ಮಾಡೆಲಿಂಗ್ ಕ್ಷೇತ್ರ ಮತ್ತು ಜಾಹೀರಾತು ಕ್ಷೇತ್ರಗಳಿಗಿರುವ ನಿಕಟ ಸಂಬಂಧವನ್ನು ಕಡೆಗಣಿಸುವಂತಿಲ್ಲ. ಶೇವಿಂಗ್ ಬ್ಲೇಡ್‌ನಿಂದ ಹಿಡಿದು ದುಬಾರಿ ಕಾರುಗಳ ತನಕ ನೂರಾರು ಉತ್ಪನ್ನಗಳ ಮಾರಾಟಕ್ಕೆ ಹೆಣ್ಣಿನ `ಸುಂದರ’ ದೇಹದ ಪ್ರದರ್ಶನ ಅನಿವಾರ್ಯವಾಗಿಬಿಟ್ಟಿದೆ. ಈ ನಡುವೆ ಜಾಹೀರಾತುಗಳು ವಿದ್ಯಾವಂತ ಹಾಗೂ ತನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ತ್ರೀಯನ್ನು ಆಗೀಗ ತೋರಿಸುತ್ತವಾದರೂ ಸೌಂದರ್ಯದ ಸೀಮಿತ ಕಲ್ಪನೆಯನ್ನೇ ಇವು ಮುಂದು ಮಾಡುತ್ತವೆ ಎಂಬುದು ಸತ್ಯ.
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣದ ಏಳನೆಯ ಬರಹ
ಪುರುಷಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆಗೆ ಅವಳ ದೇಹವೆಂಬುದು ಎಂದಿದ್ದರೂ ಸವಾಲಿನ ವಿಷಯವೇ. ಅದರಲ್ಲೂ ದೇಹವನ್ನು ಮುಖ್ಯ ಸಾಧನವಾಗಿಟ್ಟುಕೊಂಡು ಕೆಲಸ ಮಾಡಬೇಕಾದ ವೃತ್ತಿಗಳಲ್ಲಿ ಈ ಸವಾಲು ಮತ್ತಷ್ಟು ಗಂಭೀರ ಸ್ವರೂಪವನ್ನು ತಳೆಯುತ್ತದೆ. ಸಿನಿಮಾ, ಮಾಡೆಲಿಂಗ್ ಮುಂತಾದ ಕ್ಷೇತ್ರಗಳು ಈ ವಿಷಯದಲ್ಲಿ ಮತ್ತಷ್ಟು ಜಿಗುಟಾದ ಪ್ರಶ್ನೆಗಳನ್ನು ಎತ್ತುತ್ತವೆ.
ಮಾಡೆಲ್ ಅಂದರೆ ಛಾಯಾಚಿತ್ರ, ಮುದ್ರಣಮಾಧ್ಯಮ, ವಿದ್ಯುನ್ಮಾನಮಾಧ್ಯಮಗಳ ಜಾಹೀರಾತಿನ ಮೂಲಕ ಅಥವಾ ಪ್ರದರ್ಶನದ ಮೂಲಕ, ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯು ವಿನ್ಯಾಸಗೊಳಿಸಿದ ಉಡುಪು, ಒಡವೆ ಮುಂತಾದುವನ್ನು ತೊಟ್ಟು, ಆ ವಸ್ತುವನ್ನು ನಿರ್ಮಿಸಿದವರಿಗೆ ದೃಶ್ಯಸೌಕರ್ಯದ ಅನುಕೂಲ ನೀಡುವ ವ್ಯಕ್ತಿ ಎಂದು ಅರ್ಥ. ಕನ್ನಡದಲ್ಲಿ ಮಾಡೆಲ್ ಎಂಬ ಆಂಗ್ಲ ಪದಕ್ಕೆ ಸಂವಾದಿಯಾಗಿ(ಮೂಲ ಫ್ರೆಂಚ್ ಪದ ಮಾಡೆಲ್ಲೆ) ರೂಪದರ್ಶಿ ಎಂಬ ಪದವನ್ನು ಬಳಸುತ್ತೇವೆ.
ಮಾಡೆಲಿಂಗ್ ಇಂದು ಮಹಿಳೆಯರು ಅದರಲ್ಲೂ ನಗರ, ಪಟ್ಟಣಪ್ರದೇಶಗಳ ಯುವ ಮಹಿಳೆಯರು ತುಂಬ ಆಕರ್ಷಣೆಗೆ ಒಳಗಾಗಿರುವ ಕ್ಷೇತ್ರ. ಈ ಕ್ಷೇತ್ರವು ಮೊದಲಿಗೆ ಬೆಳಕಿಗೆ ಬಂದಿದ್ದು ಫ್ರಾನ್ಸ್ ದೇಶದಲ್ಲಿ. 1853ರಲ್ಲಿ ಆ ದೇಶದ ಚಾರ್ಲ್ಸ್ ವರ್ತ್ ಎಂಬವನು ತಾನು ವಿನ್ಯಾಸ ಮಾಡಿದ ಉಡುಪೊಂದನ್ನು ತನ್ನ ಪತ್ನಿಯಾದ ಮೇರಿ ವರ್ತ್ಳು ತೊಟ್ಟು ಪ್ರದರ್ಶಿಸುವಂತೆ ವ್ಯವಸ್ಥೆ ಮಾಡಿದಾಗ ಮಾಡೆಲಿಂಗ್ ಅಥವಾ ರೂಪದರ್ಶಿ ಕ್ಷೇತ್ರ ಜನ್ಮ ತಳೆಯಿತು. 1960ರ ಹೊತ್ತಿನಲ್ಲಿ ಯುರೋಪಿನ ತುಂಬ ಬೇರೆ ಬೇರೆ ಮಾಡೆಲಿಂಗ್ ಏಜೆನ್ಸಿಗಳು ಕಾರ್ಯಾರಂಭ ಮಾಡುವುದರೊಂದಿಗೆ ಈ ವೃತ್ತಿಗೆ ಆಕರ್ಷಿತರಾಗುವವರ ಸಂಖ್ಯೆ ಹೆಚ್ಚಿತು. ಭಾರತದಲ್ಲೂ ಕಳೆದ 25-30ವರ್ಷಗಳಲ್ಲಿ ಇದರ ಕಾರ್ಯವ್ಯಾಪ್ತಿ ತುಂಬ ಹೆಚ್ಚಿದೆ.
