ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಗದ್ದೆ ನಾಟಿಯ ಕುರಿತ ಬರಹ ನಿಮ್ಮ ಓದಿಗೆ
ಮಲೆನಾಡಿಗೂ ಅಕ್ಕಿಗೂ ಅವಿನಾಭಾವ ಸಂಬಂಧವೆನ್ನಬಹುದು. ಮಲೆನಾಡಿನ ಹವಾಮಾನಕ್ಕನುಗುಣವಾಗಿ ಇಲ್ಲಿನ ಮುಖ್ಯ ಬೆಳೆ ಭತ್ತ. ಹೋಗುವ ದಾರಿಯ ಇಕ್ಕೆಲಗಳಲ್ಲಿ ಕಂಗೊಳಿಸುವ ಭತ್ತದ ಗದ್ದೆಗಳ ಗಿಳಿ ಎದೆ ಬಣ್ಣದ ನೋಟಕ್ಕೆ ಮಾರು ಹೋಗದೇ ಇರುವವರಾರು! ಬೆಳಗ್ಗಿನಿಂದ ರಾತ್ರಿಯವರೆಗೆ ಅಕ್ಕಿಯಿಂದ ಮಾಡಿದ ಆಹಾರವನ್ನೇ ಸೇವಿಸುವ ಮಲೆನಾಡಿಗರ ಜೀವನಾಡಿ ಭತ್ತದ ಕೃಷಿ. ಕಡುಬು, ರೊಟ್ಟಿ, ದೋಸೆ, ಇಡ್ಲಿ, ಅನ್ನ ಹೀಗೆ ಎಲ್ಲವೂ ಅಕ್ಕಿಯಿಂದಲೇ ತಯಾರಾಗುವ ಅಡುಗೆಗಳು. ಅನ್ನ ಬಲವೇ ತನ್ನ ಬಲ ಎಂದು ನಂಬಿರುವವರು ಮಲೆನಾಡಿನ ಜನರು. ಇತ್ತೀಚೆಗೆ ಚಪಾತಿ, ಮುದ್ದೆಗಳನ್ನು ಮಾಡಿ ಸೇವಿಸುತ್ತಾರಾದರೂ ಹಳ್ಳಿಗರಿಗೆ, ಸಾಂಪ್ರದಾಯಿಕ ಅಡುಗೆ ಪ್ರಿಯರಿಗೆ ತೆಳ್ಳನ ದೋಸೆ, ಕಡುಬು, ರೊಟ್ಟಿ ಕೊಡುವ ರುಚಿ ಮತ್ತು ಆರೋಗ್ಯವನ್ನು ಬೇರೆ ಆಹಾರಗಳು ಕೊಡಲಾರವು.
ಭತ್ತವನ್ನು ಬೆಳೆಯುವ ವಿಧಾನ ಹೇಗೆ, ಮಲೆನಾಡಿನ ಕೃಷಿಯ ವಿಶೇಷತೆಗಳೇನು ಎಂಬುದನ್ನು ತಿಳಿಯೋಣ ಬನ್ನಿ.
