ವಾರಿಸ್ ಜಿಬೂತಿಗೆ ಬಂದಾಗ ಸಫಾಳಿಗೆ ಅವಳ ಸಾಂಗತ್ಯ ಸ್ವರ್ಗವನ್ನೇ ಸಿಕ್ಕಿದ ಹಾಗೆ ಮಾಡುತ್ತದೆ. ಹೋಟೆಲಿನಲ್ಲಿ ಸಿಗುವ ಬರ್ಗರ್ ಮತ್ತು ಇತರೇ ಮಾಂಸದ ಅಡುಗೆಗಳು ಅವಳಿಗೆ ತೀರಾ ಕೈಗೆಟುಕದ ವಸ್ತುಗಳಾಗಿದ್ದ ಕಾರಣ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾಳೆ. ಆದರೆ ಅವಳು ಹೋಟೆಲಿನ ಈಜುಕೊಳದಲ್ಲಿ ಈಜುಡುಗೆ ಧರಿಸಿ ಈಜುವುದನ್ನು ನೋಡಿದಾಗ ಅಚಾನಕ್ಕಾಗಿ ಬಂದ ಅವಳ ತಂದೆ ಕ್ರುದ್ಧನಾಗುತ್ತಾನೆ. ಆದರೆ ಹಣ ಅವನ ಬಾಯನ್ನು ಸುಲಭವಾಗಿ ಮುಚ್ಚಿಸುತ್ತದೆ. ನಿಧಾನಕ್ಕೆ ಸಫಾಳ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದ ವಾರಿಸ್ ಸಫಾಳನ್ನು ಕರೆದೊಯ್ಯುವ ಪ್ರಯತ್ನ ಮುಂದುವರೆಸುತ್ತಾರೆ.
ಗಿರಿಧರ್ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ
ನೀವು ‘ವಾರಿಸ್ ಡಯಿರಿ’ಯವರ ಆತ್ಮಕಥೆಯಾದ ‘ಡೆಸರ್ಟ್ ಫ್ಲವರ್ಸ್’ ಅಥವಾ “ಮರುಭೂಮಿಯ ಹೂ” ಕೃತಿಯ ಬಗ್ಗೆ ಕೇಳಿರಬಹುದು. ಆಫ್ರಿಕಾದ ಕೆಲ ಬುಡಕಟ್ಟು ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ಅಮಾನುಷವಾದ ಯೋನಿಛೇಧನಕ್ಕೊಳಗಾದ ಹೆಣ್ಣುಮಗಳೊಬ್ಬಳು ಪ್ರಸಿದ್ಧ ಮಾಡೆಲ್ ಆಗುವ ಅವರ ಜೀವನದ ಕತೆ (ಇದನ್ನು ಡಾ. ಜಗದೀಶ್ ಕೊಪ್ಪ ಅವರು ಕನ್ನಡಾನುವಾದ ಮಾಡಿದ್ದಾರೆ). ಈ ಕೃತಿ ವ್ಯಾಪಕ ಪ್ರಶಂಸೆಗೊಳಗಾಗಿ ಪ್ರಪಂಚದಾದ್ಯಂತ ಜನಪ್ರಿಯವಾಯಿತು. ಮುಂದೆ ಇದನ್ನು ಸಿನಿಮಾ ಮಾಡಿದಾಗ ಅದರಲ್ಲಿ ವಾರಿಸ್ ಡಯಿರಿಯ ಪಾತ್ರ ನಿರ್ವಹಿಸಿದ್ದು ‘ಸಫಾ’ ಅನ್ನುವ ಬಾಲಕಿ. ಆ ಬಾಲಕಿ ಯೋನಿಛೇದನಕ್ಕೆ ಒಳಗಾಗುವ ಅಪಾಯಕ್ಕೆ ಒಳಗಾಗಿ ವಾರಿಸ್ ಅವರಿಂದ ರಕ್ಷಿಸಲ್ಪಡುತ್ತಾಳೆ. ಅದರ ಕುರಿತು ವಾರಿಸ್ ಅವರು ‘Saving Safa’ ಅನ್ನೋ ಪುಸ್ತಕ ಬರೆದಿದ್ದು, ಅದನ್ನು ಪ್ರಸಾದ್ ನಾಯ್ಕ ಕನ್ನಡಾನುವಾದ ಮಾಡಿದ್ದಾರೆ. ಪುಸ್ತಕದ ಬಗ್ಗೆ ಹೇಳುವ ಮುನ್ನ ಯೋನಿಛೇದನ ಕುರಿತು ತಿಳಿದುಕೊಳ್ಳಬೇಕಾಗುತ್ತದೆ.
