ಈ ಬೆಟ್ಟದ ಬುಡದಲ್ಲಿರುವ ರೈತಾಪಿ ಜನರು ಮಳೆಗಾಲದ ಉಳುಮೆಯ ನಂತರ ತಮ್ಮ ದನ ಕರು ಎತ್ತುಗಳನ್ನು ಈ ಬೆಟ್ಟಗಳ ಮೇಲಿನ ಹುಲ್ಲುಗಾವಲುಗಳಿಗೆ ಅಟ್ಟಿರುತ್ತಾರೆ. ಮುಂದಿನ ಮಳೆಗಾಲದ ಉಳುಮೆಯವರೆಗೆ ಈ ಜಾನುವಾರುಗಳು ಕಾಡು ಪ್ರಾಣಿಗಳಂತೆ ಇಲ್ಲೇ ಮೇಯುತ್ತಿರುತ್ತವೆ. ಊರು ದನಗಳು ಕಾಡುದನಗಳಂತೆ ಮೈಯೆಲ್ಲಾ ಮಣ್ಣು ಮೆತ್ತಿಕೊಂಡು ದಿಕ್ಕು ತಪ್ಪಿದ ಬಾಲಕರಂತೆ ಇಲ್ಲೇ ಮೇದುಕೊಂಡಿರುತ್ತವೆ. ಒಡೆಯರು ಅದೆಲ್ಲಿಂದಲೋ ಹೆಸರು ಹಿಡಿದು ಕೂಗುತ್ತಾ ಬಂದರೆ ವಿದೇಯ ಮಕ್ಕಳಂತೆ ಅವರ ಜೊತೆ ಮರಳುತ್ತವೆ.
ಕಥೆಗಾರ ಅಬ್ದುಲ್ ರಶೀದ್ ಬರೆದ ಒಂದು ಅಲೆಮಾರಿ ಪ್ರವಾಸ ಕಥನ.

 

ಮಡಿಕೇರಿಯಿಂದ ಸುಮಾರು ಇಪ್ಪತ್ತು ಕಿಲೋಮೀಟರ್ ದೂರವಿರುವ ಮಾಂದಲ್ ಪಟ್ಟಿ ಪರ್ವತಶ್ರೇಣಿಗೆ ನಾನು ತಿಂಗಳಿಗೊಮ್ಮೆಯಾದರೂ ಒಂಟಿಯಾಗಿ ಹೋಗಿ ಬರುತ್ತೇನೆ. ಬೆಳಗೆ ಸೂರ್ಯ ಹುಟ್ಟುವ ಹೊತ್ತಿಗೋ, ಮಧ್ಯಾಹ್ನ ಸೂರ್ಯ ನಡುನೆತ್ತಿ ಮೇಲಿರುವಾಗಲೋ ಅಥವಾ ಸಂಜೆಯ ಸೂರ್ಯ ಕಂತುವ ಮೊದಲೋ ಈ ಪರ್ವತಗಳ ನಡುವೆ ಬೈತಲೆಯಂತೆ ಸಾಗುವ ಅಡ್ಡಾದಿಡ್ಡಿ ದಾರಿಯಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಎದುರುಗಡೆ ಮೋಡಗಳು  ಮಲೆಶೃಂಗಗಳ ಮೇಲೆ ತಮ್ಮ ಬಿಳಿಸೆರಗನ್ನು ಹಾರಿಸಿಕೊಂಡು ಮೋಹಿನಿಯರಂತೆ ಸಾಗುತ್ತಿರುತ್ತವೆ. ಸಂಗೀತದ ರಾಗಗಳಿಗೆ ಋತುಮಾನ ಮತ್ತು ಕಾಲಗಳ ಹಂಗಿರುವಂತೆ ಈ ಪರ್ವತಶ್ರೇಣಿಗಳಿಗೂ ಬೆಳಗು ಸಂಜೆಗಳ ಹಂಗು, ಮಳೆ ಚಳಿ ಬಿಸಿಲುಗಳ ಹಂಗು.

