ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿಯಲ್ಲಿ ಮಲೆನಾಡಿನ ಮಕ್ಕಳ ರಜಾದಿನಗಳ ಕುರಿತ ಬರಹ ನಿಮ್ಮ ಓದಿಗೆ
ಬೇಸಿಗೆ ರಜೆ ಎಂಬ ಪದ ಕೇಳಿದ ಕೂಡಲೇ ಬಾಲ್ಯದ ಆ ಸುಂದರ ದಿನಗಳ ಸವಿನೆನಪು ಮನದ ಪುಟಗಳಲ್ಲಿ ನವಿರಾಗಿ ತೆರೆದುಕೊಳ್ಳುತ್ತದೆ. ಹಚ್ಚ ಹಸುರಿನ ಕಾನನದ ನಡುವಿನ ಮಲೆನಾಡಿನ ಮಕ್ಕಳಾದ ನಮಗೆ ಬೇಸಿಗೆ ಬಂತೆಂದರೆ ಈಗಿನಂತೆ ಬಿಸಿಗಾಳಿ, ಬಿಸಿಲ ತಾಪ, ಬೆವರು, ಬಳಲಿಕೆ ಅಂತ ಇರಲಿಲ್ಲ. ಸುತ್ತಲಿನ ಹಸುರು ಕಣ್ಣುಗಳಿಗೆ ತಂಪೆರೆದರೆ, ಬೀಸುವ ತಂಗಾಳಿ ಮೈಮನಗಳಿಗೆ ಉಲ್ಲಾಸ ನೀಡಿ ಇಡೀ ದಿನ ಸಂತೋಷದಿಂದ ಇರುವಂತೆ ಮಾಡುತ್ತಿತ್ತು.
ಶಾಲೆಗೆ ರಜೆ ಬಂತೆಂದರೆ ನಾವು ಗೆಳತಿಯರೆಲ್ಲಾ ಒಂದುಗೂಡಿ ದಿನಕ್ಕೊಂದು ಯೋಜನೆ ಹೆಣೆಯುತ್ತಿದ್ದೆವು.ರಜೆಯ ಕಾಲವೆಂದರೆ ಅದು ಕಾಡುಹಣ್ಣುಗಳ ಕಾಲ. ಕಾಡುಸಂಪಿಗೆ ಹಣ್ಣು, ಹಲಗೆ ಹಣ್ಣು, ಪೇರಲೆ ಹಣ್ಣು, ಮುಳ್ಳು ಹಣ್ಣು, ಮಾವಿನ ಹಣ್ಣು ಹೀಗೆ ದಿನಕ್ಕೊಂದು ಮರವಿರುವ ಕಡೆಗೆ ನಮ್ಮ ಅಲೆದಾಟ. ಕಾಡು ಗುಡ್ಡದಲ್ಲಿ ಸ್ವಚ್ಛಂದ ಪಕ್ಷಿಗಳಂತೆ ಓಡಾಡಿ ಹಣ್ಣುಗಳನ್ನು ಹುಡುಕುತ್ತಿದ್ದೆವು. ಮಂಗಗಳಂತೆ ಮರ ಹತ್ತಿ ಹಣ್ಣುಗಳನ್ನು ಕೊಯ್ಯುತ್ತಿದ್ದೆವು. ಮರದ ನೆರಳಿನಲ್ಲಿ ಕುಳಿತು ಹಣ್ಣುಗಳನ್ನು ತಿನ್ನುತ್ತಾ ಮನಸೋ ಇಚ್ಛೆ ಹರಟೆ ಹೊಡೆಯುತ್ತಿದ್ದೆವು. ಯಾವುದೇ ಭಯ, ಆತಂಕ, ಚಿಂತೆಗಳಿಲ್ಲದ ಸುಂದರ ಪರಿಸರ ನಮ್ಮದಾಗಿತ್ತು. ಮರಗಳಿಗೆ ಜೋಕಾಲಿ ಕಟ್ಟಿ ತೂಗುತ್ತಾ ಆನಂದಿಸುತ್ತಿದ್ದೆವು.
