ಲಾ ಕ್ಲಾಸಿನ ನಂತರ ಬೇಕಾದಷ್ಟು ಸಮಯ ಸಿಕ್ತಾ ಇತ್ತಲ್ಲಾ. ಆಗ ಮಾರ್ನಿಂಗ್ ಶೋ ಸಿನಿಮಾ ಮತ್ತು ಹಳೇ ಪುಸ್ತಕದ ಅಂಗಡಿ ಭೇಟಿ. ಹೀಗೆ ಸುಮಾರು ಪುಸ್ತಕ ಕೊಂಡಿದ್ದೆ ಮತ್ತು ಸೇರಿತ್ತು. ಅವನ್ನೆಲ್ಲಾ ಸೆಕೆಂಡ್ ಶಿಫ್ಟ್‌ನಲ್ಲಿ ಫ್ಯಾಕ್ಟರಿಯಲ್ಲಿ ಓದ್ತಾ ಇದ್ದೆ. ವೋಡ್ ಹೌಸ್ ಪುಸ್ತಕ ಅಂದರೆ ಹೆಚ್ಚು ಅಯಸ್ಕಾಂತ. ಸಿಕ್ಕಾಪಟ್ಟೆ ಓದಿದರೆ ಬರಿಲೇಬೇಕು ಅನ್ನುವ ಒತ್ತಡ ಬರುತ್ತಂತೆ. ನನ್ನ ವಿಷಯದಲ್ಲಿ ಇದು ನಿಜ ಆಗಿಬಿಡ್ತು. ನನ್ನ ಹಾಗೆ ಓದಿನ ಹುಚ್ಚು ನಟರಾಜನಿಗೂ ಇತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಮೂವತ್ತೊಂದನೆಯ ಕಂತು ನಿಮ್ಮ ಓದಿಗೆ
ಮಲ್ಲೇಶ್ವರದ ಕತೆ ಹೇಳುತ್ತಿದ್ದೆ. ಮಲ್ಲೇಶ್ವರದ ಕೆಲವು ರಸ್ತೆ ಬಗ್ಗೆ ಹೇಳಿದೆ. ನುಗ್ಗೇಹಳ್ಳಿ ಪಂಕಜಾ ಅವರು ಬಂದರಾ, ರಾಶಿ ಅವರ ಮನೆ ಆಯ್ತಾ. ಗಾಂಧಿ ಸಾಹಿತ್ಯ ಸಂಘದ ನಂಟು ಬೆಳೆದ ಬಗೆ ಹೇಳಲು ಹೊರಟಿದ್ದೆ. ಲಾ ಕಾಲೇಜು ಸೇರಿದ್ದು. ಬೆಳಿಗ್ಗೆ ಸಂಜೆ ಕ್ಲಾಸಿಗೆ ಹೋಗಿದ್ದು ಆಯಿತು..
ಲಾ ಕಾಲೇಜಿಗೆ ತಿಂಗಳಿಗೆ ಫೀಸು ಇಪ್ಪತ್ತೈದು ರೂಪಾಯಿ. ತಿಂಗಳು ತಿಂಗಳೂ ಕೊಡಿ ಅಂತ ಯಾರೂ ಕೇಳುತ್ತಿರಲಿಲ್ಲ. ಅದರಿಂದ ಪ್ರಷರ್ ಇಲ್ಲದೇ ಆರಾಮವಾಗಿ ವರ್ಷದ ಕೊನೆಯಲ್ಲಿ ಸ್ವಲ್ಪ ಫೈನ್ ಸೇರಿಸಿ ಒಟ್ಟಾರೆಯಾಗಿ ಫೀಸು ಕಟ್ಟಬಹುದಿತ್ತು. ಅಡ್ಮಿಷನ್ ಆಗಬೇಕಾದರೆ ನೂರಾ ಅರವತ್ತು, ಎಪ್ಪತ್ತು … ಒಟ್ಟಿನಲ್ಲಿ ಇನ್ನೂರರ ಒಳಗೆ. ಅದೇನೇನೋ ಸಬ್ ಹೆಡ್‌ಗಳ ಮೂಲಕ ಫೀಸಿನ ಬಾಬ್ತು ಆಗುತ್ತಿತ್ತು. ಹಾಗೆ ನೋಡಿದರೆ ಬಿಎಸ್ಸಿ ಫೀಸು ತಿಂಗಳಿಗೆ ಹದಿನೆಂಟು. ಅದೂ ಲ್ಯಾಬೋರೇಟರಿ ಉಪಯೋಗಿಸುವ ಫೀಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ ಅಂತಹ ವಿದ್ಯಾರ್ಥಿಗಳಿಗೆ. ಲ್ಯಾಬೋರೇಟರಿ ಉಪಯೋಗಿಸದ ಆರ್ಟ್ಸ್ ಅಂದರೆ ಹಿಸ್ಟರಿ, ಎಕನಾಮಿಕ್ಸ್, ಸೋಷಿಯಾಲಜಿ, ಕನ್ನಡ, ಇಂಗ್ಲಿಷ್ ವಿದ್ಯಾರ್ಥಿಗಳಿಗೆ ಫೀಸು ಹದಿನಾಲ್ಕು ರೂಪಾಯಿ. ಇದರಲ್ಲೂ ಕೆಲವರಿಗೆ ಹಾಫ್ ಫ್ರೀ ಶಿಪ್, ಫುಲ್ ಫ್ರೀ ಶಿಪ್ ಸಿಗುತ್ತಿತ್ತು. ಅದೂ ಏನೂ ಅವಶ್ಯಕತೆ ಇದ್ದವರಿಗೆ ಅಂತ ಅಲ್ಲ. ಅಪ್ಲೈ ಮಾಡಿ ಯಾರ ಕೈಲೋ ಒಂದು ಮಾತು ಹೇಳಿಸಿದರೆ ಆಯ್ತು. ನನ್ನಂತಹ ಕೆಲವು ಪ್ರಚಂಡ ಪ್ರಭೃತಿಗಳು ಇದ್ದೆವು. ನಮಗೆ ನಾವೇ ಸಾಹುಕಾರರು ಅಂತ ಸೆಲ್ಫ್ ಡಿಕ್ಲೇರ್ಡ್ ಮಂಗಗಳು. ಪಾಪ ಈ ಸವಲತ್ತುಗಳು ಬಡವರಿಗೆ, ಫೀಸು ತೆರುವ ತಾಕತ್ ಇಲ್ಲದವರಿಗೆ ಸೇರಬೇಕು. ಅದನ್ನ ನಾನು ಕಸಿದರೆ ಯಾರೋ ಬಡವನಿಗೆ ತೊಂದರೆ ಆಗುತ್ತೆ ಅನ್ನುವ ಸ್ಕೂಲ್ ಆಫ್ ಥಿಂಕಿಂಗ್‌ನಲ್ಲಿ ಬೆಳೆದವರು. ಅದರಿಂದ ಯಾವಾಗಲೂ ಈ ಸ್ಪೆಷಲ್ ಬಾಬ್ತಿನಿಂದ ಹೊರಗೇ ಉಳಿದವರು.
ಡಿಸೆಂಬರ್ ಜನವರಿ ತಿಂಗಳಲ್ಲಿ ಈ ಫ್ರೀಶಿಪ್, ಸ್ಕಾಲರ್ ಶಿಪ್ ಅನೌನ್ಸ್ ಆಗ್ತಾ ಇದ್ದದ್ದು. ನೋಟಿಸ್ ಬೋರ್ಡ್‌ನಲ್ಲಿ ಹಾಕೋರು. ಎರಡು ಮೂರು ದಿವಸ ನೋಟಿಸ್ ಬೋರ್ಡ್ ಮುಂದೆ ಗಿಜಿಗಿಜಿ ವಿದ್ಯಾರ್ಥಿಗಳು. ಗಿಜಿಗಿಜಿ ಕಡಿಮೆ ಆದನಂತರ ನೋಟಿಸ್ ಬೋರ್ಡ್ ಮುಂದೆ ನಿಂತು ಹೆಸರು ಓದ್ತಾ ಇದ್ದರೆ ತಲೆ ಘಿರ್ ಅನ್ನೋದು. ಮಂತ್ರಿ ಮಗ, ಎಂ ಎಲ್ ಎ ಮಗ, ದೊಡ್ಡ ದೊಡ್ಡ ಅಂಗಡಿ ಮಾಲೀಕರ ಮಕ್ಕಳ ಹೆಸರು ಲಿಸ್ಟ್‌ನಲ್ಲಿ ಇರ್ತಿತ್ತು. ಆದರೂ ಈ ಎಲ್ಲಾ ಆಮಿಷಗಳನ್ನು ಎದುರಿಸಿ ಫ್ರೀಷಿಪ್ ಸ್ಕಾಲರ್ ಶಿಪ್ ತೆಗೆದುಕೊಳ್ಳದೆ ಕಾಲೇಜು ವ್ಯಾಸಂಗ ಪೂರೈಸಿದ ದಡ್ಡರಲ್ಲಿ ದಡ್ಡ ಪಡೆಗೆ ಸೇರಿದ ಗುಂಪಿಗೆ ಸೇರಿದವ ನಾನು!
ಫ್ರೀ ಶಿಪ್ ಅನ್ನುತ್ತಿದ್ದ ಹಾಗೇ ಒಂದು ಸಂಗತಿ ನೆನಪಿಗೆ ಬಂತು. ಫೈನಲ್ BSc ಪ್ರಿಪರೇಟರಿ ಪರೀಕ್ಷೆ. ನನ್ನ ಸಹಪಾಠಿ ಒಬ್ಬ ಅರ್ಧ ಗಂಟೆಗೆ ಪೇಪರ್ ಕೊಟ್ಟು ಹೊರ ಬಂದ. ಇವನು ಆಚೆ ಬರುವ ಸಮಯಕ್ಕೂ ಪ್ರಿನ್ಸಿಪಾಲ್ ಕಾರಿಡಾರ್‌ನಲ್ಲಿ ಹಾದು ಹೋಗುವುದಕ್ಕೂ ಸರಿ ಹೋಯಿತು. ಅರ್ಧ ಗಂಟೆಗೆ ಎದ್ದು ಬಂದ ಇವನನ್ನು ಚೇಂಬರಿಗೆ ಕರೆದುಕೊಂಡು ಹೋಗಿ ಕೊಂಚ ಚಳಿ ಬಿಡಿಸಿದರು.
ಚಳಿ ಬಿಡಿಸಬೇಕಾದರೆ What I have given for you? ಅಂತ ಅವರ ಪ್ರಶ್ನೆ.
ಪಾಪ ಇವನು ಯಾವತ್ತೂ ಅವರ ಹತ್ತಿರ ಅರ್ಧಲೋಟ ಬೈಟೂ ಕಾಫಿ ಸಹ ಕುಡಿದವನು ಅಲ್ಲ. ನಿಮ್ಮ ಹತ್ತಿರ ಏನೂ ತಗೊಂಡಿಲ್ಲ ಅಂತ ಹೇಗೆ ಹೇಳೋದು? ಹಾಗೇ ಪೆಚ್ಚು ಪೆಚ್ಚಾಗಿ ನಿಂತ. Free ship, Scholarship… what are you getting? ಅಂತ ಪ್ರಿನ್ಸಿಪಾಲರು ಮತ್ತೆ ಗುಡುಗಿದರು.
