆಂದನೆಯ ಕುಚ್ಚುಗಳನ್ನು ಪೋಣಿಸಿ ಹೆಗಲ ಮೇಲೆ ಹಾಕಿಕೊಂಡು ನೋಡಿದ. ಅವನ ಮೈ ನಡುಗಿ ಮೈಯಂತ ಮೈಯೆಲ್ಲಾ ಒಮ್ಮೆ ತರಗುಟ್ಟಿತು. “ಇಷ್ಟೊಂದು ಚಂದಾಗಿ ಕಟ್ಟಿದ ಈ ಚಾಟಿ ತನ್ನ ಮೈಗೆ ಬೀಳುತೈತಲ್ಲ” ಎಂದು ನೆನೆದು ಹನಿಗಣ್ಣಾದ. ಐದು ವರ್ಷಕ್ಕೊಮ್ಮೆ ಈ ರೀತಿ ತನಗೆ ತಾನೇ ಹೊಡ್ಕೊಳ್ಳೋದು, ಮೈಯಲ್ಲಾ ಹಣ್ಣಾಗಿ ನಾಕು ದಿವ್ಸ ಮೇಲೇಳದೆ ಹಾಸಿಗೆ ಹಿಡಿಯೋದು ದೇವ್ರ ತೆಲಿಮ್ಯಾಲ ಹೂವು ತಪ್ಪಿದ್ರೂ ಇದು ಮಾತ್ರ ತಪ್ಪುತ್ತಿರಲಿಲ್ಲ. ಅವನ ಹೆಂಡ್ತಿ ಶಾರವ್ವ “ಇದ್ಯಾಕಿಂಗ ದೆವ್ವ ಮೆಟ್ಟಿಗೆಂಡರಂಗೆ ಕುಂತಿ ಇದೊಂದು ಸಲ ಬಾರ್ಕೋಲು ಹೆಗಲಿಗಾಕ್ಯಾ… ದ್ಯಾವ್ರು ಕಣ್ಬಿಟ್ರೆ ನೀನು ಹೊಲ ಉಳಬೋದು ನಮ್ಮ ಕಷ್ಟೆಲ್ಲಾ ನೀಗಬೋದು ಉಣ್ಣಾಕೆ ಭತ್ತ ಆಕ್ಕಾವು. ಕಂಡೋರ ಹೊಲಕ್ಕೆ ಕೂಲಿ ಹೋಗೋದು ತಪ್ಪುತ್ತೆ” ಅಂದಳು. ಅವಳ ಮಾತಿಗೆ ಸಂಗಪ್ಪ ತುಟಿಬಿಚ್ಚದೆ ಕುಂತಿದ್ದ. ಅವನಿಗೆ ಯುಗಾದಿ ಯಾವತ್ತು ಹೊಸದಿನದಂತೆ ಕಂಡಿರಲಿಲ್ಲ. ಅವನೆಂದು ಈ ಹಬ್ಬದಲ್ಲಿ ಹೋಳಿಗೆ ಮುಟ್ಟುತ್ತಿರಲಿಲ್ಲ. ಈ ಸಲನಾದ್ರೂ ಹುಂಬಳಿಗೆ ಹೊಲ ಸಿಕ್ಕರೆ ಹೋಳಿಗೆ ಉಣ್ಣುವಂತಿ ಎನ್ನುವ ಹೆಂಡ್ತಿ ಮಾತಿಗೆ ಸ್ವಲ್ಪ ಗೆಲುವಾದ. ದೇವರ ಹೊಲ ಸಿಕ್ಕರೆ ಭತ್ತ ಬೆಳಿಬೋದು. ಹೆಂಡ್ತಿ ಮಕ್ಕಳು ಕಲ್ಲಿಗೆ ಬಡಿದ ಕೌದಿ ಆಗ್ಯಾರ… ಕಳ್ಳುತುಂಬಾ ಉಣ್ಣಬೋದು ಎಂಬಾಸೆ ಅವನ ಮನದಲ್ಲಿ ಚಿಗರೊಡೆಯಿತು.
ಸಂಗಪ್ಪ ಊರಲ್ಲಿ ಎಲ್ಲರಿಗೂ ಬೇಕಾದವನಾಗಿದ್ದ; ಯಾವುದೇ ಕೆಲಸವಿರಲಿ ಅದು ಎಷ್ಟೋತ್ತಿನಲ್ಲೆ ಆಗಲಿ ನಡೀರಿ ಹೋಗೋಣ ಅಂತಾ ಚಡಾವು ಮೆಟ್ಟಿಗೆಂದು ಹೊರಡಲನುವಾಗುತ್ತಿದ್ದ. ಯಾರ ಕಿರೆಯೇವು ಸಂಗಪ್ಪ ಇಟ್ಟುಕೊಳ್ಳುತ್ತಿದ್ದಿಲ್ಲ ಏನಾರ ಮಾಡಿ ತೀರಿಸಿಬಿಡುತ್ತಿದ್ದ. ಹುಳ ಮುಟ್ಟಿದ ದನಗಳಿಗೆ ಮದ್ದು ಮಾಡುವುದನ್ನು ಕಲಿತುಕೊಂಡಿದ್ದ. ಇದು ಬಹು ಜನಕ್ಕೆ ಸಹಾಯವಾಗಿತ್ತು. ಹಾವು ಕಚ್ಚಿದಕ್ಕೆ ಹುಳಮುಟ್ಟಿದೆ ಎನ್ನುತ್ತಾರೆ ಹೆಸರು ಹೇಳಿದರೆ ಮದ್ದು ಫಲಿಸುವುದಿಲ್ಲ, ವಿಷವೇರಿ ದನ ಸತ್ತು ಹೋಗುತ್ತದೆ ಎನ್ನುವ ನಂಬಿಕೆ. ಆದ್ದರಿಂದ ತಪ್ಪಿಯೂ ಯಾರು ಹಾವು ಕಚ್ಚಿದೆ ಅಂತೇಳುವುದಿಲ್ಲ, ಬದಲಿಗೆ ಹುಳಮುಟ್ಟಿದೆ ಅಂತಾ ಹೇಳುತ್ತಾರೆ. ಹುಳ ಮುಟ್ಟಿದ ದನಗಳು ದಗ್ಗುಹತ್ತಿ ಕುದಿ ಹೆಚ್ಚಾಗಿ ಗಟ ಗಟ ಹೊಟ್ಟೆತುಂಬಾ ನೀರು ಕುಡಿದು ವಯ್ಯಾನ್ಕ ವಯ್ಯಾನ್ಕ ವದ್ರಿ ಉಸಿರು ಚೆಲ್ಲುತ್ತಿದ್ದವು. ಅಂತಾ ವ್ಯಾಳೆದಾಗ ಸಂಗಪ್ಪ ತನ್ನ ಮನೆಯಲ್ಲಿನ ಔಷಧಿಯನ್ನು ಕುಟ್ಟಿ ಪುಡಿಮಾಡಿ ಹುಳಮುಟ್ಟಿದ ದನಗಳಿಗೆ ಗೊಟ್ಟದಲ್ಲಿ ಹೊಯ್ಯುತಿದ್ದ. ತೇಲುಗಣ್ಣು ಬಿಡುತ್ತಿದ್ದ ದನಗಳು ಚಣವೊತ್ತಿಗೆ ಎದ್ದು ನಿಲ್ಲುತ್ತಿದ್ದವು. ಒಂದು ಸಲ ಬುಡ್ಡಜ್ಜನ ಎಮ್ಮಿಗಳು ದದ್ದಾರಿ ನಿಂಗಪ್ಪನ ತೋಟದಾಗ ಕೂಳಿಸೊಪ್ಪೆ ತಿಂದು ನೆತ್ತಿಗೆತ್ತಿ ಬಾಯಿ ಅಂತ್ರಿಸಿಗೊಂಡಿದ್ದವು. ಎಳೆಕೂಳಿ ಸೊಪ್ಪೆ ತುಂಬಾ ವಿಷ! ಸಂಗಪ್ಪ ಬೆಲ್ಲನೀರು ಕಲಸಿ ಗೊಟ್ಟದಲ್ಲಿ ಹೊಯ್ದು ಸಾಯೋ ಎಂಟ್ಹತ್ತು ಎಮ್ಮಿಗಳ ಜೀವ ಉಳಿಸಿದ್ದ. ಬುಡ್ಡಜ್ಜ ‘ಬಾಯಿಸತ್ತ ದನಗಳ ಜೀವ ಉಳ್ಸಿದ ದ್ಯಾವ್ರು ಕಣಪ್ಪೋ ನೀನು’ ಅಂತೇಳಿ ಸಂಗಪ್ಪನಿಗೆ ಕೈ ಮುಗಿದಿದ್ದನು.
