ನಮ್ಮ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ಮನೆ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು. ಬಂದ ನಂಟರಿಗೆ, ಬೀಗರಿಗೆ, ಮನೇಗೆ ಬಂದವರಿಗೆ ತಿನ್ನಲು ಕೊಡಲು ಕೊಳಗಗಟ್ಟಲೆ ಮಾಡಿಡುತ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಮದುವೆ ಮನೆಯ ಸಡಗರಗಳ ಕುರಿತ ಬರಹ ನಿಮ್ಮ ಓದಿಗೆ
ನಮ್ಮ ಮನೇಲಿ ಮದುವೆ ಅನ್ನೋದು ಎಲ್ಲಾ ಬಂಧುಗಳೂ ಕೂಡಿ ತಮಾಷಿ ಮಾಡ್ತಾ, ಪದ ಹಾಡ್ತಾ, ಕಾಲೆಳೀತಾ, ಸೊಟ್ಟಗೆ(ವ್ಯಂಗ್ಯ) ಮಾತಾಡ್ತಾ, ನಗಿಸ್ತಾ ಇರೋದು. ಆದ್ರೆ ಇದ್ರ ಜೊತೆಗೇ ಸೊಂಟಕ್ಕೆ ಸೆರಗು ಬಿಗಿದು, ಕೆಲಸವನ್ನೇ ಮೈಮೇಲೆ ಆವಾಹಿಸಿಕೊಂಡು ಮಾಡ್ತಾ ಇದ್ರು. ಮಾತು ಜಾಸ್ತಿನೋ ಕೆಲ್ಸ ಜಾಸ್ತೀನೋ ಗೊತ್ತೇ ಆಗ್ತಿರಲಿಲ್ಲ. ಸೂರು ಹಾರೋ ಹಂಗೆ ಮಾತೂ, ಸೊಂಟ ಬಿದ್ದೋಗೋ ಅಂಗೆ ಕೆಲ್ಸ ಎರ್ಡೂ ನಡೀತಿತ್ತು. ಗಂಡಸರೂ ಹೆಗಲು ಕೊಟ್ಟು ದುಡೀತಿದ್ರು. ಅವರ ಪಾಲಿನ ಕೆಲಸವೂ ಜಾಸ್ತೀನೇ ಇರ್ತಿತ್ತು. ಗಂಡಸರ ಕೆಲಸ ಹೊರಗಿಂದು, ಹೆಂಗಸರ ಕೆಲಸ ಒಳಗಿಂದು ಅಂತ ನಿಯಮ ಇತ್ತಲ್ಲಾ. ಆದ್ರೂ ಅದೂ ಆಚೀಚೆ ಆಗೋ ಅಂಗೆ ಇಬ್ರೂ ಗೆರೆ ದಾಟ್ತಿದ್ರು. ಅಣ್ಣ ತಮ್ಮಂದ್ರು(ಗಂಡನ ಅಣ್ತಮ್ಮದೀರೂ ಅಷ್ಟೇ, ಹೆಂಡ್ತಿ ಅಣ್ತಮ್ಮದೀರೂ ಒಂದೇ ಎಂಬಂತೆ ಬಾಂಧವ್ಯ ಹಾಗೇ ಇತ್ತು.) ಇಂತಾ ಸಮಯದಲ್ಲಿ ಅಡುಗೆ ಮನೆ ಮೇಲ್ವಿಚಾರಣೆ ವಹಿಸ್ಕಂಡು ತಲೆಬಿಸಿ ಕಮ್ಮಿ ಮಾಡ್ತಿದ್ರು. ಮನೇನೆ ಮದುವೆ ಮನೆ ಆಗ್ತಿತ್ತು. ಅಬ್ಬಬ್ಬ ಅಲ್ಲಿ ನಡೀತಿದ್ದ ಕೆಲಸಗಳು ಒಂದಾ ಎರಡಾ? ಗೃಹ ಕೈಗಾರಿಕೆ ನಡೀತಿತ್ತು. ಅಂಗೈ ಅಗಲ ಮನೆಯಲ್ಲಿ ಆಕಾಶದಗಲ ಕೆಲಸ ನಡೀತಿದ್ವು.