ಮನೆಯ ಅಂಗಳದಲ್ಲಿ ಚನ್ನೆಮಣೆ, ಕೆರೆದಡ, ಕುಂಟೋಬಿಲ್ಲೆ, ಕಲ್ಲಾಟ, ಚೌಕಾಬಾರ, ಕಣ್ಣಾ ಮುಚ್ಚಾಲೆ, ಲಗೋರಿ ಮೊದಲಾದ ಹಳ್ಳಿ ಸೊಗಡಿನ ಆಟಗಳನ್ನು ಆಡುತ್ತಾ ದಿನ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ಅದರಲ್ಲೂ ವಿಶೇಷವಾಗಿ ಅಡುಗೆ ಸಾರು ಆಟ ಮತ್ತು ಮದುವೆಮನೆ ಆಟಗಳನ್ನು ಮರೆಯುವಂತಿಲ್ಲ. ತೆಂಗಿನಕಾಯಿ ಕರಟಗಳನ್ನೆಲ್ಲಾ ಒಟ್ಟು ಮಾಡಿದರೆ ಅಡುಗೆ ಮನೆಯ ಪಾತ್ರೆಗಳು ತಯಾರು. ಮಣ್ಣು, ಮರಳು, ಬೇರೆ ಬೇರೆ ತರದ ಎಲೆಗಳೇ ಅಡುಗೆ ಪದಾರ್ಥಗಳು. ಒಂದೊಂದು ಕರಟದಲ್ಲಿ ಒಂದೊಂದು ವಿಧದ ಅಡುಗೆ ತಯಾರು ಮಾಡಿಬಿಡುತ್ತಿದ್ದೆವು.
ಮದುವೆ ಮನೆ ಆಟಕ್ಕೆ ಎರಡು ಬೊಂಬೆಗಳನ್ನು ಬಟ್ಟೆಯಿಂದ ಮಾಡಿ ಇಟ್ಟು, ಅವುಗಳಿಗೆ ಮದುವೆ ಮಾಡಿಸುವುದು, ನೆಂಟರು ಬರೋದು, ಹೋಗೋದು ಹೀಗೆ ನಾವು ನೋಡಿದ ನಿಜವಾದ ಮದುವೆಗಳನ್ನು ಮರು ಸೃಷ್ಟಿ ಮಾಡುತ್ತಿದ್ದೆವು.
ರಜೆ ಅಂದ ಮೇಲೆ ನೆಂಟರ ಮನೆಗೆ ಹೋಗಲೇಬೇಕು. ನನ್ನ ದೊಡ್ಡಮ್ಮ, ಚಿಕ್ಕಮ್ಮನ ಮಕ್ಕಳೆಲ್ಲರೂ ನಮ್ಮ ಮನೆಗೆ ಬರುತ್ತಿದ್ದರು. ಅವರು ಹೊರಟಾಗ ನಾನು ಅವರೊಂದಿಗೆ ಅವರ ಮನೆಗೆ ಹೋಗಬೇಕಿತ್ತು. ಅಮ್ಮನನ್ನು ಒಂದು ರಾತ್ರಿ ಬಿಟ್ಟು ಉಳಿಯುವುದು ಕಷ್ಟವಾದ ನನಗೆ ಇದು ನುಂಗಲಾರದ ತುತ್ತು. ಹಗಲುಗಳು ಆಟ, ಅಲೆದಾಟದಲ್ಲಿ ಕಳೆದುಹೋಗುತ್ತಿದ್ದವು. ಕತ್ತಲು ಕವಿಯುತ್ತಿದ್ದಂತೆ ನನ್ನ ಕಣ್ಣುಗಳಲ್ಲಿ ಅಮ್ಮನ ನೆನೆದು ಕಂಬನಿ ತುಂಬಿಕೊಳ್ಳುತ್ತಿತ್ತು. ಇದನ್ನರಿತ ದೊಡ್ಡಮ್ಮ, ಚಿಕ್ಕಮ್ಮ ಆದಷ್ಟು ಬೇಗನೇ ನನ್ನನ್ನು ಮನೆಗೆ ಕಳಿಸಿಕೊಡುತ್ತಿದ್ದರು.
