ಅದು ಸುಳ್ಳಲ್ಲ. ನಿಜವೂ ಕೂಡಾ. ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು. ಆಕೆ ಸಾಕ್ಷಾತ್ ಅಪ್ಸರೆಯ ಹಾಗೆ ಬೆಳಗುತ್ತಿದ್ದಳು.
ಅಬ್ದುಲ್ ರಶೀದ್ ಬರೆಯುವ ಮಿನಿಕಾಯ್ ಕಥಾನಕದ ಒಂಬತ್ತನೇ ಕಂತು.
ಅದು ನಾನು ಇದುವರೆಗೆ ಎಂದೂ ನೋಡಿ ಕೇಳಿರದ ಮಾಯದಂತಹ ಮಳೆಯಾಗಿತ್ತು. ಗಾಳಿ ಸಿಡಿಲು ಮತ್ತು ಗುಡುಗು ಆ ಪುಟ್ಟ ದ್ವೀಪದೊಳಗೂ ಮತ್ತು ಸುತ್ತಲಿನ ಕಡಲ ಮೇಲೂ ಲಾಸ್ಯವಾಡುತ್ತಿತ್ತು. ಹವ್ವಾ ತಾತಾಳ ಮನೆಯ ವೆರಾಂಡದೊಳಗಿಂದ ನಾನು ಸುಮ್ಮನೆ ನೋಡುತ್ತಿದ್ದೆ. ಮಧ್ಯಾಹ್ನದ ನಮಾಜಿನ ಬಾಂಗಿನ ಕರೆಯ ಹೊತ್ತು. ಹಗಲು ಹೊತ್ತು ನಿದ್ದೆಯಲ್ಲಿರುವಂತಿದ್ದು ಸಂಜೆಯ ಹೊತ್ತು ಚುರುಕಾಗುವ ದ್ವೀಪದ ಓಣಿಬೀದಿಗಳು, ಬಣ್ಣ ಬಣ್ಣದ ಗೋಡೆಗಳ ಮನೆಗಳು ಮತ್ತು ಪ್ರತಿಯೊಂದು ಮನೆಯ ಗೇಟಿನ ಸಿಮೆಂಟು ಕಂಬದ ತುದಿಯ ಕುಂಡಗಳಲ್ಲಿ ಬೆಳೆದಿರುವ ಒಂದೊಂದು ಬಗೆಯ ವಿಶಿಷ್ಟ ಹೂಗಳು, ಕೆಲವು ಕಡೆ ಎತ್ತರಕ್ಕೆ ಬೆಳೆದಿರುವ ಬೋಗನ್ ವಿಲ್ಲಾ ಬಳ್ಳಿಗಳು. ಮಲಗಿರುವ ಮಧ್ಯಾಹ್ನದ ಹೊತ್ತಿನ ಕನಸೊಂದರ ನಡುವೆ ಕೇಳುವ ರಾಗದ ಹಾಗಿದ್ದ ಪ್ರಾರ್ಥನೆಯ ಕರೆಯ ನಡುವೆ ಆಕಾಶದಿಂದ ಛಟೀರ್ ಎಂಬ ಸಿಡಿಲಿನ ಬಳ್ಳಿ ಮತ್ತು ಗುಡುಗಿನ ಸದ್ದು. ಮುಂದಿನ ಒಂದೂವರೆ ಗಂಟೆಗಳ ಕಾಲ ಮಳೆ ಸುರಿಯುತ್ತಲೇ ಇತ್ತು. ದ್ವೀಪಗಳಲ್ಲಿ ಮಳೆ ಎಷ್ಟು ಸುರಿದರೂ ಏನೂ ಸಂಭವಿಸುವುದೇ ಇಲ್ಲ. ಎಲ್ಲ ನೀರೂ ಕಡಲಿಗೆ ಹರಿಯುತ್ತಲೇ ಇರುತ್ತವೆ. ಕಡಲು ಒಂದು ರೀತಿ ಒಬ್ಬಳು ಸಹನಾಶೀಲೆಯಾದ ಭಗವಂತಳ ಹಾಗೆ ಸುಮ್ಮನೆ ಎಲ್ಲ ನೀರನ್ನೂ ಆಪೋಷನ ತೆಗೆದುಕೊಳ್ಳುತ್ತಲೇ ಇರುತ್ತಾಳೆ. ನೀವು ಬದುಕುತ್ತಿರುವ ಅಲ್ಲಿನ ಹಾಗೆ ಮಳೆಯಲ್ಲಿ ತೊರೆಗಳು ಹುಟ್ಟಿಕೊಳ್ಳುವುದು, ನದಿಯಾಗಿ ತುಂಬಿ ಪ್ರವಾಹವಾಗಿ ಹರಿಯುವುದು