ಬೇವು ಮತ್ತು ಬೆಲ್ಲ

ತಿನ್ನಲೇಬೇಕೆಂದು ಅಪ್ಪ
ಹಠ ಹಿಡಿದು ಕುಳಿತಿದ್ದ

ಬೇವು ಎಂದರೆ ನನಗಾಗದು
ಕಹಿಯೊಡನೆ ರುಚಿ ಸರಿತಾಳದು
ನನ್ನನ್ನು ನನ್ನ ಪಾಡಿಗೆ ಬಿಡು
ಬೆಲ್ಲದ ರುಚಿಯ ನಾಲಿಗೇಕೆ
ನೀನು ಹೀಗೆ ಹಿಂಸೆ ಕೊಡುವೆ
ಎನ್ನುವಾಗಲೆಲ್ಲಾ
ಅಪ್ಪ ಬೇವಿನ ಮರ ನೋಡುತ್ತಾ ಕುಳಿತುಬಿಡುತ್ತಿದ್ದ

ನಾನು ಈ ಕಾಲದ ಹುಡುಗಿ
ಎಲ್ಲವೂ ಒಳ್ಳೆಯದೇ ಇರಲಿ
ಕನಸುಗಳು ಕೂಡ ಸಕ್ಕರೆಯಂತೆ
ಸವಿಯಾಗೆ ಇರಲಿ ಎಂದುಕೊಳ್ಳುವವಳು
ಆದರೆ ಅಪ್ಪ ಇನ್ನೂ
ಬೇವಿನೊಡನೆ ಬೆಲ್ಲ
ಬೆಲ್ಲದೊಡನೆ ಬೇವು
ಎರಡೂ ಕೂಡೆ ನೋಡು
ಜೀವನ ಹೂವು ಎನ್ನುವವ

ಆಹಾ ಏನೆಲ್ಲಾ ಹೇಳುತ್ತಾನೆ ಅಪ್ಪ
ಅವನು ಕಾಲ ಗತಿಸಿದ ಹಾದಿಗೆ
ಇನ್ನು ಮರಳಲಿಲ್ಲ ಎನಿಸುವಾಗಲೆಲ್ಲಾ
ನನ್ನ ಕಾಲಮಾನದ ವೇಗದಲಿ
ಅಪ್ಪನ ಚಕ್ರ ಗಾಳಿ ಕಳೆದುಕೊಂಡಿರುವ ಚಿತ್ರ
ಕಣ್ಣಿಗೆ ಬೀಳುತ್ತದೆ

ಯಾಕಾದರೂ ಬರುತ್ತದೋ ಈ ಯುಗಾದಿ
ಎಂದು ನಿಧಾನಕ್ಕೆ ಹಾಸಿಗೆ ಬಿಡಿಸಿಕೊಂಡು
ಈಚೆಗೆ ಬಂದರೆ
ಅರೆದ ಬೇವಿಗೆ ಬೆಲ್ಲ ಬೆರೆಸಿ
ಎದುರಿಗೆ ಬಂದು ಹೇಳುತ್ತಾಳೆ
ಅಮ್ಮನೂ ಕೂಡ
ಹ್ಯಾಪಿ ಯುಗಾದಿ

ಆದರೆ ನಾನು
ಈ ಶತಮಾನದ ರಸ ಹೀರಿಕೊಂಡವಳು
ನನಗೆ ಕಹಿಯ ಅನುಭವವೆಂದರೆ
ಆಗಿಬರುವುದಿಲ್ಲ
ಹಾಗಾಗಿ ಪ್ರತೀ ಯುಗಾದಿಗೂ ಅಪ್ಪನಿಗೆ
ತಿಳಿಯದ ಹಾಗೆ ಬೇವು ವಿಂಗಡಿಸಿ
ಬೆಲ್ಲವನಷ್ಟೇ ಮೆಲ್ಲುತ್ತೇನೆ

ಮಾಲತಿ ಶಶಿಧರ್ ಚಾಮರಾಜನಗರದವರು
ಗಣಿತ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ
ಬರೆಯುವುದು ಮತ್ತು ಓದುವುದು ಇವರ ಹವ್ಯಾಸಗಳು