ಸಂಗಪ್ಪ ಬಡವನಾಗಿದ್ರೂ ನಿಯ್ಯತ್ತಿನ ಮನಿಸ್ಯಾ. ಒಂಟಿಗನಾದ್ರೂ ಊರಿನ ಕೆಲಸ, ದ್ಯಾವ್ರಕಾರ್ಯ ಅಂದ್ರೆ ಹೇಳಿಸಿಕೊಳ್ಳದಂಗೆ ಮಾಡುತಿದ್ದ. ದ್ಯಾವ್ರಹಬ್ಬಕ್ಕೆ ಬಂಡಿಗಟ್ಟಲೆ ಒಳ್ಕಿ ಕಟ್ಟಿಗೆ ಹೊಡೆಯೋದು, ಪರೆವು ದಿನ ಗುಡಿಕಟ್ಟಿಗೆ ಸಗಣಿನೀರು ಬಳಿಯೋದು, ಚಪ್ಪರ ಹಾಕುವುದು, ಅಂತ್ರಗಾಯಿ ಕಟ್ಟುವುದು ಎಲ್ಲ ಕೆಲಸಗಳನ್ನು ತಾನೆ ಮುಂದೆ ನಿಂತು ಮಾಡುತ್ತಿದ್ದ. ಅವನಪ್ಪ ಕಲ್ಡೆಪ್ಪ “ದ್ಯಾವ್ರ ಕೆಲ್ಸ ಪುಣ್ಯದ ಕೂಳಿದ್ದಂಗೆ ಮೈಸಾಬರ್ಕಿ ಮಾಡ್ಬೇಡ ಹೋಗು… ಹೋಗು” ಅಂತಿದ್ದ. ಕಲ್ಡೆಪ್ಪ ಕೂಡಾ ಮನೆ ಮುಂದಿನ ಜಾಲಿಮರದ ಕೆಳಗೆ ಗೊಬ್ಬರಚೀಲ ಬಿಚ್ಚಿಗೊಂಡು ಎಳೆಗಳನ್ನು ಬಿಡಿಸಿ ಚೆನ್ನಾಗಿ ಹುರಿಮಾಡಿ ಮಿಣಿ, ಪಟ್ಟಗಣಿ, ನೊಗಸುತ್ತು ಹೊಸೆದು ಕೊಡುತ್ತಿದ್ದ. ಮುಗುದಾರದಿಂದ ಬಂಡಿಮೀಣಿವರೆಗೂ ಹೊಸೆದ ಹಗ್ಗಗಳು ಯಾವದಕ್ಕೂ ಜುಪ್ಪ ಅಂತಿದ್ದಿಲ್ಲ. ಇತ್ತೀಚಿಗೆ ಕಣ್ಣು ಪೊರೆ ಬಂದಿದ್ದರಿಂದ ಹಗ್ಗ ಹೊಸೆಯೋದಕ್ಕೆ ಕಣ್ಣಿ ಬಿಗಿದಿದ್ದ. ಒಟ್ಟಿನಲ್ಲಿ ಅಪ್ಪ ಮಗ ಇಬ್ಬರೂ ಊರಿಗೆ ಉಪಕಾರಿಗಳಾಗಿದ್ದರು.
*****
ಇಳಿಸಂಜೆ ಹೊತ್ತು ಕರಿಯಣ್ಣನ ಹಲಗೆ ಸದ್ದು ಮಾಡತೋಡಗಿತು. ಚೌಡಣ್ಣನ ಹಲಗೆಯನ್ನು ಜೊತೆಗಾಕಿಕೊಂಡ ಕರಿಯಣ್ಣ ಜಿದ್ದಿಗೆ ಬಿದ್ದವನಂತೆ ಬಾರಿಸತೊಡಗಿದ್ದ. ಊರಿಗೆ ಊರು ಹಲಗೆ ಗುಂಗಿನಲ್ಲಿ ತೆಲುತಿತ್ತು. ಜನಗಳೆಲ್ಲಾ ಬಸವಣ್ಣ ದೇವರಗುಡಿ ಹತ್ತಿರ ಸೇರಿದರು. ಶಾರವ್ವ ಮತ್ತೊಮ್ಮೆ ಎಣ್ಣೆ ಕಾಯಿಸಿಕೊಂಡು ಬಂದು ಕಟ್ಟೆಯ ಮೇಲೆ ಕುಂತಿದ್ದ ಸಂಗಪ್ಪನ ಮೈಗೆ ಮೃದುವಾಗಿ ಹಚ್ಚಿದಳು. ಮಕ್ಕಳಿಬ್ಬರು “ಎಲ್ರುವೆ ಹಬ್ಬಕ್ಕೆ ಹೊಸ ಬಟ್ಟೆ ಹಾಕ್ಕೊಂಡವ್ರೆ ನಮಗೂ ಹಾಕವ್ವ” ಅಂತ ಹಠ ಮಾಡುತ್ತಿದ್ದವು. “ಮುಂದಿನ ವರ್ಷ ನಿಮ್ಗೆ ಹೊಸ ಗುಬ್ಬಿ ಅಂಗಿ ಕೊಡ್ಸ್ತೀನಿ ಸುಮ್ಕಿರ್ರಿ” ಎಂದು ಜಬರಿಸಿದಳು. ಪಂಚೆ ಎತ್ತಿಕಟ್ಟಿದ ಸಂಗಪ್ಪ ಬರಿಮೈಯಲ್ಲಿ ಹೆಗಲಿಗೆ ಬಾರುಕೋಲು ಹಾಕಿಕೊಂಡು ಬಸವಣ್ಣದೇವ್ರ ಗುಡಿಕಡೆ ಹೊಂಟ.
ಬಸವಣ್ಣದೇವ್ರು ಗುಡಿ ಮುಂದಿನ ದೀಪದಮಲ್ಲಿ ಕಂಬಕ್ಕೆ ದೇವ್ರ ಎತ್ತುಗಳನ್ನು ಕಟ್ಟಲಾಗಿತ್ತು. ಎತ್ತುಗಳು ಕೊಂಬು ಹೆರಿಸಿಕೊಂಡು ಕುಪ್ಪಿ ಬಣ್ಣ ಬಳಿಸಿಕೊಂಡು ಗೆಜ್ಜೆಕಟ್ಟಿಗೊಂಡು ಜೂಲಾ ಹಾಕ್ಕೊಂಡು ನಿಂತಿದ್ದವು. ಆ ಜೋಡೆತ್ತುಗಳನ್ನು ದೇವರ ಹೊಲ ಉಳುಮೆಮಾಡೋ ಕಮತಗಾರನಿಗೆ ಕೊಡಲಾಗುತ್ತದೆ. ಹಲಗೆ ಸಪ್ಪಳಕ್ಕೆ ಗುಡಿ ಪೂಜಾರಿ ಕ್ರಿಷ್ಣಪ್ಪ ಮತ್ತು ಶಿವರುದ್ರಯ್ಯನವರು ಬಂದರು. ಕಮತಗಾರ ಮಂದಿ ಸಾಲಾಗಿ ನಿಂತಿದ್ದರು. ಶಿವರುದ್ರಯ್ಯನವರು ಅರೆಘಳಿಗೆ ನಿಂತು ನೋಡಿ ಬಸವಣ್ಣನ ಪೂಜೆಗೆ ಅನುಮತಿ ನೀಡಿ ಕಮತಗಾರರ ಮುಂದೆ ಬಂದು “ನಮ್ಮ ಬಸವಣ್ಣ ಯಾರಿಗೆ ಹೂವು ಕೊಡ್ತಾನೋ ಅವ್ರು ದೇವ್ರ ಹೊಲ ಹೊಡಿಬೋದು, ನೀವು ದ್ಯಾವ್ರು ಮೆಚ್ಚುವಂಗೆ ಚಾಟಿ ಹೊಡ್ಕೋಬೇಕು” ಅಂತೇಳಿ ಎಲ್ಲರಿಗೂ ಚಂಡುಹೂವಿನ ಹಾರ ಹಾಕಿದರು. ಪೂಜಾರಪ್ಪ ಬಸವಣ್ಣದೇವ್ರು ಪೂಜೆಮಾಡಿ ದೇವರನ್ನು ತಲೆಮೇಲೆ ಹೊತ್ತನು. ಮೂರು ಸುತ್ತು ದೀಪದಮಲ್ಲಿ ಕಂಬ ಸುತ್ತಿ ಕಮತಗಾರರಿಗೆ ಅಪ್ಪಣೆ ಮಾಡಿದ. ಕಮತಗಾರರು ತಮ್ಮ ಹೆಗಲ ಮೇಲಿನ ಬಾರುಕೋಲು ತೆಗೆದುಕೊಂಡು ತಮಗೆ ತಾವೇ ಚಟಾರ್ ಚಟಾರ್ ಹೊಡೆದುಕೊಳ್ಳತೊಡಗಿದರು. ಸಂಗಪ್ಪನ ಹೊಡೆತಕ್ಕೆ ಮೈ ಮೇಲಿನ ಚಂಡಿನ ಹೂವುಗಳು ಪತ್ತರಗುಟ್ಟಿದವು. ಸಂಗಪ್ಪನ ಮೈ ಮೇಲೆ ಬಾಸುಂಡೆಗಳೆದ್ದು ಮೈಯಂತ ಮೈಯಲ್ಲಾ ಕೆಂಪೇರುತ್ತಿರಲು ಸೂರ್ಯ ಗುಡಿಯ ಗೋಪುರದ ಕಳಸಕ್ಕೆ ಕೆಂಪನೆಯ ಓಕುಳಿಯನ್ನು ಚೆಲ್ಲುತ್ತಿದ್ದ. ಶಾರವ್ವ ದೇವರನ್ನು ಬೇಡುತ್ತಿದ್ದಳು ಸಂಗಪ್ಪನ ಮಕ್ಕಳಿಬ್ಬರು ಹೆದರಿ ಅವ್ವನ ಸೀರೆಯಲ್ಲಿ ಹುದುಗಿಕೊಂಡಿದ್ದವು. ಪೂಜಾರಪ್ಪ ಹಲಗೆಯ ಸದ್ದಿಗೆ ಹೆಜ್ಜೆ ಹಾಕುತ್ತ ದೇವರ ಮೇಲಿನ ಹೂವುನ್ನು ತೆಗೆದು ಸಂಗಪ್ಪನ ಮೇಲೆ ಸುರುವಿದ ಮೈಯಲ್ಲಾ ಹಣ್ಣಾಗಿದ್ದ ಸಂಗಪ್ಪ ಹೂವಿನಂತೆ ಮುದುರಿ ಕುಳಿತ. ಶಿವರುದ್ರಯ್ಯ “ಏ… ಸಂಗಪ್ಪ… ಬಸವಣ್ಣ ನಿನ್ನ ಮ್ಯಾಲ ದಯೆ ತೋರ್ಸ್ಯಾನ…” ಎಂದು ಭುಜ ಚಪ್ಪರಿಸಿ “ನೋಡ್ರೆಪ್ಪ ಈ ಸಲ ನಮ್ಮ ಕಮತಗಾರ ಸಂಗಪ್ಪ ದೇವ್ರ ಹೊಲ ಹೊಡೀತಾನ” ಎಂದು ಜೋರಾಗಿ ಸಾರಿದರು. ಪೂಜಾರಪ್ಪ ಜೋಡೆತ್ತುಗಳ ಹಗ್ಗವನ್ನು ಬಿಚ್ಚಿ ಸಂಗಪ್ಪನಿಗೆ ಕೊಟ್ಟನು. ಸಂಗಪ್ಪನ ಮೈ ನೋವೆಲ್ಲಾ ಹೂವಿನಂತೆ ಹಗುರವಾಯಿತು. ಶಾರವ್ವ ಎತ್ತುಗಳ ಕಾಲಿಗೆ ಸಣ್ಮಾಡಿ ಪೂಜಾರಪ್ಪನ ಪಾದಕ್ಕೆ ಬಿದ್ದಳು. ಯಾರಿಗೆ ದೇವರು ಹೂವು ಕೊಟ್ಟಿರುತ್ತೋ ಅವರು ಐದು ವರ್ಷ ದೇವರ ಹೊಲ ಉಳುವ ಭಾಗ್ಯ ಪಡೆಯುತ್ತಾರೆ. ಪ್ರತಿವರ್ಷ ಬೆಳದಿದ್ದರಲ್ಲಿ ನಾಕಣೆಯಷ್ಟು ತಂದು ದೇವರಿಗೆ ಕಾಣಿಕೆ ನೀಡಬೇಕು ಇದು ಪದ್ಧತಿ. ಸಂಗಪ್ಪ ಮಾರನೆ ದಿನ ಗದ್ದೆ ಪೂಜೆಮಾಡಿ ಹೋಳಿಗೆ ಎಡೆಹಾಕಿ ನೇಗಿಲು ಹೂಡಿದನು. ಊರು ಹೊಸ್ತೊಡಕಿನ ಬಾಡೂಟದಲ್ಲಿ ಮುಳುಗಿತ್ತು. ಸಂಗಪ್ಪ ದೇವರ ಎಡೆ ಉಣ್ಣುತ್ತಿದ್ದ. ಕೇರಿಯಲ್ಲಿ “ಶಾರವ್ವ ಅಯ್ಯನೋರ ಜೊತೆ ಸೇರಿ ಗಂಡಂಗೆ ದ್ಯಾವ್ರ ಹೊಲ್ವಾ ಕೊಡ್ಸ್ಯಾಳ” ಅಂತ ಜನ ಮಾತಾಡಿಕೊಳ್ಳುತ್ತಿದ್ದರು.
*****
‘ಅಯ್ಯಾ ದ್ಯಾವ್ರ ಎತ್ತು ಸತ್ತೋಯ್ತಂತೆ’ ಎಂದು ಕೆಲಸಾದಳು ಸಂತೀರ ಬಂದು ಹೇಳಿದಾಗ ಸಂಗಪ್ಪನನ್ನು ಹೆಂಗಾದರೂ ಮಾಡಿ ಹಣಿಯಲು ನೋಡುತ್ತಿದ್ದ ಶಿವರುದ್ರಯ್ಯನವರಿಗೆ ಒಂದೊಳ್ಳೆ ಅವಕಾಶ ಸಿಕ್ಕಂತಾಗಿ ಒಳಗೊಳಗೆ ತುಂಬಾ ಖುಷಿಪಟ್ಟರು. ಆಟೋತ್ತಿಗಾಗಲೇ ದೇವರ ಎತ್ತು ಸತ್ತ ಸುದ್ದಿ ಊರ ತುಂಬೆಲ್ಲಾ ಹಬ್ಬಿ ಕೊಬ್ಬಿ ಚಿಗರಿಕೊಡಿನಂತೆ ನಾನಾ ಟಿಸಿಲೋಡದಿತ್ತು. ಹಾಳು ಮುಖ ತೊಳೆಯೋಕು ಮುಂಚೆನೆ ದ್ಯಾವ್ರು ಎತ್ತು ಸತ್ತಿದ್ದು ಸಂಗಪ್ಪನನ್ನು ಇನ್ನಿಲ್ಲದ ಕಷ್ಟಕ್ಕೀಡು ಮಾಡಿತ್ತು.
