ಇಂಟರ್ವ್ಯೂಗೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಕೆಲಸಕ್ಕೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಮಕ್ಕಳನ್ನು ಶಾಲೆಗೆ ಸೇರಿಸಲು ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು ಇವನ್ನೆಲ್ಲ ನೀವು ಓದಿದರೆ, ಅಲ್ಲಿರುವ ಈ ಅತ್ಯಮೂಲ್ಯ ಸೂಚನೆಗಳೆಲ್ಲ ಇರುವುದು ಹೆಂಗಸರಿಗೆ! ಏನಿದರರ್ಥ? ಗಂಡಸರಿಗೆ ಸಂದರ್ಭಕ್ಕೆ ತಕ್ಕಂತೆ ಬಟ್ಟೆ ಧರಿಸುವ ಚಾಕಚಕ್ಯತೆ ತಾಯ ಗರ್ಭದಲ್ಲಿಯೇ ಸಿದ್ಧಿಸಿದೆಯೆಂದೇ? ಅಥವಾ ಹೆಂಗಸರನ್ನು ಅವರು ಧರಿಸುವ ಬಟ್ಟೆಯ ಮೇಲೆ ಅಳೆಯಲಾಗುತ್ತದೆಯೆಂದೇ?
ವೈಶಾಲಿ ಹೆಗಡೆ ಬರೆಯುವ ಪಾಕ್ಷಿಕ ಅಂಕಣ.
ಮೊನ್ನೆ ಯಾವುದೊ ವೃತ್ತಪತ್ರಿಕೆಯ ಆನ್ಲೈನ್ ಆವೃತ್ತಿಯಲ್ಲಿ, ಪಟ್ಟಂತ ಒಂದು ಮೂಲೆಯಲ್ಲಿದ್ದ ಹೆಡ್ಲೈನ್ ಕಣ್ಣಿಗೆ ಬಿಟ್ಟು. ಸರರಂತ ಸಿಟ್ಟು ನೆತ್ತಿಗೇರಿತು. ಹೌದು ಇತ್ತೀಚಿಗೆ ಜಗದ ಮನುಜರೆಲ್ಲ ಹಗರಣವ ಮಾಡುವುದ ಕಂಡು ಎನಗೆ ಬಹಳ ಸಿಟ್ಟು ಬರುತ್ತಿದೆ. ಪುರಂದರದಾಸರೂ ಹೆಂಗಸಾಗಿದ್ದಿದ್ದರೆ ನಗೆಯ ಬದಲು ಸಿಟ್ಟು ಬರುತ್ತಿದೆ ಎಂದೇ ಹೇಳುತ್ತಿದ್ದರು. ಹ್ಮಾ ಅದೇ ಆ ಹೆಡ್ಲೈನ್ ಅಂದೆನಲ್ಲ, ಕರೀನಾ ಕಪೂರ್ ಇತ್ತೀಚಿನ ಫ್ಯಾಶನ್ ಷೋ ಒಂದರಲ್ಲಿ ರ್ಯಾಂಪ್ ವಾಕ್ ಮಾಡುತ್ತಿದ್ದ ಚಿತ್ರದ ತಲೆಬರಹ ಏನಿತ್ತೆಂದರೆ “ಹಾಟೆಸ್ಟ್ ಮಾಮ್ ಇನ್ ಬಾಲಿವುಡ್”. ಥತ್ತೆರಿಕಿ, ಈ ಮಾಧ್ಯಮದವರಿಗೆ ಹಾಟೆಸ್ಟ್ ಕರೀನಾ ಕಾಣದೇ ಬರೀ ಹಾಟೆಸ್ಟ್ ಅಮ್ಮ ಕಾಣಿಸಿದಳಾ? ಶಾರುಖ್, ಸೈಫ್, ಅಕ್ಷಯ್ ಕುಮಾರ್ ಇವರಿಗೆಲ್ಲ ಇರದ ಟೈಟಲ್, ಅವರನ್ನೆಲ್ಲ ಬಿಟ್ಟಾಕಿ, ಭೂಲೋಕದ ಗಂಧರ್ವನಂತಿರುವ ಹೃತಿಕ್ ರೋಷನ್ ಅಲ್ಲೂ ಯಾವತ್ತೂ ಹಾಟೆಸ್ಟ್ ಅಪ್ಪ ಕಂಡಿಲ್ಲವಲ್ಲ ಇವರಿಗೆ?! ಅವರೆಲ್ಲ ಬರೀ ಗಂಡಸರು. ಅಷ್ಟೇ. ಛೆ ಪಾಪ ಅಪ್ಪನಾಗಿಯೂ ಅಪ್ಪನಾಗದ ಬಾಲಿವುಡ್ ಗಂಡಸರು, ಅನ್ಯಾಯ ಅನ್ಯಾಯ.