ಅಡುಗೆ ಸಾಲಿನ ಜವಾಬ್ದಾರಿ
ನಮ್ಮ ಮನೇಲಿ ಎಂಟು ಜನ ಅತ್ತೆದೀರಲ್ವಾ? ಅಜ್ಜಿ ಅಣ್ತಮ್ಮದೀರು ಯರಗುಂಟೆ ಇಂದ ಬರ್ತಿದ್ರು. ಎಂಟತ್ತು ದಿನ ಇದ್ದು ಅಡುಗೆ ಸಾಲು(ಇವತ್ತು ಛತ್ರಗಳಿವೆ. ಅವತ್ತು ಹಳ್ಳಿಗಳಲ್ಲಿ ಮನೆ ಮುಂದೆ, ಅಕ್ಕ ಪಕ್ಕ ಉದ್ದಕ್ಕೆ ಚಪ್ಪರ ಹಾಕ್ತಿದ್ರು. ಅಲ್ಲೇ ಒಂದು ಕಡೆ ಅಡುಗೆ ಮಾಡ್ತಿದ್ರು. ಆ ಜಾಗಕ್ಕೆ ಅಡುಗೆ ಸಾಲು ಅಂತಿದ್ರು. ಅಲ್ಲೇ ಊಟ, ಮದುವೆ ಎಲ್ಲಾನೂ. ಇಲ್ಲಾಂದ್ರೆ ಅಪರೂಪಕ್ಕೆ ಯಾವುದೋ ಖಾಲಿ ಮನೇಲಿ ಅಡುಗೆ ಮಾಡ್ತಿದ್ರು.) ನೋಡ್ಕಂತಿದ್ರು. ಅಡುಗೆ ಐನೋರು(ಬ್ರಾಂಬ್ರು) ಕೇಳಿದ ಸಾಮಾನು ತಂದ್ಕೊಟ್ಟು, ಲೆಕ್ಕ ಪಕ್ಕ ಬರ್ದಿಟ್ಟು, ಬೀಗರಿಗೆ ಊಟ ತಿಂಡಿ ಉಪಚಾರದಲ್ಲಿ ಅಪಚಾರ ಆಗ್ದಾಗೆ ನೋಡ್ಕೊಳ್ಳೋ ಐನಾತಿ ಜವಾಬ್ದಾರಿ ಇದು. ಸ್ಯಾನೇ ತಲೆಬಿಸೀನೂ. ಒಂದು ಸತೀನೂ ಹೆಚ್ಚೂಕಮ್ಮಿ ಆಗ್ದೇ ಇರೋ ಅಂಗೆ ನೋಡ್ಕಂಡಿದ್ದು ಹೆಸ್ರುವಾಸಿ ಆಗಿ ಸುತ್ತಮತ್ತಾ ಇರೋ ನಂಟರೆಲ್ಲಾ ಹೊಗುಳ್ತಿದ್ರು. ಎಲ್ಲಾರ ಮನೇಲೂ ಅವ್ರೇ ಉಸ್ತುವಾರಿ ನೋಡ್ಕಂತಿದ್ರು.
ಹಂಚು ಇಟ್ಕಳ್ಳೋದು
ನಮ್ಮ ಮನೆಗ್ಳಲ್ಲಿ ಮದ್ವೇ ಗೊತ್ತಾಗಿದ್ ತಕ್ಷಣ ಮಾಡ್ತಿದ್ದ ಏರ್ಪಾಟು ಅಂದ್ರೆ ಹಂಚು ಇಟ್ಟುಕೊಳ್ಳುವುದು. ಒಂದು ತಿಂಗಳ ಮುಂಚೇನೆ ತಯ್ಯಾರಿ ಇರ್ತಿತ್ತು. ದೊಡ್ಡತ್ತೆ, ಸಾವಿತ್ರಮ್ಮತ್ತೆ ಬಂದು ಸೇರುತ್ತಿದ್ದರು. ಅಕ್ಕ ತಂಗೀರ ಮಕ್ಳು ಸಹಾಯುಕ್ಕೆ ಬರ್ತಿದ್ರು. ಸೇರುಗಟ್ಟಲೆ ಅಕ್ಕಿ ತೊಳೆದು ಹಾಕಿ, ರಾಶಿ ರಾಶಿ ಚಕ್ಲಿ ಮಾಡುತ್ತಿದ್ದರು. ಅಕ್ಕಪಕ್ಕದ ಮನೆ ಹೆಣ್ಣುಮಕ್ಕಳೂ ಬಂದು ಸಹಾಯ ಮಾಡುತ್ತಿದ್ದರು. ನಿಪ್ಪಟ್ಟು, ಕೋಡುಬಳೆ, ಗುಂಡು ಅದೂ ಇದೂ ಮಾಡಿಡುತ್ತಿದ್ರು. ಬಂದ ನಂಟರಿಗೆ, ಬೀಗರಿಗೆ, ಮನೇಗೆ ಬಂದವರಿಗೆ ತಿನ್ನಲು ಕೊಡಲು ಕೊಳಗಗಟ್ಟಲೆ ಮಾಡಿಡುತ್ತಿದ್ರು. ಮದುವೆ ನಿಶ್ಚಯ ಆದ ತಕ್ಷಣದ ದೊಡ್ಡ ಕೆಲಸ ಇದಾಗಿತ್ತು. ತಗಡಿನ ಎಣ್ಣೆ ಡಬ್ಬಗಳಲ್ಲಿ ನೂರು ನೂರು ಎಣಿಸಿ ಇಡುತ್ತಿದ್ದರು. ಹೆಣ್ಣುಮಕ್ಕಳು ಚಕ್ಕಲಿ ಮಾಡುವುದರಲ್ಲೂ ಮುಂದಿರುತ್ತಿದ್ರು. ಮದುವೆ ಮುಗಿದು, ಮಡಿಲು ತುಂಬಿಸಿಕೊಂಡು ಹೋಗುವಾಗ ನೂರರಗಟ್ಟಲೇ ಒಯ್ದು ತಮ್ಮೂರಲ್ಲಿ ಅಕ್ಕಪಕ್ಕದವರಿಗೆ ಮದುವೆ ತಿಂಡಿ ಅಂತಾ ಕೊಡುತ್ತಿದ್ದರು. ಆದ್ರೆ ಬೇಯೋ ಎಣ್ಣೆ ಮುಂದೆ ದಿನಗಟ್ಟಲೇ ಹಗ್ಲೂ ರಾತ್ರಿ ಕೂಡುತ್ತಿದ್ರು. ಹತ್ತಿರದ ನಂಟರಿಷ್ಟರ ಮನೆಗಳಲ್ಲಿ ಮದುವೆ ಗೊತ್ತಾದ ತಕ್ಷಣ ನಮ್ಮ ದೊಡ್ಡತ್ತೇಗೆ ಕಾಗದ ಬರೆಯುತ್ತಿದ್ದರು. ಮನೇಲಿ ಹಂಚು ಇಟ್ಟುಕೊಳ್ಳಬೇಕು. ನೀನು ಬಾ ಅಂತ. ಅತ್ತೆ ಇಲ್ಲಾ ಅನ್ನದೆ ಹೋಗಿ, ಸೆರಗು ಸಿಕ್ಕಿಸಿ ನಿಂತರೆ ಅಲ್ಲಿನ ಎಲ್ಲಾ ಕೆಲಸಗಳೂ ಸಕ್ಕ ಸಲೀಸು. ಹಂಚು ಇಟ್ಟುಕೊಳ್ಳಲೇ ಪತ್ರ ಬರುತ್ತಿತ್ತು ಎಂದರೆ ಅದರ ಮಹತ್ವ ಊಹಿಸಬಹುದು. ಚಕ್ಕಲಿ ಇಲ್ಲದೆ ಮದುವೇನೇ ಇಲ್ಲ.