ಈ ಬೆಟ್ಟದ ಬುಡದಲ್ಲಿರುವ ರೈತಾಪಿ ಜನರು ಮಳೆಗಾಲದ ಉಳುಮೆಯ ನಂತರ ತಮ್ಮ ದನ ಕರು ಎತ್ತುಗಳನ್ನು ಈ ಬೆಟ್ಟಗಳ ಮೇಲಿನ ಹುಲ್ಲುಗಾವಲುಗಳಿಗೆ ಅಟ್ಟಿರುತ್ತಾರೆ. ಮುಂದಿನ ಮಳೆಗಾಲದ ಉಳುಮೆಯವರೆಗೆ ಈ ಜಾನುವಾರುಗಳು ಕಾಡು ಪ್ರಾಣಿಗಳಂತೆ ಇಲ್ಲೇ ಮೇಯುತ್ತಿರುತ್ತವೆ. ಊರು ದನಗಳು ಕಾಡುದನಗಳಂತೆ ಮೈಯೆಲ್ಲಾ ಮಣ್ಣು ಮೆತ್ತಿಕೊಂಡು ಉಣ್ಣಿಗಳಿಂದ ಕಡಿಸಿಕೊಂಡು ದಿಕ್ಕು ತಪ್ಪಿದ ಬಾಲಕರಂತೆ ಇಲ್ಲೇ ಮೇದುಕೊಂಡಿರುತ್ತವೆ. ಒಡೆಯರು ಅದೆಲ್ಲಿಂದಲೋ ಹೆಸರು ಹಿಡಿದು ಕೂಗುತ್ತಾ ಬಂದರೆ ವಿದೇಯ ಮಕ್ಕಳಂತೆ ಕೊಂಬುಗಳನ್ನು ಕುಣಿಸುತ್ತಾ ಅವರ ಜೊತೆ ಮರಳುತ್ತವೆ.

ಒಮ್ಮೊಮ್ಮೆ ಒಂಟಿಯಾಗಿ ಹೋಗುತ್ತಿರುವಾಗ ನನಗೂ ಅನ್ನಿಸುತ್ತದೆ. ಯಾರಾದರೂ ನನ್ನ ಗುರುತನ್ನೂ ಹಿಡಿದು ನನ್ನನ್ನೂ ಕರೆದುಕೊಂಡು ಹೋಗಬಾರದಾ ಅಂತ. ಆದರೆ ಇರುವವರೆಲ್ಲರೂ ಅಪರಿಚಿತರಂತೆ ಹಾದು ಹೋಗುತ್ತಾರೆ. ಎಲ್ಲೋ ಕಂಡಂತಿರುವ ಮುಖಗಳು, ಏನೋ ಆಗಿಹೋದಂತಿರುವ ನೆನಪುಗಳು. ಸುಮ್ಮನೇ ಬೆಟ್ಟವೊಂದರ ನೆತ್ತಿ ಹತ್ತಿ ಇಳಿದಾರಿಯಲ್ಲಿ ಸಾಗುತ್ತೇನೆ.

“ಒಮ್ಮೊಮ್ಮೆ ಒಂಟಿಯಾಗಿ ಹೋಗುತ್ತಿರುವಾಗ ನನಗೂ ಅನ್ನಿಸುತ್ತದೆ. ಯಾರಾದರೂ ನನ್ನ ಗುರುತನ್ನೂ ಹಿಡಿದು ನನ್ನನ್ನೂ ಕರೆದುಕೊಂಡು ಹೋಗಬಾರದಾ ಅಂತ. ಆದರೆ ಇರುವವರೆಲ್ಲರೂ ಅಪರಿಚಿತರಂತೆ ಹಾದು ಹೋಗುತ್ತಾರೆ. ಎಲ್ಲೋ ಕಂಡಂತಿರುವ ಮುಖಗಳು, ಏನೋ ಆಗಿಹೋದಂತಿರುವ ನೆನಪುಗಳು. ಸುಮ್ಮನೇ ಬೆಟ್ಟವೊಂದರ ನೆತ್ತಿ ಹತ್ತಿ ಇಳಿದಾರಿಯಲ್ಲಿ ಸಾಗುತ್ತೇನೆ”.