ಅದೇನು ತಲೆಬರಹ, ಅದೂ ಫ್ಯಾಶನ್ ಷೋ ಒಂದರ ಚಿತ್ರಕ್ಕೆ? ಅವಳೇನು ಅಲ್ಲಿ ಮಗುವಿನೊಂದಿಗೆ ಆಡುತ್ತಿದ್ದಳೆ? ಅಥವಾ ಇವರು ನಿಜಕ್ಕೂ ಮಗುವಾದ ಮೇಲೆ ಮೈ ಇಳಿಸಲಾಗದ ಸಂಕಟವನ್ನು ಉಂಡುಟ್ಟು ಉದ್ಗರಿಸಿದರೇ? ಕರೀನಾಳ ಫಿಟ್ನೆಸ್ ಬಗ್ಗೆ ನಿಜಕ್ಕೂ ಹೆಮ್ಮೆ ಚಪ್ಪಾಳೆ ಎಂದು ಹೇಳುವ ಬಗೆಯೇ? ಅಥವಾ ಇವರಿಗೆಲ್ಲ ಒಂದು ಹಡೆದವಳು ಗುಂಡುಗುಂಡಗೆ ಓಡಾಡಿದರೆ ಮಾತ್ರ ಸರಿ ಇಲ್ಲದಿದ್ದರೆ ಅದೊಂದು ಆಶ್ಚರ್ಯವೇ ಸರಿ ಎನ್ನುವ ನಿಲುವೇ? ಕಾಲ ಬದಲಾಗಿದೆ, ಆದರೆ ಮಾಧ್ಯಮದವರ ಎಡಬಿಡಂಗಿ ತಲೆಬರಹಗಳು ಮಾತ್ರ ಬದಲಾಗುವುದಿಲ್ಲ. ಅಷ್ಟಷ್ಟು ದಿವಸಕ್ಕೆ ಈ ಸಮಾಜ ಯಾಕೋ ಬರೀ ಹೆಂಗಸರಿಗೆ ಮಾತ್ರ ನಿನಗೆ ವಯಸ್ಸಾಯ್ತು ಎನ್ನುತ್ತಾ ನೆನಪಿಸುತ್ತಿರುತ್ತದೆ. ಇಂತಿಷ್ಟು ವಯಸ್ಸಾದ ಮೇಲೆ ಹೀಗೀಗೆಯೇ ಇರಬೇಕು ಎಂದು ತಾನೇ ನಿರ್ಧರಿಸಿಕೊಂಡು ಷರಾ ಬರೆಯುತ್ತದೆ.
ಈ ಸೋಷಿಯಾಯಲ್ ಮೀಡಿಯಾಗಳಲ್ಲಿ, ಪ್ರತಿಷ್ಠಿತ ಪತ್ರಿಕೆಗಳ ಲೈಫ್ ಸ್ಟೈಲ್ ಅಂಕಣಗಳಲ್ಲಿ ಅಷ್ಟಷ್ಟು ದಿವಸಕ್ಕೆ ಯಾರ್ಯಾರೋ ಏನೋ ಬೇಡದ ಒಂದಿಷ್ಟು “ಟಿಪ್ಸ್” ಎಂಬ ಲೇಖನ ಬರೆಯುತ್ತಾರೆ. ಇಂಟರ್ವ್ಯೂಗೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಕೆಲಸಕ್ಕೆ ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು, ಮಕ್ಕಳನ್ನು ಶಾಲೆಗೆ ಸೇರಿಸಲು ಹೋಗುವಾಗ ಹೇಗೆ ಬಟ್ಟೆ ಧರಿಸಬೇಕು ಇವನ್ನೆಲ್ಲ ನೀವು ಓದಿದರೆ, ಅಲ್ಲಿರುವ ಈ ಅತ್ಯಮೂಲ್ಯ ಸೂಚನೆಗಳೆಲ್ಲ ಇರುವುದು ಹೆಂಗಸರಿಗೆ! ಏನಿದರರ್ಥ? ಗಂಡಸರಿಗೆ ಸಂದರ್ಭಕ್ಕೆ ತಕ್ಕಂತೆ ಬಟ್ಟೆ ಧರಿಸುವ ಚಾಕಚಕ್ಯತೆ ತಾಯ ಗರ್ಭದಲ್ಲಿಯೇ ಸಿದ್ಧಿಸಿದೆಯೆಂದೇ? ಅಥವಾ ಹೆಂಗಸರನ್ನು ಅವರು ಧರಿಸುವ ಬಟ್ಟೆಯ ಮೇಲೆ ಅಳೆಯಲಾಗುತ್ತದೆಯೆಂದೇ? ಈಗಿನ ಕಾಲದಲ್ಲೂ ಸೆಕ್ಸಿಸಂ ಹೊಸ ಹೊಸ ಅವತಾರದೊಂದಿಗೆ ಹೆಸರು ಬದಲಾಯಿಸಿಕೊಂಡು ಮಾಡರ್ನಾಯ್ಸ್ ಆಗುತ್ತಿದೆ ಅಲ್ಲದೆ ಅದು ಮಾಯವಾಗುವ ಸೂಚನೆಯೇನೂ ಕಾಣುತ್ತಿಲ್ಲ.
ನೇಪಾಳದ ಹಳ್ಳಿಯಲ್ಲಿ ಹತ್ತು ದಿನದ ಹಿಂದಷ್ಟೇ ಸತ್ತ ಅಂಬಾ, ಇನ್ನೂ ನಾವೆಲ್ಲೂ ಮುಂದೆ ಹೋಗಿಲ್ಲ ಎಂದು ನೆನಪಿಸುತ್ತಿದ್ದಾಳೆ. ಮುಟ್ಟಿನ ದಿನದಲ್ಲಿ ನಾಲ್ಕು ದಿನ ಕೊಟ್ಟಿಗೆಯಲ್ಲಿ ಕಳೆಯುವ “ಚೌಪದಿ” ರಿವಾಜಿನಿಂದಾಗಿ ಅಂಬಾ ಮತ್ತು ಆಕೆಯ ಇಬ್ಬರು ಪುಟ್ಟ ಗಂಡು ಮಕ್ಕಳು ಉಸಿರುಗಟ್ಟಿ ಸತ್ತಿದ್ದಾರೆ. ವಿಷಾದವೆಂದರೆ ಇಂಥ ಘಟನೆಯ ನಂತರವೂ, ಮುಟ್ಟಿನ ಸುತ್ತವಿರುವ ಅಮಾನುಷ ನಡವಳಿಕೆಗಳಾಗಲೀ, ಆ ರಿವಾಜಾಗಲೀ ನಮ್ಮಲ್ಲಿ ಬಹುತೇಕರಿಗೆ ಅಸಂಬದ್ಧವೆಂದೇ ಎನಿಸುವುದಿಲ್ಲ! ನಾವು ಇನ್ನೂ ಎಲ್ಲೂ ಮುಂದುವರಿದಿಲ್ಲ, ಅಲ್ಲೇ ಇದ್ದೇವೆ.
ಸೌದಿ ಅರೇಬಿಯಾದಿಂದ ತಪ್ಪಿಸಿಕೊಂಡು ಥಾಯ್ ಲ್ಯಾಂಡ್ ಹೋಟೆಲಿನಲ್ಲಿ ೪ ದಿನ ಅಡಗಿಕೊಂಡು ಸೋಷಿಯಲ್ ಮೀಡಿಯಾ ಮುಖಾಂತರ ಕಂಡಕಂಡ ದೇಶವನ್ನು ಸಂಪರ್ಕಿಸಿ ಕೊನೆಗೆ ಕೆನಡಾದಲ್ಲಿ ಅಸೈಲಮ್ ಗಿಟ್ಟಿಸಿದ ಹದಿನೆಂಟರ ಹುಡುಗಿ ರಹಾಫ್, ಹಿಂತಿರುಗಿ ಕಳಿಸಿದರೆ ತನ್ನ ಅಪ್ಪ ಅಣ್ಣ ತನ್ನನ್ನು ಕೊಂದೇ ಬಿಡುತ್ತಾರೆ ಎಂದು ಪರಿಪರಿಯಾಗಿ ಹೇಳುತ್ತಿದ್ದರೆ ಯಾರಿಗೂ ಅದು ಎಚ್ಚರಿಕೆಯ ಗಂಟೆ ಎನಿಸುವದೇ ಇಲ್ಲ. ಆ ದೇಶ, ಜನ ಎಲ್ಲ ಹಾಗೆಯೆ ಇರುವುದು ಬಿಡಿ ಎಂದು ಎಲ್ಲ ಸುಮ್ಮನೆ ನಡೆಯುತ್ತಾರೆ. ನಾವು ಇನ್ನೂ ಎಲ್ಲೂ ಮುಂದುವರಿದಿಲ್ಲ, ಅಲ್ಲೇ ಇದ್ದೇವೆ.