ಸರ್ಕಮ್ನಿಶನ್ ಅಥವಾ ಕನ್ನಡದಲ್ಲಿ ಮುಂಜಿ ಎಂದು ಕರೆಯಲ್ಪಡುವ ಕ್ರಿಯೆ ಅಂದರೆ ಗಂಡುಮಕ್ಕಳ ಜನನಾಂಗದ ಮುಂದೊಗಲನ್ನು ಕತ್ತರಿಸಿ ಉಳಿದ ಚರ್ಮವನ್ನು ಹಿಂದೊತ್ತುವುದು. ಮುಸ್ಲಿಮರಿಗೆ ಮತ್ತು ಯಹೂದಿ ಧರ್ಮದವರಿಗೆ ಇದು ಒಂದು ಕಡ್ಡಾಯವಾದ ಧಾರ್ಮಿಕ ವಿಧಿ. ಅದನ್ನು ಮಾಡುವಾಗ ಸ್ವಚ್ಛತೆ ಕಾಪಾಡಬೇಕು, ಮಾಡಿದ ನಂತರ ಗಾಯಕ್ಕೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಅನ್ನೋ ಕೆಲ ಮುಂಜಾಗ್ರತಾ ಕ್ರಮಗಳನ್ನು ಬಿಟ್ಟರೆ ಎಂದಿಗೂ ಅಪಾಯಕಾರಿಯಲ್ಲದ ಪದ್ಧತಿ. ಅದೂ ಅಲ್ಲದೇ ಕೆಲವು ಸೋಂಕಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯಕವೆಂದೂ ಹೇಳುತ್ತಾರೆ. ಕೆಲವೊಮ್ಮೆ ವೈದ್ಯರ ಸಲಹೆಯ ಮೇರೆಗೆ ಧಾರ್ಮಿಕ ನಿಬಂಧನೆಗಳಿಗೆ ಹೊರತಾದವರು ಕೂಡಾ ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ.
ಆದರೆ ಹೆಣ್ಣುಮಕ್ಕಳಿಗೆ ಮಾಡುವ ಯೋನಿಛೇದನ ಆ ರೀತಿಯದ್ದಲ್ಲ. ಚಂದ್ರನಾಡಿ ಅಥವಾ ಕ್ಲಿಟರಸ್ ಅನ್ನು ಕತ್ತರಿಸುವ ಪದ್ಧತಿ ಅತ್ಯಂತ ಕ್ರೂರ ಮತ್ತು ಅಮಾನುಷವಾದುದು. ಇದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಕೆಲ ಸಮರ್ಥಕರು ಇದು ಮನೋನಿಗ್ರಹಕ್ಕೆ ಕಾರಣವಾಗುತ್ತದೆ ಎಂಬ ನೆಪ ಕೊಡುತ್ತಾರಷ್ಟೇ. ಆಫ್ರಿಕಾದ ಜಿಬೂತಿ, ಸೊಮಾಲಿಯಾ, ಸುಡಾನ್ ಇತ್ಯಾದಿ ದೇಶಗಳ ಮತ್ತು ಇಂಡೋಶಿಯಾದ ಕೆಲ ಸಮುದಾಯಗಳ ಮತ್ತು ಇತರೇ ಕೆಲವೇ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಬಿಟ್ಟರೆ ಉಳಿದ ಇಸ್ಲಾಮಿಕ್ ಪಂಡಿತರು ಇದನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಇದರ ವಿರೋಧಿ ನಿರ್ಷಯಗಳು ಕೂಡಾ ಧಾರ್ಮಿಕ ಸಭೆಗಳಲ್ಲಿ ತೆಗೆದುಕೊಳ್ಳಲ್ಪಟ್ಟಿವೆ. ಆಫ್ರಿಕದ ಕೆಲ ದೇಶಗಳಲ್ಲಿ, ಇಂಡೋನೇಶಿಯಾ ಮತ್ತು ಯೆಮೆನ್ನಿನ ಕೆಲವೆಡೆ ಬಿಟ್ಟು ಇದು ಚಾಲ್ತಿಯಲ್ಲಿ ಇಲ್ಲ ಕೂಡಾ. ಭಾರತದಲ್ಲಿ ಕೆಲವೆಡೆ ಈ ಪ್ರಕ್ರಿಯೆ ನಡೆಸೋ ಬಗ್ಗೆ ಸುದ್ದಿಗಳು ಬಂದರೂ ಸ್ಪಷ್ಟವಾದ ಸಾಕ್ಷಿ ಸಿಕ್ಕಿದ್ದನ್ನು ಓದಿಲ್ಲ. ಈ ಬಗ್ಗೆ ತಿಳುವಳಿಕೆಯುಳ್ಳವರ ವಿಚಾರಿಸಿದಾಗ ಭಾರತದ ಧಾರ್ಮಿಕ ವಿದ್ವಾಂಸರಲ್ಲಿ ಇದೊಂದು ಚರ್ಚೆಯ ವಿಷಯ ಕೂಡ ಆಗಿರಲಿಲ್ಲ ಎಂದು ತಿಳಿದು ಬಂದಿತು. ಈಗೀಗ ಆಫ್ರಿಕನ್ ದೇಶಗಳಲ್ಲಿ ಮತ್ತು ಇಂಡೀನೇಶಿಯಾದಲ್ಲಿ ಕೂಡಾ ಇದರ ನಿರ್ಮೂಲನೆಗೆ ವ್ಯಾಪಕ ಹೋರಾಟಗಳು ನಡೆಯುತ್ತಿವೆ.
ಮೇಲೆ ಹೇಳಿದಂತೆ ಸ್ವತಃ ಯೋನಿಛೇದನಕ್ಕೆ ಒಳಗಾದವರು ವಾರಿಸ್ ಡಯಿರಿ. ಅವರ ಜೀವನ ಕಥೆ ಚಲನಚಿತ್ರವಾದಾಗ ಲೇಖಕಿ ಬಾಲಕಿಯಾಗಿದ್ದಾಗಿನ ಪಾತ್ರ ನಿರ್ವಹಿಸಿದ್ದು ಸಫಾ ಅನ್ನುವ ಜಿಬೂತಿ ದೇಶದ ಬಾಲಕಿ (ಜಿಬೂತಿ ಆಫ್ರಿಕಾದ ಪೂರ್ವ ಕರಾವಳಿಯ, ಆಫ್ರಿಕಾದ ಕೊಂಬು ಎಂದು ಕರೆಯಲ್ಪಡುವ ಪ್ರದೇಶದಲ್ಲಿದೆ. ಅತ್ಯಂತ ವ್ಯೂಹಾತ್ಮಕ ಜಾಗದಲ್ಲಿ ಇರುವ ಕಾರಣ ವಿಶ್ವದ ಅನೇಕ ರಾಜಕೀಯ ಶಕ್ತಿಗಳ ಮೇಲಾಟಕ್ಕೆ ಇದು ಒಳಗಾಗಿದೆ, ಸಮಯ ಸಿಕ್ಕರೆ ಈ ದೇಶದ ಬಗ್ಗೆ ತಡಕಾಡಿ. ಕುತೂಹಲಕರ ಅಂಶಗಳು ಸಿಗುತ್ತವೆ). ಅವಳು ಸಿನಿಮಾಗೆ ಆಯ್ಕೆಯಾಗಿದ್ದು ಕೂಡಾ ಒಂದು ಆಶ್ಚರ್ಯ. ಸಫಾಳ ತಾಯಿ ಅವಳ ನೋಡಿಕೊಳ್ಳಲು ನೆರೆಮನೆಯಾಕೆಯ ಹತ್ತಿರ ಕೊಟ್ಟಾಗ ಅವಳು ತನ್ನ ಮಕ್ಕಳೊಟ್ಟಿಗೆ ಇವಳನ್ನೂ ಕರೆತರುತ್ತಾಳೆ. ಆದರೆ ಸಫಾ ಆಯ್ಕೆಯಾಗುತ್ತಾಳೆ. ಅವಳನ್ನು ಸಿನಿಮಾಕ್ಕೆ ತೆಗೆದುಕೊಳ್ಳುವಾಗ ಮನೆಯವರೊಟ್ಟಿಗೆ ಒಂದು ಒಪ್ಪಂದವಾಗಿರುತ್ತದೆ. ಅದರ ಪ್ರಕಾರ ಅವಳ ಕುಟುಂಬ ಯಾವುದೇ ಕಾರಣಕ್ಕೆ ಸಫಾಳನ್ನು ಎಫ್.ಜಿ.