ಮಾಡೆಲ್‌ಗಳ ಮೂಲಕ ತೋರಿಸಲಾಗುವ ಜಾಹೀರಾತುಗಳ ಪ್ರಭಾವ ಮಕ್ಕಳು ಮತ್ತು ಯುವಜನತೆಯ ಮೇಲೆ ಅತಿ ಹೆಚ್ಚಾಗಿದೆ. ಒಂದು ಅಧ್ಯಯನದ ಪ್ರಕಾರ 69% ಯುವತಿಯರು “ಅತ್ಯುತ್ತಮ ದೇಹಾಕಾರವನ್ನು ಕುರಿತ ತಮ್ಮ ವಿಚಾರಗಳು ಜಾಹೀರಾತುಗಳಲ್ಲಿನ ಮಾಡೆಲ್‌ಗಳಿಂದ ಪ್ರಭಾವಿತವಾಗಿವೆ” ಎಂದಿದ್ದಾರೆ. 44%ದಷ್ಟು ಮಹಿಳೆಯರು ತಾವು ತಮ್ಮ ಎತ್ತರಕ್ಕೆ ಇರಬೇಕಾದಷ್ಟು ತೂಕ ಅಥವಾ ಅದಕ್ಕಿಂತ ಕಡಿಮೆ ತೂಕ ಇದ್ದರೂ, ತಾವು ಇರಬೇಕಾದದ್ದಕ್ಕಿಂತ ಹೆಚ್ಚು ತೂಕ ಹೊಂದಿದ್ದೇವೆ ಎಂಬ ಭಾವನೆಯನ್ನು ಹೊಂದಿದ್ದಾರಂತೆ. ಹೀಗಿದೆ ಮಾಡೆಲ್‌ಗಳ ಮೂಲಕ ತೋರಿಸಲಾಗುವ ಜಾಹೀರಾತುಗಳ ಪರಿಣಾಮ!
ಮಾಡೆಲಿಂಗ್ ಕ್ಷೇತ್ರವು ಮುದ್ರಣ ಮಾಧ್ಯಮ, ವಿದ್ಯುನ್ಮಾನ ಮಾಧ್ಯಮ, ದೃಶ್ಯಕಲೆ ಮುಂತಾದ ಅನೇಕ ನೆಲೆಗಳನ್ನು ವ್ಯಾಪಿಸಿದೆ. ಮಾಡೆಲ್‌ಗಳನ್ನು ಹೊಂದಿದ ವಿವಿಧ ಬಗೆಯ ಜಾಹೀರಾತುಗಳು ದಿನವಿಡೀ ಪ್ರಸಾರವಾಗುತ್ತಿರುತ್ತವೆ. ವಿದ್ಯುನ್ಮಾನ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಪಡೆಯುವ ಸೌಂದರ್ಯಸ್ಪರ್ಧೆಗಳು ಮಾಡೆಲಿಂಗ್ ಕ್ಷೇತ್ರದ ಆಕರ್ಷಣೆಯನ್ನು ಇನ್ನಷ್ಟು ಹೆಚ್ಚಿಸಿವೆ. ಈ ಕ್ಷೇತ್ರದಲ್ಲಿರುವ ಗ್ಲಾಮರ್, ಹಣ, ಮತ್ತು ಪ್ರಸಿದ್ಧಿಗಳ ಸೆಳೆತ ಕಡಿಮೆಯೇನಲ್ಲ. ಜೊತೆಗೆ ಮಾಡೆಲಿಂಗ್ ಕ್ಷೇತ್ರವು ಸಿನಿಮಾ ಎಂಬ ಮಾಯಾಲೋಕಕ್ಕೆ ಹೆಬ್ಬಾಗಿಲು ತೆರೆಯುತ್ತದೆ ಎಂಬ ವಿಷಯವು ಇದನ್ನು ಕುರಿತ ಮೋಹವನ್ನು ಮತ್ತಷ್ಟು ಹೆಚ್ಚಿಸಿದೆ. ರೂಪದರ್ಶಿಗಳು, ಮಧ್ಯವರ್ತಿಗಳು, ವಸ್ತ್ರ ವಿನ್ಯಾಸಕರು, ಕಾರ್ಯಕ್ರಮ ನಿರ್ವಾಹಕರು (ಇವೆಂಟ್ ಮ್ಯಾನೇರ‍್ಸ್), ಸೌಂದರ್ಯ ಸಾಧನಗಳ ನಿರ್ಮಾತೃಗಳು, ಪ್ರಾಯೋಜಕರು ಇವರೆಲ್ಲ ಇರುವ ಒಂದು ದೊಡ್ಡ ಜಾಲವಿದು. ಇಂದು ಈ ಕ್ಷೇತ್ರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೋಟ್ಯಾಂತರ ರೂಪಾಯಿಗಳ ಉದ್ಯಮವಾಗಿ ಬೆಳೆದಿದೆ.
ಮಾಡೆಲಿಂಗ್ ಕ್ಷೇತ್ರದ ರೂಪದರ್ಶಿಗಳ ತೊಡಗುವಿಕೆಯನ್ನು ಗಮನಿಸುವುದಾದರೆ, ಇಲ್ಲಿ ದೇಹವೇ ದೊಡ್ಡ ಬಂಡವಾಳ. ಅದೇ ಪ್ರಥಮ ಅಂಶ, ಅದೇ ಅತಿ ಮುಖ್ಯ ನಿರ್ಣಾಯಕ ಅಂಶ. ಯುವತಿಯರು ಆಕರ್ಷಿತರಾಗುವುದೂ ಮಾಡೆಲಿಂಗ್ ಕ್ಷೇತ್ರದ ಈ ವಿಭಾಗಕ್ಕೇ ಹೌದು. ದೇಹ ಅಂದರೆ ಎಂತಹ ದೇಹ? ಸಾಮಾನ್ಯವಾಗಿ ಇಲ್ಲಿ ನಿರೀಕ್ಷಿಸಲಾಗುವುದು ಪಾಶ್ಚಾತ್ಯ, ಶ್ವೇತವರ್ಣೀಯ, ವ್ಯಾಪಾರೀ ಲೋಕದ ಉದ್ಯಮಗಳು ಯಾವುದನ್ನು ಸುಂದರ ಅನ್ನುತ್ತವೋ ಅಂತಹ ದೇಹ, ಬಿಳಿಬಣ್ಣ, ನುಣುಪು ಚರ್ಮ, ಎತ್ತರವಾದ ನಿಲುವು, ಉದ್ದ ಕಾಲುಗಳು, ಸಪೂರ ಸೊಂಟ……. ಒಟ್ಟಿನಲ್ಲಿ ಬಾರ್ಬಿ ಗೊಂಬೆಯಂತಹ ದೇಹ. ಸ್ತ್ರೀವಾದದ ಪರಿಭಾಷೆಯಲ್ಲಿ ಹೇಳುವುದಾದರೆ ಇದು ಪುರುಷ ನೋಟದ ನಿರ್ಮಿತಿಯಾದ ಸರಕೀಕೃತ ದೇಹ. ಇಂತಹ ದೇಹವು ಅನೇಕ ಕಾಲೇಜು ವಿದ್ಯಾರ್ಥಿನಿಯರ ಕನಸು. ಇದನ್ನು ಪಡೆಯಲಿಕ್ಕಾಗಿ ಅವರು ಏನು ಬೇಕಾದರೂ ಮಾಡುತ್ತಾರೆ. `ಫೇರ್ ಅಂಡ್ ಲವ್ಲಿʼ(ಈಗ ಅದು `ಗ್ಲೋ ಅಂಡ್ ಲವ್ಲಿ’ ಆಗಿದೆ, ಈ ಹೆಸರಿನಲ್ಲಿನ ಬದಲಾವಣೆಯು ಜಾಹೀರಾತು ಪ್ರಪಂಚವು ವರ್ಣ ತಾರತಮ್ಯವನ್ನು ಕುರಿತು ಮರುಚಿಂತನೆ ಮಾಡಬೇಕಾದ ಒತ್ತಡವನ್ನು ಅನುಭವಿಸುತ್ತಿರುವುದಕ್ಕೆ ಸಾಕ್ಷಿ) ಕ್ರೀಮುಗಳನ್ನು ಕೊಳ್ಳುತ್ತಾರೆ, ಉಪವಾಸ ಮಾಡಿ ಸಣ್ಣಗಾಗಲು ಪ್ರಯತ್ನಿಸುತ್ತಾರೆ, ತಮ್ಮ ಉಡುಪಿನ ವಿನ್ಯಾಸಗಳನ್ನು ಬದಲಾಯಿಸಿಕೊಳ್ಳುತ್ತಾರೆ, ಬೆಕ್ಕಿನ ನಡಿಗೆ ಕಲಿಯಲು ಹಾತೊರೆಯುತ್ತಾರೆ, ಸಾಲ ಮಾಡಿಯಾದರೂ ಸಾವಿರಾರು ರೂಪಾಯಿ ತೆತ್ತು ದುಬಾರಿ ಫ್ಯಾಷನ್ ಫೋಟೋಶೂಟ್ ಮಾಡಿಸುತ್ತಾರೆ. ವಿವಿಧ ಬಗೆಯ ಸೌಂದರ್ಯ ಸಾಧನಗಳನ್ನು ಬಳಸುತ್ತಾರೆ, ದೇಹಕ್ಕೆ ತುಂಬ ತೊಂದರೆ ಕೊಡುವ ಹೈ ಹೀಲ್ಡ್ ಚಪ್ಪಲಿಗಳನ್ನು ಧರಿಸುತ್ತಾರೆ….. ಒಟ್ಟಿನಲ್ಲಿ `ಮಾಡೆಲ್‌ನಂತಹ’ ದೇಹವನ್ನು ಪಡೆಯುವ ತಮ್ಮ ಕನಸು ನನಸಾಗಲಿಕ್ಕಾಗಿ ಬಹುಸಂಖ್ಯಾತ ಯುವತಿಯರು ಏನು ಬೇಕಾದರೂ ಮಾಡುತ್ತಾರೆ! `ಯು ಲುಕ್ ಲೈಕ್ ಎ ಮಾಡೆಲ್!’ ಎಂಬುದು ಆಧುನಿಕ ಸಂದರ್ಭದಲ್ಲಿ ಒಂದು ಅತಿ ದೊಡ್ಡ ಪ್ರಶಂಸೆಯ ಮಾತಾಗಿದೆ. ಈ ದೃಷ್ಟಿಕೋನವು ದೇಹವನ್ನು ಭೋಗವಸ್ತುವಿನ ಮಟ್ಟಕ್ಕಿಳಿಸುತ್ತದೆ ಎಂಬ ಸ್ತ್ರೀವಾದಿಗಳ ಎಚ್ಚರಿಕೆಯ ಮಾತು ಬಹಳ ಸಲ ಅರಣ್ಯರೋದನವಾಗುತ್ತದೆ.
ಮಾಡೆಲ್‌ಗಳ ದೇಹಾಕಾರವನ್ನು ಕಾಪಾಡಿಕೊಳ್ಳುವ ಮತ್ತು ತೂಕ ಹೆಚ್ಚಾಗದಿರುವ ಬಗ್ಗೆ ಎಷ್ಟು ಒತ್ತಡವಿರುತ್ತದೆ ಎಂದರೆ ಅದರ ವಿವರಗಳನ್ನು ನೋಡಿದರೆ ಗಾಬರಿಯಾಗುತ್ತದೆ. ದಿನದಿನಕ್ಕೂ ಹೊಸಹೊಸ ತರುಣ, ತರುಣಿಯರು ಆಗಮಿಸುವ ಈ ಕ್ಷೇತ್ರದಲ್ಲಿ ತಮ್ಮ ಸ್ಥಾನಮಾನಗಳನ್ನು ಉಳಿಸಿಕೊಳ್ಳಲು ರೂಪದರ್ಶಿಗಳು ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಕಷ್ಟಗಳಿಗೆ ಒಳಗಾಗುತ್ತಾರೆ. ಆದರೂ ಈ ಕ್ಷೇತ್ರದ ಆಕರ್ಷಣೆ ಅಪಾರ.
ಮೇಲಿನ ಮಾತುಗಳಿಗೆ ಸಾಕ್ಷಿಯೆಂಬಂತೆ ಇಂದು ಕಾಲೇಜುಗಳಲ್ಲಿ ಫ್ಯಾಷನ್ ಷೋ, ಬ್ಯೂಟಿ ಕಾಂಟೆಸ್ಟ್‌ಗಳು ಕಾಲೇಜು ಆವರಣದ ಅತ್ಯಂತ ಜನಪ್ರಿಯ ಸ್ಪರ್ಧೆಗಳಾಗಿವೆ. ಬೆಂಗಳೂರಿನ ಕೆಲವು ಕಾಲೇಜುಗಳಂತೂ ಭಾವೀ ಮಾಡೆಲ್‌ಗಳ ಮತ್ತು ಭಾವೀ ಸಿನಿಮಾ ತಾರೆಯರ ತಯಾರಿಕಾ ಕೇಂದ್ರಗಳಾಗಿಬಿಟ್ಟಿವೆ. ಗಾಯನ, ನರ್ತನ ಕ್ರೀಡೆ, ವಾಗ್ಮಿತೆ, ಸಂಶೋಧನಾ ಪ್ರವೃತ್ತಿ ಇಂತಹ ಕ್ಷೇತ್ರಗಳಲ್ಲಿನ ಪ್ರತಿಭೆಯನ್ನು ಒರೆಗೆ ಹಚ್ಚುವ ಸ್ಪರ್ಧೆಗಳಿಗಿಂತ ನೂರು ಪಟ್ಟು ಪ್ರಖ್ಯಾತಿ ಸೌಂದರ್ಯ ಸ್ಪರ್ಧೆಗಳಿಗಿದೆ!
ಹೆಚ್ಚುತ್ತಿರುವ ಮಾಲ್ ಸಂಸ್ಕೃತಿಯೂ ಮಾಡೆಲಿಂಗ್ ಕ್ಷೇತ್ರದ ಜನಪ್ರಿಯತೆಯು ಹೆಚ್ಚುವಂತೆ ಮಾಡಿದೆ. ವಸ್ತ್ರವಿನ್ಯಾಸಕರು ಮಾಲ್‌ಗಳಿಗೆ ಬರುವ ಗ್ರಾಹಕರನ್ನು ಆಕರ್ಷಿಸಲು ಮಾಲ್‌ಗಳಲ್ಲೇ ಫ್ಯಾಷನ್ ಷೋಗಳನ್ನಿಟ್ಟು ತಮ್ಮ ವಿನ್ಯಾಸಗಳನ್ನು ಪ್ರದರ್ಶಿಸಲು ಇಷ್ಟ ಪಡುತ್ತಾರೆ. ಕೊಳ್ಳುಬಾಕ ಸಂಸ್ಕೃತಿಯ ದಳ್ಳುರಿ ಹಬ್ಬಲು ಮಾಡೆಲಿಂಗ್ ಕ್ಷೇತ್ರವು ತನ್ನ ಪಾಲನ್ನು ಯಥೇಚ್ಛವಾಗಿ ಸೇರಿಸುತ್ತಿದೆ.
ಮಾಡೆಲಿಂಗ್ ಕ್ಷೇತ್ರ ಮತ್ತು ಜಾಹೀರಾತು ಕ್ಷೇತ್ರಗಳಿಗಿರುವ ನಿಕಟ ಸಂಬಂಧವನ್ನು ಕಡೆಗಣಿಸುವಂತಿಲ್ಲ. ಶೇವಿಂಗ್ ಬ್ಲೇಡ್‌ನಿಂದ ಹಿಡಿದು ದುಬಾರಿ ಕಾರುಗಳ ತನಕ ನೂರಾರು ಉತ್ಪನ್ನಗಳ ಮಾರಾಟಕ್ಕೆ ಹೆಣ್ಣಿನ `ಸುಂದರ’ ದೇಹದ ಪ್ರದರ್ಶನ ಅನಿವಾರ್ಯವಾಗಿಬಿಟ್ಟಿದೆ. ಈ ನಡುವೆ ಜಾಹೀರಾತುಗಳು ವಿದ್ಯಾವಂತ ಹಾಗೂ ತನ್ನ ವೃತ್ತಿಯನ್ನು ಗಂಭೀರವಾಗಿ ತೆಗೆದುಕೊಳ್ಳುವ ಸ್ತ್ರೀಯನ್ನು ಆಗೀಗ ತೋರಿಸುತ್ತವಾದರೂ ಸೌಂದರ್ಯದ ಸೀಮಿತ ಕಲ್ಪನೆಯನ್ನೇ ಇವು ಮುಂದು ಮಾಡುತ್ತವೆ ಎಂಬುದು ಸತ್ಯ.
ಸ್ತ್ರೀವಾದಿ ದೃಷ್ಟಿಕೋನದಿಂದ ನೋಡಿದಾಗ ಕಾಣುವ ಮಾಡೆಲಿಂಗ್ ಕ್ಷೇತ್ರದ ನೋಟವೇ ಬೇರೆ. ಮಾಡೆಲಿಂಗ್ ಕ್ಷೇತ್ರವು ಸ್ತ್ರೀಯ ಎಂತಹ ಸೀಮಿತ ಆಯಾಮವನ್ನು ಕಟ್ಟಿಕೊಡುತ್ತದೆ ಎಂಬುದನ್ನು ಈ ದೃಷ್ಟಿಕೋನದಿಂದ ಮಾಡಿದ ಅಧ್ಯಯನವು ಸ್ಪಷ್ಟವಾಗಿ ತಿಳಿಸಿಕೊಡುತ್ತದೆ.
ಸ್ತ್ರೀದೇಹದ ಸರಕೀಕರಣ
1. ಹೆಣ್ಣಿನ ದೇಹವನ್ನು ಬಟ್ಟೆಯನ್ನೋ, ಒಡವೆಯನ್ನೋ ತೂಗುಹಾಕುವ ಸ್ಟ್ಯಾಂಡ್‌ನಂತೆ ಬಳಸುವುದು ಅಥವಾ ಅವಳ ದೇಹದ ಅರೆನಗ್ನತೆಯು ಉಂಟುಮಾಡುವ ಆಕರ್ಷಣೆಯನ್ನು ಉತ್ಪನ್ನಗಳ ಮಾರಾಟಕ್ಕೆ ಒಂದು ಸಾಧನವಾಗಿ ಬಳಸುವುದು, ಅವಳ ದೇಹವನ್ನೂ ವಸ್ತುಗಳಲ್ಲಿ ಒಂದು ವಸ್ತುವಾಗಿಸುತ್ತದೆ. ಕೊಳ್ಳುವ ಮಾರುವ ವಸ್ತು.
2. ದೇಹಕ್ಕೆ ಈ ಮಾಡೆಲಿಂಗ್ ಕ್ಷೇತ್ರವು ಕೊಡುವ ವಿಪರೀತ ಪ್ರಾಮುಖ್ಯದಿಂದ ಈ ಕ್ಷೇತ್ರಕ್ಕೆ ಆಕರ್ಷಿತರಾಗುವವರಲ್ಲಿ ಸೌಂದರ್ಯದ ವ್ಯಾಪಾರೀದೃಷ್ಟಿಕೋನದ ನಿರ್ವಚನದ ಬಗ್ಗೆ, ಬೇರೆ ಮಾತುಗಳಲ್ಲಿ ಹೇಳುವುದಾದರೆ `ಬಾರ್ಬಿ ಗೊಂಬೆಯಂಥ ರೂಪ’ದ ಬಗ್ಗೆ ಅತಿಯಾದ ಗೀಳು ಬೆಳೆಯುತ್ತದೆ. ಇದರಿಂದ ಸಣ್ಣಗಾಗುವ ಬಗ್ಗೆ ಸದಾ ಚಿಂತಿಸುವಂತಾಗುತ್ತದೆ. ಒಂದು ಸಿದ್ಧ ಅನುಪಾತದ ದೇಹವನ್ನು ಪಡೆಯಲು ಉಪವಾಸ ಮಾಡುವುದು, ಊಟ ಮಾಡಿದ ನಂತರ ಗಂಟಲಿಗೆ ಬೆರಳಿಟ್ಟು ವಾಂತಿ ಮಾಡಿಕೊಳ್ಳುವುದು, ಅನೋರೆಕ್ಸಿಕ್ ಆಗುವುದು ಇಂತಹ ಅನಾರೋಗ್ಯಕರ ಅಭ್ಯಾಸಗಳು ಯುವತಿಯರಲ್ಲಿ ಬೆಳೆಯುತ್ತವೆ.
3. ಪುರುಷ ಪ್ರಧಾನ ವ್ಯವಸ್ಥೆಯು ಶತಮಾನಗಳಿಂದ ಹೆಣ್ಣನ್ನು ಭೋಗವಸ್ತುವಾಗಿ ನೋಡುತ್ತಾ ಬಂದಿದೆ. ವೇಶ್ಯೆ ಎಂದು ಕರೆದು ಅವಳ ದೇಹವನ್ನು ಕೊಂಡು ಮಾರುತ್ತಿದೆ. ಕ್ಯಾಬರೆ ನರ್ತಕಿ ಎಂಬ ನಿರ್ಮಿತಿಯು ಪಕ್ಕಾ ಪುರುಷದೃಷ್ಟಿಯ (ಮೇಲ್ ಗೇಝ್‌ನ) ನಿರ್ಮಿತಿ. ಬಾರ್ ಡ್ಯಾನ್ಸಿಂಗ್, ಸ್ಟ್ರಿಪ್ ಕ್ಲಬ್ಸ್ ಮುಂತಾದವು ಈ ಕ್ಯಾಬರೆ ನರ್ತಕಿಯ ವಿಸ್ತೃತ ರೂಪಗಳೇ. ಮಾಡೆಲಿಂಗ್ ಕ್ಷೇತ್ರದ ಆಕರ್ಷಣೆಯಿಂದಾಗಿ ಸ್ವತಃ ಸ್ತ್ರೀಯರೇ ಈ ಸರಕೀಕೃತ, ಭೋಗವಾದೀ ದೃಷ್ಟಿಕೋನವನ್ನು ತಮ್ಮ ಬಗ್ಗೆ ಹೊಂದುವುದು ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡಂತೆ. ಸ್ತ್ರೀಯರ ಆತ್ಮಗೌರವಕ್ಕಾಗಿ ಮತ್ತು ಬೌದ್ಧಿಕ ದಾಸ್ಯದಿಂದ ಬಿಡುಗಡೆಗಾಗಿ ಸ್ತ್ರೀವಾದ ಮಾಡಿದ ಸುಮಾರು ಎರಡು ಶತಮಾನಗಳ ಹೋರಾಟಕ್ಕೆ ಇದು ಒಂದು ಹಿನ್ನಡೆಯಲ್ಲದೆ ಬೇರೇನಲ್ಲ.
4. ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಯಶಸ್ಸನ್ನು ಪಡೆಯುವವರ ಸರಾಸರಿ ಸಂಖ್ಯೆ ತುಂಬ ಕಡಿಮೆ. ಸುಮಾರು 18ರಿಂದ 26 ವಯಸ್ಸಿನ ತನಕ ಮಾತ್ರ ನಿರ್ವಹಿಸಬಹುದಾದ ವೃತ್ತಿ ಅದು. ಈ ಬಗ್ಗೆ ಸಮತೋಲಿತ ದೃಷ್ಟಿಕೋನ ಇಟ್ಟುಕೊಳ್ಳುವ ಅಗತ್ಯವಿದೆ. ತಮ್ಮ ಜೀವನವನ್ನು ಬೇರೆ ವೃತ್ತಿಗಳ ಆಯ್ಕೆಯನ್ನಿಟ್ಟುಕೊಂಡು, ಸಕಾರಾತ್ಮಕವಾಗಿ ರೂಪಿಸಿಕೊಳ್ಳಲು ಅಪಾರ ಮಾನಸಿಕ ದೃಢತೆ ಮತ್ತು ಯೋಜನೆ ಬೇಕು. ಇಷ್ಟು ತಿಳುವಳಿಕೆ ಮಾಡೆಲಿಂಗ್ ಕ್ಷೇತ್ರಕ್ಕೆ ಹೋಗುವ ಎಲ್ಲರಲ್ಲೂ ಇರುತ್ತದೆಂದು ಹೇಳಲು ಸಾಧ್ಯವೇ? ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಬೀದಿ ಬದಿಯಲ್ಲಿ ಅನಾಥಳಂತೆ ಬಿದ್ದು ಸತ್ತ ಗೀತಾಂಜಲಿ ಎಂಬ ರೂಪದರ್ಶಿಯ ಕಥೆಯನ್ನು ಈ ವಿಷಯದಲ್ಲಿ ಎಚ್ಚರಿಕೆಯ ಗಂಟೆ ಎಂದು ನೋಡಬೇಕು.
5. ಯೌವನ, ಹಣ ಮತ್ತು ಸ್ವಚ್ಛಂದತೆ ಈ ಮೂರೂ ಸೇರಿದರೆ ಅದು ಒಂದು ಅಪಾಯಕಾರಿಯಾದ ಸಂಯೋಜನೆಯಾಗುತ್ತದೆ. ಸೌಂದರ್ಯ, ದೈಹಿಕ ಆಕರ್ಷಣೆ, ತಡರಾತ್ರಿಯವರೆಗೂ ನಡೆಯುವ ಸಂತೋಷಕೂಟಗಳು, ಮದ್ಯ, ಮಾದಕವಸ್ತುಗಳ ಸೇವನೆ ಇವೆಲ್ಲ ಫ್ಯಾಷನ್ ಕ್ಷೇತ್ರದ ಹಾಸುಹೊಕ್ಕುಗಳು. ಇದರಿಂದ ಯುವತಿಯರು ಎಂತೆಂತಹ ಅಪಾಯಕಾರೀ ಸನ್ನಿವೇಶಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು ಎಂಬುದನ್ನು ವಿವರವಾಗಿ ವರ್ಣಿಸುವ ಅಗತ್ಯವಿದೆಯೇ? ಲೈಂಗಿಕ ಕಿರುಕುಳ, ಅತಿಕ್ರಮಣಗಳ ಸಮಸ್ಯೆ ಒಂದು ಕಡೆಯಾದರೆ ತಮಗೆ ತಾವೇ ಕೊಟ್ಟುಕೊಳ್ಳುವ ಮುಕ್ತ ಲೈಂಗಿಕತೆಯ ಆಯ್ಕೆ ತರುವ ಸಮಸ್ಯೆಗಳು ಇನ್ನೊಂದು ಕಡೆ.
*****
ಸೌಂದರ್ಯಸ್ಪರ್ಧೆಗಳ ಹುನ್ನಾರ
ಎಲ್ಲ ಮಾಡೆಲ್‌ಗಳ ಮತ್ತು ಈ ಕ್ಷೇತ್ರದ ಆಕಾಂಕ್ಷಿಗಳ ಅತಿದೊಡ್ಡ ಕನಸೆಂದರೆ ಮಿಸ್‌ಇಂಡಿಯಾ, ಮಿಸ್ ಯೂನಿವರ್ಸ್, ಮಿಸ್‌ವರ್ಲ್ಡ್ ಮುಂತಾದ ರಾಷ್ಟ್ರ ಮಟ್ಟದ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯಸ್ಪರ್ಧೆಗಳಲ್ಲಿ ಕಿರೀಟ ಗೆಲ್ಲುವುದು. ಈ ಸ್ಪರ್ಧೆಗಳನ್ನು ಹೆಣ್ಣಿನ ಆತ್ಮವಿಶ್ವಾಸವನ್ನು ಬೆಳೆಸುವ ವಲಯಗಳು, ಸ್ತ್ರೀತ್ವದ ಸಂಭ್ರಮಾಚರಣೆ, ಸ್ತ್ರೀಯ ಬಿಡುಗಡೆ, ಸಮಾಜ ಸೇವೆಯ ಅವಕಾಶ ಮುಂತಾದ ಆಕರ್ಷಕ ಪದಗಳನ್ನು ಬಳಸಿ ವಿವರಿಸಲಾಗುತ್ತದೆ. ಆದರೆ ಇದರಲ್ಲಿರುವುದು ಸೌಂದರ್ಯ ಉತ್ಪನ್ನಗಳನ್ನು ಮಾರುವ ಕಂಪೆನಿಗಳ ಲಾಭದೃಷ್ಟಿಯಷ್ಟೇ. ಇದು ಬಿಡುಗಡೆಯ ದಾರಿಯಲ್ಲ, ಬದಲಾಗಿ ಮತ್ತೆ ಸ್ತ್ರೀಯನ್ನು `ದೇಹವೇ ಅವಳ ವಿಧಿʼ ಎಂಬ ಹಳೆಯ ಸೆರೆಮನೆಗೆ ಕಳಿಸುವ ಬಂಧನದ ದಾರಿ ಮಾತ್ರ.