ಹಪ್ಪಳ ಸಂಡಿಗೆ ಉಪ್ಪಿನಕಾಯಿ
ಜೊತೇಗೆ ಮದ್ವೆ ಗೊತ್ತಾದ್ ತಕ್ಷಣ ಮದುವೇಗೆ ಬೇಕಾಗೋ ಹಪ್ಪಳ, ಸಂಡಿಗೆ, ಉಪ್ಪಿನಕಾಯಿಗಳನ್ನು ಎಲ್ರೂ ಕೂಡಿ ಮಾಡಿಡುತ್ತಿದ್ರು.
ಸಂಡಿಗೇನಲ್ಲಿ ಹಲವು ರಕಗಳಿದ್ವು. ರವೆ ಗಂಜಿ(ಚಮಚದಲ್ಲಿ ಇಡೋದು) ಸಂಡಿಗೆ, ಅಕ್ಕಿ ಪೇಣಿ, ಮಲ್ಲಿಗೆ ಸಂಡಿಗೆ( ದೊಡ್ಡದು, ಸಣ್ಣವು ಎರಡು ತರ. ಕೈಯಲ್ಲಿ ಅರಳುತ್ತಿದ್ದವು. ಇವುಕ್ಕೆ ಕೇಸರಿ ಬಣ್ಣಾನೂ ಹಾಕುತ್ತಿದ್ರು), ಚಕ್ಕಲಿ ಸಂಡಿಗೆ(ಚಕ್ಕಲಿ ಒರಳಲ್ಲಿ ಹಾಕುತ್ತಿದ್ರು), ಮಜ್ಜಿಗೆ ಮೆಣಸಿನಕಾಯಿ ಮಾಡ್ತಿದ್ರು.
ಅಕ್ಕಿ ಹಪ್ಪಳ, ಮಜ್ಜಿಗೆ ಹಪ್ಪಳ, ಸಬ್ಬಕ್ಕಿ ಹಪ್ಪಳ ಮಾಡ್ತಿದ್ರು.
ಮಾವಿನಕಾಯಿ, ನಿಂಬೆಕಾಯಿ, ಎಳ್ಳೀಕಾಯಿ(ಹೇರಳೆಕಾಯಿ), ಹುಣಿಸೇತೊಕ್ಕು, ಚಟ್ನಿಪುಡಿ, ಪಪ್ಪುಲ ಪುಡಿ, ಪುಳಿಯೋಗರೆ ಗೊಜ್ಜು, ಮಾವಿನಕಾಯಿ ಗೊಜ್ಜು ಮಾಡಿಡುತ್ತಿದ್ರು. ಇವುಕ್ಕೆಲ್ಲಾ ಬೇಕಾದ ಮೆಣಸಿನಪುಡಿ, ಸಾರಿನ ಪುಡಿ ಎಲ್ಲಾನೂ ಒರಳಲ್ಲಿ ಕುಟ್ಟಿ, ಸೀನುತ್ತಾ, ಕೆಮ್ಮುತ್ತಾ ಡಬ್ಬ ತುಂಬುತ್ತಿದ್ರು.
ಊಟ ಆದಮೇಲೆ ತಟ್ಟೆಯಲ್ಲಿಡಲು ಖಾರದ ಅವಲಕ್ಕಿ, ಪುರಿ ಒಗ್ಗರಣೆ, ಬೂಂದಿ, ಕಾರಾಸೇವು, ಕಡಲೆ ಬೀಜಗಳೂ ರೇಕಿನ ಡಬ್ಬಗಳನ್ನು ಅಲಂಕರಿಸುತ್ತಿದ್ವು. ನಮಗಂತೂ ಮದುವೆ ಮುಂಜಿ ಅಂದ್ರೆ ತಿಂಗಳುಗಟ್ಟಲೇ ಇಂದ ಮನೆ ತುಂಬಾ ನಂಟರು. ಮದುವೆ ಮುಗಿದ ಮೇಲೂ ಕೆಲವರು ಇದ್ದು ಮನೆಯನ್ನು ಸೊಗಸಿಟ್ಟು ಹೋಗುತ್ತಿದ್ದರು. ಮಕ್ಕಳಿಗೆ ತಿನ್ನಲು ತಿಂಡಿಯ ರಾಶಿ ಇರುತ್ತಿತ್ತು.
