ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲೀವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು-ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ.
ಡಾ. ಲೋಕೇಶ ಅಗಸನಕಟ್ಟೆ ಬರೆದ ‘ವೈಷ್ಣವ ಜನತೋ’ ಕಾದಂಬರಿಗೆ ಡಾ. ಬರಗೂರು ರಾಮಚಂದ್ರಪ್ಪ ಬರೆದ ಮುನ್ನುಡಿ
ಡಾ. ಲೋಕೇಶ ಅಗಸನಕಟ್ಟೆಯವರ `ವೈಷ್ಣವ ಜನತೋ’ ಕಾದಂಬರಿಯು ಗ್ರಾಮೀಣ ಕೇಂದ್ರಿತ ವಸ್ತುವಿನ ಮೂಲಕವೇ ದೇಶವ್ಯಾಪಿ ತಾತ್ವಿಕತೆಯತ್ತ ಸಾಗುವ ಅಂತರ್ಮುಖಿ ಚಲನೆಯನ್ನು ಒಳಗೊಂಡಿದೆ. ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಕೃತಿಯಾದ್ದರಿಂದ ಇದೊಂದು ಪ್ರಾದೇಶಿಕ ಪ್ರಧಾನತೆಯ ಕಾದಂಬರಿಯೆಂದು ಮೇಲ್ನೋಟಕ್ಕೆ ಅನ್ನಿಸುವುದು ಸಹಜವಾದರೂ, ಪ್ರಾದೇಶಿಕ ಸೊಗಡಿನ ಸಂಭ್ರಮದಲ್ಲಿ ಮುಳುಗಿಹೋಗುವುದಿಲ್ಲವೆಂಬುದು ಗಮನಿಸಲೇಬೇಕಾದ ಸಂಗತಿಯಾಗಿದೆ. ಕನ್ನಡದಲ್ಲಿ ಪ್ರಾದೇಶಿಕ ಪರಂಪರೆಯನ್ನು ಕಟ್ಟಿಕೊಟ್ಟ ವಿವಿಧ ಮಾದರಿಯ ಕಾದಂಬರಿಗಳು ಬಂದಿರುವ ಹಿನ್ನೆಲೆಯಲ್ಲಿ ಈ ಮಾತು ಹೇಳುತ್ತಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ನೆಲೆಯೂರಿದ ಸಾಮಾಜಿಕ – ಸಾಂಸ್ಕೃತಿಕ ನಮೂನೆಗಳನ್ನು ನಲಿವಿನಿಂದ ನಿರೂಪಿಸಿದ ಕೃತಿಗಳು ಕೂಡ ನಮ್ಮಲ್ಲಿವೆ. ಈ ಮಾದರಿಯ ಕೃತಿಗಳು ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ `ವೈಭವ’ವನ್ನು ಮನತುಂಬಿಸಿಕೊಂಡು ಮಾತಾಡುತ್ತವೆ. `ವೈಭವ’ದ ಜೊತೆಗೆ ಒಳವಿಷಾದದ ಎಳೆ ಇರುವುದಿಲ್ಲ. ಸಮೃದ್ಧಿಯ ಸಂಕೇತಗಳಲ್ಲಿ ಸುಖಿಸುವ ಮನೋಧರ್ಮವನ್ನು ಇಂಥ ರಚನೆಗಳಲ್ಲಿ ಕಾಣಬಹುದು. ಇನ್ನು ಕೆಲವು ಕೃತಿಗಳಲ್ಲಿ ವಿಷಾದದ ಎಳೆಯೊಂದು ಬೆಳೆದಿರುವುದುಂಟು; ಆದರೆ ಈ ವಿಷಾದವು ಬದುಕಿನ ಬವಣೆಗಳನ್ನು ಕಂಡು ಕರುಳಲ್ಲಿ ಕೆಂಡ ಕಟ್ಟಿಕೊಂಡು ಹುಟ್ಟಿರುವುದಿಲ್ಲ; ಬದಲಾಗಿ, ಗ್ರಾಮೀಣ ಪ್ರದೇಶದ ರೂಢಮೂಲ ಮೌಲ್ಯಗಳು ಕರಗುತ್ತಿವೆಯೆಂಬ ಕೊರಗಿನಿಂದ ಹುಟ್ಟಿದ ವಿಷಾದವಾಗಿರುತ್ತದೆ. ಇಂಥ ವಿಷಾದದಲ್ಲಿ ಹಳಹಳಿಕೆಯ ಭಾವವೇ ಪ್ರಧಾನವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಊಳಿಗಮಾನ್ಯ ಪದ್ಧತಿಯ ಪ್ರಾದೇಶಿಕ ಕಟ್ಟಡ ಕುಸಿಯುತ್ತಿದೆಯೆಂದೂ `ಸಮೃದ್ಧಿ’ಯು ಸೊರಗಿ ಸೋರಿಹೋಗುತ್ತಿದೆಯೆಂದೂ ಸಂಕಟಪಡುವ ಪ್ರವೃತ್ತಿಯು ಹಳಹಳಿಕೆಯ ಅಂತರ್ಗತ ಅನುಭವವಾಗಿರುತ್ತದೆ.
ಎಪ್ಪತ್ತರ ದಶಕದಿಂದ ಗ್ರಾಮೀಣ ಪ್ರಾದೇಶಿಕ ಬದುಕನ್ನು ಕಂಡುಕೊಳ್ಳುವ ಕ್ರಮ ಬದಲಾಗಿದೆ; ಬದಲಾಗುತ್ತಿರುವ ಗ್ರಾಮೀಣ ಬದುಕನ್ನು ಸಾಮಾಜಿಕ ನೆಲೆಗಳ ಮೂಲಕ ಪರಿಶೀಲಿಸುವ ಕ್ರಮದ ಜೊತೆಗೆ `ಸಮೃದ್ಧಿ’ಯ ಕಲ್ಪನೆಯೇ ಹುಸಿಯೆಂದು ಅನಾವರಣಗೊಳಿಸುವ ಆಯಾಮವೊಂದು ಕನ್ನಡ ಕಥನ ಲೋಕಕ್ಕೆ ಲಭ್ಯವಾಗಿದೆ. ಊಳಿಗಮಾನ್ಯ ಗ್ರಾಮೀಣ ವ್ಯವಸ್ಥೆಯೊಳಗಿನ ವೈರುಧ್ಯ ಮತ್ತು ವಿವಿಧ ಸಾಮಾಜಿಕ ಸಮುದಾಯಗಳ ಬದುಕಿನ ಚಹರೆಗಳನ್ನು ದಾಖಲಿಸುತ್ತಲೇ ಮುಖಾಮುಖಿಯಾಗುವ ಮನೋಧರ್ಮವೊಂದನ್ನು ಇಂತಹ ಕಥನಗಳಲ್ಲಿ ಕಾಣಬಹುದು.
ಪ್ರಜಾಸತ್ತಾತ್ಮಕ ಸಮಾಜವೊಂದರಲ್ಲಿ ನಡೆಯುತ್ತಿರುವ ಸ್ಥಿತ್ಯಂತರದ ಸಂಕಟಗಳನ್ನು, ಅಲ್ಲೀವರೆಗೆ ಅಜ್ಞಾತವಾಗಿದ್ದ ಸಮುದಾಯಗಳ ಬದುಕಿನ ಮೂಲಕ ಪರಿಶೀಲಿಸುವ ಪ್ರತಿಭಟನಾ ಪ್ರತೀಕಗಳನ್ನೂ ಕಾಣಬಹುದು. ಈ ಮಾದರಿಯ ರಚನೆಗಳಲ್ಲಿ ಚಲನಶೀಲತೆಯ ಒರತೆ ಉಕ್ಕುವುದುಂಟು. ಈ ಒರತೆಯನ್ನು ಕೃತಿಕಾರರು ತಂತಮ್ಮ ಬೊಗಸೆಯಲ್ಲಿ ಎಷ್ಟೆಷ್ಟು ಮತ್ತು ಹೇಗೆ ಹೇಗೆ ತುಂಬಿಕೊಳ್ಳುತ್ತಾರೆಂಬ ಆಧಾರದಲ್ಲಿ ಕೃತಿಯ ವಸ್ತು-ವಿನ್ಯಾಸಗಳು ಕಟ್ಟಿಕೊಳ್ಳುತ್ತವೆ. ಬದಲಾವಣೆಯ ಬೊಗಸೆಯನ್ನು ತನ್ನದಾಗಿಸಿಕೊಳ್ಳುವ ವಿಧಾನದಲ್ಲೇ ನೆಲೆ-ನಿಲುವುಗಳು ರೂಪುಗೊಳ್ಳುತ್ತವೆ; ಸಮಕಾಲೀನವಾಗುತ್ತವೆ.
