ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು. ಪ್ರಶ್ನಿಸುವುದನ್ನು ಉತ್ತೇಜಿಸದೆ ಮಕ್ಕಳನ್ನು ಸುಮ್ಮನಾಗಿಸುವುದು, ಬೈಯುವುದು ಸಾಮಾನ್ಯವಾಗಿದೆ.
ನಮ್ರತಾ ಪೊದ್ದಾರ್ ಬರಹ ನಿಮ್ಮ ಓದಿಗೆ
ಪ್ರತಿ ವರ್ಷ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನ. ಸರ್ ಸಿ.ವಿ.ರಾಮನ್‌ರವರು ಮಾಡಿದ ಸಂಶೋಧನೆ ‘ರಾಮನ್ ಎಫೆಕ್ಟ್’ ನೆನಪಿಸಿಕೊಳ್ಳುವ ಸಲುವಾಗಿ ಆಚರಿಸುವ ದಿನ. ಸರ್ ಸಿ.ವಿ.ರಾಮನ್‌ರು ಲಂಡನ್‌ನಿಂದ ಭಾರತಕ್ಕೆ ಸಮುದ್ರಯಾನದ ಮೂಲಕ ಬರುವಾಗ ನೀರು ಮತ್ತು ಆಕಾಶ ನೀಲಿಯಾಗಿರುವುದನ್ನು ಗಮನಿಸಿದರು; ಪ್ರಕೃತಿಯ ಈ ವಿದ್ಯಮಾನವನ್ನು ಅದಕ್ಕೂ ಮುಂಚೆ ಯಾರೂ ಗಮನಿಸಿರಲಿಲ್ಲ ಎಂದು ಹೇಳಲಾಗುವುದಿಲ್ಲ, ಅದು ಸಾಮಾನ್ಯವಾದ ದಿನನಿತ್ಯದ ಸಂಗತಿ. ಆದರೆ ಸಮುದ್ರದ ನೀರು ಹಾಗೂ ಆಕಾಶ ನೀಲಿಯಾಗಿರುವುದೇಕೆ ಎಂಬ ಪ್ರಶ್ನೆ ಅವರಲ್ಲಿ ಕುತೂಹಲ ಕೆರಳಿಸಿತು. ಇದೇ ಪ್ರಶ್ನೆಗೆ ಉತ್ತರ ಹುಡುಕುತ್ತಾ ಸಂಶೋಧನೆಯಲ್ಲಿ ತೊಡಗಿಕೊಂಡ ಅವರು ಕಂಡುಕೊಂಡ ಉತ್ತರವೇ ಬೆಳಕಿನ ಚದುರುವಿಕೆ ಅಥವಾ ರಾಮನ್ ಎಫೆಕ್ಟ್. ಇಲ್ಲಿಯವರೆಗೂ ಆಗಿರುವ ಯಾವುದೇ ಆವಿಷ್ಕಾರ ಅಥವಾ ಅನ್ವೇಷಣೆಗೆ ಮೊದಲು ಉತ್ತೇಜನ ಸಿಗುವುದೇ ಪ್ರಶ್ನೆ ಮತ್ತು ಕುತೂಹಲದಿಂದ. ಸೃಷ್ಠಿಯಲ್ಲಿ ಎಲ್ಲ ಜೀವಿಗಳಿಗೆ ಹೋಲಿಸಿದರೆ ಮನುಷ್ಯನನ್ನು ವಿಶಿಷ್ಟವಾಗಿಸುವುದು ಅವನ ಯೋಚನಾ ಶಕ್ತಿ ಮತ್ತು ಕುತೂಹಲದ ಸ್ವಭಾವ. ಈ ಕುತೂಹಲ, ಪ್ರಶ್ನಿಸುವ ಸ್ವಭಾವವು ಮನುಷ್ಯನನ್ನು ವಿಕಸನದ ಹಾದಿಯಲ್ಲಿ ತುಂಬ ಬಲಿಷ್ಠವಾಗಿ ಮಾಡಿದೆ. ಸಿಂಹ, ಆನೆ ಮುಂತಾದ ಪ್ರಾಣಿಗಳಿಗೆ ಹೊಲಿಸಿದರೆ ಮನುಷ್ಯ ದೈಹಿಕವಾಗಿ ದುರ್ಬಲ. ಆದರೆ ಮನುಷ್ಯ ಉಪಕರಣಗಳನ್ನು ತಯಾರಿಸುವ ಹಾಗೂ ಉಪಯೋಗಿಸುವ ಕಲೆಯನ್ನು ಕಲಿತು ಇಡೀ ಸೃಷ್ಠಿಯನ್ನೆ ತನ್ನ ಹಿಡಿತದಲ್ಲಿಟ್ಟಿದ್ದಾನೆ. ರಾಮನ್ ಎಫೆಕ್ಟ್ ಆವಿಷ್ಕಾರಕ್ಕೆ ಸರ್ ಸಿ.