ನಡುವಲ್ಲಿ ಯಾವುದೋ ಕಾಲದಲ್ಲಿ ಯಾರೋ ದೇವದೂತರ ವಿಮಾನವೊಂದು ಬಲವಂತವಾಗಿ ಭೂಮಿಗೆ ಇಳಿದಾಗ ಉಂಟಾದಂತಹ ಗುಳಿ. ಕೋಟ್ಯಾನುಕೋಟಿ ವರ್ಷಗಳಿಂದ ಆ ಗುಳಿಯಲ್ಲಿ ಸುರಿದ ಮಳೆ ಕೋಡಿಯಾಗಿ ಹರಿಯುತ್ತಾ ಇಳಿದಾಗ ಉಂಟಾದ ಕಾಲುದಾರಿ. ಆ ಕಾಲುದಾರಿಯಲ್ಲಿ ಈಗಿನ ಕಾಲದ ಹಸುಗಳು ಹಾಕಿದ ಸಗಣಿ ಮತ್ತು ಮನುಷ್ಯರು ಬಿಸಾಕಿದ ಮದ್ಯದ ಬಾಟಲುಗಳು ಮತ್ತು ಕುರುಕಲು ತಿಂಡಿಯ ಪ್ಲಾಸ್ಟಿಕ್ಕುಗಳು.

ಹೊಸತಾಗಿ ಮದುವೆಯಾಗಿರುವ ಉತ್ತರ ಭಾರತದ ಹುಡುಗಿಯೊಬ್ಬಳ ಹೈಹೀಲ್ಡ್ ಚಪ್ಪಲಿಯ ಉಂಗುಷ್ಠ ಕಿತ್ತು ಹೋಗಿದೆ. ಅವಳನ್ನು ವರಿಸಿರುವ ಯುವಕನ ಮುಖದ ತುಂಬ ಉಲ್ಲಾಸ ಮತ್ತು ಯೌವನದ ಮೊಡವೆಗಳು. ಹೀಗೇ ನಡೆಯುತ್ತಾ ಹೋದರೆ ಈ ದಾರಿ ಎಲ್ಲಿಗೆ ಹೋಗುತ್ತದೆ ಎಂದು ಕೇಳುತ್ತಾನೆ.

‘ಇಲ್ಲೇ ಮುಂದೆ ಒಂದು ಕಲ್ಲಿನ ಬಿಡಾರವಿದೆ. ಈ ಸಲವಾದರೂ ಹೇಗಾದರೂ ಮಾಡಿ ದ್ರೌಪದಿಯೊಡನೆ ಯಾರ ರಗಳೆಯೂ ಇಲ್ಲದೆ ಒಂದು ಇರುಳು ಕಳೆಯಬೇಕು ಎಂದು ಭೀಮ ಇಲ್ಲೇ ದೂರದಲ್ಲಿ ಒಂದು ಕಲ್ಲಿನ ಬಿಡಾರ ಕಟ್ಟಿದ್ದ. ಆದರೆ ಬಿಡಾರವೆಲ್ಲ ಕಟ್ಟಿ ಮುಗಿದು ಇನ್ನೇನು ಬಾಗಿಲು ಜೋಡಿಸಬೇಕು ಎನ್ನುವಾಗ ಕೋಳಿ ಕೂಗಿ ಬೆಳಗಾಯಿತು. ಬೆಳಗಾದ ಮೇಲೆ ಕೂಡಬಾರದು ಎಂಬ ನಿಯಮ ಹಾಗಾಗಿ ಬಲಶಾಲಿಯಾದ ಭೀಮ ಕೋಮಲಳಾದ ದ್ರೌಪದಿಯನ್ನು ಕೂಡದೇ ಸಿಟ್ಟಲ್ಲಿ ವಾಪಾಸು ಬರಬೇಕಾಯಿತು. ಸುರತವಿಲ್ಲದ ಆ ಸಿಟ್ಟಲ್ಲೇ  ಆತ ಈಗಲೂ ಇಲ್ಲೆಲ್ಲ ಮುಷ್ಟಿ ಬಿಗಿದುಕೊಂಡು ಓಡಾಡುತ್ತಿರುತ್ತಾನೆ. ನೀವು ಇನ್ನೂ ಕೊಂಚ ಹೋದರೆ ಆ ಕಲ್ಲಿನ ಬಿಡಾರ ಸಿಗುತ್ತದೆ. ಅಲ್ಲಿಗೆ ಈ ದಾರಿಯೂ ಮುಗಿಯುತ್ತದೆ’ ಎಂದು ಕೊಂಚ ಐತಿಹ್ಯವನ್ನೂ ಬಹಳಷ್ಟು ವಾಸ್ತವವನ್ನೂ ಸೇರಿಸಿ ಅವರಿಗೊಂದು ಕಥೆ ಹೇಳುತ್ತೇನೆ. ಆ ಹುಡುಗಿಯ ಮುಖ ಅರಳುತ್ತದೆ. ಆಕೆ ಕಿತ್ತುಹೋದ ಚಪ್ಪಲಿಯನ್ನು ಕೈಯಲ್ಲಿ ಹಿಡಿದುಕೊಂಡು ನಿಮೀಲಿತಳಾಗಿ ಈ ಕಥೆಯನ್ನು ಕೇಳುತ್ತಾಳೆ. ಹುಡುಗನ ಮುಖದ ಮೊಡವೆಗಳು ಇನ್ನಷ್ಟು ಕೆಂಪಾಗುತ್ತದೆ.