ಲೋಕೇಶ ಅಗಸನಕಟ್ಟೆಯವರ ಕಾದಂಬರಿಯು ಬದಲಾಗುತ್ತಿರುವ ಗ್ರಾಮೀಣ ಬದುಕಿನ ರೂಪಕಾತ್ಮಕ ಸ್ಥಿತ್ಯಂತರಗಳನ್ನು ತೆರೆಯುತ್ತ ಹೋಗುತ್ತಿರುವ ಕಾರಣದಿಂದ ಹೆಚ್ಚು ಸಮಕಾಲೀನವೂ, ಸಾಮುದಾಯಿಕವೂ ಆಗುತ್ತದೆ. ಸಾಮೂದಾಯಿಕವಾಗುವುದಕ್ಕೆ ಪೂರಕವಾದ ವಿವಿಧ ಸಮುದಾಯಗಳ ಪ್ರಾತಿನಿಧಿಕ ಪಾತ್ರಗಳನ್ನು ಕಾದಂಬರಿಯ ತುಂಬ ಕಾಣಬಹುದಾಗಿದೆ. ಇಲ್ಲಿ ಬರುವ ಪ್ರಮುಖ ಪಾತ್ರಗಳು ತಂತಮ್ಮ ಜನ್ಮಮೂಲ ಸಮುದಾಯದ ಪ್ರತಿನಿಧಿಗಳೂ ಆಗುವುದೊಂದು ವಿಶೇಷ. ಬಹುಪಾಲು ಪಾತ್ರಗಳು ಪ್ರಜ್ಞಾಪೂರ್ವಕವಾಗಿಯೊ ಅಪ್ರಜ್ಞಾಪೂರ್ವಕವಾಗಿಯೊ ಸಿದ್ಧ ಬದುಕಿನ ಬಂಧದಿಂದ ಬಿಡುಗಡೆಗೊಳ್ಳುತ್ತ ಬೆಳೆಯುವಲ್ಲಿ ಕಾದಂಬರಿಯ ಬೆಳಕಿನ ಹಾದಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಪ್ರತಿ ಪ್ರಧಾನ ಪಾತ್ರವೂ ತನ್ನನ್ನು ತಾನು ಮೀರುವ ಮನೋಧರ್ಮದಿಂದ ಸಾಮಾಜಿಕ ಸ್ಥಿತ್ಯಂತರದ ಸಂಕೇತವಾಗುತ್ತದೆ. ಇಂತಹ ಪಾತ್ರಗಳ ಮೂಲಕ ಅನಾವರಣಗೊಳ್ಳುವ ವ್ಯಕ್ತಿತ್ವ ಕೂಡ ಜೀವನ ವಿಧಾನವೊಂದರ ಪ್ರತೀಕವಾಗುವುದರಿಂದ ಇಡೀ ಕಾದಂಬರಿಯು ಬಹುಮುಖೀ ಬದುಕನ್ನು ಸಮರ್ಥವಾಗಿ ನಿರೂಪಿಸುವ ಸಾರ್ಥಕತೆಗೆ ಪಾತ್ರವಾಗುತ್ತದೆ. ಈ ಬಹುಮುಖೀ ಬದುಕಿನ ರೂಪಿಕೆಗಳಲ್ಲಿ ವೈರುಧ್ಯ, ವೈವಿಧ್ಯ, ವೈಷಮ್ಯ, ಸಂತೋಷ, ಸಂಕಟ – ಎಲ್ಲವೂ ಆಯಾಯ ಸನ್ನಿವೇಶದ ಜೀವಜಲವಾಗಿ ಹೊಮ್ಮುತ್ತವೆ; ಚಿಮ್ಮುತ್ತವೆ; ಹರಿಯುತ್ತವೆ; ಉರಿಯುತ್ತವೆ; ಹರಿಯುತ್ತ, ಉರಿಯುತ್ತ, ಅರಿವಾಗಿಯೂ ರೂಪಾಂತರಗೊಳ್ಳುತ್ತವೆ. ಈ ರೂಪಾಂತರ ಪ್ರಕ್ರಿಯೆಯನ್ನು ಲೋಕೇಶ ಅಗಸನಕಟ್ಟೆಯವರು ನಿರುದ್ವಿಗ್ನ ನಿರೂಪಣೆಯ ಮೂಲಕ ಅನುಭವಾತ್ಮಕಗೊಳಿಸಿದ್ದಾರೆ.
ಸ್ಥಿತ್ಯಂತರ ಮತ್ತು ರೂಪಾಂತರ ಪ್ರಕ್ರಿಯೆಗಳನ್ನು ಗ್ರಹಿಸುವ ವಿಧಾನ ಒಂದೇ ರೀತಿಯಾಗಿರುವುದಿಲ್ಲ. ಈ ಪ್ರಕ್ರಿಯೆಯಲ್ಲಿ ಹೊರಬೀಳುವ ಸಾಮಾಜಿಕ ಸತ್ಯಗಳನ್ನು ತಮ್ಮವಾಗಿಯೇ ಅನುಭವಿಸುವ ಸಂಕಟಾತ್ಮಕ ಸಮುದಾಯಗಳ ಸಂವೇದನೆಯ ತೀವ್ರತೆಗೂ ಮಾನಸಿಕ ದೂರವನ್ನು ಕಾಪಿಟ್ಟುಕೊಂಡ ಕಣ್ಣೋಟದ ಕ್ರಮಕ್ಕೂ ವ್ಯತ್ಯಾಸವಿರುತ್ತದೆ. ಹೀಗಾಗಿ ಅಭಿವ್ಯಕ್ತಿ ಕ್ರಮದಲ್ಲೂ ಈ ವ್ಯತ್ಯಾಸ ಗೋಚರಿಸುತ್ತದೆ. ಅಭಿವ್ಯಕ್ತಿಸುವ ವ್ಯಕ್ತಿಗಳು ನಿಂತ ನೆಲೆಗಳನ್ನು ನಿರ್ದೇಶಿಸುತ್ತದೆ. ಇಂತ ಅಭಿವ್ಯಕ್ತಿ ವಿಧಾನಗಳಲ್ಲಿ ಒಂದು ಸರಿ, ಇನ್ನೊಂದು ಸರಿಯಲ್ಲ ಎಂದು ಹೇಳುವುದು ಸರಿಯಲ್ಲ. ಇದು ಅವರವರ ಗ್ರಹಿಕಾ ವಿಧಾನಕ್ಕೆ ಸಂಬಂಧಿಸಿದ ಸಂಗತಿ. ಜೊತೆಗೆ ಸಾಮಾಜಿಕ – ಆರ್ಥಿಕ ಆಯಾಮಗಳ ಅನುಭವ ಸ್ತರಗಳ ಸಂಗತಿ. ಈ ಕಾದಂಬರಿಯಲ್ಲಿ ಕಾದಂಬರಿಕಾರರು ಪಾತ್ರಗಳ ಒಳಹೋಗುತ್ತಲೇ ಹೊರಬಂದು, ಮಾನಸಿಕ ದೂರದಿಂದ ನೋಡುವ ಮತ್ತು ನಿರೂಪಿಸುವ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ; ತನ್ಮೂಲಕ ವೈವಿಧ್ಯಮಯ ವ್ಯಕ್ತಿತ್ವಗಳಿಂದ ಕೂಡಿದ ಬಹುತ್ವದ ಬದುಕನ್ನು ಕಣ್ಣಲ್ಲಿ ಕಣ್ಣಿಟ್ಟು ಕಟ್ಟಿಕೊಟ್ಟಿದ್ದಾರೆ.
ಈ ಕಾದಂಬರಿಗೆ ಪ್ರಾದೇಶಿಕ ಸ್ವರೂಪವಿರುವಂತೆಯೇ ರಾಜಕೀಯ ಆಯಾಮವೂ ಇದೆ. ವಿಶೇಷವಾಗಿ ಡಾ. ಅಂಬೇಡ್ಕರ್ ಮತ್ತು ಗಾಂಧಿಯವರ ವಿಚಾರಧಾರೆಗಳನ್ನು ಮುಖಾಮುಖಿಯಾಗಿಸುತ್ತಲೇ ಅನುಸಂಧಾನದತ್ತ ಕೊಂಡೊಯ್ದ ಭಿನ್ನಭೇದವಿಲ್ಲದ ಭಾವ ವಲಯವನ್ನು ನಿರ್ಮಿಸುವ ಕಥಾಹಂದರವನ್ನು ಹಬ್ಬಿಸಿರುವ ರೀತಿಯು ಕಾದಂಬರಿಗೆ ರಾಜಕೀಯ ವೈಚಾರಿಕೆಯನ್ನು ತಂದುಕೊಟ್ಟಿದೆ. ರಾಜಕೀಯವೆಂದರೆ ಇಲ್ಲಿ ಪಕ್ಷಗಳ ನೆಲೆಯಲ್ಲಿ; ಚುನಾವಣೆಯಲ್ಲಿ, ದೇಶದ ಸಾಮಾಜಿಕ ರಾಜಕಾರಣವನ್ನು ಕುರಿತ ವಿಚಾರಧಾರೆಗಳನ್ನು ಪ್ರತಿನಿಧೀಕರಣಗೊಳಿಸುವ ಕ್ರಿಯಾರೂಪವನ್ನು ಕಾದಂಬರಿಯ ಕಣ್ಣೋಟದಲ್ಲಿ ಕಾಣಬಹುದಾಗಿದೆ. ಸ್ವಾತಂತ್ರ್ಯಪೂರ್ವದ ಸಾಮಾಜಿಕ ವೈಚಾರಿಕತೆಯು ಸ್ವಾತಂತ್ರ್ಯೋತ್ತರ ಕಾಲಾವಧಿಯಲ್ಲಿ ಪ್ರಕಟಗೊಳ್ಳುತ್ತಿರುವ ರೀತಿಯ ಜೊತೆಗೆ ಆರ್ಥಿಕ ಕ್ರಿಯಾರೂಪದ ಪ್ರತಿನಿಧೀಕರಣವೂ ಈ ಕಾದಂಬರಿಯಲ್ಲಿ ಇದೆ.
ಸ್ವಾತಂತ್ರ್ಯ ಹೋರಾಟದ ಕಾಲಾವಧಿಯು ಕೇವಲ ಬ್ರಿಟಿಷ್ ವಿರೋಧಿಯಾಗಿರಲಿಲ್ಲ, ನಮ್ಮದೇ ಭೂಭಾಗದ ಬದುಕಿನಲ್ಲಿದ್ದ ಸಾಮಾಜಿಕ – ಆರ್ಥಿಕ ಅಸಮಾನತೆಯ ವಿರೋಧಿಯಾದ ವಿಚಾರಧಾರೆಯೂ ಇತ್ತು; ಕ್ರಿಯಾತ್ಮಕವೂ ಆಗಿತ್ತು. ಅಂತೆಯೇ ಅನೇಕ ಸಾಮಾಜಿಕ ಪಿಡುಗುಗಳ ವಿರುದ್ಧದ ದನಿಯೂ ದೃಢವಾಗಿತ್ತು. ಗಾಂಧೀಜಿಯವರಿಗೆ ಬ್ರಿಟಿಷ್ ವಸಾಹತುಶಾಹಿ ವಿರೋಧಿ ಹೋರಾಟವು ಆದ್ಯತೆಯ ವಿಷಯವಾಗಿದ್ದರೂ ಅಸ್ಪೃಶ್ಯತೆ ವಿರೋಧಿ ಸುಧಾರಣೆಯೂ ಮುಖ್ಯವಾಗಿತ್ತು; ಗುಡಿ ಕೈಗಾರಿಕೆಗಳ ಮಹತ್ವವನ್ನು ಮುನ್ನೆಲೆಗೆ ತರುವ ಉಮೇದು ಇತ್ತು. ಡಾ. ಅಂಬೇಡ್ಕರ್ ಅವರಿಗೆ ವರ್ಣಾಹತುಶಾಹಿ ವಿರೋಧದದ ಹೋರಾಟವು ಆದ್ಯತೆಯಾಗಿದ್ದರೂ ಒಟ್ಟು ಅಸಮಾನತೆಯ ಸಮಾಜದಿಂದ ವಿಮುಕ್ತಗೊಳಿಸುವ ವಿಚಾರಧಾರೆ ಪ್ರಬಲವಾಗಿತ್ತು. ಅಂದಿನ ಸಮತಾವಾದಿಗಳಿಗೆ ಬ್ರಿಟಿಷ್ ವಸಾಹತುಶಾಹಿಯಷ್ಟೇ ಅಲ್ಲ, ನಮ್ಮೊಳಗಿನ ಆರ್ಥಿಕ ವಸಾಹತುಶಾಹಿ ಹೋಗಬೇಕೆನ್ನುವ ಆಶಯ ಆದ್ಯತೆಯಾಗಿತ್ತು. ಹೀಗೆ ಆದ್ಯತೆ ಮತ್ತು ಆಲೋಚನಾ ವಿಧಾನದ ಹಾದಿಯಲ್ಲಿ ಅಂತರವಿದ್ದದು ನಿಜವಾದರೂ ಅಂತಿಮ ಗುರಿಯು ಸ್ವಾತಂತ್ರ್ಯ ಮತ್ತು ಸಮಾನತೆಯೇ ಆಗಿತ್ತು. ಆದ್ದರಿಂದ ಚಿಂತನಾ ವಿಧಾನದ ವ್ಯತ್ಯಾಸಕ್ಕಾಗಿ ಇವರನ್ನು ಪರಸ್ಪರ ವಿರೋಧಿ ಪಾಳೆಯಗಳಲ್ಲಿ ಪಟ್ಟಾಭಿಷಿಕ್ತರನ್ನಾಗಿಸುವುದು ಸರಿಯಲ್ಲ. ಅಂತೂ ವೈಚಾರಿಕಾ ವಿಧಾನದ ಭಿನ್ನ ನೆಲೆಗಳ ಕಾರಣದಿಂದ ಕೆಲವೊಮ್ಮೆ ಪರಸ್ಪರ ಟೀಕೆಗಳು ಹೊರಹೊಮ್ಮಿವೆ. ಅಂದು ಬರಿದಾದ ಬತ್ತಳಿಕೆಗೆ ಇಂದೂ ಟೀಕಾ ಬಾಣಗಳನ್ನು ತುಂಬಬೇಕೆ ಎಂದು ನಾವು ಪ್ರಶ್ನಿಸಿಕೊಳ್ಳಬೇಕು. ಭಿನ್ನಾಭಿಪ್ರಾಯಗಳನ್ನು ಪರಿಶೀಲಿಸುತ್ತಲೇ ಸಮಕಾಲೀನ ಸಂದರ್ಭದಲ್ಲಿ ನಿರಾಕರಣೆಯ ಬದಲು ಸ್ವೀಕರಣೆಯ ಸನ್ನಿವೇಶವನ್ನು ಸೃಷ್ಟಿಸಿ, ಸಮಾನತೆಯ ಸಮಾಜವನ್ನು ನಿರ್ಮಿಸಬೇಕು. ಭಿನ್ನಾಭಿಪ್ರಾಯ ಮತ್ತು ಭಿನ್ನ ವ್ಯಕ್ತಿತ್ವಗಳನ್ನು ಸಮಾನತೆ ಮತ್ತು ಸೋದರತೆಯ ನೆಲೆಯಲ್ಲಿ ಗೌರವಿಸುತ್ತ ಪ್ರತಿಗಾಮಿ ಪಟ್ಟಭದ್ರಹಿತಾಸಕ್ತಿಗಳ ಶಕ್ತಿ ಕುಂದಿಸಬೇಕು. ಇದು ಸಮಕಾಲೀನ ಆದ್ಯತೆಯ ಅನಿವಾರ್ಯತೆಯಾಗಿದೆ.