‘ಸಂಗಪ್ಪನೇ ಹೊಡೆದು ಸಾಯಿಸಿದ್ನಂತೆ, ಮೇವು ಹಾಕದೆ ಸಾಯಿಬಡಿದ್ನಂತೆ, ಹುಳಮುಟ್ಟಿ ಸತ್ತೋತಂತೆ ಅವ್ನೆ ಮದ್ದು ಮಾಡ್ತಿದ್ನಲ್ಲ ಯಾಕೆ ಮಾಡ್ಲಿಲ್ಲ; ಸತ್ರೆ ಸಾಯ್ಲಿ ಅಂತುವೆ ಮಾಡ್ಲಿಲ್ವಂತೆ, ಇಲ್ಲತ್ಯಗಿ ಸಂಗಪ್ಪಗೆ ದನಕರ ಅಂದ್ರೆ ಪ್ರಾಣ ಅವ್ನು ಅಂಗೆಲ್ಲಾ ಮಾಡಾಕಿಲ್ಲ. ಹಕ್ಕೆಯಲ್ಲಿ ಕಟ್ಟಿದ ಎತ್ತು ದಡಾರ್ ಅಂತ ಬಿದ್ದು ಒದ್ದಾಡಿ ಒದ್ದಾಡಿ ಸತ್ತು ಓತಂತೆ! ಸಂಗಪ್ಪ ಎದೆ ಉಜ್ಜಿ ಮದ್ದು ಅರೆಯೊದ್ರೊಳಗೆ ಪ್ರಾಣ ಬಿಡ್ತಂತೆ! ಕಣ್ಣು ಮುಂದೆ ಪ್ರಾಣ ಬಿಟ್ಟಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತನಂತೆ! ಸಂಗಪ್ಪನ ಮನೆ ಮುಂದೆ ಸೇರಿದ್ದವರು ಒಬ್ಬೊಬ್ಬರು ಒಂದೊಂದು ವಿಧವಾಗಿ ಮಾತಾಡಿಕೊಳ್ಳುತ್ತಿದ್ದರು. ಶಿವರುದ್ರಯ್ಯ ಬಂದು ನೋಡಿ ತಾವೇ ಮುಂದೆ ನಿಂತು ದೇವರ ಎತ್ತನು ಗುಡಿ ಪೂಜಾರಿ ಕ್ರಿಷ್ಣಪ್ಪನ ಕಡೆಯಿಂದ ಪೂಜೆ ಮಾಡಿಸಿ, ಗಾಡಿಯಲ್ಲಿ ಸಾಗಿಸಿ ದೇವರ ಹೊಲದಲ್ಲಿ ಮಣ್ಣುಮಾಡಿ ಬಂದರು.
ಕಲ್ಡೆಪ್ಪ ಕೂಡಾ ಮನೆ ಮುಂದಿನ ಜಾಲಿಮರದ ಕೆಳಗೆ ಗೊಬ್ಬರಚೀಲ ಬಿಚ್ಚಿಗೊಂಡು ಎಳೆಗಳನ್ನು ಬಿಡಿಸಿ ಚೆನ್ನಾಗಿ ಹುರಿಮಾಡಿ ಮಿಣಿ, ಪಟ್ಟಗಣಿ, ನೊಗಸುತ್ತು ಹೊಸೆದು ಕೊಡುತ್ತಿದ್ದ. ಮುಗುದಾರದಿಂದ ಬಂಡಿಮೀಣಿವರೆಗೂ ಹೊಸೆದ ಹಗ್ಗಗಳು ಯಾವದಕ್ಕೂ ಜುಪ್ಪ ಅಂತಿದ್ದಿಲ್ಲ. ಇತ್ತೀಚಿಗೆ ಕಣ್ಣು ಪೊರೆ ಬಂದಿದ್ದರಿಂದ ಹಗ್ಗ ಹೊಸೆಯೋದಕ್ಕೆ ಕಣ್ಣಿ ಬಿಗಿದಿದ್ದ. ಒಟ್ಟಿನಲ್ಲಿ ಅಪ್ಪ ಮಗ ಇಬ್ಬರೂ ಊರಿಗೆ ಉಪಕಾರಿಗಳಾಗಿದ್ದರು.
ಮುಚ್ಚಂಜೆ ಹೊತ್ತು. ಸಂಜೆಗತ್ತಲು ನಡುಮನೆಯೆನ್ನಲ್ಲಾ ಆವರಿಸಿ ಮಸಿಯನ್ನು ಕುಟ್ಟುತಿದೆ. ಶಿವರುದ್ರಯ್ಯ ದಿವಾನ ಕಾಟಾದ ಮೇಲೆ ಕುಳಿತು ಕಟಾಂಜನದ ಹಟ್ಟಣಿಗೆಯ ಮೇಲೆ ಉರಿಯುವ ದೀಪದ ಮೇಲಾಡುತ್ತಿದ್ದ ರೆಕ್ಕೆಹುಳುಗಳು ಚಿಟ್ ಪಟ್ ಸುಟ್ಟ ಸತ್ತು ಬೀಳುತ್ತಿರುವದನ್ನು ಎವೆಯಿಕ್ಕದೆ ನೋಡುತ್ತಿದ್ದ. ದ್ಯಾವ್ರ ಹೊಲ ಸಾಗೋಳಿ ಮಾಡ್ಲಿ ಅಂತಾ ಪೂಜಾರಪ್ಪನ ಕಡೆಯಿಂದ ಅಪ್ಪಣೆ ಮಾಡ್ಸಿದಕ್ಕೆ ಒಳ್ಳೆ ಮರ್ವಾದನೆ ಕೊಟ್ಟಳಲ್ಲ ಆ ಬಿನ್ನಾಣಗಿತ್ತಿ ಶಾರಿ. ಮಳ್ಳಿಯಂಗೆ ಎಲ್ಲಾದಕ್ಕೂ ತಲೆ ಹಾಕಿ ಕೊನ್ಗೆ ಮೂಕು ಹಾರ್ಸಿಬಿಟ್ಟಳಲ್ಲ. ಈ ಅಡ್ನಾಡಿ ಪೂಜಾರಿ ಇವನೇನು ಹೇಳಿದ್ನೋ… ಅವಳೇನು ಕೇಳ್ಸಿಕೊಂಡ್ಳೋ… ಈಗ ನೋಡಿದ್ರೆ ಮೈ ಮುಟ್ಟಿದ್ರೆ ಸಾಕು ಹಾವು ಹರಿದಂಗೆ ಆಡ್ತಾಳೆ. ಕೈಯಾಗ ಚಪ್ಪಲಿ ತೆಗೊಂಡು ಮೈ ಮುಟ್ಟಿದ್ರೆ ಸುದ್ದು ಇರಲ್ಲ ನೋಡ್ರಿ ಅಯ್ಯನೋರೆ ಅಂತಾವ್ಳಲ್ಲ… ಹ್ಯಾಂಗೆ ಅಮ್ಮಿಕೆಬೇಕೆಂಬುದೆ ತಿಳಿವಲ್ದಲ್ಲ… ಮನಸಿನ ಯೋಚನೆಗಳು ಅಲೆಯಲೆಯಾಗಿ ದೀಪದ ಬೆಳಕಲ್ಲಿ ಸೋಲುತಿದ್ದವು. ಕತ್ತಲನ್ನು ಸೀಳಲು ಅಶಕ್ತವಾದ ದೀಪದ ಬೆಳಕು ರೆಕ್ಕೆ ಹುಳುಗಳನ್ನು ಸೀದಾಕುತ್ತಿತ್ತು. ಮಿಣಿ ಮಿಣಿ ಬೆಳಕಿನ ಕವ್ವಗತ್ತಲೆಯಲ್ಲಿ ಕುಳಿತಿದ್ದ ಗಂಡನನ್ನು ನೋಡಿದ ಶರಣವ್ವ “ಇದ್ಯಾಕಿಂಗ ಸುಮ್ನೆ ಕೂತಿರಿ… ಮತ್ತಿನ್ನೇನು ಮಾಡಬೇಕು ಅಂದ್ಕೊಂಡಿರಿ. ಆ ಗಂಡ ಹೆಂಡ್ತಿನ ಗೋಳು ಹೋಯ್ಯೋಕ್ಕೊಳ್ಳದಿದ್ರೆ ನಿಮ್ಗೆ ನಿದ್ದೆ ಬರಲ್ಲ ಅನ್ಸುತ್ತೆ. ಕಂಡೋರ ಹೊಟ್ಟೆ ಉರುಸಿದ್ರೆ ಏನು ಸಿಗತೈತೋ ಗೊತ್ತಿಲ್ಲ… ಈಗಿರೋ ಭಾಗ್ಯನೆ ಸಾಕಾಗಿದೆ ಹೊಸಲು ದಾಟೋ ಒಂದು ಕೂಸು ದಿಕ್ಕಿಲ್ಲ ಮನಿಗೆ… ಹೊಲ ಮನಿ ಹೊಯ್ದು ಮೂಡಗಡಿಗೆ ಬೆಂಕಿಯಿಕ್ಲಿ” ಎದೆ ಇರಿಯುವ ಮಾತುಗಳನ್ನಾಡಿದರೂ ಮೌನಮುರಿಯದಿದ್ದನ್ನು ಕಂಡು ಇನ್ನೂ ಏನು ಕಾದಿದೆಯೋ ಎಂದುಕೊಳ್ಳುತ್ತಾ ಹಿತ್ತಲಿಗೆ ಹೋದಳು.