‘ನಮ್ಮ ಊರಲ್ಲೂ ಒಂದು ಸರೋವರ ಇದೆ. ಅದರ ದಡದಲ್ಲೂ ಒಂದು ಕಲ್ಲಿನ ಬಿಡಾರವಿದೆ. ಆ ಬಿಡಾರದ ಕುರಿತೂ ಇಂತಹದೇ ಒಂದು ಕಥೆ ಇದೆ. ಆದರೆ ಅಲ್ಲಿ ಅದು ಅರ್ಜುನ ಮತ್ತು ದ್ರೌಪದಿಯ ಕಥೆ. ನಿಮ್ಮಲ್ಲಿ ಭೀಮನ ಕತೆ. ತಮಾಷೆಯಾಗಿದೆಯಲ್ಲ’ ಎಂದು ಆತ ಆಕೆಯ ಮುಖ ನೋಡಿ ಹೇಳುತ್ತಾನೆ. ಭೂಲೋಕದ ಎಲ್ಲ ಕಡೆಯೂ ಇಂತಹ ಕಥೆಗಳೇ. ಎಲ್ಲ ಕಟ್ಟಿ ಮುಗಿಸುವಾಗ ಬೆಳಕು ಹರಿಯುತ್ತದೆ. ಇನ್ನೇನು ಆಯಿತು ಅನ್ನುವಾಗ ಕೋಳಿ ಕೂಗುತ್ತದೆ. ಭೀಮನಾದರೂ ಅರ್ಜುನನಾದರೂ ಎಲ್ಲ ಗಂಡಸರೂ ಅಸಹಾಯಕರೇ. ಹಾಗಾಗಿ ಎಲ್ಲರೂ ಮುಷ್ಠಿ ಬಿಗಿಮಾಡಿಕೊಂಡು ಓಡಾಡುತ್ತಿರುತ್ತಾರೆ. ಆದರೆ ಒಳಗೊಳಗೆ ಎಲ್ಲರೂ ಪಾಪದ ಗಂಡಸರು ಮತ್ತು ಪಾಪದ ಹೆಂಗಸರು.