ಸೌಂದರ್ಯವನ್ನು ದೇಹಕ್ಕೆ ಸೀಮಿತವಾದದ್ದು ಅಥವಾ ಅಂಗಾಂಗಗಳ ಅಳತೆಯ ನಿರ್ದಿಷ್ಟ ಅನುಪಾತಕ್ಕೆ, ಬಣ್ಣಕ್ಕೆ ಸೀಮಿತವಾದದ್ದು ಎಂಬ ಸಂಕುಚಿತ ಅರ್ಥದಲ್ಲಿ ಗ್ರಹಿಸುವುದು ಅತ್ಯಂತ ಅಪಾಯಕಾರಿಯಾದದ್ದು. ಇದು ಮನುಷ್ಯ ಮನುಷ್ಯರ ನಡುವೆ ಅನಾರೋಗ್ಯಕರ ತುಲನೆಗೆ ಎಡೆಮಾಡಿಕೊಡುತ್ತದೆ. ಕೆಲವರನ್ನು ಆಯ್ಕೆ ಮಾಡಿಕೊಂಡು ಹಲವರನ್ನು ತಿರಸ್ಕರಿಸುವ ಅಮಾನವೀಯ ಅಭ್ಯಾಸಗಳಿಗೆ ಎಡೆಗೊಡುತ್ತದೆ. ಇಷ್ಟಕ್ಕೂ ಸೌಂದರ್ಯ ಎಂಬ ಕಲ್ಪನೆಯೇ ಸಾಪೇಕ್ಷವಾದದ್ದು. ಒಬ್ಬರಿಗೆ ಸುಂದರ ಅನ್ನಿಸಿದ್ದು ಇನ್ನೊಬ್ಬರಿಗೆ ಸುಂದರ ಅನ್ನಿಸಲಿಕ್ಕಿಲ್ಲ. ಸೌಂದರ್ಯದ ಪರಿಕಲ್ಪನೆಯಲ್ಲಿ ವಾಸವಾಗಿರುವ ಭೂಪ್ರದೇಶ, ಬೆಳೆದು ಬಂದ ರೀತಿಗಳೂ ಮುಖ್ಯಪಾತ್ರ ವಹಿಸುತ್ತವೆ. ವರ್ಣಭೇದ, ಜನಾಂಗಭೇದಗಳಂತಹ ದುಷ್ಟ ಪದ್ಧತಿಗಳೂ ಇದರಲ್ಲಿ ತಮ್ಮ ಪಾತ್ರ ವಹಿಸುತ್ತವೆ. ರಾಮ ಮನೋಹರ ಲೋಹಿಯಾ ಅವರ `ಸೌಂದರ್ಯ ಮತ್ತು ಮೈಬಣ್ಣ’ ಲೇಖನವನ್ನು ನೆನಪಿಸಿಕೊಳ್ಳಬಹುದು.
*****
ಇದೆಲ್ಲದರ ಅರ್ಥ ಮಹಿಳೆಯರು ಮಾಡೆಲಿಂಗ್ ಕ್ಷೇತ್ರವನ್ನು ಪ್ರವೇಶಿಸಬಾರದು ಎಂಬುದಲ್ಲ. ಮಾಡೆಲಿಂಗ್ ಕ್ಷೇತ್ರವು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಜನಪ್ರಿಯಗೊಳ್ಳುತ್ತಿರುವ ಕ್ಷೇತ್ರವಾಗಿದೆ. ಉಡುಪುವಿನ್ಯಾಸ ಆಥವಾ ಆಭರಣವಿನ್ಯಾಸವು ಒಂದು ಕಲೆ ಎಂಬುದನ್ನು ನಾವು ಒಪ್ಪಬೇಕು. ಬೇರೆ ಕಲೆಗಳಂತೆ ಅದಕ್ಕೂ ಅದರದ್ದೇ ಆದ ಒಂದು ಭಾವಲೋಕ ಇದೆ.
ಉಡುಪು ವಿನ್ಯಾಸಕಾರರು ತಮ್ಮ ಕನಸುಗಳನ್ನು ಬಟ್ಟೆಗಳ ಮೂಲಕ ಸಾಕಾರಗೊಳಿಸುತ್ತಾರೆ. ಆದರೆ ಇದು ಕನಸು ಕಾಣುವುದಕ್ಕೆ ನಿಲ್ಲುವುದಿಲ್ಲ. ಈ ಕನಸು ಮುಂದೆ ಒಂದು ವೃತ್ತಿಯಾಗಿ, ಉದ್ಯಮವಾಗಿ ಹಬ್ಬುವ ಗುಣ ಹೊಂದಿದೆ. ವಿನ್ಯಾಸಕಾರರ ವಿನ್ಯಾಸಗಳ ಪ್ರಕಾರ ಬಟ್ಟೆಗಳನ್ನು ಹೊಲಿಯುವ ಕಾರ್ಮಿಕರೇ ನೂರಾರು ಜನ ಇರುತ್ತಾರೆ. ಫ್ಯಾಷನ್ ಇಂಡಸ್ಟ್ರಿ ಎಂಬ ಈ ಉದ್ಯಮದಲ್ಲಿ ಲೈಟ್‌ಬಾಯ್, ಪರಿಚಾರಕರು ಡ್ರೈವರುಗಳಿಂದ ಹಿಡಿದು ಹಿರಿಯ ಅಧಿಕಾರಿಗಳ ತನಕ ಅನೇಕರು ತಮ್ಮ ಜೀವನೋಪಾಯವನ್ನು ಕಂಡುಕೊಂಡಿರುತ್ತಾರೆ. ಇದರಲ್ಲಿ ಅನೇಕ ಮಹಿಳೆಯರೂ ಸೇರಿದ್ದಾರೆ. ಫ್ಯಾಷನ್ ಉದ್ಯಮದ ಸೋದರ ಉದ್ಯಮವೆನ್ನಬಹುದಾದ ಗಾರ್ಮೆಂಟ್ ಉದ್ಯಮದಲ್ಲಿ ಕೆಲಸ ಮಾಡುವ ಮಹಿಳೆಯರದ್ದಂತೂ ಇನ್ನೊಂದೇ ಕಥೆ. ಕಡಿಮೆ ಸಂಬಳಕ್ಕೆ ದೀರ್ಘ ಅವಧಿಯ ಕೆಲಸ, ಮೂಲ ಸೌಕರ್ಯಗಳ ಕೊರತೆ, ಲೈಂಗಿಕ ಕಿರುಕುಳಗಳಿಗೆ ಈಡಾಗುವ ಅಪಾಯ ಒಂದೇ, ಎರಡೇ! ಈ ಉದ್ಯಮದ ಹೆಂಗಸರದ್ದು ಅತ್ಯಂತ ಕಷ್ಟಮಯ ಜೀವನ. ದೇಶ ವಿದೇಶ ತಿರುಗುತ್ತ, ಐಷಾರಾಮಿ ಜೀವನ ಮಾಡುವ ಮಿಸ್ ವರ್ಲ್ಡ್, ಸೂಪರ್‌ಮಾಡೆಲ್‌ಗಳ ಜೀವನ ಒಂದು ತುದಿಯಾದರೆ ತಮ್ಮ ಮತ್ತು ತಮ್ಮ ಕುಟುಂಬದ ಜೀವನನಿರ್ವಹಣೆಗಾಗಿ ತಮ್ಮ ನೆಮ್ಮದಿಯನ್ನೇ ಪಣಕ್ಕಿಟ್ಟು ದುಡಿಯುವ ಹೊಲಿಗೆಕೆಲಸಗಾರ್ತಿಯರ ಸಮಸ್ಯೆ ಇನ್ನೊಂದು ತುದಿ.