ಏನೂ ಇಲ್ಲ. ಮೇಲಿಂದ ಬಿದ್ದ ಮಳೆ ಉಸುಕು ಮಣ್ಣಲ್ಲಿ ಇಂಗಿ ಮಾಯವಾಗುವುದು. ಕಡಲ ಭರತದ ಹೊತ್ತಲ್ಲಿ ಮಳೆ ಸುರಿದರೆ ನೀರಬಾವಿಗಳು ತುಂಬಿಕೊಳ್ಳಬಹುದಷ್ಟೇ. ಇಳಿತದ ಸಮಯದಲ್ಲಿ ಅದೂ ಇರುವುದಿಲ್ಲ. ಒಂದು ರೀತಿಯ ನಿರುದ್ವಿಗ್ನ ಉಮ್ಮಳದ ಹಾಗೆ ಸುರಿದು ಕಾಣೆಯಾಗುವ ಮಾಯದಂತಹ ಮಳೆ.
ಆ ಮಳೆಯ ಸದ್ದಿನ ನಡುವೆಯೇ ಹವ್ವಾ ತಾತಾ ತಮ್ಮ ಕಥೆ ಹೇಳುತ್ತಿದ್ದರು. ತನಗೆ ಎಂಟು ವರ್ಷವಿರುವಾಗ ಕಡಲಿಗೆ ಹೋಗಿದ್ದ ಬಾಪಾ ಜೀವವಿಲ್ಲದೆ ವಾಪಾಸು ಬಂದಿದ್ದು, ಹನ್ನೊಂದು ವರ್ಷಕ್ಕೆ ಮದುವೆಯಾಗಿದ್ದು, ಅದು ಕಳೆದು ಹತ್ತು ವರ್ಷಕ್ಕೆ ಗಂಡನೂ ಕಡಲಿಂದ ಜೀವವಿಲ್ಲದೆ ವಾಪಾಸು ಬಂದಿದ್ದು, ಜೀವವಿರುವಾಗಲೂ ಆತ ಯಾವತ್ತೂ ಜೊತೆಗೆ ಇರದೇ ಇದ್ದಿದ್ದು, ತಾನು ಹಲ್ಲು ಕಚ್ಚಿ ಹಿಡಿದು ಐದು ಜನ ಸಹೋದರಿಯರನ್ನೂ ತಾಯಿಯನ್ನೂ ಸಲಹಿದ್ದು, ಸೈಕಲ್ಲು ಕಲಿತದ್ದು, ಹೊಲಿಯಲು ಹಾಡಲು ಕವಿತೆ ಬರೆಯಲು ಕಲಿತದ್ದು, ಗಟ್ಟಿ ಗಂಡಸಿನಂತೆ ದೊಡ್ಡ ಬಾಯಲ್ಲಿ ಎಲ್ಲವನ್ನೂ, ಎಲ್ಲರನ್ನೂ ಸಂಬಾಳಿಸುತ್ತಾ ಜೋರಿನ ಹೆಂಗಸು ಎಂದು ಅನಿಸಿಕೊಂಡಿದ್ದು, ಅಂಗನವಾಡಿಯ ಸಹಾಯಕಿಯಾಗಿ ಐವತ್ತು ವರ್ಷಗಳ ಕಾಲ ದ್ವೀಪದ ಮಕ್ಕಳ ತಾಯಿಯಾಗಿದ್ದು, ಈಗ ನಿನ್ನೆ ತಾನೇ ಅದರಿಂದಲೂ ನಿವೃತ್ತಳಾಗಿ ಇದೀಗ ಹೊಸಬಗೆಯ ಕಸೂತಿ ಕೆಲಸಗಳನ್ನು ಕಲಿಯಲು ಶುರುಮಾಡಿರುವುದು ಈ ಎಲ್ಲವನ್ನೂ ಮಳೆಯ ಸದ್ದಿನ ನಡುವೆಯೇ ಬೇರೆ ಯಾರದೋ ಕತೆ ಎಂಬಂತೆ ಹೇಳುತ್ತಿದ್ದರು. ಕಪಾಟಿನಿಂದ ಹಳೆಯ ಫೋಟೋ ಆಲ್ಬಂಗಳನ್ನು ತೆಗೆದು ಹಾಸುಗೆಯ ಮೇಲಿಟ್ಟು, ತಾನು ಹಾಡು ಹೇಳುತ್ತಾ ದೆಹಲಿಯವರೆಗೆ ಹೋಗಿ ಬಂದದ್ದು, ಅಂಡಮಾನಿಗೂ ಮದರಾಸಿಗೂ ಹೋಗಿದ್ದು, ಇಂದಿರಾಗಾಂಧಿಯಿಂದ ಫಲಕ ಪಡೆದದ್ದು ಎಲ್ಲವನ್ನೂ ಹಿಗ್ಗಿನ ಹುಡುಗಿಯಂತೆ ವಿವರಿಸುತ್ತಿದ್ದರು.