ಎರಡು ದಿನಗಳ ಹಿಂದೆ ನಡೆದ ಜಗತ್ತಿನ ಅತಿ ಬಲಿಷ್ಠ ದೇಶದ ಅಧ್ಯಕ್ಷರ ಸ್ಟೇಟ್ ಆಫ್ ದ ಯೂನಿಯನ್ ಭಾಷಣದ ಹೊತ್ತಲ್ಲಿ ಈ ಬಾರಿ ಆರಿಸಿ ಹೋದ ಕಾಂಗ್ರೆಸ್ ವಿಮೆನ್ ಎಲ್ಲರೂ ಮಹಿಳಾ ಹಕ್ಕು ಮತ್ತು ಒಗ್ಗಟ್ಟಿನ ಸಂಕೇತವಾಗಿ ಬಿಳಿ ಬಣ್ಣದ ದಿರಿಸು ಧರಿಸಿ ಹೋಗುತ್ತಾರೆ. ಅದು ನೋಡುಗರಲ್ಲಿ ಈ ಇಪ್ಪತ್ತೊಂದನೇ ಶತಮಾನದಲ್ಲಿ ನಮಗೆ ಹೆಮ್ಮೆ ಎನಿಸುವುದು ಎಂಥ ವಿಷಾದನೀಯ! ನಾವು ಇನ್ನೂ ಎಲ್ಲೂ ಮುಂದುವರಿದಿಲ್ಲ, ಅಲ್ಲೇ ಇದ್ದೇವೆ.
ಈಗಷ್ಟೇ ಈ ವ್ಯಾಲೆಂಟೈನ್ಸ್ ಡೇ ಎಂಬ ಸುಳ್ಳು ಸುಳ್ಳೇ ಹುಟ್ಟಿಕೊಂಡ ಕೊಳ್ಳುಬಾಕರ ಸಲುವಾಗಿ ನಿರ್ಮಿಸಿದ ಕಾರ್ಪೊರೇಟ್ ದಿನವೊಂದು ಬಂತು, ಹೋಯ್ತು. ಇಷ್ಟು ದಿನ ಇದೊಂದು ಫೇಕ್ ಹಬ್ಬವಾಗಷ್ಟೇ ಕಾಣುತ್ತಿತ್ತು ನನಗೆ. ನಿಧಾನಕ್ಕೆ ಇದೊಂದು ವ್ಯವಸ್ಥಿತವಾದ, ಹೆಂಗಸರನ್ನು ದಡ್ಡರಾಗಷ್ಟೇ ಇಡಲು ಹವಣಿಸಿದ ಸೆಕ್ಸಿಸ್ಟ್ ಹಾಲಿಡೇ ಆಗಿ ಕಾಣುತ್ತಿದೆ. ಎಲ್ಲೆಲ್ಲಿ ನೋಡಿದರೂ ಬರೀ ಹೂವಿನ ಜಾಹೀರಾತು, ಅದು ಬಿಟ್ಟರೆ ಒಳ ಉಡುಪುಗಳ ಜಾಹೀರಾತು. ಏನರ್ಥ? ಹೆಂಗಸರೆಂದರೆ ಹೂವು ಚಾಕಲೇಟ್ ಕೊಟ್ಟು ಒಲಿಸಿಕೊಂಡರೆ ಪ್ರತಿಯಾಗಿ ಬೆಡ್ರೂಮಿನಲ್ಲಿ ಋಣ ತೀರಿಸುತ್ತಾರೆಂದೇ? ಯಾರು ಹೇಳಿದರು ಹೂವು, ಚಾಕಲೇಟು ರೊಮ್ಯಾಂಟಿಕ್ ಎಂದು. ಆಯಾ ಜೋಡಿಯ ರೊಮ್ಯಾಂಟಿಕ್ ಕಲ್ಪನೆ ಅವರದ್ದು ಮಾತ್ರ. ಯಾವುದೇ ಕಂಪನಿಯ ಮಾರ್ಕೆಟಿಂಗ್ ಬಳಗದ ಸ್ವತ್ತಲ್ಲ.