ಇಲ್ಲಿನ ವಿಷಯ ವೃತ್ತಿಯ ಅಯ್ಕೆಯದ್ದಲ್ಲ, ಅರಿವಿನದು, ಪ್ರಜ್ಞೆಯದು. ತಾನು ಆಯ್ಕೆ ಮಾಡಿಕೊಳ್ಳುತ್ತಿರುವ ವೃತ್ತಿಯ ಸಾಧಕ-ಬಾಧಕಗಳೇನು, ಅಲ್ಲಿ ಹೆಂಗಸಿಗೆ ಯಾವುದಾದರೂ ಅಪಾಯಕರ ಸನ್ನಿವೇಶಗಳಿವೆಯೇ, ತಾನು ರಾಜಿ ಮಾಡಿಕೊಳ್ಳಬಾರದ ಸಂಗತಿಗಳೇನು ಎಂಬುದರ ಸ್ಪಷ್ಟ ಅರಿವು ಮಹಿಳೆಗೆ ಇರಬೇಕು. ಯುವ ಜನಾಂಗಕ್ಕೆ ಪೋಷಕರು, ಅಧ್ಯಾಪಕರು, ಮಾಧ್ಯಮಗಳು ಈ ಕುರಿತು ಸರಿಯಾದ ತಿಳುವಳಿಕೆಯನ್ನು ಕೊಡುವ ಹೊಣೆ ಹೊರಬೇಕಾಗುತ್ತದೆ. ಮಾಡೆಲಿಂಗ್ ಎಂಬ ಥಳುಕಿನ ಮಾಯಾಪರದೆಯ ಹಿಂದೆ ಎಂತಹ ಕಟುವಾಸ್ತವಗಳಿವೆ ಎಂಬ ವಿಷಯ ಗೊತ್ತಿದ್ದು ಆ ಕ್ಷೇತ್ರವನ್ನು ಪ್ರವೇಶಿಸುವುದು ಉತ್ತಮ.
ಮಾಡೆಲಿಂಗ್ ಕ್ಷೇತ್ರದಲ್ಲಿ ಮಹಿಳಾ ದೃಷ್ಟಿಕೋನ:- ಮಹಿಳೆಯರೇ ವಿನ್ಯಾಸಕಾರರಾಗಿ ಮಹಿಳಾ ದೃಷ್ಟಿಕೋನದಿಂದ ಉಡುಪುಗಳನ್ನು ವಿನ್ಯಾಸ ಮಾಡಿದರೆ ಹಾಗೂ ಫ್ಯಾಷನ್ ಷೋಗಳನ್ನು ಮಹಿಳೆಯರೇ ಆಯೋಜನೆ ಮಾಡಿದರೆ ಹೇಗಿರಬಹುದು? ಮಹಿಳೆಯ ನಗ್ನತೆಯ ಬದಲಾಗಿ ಅವಳ ಘನತೆಯನ್ನು ಮೂಲಮಂತ್ರವಾಗಿಟ್ಟುಕೊಂಡ ಉಡುಪು ಪ್ರದರ್ಶನವನ್ನು ಮಾಡಲು ಸಾಧ್ಯವೇ? ಮೇಲ್ ಗೇಝ್‌ನಿಂದ ಮುಕ್ತವಾದ ಉಡುಪು ಪ್ರದರ್ಶನ ನಡೆಯಲು ಸಾಧ್ಯವೇ?
ಇಲ್ಲಿ ಇನ್ನೊಂದು ಸೂಕ್ಷ್ಮ ಪ್ರಶ್ನೆಯನ್ನು ಎದುರಿಸುತ್ತೇವೆ. ಮಹಿಳೆಯ ಉಡುಪಿಗೆ ಮೇಲ್‌ಗೇಝ್‌ನಿಂದ ಮುಕ್ತಿ ಇದೆಯೇ? `ಸುಂದರವೆನ್ನಿಸುವ ಮಹಿಳೆಯ ಉಡುಪು’ ಎಂಬುದು ಎಷ್ಟೊಂದು ಮೇಲ್‌ಗೇಝ್‌ನಿಂದ ಕೂಡಿದೆ ಎಂದರೆ ಆಶ್ಚರ್ಯವೆನ್ನಿಸುತ್ತದೆ. ಭಾರತೀಯ ಉಡುಪುಗಳೆನಿಸಿರುವ ಸೀರೆ, ಚೂಡಿದಾರು, ಲಂಗ-ದಾವಣಿ, ಘಾಘ್ರಾಚೋಲಿ, ಲೆಹಂಗಾಚೋಲಿಗಳು ಅವಳ ಉಬ್ಬುತಗ್ಗುಗಳನ್ನು ಮತ್ತಷ್ಟು ಎತ್ತಿತೋರಿಸಲೆಂದೇ ವಿನ್ಯಾಸಗೊಂಡಂತೆ ಅನ್ನಿಸುವುದಿಲ್ಲವೇ? ಇನ್ನು ಪಾಶ್ಚಾತ್ಯ ಉಡುಪುಗಳಾದ ಫ್ರಾಕು, ಸ್ಕರ್ಟು, ಪ್ಯಾಂಟುಗಳು ಕೂಡ ತಮ್ಮ ಈಗಿರುವ ಅವತಾರದಲ್ಲಿ ಹೆಣ್ಣಿನ ಮೈಪ್ರದರ್ಶನದಲ್ಲಿ ಯಾವ ಕೊರತೆಯನ್ನೂ ಮಾಡುವುದಿಲ್ಲ. ಮೈ ಪ್ರದರ್ಶನ ಮಾಡದ ಹಾಗೂ ಮೇಲ್‌ಗೇಝ್‌ನ ನಿರ್ಮಿತಿಯಾದ ಒಂದೇ ಒಂದು ಉಡುಪೆಂದರೆ ಬಹುಶಃ ಮುಸಲ್ಮಾನ ಹೆಂಗಸರು ತೊಡುವ ಬುರ್ಖಾ ಇರಬೇಕು. ಆದರೆ ಅವರ ಉಡುಪಿನ ಎಲ್ಲ ಬಣ್ಣಗಳನ್ನೂ ಕಿತ್ತುಕೊಳ್ಳುವ ಮೈಮುಸುಕನ್ನು ಸ್ತ್ರೀಯರು ಸಂತೋಷದಿಂದ ತೊಟ್ಟುಕೊಳ್ಳಲು ಸಾಧ್ಯವೇನು?