ಸುಣ್ಣ ಸುದ್ದೆಮಣ್ಣು
ಮದುವೇ ಮನೇ ಅಂದ್ರೆ ಫಳಫಳ ಹೊಳೀಬೇಕಲ್ಲ. ಸುಣ್ಣ ಬಳಿದು, ಅಲ್ಲಲ್ಲಿ ಗೋಡೆಗಳ ಮೇಲೆ ಸುದ್ದೆಮಣ್ಣು ರಂಗೋಲಿ ಹಾಕುತ್ತಿದ್ದರು.
ವರಪೂಜೇಲಿ ಬೀಗರಿಗೆ ಕೊಡೋಕೆ ಸಾಲು ಸಾಲು ತಿಂಡಿ ತಟ್ಟೆ ಜೋಡಿಸಬೇಕಿತ್ತು. ಅದುಕ್ಕೆ, ಕಜ್ಜಾಯ, ಮಿಠಾಯಿ, ಮೈಸೂರ್ ಪಾಕು, ಬರ್ಫಿ, ಕಡಲೆ ಉಂಡೆ, ಗೋಪುರಗಳು (ಕುಂಬಳಬೀಜ, ಕೆಕ್ಕರೆ ಬೀಜ, ಕಡಲೆಬೀಜ, ಕಡಲೆಪಪ್ಪು ಹಾಕಿ ಬೆಲ್ಲದ ಪಾಕದಲ್ಲಿ ಬಿಸಿ ಮಾಡಿ, ದಪ್ಪ ಪೇಪರ್‌ನ ಸುರುಳಿ ಸುತ್ತಿ ಗೋಪುರದ ಆಕಾರ ಕೊಟ್ಟು ಅದರಲ್ಲಿ ಸುರಿಯುತ್ತಿದ್ದರು. ಆರಿದ ಮೇಲೆ ಅದು ಗೋಪುರದಂತೆ ಇರುತ್ತಿತ್ತು. ಇದಕ್ಕಾಗಿ ತಿಂಗಳುಗಟ್ಟಲೇ ಅಂದ್ರೆ ವರ ನೋಡಲು ಶುರುಮಾಡಿದ ತಕ್ಷಣದಿಂದ ಕುಂಬಳ ಬೀಜ, ಕೆಕ್ಕರೆ ಬೀಜಗಳ ಸಂಗ್ರಹ ಮಾಡಿ ಸುಲಿದು ಇಡುತ್ತಿದ್ದರು.) ಜಿಲೇಬಿ ಸಹ ಮನೇನಲ್ಲಿ ಮಾಡುತ್ತಿದ್ದರು. ನಮ್ಮ ಅಮ್ಮಮ್ಮ ಅಂತೂ ಎಷ್ಟು ರಕದ ಸೀತಿಂಡಿ ಹಾಗೂ ಖಾರಾ ತಿಂಡಿ ಮಾಡ್ತಿದ್ರು ಲೆಕ್ಕವೇ ಇಲ್ಲ. ಹಾಲುಕೋವಾ ಸಹ ಮಾಡ್ತಿದ್ರು.
ಮದುವೆ ಮನೇಲಿ ಇವುಗಳ ಜೊತೆಗೆ ಪುಟ್ಟ ಪುಟ್ಟ ಚಕ್ಕಲಿ, ನಿಪ್ಪಟ್ಟು, ಕೋಡುಬಳೆ ಮಾಡುತ್ತಿದ್ದರು. ಇವೆಲ್ಲಾ ಬೀಗರಿಗೆ ಕೊಡಲು ಮಾತ್ರ.
ನಮ್ಮ ಹೆಣ್ಣುಮಕ್ಕಳಲ್ಲಿ ಸೃಜನಶೀಲತೆ ಜಾಸ್ತಿ ಇತ್ತು. ಚಕ್ಕುಲಿ ಹಿಟ್ಟು, ನಿಪ್ಪಟ್ಟಿನ ಹಿಟ್ಟಿನಲ್ಲಿ ಬೇರೆ ಬೇರೆ ಆಕಾರದಲ್ಲಿ ಏನೇನೋ ತಿಂಡಿ ಮಾಡಿಡುತ್ತಿದ್ದರು. ಚಿಲುಮೆಳ್ಳು (ಮೈದಾ ಹಿಟ್ಟನ್ನು ಕಲಿಸಿ ಅದನ್ನು ಶಾವಿಗೆ ಎಳೆಯಂತೆ ಕೈಯಲ್ಲಿ ಹೊಸೆದು, ಅದನ್ನು ಜೀರಿಗೆ ಕಾಳಿನಷ್ಟು ಸಣ್ಣಗೆ ಮಾಡಿ ಗುಡ್ಡೆ ಹಾಕಿ, ಬಿಸಿಲಲ್ಲಿ ಒಣಗಿಸಿಟ್ಟು, ಡಬ್ಬಾದಲ್ಲಿ ಹಾಕಿಡುತ್ತಿದ್ದರು. ಎಷ್ಟು ವೇಗವಾಗಿ ಬೆರಳು ಸರಿಯುತ್ತಿದ್ದವು ಅಂದರೆ ನಮಗೆ ಕಾಣುತ್ತಲೇ ಇರಲಿಲ್ಲ. ಬರೀ ಕೆಳಗಿನ ತಟ್ಟೆಯಲ್ಲಿ ಬೀಳುತ್ತಿದ್ದ ಜೀರಿಗೆ ಗಾತ್ರದ ಚಿಲುಮೆಳ್ಳು ರಾಶಿ ಏರುವುದು ಮಾತ್ರ ಕಾಣುತ್ತಿತ್ತು. ಮದುವೇಲಿ ಮಡಿಲಕ್ಕಿ ತುಂಬಿದ ಮೇಲೆ ಚಿಲುಮೆಳ್ಳು ಪಾಯಸ ಮಾಡುತ್ತಿದ್ದರು. ಬೀಗರಿಗೆ ಸೇರುಗಟ್ಟಲೇ ಕೊಡುತ್ತಿದ್ದರು).