ಈಗ ಇವನಿಗೆ ಅವರ ಮೊದಲ ಪ್ರಶ್ನೆ ಅರ್ಥ ಆಯಿತು. ಸ್ಕಾಲರ್ ಶಿಪ್ ಅಂತ ತೊದಲಿದ.
I will take back your Scholar ship ಅಂದರು.
ಇವನು ಸಾರಿ, ಎಕ್ಸ್ಕೂಸ್ ಮೀ ಸಾರ್. ಐ ವಿಲ್ ನಾಟ್ ಡೂ ಥಿಸ್ ಅಗೈನ್ ಸಾರ್… ಎಲ್ಲಾ ಅರ್ಧ ಗಂಟೆ ಹೊತ್ತು ಕೇಳಿ ಇನ್ಮೇಲೆ ಅರ್ಧ ಗಂಟೆಗೆ ಪೇಪರ್ ಕೊಟ್ಟು ಆಚೆ ಬರೋಲ್ಲ ಅಂತ ಪ್ರಮಾಣ ಮಾಡಿದ ಮೇಲೆ ರೂಮಿನಿಂದ ಆಚೆ ಕಳಿಸಿದರು. ಈ ಪ್ರಿನ್ಸಿಪಲ್ ಹೆಸರು ಶ್ರಿ ಮುನಿಗವಿಯಪ್ಪ ಅಂತ. ಅದಕ್ಕೆ ಮೊದಲು ಶ್ರೀ ಆರ್ ಆರ್ ಉಮರ್ಜಿ ಪ್ರಿನ್ಸಿಪಾಲ್. ಇವರಿಬ್ಬರ ನಡುವೆ ಅಲ್ಪ ಕಾಲಕ್ಕೆ ಶ್ರೀ ವಾಮನಾಚಾರ್ ಅನ್ನುವವರು ಪ್ರಿನ್ಸಿಪಾಲ್ ಆಗಿದ್ದರು. ನಾವು ಕಾಲೇಜು ಮುಗಿಸಿದ ಒಂದೆರೆಡು ವರ್ಷದಲ್ಲಿ ಶ್ರೀ ಮುನಿಗವಿಯಪ್ಪ ಅವರ ಬುರುಡೆಗೆ ಕಬ್ಬಿಣದ ರಾಡ್‌ನಿಂದ ಬಡಿದು ಅವರ ವಿದ್ಯಾರ್ಥಿ ಒಬ್ಬ ಕಾಲೇಜಿನ ಸೈಕಲ್ ಸ್ಟಾಂಡ್ ಬಳಿ ಕೊಲೆ ಮಾಡಿದ ಸುದ್ದಿ ಬಂದಿತು. ಸುಮಾರು ವರ್ಷ ಕೇಸು ನಡೆಯಿತು ಮತ್ತು ಅದೇನೇನೋ ವಿಚಿತ್ರ ತಿರುವು ಪಡೆಯಿತು.
ಗಾಂಧಿ ಸಾಹಿತ್ಯ ಸಂಘದ ನಂಟು ಬೆಳೆದ ಬಗ್ಗೆ ಹೇಳಲು ಹೊರಟಿದ್ದು ಎಲ್ಲೆಲ್ಲಿಗೋ ಕೊಂಕಣ ಸುತ್ತಿಸುತ್ತಾ ಇದೆ. ನಂಟು ಬೆಳೆದ ಬಗೆ ಹೇಳಿ ನಂತರ ಮಲ್ಲೇಶ್ವರದ ಉಳಿದ ಪ್ರಸಂಗಕ್ಕೆ ಬರುತ್ತೇನೆ, ಸರಿ ತಾನೇ?
ಲಾ ಕಾಲೇಜಿನ ಬಗ್ಗೆ ಹೇಳುತ್ತಿದ್ದೆ….
ತಿಂಗಳಲ್ಲಿ ಹದಿನೈದು ಬೆಳಿಗ್ಗೆ ಕಾಲೇಜು ನಂತರ ಹದಿನೈದು ದಿನ ಸಂಜೆ ಕಾಲೇಜು, ಹೀಗೆ ನನ್ನ ವ್ಯಾಸಂಗ. ಅಟೆಂಡೆನ್ಸ್ ಹಾಕ್ತಾ ಇರಲಿಲ್ಲ ಮತ್ತು ಬೆಳಿಗ್ಗೆ ಸಂಜೆ ಯಾವಾಗ ಕಾಲೇಜಿಗೆ ಬಂದರೂ ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಇದಕ್ಕೆ ಕಾರಣ ಅಂದರೆ ನಾವು ವಿದ್ಯಾರ್ಥಿಗಳು ಎಲ್ಲೆಲ್ಲೋ ಕೆಲಸ ಮಾಡಿಕೊಂಡು ಕಾಲೇಜಿಗೆ ಬರ್ತಿದ್ದೇವೆ ಎಂದು ಕಾಲೇಜಿನ ಆಡಳಿತ ವರ್ಗಕ್ಕೆ ತಿಳಿದಿದ್ದು ಮತ್ತು ನಮ್ಮಲ್ಲಿ ಹೆಚ್ಚಿನವರು ಐವತ್ತು ದಾಟಿದವರು. ಅಂದರೆ ಪುಟ್ಟ ವಯಸ್ಸಿನ ವಿದ್ಯಾರ್ಥಿಗಳಿಗಿಂತ ಹೆಚ್ಚು ಜವಾಬ್ದಾರಿ ಇರುವವರು! ಒಬ್ಬರು ಪೊಲೀಸ್ ಆಫೀಸರ್ ಕ್ಲಾಸಿಗೆ ಬರ್ತಾ ಇದ್ದರು. ಆಗಲೇ ಅವರಿಗೆ ನಿವೃತ್ತಿ ವಯಸ್ಸು. ಮಿಲಿಟರಿ ಬಣ್ಣದ ಪೀ ಕ್ಯಾಪ್ ಮತ್ತು ಖಾಕಿ ಪ್ಯಾಂಟ್ ಯಾವುದಾದರೂ ಬಣ್ಣದ ಅಂಗಿ. ಅಂಗಿ ಪ್ಯಾಂಟ್ ಒಳಗೆ ತೂರಿಸಿ ಪೊಲೀಸ್ ಬೆಲ್ಟ್ ಹಾಕುತ್ತಿದ್ದರು. ಟಪ ಟಪ ಶಬ್ದ ಮಾಡುವ ಕರಿಯ ಬಣ್ಣದ ಶೂ ಅವರ ಹೊರ ನೋಟ. ಕ್ಲಾಸಿನಲ್ಲಿ ಮೊದಲ ಬೆಂಚ್ ವಿದ್ಯಾರ್ಥಿ ಅವರು. ಏನಾದರೂ ಸಂಶಯ ಬಂದರೆ ಸರ್ ಒನ್ ಪಾಯಿಂಟ್ ಎಂದು ಬಲಗೈ ಮೇಲೆತ್ತಿ ಟಕ್ ಎಂದು ಎದ್ದು ನಿಲ್ಲುವರು. ಪ್ರಶ್ನೆ ಕೇಳಿ ಹಾಗೇ ಟಕ್ ಅಂತ ಕೂಡುವರು. ಒಂದು ಕ್ಲಾಸಿನಲ್ಲಿ ಎರಡು ಮೂರು ಬಾರಿ ಹೀಗೆ ಎದ್ದು ಪ್ರಶ್ನೆ ಕೇಳಿ ಕೂಡುವ ಅಭ್ಯಾಸ ಅವರದು. ಬೆನ್ನು ಬಾಗಿಸದೆ ನೇರವಾಗಿ ಕೂಡುವ ನಿಗುರಿಕೊಂಡು ನಡೆಯುವ ಅವರನ್ನು ನೋಡುವುದೇ ಒಂದು ಖುಷಿ. ತರಗತಿ ಮುಗಿದ ಕೂಡಲೇ ನೇರ ಸ್ಕೂಟರ್ ಸ್ಟಾಂಡ್‌ಗೆ ನಡೆದು ಅಲ್ಲಿಂದ ಆಫೀಸಿಗೋ ಮನೆಗೋ ಅವರ ಪಯಣ. ಯಾರ ಸಂಗಡವೂ ಮಾತು ಕತೆ ಇಲ್ಲ. ಹೋದ ಬಸವ, ಬಂದ ಬಸವ ಹಾಗೆ.
ಇನ್ನೊಬ್ಬರು ಕೊಂಚ ವಯಸ್ಸಾದ ಸ್ಟೂಡೆಂಟ್ ಅಂದರೆ ಅವರು ಲೇಡಿ. ನಮ್ಮದು ಕೋ ಎಜುಕೇಷನ್ ಕಾಲೇಜು. ಅದರಿಂದ ಎರಡೂ ಗುಂಪಿನ ವಿದ್ಯಾರ್ಥಿಗಳು. ಕೆಲವರು ಆಗ ತಾನೇ ಡಿಗ್ರಿ ಮುಗಿಸಿ ಬಂದವರು, ಸುಮಾರು ಜನ ಡಿಗ್ರಿ ಮುಗಿಸಿ ಹತ್ತು ಹದಿನೈದು ಇಪ್ಪತ್ತು ವರ್ಷ ಆಗಿರುವವರು!