ಶಾರವ್ವನಿಗೆ ಶಿವರುದ್ರಯ್ಯನ ಇಂಥ ನಡವಳಿಕೆ ವಿಚಿತ್ರವೆನಿಸಿತು. ದೇವರ ಹೊಲ ತನ್ನ ಗಂಡನಿಗೆ ಕೊಡಿಸ್ತೀನಿ ಅಂತಾ ಪೂಜಾರಪ್ಪ ಹೇಳಿದ್ದು ತನಗೆ ಗೊತ್ತಿತ್ತು. ಸಿಗಬೇಕು ಎಂಬ ವಿಚಾರದಲ್ಲಿ ಒಂದು ಒಪ್ಪಂದವಾಗಿತ್ತು ಎನ್ನುವುದು ಪೂಜಾರಪ್ಪ ಮತ್ತು ತನಗೆ ಮಾತ್ರ ಗೊತ್ತಿದ್ದ ವಿಷಯವಾಗಿತ್ತು. ಆದರೆ ಶಿವರುದ್ರಯ್ಯ ಗುಡಿ ಪೂಜಾರಿ ಕ್ರಿಷ್ಣಪ್ಪನ ಮುಖಾಂತರ ಹೇಳಿಸಿ ತನ್ನ ಉದ್ದೇಶ ಸಾಧನೆಗೆ ಮುಂದಾಗಿದ್ದ. ಕ್ರಿಷ್ಣಪ್ಪ ಉದ್ದೇಶದ ಮೂಲವನ್ನು ಪೂರ್ತಿಯಾಗಿ ಹೇಳದೆ ಪರವಾಗಿ ಎನ್ನುವಂತೆ ಹೇಳಿ ಶಾರವ್ವನನ್ನು ಒಪ್ಪಿಸಿದ್ದ. ನಿಗೂಢವಾದ ಗುಟ್ಟನ್ನರಿಯದ ಶಾರವ್ವ ದೇವರ ಹೊಲ ಸಿಕ್ಕರೆ ಸಾಕು ಎಂದು ಒಪ್ಪಿಕೊಂಡಿದ್ದಳು. ಸಮ್ಮತಿಯನ್ನೆ ಸಂಧಾನವೆಂದುಕೊಂಡಿದ್ದ ಶಿವರುದ್ರಯ್ಯ ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದ. ಗುಟ್ಟಿನ ಮರ್ಮ ತಿಳಿಯುತ್ತಿದ್ದಂತೆ ಶಾರವ್ವ ಸಿಡಿದೆದ್ದಿದ್ದಳು.
******
ಇತ್ತಿತ್ತಲಾಗಿ ಶಿವರುದ್ರಯ್ಯನಿಗೂ ಕಮತಗಾರ ಸಂಗಪ್ಪನಿಗೂ ಆಗಿಬರಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿಯಾಗಿತ್ತು. ಸಂಗಪ್ಪನಿಗೆ ದೇವರ ಹೊಲ ಸಾಗೋಳಿ ಏನೋ ಸಿಕ್ಕಿತು ಆದರೆ ಬರಬಿದ್ದಿದ್ದರಿಂದ ದನಕರುಗಳಿಗೆ ಮೇವಿಲ್ಲದಂತಾಗಿ ದೇವರ ಎತ್ತುಗಳನ್ನು ಉಳುಸಿಕೊಂಡಿದ್ದೆ ಹರಮಗಾಲ ಆಗಿತ್ತು. ಅಂಥದ್ರಲ್ಲಿ ದೇವರ ಹೊಲದ ಹುಂಬಳಿ ಕೊಡು ಅಂತಾ ಶಿವರುದ್ರಯ್ಯ ಬೇರೆ ಕಾಡಾಟ ಸುರುವಿಟ್ಟುಕೊಂಡಿದ್ದ. ಪೂಜಾರಪ್ಪನ ಕಡೆಯಿಂದ ಕೇಳಿಸಿ ನೋಡಿದ, ಪರಿಚಯದವರ ಕಡೆಯಿಂದಲೂ ಹೇಳಿಸಿ ಕಾದ. ಕ್ಯಾರೆ ಎನ್ನದಿದ್ದಕ್ಕೆ ಖುದ್ದಾಗಿ ಸಿಗಲಿ ನಿರೀಳಿಸುತ್ತೇನೆಂದು ಸುಮ್ಮನಾಗಿದ್ದ.
ಒಂದು ದಿನ ಬಸವಣ್ಣದೇವ್ರು ಗುಡಿ ಮುಂದೆ ಹಾದುಹೋಗುತ್ತಿದ್ದಾಗ “ಏನ್ಲೆ ಸಂಗ್ಯಾ ಹೇಳಿ ಕಳ್ಸಿದ್ರೆ ಮನೆಕಡೆ ಬರ್ಲಿಲ್ಲ. ಊರಾಗ ಎಲ್ರುವೆ ಗುಣಗಾನ ಮಾಡ್ತಾರಂತ ಕೋಡು ಮೂಡಿದಾವು ಅಂತ ಕಾಣ್ಸತೈತಿ… ಇನ್ನೂ ಸೊಕ್ಕು ಮುರಿದಿಲ್ಲ ನಿಂಗೆ. ದ್ಯಾವ್ರು ಹುಂಬ್ಳಿ ಕೊಡೋನು ಅದಿಯೋ… ಇಲ್ಲವೋ” ಎಂದು ಅಡ್ಡಹಾಕಿ ಕೇಳಿದ್ದರು. “ನಿಮ್ಗೆ ಗೊತ್ತೈತಿ ದ್ಯಾವ್ರು ಹೊಲ ಸಾಗೋಳಿ ಏನೋ ಸಿಗ್ತು ಕರೆವು ಕೂಡ ಕೂಡ ಎಲ್ಡೋರಸ ಬರಬಿತ್ತು. ದನಗಳಿಗೆ ಮೇವು ದಿಕ್ಕಿಲ್ಲ, ಮಕ್ಕಳು ಉಪಾಸ ಬಿದ್ದಾವು, ಕೂಲಿ ಹೋಗೋಣ ಅಂದ್ರೆ ಯಾರು ಕರೀತಿಲ್ಲ. ಇಂಥದ್ರಾಗ ಎಲ್ಲಿಂದ ಕೊಡೋಣ ಬುದ್ದಿ” ಸ್ವಲ್ಪ ಧೈರ್ಯದಿಂದಲೆ ಸಂಗಪ್ಪ ಮಾತಾಕಿದ್ದ. ಬೇರೆ ಸಂದರ್ಭದಲ್ಲಿಯಾಗಿದ್ದಾರೆ ಶಿವರುದ್ರಯ್ಯ ಅನುಕಂಪ ತೋರಿಸುತಿದ್ದನೇನೋ ಆದರೆ ಈಗ ಅವನು ಆ ರೀತಿ ಇರಲಿಲ್ಲ. ತನ್ನಾಸೆ ಈಡೇರದೆ ಮುಖಭಂಗ ಅನುಭವಿಸಿದ್ದರ ಫಲವಾಗಿಯೇ ಸಂಗಪ್ಪನ ಮೇಲೆ ಈ ರೀತಿ ಧೂರ್ತ ವರ್ತನೆಗೆ ಮುಂದಾಗಿದ್ದ. “ದ್ಯಾವ್ರ ಎತ್ತು ಸಾಯಿಬಡಿದು ತಿರುಗಿ ಮಾತಾಡ್ತೀಯಾ ಬೋಳಿಮಗನೆ. ಪಂಚ್ಯಾತಿ ಸೇರಿಸಿ ಎಲ್ಲಾನುವೆ ಕಕ್ಕುಸುದಿದ್ರೆ ಕೇಳು” ಶಿವರುದ್ರಯ್ಯ ಸಿಟ್ಟಿಗೆದ್ದಿದ್ದ.
“ಕಕ್ಕುಸುತೀರಾ… ಕಕ್ಕುಸುತೀರಾ… ದ್ಯಾವ್ರ ಎತ್ತು ಹೆಂಗೆ ಸಾಯ್ತು ಅಂತ ಊರಿಗೆಲ್ಲಾ ಗೊತ್ತೈತೆ. ಮಗನ್ನ ಸಾಕಿದಂಗೆ ಸಾಕಿದ್ದೆ. ಕಣ್ಣೆದ್ರುಗೆ ಗುಂಡಿಸೆಲಿಯಾಗಿ ಪ್ರಾಣಬಿಡ್ತು! ಯಾರನ್ನೂ ಸೇರುಸ್ತಿರೋ ಸೇರಿಸಿ… ನಂಗು ಗೊತ್ತೈತಿ”… ‘ಅಲಾ.. ಲ.. ಲ.. ಎಷ್ಟುರ ಜಿಗುಟೈತೆಲೆ ಇವ್ನಿಗೆ ಎಲ್ಲದಕ್ಕೂ ಅಯ್ಯನೋರೆ ಅಂತ ಕಾಲುಬುಡ್ಕೆ ಬಂದು ಬೀಳ್ತೀತಿದ್ದವನು ಚಿಗ್ತುಕೊಂಡುಬಿಟ್ಟವ್ನೆ… ನೋಡ್ಕೋತಿನಿ’ ಎಂದು ಮನಸಿನಲ್ಲಿ ಮತ್ತೊಷ್ಟು ಕುದ್ದು ಮನೆ ಹಾದಿ ತುಳಿದಿದ್ದರು.
‘ಶಾರವ್ವ ಅಯ್ಯನೊರ ಜೊತೆ ಮಕ್ಕೊಂಡಿದ್ದಕೆ ದೇವರ ಹೊಲ ಸಿಗ್ತು’ ಅಂತಾ ಗುಡಿ ಪೂಜಾರಿ ಕ್ರಿಷ್ಣಪ್ಪನ ಕಡೆಯಿಂದ ಹೇಳಿಸಿ, ಹರಿವೆ ಹಾವು ಹರಿದಾಡಲು ಬಿಟ್ಟು ಶಿವರುದ್ರಯ್ಯ ಪಂಚ್ಯಾತಿಗೆ ಕಾದು ಕುಳಿತ.
ಪಂಚ್ಯಾತಿ ಸೇರಿಸಿ ದಂಡಹಾಕಿ ಅವಮಾನ ಮಾಡುವುದು ನಿಕ್ಕಿ ಅಂತಾ ಗೊತ್ತಾಗುತ್ತಲೇ ಸಂಗಪ್ಪ ಮತ್ತು ಶಾರವ್ವ ಮಕ್ಕಳೊಂದಿಗೆ ಊರು ಬಿಡೋ ತೀರ್ಮಾನಕ್ಕೆ ಬಂದಿದ್ದರು. ಸಂಗಪ್ಪ ಇದ್ದ ಕೆಲವಂದಿಷ್ಟು ಬಟ್ಟೆಗಳನ್ನು ಹಾಸಿಗೆಯನ್ನು ಗಂಟುಕಟ್ಟಿದ. ಶಾರವ್ವ ಒಂದೆರಡು ಪಾತ್ರೆ ತಟ್ಟೆಗಳನ್ನು ಜೊತೆಯಿಟ್ಟುಕೊಂಡಳು. ಅಂದು ಹುಣ್ಣಿಮೆ ದಿನ ಚಂದ್ರ ಮೂಡಲು ತಾಸೊತ್ತು ಇರಬೇಕು ಕವ್ವಗತ್ತಲು ತುಂಬಿತ್ತು, ಕತ್ತಲಿಗೆ ಎದೆಮಾಡಿ ಹೆಂಡಿರು ಮಕ್ಕಳನ್ನು ಜೊತೆಗಾಕಿಕೊಂಡು ಹೊಸಲು ದಾಟಿದ. ಬೀದಿ ಕತ್ತಲೆಯಲ್ಲಿ ಮುಳುಗಿತ್ತು. ಅಲ್ಲೊಂದು ಇಲ್ಲೊಂದು ನಾಯಿಗಳು ಬೊಗಳುತ್ತಿದ್ದವು. ಸಮಯ ಹನ್ನೊಂದು ಮೀರಿ ಊರು ಉಂಡು ಮಲಗಿತ್ತು. ತಮ್ಮ ನೆಡಿಗೆ ಸಪ್ಪಳ ಕೇಳುವಷ್ಟು ನಿಶಬ್ದವಾಗಿದ್ದ ಕೇರಿಯಲ್ಲಿ ಸಂಗಪ್ಪನ ಕುಟುಂಬ ಮುಂದುವರೆಯುತ್ತಿತ್ತು. ತನ್ನೆರಡು ಮಕ್ಕಳು ನಿದ್ದೇಗಣ್ಣಿನಲ್ಲಿ ಹೆಜ್ಜೆಹಾಕುತ್ತಿದ್ದವು. ಊರ ಅಗಸಿಬಾಗಿಲಿನ ಬಳಿ ಬರುತ್ತಿದ್ದಂತೆ ‘ಹೋಗ ಬ್ಯಾಡ ಸಂಗಪ್ಪ… ಹೋಗಬ್ಯಾಡ ಸಂಗಪ್ಪ’ ಎಂದು ನಡುಬೀದಿಯಲ್ಲಿ ತಾನು ಗುದ್ದುತೆಗೆದು ನೆಟ್ಟಿದ್ದ ಕರೆವುಗಲ್ಲು ಮೌನವಾಗಿ ನುಡಿದೆಂತೆನಿಸಿತು. ಊರೆಲ್ಲಾ ತನ್ನನ್ನು ಹಾಡಿ ಹೊಗಳುತ್ತಿರುವಾಗ ಶಿವರುದ್ರಯ್ಯ ಮಾತ್ರ ಎದೆಗೆ ಹಾರಿಕೊಲು ಹಾಕಿದ್ದನ್ನು ನೆನೆಸಿಕೊಂಡು ಹನಿಗಣ್ಣಾದ.