ಮೈದಾ ಹಿಟ್ಟಿನಲ್ಲಿ ಬೊಂಬೆಗಳು
ಮೈದಾ ಹಿಟ್ಟಿನಲ್ಲಿ ಪುಟಾಣಿ ಬೊಂಬೆಗಳು, ಬಾಚಣಿಕೆ, ಮೊಲ, ಆಮೆ, ಗಿಡ, ಮರ, ಗಣೇಶ, ಲಿಂಗ, ತಟ್ಟೆ, ಲೋಟ, ಜಗ್ಗು, ನಾಯಿ, ಬೆಕ್ಕು, ಮಾಡಿ ವರಪೂಜೆ ಸಮಯದಲ್ಲಿ ತಟ್ಟೆಗಳಲ್ಲಿ ಬೀಗರಿಗೆ ಕೊಡುತ್ತಿದ್ದರು. ಕಣ್ಣಿಗೆ ಕಾಣುವ ಆಕಾರಗಳೆಲ್ಲಾ ಅಲ್ಲಿ ಸೃಜನಾತ್ಮಕತೆಗೆ ತಕ್ಕಂತೆ ರೂಪು ಪಡೆಯುತ್ತಿದ್ದವು.
ಇದಕ್ಕೆ ತೆಲುಗಿನಲ್ಲಿ ಕಂದ ಸಾಮಾನು ಅಂತಿದ್ರು. ಸೃಜನಶೀಲತೆ, ಮನೆಯಲ್ಲಿ ಮಾಡುವವರ ಸಂಖ್ಯೆ ಹಾಗೂ ಶ್ರಮ ಹೆಚ್ಚಿದ್ದರೆ ತಟ್ಟೆಗಳ ಸಂಖ್ಯೆ ಜಾಸ್ತಿ ಇರ್ತಿತ್ತು. ಇದು ಗೌರವದ ಪ್ರಶ್ನೆ ಸಹ. ಹಾಗಾಗಿ ಅಕ್ಕಪಕ್ಕದ ಹೆಣ್ಣುಮಕ್ಕಳೂ ಕೈಜೋಡಿಸಿ ರಾಶಿ ರಾಶಿ ಮಾಡುತ್ತಿದ್ದರು. ಕೇಸರಿ ಬಣ್ಣ(ಆಹಾರದಲ್ಲಿ ಬಳಸುತ್ತಿದ್ದುದು) ಹಾಗೂ ಇತರೆ ಬಣ್ಣಗಳನ್ನೂ ಸೇರಿಸಿ ಏನೇನೋ ಮಾಡುತ್ತಿದ್ದರು. ಕಾಳುಮೆಣಸು, ಲವಂಗ, ಕಡಲೆಬೇಳೆ, ಉದ್ದಿನಬೇಳೆ, ಅವೂ ಇವೂ ಕಣ್ಣು ಕೈ ಕಾಲುಗಳಾಗಿ ಮೆತ್ತುತ್ತಿದ್ದವು. ಐಸ್ ಕ್ಯಾಂಡಿ ತಿಂದ ಕಡ್ಡಿ ಎಸೆಯದೆ, ಅದನ್ನೂ ಕೂಡಿಡುತ್ತಿದ್ದರು. ನಾವೂ ನಿಯತ್ತಾಗಿ ಕಡ್ಡಿಯನ್ನು ತೊಳೆದು ಅಮ್ಮಂದಿರ ಕೈಗೆ ತಂದು ಕೊಡ್ತಿದ್ವಿ. ಕಾಸು ಕೊಡುವಾಗಲೇ ಮೊದಲೇ ಕಂಡೀಷನ್ ಹಾಕುತ್ತಿದ್ರು ಅನ್ನಿ. ಅದ್ರಲ್ಲಿ ಹುಡುಗ ಹುಡುಗಿ ಬೊಂಬೆ ಮಾಡಿ ಅವಕ್ಕೆ ಪುಟಾಣಿ ಲಂಗ, ಫ್ರಾಕು, ಅಂಗಿ, ಚಡ್ಡಿಯನ್ನು ಸುನೇರಿ ಪೇಪರ್‌ನಲ್ಲಿ ಕತ್ತರಿಸಿ ಹಾಕುತ್ತಿದ್ರು. ಈರುಳ್ಳಿ ಸಿಪ್ಪೆ, ಬೆಳ್ಳುಳ್ಳಿ ಸಿಪ್ಪೆಗಳೂ ಬಟ್ಟೆಗಳಾಗುತ್ತಿದ್ದವು. ಕಡಲೆಕಾಯಿ ಸಿಪ್ಪೆ ಸೈತ ಒಂದು ಹುಳವೋ, ಪ್ರಾಣಿಯೋ ಇಲ್ಲಾ ಆಲಂಕಾರಿಕ ಪದಾರ್ಥವೋ ಆಗಿ ಅರಳಿ ನಿಲ್ಲುತ್ತಿತ್ತು.
