ಸಣ್ಣ ದೇವರು

ಮೃದು ಕೈಗಳಿಂದ
ಸ್ಪರ್ಶಿಸಿದಾಗ ಒರಟು ದೇಹ
ಸಿರಿಸಂಪತ್ತು ನಗಣ್ಯ
ಆನಂದಿಸಬೇಕಷ್ಟೇ ಹೆಜ್ಜೆ ಹೆಜ್ಜೆ

ಜೋಕಾಲಿ ಜೋರಾಗಿ ನೂಕಿದರೆ
“ನನಗೆ ಅಂಜಿಕೆ ನೂಕಬೇಡಿ” ಅಂದರೆ
“ಏ ನೂಕಬೇಡಿ” ಎಂದು ಗದರಿಸುವ
ಕಾಡಿಸಲು ಅತ್ತಂತೆ ನಟಿಸಿದಾಗ,
ಹೂ ಕೈಗಳಿಂದ ಸುಮ್ಮನಾಗಿಸುವ,

ಯಾರೋ ಬಡಿದಂತೆ ನಾಟಕವಾಡುವಾಗ
ನನ್ನನ್ನು ಪ್ರೀತಿಯಿಂದ ರಕ್ಷಿಸುವ
“ಅರೇ ಕೈ ಸಿಕ್ಕಾಕ್ಕೊಂತು” ಅಂದರೆ
ಕೈಯನ್ನು ನಾಜುಕಿನಿಂದ ಮೇಲೆತ್ತುವ
ಕಾಲು ನಡೆದು ನೋಯುತ್ತಿದೆ ಅಂದರೆ
“ಒತ್ತುವೆ” ಎಂದು ಓಡಿ ಬಂದಾಗ….
ನನ್ನ ಕಣ್ಣು ನಗುತ್ತದೆ ನೀರು ತುಂಬಿಕೊಂಡು

ಜಗತ್ತು ಸಂತೋಷಿಸುತ್ತದೆ
ಕಂಡರೆ ಬೇರೆಯವರ ಕಣ್ಣೀರು,
ಒರೆಸುವವರು ಕಡಿಮೆ

ಆ ಮೂರು ವರ್ಷದ ದೇವರಿಗೆ
ಅದ್ಹೇಗೆ ಗೊತ್ತು ನನ್ನ ನೋವುಗಳ ತೀವ್ರತೆ
ಮಿಂಚಿಗಿಂತಲೂ ವೇಗದ ಕಾಳಜಿ,
ನಾನೇ ಸುದೈವಿ

ಈ ಸಣ್ಣ ದೇವರು
ನನ್ನ ಇದೇ ರೀತಿ ಪೊರೆಯಲಿ ದೇವರೇ
ಮುಂದೆಯೂ…