ಪಾಂಚಾಲಿ ಸ್ವಗತ

ಗಂಡರೈವರಿಗೂ ಗಂಡೆದೆ ಇತ್ತು!
ಜಗತ್ತೇ ಬಲ್ಲದದನು.
ಬಿಟ್ಟರೆ ಎದೆಯನು ಸೀಳುವ ಕಲಿಗಳು
ಚಿತ್ತವನರಿಯದೆ ತೆಪ್ಪಗೆ ಕೂತರು
ದುರುಳನೊಬ್ಬ ಮುಂದಲೆಗೆ
ಕೈಯಿಟ್ಟು ಸೆಳೆದಾಗ
ಅದೇ ಕೈಗಳು ಸೆರಗಿಗೆ ಜಾರಿದಾಗ!

ಭೀಮ ಹಲ್ಲು ಕಚ್ಚುತ್ತಿದ್ದ; ಆತನಿಗೋ?
ಎಲ್ಲರಿಗಿಂತ ಕೊಂಚ ಅನುರಾಗ
ನನ್ನ ಮೇಲೆ.. ಆದರೂ…
ಪಾಪ! ಅಣ್ಣನಾಜ್ಞೆಯನು ಮೀರದಾದ!

ಆಜ್ಞೆ…?! ಯಮನ ಮಗನ ಕಟ್ಟಾಜ್ಞೆ!
“ಅವನೊಬ್ಬ ತಿಳಿಗೇಡಿ!”
ತಪ್ಪೆನುವಿರಾ ಇದನು?
ಬಾಯಿ ಜಾರಿದ ಮಾತಲ್ಲ!
ಬೇಕಂತಲೇ ನುಡಿದ ತಿರುಳು.

ಅರ್ಜುನ.. ಅಬ್ಬಾ! ಬಿಲ್ವಿದ್ಯೆ ಪ್ರವೀಣ!
ಶಿವನಿಂದ ಪಾಶುಪತಾಸ್ತ್ರ ಪಡೆದವನು.
ಸಕಾಲಕ್ಕೆ ಸಲ್ಲದ ಶಸ್ತ್ರಗಳ
ಒಡೆಯನಿಗೆ ಏನೆನ್ನಬೇಕೋ?

ಭೂತ ಭವಿಷ್ಯಗಳ ಬಲ್ಲವನಂತೆ
ಸಹದೇವ? ದಿವ್ಯಜ್ಞಾನಿ!
ಬಾಯ್ತೆರೆದರೆ ಸಾವಿತ್ತೆ?
ಸಾವೇ ಹೆಚ್ಚಾಯ್ತೆ?
ಸಮರ್ಥಿಸಲು ಸಮಯವಿಲ್ಲ
ಅವನೀಗ ಅಸಹಾಯಕ;
ನಕುಲ? ಪಾಪ ಅಮಾಯಕ!

ಮತ್ಸ್ಯದೇಶದೊಳ್ ಕೀಚಕ ಬೆನ್ನತ್ತಿದಾಗ
ಎಲ್ಲಾ ಎಲ್ಲೆಗಳ ಮೀರಿದವನು
ಕಂಬನಿಯೊಡನೆ ಮಿಡಿದವನು
ಕಲಿಭೀಮ! ನನ್ನ ಬಲಭೀಮ!

ಉಳಿದವರಿಗೇನು ಹಕ್ಕುಂಟು;
ನನ್ನ ಪಕ್ಕದಲ್ಲಿರಲು?
ನನಗೆ ಗಂಡನೋರ್ವನೆ!
ಭೀಮನಷ್ಟೆ! ನಾ ಭೀಮನಿಗಷ್ಟೇ!

ಜಗಕೆ ನಾ ಪಾಂಚಲಿಯಾದರೂ
ಪಾಂಡವೈವರ ಅರ್ಧಾಂಗಿಯಾಗಲಾರೆ,
ನನ್ನನ್ನೇ ನಾನು ಚೂರುಗೊಳಿಸಲಾರೆ
ಏಕೆಂದರೆ
ನನ್ನ ಹೃದಯ ಸದಾ ನಿಷ್ಕಲ್ಮಶ!
ಅನುರಾಗವೂ ಕೂಡ.