ಎದುರುಗೊಳ್ಳು
ವರಪೂಜೆ ಮುಗಿದ ಮೇಲೆ ವಧೂ-ವರರನ್ನು ಎದುರುಬದುರು ಕೂಡಿಸಿ, ಇವರು ತಂದ ಕಂದ ಸಾಮಾನು ಅವರಿಗೆ, ಅವರು ತಂದದ್ದು ಇವರಿಗೆ ಬದಲಾಯಿಸುತ್ತಿದ್ದರು. ಇದು ನಮ್ಮಲ್ಲಿ ಎದುರುಗೊಳ್ಳು. ಹೆಣ್ಣಿನ ಕಡೆಯವರ ಸಾಮಾನು ಹೆಚ್ಚಿರುತ್ತಿತ್ತು.
ನೆಕ್ಲೇಸು ಮೊಗ್ಗಿನಜಡೆ
ಕೆಕ್ಕರೆಬೀಜದಲ್ಲಿ ಮೊಗ್ಗಿನ ಜಡೆ ಮಾಡಿ ಇಡುತ್ತಿದ್ದರು. ಅದನ್ನು ಮದುವಣಗಿತ್ತಿಗೆ ಒಂದು ಸಲ ಮೊಗ್ಗಿನ ಜಡೆ ಹಾಕಲು ಬಳಸುತ್ತಿದ್ದರು. ಪುಟ್ಟ ಮೊಗ್ಗಿನ ಜಡೆಗಳು ಕಂದ ಸಾಮಾನುಗಳ ಸಾಲಿನಲ್ಲಿ ಸೇರುತ್ತಿದ್ದವು. ಕೆಕ್ಕರೆ ಬೀಜ ಕುಂಬಳ ಬೀಜಗಳನ್ನು ಸಿಹಿ ತಿನಿಸಿನಲ್ಲಿ ಮಾತ್ರವಲ್ಲದೆ ನೆಕ್ಲೇಸು, ಬಳೆ, ತೋಳುಬಂದಿಗಳಲ್ಲಿಯೂ ಉಪಯೋಗಿಸುತ್ತಿದ್ರು. ಈ ನೆಕ್ಲೇಸು, ಬಳೆ, ಕಂಠೀಹಾರಗಳನ್ನು, ಡಾಬು, ತೋಳುಬಂದಿ ಇತ್ಯಾದಿಗಳನ್ನು ದೊಡ್ಡ ರಟ್ಟಿಗೆ ಬಣ್ಣಬಣ್ಣದ ಚಿನ್ನಾರಿ ಪೇಪರ್ ಅಂಟಿಸಿ, ಅದರ ಮೇಲೆ ಅಲಂಕಾರಿಕವಾಗಿ ಮೆತ್ತುತ್ತಿದ್ದರು. ಈ ಕುಸುರಿ ಕೆಲಸಗಳೆ ಬೀಗರ ಮನೆಯ ಹೆಣ್ಣುಮಕ್ಕಳ ಜಾಣ್ಮೆಗೆ ಅಳತೆಗೋಲಾಗಿದ್ದವು.
ಹತ್ತಿಯಲ್ಲಿ ಹಲವಾರು ಬೊಂಬೆಗಳನ್ನು, ವಿವಿಧ ವಿನ್ಯಾಸದ ಉದ್ದನೆ ಗೆಜ್ಜೆಬತ್ತಿಗಳನ್ನು ಮಾಡಿ, ಬಣ್ಣದ ಪೇಪರ್ ಸುತ್ತಿ ಮಿರಮಿರ ಮಿಂಚಿಸುತ್ತಿದ್ದರು.
ಕುಂಬಳಕಾಯಿಗೆ ಅಲಂಕಾರ ಮಾಡಿಡುತ್ತಿದ್ರು. ವರ ಬಂದ ತಕ್ಷಣ ಕೊಡೋ ತೆಂಗಿನಕಾಯಿಗೆ ಅಲಂಕಾರ, ಇವುನ್ನ ಇಟ್ಟು ಕೊಡೋ ತಟ್ಟೆಗಳ ಮೇಲೆ ಹೊದಿಸಲು, ಕ್ರೋಶಾದಲ್ಲಿ ಹೆಣೆದ ವಿವಿಧ ವಿನ್ಯಾಸ, ಆಕಾರದ ಬಿಳಿ ಬಟ್ಟೆಗಳು, ಬಣ್ಣದ ಮಣಿಗಳಲ್ಲಿ ಹೊಲಿದ ಚೌಕಾಕೃತಿ, ಅಷ್ಟಕೋನ, ತ್ರಿಕೋನಗಳನ್ನು ಪೇರಿಸುತ್ತಿದ್ದರು.(ಇವನ್ನು ಸಾಮಾನ್ಯವಾಗಿ ಮಧುಮಗಳು ಮಾಡಿ ಒಟ್ಟಾಗಿಸುತ್ತಿದ್ದಳು. ಹೆಣ್ಣು ನೋಡಲು ಬಂದವರಿಗೆ ಮಗಳ ಕುಸುರಿ ಕೆಲಸದ ಕೌಶಲ್ಯ ತೋರಲು ಇವನ್ನೆಲ್ಲಾ ತೋರಿಸುತ್ತಿದ್ದರು.) ಒಣಕೊಬ್ಬರಿ ಗಿಟುಕುಗಳನ್ನು ಬ್ಲೇಡಿನಲ್ಲಿ ಕೆರೆದು ಹೂವು ಬಳ್ಳಿ ಇತ್ಯಾದಿ ಮಾಡಿ ಇಡುತ್ತಿದ್ರು. ಇವಂತೂ ರಾಶಿ ರಾಶಿ ತರ ಇರ್ತಿದ್ವು. ಹೇಳ್ತಾ ಹೋದ್ರೆ ಮುಗಿಯದ ಕತೆ.
ಹರಳೆಣ್ಣೆ
ಮದುವೆ ದಿನ ಬೆಳಗ್ಗೆ ತಲೆಗೆ ಎಣ್ಣೆ ಸ್ನಾನ ಮಾಡಬೇಕಲ್ಲ. ಅದಕ್ಕೇ ಬೀಗರಿಗೆ, ಅವರ ಕಡೆಯವರಿಗೆ ಮುಖ್ಯವಾಗಿ ಮಧುಮಗನಿಗೆ ಕೊಡಲು ಹೊಸ ಹರಳೆಣ್ಣೆಯನ್ನು (ಕಾಯಿ ಕುಯ್ದು, ಗಾಣದಲ್ಲಿ ಆಡಿಸಿ, ಎಣ್ಣೆಯನ್ನು ಹದವಾಗಿ ಕುದಿಸಿ, ಘಮಘಮಿಸುವಂತೆ ಸಿದ್ಧ ಮಾಡುತ್ತಿದ್ರು. ಆ ಸುವಾಸನೆ ಬಿಡದಿ ಮನೇಯನ್ನೂ ದಾಟಿ ಊರೆಲ್ಲಾ ಹರಡುತ್ತಿತ್ತು.(ಬೀಗರ ಕಡೆಯವರು ಉಳಿದುಕೊಳ್ಳಲು ಖಾಲಿ ಇರುವ ಅಕ್ಕಪಕ್ಕದ ಮನೆಗಳನ್ನು ಕೊಡುತ್ತಿದ್ದರು. ಅಥವಾ ಅಕ್ಕಪಕ್ಕದವರಿಗೆ ಹೇಳಿಟ್ಟು ಅವರ ಮನೆಯ ಕೋಣೆಗಳನ್ನು ಬಿಡಿಸಿ ಕೊಡುತ್ತಿದ್ದರು. ಇವು ಬಿಡದಿ ಮನೆಗಳು) ಸೀಗೆಪುಡಿಯೂ ಅಷ್ಟೇ. ಸೀಗೆಕಾಯಿಗಳನ್ನು ಕುಟ್ಟಿಸಿ, ಅದರ್ ಜೊತೆ ಎಳೆ ಚಿಗುರಿನ ಎಲೆಯಿಂದ ಮಾಡಿದ ಚಿಗುರು ಪುಡಿಯನ್ನೂ ಹದವಾಗಿ ಬೆರೆಸಿ ಕೊಡುತ್ತಿದ್ದರು.
ಮದುಮಗಳಿಗೆ ಅಲಂಕಾರ
ಈಗಿನಂತೆ ಬ್ಯೂಟಿ ಪಾರ್ಲರ್‌ಗಳ ಬಣ್ಣ ಅಲ್ಲ ಬಿಡಿ. ಮುಖಕ್ಕೆ ಒಂದು ಬಿಳೀ ಪೌಡರ್ ಹಾಕುತ್ತಿದ್ರು. ಮುಖದ ಅಲಂಕಾರ ಅಷ್ಟೇ. ಹಣೆಯ ಕುಂಕುಮದ ಕೆಳಗೆ ಒಂದಿಷ್ಟು ಚಿತ್ತಾರಗಳನ್ನು ಬಿಡಿಸುತ್ತಿದ್ದರು. ಬಣ್ಣ ಬಣ್ಣದ ಸಾಧು (ಚಾಂದ್) ತಗೊಂಡು ಚುಕ್ಕಿ ಇಡುತ್ತಿದ್ದರು. ಹುಬ್ಬಿನ ಮೇಲೆ ಬಿಳಿ ಹಾಗೂ ಕೆಂಪು ಚುಕ್ಕಿ. ಗಲ್ಲದ ಮೇಲೆ ಕಣ್ಣು ಕಪ್ಪಿನಲ್ಲಿ ಪುಟ್ಟ ಚುಕ್ಕಿ ಇಡುತ್ತಿದ್ದರು. ಮನೆಯಲ್ಲೇ ಕಣ್ಣುಕಪ್ಪು(ನಂದಿ ಬಟ್ಟಲು ಹೂವಿನಿಂದ ಹಾಗೇ ಇನ್ನೊಂದು ವಿಧ) ತಯಾರಿಸುತ್ತಿದ್ದರು. ಅರಿಶಿನದ ಕೊಂಬು ತಂದು ಕುಟ್ಟಿ ಬೀಸಿ ಜರಡಿ ಹಿಡಿದು ಮನೆಯಲ್ಲೇ ಅರಿಶಿಣ ತಯಾರಿಸುತ್ತಿದ್ದರು.
ತಲೆಯ ಅಲಂಕಾರ ಭರ್ಜರಿ ಇರುತ್ತಿತ್ತು. ಎಲ್ಲಾರ ಜಡೆಬಿಲ್ಲೆಗಳನ್ನು ವಧುವಿಗೆ ಸುತ್ತುತ್ತಿದ್ದರು. ಕೆಕ್ಕರೆ ಬೀಜದಲ್ಲಿ ಬೈತಲೆ ಬೊಟ್ಟು ಮಾಡುತ್ತಿದ್ದರು. ಕಲ್ಲಿನ ನೆಕ್ಲೇಸು ಸಹ ಬೈತಲೆಗೆ ಬಳಸುತ್ತಿದ್ದರು. ಚೈನುಗಳೂ ಅಲಂಕಾರದಲ್ಲಿ ಸೇರುತ್ತಿದ್ದವು. ಸೂಜಿ ದಾರ ತಗೊಂಡು ಅವನ್ನು ಕೂದಲಿಗೆ ಸೇರಿಸಿ ಹೊಲಿಯುತ್ತಿದ್ದರು. ದುಂಡು ಮಲ್ಲಿಗೆ ಪೋಣಿಸಿ ದಂಡೆ ಹಾಗೂ ಮೊಗ್ಗಿನ ಜಡೆ ಮಾಡುತ್ತಿದ್ದರು. ಬ್ರೋಚುಗಳು ತಲೆಯ ಇಕ್ಕೆಲಗಳಲ್ಲಿ ಚಿತ್ತಾರ ಮೂಡಿಸುತ್ತಿದ್ದವು. ಮದುವೆ ಹುಡುಗಿಯ ಬಳಿಯೋ ಅಮ್ಮನ ಬಳಿಯೋ ಇವೆಲ್ಲಾ ಇರದಿದ್ದರೂ ಸಹ, ಬಂದ ನಂಟರೂ ತಮ್ಮ ಬಳಿಯದನ್ನು ಪ್ರೀತಿಯಿಂದ ಕೊಡುತ್ತಿದ್ದರು. ಭಯವೂ ಇರುತ್ತಿರಲಿಲ್ಲ. ಪ್ರೀತಿ ವಿಶ್ವಾಸ ನಂಬಿಕೆಗಳು ಬೇರೂರಿದ್ದವು. ನಮ್ಮ ರತ್ನಕ್ಕ ಪ್ಯಾಟೇನಲ್ಲಿ(ತುಮಕೂರು) ಇದ್ರಲ್ಲ. ಅವ್ರು ಹೊಸ ರೀತಿಯಲ್ಲಿ ಈ ಅಲಂಕಾರ ಮಾಡುತ್ತಿದ್ರು. ಅವರನ್ನು ಪ್ಯಾಟೆ ಪಾಪ ಅಂತ್ಲೇ ಕರೀತಿದ್ರು. ತುಮಕೂರಿನ ಸಾವಿತ್ರಮ್ಮತ್ತೆ ಅಲಂಕಾರದಲ್ಲಿ ಫೇಮಸ್ಸು. ಮದುವೆ ಹುಡುಗಿ ಅಲಂಕಾರಕ್ಕೆ ಇವ್ರು ಇರಲೇಬೇಕಿತ್ತು.
ಒಬ್ಬೊಬ್ಬರೂ ಒಂದೊಂದು ಕೆಲಸ ವಹಿಸಿಕೊಂಡು ಮಾಡುತ್ತಿದ್ದರು. ಯಾರ್ಯಾರು ಯಾವ ಕೆಲಸದಲ್ಲಿ ಹೆಸ್ರುವಾಸೀನೋ ಅದನ್ನೇ ವಹಿಸ್ಕಂತಿದ್ರು. ದೊಡ್ಡತ್ತೆಯದು ಹಂಚಿನ ಕೆಲಸ, ಸಲಹೆ, ಸೂಚನೆ, ಬೀಗರಿಗೆ ಮಾಡುವ ಮರ್ಯಾದೆ, ಕೊಡುವುದು ಬಿಡುವುದು ಇತ್ಯಾದಿ ಜವಾಬ್ದಾರಿ. ಸಾವಿತ್ರಮ್ಮತ್ತೆ ಅಲಂಕಾರ, ಹಂಚಿನ ಕೆಲಸ ಇತ್ಯಾದಿ. ನಾಗರತ್ನ ವಿಜಿಯತ್ತೆಯರು ಅವರು ಹೇಳಿದ್ದನ್ನು ಸರಬರಾಜು ಮಾಡುತ್ತಾ ಸಹಾಯಕರಾಗಿ ಎಲ್ಲವನ್ನೂ ನಿಭಾಯಿಸುತ್ತಿದ್ದರು.

ಇದು ಮದುವೆಗಳಲ್ಲಿ ನಮ್ಮ ಮನೆಯ ವಾತಾವರಣ. ಇನ್ನೂ ಮದುವೆಯಲ್ಲಿ ಮಾಡುವ ತಮಾಷಿ ಸಾಕಷ್ಟು. ಅವು ಮುಂದಿನ ಕಂತಿನಲ್ಲಿ.

ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.