ಲೋಕೇಶ ಅಗಸನಕಟ್ಟೆಯವರು ಅಂಬೇಡ್ಕರ ಅವರ ಪ್ರತಿನಿಧಿಯಾಗಿ ಬಸವರಾಜು ಮತ್ತು ಗಾಂಧಿಯವರ ಪ್ರತಿನಿಧಿಯಾಗಿ ಖಾದಿಕೇಂದ್ರದ ವಾಸಣ್ಣ ಎಂಬ ಪಾತ್ರವನ್ನು ರೂಪಿಸಿ ಪರಸ್ಪರ ಆತ್ಮವಿಮರ್ಶೆಯ ಪ್ರಕ್ರಿಯೆಗೆ ಒಡ್ಡುತ್ತಾ ಈ ಕಾದಂಬರಿಯನ್ನು ಸಮಕಾಲೀನ ಸಾಧ್ಯತೆಯ ಸಾರ್ಥಕ ಆಶಯದತ್ತ ಕೊಂಡೊಯ್ದಿದ್ದಾರೆ. ಈ ನೆಲೆಯಿಂದ ಕಾದಂಬರಿಗೆ ರಾಜಕೀಯ ವೈಚಾರಿಕ ಆಯಾಮವು ಲಭ್ಯವಾಗಿದೆ. ಇದಿಷ್ಟೇ ಅಲ್ಲ, ಕರ್ನಾಟಕದ ಕೆಲವು ರಾಜಕಾರಣಿಗಳ ಪ್ರಸ್ತಾಪವೂ ಕಾದಂಬರಿಯಲ್ಲಿದೆ. ನಿಜಲಿಂಗಪ್ಪ, ಹರ್ಡೇಕರ್ ಮಂಜಪ್ಪ, ಗಾಂಜಿವೀರಪ್ಪ, ಸಿದ್ಧವೀರಪ್ಪ, ಇಮಾಂಸಾಬ್, ದುಗ್ಗಪ್ಪ, ಬಳ್ಳಾರಿ ಸಿದ್ದಮ್ಮ, ಸೂರ್ಯನಾರಾಯಣರಾವ್, ಪಂಪಾಪತಿ – ಹೀಗೆ ಹೆಸರಿಸಬಹುದು. ಇವರಲ್ಲಿ ಸೂರ್ಯನಾರಾಯಣರಾವ್, ಪಂಪಾಪತಿಯವರು ದಾವಣಗೆರೆಯ ಕಾರ್ಮಿಕರ ಚರ್ಚೆಯಲ್ಲಿ ಸ್ವಲ್ಪ ಕಾಣಿಸಿಕೊಂಡರೆ, ದುಗ್ಗಪ್ಪನವರು ಒಂದು ಗಮನಾರ್ಹ ಪಾತ್ರವಾಗಿಯೇ ಚಿತ್ರಿತರಾಗಿದ್ದಾರೆ.
ಈ ಕಾದಂಬರಿಗೆ ಅಧ್ಯಾತ್ಮಿಕ ಆಯಾಮವೂ ಇದೆ. ಆಶ್ರಮದ ಗಿರಿಯಜ್ಜ, ಕುಂಬಾರ ನಿಂಗಜ್ಜನ ವ್ಯಕ್ತಿತ್ವದ ಮೂಲಕ ಸಾಂಸ್ಥಿಕವಲ್ಲದ ಅಧ್ಯಾತ್ಮಿಕ ಹರಿವನ್ನು ಕಾದಂಬರಿಯು ಒಳಗೊಂಡಿದೆ. ಜೊತೆಗೆ ಕಿರೀಟಧಾರಿ ಸ್ವಾಮೀಜಿ ಒಂದು ನೆಲೆ, ಸಿರಿಗೆರೆ ಸ್ವಾಮೀಜಿಯು ಇನ್ನೊಂದು ನೆಲೆ ಹೊಂದಿರುವ ಚಿತ್ರಣವೂ ಇದೆ. ಹೀಗೆ ವಿಭಿನ್ನ ನೆಲೆಗಳನ್ನು ನಿರೂಪಿಸುತ್ತಲೇ ಸಿರಿಗೆರೆ ಸ್ವಾಮೀಜಿಯವರ ನಿಲುವುಗಳಿಗೆ ಒತ್ತು ನೀಡಿರುವುದು ಲೇಖಕರ ಧಾರ್ಮಿಕ ಚಿಂತನಾಕ್ರಮದ ದಿಕ್ಸೂಚಿಯೂ ಆಗಿದೆ. ಸಿರಿಗೆರೆ ಸ್ವಾಮೀಜಿವರು ಮಠೀಯತೆಯನ್ನು ಮೀರುತ್ತಿರುವ ಸೂಚನೆಯೊಂದಿಗೆ ರಾಜಕೀಯ ವಿಚಾರಗಳಲ್ಲೂ ಆಸಕ್ತರಾಗಿರುವ ಚಿತ್ರವನ್ನು ಕಾದಂಬರಿಯಲ್ಲಿ ಕಾಣಬಹುದು. ಸಮಾಜವಾದಿ ಚಿಂತನೆಯುಳ್ಳವರೂ ಸೇರಿದಂತೆ ಕೆಲವರು ಕೇಳುವ ಪ್ರಶ್ನೆಗಳಿಗೆಲ್ಲ ಈ ಸ್ವಾಮೀಜಿಯವರು ನಿರ್ಣಯಾತ್ಮಕ ಉತ್ತರ ನೀಡುತ್ತಾರೆ. ಪ್ರಶ್ನೆ ಕೇಳಿದವರು ಆನಂತರ ಮೌನವಾಗುತ್ತಾರೆ. ಸ್ವಾಮೀಜಿಯವರ ಉತ್ತರದಲ್ಲೇ ಚರ್ಚೆ ಮುಕ್ತಾಯವಾಗುತ್ತದೆ. ಸ್ವಾಮೀಜಿಯವರು ಪ್ರತಿನಿಧಿಸುವ ಮೌಲ್ಯಮಾದರಿಯೇ ಸೂಕ್ತವೆಂಬ ಮೌನ ಸೂಚನೆಯನ್ನು ಕಾದಂಬರಿಯು ಕೊಡುತ್ತಿರುವಂತಿದೆ! ಆದರೆ ಚರ್ಚೆಯು ಇವರ ಉತ್ತರಕ್ಕೇ ಅಂತಿಮವಾಗುವುದಿಲ್ಲವೆಂದು ನನಗನ್ನಿಸುತ್ತದೆ. ಒಂದಂತೂ ನಿಜ, ಸ್ವಾಮೀಜಿಯವರು ಮಠೀಯತೆಯನ್ನು ಮೀರುವುದು, ಮತೀಯತೆಯನ್ನೂ ಮೀರುವ ಸೂಚನೆ ನೀಡುವುದು ನಮ್ಮ ಸಂದರ್ಭದ ಒಂದು ಗಮನಾರ್ಹ ನಡೆಯಾಗಿದೆ.
ಹಾಗೆ ನೋಡಿದರೆ ಈ ಕಾದಂಬರಿಯ ಕೇಂದ್ರ ಪ್ರಜ್ಞೆಯಾಗಿ ಕೆಲಸ ಮಾಡುವುದು – ಮೀರುವ ಮನೋಧರ್ಮ. ಇಲ್ಲಿ ಬರುವ ಬಹುಪಾಲು ವ್ಯಕಿಗಳು ಸ್ಥಗಿತ ಸಾಮಾಜಿಕ ಚಹರೆಗಳನ್ನು ಸ್ಥಾಯಿಯಾಗಿ ಬದುಕುತ್ತಿದ್ದು, ಕ್ರಮೇಣ ಅದನ್ನು ಮೀರತೊಡಗುತ್ತಾರೆ; ಮೀರಿ ಬೆಳೆಯುತ್ತಾರೆ. ಈ ಮೀರುವ ಮನೋಧರ್ಮಕ್ಕೆ ಪ್ರೇರಣೆಯಾಗುವಲ್ಲಿ ಗಾಂಧಿವಾದಿ ವಾಸಣ್ಣನ ಪಾತ್ರ ಗಮನೀಯವಾದುದು. ಜೊತೆಗೆ ಬದುಕಿನಲ್ಲಿ ಎದುರಾಗುವ ಸನ್ನಿವೇಶಗಳು ಕೂಡ ಸ್ಥಗಿತತೆಯನ್ನು ಮೀರಿ ಚಲನಶೀಲನೆಯತ್ತ ಸಾಗುವ ಅನಿವಾರ್ಯತೆಯನ್ನು ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ಕಾದಂಬರಿಯನ್ನು ಸ್ಥಗಿತತೆ ಮತ್ತು ಚಲನಶೀಲತೆಗಳ ನೆಲೆಯಲ್ಲೂ ಪರಿಶೀಲಿಸಬಹುದು. ಚಲನಶೀಲತೆಯು ನಿಧಾನವಾಗಿ ಅಂತರ್‍ವಾಹಿನಿಯಾಗುವ ವಿಧಾನವನ್ನೂ ಗಮನಿಸಬಹುದು.