ಎಂ ( Female Genital Mutilation) ಪ್ರಕ್ರಿಯೆಗೆ ಒಳಪಡಿಸಬಾರದು ಮತ್ತು ಅದಕ್ಕೆ ಪ್ರತಿಯಾಗಿ ಸಫಾ ಒಂದು ಪ್ರಾಯಕ್ಕೆ ಬರುವವರೆಗೆ ಅವರ ಮನೆಯವರಿಗೆ ಪ್ರತಿ ತಿಂಗಳೂ ಒಪ್ಪಂದದಲ್ಲಿರುವಷ್ಟು ಆಹಾರ ಕೊಡಬೇಕು. ಅಂದರೆ ಅಕ್ಕಿ, ಪಾಸ್ತಾ, ಹಿಟ್ಟು, ಚಹಾಪುಡಿ, ಸಕ್ಕರೆ, ಬಿಸ್ಕತ್ತುಗಳು, ಮೀನು, ಇಂಧನ ಮೊದಲಾದ ವಸ್ತುಗಳು. ಅದಲ್ಲದೇ ಸಫಾಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳಬೇಕು. ಕೆಲ ಹಂತದ ಮಾತುಕತೆಯ ನಂತರ ಹಣದ ಆಸೆಗೆ ಅವಳ ಕುಟುಂಬ ಇದನ್ನು ಒಪ್ಪಿಕೊಂಡರೂ ಅದನ್ನು ವರ್ಷಾನುಗಟ್ಟಲೆ ಪಾಲಿಸುವ ಯಾವುದೇ ನಂಬಿಕೆ ವಾರಿಸ್ ಡಯಿರಿ ಅವರಿಗೆ ಇರುವುದಿಲ್ಲ.
ಕೆಲ ಸಮರ್ಥಕರು ಇದು ಮನೋನಿಗ್ರಹಕ್ಕೆ ಕಾರಣವಾಗುತ್ತದೆ ಎಂಬ ನೆಪ ಕೊಡುತ್ತಾರಷ್ಟೇ. ಆಫ್ರಿಕಾದ ಜಿಬೂತಿ, ಸೊಮಾಲಿಯಾ, ಸುಡಾನ್ ಇತ್ಯಾದಿ ದೇಶಗಳ ಮತ್ತು ಇಂಡೋಶಿಯಾದ ಕೆಲ ಸಮುದಾಯಗಳ ಮತ್ತು ಇತರೇ ಕೆಲವೇ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಬಿಟ್ಟರೆ ಉಳಿದ ಇಸ್ಲಾಮಿಕ್ ಪಂಡಿತರು ಇದನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ.
ಅದಕ್ಕೆ ಅವರಿಗೆ ತೋಚಿದ ಒಂದೇ ಉಪಾಯ ಜಿಬೂತಿಗೆ ಬಂದು ಸಫಾಳನ್ನು ಜೊತೆಗೆ ಕರೆದುಕೊಂಡು ಹೋಗಿ ಯುರೋಪಿನ ಸುರಕ್ಷಿತ ವಾತಾವರಣದಲ್ಲಿ ಬೆಳೆಸುವುದು. ಆದರೆ ಅದು ಸುಲಭದ ಕೆಲಸವಾಗಿರಲಿಲ್ಲ. ಅರಾಜಕತೆ, ಭ್ರಷ್ಟಾಚಾರ ತುಂಬಿದ ದೇಶ. ಅತಿಯಾದ ಪುರುಷ ಪ್ರಾಧಾನ್ಯದ ದೇಶ. ಅನೇಕ ಮೂಢನಂಬಿಕೆಗಳು. ಇಂತಹ ನಾಡಿನಿಂದ ಸಫಾಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಸುಲಭದ ಕೆಲಸವಾಗಿರಲಿಲ್ಲ. ಇವೆಲ್ಲದರ ನಡುವೆ ಬೇಜವಾಬ್ದಾರಿ ನಡುವಳಿಕೆಯುಳ್ಳ ಅವಳ ತಂದೆ.