ರಜೆಯಲ್ಲಿ ಅಜ್ಜಿ ಮನೆಗೆ ಹೋಗುವುದೆಂದರೆ ಸಂಭ್ರಮ. ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ತಮ್ಮ ಮಕ್ಕಳೊಂದಿಗೆ ತವರಿಗೆ ಹೋಗುವುದು. ನಾವು ಮಕ್ಕಳೆಲ್ಲಾ ಅಜ್ಜಿ ಮನೆ ತುಂಬಾ ಕೇಕೆ ಹೊಡೆದು, ಕುಣಿದು ಕುಪ್ಪಳಿಸಿ, ಆಡಿ, ಹಾಡಿ ನಲಿಯುವುದು. ಮಧ್ಯೆ ಮನೆಯಲ್ಲಿ ಉದ್ದಕ್ಕೂ ಹಾಸಿಗೆ ಹಾಸಿಕೊಂಡು ಎಲ್ಲರೂ ಒಟ್ಟಿಗೆ ಮಲಗುವುದು. ತಡರಾತ್ರಿಯಾದರೂ ಮುಗಿಯದ ಅಮ್ಮಂದಿರ ಹರಟೆ. ನಡುವೆ ಮಕ್ಕಳಾದ ನಮ್ಮ ಗಲಾಟೆ. ಆಹಾ ಎಂತಹ ಜೀವಂತಿಕೆಯ ಕ್ಷಣಗಳವು. ಅಜ್ಜಿ ಹೇಳುವ ಹಾಸ್ಯ ಪ್ರಸಂಗಗಳಿಗೆ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದೆವು. ಎಂದೂ ಮರಳಿ ಬಾರದ ಸುವರ್ಣ ಸಮಯವದು.

ಬೆಳಿಗ್ಗೆ ಏಳುತ್ತಿದ್ದಂತೆ ಅಜ್ಜಿ ಕೊಟ್ಟಿಗೆಗೆ ಹೋಗಿ ಹಸುವಿನ ಹಾಲು ಕರೆದುಕೊಂಡು ಬಂದು ಬಿಸಿ ಬಿಸಿ, ಘಮಘಮಿಸುವ ಕಾಫಿ ಮಾಡಿ ಕೊಡುತ್ತಿದ್ದಳು. ಒಲೆ ಮೇಲೆ ಸರಗೋಲಿನಲ್ಲಿ ಕಡುಬು ಬೇಯುತ್ತಿದ್ದರೆ, ಅಜ್ಜಿ ತನ್ನದೇ ಕೈ ರುಚಿ ಬೆರೆಸಿದ ರುಚಿಕರವಾದ ಚಟ್ನಿಯನ್ನು ಕಡೆಯುವ ಕಲ್ಲಿನಲ್ಲಿ ಕಡೆಯುತ್ತಿದ್ದಳು. ಎಷ್ಟೋ ಬಗೆಯ ಚಟ್ನಿ ಸವಿದಿರಬಹುದು. ಆದರೆ ಅಜ್ಜಿ ಕಡೆದ ಚಟ್ನಿಯ ರುಚಿ ಎಲ್ಲೂ ಸಿಗುವುದಿಲ್ಲ. ತಿಂಡಿ ತಿಂದ ಕೂಡಲೇ ನಾವೆಲ್ಲರೂ ಗದ್ದೆ ಅಂಚಿಗೋ, ಮರದ ನೆರಳಿಗೋ ಹೋಗಿ ಆಟದಲ್ಲಿ ನಿರತರಾಗುತ್ತಿದ್ದೆವು.