‘ಇನ್ನು ಮುಂದಿನ ಗುರಿ ಏನು?’ ಎಂದು ಕೇಳಿದೆ.
‘ಇನ್ನು ಏನು ಅಂತ ಹೇಳಲಿ ಸ್ವರ್ಗಕ್ಕೆ ಹೋಗಲು ಬೇಜಾರು’ ಎಂದರು.
ಅವರಿಗೆ ಸ್ವರ್ಗಕ್ಕೆ ಹೋಗಲು ಬೇಜಾರು ಏಕೆ ಅಂದರೆ ಅವರ ದ್ವೀಪ ‘ಮಿನಿಕಾಯ್’ ಸ್ವರ್ಗಕ್ಕಿಂತ ಚಂದವಂತೆ.
ಅದು ಸುಳ್ಳಲ್ಲ. ನಿಜವೂ ಕೂಡಾ. ಧರ್ಮ ಗ್ರಂಥಗಳಲ್ಲಿರುವ ಸ್ವರ್ಗದ ವಿವರಗಳಲ್ಲಿರುವ ಎಲ್ಲ ಸೌಂದರ್ಯವನ್ನೂ ನಾನೂ ಇಲ್ಲಿ ಸ್ವತಃ ಕಂಡಿದ್ದೆ. ಆದರೆ ಯಾಕೋ ಅಪ್ಸರೆಯರು ಕಾಣಿಸುತ್ತಿಲ್ಲವಲ್ಲಾ ಎಂದು ಯೋಚಿಸುತ್ತಿದ್ದೆ. ಒಂದು ಮಧ್ಯಾಹ್ನ ಬಿಸಿಲಲ್ಲಿ ತಿರುಗಿ ಬಸವಳಿದು ಒಂದು ನಿಂಬೂ ಪಾನಿಯ ಅಂಗಡಿಗೆ ಹೋಗಿದ್ದೆ. ಅದು ನಿಜವಾಗಿ ಒಂದು ದಿನಸಿ ಅಂಗಡಿ. ಆ ಅಂಗಡಿಯೊಳಗೇ ಒಂದು ಮೂಲೆಯಲ್ಲಿ ನಿಂಬೂ ಪಾನಿಯ ಅಂಗಡಿ. ಅದನ್ನು ನಡೆಸುತ್ತಿರುವವರು ದಿನಸಿ ಅಂಗಡಿಯ ಮಾಲಿಕರ ಮಡದಿಯೂ ಇರಬಹುದು. ಅಥವಾ ಮಗಳೂ ಆಗಿರಬಹುದು. ಆಕೆ ಸಾಕ್ಷಾತ್ ಅಪ್ಸರೆಯ ಹಾಗೆ ಬೆಳಗುತ್ತಿದ್ದಳು. ದೂರದಿಂದಲೇ ಆ ದಿವ್ಯ ಸೌಂದರ್ಯದ ದರ್ಶನ ಪಡೆದು ನಿಂಬೂಪಾನಿಯನ್ನು ಮುಗಿಸಿ ವಾಪಾಸಾಗಿದ್ದೆ. ಈ ದ್ವೀಪಕ್ಕೆ ಸೇರಿಯೇ ಇಲ್ಲ. ಬಹುಶಃ ಬೇರೊಂದು ಲೋಕದಿಂದ ಬಂದು ಇಲ್ಲಿ ನೆಲೆಸಿರುವ ಹೌರಿ ಇವಳು ಎಂದು ನನ್ನ ಕಲ್ಪನಾ ಮೂಸೆಯೊಳಗೆ ಆ ಸ್ವರ್ಗ ಸೌಂದರ್ಯವನ್ನು ಸೇರಿಸಿಕೊಂಡುಬಿಟ್ಟೆ. ‘ಛೆ, ನೀವು ಆ ಸ್ವರ್ಗ ಸುಂದರಿಯ ಒಂದು ಚಿತ್ರವನ್ನಾದರೂ ಇಲ್ಲಿ ಹಾಕಬೇಕಾಗಿತ್ತು’ ಎಂದು ನಿಮ್ಮಲ್ಲಿ ಕೆಲವರು ಸೌಂದರ್ಯೋಪಾಸಕರಿಗೆ ಅನಿಸಬಹುದು. ಹಾಗೆ ಚಿತ್ರ ತೆಗೆಯುವುದು ತಪ್ಪು. ಆದರೆ ಯೋಚಿಸುವುದು ತಪ್ಪಲ್ಲ. ಬಹಳಷ್ಟು ಸೌಂದರ್ಯಗಳನ್ನು ಕಲ್ಪನಾ ಮೂಸೆಯೊಳಗೆ ಸೇರಿಸಿಕೊಂಡು ಬಿಡುವುದು ಲೌಕಿಕವಾದ ಅದರ ಮೇಲಿನ ಇಚ್ಛೆಗಳಿಗಿಂತ ಹಿತಕರ ಎನ್ನುವುದು ನನ್ನ ಸ್ವಂತ ಅನುಭವದ ಮಾತು. ಅದನ್ನು ಪಾಲಿಸುವುದು ನಿಮಗೆ ಬಿಟ್ಟದ್ದು!
ಆ ಮಾಯದಂತಹ ಮಳೆಯ ಮಧ್ಯಾಹ್ನ ಸಣ್ಣ ನಿದ್ದೆಯಿಂದ ಹೊರಬಂದು ಕಣ್ಣು ಬಿಟ್ಟಾಗ ಮಿನಿಕಾಯ್ ದ್ವೀಪ ತಾನು ನಿಜವಾದ ಸ್ವರ್ಗವೇನೋ ಅಂದುಕೊಂಡು ಹೊಳೆಯುತ್ತಿತ್ತು. ತೆಂಗಿನ ಗರಿಗಳಲ್ಲಿ ಇನ್ನೂ ಹೊಳೆಯುವ ಮಳೆಯ ಹನಿಗಳು. ತುಂಬಿತುಳುಕುತ್ತ ಹಸಿರಾಗಿ ಹೊಳೆಯುತ್ತಿರುವ ಲಗೂನ್ ಕಡಲು. ಒದ್ದೆ ಮರಳ ಮೇಲೆ ನಡೆಯುತ್ತಿರುವ ಪುಟ್ಟ ಹಕ್ಕಿಗಳು. ಪಡುವಣದಲ್ಲಿ ಉಳಿದಿರುವ ಒಂದೆರೆಡು ಮೋಡಗಳ ನಡುವೆ ಕದ್ದು ಮುಚ್ಚಿ ಓಡಾಡುತ್ತಿರುವ ಏರು ಸಂಜೆಯ ಚುರುಕು ಸೂರ್ಯ.