ಮೀರುವ ಮನೋಧರ್ಮದಿಂದ ಸಂಭವಿಸುವ ಸಾಮಾಜಿಕ ಚಲನಶೀಲತೆಗೆ ಸಾಕ್ಷಿಯಾಗುವ ಕೆಲವು ಸನ್ನಿವೇಶಗಳು ಈ ಕಾದಂಬರಿಯಲ್ಲಿ ಗಾಢವಾಗಿ ಮೂಡಿಬಂದಿವೆ. ವಿಶೇಷವಾಗಿ, ಜಾತಿಯೊಳಗಿದ್ದೂ ಜಾತಿಯನ್ನು ಮೀರುವ ಪ್ರಕ್ರಿಯೆಯು ಕಾದಂಬರಿಯ ಸಾಮಾಜಿಕ ಚಲನಶೀಲ ಚಿಂತನೆಯ ದೀಪಧಾರಿಯಾಗಿದೆ. ಬಸವ್ವ ತನ್ನ ಭಾರತಿ ಎಂಬ ಎಮ್ಮೆಯನ್ನು ಹುಡುಕುತ್ತ ಪಕ್ಕದೂರಿನ ಅನಂತನಾರಾಯಣರೆಂಬ ಬ್ರಾಹ್ಮಣರ ಮನೆಗೆ ಬರುವುದು, ಅಲ್ಲಿ ಅನಸೂಯಳು ತುಂಬು ಗರ್ಭಿಣಿಯಾಗಿದ್ದು ಇನ್ನೇನು ಪ್ರಸವವಾಗಬೇಕಾದ ಕ್ಷಣ ಸಮೀಪಿಸಿರುವುದು, ತಮ್ಮದಲ್ಲದ ಜಾತಿಯ ಬಸವ್ವನೇ ಪ್ರಸವ ಮಾಡಿಸಬೇಕಾದ ಸೂಲಗಿತ್ತಿಯಾಗುವ ಅನಿವಾರ್ಯದಿಂದ ಬ್ರಾಹ್ಮಣರ ಮನೆಯವರ ಮನಪರಿವರ್ತನೆಯಾಗುವುದು – ಪ್ರಸ್ತುತ ಕಾದಂಬರಿಯ ಒಂದು ಪ್ರಮುಖ ಘಟನೆಯಾಗಿದೆ. ಮುಂದೆ ಇದೇ ಮನೆಯ ಗುರುನಾಥನು ಸ್ವಾಮೀಜಿ, ವಾಸಣ್ಣ ಮುಂತಾದವರ ಜೊತೆ ಬಸವರಾಜನ ದಲಿತಕೇರಿಯಲ್ಲಿ ಊಟ ಮಾಡುವ ಪ್ರಸಂಗವೂ ಬರುತ್ತದೆ. ಇಲ್ಲಿ ವಿವಿಧ ಸಮುದಾಯವನ್ನು ಪ್ರತಿನಿಧಿಸುವ ಇವರು ಮೀರುವ ಮನೋಧರ್ಮದ `ಮನುಷ್ಯ’ರಾಗಿ ಕಾಣುತ್ತಾರೆ. ಬಸವ್ವನಿಗೇ ಸಂಬಂಧಿಸಿದ ಇನ್ನೊಂದು ಘಟನೆಯೂ ಇಲ್ಲಿ ಉಲ್ಲೇಖನೀಯ. ಈಕೆ ಎಲ್ಲಪ್ಪ ಎಂಬ ಮಾದರ ಹುಡುಗನನ್ನು ತನ್ನ ಎಮ್ಮೆ ಕಾಯಲು ಮನೆಯಲ್ಲೇ ಇಟ್ಟುಕೊಳ್ಳುತ್ತಾಳೆ. ಆತನ ಕೂದಲು ಕತ್ತರಿಸುವುದು, ಸ್ನಾನ ಮಾಡಿಸುವುದು – ಎಲ್ಲಕ್ಕೂ ಪೂರಕವಾಗುತ್ತ ಜಾತಿಯನ್ನು ಮೀರುತ್ತಾಳೆ.
ವಾಸಣ್ಣ ಬಸನಕಟ್ಟೆಗೆ ಬರುವುದಕ್ಕೆ ಮುಂಚೆ ಖಾದಿಕೇಂದ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಮಲ್ಲವ್ವ, ನಿಧಾನವಾಗಿ ಬದಲಾಗುತ್ತಾಳೆ. ವಾಸಣ್ಣನ ಶಿಸ್ತುಬದ್ಧ ಶುದ್ಧ ಹಾದಿಗೆ ಹೊರಳುತ್ತಾಳೆ. ಇನ್ನು ಕಾದಂಬರಿಯ ಒಂದು ಪ್ರಧಾನ ಪಾತ್ರವಾದ ಬಸವರಾಜು, ವಾಸಣ್ಣನ ಪ್ರಭಾವದಿಂದ ತರಬೇತಿಗೆ ಹೋಗಿ ಬಂದು ಕುಲಕಸುಬು ತೊರೆದು ಕುಂಬಾರಿಕೆ ಮಾಡುತ್ತಾನೆ. ಖಾದಿಕೇಂದ್ರವು ಜಾತಿ ಮೂಲ ಕಸುಬುಗಳನ್ನು ಮೀರಿದ ಗುಡಿ ಕೈಗಾರಿಕಾ ಕೇಂದ್ರವಾಗಿ ಬೆಳೆಯುತ್ತದೆ. ವಾಸಣ್ಣ, ಊರಿನವರನ್ನು ತೊಡಗಿಸಿಕೊಳ್ಳುವ ಕ್ರಿಯೆಯಲ್ಲಿ ಯಶಸ್ವಿಯಾಗುವುದು ಕಾದಂಬರಿಯ ಆರ್ಥಿಕ ಆಲೋಚನಾ ವಿಧಾನವೂ ಆಗಿರುವಂತಿದೆ.
ಬಹು ಮುಖ್ಯವಾಗಿ ಇನ್ನೆರಡು ಘಟನೆಗಳು ಮೀರುವ ಮನೋಧರ್ಮದ ಮಹತ್ವಪೂರ್ಣ ಮಜಲನ್ನು ಥಟ್ಟನೆ ತೆರೆಯುತ್ತವೆ. ಈ ಎರಡು ಘಟನೆಗಳೂ ಅಂತರಜಾತಿ ವಿವಾಹಕ್ಕೆ ಸಂಬಂಧಿಸಿವೆ. ಮಲ್ಲವ್ವನ ಮಗಳು ಶೀಲಾಳನ್ನು ದಲಿತ ಬಸವರಾಜ ಮತ್ತು ವಿಧವೆ ಬಸವ್ವಳನ್ನು ವಾಸಣ್ಣ ಮದುವೆಯಾಗಲು ಪರಸ್ಪರ ಒಪ್ಪುವ ಈ ಘಟನೆ ತೀರಾ ಸರಾಗವಾಗಿ ನೆರವೇರುತ್ತದೆ; ಊರವರ ಸಮ್ಮತಿಯೂ ಸಿಗುತ್ತದೆ. ಸಾಂಸ್ಥಿಕತೆಯನ್ನು ಮೀರಿದ ಆಧ್ಯಾತ್ಮಿಕ ಸಂಕೇತ ವ್ಯಕ್ತಿಗಳಾದ ಕುಂಬಾರ ನಿಂಗಜ್ಜ ಮತ್ತು ಆಶ್ರಮದ ಗಿರಿಯಜ್ಜರ ಸಮ್ಮುಖವೂ ಸಹಾಯಕವಾಗುತ್ತದೆ. ಕಾದಂಬರಿಯಲ್ಲಾದಂತೆ ಇವೆಲ್ಲ ಸುಲಭವಾಗಿ ಸರಾಗವಾಗಿ ಆಗುಮಾಡುವ ಸಾಮಾಜಿಕ ಸಂದರ್ಭ ನಿಜಕ್ಕೂ ನಮ್ಮದಾದರೆ ಅದು ಭಾರತದ ಭಾಗ್ಯ! ಆದರೂ ಇದೇ ಊರಲ್ಲಿ ಸಂಭವಿಸುವ ಸಂಚುಗಾರರ ಹಿಂಸಾತ್ಮಕ ಕೃತ್ಯಗಳು ಕಾದಂಬರಿಯಲ್ಲಿ ಚಿತ್ರಿತವಾಗಿರುವುದು ಮೀರುವ ಮನೋಧರ್ಮದವರಿರುವಂತೆ ಮಲಿನ ಮನೋಧರ್ಮದವರೂ ಇರುತ್ತಾರೆಂಬ ಕಟುವಾಸ್ತವಕ್ಕೆ ಕನ್ನಡಿ ಹಿಡಿದಂತಿದೆ.
ಕೆಲವು ಕೃತಿಗಳಲ್ಲಿ ವಿಷಾದದ ಎಳೆಯೊಂದು ಬೆಳೆದಿರುವುದುಂಟು; ಆದರೆ ಈ ವಿಷಾದವು ಬದುಕಿನ ಬವಣೆಗಳನ್ನು ಕಂಡು ಕರುಳಲ್ಲಿ ಕೆಂಡ ಕಟ್ಟಿಕೊಂಡು ಹುಟ್ಟಿರುವುದಿಲ್ಲ; ಬದಲಾಗಿ, ಗ್ರಾಮೀಣ ಪ್ರದೇಶದ ರೂಢಮೂಲ ಮೌಲ್ಯಗಳು ಕರಗುತ್ತಿವೆಯೆಂಬ ಕೊರಗಿನಿಂದ ಹುಟ್ಟಿದ ವಿಷಾದವಾಗಿರುತ್ತದೆ.