ಮಧ್ಯಾಹ್ನದ ಊಟಕ್ಕೆ ಅಜ್ಜಿ ಕಾಟು ಮಾವಿನ ಹಣ್ಣುಗಳನ್ನು ಆಯ್ದು ತಂದು, ಉಪ್ಪು, ಜೀರಿಗೆ ಮೆಣಸು, ಬೆಲ್ಲ ಹಾಕಿ ಗೊಜ್ಜು ತಯಾರಿಸುತ್ತಿದ್ದಳು. ಕಾಡಿನ ಮಾವಿನ ಮರದಲ್ಲಿ ಬಿಡುವ ಈ ಚಿಕ್ಕ ಚಿಕ್ಕ ಮಾವಿನ ಹಣ್ಣುಗಳಿಗೆ ವಿಶೇಷವಾದ ರುಚಿ ಮತ್ತು ಸುವಾಸನೆ ಇರುತ್ತದೆ. ನಾವಂತು ಈ ಗೊಜ್ಜನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಿದ್ದೆವು. ಈಗಲೂ ನೆನೆದರೆ ಬಾಯಲ್ಲಿ ನೀರೂರುತ್ತದೆ.
ರಾತ್ರಿ ಅಜ್ಜ ಮೊಮ್ಮಕ್ಕಳನ್ನು ಸುತ್ತಲೂ ಕೂರಿಸಿಕೊಂಡು ರಾಮಾಯಣ, ಮಹಾಭಾರತದ ಕತೆಗಳನ್ನು ಹೇಳುತ್ತಿದ್ದರು. ಪ್ರಚಲಿತ ವಿದ್ಯಮಾನಗಳ ಕುರಿತು ಪ್ರಶ್ನೆಗಳನ್ನು ಕೇಳುತ್ತಿದ್ದರು. ಪುಸ್ತಕಗಳನ್ನು ಕೊಟ್ಟು ಗಟ್ಟಿಯಾಗಿ ಬಾಯಿಬಿಟ್ಟು ಓದಲು ಹೇಳುತ್ತಿದ್ದರು. ಓದುತ್ತಿರುವ ವಿಷಯಕ್ಕೆ ತಕ್ಕಂತೆ ಸ್ವರದ ಏರಿಳಿತ ಇರಬೇಕು ಎಂದು ಕಲಿಸುತ್ತಿದ್ದರು. ನಮ್ಮೊಳಗೊಂದು ಸಾಹಿತ್ಯದ ಆಸಕ್ತಿ ಕಣ್ದೆರೆಯಲು ಅಜ್ಜ ನೀಡುತ್ತಿದ್ದ ಇಂತಹ ಚಟುವಟಿಕೆಗಳೇ ಕಾರಣವಾದವು.
ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ನಾವು ಮನೆಗೆ ಹೊರಡುವ ಹಿಂದಿನ ದಿನ ಅಜ್ಜಿ ಅತ್ರಸ (ಅತಿರಸ) ಎಂಬ ತಿಂಡಿ ಮಾಡುತ್ತಿದ್ದಳು. ಅಕ್ಕಿಯನ್ನು ತೊಳೆದು ಒಣಗಿಸಿ, ಒನಕೆಯಿಂದ ಒರಳಿನಲ್ಲಿ ಕುಟ್ಟಿ, ಬೆಲ್ಲದ ಪಾಕದಲ್ಲಿ ಬೇಯಿಸಿ, ಸಣ್ಣ ಸಣ್ಣ ಬಿಲ್ಲೆಗಳಾಗಿ ತಟ್ಟಿ ಎಣ್ಣೆಯಲ್ಲಿ ಕರಿಯುವ ಈ ತಿಂಡಿಗೆ ಕಾಯಿ, ಎಳ್ಳು ಹಾಕುವುದರಿಂದ ವಿಶೇಷ ರುಚಿ. ಮನೆಯಲ್ಲಿ ಇರುವ ಜೋನಿಬೆಲ್ಲ ಹಾಕುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ನಾವಂತು ಇದನ್ನು ಮಾಡಿದ ಕೂಡಲೇ ಬಿಸಿ ಬಿಸಿ ತಿನ್ನುತ್ತಿದ್ದೆವು. ಮೇಲೆ ತುಪ್ಪ ಹಾಕಿದರೆ ಸ್ವರ್ಗ. ಮೊಮ್ಮಕ್ಕಳು ಮನೆಗೆ ಹೊರಟಾಗ ಅಜ್ಜಿ ಬಾಳೆಲೆ ಬಾಡಿಸಿ ಅತ್ರಸದ ಪೊಟ್ಟಣಗಳನ್ನು ಮಾಡಿ ಚೀಲಕ್ಕೆ ಹಾಕುತ್ತಿದ್ದಳು. ನಮಗೆ ಮನೆಗೆ ಬಂದ ಮೇಲೆ ರಜೆಯಲ್ಲಿ ತಿನ್ನಲು ಇದು ಒಳ್ಳೆಯ
ಕುರುಕಲು.