ಜನರೇ ಇಲ್ಲದ ಆ ಬೆಳಕಿನಲ್ಲಿ ದೂರದಿಂದ ಒಂದು ಕುಟುಂಬ ನಡೆದು ಬರುತ್ತಿತ್ತು. ಸಾಧಾರಣವಾಗಿ ಈ ದ್ವೀಪಗಳಲ್ಲಿ ಒಂದು ಕುಟುಂಬ ಹೀಗೆ ಒಟ್ಟಾಗಿ ಕಡಲ ತೀರದಲ್ಲಿ ನಡೆಯುವುದು ಬಹಳ ಕಡಿಮೆ. ಹೆಂಗಸರು ತಮ್ಮ ಕೆಲಸಗಳಲ್ಲಿ ಹರಟೆಯಲ್ಲಿ ಒಂದು ಗುಂಪಿನಲ್ಲಿರುತ್ತಾರೆ. ಗಂಡಸರೂ ಅಷ್ಟೆ ಗಂಡಸರ ಗುಂಪಿನಲ್ಲಿರುತ್ತಾರೆ. ಹುಡುಗರೂ, ಹುಡುಗಿಯರೂ, ಯುವಕರೂ, ಯುವತಿಯರೂ ವೃದ್ಧರೂ, ನಿವೃತ್ತರೂ ತಮ್ಮ ತಮ್ಮ ವಯೋಮಾನದ ಗುಂಪುಗಳಲ್ಲಿರುತ್ತಾರೆ. ಒಂದು ಕುಟುಂಬ ಎಂದು ಜೊತೆಗೆ ಓಡಾಡುವವರು ಬಹುತೇಕ ಪ್ರವಾಸಿಗಳು ಅಥವಾ ಹೊರಗಿನಿಂದ ನೌಕರಿಗೆ ಬಂದಿರುವ ಉದ್ಯೋಗಸ್ಥರು.
ಆದರೆ ಅಚ್ಚರಿಯಾಗುವಂತೆ ಅದೇ ದ್ವೀಪದ ಕುಟುಂಬವೊಂದು ಆ ಇಳಿ ಹಗಲು ಮಳೆ ನಿಂತು ಹೊಳೆಯುತ್ತಿದ್ದ ಲಗೂನಿನ ಒದ್ದೆ ಮರಳಲ್ಲಿ ದೂರದಿಂದ ನಡೆದು ಬರುತ್ತಿತ್ತು. ಪುಟ್ಟ ಬಾಲಕನೊಬ್ಬ ಕೈಯಲ್ಲಿ ಒಂದು ಕರಿಯ ಗಾಳಿಪಟ ಹಾರಿಸಿಕೊಂಡು ಓಡಿ ಬರುತ್ತಿದ್ದ. ಅವನ ಹಿಂದಿನಿಂದ ಕೂಸೊಂದನ್ನು ತೋಳಲ್ಲೆ ಎತ್ತಿಕೊಂಡು ನಡೆದು ಬರುತ್ತಿದ್ದ ಒಬ್ಬ ಗಂಡಸು. ಆತನ ಹಿಂದೆ ಒಬ್ಬಳು ಸ್ತ್ರೀ. ಅವಳ ಮುಖದಲ್ಲಿ ಅಂತಹ ಉಲ್ಲಾಸವೇನೂ ಇರಲಿಲ್ಲ. ಅವರ ಹಳೆಯ ದೋಣಿ ತುಂಬಿ ತೊನೆಯುತ್ತಿರುವ ಲಗೂನಿನ ನಡುವಲ್ಲಿ ತಾನೂ ತೊನೆದಾಡುತ್ತಿತ್ತು. ಮಧ್ಯಾಹ್ನ ಸುರಿದ ಮಳೆಗೆ ಆ ದೋಣಿಯೊಳಗೆ ನೀರು ಸೇರಿಕೊಂಡು ಅದು ಮುಳುಗಿಬಿಡುವ ಅಪಾಯದಲ್ಲಿತ್ತು. ಅದನ್ನು ಉಳಿಸಿಕೊಳ್ಳಲು ಆ ಕುಟುಂಬ ಅಲ್ಲಿಗೆ ಧಾವಿಸಿ ಬರುತ್ತಿತ್ತು. ಒಲ್ಲದ ಮಗನನ್ನು ಪುಸಲಾಯಿಸಲು ಆ ಗಾಳಿಪಟವನ್ನು ಆಮಿಷದಂತೆ ಬಳಸಲಾಗಿತ್ತು.
ನಾಲ್ಕು ಜೀವಗಳಿರುವ ಈ ಕುಟುಂಬದ ಕಥೆ ಬಹಳ ವಿಶೇಷವಾಗಿದೆ.