ಅಷ್ಟಷ್ಟು ದಿವಸಕ್ಕೆ ಈ ಸಮಾಜ ಯಾಕೋ ಬರೀ ಹೆಂಗಸರಿಗೆ ಮಾತ್ರ ನಿನಗೆ ವಯಸ್ಸಾಯ್ತು ಎನ್ನುತ್ತಾ ನೆನಪಿಸುತ್ತಿರುತ್ತದೆ. ಇಂತಿಷ್ಟು ವಯಸ್ಸಾದ ಮೇಲೆ ಹೀಗೀಗೆಯೇ ಇರಬೇಕು ಎಂದು ತಾನೇ ನಿರ್ಧರಿಸಿಕೊಂಡು ಷರಾ ಬರೆಯುತ್ತದೆ.
ಆದರೂ ವ್ಯವಸ್ಥಿತವಾಗಿ ಎಲ್ಲ ರೊಬಾಟುಗಳಂತೆ ನಮಗಷ್ಟೇ ಸೀಮಿತವಾಗಿದ್ದ ನಮ್ಮ ಕಲ್ಪನೆಯನ್ನೇ ಬದಲಿಸುವಂತ ಇಂಥ ಸಣ್ಣ ಸಣ್ಣ ಗಿಮಿಕ್ ಗಳಿಗೆ ಒಗ್ಗಿಕೊಳ್ಳುತ್ತಿದ್ದೇವೆ. ಮಾಧ್ಯಮಗಳು ಏನನ್ನೂ ಹೇಳದೆಯೇ ನಡೆಸುವ ಇಂಥ ಎಷ್ಟೋ ಯೋಚನಾ ಲಹರಿ ಬದಲಿಸುವ ತಂತ್ರಗಳು ಹಿಂದಿನಿಂದ ನಡೆಯುತ್ತಾ ಬಂದಿವೆ. ಈ ಕಾಲದಲ್ಲೂ ಇದು ಅಷ್ಟೇ. ಎಲ್ಲ ರೂಪ ಬದಲಿಸಿಕೊಂಡ ಅದೇ ಹಳೆಯ ಮಂತ್ರ. ಉಡುಗೊರೆ ಗಂಡಸರು ಕೊಟ್ಟರೆ ಮಾತ್ರ ಚಂದ. ಹೆಂಗಸರು ಬರೀ ಉಡುಗೊರೆ ಇಸಿದುಕೊಳ್ಳುವವರಷ್ಟೇ ಆಗಿರಬೇಕು. ಕೊಡುವ ಸಾಮರ್ಥ್ಯ ಗಂಡಸಿಗಷ್ಟೇ ಇರಬೇಕು. ಇದನ್ನೇ “ರೋಮ್ಯಾನ್ಸ್” ಎಂದು ಚಂದದ ಬಣ್ಣದ ಕಾಗದ ಸುತ್ತಿ ಹಂಚಿದರೆ ಎಲ್ಲ ಬಕ ಬಕ ಎತ್ತಿಕೊಂಡು ಅಪ್ಪಿಕೊಳ್ಳುವರು. ಛೇ ನಾವು ಇನ್ನೂ ಎಲ್ಲೂ ಮುಂದುವರಿದಿಲ್ಲ, ಅಲ್ಲೇ ಇದ್ದೇವೆ.
ನಿಜಕ್ಕೂ ಅನಿಸುತ್ತೆ ಹೆಂಗಸರಿಗೆ ಜಾತಿ, ಧರ್ಮ, ಸಮಾಜ, ದೇಶ, ಕಾಲ ಯಾವುದೂ ಇಲ್ಲ. ಹೆಂಗಸರು ಬರೀ ಹೆಂಗಸರಷ್ಟೇ.