ಮುಂಗಾರು ಆರಂಭಕ್ಕೂ ಮೊದಲೇ ಬಿದ್ದ ಮಳೆಯಿಂದಾಗಿ ಖಾಲಿ ಇರುವ ಭತ್ತದ ಗದ್ದೆಗಳಲ್ಲಿ ಹಸಿರು ಹುಲ್ಲು ಬೆಳೆದಿರುತ್ತದೆ. ಮೊದಲಿಗೆ ಈ ಗದ್ದೆಗಳಿಗೆ ಗೊಬ್ಬರ ಹಾಕಲಾಗುತ್ತದೆ. ಗದ್ದೆಯ ಅಂಚಿನಲ್ಲಿ ಬೆಳೆದಿರುವ ಕಳೆಗಿಡಗಳನ್ನು ಸವರುತ್ತಾರೆ. ಇದನ್ನು ಅಡೆ ಸೌರುವುದು ಎನ್ನುತ್ತಾರೆ. ನಂತರ ಎತ್ತು ಅಥವಾ ಟಿಲ್ಲರ್ ಬಳಸಿ ಹೂಟಿ ಮಾಡಲಾಗುತ್ತದೆ. ಅಂದರೆ ಭತ್ತದ ಬೆಳೆಗೆ ಮಣ್ಣನ್ನು ಹದಗೊಳಿಸುವುದು. ಈಗ ಗದ್ದೆಯ ಕೆಂಪು ಮಣ್ಣು ಮೇಲೆ ಬಂದಿರುತ್ತದೆ. ನಂತರ ಗದ್ದೆಯ ಅಂಚನ್ನು ಕಡಿದು ಸಮಗೊಳಿಸುತ್ತಾರೆ.
ಗದ್ದೆಯ ಒಂದು ಬದಿಗೆ ಬೀಜ ಬಿತ್ತಿ ಭತ್ತದ ಸಸಿಗಳನ್ನು ಒತ್ತೊತ್ತಾಗಿ ಬೆಳೆಸಿರುತ್ತಾರೆ. ಇದನ್ನು ಅಗಡಿ ಎನ್ನುತ್ತಾರೆ.
ನಂತರ ಕೆಸರು ಗದ್ದೆಯನ್ನು ಸಮತಟ್ಟು ಮಾಡಲಾಗುತ್ತದೆ. ಇದಕ್ಕೆ ನಳ್ಳಿ ಹೊಡೆಯುವುದು ಎನ್ನುತ್ತಾರೆ. ನಳ್ಳಿ ಎಂಬುದು ಉದ್ದವಾದ ಮರದ ಹಲಗೆ ಹೊಂದಿರುವ ಒಂದು ಸಾಧನ. ಹೂಟಿ ಮಾಡಿದ ನೆಲದ ಮಣ್ಣು ಉಬ್ಬು ತಗ್ಗುಗಳಿಂದ ಕೂಡಿದ್ದು ಅದನ್ನು ನೆಟ್ಟಿಗೆ ಸಹಾಯಕವಾಗುವಂತೆ ಸಮತಟ್ಟು ಮಾಡಲು ನಳ್ಳಿ ಬಳಸುತ್ತಾರೆ. ಹಿಂದೆ ಎತ್ತುಗಳನ್ನು ಬಳಸಿ ಹೂಟಿ ಮಾಡುತ್ತಿದ್ದರಿಂದ ಇದಕ್ಕಾಗಿ ಬಳಸುವ ನೊಗ ಮತ್ತು ನೇಗಿಲು ಪ್ರತಿ ಮನೆಗಳಲ್ಲಿ ಇರುತ್ತಿತ್ತು. ಕಾಲ ಬದಲಾದಂತೆ ಇವುಗಳ ಸ್ಥಾನವನ್ನು ಆಧುನಿಕ ಕೃಷಿ ಸಲಕರಣೆಗಳು ಆಕ್ರಮಿಸಿವೆ. ಈ ಎತ್ತುಗಳಿಗೆ ಆಹಾರವಾಗಿ ಕೊಡಲು ಹುರುಳಿಯನ್ನು ಬೇಯಿಸುತ್ತಿದ್ದರು. ಇದನ್ನು ಬೇಯಿಸಿದ ನೀರೇ ಹುರುಳಿಕಟ್ಟು. ಮಳೆಗಾಲದಲ್ಲಿ ಹುರುಳಿ ಕಟ್ಟಿನ ಘಮ ತೇಲಿ ಬಂದರೆ ಆಹಾ ಎಷ್ಟು ಸುಂದರ ಅನುಭೂತಿ. ಇದಿಷ್ಟು ಭತ್ತದ ನಾಟಿಯ ಪೂರ್ವ ತಯಾರಿ. ನಾಟಿಗೆ ಮಲೆನಾಡಿನಲ್ಲಿ ನೆಟ್ಟಿ ಮಾಡುವುದು ಎನ್ನುತ್ತಾರೆ.