ದಲಿತರಿಗೆ ಕುಡಿಯುವ ನೀರಿನ ಬಾವಿಯನ್ನು ತೋಡಿಸುವ ಒಟ್ಟು ಘಟನಾವಳಿಯೇ ವಿಶಿಷ್ಟವಾಗಿ ಮೂಡಿಬಂದಿದೆ. ಈ ವಿಷಯದಲ್ಲಿ ವಾಸಣ್ಣ ಮತ್ತು ಶಾಸಕ ದುಗ್ಗಪ್ಪನವರು ವಹಿಸಿದ ಪಾತ್ರ ಅಸಾಧಾರಣವಾದುದು. ಊರಿನ ಪಟೇಲರಾದಿಯಾಗಿ ಎಲ್ಲರೂ ಕ್ರಿಯಾತ್ಮಕವಾಗಿ ತೊಡಗಿಸಿಕೊಳ್ಳುವ ಇಡೀ ಪ್ರಕ್ರಿಯೆಯು ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇದು ಮಾತು ಮೀರಿದ ಕ್ರಿಯಾರೂಪ.
ಹೀಗೆ ಮೀರುವ ಮನೋಧರ್ಮದ ಪ್ರಕ್ರಿಯಾರೂಪಗಳಿಂದ ಲೋಕೇಶ ಅಗಸನಕಟ್ಟೆಯವರ ಕಾದಂಬರಿಗೆ ಪ್ರಾದೇಶಿಕ, ರಾಜಕೀಯಾತ್ಮಕ, ಆಧ್ಯಾತ್ಮಿಕ ಆಯಾಮಗಳ ಜೊತೆಗೆ ಮುಖ್ಯವಾದ ಸಾಮಾಜಿಕ ಆಯಾಮವೂ ಲಭ್ಯವಾಗಿದೆ. ಈ ಎಲ್ಲ ಆಯಾಮಗಳಿಗೆ ಅಂತರ್‍ವಾಹಿನಿಯಾಗಿ ವೈಚಾರಿಕ ಆಯಾಮವಿದೆ. ಇದು ಬಸವರಾಜ, ವಾಸಣ್ಣ, ಸ್ವಾಮೀಜಿ, ದುಗ್ಗಪ್ಪ ಮುಂತಾದ ಪಾತ್ರಗಳ ಮೂಲಕ ಪ್ರಕಟಗೊಳ್ಳುತ್ತದೆ. ಹೀಗೆ ಪ್ರಕಟಗೊಳ್ಳುವ ವೈಚಾರಿಕ ಚರ್ಚೆಗಳ ಚರ್ಚೆಯೂ ಮುಖ್ಯ.
ಮುಖ್ಯ ಭಿನ್ನಾಭಿಪ್ರಾಯವಿರುವುದು ಬಸವರಾಜು ಮತ್ತು ವಾಸಣ್ಣನವರ ನಡುವೆ. ಇದು ಕಾದಂಬರಿಯ ಮುಖ್ಯ ಭಾಗವೂ ಹೌದು. ಬಸವರಾಜು, ಡಾ. ಅಂಬೇಡ್ಕರ್‌ವಾದಿ ಮತ್ತು ವಾಸಣ್ಣ, ಗಾಂಧಿವಾದಿ – ಮುಖಾಮುಖಿಯಾಗಲು ಈ ವಾದಗಳೇ ವೇದಿಕೆ. ಆದರೆ ವಾಸಣ್ಣ, ಅಂಬೇಡ್ಕರ್ ಅವರನ್ನೂ ಬಸವರಾಜು, ಗಾಂಧಿಯವರನ್ನೂ ಓದಿಕೊಂಡು ಅರಿಯುತ್ತ ಹೋದಂತೆ ಇಬ್ಬರೂ ಬದಲಾಗುತ್ತಾರೆ. ಅಂಬೇಡ್ಕರ್ ಮತ್ತು ಗಾಂಧಿ ನಡುವಿನ ಕೆಲವು ವೈಚಾರಿಕ ಭಿನ್ನಾಭಿಪ್ರಾಯಗಳು ಗುರಿಗೆ ಸಂಬಂಧಿಸಿಲ್ಲ, ದಾರಿಗೆ ಸಂಬಂಧಿಸಿವೆಯೆಂಬ ತಿಳುವಳಿಕೆಗೆ ತಲುಪುವುದು ಕಾದಂಬರಿಯ ಆಶಯವೂ ಆಗಿದೆ. ಹಾಗೆಂದು ಇಬ್ಬರೂ ಒಬ್ಬರೇ ಅಲ್ಲ. ಇಬ್ಬರೂ ಇಬ್ಬರೇ ಆಗಿದ್ದಾರೆ. ಆದರೆ ಒಬ್ಬರು ನಾಯಕ, ಇನ್ನೊಬ್ಬರು ಖಳ ನಾಯಕ ಅಲ್ಲ. ಚಿಂತನಾವಿಧಾನ ಮತ್ತು ವ್ಯಕ್ತಿತ್ವಗಳಲ್ಲಿ ಅವರದೇ ಆದ ಸ್ವಂತಿಕೆಯಿಂದ ಕೆಲವು ಭಿನ್ನನೆಲೆಗಳು ಇದ್ದರೂ ಇಬ್ಬರೂ ಅಪ್ಪಟ ಪ್ರಾಮಾಣಿಕರು. ಇಬ್ಬರೂ ಅಸ್ಪೃಶ್ಯತೆ ವಿರೋಧಿಗಳು. ಆದರೆ ಗಾಂಧಿಯವರು ಹಿಂದೂಧರ್ಮದ ಒಳಗಿನಿಂದ ತಮ್ಮ ಚಿಂತನೆಗಳನ್ನು ರೂಪಿಸಿಕೊಂಡರೆ, ಅಂಬೇಡ್ಕರ್ ಅವರು ಹಿಂದೂಧರ್ಮದ ಹೊರಗಿದ್ದು ಚಿಂತನಾಕ್ರಮವನ್ನು ಕಟ್ಟಿಕೊಳ್ಳುತ್ತಾರೆ. ಅಸ್ಪೃಶ್ಯತೆಯ ಅನುಭವದಲ್ಲಿ ಬೆಂದ ಬದುಕಿನಿಂದ ಬಂದ ಅಂಬೇಡ್ಕರ್ ಅವರಿಗೆ ಹಿಂದೂಧರ್ಮದಾಚೆಗಿನ ನೆಲೆ ಸಹಜವೆನಿಸಿತ್ತು. ಅದೇನೆ ಇರಲಿ, ಇಬ್ಬರೂ ಸ್ವಾತಂತ್ರ್ಯ ಮತ್ತು ಸಮಾನತೆಯ ಪ್ರತಿಪಾದಕರಾಗಿ ನಮಗಿಂದು ಮುಖ್ಯರಾಗುತ್ತಾರೆ. ಅವರೆಂದೂ ಪರಸ್ಪರ ದ್ವೇಷಿಸಿದವರಲ್ಲ. ನಾವೀಗ ಅವರನ್ನು ಪರಸ್ಪರ ದ್ವೇಷಿಸುವ ಪಟ್ಟದಲ್ಲಿ ಕೂರಿಸಿ ಪಟ್ಟು ಹಾಕುವುದು ಸಲ್ಲ. ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತಲೇ ಇಬ್ಬರು ಸಾಧಕರನ್ನು ಗೌರವಿಸುವುದು ಪ್ರಜಾಸತ್ತಾತ್ಮಕ ನಡೆ. ಸ್ವತಃ ಅಂಬೇಡ್ಕರ್ ಅವರೇ ಗಾಂಧಿ ಕುರಿತು ತಮಗೆ ವ್ಯಕ್ತಿ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾದಂಬರಿಯಲ್ಲಿ ಬರುವ ಅಂಬೇಡ್ಕರ್ ಮತ್ತು ಗಾಂಧಿ ಚಿಂತನೆಗಳ ಚರ್ಚೆ ಮುಖ್ಯವಾಗುತ್ತದೆ.
ಬಸವರಾಜ ತನ್ನಲ್ಲಿದ್ದ ಅಂಬೇಡ್ಕರ್ ಕುರಿತ ಪುಸ್ತಕವನ್ನು ವಾಸಣ್ಣನ ಮನೆ ಬಳಿ ಅವರಿಗೆ ಗೊತ್ತಿಲ್ಲದಂತೆ ಇಟ್ಟು ಹೋಗುತ್ತಾನೆ. ಅದನ್ನು ಓದಿದ ವಾಸಣ್ಣ ತನಗೆ ಗೊತ್ತಿಲ್ಲದ ಅಂಬೇಡ್ಕರ್ ಅವರನ್ನು ಗೊತ್ತು ಮಾಡಿಕೊಳ್ಳುತ್ತಾನೆ. ಅಂತೆಯೇ ವಾಸಣ್ಣನಿಂದ ಪಡೆದ ಪುಸ್ತಕಗಳಿಂದ ಬಸವರಾಜು, ತನಗೆ ಗೊತ್ತಿಲ್ಲದ ಗಾಂಧೀಜಿಯನ್ನು ಗೊತ್ತು ಮಾಡಿಕೊಳ್ಳುತ್ತಾನೆ. ಅಧ್ಯಯನವಿಲ್ಲದೆ ಅಪಾರ್ಥಕ್ಕೆ ದನಿಯಾಗುವ ಪ್ರವೃತ್ತಿಗೆ ಪರ್ಯಾಯವಾಗಿ, ಈ ಓದಿನ ಘಟನೆಗಳು ನಿರೂಪಿತವಾಗಿರುವುದು ಸಮಕಾಲೀನ ಸಂದರ್ಭದ ಗಮನಾರ್ಹ ಅಂಶ. ಇಬ್ಬರೂ ಆತ್ಮ ನಿರೀಕ್ಷೆಗೆ ಒಳಗಾಗುವುದು ಇನ್ನೊಂದು ಮುಖ್ಯಾಂಶ. ಪೂರ್ವಾಗ್ರಹ ಮುಕ್ತ ಮನಸ್ಸು ನಮ್ಮ ದೇಶದ ಇಬ್ಬರು ಮಹಾನ್ ನಾಯಕರನ್ನು ಸಮೀಪಕ್ಕೆ ತರುತ್ತದೆ. ಸಮೀಪದಿಂದ ನೋಡುವಂತೆ ಮಾಡುತ್ತದೆ. ಕಾದಂಬರಿಯಲ್ಲಿ ವಾಸಣ್ಣ `ನಾವೇ ಓದದೆ, ತಿಳಿಯದೆ, ಬೇರೆಯವರ ಮಾತು, ವ್ಯಾಖ್ಯಾನಗಳ ಮೇಲೆ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬಾರದಲ್ಲ!’ ಎಂದು ಬಸವರಾಜುವಿಗೆ ಹೇಳುವ ಮಾತನ್ನು ತನಗೂ ಅನ್ವಯಿಸಿಕೊಳ್ಳುತ್ತಾನೆ. ಆದ್ದರಿಂದ ಆತನೂ ಬದಲಾಗುತ್ತಾನೆ; ಬಸವರಾಜೂ ಬದಲಾಗುತ್ತಾನೆ. ಇದು ಕಾದಂಬರಿಯಲ್ಲಿರುವ ಸಾಕ್ಷಿಪ್ರಜ್ಞೆ. ಇದ್ದಕ್ಕಿದ್ದಂತೆ ಸಂಭವಿಸದೆ ಅಗತ್ಯ ಅಧ್ಯಯನ ಮತ್ತು ಆತ್ಮನಿರೀಕ್ಷೆಯ ಮೂಲಕ ಆದ ಪರಿವರ್ತನೆಯನ್ನು ಲೋಕೇಶ ಅಗಸನಕಟ್ಟೆಯವರು ಸಮರ್ಥವಾಗಿ ಸಾವಧಾನದಿಂದ ಸಾದರಪಡಿಸಿದ್ದಾರೆ. ಆತ್ಮನಿರೀಕ್ಷೆಯ ಅರಿವಿನ ತೊರೆ ಎಲ್ಲಿಯವರೆಗೆ ಹರಿಯುತ್ತದೆಯೆಂದರೆ, ಖಾದಿಕೇಂದ್ರದಲ್ಲಿ ಗಾಂಧಿ ಫೋಟೋ ಜೊತೆಗೆ ಅಂಬೇಡ್ಕರ್ ಫೋಟೊವನ್ನು ವಾಸಣ್ಣ ಹಾಕಿಸುವಲ್ಲಿಗೆ ತಲುಪುತ್ತದೆ. `ಗಾಂಧಿ ಫೋಟೊ ಒಂದೇ ಸಾಕಲ್ಲವೆ?’ ಎಂದು ಖಾದಿಕೇಂದ್ರದ ಅಧ್ಯಕ್ಷರು ಕೇಳಿದಾಗ ವಾಸಣ್ಣ ಕೊಡುವ ಉತ್ತರ: `ಇಬ್ಬರೂ ಮಹಾತ್ಮರೇ ಅಲ್ಲವೇ?’. ಹೀಗೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರನ್ನೂ ಮಹಾತ್ಮರೆಂದು ಪರಿಭಾವಿಸುವ ಮನೋಧರ್ಮವು ಸಮಾನ ಗೌರವ ನೀಡುವ ನಿಜದ ನಡೆಯಾಗಿದೆ.