ಅದನ್ನು ಮುಂದಿನ ಕಂತಿನಲ್ಲಿ ಹೇಳುವೆ…
(ಮುಂದುವರಿಯುವುದು)
ಮಿನಿಕಾಯ್ ಕಥಾನಕ ಮೊದಲ ಕಂತಿನಿಂದ ಓದಲು ಇಲ್ಲಿ ಕ್ಲಿಕ್ ಮಾಡಿ
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.
ಓದುತ್ತಾ ಸ್ವರ್ಗವಾಸಿಗಳಾಗುವ ಮೊದಲು ಈ ಭೂಮಿಯ ಸ್ವರ್ಗ ನೋಡುವ ಆಸೆಯಾಗಿದೆ.ರಶೀದ್ ಸರ್ ಬರೆದ ಪುಸ್ತಕ ಕೈಯಲ್ಲಿ ಇರಲಿ.
‘ತನಗೆ ಎಂಟು ವರ್ಷವಿರುವಾಗ ಕಡಲಿಗೆ ಹೋಗಿದ್ದ ಬಾಪಾ ಜೀವವಿಲ್ಲದೆ ವಾಪಾಸು ಬಂದಿದ್ದು, ಹನ್ನೊಂದು ವರ್ಷಕ್ಕೆ ಮದುವೆಯಾಗಿದ್ದು, ಅದು ಕಳೆದು ಹತ್ತು ವರ್ಷಕ್ಕೆ ಗಂಡನೂ ಕಡಲಿಂದ ಜೀವವಿಲ್ಲದೆ ವಾಪಾಸು ಬಂದಿದ್ದು, ಜೀವವಿರುವಾಗಲೂ ಆತ ಯಾವತ್ತೂ ಜೊತೆಗೆ ಇರದೇ ಇದ್ದಿದ್ದು, ತಾನು ಹಲ್ಲು ಕಚ್ಚಿ ಹಿಡಿದು ಐದು ಜನ ಸಹೋದರಿಯರನ್ನೂ ತಾಯಿಯನ್ನೂ ಸಲಹಿದ್ದು, ಸೈಕಲ್ಲು ಕಲಿತದ್ದು, ಹೊಲಿಯಲು ಹಾಡಲು ಕವಿತೆ ಬರೆಯಲು ಕಲಿತದ್ದು, ಗಟ್ಟಿ ಗಂಡಸಿನಂತೆ ದೊಡ್ಡ ಬಾಯಲ್ಲಿ ಎಲ್ಲವನ್ನೂ, ಎಲ್ಲರನ್ನೂ ಸಂಬಾಳಿಸುತ್ತಾ ಜೋರಿನ ಹೆಂಗಸು ಎಂದು ಅನಿಸಿಕೊಂಡಿದ್ದು, ಅಂಗನವಾಡಿಯ ಸಹಾಯಕಿಯಾಗಿ ಐವತ್ತು ವರ್ಷಗಳ ಕಾಲ ದ್ವೀಪದ ಮಕ್ಕಳ ತಾಯಿಯಾಗಿದ್ದು, ಈಗ ನಿನ್ನೆ ತಾನೇ ಅದರಿಂದಲೂ ನಿವೃತ್ತಳಾಗಿ ಇದೀಗ ಹೊಸಬಗೆಯ ಕಸೂತಿ ಕೆಲಸಗಳನ್ನು ಕಲಿಯಲು ಶುರುಮಾಡಿರುವುದು ಈ ಎಲ್ಲವನ್ನೂ ಮಳೆಯ ಸದ್ದಿನ ನಡುವೆಯೇ ಬೇರೆ ಯಾರದೋ ಕತೆ ಎಂಬಂತೆ ಹೇಳುತ್ತಿದ್ದರು.’ ತುಂಬ ಇಷ್ಟವಾದ ಸಾಲುಗಳು. ಅದೆಷ್ಟು ಅಪ್ಯಾಯಮಾನವಾಗಿ ಬರೆಯುತ್ತೀರಿ!
ಆ ಪುಟ್ಟ ಕುಟುಂಬದ ಕಥೆ ಓದಿ, ಅನುಭವಿಸಲು ಕಾಯುತ್ತಿದ್ದೇನೆ.
ದಾಶರಥಿ ಘಟ್ಟು