ಈ ನೆಟ್ಟಿಗೆ ವಾರದ ಮೊದಲೇ ಮನೆಮನೆಗೆ ಹೋಗಿ ಹೆಣ್ಣಾಳುಗಳನ್ನು ಕರೆಯಲಾಗುತ್ತದೆ. ಹದಿನೈದರಿಂದ ಇಪ್ಪತ್ತು ಹೆಣ್ಣಾಳುಗಳು ನೆಟ್ಟಿಗೆ ಬೇಕಾಗುತ್ತಾರೆ. ಗೊಬ್ಬರ ಹಾಕುವುದು, ಹೂಟಿ, ನಳ್ಳಿ ಹೊಡೆಯುವುದು ಗಂಡಾಳುಗಳಾದರೆ, ಅಡೆ ಸವರುವುದು, ಸಸಿ ಕೀಳುವುದು, ಹೊರುವುದು, ನೆಟ್ಟಿ ನೆಡುವುದು ಹೆಣ್ಣಾಳುಗಳ ಕೆಲಸ.
ನೆಟ್ಟಿಯ ದಿನವೆಂದರೆ ಮನೆಯ ಒಂದು ಹಬ್ಬದಷ್ಟೇ ಸಂಭ್ರಮ ಮನೆ ಮಾಡಿರುತ್ತದೆ. ಮೊದಲ ದಿನ ಹೆಣ್ಣಾಳುಗಳು ಬಂದು ಅಗಡಿಯಿಂದ ಭತ್ತದ ಸಸಿಗಳನ್ನು ಕಿತ್ತು ಅವುಗಳನ್ನು ಕತ್ತರಿಸಿ ಕಟ್ಟಿ ಗದ್ದೆಗೆ ತಂದು ಹಾಕಿರುತ್ತಾರೆ. ನೆಟ್ಟಿಯ ದಿನ ಬಹಳ ಶಿಸ್ತು ಬದ್ಧವಾಗಿ ಕೆಸರು ಗದ್ದೆಯಲ್ಲಿ ಸಸಿಗಳನ್ನು ನೆಡುತ್ತಾರೆ. ಈ ಸುಂದರ ದೃಶ್ಯ ನೋಡಲು ಮನೋಹರವೆನಿಸುತ್ತದೆ. ಸಮಯದಲ್ಲಿ ಹೆಂಗಳೆಯರ ಹಾಡು, ಕಥೆ, ಹರಟೆಗಳಿಂದ ಗದ್ದೆಗಳು ಕಳೆಗಟ್ಟುತ್ತವೆ. ನೆಟ್ಟಿಯಿರುವ ಮನೆಗಳಲ್ಲಿ ವಿಶೇಷವಾಗಿ ಮಾಂಸದ ಸಾರು, ಕಡುಬು ತಯಾರಾಗುತ್ತಿರುತ್ತದೆ. ಅಡುಗೆ ಸಿದ್ಧವಾದ ಮೇಲೆ ಗದ್ದೆಗೆ ತೆಗೆದುಕೊಂಡು ಬರಲಾಗುತ್ತದೆ. ಎಲ್ಲರೂ ಗದ್ದೆಯ ಅಂಚಿನಲ್ಲಿ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡುತ್ತಾರೆ. ಚಿಕ್ಕ ವಿರಾಮ ತೆಗೆದುಕೊಂಡು ಮತ್ತೆ ನೆಟ್ಟಿ ಮಾಡಲು ತೊಡಗುತ್ತಾರೆ.