ಇಲ್ಲಿಯೇ ಪಟೇಲರು `ಬಸವಣ್ಣೋರ್ದು ಒಂದು ಫೋಟೋ ಇಡ್ಬೇಕಿತ್ತಪ್ಪ’ ಎನ್ನುತ್ತಾರೆ. ವಾಸಣ್ಣ `ಹೌದೌದು ಮುಂದೆ ಇಡೋಣ’ ಎಂದು ಸಮ್ಮತಿಸುತ್ತಾನೆ. ಮುಂದೆ ಸ್ವಾಮೀಜಿಯವರು ಬಂದಾಗ ಇದು ಸಾಕಾರವಾಗುತ್ತದೆ. ಬಸವಣ್ಣನವರ ಸಾಧನೆಗೆ ಇದು ಸಂದ ಸೂಕ್ತ ಗೌರವ. ಆದರೆ ದುಗ್ಗಪ್ಪನವರ ಮನೆಯಲ್ಲಿ `ಬುದ್ಧಭಾರತ’ದ ಪ್ರಸ್ತಾಪವಾಗಿತ್ತಾದರೂ ಖಾದಿಕೇಂದ್ರದಲ್ಲಿ ಬುದ್ಧಗುರುವಿನ ಫೋಟೊ ಪ್ರಸ್ತಾಪವನ್ನು ಯಾರೂ ಮಾಡುವುದಿಲ್ಲ ಅಥವಾ ಯಾರಿಂದಲೂ ಮಾಡಿಸುವುದಿಲ್ಲ!
ಹೌದು; ಕಾದಂಬರಿಯು ಕೆಲವು ಮುಖ್ಯ ಚರ್ಚೆಗಳನ್ನು ಒಳಗೊಂಡಿದ್ದು ದುಗ್ಗಪ್ಪನವರ ಮನೆಯಲ್ಲಿ `ಬುದ್ಧಭಾರತ’ದ ಪ್ರಸ್ತಾಪವಾಗುತ್ತದೆ. ಅಲ್ಲಿ ಸಮಾಜವಾದಿ ಯುವಜನಸಭಾದವರು, ದಲಿತ ಯುವ ಮುಂದಾಳುಗಳೂ ಸೇರಿದಾಗ ನಮ್ಮ ದೇಶದ ಭೂತ-ವರ್ತಮಾನಗಳ ಚರ್ಚೆಯನ್ನು ಕಾದಂಬರಿಕಾರರು ಬೆಳೆಸಿದ್ದಾರೆ. ಅಲ್ಲಿದ್ದ ಒಬ್ಬಾತ ದುಗ್ಗಪ್ಪನವರನ್ನು `ಅಪ್ಪಟ ಗಾಂಧಿವಾದಿಗಳೇ ಆಗಿ ಬಿಟ್ಟಿದ್ದೀರಿ’ ಎಂದು ಆಕ್ಷೇಪಿಸುತ್ತ `ಬಾಬಾಸಾಹೇಬ್ರು ಹಿಂದೂ ಭಾರತ ಆಗುವ ಮೊದಲಿನ ಬುದ್ಧಭಾರತ ಮಾಡ್ಬೇಕೂಂತ ಇದ್ದರು; ಬುದ್ಧಭಾರತದ ಮೇಲೆ ಹಿಂದೂ ಭಾರತ ನಿಂತಿತು’ ಎಂದು ಪ್ರತಿಪಾದಿಸುತ್ತಾನೆ. ಚರ್ಚೆಯ ಮುಕ್ತಾಯದ ಹಂತದಲ್ಲಿ ದುಗ್ಗಪ್ಪನವರು ಹೀಗೆ ಹೇಳುತ್ತಾರೆ: `ನಿಜ ಹೇಳ್ತೀನಿ. ನನ್ನ ಭಾರತ, ಗಾಂಧಿ – ಅಂಬೇಡ್ಕರರು ಒಟ್ಟಾಗಿರುವ ಭಾರತ ಆಗ್ಬೇಕು…. ಗಾಂಧಿಯ ಅಹಿಂಸಾ ಮಾರ್ಗ ಮತ್ತು ಬಾಬಾಸಾಹೇಬ್ರ ಪ್ರಜಾಪ್ರಭುತ್ವದ ಆಶಯ ಎರಡೂ ಜೊತೆಯಾಗಬೇಕು. ಆವಾಗ್ಲೆ ನಿಜವಾದ ಭಾರತ ಆಗುತ್ತೆ’ – ಇದು ದುಗ್ಗಪ್ಪನವರ ಆಶಯವಷ್ಟೇ ಅಲ್ಲ, ಈ ಕಾದಂಬರಿಯ ವೈಚಾರಿಕ ವಲಯದ ಒಂದು ಧಾರೆಯೂ ಆಗಿದೆ.
ನಾನು `ಒಂದು ಧಾರೆ’ ಎನ್ನಲು ಕಾರಣವಿದೆ. ಕಾದಂಬರಿಯ ಒಂದು ಮುಖ್ಯ ಹಂತದಲ್ಲಿ ಸಿರಿಗೆರೆಯ ಹಿರಿಯ ಸ್ವಾಮೀಜಿಯವರ ವಿಚಾರಧಾರೆಯು ಮಹತ್ವ ಪಡೆದುಕೊಳ್ಳುತ್ತದೆ. ಇಲ್ಲಿ ದುಗ್ಗಪ್ಪನವರು `ನಮ್ಮ ನಾಯಕ ನೆಹರು ಈ ಕನಸು (ನಿಜ ಭಾರತ) ನನಸು ಮಾಡೊ ಹಾದೀಲಿದ್ದಾರೆ’ ಎಂದರೆ ಅಲ್ಲಿ ಸ್ವಾಮೀಜಿ ಒಂದು ಚರ್ಚೆಯಲ್ಲಿ ನೆಹರು ಕುರಿತ ಒಂದು ನಡೆಗಾಗಿ ಲಜ್ಜೆಬಿಟ್ಟವರೆಂದು ಟೀಕಿಸುತ್ತಾರೆ! ಗಾಂಧಿ-ಅಂಬೇಡ್ಕರ್ `ಇಬ್ಬರೂ ಮಹಾತ್ಮರೇ’ ಎಂದಿದ್ದ ವಾಸಣ್ಣ ಇದೇ ಚರ್ಚೆಯಲ್ಲಿ ಚುನಾವಣೆ ವಿಷಯ ಪ್ರಸ್ತಾಪವಾದಾಗ `ಗಾಂಧಿ ಮಾಸ್ ಲೀಡರ್, ಅಂಬೇಡ್ಕರ್ ಕ್ಯಾಸ್ಟ್ ಲೀಡರ್. ಗೆಲ್ಲೋಕೆ ಇತರೆ ಜಾತಿಯವರ ಮತಗಳೂ ಬೇಕಲ್ಲ?’ ಎನ್ನುತ್ತಾನೆ. ಸಂದರ್ಭಾನುಸಾರ ಈ ಇಬ್ಬರ ಮಾತುಗಳು ಬಂದಿದ್ದರೂ ಈ ಇಬ್ಬರೂ ಕಾದಂಬರಿಯ ನೀತಿ ನಿರೂಪಕ ಪಾತ್ರಗಳಂತೆ ಚಿತ್ರಿತವಾಗಿರುವುದರಿಂದ ಕಾದಂಬರಿಯ ಒಡಲಾಳದ ಸಾಮರಸ್ಯದ ಆಶಯಕ್ಕೆ ಧಕ್ಕೆಯಾಗುವುದಿಲ್ಲವೆ ಎಂಬ ಪ್ರಶ್ನೆಯೇಳುತ್ತದೆ. ಹೀಗಾಗಿಯೇ ಕಾದಂಬರಿಯಲ್ಲಿ ಬರುವ ಒಂದಲ್ಲದ ವಿವಿಧ ಧಾರೆಗಳು ತಲುಪುವುದು ಎಲ್ಲಿಗೆ ಮುಖ್ಯವಾಗುವುದು ಯಾವುದು ಎಂಬ ಸೂರ್ಯ ಸ್ಪಷ್ಟ ಬೆಳಕು ಬೇಕಾಗುತ್ತದೆ. ದುಗ್ಗಪ್ಪ, ಸ್ವಾಮೀಜಿ, ವಾಸಣ್ಣ – ಯಾರ ಮಾತು ಕಾದಂಬರಿಯಲ್ಲಿ ಮುಖ್ಯ ಅಥವಾ ಮೂವರ ವಿಚಾರಧಾರೆಯೂ ಮುಖ್ಯವೆ? ನನಗಂತೂ ಈ ಪ್ರಶ್ನೆ ಎದುರಾದದ್ದು ನಿಜ. ಯಾಕೆಂದರೆ ವೈವಿಧ್ಯಮಯ ಬದುಕನ್ನು ಚಿತ್ರಿಸುತ್ತಲೇ ಸಾಮಾಜಿಕ ಸಾಮರಸ್ಯ ಮತ್ತು ಆರ್ಥಿಕ ಕ್ರಿಯಾದರ್ಶನಗಳ ನಿರ್ದಿಷ್ಟ ಮಾದರಿಯತ್ತ ಸಾಗುವ ಪ್ರಕ್ರಿಯೆಯನ್ನು ಸಮರ್ಥವಾಗಿ ಆಗುಮಾಡುತ್ತಿದ್ದ ಕಾದಂಬರಿಯು ಸ್ವಾಮೀಜಿಯವರ ಪ್ರವೇಶದೊಂದಿಗೆ ದೊಡ್ಡ ದನಿಯ ತಿರುವು ಪಡೆದುಕೊಳ್ಳುತ್ತದೆ. ಚರ್ಚೆಯಲ್ಲಿ ಅವರ ಮಾತು ಮೇಲುಗೈ ಆದಂತೆ ಕಾಣಿಸುತ್ತದೆ. ಅಷ್ಟೇ ಅಲ್ಲ, ಮುಂದೆ ಚರ್ಚೆಯನ್ನು ಮುಂದುವರೆಸದ ನಿರ್ಣಾಯಕ ನುಡಿಗಳು ಸ್ವಾಮೀಜಿಯಿಂದ ಬರುತ್ತವೆ. `ಭೂ ಮಾಲಕರಾದ ವೀರಶೈವರೂ ಬಸವಧರ್ಮದವರೂ ಏನು ಕಡಿಮೆ ಶೋಷಣೆ ಮಾಡ್ತಾ ಇದ್ದಾರೆಯೇ ಗುರುಗಳೇ?’ ಎಂದು ಒಬ್ಬಾತ ಕೇಳಿದಾಗ `ಎಲ್ಲ ಜಾತಿಗಳೂ ಒಂದಲ್ಲ ಒಂದು ರೀತಿಯಲ್ಲಿ ಶೋಷಣೆ ಮಾಡ್ತಾ ಇವೆ’ ಎಂದು ಸ್ವಾಮಿಗಳು ಸರಿಯಾಗಿಯೇ ಉತ್ತರಿಸುತ್ತಾರೆ. ಮುಂದುವರೆದು `ಧಾರ್ಮಿಕ ಚಳುವಳಿಗಳಿಗೆ ಇದ್ದ ಬದ್ಧತೆ ಸಾಮಾಜಿಕ ಚಳುವಳಿಗಳಿಗೆ ಇಲ್ದೆ ಇರೋದೇ ಇದಕ್ಕೆ ಕಾರಣ’ ಎನ್ನುವ ನಿರ್ಣಾಯಾತ್ಮಕ ನುಡಿಗಳನ್ನು ಹೇಳಿದ್ದಲ್ಲದೆ `ಅನ್ಯಾಯದ ವಿರುದ್ಧ ದನಿ ತೆಗೆದ ಹೋರಾಟದ ಕೊನೆ ಶೋಷಣೆಯನ್ನು ಮಾಡುವುದರಲ್ಲೇ ಅಂತ್ಯವಾಗುತ್ತೆ’ ಎಂಬ ತೀರ್ಪನ್ನೂ ನೀಡುತ್ತಾರೆ. ಇಂಥ ಬೀಸು ಹೇಳಿಕೆಗಳು ಚರ್ಚಾರ್ಹವಾಗುತ್ತವೆ. ಆದರೆ ಇದೇ ಸ್ವಾಮೀಜಿಯವರು ಗಾಂಧಿ ಮತ್ತು ಅಂಬೇಡ್ಕರರನ್ನು `ಇಬ್ಬರೂ ಜನ ನಾಯಕರು’ ಎಂದು ಕರೆದು ಅಪಾರ್ಥಗಳನ್ನು ಗುರುತಿಸಿ ನಿಜಾರ್ಥದ ವ್ಯಾಖ್ಯಾನ ಮಾಡುವ ರೀತಿ ವೈಚಾರಿಕ ವಿಶ್ಲೇಷಣೆಯ ಒಂದು ಉತ್ತಮ ಮಾದರಿಯಾಗಿದೆ.
ಸ್ವಾಮೀಜಿಯವರ ಮೂಲಕ ಬರುವ ಇನ್ನೊಂದು ಹೇಳಿಕೆ ಚರ್ಚೆಯನ್ನು ಬಯಸುತ್ತದೆ. ಅಥವಾ ಅಸ್ಪಷ್ಟ ಅರಿವಿನಿಂದ ಕೂಡಿದೆ. ನಾನೀಗ ಉಲ್ಲೇಖಿಸುತ್ತಿರುವ ಹೇಳಿಕೆಯು ಸ್ವಾಮೀಜಿಯವರದಷ್ಟೇ ಆಗಿರದೆ ಅವರ ಮೂಲಕ ಬಂದಿರುವ ಲೇಖಕರದೇ ಆಗಿರುವುದರಿಂದ ಅದರ ಪ್ರಸ್ತಾಪ ಮುಖ್ಯವಾಗುತ್ತದೆ. ಸ್ವಾಮೀಜಿಯವರು ಗಾಂಧಿ ಸತ್ಯಾಗ್ರಹ ಮತ್ತು ಅಂಬೇಡ್ಕರ್ ಹೋರಾಟಗಳನ್ನು ಪ್ರಸ್ತಾಪಿಸುತ್ತ `ಕಾಲಾಂತರದಲ್ಲಿ ಸತ್ಯಾಗ್ರಹ, ಮುಷ್ಕರ, ಚಳವಳಿಯ ರೂಪ ಪಡೆದದ್ದೂ ಹೋರಾಟ ಸಂಘರ್ಷ ರೂಪ ಪಡೆದದ್ದೂ ಕಾಲಧರ್ಮವೋ ಆ ಮಹನೀಯರ ತತ್ವಗಳನ್ನು ನಾವು ನಮ್ಮ ಕಾಲಕ್ಕೆ ಅಪಾರ್ಥ ಮಾಡಿಕೊಂಡದ್ದೊ?’ ಎಂದು ಪ್ರಶ್ನಿಸುತ್ತಾರೆ. ನನಗನ್ನಿಸುತ್ತದೆ; ಇಲ್ಲಿ ಚಳವಳಿ, ಮುಷ್ಕರ, ಸಂಘರ್ಷ – ಇವುಗಳ ಅರ್ಥವನ್ನೇ ಅಪಾರ್ಥ ಮಾಡಿಕೊಳ್ಳಲಾಗಿದೆ. ಗಾಂಧೀಜಿಯವರು ವೈಯುಕ್ತಿಕವಾಗಿ ಉಪವಾಸ ಸತ್ಯಾಗ್ರಹ ಮಾಡಿದ್ದನ್ನು ಬಿಟ್ಟರೆ, ಉಳಿದಂತೆ ಅವರು ಕಟ್ಟಿದ್ದೂ ಚಳವಳಿಯನ್ನೇ; ಮಾಡಿದ್ದೂ ಮುಷ್ಕರವನ್ನೇ! ಸ್ವಾತಂತ್ರ್ಯ ಚಳವಳಿ – ಎಂದೇ ನಾವು ಕರೆಯುತ್ತ ಬಂದಿಲ್ಲವೆ? ಆದರೆ ಗಾಂಧಿ ಪ್ರಣೀತ ಚಳವಳಿಯ ಸ್ವರೂಪಕ್ಕೂ ಇಂದಿನ ಕೆಲವು (ಎಲ್ಲ ಅಲ್ಲ – ಕೆಲವು) ಮುಷ್ಕರ ಮತ್ತು ಚಳವಳಿಗಳ ಸ್ವರೂಪಕ್ಕೂ ವ್ಯತ್ಯಾಸವಿರಬಹುದು. ಹಾಗೆಂದು ಗಾಂಧಿಯವರು ಚಳವಳಿಯನ್ನೇ ಮಾಡಲಿಲ್ಲ ಎನ್ನುವುದು ಸರಿಯಲ್ಲ. ಅಂಬೇಡ್ಕರ್ ವಿಚಾರದಲ್ಲೂ ಅಷ್ಟೇ. ಅಂದು ಅವರು ನಡೆಸಿದ ಹೋರಾಟಗಳು ಸಂಘರ್ಷಗಳೇ ಆಗಿದ್ದವು. ಸಂಘರ್ಷ ಎಂದರೆ ಹಿಂಸಾತ್ಮಕ ಅಲ್ಲ. ಸಮಾನತೆಗಾಗಿ ನಡೆಸಿದ ಮುಖಾಮುಖಿ ನೆಲೆಯ ವೈಚಾರಿಕ ಹಾಗೂ ಕ್ರಿಯಾತ್ಮಕ ಸಂಘರ್ಷವನ್ನು ಅಂತರ್ಗತ ಮಾಡಿಕೊಂಡ ಹೋರಾಟಗಳನ್ನು ಅಂಬೇಡ್ಕರ್ ನಡೆಸಿದರು. ಆದ್ದರಿಂದ ಯಾರೋ ನಡೆಸುವ `ಕೆಲವು’ ಅನುಚಿತ ಮುಷ್ಕರಗಳು ಮತ್ತು ಸಂಘರ್ಷಗಳ ಕಾರಣಕ್ಕಾಗಿ ಇಡೀ ಪರಿಕಲ್ಪನೆಗಳನ್ನೇ ನಕಾರಾತ್ಮಕವಾಗಿ ನೋಡಬೇಕಾಗಿಲ್ಲ.