ಹೊಸದಾಗಿ ಕಾಲೇಜು ಮುಗಿಸಿ ಬಂದವರದ್ದು ಸ್ವಲ್ಪ ಹೆಚ್ಚಿನ ಲವಲವಿಕೆ, ಮಿಕ್ಕವರದ್ದು ಅಷ್ಟೆಲ್ಲ ಇಲ್ಲ. ಲೇಡಿ ಸ್ಟೂಡೆಂಟ್ ಬಗ್ಗೆ ಹೇಳ್ತಾ ಇದ್ದೆ. ಅವರಿಗೆ ಆಗಲೇ ನಲವತ್ತರ ಆಕಡೆ ವಯಸ್ಸು. ಅವರ ಗಂಡ ಲಾಯರು. ಅವರದೇ ಸ್ವಂತ ಕಚೇರಿ. ಗಂಡನಿಗೆ ನೆರವಾಗುವ ಉಮೆದಿನಿಂದ ಅವರು ಲಾ ಕಲಿಯಲು ಸೇರಿದ್ದರು. ಆಗ ತಾನೇ ಎಂ ಎಸ್ ಡಬ್ಲ್ಯೂ ಮುಗಿಸಿ ಬಂದಿದ್ದ ಕೆಲವರು. ಕಾರ್ಖಾನೆಗಳಲ್ಲಿ ವೆಲ್ಫೇರ್ ಆಫೀಸರ್ ಆಗುವ ಕನಸಿನೊಂದಿಗೆ ಜತೆಯಲ್ಲಿ ಲಾ ಡಿಗ್ರಿ ಇರಲಿ ಎಂದು ಬಯಸಿ ಬಂದವರು. ಸುಮಾರು ವಿದ್ಯಾರ್ಥಿಗಳು ಮುಂದೆ ಅವರ ತಂದೆಗೆ (ಇವರು ಆಗಲೇ ಸ್ವಂತ ಆಫೀಸು ಇಟ್ಟುಕೊಂಡಿದ್ದರು) ವಕೀಲಿ ವೃತ್ತಿಯಲ್ಲಿ ನೆರವಾಗುವ ಇಚ್ಛೆಯಿಂದ ಕಾಲೇಜು ಸೇರಿದವರು. ಮಿಕ್ಕವರು ನನ್ನ ಹಾಗೆ, ಇರುವ ಉದ್ಯೋಗದಲ್ಲಿ ನೆಮ್ಮದಿ ಇಲ್ಲದೆ ಮತ್ತೊಂದು ಉದ್ಯೋಗಕ್ಕೆ ಒಂದು ಡಿಗ್ರಿ ಇರಲಿ ಎಂದು ಬಯಸಿದವರು..! ಸಮಯ ಕಳೆಯಲು ಎಂದೇ ಲಾ ಸೇರಿದವರು ಸಹ ಇದ್ದರು. ಹೀಗೆ ಕಾಲೇಜು ಬೆಳಿಗ್ಗೆ ಸಂಜೆ ತೃಪ್ತರು ಅತೃಪ್ತರಿಂದ ತುಂಬಿತ್ತು. ಕೆಲವು ಅತ್ಯುತ್ಸಾಹದ ಯುವಕರು ಕಾಲೇಜಿನ ಮುಂಭಾಗದ ಜಗಲಿಯಲ್ಲಿ ಕೂತು ದೇಶದ ಬಗ್ಗೆ ಗಟ್ಟಿ ಕೊರಲಿನಲ್ಲಿ ಚಿಂತಿಸುವುದು ಸಾಮಾನ್ಯ ಸಂಗತಿ. ಈಗಿನ ಸುಮಾರು ಖ್ಯಾತನಾಮರು ಆಗ ಲಾ ಸ್ಟೂಡೆಂಟ್ಸ್. ಈ ಗುಂಪಿನಲ್ಲಿ ನಾವೂ ಭಾಗಿಗಳು. ಇಡೀ ಮೂರು ವರ್ಷದ ಲಾ ಕಲಿಕೆಯಲ್ಲಿ ಇನ್ನೂರು ಪುಟಗಳ ಒಂದೇ ನೋಟ್ ಬುಕ್ ಬಳಸಿದ್ದೆ ಮತ್ತು ಅದರಲ್ಲೂ ನಲವತ್ತು ಪುಟ ಮಿಕ್ಕಿತ್ತು. ಇನ್ನೊಂದು ಮರೆತ ಸಂಗತಿ ಅಂದರೆ ಪರೀಕ್ಷೆ ಒಂದೆರೆಡು ವಾರ ಇದೆ ಅನ್ನಬೇಕಾದರೆ ಲಾ ಪುಸ್ತಕ ಮಾರುವ ಅಂಗಡಿಯಲ್ಲಿ Nut shell series ಅನ್ನುವ ಲಾ ಪುಸ್ತಕಗಳು ಮಾರಾಟಕ್ಕೆ ಬರೋವು. ಯಾವುದಾದರೂ ಒಂದು ಸಬ್ಜೆಕ್ಟ್ ಅನ್ನು ಹದಿನೈದು ಇಪ್ಪತ್ತು ಪುಟದಲ್ಲಿ ವಿವರಿಸುವ ಕಿರು ಹೊತ್ತಿಗೆ ಇದು. ನಮ್ಮ ಓದನ್ನು ಇದು ರಿಫ್ರೆಶ್ ಮಾಡುತ್ತಿತ್ತು. ಐವತ್ತು ಪೈಸೆ ಪುಸ್ತಕ ಕೆಲವು ಸಲ ಎಪ್ಪತ್ತು ನಂಬರು ಪಡೆಯಲು ಸಹಾಯ ಮಾಡಿತ್ತು.
ಲಾ ಕ್ಲಾಸಿನ ನಂತರ ಬೇಕಾದಷ್ಟು ಸಮಯ ಸಿಕ್ತಾ ಇತ್ತಲ್ಲಾ. ಆಗ ಮಾರ್ನಿಂಗ್ ಶೋ ಸಿನಿಮಾ ಮತ್ತು ಹಳೇ ಪುಸ್ತಕದ ಅಂಗಡಿ ಭೇಟಿ. ಹೀಗೆ ಸುಮಾರು ಪುಸ್ತಕ ಕೊಂಡಿದ್ದೆ ಮತ್ತು ಸೇರಿತ್ತು. ಅವನ್ನೆಲ್ಲಾ ಸೆಕೆಂಡ್ ಶಿಫ್ಟ್‌ನಲ್ಲಿ ಫ್ಯಾಕ್ಟರಿಯಲ್ಲಿ ಓದ್ತಾ ಇದ್ದೆ. ವೋಡ್ ಹೌಸ್ ಪುಸ್ತಕ ಅಂದರೆ ಹೆಚ್ಚು ಅಯಸ್ಕಾಂತ. ಸಿಕ್ಕಾಪಟ್ಟೆ ಓದಿದರೆ ಬರಿಲೇಬೇಕು ಅನ್ನುವ ಒತ್ತಡ ಬರುತ್ತಂತೆ. ನನ್ನ ವಿಷಯದಲ್ಲಿ ಇದು ನಿಜ ಆಗಿಬಿಡ್ತು. ನನ್ನ ಹಾಗೆ ಓದಿನ ಹುಚ್ಚು ನಟರಾಜನಿಗೂ ಇತ್ತು. ಒಮ್ಮೆ ಮಯೂರದಲ್ಲಿ ಪ್ರೇಮದ ಕತೆ ಕೇಳಿದ್ದಾರೆ, ಕಳಿಸ್ರಿ ಅಂದ. ಅದೇನು ಹುರುಪು ಬಂತೋ ಅವತ್ತೇ ಒಂದು ಇಪ್ಪತ್ತು ಪುಟದ ಕತೆ ಬರೆದು ಪೋಸ್ಟ್ ಮಾಡಿ ಮರೆತೆ. ಕತೆ ಸ್ವೀಕೃತ ಅಂತ ಪತ್ರ ಬಂತು. ಒಂದೆರೆಡು ತಿಂಗಳಲ್ಲಿ ಕತೆ ಪ್ರಕಟ ಸಹ ಆಯಿತು. ಅಪೂರ್ಣ ಕತೆ ಅಂತ ವಿಂಗಡಿಸಿ ಅದನ್ನು ಎರಡು ಕಂತಿನಲ್ಲಿ ಹಾಕಿದ್ದರು. ಓದುಗರಿಗೆ ಅಪೂರ್ಣ ಕತೆ ಮುಂದುವರೆಸಲು ಕರೆ ನೀಡಿದ್ದರು. ಹೀಗಾಗಿ ಕತೆಗಾರ ಆದೆ. ಕೆಲವು ಕತೆ ಬೇರೆ ಬೇರೆ ಪತ್ರಿಕೆಗಳಿಗೆ ಬರೆದೆನಾ. ಈ ನಡುವೆ ಶ್ರಿ ರಾಮಮೂರ್ತಿ (ಗೌತಮ ಹೆಸರಿನ ಪ್ರಖ್ಯಾತರು) ನಮ್ಮ ವಿಭಾಗಕ್ಕೆ ವರ್ಗ ಆಗಿ ಬಂದರು. ಯಾವಾಗಲೂ ಗುಂಪು ಸೇರಿಸಿಕೊಂಡು ಹರಟೆ ಹೊಡಿತಿದ್ದ ನನ್ನ ಬಗ್ಗೆ ಕುತೂಹಲ ಹುಟ್ಟಿರಬೇಕು. ಅದರ ಜತೆಗೆ ಯಾರೋ ನಾನು ಬರೀತಿನಿ ಅಂತ ಹೇಳಿ ಗೊತ್ತಾಗಿರಬೇಕು. ಸ್ನೇಹ ಬೆಳೆಯಿತು. ಪ್ರಜಾವಾಣಿಗೆ ಮಿಡಲ್ ಬರೀರಿ ಅಂತ ಸಲಹೆ ಕೊಟ್ಟರು. ಅವರೂ ಗೌತಮ ಅನ್ನುವ ಗೂಢ ನಾಮದಲ್ಲಿ ಬರೆಯುತ್ತಿದ್ದರು. ಆಗ ರತ್ನ, ಅಗಸ್ತ್ಯ, ವನಮಾಲಿ, ಕೃಷ್ಣ ಸುಬ್ಬರಾವ್, ಬಾಗೂರು ಚಂದ್ರು… ಮೊದಲಾದವರ ಹೆಸರಿನಲ್ಲಿ ಮಿಡಲ್‌ಗಳು ಬರುತ್ತಾ ಇದ್ದವು. ಎಲ್ಲರೂ ಗೂಢ ನಾಮದಲ್ಲಿ ಬರೆಯುವವರು, ಒಬ್ಬರೂ ಯಾರಿಗೂ ಗೊತ್ತಿಲ್ಲ. ಪರಸ್ಪರ ಸಹ ಗೊತ್ತಿಲ್ಲದವರು. ಎಲ್ಲರೂ ನಿಗೂಢ! (ಒಬ್ಬರು ಮಾತ್ರ ಅವರ ಹೆಸರಲ್ಲೇ ಬರೆಯುತ್ತಿದ್ದರು.. ಆನಂದ ರಾಮ ಶಾಸ್ತ್ರಿ)
