ಅದೇಕೋ ಅವಳಿಗೆ
ನಿಲ್ಲಲು ಬಾರದು
ನಿಲ್ಲು ಎಂದರೂ ಆಗದು
‘ನೀ ಕೂತು ಕೂತು ಕಲ್ಲಾದರೂ
ಯಾರಿಗೇನು ತೊಂದರೆ?’
ಎಂದು ಕುಲು ಕುಲು ನಕ್ಕು ಅವಳು
ಜುಳು ಜುಳು ಹರಿವಾಗ
ತಾ ನಿಲ್ಲದ ಅನಿವಾರ್ಯತೆಯ
ನಗುವಲೇ ಹೇಳುವಳೆ?
ಪ್ರತಿ ಬಾರಿ ಅವಳ ಮೊಗವ
ಮೊಗೆದಾಗಲೂ ಅವಳು
ನಿಮ್ಮಾಣೆ ನಿತ್ಯನೂತನೆ
ಕಣ್ಣ ಕಾಡಿಗೆ ಅತ್ತು ಪಸರಿಸಿದ ಕಪ್ಪು
ಭುವಿಯ ಸೀರೆಯ ಎರವಲ ಹಸಿರು
ಆಗಸದ ಹಲವು ನೀಲಿಗಳ ಚಿತ್ತಾರದ ಪ್ರತಿಫಲನ
ಮುದಿ ಮೋಡಗಳ ತಲೆಯ ಬಿಳಿ
ಗಾಜಿನೊಡವೆಯ ಪಾರದರ್ಶಕತೆ
ಎಲ್ಲ ಅವಳ ಕಣ್ಣಲ್ಲೇ
ನಾ ನಿಂತಲ್ಲೇ.
ಪ್ರತಿ ಸ್ಪರ್ಶವೂ ನಿತ್ಯ
ಅನನ್ಯ ಅನುಭವ
ಕೆಲವೊಮ್ಮೆ ಮಂಜಿನ ಮನೆಹೊಕ್ಕಂತೆ
ಇನ್ನೊಮ್ಮೆ ಬೆಚ್ಚಗೆ ಬೆಕ್ಕು
ಹೊಕ್ಕಿದ ಮಡಿಲಂತೆ
ಎಲ್ಲ ಅವಳಾಟ
ನಾ ತಟಸ್ಥ.
ಅವಳ ಓಟವ ನಿಲಿಸುವ
ಎದೆಗಾರಿಕೆ ನನಗಿಲ್ಲ
ಬಿಟ್ಟ ಬಾಣವ ತಡೆದು ನಿಲ್ಲಿಸಿದ
ಅನುಭವವಿಲ್ಲ
ಈಗೀಗ ಅವಳಿಲ್ಲದೆ ನಾನಿಲ್ಲ
ಅವಳ ಬಳಿ ಸಾರದ ದಿನವಿಲ್ಲ
ಸಂಗಮದ ಇರಾದೆಯನೂ
ಬಿಡುವ ಮನಸಿಲ್ಲ
ಹೇಳುವ ಸಾಹಸಿಯೂ ನಾನಲ್ಲ.
ಮತ್ತೆ ಸುಮ್ಮನಿರಲಾರದೆ ಕೇಳಿದೆ
ನನ್ನವಳಾಗಲೇಬೇಕೆಂದು
ಜುಳು ಜುಳು ಕುಲು ಕುಲು
ಆಹಾ…ಈ ಕಣ್ಣ ಕಗ್ಗೊಲೆಗೆ
ಶಿಕ್ಷೆಯೇ ಇಲ್ಲ.
‘ನಿನ್ನವಳಾಗುವುದು ಸಾಧ್ಯವೇ ಇಲ್ಲ
ನೀ ನನ್ನವನಾಗಬಹುದಷ್ಟೇ.’
ತೆರೆದ ಬಾಹುಗಳ
ಅನಿರೀಕ್ಷಿತ ಆಹ್ವಾನ.
‘ಒಮ್ಮೆ ಒಳಹೊಕ್ಕರೆ ಮತ್ತೆ
ಹೊರಬರಲಾರೆ,
ನೀ ನೀನಾಗಿರಲಾರೆ,
ಯೋಚಿಸು.’
ಮತ್ತದೇ ಕುಲು ಕುಲು.
ಮತ್ತೇನಿದೆ ಯೋಚನೆಗೆ
ಬೇಕಿದ್ದುದು ಸಂಗಮವೊಂದೆ.
ಮೊದಲು ಕರ ಸ್ಪರ್ಶದ
ಕಪೋಲ ಚುಂಬನದ
ಬಾಹು ಬಂಧನದ ಕನಸು
ನಿನ್ನಾಳವ ಶೋಧಿಸದೆ
ಬಿಡುಗಡೆ ಹೊಂದಲಾರದ ಶಪಥ
ಎದೆ ಬಡಿತ ಏದುಸಿರು
ಉಸಿರು ನಿಂತಂಥ ಭಾವ.
ಏರಿದ ಆಪೋಷನದ ಆವೇಗ
ಒಳಗಿಳಿಯುತ್ತ ಇಳಿಯುತ್ತ
ತಲ ಸ್ಪರ್ಶಿಸುತ್ತ ಸುತ್ತಿ ಸುಳಿದ
ನಾ ಸಂಪೂರ್ಣ ಶಾಂತ,
ಅವಳು ಅದೇ ಜುಳು ಜುಳು.
ಅವಳ ಅನಂತ ಒಡಲ ತುಂಬೆಲ್ಲ
ನನ್ನಂಥ ಲಕ್ಷ ಲಕ್ಷ
ತಪ್ತ ಆತ್ಮಗಳ ಮಹಾ ಸಂಗಮ
ನಿತ್ಯ ತೃಪ್ತ ಧ್ಯಾನಸ್ಥರ
ಅನಿಯಂತ್ರಿತ ಸಂಚಾರ.
ನನ್ನ ಅಹಮಿಕೆಯ ಗುಳ್ಳೆಗಳ
ಒಡೆಯುತ್ತ ನನ್ನ
ಆತ್ಮವನೂ ಅವಳ
ವಶಕ್ಕೊಪ್ಪಿಸಿ
ಹಗುರಾಗಿ ತೇಲುತ್ತಿರುವೆ
ಮತ್ತೆ ಮತ್ತೆ ಹೊಸ ಮಹಾ ಸಂಗಮಕೆ
ಅವಳು ಸಜ್ಜುಗೊಳ್ಳುತ್ತಿದ್ದಾಳೆ..
ಕವಿತಾ ಹೆಗಡೆ ಉತ್ತರ ಕನ್ನಡದ ಕುಮಟಾ ತಾಲೂಕಿನ ಕತಗಾಲದವರು. ಪ್ರಸ್ತುತ ಹುಬ್ಬಳ್ಳಿಯ ಕೆ ಎಲ್ ಇ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. “ದ ನೆಸ್ಟೆಡ್ ಲವ್” ಇವರ ಪ್ರಥಮ ಇಂಗ್ಲಿಷ್ ಕಥಾ ಸಂಕಲನ. ಮೂರು ಕನ್ನಡ ಕೃತಿಗಳು ಶೀಘ್ರದಲ್ಲಿ ಹೊರಬರಲಿವೆ. ಇಂಗ್ಲಿಷ್ -ಕನ್ನಡ ಕಥೆ ಕವನಗಳ ರಚನೆ ಮತ್ತು ಅನುವಾದದಲ್ಲಿ ಆಸಕ್ತಿ ಹೊಂದಿದ್ದಾರೆ.