ನಾನು ಕಾದಂಬರಿಯೊಳಗಿನ ಕೆಲವು `ನಿರ್ಣಯಾತ್ಮಕ’ ಭಾವ ಮೂಡಿಸುವ ಹೇಳಿಕೆಗಳನ್ನು ಚರ್ಚೆಗೆ ಎಳೆದದ್ದು ಇಡೀ ಕಾದಂಬರಿಯನ್ನು ಕುರಿತ ನಕಾರಾತ್ಮಕ ನಿಲುವಿನಿಂದ ಅಲ್ಲ. ನಾನು ಕಾದಂಬರಿಯನ್ನು `ಸಕಾರಾತ್ಮಕ ಸಂವೇದನೆಯ ರಚನೆ’ ಎಂದು ಭಾವಿಸಿದ್ದೇನೆ. ಅದೇ ಸಂದರ್ಭದಲ್ಲಿ ಪರ-ವಿರೋಧದ ಚರ್ಚೆಯನ್ನು ಆಗುಮಾಡುವ ಸನ್ನಿವೇಶಗಳ ಸೃಷ್ಟಿಯಿಂದ ಕಾದಂಬರಿಗೆ ಪ್ರಜಾಸತ್ತಾತ್ಮಕ ಸ್ವರೂಪ ಲಭ್ಯವಾಗಿದೆಯೆಂದು ಹೇಳಬಯಸುತ್ತೇನೆ. ನಿರ್ಣಯಾತ್ಮಕ ನುಡಿಗಳ ಬಗ್ಗೆ ಮಾತ್ರ ನನ್ನ ಪ್ರಶ್ನಾರ್ಥಕ ಚರ್ಚೆ. ಹೀಗೆ ಚರ್ಚೆಯನ್ನು ಆಹ್ವಾನಿಸುವ ಮೂಲಕವೂ ಇದೊಂದು `ಪ್ರಜಾಸತ್ತಾತ್ಮಕ ಕಾದಂಬರಿ’ಯಾಗಿದೆ. ಇಡೀ ಕಾದಂಬರಿಯಲ್ಲಿ ವಿವಿಧ ವಿಚಾರಗಳು, ವ್ಯಕ್ತಿತ್ವಗಳು, ಎದುರುಬದರಾಗುತ್ತಲೇ ಸಾಮರಸ್ಯದ ಆಶಯದತ್ತವೆ ಎನ್ನುವುದು ಸಕಾರಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಅಂಶವಾಗಿದೆ. ಈ ಮೆಚ್ಚುಗೆಯ ಮಾತನ್ನು ಹೇಳುತ್ತಲೇ ಕಾದಂಬರಿಯಲ್ಲಿ ಬರುವ ಕಾರ್ಮಿಕರಿಗೆ ಸಂಬಂಧಿಸಿದ ಘಟನೆಗಳು, ಕಾರ್ಮಿಕ ಚಳವಳಿಯ ನಕಾರಾತ್ಮಕ ಮುಖಕ್ಕೆ ಮಾತಾಗುವಲ್ಲಿ ಉತ್ಸುಕವಾಗಿಯೇ ಹೊರತು, ಸಕಾರಾತ್ಮಕ ಮುಖದ ಕಡೆ ಮುಖ ಮಾಡುವುದೇ ಇಲ್ಲವೆಂದು ಹೇಳಬಯಸುತ್ತೇನೆ.
ಶಿಂಧೆ ಹೋಟೆಲ್‌ನಲ್ಲಿ ನಡೆಯುವ ಕಾರ್ಮಿಕರ ಚರ್ಚೆ ಮತ್ತು ಹಾದಿಬೀದಿ ಮಾತುಗಳಿಗೆ ಮಾತ್ರ ಮೀಸಲಾಗುವ ಕಾರ್ಮಿಕ ಪ್ರಸ್ತಾಪಗಳು ಇಲ್ಲದಿದ್ದರೂ ಕಾದಂಬರಿಯ ಒಟ್ಟಂದಕ್ಕೆ ಊನವಾಗುತ್ತಿರಲಿಲ್ಲ. ಕಾರ್ಮಿಕ ಚಳವಳಿ ಮತ್ತು ಬದುಕು ಬೇರೊಂದು ಕಾದಂಬರಿಗೆ ವಸ್ತುವಾಗುವಷ್ಟು ವಿಸ್ತಾರವಾದುದು.
ಲೋಕೇಶ ಅಗಸನಕಟ್ಟೆಯವರ ಭಾಷೆ ಮತ್ತು ಪ್ರತಿ ವಿವರಗಳನ್ನೂ ಕಟ್ಟಿಕೊಡುವ ರೀತಿ ಅನನ್ಯವಾದುದು. ನಿರುದ್ವಿಗ್ನ ನಿರೂಪಣೆಯ ನಿಧಾನಗತಿಯ ಈ ಕಾದಂಬರಿಯಲ್ಲಿ ಭೂಗೋಳ ಮತ್ತು ಚರಿತ್ರೆಗಳು ಒಂದಾಗಿ ವಿಶಿಷ್ಟ ರೂಪಕ್ಕೆ ಕಾರಣವಾಗಿವೆ. ಊರು, ಹಾದಿ, ಬೀದಿ, ಮರ, ಗಿಡ, ಹೊಲ, ಮನೆ-ಮಠ ಮುಂತಾದ ಯಾವುದೇ ಬಾಹ್ಯ ಭೂಗೋಳ ವಸ್ತುಗಳನ್ನು ಸವಿವರವಾಗಿ ಕಣ್ಣಿಗೆ ಕಟ್ಟುವಂತೆ ಸಂಯೋಜಿಸುವ ಕಲೆಗಾರಿಕೆಯನ್ನು ಲೋಕೇಶ್ ಅವರು ಎದ್ದು ಕಾಣಿಸುತ್ತಾರೆ. ಕಾದಂಬರಿಯ ಆರಂಭವೇ ಭೌಗೋಳಿಕ ಪರಿಸರ ನಿರ್ಮಿತಿಯ ನಿರೂಪಣೆಯಿಂದ ಸ್ವಾಗತಿಸುತ್ತದೆ. ಬಸನಕಟ್ಟೆಯ ಹಾದಿ, ಬೀದಿ, ಕೇರಿ, ಹಟ್ಟಿ, ಖಾದಿಕೇಂದ್ರ – ಯಾವುದೇ ಬರಲಿ, ಅದಕ್ಕೆ ಸಂಬಂಧಿಸಿದ ಸಣ್ಣಪುಟ್ಟ ವಿವರಗಳನ್ನೂ ಬಿಡದೆ ಪ್ರತಿಯೊಂದನ್ನು ಕಟ್ಟಿಕೊಡಲಾಗಿದೆ. ಈ ಸಮಸ್ತ ವಿವರಣೆಯ ಕಾರಣಕ್ಕಾಗಿ ಕಥನವು ಕೆಲವೊಮ್ಮೆ ಮಂದಗಾಮಿಯಾಗುವುದೂ ಉಂಟು. ಆದರೆ ಈ ವಿವರಣಾತ್ಮಕ ಆವರಣ ನಿರ್ಮಿತಿಯ ನಿರೂಪಣಾ ವಿಧಾನವು ಲೇಖಕರ ಮೆಚ್ಚಿನ ಆಯ್ಕೆಯಾಗಿರುವಂತೆ ಕಾಣುತ್ತದೆ. ಇದರ ಫಲವಾಗಿ ಕಾದಂಬರಿಯ ವಿವರ ಸಮೃದ್ಧಿಯಿಂದ ತುಂಬಿ ತುಳುಕುತ್ತದೆ.
ಸಾಹಿತ್ಯೇತರ ಶಿಸ್ತುಗಳ ಮೂಲಕವೂ ಕಾದಂಬರಿಯನ್ನೇ ಅಧ್ಯಯನಿಸುವ ಅವಕಾಶಕ್ಕೆ ಕಾರಣವಾಗುತ್ತದೆ. ಬಾಹ್ಯವಿವರಗಳನ್ನು ಮುಖ್ಯವಾಗಿ ಗಮನಿಸಿದರೆ ಭೂಗೋಳ ಸಮೃದ್ಧಿ ಕಂಡರೂ ಆಂತರಿಕವಾಗಿ ಚರಿತ್ರೆಯೊಂದಿದೆ. ಈ ಚರಿತ್ರೆಯು ಅಂಬೇಡ್ಕರ್, ಗಾಂಧಿ ಅಂತರ್ಗತ ವಿಚಾರಗಳಿಂದಾಗುವ ಪರಿವರ್ತನಶೀಲತೆಯಲ್ಲಿಪ್ರತಿಫಲಿಸುತ್ತದೆ. ಸಾಮಾಜಿಕ ಚಲನಶೀಲ ಚರಿತ್ರೆಯ ಸಂಚಾರವು ನಿಧಾನವಾಗಿ ಕಾದಂಬರಿಯಲ್ಲಿ ಆವರಿಸಿಕೊಳ್ಳುತ್ತದೆ. ಹೀಗಾಗಿ ಇದು ಬಾಹ್ಯ ಭೂಗೋಳ ಮತ್ತು ಆಂತರಿಕ ಚರಿತ್ರೆಯ ಕಾದಂಬರಿಯೂ ಆಗಿದೆ.
ಕಾದಂಬರಿಯ ಹೆಸರು `ವೈಷ್ಣವ ಜನತೋ’. ಇದು ಗಾಂಧೀಜಿಯವರಿಗೆ ಪ್ರಿಯವಾದ ಗೀತೆ. ಇದನ್ನು ಕಾದಂಬರಿಯ ವಾಸಣ್ಣ `ಮನುಜನೆಂದರೆ ಯಾರೆಂದು ಬಲ್ಲಿರೇನು….?’ ಎಂದು ರೂಪಾಂತರಿಸುತ್ತಾನೆ. ಕಾದಂಬರಿಯು ಈ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ವಿವಿಧ ವ್ಯಕ್ತಿತ್ವದ ಮನುಜರನ್ನು ಕಾಣಿಸುತ್ತ ಸಾಮರಸ್ಯದ ಶೋಧದಲ್ಲಿ `ನಿಜ ಮನುಜ’ನನ್ನು ಕಾಣುತ್ತದೆ.
ನನ್ನಿಂದ ಇಷ್ಟೆಲ್ಲ ಚರ್ಚೆಯನ್ನು ಆಗು ಮಾಡಿದ್ದು ಕಾದಂಬರಿಯ ಶಕ್ತಿ. ಒಂದೇ ಮಾತಿನಲ್ಲಿ ಹೇಳುವುದಾದರೆ ಲೋಕೇಶ ಅಗಸನಕಟ್ಟೆಯವರ `ವೈಷ್ಣವ ಜನತೋ’ ಬಹುಮುಖಿ ಆಯಾಮದ ಕನ್ನಡದ ಒಂದು ಮುಖ್ಯ ಕಾದಂಬರಿ. ಇಂತಹ ಕಾದಂಬರಿಯನ್ನು ಕಟ್ಟಿ ಕನ್ನಡಕ್ಕೆ ಕೊಟ್ಟ ಡಾ. ಲೋಕೇಶ ಅಗಸನಕಟ್ಟೆ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗಂಭೀರ ಚರ್ಚೆ – ಚಿಂತನೆಗಳ ಮೂಲಕ ಕಾದಂಬರಿಗೆ ಸೂಕ್ತ ವಿಮರ್ಶೆಯ ನ್ಯಾಯ ಸಿಗಲಿ ಎಂದು ಆಶಿಸುತ್ತೇನೆ.
(ಕೃತಿ: ವೈಷ್ಣವ ಜನತೋ (ಕಾದಂಬರಿ), ಲೇಖಕರು: ಡಾ. ಲೋಕೇಶ ಅಗಸನಕಟ್ಟೆ, ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಬೆಲೆ: 365/)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