ಎಲ್ಲ  ಪಂಚಮಹಾಭೂತಗಳನ್ನು ಒಳಗೊಂಡ ಈ ಪರ್ವತಶ್ರೇಣಿ ಮಾತ್ರ ಬಲಿಷ್ಠ. ಹಾಗಾಗಿ ನಾನೂ ಇಲ್ಲಿ ಒಂಟಿಯಾಗಿ ಓಡಾಡಿಕೊಂಡಿರುತ್ತೇನೆ ಎಂದು ಮನಸಿನಲ್ಲೇ ನಗುತ್ತೇನೆ. ಕೆಲವೇ ಕ್ಷಣಗಳ ಹಿಂದೆ ಅವನದೇ ರೀತಿಯ ಮೊಡವೆಗಳ ಯುವಕನಾಗಿದ್ದ ನಾನು ಈಗ ಕೆಲವೇ ಕ್ಷಣಗಳಲ್ಲಿ ವಯಸ್ಸಾದವನಂತಾಗಿರುವುದು ಗೊತ್ತಾಗಬಾರದೆಂದು ಮೋಡಗಳ ಸೆರಗೊಂದು ನಮ್ಮ ನಡುವೆ ಗೋಡೆಯೊಂದನ್ನು ಕಟ್ಟುತ್ತದೆ. ‘ಬಾಯ್ ಅಂಕಲ್’ ಎಂದು ಅವರಿಬ್ಬರು ಒಬ್ಬರ ಹೆಗಲಮೇಲೊಬ್ಬರು ಕೈ ಕೋಸಿಕೊಂಡು ನಡೆಯುತ್ತಾರೆ.

“ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು. ಒಂದೊಂದು ಗುಟುಕಿಗೂ ಎಷ್ಟೆಲ್ಲ ಕಥೆಗಳು”

ಈ ಮಾಂದಲ್ ಪಟ್ಟಿ ಪರ್ವತ ಶ್ರೇಣಿಯ ಇನ್ನೊಂದು ಮಗ್ಗುಲ ಕಡಿದಾದ ದಾರಿಯಲ್ಲಿ ಒಂದು ಬೈನೆ ಮರವಿದೆ. ಬಹಳ ಹಳೆಯ ಕಾಲದ ಬೈನೆ ಮರ. ಇದೇ ದಾರಿಯಲ್ಲಿ ಕೆಲವು ಸಾವಿರ ವರ್ಷಗಳ ಹಿಂದೆ ಈಶ್ವರನೂ ಭಗವತಿಯೂ ನಡೆದು ಬರುತ್ತಿದ್ದರಂತೆ. ಭಗವತಿಗೆ ತಡೆಯಲಾರದಷ್ಟು ನೀರಡಿಕೆ. ಸುತ್ತ ಎಲ್ಲೂ ನೀರಿನ ಒರತೆಯಿಲ್ಲ. ಶಿವ ಬೆನ್ನ ಹಿಂದೆ ಸಿಗಿಸಿದ್ದ ಬತ್ತಳಿಕೆಯಿಂದ ಅಂಬೊಂದನ್ನು ತೆಗೆದು ಈ ಮರದ ಬಲಿಷ್ಠ ಕೊಂಬೆಯೊಂದಕ್ಕೆ ಗುರಿ ಇಟ್ಟನಂತೆ. ಆ ಬೈನೆ ಮರದ ಕೊಂಬೆಯಿಂದ ಹರಿದ ನೀರು ಭಗವತಿಯ ನೀರಡಿಕೆಯಿಂದ ಕಂಗೆಟ್ಟ ಗಂಟಲೊಳಕ್ಕೆ ಅಮೃತದಂತೆ ಹರಿದು ಆಕೆ ಬಾಯಾರಿಕೆ ನೀಗಿಸಿಕೊಂಡು ಮತ್ತಳಾಗಿ ಈಶ್ವರನ ಎದೆಗೆ ಒರಗಿದಳಂತೆ.