ರಾಮಮೂರ್ತಿ ಸಲಹೆ ಕೊಟ್ಟದ್ದು ರಾತ್ರಿ ಎಂಟೂವರೆಗೆ. ಸೆಕೆಂಡ್ ಶಿಫ್ಟ್ ಹನ್ನೊಂದರವರೆಗೆ. ಆಗಲೇ ಕೂತು ಮೂರು ಪುಟದ ಒಂದು ಹಾಸ್ಯ ಬರಹ ಗೀಚಿದೆ. ಬೆಂಗಳೂರು ದೂರದರ್ಶನದಲ್ಲಿ ವೀಕ್ಷಕರ ಪತ್ರಗಳಿಗೆ ಉತ್ತರಿಸುವ ಒಂದು ಕಾರ್ಯಕ್ರಮ ಪ್ರಿಯ ವೀಕ್ಷಕರೇ ಆಗ ವಾರಕ್ಕೊಮ್ಮೆ ಪ್ರಸಾರ. ಆ ಕಾರ್ಯಕ್ರಮವನ್ನು ವಿಡಂಬನಾತ್ಮಕವಾಗಿ ಚುಡಾಯಿಸಿದ ಲೇಖನ ಕಳಿಸಿದೆ. ಮೂರು ದಿವಸದಲ್ಲಿ ಲೇಖನ ಪ್ರಕಟ ಆಯಿತು. ಒಂದೆರೆಡು ವಾರ, ತಿಂಗಳಲ್ಲಿ ಇದು ಒಂದು ಅಡಿಕ್ಷನ್ ಆಗಿ ಬಿಟ್ಟಿತು. ಇದರ ಎಫೆಕ್ಟ್ ಅಂದರೆ ಲೆಕ್ಕ ಪಕ್ಕ ಲಂಗು ಲಗಾಮು ಇಲ್ಲದೆ ಹೇರಳವಾಗಿ ಬೇರೆ ಬೇರೆ ಹೆಸರಿನಲ್ಲಿ ನನ್ನ ಮಿಡಲ್‌ಗಳ ಸುರಿಮಳೆ ಆಯಿತು. ಈ ಮಳೆ ಪ್ರಜಾವಾಣಿ ಜತೆಗೆ ಮಿಕ್ಕ ಪೇಪರ್‌ಗಳಿಗೂ ವಿಸ್ತಾರ ಆಯಿತು. ನಿಧಾನಕ್ಕೆ ನಾನು ಅದರ ಜನಕ ಮಹಾರಾಜ ಅನ್ನುವುದು ಪ್ರಚಾರ ಆಯಿತು ಮತ್ತು ಈ ಹಿನ್ನೆಲೆಯಲ್ಲಿ ಸಾಹಿತ್ಯದ ಕಾರ್ಯಕ್ರಮ ನಡೆಸುವ ಉಮೇದು ಹುಟ್ಟಿತು. ಸಮಾನ ಮನಸ್ಕರ ಒಂದು ವೇದಿಕೆ ಹುಟ್ಟಿತು. ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಹುಟ್ಟಿದ್ದು ಹೀಗೆ ಮತ್ತು ಸಾಹಿತ್ಯದ ಕಾರ್ಯಕ್ರಮ ನಡೆಸಲು ನಮ್ಮ ಜೇಬಿಗೆ ಸರಿತೂಗುವ ಒಂದು ಸಭಾ ಭವನ ಅಂದರೆ ಅದು ಮಲ್ಲೇಶ್ವರ ಎಂಟನೇ ಕ್ರಾಸಿನ ಗಾಂಧಿ ಸಾಹಿತ್ಯ ಸಂಘ. ಆಗ ಅದರ ಬಾಡಿಗೆ ಇಪ್ಪತ್ತೈದು ರೂಪಾಯಿ! ಸಮಾನ ಮನಸ್ಕರು ಸೇರಿ ಕೈಗಾರಿಕಾ ರಂಗದ ಸಾಹಿತ್ಯ ವೇದಿಕೆ ಸಂಸ್ಥೆ ಹುಟ್ಟುಹಾಕಿದೆವು. ಆಗಿನ ಉದಯೋನ್ಮುಖ ಸಾಹಿತಿಗಳು ಈ ಗುಂಪಿನಲ್ಲಿದ್ದರು. ಗೆ.ಆನಂದ ರಾಮ ಶಾಸ್ತ್ರಿ ಇದಕ್ಕೆ ಒಂದು ರೂಪ ರೇಷೆ ತಯಾರಿಸಿದರು. ಮಿಕ್ಕ ಹಾಗೆ ಪ್ರಸನ್ನ ವೆಂಕಟೇಶ ಮೂರ್ತಿ, ಬೇಲೂರು ರಾಮಮೂರ್ತಿ, ನೊಣವಿನಕೆರೆ ರಾಮಕೃಷ್ಣಯ್ಯ, ವೈ ಎನ್ ಗುಂಡೂರಾವ್, ಪಾಳ್ಯದ ಶೆಟ್ರು ಮಹದೇವಪ್ಪ, ತಾಸಿ ತಿಮ್ಮಯ್ಯ, ದ್ವಾರನ ಕುಂಟೆ ಪಾತಣ್ಣ, ಹರಿದಾಸ್, ಮುಳಕುಂಟೆ ಪ್ರಕಾಶ್ ಮೊದಲಾದ ಗೆಳೆಯರು ಬೇರೆ ಬೇರೆ ಕಾರ್ಖಾನೆಗಳನ್ನು ಪ್ರತಿನಿಧಿಸಿದ್ದರು(ಇವರಲ್ಲಿ ಸುಮಾರು ಹೆಸರು ಈಗ ನೆನಪಿನಿಂದ ಮರೆಯಾಗಿದೆ). ಹಾಗೂ bel ನಿಂದ ಲಲಿತ, ಭಾಗ್ಯ ಜಯ ಸುದರ್ಶನ್, ವಿಡಿ ಪಾಟೀಲ್, ರಂಗರಾಜು, ರಾಮಮೂರ್ತಿ ಮುಂತಾದ ಗೆಳೆಯರು ಸೇರಿದ್ದರು. ಸಾಹಿತ್ಯದ ಕಾರ್ಯಕ್ರಮ ಅಂದರೆ ಭಾಷಣಕಾರರನ್ನು ಅರೇಂಜ್ ಮಾಡಬೇಕು, ಅವರಿಗೆ ಹಣದ ಮೂಲಕ ಗೌರವ ಸಲ್ಲಿಸಬೇಕು, ಮೈಕ್ ಹಿಡಿದು ನೀವೂ ಸಹ ಕೊರೀಬೇಕು… ಗಾಂಧಿ ಸಾಹಿತ್ಯ ಸಂಘದ ನಂಟು ಹೀಗೆ ಶುರು ಆದದ್ದು ಮತ್ತು ಇದರ ಬಗ್ಗೆ ಮತ್ತಷ್ಟು ನೆನಪುಗಳು ಮುಂದೆ ಬರುತ್ತವೆ! ನಾವು ನಾವೇ ಕಾಸು ಚಂದಾ ಎತ್ತಿ ಪ್ರೋಗ್ರಾಂ ಮಾಡುವ ಅನುಭವ ಆಯಿತು. ಗಾಂಧಿ ಸಾಹಿತ್ಯ ಸಂಘ ನನ್ನ ಜೀವನ ಪ್ರವೇಶ ಮಾಡಿತು ಮತ್ತು ಅದರ ಪ್ರಭಾವ ಚೆನ್ನಾಗಿ ಬೀರಿತು.
ಈಗ ಮತ್ತೆ ಮಲ್ಲೇಶ್ವರ..!
ಉದ್ದುದ್ದನೆ ಗೆರೆ ಮೇನ್ ರೋಡು ಅಡ್ಡಡ್ಡ ಗೆರೆ ಕ್ರಾಸ್ ರೋಡ್ ಅಂತ ಮಲ್ಲೇಶ್ವರ ಟೊಪೋಗ್ರಫಿ ಹೇಳಿದೆ ತಾನೇ.. ಶ್ರೀ ರಾಮಪುರದ ಕಡೆಯಿಂದ ಬಂದರೆ ಮೊದಲು ಸಿಗುವ ಮೇನ್ ರೋಡು ಹಿಡಿದು ಎಡಕ್ಕೆ ಹೋದರೆ ಅದು ಯಶವಂತಪುರಕ್ಕೆ ಬಿಡುತ್ತೆ. ಮಧ್ಯೆ ನಿಮಗೆ ಮಲ್ಲೇಶ್ವರ ರೈಲು ಸ್ಟೇಶನ್ ಸಿಗುತ್ತಾ. ಅದರ ಪಾರಲ್ಲೆಲ್ ರಸ್ತೆಗೆ ಬಂದರೆ ರಸ್ತೆ ಒಂದು ಕಡೆ ಮೂರು ಕವಲು ಹೊಡೆಯುತ್ತಾ.. ಎಡಕ್ಕೆ ಹೋದರೆ ಎಂ ಇ ಎಸ್ ಕಾಲೇಜು (ಈ ಕಾಲೇಜಿನ ಬಗ್ಗೆ ಮುಂದೆ ಹೇಳುತ್ತೇನೆ) ಬಲಕ್ಕೆ ಹೋದರೆ ಅದು ನಿಮ್ಮನ್ನ ಹದಿನೇಳನೇ ಕ್ರಾಸಿಗೆ ಅಂದರೆ ವೀಣಾ ಸ್ಟೋರ್ಸ್ ತಲುಪಿಸುತ್ತದೆ. ವೀಣಾ ಸ್ಟೋರ್ಸ್ ಅಂದರೆ ಮಲ್ಲೇಶ್ವರದ ಹೊಟ್ಟೆ ಅಂತಲೇ ಹೇಳಬೇಕು. ಅಲ್ಲಿನ ಇಡ್ಲಿ ವಡೆ ಸೀ ಪೊಂಗಲ್ ರುಚಿ ನೋಡದ ಬೆಂಗಳೂರಿಗ ಸಿಗಲಾರ..! ನೇರ ಮುಂದುವರೆದರೆ ನಿಮ್ಮ ಹೃದಯ ಹಿಂಡುವ ಕಣ್ಣಿನಲ್ಲಿ ನೀರು ಬರಿಸುವ ಅದೆಷ್ಟು ನೆನಪುಗಳು..
ಮೈಸೂರ್ ಲ್ಯಾಂಪ್ಸ್ (Mysore lamps) ೧೯೩೨ರಲ್ಲಿ ಸ್ಥಾಪನೆ ಆದ ಉದ್ಯಮ. ಆಗಿನ ಬೆಂಗಳೂರಿನ ಹಳೇ ತುಮಕೂರು ರಸ್ತೆ (ಈಗ ಹಳೇ ತುಮಕೂರು ರಸ್ತೆ ಅಂದರೆ ಯಾರಿಗೂ ತಿಳಿಯದು) ಯಲ್ಲಿ ೨೧ಎಕರೆ ಜಾಗದಲ್ಲಿ ಇದು ಆರಂಭವಾಯಿತು. ಇಡೀ ಭಾರತಕ್ಕೆ ಇಲ್ಲಿಂದ ಬಲ್ಬುಗಳು ಟ್ಯೂಬ್‌ಲೈಟುಗಳು ಸರಬರಾಜು ಆಗುತ್ತಿತ್ತು. ದಕ್ಷಿಣ ಭಾರತದಲ್ಲಿ ಈ ರೀತಿಯ ಉದ್ದಿಮೆ ಇದೊಂದೇ ಇದ್ದದ್ದು. ತುಂಬಾ ಒಳ್ಳೆಯ ಹೆಸರು ಮಾಡಿದ್ದ ಉದ್ದಿಮೆಗೆ ಗ್ರಹಣ ಬಡಿಯಿತು. ಹಲವು ಎಡರು ತೊಡರುಗಳಿಂದ ನಡೆಯುತ್ತಿದ್ದ ಸಂಸ್ಥೆ ಎಲ್ಲೋ ಮುಗ್ಗರಿಸಿತು. ೨೦೦೩ರಿಂದ ವ್ಯಾಧಿಗ್ರಸ್ತ ಕಾರ್ಖಾನೆ ಎಂದು ಹಣೆ ಪಟ್ಟಿ ಬರೆಸಿಕೊಂಡ ಕಾರ್ಖಾನೆ ಹಲವು ಪುನಃಶ್ಚೇತನ ಕಾರ್ಯಕ್ರಮಗಳ ನಂತರವೂ ಅನಿವಾರ್ಯವಾಗಿ ಮುಚ್ಚಲೇಬೇಕಾಯಿತು. ಸರ್ಕಾರದ ಅಸಮರ್ಪಕ ನಿರ್ವಹಣೆಯಿಂದ ಸಹಸ್ರಾರು ಕಾರ್ಮಿಕರಿಗೆ ಅನ್ನ ವಸತಿ ನೀಡಿದ್ದ ಸಾರ್ವಜನಿಕ ಉದ್ಯಮ ಚಿರಶಾಂತಿ ಪಡೆಯಿತು. ತೊಂಬತ್ತು ವರ್ಷ ನಡೆದ ಕಾರ್ಖಾನೆ ತನ್ನ ಅವಸಾನ ಕಂಡಿತು. ಸರ್ಕಾರ ದಿಟ್ಟವಾಗಿ ಯೋಚಿಸಿ ಕರ್ನಾಟಕದ ಎಲ್ಲಾ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮೈಸೂರ್ ಲ್ಯಾಂಪ್ಸ್ ಮಾತ್ರ ಅಳವಡಿಸಿ ಎಂದು ಒಂದೇ ಒಂದು ಆರ್ಡರ್ ಮಾಡಿದ್ದರೂ, ಒಂದೇ ಒಂದು ಮಾತು ಹೇಳಿದ್ದರೂ ಕಾರ್ಖಾನೆ ಉಳಿಯುತ್ತಿತ್ತು. ವಿಧಾನ ಸೌಧಕ್ಕೆ ದೀಪಾಲಂಕಾರ ಮಾಡಲು ಹೊರದೇಶದ ಕಂಪನಿಗೆ ಗುತ್ತಿಗೆ ಕೊಟ್ಟವರು ಇಲ್ಲಿನ ಕಂಪನಿಗೆ ದೊಡ್ಡ ನಾಮ ಹಾಕಿದರು. ಸರ್ಕಾರದ ಒಂದೇ ಒಂದು ಆದೇಶ ಬಂದಿದ್ದರೆ ಅಷ್ಟು ಜನ ನೌಕರರ ಬಾಳು ಬೀದಿ ಪಾಲಾಗುತ್ತಿರಲಿಲ್ಲ. ಬದಲಿಗೆ ವ್ಯವಸ್ಥಿತವಾಗಿ ನಮ್ಮ ಚುನಾಯಿತ ಮಂತ್ರಿಗಳು ಅದರ ಸಾವಿಗೆ ನೆರವಾದರು. ಒಳ್ಳೆಯ ಗುಣಮಟ್ಟದ ರಾಷ್ಟ್ರಾದ್ಯಂತ ಮಾರುಕಟ್ಟೆ ಹೊಂದಿದ್ದ ರಾಜ್ಯದ ಉದ್ದಿಮೆಯೊಂದು ಹೀಗೆ ತನ್ನ ಅವಸಾನ ಕಂಡಿದ್ದು ಸಹಜವಾಗಿ ನನ್ನಂತಹವರಿಗೆ ಅಂದರೆ ಕಾರ್ಖಾನೆ ಕೆಲಸಗಾರನಿಗೆ (ಇನ್ನೂ ಸ್ಪೆಸಿಫಿಕ್ ಅಂದರೆ proletarian ಪ್ರೋಲಿಟೆರಿಯನ್ ಗೆ) ನೋವು ಕೊಟ್ಟ ಸಂಗತಿ.
ಒಂದು ವಿಷಯ ಇಲ್ಲಿ ಹೇಳಲೇಬೇಕು. ೧೯೮೪ ರಲ್ಲಿ ನಾನು ಮನೆ ಕಟ್ಟಿದಾಗ ಮನೆಯಲ್ಲಿ ಮೈಸೂರ್ ಲ್ಯಾಂಪ್ಸ್ ಎಲ್ಲಾ ಕಡೆ ಹಾಕಿದ್ದೆ. ಅದರಲ್ಲಿ ಒಂದು, ಒಂದು ರೂಪಾಯಿ ಇಪ್ಪತ್ತು ಪೈಸೆ ಕೊಟ್ಟುಕೊಂಡ ಅರವತ್ತು ಕ್ಯಾಂಡಲಿನ ಬಲ್ಬು ಇನ್ನೂ ನಮ್ಮ ಡೈನಿಂಗ್ ಹಾಲ್‌ನಲ್ಲಿ ಉರಿಯುತ್ತಿದೆ!
ಇದರ ಆಸುಪಾಸಿನಲ್ಲಿ ಬೆಂಗಳೂರಿನ ಈ ಭಾಗದಲ್ಲಿ ಹಳೆಯದರಲ್ಲಿ ಒಂದು ಎನ್ನಬಹುದಾದ ಚರ್ಚ್ ಆಗಿನಿಂದಲೂ ಇದೆ. ಅದೇ ರಸ್ತೆ ಮುಂದುವರೆದರೆ ರಸ್ತೆ ಅಂಚಿಗೆ ಬನ್ನಿ. ಇಲ್ಲಿ ರಸ್ತೆ ಐದಾರು ಕವಲು, ಒಂದು ಯಶವಂತಪುರ ಮಾರ್ಕೆಟ್ ಹಾಗೂ ರೈಲ್ವೆ ಸ್ಟೇಶನ್, ಮತ್ತೊಂದು ಯಶವಂತಪುರ ಬಿಎಂಟಿಸಿ ಸ್ಟ್ಯಾಂಡ್, ಈ ಬಿಎಂಟಿಸಿ ಸ್ಟ್ಯಾಂಡ್ ಪಕ್ಕ ಗೋಪಾಲ್ ಥಿಯೇಟರ್, ಮತ್ತೊಂದು ರಸ್ತೆ ತ್ರಿವೇಣಿ ರಸ್ತೆ ಇದು ಮತ್ತಿಕೆರೆ ಲಿಂಕ್ ಬಲಕ್ಕೆ ತಿರುಗಿ ಒಂದು ಹತ್ತು ನಿಮಿಷ ನಡೆದರೆ ಮಲ್ಲೇಶ್ವರ ಹದಿನೆಂಟನೇ ಕ್ರಾಸ್ ಬಸ್ ಸ್ಟ್ಯಾಂಡ್. ಅದಕ್ಕೆ ಮೊದಲು ಸರ್ಕಲ್ ಮಾರಮ್ಮ. ಸರ್ಕಲ್ ಮಾರಮ್ಮ ಆಗ ಪುಟ್ಟ ಮಾರಮ್ಮನ ಗುಡಿ. ನಿಧಾನಕ್ಕೆ ಇದು ಬೆಳೆದು ವಿಸ್ತಾರ ಆಗಿ ಈಗ ಸರ್ಕಲ್ ಹೆಸರು ಅಂಟಿಸಿಕೊಂಡಿದೆ.
ಇದು ಬೆಂಗಳೂರಿಗೆ ಅಂಡರ್ ಪಾಸ್ ಫ್ಲೈ ಓವರ್‌ಗಳು ಬರುವ ಮೊದಲಿನ ನೆನಪು. ಎಡಕ್ಕೆ ತಿರುಗಿದರೆ ಅಂತ ಇದ್ದರೆ ಅದನ್ನು ಓದಿ ಎಡಕ್ಕೆ ತಿರುಗಿದರೆ ಅಲ್ಲಿ ರಸ್ತೆಯೇ ಇಲ್ಲ ಅಂತ ಕನ್ಫ್ಯೂಸ್ ಆಗಬೇಡಿ..! ಹದಿನೆಂಟನೇ ಕ್ರಾಸಿನಿಂದ ಮೊದಲನೇ ಕ್ರಾಸಿಗೆ ಉಲ್ಟಾ ಹೊಡೆಯೋಣ ಬನ್ನಿ. ಮಲ್ಲೇಶ್ವರದ ಒಂದೊಂದು ಕ್ರಾಸಿನಲ್ಲೂ ಸಾಹಿತಿಗಳು, ಕಲಾವಿದರು ಮತ್ತು ಗಣ್ಯಾತಿಗಣ್ಯರು ಇದ್ದಾರೆ ಎಂದು ಹೇಳಿದ್ದೆ. ಈಗ ನನಗೆ ನೆನಪು ಇರುವವರ ಬಗ್ಗೆ ತಿಳಿಸುತ್ತೇನೆ. ಸುಮಾರು ಹೆಸರು ಮರವೆ ಆಗಿರಬಹುದು. ಆದರೂ ಟಿವಿ ಸೀರಿಯಲ್ ಆರಂಭಕ್ಕೆ ಮುನ್ನ ತೋರಿಸುವ ಒಂದು ಸೂಚನೆ ನೆನೆಸಿಕೊಳ್ಳಿ.. ಈ ಧಾರಾವಾಹಿಯ ಮೂಲಕ ಯಾರ ಮನಸ್ಸನ್ನೂ ನೋಯಿಸುವ ಉದ್ದೇಶ ಇಲ್ಲ….! ಮೇಲಾಗಿ ಅಂದಿನ ಬೆಂಗಳೂರಿನ ನೆನಪು ಇಂದಿನದರ ಜತೆ ಹಾಸು ಹೊಕ್ಕು ತಾನೇ.
Same rule applies here also.
ಒಬ್ಬರು ಪೊಲೀಸ್ ಆಫೀಸರ್ ಕ್ಲಾಸಿಗೆ ಬರ್ತಾ ಇದ್ದರು. ಆಗಲೇ ಅವರಿಗೆ ನಿವೃತ್ತಿ ವಯಸ್ಸು. ಮಿಲಿಟರಿ ಬಣ್ಣದ ಪೀ ಕ್ಯಾಪ್ ಮತ್ತು ಖಾಕಿ ಪ್ಯಾಂಟ್ ಯಾವುದಾದರೂ ಬಣ್ಣದ ಅಂಗಿ. ಅಂಗಿ ಪ್ಯಾಂಟ್ ಒಳಗೆ ತೂರಿಸಿ ಪೊಲೀಸ್ ಬೆಲ್ಟ್ ಹಾಕುತ್ತಿದ್ದರು. ಟಪ ಟಪ ಶಬ್ದ ಮಾಡುವ ಕರಿಯ ಬಣ್ಣದ ಶೂ ಅವರ ಹೊರ ನೋಟ. ಕ್ಲಾಸಿನಲ್ಲಿ ಮೊದಲ ಬೆಂಚ್ ವಿದ್ಯಾರ್ಥಿ ಅವರು. ಏನಾದರೂ ಸಂಶಯ ಬಂದರೆ ಸರ್ ಒನ್ ಪಾಯಿಂಟ್ ಎಂದು ಬಲಗೈ ಮೇಲೆತ್ತಿ ಟಕ್ ಎಂದು ಎದ್ದು ನಿಲ್ಲುವರು. ಪ್ರಶ್ನೆ ಕೇಳಿ ಹಾಗೇ ಟಕ್ ಅಂತ ಕೂಡುವರು.