ವಾರಿಸ್ ಜಿಬೂತಿಗೆ ಬಂದಾಗ ಸಫಾಳಿಗೆ ಅವಳ ಸಾಂಗತ್ಯ ಸ್ವರ್ಗವನ್ನೇ ಸಿಕ್ಕಿದ ಹಾಗೆ ಮಾಡುತ್ತದೆ. ಹೋಟೆಲಿನಲ್ಲಿ ಸಿಗುವ ಬರ್ಗರ್ ಮತ್ತು ಇತರೇ ಮಾಂಸದ ಅಡುಗೆಗಳು ಅವಳಿಗೆ ತೀರಾ ಕೈಗೆಟುಕದ ವಸ್ತುಗಳಾಗಿದ್ದ ಕಾರಣ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾಳೆ. ಆದರೆ ಅವಳು ಹೋಟೆಲಿನ ಈಜುಕೊಳದಲ್ಲಿ ಈಜುಡುಗೆ ಧರಿಸಿ ಈಜುವುದನ್ನು ನೋಡಿದಾಗ ಅಚಾನಕ್ಕಾಗಿ ಬಂದ ಅವಳ ತಂದೆ ಕ್ರುದ್ಧನಾಗುತ್ತಾನೆ. ಆದರೆ ಹಣ ಅವನ ಬಾಯನ್ನು ಸುಲಭವಾಗಿ ಮುಚ್ಚಿಸುತ್ತದೆ. ನಿಧಾನಕ್ಕೆ ಸಫಾಳ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದ ವಾರಿಸ್ ಸಫಾಳನ್ನು ಕರೆದೊಯ್ಯುವ ಪ್ರಯತ್ನ ಮುಂದುವರೆಸುತ್ತಾರೆ. ಶ್ರಮ ಹಾಕಿದ ನಂತರ ವಾರಿಸ್ಸರ ಡೆಸರ್ಟ್ ಫ್ಲವರ್ ಪ್ರತಿಷ್ಟಾನದ ಪ್ರತಿನಿಧಿ ಸೋಫಿ ವಾರಿಸ್, ಅವಳ ತಂದೆ ಇದ್ರಿಸ್ ಮತ್ತು ಯೋನಿಛೇದನಕ್ಕೊಳಗಾದ ಮತ್ತೊಬ್ಬ ಹೆಣ್ಣುಮಗಳು ಇನಾಬಳನ್ನು ಕರೆತರಲು ಯಶಸ್ವಿಯಾಗುತ್ತಾಳೆ.
ಆದರೆ ಪರಮ ಮೊಂಡನಾಗಿದ್ದ ಇದ್ರಿಸನನ್ನು ನಿಭಾಯಿಸುವುದೇ ದೊಡ್ಡ ಕಷ್ಟದ ಕೆಲಸವಾಗಿರುತ್ತದೆ. ಆದರೆ ಸಮಯ ಕಳೆದಂತೆ ಇದ್ರಿಸ್ ಬದಲಾಗುವ ಪರಿ ಮಾತ್ರ ಆಶ್ಚರ್ಯಕರವಾದುದು. ಒಮ್ಮೆ ಹೊರಜಗತ್ತನ್ನು ನೋಡುವ ಅವಕಾಶ ಪಡೆದ ವಿಚಾರಗಳು ನಿಧಾನಕ್ಕೆ ಬದಲಾಗುತ್ತಾ ಸಾಗುತ್ತವೆ. ಮುಂದೆ ಅವನು ಯೋನಿಛೇದನದ ಪ್ರಬಲ ವಿರೋಧಿಯಾಗಿ ಬದಲಾಗುತ್ತಾನೆ.
ಹೀಗೆ ಎಲ್ಲಾ ಅಡೆತಡೆಗಳನ್ನು ಸಫಾ ಹೇಗೆ ದಾಟುತ್ತಾಳೆ ಅಥವಾ ವಾರಿಸ್ ಡಯಿರಿಯಿಂದ ದಾಟಿಸಲ್ಪಟ್ಟು ಹೇಗೆ ಸುರಕ್ಷಿತ ಸ್ಥಳಕ್ಕೆ ಬಂದು ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ ಅನ್ನುವುದನ್ನು ಅರಿಯಲು ನೀವು ಪುಸ್ತಕವನ್ನೇ ಓದಬೇಕು. ಇದು ನಿಮ್ಮನ್ನು ಒಂದು ಕ್ರೂರ ಸಂಪ್ರದಾಯದ ಬಗೆಗೆ ಆಳವಾದ ಚಿಂತನೆಗೆ ಹಚ್ಚುತ್ತದೆ. ಅದೇ ರೀತಿ ಜಿಬೂತಿ ಎಂಬ ದೇಶದ ಬಗ್ಗೆ ಒಂದು ಚಿಕ್ಕದಾದ ಚಿತ್ರಣವನ್ನೂ ಕೊಡುತ್ತದೆ.