ಬಹುಶಃ ಈ ಪ್ರಶ್ನೆಗಿರುವ ಒಂದೇ ಒಂದು ಉತ್ತರ ಅಂದರೆ ಮಹಿಳಾ ದೃಷ್ಟಿಕೋನವುಳ್ಳ ಹೆಚ್ಚು ಹೆಚ್ಚು ವಿನ್ಯಾಸಕಾರರು ಮತ್ತು ಪ್ರಾಯೋಜಕರು ಈ ಕ್ಷೇತ್ರಕ್ಕೆ ಬರಬೇಕು, ಗಂಡಸಿನ ಲೈಂಗಿಕ ಭಾವನೆಗಳನ್ನು ಕೆರಳಿಸದ ಹಾಗೂ ಹೆಂಗಸಿನ ಘನತೆಯನ್ನು ಎತ್ತಿ ಹಿಡಿಯುವ ಉಡುಪುಗಳು ಯಾವುವು ಎಂಬುದರ ಬಗ್ಗೆ ಕೂಲಂಕುಷವಾಗಿ ಯೋಚಿಸುವ ಅಗತ್ಯವಿದೆ. ಸ್ತ್ರೀದೃಷ್ಟಿಕೋನದ ಉಡುಪು ಹೇಗಿರಬಹುದು? ವಿನ್ಯಾಸಕಾರರು ಯೋಚಿಸಬೇಕಾದ ವಿಷಯವಿದು.
ನಮ್ಮ ನಡುವೆ ಲತಾ ಪುಟ್ಟಣ್ಣ, ಉಷಾ ಶ್ರೀಧರ್, ರಿತು ಭೇರಿ ಮುಂತಾದ ಮಹಿಳಾ ವಿನ್ಯಾಸಕಾರರಿದ್ದಾರೆ. ಪ್ರತಿಭಾವಂತರಾದ ಅವರು ಮನಸ್ಸು ಮಾಡಿದರೆ ಸ್ತ್ರೀದೃಷ್ಟಿಕೋನವುಳ್ಳ ಉಡುಪುಗಳನ್ನು ತಯಾರಿಸಬಹುದು. ವರದಕ್ಷಿಣೆ, ಭ್ರೂಣಹತ್ಯೆ, ಅತ್ಯಾಚಾರ ಮುಂತಾದ ಸ್ತ್ರೀಯರನ್ನು ಕಾಡುವ ಸಮಸ್ಯೆಗಳನ್ನು ವಿನ್ಯಾಸಗಳ ಮೂಲಕ ಎದುರಿಸಬಹುದೇ ಎಂದು ಯೋಚಿಸಬಹುದು. ಭಾಗೀರಥಿ ಬಾಯಿ ಕದಂ ಅವರು ಒಮ್ಮೆ ಮೈಮುಚ್ಚುವ ಜೀನ್ಸ್ ಪ್ಯಾಂಟ್ ಮತ್ತು ಕುರ್ತಾ ಧರಿಸಿ ವೈದೇಹಿಯವರ `ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಕಥೆಯನ್ನು ಅಭಿನಯಿಸಿದ್ದನ್ನು ನೆನಪಿಸಿಕೊಳ್ಳಬಹುದು. ಅವರ ಉಡುಪು ಹೆಣ್ಣಿನ ಸೂಕ್ಷ್ಮ ಭಾವನೆಗಳನ್ನು ತೋರಲು ಯಾವುದೇ ಅಡ್ಡಿ ಮಾಡಲಿಲ್ಲ ಎಂಬುದು ಗಮನೀಯ ವಿಚಾರ. ಖಾದಿ ಬಟ್ಟೆಯನ್ನು ತೊಡುವುದನ್ನು ಪ್ರೋತ್ಸಾಹಿಸಲು, ಮೈಸೂರು ರಾಜರ ಸಂಸ್ಕೃತಿಯನ್ನು ಪ್ರಶಂಸಿಸಲು ಫ್ಯಾಷನ್ ಶೋಗಳು ಆಗುವುದನ್ನು ಗಮನಿಸುತ್ತೇವೆ. ಇದೇ ವಿಚಾರವನ್ನು ಸ್ವಲ್ಪ ಮುಂದುವರಿಸಿ ಸ್ತ್ರೀಸಂವೇದನೆಯನ್ನು ರ‍್ಯಾಂಪ್ ಮೇಲೆ ತರಲು ಸಾಧ್ಯವಿಲ್ಲವೇ?
ಒಟ್ಟಿನಲ್ಲಿ ಮಾಡೆಲಿಂಗ್ ಕ್ಷೇತ್ರವು ಮಹಿಳೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿದೆ. ಅದನ್ನು ಅವಳು ತನ್ನ ಆತ್ಮವಿಶ್ವಾಸ ಮತ್ತು ಸೃಜನಶೀಲತೆಯಿಂದ ಯಶಸ್ವಿಯಾಗಿ ಎದುರಿಸಬೇಕಿದೆ. ಬೇರೆ ಅನೇಕ ಕ್ಷೇತ್ರಗಳಲ್ಲಿನ ಸವಾಲುಗಳನ್ನು ಎದುರಿಸಿದಂತೆ ಅವಳು ಇದನ್ನೂ ಎದುರಿಸುತ್ತಾಳೆಂಬ ನಂಬಿಕೆಯನ್ನು ನಾವು ಇಟ್ಟುಕೊಳ್ಳಬಹುದು. ಕೊಳ್ಳುಬಾಕ ಸಂಸ್ಕೃತಿಯ ಒತ್ತಡಗಳನ್ನು ಮಾಡೆಲಿಂಗ್ ಕೇತ್ರದಲ್ಲಿ ಎದುರಿಸುವುದು ಸುಲಭವಲ್ಲ. ಆದರೆ ಸ್ತ್ರೀಯರ ಘನತೆಯನ್ನು ಕಾಪಾಡುವುದಕ್ಕೋಸ್ಕರ ಹೊಸ ದಾರಿಗಳನ್ನು ಹುಡುಕಲೇಬೇಕಿದೆ.
ಡಾ.ಎಲ್.ಜಿ.ಮೀರಾ ಮೂಲತಃ ಕೊಡಗಿನವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಿಳ್ ಕಾವ್ಯ ಮೀಮಾಂಸೆ, ಮಾನುಷಿಯ ಮಾತು (1996), ಬಹುಮುಖ (1998), ಸ್ತ್ರೀ ಸಂವೇದನೆಯಲ್ಲಿ ಕನ್ನಡ ಕಥನ ಸಂಶೋಧನೆ (ಮಹಾಪ್ರಬಂಧ) (2004), ಕನ್ನಡ ಮಹಿಳಾ ಸಾಹಿತ್ಯ ಚರಿತ್ರೆ (ಸಂಪಾದನೆ) (2006), ಆಕಾಶಮಲ್ಲಿಗೆಯ ಘಮ ಎಂಬ ಸಣ್ಣಕತೆಯನ್ನು, ರಂಗಶಾಲೆ ಎಂಬ ಮಕ್ಕಳ ನಾಟಕವನ್ನು, ಕೆಂಪು ಬಲೂನು ಇತರೆ ಶಿಶುಗೀತೆಗಳು, ಕಲೇಸಂ ಪ್ರಕಟಣೆಯ ನಮ್ಮ ಬದುಕು ನಮ್ಮ ಬರಹದಲ್ಲಿ ಆತ್ಮಕತೆ ರಚಿಸಿದ್ದಾರೆ.