ಅಂದಿನಿಂದ ಆ ಮರದ ಕೊಂಬೆಯಿಂದ ಒಸರತೊಡಗಿದ ಬೈನೆಯ ಕಳ್ಳು ಈಗಲೂ ಒಸರುತ್ತಲೇ ಇದೆ. ನನ್ನಂತಹ ಕೆಲವು ಹುಲುಮಾನವರು ಈಗ ಸಂಜೆ ಕತ್ತಲಾಗುವ ಮೊದಲು ಆ ಬೈನೆ ಮರದ ಕೆಳಗೆ ನೆರೆಯುತ್ತಾರೆ. ಹುಲಿ ಮೀಸೆ ಬಿಟ್ಟ ಬಲಿಷ್ಟ ಬಾಹುಗಳ ಮುದುಕನೊಬ್ಬ ಸೊಂಟಕ್ಕೆ ಸಣ್ಣದೊಂದು ಕತ್ತಿ ಸಿಗಿಸಿ ಈ  ಮರಕ್ಕೆ ಪೇರಿಸಿಟ್ಟ ಬಿದಿರು ಗಳವನ್ನು ಹತ್ತಿ ಕಳ್ಳು ಇಳಿಸುತ್ತಾನೆ. ಪಾರ್ವತಿಯಂತೆ ಸುಂದರಿಯಾಗಿರುವ ಆತನ ವಯಸ್ಸಾದ ಮಗಳು ಆತ ಮರದ ಮೇಲಿನಿಂದ ಹಗ್ಗಕ್ಕೆ ಕಟ್ಟಿ ಇಳಿಸುವ ಕಳ್ಳಿನ ಕೊಡಪಾನವನ್ನು ನೆಲಕ್ಕೆ ಇಳಿಸಿ ಒಂದು ಎಲೆಯಲ್ಲಿ ಒಂದಿಷ್ಟು ಕಳ್ಳು ತೆಗೆದು ಮರದ ಕೆಳಗಿರುವ ಈಶ್ವರನ ಕಲ್ಲಿಗೆ ಅರ್ಪಿಸುತ್ತಾಳೆ. ಆನಂತರ ನಾವೆಲ್ಲ ಹೆಗಲಲ್ಲಿ ಕಳ್ಳಿನ ಕೊಡಪಾನ ಹೊತ್ತಿರುವ ಈ ಮುದುಕನ ಹಿಂದೆ ವಿದೇಯ ವಿದ್ಯಾರ್ಥಿಗಳಂತೆ ನಡೆಯುತ್ತೇವೆ.

ಪರ್ವತದ ತುದಿಯಿಂದ ಇಳಿವ ಮಂಜು ಪರದೆಪರದೆಯಾಗಿ ನಮ್ಮೆಲ್ಲರನ್ನೂ ಆವರಿಸುತ್ತದೆ. ಇನ್ನು ಅಲ್ಲಿರುವಷ್ಟೂ ಹೊತ್ತು ನಾವು ಮತ್ತು ಆ ಮುದುಕನ ಕಳ್ಳು ಮತ್ತು ಆತ ನೆಂಜಲುಕೊಟ್ಟ ಒಣ ಸೀಗಡಿಯ ಚಟ್ನಿ ಮತ್ತು ಕಥೆಗಳು. ಒಂದೊಂದು ಗುಟುಕಿಗೂ ಎಷ್ಟೆಲ್ಲ ಕಥೆಗಳು.

ಆದರೆ ಒಬ್ಬರ ಕಥೆಯಲ್ಲೂ ತಲೆಯ ಮೇಲಿರುವ ಆ ಪರ್ವತದ ವಿಷಯವೇ ಇಲ್ಲ. ನಾನು ಕೇಳುತ್ತೇನೆ.‘ಇಷ್ಟೆಲ್ಲ ಜನ ಇದ್ದೀವಿ. ಇಷ್ಟೆಲ್ಲ ಕಥೆ ಹೇಳುತ್ತಿದ್ದೀವಿ. ಆದರೆ ನಾವು ಯಾರೂ ಯಾಕೆ ಆ ಪರ್ವತದ ಕಥೆ ಹೇಳುತ್ತಲೇ ಇಲ್ಲ?’ ಆದರೂ ಯಾರೂ ಆ ಮಾಂದಲ್ ಪಟ್ಟಿ ಪರ್ವತ ಶ್ರೇಣಿಯ ಕಥೆ ಹೇಳುವುದೇ ಇಲ್ಲ.

(ಫೋಟೋಗಳು: ಅಬ್ದುಲ್ ರಶೀದ್)

(ಫೋಟೋಗಳು: ಅಬ್ದುಲ್ ರಶೀದ್)