ನಾಕು ಹೆಜ್ಜೆ ನಡೆದಿರಲ್ಲಿ ಹಿಂದಿನಿಂದ ಯಾರೋ ಕೂಗಿ ಕರೆದಂತಾಯಿತು ತಿರುಗಿ ನೋಡಿದರೆ ಚೆನ್ನಣ್ಣ. “ಸಂಗಪ್ಪ ಈ ಸರಿಹೊತ್ತಿನಲ್ಲಿ ಹೆಣ್ತಿ ಮಕ್ಕಳು ಕರ್ಕೊಂಡು ಎಲ್ಲಿಗೆ ಹೊಂಟೀಯ” ಅನಿರೀಕ್ಷಿತ ಪ್ರಶ್ನೆಗೆ ಕಸಿವಿಸಿಯಾದ ಸಂಗಪ್ಪ ದುಃಖವನ್ನು ಅದುಮಿಟ್ಟಿಕೊಂಡು “ಈ ಊರಿನ ಋಣ ಕಡಿತು ಚೆನ್ನಣ್ಣ… ಎಲ್ಲಾದ್ರೂ ದೂರ ಬಹುದೂರ ಶಿವನಿಲ್ಲದೂರಿಗೆ ಹೋಗ್ತೀನಿ” ಅಲ್ಲಿವರೆಗೂ ಅದುಮಿಟ್ಟುಕೊಂಡಿದ್ದ ದುಃಖ ಆಣೆಕಟ್ಟಿನ ಬಾಗಿಲು ತೆರೆದಂತೆ ಒಮ್ಮೆಲೆ ನುಗ್ಗಿತು. ಹಿಂಗೆ ಎದೆಗುದಿಯ ಮೇಲಾಟವಿದ್ದ ಅಲ್ಲಿ ತಣ್ಣಗೆ ತೀಡುತ್ತಿದ್ದ ಗಾಳಿಯೂ ಕೂಡ ನಿಸ್ಸಹಾಯಕವಾಗಿತ್ತು. ಹಿಂಗೇ ಬಿಟ್ಟರೆ ಹೇಳ್ದೆ ಕೇಳ್ದೆ ಹೊಂಟೋಗೋದು ಖಾಯಂ ಅಂತ ಗೊತ್ತಾಗುತ್ತಲೇ “ನಾವೆಲ್ಲಾ ನಿನ್ನ ಪಾಲಿಗೆ ಸತ್ತೋಗಿದೀವಿ ಅಂತಾ ತಿಳ್ದಿಯೇನು ತಡಿ ಎಲ್ಲರನ್ನೂ ಕರೀತೀನಿ” ಎಂದು ಬಾಯಿ ಮಾಡಲು ಮುಂದಾದ “ಚೆನ್ನಣ್ಣ ನಿನ್ನ ಕಾಲು ಬೀಳ್ತೀನಿ ಬಾಯಿಮಾಡಬೇಡ ನಮ್ಮುನ್ನ ಬಿಟ್ಟು ಬಿಡು ಮಾರಾಯ. ಈಗಾಗಿರೋ ಪಂಚ್ಯಾತಿನೆ ಸಾಕಾಗಿದೆ” ಎಂದು ಕೈ ಮುಗಿದು ಬೇಡಿಕೊಂಡನು. ಮರು ಮಾತಾಡದೆ ಚೆನ್ನಣ್ಣ ಶಾರವ್ವನ ಮುಖ ನೋಡಿದ. ಕತ್ತಲಲ್ಲಿ ಕಣ್ಣುತುಂಬಿ ತುಳುಕಿದ ಹನಿಗಳು ಮುತ್ತಿನಂತೆ ಹೊಳೆದವು. ಅಂಗಾರೆ ತಡಿ ಬಂದೆ ಎಂದವನೆ ಅಗಸಿಬಾಗಿಲ ವಾರೆಗಿದ್ದ ತನ್ನ ಮನೆಗೆ ಹೋದ. ಸ್ವಲ್ಪ ಹೊತ್ತು ಮೌನ ನೆಲೆಸಿತ್ತು. ಹೊರ ಬಂದ ಚೆನ್ನಣ್ಣ ಬಾರಿಕೊಲು ತಂದು “ತಗ ಸಂಗಪ್ಪ ಬರಿ ಹೆಗಲ ಮ್ಯಾಲ ಹೋಗಬ್ಯಾಡ” ಎಂದು ಕೊಡಲನುವಾದ. “ಬ್ಯಾಡೋ ಚೆನ್ನಣ್ಣ… ದ್ಯಾವ್ರು ಕೊಟ್ಟ ಅನ್ನವನ್ನ ತಿನ್ನಾಕಾಗಲಿಲ್ಲ.. ನೀನೊಟು ರಿಣ ಹೋರಿಸಬ್ಯಾಡ. ಈಗ ಬಿದ್ದ ಮೈಮೇಲಿನ ಏಟುಗಳನ್ನೆ ಸುಧಾರಿಸಿಕೊಳ್ಳೋದು ಕಷ್ಟ ಆಗೇತಿ ಅದ್ರಾಗ ಇದೊಂದು ಬ್ಯಾಡ” ಎಂದು ನಿರಾಕರಿಸಲು “ದ್ಯಾವ್ರ ಹೆಸರೇಳಿಕೊಂಡು ಹೇಲ್ತಿನ್ನೋ ಕೆಲ್ಸ ಮಾಡೋರಿಗೆ ಆ ಶಿವನೇ ಬುದ್ದಿ ಕಲ್ಸಬೇಕು” ಎಂದು ಚೆನ್ನಣ್ಣ ನಿಟ್ಟುಸಿರು ಬಿಟ್ಟ. “ಚೆನ್ನಣ್ಣ ಕೊಡು ನಾನು ಹಾಕ್ಕೋಳ್ತಿನಿ” ಎಂದು ಶಾರವ್ವ ಬಾರಿಕೋಲು ಹೆಗಲಿಗಾಕಿಕೊಂಡು ಅಗಸಿಬಾಗಿಲು ದಾಟಿ ಕಾಲಿಡಲು ಅವರಿಬ್ಬರ ದಾರಿಗೆ ಅದೇ ತಾನೆ ಮೂಡಿದ ಹುಣ್ಣಿಮೆ ಚಂದ್ರ ಹಾಲುಬೆಳಕು ಚೆಲ್ಲುತ್ತಿದ್ದ.
