ಅವ್ವ – ಒಂದು ಸ್ಫೂರ್ತಿದಾಯಕ ಕಥೆ !

ಬರಿದಾದ ಕೈ, ಒಲೆಯ‌ ಮೇಲೆ
ಹಸಿದು ಬೆಯ್ಯುವ ಪಾತ್ರೆ
ಧರೆಗೂ ದಿಗಂತಕ್ಕೂ ಕಣ್ಮಿಣುಕೆ
ಬೆಳಕು, ಶರ ಮೆಟ್ಟಿಲು…
ಅರ್ಜುನ ಅಂಬರದಿಂದ
ಶ್ವೇತಗಜವ ಕರೆತಂದ ಕತೆ ಹೇಳಿ
ಅವ್ವ ಹೊಟ್ಟೆ ತುಂಬಿಸುತ್ತಿದ್ದಳು;
ಅಪ್ಪ ಬಾಟಲಿಯ ಜೊತೆ
ಸಂಸಾರವೂಡುತ್ತಿದ್ದ!

ಯಾರನ್ನ ಕೇಳುವುದು? ಮಿಡತೆ
ಹಣತೆಗೆ ಮಾರುಹೋದರೆ?
ನಾಯಿ ಹೊಲಸಿಗೆ ಆಸೆ ಪಟ್ಟರೆ?
ಅವರವರ ಜನುಮ; ಅವರವರ ಇಚ್ಛೆ
ದುಗುಡವಿಲ್ಲದೆ ಹೊದ್ದು ಮಲಗಿದರೂ
ಹೊಟ್ಟೆ ಕೇಳುತ್ತಿರಲಿಲ್ಲ ಮಾತು!

ಬಡತನದ ಹುಟ್ಟು ಕೀಳಲ್ಲ ಮಗನೆ,
ಬೆಳೆದು ನಿಲ್ಲಬೇಕು ಇವರಂತೆ ಅವರಂತೆ
ಸ್ಫೂರ್ತಿ ತುಂಬುವ ಕಥೆಗಳೂ
ಸಪ್ಪೆಯೆನಿಸುತ್ತಿದ್ದವು
ಉಪ್ಪಿಲ್ಲದ ಗಂಜಿ ಕಣ್ಣೆದುರಿದ್ದಾಗ!

ಹರಿದ ಪುಸ್ತಕಕ್ಕೆ ಹಿಟ್ಟೇ ಅಂಟಾಗ ಬೇಕಿತ್ತು;
ಹರಿದ ಬಟ್ಟೆಗೆ ಸೂಜಿಯೇ ನಂಟಾಗ ಬೇಕಿತ್ತು;
ಕಲ್ಲು ಬಗರೆಗಳ ಆಯುವ ಹೊತ್ತಲ್ಲಿ
ಕೈಗಳು ಹೊಂಗೆ ಬೇವಿನ ಹರಳುಗಳ ಹೆಕ್ಕುತ್ತಿದ್ದವು.
ಚಿಲ್ಲರೆ ಕಾಸಿಗೆ ಕಿಸೆ ತೆರೆದುಕೊಳ್ಳುತ್ತಿತ್ತು.

ಯೌವ್ವನದಲ್ಲಿ ಪ್ರೀತಿ ಹುಟ್ಟಿ
ಒಣಕಲ ಬಡಕಲು ದೇಹಕ್ಕೆ
ಹುಡುಗಿಯೊಬ್ಬಳು ಹೇಸಿ ಮಾನ ಕಳೆದಾಗ
ಜಗ ನಿರ್ಜೀವವೆನಿಸಿದರೂ
ಅವ್ವ ಕಿವಿಯಿಂಡುತ್ತಿದ್ದಳು;
ಗೈರುಹಾಜರಿಯಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಳು!

ನನ್ನದೇನೂ ತಪ್ಪಿಲ್ಲ; ನಾನು ನಿರ್ದೋಷಿ!
ಅಪ್ಪನ ದುಡಿಮೆಯ ಫಲವ
ಅನು-ಭೋಗಿಸಲು ಹುಟ್ಟು ಪಡೆದಿಲ್ಲ;
ರಟ್ಟೆಯ ನರ ಹೆಪ್ಪುಗಟ್ಟುವವರೆಗೂ
ದುಡಿದು, ಗುಡಿಸಲಿಗೆ ತೇಪೆಯಾಕಿ ಬದುಕುತ್ತೇನೆ
ತೊಳ್ತೆಕ್ಕೆಗೆ ನಂಬಿಕೆಯಿದ್ದವಳು ಬರಲಿ
ಸ್ವಾಭಿಮಾನ ಸೊಕ್ಕೇಳುತ್ತಿತ್ತು!

ಅಂಬಲಿಯ ರುಚಿಬಲ್ಲವರು;
ಎಲ್ಲಿದ್ದರೂ ಬದುಕ ಕಟ್ಟಬಲ್ಲರು!
ಈಗ ಪ್ರಶ್ನೆಯೆದ್ದಿರುವುದು –
ಇಡ್ಲಿ, ವಡೆ, ಸಾಂಬಾರಿನವರದು!

ಸಪ್ಪೆಯೆನಿಸಿದ ಕತೆಗಳೂ ಇಂದು,
ರುಚಿಸುತ್ತಿವೆ ನನಗೆ!
ಏಕೆಂದರೆ, ನಾನು ಬದುಕುವ ರೀತಿ ಕಲಿತದ್ದು
ಅವ್ವನಿಂದಲೇ ವಿನಃ; ಕುಡುಕ ಅಪ್ಪನಿಂದಲ್ಲ!
ಬರೀ ಇಲ್ಲಗಳ ನಡುವೆಯೇ ಬದುಕಿದ್ದ ಅವ್ವ;
ಈಗ ರುಚಿಸುವ ಸ್ಫೂರ್ತಿದಾಯಕ ಕಥೆ!