ವಿ.ರಾಮನ್‌ರಿಗೆ 1930 ಇಸವಿಯಲ್ಲಿ ನೋಬೆಲ್ ಪ್ರಶಸ್ತಿ ಸಂದಿತು. ವಿಷಾದಕರ ಸಂಗತಿಯೆಂದರೆ ಇಲ್ಲಿಯವರೆಗೆ ಭಾರತಕ್ಕೆ ಕೇವಲ 1 ನೊಬೆಲ್ ಪ್ರಶಸ್ತಿ ಮಾತ್ರ ಸಂದಿದ್ದು (ಭಾರತಕ್ಕೆ ಒಟ್ಟು 13 ನೊಬೆಲ್ ಪ್ರಶಸ್ತಿ ಸಂದಿದೆಯಾದರೂ (ಭಾರತೀಯ ನಾಗರಿಕರು, ಭಾರತೀಯ ಮೂಲದ ಜನರು ಮತ್ತು ಭಾರತದಲ್ಲಿ ಪ್ರಶಸ್ತಿ ವಿಜೇತ ಕೆಲಸ ಮಾಡಿದವರು ಸೇರಿದಂತೆ). ವಿಜ್ಞಾನ ರಂಗ ಮಾತ್ರ ನೋಡಿದರೆ ನಮಗೆ ದೊರೆತಿರುವುದು ಕೇವಲ ನಾಲ್ಕು ಆದರೆ ಇದರಲ್ಲಿ ಮೂರು ಜನ ಭಾರತೀಯ ಮೂಲದವರಾಗಿದ್ದರೂ ಅವರ ಸಂಶೋಧನೆ ನಡೆಸಿದ್ದು ಬೇರೆ ದೇಶದಲ್ಲಿ ಮತ್ತು ಅವರು ಪ್ರಶಸ್ತಿ ಗೆದ್ದಾಗ ಇತರ ದೇಶಗಳ ನಾಗರಿಕರಾಗಿದ್ದರು. ಹರ್ ಗೋಬಿಂದ್ ಖೋರಾನಾ (ಶರೀರಶಾಸ್ತ್ರ ಅಥವಾ ಔಷಧ, 1968) – ಯು.ಎಸ್. ನಾಗರಿಕ, ಸುಬ್ರಹ್ಮಣ್ಯನ್ ಚಂದ್ರಶೇಖರ್ (ಭೌತಶಾಸ್ತ್ರ, 1983) – ಯು.ಎಸ್. ನಾಗರಿಕ, ವೆಂಕಟರಾಮನ್ ರಾಮಕೃಷ್ಣನ್ (ರಸಾಯನಶಾಸ್ತ್ರ, 2009) – ಯು.ಎಸ್. ಮತ್ತು ಯು.ಕೆ. ನಾಗರಿಕ), ಅಮೇರಿಕಾಗೆ 420, ಯುನೈಟೆಡ್ ಕಿಂಗ್ಡಮ್‌ಗೆ 142 ನೋಬೆಲ್ ಪ್ರಶಸ್ತಿಗಳು ಬಂದಿವೆ. ಇದರರ್ಥ ಭಾರತೀಯರು ವಿಜ್ಞಾನ ರಂಗದಲ್ಲಿ ಅಸಮರ್ಥರು ಎಂದಲ್ಲ. ವಿಜ್ಞಾನಕ್ಕೆ ಸಿಗುವ ಪ್ರೋತ್ಸಾಹ, ಬೆಂಬಲ ಮತ್ತು ಧನಸಹಾಯ ಭಾರತದಲ್ಲಿ ಕಡಿಮೆ. ಜಿಡಿಪಿಯ 1% ಗಿಂತ ಕಡಿಮೆ ಹಣವನ್ನು ಸಂಶೋಧನಾ ಕ್ಷೇತ್ರಕ್ಕೆ ಮೀಸಲಿರಿಸಲಾಗಿದೆ. ಬೇರೆ ಮುಂದುವರಿದ ದೇಶಗಳಿಗೆ ಹೋಲಿಸಿದರೆ ಇದು ತೀರ ಕಡಿಮೆ. ಇದಲ್ಲದೇ ನಮ್ಮ ಸಮಾಜದಲ್ಲಿ ಪ್ರಶ್ನಿಸುವವರನ್ನು ಅಸಡ್ಡೆಯಿಂದ ನೋಡುವುದೇ ಜಾಸ್ತಿ. ನಮ್ಮ ಸುತ್ತಲಿನ ಜಗತ್ತಿನ, ಈ ಬ್ರಹ್ಮಾಂಡದ ಸತ್ಯಗಳನ್ನು ಕಂಡುಕೊಳ್ಳಲು ಪ್ರಶ್ನಿಸುವ ಸ್ವಭಾವ ಬಹಳ ಮುಖ್ಯ.
ಮಕ್ಕಳು ಚಿಕ್ಕಂದಿನಿಂದ ಬಗೆ ಬಗೆಯ ಪ್ರಶ್ನೆಗಳನ್ನು ಕೇಳುತ್ತಾರೆ: ಆಕಾಶದಾಚೆ ಏನಿದೆ? ಕತ್ತಲೇಕಾಗುತ್ತದೆ? ಚಂದ್ರ ಗೋಳಾಕಾರವೇಕೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಮಕ್ಕಳದ್ದು. ಪ್ರಶ್ನೆಗಳು ಹುಟ್ಟುವುದು ಸಹಜ ಆದರೆ ನಮಗೆ ಉತ್ತರ ಗೊತ್ತಿಲ್ಲದಿದ್ದಾಗ ಹುಡುಕಿ ಹೇಳುತ್ತೇನೆ ಎಂದೋ ಅಥವಾ ತಿಳಿದಿಲ್ಲವೆಂಬ ಮಾತು ನಮ್ಮಿಂದ ಹೊರಡುವುದು ಕಡಿಮೆ. ಯಾವುದಾದರೂ ಪ್ರಶ್ನೆಗೆ ಉತ್ತರ ಇನ್ನೂ ವಿಜ್ಞಾನ ರಂಗಕ್ಕೆ ಗೊತ್ತಿಲ್ಲದಿದ್ದರೆ ಅದನ್ನು ತಿಳಿಹೇಳಿ ಮುಂದೆ ಯಾರು ಬೇಕಾದರೂ ಈ ಪ್ರಶ್ನೆಗೆ ಉತ್ತರವನ್ನು ಕಂಡುಹಿಡಿಯಬಹುದು ಎನ್ನುವ ಸಣ್ಣ ಮಾತೇ ಮಕ್ಕಳಿಗೆ ಪ್ರೋತ್ಸಾಹದಾಯಕವಾಗಬಲ್ಲದು. ಆದರೆ ಬಹಳ ಪೋಷಕರು ಮಕ್ಕಳ ಕುತೂಹಲಭರಿತ ಪ್ರಶ್ನೆಗಳಿಗೆ ನಕ್ಕು ಸುಮ್ಮನಾಗಿಯೋ ಅಥವಾ ಅರೆಬರೆ ಉತ್ತರ ಕೊಟ್ಟೋ ಜಾರಿಕೊಳ್ಳುತ್ತಾರೆ. ತಮ್ಮ ನಂಬಿಕೆಗಳಿಗೆ ಹಾಗೂ ಆಚಾರ, ವಿಚಾರಕ್ಕೆ ಸರಿಹೊಂದದೆ ಇರುವ ಪ್ರಶ್ನೆಗಳನ್ನು ಮಕ್ಕಳು ಕೇಳಿದಾಗ ಕಸಿವಿಸಿಗೊಂಡು ಕೋಪಿಸಿಕೊಳ್ಳುವುದನ್ನು ನೋಡಿದ್ದೇವೆ. ಯಾವುದೇ ವಿಷಯದ ಬಗ್ಗೆ ಗೊತ್ತಿಲ್ಲದಿರುವುದು ಅವಮಾನದ ಮಾತಲ್ಲ. ನಾವೇ ಏನೋ ಊಹೆ ಮಾಡಿಕೊಂಡು, ಖಾಲಿ ಇರುವ ಜಾಗದಲ್ಲಿ ಏನೋ ತುಂಬಿಕೊಂಡು ಸತ್ಯವನ್ನು ಹುಡುಕುವ ಗೋಜಿಗೆ ಹೋಗದಿರುವುದು ತಪ್ಪು. ಪ್ರಶ್ನಿಸುವುದನ್ನು ಉತ್ತೇಜಿಸದೆ ಮಕ್ಕಳನ್ನು ಸುಮ್ಮನಾಗಿಸುವುದು, ಬೈಯುವುದು ಸಾಮಾನ್ಯವಾಗಿದೆ. ಎಲ್ಲಾ ಮಕ್ಕಳು ಹುಟ್ಟಾ ವಿಜ್ಞಾನಿಗಳು. ಆದರೆ ಮಕ್ಕಳ ಸಹಜ ಕುತೂಹಲವನ್ನು ನಾಶಪಡಿಸುವುದರಿಂದ ಅವರು ಕಾಲೇಜಿಗೆ ಬರುವಷ್ಟರಲ್ಲಿ ಕುತೂಹಲ ಹಾಗೂ ಪ್ರಶ್ನಿಸುವ ಸ್ವಭಾವವನ್ನೇ ನಿಲ್ಲಿಸುತ್ತಾರೆ. ಬ್ರಹ್ಮಾಂಡದ ಕೆಲವು ಪ್ರಶ್ನೆಗಳಿಗೆ ವಿಜ್ಞಾನದಲ್ಲಿ ಪ್ರಸ್ತುತ ಉತ್ತರವಿಲ್ಲ ನಿಜ. ಹಾಗೆಂದ ಮಾತ್ರಕ್ಕೆ ವಿಜ್ಞಾನಕ್ಕೂ ಮೀರಿದ ಸಂಗತಿಗಳಿವೆ; ವಿಜ್ಞಾನದ ಸಾಮರ್ಥ್ಯ ಸೀಮಿತ ಎಂದು ವಾದಿಸಿ ಯಾವುದೇ ಆಧಾರವಿಲ್ಲದ ನಂಬಿಕಗಳನ್ನು ಅಳವಡಿಸಿಕೊಳ್ಳುವುದು ವೈಜ್ಞಾನಿಕ ದಾರಿಯಲ್ಲ. ವಿಜ್ಞಾನವೆಂದರೆ ಕೇವಲ ಜ್ಞಾನದ ಬೊಗಸೆಯಲ್ಲ. ಅದು ಸತ್ಯ ಶೋಧನೆಯ ಒಂದು ಅದ್ಭುತ ದಾರಿ. ವೈಜ್ಞಾನಿಕ ವಿಧಾನ ನಮ್ಮ ಜಗತ್ತನ್ನರಿಯಲು ಉಪಯೋಗಿಸುವ ಉಪಕರಣ. ಮನುಷ್ಯನಿಗೆ ಮಿತಿಯಿರಬಹುದು ಆದರೆ ಸತ್ಯ ಕಂಡುಕೊಳ್ಳುವ ವೈಜ್ಞಾನಿಕ ವಿಧಾನಕ್ಕಲ್ಲ. ಒಂದು ಕಾಲದಲ್ಲಿ ನಮ್ಮ ಸೂರ್ಯಮಂಡಲದ ಬಗ್ಗೆ ಅರಿವಿರಲಿಲ್ಲ. ಭೂಮಿಯ ಸುತ್ತ ಎಲ್ಲವೂ ಸುತ್ತುತ್ತಿದೆ ಎಂಬ ನಂಬಿಕೆಯಿತ್ತು. ಆದರೆ ವಿಜ್ಞಾನದಿಂದಾಗಿ ಅದು ಸುಳ್ಳೆಂದು ಸಾಬೀತಾಯಿತು. ಹಾಗೆಯೇ ಇಂದಿಗೆ ಮನುಷ್ಯನಿಗೆ ಅರಿವಿಲ್ಲದ ಸತ್ಯ ಮುಂದೆಂದೋ ಅರಿವಿಗೆ ಬರಬಹುದು. ವಿಜ್ಞಾನವನ್ನು ಉಪಯೋಗಿಸಿ ಮನುಷ್ಯ ಕಳೆದ ಸುಮಾರು 500 ವರ್ಷಗಳಲ್ಲಿ ಅನೇಕ ಮೈಲಿಗಲ್ಲುಗಳನ್ನು ಸಾಧಿಸಿದ್ದಾನೆ. ವೈದ್ಯಕೀಯ, ತಂತ್ರಜ್ಞಾನ, ವ್ಯವಸಾಯ ಹೀಗೆ ಎಲ್ಲ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆಗಳಾಗಿವೆ. ನಮ್ಮ ದಿನನಿತ್ಯದ ಜೀವನ, ತಂತ್ರಜ್ಞಾನ ಎಲ್ಲಕ್ಕೂ ವಿಜ್ಞಾನವೇ ತಳಹದಿಯಾಗಿದೆ. ಮನುಷ್ಯ ಕುಲದ ಏಳಿಗೆಯೇ ವಿಜ್ಞಾನವನ್ನು ಅವಲಂಬಿಸಿದೆ. ಪ್ರಸ್ತುತ ಜ್ಞಾನವನ್ನು ನಿರಂತರ ಪರೀಕ್ಷೆಗೊಳಪಡಿಸಿ, ತನ್ನನ್ನು ತಾನು ತಿದ್ದಿಕೊಳ್ಳುತ್ತಾ ಜ್ಞಾನದ ಪರಿಧಿಯನ್ನು ಹೆಚ್ಚಿಸಿಕೊಳ್ಳುತ್ತ ಹೋಗುವುದೇ ವಿಜ್ಞಾನ. ವಿಜ್ಞಾನದ ಹಾದಿ ಸುಲಭವಲ್ಲ; ಇಲ್ಲಿ ನಾವು ಕಂಡುಕೊಳ್ಳುವ ಸತ್ಯ ನಮ್ಮ ನಂಬಿಕೆಗೆ ವಿರುದ್ಧವಾಗಿರಬಹುದು. ಆ ಸತ್ಯವನ್ನು ಒಪ್ಪಿಕೊಳ್ಳಬೇಕೆಂದರೆ ನಮ್ಮಲ್ಲಿ ಧೈರ್ಯ ಮತ್ತು ವೈಜ್ಞಾನಿಕ ಮನೋಭಾವನೆ ಇರಬೇಕು.
ನಮ್ಮ ಪೂರ್ವಜರು ಗಣಿತ, ವಿಜ್ಞಾನ, ಭೂಗೋಳ ಮುಂತಾದವುಗಳಲ್ಲಿ ಸಾಕಷ್ಟು ಜ್ಞಾನ ಪಡೆದಿದ್ದರು ನಿಜ. ಆದರೆ ಅವರಿಗೆ ಎಲ್ಲವೂ ತಿಳಿದಿತ್ತು ಎಂದು ಭಾವಿಸುವುದು ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದು. ‘ಅಂದಿನ ಕಾಲದ ಋಷಿಗಳೂ ಮಾನವರೇ ನಮ್ಮಂತೆ; ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ’ ಎಂಬ ಕುವೆಂಪುರವರ ಸಾಲನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಅಂದರೆ ಹಳೆಯ ಜ್ಞಾನವು ಅಂದಿನ ಕಾಲದಲ್ಲಿ ಲಭ್ಯವಿದ್ದ ಪರಿಕರಗಳ ಆಧಾರದ ಮೇಲೆ ನಿಂತಿರುತ್ತದೆ. ಹೀಗಾಗಿ ಹಳೆಯ ಕಾಲದ ಜ್ಞಾನವೇ ಸರ್ವಶ್ರೇಷ್ಠ ಎಂದು ಭಾವಿಸುವುದು ತಪ್ಪಾಗುತ್ತದೆ. ಮಕ್ಕಳಲ್ಲಿರುವ ಪ್ರಶ್ನಿಸುವ ಸ್ವಭಾವನ್ನು ಉತ್ತೇಜಿಸಿ ಸರಿಯಾದ ಬೆಂಬಲ ನೀಡಿದರೆ ದೇಶಕ್ಕೆ ಮಾತ್ರವಲ್ಲ ಇಡಿಯ ಮಾನವ ಕುಲಕ್ಕೆ ಸಹಾಯವಾಗುವ ಸಂಶೋಧನೆಗಳಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ನಮ್ರತಾ ಪೊದ್ದಾರ್ ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು ಮತ್ತು ಬರಹ ಎರಡರಲ್ಲೂ ಅಪಾರ ಆಸಕ್ತಿಯುಳ್ಳವರು. ವಿಜ್ಞಾನ, ಮಾನವೀಯತೆ, ಲಿಂಗ ಸಮಾನತೆ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ.
ಸೊಗಸಾದ ಲೇಖನ ಮೇಡಂ