ನನಗಂತೂ ಮುಂಚಿನಂತೆ ಯಾರ್ಯಾರದೋ ಒತ್ತಾಯಕ್ಕೆ, ಅಯ್ಯೋ ಅವರಿಗೆ ಬೇಜಾರಾಗುತ್ತೇನೋ ಎಂದು ಏನೋ ಬೇಡದ ಕೆಲಸವನ್ನೆಲ್ಲ ಒಪ್ಪಿಕೊಳ್ಳಲು ಈಗ ಮನಸ್ಸಾಗುವುದಿಲ್ಲ. ಏನಾದ್ರೂ ಮಾಡ್ಕೋ ನನಗೆ ಸಂಬಂಧವಿಲ್ಲ ಎಂದುಬಿಡುತ್ತೇನೆ. ಏನಾದರೂ ಮಾಡಬೇಕೆನಿಸಿದರೆ ಸಹ ಇಂಥವರಿಗೆ ಬೇಜಾರಾಗುತ್ತೇನೋ, ಅವರ ಸಹಾಯ ಕೇಳದಿದ್ದರೆ ತಪ್ಪೇನೋ ಇತ್ಯಾದಿ ಇತ್ಯಾದಿ ಯಾವ ಮುಲಾಜೂ ಮನಸ್ಸಿಗೆ ಬರುವುದಿಲ್ಲ. ಹಲವರಿಗೆ ಇದು ಮಹಾಸೊಕ್ಕು ಎನಿಸುತ್ತೇನೋ. ನನಗೋ ಈಗಲೂ ನನ್ನ ಮನಸ್ಸಿಗೆ ಬಂದಂತೆ ನಡೆಯದಿದ್ದರೆ ಇನ್ಯಾವಾಗ? ಎನಿಸಲು ಶುರುವಾಗಿಬಿಟ್ಟಿದೆ. ನನ್ನೊಳಗಿನ ನ್ಯೂನತೆಗಳಿಗೆ ಈಗ ಮುಜುಗರವಾಗುವುದಿಲ್ಲ. ಅದೊಂದು ಕೊರತೆ ಎಂದು ಕೂಡ ಅನಿಸುವುದಿಲ್ಲ. ಅನವಶ್ಯಕ ವೈಭವೀಕರಿಸಿ ನನಗೆ ನಾನೇ ಸುಳ್ಳು ಹೇಳಿಕೊಂಡು ಏನನ್ನೂ ಸಮಾಧಾನಿಸಿಕೊಳ್ಳುವುದೂ ಇಲ್ಲ. ಇದೊಂದು ಬಗೆಯ ಬಿಡುಗಡೆಯ ಜ್ಞಾನೋದಯ ಮಜವೆನಿಸುತ್ತಿದೆ. ಯಾರೋ ಹೇಳಿದರು ಮಿಡ್ಲೈಫ್ ಕ್ರೈಸಿಸ್ ಎಂದು. ನಕ್ಕು ಮನದಲ್ಲೇ ಹೇಳಿಕೊಂಡೆ “ಬಂದು ಬಿಟ್ಟರಲ್ಲ, ಮತ್ತೆ ಷರಾ ಬರೆಯಲು!”
ಹೀಗೆಲ್ಲ ಎಲ್ಲ ಸರಿ ಇಲ್ಲ ಎನ್ನಿಸುವಾಗಲೇ ನನಗೆ ಲಿನ್ಮರೀ, ಕೆಲ್ಲಿ ಯಂಥವರು ಸಿಗುತ್ತಾರೆ. ಅಷ್ಟೇನೂ ಕೆಟ್ಟದಿಲ್ಲ, ನಾವೆಲ್ಲಾ ಇಲ್ಲವೇ ಎಂದು ತೋರಿಸಿಕೊಡುವಂತೆ ನಗುತ್ತಾರೆ. ಈ ಲಿನ್ ಮರೀ ಅಪಲೇಷಿಯನ್ ಪರ್ವತ ಶ್ರೇಣಿ ಯಲ್ಲಿ ಚಳಿಗಾಲದಲ್ಲಿ ಮಕ್ಕಳಿಗೆ ಸ್ಕೀಯಿಂಗ್ ಕಲಿಸುತ್ತಾ, ಪ್ರವಾಸಿಗರಿಗೆ ಮಂಜುಗಟ್ಟಿದ ಹಾದಿಗಳಲ್ಲಿ, ಸರೋವರದ ಮೇಲೆಲ್ಲಾ ನಡೆಸುತ್ತ ಕರೆದುಕೊಂಡು ಹೋಗುವ ಸ್ನೋ ಶೂಯಿಂಗ್ ಗೈಡ್. ಈಕೆ ಅರವತ್ತೆರಡು ವರ್ಷದ ಗಟ್ಟಿಹೆಣ್ಣು. ವೃತ್ತಿಯಿಂದ ಆರ್ಕಿಟೆಕ್ಟ್. ತನ್ನದೇ ಸ್ವಂತ ಉದ್ಯೋಗ. ಹಾಲವು ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಕಂಪನಿಗಳಿಗೆ ಮನೆ, ಕಟ್ಟಡ, ಇತ್ಯಾದಿ ಡಿಸೈನ್ ಮಾಡಿಕೊಡುವ ಕೆಲಸ. ಅವಳು ಚಳಿಗಾಲದ ಉದ್ಯೋಗವನ್ನೇನೂ ಹೊಟ್ಟೆಗಾಗಿ ಮಾಡುವವಳಲ್ಲ. ಆತ್ಮಕ್ಕಾಗಿ ಮಾಡುವವಳು. ಪಕಪಕ ನಗುವ, ಜಿಂಕೆಯಂತೆ ಸಾಗುವ ಅವಳ ಕಾರ್ಯದಕ್ಷತೆಯ ಬಗ್ಗೆ ಹೊಗಳುವವರು, “ಹೆಣ್ಣಾಗಿ,” ಎಂಬ ಹಣೆಪಟ್ಟಿ ಹಚ್ಚುವುದಿಲ್ಲ. ಇನ್ನು ಕೆಲ್ಲಿ, ಅವಳೋ ಆ ಹಿಮಾಚ್ಚಾದಿತ ರಸ್ತೆಗಳಲ್ಲಿ, ಭರ್ರೆಂದು ಸ್ನೋಮೊಬೈಲ್ ಗಾಡಿ ಓಡಿಸುವ ಧೀರೆ. ಅವಳು ಎಲ್ಲ ಅಂಗೈರೇಖೆಗಳೊ ಅಂಬಂತೆ ಗುಡ್ಡದ ರಸ್ತೆಗಳಲ್ಲಿ ನುಸುಳುತ್ತಾ ನಡೆಯುವ ಆಕೆಯ ವೇಗಕ್ಕೆ ಅಬ್ಬಾ ಅದ್ಭುತ ಗೈಡ್ ಎನ್ನುವ ಉದ್ಗಾರ ತಾನಾಗೇ ಹೊರಬರುತ್ತದೆ. ಬರುವ ಯಾವ ಗಿರಾಕಿಗಳೂ ನಮಗೆ ಇಂಥ ಗೈಡ್ ಬೇಕು ಎನ್ನುವ ಬೇಡಿಕೆ ಇಡುವುದಿಲ್ಲ. ಆ ತಣ್ಣನೆಯ ರಸ್ತೆಗಳಲ್ಲಿ ಹಿಮವನ್ನೇ ಹೊದ್ದ ಆ ಮಾನಾವಾಕೃತಿಗಳಿಗೆ ಇರುವುದು ಆತ್ಮವೊಂದೇ.
ಯಾರೂ ಅವರನ್ನು ಅವರ ಸಾಮರ್ಥ್ಯದ ಹೊರತಾಗಿ ಬೇರೇನನ್ನೂ ಅಳೆಯುವುದಿಲ್ಲ. ಕರೀನಾ, ಐಶ್ವರ್ಯ, ಮಾಧುರಿ, ಶಿಲ್ಪಾ ಹಾಗೆಯೇ ಪಕ್ಕದ್ಮನೆ ಪೂಜಾ, ಎದುರಿನಮನೇ ಇಂದಿರಾ, ಸೀತಾ, ಗೀತಾ, ಸಂಧ್ಯಾ, ವಿಂದ್ಯಾ, ರಾಣಿ, ರೂಪ, ಆರತಿ, ಭಾರತಿ ಹೀಗೆ ಇವರೆಲ್ಲ ಹಾಟೆಸ್ಟ್ ಆಗಷ್ಟೇ ಇರಲಿ ಬಿಡ್ರೀ, ಯಾವಾಗ ಅಮ್ಮನಾಗಿರಬೇಕೆಂದು ಅವರೇ ನಿರ್ಧರಿಸಿಕೊಳ್ಳುತ್ತಾರೆ.
ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ.