ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳು
ಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು
ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆ
ನೊರೆಯ ಹಾಲಿಗೂ ಹುಳಿಹಿಂಡಿದ ನಿನಗೆ ಕೃತಜ್ಞತೆಗಳು
ಋತುವಿನ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲ
ಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು
ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆ
ಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು
ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನ
ನನ್ನೊಳಗಿನ ಕಾರಂಜಿ ನಗೆನುಂಗಿದ ನಿನಗೆ ಕೃತಜ್ಞತೆಗಳು
ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರ ಅದು
ಶ್ರಾವಣ ಸೋನೆಗೂ ನೋವುಣ್ಣಿಸಿದ ನಿನಗೆ ಕೃತಜ್ಞತೆಗಳು
ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’
ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು
ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ
ವಾಹ! ಗಜಲ್ ಮಾದರಿಯ ಪರಿಭಾವದ ಪರಿ ಬಿಚ್ಚಿದಂತೆ,ಅನಂತ ಭಾವಗಳು ಹಾರಾಡಿದಂತೆ,ಚಮತ್ಕೃತಿಯಾಗಿವೆ ಸಾಲುಗಳು.
ಅಭಿನಂದನೆಗಳು ಮಂಡಲಗಿರಿ ಪ್ರಸನ್ನ ಗುರುಗಳಿಗೆ.
ಧನ್ಯವಾದಗಳು ಸರ್