ಹದಿನೆಂಟನೇ ಕ್ರಾಸ್ ಅಂದರೆ ಮೊದಲಿಗೆ ನನ್ನ ನೆನಪು ಅಲ್ಲಿದ್ದ ಜಿ. ರಾಮೇಗೌಡ ಎನ್ನುವ ಎಂ ಎಲ್ ಎ ಅವರದ್ದು. ಅವರ ಮನೆಯಲ್ಲಿ ತುಂಬಾ ಚಿಕ್ಕವನಿದ್ದಾಗ ಯಾವುದೋ ಫಂಕ್ಷನ್‌ನಲ್ಲಿ ಊಟ ಮಾಡಿದ್ದು, ಅಲ್ಲಿ ಮಾವಿನ ಹಣ್ಣಿನ ಹೋಳು ಬಡಿಸಿದ್ದು.. ಈ ನೆನಪು ಇನ್ನೂ ಇದೆ. ಅವರ ಮನೇಲೇ ಮೊದಲು ನಾನು ಜ್ಯೂಕ್ ಬಾಕ್ಸ್ ನೋಡಿದ್ದು. ಊಟಕ್ಕೆ ಮಾವಿನ ಹಣ್ಣು ಬಡಿಸುತ್ತಾರೆ ಎಂದು ತಿಳಿದದ್ದು ಸಹ ಇಲ್ಲೇ. ನಂತರ ಅವರು ಅರಣ್ಯ ಇಲಾಖೆ ಸಚಿವರು ಆಗಿದ್ದರು. ನಮ್ಮ ತಂದೆ ಇವರ ಹತ್ತಿರ ಕೆಲಸ ಮಾಡುತ್ತಿದ್ದರು. ಒಂದು ತಮಾಷೆ ನಮ್ಮ ತಾಯಿ ಆಗಾಗ ಹೇಳುತ್ತಿದ್ದದ್ದು ನೆನಪಾಗುತ್ತಿದೆ. ಆಗತಾನೇಆರಂಭಗೊಂಡಿದ್ದ HMT ಯಲ್ಲಿ ಉದ್ಯೋಗಕ್ಕೆ ಕರೆ ನೀಡಿದ್ದರು. ನಮ್ಮ ದೊಡ್ಡಣ್ಣ ಆಗ ತಾನೇ ಜಯಚಾಮರಾಜ ಪಾಲಿಟೆಕ್ನಿಕ್‌ನಲ್ಲಿ ಮೆಕಾನಿಕಲ್ ಡಿಪ್ಲೊಮಾ DME ಮುಗಿಸಿದ್ದ. ನಮ್ಮ ದೊಡ್ಡಣ್ಣನ ಹೆಸರು ಶಿಫಾರಸು ಮಾಡಲು ಮಂತ್ರಿಗಳು ಸೂಚಿಸಿ ವಿವರ ಕೇಳಿದರು. ನಮ್ಮ ಅಪ್ಪನಿಗೆ ನಮ್ಮ ದೊಡ್ಡಣ್ಣನ ಹೆಸರು ಮರೆತು ಹೋಗಿತ್ತು. ಬೇರೆ ಯಾರದ್ದೋ ಹೆಸರು ಕೊಟ್ಟರು ಅಂತ! ಇದು ನಮ್ಮಮ್ಮ ಹುಟ್ಟು ಹಾಕಿದ್ದ ಜೋಕು. ಬಾಯಿಂದ ಬಾಯಿಗೆ ಹರಡಿ ನಮ್ಮ ಫ್ಯಾಮಿಲಿ ಸರ್ಕಲ್‌ನಲ್ಲಿ ನಿಜ ಎನ್ನುವ ಮಟ್ಟಿಗೆ ಪ್ರಚಾರವಾಗಿತ್ತು. ಅಪ್ಪ ಪಾಪ ಇಂತಹ ಅನ್ ಸಿವಿಲೈಸ್ಡ್ ಮತ್ತು ಕ್ರೂಡ್ ಜೋಕುಗಳನ್ನು ಸಹಿಸಿಕೊಂಡಿದ್ದ ಅಂತ ಅಪ್ಪನ ಬಗ್ಗೆ ಅಭಿಮಾನ ಹೆಚ್ಚುತ್ತೆ!
ಹದಿನೆಂಟನೇ ಕ್ರಾಸಿನಲ್ಲೆ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಗುಂಡೂರಾವ್ ಇದ್ದದ್ದು. ಇವರು ಪ್ರಸ್ತುತ ಸಚಿವ ಆಗಿರುವ ದಿನೇಶ್ ಗುಂಡೂರಾವ್ ಅವರ ತಂದೆ. Out spoken ಅಂತ ಹೆಸರು ಮಾಡಿದ್ದವರು ಇವರು. ನಾನು ಕುರಿ ಕೋಳಿ ತಿನ್ನೋ ಬ್ರಾಹ್ಮಣ ಅಂತ ಹೇಳಿಕೊಂಡಿದ್ದರು. ಸ್ವಿಮ್ಮಿಂಗ್ ಪೂಲ್ ಉದ್ಘಾಟನೆಗೆ ಪೂಲ್‌ಗೆ ಹಾರಿ ಈಜು ಹೊಡೆದವರು. ಸ್ಮಶಾನ ಉದ್ಘಾಟನೆಗೆ ಕರೆದರೆ ಚಿತೆ ಮೇಲೆ ಮಲಗಿ ತಮ್ಮ ದೇಹಕ್ಕೆ ಕೊಳ್ಳಿ ಇಡಸ್ಕೊತ್ತಾರೆ ಅನ್ನುವ ತಮಾಶೆಗೆ ಮೂಲ ಆಗಿದ್ದೋರು. ತಮಿಳು ಚಿತ್ರ ನಟ MGR ಅವರ ಕಟ್ಟಾ ಅಭಿಮಾನಿ. ತಮ್ಮ ಹೆಸರನ್ನು RGR ಎಂದು ಬಿಂಬಿಸುತ್ತಿದ್ದರು. ಕರ್ನಾಟಕದ ಮೊದಲ ಬ್ರಾಹ್ಮಣ ಮುಖ್ಯ ಮಂತ್ರಿ ಇವರು. ಮಾತಿಗೆ ನಿಂತರೆ ಓತ ಪ್ರೋತ ಮಾತು. ಬ್ರೈನ್‌ಗು ನಾಲಿಗೆಗೂ ಮಧ್ಯೆ ಸ್ಕ್ರೀನ್ ಮಿಸ್ ಆಗಿದೆ ಅಂತ ಹೆಸರುವಾಸಿ ಆಗಿದ್ದೋರು. ಕುಡಿದು ಕೆಲಸ ಮಾಡಿ ತಪ್ಪೇನಿಲ್ಲ… ಅಂತ ಸರ್ಕಾರೀ ನೌಕರರಿಗೆ ಹೇಳಿದ್ದರು. ನಾವೆಲ್ಲಾ ಇಂದಿರಾ ಕೃಪಾಪೋಷಿತ ನಾಟಕ ಮಂಡಳಿ ಸದಸ್ಯರು ಅಂತ ಸ್ವಯಂ ಗೇಲಿ ಮಾಡಿಕೊಂಡಿದ್ದ ನಾಯಕ ಇವರು. ಪತ್ರಕರ್ತರು ಅರಬ್ಬಿ ಸಮುದ್ರಕ್ಕೆ ಹಾರಿ ಎಂದು ಕರೆ ಕೊಟ್ಟವರು.
ತಾವು ಭಾಗವಹಿಸಿದ ಸಮಾರಂಭ ಎಲ್ಲದರಲ್ಲೂ ಬೆಳ್ಳಿ ಗದೆ ಸ್ವೀಕಾರ ಮಾಡುತ್ತಿದ್ದರು. ಈಗಲೂ ಅವರ ಮನೇಲಿ ಹುಡುಕಿದರೆ ಸುಮಾರು ಬೆಳ್ಳಿ ಗದೆಗಳು ಸಿಗಬಹುದೇನೋ… ಇವರ ನಂತರ ಮತ್ತೊಬ್ಬ ಬ್ರಾಹ್ಮಣ ಮುಖ್ಯ ಮಂತ್ರಿ ಅಂದರೆ ಶ್ರೀ ರಾಮಕೃಷ್ಣ ಹೆಗಡೆ ಅವರು. ಅವರಿಗೂ ಇವರಿಗೂ ಅಜಗಜಾಂತರ. ಹೆಗಡೆ ಅವರದ್ದು ತುಂಬಾ ಸೌಮ್ಯ ಆದರೆ ಗುಂಡೂರಾಯರು ಒಂದು ರೀತಿ ಆಕ್ರಮಣ ಮನೋಭಾವ. ಹೆಗಡೆ ಓದಿಕೊಂಡು ಬುದ್ಧಿಜೀವಿ ಎನಿಸಿಕೊಂಡಿದ್ದರೆ ಗುಂಡೂರಾಯರು ಅಂತಹ ವಿದ್ಯಾವಂತರಲ್ಲ. ಮೊದಲು ಕೊಡಗಿನ ಸೋಮವಾರ ಪೇಟೆಯಲ್ಲಿ ಬಸ್ ಏಜೆಂಟ್ ಆಗಿದ್ದರಂತೆ. ಆಮೇಲೆ ಕರ್ನಾಟಕದಲ್ಲಿ ಯಾರೂ ಬ್ರಾಹ್ಮಣರು ಮುಖ್ಯಮಂತ್ರಿ ಆದಹಾಗಿಲ್ಲ.
ಇಲ್ಲೇ ಕಲಾವಿದ ಚಿತ್ರಶಿಲ್ಪಿ ಶ್ರೀ ವೆಂಕಟಪ್ಪ ಅವರ ಮನೆ. ಇವರ ಹತ್ತಿರ ಚಿತ್ರಕಲೆ ಕಲಿಯಲು ಬರುತ್ತಿದ್ದ ಸುಮಾರು ಜನ. ಡಿವಿಜಿ ಅವರ ಮಗ ಬಿಜಿ ಎಲ್ ಸ್ವಾಮಿ ಇವರ ಮನೆಗೆ ಬಂದು ಕಲಿಯುತ್ತಾ ಇದ್ದರು ಮತ್ತು ಅರ್ಧದಲ್ಲೇ ನಿಲ್ಲಿಸಿದರು! ವೀಸಿ ಅವರೂ ಇವರ ಬಳಿ ಕಲಿತರು. ಬಿಜಿ ಎಲ್ ಸ್ವಾಮಿ, ವೀ ಸಿ ಇವರು ಅವರ ಲೇಖನಗಳಿಗೆ ಅವರೇ ಚಿತ್ರ ಬರೆದುಕೊಳ್ಳುತ್ತಿದ್ದರು. ಎಂ ವಿ ಸೀತಾರಾಮಯ್ಯ ಅವರೂ ಸಹ ಅವರ ಲೇಖನಗಳಿಗೆ ಅವರೇ ಚಿತ್ರಕಾರ. ಕಾರಂತರು ಸಹ ಅವರ ಸುಮಾರು ಕಾದಂಬರಿಗಳಿಗೆ ಅವರದ್ದೇ ಚಿತ್ರ ಹಾಕುತ್ತಿದ್ದರು. ಕೆ ಕೆ ಹೆಬ್ಬಾರ್ ಅವರೂ ಸಹ ಇವರ ಕಾದಂಬರಿಗಳಿಗೆ ಮುಖಪುಟ ಚಿತ್ರ ಬರೆಯುತ್ತಿದ್ದರು.