*****
ಶಿವರುದ್ರಯ್ಯನ ಮುಖದಲ್ಲಿ ಅಂದು ಮಹತ್ತರವಾದದ್ದನೇನೋ ಸಾಧಿಸಿದ ಅಪರಿಮಿತ ಆನಂದತುಂಬಿತ್ತು. ರೋಗಿಷ್ಟವಾದ ಅವನೇಣ್ತಿ ಜೊತೆ ಇತ್ತೀಚಿಗೆ ಮಲಗುವುದಿರಲಿ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ ಅಂಥದ್ರಲ್ಲಿ “ಇವೊತ್ತು ಹೋಳ್ಗಿ ಮಾಡು ತುಪ್ಪ ಹೋಳ್ಗಿ ಉಣ್ಣೋಣ” ಎಂದು ಹೇಳಿದಾಗ ಶರಣಮ್ಮ ದ್ಯಾವ್ರು ಒಳ್ಳೆ ಬುದ್ದಿ ಕೊಟ್ಟವ್ನೆ ಎಂದು ಕೊಳ್ಳುತ್ತಾ ಲಘುಬಗೆಯಿಂದಲೂ ಹೆಣ್ಣಿನ ಸಹಜ ಸುಖದಾಸೆಯಿಂದಲೂ ಬೆಳೆ ಹಾಕಿದಳು. ತಾಸೋತ್ತಿನಲ್ಲಿ ಹೋಳಿಗೆ ಸಿದ್ಧವಾದವು. ಗಂಡನಿಗೆ ಮಣೆಹಾಕಿ ಉಣಬಡಿಸಲು ಶಿವರುದ್ರಯ್ಯ ಗಹ ಗಹಿಸಿ ನಕ್ಕು ತುಪ್ಪ ಹೋಳಿಗೆ ಉಣ್ಣತೊಡಗಿದ. ಇಬ್ಬರೂ ಹೊಟ್ಟೆ ತುಂಬಾ ಉಂಡರು. ಊಟ ಪೂರೈಸಿದ ಮೇಲೆ ಶರಣಮ್ಮ ಕೋಣೆಯಲ್ಲಿ ಹಾಸಿಗೆ ಅಣಿಮಾಡಿದಳು. ಬೇಡವೆಂದ ಶಿವರುದ್ರಯ್ಯ ನಡುಮನೆಗೆ ಹೋದ. ಶರಣಮ್ಮನ ಕಣ್ಣುಗಳೊಳಗೆ ತುಳುಕಾಡುತ್ತಿದ್ದ ಕಣ್ಣೀರು ಕೆನ್ನೆಗಳಿಗಿಳಿದವು. ಗಂಟೆ ರಾತ್ರಿ ಹನ್ನೊಂದು ಮೀರಿತ್ತು ಈಟ್ಟೋತ್ತಿಗಾಗಲೇ ಆ ಸಂಗ್ಯಾ ಮತ್ತು ಅವನ ಹೆಂಡ್ತಿ ಶಾರಿ ಊರುಬಿಟ್ಟು ದಿಕ್ಕಿಲ್ಲದಂತೆ ಅಲಿತಿರ್ತಾವೆ ಎಂದು ಖುಷಿಯಾಗಿ ಬಾಗಿಲು ಮುಂದುಮಾಡಿ ಭದ್ರವಾಗಿ ಅಗಳಿಹಾಕಿ ನಡುಮನೆಯ ಮೆತ್ತೆನೇಯ ಗಾದಿ ಹಾಸಿದ್ದ ದಿವಾನ ಕಾಟದ ಮೇಲೆ ಅಡ್ಡಾದ. ಕಣ್ಣ್ಮುಚ್ಚುತ್ತಿದ್ದಂತೆ ಕನಸೊಂದು ಮುತ್ತಿಗೆಹಾಕಿತು.
ಅ ಕನಸಿನಲ್ಲಿ… ದೇವರ ಹೊಲದ ಕೆಮ್ಮಣ್ಣು ಸುಂಟರಗಾಳಿಗೆ ಮೇಲೇದ್ದು ಭೂಮಿ ಆಕಾಶವನ್ನು ಒಂದುಮಾಡುವಂತೆ ಸುತ್ತಿ ಸುತ್ತಿ ಕಸಕಡ್ಡಿ ಹುಲ್ಲು ಸೊಪ್ಪೆಗಳನ್ನು ತನ್ನೊಡಲಿಗೆ ಹಾಕಿಕೊಳ್ಳುತ್ತಾ ಊರಕಡೆ ಬೋರೆಂದು ಬೀಸತೊಡಗಿತು. ಆ ಗಾಳಿಧೂಳಿಗೆ ಊರೆಂಬ ಊರೇ ಕೆಂಧೂಳಿಯಲ್ಲಿ ಮುಚ್ಚಿಹೋಯಿತು. ಕೆಂಧೂಳಿ ತನ್ನ ಮನೆಯ ಕಡೆಗೆ ಬರಲು. ಹಾಗೆ ಬಂದ ಕೆಂಧೂಳಿ ಭಧ್ರವಾಗಿ ಹಾಕಿದ್ದ ಅಗಳಿಯನ್ನು ಮುರಿದು ಬಾಗಿಲನ್ನು ಒಮ್ಮೆಲೇ ದಡಾರ್ ನೆ ಮುರಿಯಿತು. ಇನ್ನೇನು ಪಡಸಾಲೆಯಿಂದ ನುಗ್ಗುಲು ಮುಂಡಿಗಿಗೆ ತೂಗು ಹಾಕಿದ್ದ ಬಾರಿಕೋಲನ್ನು ತೆಗೆದುಕೊಂಡು ಚಟಾರ್ ಚಟಾರ್ ಎಂದು ಕಡೆದು ಬಾರಿಸತೊಡಗಿತು. ಮಲಗಿದ್ದಲ್ಲಿಂದ ಮೇಲೆಳಲಾಗದೆ ‘ಅಯ್ಯಯ್ಯೋ ಸತ್ತೇ ಹೊಡಿಬ್ಯಾಡ ಹೊಡಿಬ್ಯಾಡ ಗುಡ್ಡದಯ್ಯ… ಸತ್ತೇ ನಾನು ಸತ್ತೆ’ ಎಂದು ಅರಚಿಕೊಂಡರು ಬಿಡದೆ ಕಾಣದ ಆಕೃತಿಯೊಂದು ಬಾರಿಸುತ್ತಿರಲು ಶಿವರುದ್ರಯ್ಯನ ಮೈಯಲ್ಲಾ ಕೆಂಪೇರಿ ಕೆಂಧೂಳಿ ಜೊತೆ ಸೇರಿತು.
ಶರಣಮ್ಮ ಬೆಳಗ್ಗೆ ಎದ್ದು ನೋಡಿದರೆ ಬಾಗಿಲು ಹಾರೋಡೆದಿತ್ತು ‘ಅಯ್ಯೋ ಶಿವ್ನೆ ಇವರು ರಾತ್ರಿ ಆಗಳಿ ಹಾಕದೆ ಹಂಗೆ ಮಲಗಿದ್ದಾರಲ್ಲ… ಏನು ಅಂದ್ರೆ…’ ಗಂಡನನ್ನು ಎಬ್ಬಿಸಲು ನೋಡಿದಳು ಅಲುಗಾಡಲಿಲ್ಲ. ಗಾಬರಿಗೊಂಡು ಕ್ರಿಷ್ಣಪ್ಪನನ್ನು ಕೂಗಿ ಕರೆದಳು. ಅಕ್ಕಪಕ್ಕದ ಮನೆಯವರು ದಡಬಡಿಸಿಕೊಂಡು ಬಂದರು. ಸಂತೀರ ಹತ್ತಿರ ಹೋಗಿ ಅಯ್ಯನೋರೆ…! ಎಂದು ಎದೆಮುಟ್ಟಿದ.. ಬಾಸುಂಡೆ ಎದ್ದ ದೇಹ ನಿಶ್ಚಲವಾಗಿತ್ತು..! “ನಮ್ಮೂರ ದೈವ ಹೋಗಿಬಿಡ್ತು! ನಮ್ಮೂರ ದೈವ ಹೋಗಿಬಿಡ್ತು!” ಎಂದು ಕೂಗಿಕೊಳ್ಳುತ್ತಾ ಬೀದಿಗೆ ಓಡಿದ. ಎಲ್ಲರೂ ಒಮ್ಮೆಲೇ ತಣ್ಣಗಾದರು. ಶರಣಮ್ಮ ನಡುಗುತ್ತ ಹತ್ತಿರ ಹೋದಳು. ಅವಳ ಕಣ್ಣುಗಳು ಕತ್ತಲುಗಟ್ಟಿ ಇಂಗಿಹೋದವು.
ಮಂಜಯ್ಯ ದೇವರಮನಿ ರಾಣೇಬೆನ್ನೂರಿನವರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕರಿಜಾಲಿ ಮರ’ ಪ್ರಕಟಿತ ಕಥಾಸಂಕಲನ. ಚಾರಣ ಮತ್ತು ಚಿತ್ರಕಲೆ ಇವರ ಹವ್ಯಾಸಗಳು.