ಹೀಗೆ ಮಲೆನಾಡಿನ ಭತ್ತದ ಕೃಷಿ ಹಲವು ಹಂತಗಳಲ್ಲಿ ಸಾಗಿ ಬರುವ ಸುಂದರ ಪ್ರಕ್ರಿಯೆ. ಇದು ಮಲೆನಾಡಿನ ಅಸ್ಮಿತೆಯೂ ಹೌದು. ಆದರೆ ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಗಳು ಕಣ್ಮರೆಯಾಗುತ್ತಿರುವುದು ದುರದೃಷ್ಟಕರ. ಗದ್ದೆಗಳು ಅಡಿಕೆ ತೋಟಗಳಾಗಿ, ಅಕೇಶಿಯಾ, ನೀಲಗಿರಿ, ರಬ್ಬರ್ ನೆಡುತೋಪುಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಅತಿಯಾದ ಮಳೆಯಿಂದ ಆಗುವ ಬೆಳೆಹಾನಿ, ಆಳುಗಳ ಕೊರತೆ, ಭತ್ತದ ಕೃಷಿಯ ಕಠಿಣತೆಯನ್ನು ನಿಭಾಯಿಸುವ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಿರುವುದು ಇವೆಲ್ಲಾ ಕಾರಣಗಳಿಂದ ಮಲೆನಾಡಿನಲ್ಲಿ ಭತ್ತದ ಗದ್ದೆಗಳನ್ನು ಕಾಣುವುದು ಅಪರೂಪವಾಗುತ್ತಿದೆ. ಹೂಟಿ ಹೊಡೆಯುವ ಗಂಡಾಳಿನ ಹಾ…. ಹೂ…. ಉದ್ಗಾರ, ಹೆಣ್ಣಾಳುಗಳ ಕೌಶಲ್ಯಯುತ ಕರಗಳಿಂದ ಚುರುಕು ಚುರುಕಾಗಿ ಮೂಡಿ ಬರುವ ನೆಟ್ಟಿಯ ಸಂಭ್ರಮ ಅಳಿಯದೇ ಉಳಿಯುವಂತಾಗಬೇಕು.
ವಾಣಿಜ್ಯ ಬೆಳೆಗಳು ಲಾಭದಾಯಕವಾದರೂ ನಮ್ಮ ಮುಖ್ಯ ಆಹಾರ ಬೆಳೆ ಭತ್ತ. ಅದನ್ನು ನಾವೇ ಬೆಳೆದು ನಾವೇ ಉಣ್ಣುವುದು ಒಂದು ಸಂತಸ.
ಗದ್ದೆ ಅಂಚಿನ ದಾರಿಯಲ್ಲಿ ನಡೆಯುತ್ತ ಹಸಿರು ತುಳುಕುವ ಸಸಿಗಳನ್ನು ನೋಡುವ ಅದೃಷ್ಟ ಮುಂದಿನ ಪೀಳಿಗೆಗೂ ಸಿಗಲಿ ಎಂಬುದೇ ಆಶಯ.

ಹಸಿರು ತುಳುಕುವ ಸಸಿಗಳನ್ನು ನೋಡುವ ಅದೃಷ್ಟ ಮುಂದಿನ ಪೀಳಿಗೆಗೂ ಸಿಗಲಿ.
ಖಂಡಿತ.
ಈಗಿನ ಜೀವಿಗಳಿಗೂ ಸಿಗಬೇಕು.
ಮಲೆನಾಡಿನ ಭತ್ತದ ಗದ್ದೆಯ ಅಂಚಿನಲ್ಲಿ ಆತ್ಮೀಯರೊಡನೆ ನಡೆದಾಡುವುದೇ ನಮಗೆಲ್ಲ ಆನಂದದ ಅನುಭೂತಿ. ಪ್ರತಿ ವರ್ಷ ಮಳೆಗಾಲ ನಮಗೆಲ್ಲ ಖುಷಿಯ ಕಾಲ. ಭತ್ತದ ನಾಟಿಯ ಬಗ್ಗೆ ಚೆನ್ನಾದ ವಿವರಣೆ ಟೀಚರ್. 🙏🙏