ಶ್ರೀ ಕೃಷ್ಣಾನಂದ ಕಾಮತ್ ಹಾಗೂ ಜ್ಯೋತ್ಸ್ನಾ ಕಾಮತ್ ಹದಿನೆಂಟನೇ ಕ್ರಾಸ್‌ನವರು. ಶ್ರೀಮತಿ ಬೀ ಸರೋಜಾದೇವಿ ಹನ್ನೊಂದನೇ ಅಡ್ಡ ರಸ್ತೆ ಆದರೆ ಶ್ರೀ ಅನಂತ ನಾಗ್..( ಇನ್ನೂ ಹಲವರು )ಹದಿನೆಂಟನೇ ಕ್ರಾಸ್. ಇಲ್ಲೇ ಇನ್ನೊಬ್ಬರು ಪಂಕಜಾ ಎನ್ನುವ ಮಹಿಳಾ ಸಾಹಿತಿ ಇದ್ದರು. ಅವರು ಹಲವು ಪ್ರತಿಭೆಗಳ ಸಂಗಮ. ಬ್ಯಾಂಕ್ ಸ್ಥಾಪಕರು, ನಿರ್ದೇಶಕರು ಮತ್ತು ಪ್ರಕಾಶಕರು… ಹೀಗೆ ವಿವಿಧ ರಂಗದಲ್ಲಿ ಹೆಸರು ಮಾಡಿದ್ದರು. ರಾಜ್ಯೋತ್ಸವದ ತಿಂಗಳಲ್ಲಿ ಮನೆ ಮನೆಗೆ ಕನ್ನಡ ಪುಸ್ತಕ ಹೊತ್ತುಕೊಂಡು ಹೋಗಿ ಮಾರಾಟ ಮಾಡುತ್ತಿದ್ದರು. ಒಂದೆರೆಡು ವರ್ಷ ನಾನೂ ಗಂಟು ಹೊತ್ತು ಇವರ ಹಿಂದೆ ಇದ್ದೆ! ಹದಿನೆಂಟನೇ ಕ್ರಾಸಿನ ಎಡಭಾಗದಲ್ಲಿ ಕರಾವಳಿ ಮೂಲದ ಒಂದು ಮಠ ಇತ್ತು. ಅದರ ಪಕ್ಕ ಒಂದು ಚಿಕ್ಕ ದೇವಾಲಯ ಇತ್ತು.
ಹದಿನೇಳನೆಯ ಕ್ರಾಸ್ ಬರ್ತೀರಿ. ಹದಿನೇಳನೇ ಅಡ್ಡರಸ್ತೆ ಅಂದರೆ ಜಿ ಪಿ ರಾಜರತ್ನಂ. ಶಿಶು ಸಾಹಿತ್ಯ ಸೇರಿದ ಹಾಗೆ ಬೌದ್ಧ ಸಾಹಿತ್ಯ, ಆಲ್ವಾರುಗಳ ಬಗ್ಗೆ ವಿಪುಲ ರಚನೆ ಮತ್ತು ಪಾಲಿ ಭಾಷೆಯ ಮೇಲಿನ ಇವರ ಪ್ರೌಢಿಮೆ ಅಚ್ಚರಿ ಹುಟ್ಟಿಸುವಂತಹುದು. ನಮ್ಮ ಪೀಳಿಗೆಯ ಸೌಭಾಗ್ಯ ಅಂದರೆ ಇವರ ಅತಿ ಸಮೀಪ ಕುಳಿತು ಇವರ ಭಾಷಣ ಕೇಳಿದ್ದು ಮತ್ತು ಚಿಕ್ಕ ವಯಸ್ಸಿನಲ್ಲೇ ಪಡೆದ ಸಾಹಿತ್ಯ ದೀಕ್ಷೆ. ನಮ್ಮ ಹೈಸ್ಕೂಲು ಮೇಷ್ಟರು ಶ್ರೀ ಬೀ ಎಸ್ ಗುಂಡೂರಾವ್ ಅವರ ಪ್ರೇರಣೆ ನಮಗೆ. ಇದು ನಮ್ಮ ಅರಿವಿಗೆ ಬಾರದ ಹಾಗೆ ಬೆಳೆದು ಬಂದಿದ್ದು ಒಂದು ಭಾಗ್ಯ.
ಹದಿನಾರನೇ ಅಡ್ಡರಸ್ತೆ ಅಂದರೆ ಪ್ರಕಾಶ್ ಪಡುಕೋಣೆ, ಇವರು All England Open Championship ಗೆದ್ದವರು. ಈ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಇವರು. ಸಹಜವಾಗಿಯೇ ನಾವೆಲ್ಲ ಉಬ್ಬಿದ್ದೆವು. ಇವರ ಮಗಳು ದೀಪಿಕಾ ಪಡುಕೋಣೆ ಅಂತರರಾಷ್ಟ್ರೀಯ ಖ್ಯಾತಿಯ ನಟಿ. ಕೆನರಾ ಯೂನಿಯನ್ ಮುಂದೆ ಹೋದಾಗಲೆಲ್ಲ ಪ್ರಕಾಶ್ ಕಣ್ಣ ಮುಂದೆ ಬರಲೇಬೇಕು. ಅಲ್ಲೇ ಇವರ ಬ್ಯಾಡ್ಮಿಂಟನ್ ತರಬೇತಿ ತರಗತಿಗಳು ನಡೆಯೋದು. ಮತ್ತೊಂದು ನೆನಪು ಅಂದರೆ ನನ್ನ ಮೂರನೇ ಅಣ್ಣನ ಮದುವೆ ಇಲ್ಲೇ ಆಗಿದ್ದು. ಕೆನರಾ ಯೂನಿಯನ್ ಒಂದು ಕಲ್ಯಾಣ ಮಂಟಪ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಇನ್ನೊಂದು ನೆನಪು ಅಂದರೆ ನಾನು ಕೆಲಸ ಮಾಡಿದ ಸಂಸ್ಥೆಯ ಅತ್ಯಂತ ಉನ್ನತ ಅಧಿಕಾರಿ ಒಬ್ಬರ ಮಗನ ಮದುವೆ ನಿಶ್ಚಯವಾಯಿತು. ಅವರಿಗೆ ನಮ್ಮ ಕಾರ್ಖಾನೆಯ ಕಲ್ಯಾಣ ಮಂಟಪವನ್ನು ಬಳಸಿಕೊಳ್ಳಬಹುದು ಎನ್ನುವ ಉಮೇದು. ಅವರ ಬ್ಯಾಡ್ ಲಕ್ ಇವರಿಗೆ ಬೇಕಿದ್ದ ದಿವಸವೇ ಯಾರೋ ವರ್ಕರ್‌ಗೆ ಅದು ಅಲಾಟ್ ಆಗಿದೆ! ಉನ್ನತ ಅಧಿಕಾರಿ ಉತ್ತರ ಭಾರತದವರು. ಬೆಂಗಳೂರು ಅಷ್ಟು ತಿಳಿಯದು. ಅಲ್ಲಾಟ್ ಆಗಿರುವುದನ್ನು ಕ್ಯಾನ್ಸಲ್ ಮಾಡಿ ಅವರ ಮಗನ ಮದುವೆ ಅಲ್ಲಿ ನಡೆಸಿದರೆ ಅದು ತುಂಬಾ ದೊಡ್ಡ ರಾದ್ಧಾಂತ ಆಗಬಹುದು.. ಯೋಚನೆ ಹಲವಾರು ದಿಕ್ಕಿನಲ್ಲಿ ಹರಡಿ ಕೊನೆಗೆ ಆ ಮದುವೆ ಇಲ್ಲಿ ನಡೆದ ನೆನಪು. ತಲೆ ತುಂಬಾ ನೆನಪುಗಳು ತುಂಬಿಕೊಂಡು ಹೊರಕ್ಕೆ ಬರಲು ತಾನು ಮೊದಲು ತಾನು ಮೊದಲು ಅಂತ ನುಗ್ತಾ ಇವೆ…!
ಹದಿನೈದನೇ ಅಡ್ಡರಸ್ತೆ ಅಂದರೆ ಕೂಡಲೇ ನೆನಪಾಗೋದು ಸರ್ ಸಿ ವಿ ರಾಮನ್. ವಿಜ್ಞಾನ ಕ್ಷೇತ್ರದಲ್ಲಿ ಭಾರತಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ವಿಜ್ಞಾನಿ ಇವರು. ಇವರು ಕಂಡು ಹಿಡಿದ ಬೆಳಕಿಗೆ ಸಂಬಂಧ ಪಟ್ಟ ಕ್ರಿಯೆ ಒಂದಕ್ಕೆ ರಾಮನ್ ಎಫೆಕ್ಟ್ ಎಂದೇ ಹೆಸರು. ಐವತ್ತೈದು ವರ್ಷ ಹಿಂದೆ ಓದಿದ್ದು ಅದು. ಈಗ ತಲೆಯಲ್ಲಿ ಅದರ ನೆನಪು ತೊಳೆಯಲು ಹಾಕಿದ ಕುಕ್ಕರ್‌ನಲ್ಲಿ ಅಂಟಿರುವ ಅನ್ನದ ಅಗುಳಿನ ಹಾಗಿದೆ. ಅದರಿಂದ ನಿಮಗೆ ರಾಮನ್ ಎಫೆಕ್ಟ್ ಬಗ್ಗೆ ಏನೂ ಹೇಳೋದಿಲ್ಲ! ಬದಲಿಗೆ ರಾಮನ್ ಅವರು ಟೋಪಿ ಬಿದ್ದ ಕತೆ ಹೇಳುತ್ತೇನೆ. ಇದು ನಾವು ಚಿಕ್ಕವರಾಗಿದ್ದಾಗ ಕೇಳಿದ್ದ ತುಂಬಾ ಫೇಮಸ್ ಕತೆ. ದೊಡ್ಡವನು ಆದಮೇಲೆ ಸಹ ಇದಕ್ಕೆ ಸಂಬಂಧ ಪಟ್ಟ ಹಲವು ಲೇಖನ ಓದಿದ್ದೆ. ನೊಬೆಲ್ ಪ್ರಶಸ್ತಿ ಹಣ ರಾಮನ್ ಅವರಿಗೆ ಬಂದಾಗ ಅದನ್ನ ಎಲ್ಲಾದರೂ ಡಿಪಾಸಿಟ್ ಇಟ್ಟು ಅದರಿಂದ ಬರುವ ಬಡ್ಡಿ ಹಣದಿಂದ ತಮ್ಮ ಮುಂದಿನ ಸಂಶೋಧನೆಗಳಿಗೆ ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕು ಅಂತ ರಾಮನ್ ಅವರು ಯೋಚಿಸಿದ್ದರು. ಗೋಪಾಲರಾವ್ ಅನ್ನುವವರು ಒಂದು ಬ್ಯಾಂಕ್ ನಡೆಸುತ್ತಿದ್ದರು.