ಇಂದಿನ ಮಕ್ಕಳಿಗೆ ರಜೆ ಬಂತೆಂದರೆ ಬೇಸಿಗೆ ಶಿಬಿರಕ್ಕೆ ಕಳಿಸುವ ಪರಿಪಾಠ ಬೆಳೆಯುತಿದೆ. ಪ್ರಕೃತಿ ನಡುವಿನ ನಮ್ಮ ರಜೆಯ ದಿನಗಳು ನಮಗೆ ಅನೇಕ ಪಾಠಗಳನ್ನು ಸಹಜವಾಗಿಯೇ ಕಲಿಸುತ್ತಿದ್ದವು. ನಮಗಿದ್ದ ನಿರಾತಂಕ ಪರಿಸರ ಇಂದಿನ ಮಕ್ಕಳಿಗಿಲ್ಲ. ನೆಂಟರ ಮನೆಗೆ ಮಕ್ಕಳನ್ನು ಕಳಿಸಲು ಇಂದು ಪೋಷಕರು ಆಲೋಚಿಸುತ್ತಾರೆ. ಮಕ್ಕಳಿಗೆ ಸುರಕ್ಷಿತ ವಾತಾವರಣ ಕಲ್ಪಿಸುವುದೇ ಇಂದು ಪೋಷಕರಿಗೆ ಒಂದು ಸವಾಲಾಗಿದೆ.

ಮರಗಿಡ, ಹೊಳೆ, ಕೆರೆ, ಹೂವು ಹಣ್ಣು, ಮಣ್ಣು, ಮರಳುಗಳ ಸಹಜ ಪರಿಸರದಲ್ಲಿ ಅರಳಿದ ಸಮೃದ್ಧ ಬಾಲ್ಯ ನಮ್ಮದು. ಯಾವುದೇ ಕೃತಕತೆ, ಜಡತೆ ಇಲ್ಲದ ಆಹ್ಲಾದಕರ ಸಮಯವದು. ಕಾಂಕ್ರೀಟ್ ಕಾಡುಗಳಂತಹ ಪಟ್ಟಣಗಳಲ್ಲಿ ಮನೆಯೊಳಗೆ ಬಂಧಿಯಾಗಿ ಮೊಬೈಲ್, ವಿಡಿಯೋ ಗೇಮ್ಸ್ ಆಡುವ ಇಂದಿನ ಮಕ್ಕಳ ಬಾಲ್ಯ ಅವರ ಪರಿಪೂರ್ಣ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದು ದುರಂತ. ಬೇಸಿಗೆ ರಜೆಯಲ್ಲಾದರೂ ಮಲೆನಾಡಿನಲ್ಲಿರುವ ಅಜ್ಜಿಮನೆಗೆ ನಿಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ. ಅಜ್ಜಿ ತಾತನ ಪ್ರೀತಿಯ ಅನುಭವ, ಪ್ರಕೃತಿಯ ನೈಜ ಸೊಬಗನ್ನು ಅವರು ಸವಿಯುವಂತಾಗಲಿ. ಮೊಬೈಲ್ ಇಲ್ಲದ ಜಗತ್ತು ಅದೆಷ್ಟು ಸುಂದರ ಎಂಬುದು ಮಗುವಿನ ಮನವ ತಟ್ಟಲಿ ಎಂಬುದೇ ಆಶಯ.


ಮುದಗೊಳಿಸುವಂತಿದೆ ಕವಯಿತ್ರಿ ಭವ್ಯರವರ ಮಲೆನಾಡಿನ ಬಾಲ್ಯದ ಮೆಲುಕುಗಳನ್ನೊಳಗೊಂಡ ಭಾವಗೊಂಚಲು….
ಸೊಗಸಾಗಿದೆ.