ಆದರೆ ಆ ದೇಶಗಳ ಎಲ್ಲಾ ಹೆಣ್ಣುಮಕ್ಕಳು ಸಫಾಳಷ್ಟು ಅದೃಷ್ಟವಂತರಲ್ಲ. ಲಕ್ಷಗಟ್ಟಲೆ ಹೆಣ್ಣುಮಕ್ಕಳ ಜೀವ ಈ ಪದ್ಧತಿಯಿಂದ ನಲುಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಡೆಸರ್ಟ್ ಫ್ಲವರ್ ಸೇರಿದಂತೆ ಅನೇಕ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಸಂಘಟನೆಗಳು ಇದನ್ನು ತೊಲಗಿಸಲು ಹೋರಾಟ ಮಾಡುತ್ತಾ ಇದ್ದರೂ ಕೂಡಾ ಸಾಗಬೇಕಾದ ದಾರಿ ಇನ್ನೂ ದೂರವೇ ಇದೆ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಈ ಕ್ರೂರ ಪದ್ಧತಿ ಇಲ್ಲ. ಆದರೆ ಈ ರೀತಿಯ ಸಂಗತಿಗಳ ಅರಿವು ನಮ್ಮನ್ನು ಸಾಮಾಜಿಕ ಅನಿಷ್ಟಗಳೆಡೆಗೆ ಸೂಕ್ಷ್ಮವಾದ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಲು ಪ್ರೇರೇಪಿಸುತ್ತದೆ. ನಮ್ಮ ಸಮಾಜದಲ್ಲಿನ ಬೇರೆ ಕೆಡುಕುಗಳ ಬಗೆಗೆ ಸರಿಯಾದ ದೃಷ್ಟಿಕೋನದಲ್ಲಿ ಯೋಚನೆ ಮಾಡಲು ಪರೋಕ್ಷವಾಗಿ ಪ್ರೇರೇಪಣೆ ಕೊಡುತ್ತದೆ.
ಪ್ರಸ್ತುತ ಪುಸ್ತಕವನ್ನು ಅನುವಾದಿಸಿದ ದಕ್ಷಿಣ ಕನ್ನಡದ ಕಿನ್ನಿಗೋಳಿಯ ಪ್ರಸಾದ್ ನಾಯ್ಕ್ ದೆಹಲಿಯಲ್ಲಿ ಕೇಂದ್ರ ಸರಕಾರದ ಉದ್ದಿಮೆಯೊಂದರಲ್ಲಿ ಇಂಜಿನಿಯರ್ ಆಗಿದ್ದಾರೆ. ಅವರಿಗೆ ಅಂಗೋಲಾದಲ್ಲಿ ಸೇವೆ ಸಲ್ಲಿಸೋ ಅವಕಾಶ ಸಿಕ್ಕಾಗ ಬರೆದ ವಿಶಿಷ್ಟ ಪ್ರವಾಸ ಕಥನ ‘ಹಾಯ್ ಅಂಗೋಲಾ’ ಮೂಲಕ ಪರಿಚಿತರು. ಅತ್ಯಂತ ಸರಳವಾಗಿ, ಸುಂದರವಾಗಿ ಮತ್ತು ಆಳವಾಗಿ ಬರೆಯಬಲ್ಲರು. ಅವರು ಇದನ್ನು ಅನುವಾದ ಮಾಡುತ್ತಿದ್ದಾರೆ ಅಂದಾಗ ಕುತೂಹಲವಿತ್ತು. ಈ ಪುಸ್ತಕವನ್ನು ಓದುಗರಿಗೆ ಚೂರೂ ತೊಡಕಾಗದಂತೆ ಕನ್ನಡಕ್ಕೆ ತಂದಿದ್ದಾರೆ. ನನ್ನ ನಿರೀಕ್ಷೆಗಿಂತಲೂ ಚಂದದ ಅನುವಾದ ಮಾಡಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಅಮೂಲ್ಯ ಕೃತಿಗಳು ಬರುವ ಮತ್ತು ಅನುವಾದಗೊಳ್ಳುವ ನಿರೀಕ್ಷೆಯಿದೆ.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.