ಇವರು ಮೊದಲು ಮೈಸೂರ್ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಆಗಿದ್ದವರು. ಹೆಚ್ಚಿನ ಬಡ್ಡಿ ನೀಡುವ ಬ್ಯಾಂಕ್ ಎಂದು ಇವರ ಬ್ಯಾಂಕ್ ಹೆಸರು ಮಾಡಿತ್ತು ಮತ್ತು ಈ ಗೋಪಾಲ ರಾವ್ ದಾನ ಧರ್ಮದಲ್ಲಿ ಎತ್ತಿದ ಕೈ. ಮೈಸೂರು ಮಹಾರಾಜರು ಇವರಿಗೆ ಧರ್ಮ ರತ್ನಾಕರ ಎನ್ನುವ ಬಿರುದು ಸಹ ನೀಡಿದ್ದರು. ಏಷಿಯಾಟಿಕ್ ಬ್ಯಾಂಕ್ ಎಂದು ಬ್ಯಾಂಕ್ ಹೆಸರು, ಅದು ಏಷಿಯಾಟಿಕ್ ಬಿಲ್ಡಿಂಗ್ ನಲ್ಲಿತ್ತು (ಈಗಿನ ಜನತಾ ಬಜಾರ್ ಕಟ್ಟಡ). ಬಿಲ್ಡಿಂಗು ಗೋಪಾಲರಾಯರದ್ದು. ಇವರ ಬ್ಯಾಂಕ್‌ನಲ್ಲಿ ರಾಮನ್ ಅವರು ನೊಬೆಲ್ ಪ್ರಶಸ್ತಿಯ ದೊಡ್ಡ ಭಾಗವನ್ನೇ ಡಿಪಾಸಿಟ್ ಮಾಡಿದರು. ಕೆಲವು ತಿಂಗಳು ಬಡ್ಡಿ ಬಂತು. ನಂತರ ಗೋಪಾಲ ರಾಯರು insolvency (ಅಂದರೆ ದಿವಾಳಿ, ಪಾಪರಿಕೆ, ಪಾಪರ್ ಚೀಟಿ ಅಂತಲೂ ವ್ಯಾಖ್ಯಾನ ಇದೆ)ಘೋಷಿಸಿ ಕೊಂಡರು.Insolvent ಆದವರು ಪಡೆದ ಸಾಲ ಮತ್ತಿತರ ಹೊಣೆಗಾರಿಕೆ ಯಿಂದ ಮುಕ್ತರು. ರಾಮನ್ ಅವರ ಹಣ ಹೀಗೆ ಮಂಗ ಮಾಯ ಆಯಿತು. ಆಗಾಗ ರಾಮನ್ ಕೋಪದಲ್ಲಿ ನನಗೆ ನೊಬೆಲ್ ಪ್ರಶಸ್ತಿ ಕೊಡೋದರ ಬದಲು ಆ ಗೋಪಾಲರಾಯನಿಗೆ ಮೋಸ ಮಾಡುವ ಬಗ್ಗೆ ನೋಬೆಲ್ ಕೊಡಬೇಕಿತ್ತು ಅಂತ ಕೋಪದಿಂದ ಹೇಳುತ್ತಿದ್ದರಂತೆ! ಈ ಏಷಿಯಾಟಿಕ್ ಬಿಲ್ಡಿಂಗ್ ಕತೆ ಮುಂದೆ ಯಾವಾಗಲಾದರೂ ಹೇಳುತ್ತೇನೆ ಎಂದು ಹೇಳಿದ್ದೆ. ಆದರೆ ಈಗಾಗಲೇ ಆಮೇಲೆ ಹೇಳುವೆ ಎನ್ನುವ ಪಟ್ಟೀ ದೀರ್ಘವಾದ ಬಾಲಂಗೋಚಿ ಆಗಿದೆ. ಅದರಿಂದ ಅದರ ಕತೆ ಈಗಲೇ ಮುಗಿಸಿಬಿಡುತ್ತೇನೆ. ಏಷಿಯಾಟಿಕ್ ಬ್ಯಾಂಕ್ ಜತೆಗೆ ಒಂದು ಇನ್ಸೂರೆನ್ಸ್ ಕಂಪನಿ ಸಹ ಇತ್ತು. ಈ ಎರಡೂ ಸಂಸ್ಥೆಗಳು ಏಷಿಯಾಟಿಕ್ ಬಿಲ್ಡಿಂಗ್‌ನಲ್ಲಿದ್ದವು. ಗೋಪಾಲ ರಾವ್ ಪಾಪರ್ ಚೀಟಿ ತಗೊಂಡ ನಂತರ ಸರ್ಕಾರ ಮಧ್ಯೆ ಪ್ರವೇಶ ಮಾಡಿತು. ಗೋಪಾಲರಾವ್ ಅವರಿಗೆ ಸೇರಿದ ಆಸ್ತಿ ಪಾಸ್ತಿ ವಶ ಪಡಿಸಿಕೊಂಡು ಕಾನೂನಿನ ಮುಂದಿನ ಕ್ರಮ ಕೈಗೊಂಡಿತು. ಹೀಗೆ ಏಷಿಯಾಟಿಕ್ ಬಿಲ್ಡಿಂಗ್ ಸರ್ಕಾರದ ಕೈ ಸೇರಿತು. ಅಲ್ಲಿ ಕೆಲವು ವರ್ಷವೃತ್ತಿ ಪರ ಉದ್ಯೋಗ ವಿನಿಮಯ ಕೇಂದ್ರ (professional Employment exchange)ಕಾರ್ಯ ನಿರ್ವಹಿಸಿತು. ಈಗಲೂ ಅದರ ಕಚೇರಿ ಅಲ್ಲಿದೆ.
೬೬ ರಲ್ಲಿ ರಾಜ್ಯ ಸರ್ಕಾರ co operative ಚಳವಳಿ ಬಲಪಡಿಸಲು ಜನತಾ ಬಜಾರ್ ತೆರೆಯಿತು. ಗ್ರಾಹಕರಿಗೆ ಹೊರೆಯಾಗದ ಹಾಗೆ ಪರಸ್ಪರ ನೆರವಿನ ಯೋಜನೆ ಎಂದು ಬಿಂಬಿಸಲಾಯಿತು. ಜನತಾ ಬಜಾರ್ ಅಂದರೆ ಗುಣಮಟ್ಟದ ಸಾಮಗ್ರಿ ನ್ಯಾಯವಾದ ಬೆಲೆಯಲ್ಲಿ ಅಂತ ಹೆಸರು ಮಾಡಿತು. ಸ್ಟೇಷನರಿ ವಸ್ತುಗಳಿಂದ ಹಿಡಿದು ಬಟ್ಟೆ, ಕಿರಾಣಿ ಸೇರಿದ ಹಾಗೆ ಸುಮಾರು ವಸ್ತುಗಳು ಒಂದೇ ಸೂರಿನಡಿ ದೊರೆಯುತ್ತದೆ ಎಂದು ಇಲ್ಲಿನ ವಿಶೇಷತೆ ಒಳ್ಳೆಯ ಜಾಹೀರಾತು ಆಯಿತು. ಬೆಂಗಳೂರಿನ ಮೊಟ್ಟ ಮೊದಲ ಸೂಪರ್ ಮಾರ್ಕೆಟ್ ಇದು ಆಗ. ಇನ್ನೂ ಸೂಪರ್ ಮಾರ್ಕೆಟ್ ಕಲ್ಪನೆಯೇ ಹುಟ್ಟಿರದ ಕಾಲದಲ್ಲಿ.
ಮತ್ತೊಂದು ಬೆಳಕಿಗೆ ಬಾರದ ಸಂಗತಿ ಅಂದರೆ ಅಲ್ಲಿನ ನೌಕರರು ಮಾಡಿಕೊಂಡ ಸಂಘದಲ್ಲಿ ಈಗಿನ ಜನಪ್ರಿಯ ನಾಯಕ ಶ್ರೀ ಸೋಮಣ್ಣ ಅವರು ಲೀಡರ್ ಆಗಿದ್ದದ್ದು. ಅವರು ಅಲ್ಲಿಂದ ನಿಧಾನಕ್ಕೆ ಏಣಿ ಏರಿ ಏರಿ ಈಗಿನ ರಾಷ್ಟ್ರಮಟ್ಟದ ರಾಜಕಾರಣಿ ಆಗಿದ್ದಾರೆ.
ರಾಮನ್ ಅವರ ಸಂಶೋಧನಾ ಕೆಲಸಗಳು ಪಂಚವಟಿ ಹೆಸರಿನ ಬಂಗಲೆಯಲ್ಲಿತ್ತು. ಇದನ್ನು ಹೊರಗಡೆಯಿಂದ ನೋಡಿದ್ದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ಒಂದು ವಿಭಾಗ ಇವರ ಹೆಸರು ಹೊತ್ತಿದೆ. ಸದಾಶಿವನಗರದ ಒಂದು ಭಾಗದಲ್ಲಿ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ಇದೆ. ಸಿವಿ ರಾಮನ್ ನಗರ ಎಂದು ಒಂದು ಬಡಾವಣೆಗೆ ರಾಮನ್ ಅವರ ಹೆಸರು ಇಡಲಾಗಿದೆ. ಇದು ನಮ್ಮ ರಾಜಕಾರಣಿಗಳ ದಾಸ್ಯದ ಪ್ರವೃತ್ತಿಗೆ ವಿರುದ್ಧವಾದದ್ದು! ಸ್ಥಳೀಯರ ಒಬ್ಬರ ಹೆಸರನ್ನೂ ನಮ್ಮ ಕ್ಷೇತ್ರಗಳಿಗೆ, ನಮ್ಮ ಆರೋಗ್ಯ ಕೇಂದ್ರಗಳಿಗೆ ಮೊದಲಾದ ಸಾರ್ವಜನಿಕ ಕ್ಷೇತ್ರಕ್ಕೆ ಇಡದೇ ಬರೀ ಹೊರಗಿನವರಿಗೆ ಮಣೆ ಹಾಕುತ್ತಿದ್ದ ನಮ್ಮ ರಾಜಕಾರಣಿಗಳ ಒಂದು ಅಪೂರ್ವ ಕೆಲಸ ಇದು! ಭೇಷ್ ..
ಇನ್ನೂ ಇದೆ…
(ಮುಂದುವರೆಯುವುದು…)
ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು.
Enanna tumba chennagi baritiya. Tanage prasangagaly thttane mugiyutte. Nanna law college Renukacharya mattu law abhyas kooda ninna prasangakke holuttade. Nammadu evening ashte ittu. EFirst show cinema nodi maneyalli ake latu kelidaga, illa magesticnalli male ( rain) aytu, adakke theatralli tangidde anta uttar a kodtidde. Evening college adarinda bere ellu suttuva samaya erallila.
ಒಂದು ಉತ್ತಮ ಲೇಖನ. ನಮ್ಮ ನೆನಪುಗಳನ್ನು ಮರುಕಳಿಸುವ ಸರಣಿ ಸಂಗತಿಗಳನ್ನು ಸಾಮಾನ್ಯ ಗೋಪಾಲಕೃಷ್ಣ ಮಾಡಿದ್ದಾರೆ. ಹಾರ್ದಿಕ ಅಭಿನಂದನೆಗಳು.
ಶ್ರೀ ಹರಿ ಸರ್ವೋತ್ತಮ ಅವರೇ ಧನ್ಯವಾದಗಳು
ಶ್ರೀ ರಾಮನಾಥ್ ಅವರೇ ಧನ್ಯವಾದಗಳು
Thank you for such a memorable description of Malleshwaram ( Now Mal Eshwaram bcos of so many malls in the vicinity!!)
Marathe hogittu those roads and with your article I have the opportunity to remember my own life from there a long long time ago!
ಧನ್ಯವಾದಗಳು, ನಂದಾ ಅವರೇ
ಗೋಪಾಲಕೃಷ್ಣ